ಕಾರಂತರೆಂದರೆ ಯಾರಂತ ತಿಳಿದಿರಿ?
ಕಡಲ ತೀರದ ಪರಶುರಾಮ;
ಕೆಚ್ಚೆ ಮೈಯಾದಂತೆ
ಕಿಚ್ಚೆ ಕಣ್ಣಾದಂತೆ
ಬಾಳ ನಡೆಸಿದ ಜ್ಞಾನ ಧಾಮ.
ಇದ್ದಾರೆ ಲಕ್ಷ ಜನ ನಮ್ಮಂತೆ ನಿಮ್ಮಂತೆ
ಇದ್ದಾರೆ ಯಾರು ಕಾರಂತರಂತೆ?
ಸತ್ಯಕ್ಕೆ ಮುಖವೊಡ್ಡಿ
ಕೀರ್ತಿಗೆ ಹಣಕ್ಕೆ ಬೆನ್ನೊಡ್ಡಿ
ಪಂಚೆ ಜುಬ್ಬಾ ತೊಟ್ಟ ಋಷಿಯಂತೆ.
ಸತ್ಯ ನ್ಯಾಯದ ಲಗಾಮು ಬಳಸಬೇಕೆಂದವರು,
ಎತ್ತೆತ್ತಲೋ ಕುದುರೆ ನಡೆಸದವರು;
ಎಮರ್ಜನ್ಸಿ ಗುಟುರು ಹಾಕಿದ ದಿನಗಳಲ್ಲೂ
ಬೆದರಿ ಗೂಳಿಗೆ ಸೊಪ್ಪುಹಾಕದವರು;
ಇತ್ತ ಪ್ರಶಸ್ತಿ ಮತ್ತೆ
ಪ್ರಧಾನಿ ಮುಖಕ್ಕೇನೆ
ವಾಪಸ್ಸು ರಾಚುವ ಋಷಿಯ ಕೋಪ,
ಕೊಳಕರ ಗೌರವ ಬೇಡ, ಆತ್ಮಗೌರವ ಮುಖ್ಯ
ಪದ್ಮಭೂಷಣ ಕಸ ಎಂದ ಭೂಪ!
ತಲೆ ಮೇಲೆ ಬಡಿಗೆ ತೂಗಿದರು ಏನಂತೆ
ಕೊಳೆತ ಹಣ್ಣನ್ನವರು ಮುಟ್ಟಲಿಲ್ಲ,
ಮೌಲ್ಯಗಳ ಒಲೆಗೆಸೆದು ಬಾಳಲಿಲ್ಲ.
ಕಷ್ಟದಲ್ಲಿದ್ದ ಎಷ್ಟೊಂದು ನಿಷ್ಠಾವಂತ
ಜನಕ್ಕೆ ಸಹಾಯ ಬಂತು ಕೇಳದೇನೆ,
ಕೊಟ್ಟವರು ಯಾರೆಂಬ ಸುಳಿವೆ ಇಲ್ಲ.
ಆದರೂ ಹೇಳಿದರು ಅಡಿಗರೊಮ್ಮೆ:
“ಇದು ನಮ್ಮ ಕಾರಂತ,
ಆಣೆ ಈ ಮಾತಿಗೆ.
ಪ್ರೀತಿಯೇ ರುಜುವಾದ
ಹೆಸರು ಬೇಡದೆ ಹೋದ
ಧೀರ ಇನ್ನಾರು ಅವರೇ” ಅಂತ.
ಬರೆಯುತ್ತ ಬರೆಯುತ್ತ, ಬರೆಹವೇ ಆದಿರಿ
ಬರೆಹದಲ್ಲೇ ಬಾಳನ್ನಿಟ್ಟು ತೂಗಿದಿರಿ
ಯಾವ ಪರ್ವತ ಯಾವ ಕಡಲು ಭವ್ಯ ಅರಣ್ಯ
ಕಂಡರೂ ಆಗೆಲ್ಲ ನಿಮ್ಮ ನೆನಪು,
ಮೈಕೆಲೇಂಜಲೊ, ಡಾಂಟೆ, ಬಾಣ, ಟಾಲ್ಸ್ಟಾಯರನು
ನೋಡುತ್ತಿದ್ದರೆ ಅಲ್ಲೂ ನಿಮ್ಮ ಹೊಳಪು.
ಶತಮಾನವಾಯಿತು ಇಲ್ಲಿ ಬಂದು ನೀವು
ನಾಡ ತುಂಬ ಬೀಸಿ ಜ್ವಾಲೆಯಂತೆ.
ಇದ್ದೇ ಇರುತ್ತೀರಿ
ಕನ್ನಡ ಇರುವ ತನಕ
ತಾಯ ಎದೆಯಲ್ಲಿ ಹೂಮಾಲೆಯಂತೆ.
(ಕೃಪೆ: ‘ಕಾವ್ಯ ಕಾರಂತ’ ಪುಸ್ತಕದಿಂದ.)