ಸಾವಿರ ಸಾವಿರ ಯುಗ ಯುಗ ಉರುಳಲು
ಸಾಗಿದೆ ಸಂಗ್ರಾಮ;
ದುರ್ಜನ ಸಜ್ಜನ ಸಂಗ್ರಾಮ.
ಶಿಶು ಪ್ರಹ್ಲಾದನ ಪೀಡಿಸಿದ,
ಹಿರಣ್ಯಕಶಿಪುವೆ ತಾ ಮಡಿದ!
ಕಂಬವನೊಡೆಯುತ ನರಹರಿ ಬಂದ,
ನಂಬಿದ ಧರ್ಮಕೆ ಜಯವನು ತಂದ,
– ಸಾಗಿದೆ ಸಂಗ್ರಾಮ.
ಹತ್ತು ತಲೆಗಳನು ಹೊತ್ತ ದಶಶಿರನು
ತುತ್ತಾದನು, ಶ್ರೀ-ರಾಮಬಾಣಕೆ,
ದರ್ಪದ ಪರ್ವತ ನೆಲಕೆ ಕುಸಿಯಿತು;
ಧರ್ಮದ ಬಾವುಟ ಬಾನೊಳರಳಿತು.
– ಸಾಗಿದೆ ಸಂಗ್ರಾಮ.
ಪಂಚ ಪಾಂಡವರು ಕಾಡೊಳಿದ್ದರು,
ನೂರು ಕೌರವರು ಸುಖವ ಮೆದ್ದರು;
ಭೀಷ್ಮ ದ್ರೋಣರೋ ಶಕುನಿ ಶಲ್ಯರೊ
ಆನೆ ಕುದುರೆ ರಥ ಏನೆ ಇದ್ದರೂ
ದುಷ್ಟ ಕೌರವರ ಶಿರ ಉರುಳಿ;
ಧರ್ಮಪುತ್ರನಿಗೆ ಧರೆ ಮರಳಿ!
-ಸಾಗಿದೆ ಸಂಗ್ರಾಮ.
ಭಾರತಮಾತೆಯ ಮಕುಟದ ಮೆಟ್ಟಿ,
ರವಿಯಸ್ತಮಿಸದ ರಾಜ್ಯವ ಕಟ್ಟಿ,
ಅನ್ಯರನಾಳಾಗಿಸಿ ಮೇಲೇರಿ,
ದಾಸ್ಯದ ನೊಗವನು ಕೊರಳಿಗೆ ಹೇರಿ,
ಹಿಗ್ಗಿದರೆಲ್ಲರು ತಗ್ಗಿ ಹೋದರು
ಸತ್ಯಾಹಿಂಸೆಯ ತಪದಿ ಬೆಂದರು!
– ಸಾಗಿದೆ ಸಂಗ್ರಾಮ.
ದೀನದರಿದ್ರರ ದಿನದಿನ ದುಡಿಸಿ,
ಅವರ ಶೋಷಿಸುವ ಸಿರಿತನ ಗಳಿಸಿ
ನೆತ್ತರು ಹೀರುವ ಜಿಗಳೆಯ ತೆರದಿ,
ದಲಿತರ ಮೆಟ್ಟುವ ದೈತರ ದಳಕೆ,
ಕತ್ತಿ ಸುತ್ತಿಗೆಯ ಉತ್ತರ ಸಾಕೆ?
ಕಲ್ಕಿಯೆದ್ದು ತಲೆ ಕಡಿಯಲೆ ಬೇಕೆ?
– ಸಾಗಿದೆ ಸಂಗ್ರಾಮ.
ದುರ್ಜನ ಸಜ್ಜನ ಸಂಗ್ರಾಮ