ಎಲ್.ವಿ. ಶಾಂತಕುಮಾರಿ
ಕಾಳ ಕತ್ತಲ ಹೃದಯವ ನಾದಿ ನಾದಿ ನಾದಿ,
ಬೆಳಕಿನೆಳೆಗಳ ಹಿಡಿದೆಳೆತಂದು,
ಇಲ್ಲಿ ನಿಲ್ಲಿಸುವೆ ಸೂರ್ಯ ಚಂದ್ರ ತಾರೆಗಳ.
ಬಾಲರವಿ ಎಳೆಬೆಳಕು, ನಡುಹಗಲ ಸುಡುಬೆಳಕು,
ಇಳಿಸಂಜೆ ಸೂರ್ಯ ಹರಡುವ ರಂಗಿನಾರತಿ ಬೆಳಕು,
ಇರುಳ ಚಂದ್ರನ ಬೆಳಕು, ಮಿನುಗು ತಾರೆಯ ಬೆಳಕು,
ಮುಗಿಲ ಮರೆಯಿಂದೆಸೆವ ಸಿಡಿಲು-ಮಿಂಚಿನ ಬೆಳಕು,
ಕಾಳ್ಗಿಚ್ಚು ಜ್ವಾಲಾಮುಖಿ ಹಣತೆ ದೀಪಗಳ ಬೆಳಕು,
ಹೇಗೆ ಮೂಡಿಸುವೆ ತಾಯೆ ಬೆಳಕಿನಚ್ಚರಿಯನೀ
ಜಗದೊಳಗೆ ಅರೆಗಳಿಗೆಯಲಿ?
ಕಾರ್ಗಲ್ಲಿನೆದೆಯಿಂದ ಸೆಳೆ ಸೆಳೆದು ನೀರ ಹನಿಗಳ
ಸಾಗರ ನದನದಿಗಳ ಅರೆನಿಮಿಷದಲ್ಲಿ ನಿರ್ಮಿಸುವೆ,
ಸಾವಿರದ ಗಿರಿ ಗಹ್ವರ ಲೆಕ್ಕವಿರದ ತರು ಮರಗಳ
ಬೆಳೆಸಿ ಶೋಭಿಸುವೆ ಸಸ್ಯಶ್ಯಾಮಲೆಯಾಗಿ.
ಎಲೆ ಎಲೆಗು ಗಿಡ ಗಿಡಕು
ಹೂ ಹೂವಿಗು ಹಣ್ಣು ಹಣ್ಣಿಗು
ಭಿನ್ನಭಿನ್ನ ರೂಪ ರಸ ಗಂಧ ಬಣ್ಣ.
ಹೇಗೆ ಸೃಷ್ಟಿಸುವೆ ತಾಯೆ ನಿನ್ನಭಿನ್ನತೆಯಲಿಂಥ ಭಿನ್ನತೆಯ?
ಕಣ ಕಣಗಳನೆಳೆತಂದು ಶರಧಿಯಾಳದಿಂದ
ಜೀವಜಾಲವ ಜರಡಿಯಾಡುವೆ,
ಮರಳಿನಲಿ ಮಕರ ಕೂರ್ಮ ತತ್ತಿಗಳ,
ನೀರಿನಲಿ ಮೀನು ಮೊಸಳೆ ತಿಮಿಂಗಿಲಗಳ,
ಹಕ್ಕಿಗಳಿಗಿಟ್ಟು ಹಾರು ರೆಕ್ಕೆಗಳ,
ಅರೆಕ್ಷಣ ಬಿಡದೆ ಪೋಷಿಸುವೆ.
ಇರುವೆ, ನೊಣ, ಸೊಳ್ಳೆ, ದುಂಬಿ,
ಕರಡಿ, ಸಿಂಹ, ಜಿಂಕೆ, ತೋಳ, ಆನೆ, ಹಸು
ಎಲ್ಲ ಜೀವಗಳಲ್ಲಿ ತುಂಬಿರುವೆ ನಿನ್ನದೇ ಚೈತನ್ಯ
ಮನುಜನೆದೆಯೊಳಗೆ ತುಂಬಿರುವೆ ಅರಿವು-ಅಜ್ಞಾನ.