ಪಶ್ಚಿಮಘಟ್ಟದ ಸಂರಕ್ಷಣೆಯ ಅಗತ್ಯವನ್ನು ಮನಗಂಡ ಸುಪ್ರೀಂಕೋರ್ಟಿನ ಹಸಿರುಪೀಠ ಮತ್ತು ಕೇಂದ್ರಸರ್ಕಾರಗಳು ಈ ಸಂಬಂಧವಾಗಿ ಚಾಲನೆಗೊಂಡ ಉಪಕ್ರಮಗಳನ್ನು ಗುರಿಮುಟ್ಟಿಸಬೇಕೆಂದು ನಿರಂತರವಾಗಿ ಶ್ರಮಿಸುತ್ತಿವೆ. ಆದರೆ ಸಂಬಂಧಪಟ್ಟ ರಾಜ್ಯಗಳಲ್ಲಿ ಅಂತಹ ಉತ್ಸಾಹ ಕಾಣಿಸುತ್ತಿಲ್ಲ. ಕಸ್ತೂರಿರಂಗನ್ ಸಮಿತಿಯು ಮಾಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು ಸದ್ಯದ ಅಗತ್ಯವಾಗಿದೆ. ಕೇರಳದಂತಹ ಕೆಲವು ರಾಜ್ಯಗಳು ಈ ನಿಟ್ಟಿನಲ್ಲಿ ಸ್ವಲ್ಪವಾದರೂ ಕಾರ್ಯಪ್ರವೃತ್ತವಾಗಿ ತಮ್ಮಿಂದ ಎಷ್ಟು ಸಾಧ್ಯ ಎಂಬುದನ್ನಾದರೂ ಹೇಳಿವೆ. ಕರ್ನಾಟಕ ರಾಜ್ಯದ ವಿವಿಧ ಸರ್ಕಾರಗಳು ಪಕ್ಷಭೇದವಿಲ್ಲದೆ “ನೀವು ಏನು ಬೇಕಾದರೂ ಮಾಡಿಕೊಳ್ಳಿ. ನಮ್ಮಲ್ಲಿ ಜಾರಿ ಅಸಾಧ್ಯ” ಎಂದೇ ಹೇಳುತ್ತ ಬಂದಿವೆ; 2013ರಿಂದಲೇ ಈ ವಿದ್ಯಮಾನ ನಡೆಯುತ್ತಿದೆ.
“ಆರು ರಾಜ್ಯಗಳಲ್ಲಿ ಉತ್ತರ-ದಕ್ಷಿಣಕ್ಕೆ ಸುಮಾರು 1,500 ಕಿ.ಮೀ. ಉದ್ದಕ್ಕೆ ಹಬ್ಬಿರುವ ಪಶ್ಚಿಮಘಟ್ಟದ ಪ್ರದೇಶ ಸುಮಾರು 1,24,280 ಚ.ಕಿ.ಮೀ. ವಿಸ್ತೀರ್ಣವಿದೆ. ನಮ್ಮ ವಿಶ್ಲೇಷಣೆಯ ಪ್ರಕಾರ ಇದರ ಶೇ. 60ರಷ್ಟು ಭಾಗ ಜನವಸತಿ, ಕೃಷಿ, ತೋಟ ಮುಂತಾದವಿರುವ ಸಾಂಸ್ಕøತಿಕ ಭೂವಲಯ (landscape)ವಾಗಿದೆ. ಶೇ. 41 ಭಾಗ ಮಾತ್ರ ನೈಸರ್ಗಿಕ ಭೂವಲಯವಾಗಿದೆ; ಶೇ.37 ಭಾಗ, ಅಂದರೆ ಸುಮಾರು 60 ಸಾವಿರ ಚ.ಕಿ.ಮೀ. ಪ್ರದೇಶ ಜೈವಿಕವಾಗಿ ಸಮೃದ್ಧವಾಗಿದೆ. ಜೈವಿಕ ಶ್ರೀಮಂತಿಕೆಯ ಜೊತೆಗೆ ಆ ಕಾಡು ಅಖಂಡವಾಗಿದೆ; ಜನಸಂಖ್ಯೆ ವಿರಳವಾಗಿದೆ” ಎಂದು ವಿಜ್ಞಾನಿ ಡಾ| ಕೆ. ಕಸ್ತೂರಿರಂಗನ್ ಅವರ ಅಧ್ಯಕ್ಷತೆಯ ಪಶ್ಚಿಮಘಟ್ಟ ಬಗೆಗಿನ ಉನ್ನತಮಟ್ಟದ ಕಾರ್ಯತಂಡವು (High-Level Working Group-HLWG) ಹೇಳಿದೆ.
ಪರಿಸರತಜ್ಞ ಪ್ರೊ| ಮಾಧವ ಗಾಡ್ಗೀಳ್ ನೇತೃತ್ವದ ಹಿಂದಿನ ಪಶ್ಚಿಮಘಟ್ಟ ಪರಿಸರತಜ್ಞರ ತಂಡ (ಡಬ್ಲ್ಯುಜಿಇಇಪಿ)ದ ವರದಿಗೆ 1,750ಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿದ್ದು, ಅದರಲ್ಲಿ ಶೇ. 81 ಪ್ರತಿಕೂಲವಾಗಿದ್ದವು ಎಂದ ಕಾರ್ಯತಂಡ, ಅವುಗಳನ್ನು ಆರು ವಿಭಾಗಗಳಾಗಿ ವಿಂಗಡಿಸಿತು. ಅವುಗಳೆಂದರೆ, ವಲಯ ರಚಿಸಿದ ಕ್ರಮಕ್ಕೆ ಆಕ್ಷೇಪ, ಮಹಾರಾಷ್ಟ್ರದ ಸಿಂಧೂದುರ್ಗದ ಗಣಿಗಾರಿಕೆ, ಗೋವಾದಲ್ಲಿನ ಗಣಿಗಾರಿಕೆ, ಡಬ್ಲ್ಯುಜಿಇಎ ರಚನೆ ಹಾಗೂ ಸಾಮಾನ್ಯ ಪ್ರತಿಕ್ರಿಯೆ.
ವಿರೋಧವೇ ಅಧಿಕ
ಕಸ್ತೂರಿರಂಗನ್ ಕಾರ್ಯತಂಡ (ಸಮಿತಿ) ರಚನೆಯ ಬಳಿಕ 145 ಪ್ರತಿಕ್ರಿಯೆಗಳು ಬಂದವು. ಅದರಲ್ಲಿ ಶೇ. 30.34ರಷ್ಟು ಹಿಂದಿನ ಗಾಡ್ಗೀಳ್ ಪ್ಯಾನೆಲನ್ನು ಬೆಂಬಲಿಸಿದರೆ ಉಳಿದವು ಪ್ಯಾನೆಲ್ನ ಶಿಫಾರಸು ಅಪರಿಪೂರ್ಣ ಹಾಗೂ ಜಾರಿಮಾಡಲಾಗದಂಥವು ಎಂದು ಹೇಳಿದವು. ಅದಲ್ಲದೆ ಗಾಡ್ಗೀಳ್ ತಂಡವು ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮವಲಯ (ಇಎಸ್ಝಡ್)ವನ್ನು ಗುರುತಿಸುವ ಬೃಹತ್ ಕಾರ್ಯವನ್ನು ಮಾಡಿದ್ದು, ಅದಕ್ಕೆ ಭಾರೀ ಸಂಖ್ಯೆಯ ಆಕ್ಷೇಪ-ಪ್ರತಿಕ್ರಿಯೆಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ವರದಿಗೆ ಭಾಗೀದಾರರ (Stake-holders) ಸಲಹೆ/ಪ್ರತಿಕ್ರಿಯೆಗಳನ್ನು ತಿಳಿಯಬಯಸಿತು. ಆ ಬಗ್ಗೆ ಸರ್ಕಾರಕ್ಕೆ ಸಲಹೆ/ಶಿಫಾರಸು ನೀಡುವ ಸಲುವಾಗಿ ಕಸ್ತೂರಿರಂಗನ್ ಸಮಿತಿಯನ್ನು ರಚಿಸಲಾಯಿತು. ಸಮಿತಿಗೆ ವಹಿಸಲಾದ ಕೆಲಸಗಳು ಇವು:
1) ಡಬ್ಲ್ಯುಜಿಇಇಪಿ (ಗಾಡ್ಗೀಳ್ ಸಮಿತಿ) ವರದಿಯನ್ನು ಪೂರ್ಣರೂಪದಲ್ಲಿ ಮತ್ತು ಬಹುಶಿಸ್ತೀಯವಾಗಿ ಪರಿಶೀಲಿಸುವುದು. ಅದಕ್ಕಾಗಿ ಸಂಬಂಧಪಟ್ಟ ರಾಜ್ಯಸರ್ಕಾರಗಳು, ಕೇಂದ್ರಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಮತ್ತು ಭಾಗೀದಾರರ ಅಭಿಪ್ರಾಯಗಳನ್ನು ಪಡೆದುಕೊಳ್ಳುವುದು. ಆ ನಿಟ್ಟಿನಲ್ಲಿ ಎ) ಆ ಪ್ರದೇಶದ ಅಮೂಲ್ಯ ಜೀವವೈವಿಧ್ಯ, ವನ್ಯಮೃಗ, ಸಸ್ಯ-ಪ್ರಾಣಿಗಳ ಸಂರಕ್ಷಣೆಯ ಜೊತೆಗೆ ಅಲ್ಲಿಯ ಸಾಮಾಜಿಕ-ಆರ್ಥಿಕ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವುದು; ಬಿ) ಸ್ಥಳೀಯ ಜನ, ಬುಡಕಟ್ಟು ಜನ ಮತ್ತು ಅರಣ್ಯವಾಸಿಗಳ ಹಕ್ಕು, ಆವಶ್ಯಕತೆ ಮತ್ತು ಅಭಿವೃದ್ಧಿಯ ಆಶೋತ್ತರಗಳನ್ನು ಸಾಧಿಸುವುದರ ಜೊತೆಗೆ ಪರಿಸರ ಸಂರಕ್ಷಣೆ; ಸಿ) ಪಶ್ಚಿಮಘಟ್ಟದ ಪರಿಸರದ ಮೇಲೆ ಹವಾಮಾನ ಬದಲಾವಣೆಯ ಪ್ರಭಾವವನ್ನು ತಿಳಿಸುವುದು; ಡಿ) ಪಶ್ಚಿಮಘಟ್ಟದ ಕೆಲವು ಪ್ರದೇಶಗಳನ್ನು ಜಾಗತಿಕ ಪಾರಂಪರಿಕ ತಾಣಗಳೆಂದು ಗುರುತಿಸಿದರೆ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯ ಮೇಲಾಗಬಹುದಾದ ಪರಿಣಾಮಗಳನ್ನು ತಿಳಿಸುವುದು, ಇ) ಪಶ್ಚಿಮಘಟ್ಟದ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿ ಕೇಂದ್ರ-ರಾಜ್ಯ ಸಂಬಂಧದಲ್ಲಿ ಬರಬಹುದಾದ ಸಾಂವಿಧಾನಿಕ ಸಮಸ್ಯೆಗಳನ್ನು ತಿಳಿಸುವುದು; 2) ಪಶ್ಚಿಮಘಟ್ಟ ಪ್ರದೇಶದ ಆರು ರಾಜ್ಯಗಳ ಪ್ರತಿನಿಧಿಗಳು ಹಾಗೂ ಇತರ ಭಾಗೀದಾರರೊಂದಿಗೆ, ಮುಖ್ಯವಾಗಿ ಪರಿಸರವಾದಿಗಳು, ಪರಿಸರ ಸಂರಕ್ಷಕರೊಂದಿಗೆ ವಿಚಾರವಿನಿಮಯ ನಡೆಸುವುದು. 3) ಗಾಡ್ಗೀಳ್ ಸಮಿತಿ ವರದಿಯ ಮೇಲೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ತಿಳಿಸುವುದು; 4) ಕೇಂದ್ರಸರ್ಕಾರ ತಿಳಿಸುವ ಇತರ ಯಾವುದೇ ವಿಷಯದ ನಿರ್ವಹಣೆ ಮತ್ತು 5) ಗಾಡ್ಗೀಳ್ ಸಮಿತಿ ವರದಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಕಾರ್ಯಯೋಜನೆಯನ್ನು ತಿಳಿಸುವುದು.
ಕಸ್ತೂರಿರಂಗನ್ ಸಮಿತಿಗೆ ಸದಸ್ಯರನ್ನು ನೇಮಿಸಿದ್ದು ಪ್ರೊ| ಸಿ.ಆರ್. ಬಾಬು, ಪ್ರೊ| ಜೆ.ಎಂ. ಮೌಸ್ಕರ್, ಪ್ರೊ| ಕಾಂಚನ್ ಚೋಪ್ರಾ, ಡಾ| ಜಗದೀಶ್ ಕಿಶ್ವಾನ್, ದರ್ಶನ್ ಶಂಕರ್, ಸುನೀತಾ ನಾರಾಯಣ್ ಹಾಗೂ ಡಾ| ಪಿ.ಎಸ್. ರಾಯ್ ಸದಸ್ಯರಾಗಿದ್ದರೆ, ಅಜಯ್ ತ್ಯಾಗಿ ಸದಸ್ಯ ಸಂಚಾಲಕರಾಗಿದ್ದರು; ಮತ್ತು ಡಾ| ಇಂದ್ರಾಣಿ ಚಂದ್ರಶೇಖರನ್ ವಿಶೇಷ ಆಹ್ವಾನಿತರಾಗಿದ್ದರು.
ಸಮಿತಿಯು ನಿಗದಿತ ರೀತಿಯಲ್ಲಿ ಸಂಬಂಧಪಟ್ಟ ಭಾಗೀದಾರರು, ಪರಿಸರತಜ್ಞರು, ಆರು ರಾಜ್ಯಸರ್ಕಾರಗಳ ಪ್ರತಿನಿಧಿಗಳು, ಕೇಂದ್ರಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳೊಂದಿಗೆ ವಿಚಾರವಿನಿಮಯ ನಡೆಸಿತು, ಸಭೆಗಳನ್ನು ಏರ್ಪಡಿಸಿತು.
ಪಶ್ಚಿಮಘಟ್ಟದ ಮೇಲೆ ಹವಾಮಾನ ಬದಲಾವಣೆಯು ಪರಿಣಾಮ ಬೀರುತ್ತದೆ. ಅದರಿಂದ ಇಲ್ಲಿನ ಜೀವವೈವಿಧ್ಯದ ಮೇಲೆ ಪರಿಣಾಮವಾಗುತ್ತದೆ. ಅದರಲ್ಲೂ ಪಶ್ಚಿಮಘಟ್ಟ ಉತ್ತರಭಾಗದ ಅರಣ್ಯಗಳ ಮೇಲೆ, ಅಲ್ಲಿನ ಜೀವವೈವಿಧ್ಯದ ಮೇಲೆ ಹೆಚ್ಚಿನ ಪರಿಣಾಮ ಆಗಬಹುದು. ಪಶ್ಚಿಮಘಟ್ಟವು ಒಂದು ಜೀವವೈವಿಧ್ಯದ ಸಮೃದ್ಧ ತಾಣ (ಹಾಟ್ಸ್ಪಾಟ್) ಆದರೂ ಕೂಡ ಉತ್ತರಭಾಗದ ಬಹಳಷ್ಟು ಕಾಡುಗಳು ಛಿದ್ರ (fragmented)ವಾಗಿವೆ. ಹವಾಮಾನ ಬದಲಾವಣೆಯಿಂದ ಅವು ಮತ್ತಷ್ಟು ಛಿದ್ರವಾಗುತ್ತವೆ; ಅವುಗಳಿಗೆ ಕಾಳ್ಗಿಚ್ಚು ಮತ್ತು ಕೀಟ-ರೋಗಬಾಧೆ ಜಾಸ್ತಿ ಇರುತ್ತದೆ. ಪಶ್ಚಿಮಘಟ್ಟದಲ್ಲಿ ತೆಂಗು ಬೆಳೆಯುವ ಪ್ರಮುಖ ಭಾಗಗಳನ್ನು ಗಮನಿಸಿದಾಗ ಅಲ್ಲಿನ ಉಷ್ಣತೆ ಹೆಚ್ಚಾದದ್ದು ಗಮನಕ್ಕೆ ಬಂದಿದೆ; ಕರ್ನಾಟಕ ಮತ್ತು ಕೇರಳದ ಪಶ್ಚಿಮಘಟ್ಟದ ಪ್ರದೇಶದಲ್ಲಿ ಒಣ ಹವಾಮಾನ ಹೆಚ್ಚಾಗಿದೆ; ಇದು ಸಾಮಾನ್ಯ ಕೃಷಿಯ ಮೇಲೆ ಕೂಡ ಪರಿಣಾಮ ಬೀರಿದೆ ಎಂದು ಕಾರ್ಯತಂಡದ ವರದಿ ಉಲ್ಲೇಖಿಸಿದೆ.
ಸಾಮಾಜಿಕ-ಆರ್ಥಿಕ ಪ್ರಗತಿ
“ಕೇಂದ್ರ ಯೋಜನಾ ಆಯೋಗದ ಪಶ್ಚಿಮಘಟ್ಟ ಅಭಿವೃದ್ಧಿ ಕಾರ್ಯಕ್ರಮ (ಡಬ್ಲ್ಯುಜಿಡಿಪಿ)ಕ್ಕಾಗಿ ಹಿಂದೆ ಆಯೋಗವು ಕೈಗೊಂಡ ಬೆಟ್ಟಪ್ರದೇಶ ಅಭಿವೃದ್ಧಿ ಕಾರ್ಯಕ್ರಮವು (ಎಚ್ಎಡಿಪಿ) ಪರಿಸರ ಸಮತೋಲನದ ಜೊತೆಗೆ ಆ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೂಡ ಗಮನಹರಿಸಿತ್ತು. ಅದೇ ರೀತಿ ನಾವು ಕೂಡ ಪಶ್ಚಿಮಘಟ್ಟ ಅಭಿವೃದ್ಧಿ ಕಾರ್ಯಕ್ರಮವನ್ನು ಅನುಸರಿಸಿದೆವು. ಆ ಭಾಗವು ಸಮುದ್ರಮಟ್ಟದಿಂದ ಎಷ್ಟು ಎತ್ತರದಲ್ಲಿದೆ ಎಂಬುದನ್ನು ಗಮನಿಸಿ, ಒಂದು ತಾಲೂಕಿನಲ್ಲಿ 600 ಮೀ. ಗಿಂತ ಎತ್ತರದ ಪ್ರದೇಶವು ಶೇಕಡಾ ಇಪ್ಪತ್ತಕ್ಕಿಂತ ಜಾಸ್ತಿಯಿದ್ದಾಗ ಅದನ್ನು ಪಶ್ಚಿಮಘಟ್ಟ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸೇರಿಸಿದೆವು. ತಾಲೂಕನ್ನು ಘಟಕವಾಗಿ ಸ್ವೀಕರಿಸಿದ್ದು 188 ತಾಲೂಕುಗಳು ಇದರಲ್ಲಿ ಸೇರಿವೆ” ಎಂದು ವರದಿ ತಿಳಿಸಿದೆ.
1986ರಲ್ಲಿ ಪರಿಸರ (ಸಂರಕ್ಷಣೆ) ಕಾಯ್ದೆಯನ್ನು ಜಾರಿಗೊಳಿಸಿದ್ದು, ಭಾರತಸರ್ಕಾರ 1990ರಲ್ಲಿ ಪರಿಸರ ಸೂಕ್ಷ್ಮಪ್ರದೇಶಗಳ ಸಮೀಕ್ಷೆಗೆ ಕ್ರಮಕೈಗೊಂಡಿದ್ದು, 1996ರಲ್ಲಿ ಅದರ ವರದಿ ಅರಣ್ಯ ಮತ್ತು ಪರಿಸರ ಇಲಾಖೆಯ ಕೈ ಸೇರಿತು. ಪರಿಸರ (ಸಂರಕ್ಷಣೆ) ಕಾಯ್ದೆ-1986ರ ಪ್ರಕಾರ 1999ರಲ್ಲಿ ಡಾ| ಪ್ರಣಬ್ ಸೇನ್ ಸಮಿತಿಯನ್ನು ರಚಿಸಿದ್ದು, ಆ ಸಮಿತಿಯು 12 ಪ್ರಾಥಮಿಕ ಅಂಶ ಮತ್ತು ಆರು ಪೂರಕ ಅಂಶಗಳನ್ನು ಪರಿಗಣಿಸಿತು. 2012ರಲ್ಲಿ ತನ್ನ ವರದಿಯನ್ನು ಸಲ್ಲಿಸಿದ ಗಾಡ್ಗೀಳ್ ಸಮಿತಿಯು ಇಡೀ ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮಪ್ರದೇಶವೆಂದು ಹೇಳಿ ಅದರಲ್ಲಿ ಮೂರು ಪರಿಸರ ಸೂಕ್ಷ್ಮವಲಯ (ಇಎಸ್ಝಡ್)ಗಳನ್ನು ಗುರುತಿಸಿತು. ಜೊತೆಗೆ ಸಂರಕ್ಷಣ ಪ್ರದೇಶ (ಪಿಎ), ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ, ಮೀಸಲು ಅರಣ್ಯಗಳ ಇನ್ನೊಂದು ವಿಭಾಗವೂ ಇತ್ತು.
ಉನ್ನತಮಟ್ಟದ ನಕಾಶೆ
ಕಸ್ತೂರಿರಂಗನ್ ಸಮಿತಿಯು ಪಶ್ಚಿಮಘಟ್ಟದ ಭೂಬಳಕೆಯ ವಿಭಾಗಗಳನ್ನು ಪ್ರತ್ಯೇಕಿಸುವಲ್ಲಿ ಉನ್ನತಮಟ್ಟದ ನಕಾಶೆಗಳನ್ನು ಸಿದ್ಧಪಡಿಸಿತು. ಆ ಮೂಲಕ ನೈಸರ್ಗಿಕ ಭೂವಲಯಗಳನ್ನು ಸಾಂಸ್ಕøತಿಕ ಭೂವಲಯದಿಂದ ಪ್ರತ್ಯೇಕಿಸುವುದು ಸಾಧ್ಯವಾಯಿತು; “ಸಾಂಸ್ಕøತಿಕ ಭೂವಲಯದಲ್ಲಿ ಜನವಸತಿ ಪ್ರದೇಶ, ವಾಣಿಜ್ಯ ಬೆಳೆ ಬೆಳೆವ ಸ್ಥಳ ಮತ್ತು ಕೃಷಿಭೂಮಿಗಳು ಸೇರುತ್ತವೆ. ಪರಿಸರ ಸೂಕ್ಷ್ಮಪ್ರದೇಶ (ಇಎಸ್ಎ)ದಲ್ಲೀಗ ಮಧ್ಯಮ ಮತ್ತು ಉನ್ನತ ಜೀವವೈವಿಧ್ಯ ಪ್ರದೇಶಗಳು ಸೇರುತ್ತವೆ. ಈ ಪ್ರದೇಶವನ್ನು ರಕ್ಷಿಸಬೇಕು; ಮತ್ತು ಉತ್ತಮಪಡಿಸಬೇಕು. ಯಾವುದೇ ಕಾರಣಕ್ಕೆ ಇನ್ನು ಹಾಳಾಗಲು ಬಿಡಬಾರದು; ಅಲ್ಲಿ ನೈಸರ್ಗಿಕ ವ್ಯವಸ್ಥೆಯನ್ನು ಹಾಗೆಯೆ ಉಳಿಸಿಕೊಳ್ಳುವುದು ಅವಶ್ಯ. ಅಲ್ಲಿನ ವ್ಯವಸ್ಥೆಯಲ್ಲಿ ಏರುಪೇರಾಗಬಾರದು. ಆದಕಾರಣ ಅಲ್ಲಿ ಮಾಲಿನ್ಯಕಾರಕ ಕೈಗಾರಿಕೆಗಳು, ಗಣಿಗಾರಿಕೆ ಅಥವಾ ಉಷ್ಣವಿದ್ಯುತ್ ಸ್ಥಾವರಗಳು ಬರಬಾರದು. ಪ್ರದೇಶಕ್ಕೆ ಅಗತ್ಯವಾದ ಮೂಲಸವಲತ್ತು ಅಭಿವೃದ್ಧಿಯ ಮೇಲೆ ತೀವ್ರ ನಿಗಾ ಇಡಬೇಕು; ಯೋಜನೆಗಳ ಮಂಜೂರಾತಿ ವೇಳೆ ಎಚ್ಚರ ವಹಿಸಬೇಕು.”
ಎರಡು ಸಮಿತಿಗಳ ವ್ಯತ್ಯಾಸ
ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆಗೆ ಸಂಬಂಧಪಟ್ಟು ನೇಮಕಗೊಂಡ ಎರಡು ಸಮಿತಿಗಳ ನಡುವಣ ವ್ಯತ್ಯಾಸ ಇಲ್ಲಿ ಬರುತ್ತದೆ. ಒಳ್ಳೆಯ ಅಭಿವೃದ್ಧಿ ಇರಲಿ, ನಿಷೇಧ ಏನೇ ಇರಲಿ, ಯಾವುದೇ ಯೋಜನೆ ಬೇಡ – ಎಂದು ಗಾಡ್ಗೀಳ್ ಸಮಿತಿ ಹೇಳಿದರೆ, ಕಸ್ತೂರಿರಂಗನ್ ಸಮಿತಿಯು ಪರಿಸರ ವ್ಯವಸ್ಥೆಯ ಮೇಲೆ ಗರಿಷ್ಠ ದುಷ್ಪರಿಣಾಮ ಬೀರುವ ಚಟುವಟಿಕೆಗಳಿಗಷ್ಟೇ ನಿಷೇಧ ಹಾಗೂ ಪೂರ್ತಿ ನಿರ್ಬಂಧವನ್ನು ವಿಧಿಸುತ್ತದೆ. ಇಎಸ್ಎ ಎಂದು ಗುರುತಿಸಲಾದ ಪ್ರದೇಶದಲ್ಲಿ ಯಾವುದಕ್ಕೆ ನಿಷೇಧ ಎಂಬುದನ್ನು ವರದಿ ಹೇಳುತ್ತದೆ.
ಭೂಮಿಯ ಬಳಕೆ, ಕೃಷಿ ಅಥವಾ ಅರಣ್ಯೀಕರಣದಂತಹ ಇತರ ಆರ್ಥಿಕ ಕ್ಷೇತ್ರಗಳು ಇಲ್ಲಿ ಕಾರ್ಯನಿರ್ವಹಿಸಬಹುದು; ಮತ್ತು ಪ್ರೋತ್ಸಾಹಕಗಳ (incentives) ಮೂಲಕ ಬದಲಾವಣೆಯನ್ನು ತರಬಹುದು. ಆದ್ದರಿಂದ ಪ್ರಾದೇಶಿಕ ಯೋಜನೆಗಳನ್ನು ಸಿದ್ಧಪಡಿಸುವಾಗ ರಾಜ್ಯಸರ್ಕಾರಗಳು ಹಸಿರಿನ ಹೆಚ್ಚಳವನ್ನು ಗಮನದಲ್ಲಿರಿಸಿಕೊಳ್ಳಬೇಕೆಂದು ಕಸ್ತೂರಿರಂಗನ್ ವರದಿ ಸೂಚಿಸಿದೆ. ಪ್ರಾದೇಶಿಕ ಯೋಜನೆಯು ಭೂಮಿಯ ಬಳಕೆ, ಕೃಷಿ, ನೀರಿನ ಲಭ್ಯತೆ, ಅರಣ್ಯೀಕರಣದಂತಹ ಇತರ ಕ್ಷೇತ್ರಗಳಿಗೂ ಅವಕಾಶ ಕಲ್ಪಿಸಬೇಕೆಂದು ಸೂಚಿಸಲಾಗಿದೆ.
ಇಎಸ್ಎಗೆ ನಿರ್ಬಂಧ
ಪಶ್ಚಿಮಘಟ್ಟದಲ್ಲಿ ಪರಿಸರ ಸೂಕ್ಷ್ಮಪ್ರದೇಶ (ಇಎಸ್ಎ) ಗಳನ್ನು ಗುರುತಿಸಿದ ಕಸ್ತೂರಿರಂಗನ್ ಸಮಿತಿಯು ಕೆಳಗಿನ ಕೆಲವು ಚಟುವಟಿಕೆಗಳಿಗೆ ಅಲ್ಲಿ ನಿರ್ಬಂಧ ವಿಧಿಸಿದೆ.
ಗಣಿಗಾರಿಕೆ: ಇಎಸ್ಎಯಲ್ಲಿ ಗಣಿಗಾರಿಕೆ, ಕಲ್ಲು ಕಡಿಯುವುದು ಮತ್ತು ಮರಳು ಗಣಿಗಾರಿಕೆಗೆ ಪೂರ್ತಿ ನಿಷೇಧವನ್ನು ಹೇರಬೇಕು. ಈಗಾಗಲೇ ನಡೆಯುತ್ತಿರುವ ಗಣಿಗಾರಿಕೆಯನ್ನು ಐದು ವರ್ಷ ಅಥವಾ ಗಣಿಗಾರಿಕೆಯ ಲೀಸ್(ಭೋಗ್ಯ) ಅವಧಿ – ಇದರಲ್ಲಿ ಯಾವುದು ಮೊದಲಿಗೆ ಮುಗಿಯುತ್ತದೋ ಆಗ ನಿಲ್ಲಿಸಬೇಕು.
ವಿದ್ಯುತ್ ಉತ್ಪಾದನೆ: ಇಎಸ್ಎಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅವಕಾಶ ನೀಡಬಾರದು. ಜಲವಿದ್ಯುತ್ ಯೋಜನೆಗಳಿಗೆ ಪರಿಸರದ ನಿಯಮ ಪ್ರಕಾರ ಅವಕಾಶ ನೀಡಬಹುದು; ಅವುಗಳಿಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ (ಮಂಜೂರಾತಿ) ಅವಶ್ಯ. ಈ ಯೋಜನೆಗಳು ಒಟ್ಟಾಗಿ ಏನು ಪರಿಣಾಮ ಬೀರಬಹುದು ಎಂಬುದರ ಸಮೀಕ್ಷೆಯೂ ಅಗತ್ಯ.
ಕೈಗಾರಿಕೆ: ‘ಕೆಂಪು’ ವಿಭಾಗದ ಎಲ್ಲ ಕೈಗಾರಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ.
ಜನವಸತಿ: ಇಎಸ್ಎ ಪ್ರದೇಶದಲ್ಲಿ 20 ಸಾವಿರ ಚದರ ಮೀಟರ್ಗಿಂತ ಹೆಚ್ಚು ವಿಶಾಲವಾದ ಕಟ್ಟಡಗಳನ್ನು ಕಟ್ಟಿಸುವಂತಿಲ್ಲ. ಉಪನಗರ ಮತ್ತು ನಗರಾಭಿವೃದ್ಧಿ ಯೋಜನೆಗಳಿಗೆ ಅವಕಾಶವಿಲ್ಲ. ಇತರ ಮೂಲಸವಲತ್ತು ಮತ್ತು ಅಭಿವೃದ್ಧಿ ಯೋಜನೆಗಳು ಎ ವಿಭಾಗದ ಯೋಜನೆಗಳ ಅಡಿಯಲ್ಲಿ ಮಂಜೂರಾತಿ ಪಡೆಯಬೇಕಾಗುತ್ತದೆ.
ಪಾರದರ್ಶಕತೆ: ಇಎಸ್ಎ ಪ್ರದೇಶದಲ್ಲಿ ಕಾಡು ಕಡಿಯಬೇಕಿದ್ದರೆ ಪ್ರಾಜೆಕ್ಟ್ನ ಎಲ್ಲ ಮಾಹಿತಿಯನ್ನು (ಅರ್ಜಿ ಸಲ್ಲಿಕೆಯಿಂದ ಮಂಜೂರಾತಿವರೆಗೆ) ಸಾರ್ವಜನಿಕರಿಗೆ ತಿಳಿಸಬೇಕು; ಅದಕ್ಕಾಗಿ ಅದನ್ನು ಅರಣ್ಯ-ಪರಿಸರ ಇಲಾಖೆ ಹಾಗೂ ಸಂಬಂಧಪಟ್ಟ ರಾಜ್ಯದ ಅರಣ್ಯ ಇಲಾಖೆಯ ವೆಬ್ಸೈಟ್ನಲ್ಲಿ ಹಾಕಬೇಕು. ಪರಿಸರ ಸೂಕ್ಷ್ಮಪ್ರದೇಶದ (ಇಎಸ್ಎ) ಎಲ್ಲ ಮಾಹಿತಿಯು ಸಾರ್ವಜನಿಕರ ಗಮನದಲ್ಲಿರಬೇಕು ಎಂಬುದಕ್ಕಾಗಿ ಈ ಪಾರದರ್ಶಕತೆಯನ್ನು ಸೂಚಿಸಲಾಗಿದೆ.
ಗಣಿಗಾರಿಕೆ
ಗಣಿಗಾರಿಕೆಯನ್ನು ‘ಕೆಂಪು’ ಉದ್ಯಮವೆಂದು ಪರಿಗಣಿಸಿದ್ದು, ಪಶ್ಚಿಮಘಟ್ಟದ ಇಎಸ್ಎದಲ್ಲಿ ಅದನ್ನು ನಿಷೇಧಿಸಬೇಕು. ಪರಿಸರದ ಮೇಲೆ ಅದು ಉಂಟುಮಾಡುವ ಪರಿಣಾಮಗಳನ್ನು ಗಮನಿಸದೆ ಇದುತನಕ ಅದು ಬೆಳೆದಿದೆ. ಯೋಜನಾರಹಿತವಾಗಿ ಅನಿರ್ಬಂಧಿತವಾಗಿ ಅದು ಬೆಳೆದ ಕಾರಣ ಹಲವೆಡೆ ಪ್ರತಿಭಟನೆಗಳು ನಡೆದಿವೆ; ಅದರಿಂದಾಗಿ ಗಣಿಗಾರಿಕೆಯನ್ನು ನಿಲ್ಲಿಸಿದ್ದೂ ಇದೆ. ಇದೇ ರೀತಿ ಇಎಸ್ಎದಲ್ಲಿ ಕಲ್ಲು ಕಡಿಯುವುದು ಮತ್ತು ಮರಳು ಎತ್ತುವುದನ್ನು ಕೂಡ ನಿಲ್ಲಿಸಬೇಕು; ರಾಜ್ಯಸರ್ಕಾರಗಳು ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕೆಂದು ತಿಳಿಸಲಾಗಿದೆ.
ಜಲವಿದ್ಯುತ್ ಯೋಜನೆ
ಪಶ್ಚಿಮಘಟ್ಟದ ಅರಣ್ಯಪ್ರದೇಶದಲ್ಲಿ ಬಂದ ಜಲವಿದ್ಯುತ್ ಯೋಜನೆಗಳ ಬಗ್ಗೆ ಆಗಾಗ ವಿರೋಧ ವ್ಯಕ್ತವಾಗಿದೆ. ಅಗ್ಗ ಮತ್ತು ಮಾಲಿನ್ಯರಹಿತವಾದ ಕಾರಣ ಇದಕ್ಕೆ ಬೇಡಿಕೆ ಅಧಿಕವಿದ್ದರೂ ಕೂಡ ಮುಳುಗಡೆಯಿಂದ ಕಾಡು ನಾಶವಾಗುತ್ತದೆ; ಮತ್ತು ನದಿಯ ನೈಸರ್ಗಿಕ ಹರಿವಿಗೆ ತಡೆಯಾಗುತ್ತದೆ. ಆದ್ದರಿಂದ ಆ ನಿಟ್ಟಿನಲ್ಲಿ ಹಾನಿಯಾಗದಂತೆ ನೋಡಿಕೊಳ್ಳಬೇಕು. ವಿದ್ಯುತ್ ಉತ್ಪಾದನೆಯ ಕಾರಣದಿಂದ ನದಿಯ ಇತರ ಪ್ರಯೋಜನಗಳಿಗೆ ತಡೆಯಾಗಬಾರದು; ಆದ್ದರಿಂದ ಇದರಲ್ಲಿ ಸಮತೋಲನ ಅವಶ್ಯ.
ಜಲವಿದ್ಯುತ್ ಯೋಜನೆಗಳನ್ನು ಕೈಗೊಳ್ಳುವಾಗ ನದಿಯ ನೀರು, ಅತ್ಯಂತ ಕಡಮೆ ಇರುವಾಗಲೂ ಶೇ.30ರಷ್ಟು ಹರಿಯುತ್ತ ಇರುವಂತೆ ನೋಡಿಕೊಳ್ಳಬೇಕು. ಪಶ್ಚಿಮಘಟ್ಟದ ಹಲವು ನದಿಗಳು ಗಿಡ್ಡವಿರುವ ಕಾರಣ ಈ ನಿಯಮ ಅಗತ್ಯ. ಮಳೆಯಲ್ಲಿ ವ್ಯತ್ಯಾಸ ಆಗುತ್ತಿರುವ ಕಾರಣ ಸಮೀಕ್ಷೆ ಅವಶ್ಯವೆನಿಸಿದೆ. ಒಟ್ಟು ಪರಿಣಾಮದ ಸಮೀಕ್ಷೆಯ ಅನಂತರವೇ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಬೇಕು. ಪಶ್ಚಿಮಘಟ್ಟದ ಮುಂದಿನ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ಕೊಡುವಾಗ ಆ ಪ್ರದೇಶದ ನೀರಿನ ಅತಿಯಾದ ಬಳಕೆ ಆಗದಂತೆ ಎಚ್ಚರ ನೀಡುವುದು ಕೂಡ ಅವಶ್ಯ. ಎರಡು ಯೋಜನೆಗಳ ನಡುವೆ ಕನಿಷ್ಠ ಮೂರು ಕಿ.ಮೀ. ಅಂತರವಿರಬೇಕು. ನದಿ ಬಯಲಿನ ಶೇ. 50ಕ್ಕಿಂತ ಹೆಚ್ಚು ಭಾಗದ ಬಳಕೆ ಆಗಬಾರದು; ಗರಿಷ್ಠ ವಿದ್ಯುತ್ ಉತ್ಪಾದನೆಗಾಗಿ ಈಗ ಇರುವ ಯೋಜನೆಗಳ ಮರುಸಮೀಕ್ಷೆ ಅಗತ್ಯವಾದೀತು. 25 ಮೆಗಾವಾಟ್ಗಿಂತ ಕಡಮೆ ವಿದ್ಯುತ್ ಉತ್ಪಾದಿಸುವ ಸಣ್ಣ ಯೋಜನೆಗಳ ವಿನ್ಯಾಸವನ್ನು ಬದಲಿಸುವುದು ಉತ್ತಮ; ಏಕೆಂದರೆ ಅವು ಕಡಮೆ ವಿದ್ಯುತ್ ಉತ್ಪಾದಿಸುವಾಗಲೇ ಅಧಿಕ ಹಾನಿ ಎಸಗುತ್ತವೆ.
ಪರಿಸರ ಪರಿಣಾಮದ ಸಮೀಕ್ಷೆ (ಇಐಎ) ನಡೆಸುವುದರೊಂದಿಗೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಪವನವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಬಹುದು. ಅದರಂತೆ ಪವನ್ ವಿದ್ಯುತ್ ಯೋಜನೆಗಳಲ್ಲಿ ಇಐಎಯನ್ನು ಸೇರಿಸಿಕೊಳ್ಳಬೇಕು. ಪರಿಸರ ಮತ್ತು ಸಾಮಾಜಿಕ ಹಾನಿ ಕಡಮೆ ಇದ್ದಾಗ ಮಾತ್ರ ಅದಕ್ಕೆ ಅವಕಾಶ ನೀಡಬೇಕು.
ಕೈಗಾರಿಕೆ
ನೀರು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ – 1974 ಹಾಗೂ ವಾಯು (ಮಾಲಿನ್ಯ ಮತ್ತು ನಿಯಂತ್ರಣ) ಕಾಯ್ದೆ-1981ರ ಪ್ರಕಾರ ಎಲ್ಲ ಕೈಗಾರಿಕೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಕೆಂಪು, ಆರೆಂಜ್ (ಕೇಸರಿ) ಮತ್ತು ಹಸಿರು ಎಂದು ವಿಭಾಗಿಸಲಾಗಿದೆ. ಇದರಲ್ಲಿ ಕೆಂಪು ಮತ್ತು ಕೇಸರಿ ಉದ್ಯಮಗಳು ಹೆಚ್ಚು ಮಾಲಿನ್ಯಕಾರಕವೆಂದು ಪರಿಗಣಿಸಲಾಗಿದೆ. ಪಶ್ಚಿಮಘಟ್ಟದ ಇಎಸ್ಎದಲ್ಲಿ ‘ಕೆಂಪು’ ಕೈಗಾರಿಕೆಗಳನ್ನು ಪೂರ್ತಿಯಾಗಿ ನಿಷೇಧಿಸಲಾಗಿದೆ.
‘ಆರೆಂಜ್’ ವಿಭಾಗದ ಕೈಗಾರಿಕೆಗಳಲ್ಲಿ ಆಹಾರ ಮತ್ತು ಹಣ್ಣುಗಳ ಸಂಸ್ಕರಣ ಕೈಗಾರಿಕೆಗಳು ಸೇರುತ್ತಿದ್ದು, ಇಎಸ್ಎದಲ್ಲಿ ಅದನ್ನು ಪೂರ್ತಿ ನಿಷೇಧಿಸಲಾಗಿದೆ. ಪರಿಸರಕ್ಕೆ ಹಾನಿ ಎಸಗದ ಅಥವಾ ತೀರಾ ಕಡಮೆ ಪರಿಣಾಮ ಬೀರುವ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ಜನವಸತಿ ಮತ್ತು ಕಟ್ಟಡ ನಿರ್ಮಾಣಕ್ಕೆ ಅನ್ವಯವಾಗುವ ನಿಯಮಗಳನ್ನು ಪಾಲಿಸಬೇಕು.
ಮೂಲಸವಲತ್ತು ಅಭಿವೃದ್ಧಿ
ಆರ್ಥಿಕ ಅಭಿವೃದ್ಧಿ ಮತ್ತು ಜೀವನನಿರ್ವಹಣೆಗೆ ಆ ಪ್ರದೇಶದ ಮೂಲಸವಲತ್ತಿನ ಅಭಿವೃದ್ಧಿ ತುಂಬ ಮುಖ್ಯ. ಅದರ ಪ್ರತಿಕೂಲ ಪರಿಣಾಮವನ್ನು ಹೇಗೆ ಕಡಮೆ ಮಾಡಬಹುದು ಮತ್ತು ಅದಕ್ಕಿಂತ ಮುಖ್ಯವಾಗಿ ಅಲ್ಲಿನ ಪರಿಸರ ವ್ಯವಸ್ಥೆಯ ಜೀವವೈವಿಧ್ಯಕ್ಕೆ ಪೂರಕವಾಗಿ ಮೂಲಸವಲತ್ತನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ನೆನಪಿಡಬೇಕು. ಸಭೆ ಏರ್ಪಡಿಸಬೇಕು; ಮತ್ತು ಪರಿಸರ ಸಮೀಕ್ಷೆ ನಡೆಸುವ ಮೂಲಕ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಬೇಕು. ಅಭಿವೃದ್ಧಿ ಯೋಜನೆಗಳ ಒಟ್ಟು ಪರಿಣಾಮವನ್ನೂ ನೋಡಬೇಕು; ಅದಕ್ಕಾಗಿ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಸವಲತ್ತುಗಳ ಪರಿಣಾಮವನ್ನು ಗಮನಿಸಬೇಕು.
ಅರಣ್ಯ ಸಂರಕ್ಷಣೆ, ನಿರ್ವಹಣೆ
ಇಎಸ್ಎಯ ಒಳಗೆ ಅರಣ್ಯಪ್ರದೇಶವು ಪ್ರಮುಖ ಭಾಗವಾಗಿದೆ. ಆದ್ದರಿಂದ ಕಾಡು ಕಡಿಯುವುದು ಅಥವಾ ಅದನ್ನು ಬದಲಿಸುವ ವಿಷಯದಲ್ಲಿ ತೀರಾ ಎಚ್ಚರ ಅವಶ್ಯ. ಇಎಸ್ಎ ಪ್ರದೇಶದ ಕಾಡನ್ನು ಇಲ್ಲವಾಗಿಸುವುದು ಅಥವಾ ಅದರ ಗುಣಮಟ್ಟವನ್ನು ತಗ್ಗಿಸುವುದು ಸಲ್ಲದು ಎಂದ ಕಸ್ತೂರಿರಂಗನ್ ಸಮಿತಿ ಅಭಿವೃದ್ಧಿಗೆ ನಿರ್ಬಂಧ ಹೇರಿದ್ದು, ಅದರಂತೆ ಕಾಡು ಕಡಿಯಲು ಅವಕಾಶ ನೀಡುವುದಿಲ್ಲ. ಆದರೆ ಮೂಲಸವಲತ್ತು ಯೋಜನೆಗಳಲ್ಲಿ ಪರಿಶೀಲಿಸಿ ಅವಕಾಶ ನೀಡಬೇಕೆಂದು ಸೂಚಿಸಿದೆ.
ಪಶ್ಚಿಮಘಟ್ಟದ ಶ್ರೀಮಂತ ಪರಿಸರ ವೈವಿಧ್ಯದ ಹಿಂದಿರುವುದು ಕಾಡಲ್ಲದೆ ಬೇರೇನೂ ಅಲ್ಲ. ಪ್ರದೇಶದ ನೀರಿನ ಲಭ್ಯತೆಗೂ ಅರಣ್ಯಸಂಪತ್ತಿಗೂ ಅವಿನಾಭಾವ ಸಂಬಂಧವಿದೆ. ಅಷ್ಟೇ ಮುಖ್ಯವಾಗಿ ಆರ್ಥಿಕ ಮತ್ತು ಜೀವನೋಪಾಯದ ಅವಕಾಶಗಳು ಕೂಡ ಅರಣ್ಯ ಸಂಪತ್ತನ್ನೇ ಆಶ್ರಯಿಸಿವೆ. ಆದ್ದರಿಂದ ಈ ಪ್ರದೇಶದಲ್ಲಿ ಅರಣ್ಯ ಸಂರಕ್ಷಣೆ, ಅರಣ್ಯೀಕರಣಗಳ ಮಹತ್ತ್ವವನ್ನು ಮರೆಯುವಂತಿಲ್ಲ. ಪ್ರದೇಶದ ಆರ್ಥಿಕ ಭದ್ರತೆಗಾಗಿ ಕಾಡಿನ ಸಂರಕ್ಷಣೆ ಮತ್ತು ಬೆಳೆಸುವುದು ಅವಶ್ಯ. ದೇಶದ ಆರ್ಥಿಕ ಸುಸ್ಥಿತಿಯಲ್ಲಿ ನವೀಕರಣ ಯೋಗ್ಯ ಸಂಪನ್ಮೂಲವಾದ ಅರಣ್ಯವನ್ನು ಪರಿಗಣಿಸಲು ಈಗ ಸಕಾಲವೆನಿಸಿದೆ. ಆದರೆ ದೇಶದಲ್ಲಿ ಇಂದು ಅರಣ್ಯ ತೀವ್ರ ಒತ್ತಡಕ್ಕೆ ಸಿಲುಕಿದೆ. ಇದು ಮುಂದುವರಿದು ಅರಣ್ಯ ತರುವ ಆದಾಯವನ್ನು ಮರೆಯಬಾರದು. ಕೇಂದ್ರ-ರಾಜ್ಯಗಳ ಆದಾಯದಲ್ಲಿ ಅದನ್ನು ಗುರುತಿಸಿ ದಾಖಲಿಸಬೇಕು; ಜನತೆಗೆ ಜೀವನೋಪಾಯವನ್ನು ಒದಗಿಸುವುದರಲ್ಲಿ ಕಾಡುಗಳ ಮಹತ್ತ್ವವನ್ನು ನೆನಪಿನಲ್ಲಿಡಬೇಕು.
ಉತ್ಪಾದಕತೆಯ ಏರಿಕೆ
ಕಾಡಿನಿಂದ ಆರ್ಥಿಕ ಅನುಕೂಲತೆಗಳು ಲಭಿಸಬೇಕಿದ್ದರೆ ಕಾಡಿನ ಉತ್ಪಾದಕತೆಯ ಏರಿಕೆ ಅವಶ್ಯ. ಅದಕ್ಕಾಗಿ ಕಾಡು ಉತ್ಪತ್ತಿಯ ಗಿಡಗಳನ್ನು ಬೆಳೆಸುವುದು, ಕಿರು-ಉತ್ಪನ್ನಗಳು ಸೇರಿದಂತೆ ಅರಣ್ಯ-ಉತ್ಪನ್ನಗಳ ಮೌಲ್ಯವರ್ಧನೆ ಅವಶ್ಯ. ಸ್ಥಳೀಯರ ಸಹಕಾರವಿಲ್ಲದೆ ಆದಾಯ ತರುವ ಗಿಡಗಳನ್ನು ನೆಟ್ಟು ಬೆಳೆಸುವುದು ಅಸಾಧ್ಯ. ಪಲ್ಪ್ನಿಂದ ನಾಟಾ(ಮರ)ದವರೆಗೆ ಅರಣ್ಯ ಉತ್ಪನ್ನಗಳ ಆಮದು ಈಗ ಹೆಚ್ಚುತ್ತಿದೆ; ಮತ್ತು ಕಾಡಿನಿಂದ ಬರುವ ಆದಾಯ ಇಳಿಯುತ್ತಿದೆ. ರಾಜ್ಯ ಬಜೆಟ್ಗಳಲ್ಲಿ ಅರಣ್ಯ ಸಂಪನ್ಮೂಲಗಳ ಪಾಲು ಇಳಿಯುತ್ತಿದೆ. ಇದನ್ನು ತಡೆದು ಅರಣ್ಯದ ಆರ್ಥಿಕ ಉತ್ಪಾದಕತೆಯನ್ನು ಏರಿಸಬೇಕು: ಅರಣ್ಯ-ಆಧಾರಿತ ಆರ್ಥಿಕತೆಯನ್ನು ಪೋಷಿಸಬೇಕು.
ಅರಣ್ಯ ಪರಿಸರ ವ್ಯವಸ್ಥೆ ಸೇವೆಯನ್ನೂ ಅದರಿಂದ ಬರುವ ಬರುವ ಆದಾಯವನ್ನೂ ಲೆಕ್ಕವಿಡಬೇಕು. ಪರಿಸರ ವ್ಯವಸ್ಥೆ ಸೇವಾನಿಧಿಯು ಕಾಡಿನ ಸುತ್ತ ಇರುವ ಹಳ್ಳಿಗಳಿಗೆ ಹೋಗಬೇಕು; ಅರಣ್ಯ ಸಂರಕ್ಷಣೆಯಲ್ಲಿ ಸ್ಥಳೀಯರು ಭಾಗಿಯಾಗಬೇಕು. ಕಾಡು ಬೆಳೆಸುವವರಿಗೆ ಪ್ರೋತ್ಸಾಹ ನೀಡಬೇಕು.
ಸುಸ್ಥಿರ ಕೃಷಿ
ಕೃಷಿ, ತೋಟಗಳನ್ನು ಒಳಗೊಂಡ ಸಾಂಸ್ಕøತಿಕ ಭೂವಲಯವನ್ನು ಪರಿಸರ ಸೂಕ್ಷ್ಮಪ್ರದೇಶ (ಇಎಸ್ಎ)ದಿಂದ ಹೊರಗಿಡಲಾಗಿದೆ. ಜೀವನೋಪಾಯಕ್ಕೆ ಎರಡೂ ಚಟುವಟಿಕೆಗಳು ಮುಖ್ಯ. ಆದರೆ ಕಾಡುಗಳಿಲ್ಲದೆ ಕೃಷಿ ಉಳಿಯಲಾರದು; ಗೊಬ್ಬರ ಮತ್ತು ನೀರಿಗೆ ಕಾಡೇ ಮೂಲ. ಆದ್ದರಿಂದ ಕಾಡಿನ ಸುತ್ತ ಜೀವವೈವಿಧ್ಯವನ್ನು ಉಳಿಸಿ ಬೆಳೆಸಿದಾಗಲೇ ಕೃಷಿಕರಿಗೆ ಮತ್ತು ತೋಟಗಳ ಮಾಲೀಕರಿಗೆ ಅನುಕೂಲವಾಗುತ್ತದೆ.
ಪಶ್ಚಿಮಘಟ್ಟದ ಕೆಲವು ಭಾಗವನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದ ಬಳಿಕ ಪ್ರವಾಸೋದ್ಯಮವು ಬೆಳೆಯುವ ಲಕ್ಷಣವನ್ನು ತೋರಿಸಿದೆ; ಅದರಿಂದ ಜನರ ಆದಾಯ ಮತ್ತು ಪ್ರದೇಶದ ಆರ್ಥಿಕ ಬೆಳವಣಿಗೆ ಸಾಧ್ಯ. ಆದರೆ ಅದೇ ವೇಳೆ ಪ್ರವಾಸೋದ್ಯಮವನ್ನು ನಿಯಂತ್ರಣದಲ್ಲಿಡದಿದ್ದರೆ ಅದೇ ಪರಿಸರನಾಶಕ್ಕೆ ಕಾರಣವಾಗಬಹುದು. ಯೋಜನಾರಹಿತ ಮತ್ತು ಅನಿಯಂತ್ರಿತ ಪ್ರವಾಸೋದ್ಯಮ ಹಾಗೂ ಪರಿಸರ ಸೂಕ್ಷ್ಮವಲಯದಲ್ಲಿ ನಗರೀಕರಣದಿಂದ ಸಮಸ್ಯೆ ಉಂಟಾಗುತ್ತದೆಂದು ಪಶ್ಚಿಮಘಟ್ಟದ ಅರಣ್ಯಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಕುರಿತ ಜನವರಿ 2011ರ ವರದಿ ಹೇಳಿದೆ. ಆ ಸಮೀಕ್ಷೆಯ ಪ್ರಕಾರ ಧಾರಣ ಸಾಮಥ್ರ್ಯವನ್ನು ಮೀರಿ ಪ್ರವಾಸೋದ್ಯಮವನ್ನು ಬೆಳೆಸಿದ ಕಾರಣ ಆ ಭಾಗದಲ್ಲಿ ಈಗ ನೀರಿನ ಕೊರತೆ ಉಂಟಾಗಿದೆ. ಒಳಚರಂಡಿ ಮತ್ತು ಘನತ್ಯಾಜ್ಯಗಳು ಸೃಷ್ಟಿಸಿದ ಸಮಸ್ಯೆಯಿಂದ ಕಾಡು ನಾಶವಾಗುತ್ತಿದೆ. ಮುಂದೆ ಈ ಮೂಲದಿಂದ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ; ಆದರೆ ಪರಿಸರಕ್ಕೆ ಹಾನಿಯಾದರೆ ಆರ್ಥಿಕ ನಷ್ಟವೇ ಉಂಟಾಗುತ್ತದೆ.
ಪ್ರವಾಸೋದ್ಯಮ
ಆ ಹಿನ್ನೆಲೆಯಲ್ಲಿ ಸುಸ್ಥಿರ ಪ್ರವಾಸೋದ್ಯಮಕ್ಕಾಗಿ ಕಸ್ತೂರಿರಂಗನ್ ಸಮಿತಿಯು ಕೆಲವು ಶಿಫಾರಸುಗಳನ್ನು ಮಾಡಿದೆ; ಪರಿಸರ ಸಂರಕ್ಷಣೆ ಕಾಯ್ದೆಯನ್ವಯ ತಂದ ಅರಣ್ಯ ಸಂರಕ್ಷಣೆ ಕಾಯ್ದೆ ಮತ್ತು ಪರಿಸರ ಪರಿಣಾಮ ಸಮೀಕ್ಷೆಗಳ ಮೂಲಕ ಪ್ರಾಜೆಕ್ಟ್ಗಳನ್ನು ಸರಿಯಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಿದೆ. ಪರಿಸರ ಸಮೀಕ್ಷೆಯಲ್ಲಿನ ಕಳಪೆ ಸಾಂಸ್ಥಿಕ ಸಾಮಥ್ರ್ಯ, ಸ್ಥಳೀಯ ಸಮುದಾಯಗಳ ಸಲಹೆ ಕೇಳದಿರುವುದು ಮತ್ತು ಪರಿಸರ ಹಾಗೂ ಅರಣ್ಯ ವಿಷಯಗಳ ಕಳಪೆ ಉಸ್ತುವಾರಿಯಿಂದಾಗಿ ಈ ಪ್ರಕ್ರಿಯೆಯನ್ನು ಉಲ್ಲಂಘಿಸಲಾಗುತ್ತಿದೆ ಮತ್ತು ಅದು ದುರ್ಬಲವಾಗಿದೆ. ಮುಂದಿನ ಯೋಜನೆಗಳಿಗೆ ಮಂಜೂರಾತಿ ನೀಡುವಾಗ ಇದನ್ನು ಸರಿಪಡಿಸಲೇಬೇಕು. ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮಪ್ರದೇಶದಲ್ಲಿ ಇರುವಂಥವೆಂದು ಗುರುತಿಸಿಯೇ ಅವುಗಳಿಗೆ ಒಪ್ಪಿಗೆ ನೀಡಬೇಕು; ಮತ್ತು ಈ ಮಾಹಿತಿಯು ಕೇಂದ್ರ-ರಾಜ್ಯ ಸರ್ಕಾರಗಳ ವೆಬ್ಸೈಟ್ನಲ್ಲಿ ಇರಲೇಬೇಕು.
ಈ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪರಿಸರ ಪ್ರವಾಸೋದ್ಯಮ ನೀತಿಗಳಿವೆ. ಕೇಂದ್ರ ಅರಣ್ಯ-ಪರಿಸರ ಸಚಿವಾಲಯವು ಈಚೆಗೆ ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯಗಳ ಸುತ್ತ ಅರಣ್ಯ ಸಂರಕ್ಷಣೆಗೆ ಸಂಬಂಧಿಸಿ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ; ಅವು ಸ್ಥಳೀಯ ಸಮುದಾಯಗಳಿಗೆ ಅನುಕೂಲಕರವಾಗಿವೆ. ಈ ಪರಿಸರ ಸೂಕ್ಷ್ಮಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಬೆಳೆಸುವಂತಹ ನೀತಿಯನ್ನು ರೂಪಿಸಿ, ಅದರಿಂದ ಸಂಗ್ರಹವಾಗುವ ಸುಂಕವನ್ನು ಆ ಭಾಗದ ಪರಿಸರ ನಿರ್ವಹಣೆಗೆ ಬಳಸಬೇಕೆಂದು ಸಮಿತಿಯ ವರದಿ ಶಿಫಾರಸು ಮಾಡಿದೆ. ಈ ಪ್ರವಾಸೋದ್ಯಮ ತಾಣಗಳ ಮೇಲೆ ಪ್ರವಾಸೋದ್ಯಮದಿಂದ ಉಂಟಾಗುತ್ತಿರುವ ಪರಿಣಾಮವನ್ನು ಸದಾ ನೋಡುತ್ತಿರಬೇಕು ಎಂದಿದೆ.
ಯುನೆಸ್ಕೋ ಪಾರಂಪರಿಕ ತಾಣ
ಪಶ್ಚಿಮಘಟ್ಟದ 39 ಸರಣಿ ತಾಣಗಳನ್ನು ವಿಶ್ವಸಂಸ್ಥೆಯ ಯುನೆಸ್ಕೋ ಜಾಗತಿಕ ಪರಂಪರಾ ಸಮಿತಿಯು ವಿಶ್ವ ಪಾರಂಪರಿಕ ತಾಣಗಳೆಂದು ಘೋಷಿಸಿತು. ಸಮಿತಿಯು ತನ್ನ ಪ್ರಕಟಣೆಯಲ್ಲಿ “ಪಶ್ಚಿಮಘಟ್ಟದ ಮಹತ್ತ್ವಪೂರ್ಣ ಅಂಶವೆಂದರೆ, ಅತ್ಯಂತ ಉನ್ನತಮಟ್ಟದಲ್ಲಿರುವ ಅದರ ಜೈವಿಕ ವೈವಿಧ್ಯವಾಗಿದೆ; ಇದರಲ್ಲಿ ಎಂಡೆಮಿಸಂ (ಬೇರೆಲ್ಲೂ ಇಲ್ಲದ್ದು) ವಿಷಯವೂ ಇದೆ. ಈ ಪರ್ವತಶ್ರೇಣಿಯು ಎಂಟು ಜಾಗತಿಕ ‘ಹಾಟೆಸ್ಟ್ ಹಾಟ್ಸ್ಪಾಟ್’ಗಳಲ್ಲಿ ಒಂದಾಗಿದೆ. ಯುನೆಸ್ಕೋದ ಎಂಡೆಮಿಕ್ ಅಂಶವೇ ಯುನೆಸ್ಕೋದ ಈ ಘೋಷಣೆಗೆ ಕಾರಣವಾಗಿದೆ. ಮರದ ಜಾತಿಗಳಲ್ಲಿ ಶೇ.54, ಉಭಯವಾಸಿಗಳಲ್ಲಿ ಶೇ.62, ಸರೀಸೃಪಗಳಲ್ಲಿ ಶೇ.65 ಮತ್ತು ಮೀನಿನ ತಳಿಯ ಶೇ.53ರಷ್ಟು ಇಲ್ಲಿ ಮಾತ್ರ ಇದ್ದು ಎಂಡೆಮಿಕ್ ಆಗಿವೆ ಎಂದು ತಿಳಿಸಲಾಗಿದೆ.
ಯುನೆಸ್ಕೋ ಪಾರಂಪರಿಕ ತಾಣವೆಂದು ಗುರುತಿಸಿದ ಕಾರಣ ಇಲ್ಲಿನ ಅಪಾರ ನೈಸರ್ಗಿಕ ಸಂಪತ್ತನ್ನು ಜಾಗತಿಕವಾಗಿ ಗುರುತಿಸಿದಂತಾಗಿದೆ. ವಿವಿಧ ದೇಶಗಳು ತಮ್ಮದನ್ನು ಪಾರಂಪರಿಕ ತಾಣವೆಂದು ಘೋಷಿಸಬೇಕೆಂದು ದುಂಬಾಲು ಬೀಳುತ್ತವೆ. ಈ ತಾಣಗಳನ್ನು ಗುರುತಿಸಿದ್ದರಿಂದ ಅವುಗಳಿಗೆ ಜಾಗತಿಕ ಮಹತ್ತ್ವ ಪ್ರಾಪ್ತವಾಗಿದೆ; ಅದರಿಂದ ದೊಡ್ಡ ಪ್ರವಾಸೋದ್ಯಮ ಮೌಲ್ಯ ಕೂಡ ಬಂದಿದೆ; ಜಗತ್ತಿನಾದ್ಯಂತದ ಜನ ಇಲ್ಲಿಗೆ ಬಂದು ಅವುಗಳನ್ನು ನೋಡುತ್ತಾರೆ.
ಆದರೆ ಈ ಮಾನ್ಯತೆಯೊಂದಿಗೆ ಜವಾಬ್ದಾರಿ ಕೂಡ ಇದೆ; ಅದರಂತೆ ವಿಶ್ವ ಪರಂಪರಾ ಸಮಾವೇಶದ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದು, ರಾಜ್ಯಸರ್ಕಾರಗಳು ಅವನ್ನು ಪಾಲಿಸಬೇಕು.
ಪ್ರೋತ್ಸಾಹಕ ನೀಡಿಕೆ
ಪಾರಿಸರಿಕವಾಗಿ ಯೋಗ್ಯವಾದ ಅಭಿವೃದ್ಧಿಯು ಈ ಪ್ರದೇಶದ ಜನರ ಜೀವನೋಪಾಯ ಮತ್ತು ಆರ್ಥಿಕ ಅವಕಾಶಗಳನ್ನು ಅಲಕ್ಷಿಸುವಂತಿಲ್ಲ. ಕೆಲವು ಬಗೆಯ ಆರ್ಥಿಕ ಚಟುವಟಿಕೆಗಳನ್ನು ಇಎಸ್ಎದಲ್ಲಿ ನಿಷೇಧಿಸಿದರೂ ಕೂಡ ಸ್ಥಳೀಯ ಜನರ ಜೀವನೋಪಾಯದ ರಕ್ಷಣೆಗೆ ಅನ್ಯ ಮಾದರಿಯನ್ನು ಅಳವಡಿಸಲಾಗುತ್ತದೆ.
ಎ) ಅದಕ್ಕಾಗಿ ನಾಟಾಗೆ ಹೊರತಾದ ಅರಣ್ಯ ಉತ್ಪನ್ನಗಳ ಸಂಗ್ರಹ ಮತ್ತು ಮೌಲ್ಯವರ್ಧನೆಯ ವಿಧಾನಗಳನ್ನು ಅನುಸರಿಸಬಹುದು. ಇಎಸ್ಎಯ ಒಳಗೆ ಅದರ ಸಂಗ್ರಹ ಮತ್ತು ಸಾಗಾಟಕ್ಕೆ ಸ್ಥಳೀಯ ಜನರನ್ನು ಒಳಗೊಳ್ಳುವಾಗ ಮೂಲಸವಲತ್ತು ಮತ್ತು ಆರ್ಥಿಕ ಬೆಂಬಲ ಅಗತ್ಯವಾಗಬಹುದು. ಅದಕ್ಕಾಗಿ ಪಶ್ಚಿಮಘಟ್ಟ ಪ್ರದೇಶದಾದ್ಯಂತ ಸಮುದಾಯ -ಆಧಾರಿತ ಸಂಸ್ಥೆಗಳ ಜಾಲವನ್ನು ನಿರ್ಮಿಸಿ ಅದರ ಮೂಲಕ ನೆರವು ನೀಡಬೇಕು. ಈ ನಿಟ್ಟಿನಲ್ಲಿ ಬುಡಕಟ್ಟು ಜನರಿಗೆ ಸಂಬಂಧಪಟ್ಟ ಸಂಸ್ಥೆಗಳನ್ನು ಕೂಡ ಬಳಸಿಕೊಳ್ಳಬಹುದು.
ಬಿ) ಅರಣ್ಯ ಮತ್ತು ಪರಿಸರ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳನ್ವಯ ಪರಿಸರ ಪ್ರವಾಸೋದ್ಯಮವನ್ನು ನಡೆಸಿ ಸ್ಥಳೀಯ ಸಮುದಾಯಗಳನ್ನು ಒಳಗೊಂಡಾಗ ಜನರಿಗೆ ಪ್ರಯೋಜನವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪಶ್ಚಿಮಘಟ್ಟಕ್ಕೆ ವಿಶ್ವಸಂಸ್ಥೆ ನೀಡಿದ ವಿಶ್ವ ಪಾರಂಪರಿಕ ತಾಣದ ಮನ್ನಣೆಯಿಂದ ಲಾಭವಾಗಲು ಸಾಧ್ಯ.
ಮೇಲೆ ಹೇಳಿದ ಹೆಚ್ಚಿನ ಚಟುವಟಿಕೆಗಳಿಂದ ಆ ಪ್ರದೇಶದ ಕುಟುಂಬಗಳ ಆದಾಯ ಉತ್ತಮಗೊಂಡು ದೀರ್ಘ ಕಾಲದಲ್ಲಿ ಹೆಚ್ಚಿನ ಪ್ರಯೋಜನವಾಗಬಹುದು. ಆರಂಭದಲ್ಲಿ ಸ್ವಲ್ಪಮಟ್ಟಿನ ಸಹಾಯ ಬೇಕಾದರೂ ಕೂಡ ವ್ಯಕ್ತಿಗಳು ಮತ್ತು ಸಮುದಾಯಗಳು ಕ್ರಮೇಣ ಸ್ವಾವಲಂಬಿಗಳಾಗಿ ಎದ್ದುನಿಲ್ಲಬಹುದು.
ಈಗ ಇರುವ ವ್ಯವಸ್ಥೆಯಲ್ಲಿನ ಒಂದು ಸಮಸ್ಯೆಯೆಂದರೆ ನಮ್ಮ ಮುಂದಿರುವ ಕಾಡಿನ ಬಗ್ಗೆ ಯಾವುದೇ ಪ್ರೋತ್ಸಾಹಕ ಸಿಗುವುದಿಲ್ಲ. ಕಾಡುಗಳು ದೇಶದ ನೈಸರ್ಗಿಕ ಬಂಡವಾಳದ ಭಾಗ ಎನ್ನುವ ಸಂಗತಿಯು ನಮ್ಮ ಇಂದಿನ ಆರ್ಥಿಕ ವ್ಯವಸ್ಥೆಯೊಳಗೆ ಜಾರಿಗೆ ಬಂದಿಲ್ಲ. ಆದ್ದರಿಂದ ಪಶ್ಚಿಮಘಟ್ಟದ ಎಲ್ಲ ಭಾಗಗಳಲ್ಲಿ ಈಗ ಇರುವ ಕಾಡಿನ ಮೌಲ್ಯಮಾಪನ ಮಾಡಿ ಅದಕ್ಕನುಗುಣವಾಗಿ ಅಗತ್ಯವಾದ ಕಡೆ ಹಣ ನೀಡುವ, ವಿನಿಯೋಗಿಸುವ ವ್ಯವಸ್ಥೆ ಬರುವುದು ಅಗತ್ಯ.
ಕೇಂದ್ರದಿಂದ ಅನುದಾನ
ಅದಕ್ಕಾಗಿ ಪಶ್ಚಿಮಘಟ್ಟದ ರಾಜ್ಯಗಳು ಒಟ್ಟಾಗಿ ಕೇಂದ್ರಸರ್ಕಾರದಿಂದ ಸಹಾಯಾನುದಾನವನ್ನು (grant-in-aid) ಕೇಳಬೇಕು. ಅದು ನೈಸರ್ಗಿಕ ಸಂಪತ್ತಿಗೆ ನೀಡುವ ಸಾಲದ ರೂಪದ ಆರ್ಥಿಕ ವ್ಯವಸ್ಥೆ ಆಗಿರಬಹುದು. ನೈಸರ್ಗಿಕ ಸಂಪನ್ಮೂಲದ ಸಂರಕ್ಷಣೆಗೆ ಇದರಿಂದ ಪ್ರಯೋಜನವಾಗುತ್ತದೆ. ಕೇಂದ್ರದಿಂದ ಬಂದ ಹಣದ ಸ್ವಲ್ಪ ಭಾಗವನ್ನು ರಾಜ್ಯಸರ್ಕಾರಗಳು ತಮ್ಮ ಬಳಿ ಇರಿಸಿಕೊಂಡು, ಮತ್ತೊಂದು ಭಾಗವನ್ನು ಸ್ಥಳೀಯ ಸಂರಕ್ಷಣೆ ಟ್ರಸ್ಟ್ ನ ನಿಧಿಗಳಿಗೆ ನೀಡಬೇಕು. ಇಂತಹ ವಿಧಾನ ಹಲವು ದೇಶಗಳಲ್ಲಿ ಈಗಾಗಲೆ ಪ್ರಚಲಿತವಿದ್ದು, ಅರಣ್ಯದ ಉತ್ಪಾದಕತೆಯನ್ನು ಉತ್ತಮಪಡಿಸಲು ಸಮುದಾಯ ಯೋಜನೆಗಳಿಗೆ ಅಂತಹ ಅನುದಾನವನ್ನು ನೀಡಲಾಗುತ್ತದೆ; ಪರಿಸರಸೂಕ್ಷ್ಮ ಪ್ರದೇಶದ ಜನರ ಸುಸ್ಥಿರ ಜೀವನೋಪಾಯಕ್ಕೆ ಇದರಿಂದ ಅನುಕೂಲವಾಗುತ್ತದೆ.
ಪಶ್ಚಿಮಘಟ್ಟ ಪ್ರದೇಶದ ಒಳಗಿನ ಇಎಸ್ಎ ಮತ್ತು ಇಎಸ್ಎಗೆ ಹೊರತಾದ ಪರಿಸರ ವ್ಯವಸ್ಥೆ ಸೇವೆಗಳಿಗೆ ಹಣ ಪಾವತಿಸುವ ವ್ಯವಸ್ಥೆ ಇರಬೇಕೆಂದು ಕಸ್ತೂರಿರಂಗನ್ ಸಮಿತಿಯು ಶಿಫಾರಸು ಮಾಡಿದೆ. ಉದಾಹರಣೆಗೆ, ನಗರಪ್ರದೇಶಗಳಿಗೆ ಜಲವಿದ್ಯುತ್ ಪೂರೈಕೆ. ನಗರ ಮತ್ತು ಗ್ರಾಮೀಣ ಸ್ಥಳೀಯ ಆಡಳಿತಗಳ ನಡುವೆ ನೇರಸಂಪರ್ಕ ಇರಬೇಕು; ಅದಕ್ಕಾಗಿ ಮಾತುಕತೆ ನಡೆಯಬೇಕು; ಮತ್ತು ನಗರಸಭೆಗಳ ಬಜೆಟ್ನಲ್ಲಿ ಸ್ವಲ್ಪ ಹಣವನ್ನು ಈ ಬಗ್ಗೆ ತೆಗೆದಿರಿಸಿ ಬಳಸಿಕೊಳ್ಳಬೇಕು ಎಂದ ವರದಿ, ಸಂಪನ್ಮೂಲ ಸಂರಕ್ಷಣೆಯನ್ನು ಗ್ರಾಮೀಣ ಅಭಿವೃದ್ಧಿಯೊಂದಿಗೆ ಜೋಡಿಸುವ ಕಾರ್ಯವಿಧಾನವು ಈಗ ಸರ್ಕಾರಗಳ ಭವಿಷ್ಯದ ಕಾರ್ಯಸೂಚಿಯಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ತನ್ನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನರೇಗಾ (ಎಂಎನ್ಆರ್ಇಜಿಎ) ಮತ್ತಿತರ ಕಾರ್ಯಕ್ರಮಗಳಿಗೆ ಹಣ ಕೇಳುವ ವ್ಯವಸ್ಥೆ ಈಗಾಗಲೆ ಚಾಲ್ತಿಯಲ್ಲಿದೆ. ನೆಲ-ಜಲ ಸಂರಕ್ಷಣೆ, ಸಾವಯವ ಕೃಷಿ ಮುಂತಾದ ಉದ್ದೇಶಗಳಿಗೆ ಆ ಹಣವನ್ನು ಬಳಸಿಕೊಳ್ಳಲಾಗುತ್ತದೆ.
ಯೋಜನಾ ಆಯೋಗದ ಸಹಕಾರ
ಯೋಜನಾ ಆಯೋಗದ ಪಶ್ಚಿಮಘಟ್ಟ ಅಭಿವೃಧ್ಧಿ ಕಾರ್ಯಕ್ರಮ (ಡಬ್ಲ್ಯುಜಿಡಿಪಿ) ವಿಭಾಗವು ಈ ಕಾರ್ಯಕ್ರಮಗಳ ಸಮನ್ವಯವನ್ನು ಮಾಡುತ್ತದೆ. ಡಬ್ಲ್ಯುಜಿಡಿಪಿ ಅಡಿಯಲ್ಲಿ ಬರುವ ಪ್ರಧಾನ ಚಟುವಟಿಕೆಗಳೆಂದರೆ, ಜಲಾಶಯ ಯೋಜನೆಗಳು, ಜೀವನೋಪಾಯದ ಪ್ರಕಲ್ಪಗಳು, ಕಾಲುಸಂಕ ಅಥವಾ ತೂಗುಸೇತುವೆಯಂತಹ ಮೂಲಸವಲತ್ತು ಯೋಜನೆಗಳು, ಕಿಂಡಿ ಅಣೆಕಟ್ಟು, ಪರಿಶಿಷ್ಟ ಜಾತಿ-ಪಂಗಡದ ಯೋಜನೆಗಳು ಹಾಗೂ ಬುಡಕಟ್ಟು ಜನರ ಉದ್ಧಾರ ಮತ್ತು ಅರಣ್ಯ-ಆಧಾರಿತ ಕಾರ್ಯಕ್ರಮಗಳು.
ಪಶ್ಚಿಮಘಟ್ಟ ಅಭಿವೃದ್ಧಿ ಕಾರ್ಯಕ್ರಮದ ಮುಂದುವರಿಕೆಯಾಗಿ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಪರಿಸರ ಸಂರಕ್ಷಣೆ, ಪರಿಸರಕ್ಕೆ ಕನಿಷ್ಠ ಹಾನಿ ಎಸಗುವ ವಿಧಾನ, ಸುಸ್ಥಿರ ಆರ್ಥಿಕ ಅಭಿವೃದ್ಧಿ ಮಾದರಿ ಪ್ರಕಾರ ಸ್ಥಳೀಯ ಜನರನ್ನು ಒಳಗೊಳ್ಳುವುದು ಮತ್ತು ಹೆಚ್ಚಿನ ನೆರವಿನ ಮೂಲಕ ಜೀವನೋಪಾಯ ಗಳಿಕೆ ಇವುಗಳಿರುವ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದ ವರದಿ ಕೆಲವು ಸಲಹೆಗಳನ್ನು ನೀಡಿದೆ: 1,000 ಕೋಟಿ ರೂ. ಹೆಚ್ಚುವರಿಯಾಗಿ ನೀಡುವ ಮೂಲಕ ಪಶ್ಚಿಮಘಟ್ಟ ಅಭಿವೃದ್ಧಿ ಕಾರ್ಯಕ್ರಮವನ್ನು ಮುಂದುವರಿಸಬೇಕು; ವಿಶೇಷ ವರ್ಗ ಸ್ಥಾನಮಾನವನ್ನು ಮುಂದುವರಿಸಿ, ಕೇಂದ್ರ-ರಾಜ್ಯ 90:10 ಅನುಪಾತದಂತೆ ವೆಚ್ಚವನ್ನು ಭರಿಸಬೇಕು; ರಾಜ್ಯಗಳ ಪಶ್ಚಿಮಘಟ್ಟ ಇಎಸ್ಎ ಅನ್ವಯ 14ನೇ ಹಣಕಾಸು ಆಯೋಗವು ವಿಶೇಷ ನೆರವು ನೀಡಬೇಕು; ಈಗಾಗಲೆ ಇರುವ ಶಾಸನಗಳು ಮತ್ತು ನಮ್ಮ ಸಮಿತಿಯ ಶಿಫಾರಸು/ಸಲಹೆಗಳ ಜಾರಿಯ ಬಗ್ಗೆ ಪ್ರಸ್ತುತ ಆರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಉನ್ನತಮಟ್ಟದ ಸಮಿತಿಯನ್ನು ರಚಿಸಬೇಕು; ಸಮಿತಿಯ ನಿರಂತರ ನಿಗಾ ವಹಿಸಬೇಕು ಇತ್ಯಾದಿ.
ಆಡಳಿತದ ಚೌಕಟ್ಟು
ಒಂದು ಪ್ರದೇಶವನ್ನು ಒಮ್ಮೆ ಇಎಸ್ಎ ಎಂದು ಗುರುತಿಸಿದ ಮೇಲೆ ಅದಕ್ಕೆ ಪರಿಣಾಮಕಾರಿ ಆಡಳಿತದ ಚೌಕಟ್ಟು ಅವಶ್ಯ; ಜನರ ಜೀವನೋಪಾಯದ ರಕ್ಷಣೆಗಾಗಿ ಕೂಡ ಅದು ಅವಶ್ಯ. ಅದಕ್ಕಾಗಿ ಸ್ಥಳೀಯ ಜನರ ಕಾಳಜಿಗಳಿಗೆ ಸ್ಪಂದಿಸುವ ಸಂಸ್ಥೆಗಳು ಬೇಕು; ಅವು ಶೀಘ್ರ ನಿರ್ಧಾರಗಳನ್ನು ಕೈಗೊಳ್ಳಬೇಕು; ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನವನ್ನು ಸಾಧಿಸಬೇಕು. ಸಂಪನ್ಮೂಲ ನಿರ್ವಹಣೆಯು ಸಂಕೀರ್ಣವಾಗಿದ್ದಾಗ, ಅಪಾಯಗಳು ಜಾಸ್ತಿ ಇದ್ದಾಗ ಎಚ್ಚರದಿಂದ ಸಮೀಕ್ಷೆ ನಡೆಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ವರದಿ ಸಲಹೆ ನೀಡಿದೆ.
ಅರಣ್ಯ-ಪರಿಸರ ಸಚಿವಾಲಯವು ಗಾಡ್ಗೀಳ್ ಸಮಿತಿಯನ್ನು ನೇಮಿಸುವಾಗ, “ಪರಿಸರ (ಸಂರಕ್ಷಣೆ) ಕಾಯ್ದೆಯನ್ವಯ ಪಶ್ಚಿಮಘಟ್ಟ ಪರಿಸರ ಪ್ರಾಧಿಕಾರ (ಡಬ್ಲ್ಯುಜಿಇಎ) ರಚನೆಯ ವಿಧಾನದ ಬಗ್ಗೆ ಸಲಹೆ ನೀಡಬೇಕು; ಪ್ರದೇಶದ ಪರಿಸರ ನಿರ್ವಹಣೆ, ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿ ಅದು ವೃತ್ತಿಪರ ಸಂಸ್ಥೆಯಾಗಿರಬೇಕು” ಎಂದು ಸೂಚಿಸಿತ್ತು. ಅದರಂತೆ ಗಾಡ್ಗೀಳ್ ಸಮಿತಿಯು ಸಲಹೆ ನೀಡಿದ್ದು, ಅದರಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟಗಳಲ್ಲಿ ಪ್ರಾಧಿಕಾರಗಳಿರಬೇಕು; ಹಾಗೂ ಜಿಲ್ಲಾಮಟ್ಟದಲ್ಲಿ ಸಮಿತಿಗಳಿರಬೇಕೆಂದು ಸಲಹೆ ನೀಡಿತ್ತು.
ಅದಕ್ಕೆ ಪ್ರತಿಕ್ರಿಯಿಸಿದ ರಾಜ್ಯಗಳು ‘ಇನ್ನೂ ಒಂದು ಕೇಂದ್ರೀಕೃತ ಪ್ರಾಧಿಕಾರ ಬೇಡ; ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ನಿರ್ಧಾರ ಕೈಗೊಳ್ಳಲು ಆಯಾ ರಾಜ್ಯಗಳೇ ಸಮರ್ಥವಾಗಿವೆ’ ಎಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ಕಸ್ತೂರಿರಂಗನ್ ಸಮಿತಿಯು, ಪಾರಿಸರಿಕ ಆಡಳಿತದಲ್ಲಿ ಈಗ ಇರುವ ವ್ಯವಸ್ಥೆಯನ್ನು ಬಲಪಡಿಸಬೇಕು; ಮತ್ತು ಆಡಳಿತವನ್ನು ಪರಿಣಾಮಕಾರಿಯಾಗಿಸಬೇಕು. ಹೊಸ ಸಂಸ್ಥೆ ಅಥವಾ ಪ್ರಾಧಿಕಾರಗಳನ್ನು ರಚಿಸುವ ಮುನ್ನ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಹಾಲಿ ಇರುವ ಸಂಸ್ಥೆಗಳ ಸಮಸ್ಯೆಗಳು ಮುಂದುವರಿದು ದೃಢನಿರ್ಧಾರಗಳು ಸಾಧ್ಯವಾಗುವುದಿಲ್ಲ ಎಂದಿದೆ. ಅದಕ್ಕಾಗಿ ಇಎಸ್ಎ ಆಡಳಿತ ಮತ್ತು ನಿಯಂತ್ರಣಕ್ಕೆ ಒಂದು ಚೌಕಟ್ಟನ್ನು ರೂಪಿಸಿದೆ; ಅದರಂತೆ ನಿರ್ಧಾರ ಕೈಗೊಳ್ಳುವುದು, ಮಾಹಿತಿಸಂಗ್ರಹ-ಪರಿಶೀಲನೆ, ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆಗಳನ್ನು ಬಲಪಡಿಸಬೇಕೆಂದು ಸೂಚಿಸಿದೆ.
ಹಾಲಿ ಸಂಸ್ಥೆಗಳಿಗೆ ಬಲ
ಈಗ ಇರುವ ಸಂಸ್ಥೆಗಳನ್ನು ಬಲಪಡಿಸಿ ಪರಿಣಾಮಕಾರಿಯಾಗಿ ಮಾಡುವುದು ಆದ್ಯತೆಯ ವಿಷಯವಾಗಿದೆ. ಅದಕ್ಕಾಗಿ ಪರಿಸರ ಸಂರಕ್ಷಣೆ-ನಿಯಂತ್ರಣಗಳಿಗೆ ಸಂಬಂಧಿಸಿದ ದೇಶದ ಮತ್ತು ವಿಶೇಷವಾಗಿ ಪಶ್ಚಿಮಘಟ್ಟದ ಸಂಸ್ಥೆಗಳನ್ನು ಬಲಪಡಿಸಬೇಕೆಂದು ವರದಿ ಈ ಕೆಳಗಿನ ಸಲಹೆಗಳನ್ನು ನೀಡಿದೆ:
1) ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿಗಳು: ಪರಿಸರ ಆಡಳಿತದ ಮೂಲ ಸವಲತ್ತಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ತಳಹದಿಯಂತಿವೆ. ಆದರೆ ಈ ಮಂಡಳಿಗಳ ಸಿಬ್ಬಂದಿಗೆ ತರಬೇತಿ, ಹಣ ಒದಗಣೆಯಲ್ಲಿ ಕೊರತೆ ಕಂಡುಬಂದರೆ ಆಡಳಿತದಲ್ಲಿ ಹೊಣೆಗಾರಿಕೆ, ಪಾರದರ್ಶಕತೆಗಳು ಸೊರಗಿವೆ. ಈ ಸಾಂಸ್ಥಿಕ ದೌರ್ಬಲ್ಯಗಳನ್ನು ಕೊನೆಗಾಣಿಸದೆ ನಾವು ಮುಂದುವರಿಯಲು ಅಸಾಧ್ಯ; ಏಕೆಂದರೆ ನಮ್ಮ ಮುಂದಿರುವ ಸವಾಲು ಬಹುದೊಡ್ಡದು.
2) ರಾಜ್ಯ ಅರಣ್ಯ ಇಲಾಖೆಗಳು: ಪಶ್ಚಿಮಘಟ್ಟ ಪ್ರದೇಶದ ರಾಜ್ಯಗಳ ಅರಣ್ಯ ಇಲಾಖೆಗಳನ್ನು ತುರ್ತಾಗಿ ಕ್ರಮಬದ್ಧಗೊಳಿಸಬೇಕು. ಜೀವವೈವಿಧ್ಯದ ಮಹತ್ತ್ವ, ಪರಿಸರ ವ್ಯವಸ್ಥೆ ಸೇವೆಗಳು ಮತ್ತು ಸ್ಥಳೀಯ ಜೈವಿಕ ಸಂಪನ್ಮೂಲಗಳ ಬಗ್ಗೆ ಅವು ಎಚ್ಚರಗೊಳ್ಳಬೇಕು. ಸಂಪರ್ಕ ಮತ್ತು ಮೇಲ್ತನಿಖೆಗೆ ಬೇಕಾದ ಆಧುನಿಕ ಸವಲತ್ತುಗಳನ್ನು ಅವುಗಳಿಗೆ ಒದಗಿಸಬೇಕು. ಇಲಾಖೆಯು ಸಿಬ್ಬಂದಿಗೆ ಬೇಕಾದ ವಿವಿಧ ತರಬೇತಿಗಳನ್ನು ನೀಡಬೇಕು.
3) ರಾಜ್ಯ ಜೀವವೈವಿಧ್ಯ ಪ್ರಾಧಿಕಾರ: ಪಂಚಾಯತ್ ಮಟ್ಟದಲ್ಲಿ ಜೀವವೈವಿಧ್ಯ ನಿರ್ವಹಣಾ (ಬಿಎಂಸಿ) ಸಮಿತಿಗಳನ್ನು ರಚಿಸಬೇಕು; ಶ್ರೀಮಂತ ಜೀವವೈವಿಧ್ಯ ಇರುವ ಕಡೆ ಇದು ಅನಿವಾರ್ಯ. ಹಾಗೆ ರಚನೆಗೊಂಡ ಬಿಎಂಸಿಗಳು ಜನತಾ ಜೀವವೈವಿಧ್ಯ ಪಟ್ಟಿ (ರೆಜಿಸ್ಟರ್)ಯನ್ನು ತಯಾರಿಸಿ ಅದರಲ್ಲಿ ಸ್ಥಳೀಯ ಜೀವವೈವಿಧ್ಯ, ಜೈವಿಕ ಸಂಪನ್ಮೂಲ ಮತ್ತು ಪಾರಂಪರಿಕ ಜ್ಞಾನವನ್ನು ದಾಖಲಿಸಬೇಕು. ಸ್ಥಳೀಯ ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಬಿಎಂಸಿಗಳ ಪಾತ್ರ ಪ್ರಧಾನವಾಗಿದ್ದು, ಸರ್ಕಾರವು ರಾಜ್ಯ ಜೀವವೈವಿಧ್ಯ ಮಂಡಳಿ ಮತ್ತು ಬಿಎಂಸಿಗಳಿಗೆ ಬೇಕಾದ ಹಣವನ್ನು ಒದಗಿಸಬೇಕು.
4) ಪರಿಸರ ಮತ್ತು ಅರಣ್ಯ ಮಂಜೂರಾತಿ: ಅದೇ ವೇಳೆ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಪರಿಸರ ಮತ್ತು ಅರಣ್ಯ ಮಂಜೂರಾತಿ ವ್ಯವಸ್ಥೆಯು ಬಲಗೊಳ್ಳಬೇಕು. ಮಂಜೂರಾಗುವ ಯೋಜನೆಗಳನ್ನು ಸಾರ್ವಜನಿಕರು ಪರಿಶೀಲಿಸುವುದಕ್ಕೆ ಅವಕಾಶವಿರಬೇಕು. ಮಂಜೂರಾದ ಯೋಜನೆಗಳ ಉಸ್ತುವಾರಿ ಕೂಡ ನಡೆಯುತ್ತಿರಬೇಕು; ಪರಿಸರ ಸಂರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಸಲ್ಲದು.
ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ಪರಿಸರ ಸಂಬಂಧಿ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಗಮನಿಸುತ್ತಿರಬೇಕು; ಅವುಗಳಿಗೆ ಅಗತ್ಯವಾದ ಅಧಿಕಾರವನ್ನು ನೀಡಬೇಕು. ವಿವಿಧ ಯೋಜನೆ ಕಾರ್ಯಕ್ರಮಗಳ ಬಗ್ಗೆ ರಾಜ್ಯಸರ್ಕಾರಗಳಿಗೆ ಸಲಹೆ-ಸೂಚನೆ ನೀಡಬೇಕು. ಇಎಸ್ಎ ನಕಾಶೆಯು ಸಾರ್ವಜನಿಕರಿಗೆ ಸದಾ ಲಭ್ಯವಿರಬೇಕು ಮುಂತಾದ ಸಲಹೆಗಳನ್ನು ಸಮಿತಿ ನೀಡಿದೆ.
ಅಂತಿಮವಾಗಿ ಸಾರರೂಪವಾದ ಹಲವು ಶಿಫಾರಸುಗಳನ್ನು ಕಸ್ತೂರಿರಂಗನ್ ಸಮಿತಿಯು ಮಾಡಿದೆ:
1) ಪಶ್ಚಿಮಘಟ್ಟದ ಇಎಸ್ಎ ಪ್ರದೇಶದ ಬಗ್ಗೆ ಕೇಂದ್ರಸರ್ಕಾರ ಕೂಡಲೆ ಅಧಿಸೂಚನೆಯನ್ನು ಹೊರಡಿಸಬೇಕು. ಉಳಿದಿರುವ ಜೀವವೈವಿಧ್ಯ ಸಮೃದ್ಧ ಪ್ರದೇಶಗಳ ರಕ್ಷಣೆಗೆ ತುರ್ತು ಕ್ರಮ ಅಗತ್ಯ; ಗಾಡ್ಗೀಳ್ ಸಮಿತಿ ನೇಮಕಕ್ಕೆ ಅದೇ ಕಾರಣವಿತ್ತು; ನಮ್ಮ ಸಮಿತಿಯೂ ಅದನ್ನೇ ಹೇಳುತ್ತಿದೆ.
2) ಅಭಿವೃದ್ಧಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ರಾಜ್ಯಸರ್ಕಾರಗಳು ತಕ್ಷಣ ಕ್ರಮಕೈಗೊಳ್ಳಬೇಕು; ಇಎಸ್ಎದ ಸುಸ್ಥಿರ ಅಭಿವೃದ್ಧಿಯಾಗಬೇಕು. ಪಶ್ಚಿಮಘಟ್ಟದ ಜಿಲ್ಲೆಗಳಲ್ಲಿ ಬರುವ ಯೋಜನೆಗಳು ತಾವು ಇಎಸ್ಎದಿಂದ ಎಷ್ಟು ದೂರದಲ್ಲಿದ್ದೇವೆ ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನೀಡಬೇಕು.
3) ಯೋಜನಾ ಆಯೋಗವು ‘ಪಶ್ಚಿಮಘಟ್ಟ ಸುಸ್ಥಿರ ಅಭಿವೃದ್ಧಿ ವಿಶೇಷ ನಿಧಿ’ಯನ್ನು ಸ್ಥಾಪಿಸಬೇಕು. ಆ ಹಣವನ್ನು ಪರಿಣಾಮಕಾರಿ ಇಎಸ್ಎ ಸ್ಥಾಪನೆ ಮತ್ತು ಅಲ್ಲಿ ಕಾಡು ಬೆಳೆಸುವವರಿಗೆ ಪ್ರೋತ್ಸಾಹಕ ನೀಡುವುದಕ್ಕೆ ಬಳಸಬೇಕು.
4) ಪಶ್ಚಿಮಘಟ್ಟದ ಪರಿಸರ ವ್ಯವಸ್ಥೆ ಮತ್ತಿತರ ಸೇವಾ ಪಾವತಿಗೆ ಹಣ ಒದಗಿಸುವ ಬಗ್ಗೆ 14ನೇ ಹಣಕಾಸು ಆಯೋಗವು ಪರಿಶೀಲಿಸಬೇಕು. ಪರಿಸರ ಸಂರಕ್ಷಣೆಗೆ ಆ ಹಣ ಹೇಗೆ ನೇರವಾಗಿ ಸಿಗಬಹುದು ಎಂಬ ಬಗ್ಗೆ ಕ್ರಮಕೈಗೊಳ್ಳಬೇಕು.
5) ಪಶ್ಚಿಮಘಟ್ಟಕ್ಕೆ ಸಂಬಂಧಿಸಿ ಅರಣ್ಯ-ಪರಿಸರ ಸಚಿವಾಲಯವು ನಿರ್ಧಾರದ ಬೆಂಬಲ ಮತ್ತು ಉಸ್ತುವಾರಿ ಕೇಂದ್ರವನ್ನು ಸ್ಥಾಪಿಸಬೇಕು. ಅದರ ಮೂಲಕ ಇಡೀ ಪ್ರದೇಶದ ಪರಿಸರ ಪರಿಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತಾಗಬೇಕು.
6) ಪರಿಸರ ಸೂಕ್ಷ್ಮಪ್ರದೇಶದ (ಇಎಸ್ಎ) ನಕಾಶೆಯು ಸಾರ್ವಜನಿಕರಿಗೆ ಲಭ್ಯವಿರಬೇಕು; ಅದರಿಂದ ಪಾರದರ್ಶಕತೆ ಸಾಧ್ಯ.
7) ಪಶ್ಚಿಮಘಟ್ಟದ ಇಎಸ್ಎದಿಂದ 10 ಕಿ.ಮೀ. ವ್ಯಾಪ್ತಿಯೊಳಗೆ ಬರುವ ಎಲ್ಲ ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾತಿ ನೀಡುವಾಗ 2006ರ ‘ಪರಿಸರ ಪರಿಣಾಮ ಸಮೀಕ್ಷೆ’ (ಇಐಎ) ಯನ್ನು ತಪ್ಪದೆ ಪಾಲಿಸಬೇಕು.
8) ಇಎಸ್ಎ ವ್ಯಾಪ್ತಿಯೊಳಗೆ ಬರುವ ಗ್ರಾಮಗಳ ಭವಿಷ್ಯದ ಯೋಜನೆಗಳು ಮುಂಚಿತವಾಗಿ ಮಂಜೂರಾತಿ ಪಡೆದುಕೊಳ್ಳಬೇಕು; ಗ್ರಾಮಸಭಾದಿಂದ ಅವು ನಿರಾಕ್ಷೇಪವನ್ನು ಪಡೆದಿರಬೇಕು. ಅರಣ್ಯಹಕ್ಕು ಕಾಯ್ದೆಯನ್ವಯ ಮುಂಚಿತವಾಗಿ ಒಪ್ಪಿಗೆ ಪಡೆಯುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಪಶ್ಚಿಮಘಟ್ಟ ಪ್ರದೇಶಕ್ಕೆ ನಿರ್ಧಾರದ ಬೆಂಬಲ ಮತ್ತು ಉಸ್ತುವಾರಿ ಕೇಂದ್ರವನ್ನು ಸ್ಥಾಪಿಸಬೇಕೆಂದು ಕೂಡ ಕಸ್ತೂರಿರಂಗನ್ ಸಮಿತಿಯು ಸೂಚಿಸಿದೆ. ಅದರಿಂದ ಜ್ಞಾನಸಂಪತ್ತಿನ ಜಾಲವನ್ನು ತಯಾರಿಸಬಹುದು. ಆ ಮೂಲಕ ವೈಜ್ಞಾನಿಕ ಸಂಸ್ಥೆಗಳ ಸಂಪರ್ಕ, ವೈಜ್ಞಾನಿಕ ಜ್ಞಾನದ ವಿನಿಮಯ ಸಾಧ್ಯವಾಗುತ್ತದೆ.
ಸಹನೆ ಅಸಾಧ್ಯ
“ಅಭಿವೃದ್ಧಿ ಯೋಜನೆಗಳು ಮತ್ತು ನಗರಗಳ ಬೆಳವಣಿಗೆಯಿಂದ ಪಶ್ಚಿಮಘಟ್ಟದ ಪರಿಸರಕ್ಕೆ ಭಾರೀ ಪ್ರತಿಕೂಲತೆ ಎದುರಾಗಿದೆ. ಅದರಿಂದಾಗಿ ಗಣಿಗಾರಿಕೆ ಹಾಗೂ ಮಾಲಿನ್ಯಕಾರಿ ಕೈಗಾರಿಕೆಗಳ ವಿಷಯದಲ್ಲಿ ಯಾವುದೇ ಸಹನೆ ಸಾಧ್ಯವಿಲ್ಲ. ಅನುಮತಿಯಿಲ್ಲದ ಚಟುವಟಿಕೆಗಳ ಪಟ್ಟಿಯನ್ನು ನಾವು ನೀಡಿದ್ದೇವೆ. ಅದನ್ನು ಪಾಲಿಸಿದರೂ ಕೂಡ ‘ಅಭಿವೃದ್ಧಿ’ಯ ದುಷ್ಪರಿಣಾಮಗಳನ್ನು ಪೂರ್ತಿಯಾಗಿ ತಡೆಯಲು ಅಸಾಧ್ಯ. ಹಲವು ಸಲ ಯಾರ ಅನುಕೂಲಕ್ಕಾಗಿ ನಾವು ನಿಷೇಧಗಳನ್ನು ಮಾಡಿದ್ದೇವೆಯೋ ಅವರಿಗೇ ಮಾರಕ ಆಗುವುದಿದೆ. ಆದ್ದರಿಂದ ಸಮತೋಲನದ ದೃಷ್ಟಿಯ ಬಗ್ಗೆ ನಾವು ಒತ್ತು ನೀಡಿದ್ದೇವೆ. ತುಂಬ ಹಾನಿಕರವಾದ ಚಟುವಟಿಕೆಗಳು ಬೇಡ. ಅದೇ ವೇಳೆ ಸ್ಥಳೀಯರ ಜೀವನ ಮತ್ತು ಆರ್ಥಿಕತೆಗೆ ಪೂರಕವಾದ ಯೋಗ್ಯ ಅಭಿವೃದ್ಧಿ ಪ್ರಕ್ರಿಯೆ ಇರಲಿ ಎಂದು ನಾವು ಸೂಚಿಸಿದ್ದೇವೆ” ಎಂದು ಕಸ್ತೂರಿರಂಗನ್ ಸಮಿತಿ ಹೇಳಿದೆ.
“ಕೆಲವು ಕಡೆ ಜನ ಮತ್ತು ನಿಸರ್ಗದ ನಡುವೆ ಸಾಮರಸ್ಯ ಇರುವುದರಿಂದ ಅಲ್ಲಿ ಹಸಿರು ಬೆಳೆಸಲು ಪ್ರೋತ್ಸಾಹಕ ನೀಡಬೇಕು. ಏಕೆಂದರೆ ಹಸಿರು ಬೆಳೆಸುವ ಕಾರ್ಯತಂತ್ರಗಳ ಮೇಲೆ ಭವಿಷ್ಯ ನಿಂತಿದೆ; ಪಶ್ಚಿಮಘಟ್ಟದ ನಿಸರ್ಗಸಂಪತ್ತನ್ನು ಉಳಿಸಿ ಬೆಳೆಸಿಕೊಂಡು ಉಜ್ಜ್ವಲ ಆರ್ಥಿಕತೆಯನ್ನು ಕಟ್ಟಬಹುದು. ಭವಿಷ್ಯದ ಯೋಜನೆ-ನಿಯಂತ್ರಣಗಳನ್ನು ನಿರಂತರವಾಗಿ ಅಪ್ಡೇಟ್ ಮಾಡಬೇಕು. ಈ ಬಹು ಆಯಾಮದ ಘಟ್ಟದ ಬಗ್ಗೆ ನಮ್ಮ ತಿಳಿವಳಿಕೆಯನ್ನು ಬೆಳೆಸುತ್ತ ಹೋಗಬೇಕು; ಇದೊಂದು ತುಂಬ ಸಂಕೀರ್ಣವಾದ ವ್ಯವಸ್ಥೆ. ಅಭಿವೃದ್ಧಿ ಸಂರಕ್ಷಣೆಯ ಜೊತೆಗೆ ಸ್ಥಳೀಯರ ಜೀವನೋಪಾಯಕ್ಕೆ ನಾವು ಒತ್ತು ನೀಡಿದ್ದೇವೆ” ಎಂದು ಕಸ್ತೂರಿರಂಗನ್ ಸಮಿತಿ ತಿಳಿಸಿದೆ.
ಗಾಡ್ಗೀಳ್ ಸಮಿತಿಗೆ ಸಾಕಷ್ಟು ಭಿನ್ನವಾದ ದಾರಿಯನ್ನು ಕಸ್ತೂರಿರಂಗನ್ ಸಮಿತಿಯು ಹಿಡಿದಿರುವುದು ನಿಜ. ಆದರೆ ಗಣಿಗಾರಿಕೆ, ಕಲ್ಲು ಕಡಿಯುವುದು, ಮರಳು ಎತ್ತುವುದು, ಕಾಡು ಕಡಿಯುವುದು ಇಂತಹ ವಿಷಯಗಳಲ್ಲಿ ಅನಿವಾರ್ಯವಾಗಿ ಶೂನ್ಯ ಅಸಹನೆ ಧೋರಣೆಯನ್ನು ತಳೆದಿದೆ. ಸಂಬಂಧಪಟ್ಟ ರಾಜ್ಯಸರ್ಕಾರಗಳಿಗೆ ವರದಿಯನ್ನು ವಿರೋಧಿಸಲು ಅದು ಧಾರಾಳ ಸಾಕು. ಏಕೆಂದರೆ ಚುನಾವಣೆಯಲ್ಲಿ ಮರಗಳು ಬಂದು ಓಟು ಹಾಕುವುದಿಲ್ಲ, ಅಲ್ಲವೆ? (ಮುಗಿಯಿತು