ಪಕ್ಷಿಗಳ ದೇಹದ ಗಾತ್ರಕ್ಕೆ ಅನುಗುಣವಾಗಿ, ಅತ್ಯಂತ ಕಡಮೆ ತೂಕದ ಪುಟ್ಟ ಅಲ್ಯೂಮಿನಿಯಂನ ಸಂಕೇತಾಕ್ಷರ ಕೆತ್ತಿದ `ರಿಂಗ್’ ಮತ್ತು `ಟ್ಯಾಗ್’ ತೊಡಿಸಿ, ಎಲ್ಲಿಯೋ ಯಾರಿಗೋ ಈ ಹಕ್ಕಿ ಗೋಚರಿಸಿ, ನಮಗೆ ಚಿತ್ರಸಮೇತ ಸಂದೇಶ ಕಳುಹಿಸಿದಾಗ, ಆ ಪುಟ್ಟ ಹಕ್ಕಿಯ ವಲಸೆಯನ್ನು ವೈಜ್ಞಾನಿಕವಾಗಿ ಅಭ್ಯಸಿಸಲು ಸಾಧ್ಯ.
ಥೇಟ್ ಪುಟ್ಟ ಶೀಷೆಯಲ್ಲಿ ಸಂದೇಶ ತೇಲಿಬಿಟ್ಟಂತೆ!
ವಲಸೆ ಹಕ್ಕಿಗಳ ವಿಳಾಸ ಹುಡುಕುತ್ತ..
ಉಂಗುರಗಳ ತೊಟ್ಟ ರೆಕ್ಕೆಯ ಮಿತ್ರರ ಪಾದಾನ್ವೇಷಣೆ!
ಹಕ್ಕಿಗಳ ಲೋಕದೊಳಗೆ,
ರೆಕ್ಕೆ ಮೂಡುವುದೆನಗೆ;
ಹಾರುವುದು ಹೃತ್ಪಕ್ಷಿ
ಲೋಕಗಳ ಕೊನೆಗೆ!
– ಕುವೆಂಪು
ಮುಂಬಯಿ (ಥಾಣೆ ಗ್ರೇಟರ್ ಫ್ಲೆಮಿಂಗೋ ಕ್ರೀಕ್ ರಿಸರ್ವೈಯರ್): ನಾನು ಚಿಕ್ಕವನಾಗಿದ್ದಾಗ, ಸುಮಾರು ೨೦ ವರ್ಷಗಳ ಹಿಂದೆ, ನಮ್ಮ ಮನೆಯಲ್ಲಿ ಅಳವಟ್ಟ ಹಿರಿಯರ ಭಾವಚಿತ್ರಗಳ ಫ್ರೇಮ್ಗಳ ಹಿಂದೆ, ತಾರಸಿ ಹೆಂಚಿನ ಬುಡದಲ್ಲಿ, ಸಾರುವೆ ಕಟ್ಟಿ ಬಿಟ್ಟಿದ್ದ ಇಟ್ಟಂಗಿ ಖಾನೆಯಲ್ಲಿ ಗುಬ್ಬಚ್ಚಿಗಳು ಆಗಾಗ ಗೂಡು ಕಟ್ಟುತ್ತಿದ್ದವು. ಅಮ್ಮ-ಅವ್ವ ಅಂಗಳದಲ್ಲಿ ಕಾಳು ಹಸನು ಮಾಡುತ್ತಿದ್ದರು. ಅವರ ಕೈ ಬಳೆ ಸದ್ದಿಗೆ ಓಡೋಡಿ ಬಂದು, ಸಾಣಿಗೆ-ಮೊರದ ತುದಿಯಲ್ಲಿ ಹೆದರದೇ ಕುಳಿತು, ಕಾಳು ಹೆಕ್ಕಿ ತಮ್ಮ ಗೂಡಿಗೆ ಒಯ್ಯುತ್ತಿದ್ದವು!
ಮನೆ ಅಂಗಳದ ಈ ಗುಬ್ಬಚ್ಚಿ ಮರಿಗಳನ್ನು ಹಿಡಿದು ಸಾಕುವ ಉಮ್ಮೇದಿಯೂ ನನಗಿತ್ತು. ಹಾಗೆ ಬಂಧಿಸಿದ ಮರಿಗಳನ್ನು ಇತರ ಮರಿಗಳಿಂದ ಗುರುತಿಸಲು ಅನುಕೂಲವಾಗುವಂತೆ, ಮರಿ ಗುಬ್ಬಚ್ಚಿಯ ಕಾಲಿಗೆ ಬಣ್ಣದ ಪಟ್ಟಿ ಅಥವಾ ರೇಡಿಯಂ ಹಚ್ಚುತ್ತಿದ್ದೆ!
ಧಾರವಾಡದ ಏಕೈಕ ನದಿ ಶಾಲ್ಮಲಾ ತಟದಲ್ಲಿ ಕುಳಿತು, ಸಂದೇಶ ಬರೆದು, ಶೀಷೆಯೊಂದರಲ್ಲಿ ಹಾಕಿ, ಬಿರಡೆ ಮುಚ್ಚಿ ತೇಲಿಬಿಡುತ್ತಿದ್ದೆ: ಎಂದೋ ಒಮ್ಮೆ, ಯಾರಿಗೋ ಈ ಪುಟ್ಟ ಬಾಟಲಿ ಸಿಕ್ಕು, ಅವರೂ ಒಂದು ಸಂದೇಶ ಬರೆದು, ಮರಳಿ ಕಳುಹಿಸಬಹುದು ಎಂಬ ಆಸೆಯಿಂದ!
ಬಾಲ್ಯದ ಈ ಎರಡು ತುಂಟಾಟಗಳು, ನನ್ನನ್ನು ಪಕ್ಷಿಗಳ ವೀಕ್ಷಣೆ, ಅವುಗಳ ಹಾರಾಟ ಮತ್ತು ವಲಸೆ ಪಥದ ಬಗ್ಗೆ ಇನ್ನಿಲ್ಲದ ಕುತೂಹಲ ಮೂಡಿಸಿತು. ಹೀಗಾಗಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸಹಯೋಗದಲ್ಲಿ, ಅವುಗಳ ಕುರಿತು ಹೆಚ್ಚಿನ ಅಧ್ಯಯನ, ಸಂಶೋಧನೆಯಲ್ಲಿ ನಾನು ತೊಡಗಿಕೊಂಡೆ.
ಪಕ್ಷಿಗಳ ದೇಹದ ಗಾತ್ರಕ್ಕೆ ಅನುಗುಣವಾಗಿ, ಅತ್ಯಂತ ಕಡಮೆ ತೂಕದ ಪುಟ್ಟ ಅಲ್ಯೂಮಿನಿಯಂನ ಸಂಕೇತಾಕ್ಷರ ಕೆತ್ತಿದ ‘ರಿಂಗ್’ ಮತ್ತು ‘ಟ್ಯಾಗ್’ ತೊಡಿಸಿ, ಎಲ್ಲಿಯೋ ಯಾರಿಗೋ ಈ ಹಕ್ಕಿ ಗೋಚರಿಸಿ, ನಮಗೆ ಚಿತ್ರ ಸಮೇತ ಸಂದೇಶ ಕಳುಹಿಸಿದಾಗ, ಆ ಪುಟ್ಟ ಹಕ್ಕಿಯ ವಲಸೆ ವೈಜ್ಞಾನಿಕವಾಗಿ ಅಭ್ಯಸಿಸಲು ಸಾಧ್ಯ. ಥೇಟ್ ಪುಟ್ಟ ಶೀಷೆಯಲ್ಲಿ ಸಂದೇಶ ತೇಲಿಬಿಟ್ಟಂತೆ! ಈಗ ಸಾಮಾಜಿಕ ಮಾಧ್ಯಮಗಳಾದ ಟ್ವಿಟ್ಟರ್ ಮತ್ತು ಫೇಸ್ಬುಕ್ನಲ್ಲಿ ಹಲವು ಸಮುದಾಯ ಗುಂಪುಗಳು ಈ ಮಾಹಿತಿ ವಿನಿಮಯಿಸಿಕೊಳ್ಳಲು ಸಕ್ರಿಯವಾಗಿರುವುದು, ಪಕ್ಷಿಗಳ ಅಧ್ಯಯನ ನಿರತರಿಗೆ ತುಂಬ ಅನುಕೂಲ.
‘ಟ್ಯಾಗಿಂಗ್’ ಮತ್ತು ‘ರಿಂಗಿಂಗ್’ ಮಹತ್ತ್ವ
ಪಕ್ಷಿಗಳ ಚಲನವಲನ ಮತ್ತು ವಲಸೆಯ ಗುಟ್ಟುಗಳನ್ನು ಅರಿತುಕೊಳ್ಳಲು ಪಕ್ಷಿಶಾಸ್ತ್ರಜ್ಞರು ಅನುಭವದಿಂದ ಕಲಿತ ‘ಟ್ಯಾಗಿಂಗ್’ ಮತ್ತು ‘ರಿಂಗಿಂಗ್’ ಮಹತ್ತ್ವದ ಉಪಕರಣ.
ಪಕ್ಷಿಗಳ ‘ಟ್ಯಾಗಿಂಗ್’ ಪದ್ಧತಿ ಮತ್ತು ಹೊಸ ತಂತ್ರಜ್ಞಾನ ಆವಿಷ್ಕಾರಗೊಂಡಂತೆ ‘ಕಲರ್ ಬ್ಯಾಂಡಿಂಗ್’ (ಪ್ಲಾಸ್ಟಿಕ್ ರಿಂಗ್ ಕಾಲಿಗೆ ತೊಡಿಸುವ ವಿಧಾನ), ‘ಫ್ಲ್ಯಾಗಿಂಗ್’ (ಬಣ್ಣಗಳ ವಿಶೇಷ ಪ್ಲಾಸ್ಟಿಕ್ ಫ್ಲ್ಯಾಗ್ ಕಾಲಿಗೆ ತೊಡಿಸುವ ವಿಧಾನ), ಕುತ್ತಿಗೆಗೆ ಕಾಲರ್ ಅಳವಡಿಸುವ, ರೆಕ್ಕೆಗಳಿಗೆ ಅಧಿಕೃತ ಸಂಖ್ಯೆಯ ‘ವಿಂಗ್ ಟ್ಯಾಗ್ಸ್’, ‘ಜಿಯೋ ಲೊಕೇಟರ್ಸ್’ (ಪುಟ್ಟ ಟ್ರಾನ್ಸ್ಮಿಟರ್ ಅಳವಟ್ಟ ಪಕ್ಷಿಯ ವಲಸೆ ಮತ್ತು ಆವಾಸ ಕುರಿತ ನಿಖರ ಮಾಹಿತಿ ಕಾಲಕಾಲಕ್ಕೆ ಸಂಗ್ರಹಿಸಿ ನೀಡಬಲ್ಲ ಕ್ಷಮತೆ) ಇಲ್ಲಿ ಪಕ್ಷಿಗಳನ್ನು ಮತ್ತೊಮ್ಮೆ ಬಂಧಿಸಿ, ಮಾಹಿತಿ ಪಡೆಯುವ ಆವಶ್ಯಕತೆ ಇದೆ.
ಪ್ಲಾಟ್ಫಾರ್ಮ್ ಟರ್ಮಿನಲ್ ಟ್ರಾನ್ಸ್ ಮಿಟರ್ಸ್ – ಪಿಟಿಟಿ, ಸೌರವಿದ್ಯುತ್ ಚಾಲಿತ ಬ್ಯಾಟರಿಯುಳ್ಳ ಈ ಪುಟ್ಟ ಯಂತ್ರ. ಅಳವಟ್ಟ ಹಕ್ಕಿಯ ಪಕ್ಕಾ ಸ್ಥಳ, ಹಾರುತ್ತಿರುವ ವೇಗ, ಎತ್ತರ ಮತ್ತು ಆವಾಸದ ಕುರಿತು ವಿವರವಾದ ಮಾಹಿತಿ ಒದಗಿಸುವ ತುಂಬಾ ವೆಚ್ಚದಾಯಕ ಪದ್ಧತಿಯೂ ಪ್ರವರ್ಧಮಾನಕ್ಕೆ ಬಂದಿದೆ.
ಇಂದಿಗೂ ಪಕ್ಷಿಗಳ ‘ಟ್ಯಾಗಿಂಗ್’ ಪದ್ಧತಿಗಳಲ್ಲಿ ‘ರಿಂಗಿಂಗ್’ ಅತಿ ಕಡಮೆ ವೆಚ್ಚದ ವಿಧಾನ. ಆದರೆ, ಬಾಕಿ ವಿಧಾನಗಳೂ ಚಾಲ್ತಿಯಲ್ಲಿರಲು ಕಾರಣ, ಈ ಸಾಂಪ್ರದಾಯಿಕ ರಿಂಗಿಂಗ್ ಪದ್ಧತಿಗಿಂತಲೂ ‘ಅಡ್ವಾನ್ಸ್ಡ್’ ಮತ್ತು ನಿಖರ ಡೇಟಾ ಸಂಸ್ಕರಣೆಯ ಕ್ಷಮತೆಯುಳ್ಳದ್ದಕ್ಕಾಗಿ.
‘ಕಾಲರ್ ಬ್ಯಾಂಡ್’ನ್ನು ಸಾಮಾನ್ಯವಾಗಿ ಬಾತು, ಹೆಬ್ಬಾತು ಮತ್ತು ಹಂಸ ಪಕ್ಷಿಗಳಿಗೆ ತೊಡಿಸಲಾಗುತ್ತದೆ. ಕಾರಣ ಪುನರಪಿ ವೀಕ್ಷಿಸಲು ‘ರಿಸೈಟಿಂಗ್’ ಮತ್ತು ಪುನಃ ಬಂಧಿಸದೇ ಪರೀಕ್ಷಿಸಲು ಸಹಕಾರಿ ವಿಧಾನ. ಹದ್ದು, ರಣಹದ್ದುಗಳ ಪ್ರಜಾತಿಗೆ ಸೇರಿದ ಹಕ್ಕಿಗಳು ತುಂಬ ಎತ್ತರದಲ್ಲಿ ಹಾರುವುದರಿಂದ, ಅವುಗಳನ್ನು ಮತ್ತೊಮ್ಮೆ ಬಂಧಿಸುವುದು ಕಷ್ಟಸಾಧ್ಯ ಸಹ. ಹೀಗಾಗಿ, ರೆಕ್ಕೆಗಳಿಗೆ ಅಳವಟ್ಟ ‘ವಿಂಗ್ ಟ್ಯಾಗ್ಸ್’ ಬಳಸುವುದು ಪ್ರಚಲಿತ ಪದ್ಧತಿ.
ತುಂಬಾ ಉದ್ದ ಮತ್ತು ನೀಳಕಾಲುಗಳುಳ್ಳ ‘ವೇರ್ಸ್’ ಪಕ್ಷಿಗಳಿಗೆ, ‘ಫ್ಲ್ಯಾಗ್ಸ್’ ಮತ್ತು ‘ಕಲರ್ ಬ್ಯಾಂಡಿAಗ್’ ಅಳವಡಿಸುವುದು ವೀಕ್ಷಣೆ ಮತ್ತು ಛಾಯಾಚಿತ್ರಗಳಲ್ಲಿ ದಾಖಲಿಸಲು ಅನುಕೂಲ. ಈ ಬ್ಯಾಂಡ್ಗಳು ವಿಶೇಷ ಸಂಕೇತಾಕ್ಷರ ‘ಆಲ್ಫಾಬೆಟಿಕ್’ ಮತ್ತು ಸಂಖ್ಯೆ ‘ಆಲ್ಫಾನ್ಯುಮೆರಿಕ್’ಗಳನ್ನು ಹೊಂದಿದ್ದು, ವಿಶಿಷ್ಟವಾದ ಬಣ್ಣಗಳ ‘ಕಾಂಬಿನೇಷನ್’ ವಿಧಾನ ಹೊಂದಿರುತ್ತವೆ.
ಕಾರಣ, ಆ ಹಕ್ಕಿ ಹೊಂದಿರುವ ಬ್ಯಾಂಡ್ ಮೇಲೆ ನಮೂದಿತವಾದ ಸಂಖ್ಯೆಯನ್ನು ಓದಲು ಅಥವಾ ದಾಖಲಿಸಲು ಸಾಧ್ಯವಾಗದಿದ್ದರೂ, ಕಲರ್ ಬ್ಯಾಂಡ್ ದೆಸೆಯಿಂದ ಜಗತ್ತಿನ ಯಾವ ಭಾಗದಲ್ಲಿ ಮತ್ತು ಯಾವ ವರ್ಷ ಟ್ಯಾಗ್ ಅಥವಾ ಬ್ಯಾಂಡ್ ಅಳವಡಿಸಲಾಗಿತ್ತು ಎಂದು ಸುಲಭವಾಗಿ ಪಕ್ಷಿ ವೀಕ್ಷಕರು ಗುರುತಿಸಬಹುದು.
‘ಬರ್ಡ್ ಬ್ಯಾಂಡಿಂಗ್ ಪ್ರೋಟೋಕಾಲ್’
ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿತ ‘ಬರ್ಡ್ ಬ್ಯಾಂಡಿಂಗ್ ಪ್ರೋಟೋಕಾಲ್’ ಜಾರಿಯಲ್ಲಿದ್ದು, ಪ್ರತಿಯೊಂದು ದೇಶಕ್ಕೆ ತನ್ನದೇ ಆದ ‘ಬರ್ಡ್ ಬ್ರ್ಯಾಡಿಂಗ್ ಕಲರ್ ಕಾಂಬಿನೇಷನ್ ಕೋಡ್’ ಇರುವುದರಿಂದ ವಲಸೆ ಪಕ್ಷಿಗಳನ್ನು ಸುಲಭವಾಗಿ ಗುರುತಿಸಲು ಸಹಕಾರಿ.
ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿ.ಎನ್.ಎಚ್.ಎಸ್.), ಮುಂಬಯಿ, ಸ್ವಾತಂತ್ರ್ಯಪೂರ್ವದಿAದಲೂ, ಸುಮಾರು ೧೯೨೭ರಿಂದ ಭಾರತದಾದ್ಯಂತ ಪಕ್ಷಿಗಳಿಗೆ ‘ರಿಂಗಿಂಗ್’ ಮತ್ತು ‘ಟ್ಯಾಗಿಂಗ್’ ಜೊತೆ ‘ಮಾರ್ಕಿಂಗ್’ ಮಾಡುತ್ತ ಬಂದಿದೆ.
ಇಲ್ಲಿಯವರೆಗೆ ಸುಮಾರು ೮ ಲಕ್ಷಕ್ಕೂ ಅಧಿಕ ಹಕ್ಕಿಗಳಿಗೆ ಸೊಸೈಟಿಯ ವಿಜ್ಞಾನಿಗಳು ‘ಸೆಟಲೈಟ್ ಟ್ರ್ಯಾಕಿಂಗ್’ ಸೇರಿದಂತೆ ವಿವಿಧ ರೀತಿಯ ಪಟ್ಟಿಗಳನ್ನು ಹಕ್ಕಿಗಳಿಗೆ ತೊಡಿಸಿ, ಅಭ್ಯಸಿಸುತ್ತಿದ್ದಾರೆ.
ಈ ವೈಜ್ಞಾನಿಕ ಅಧ್ಯಯನಗಳು ವಲಸೆ ಹಕ್ಕಿಗಳ ಹುಟ್ಟು, ವಲಸೆ ಮತ್ತು ವಲಸೆ ಪಥಗಳ ಕುರಿತು ಮಹತ್ತ್ವದ ಮಾಹಿತಿಯ ಸಂಗ್ರಹ ಮತ್ತು ವಿಶ್ಲೇಷಣೆಗೆ ಸಹಕಾರಿಯಾಗಿವೆ. ಭಾರತ ಉಪಖಂಡಕ್ಕೆ ಚಳಿಗಾಲದಲ್ಲಿ ವಲಸೆ ಬರುವ ಅನೇಕ ವಿಶಿಷ್ಟ ಪಕ್ಷಿಗಳ ದಾಖಲೆಗೆ ಈ ಅಧ್ಯಯನ ಮುನ್ನುಡಿ ಬರೆದಿದೆ.
ಬಿ.ಎನ್.ಎಚ್.ಎಸ್. ಈವರೆಗೆ ಅಳವಡಿಸಿದ ವಿವಿಧ ಪಟ್ಟಿಗಳನ್ನು ಹೊಂದಿದ ಸಾವಿರಾರು ಹಕ್ಕಿಗಳು ಜಗತ್ತಿನ ಐದು ಖಂಡಗಳ ೨೯ ರಾಷ್ಟçಗಳಲ್ಲಿ ಕಾಣಸಿಕ್ಕ ಬಗ್ಗೆ ವರದಿಯಾಗಿವೆ.
‘ಫೈಂಡಿಂಗ್ ಏವಿಯನ್ ನೆಮೋಸ್’
ಸಾವಿರಾರು ವಲಸೆ ಹಕ್ಕಿಗಳ ಗುಂಪಿನಲ್ಲಿ, ‘ರಿಂಗ್’ ಅಥವಾ ‘ಟ್ಯಾಗ್’ ಅಳವಡಿಸಲ್ಪಟ್ಟ ಪಕ್ಷಿಯನ್ನು ಗುರುತಿಸುವುದು, ಬಣಿವೆಯಲ್ಲಿ ಕಳೆದುಹೋದ ಸೂಜಿಯನ್ನು ಹುಡುಕಿದಷ್ಟೇ ಸವಾಲಿನದು! ನೀವೆಲ್ಲ ೨೦೧೩ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಆ್ಯನಿಮೇಷನ್ ಚಲನಚಿತ್ರ ‘ಫೈಂಡಿಂಗ್ ನೆಮೋ’ ನೋಡಬೇಕು. ಪುಟ್ಟ ಬಾಲಕ ತನ್ನ ತಂದೆಯೊಂದಿಗೆ ವಿಶಾಲ ಸಾಗರದಲ್ಲಿ ಹಕ್ಕಿಯೊಂದನ್ನು ಹುಡುಕಿ ಹೊರಡುವ, ಅದು ಗೋಚರಿಸಿದಾಗ ಆತನಿಗಾಗುವ ಆನಂದದ ಸುತ್ತ ಹೆಣೆದ ಕಥೆ. ಈ ಪ್ರಯತ್ನದಲ್ಲಿ ರಿಂಗ್ ಅಳವಟ್ಟ ಹಕ್ಕಿಯೊಂದು ಪಕ್ಷಿ ವೀಕ್ಷಕನಿಗೆ ಕಂಡಾಗ ಆಗುವ ಪುಳಕ ಶಬ್ದಗಳಲ್ಲಿ ವರ್ಣಿಸಲಾಗದು.
ಬಳಿಕ ‘ಫಾಲೋ ಅಪ್’; ಆ ಹಕ್ಕಿಯ ಮೂಲ ಯಾವುದು? ಯಾರು ಮತ್ತು ಎಲ್ಲಿ? ಯಾವಾಗ? ಈ ಹಕ್ಕಿಗೆ ರಿಂಗ್ ಅಥವಾ ಟ್ಯಾಗ್ ಅಳವಡಿಸಿದ್ದು ಯಾರು? ಪತ್ತೇದಾರಿ ಕಾದಂಬರಿಗಿAತ ರೋಚಕ ತಿರುವುಗಳನ್ನು ನಮ್ಮ ಕಥೆ ಯಾವತ್ತೂ ಹೊಂದಿರುತ್ತದೆ. ಈ ಅನ್ವೇಷಣೆಯ ಆಧಾರದಲ್ಲಿ ಸಂಶೋಧನಾ ಪ್ರಬಂಧಗಳ ಮಂಡನೆಯೂ ನಡೆಯುತ್ತದೆ.
ನಾವು ಕ್ಲಿಕ್ಕಿಸಿದ ಚಿತ್ರವೊಂದರಲ್ಲಿ ದಾಖಲಾದ ಹಕ್ಕಿ, ದೂರದ ಆಫ್ರಿಕಾ ಖಂಡದಿಂದ ಸಾವಿರಾರು ಮೈಲಿ ಕ್ರಮಿಸಿ ಇಲ್ಲಿಗೆ ಬಂದಿಳಿದಿದೆ ಎಂಬುದು ಗೊತ್ತಾಗಿ, ಈ ಮಾಹಿತಿ ಅಧಿಕೃತ ಎಂದು ಖಾತ್ರಿಯಾದಾಗ ಪಕ್ಷಿ ವೀಕ್ಷಕನಿಗೆ ಆಗುವ ಆನಂದ ಬಣ್ಣಿಸಲಾಗದು.
ಗದಗ ಜಿಲ್ಲೆ ಮಾಗಡಿ ಕೆರೆಗೆ ‘ಬಾರ್ ಹೆಡೆಡ್ ಗೀಸ್’
ವಿಶೇಷವಾಗಿ ನನಗೆ ಈ ರಿಂಗ್ಡ್ ಮತ್ತು ಟ್ಯಾಗ್ಡ್ ಹಕ್ಕಿಗಳ ಬಗ್ಗೆ ಆಕರ್ಷಣೆ ಉಂಟಾಗಿದ್ದು, ೨೦೦೬ರ ಫೆಬ್ರುವರಿ ತಿಂಗಳಲ್ಲಿ. ಗದಗ ಜಿಲ್ಲೆಯ ಮಾಗಡಿ ಕೆರೆಗೆ ದೂರದ ಮಂಗೋಲಿಯಾದಿಂದ ವಲಸೆ ಬಂದಿಳಿದಿದ್ದ ಪಟ್ಟೆ ತಲೆಯ ಬಾತು, ‘ಬಾರ್ ಹೆಡೆಡ್ ಗೀಸ್’ ಎರಡು ಬಾತುಗಳು ಕತ್ತಿಗೆ ಅಳವಟ್ಟ ಗಿಳಿ ಹಸಿರು ಮತ್ತು ಕೆಂಪು ಬಣ್ಣದ ಕೋಡೆಡ್ ‘ನೆಕ್ ಕಾಲರ್’ ಕಂಡಾಗ. ಇವು ಉತ್ತರ ಮಂಗೋಲಿಯಾದಲ್ಲಿ ಟ್ಯಾಗ್ ಆಗಿ ಹನ್ನೆರಡು ಸಾವಿರ ಕಿಲೋಮೀಟರ್ ಕ್ರಮಿಸಿ, ಕರ್ನಾಟಕದ ಗದಗ ಸಮೀಪದ ಮಾಗಡಿ ಕೆರೆಗೆ ಬಂದಿಳಿದಿದ್ದವು!
ಯಾಕೆ ಟ್ಯಾಗಿಂಗ್ ಮತ್ತು ರಿಂಗಿಂಗ್?
ಹಾವೇರಿ ಜಿಲ್ಲೆ, ರಾಣೆಬೆನ್ನೂರಿನ ಕೃಷ್ಣಮೃಗಗಳ ಅಭಯಾರಣ್ಯದಲ್ಲಿ ಇಷ್ಟು ವರ್ಷ ಸ್ವತಂತ್ರವಾಗಿ ಬದುಕಿದ್ದ ದೊರವಾಯನ ಹಕ್ಕಿ ‘ಗ್ರೇಟ್ ಇಂಡಿಯನ್ ಬಸ್ಟರ್ಡ್’.ಈಗ ನಮ್ಮ ರಾಜ್ಯದಲ್ಲಿ ವಿಲುಪ್ತಿಯ ಹಂತಕ್ಕೆ ಹೋಗಲು ಕಾರಣ, ಕೃಷ್ಣಮೃಗಗಳು ರೈತರ ಹೊಲಗಳಿಗೆ ನುಗ್ಗದಿರಲಿ ಎಂದು ಹುಲ್ಲು ತಳಿಗಳ ಸಂಶೋಧನಾ ಕೇಂದ್ರದ ಸಹಕಾರದಲ್ಲಿ ಬೆಳೆಸಿದ ನಾಲ್ಕಾರು ನಮೂನೆಯ ಅತಿ ಎತ್ತರದ ಹುಲ್ಲುಗಾವಲು. ತನ್ನ ಕಣ್ಣೆತ್ತರಕ್ಕಿಂತ ಉದ್ದ ಬೆಳೆದ ಹುಲ್ಲುಗಾವಲು ಬಿಟ್ಟು ಎತ್ತರದ ಪ್ರದೇಶಕ್ಕೆ ವಲಸೆ ಹೋಗಿ, ಆ ಹಕ್ಕಿ ಜೀವ ತೆರುವಂತಾದದ್ದು ವಿಪರ್ಯಾಸ.
ಇಂತಹ ಆಹಾರ-ವಿಹಾರದ ಬೇಲಿಗಳು ಮನುಷ್ಯರಿಗೆ ಸರಿ ಹೊರತು, ಪ್ರಾಣಿ-ಪಕ್ಷಿಗಳಿಗಲ್ಲ ಎಂಬುದು ಹಲವಾರು ಬಾರಿ ಅವು ಸಾಬೀತುಪಡಿಸಿವೆ. ನಮ್ಮ ಜ್ಞಾನಕ್ಷಿತಿಜದ ವಿಸ್ತಾರಕ್ಕೆ ನಿಲುಕದ, ಜೀವವೈವಿಧ್ಯ ಜಗತ್ತಿನ ಕೊಂಡಿಗಳನ್ನು ತಿರುಪಿನಂತೆ ಹೀಗೆ ಬಿಚ್ಚುತ್ತ ಹೊರಟಿರುವ ನಮಗೆ ಈ ಕ್ಲಿಷ್ಟ ವಿಷಯಗಳ ಕುರಿತು ಬಹುಶಿಸ್ತೀಯ ‘ಮಲ್ಟಿ ಡಿಸಿಪ್ಲಿನರಿ’ ಮತ್ತು ಅಂತರ್ಶಿಸ್ತೀಯ ‘ಇಂಟರ್ ಡಿಸಿಪ್ಲಿನರಿ’ ಅಧ್ಯಯನದ ಆವಶ್ಯಕತೆ ಇನ್ನೂ ಮನಗಾಣಲಾಗದೇ ಹೋಗಿದೆ.
ಬಳ್ಳಾರಿಯ ಧರೋಜಿ ಸುತ್ತಮುತ್ತಲೂ ದೊರವಾಯನ ಹಕ್ಕಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದವು. ಈಗ ರಾಜಸ್ಥಾನದ ಮರುಭೂಮಿಯಲ್ಲಿ ಮಾತ್ರ ಕೇವಲ ಬೆರಳೆಣಿಕೆಯಷ್ಟು ಉಳಿದಿವೆ. ವಿಲುಪ್ತಿಯ ಅಂಚು ತಲಪಿವೆ.
ಲೆಸ್ಸರ್ ಫ್ಲೋರಿಕಾನ್ ಎನ್ನಲಾಗುವ ಕರಿ ನವಿಲು ಗಡಿಭಾಗದ ಬೀದರ್ ಜಿಲ್ಲೆಯ ಚೊಂಡಿಮುಖೇಡ್ ಗ್ರಾಮದಲ್ಲಿ ದಶಕಗಳ ಬಳಿಕ ಇತ್ತೀಚೆಗೆ ೨೦೨೧ರಲ್ಲಿ ಬಿ.ಎನ್.ಎಚ್.ಎಸ್. ನಿರ್ದೇಶಕ ಡಾ. ಬಿವಷ್ ಪಾಂಡವ್ ನೇತೃತ್ವದ ತಂಡ, ಪತ್ತೆ ಹಚ್ಚಿದೆ. ಅವೂ ಕೂಡ ವಿಲುಪ್ತಿಯ ಅಂಚಿಗೆ ಸರಿದಿವೆ.
೨೦೧೮–೧೯: ೮ ಸಾವಿರ ಹಕ್ಕಿಗಳಿಗೆ ‘ಟ್ಯಾಗಿಂಗ್’ ಮಾಡಿದ ಬಿ.ಎನ್.ಎಚ್.ಎಸ್.
ಬಿ.ಎನ್.ಎಚ್.ಎಸ್. ಕಳೆದ ೨೦೧೮-೧೯ರಲ್ಲಿ ೮ ಸಾವಿರಕ್ಕೂ ಅಧಿಕ ಹಕ್ಕಿಗಳಿಗೆ ‘ಟ್ಯಾಗಿಂಗ್’ ಮಾಡಿದ ಸುದ್ದಿ ತಿಳಿದು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ನವೀ ಮುಂಬಯಿಯ ಗ್ರೇಟರ್ ಫ್ಲೆಮಿಂಗೋ ಥಾಣೆ ಕ್ರೀಕ್ ರಿಸರ್ವೈಯರ್ಗೆ ಭೇಟಿ ಕೊಡಲು ಕಾತರನಾಗಿದ್ದೆ. ಹಿರಿಯ ಪಕ್ಷಿತಜ್ಞ, ಬಿ.ಎನ್.ಎಚ್.ಎಸ್. ಸಹಾಯಕ ನಿರ್ದೇಶಕ ಡಾ. ರಾಜು ಕಸಾಂಬೆ (ಬೂದು ಮಂಗಟ್ಟೆಗಳ ಬದುಕು-ಬವಣೆ ಅವರ ಪಿ.ಎಚ್.ಡಿ. ಅಧ್ಯಯನ ವಿಷಯ) ನೇತೃತ್ವದಲ್ಲಿ ಮೇ ೧೧, ೨೦೧೯ ಬಿರುಬೇಸಿಗೆಯಲ್ಲಿ ನವೀ ಮುಂಬಯಿಯ ಜೌಗು ಪ್ರದೇಶದಲ್ಲಿ ‘ವೆಟ್ಲ್ಯಾಂಡ್’ನಲ್ಲಿ ೫೭ ರಿಂಗ್ಡ್ ಮತ್ತು ಟ್ಯಾಗ್ಡ್ ಪಕ್ಷಿಗಳನ್ನು ನಾವು ದಾಖಲಿಸಿದ್ದೆವು!
ವಿಶ್ಲೇಷಿಸಿದಾಗ, ಬಹುತೇಕ ಎಲ್ಲವೂ ಬಿ.ಎನ್.ಎಚ್.ಎಸ್. ವಿಜ್ಞಾನಿಗಳು ಅಧ್ಯಯನಕ್ಕಾಗಿಯೇ ೩-೬ ವರ್ಷಗಳ ಅವಧಿಯಲ್ಲಿ ಟ್ಯಾಗ್ ಮಾಡಿದ್ದ ಪಕ್ಷಿಗಳಾಗಿದ್ದವು.
ಸೈಟಿಂಗ್ ಆಂಡ್ ಫಾಲೋ ಅಪ್ ಅಧ್ಯಯನ
ಆ ಪೈಕಿ ಕೆಲ ವಿಶೇಷವಾಗಿ ‘ಸೈಟಿಂಗ್’ ಆದ ಹಕ್ಕಿಗಳೆಂದರೆ – ‘ಗ್ರೇಟ್ ನಾಟ್’ ಹಕ್ಕಿ, ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಅಲೀಬಾಗ್ ಬೀಚ್ನಲ್ಲಿ ಕಾಣಸಿಕ್ಕ ಪಕ್ಷಿ, ಚೈನಾದ ಲಯೋನಿಂಗ್ ಪ್ರಾಂತದ ಯಲು ಝಿಯಾಂಗ್ನಲ್ಲಿ ಟ್ಯಾಗ್ ಮಾಡಲಾಗಿತ್ತು. ಅದು ೫,೪೩೫ ಕಿ.ಮೀ. ಕ್ರಮಿಸಿ ಬಂದಿತ್ತು!
೩೦೦ಕ್ಕೂ ಹೆಚ್ಚು, ಬಿ.ಎನ್.ಎಚ್.ಎಸ್. ಟ್ಯಾಗ್ಡ್ ಹಕ್ಕಿಗಳನ್ನು ದಾಖಲಿಸಿದ್ದು ಮಾತ್ರವಲ್ಲ, ಪ್ರತಿಯೊಬ್ಬ ಪಕ್ಷಿ ವೀಕ್ಷಕ ೫೦ಕ್ಕೂ ಹೆಚ್ಚು ರಿಂಗ್ಡ್ ಪಕ್ಷಿಗಳನ್ನು ಎರಡು ದಿನಗಳಲ್ಲಿ ದಾಖಲಿಸಿದ್ದು ವಿಶೇಷ.
‘ಕಾಮನ್ ರೆಡ್ಶ್ಯಾಂಕ್’ ಎಂಬ ಪಕ್ಷಿಗೆ ಬಿ.ಎನ್.ಎಚ್.ಎಸ್. ವತಿಯಿಂದ ೨೦೧೫ರ ಫೆಬ್ರುವರಿ ೨೪ರಂದು ನವೀ ಮುಂಬಯಿಯ ಎನ್.ಆರ್.ಐ. ವೆಟ್ಲ್ಯಾಂಡ್ನಲ್ಲಿ ಟ್ಯಾಗಿಂಗ್ ಮಾಡಲಾಗಿತ್ತು. ೫ ವರ್ಷಗಳ ಬಳಿಕ ಈ ಹಕ್ಕಿ ೨೦೨೦ರ ಡಿಸೆಂಬರ್ ೧೫ರಂದು ಟಿ.ಎಸ್. ಚಾಣಕ್ಯ ತರೀಭೂಮಿಯಲ್ಲಿ ನಮಗೆ ಮತ್ತೆ ಕಾಣಸಿಕ್ಕಿತು.
ಬಣಿವೆಯಲ್ಲಿ ಕಳೆದ ಸೂಜಿ ಹುಡುಕಿದಂತೆ!
ನನ್ನ ಅನುಭವವನ್ನು ಉಲ್ಲೇಖಿಸುವುದಾದರೆ, ಸಾವಿರಾರು ಹಕ್ಕಿಗಳ ಗುಂಪಿನಲ್ಲಿ ಟ್ಯಾಗ್ಡ್ ಅಥವಾ ರಿಂಗ್ಡ್ ಹಕ್ಕಿಯನ್ನು ಗುರುತಿಸಲು ವಿಶೇಷ ಪರಿಣತಿ ‘ಓರಿಯಂಟೇಷನ್’ ಬೇಕು. ಕೇವಲ ಒಳ್ಳೆಯ ದೃಷ್ಟಿಯೊಂದೇ ಇದ್ದರೂ ಸಾಲದು. ಗುಣಮಟ್ಟದ ‘ಬೈನಾಕ್ಯುಲರ್’ ಮತ್ತು ‘ಸ್ಪಾಟಿಂಗ್ ಸ್ಕೋಪ್’ ತುಂಬ ಆವಶ್ಯಕ. ‘ಫ್ಲ್ಯಾಗ್’ ಅಥವಾ ‘ರಿಂಗ್’ ನಂಬರ್ ದಾಖಲಿಸಲು ಒಳ್ಳೆಯ ಕ್ಯಾಮೆರಾ ಮತ್ತು ‘ಮೆಗಾ ಝೂಮ್ ಲೆನ್ಸ್’ ಅತ್ಯವಶ್ಯ. ಸುದೈವಕ್ಕೆ ಕಡಮೆ ವೆಚ್ಚದ ‘ಪಾಯಿಂಟ್ ಆಂಡ್ ಶೂಟ್’ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ೬೦, ೮೦ ಅಥವಾ ೧೦೦ ಎಕ್ಸ್ ಆಪ್ಟಿಕಲ್ ಝೂಮ್ ಲೆನ್ಸ್ ಕ್ಯಾಮೆರಾ ಇದ್ದರೆ ಸಾಕು.
ಪಕ್ಷಿ ವೀಕ್ಷಕ ಕೇವಲ ಹಕ್ಕಿಯ ಕತ್ತು ಮತ್ತು ಪಾದಗಳನ್ನು ಅವಲೋಕಿಸುತ್ತ, ಟ್ಯಾಗ್ಡ್ ಹಕ್ಕಿಯ ‘ರೆಕಾರ್ಡ್ ಶಾಟ್ಸ್’ ಒದಗಿಸಿದಲ್ಲಿ, ‘ರಿಂಗಿಂಗ್ ಏಜೆನ್ಸಿ’ಗೆ ಖಚಿತಪಡಿಸಲು ಮತ್ತು ನಿಖರವಾಗಿ ತಿಳಿಸಲು ತುಂಬ ಸಹಾಯವಾಗುತ್ತದೆ. ವೈಜ್ಞಾನಿಕ ದಾಖಲೀಕರಣವೂ ಸಾಧ್ಯವಾಗುತ್ತದೆ. ಮಾಹಿತಿ ವಿನಿಮಯಕ್ಕೆ ಅದು ರಹದಾರಿಯಾಗುತ್ತದೆ.
ಇತ್ತೀಚೆಗೆ ಕಳೆದ ಒಂದು ದಶಕದಿಂದ, ಈ ರಿಂಗ್ಡ್ ಆಂಡ್ ಟ್ಯಾಗ್ಡ್ ಹಕ್ಕಿಗಳ ಚಿತ್ರ, ವಿಡಿಯೋ ಮತ್ತು ಮಾಹಿತಿ ದಾಖಲೀಕರಣದ ಮಹತ್ತ್ವ ಸಾಮಾನ್ಯ ಪಕ್ಷಿ ವೀಕ್ಷಕರಿಗೂ ತಿಳಿದಿದೆ.
‘ನಾಗರಿಕ ವಿಜ್ಞಾನಿ’ಗಳ ಈ ನಡೆ, ಹಕ್ಕಿಗಳು ಮತ್ತು ಪಾರಿಸಾರಿಕ ವ್ಯವಸ್ಥೆ ಕುರಿತು ತುಂಬಾ ಮಹತ್ತ್ವದ ಮಾಹಿತಿಯ ಕ್ರೋಡೀಕರಣಕ್ಕೆ ಸಹಕಾರಿಯಾಗಿದೆ. ಈ ಜನಾಂದೋಲನದ ಪರಿಣಾಮವಾಗಿ ವಲಸೆ ಹಕ್ಕಿಗಳ ಪ್ರಜನನ ಸ್ಥಳ, ವಿಶ್ರಾಂತಿ ಪಡೆದು ನಿರ್ಗಮಿಸುವ ‘ಸ್ಟಾಪ್ ಓವರ್ ಪಾಯಿಂಟ್’, ಚಳಿಗಾಲ ಕಳೆಯುವ ಆವಾಸ ಸ್ಥಳಗಳ ಜೊತೆಗೆ, ವಲಸೆ ಪಥದ ಕುರಿತು ವೈಜ್ಞಾನಿಕ ಅಧ್ಯಯನಕ್ಕೆ ಹವ್ಯಾಸಿ ಪಕ್ಷಿ ವೀಕ್ಷಕಕರೂ ಬಹುದೊಡ್ಡ ಆಕರ ಒದಗಿಸುತ್ತಿದ್ದಾರೆ.
ಜೊತೆಗೆ, ಹಕ್ಕಿಗಳ ತುಂಬ ಖಾಸಗಿ ವಿಚಾರವಾದ ಸಂಗಾತಿಯ ಆಯ್ಕೆ, ಕೂಡುವಿಕೆ ನಡೆ, ಕೌಟುಂಬಿಕ ಪದ್ಧತಿ ಮತ್ತು ಆವಾಸ ಸ್ಥಳದ ಪಾರಿಸರಿಕ ವ್ಯವಸ್ಥೆ ಇತ್ಯಾದಿ ದಾಖಲಿಕರಣಕ್ಕೆ ಈ ಅಧ್ಯಯನ ವೈಜ್ಞಾನಿಕ ತಳಹದಿ.
ಬನ್ನಿ, ನೀವೂ ಭಾಗವಹಿಸಿ.
ಛಾಯಾಚಿತ್ರಗಳು: ಡಾ. ರಾಜು ಕಸಾಂಬೆ ಹಾಗೂ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸಾಯಿಟಿ, ಮುಂಬೈ ಕಡತ ಚಿತ್ರಗಳು. ಸಂಬಂಧಿತ ಚಿತ್ರಗಳನ್ನು ಲಗತ್ತಿಸಿದ್ದೇನೆ.
ಪಕ್ಷಿಗಳ ಟ್ಯಾಗಿಂಗ್ಗೆ ಬಿ.ಎನ್.ಎಚ್.ಎಸ್. ಪಾಲಿಸುವ ಶಿಷ್ಟಾಚಾರ ಪದ್ಧತಿ
ಲೋಹದುಂಗುರ
ಬಿ.ಎನ್.ಎಚ್.ಎಸ್. ಅಳವಡಿಸುವ ಲೋಹದ ಉಂಗುರಗಳ ಮೇಲೆ ‘ಇನ್ಫಾರ್ಮ್ ಬಾಂಬೆ ನ್ಯಾಟ್ ಹಿಸ್ಟ್ ಸೊಸಾಯಿಟಿ’ ಎಂಬ ಬರೆಹದ ಜೊತೆಗೆ, ವಿಶಿಷ್ಟವಾದ ‘ಆಲ್ಫಾನ್ಯುಮೆರಿಕ್ ಕೋಡ್’ (ಆಂಗ್ಲ ಅಕ್ಷರ ಮತ್ತು ಸಂಖ್ಯೆ) ಕೆತ್ತಲಾಗಿದೆ. ಉದಾ: ಕೆ-೧೨೩೪ (ಕೆ- ಉಂಗುರದ ಗಾತ್ರ ೧೨೩೪ ವಿಶಿಷ್ಟ ಸಂಖ್ಯೆಯ ಕೋಡ್).
ಸಮ–ಬೆಸ ವರ್ಷ
ಬೆಸ ಸಂಖ್ಯೆಯ ವರ್ಷ ೧೯೯೯, ೨೦೦೧, ೨೦೦೩ ಹೀಗೆ, ಹಕ್ಕಿಗೆ ಎಡಗಾಲಿಗೆ ಉಂಗುರವನ್ನು ತೊಡಿಸಲಾಗುತ್ತದೆ. ¸ಮ ಸಂಖ್ಯೆಯ ವರ್ಷಗಳಲ್ಲಿ ೨೦೨೦, ೨೦೨೨, ೨೦೨೪ ಹೀಗೆ.. ಪಕ್ಷಿಯ ಬಲಗಾಲಿಗೆ ಉಂಗುರ ತೊಡಿಸಲಾಗುತ್ತದೆ. ಪ್ರತಿಯೊಂದು ಹಕ್ಕಿಯನ್ನು ಬಂಧಿಸಿಯೇ ರಿಂಗ್ ಅಥವಾ ಟ್ಯಾಗ್ ಮಾಡುವುದು ಅನಿವಾರ್ಯ.
ಪಕ್ಷಿಗಳ ಸಾಮಾನ್ಯ ದಾಖಲೀಕರಣಕ್ಕೆ ‘ಮೆಟಲ್ ರಿಂಗ್’ ಬಳಸಿದರೆ, ವೈಜ್ಞಾನಿಕ ಚಲವಲನ ಹಾಗೂ ವಲಸೆ ಅಧ್ಯಯನಕ್ಕೆ ಈ ಕೆಳಗಿನ ಟ್ಯಾಗಿಂಗ್ ಪದ್ಧತಿ ಅನುಸರಿಸಲಾಗುತ್ತದೆ.
ಕಲರ್ ಫ್ಲ್ಯಾಗ್ಸ್
ಬೆಸ ಸಂಖ್ಯೆ (೨೦೨೧) ವರ್ಷಗಳಲ್ಲಿ ಪಕ್ಷಿಗಳ ಬಲಗಾಲಿಗೆ; ಸಮ ಸಂಖ್ಯೆ (೨೦೨೨) ವರ್ಷಗಳಲ್ಲಿ ಹಕ್ಕಿಯ ಎಡಗಾಲಿಗೆ ಅಳವಡಿಸಲಾಗುತ್ತದೆ. ಬಣ್ಣದ ಪುಟ್ಟ ಧ್ವಜ ಕಾಲಿಗೆ ಅಡ್ಡಲಾಗಿ ಅಳವಡುತ್ತದೆ.
ಕಲರ್ ಫ್ಲ್ಯಾಗಿಂಗ್ ಫಾರ್ ವೇಡರ್ಸ್
ಸ್ಯಾಂಡ್ ಪೈಪರ್ಸ್, ಪ್ಲೋವರ್ಸ್ ಇತ್ಯಾದಿ ಪ್ರವರ್ಗದ ಪಕ್ಷಿಗಳು.
ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ಒಳಗೊಂಡ ವ್ಯಾಪ್ತಿ ಪ್ರದೇಶ. ಇಲ್ಲಿ ಟ್ಯಾಗಿಂಗ್ ಮಾಡಲಾಗುವ ಪಕ್ಷಿಗಳಿಗೆ ಕಪ್ಪು ಬಣ್ಣದ ಫ್ಲ್ಯಾಗ್ನಲ್ಲಿ ಬಿಳಿ ಬಣ್ಣದಿಂದ ಬರೆದ ‘ಆಲ್ಫಾನ್ಯುಮೆರಿಕ್ ಕೋಡ್’ ಅಳವಡಿಸಲಾಗುತ್ತದೆ.
ಇಡೀ ಭಾರತದಾದ್ಯಂತ (ದಕ್ಷಿಣ ಭಾರತದ ರಾಜ್ಯಗಳನ್ನು ಹೊರತುಪಡಿಸಿ) ಬಿಳಿ ಬಣ್ಣದ ಎರಡು ಫ್ಲ್ಯಾಗ್ಗಳು, ಆ ಪೈಕಿ ಒಂದರಲ್ಲಿ ಕೆಂಪು ಬಣ್ಣದಲ್ಲಿ ಬರೆದ ವಿಶಿಷ್ಟ ಆಲ್ಫಾನ್ಯುಮೆರಿಕ್ ಕೋಡ್, ದೇಶದ ಇತರ ಭಾಗಗಳಲ್ಲಿ ಟ್ಯಾಗ್ ಮಾಡಲಾದ ಕುರುಹಾಗಿ, ಇನ್ನೊಂದು ಬಿಳಿ ಖಾಲಿ ಫ್ಲಾö್ಯಗ್ ಅಳವಡುತ್ತದೆ.
ಫ್ಲೆಮಿಂಗೋಗಳಿಗೆ ಕಲರ್ ಟ್ಯಾಗಿಂಗ್
ಕಾಲಿಗೆ ಎರಡು ಬ್ಯಾಂಡ್ಗಳು. ಆ ಪೈಕಿ ಒಂದು ಹಳದಿ ಬ್ಯಾಂಡ್ ಜೊತೆಗೆ ಕಪ್ಪು ಬಣ್ಣದಲ್ಲಿ ವಿಶಿಷ್ಟ ಆಲ್ಫಾಬೆಟಿಕಲ್ ಕೋಡ್. ಇನ್ನೊಂದು ಸ್ವಚ್ಚ ಬಿಳಿ ಬಣ್ಣದ ಬ್ಯಾಂಡ್. ದಕ್ಷಿಣ ಭಾರತದಾದ್ಯಂತ ಹಳದಿ ಬ್ಯಾಂಡ್ ಬುಡದಲ್ಲಿ ಬಿಳಿ ಬ್ಯಾಂಡ್ ಅಳವಡಿಸಲಾಗುತ್ತದೆ. ಮಧ್ಯ ಮತ್ತು ಉತ್ತರ ಭಾರತದಲ್ಲಿ ಹಳದಿ ಬ್ಯಾಂಡ್ ಮೇಲೆ ಬಿಳಿ ಬ್ಯಾಂಡ್ ಅಳವಡಿಸುವ ಶಿಷ್ಟಾಚಾರವಿದೆ.
ಬಾರ್ ಹೆಡೆಡ್ ಗೂಸ್ (ಪಟ್ಟೆ ತಲೆಯ ಬಾತು)ಗಳಿಗೆ ಕಲರ್ ಬ್ಯಾಂಡಿಂಗ್
ಕೆಂಬಣ್ಣದ ಕುತ್ತಿಗೆಗೆ ಅಳವಟ್ಟ ಕಾಲರ್. ‘ರೆಡ್ ನೆಕ್ ಕಾಲರ್’ ಮೇಲೆ ಬಿಳಿ ಬಣ್ಣದಲ್ಲಿ ವಿಶಿಷ್ಟ ಆಲ್ಫಾನ್ಯುಮೆರಿಕ್ ಕೋಡ್ ಬಳಸಲಾಗುತ್ತದೆ.
ವಲ್ಚರ್ಸ್ (ರಣಹದ್ದು)ಗಳಿಗೆ ಕಲರ್ ಟ್ಯಾಗಿಂಗ್
ರೆಕ್ಕೆಗಳಿಗೆ ಅಳವಟ್ಟ ಕೇಸರಿ ಟ್ಯಾಗ್ (ಪೆಟಾಗಿಯಲ್ ಟ್ಯಾಗ್ಸ್)ಗೆ ವಿಶಿಷ್ಟ ಆಲ್ಫಾನ್ಯುಮೆರಿಕ್ ಕೋಡ್ ಅಳವಡಿಸಲಾಗುತ್ತದೆ.
ನಾವು ಅಳವಡಿಸಿದ ಮೆಟಲ್ ರಿಂಗ್ಗಳು
ಮುಂಬೈ, ಥಾಣೆ ಕ್ರೀಕ್ ಫ್ಲೆಮಿಂಗೋ ರಿಸರ್ವೈಯರ್ ಮ್ಯಾನ್ಗ್ರೋವ್ ಫಾರೆಸ್ಟ್ ಪ್ಲಾಂಟೇಷನ್ನಲ್ಲಿ, ಬಿ.ಎನ್.ಎಚ್.ಎಸ್. ರಾಷ್ಟ್ರೀಯ ಕ್ಷೇತ್ರ ಕಾರ್ಯಾಗಾರದಲ್ಲಿ, ೨೦೨೧ರ ಡಿಸೆಂಬರ್ ೪ರಲ್ಲಿ ವಿಜ್ಞಾನಿ ಮೃಗಾಂಕ್ ನೇತೃತ್ವದಲ್ಲಿ ನಾವು ರಿಂಗ್ ಅಳವಡಿಸಿದ ಪಕ್ಷಿಗಳ ವಿವರ ಇಂತಿದೆ.
ರಿಂಗ್ ಗಾತ್ರ ‘ಝೆಡ್’, ಬಣ್ಣ ‘ಸಿಲ್ವರ್’, ೫೬೨೧ – ಪ್ರೀನಿಯಾ, ೫೬೨೨ – ಫ್ಯಾನ್ ಟೇಲ್ ಫ್ಲೈ ಕ್ಯಾಚರ್, ೫೬೨೩ – ಬ್ಲಿಥ್ಸ್ ರೀಡ್ ವಾರ್ಬಲರ್, ೫೬೨೪ – ಲಿಟಲ್ ಸ್ಟಿಲ್ಟ್, ೫೬೨೫ – ಪ್ರೀನಿಯಾ, ೫೬೨೬ – ಬ್ಲಿಥ್ಸ್ ರೀಡ್ ವಾರ್ಬಲರ್ ಹಾಗೂ ರಿಂಗ್ ಗಾತ್ರ ‘ಎ’ – ೨೮೭೯೨೧ – ಕಾಮನ್ ಕಿಂಗ್ಫಿಷರ್.
ಜೊತೆಗೆ ಹಕ್ಕಿಯ ಲಿಂಗ, ವಯಸ್ಸು, ಮೋಲ್ಟ್ ಕೋಡ್ (ರೆಕ್ಕೆಗಳ ಬೆಳವಣಿಗೆ ಆಧಾರ), ಪ್ಲುಮೇಜ್ (ಪುಚ್ಛದ ಬಣ್ಣ), ಬ್ರಾಡ್ ಪ್ಯಾಚ್, ವಿಂಗ್ಸ್ (ಎಂ.ಎ.) ಬಿಲ್ (ಎಂ.ಎ.), ಟಾರ್ಸ್, ಟೇಲ್, ವ್ಹೇಟ್, ಲೊಕ್ಯಾಲಿಟಿ, ಹ್ಯಾಬಿಟ್ಯಾಟ್.. ಹೀಗೆ..
ಒಟ್ಟು ೧-೮ ಮಾನದಂಡಗಳಲ್ಲಿ ಬಂಧಿತ ಪಕ್ಷಿಯ ವಿವರ ದಾಖಲಿಸಲಾಗುತ್ತದೆ. ನುರಿತ ಟ್ರ್ಯಾಪರ್ಗಳ ಸಹಾಯದಿಂದ ಈ ಕಾರ್ಯ ಕೇವಲ ೩೦-೪೫ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ.
ಆಸಕ್ತರಿಗೆ ತರಬೇತಿ ಇಲ್ಲಿ ಲಭ್ಯ
ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ, ಮುಂಬೈ ‘ಬೇಸಿಕ್ ಕೋರ್ಸ್ ಇನ್ ಆರ್ನಿಥಾಲಜಿ’ ೧೨ ತಿಂಗಳ ತರಬೇತಿ ಕೋರ್ಸ್ ನಡೆಸುತ್ತದೆ. (ಹೆಚ್ಚಿನ ಮಾಹಿತಿಗೆ: ಸಾಗರ ಮಹಾಜನ, ಶೈಕ್ಷಣಿಕ ಅಧಿಕಾರಿ, ಸಂಪರ್ಕ: ೮೮೩೯೧ ೫೩೯೭೭/ ಪ್ರಿಯಾಂಕಾ ಜುಂಡಾರೆ – ೯೫೯೪೯ ೫೩೪೨೫).
ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ, ಚಂದ್ರಭಾನಿ, ಉತ್ತರಾಖಂಡ (https://wii.gov.in) ಕೊಡಮಾಡುವ ಪಕ್ಷಿ-ಪ್ರಾಣಿ ಮತ್ತು ಪಾರಿಸರಿಕ ಅಧ್ಯಯನ ಶಾಸ್ತ್ರದ ಸ್ನಾತಕೋತ್ತರ ಪದವಿ ಕೋರ್ಸ್ಗಳು. (ಸಂಪರ್ಕ: +೯೧ ೧೩೫೨೬೪೦೧೧೪/ ೧೫, ೨೬೪೬೧೦೦).
ಕಾಳಿಂಗ ರಿಸರ್ಚ್ ಸೆಂಟರ್ ಫಾರ್ ರೇನ್ ಫಾರೆಸ್ಟ್ ಇಕಾಲಜಿ, ಆಗುಂಬೆ, ೪-೬ ದಿನಗಳ ಪಕ್ಷಿ ವೀಕ್ಷಣೆ, ಸರೀಸೃಪಗಳ ಕುರಿತು ಸ್ಟಾರ್ಮ್ ಸೆಷನ್ಸ್ ಮತ್ತು ಪ್ರಮಾಣೀಕರಣ, ಕಾರ್ಯನಿರ್ವಾಹಕ ವಿಶ್ವಸ್ಥರಾದ ದೇವಿಕಾ ಗೌರಿಶಂಕರ್, (ಸಂಪರ್ಕ: ೮೧೮೧೨ ೫೭೦೧೦/ ೯೫೬೬೨ ೨೪೯೧೪)