ಡಾ. ವಿ.ಡಿ. ದಿವೇಕರ್ ಅವರು ತಮ್ಮ ಕೃತಿ ‘ಸೌತ್ ಇಂಡಿಯ ಇನ್ 1857 ವಾರ್ ಆಫ್ ಇಂಡಿಪೆಂಡೆನ್ಸ್’ನಲ್ಲಿ ಸಾಕಷ್ಟು ವಿವರಗಳನ್ನು ಶೋಧಿಸಿ ಪ್ರಕಟ ಮಾಡಿದ್ದಾರೆ. (ಈ ಕೃತಿಯನ್ನು ದು.ಗು. ಲಕ್ಷ್ಮಣರವರು ಕನ್ನಡಕ್ಕೆ ಅನುವಾದಿಸಿದ್ದಾರೆ.) ಈ ದಾವಾನಲದ ಬಿಸಿ ಕನ್ನಡ ನಾಡಿಗೂ ತಟ್ಟಿದ್ದುದರಲ್ಲಿ ಆಶ್ಚರ್ಯವಿಲ್ಲ. ಈ ‘ವಿದ್ರೋಹ’ದಲ್ಲಿ ಕರುನಾಡಿನ ಮೈಸೂರು ಸಂಸ್ಥಾನ ಹೆಚ್ಚಿನ ಕೊಡುಗೆಯನ್ನು ನೀಡದಿದ್ದರೂ ಬೆಂಗಳೂರಿನ ದಂಡುಪ್ರದೇಶ, ಜಮಖಂಡಿ, ಬಿಜಾಪುರ, ಬೆಳಗಾವಿ, ಕಾರವಾರ ಮೊದಲಾದ ಪ್ರದೇಶಗಳಲ್ಲಿ ಇದರ ಬಿಸಿ ತಟ್ಟಿದ್ದುದು ಗಮನಾರ್ಹವಾಗಿದೆ.
1857ರ ಮೇ ಹತ್ತರಂದು ಮೀರಠ್ನ ಅಶ್ವದಳ ಹಚ್ಚಿದ ಬಂಡಾಯದ ಕಿಡಿ ಅತಿ ಶೀಘ್ರದಲ್ಲಿ ದೆಹಲಿ, ಪಂಜಾಬ್, ರಾಜಪುತಾನಾ, ಆಗ್ರಾ, ಅವಧ, ಕಾನ್ಪುರ, ಝಾನ್ಸಿ, ಜಗದೀಶಪುರ ಮೊದಲಾದೆಡೆ ಹಬ್ಬಿ “ಕ್ರಾಂತಿಯ ದಾವಾನಲ”ವಾಗಿ ಪರಿಣಮಿಸುತ್ತದೆ. ಎಲ್ಲೆಡೆ ಪುರುಷರು-ಸ್ತ್ರೀಯರು, ವೃದ್ಧರು-ಹಸುಳೆಗಳು ಎಂಬ ತರತಮವಿಲ್ಲದೆ ಬ್ರಿಟಿಷರ ಮಾರಣಹೋಮ ನಡೆಯುತ್ತದೆ. ಆದರೆ ಬ್ರಿಟಿಷರೇನೂ ಕೈಕಟ್ಟಿ ಕೂಡುವವರಾಗಿರಲಿಲ್ಲ. ತಮ್ಮ ಕೈ ಮೇಲಾದೆಡೆಯಲ್ಲೆಲ್ಲ ಹಳ್ಳಿಹಳ್ಳಿಗಳನ್ನು ಸುತ್ತುವರಿದು ಅವುಗಳನ್ನು ಬೆಂಕಿಯ ಜ್ವಾಲೆಗೆ ಆಹುತಿ ನೀಡಿದರು. ಸೆರೆಸಿಕ್ಕವರನ್ನು ಬೀದಿ ಬದಿಯ ಸಾಲುಮರಗಳಿಗೆ ನೇಣುಹಾಕಿಯೋ ಅಥವಾ ಫಿರಂಗಿಗಳಿಗೆ ಕಟ್ಟಿ ಉಡಾಯಿಸಿಯೋ ತಮ್ಮ ಪ್ರಾಬಲ್ಯವನ್ನು ಮೆರೆದರು.
ಈ ಕ್ರಾಂತಿಯ ದಾವಾನಲ ದಕ್ಷಿಣಭಾರತಕ್ಕೂ ಹಬ್ಬಿತೆ? ಹಬ್ಬಿದ್ದರೆ ಅದರ ಪರಿಣಾಮವೇನು? ಈ ಬಗ್ಗೆ ಡಾ. ವಿ.ಡಿ. ದಿವೇಕರ್ ಅವರು ತಮ್ಮ ಕೃತಿ ‘ಸೌತ್ ಇಂಡಿಯ ಇನ್ 1857 ವಾರ್ ಆಫ್ ಇಂಡಿಪೆಂಡೆನ್ಸ್’ನಲ್ಲಿ ಸಾಕಷ್ಟು ವಿವರಗಳನ್ನು ಬಯಲು ಮಾಡಿದ್ದಾರೆ. (ಈ ಕೃತಿಯನ್ನು ದು.ಗು. ಲಕ್ಷ್ಮಣರವರು ಕನ್ನಡಕ್ಕೆ ಅನುವಾದಿಸಿದ್ದಾರೆ.) ಈ ದಾವಾನಲದ ಬಿಸಿ ಕನ್ನಡ ನಾಡಿಗೂ ತಟ್ಟಿದ್ದುದರಲ್ಲಿ ಆಶ್ಚರ್ಯವಿಲ್ಲ. ಈ ‘ವಿದ್ರೋಹ’ದಲ್ಲಿ ಕರುನಾಡಿನ ಮೈಸೂರು ಸಂಸ್ಥಾನ ಹೆಚ್ಚಿನ ಕೊಡುಗೆಯನ್ನು ನೀಡದಿದ್ದರೂ ಬೆಂಗಳೂರಿನ ದಂಡುಪ್ರದೇಶ, ಜಮಖಂಡಿ, ಬಿಜಾಪುರ, ಬೆಳಗಾವಿ, ಕಾರವಾರ ಮೊದಲಾದ ಪ್ರದೇಶಗಳಲ್ಲಿ ಇದರ ಬಿಸಿ ತಟ್ಟಿರುವುದು ಗಮನಾರ್ಹವಾಗಿದೆ.
ಮೈಸೂರು
1857ರ ಕ್ರಾಂತಿಯ ಸಂದರ್ಭದಲ್ಲಿ ಹಳೆಯ ಮೈಸೂರು ಸಂಸ್ಥಾನದ ಹೆಸರು ಮೊಳಗುತ್ತದೆಯಾದರೂ ಅದು ಸಕಾರಾತ್ಮಕವಾಗಿ ಅಲ್ಲ ಎಂಬುದು ಖೇದದ ವಿಷಯ. 1799ರಲ್ಲಿ ಟಿಪ್ಪುವಿನ ಮರಣಾನಂತರ ಸಂಸ್ಥಾನದ ಆಡಳಿತವನ್ನು ಮೈಸೂರು ರಾಜವಂಶದ ಮುಮ್ಮಡಿ ಕೃಷ್ಣರಾಜ ಒಡೆಯರರಿಗೆ ಒಪ್ಪಿಸಲಾಯಿತಾದರೂ, ದುರ್ಬಲ ಆಡಳಿತದ ಕಾರಣ 1831ರಲ್ಲಿ ಅದನ್ನು ಪುನಃ ಬ್ರಿಟಿಷರೇ ವಹಿಸಿಕೊಂಡು ಮಹಾರಾಜರಿಗೆ ಕೇವಲ ವರ್ಷಾಶನ ನೀಡಲಾರಂಭಿಸಿದರು. ಆನಂತರದಲ್ಲಿ ಆಡಳಿತವನ್ನು ತಮಗೆ ಹಿಂದಿರುಗಿಸುವಂತೆ ಬ್ರಿಟಿಷರ ಮನವೊಲಿಸಲು ಮಹಾರಾಜರು ತಮ್ಮ ಜೀವಿತದ ಉಳಿದ ಕಾಲವನ್ನೆಲ್ಲ ವ್ಯಯಿಸಬೇಕಾಯಿತು. ಅದು ಅವರ ಮರಣದವರೆಗೆ ಫಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಮಹಾರಾಜರು 1857-58ರಲ್ಲಿ ಬ್ರಿಟಿಷರನ್ನು ಎದುರಿಸಲು ಅಶಕ್ತರಾಗಿದ್ದುದೇ ಅಲ್ಲದೆ ಅವರ ಬಾಲಬಡುಕರಂತೆ ವರ್ತಿಸಬೇಕಾಯಿತು.
ದೇಶೀಯ ರಾಜ ಮಹಾರಾಜರು ಬ್ರಿಟಿಷರ ಸೋಲು ತಮ್ಮ ಸೋಲು, ಅವರ ಯಶಸ್ಸು ತಮ್ಮ ಯಶಸ್ಸೆಂದು ಭಾವಿಸಿ ನಡೆಯುತ್ತಿದ್ದ ಆ ಕಾಲದಲ್ಲಿ ರಷ್ಯಾದೊಂದಿಗಿನ ಯುದ್ಧದಲ್ಲಿ ಸಬಾಸ್ಟಪೋಲ್ನ ಬ್ರಿಟಿಷರ ಗೆಲವಿಗಾಗಿ ಮೈಸೂರಿನಲ್ಲಿ ಕುಶಾಲುತೋಪುಗಳನ್ನು ಹಾರಿಸಿ ತಮ್ಮ ನಿಷ್ಠೆಯನ್ನು ಸಾರಿದ ಮಹಾರಾಜರು 1857ರ ವಿದ್ರೋಹದ ಸಮಯದಲ್ಲಿ ‘ಬ್ರಿಟಿಷರ ನಿಷ್ಠಾವಂತ ಸ್ನೇಹಿತ’ರಂತೆ ವರ್ತಿಸಬೇಕಾಯಿತು. ಮೈಸೂರಿನ ಸರಕಾರಿ ಖಜಾನೆಯನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲು 1858ರ ನವೆಂಬರ್ನಲ್ಲಿ ಅತಿ ಕಡಮೆ ಸಮಯದಲ್ಲಿ ತಮ್ಮ ಅರಮನೆಯೊಂದನ್ನು ಬಿಟ್ಟುಕೊಡುವುದರ ಮೂಲಕ ‘ನನ್ನನ್ನು ಬ್ರಿಟಿಷ್ ಸರಕಾರವೇ ರಕ್ಷಿಸುತ್ತಿರುವುದರಿಂದ ನನ್ನ ಪ್ರಾಣ ಮತ್ತು ಸಮಸ್ತ ಆಸ್ತಿಯೂ ಅವರ ಭದ್ರತೆ ಮತ್ತು ಒಳಿತಿಗಾಗಿಯೇ ಮೀಸಲಾಗಿದೆ’ ಎಂದು ಸಾರುತ್ತಾರೆ. ವಿದ್ರೋಹವನ್ನು ಹತ್ತಿಕ್ಕಲು ನೀಲಗಿರಿಯಿಂದ ಬಳ್ಳಾರಿಯತ್ತ ಧಾವಿಸುತ್ತಿದ್ದ 74ನೇ ಬೆಟ್ಟದ ಪಡೆಗಳನ್ನು (ಹೈ ಲ್ಯಾಂಡರ್ಸ್) ಸಾಗಿಸಲು ತಮ್ಮ ಸ್ವಂತದ ಆನೆಗಳನ್ನು ನೀಡುವ ಮೂಲಕ ತಮ್ಮ ‘ನಿಷ್ಠಾವಂತ ನಡವಳಿಕೆ ಮತ್ತು ಉತ್ತಮ ಸೇವೆಗಾಗಿ’ ಸಾಮ್ರಾಜ್ಞಿಯ ಕೃಪೆಗೆ ಪಾತ್ರರಾಗುತ್ತಾರೆ. 1858ರ ನವೆಂಬರ್ನಲ್ಲಿ ವಿಕ್ಟೋರಿಯಾ ಸಾಮ್ರಾಜ್ಞಿ ಹೊರಡಿಸಿದ ಘೋಷಣೆಯನ್ನು 21 ಕುಶಾಲುತೋಪುಗಳನ್ನು ಹಾರಿಸಿ ಪ್ರಾಂತದಲ್ಲೆಲ್ಲ ಸಾರಲಾಯಿತು.
ಇದು ಮಹಾರಾಜರ ನಿಲವಾಗಿದ್ದರೂ, ಮೈಸೂರಿನ ಜನತೆ ಬ್ರಿಟಿಷ್ ಆಡಳಿತದಲ್ಲಿ ಸಂತುಷ್ಟರಾಗಿರಲಿಲ್ಲವೆಂಬುದು ಮೈಸೂರಿನ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ನ ವರದಿಯಿಂದ ವ್ಯಕ್ತವಾಗುತ್ತದೆ. 1855ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದ ಶಾಲೆಯೊಂದು ಜನತೆಯ ಮನದಲ್ಲಿ ತಮ್ಮ ಧರ್ಮಕ್ಕೆ ಕುತ್ತನ್ನು ತರಬಲ್ಲದೆಂಬ ಸಂಶಯಕ್ಕೆ ಅಣಿ ಮಾಡಿಕೊಟ್ಟಿತ್ತು. 1857-58ರ ಚಳವಳಿಯ ಸಮಯದಲ್ಲಿ ಈ ಅತೃಪ್ತಿಯ ಲಾಭ ಪಡೆಯಲು ಕೆಲವು ಆಸಕ್ತರು ಪ್ರಯತ್ನಿಸಿ ಜನತೆಯ ಅಪನಂಬಿಕೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ. ‘ಸರಕಾರದ ಸೇವೆಯಲ್ಲಿರುವ ಶಕ್ತಿಶಾಲಿ ಬ್ರಾಹ್ಮಣರು, ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು, ಸಾಹುಕಾರರು, ಚಿಕ್ಕಪುಟ್ಟ ಪಾಳೆಯಗಾರರು, ಹಳ್ಳಿಗಳ ಮುಖ್ಯಸ್ಥರು ನಮ್ಮ ಆಡಳಿತದ ವಿರುದ್ಧವಾಗಿದ್ದು, ಬ್ರಿಟಿಷ್ ಸರಕಾರದ ಬಗ್ಗೆ ಆಕ್ರೋಶಗೊಂಡಿದ್ದಾರೆ.’
ಈ ಸಮಯದಲ್ಲಿ ಜನತೆಯಲ್ಲಿ ವಿದ್ರೋಹವನ್ನುಂಟು ಮಾಡಲು ಕೊಲ್ಲಾಪುರದ ಚೀಮಾಸಾಹೇಬ್, ನಾನಾ ಸಾಹೇಬ್ ಮೊದಲಾದ ನಾಯಕರು ಮೈಸೂರಿನೊಂದಿಗೆ ಸಂಪರ್ಕವಿರಿಸಿಕೊಂಡಿದ್ದು ಅವರ ಅನೇಕ ರಾಯಭಾರಿಗಳು ಅತ್ತಿಂದಿತ್ತ ಓಡಾಡುತ್ತಿದ್ದುದು ಗಮನಕ್ಕೆ ಬಂದಿರುತ್ತದೆ. 1858ರ ಮಾರ್ಚ್ 25ರಂದು ಹೈದರಾಬಾದ್ನಲ್ಲಿ ಸುರಪುರದ ರಾಜನ ಹೇಳಿಕೆಯಿಂದ ಮೈಸೂರು ಮತ್ತು ಬೆಂಗಳೂರಿನಲ್ಲಿ ವಿದ್ರೋಹದ ಚಟುವಟಿಕೆಗಳಲ್ಲಿ ಕೃಷ್ಣಶಾಸ್ತ್ರಿ ಮಲ್ಹಾರ್, ಆಯನಭಾವು ವೀರಪ್ಪ ಮೊದಲಾದವರು ಪ್ರಮುಖ ಪಾತ್ರ ವಹಿಸಿದ್ದರೆಂದು ತಿಳಿದುಬರುತ್ತದೆ. ಜಾನುಲಬ್ದೀನ್ ಎಂಬಾತ ವಿದ್ರೋಹದ ಯೋಜನೆಯೊಂದಿಗೆ 1857ರ ಜುಲೈನಲ್ಲಿ ಬೆಳಗಾಂನಿಂದ ಹೊರಟು ಮೈಸೂರು, ಕರ್ನೂಲು ಮತ್ತು ಮದ್ರಾಸ್ಗೆ ಭೇಟಿ ನೀಡಿದ್ದನಲ್ಲದೆ ಈತ ಬರೆದ ‘ರಾಜದ್ರೋಹ ಪೂರಿತ’ ಪತ್ರಗಳು ಹೈದರಾಬಾದ್ನ ಬ್ರಿಟಿಷ್ ರೆಸಿಡೆಂಟ್ ಆಗಿದ್ದ ಕರ್ನಲ್ ಡೇವಿಡ್ಸನ್ನ ಕೈಗೆ ಸಿಕ್ಕಿವೆ.
ಮೈಸೂರು ನಗರವೂ ಸೇರಿದಂತೆ ಅನೇಕ ಸ್ಥಳಗಳಲ್ಲಿ ಜನತೆ ಬ್ರಿಟಿಷರ ವಿರುದ್ಧ ಹಿಂಸಾಚಾರಕ್ಕೆ ಇಳಿದುದಾಗಿ ಡಾ. ದಿವೇಕರ್ ದಾಖಲಿಸುತ್ತಾರೆ. ಇದೇ ವೇಳೆಯಲ್ಲಿ ಶ್ರೀರಂಗಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಜನರ ದಂಗೆಯನ್ನು ಹತ್ತಿಕ್ಕಲು ಲಾರ್ಡ್ ಕಬ್ಬನ್ ಕೊಡಗಿನ ಸಿಪಾಯಿಗಳಿಗೆ ಪಿರಿಯಾಪಟ್ಟಣದ ಮೇಲೆ ನುಗ್ಗಲು ರಹಸ್ಯ ಆದೇಶವನ್ನು ನೀಡುತ್ತಾನೆ. ಈ ಸೇವೆಗಾಗಿ ಆನಂತರದಲ್ಲಿ ಕೊಡಗು ಜಿಲ್ಲೆಗೆ ಶಸ್ತ್ರನಿಷೇಧ ಕಾಯ್ದೆಯ ಪರಿಮಿತಿಯಿಂದ ವಿನಾಯಿತಿ ನೀಡಲಾಯಿತು.
ಬ್ರಿಟಿಷರನ್ನು ಕಿತ್ತೊಗೆಯಲು ಇಷ್ಟೆಲ್ಲ ಚಟುವಟಿಕೆಗಳು ನಡೆದಿದ್ದರೂ ಅದೊಂದು ಪ್ರಭಾವಶಾಲಿ, ಪ್ರತ್ಯಕ್ಷ ಸಶಸ್ತ್ರ ಹೋರಾಟವಾಗಿ ಹೊರಹೊಮ್ಮಲಿಲ್ಲ. ವಿದ್ರೋಹದ ನಾಯಕರೆಂದು ಗುರುತಿಸಲಾಗಿದ್ದ ಕೃಷ್ಣಶಾಸ್ತ್ರಿ ಮಲ್ಹಾರ್, ಆಯನಭಾವಿ ವೀರಪ್ಪ, ಮತ್ತು ಜಾನುಲಬ್ದೀನ್ರ ಬಗ್ಗೆಯೂ ಹೆಚ್ಚಿನ ವಿವರಗಳು ದೊರಕುವುದಿಲ್ಲ.
ಈ ಸಮಯದಲ್ಲಿ ಮೈಸೂರಿನಲ್ಲಿ ಸೆರೆಸಿಕ್ಕಿದ ಸೀತಾರಾಂ ಬಾವ ಎಂಬ ವ್ಯಕ್ತಿಯ ಹೇಳಿಕೆಗೆ ಭಾರತೀಯ ಇತಿಹಾಸಕಾರರು ಹೆಚ್ಚಿನ ಮಹತ್ತ್ವ ನೀಡಿದಂತೆ ಕಾಣುವುದಿಲ್ಲ. ಈತ ತನ್ನನ್ನು ನಾನಾಸಾಹೇಬನ ರಾಯಭಾರಿಯೆಂದು ಗುರುತಿಸಿಕೊಂಡಿದ್ದು ಮೈಸೂರಿನ ನ್ಯಾಯಾಂಗ ಕಮಿಷÀನರ್ ಆಗಿದ್ದ ಎಚ್.ಬಿ. ಡೇವೆರಕ್ಸ್ ಎಂಬವನ ಮುಂದೆ 1858ರ ಜನವರಿ 18ರಿಂದ ಕೆಲವು ದಿನಗಳವರೆಗೆ ನೀಡಿದ ಸುದೀರ್ಘ ಹೇಳಿಕೆ ಸುಮಾರು 50 ಪುಟಗಳನ್ನು ಮೀರುತ್ತದೆ. ಇದರಲ್ಲಿ ಮೈಸೂರಿನ ಮಹಾರಾಜರೂ ಸೇರಿದಂತೆ ಗ್ವಾಲಿಯರ್ನ ರಾಜಮಾತೆ ಬೈಜಾಬಾಯಿ, ಹೋಳ್ಕರ್, ಸಿಂಧಿಯಾ, ಅಸ್ಸಾಂನ ರಾಜ, ಜೈಪುರ, ಜೋಧಪುರ, ಕೋಲಬಂದರ್, ಜಾಲಾವರ್, ರೇವ, ಬರೋಡ, ಕಚ್, ನಾಗಪುರ, ಹೈದರಾಬಾದ್, ಸುರಪುರ, ಕೊಲ್ಲಾಪುರ, ಸತಾರಾ, ಇಂದೋರ್ ಮೊದಲಾದ ರಾಜರೊಂದಿಗೆ ನಾನಾಸಾಹೇಬ್ ಪತ್ರ ವ್ಯವಹಾರದಲ್ಲಿ ತೊಡಗಿದ್ದನೆಂಬ ಹೇಳಿಕೆಯನ್ನು ಮಜುಂದಾರ್ ಅಂದಿನ ಪೇಟೆ ವದಂತಿಗಳ ಅಪಪ್ರಲಾಪವೆಂದು ತಳ್ಳಿಹಾಕುತ್ತಾರೆ. ‘ಮೈಸೂರು ಮಹಾರಾಜರು ನಡೆಸಿದರೆನ್ನಲಾದ ಭಾರಿ ಪಿತೂರಿಯ ಬಗ್ಗೆ ಬೇರಾವ ಮೂಲದಿಂದಲೂ ತಿಳಿದುಬರುವುದಿಲ್ಲ. ಸೀತಾರಾಂ ಬಾವನ ಬಲವಾದ ಪ್ರತಿಪಾದನೆಯ ಹೊರತಾಗಿಯೂ ಮಹಾರಾಜರ ವಿರುದ್ಧ ಬ್ರಿಟಿಷ್ ಸರಕಾರ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿರಲಿ ಕನಿಷ್ಠ ವಿಚಾರಣೆಯನ್ನೂ ನಡೆಸಲಿಲ್ಲ.’ ಅಷ್ಟೇ ಅಲ್ಲ, ‘ಸೀತಾರಾಂ ಬಾವನ ಪ್ರಕಾರ ನಾನಾನ ಸೂಚನೆಯನ್ನು ಹೃತ್ಪೂರ್ವಕವಾಗಿ ಒಪ್ಪಿಕೊಂಡ ಅನೇಕ ರಾಜಮಹಾರಾಜರು ದಂಗೆಯಲ್ಲಿ ಭಾಗವಹಿಸುವುದಿರಲಿ, ವಿದ್ರೋಹಕ್ಕೆ ಬೆಂಬಲ ಸೂಚಿಸಲು ತಮ್ಮ ಕಿರುಬೆರಳನ್ನೂ ಎತ್ತಲಿಲ್ಲ.’
ಬೆಂಗಳೂರು
1857ರಲ್ಲಿ ಉತ್ತರಭಾರತದಲ್ಲಿ ದಂಗೆ ಮತ್ತು ವಿದ್ರೋಹ ಪ್ರಾರಂಭಗೊಂಡ ತಕ್ಷಣ ಲಾರ್ಡ್ ಕ್ಯಾನಿಂಗ್ ಬೊಂಬಾಯಿ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳಿಂದ ತನ್ನ ಸಹಾಯಕ್ಕಾಗಿ ಸೇನೆಯನ್ನು ಕರೆಸಿಕೊಳ್ಳುತ್ತಾನೆ. ಈ ಕರೆಗೆ ಓಗೊಟ್ಟ ಮದ್ರಾಸ್ನ ಗವರ್ನರ್ ಸೇನೆಯ ಅಶ್ವ ಫಿರಂಗಿದಳ, ಗೋಲಂದಾಜರು, ದೇಶೀಯ ಕಾಲ್ದಳ ಮೊದಲಾದ ಎಲ್ಲ ವಿಭಾಗಗಳನ್ನೊಳಗೊಂಡ ‘ಮದ್ರಾಸ್ ಬ್ರಿಗೇಡ್’ನ್ನು ರಚಿಸಿ, ಬೆಂಗಳೂರಿನ ದಂಡುಪ್ರದೇಶದಲ್ಲಿದ್ದ ಎಂಟು ಮದ್ರಾಸ್ ಲಘು ಅಶ್ವದಳವನ್ನು ಅವರೊಂದಿಗೆ ಸೇರಿಕೊಳ್ಳಲು ಜುಲೈ ಅಂತ್ಯದಲ್ಲಿ ಆದೇಶ ಹೊರಡಿಸುತ್ತಾನೆ. ಬೆಂಗಳೂರಿನಿಂದ ಹೊರಟ ಆ ಅಶ್ವದಳ ಮಾರ್ಗಮಧ್ಯದಲ್ಲೇ ತನಗೆ 1833ರಲ್ಲಿ ನೀಡಲಾಗುತ್ತಿದ್ದ ಆದರೆ ಆನಂತರದಲ್ಲಿ ರದ್ದುಗೊಳಿಸಲಾಗಿದ್ದ ಆರ್ಥಿಕ ಸವಲತ್ತುಗಳನ್ನು ನೀಡುವ ಭರವಸೆ ನೀಡಿದರೆ ಮಾತ್ರ ಮುಂದುವರಿಯುವುದಾಗಿ ಹಠ ಹಿಡಿಯುತ್ತದೆ. ಜೊತೆಯಲ್ಲಿದ್ದ ಬ್ರಿಟಿಷ್ ಅಧಿಕಾರಿಗಳು ಪಡೆಗಳ ಮನವೊಲಿಸಿದಾಗ ತಮ್ಮ ವಿರೋಧವನ್ನು ಬದಿಗಿರಿಸಿದ ಅವು ಮದ್ರಾಸ್ನತ್ತ ಹೊರಟವು.
ಆದರೆ ತಮ್ಮನ್ನು ತಪ್ಪುದಾರಿಗೆಳೆಯಲು ಅಶ್ವದಳ ಹೂಡಿದ ತಂತ್ರವಿದೆಂದು ಬ್ರಿಟಿಷ್ ಅಧಿಕಾರಿಗಳಿಗೆ ಅರಿವಾಗುವುದು ಅವರು ಮದ್ರಾಸ್ ಬಳಿಯ ಪೆರುಂಬದೂರನ್ನು ತಲಪಿದಾಗಲೇ! ಅಲ್ಲಿ ಮುಂಚೂಣಿ ದಳಗಳಿಗಾಗಿ ಸಿದ್ಧವಾಗಿದ್ದ ಮೊದಲ ಹಡಗನ್ನು ಹತ್ತಲು ಅಶ್ವದಳ ನಿರಾಕರಿಸುತ್ತದೆ. ಸಂಕಟದ ಸಮಯದಲ್ಲಿ ತಮ್ಮ ಮೇಲೆ ಒತ್ತಡ ಹೇರಿ ತಮ್ಮಿಂದ ಹೆಚ್ಚಿನ ಸವಲತ್ತುಗಳನ್ನು ಪಡೆಯಲು ಸಿಪಾಯಿಗಳು ನಡೆಸಿದ ಈ ಪ್ರಯತ್ನದಿಂದ ಸರಕಾರ ರೊಚ್ಚಿಗೆದ್ದುದು ಸಹಜ. ‘ಅವರು ತಮ್ಮ ಈ ವರ್ತನೆಯಿಂದ ಸರಕಾರ ಮತ್ತು ಅದರ ಅಧಿಕಾರಿಗಳನ್ನು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಇಡೀ ಮದ್ರಾಸ್ ಅಶ್ವದಳಕ್ಕೆ ಅವರೊಂದು ಅವಲಕ್ಷಣದಂತಾಗಿದ್ದು ತಮ್ಮ ದ್ರೋಹ ಮತ್ತು ವಂಚನೆಯಿಂದ 8ನೇ ರೆಜಿಮೆಂಟ್ನ ಮುಖಕ್ಕೆ ಮಸಿ ಬಳೆದಿದ್ದಾರೆ’ ಎಂದು ಮದ್ರಾಸ್ನ ದಂಡನಾಯಕ ಗವರ್ನರ್ಗೆ ಬರೆದ ಪತ್ರದಲ್ಲಿ ತನ್ನ ರೋಷವನ್ನು ವ್ಯಕ್ತಪಡಿಸುತ್ತಾನೆ.
ಸಂಪೂರ್ಣ ರೆಜಿಮೆಂಟಿನ ಈ ‘ದುವ್ರ್ಯವಹಾರ’ಕ್ಕೆ ಸರಕಾರದ ಪ್ರಹಾರ ಬೀಳುವುದು ದೇಶೀಯ ಅಧಿಕಾರಿಗಳ ಮೇಲೆ. ‘ತಮ್ಮ ರೆಜಿಮೆಂಟ್ನ ನಿಜವಾದ ಉದ್ದೇಶ ಅವರಿಗೆ ತಿಳಿದಿರಬೇಕಾಗಿತ್ತಾದರೂ ಬೆಂಗಳೂರಿನಿಂದ ಹೊರಟು ಪೆರುಂಬದೂರ್ ತಲಪುವವರೆಗೂ ಅವರು ಮೌನವಾಗಿದ್ದಾರೆ. ಪಡೆಗಳ ದುರ್ವರ್ತನೆಯ ಸಂಪೂರ್ಣ ಹೊಣೆ ಅವರ ಮೇಲಿದ್ದು ಪರಿಣಾಮ ಸ್ವರೂಪವಾಗಿ ಅವರು ಕಠೋರ ಶಿಕ್ಷೆಯ ಮುಖ್ಯ ಭಾಗವಾಗಬೇಕೆಂಬುದು ಗವರ್ನರ್ನ ಅಭಿಪ್ರಾಯವಾಗಿದೆ.’
ಇದರ ಪರಿಣಾಮವಾಗಿ ಪ್ರತಿ ಪಡೆಯೊಂದಿಗಿದ್ದ ಆರು ದೇಶೀಯ ಅಧಿಕಾರಿಗಳನ್ನು ತಕ್ಷಣದಿಂದ ವಜಾಗೊಳಿಸಲಾಯಿತು. ಇದೇ ರೀತಿ ಇನ್ನಿಬ್ಬರನ್ನೂ ವಜಾ ಮಾಡಲಾಯಿತು. ರೆಜಿಮೆಂಟ್ನ್ನು ವಿಸರ್ಜಿಸಿ ಇತರ ರೆಜಿಮೆಂಟ್ಗಳಿಗೆ ಹಂಚಲಾಯಿತು.
ಹೀಗೆ 1857ರ ವಿದ್ರೋಹದಲ್ಲಿ ಮೈಸೂರು ಸಂಸ್ಥಾನದ ಪಾತ್ರ ಗೌಣವಾಗಿ ಉಳಿಯುತ್ತದೆ. ಆದರೆ ಉತ್ತರ ಕರ್ನಾಟಕದ ಮರಾಠ ಮತ್ತು ನಿಜಾಮ್ ಪ್ರದೇಶಗಳಲ್ಲಿದ್ದ ಜಮಖಂಡಿ, ಬಿಜಾಪುರ, ಬೆಳಗಾವಿ, ನರಗುಂದ ಮತ್ತು ಸುರಪುರ ಮೊದಲಾದ ಸ್ಥಳಗಳಲ್ಲಿ ನಡೆದ ವಿದ್ರೋಹಗಳು ಈ ಕೊರತೆಯನ್ನು ಕೊಂಚವಾದರೂ ನೀಗಿಸುವಲ್ಲಿ ಪೂರಕವಾಗಿ ನಿಲ್ಲುತ್ತವೆ.
ಜಮಖಂಡಿ
ಮರಾಠ ಪೇಶ್ವೆ ಬಾಳಾಜಿ ವಿಶ್ವನಾಥನಿಂದ ಪಟವರ್ಧನ್ ವಂಶಕ್ಕೆ ಸೇರಿದ ಹರಿಭಟ್ಟನೆಂಬಾತ ಪಡೆದ ಜಮಖಂಡಿ ಚಿಕ್ಕದೊಂದು ಸಂಸ್ಥಾನವಾಗಿತ್ತು. ವಿದ್ರೋಹದ ಸಮಯದಲ್ಲಿ ಜಮಖಂಡಿಯ ರಾಜನಾಗಿದ್ದ ರಾಮಚಂದ್ರರಾವ್ ಪಟವರ್ಧನ್ ಅಥವಾ ಅಪ್ಪಾಸಾಹೇಬ್ ಸುಸಂಸ್ಕೃತ ವ್ಯಕ್ತಿಯಾಗಿದ್ದ. ರಾಜಗೋಪಾಲ್ರಾವ್ನ ದತ್ತುಪುತ್ರನಾಗಿದ್ದ ಈತನ ಮೂಲ ಹೆಸರು ಗಣಪತರಾವ್ ಎಂದಾಗಿದೆ. ಸಂಸ್ಥಾನದ ಅಧಿಕಾರ ವಹಿಸಿಕೊಂಡ ಕೂಡಲೆ ಬ್ರಿಟಿಷ್ ಏಜೆಂಟ್ ಡೌನ್ ಎಂಬಾತ ತಾನು ನಿರ್ವಹಿಸುತ್ತಿದ್ದ ದಾವೆಗಳಲ್ಲಿ ಹಸ್ತಕ್ಷೇಪ ಮಾಡತೊಡಗಿದಾಗ ಆತನನ್ನು ಎದುರು ಹಾಕಿಕೊಂಡಿದ್ದು ಅಪ್ಪಾಸಾಹೇಬನ ಸ್ವತಂತ್ರ ಪ್ರವೃತ್ತಿಯ ದ್ಯೋತಕವಾಗಿದೆ. 1857ರಲ್ಲಿ ನರಗುಂದ, ಸತಾರಾ, ಕೊಲ್ಲಾಪುರ, ಸುರಪುರ, ಸಾಂಗ್ಲಿ, ಮೀರಜ್ ಮೊದಲಾದ ಸ್ಥಳಗಳೊಂದಿಗೆ ಸಂಪರ್ಕ ಬೆಳೆಸಿದ್ದ ಅಪ್ಪಾಸಾಹೇಬ್ ವಿದ್ರೋಹವನ್ನುಂಟು ಮಾಡಲು ಮಹತ್ತ್ವದ ಪಾತ್ರವನ್ನು ವಹಿಸಿದ್ದನೆನ್ನುವುದು ಡಾ. ದಿವೇಕರ್ರವರ ಅಭಿಮತ. ಈ ಪ್ರಯತ್ನದಲ್ಲಿ ಜಮಖಂಡಿಯ ಸೇನಾಧಿಕಾರಿಯಾಗಿದ್ದ ಛೋಟುಸಿಂಗ್ ಈತನ ಬಲಗೈ ಬಂಟನಾಗಿರುತ್ತಾನೆ. ‘ನಾನು ನಗರವನ್ನು (ಕೊಲ್ಲಾಪುರ) ವಶಕ್ಕೆ ತೆಗೆದುಕೊಂಡ ದಿನ ಜಮಖಂಡಿಯ ಸೇನಾಧಿಕಾರಿ ವಿದ್ರೋಹದ ಪ್ರಮುಖ ಪ್ರತಿನಿಧಿಯಾಗಿದ್ದು ನಮ್ಮ ಸೈನಿಕರೊಂದಿಗೆ ದ್ರೋಹಾತ್ಮಕ ಪತ್ರವ್ಯವಹಾರ ನಡೆಸುತ್ತಿದ್ದ ಎಂಬುದಕ್ಕೆ ಪುರಾವೆಗಳು ದೊರಕಿವೆ.’
ಈ ಮಧ್ಯೆ ಅಪ್ಪಾಸಾಹೇಬ್ ತನ್ನ ಸೇನೆಯನ್ನು ಜಮಾಯಿಸಿ ತನ್ನ ಕೋಟೆಯನ್ನು ಭದ್ರಗೊಳಿಸಿ, ಹಲವು ಬ್ರಿಟಿಷ್ ದಂಡುಪ್ರದೇಶಗಳ ಸಿಪಾಯಿಗಳನ್ನು ದಂಗೆಗೆ ಪ್ರೇರೇಪಿಸಲು ತನ್ನ ರಾಯಭಾರಿಗಳನ್ನು ಕಳುಹಿಸಲಾರಂಭಿಸುತ್ತಾನೆ. 1858ರ ಜನವರಿಯಲ್ಲಿ ಬಿಜಾಪುರದಲ್ಲಿ ಫಿರಂಗಿಗಳಿಗೆ ಬಳಸಬಹುದಾದ ಭಾರಿ ಪ್ರಮಾಣದ ಸಿಡಿಮದ್ದನ್ನು ತಯಾರಿಸಿರುವುದು ಬ್ರಿಟಿಷರ ಗಮನಕ್ಕೆ ಬರುತ್ತದೆ. ಮಾರ್ಚ್ ತಿಂಗಳಿನಲ್ಲಿ ಈ ಬಗ್ಗೆ ವಿವರಣೆ ಕೇಳಿದ ರಾಜಕೀಯ ಏಜೆಂಟ್ ಮಾನ್ಸನ್ಗೆ ಬರೆದ ಉತ್ತರದಿಂದ ಕುಪಿತಗೊಂಡ ಸರಕಾರ ಅಪ್ಪಾ ಸಾಹೇಬನನ್ನು ಸೆರೆಹಿಡಿದು ಮೊದಲು ಬೆಳಗಾವಿಗೆ ಕಳುಹಿಸಿತಾದರೂ ಅಲ್ಲಿ ಆತನ ಇರುವಿಕೆ ಅಪಾಯಕಾರಿಯಾಗಿ ಕಂಡಿದ್ದರಿಂದ ಅಲ್ಲಿಂದ ವೆಂಗರರ್ಲಗೆ, ಆನಂತರದಲ್ಲಿ ರತ್ನಗಿರಿಗೆ ವರ್ಗಾಯಿಸುತ್ತದೆ. ಸರಕಾರ ಜನವರಿ 1859ರಲ್ಲಿ ಆತನನ್ನು ಬಿಡುಗಡೆ ಮಾಡಿದ ಬಳಿಕ ಏಪ್ರಿಲ್ನಲ್ಲಿ ತನ್ನ ಸಂಸ್ಥಾನಕ್ಕೆ ಹಿಂತಿರುಗಿದ ಅಪ್ಪಾಸಾಹೇಬ್ 1897ರಲ್ಲಿ ನಿಧನ ಹೊಂದುತ್ತಾನೆ.
ತನ್ನ ಧಣಿಗೆ ಸರ್ವರೀತಿಯಿಂದಲೂ ನಿಷ್ಠಾವಂತನಾಗಿದ್ದ ಛೋಟುಸಿಂಗ್ ಜಮಖಂಡಿಯಲ್ಲಿದ್ದ ಬಾವಿಯೊಂದರಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಎಸೆದು ಇಂಗ್ಲಿಷರಿಂದ ಆತನನ್ನು ಉಳಿಸಲು ಪ್ರಯತ್ನಿಸುತ್ತಾನೆ. ಬ್ರಿಟಿಷ್ ರೆಜಿಮೆಂಟ್ಗಳ ಸಿಪಾಯಿಗಳಿಗೆ ವಿದ್ರೋಹಕ್ಕೆ ಕುಮ್ಮಕ್ಕು ನೀಡಿದುದಕ್ಕಾಗಿ ಈತನನ್ನು ಬಂಧಿಸಿ ಬೆಳಗಾಂನಲ್ಲಿ ವಿಚಾರಣೆ ನಡೆಸಿದ ಬಳಿಕ ಆತನಿಗೆ ಮರಣದಂಡನೆ ವಿಧಿಸಲು ಜಮಖಂಡಿಗೆ ಕರೆತಂದರು. 1858ರ ಅಕ್ಟೋಬರ್ನಲ್ಲಿ ಜಮಖಂಡಿಯಲ್ಲಿ ಸಾರ್ವಜನಿಕವಾಗಿ ಫಿರಂಗಿಯ ಬಾಯಿಗೆ ಕಟ್ಟಿ ಛಿದ್ರಗೊಳಿಸಿದ ಆತನ ದೇಹವನ್ನು ಕಂಡ ಇಡೀ ನಗರ ತಲ್ಲಣಗೊಳ್ಳುತ್ತದೆ. ಪಿತೂರಿಯಲ್ಲಿ ಪಾಲ್ಗೊಂಡಿದ್ದ ಜಮಖಂಡಿ ಸಂಸ್ಥಾನದ ಅಧಿಕಾರಿ ಆಬಾಜಿ ದೇವಧರ್ ಎಂಬಾತನನ್ನು ಜಮಖಂಡಿಯಿಂದ ಶಾಶ್ವತವಾಗಿ ಗಡೀಪಾರು ಮಾಡಲಾಯಿತು. 1861ರಲ್ಲಿ ಹೈದರಾಬಾದ್ನಿಂದ ಜಮಖಂಡಿಯ ರಾಜನೊಂದಿಗೆ ಬ್ರಿಟಿಷ್ವಿರೋಧಿ ಪತ್ರವ್ಯವಹಾರದಲ್ಲಿ ತೊಡಗಿದ ‘ಅಪರಾಧ’ಕ್ಕಾಗಿ ಆಬಾಜಿ ದಾಮೋದರ್ ಹಾಗೂ ಇನ್ನಿಬ್ಬರನ್ನು ಆಜೀವ ಗಡೀಪಾರಿನ ಶಿಕ್ಷೆಗೆ ಗುರಿ ಮಾಡಿದ ಬಳಿಕ ಜಮಖಂಡಿಯಲ್ಲಿ ಎಲ್ಲವೂ ಶಾಂತವಾಯಿತು.
ಬಿಜಾಪುರ
ಜಮಖಂಡಿಯಲ್ಲಿ ನಡೆದ ಪಿತೂರಿಯ ಪ್ರತಿಧ್ವನಿ ಬಿಜಾಪುರದಲ್ಲೂ ಕೇಳಿಬರುತ್ತದೆ. 1857ರ ನವೆಂಬರ್ನಲ್ಲಿ ಢೋಂಗ್ರಿ ಎಂಬಾತನ ಮನೆಯಿಂದ 17 ಮಣ ಸಿಡಿಮದ್ದಿನ ಪುಡಿಯನ್ನು ಮಾಮಲೆದಾರ ಬಪ್ಪು ರಾಮಬಕ್ಷ್ ಜಪ್ತಿ ಮಾಡಿರುತ್ತಾನೆ. ಈ ಸಿಡಿಮದ್ದನ್ನು ಜಮಖಂಡಿಯ ರಾಜನಿಗಾಗಿ ತಯಾರಿಸಲಾಗಿದ್ದು ಬಿಜಾಪುರದ ಜಹಗೀರುದಾರರಾಗಿರುವ ಜೈನ್ ಸಾಹೇಬ್ ಮತ್ತು ಶಾಹಜಾದೆ ಆತನ ಏಜೆಂಟರಾಗಿರುವರು. 1858ರ ಜನವರಿಯಲ್ಲಿ ಢೋಂಗ್ರಿಯ ಮನೆಯನ್ನು ಹುಡುಕಿದಾಗ ಇವರಿಬ್ಬರು ಅಪ್ಪಾಸಾಹೇಬ್ಗೆ ಬರೆದ ಪತ್ರವೊಂದು ಸಿಗುತ್ತದೆ. ಆದರೆ ಢೋಂಗ್ರಿಯ ಮನೆಯಲ್ಲಿ ವಿದ್ರೋಹದ ಚಟುವಟಿಕೆಗಳು ನಡೆಯುತ್ತಿರುವ ವಿಚಾರವನ್ನು ಸರಕಾರದ ಗಮನಕ್ಕೆ ತಾರದಿರುವ ಮಾಮಲೆದಾರನ ಮೇಲೆ ಕ್ರಮ ಜರುಗಿಸಲು ಲೆಫ್ಟಿನೆಂಟ್ ವಿಲಿಯಂ ಕೇರ್ ಆದೇಶಿಸುತ್ತಾನೆ. ಬಿಜಾಪುರದ ಮೇಲೆ ವ್ಯಾಪ್ತಿಯನ್ನು ಹೊಂದಿದ್ದ ಸತಾರಾದ ದಂಡಾಧಿಕಾರಿ ಜೆ.ಎಸ್. ರೋಸ್ ಮಾಮಲೆದಾರ ಮತ್ತು ಕೇರ್ನ ನಡುವಿನ ತಪ್ಪು ತಿಳಿವಳಿಕೆಯ ಪರಿಚಯವಿದ್ದುದರಿಂದ, ಕೇರ್ನ ದೂರನ್ನು ಯಥಾವತ್ತಾಗಿ ಸ್ವೀಕರಿಸುವುದರ ಬಗ್ಗೆ ಸರಕಾರವನ್ನು ಎಚ್ಚರಿಸುತ್ತಾನೆ. ಮುಂದೆ ನಡೆದ ವಿಚಾರಣೆಯಲ್ಲಿ ವಿದ್ರೋಹದ ಸಭೆಗಳು ಕೇರ್ ಆಪಾದಿಸಿದಂತೆ ಢೋಂಗ್ರಿಯ ಮನೆಯಲ್ಲಿ ನಡೆದುದಾಗಿರದೆ ಆತನ ಸಹೋದರಿಯಾದ ವೇಶ್ಯೆ ಮೊಹಾನಿ ಕಸ್ಬಿನ್ಳ ಮನೆಯಲ್ಲಿ ಜರುಗಿದ್ದು, ಢೋಂಗ್ರಿ ಮತ್ತು ಆತನ ಮಗ ಹುಸ್ಸೈನ್ ಅವುಗಳಲ್ಲಿ ಪಾತ್ರವಹಿಸಿರುವುದು ತಿಳಿದುಬರುತ್ತದೆ. ಆಗಸ್ಟ್ 1858ರಲ್ಲಿ ಮಾಮಲೆದಾರ ಬಪ್ಪು ರಾಮಬಕ್ಷ್ನನ್ನು ಸರಕಾರ ಅಮಾನತುಗೊಳಿಸುತ್ತದೆ. ಲೆಫ್ಟಿನೆಂಟ್ ಸ್ಟ್ಯಾನ್ಫರ್ಡ್ ನಡೆಸಿದ ವಿಚಾರಣೆಯಲ್ಲಿ ಆತ ಹಾಗೂ ಜೈನ್ ಸಾಹೇಬ್ ಮತ್ತು ಶಾಹಜಾದೆ ಇವರ ವಿರುದ್ಧ ಬಲವಾದ ಯಾವುದೇ ಪುರಾವೆಗಳು ಲಭ್ಯವಾಗಲಿಲ್ಲ.
ಪೂರ್ವದಿಂದ ಸುರಪುರ, ದಕ್ಷಿಣದಲ್ಲಿ ನರಗುಂದ, ಪಶ್ಚಿಮದಲ್ಲಿ ಮುಧೋಳಗಳಿಂದ ಸುತ್ತುವರಿದಿದ್ದ ಬಿಜಾಪುರವನ್ನು ಕ್ರಾಂತಿಯ ಧಗೆ ಅಷ್ಟು ಸುಲಭವಾಗಿ ಬಿಡುವಂತಿರಲಿಲ್ಲ. ಆದುದರಿಂದ ಜಿಲ್ಲೆಯ ಗಡಿಗ್ರಾಮಗಳಲ್ಲಿ ಎಡೆಬಿಡದೆ ವಿದ್ರೋಹದ ಚಟುವಟಿಕೆಗಳು ಕಾಣಸಿಗುತ್ತಿದ್ದವು. ಜಂಬಗಿಯ ಬಸಲಿಂಗಪ್ಪ, ಚಾಂದಕಾವಟೆ ಮತ್ತು ಶಿರ್ಶೆಟ್ಟಿ ಗ್ರಾಮಗಳ ದೇಶಮುಖರು ಸೇರಿ ಸುರಪುರದವರನ್ನು ಬೆಂಬಲಿಸಲು ನಿರ್ಧರಿಸುತ್ತಾರೆ. ಜನರನ್ನು ಸೇನೆಗೆ ಸೇರಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದ ಬಸಲಿಂಗಪ್ಪ ನಾನಾಸಾಹೇಬ್ ಶೋಲಾಪುರದವರೆಗೂ ಬಂದಿರುವುದಾಗಿ ಸಾರಲಾರಂಭಿಸುತ್ತಾನೆ. ಬಸಲಿಂಗಪ್ಪ ಮತ್ತು ಆತನ ಮಗನನ್ನು ಬಂಧಿಸಿದ ಬ್ರಿಟಿಷರು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸೀಸವನ್ನು ವಶಪಡಿಸಿಕೊಂಡು ಕೊತ್ನಾಳದ ಕೋಟೆಯನ್ನು ಕೆಡವಿ ನೆಲಸಮ ಮಾಡುತ್ತಾರೆ. ರಾಜದ್ರೋಹದ ಆಪಾದನೆಯ ಮೇಲೆ ಬಸಲಿಂಗಪ್ಪನನ್ನು ಶಿಕ್ಷೆಗೆ ಗುರಿಮಾಡಿದ ಬ್ರಿಟಿಷರು ಆತನ ಜಹಗೀರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ.
ಬೆಳಗಾಂವ್
1824ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮನಂತಹ ವೀರ ಮಹಿಳೆ ಮತ್ತು 1829ರಲ್ಲಿ ಸಂಗೊಳ್ಳಿ ರಾಯಣ್ಣನಂತಹ ಗಂಡುಗಲಿಗಳ ನೇತೃತ್ವದಲ್ಲಿ ಬ್ರಿಟಿಷ್ ಆಧಿಪತ್ಯಕ್ಕೆ ಸವಾಲನ್ನೊಡ್ಡಿದ ಬೆಳಗಾಂವ್ ಜಿಲ್ಲೆ 1857ರಲ್ಲಿ ಶಾಂತವಾಗಿರುವುದಾದರೂ ಹೇಗೆ? 1857 ಜುಲೈನಲ್ಲಿ ಬೆಳಗಾಂವ್ನಲ್ಲಿದ್ದ ಬ್ರಿಟಿಷ್ ರಾಜಕೀಯ ಪ್ರತಿನಿಧಿ ಮೈಸೂರು, ಕರ್ನೂಲು ಮತ್ತು ಮದ್ರಾಸ್ವರೆಗೂ ಹಬ್ಬಿದ ಗುಪ್ತ ಜಾಲವೊಂದನ್ನು ಪತ್ತೆಹಚ್ಚುತ್ತಾನೆ. ಆತ ನೀಡಿದ ಮಾಹಿತಿಯ ಮೇರೆಗೆ ಹೈದರಾಬಾದ್ನಲ್ಲಿ ಜಾನುಲಬ್ದೀನ್ನ ಪತ್ರಗಳನ್ನು ಬಿಡಿಸಿ ನೋಡಿದಾಗ ಬೆಳಗಾಂವ್ನ ಪ್ರಭಾವಶಾಲಿ ಬುದ್ಧಿಜೀವಿಗಳು ಮತ್ತು ದೇಶೀಯ ರೆಜಿಮೆಂಟ್ ವಿದ್ರೋಹದ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬರುತ್ತದೆ. ಇಂತಹುದೇ ಮಾಹಿತಿ ಗೋವಾದ ಪೋರ್ಚುಗೀಸ್ ಗವರ್ನರ್ಗೆ ತಲಪಿದಾಗ ಆತ ಬ್ರಿಟಿಷ್ ಸರಕಾರಕ್ಕೆ ಎಚ್ಚರಿಕೆ ನೀಡುತ್ತಾನೆ. ಪುಣೆ, ಕೊಲ್ಲಾಪುರ, ಜಮಖಂಡಿ, ಸುರಪುರಗಳಿಂದ ಕ್ರಾಂತಿಯ ಪ್ರತಿನಿಧಿಗಳು ಈಗಾಗಲೇ ಬೆಳಗಾಂವ್ ತಲಪಿರುತ್ತಾರೆ. ಅಲ್ಲಿಯ ಜನತೆ ಮತ್ತು ಕೊಲ್ಲಾಪುರದ 27ನೇ ರೆಜಿಮೆಂಟ್ನ ನಡುವೆ ನಡೆಯುತ್ತಿದ್ದ ಪತ್ರವ್ಯವಹಾರವನ್ನು ಬ್ರಿಟಿಷರು ಕಂಡುಹಿಡಿಯುತ್ತಾರೆ. ಅಲ್ಲಿರುವ 29ನೇ ದೇಶೀಯ ರೆಜಿಮೆಂಟ್ನ ಸಿಪಾಯಿಯೊಬ್ಬ ತನ್ನ ರೆಜಿಮೆಂಟ್ನ ಅನೇಕ ಸಿಪಾಯಿಗಳ ಪರವಾಗಿ ಬಂಗಾಳದ 74ನೇ ರೆಜಿಮೆಂಟ್ನ ಸಿಪಾಯಿಗಳಿಗೆ ಬರೆದ ಪತ್ರವೊಂದು ಬ್ರಿಟಿಷರಿಗೆ ಸಿಗುತ್ತದೆ. ಅದರಲ್ಲಿ ಅವರ ಸಲಾಮುಗಳು, ಆಶೀರ್ವಚನ, ರಾಮ್-ರಾಮ್-ಸೀತಾರಾಮ್ ಮೊದಲಾದ ಅಭಿನಂದನೆಗಳ ಬಳಿಕ ಕೆಳಕಂಡ ಒಕ್ಕಣೆಯಿತ್ತು:
“ನಾವೆಲ್ಲ ನಿಮ್ಮ ಮಕ್ಕಳಿದ್ದಂತೆ. ಆದುದರಿಂದ ನಿಮಗೆ ಸರಿಕಂಡಂತೆ ನಮ್ಮೊಂದಿಗೆ ನಡೆದುಕೊಳ್ಳಬಹುದು. ನಿಮ್ಮ ವಿವೇಚನೆಯಲ್ಲಿ ನಮ್ಮೆಲ್ಲರ ಭದ್ರತೆಯಡಗಿದೆ ಎಂಬುದು ಸರ್ವವೇದ್ಯ. ಇಲ್ಲಿ ನಾವೆಲ್ಲರೂ ಏಕಾಭಿಪ್ರಾಯ ಹೊಂದಿದ್ದು ನಿಮ್ಮ ಕರೆಬಂದ ಕೂಡಲೆ ಧಾವಿಸುತ್ತೇವೆ. ನಮ್ಮ ತಂದೆ-ತಾಯಿಯಂತಿರುವ ನೀವು ಚಿಕ್ಕದಾಗಿರುವ ಈ ಪತ್ರದಿಂದ ಎಲ್ಲವನ್ನೂ ಗ್ರಹಿಸಬಲ್ಲಿರಿ. ರಘುನಾಥನ ಬಂಟರಾಗಿರುವ ನಿಮಗೆ ನಾವು ಸೇವಕರಿದ್ದಂತೆ. ಈ ಪತ್ರ ತಲಪಿದ ಕೂಡಲೆ ಉತ್ತರ ಬರೆಯಿರಿ.” ದಕ್ಷಿಣ ವಿಭಾಗದ ಸೇನಾಧಿಕಾರಿಯಾಗಿದ್ದ ಜನರಲ್ ಲೆಸ್ಟರ್ಗೆ ಈ ಒಕ್ಕಣೆ ಬಹಳ ದ್ರೋಹಾತ್ಮಕವಾಗಿ ಕಂಡುಬಂದುದರಿಂದ ತಕ್ಷಣ ಕಠೋರ ಕ್ರಮ ಜರುಗಿಸಲಾರಂಭಿಸುತ್ತಾನೆ. ಬ್ರಿಟಿಷರ ಶಸ್ತ್ರಾಗಾರಕ್ಕೆ ಬಹಳ ಸಮೀಪದಲ್ಲಿದೆ ಎಂಬ ನೆಪವೊಡ್ಡಿ ನಗರದಲ್ಲಿದ್ದ ಸಫಾ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗದಂತೆ ತಡೆಯುತ್ತಾನೆ. 1857ರ ಆಗಸ್ಟ್ 10ರಂದು ಬೊಂಬಾಯಿಯಿಂದ ಹೆಚ್ಚಿನ ಸೇನೆ ಬಂದಿಳಿದ ಕೂಡಲೆ ನಗರದ ಅನೇಕ ಪೌರ ಮತ್ತು ಸೈನಿಕ ನಾಯಕರುಗಳನ್ನು ಬಂಧಿಸಿ ‘ಬ್ರಿಟಿಷ್ ಸರಕಾರದ ವಿರುದ್ಧ ಯುದ್ಧ ಹೂಡಿದ ಆಪಾದನೆ’ ಹೊರೆಸಿ ವಿಚಾರಣೆಗೆ ಒಳಪಡಿಸಿದ. ಇವರಲ್ಲಿ ಪುಣೆಯ ವಹಾಬಿ ನಾಯಕ ನೂರುಲ್ ಹುಡಾನ ಶಿಷ್ಯನಾಗಿದ್ದು ಬ್ರಿಟಿಷ್ ಅಧಿಕಾರಿಗಳಿಗೆ ಪಾಠ ಹೇಳಿಕೊಡಲು ನಿಯುಕ್ತನಾಗಿದ್ದ ಮುಂನ್ಶಿ ಮೊಹಮ್ಮದ್ ಹುಸ್ಸೈನ್ ಕೊಲ್ಲಾಪುರ, ಬೆಳಗಾಂವ್ ಮೊದಲಾದ ದಂಡುಪ್ರದೇಶಗಳ ಸಿಪಾಯಿಗಳಿಗೆ ಬರೆದ ಪತ್ರಗಳು ಪಿತೂರಿಯ ವ್ಯಾಪಕತೆಯನ್ನು ಎತ್ತಿ ತೋರಿಸುತ್ತವೆ. ಈ ಆಧಾರದ ಮೇಲೆ ಮುಂನ್ಶಿ ಮತ್ತು ಸುರಪುರದ ರಾಜನ ಪ್ರತಿನಿಧಿಯಾಗಿ ಬಂದಿದ್ದ ಮಹಿಪಾಲ್ಸಿಂಗ್ ಎಂಬವನನ್ನು ಅಪರಾಧಿಯೆಂದು ಘೋಷಿಸುವ ಸೈನಿಕ ನ್ಯಾಯಾಲಯ ಆಗಸ್ಟ್ 14ರಂದು ಫಿರಂಗಿಗೆ ಕಟ್ಟಿ ಉಡಾಯಿಸುವ ಮೂಲಕ ತನ್ನ ದಮನಕಾರಿ ನೀತಿಯಿಂದ ವಿದ್ರೋಹವನ್ನು ಹತ್ತಿಕ್ಕುತ್ತದೆ. ಮುಂನ್ಶಿಯೊಂದಿಗೆ ಐವರು ಸಿಪಾಯಿಗಳನ್ನು ಮರಣದಂಡನೆಗೆ ಗುರಿಪಡಿಸಿ, ನಾಲ್ಕು ಮಂದಿಯನ್ನು ಗಡಿಪಾರು ಮಾಡಲಾಯಿತು.
ಕಾರವಾರ
ಸಾವಂತವಾಡಿಯ ವಿದ್ರೋಹಿಗಳೊಂದಿಗೆ ಸಹಾನುಭೂತಿ ಹೊಂದಿದ್ದ ಕಾರವಾರದ ನಾಯಕರೂ ಅವರೊಂದಿಗೆ ವಿದ್ರೋಹದಲ್ಲಿ ಪಾಲ್ಗೊಂಡಿರುವರು. ಇಲ್ಲಿಯ ನಾಯಕರು ನಾನಾಸಾಹೇಬನೊಂದಿಗೆ ಸಂಪರ್ಕ ಹೊಂದಿರುವರೆಂದು ಶಂಕಿಸಿದ ಕನ್ನಡ ಜಿಲ್ಲೆಯ ಜಂಟಿ ದಂಡಾಧಿಕಾರಿಯಾಗಿರುವ ರಾಬಿನ್ಸನ್ ನಾನಾಸಾಹೇಬನ ಸಂಬಂಧಿಗಳಾಗಿದ್ದ ಸಾಂಗ್ಲಿಯ ಚಿಂತಾಮಣಿರಾವ್ನ ದತ್ತುಪುತ್ರ, ಶಹಾಪುರದ ತಾತ್ಯಾಸಾಹೇಬ್, ನರಗುಂದದ ಬಾಬಾಸಾಹೇಬ್, ರಾಮದುರ್ಗದ ರಾವ್ಸಾಹೇಬ್, ಜಮಖಂಡಿಯ ಭಾವುಸಾಹೇಬ್, ಕುರಂದವಾಡಿಯ ಅಪ್ಪಾಸಾಹೇಬ್, ಮೀರಜ್ನ ಬಾಬಾಸಾಹೇಬ್ ಮೊದಲಾದವರ ಯಾದಿಯನ್ನು ತಯಾರಿಸುತ್ತಾನೆ. ಇವರಲ್ಲದೆ ಖಾನಾಪುರದ ಬಳಿಯ ಜಂಬೋಟಿಯ ನಾನಾದೇಸಾಯಿ, ನವಲಗುಂದ, ಸೋಮನಕೊಪ್ಪ, ಕುಡಚಿ, ಬೆಣಚಿ, ಇಂದೂರ್ನ ದೇಸಾಯಿಗಳು, ಹಳಿಯಾಳ, ಜವೆಲ್ಲಿ, ಕೊಡ್ಲಿಯ ದೇಶಪಾಂಡೆಗಳು ಹಾಗೂ ಇನ್ನೂ ಅನೇಕರನ್ನು ನಾನಾಸಾಹೇಬನ ಹಿಂಬಾಲಕರೆಂದು ಗುರುತಿಸುತ್ತಾನೆ.
ಬಂಗಾಳ ಸೇನೆಯಿಂದ ಪರಾರಿಯಾಗಿ ಫಕೀರರಂತೆ ವೇಷಧರಿಸಿ ತಲೆಮರೆಸಿಕೊಂಡಿದ್ದ ಒಬ್ಬಿಬ್ಬರು ಸಿಪಾಯಿಗಳು ಇಲ್ಲಿ ಕಂಡುಬಂದಿದ್ದು ಬ್ರಿಟಿಷರಿಗೆ ಸೆರೆ ಸಿಕ್ಕಿರುತ್ತಾರೆ. ಕಾರವಾರ ಜಿಲ್ಲೆಯಲ್ಲಿ ಕಂಡುಬಂದ ವಿದ್ರೋಹಕ್ಕೆ ಅತಿಯಾಗಿ ಹೇರಲಾದ ಕಂದಾಯವೇ ಕಾರಣವೆಂದು ಕೆಲವು ಬ್ರಿಟಿಷ್ ಅಧಿಕಾರಿಗಳು ಅಭಿಪ್ರಾಯಪಟ್ಟರೆ, ಇಲ್ಲಿಯ ಜನತೆಯಲ್ಲಿದ್ದ ಸ್ವಾತಂತ್ರ್ಯಪ್ರೇಮ, ಆಗಿನ ಸಮಯಲ್ಲಿ ದೇಶದಲ್ಲಿದ್ದ ಪ್ರಕ್ಷುಬ್ಧ ವಾತಾವರಣ, ದೇಸಾಯಿಗಳ ನಾಯಕತ್ವ, ಸಾವಂತರ ಬಗೆಗಿನ ಗೌರವವೇ ಕಾರಣವೆಂದು ವಿಶೇಷ ಕಮಿಶನರ್ ಜಿ.ವಿ. ಬ್ಯಾಲರ್ಡ್ ಭಾವಿಸುತ್ತಾನೆ.
1858ರ ಆದಿಭಾಗದಲ್ಲಿ ವಿದ್ರೋಹಿಗಳು ತಾಳೆವಾಡಿಯ ಕೆಳಗಿನ ತಿನಾಯಿ ಕಣಿವೆಯಲ್ಲಿದ್ದ ದರ್ಶಿನಿ ಗುಡ್ಡವನ್ನು ಆಕ್ರಮಿಸಿಕೊಳ್ಳುತ್ತಾರೆ. ಹಳಿಯಾಳ, ಯಲ್ಲಾಪುರ, ಸೂಪಾ, ಸಿರ್ಸಿ, ಹೊನ್ನಾವರ ಮೊದಲಾದ ಕಡೆಗಳಲ್ಲಿದ್ದ ಬ್ರಿಟಿಷ್ ಪಡೆಗಳು ಫೆಬ್ರುವರಿ 24ರಂದು ದರ್ಶಿನಿ ಗುಡ್ಡವನ್ನು ಸುತ್ತುವರಿಯುತ್ತವೆ. 29ನೇ ದೇಶೀಯ ರೆಜಿಮೆಂಟ್ನ ಮೇಜರ್ ನ್ಯಾಟ್ಟ್ನೊಂದಿಗೆ ನಡೆದ ಘರ್ಷಣೆಯಲ್ಲಿ ಒಬ್ಬ ದೇಶೀಯ ಅಧಿಕಾರಿ ಅಸುನೀಗುತ್ತಾನೆ. ಫಡ್ನೀಸ್ ಸಹೋದರರಾದ ಚಿಂತೋಬ, ರಘೋಬ, ಶಾಂತಾರಾಮ್, ಸಿದ್ದಿ ಜನಾಂಗದ ಬಸ್ತ್ಯಾಂವ್, ಬೆನೋವ್ ಮೊದಲಾದ ನಾಯಕರನ್ನು ಹಿಡಿದುಕೊಟ್ಟವರಿಗೆ ನಗದು ಬಹುಮಾನವನ್ನು ಘೋಷಿಸುವ ಮೂಲಕ ಸರಕಾರ ಬಂಡಾಯವನ್ನು ಬಗ್ಗುಬಡಿಯಲು ಪ್ರಯತ್ನಿಸಿತ್ತಾದರೂ ಅದು ಯಶಸ್ಸು ಕಾಣದಾದಾಗ ಬಹುಮಾನದ ಹಣವನ್ನು 100 ರೂಪಾಯಿಗಳಿಂದ 1000 ರೂಪಾಯಿಗಳಿಗೆ ಏರಿಸುತ್ತದೆ.
ಫಡ್ನೀಸ್ ಸಹೋದರರು ಹಾಗೂ ಬಸ್ತ್ಯಾಂವ್ ಮತ್ತು ಬೆನೋವ್ ಸಿದ್ದಿಗಳು ಕಾರವಾರ, ಸೂಪಾ ಮತ್ತು ಬೀಡಿ (ಬಾಡ?)ಯ ದಟ್ಟ ಅರಣ್ಯವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡರೆ, ಕಾರವಾರ ಮತ್ತು ಗೋವೆಯ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ನಾನಾ ತಲಗಾಂವ್ಕರ್ ಆನಂತರದಲ್ಲಿ ಇತರ ನಾಲ್ವರೊಂದಿಗೆ ಪೋರ್ಚುಗೀಸರಿಗೆ ಶರಣಾಗುತ್ತಾನೆ. ಈ ಶರಣಾಳುಗಳನ್ನು ಬ್ರಿಟಿಷರಿಗೆ ಒಪ್ಪಿಸಲು ನಿರಾಕರಿಸುವ ಪೋರ್ಚುಗೀಸ್ ಸರಕಾರ ಎಲ್ಲರನ್ನೂ ತೈಮೂರಿಗೆ ಗಡೀಪಾರು ಮಾಡುತ್ತದೆ. ಕಾರವಾರದಿಂದ ಪೂರ್ವ ಮತ್ತು ದಕ್ಷಿಣಕ್ಕೆ ಹಬ್ಬಿದ ಹೋರಾಟ ಮಂಗಳೂರು, ಸದಾಶಿವಗಢ, ಅಂಕೋಲ, ಹೊನ್ನಾವರ, ದಾಂಡೇಲಿ, ಹಳಿಯಾಳ, ಯಲ್ಲಾಪುರ, ಉಳಿವೆ, ಸಿರ್ಸಿ ಮೊದಲಾದ ಸ್ಥಳಗಳಲ್ಲೂ ಕಾಣಿಸಿಕೊಳ್ಳುತ್ತದೆ. ಸೂಪಾ ಬಳಿಯ ಸೋಮಲಿಂದ ದೇವಸ್ಥಾನ ಎಂಬಲ್ಲಿ ನಡೆದ ಭಾರಿ ಹೋರಾಟದಲ್ಲಿ ಒಬ್ಬ ಬಂಡುಕೋರ ಸರದಾರ ತೀರಿಕೊಳ್ಳುತ್ತಾನೆ. ದಾಂಡೇಲಿಯ ಬಳಿಯಲ್ಲಿ ಅಂತೂ ಸಿದ್ದಿಯೆಂಬ ಬಂಡುಕೋರನ ಜೊತೆ ಹೋರಾಟ ನಡೆಯುತ್ತದೆ. ಈ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬರದಿದ್ದರೂ ಸೂಪಾ ತಾಲೂಕಿನ ಪಶ್ಚಿಮ ಭಾಗವೆಲ್ಲ ಸಾವಂತ ಸಹೋದರರ ವಶದಲ್ಲಿತ್ತೆಂದು ವಿಶೇಷ ಕಮಿಷನರ್ ಬ್ಯಾಲರ್ಡ್ ಒಪ್ಪಿಕೊಳ್ಳುತ್ತಾನೆ.
1859ರಲ್ಲಿ ಸಿದ್ದಿ ಬಸ್ತ್ಯಾಂವ್ ಮತ್ತು ಬೆನೋವ್ ಸಹೋದರರು ಕೆಲವು ಗ್ರಾಮದ ಶ್ರೀಮಂತ ರೈತರ ಮನೆ ಲೂಟಿ, ಗೋವೆಗೆ ಹೊರಟ ಯಲ್ಲಾಪುರದ ಮುನ್ಸೀಫನ ಮೇಲೆ ದಾಳಿ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿ ಹಿಂದಿನ ಬಂಡಾಯದ ಕಾಲಕ್ಕೆ ಬ್ರಿಟಿಷರಿಗೆ ನೆರವಾದವರ ಮೇಲೆ ಸೇಡು ತೀರಿಸುವ ಕ್ರಮದಲ್ಲಿ ಮಗ್ನರಾಗಿದ್ದಂತೆ ತೋರುತ್ತದೆ. ಜೂನ್ 1859ರಲ್ಲಿ ಕಾರವಾರ ಪ್ರದೇಶದಲ್ಲಿ ಸೆರೆಸಿಕ್ಕ ಭೀಕು ವಿಂಜೋಲೆಕರ್ ಎಂಬಾತನನ್ನು ಗೂಢಚಾರನಂತೆ ಬಳಸಿಕೊಳ್ಳಲು ಪ್ರಯತ್ನಿಸಿದ ಬ್ರಿಟಿಷರು ನಂತರ ಶಂಕಿಸಿ, ನವೆಂಬರ್ನಲ್ಲಿ ನೇಣಿಗೇರಿಸಿದರು.
1859ರ ಜುಲೈ 5ರಂದು ಹಮೋದ್ ಅರಣ್ಯದಲ್ಲಿ ನಡೆದ ಉಗ್ರಹೋರಾಟದಲ್ಲಿ ಚಿಂತೋಬ ಫಡ್ನೀಸ್ ಹತನಾಗುತ್ತಾನೆ. ಆಗಸ್ಟ್ನಲ್ಲಿ ನಡೆದ ಚಕಮಕಿಯೊಂದರಲ್ಲಿ ಜಗಲ ಬೆಟ್ಟದಲ್ಲಿ ಸಿದ್ದಿ ಬಸ್ತ್ಯಾಂವ್ ಸಾವನ್ನಪ್ಪಿದ. ಡಿಸೆಂಬರ್ 5ರ ರಾತ್ರಿ ಕಾರವಾರದ ಡಿಂಗ್ರೋಲಿ ಅರಣ್ಯದಲ್ಲಿ ಡಿಗ್ಗಿ ಬೆಟ್ಟದ ಮೇಲೆ ಬ್ರಿಟಿಷರು ಹಾಗೂ ರಘೋಬ ಮತ್ತು ಶಾಂತಾರಾಮ್ ಗುಂಪಿನ ನಡುವೆ ನಡೆದ ಚಕಮಕಿಯಲ್ಲಿ ಬಾಬು ಕರಂಬ್ಲೆಕರ್ ಮತ್ತು ಗಣೂಬ ದೇಸಾಯಿ ಅಸುನೀಗುತ್ತಾರೆ. ಗಾಯಗೊಂಡು ಸೆರೆಸಿಕ್ಕಿದ ರಘೋಬನನ್ನು ಫೆಬ್ರುವರಿ 1860ರಲ್ಲೂ, ಅದೇ ವರ್ಷದ ಜೂನ್ನಲ್ಲಿ ಶಾಂತಾರಾಂ ಮತ್ತು ಬೆನೋವ್ರನ್ನು ಸೆರೆಹಿಡಿದು ಜಗಲ ಬೆಟ್ಟದಲ್ಲಿ ನೇಣಿಗೇರಿಸಲಾಯಿತು. ವಿದ್ರೋಹದ ಈ ಸಮಯದಲ್ಲಿ ಹಲವಾರು ಜನರನ್ನು ಗಲ್ಲಿಗೇರಿಸುವುದು, ಗಡೀಪಾರು ಮಾಡುವುದು, ಆಜೀವ ಕಾರಾಗೃಹವಾಸ, ಕಠಿಣ ಸಜೆ ಮೊದಲಾದ ದಮನಕಾರಿ ಕ್ರಮಗಳಿಗೆ ಗುರಿಯಾದವರ ದೊಡ್ಡ ಯಾದಿಯೇ ದೊರಕುತ್ತದೆ.
ಅಲ್ಲಿಯವರೆಗೂ ಮದ್ರಾಸ್ ರಾಜ್ಯಕ್ಕೆ ಸೇರಿ ಅಖಂಡ ಜಿಲ್ಲೆಯಾಗಿದ್ದ ಕೆನರಾವನ್ನು 1862ರಲ್ಲಿ ವಿಭಜಿಸಿ ಉತ್ತರ ಕನ್ನಡ ಜಿಲ್ಲೆಯನ್ನು ಸೃಷ್ಟಿಸಿ ಅದನ್ನು ನಿಯಂತ್ರಿಸಲು ಅನುಕೂಲವಾಗುವಂತೆ ಮುಂಬೈ ರಾಜ್ಯಕ್ಕೆ ವರ್ಗಾಯಿಸಿದ್ದು ಬಂಡಾಯದ ಗಮನಾರ್ಹ ಪರಿಣಾಮಗಳಲ್ಲಿ ಒಂದು.
ಹಲಗಲಿ
ಮುಧೋಳ ಸಂಸ್ಥಾನದಲ್ಲಿ ಬೇಡ ಜನಾಂಗದವರು ವಾಸವಾಗಿದ್ದ ಹಲಗಲಿ ಎಂಬ ಕುಗ್ರಾಮ ಬ್ರಿಟಿಷರ ‘1857ರ ನಿಶ್ಶಸ್ತ್ರೀಕರಣ ಕಾಯ್ದೆ’ಯನ್ನು ಪ್ರತಿಭಟಿಸಿ ನಡೆಸಿದ ಹೋರಾಟ ಸುತ್ತಮುತ್ತಲ ಜನಮನದಲ್ಲಿ ಶಾಶ್ವತವಾದ ಮನ್ನಣೆಗೆ ಪಾತ್ರವಾಗಿದೆ. ತಮ್ಮ ಆಯುಧವನ್ನೇ ಸರ್ವಸ್ವವೆಂದು ಭಾವಿಸಿ ಆತ್ಮಗೌರವದಿಂದ ಬದುಕುತ್ತಿದ್ದ ಈ ಜನಾಂಗ ಅವುಗಳನ್ನು ಪರಕೀಯ ಪ್ರಭುತ್ವಕ್ಕೆ ಒಪ್ಪಿಸಿ, ನಂತರ ತಮ್ಮ ಆವಶ್ಯಕತೆಯನ್ನು ವಿವರಿಸಿ, ಸರಕಾರದ ಅಪ್ಪಣೆ ಪಡೆದು ಅವುಗಳನ್ನು ಮರಳಿ ಪಡೆಯಬೇಕಿತ್ತು. ಆದರೆ ಬೇಟೆಯಾಡುವುದೇ ಕುಲಕಸುಬಾಗಿದ್ದ ಬೇಡ ಜನಾಂಗ ಸರಕಾರದ ಮುಂದೆ ಕೈಯೊಡ್ಡುವುದನ್ನು ಅಪಮಾನಕರವೆಂದು ಭಾವಿಸುತ್ತದೆ. 1857ರ ಸೆಪ್ಟೆಂಬರ್ನಲ್ಲಿ ಜಾರಿಯಾದ ಈ ಕಾಯ್ದೆಯ ಅನ್ವಯ ಮುಧೋಳದ ಜನತೆಗೆ ನವೆಂಬರ್ 10ರೊಳಗೆ ಸರಕಾರಕ್ಕೆ ಎಲ್ಲ ಶಸ್ತ್ರಗಳನ್ನು ಒಪ್ಪಿಸಬೇಕೆಂದು ಆದೇಶ ನೀಡಲಾಗಿದೆ. ಇವರ ಜನಾಂಗಕ್ಕೆ ಸೇರಿದ ಸುರಪುರದ ರಾಜನು ಇತರ ಜಹಗೀರದಾರರು, ದೇಸಾಯಿಗಳೊಂದಿಗೆ ಸೇರಿ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಸಿದ್ಧರಾಗುತ್ತಿರುವ ಸುದ್ದಿ ಎಲ್ಲೆಡೆ ಹರಡಿದ್ದುದು ಹಲಗಲಿಯ ಬೇಡರಿಗೆ ಪ್ರೋತ್ಸಾಹ ನೀಡಿತು.
ನವೆಂಬರ್ 11ರಂದು ಹಲಗಲಿಯ ಜನರಿಗೆ ತಮ್ಮ ಶಸ್ತ್ರಗಳನ್ನು ಮುಧೋಳದಲ್ಲಿ ಜಮಾವಣೆ ಮಾಡಲು ಹೇಳಲಾಯಿತು. ಈ ಉದ್ದೇಶದಿಂದ 15ರಂದು ಮುಧೋಳದಿಂದ ಹಲಗಲಿ ತಲಪಿದ ರಾಜ್ಯದ ಗುಮಾಸ್ತನೊಬ್ಬನನ್ನು ಜನರು ಹಿಂದಕ್ಕಟ್ಟುತ್ತಾರೆ. ಅಂದು ತಮ್ಮ ಮುಂದಿನ ಹಾದಿಯನ್ನು ಕಂಡುಕೊಳ್ಳಲು ಗ್ರಾಮಸ್ಥರು ಹಳ್ಳಿಯ ಮಾರುತಿಮಂದಿರದಲ್ಲಿ ಸಭೆ ಸೇರಿದರು. ನವೆಂಬರ್ 21ರಂದು ನೇರಪ್ಪನಾಯಕ ಹಲಗಲಿಯ ಜನರು ಶಸ್ತ್ರಗಳನ್ನು ಸರಕಾರಕ್ಕೆ ಒಪ್ಪಿಸುವುದಿಲ್ಲವೆಂದು ಖಡಾಖಂಡಿತವಾಗಿ ತಿಳಿಸುತ್ತಾನೆ. ನವೆಂಬರ್ 22ರಂದು ಕೆಲವು ಸರಕಾರಿ ಅಧಿಕಾರಿಗಳು ಹಲಗಲಿಯನ್ನು ತಲಪಿದಾಗ ಹಳ್ಳಿಯ ನಾಯಕರಾದ ಗುಡ್ಗ್ಯ ಜಮೆದಾರ ಮತ್ತು ಸಾನದೆತ್ ಬಾಳ ಮತ್ತಿತರರು ಅವರ ಮೇಲೆ ಕಲ್ಲು ತೂರಿ ಅವರನ್ನು ಹಿಂತಿರುಗುವಂತೆ ಮಾಡಿದರು. ಸುತ್ತಮುತ್ತಲ ಹಳ್ಳಿಗಳಾದ ಮಂತೂರು, ಬೋಧನಿ ಮತ್ತು ಅಳಗುಂದಿಯ ಜನರೂ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಇವರಲ್ಲಿ ಕೆಲವರು ಬೆಟ್ಟದ ಮೇಲಿದ್ದ ಚಿಕ್ಕ ಕೋಟೆ ಲಾಲಗಡವನ್ನು ಸೇರಿದರೆ ಮಿಕ್ಕವರು ಹಳ್ಳಿಯನ್ನು ಸುತ್ತುವರಿದು ನಿಲ್ಲುತ್ತಾರೆ.
ನವೆಂಬರ್ 27ರಂದು ಬಿಜಾಪುರ ಅಶ್ವಪಡೆಯೊಂದಿಗೆ ಬ್ರಿಟಿಷರು ಹಲಗಲಿಯ ‘ಪಾದಗತ್ತಿ ದ್ವಾರ’ದ ಬಳಿ ತಲಪಿದಾಗ ಮೊಂಡಗೈ ಭೀಮಣ್ಣನೆಂಬ ಕಾವಲುಗಾರ ಕಲಾದಗಿಯಿಂದ ಬರುತ್ತಿದ್ದ ಶತ್ರುಸೇನೆಯನ್ನೆದುರಿಸಿ ಏಳು ಮಂದಿಯನ್ನು ಸಂಹರಿಸಿದ ಬಳಿಕ ಸೆರೆಸಿಕ್ಕು ದಿಟ್ಟತನದಿಂದ ಡಿಸೆಂಬರ್ 14ರಂದು ನೇಣುಗಂಬವನ್ನೇರಿದ. ಮತ್ತೊಂದು ಕಾವಲುದ್ವಾರ ‘ರಕ್ಕಸಕಾವಲಿ’ನಲ್ಲಿಯೂ ಉಗ್ರಹೋರಾಟ ನಡೆಯುತ್ತದೆ. 29ರ ರಾತ್ರಿ ಶತ್ರುಗಳು ಹಠಾತ್ ದಾಳಿ ನಡೆಸಿ ಕತ್ತಲಿನಲ್ಲಿ ಗುಂಡುಗಳನ್ನು ಹಾರಿಸತೊಡಗಿದಾಗ ಜನರು ಬೀದಿಕಾಳಗಕ್ಕಿಳಿಯುತ್ತಾರೆ. ಆದರೆ ಸುರಪುರದಿಂದ ಬೆಂಬಲವನ್ನು ನಿರೀಕ್ಷಿಸಿದ್ದ ಹಲಗಲಿಯ ಜನರಿಗೆ ನಿರಾಸೆ ಕಾದಿತ್ತು. ಲೆಫ್ಟಿನೆಂಟ್ ಕೇರ್ ಹಳ್ಳಿಯ ಗುಡಿಸಲುಗಳಿಗೆ ಬೆಂಕಿ ಹಚ್ಚಿದಾಗ ನೂರಕ್ಕೂ ಹೆಚ್ಚು ಮಂದಿ ಸಜೀವ ಬೆಂದು ಕರುಕಲಾದರು. ಬಾಬಾಜಿ ನಿಂಬಾಳ್ಕರ್ ಎಂಬ ನಾಯಕನೂ ಸೇರಿದಂತೆ ಪೂಜಾರಿ ಹನುಮ, ಜಗದಪ್ಪ ಜಡಗಣ್ಣಾವರ್, ದ್ಯಾಮವ್ವ, ದಾದಣ್ಣ, ರಾಮ ಮೊದಲಾದ 60ಕ್ಕೂ ಹೆಚ್ಚು ವೀರರು ರಣಭೂಮಿಯಲ್ಲಿ ಹತರಾದರು. ಲಾಲಗಢ ಮಣ್ಣುಪಾಲಾಯಿತು.
ಸೆರೆಸಿಕ್ಕಿದ 290 ಮಂದಿಯನ್ನು ಮುಧೋಳಕ್ಕೆ ಸಾಗಿಸಿದ ಬ್ರಿಟಿಷರು ಸೈನಿಕ ವಿಚಾರಣೆ ನಡೆಸಿ, 19 ಮಂದಿಗೆ ಮರಣದಂಡನೆ ನೀಡುತ್ತಾರೆ. ಅವರಲ್ಲಿ 13 ಮಂದಿಯನ್ನು ಡಿಸೆಂಬರ್ 11ರ ಶುಕ್ರವಾರದಂದು ಮುಧೋಳದಲ್ಲಿ ಸಂತೆ ನಡೆಯುತ್ತಿರುವಾಗ ವೆಂಕಟೇಶನ ಕೆರೆಯ ದಂಡೆಯ ಮೇಲೆ ನೇಣಿಗೇರಿಸಿದರೆ, ಮಿಕ್ಕ ಆರು ಮಂದಿಯನ್ನು ಹಲಗಲಿಗೆ ಕರೆತಂದು 14ರಂದು ಫಿರಂಗಿಬಾಯಿಗೆ ಕಟ್ಟಿ ಉಡಾಯಿಸಲಾಯಿತು.
ಇತಿಹಾಸದ ದಾಖಲೆಗಳು ಹೇಳುವ ಹಲಗಲಿಯ ಕತೆ ಇದಾದರೆ ಜನಪದ ಸಾಹಿತ್ಯದಲ್ಲಿ ಹಲಗಲಿಯ ಆಯಾಮವೇ ಬೇರೆ ರೀತಿಯದಾಗಿದೆ. ತಮ್ಮ ಜೀವನಾಧಾರಕ್ಕೆ ಅಗತ್ಯವಾದ ಆಯುಧಗಳನ್ನು ಕಿತ್ತುಕೊಳ್ಳಲು ಮುಂದಾದ ಕಂಪೆನಿ ಸರಕಾರದ ಕ್ರಮವನ್ನು ವರ್ಣಿಸುತ್ತ
ವಿಲಾತಿಯಿಂದ ಹುಕುಮ ಕಳವಿದರ ಕುಂಪಣಿ ಸರಕಾರ
ಎಲ್ಲ ಜನರನಾ ತರಸಿ ಜೋರಿ ಮಾಡಿ ತರಬೇಕ ಹತಾರ
ಕತ್ತಿ ಕಟಾರಿ ಕೈಚೂರಿ ಬಾಕು ಗುರ್ದಿ ಸುರಾಯಿ ಚಕ್ರಾ
ಬಾಲಿಯ ಬರ್ಚಿ ಬಿಚ್ಚುಗತ್ತಿ ನೋಡ ಬಾಣಬಿಲ್ಲಿನವರಾ
ಪಟಾತ ಪಿಸ್ತೂಲ ಕರುಲಿ ತೇಗಾ ಚಾಪಗೊಡ್ಲಿ ಶಸ್ತ್ರಾ
ತೋಪು ತುಬಾಕಿ ಹೊಡವು ಮದ್ದ ಗುಂಡ ಬಿಡಬ್ಯಾಡಾರಿ ಚೂರಾ
ಮುಚ್ಚಿ ಇಟ್ಟವರಿಗೆ ಮೂರು ವರ್ಷದ ಬೇಡಿ ಹಾಕಿರಿ ಪೂರಾ
ಕೊಡದ ದಿಟಾಯಿ ಮಾಡಿದವರನಾ ಕಡದಹಾಕಿರಿ ತಾರಾ ||
ಶಸ್ತ್ರಾಸ್ತ್ರಗಳನ್ನು ಸರಕಾರಕ್ಕೆ ಒಪ್ಪಿಸಿದರೆ,
ಮಗ್ಗಲದಾಗಿನ ಹೆಣತಿ ಕೊಟ್ಟ್ಆಂಗ ಆತಿ ಹೇಡಿ ಆದೇವ್ಅಲ್ಲಾ
ಸತ್ತ ಹೆಣಕ ಶೃಂಗಾರ ಮಾಡಿದ ಪರಿ ಆದಿತ್ಅಲ್ಲಾ
ಎಂದು ಗೋಳಿಡುವ ಗ್ರಾಮಸ್ಥರ ದೃಷ್ಟಿಯಲ್ಲಿ ತಾವು ಷಂಡರಾದಂತೆನಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಇಂತಹ ದಮನಕಾರಿ ಪ್ರವೃತ್ತಿಯನ್ನು ಪ್ರತಿಭಟಿಸಿ ಹೋರಾಡಿದ ಅಮಾಯಕ ಗ್ರಾಮಸ್ಥರ ಶೌರ್ಯವಿರಲಿ, ರಾಮಿ ಎಂಬ ಒಬ್ಬ ಹೆಣ್ಣುಮಗಳೂ ಹೇಗೆ ಶತ್ರುಗಳನ್ನು ಎದುರಿಸಿದಳೆಂಬುದನ್ನು
ರಾಮಿ ಗುಂಡಿಲಿ ಜೋರಮಾಡಿ ಹೊಡೆದಳೊ ಮೂರ ಮಂದಿ ಶಿರಕ
ಆರ ಕುದರಿಯ ಕಡದ ಸಿಡದಳೊ ಬಾಲನ ಸೂರಾಯಕ
ಎಂದು ಬಿಂಬಿಸುತ್ತದೆ.
ಮುಗ್ಧ ಜನತೆಯ ವಿರುದ್ಧ ದಬ್ಬಾಳಿಕೆಯಿಂದ ವಿಜೃಂಭಿಸಿದ ಬ್ರಿಟಿಷರ ಕ್ರೌರ್ಯವನ್ನು, ಹಳ್ಳಿಯನ್ನು ಸೂರೆಗೊಂಡ ಪರಿಯನ್ನು
ಕತ್ತಿ ಕುದರಿ ಮುತ್ತು ಮಾಣಿಕಾ ಯಾವುದು ಬಿಡಲಿಲ್ಲಾ
ಬೆಳ್ಳಿ ಭಂಗಾರ ಹರಳಿನ್-ಉಂಗರಾ ಹೊನ್ನ್-ಉಂಗರ ಗೋಲಾ
ಸರಗಿ ಸರ್ದಳಿ ಬುಗುಡಿ ಬಾವಲಿ ಬಿಡಲಿಲ್ಲಾ
ಕಡಗ ಕಂಕಣ ನಡುವಿನ-ಡಾಬಾ ನಡುಗಟ್ಟು ರುಮಾಲಾ
ಕುಬಶಾ ಸೀರಿ ಹಪ್ಪಳ ಶಾಂಡಿಗಿ ಕುರ್ಚಿಗಿ ಕುಡುಗೋಲಾ
ಕೊಡಲಿ ಕೋಟಿ ಕುಡ-ಕಬ್ಬಿಣಾ ಮಸರು ಬೆಣ್ಣೆ ಹಾಲಾ
ಉಪ್ಪ ಯೆಣ್ಣೆ ಅರಿಶಿಣ ಜೀರಿಗಿ ಅಕ್ಕಿ ಸಕ್ಕರಿ ಬೆಲ್ಲಾ
ಗಂಗಾಳ ಚರಿಗಿ ಮಂಗಳಸೂತ್ರಾ ತಗೊಂಡ ಹೋದ ಬೀಸುಕಲ್ಲ ||
ಎಂದು ವಿವರಿಸುವ ಲಾವಣಿಗಳು ಇಂದಿಗೂ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಪ್ರತಿಧ್ವನಿಸುತ್ತ ಇತಿಹಾಸ, ಸಮಾಜ, ಜನಮನದಲ್ಲಿ ಹಲಗಲಿಯನ್ನು ಶಾಶ್ವತಗೊಳಿಸುತ್ತಿವೆ.
(ಈ ಲಾವಣಿಯ ಪೂರ್ಣಪಾಠಕ್ಕೆ ಕ್ಯಾತನಹಳ್ಳಿ ರಾಮಣ್ಣ ಅವರ ‘ಫ್ಲೀಟರು ಸಂಪಾದಿಸಿದ ಐದು ಐತಿಹಾಸಿಕ ಲಾವಣಿಗಳು’ ಪುಸ್ತಕವನ್ನು ಗಮನಿಸಬಹುದು.) (ಮುಂದುವರಿಯುವುದು.)