ಮುಸ್ಸಂಜೆಯ ಹೊತ್ತು. ನಮ್ಮ ಮುಂದೆ ಒಬ್ಬಳು ಗೌಳಿಗಿತ್ತಿ ಹೋಗ್ತಾ ಇದ್ದಾಳೆ. ಯಾರದ್ದೋ ವರ್ತನೆಯೋರ ಮನೆಗೆ ಹಾಲು ಹಾಕೋಕೆ ಇರಬೇಕು. ಅವಳು ವಿಶಿಷ್ಟವಾದ ಒಂದು ಭಂಗಿಯಲ್ಲಿ, ಭುಜದವರೆಗೆ ಎತ್ತಿದ ಕೈಯಲ್ಲಿ ಚೊಂಬನ್ನು ಹಿಡಿದು ವೈಯಾರದಿಂದ ಕೃಷ್ಣಕರ್ಣಾಮೃತದಲ್ಲಿ ಲೀಲಾಶುಕ ಹೇಳುವಂತೆ “ವಿಕ್ರೇತು ಕಾಮಾ ಖಿಲ ಗೋಪಕನ್ಯಾ” ಎನ್ನುವಂತೆ ಹೆಜ್ಜೆ ಹಾಕ್ತಾ ಹೋಗ್ತಾ ಇದ್ದಾಳೆ. ಆ ನಿತಂಬಗುರ್ವಿಯನ್ನು ಕಂಡ ಈ ನಿಂಗನಿಗೇನಾಯಿತೋ ಗೊತ್ತಿಲ್ಲ. ಎಲ್ಲಿ ಯಾವ ಸ್ಕ್ರೂ ಕಳಚಿ ಸಡಿಲಾಯ್ತೋ, ಎಲ್ಲಿ ಸೈಕಲ್ನ ಡೈನಮೋದ ವಿದ್ಯುತ್ತಿನ ಝಟ್ಕಾ ತಗುಲಿತೋ ಗೊತ್ತಿಲ್ಲ. ಒಂದು ಸ್ವಲ್ಪ ಹೊತ್ತು ಹ್ಯಾಂಡಲ್ ಮೇಲೆ ಅವನ ಹಿಡಿತ ತಪ್ಪೇ ಹೋಯಿತು, ನಾನು ನನಗೇ ಬಿಟ್ಟಿದ್ದಾನೆ, ನನ್ನ ಕಲಿಕೆಯ ಪ್ರಗತಿ ತುಂಬಾ ಚೆನ್ನಾಗಿರೋ ಹಾಗಿದ್ರೆ ಎನ್ನುವ ಹುಮ್ಮಸ್ಸಿನಿಂದ ಎತ್ತೆತ್ತಲೋ ತಿರುಗಿಸಿ, ಅದು ನೇರ ಹೋಗಿ ಆ ಗೌಳಿಗಿತ್ತಿಗೆ ಗುದ್ದೇಬಿಡ್ತು.
ಏನು, ಮತ್ತೆ ಹೋಗಿದ್ದೆಯಾ ಸೈಕಲ್ ಹೊಡಿಯಕ್ಕೆ? ಸಂಜೆ ಆಯ್ತು ಅಂದ್ರೆ ಕೈಕಾಲು ತೊಳ್ಕೊಂಡು ದೇವ್ರಿಗೆ ನಮಸ್ಕಾರ ಮಾಡಿ ಓದೋದು ಬಿಟ್ಟು ಗಂಡುಬೀರಿ ಹಾಗೆ ಸೈಕಲ್ ಹೊಡಿಯಕ್ಕೆ ಹೋಗಿದ್ಯಾ, ನಿಂಗೆ ಹೇಳೋರುಕೇಳೋರು ಯಾರೂ ಇಲ್ಲಾ ಅನ್ಕೊಂಡಿದೀಯಾ?” ಸೈಕಲ್ ಚಕ್ರಕ್ಕೆ ಸಿಕ್ಕು ಎಣ್ಣೆಮೆತ್ತಿಕೊಂಡು, ಹರಿದುಹೋಗಿದ್ದ ಲಂಗದ ಹರುಕನ್ನು ಮುದುರಿ ಮರೆಮಾಡಿಕೊಂಡು ಮನೆಯೊಳಕ್ಕೆ ಬರುತ್ತಿದ್ದ ನನಗೆ ಇದು ವೆರಾಂಡದ ಬೆತ್ತದ ಕುರ್ಚಿಯಲ್ಲಿ ಕೂತು ಜಪ ಮಾಡ್ತಾ ಇದ್ದ ತಾತನ ಸ್ವಾಗತ. ನಾನೇನೂ ತಾತನ ಮಾತಿಗೆ ಅಂಜದೆ ಅಳುಕದೆ ಕಿತ್ತೂರು ರಾಣಿ ಚೆನ್ನಮ್ಮನೋ ಎನ್ನುವಂತೆ ಒಳಕ್ಕೆ ಹೋದೆ. ‘ಮುಂದಿದೆ ಮಾರಿ ಹಬ್ಬ’ ಅನ್ನೋದು ನಂಗೆ ಗೊತ್ತಿತ್ತು. ವಾರದಲ್ಲಿ ಎರಡು ಲಂಗವನ್ನು ಹರಿದುಕೊಂಡರೆ ಯಾವ ಅಮ್ಮ ತಾನೇ ಮಾರಿಹಬ್ಬ ಮಾಡದೆ ಕರುಣೆಯ ಮೂರ್ತಿಯಾದಾಳು ಹೇಳಿ?
ಈ ಚಿತ್ರ ಸುಮಾರು 50 ವರ್ಷಗಳಿಗೂ ಹಿಂದಿನದು. ನನಗೆ ನಮ್ಮ ಮನೆಯಲ್ಲಿ ಹಮ್ಮೀರಿ, ಗಂಡುಬೀರಿ ಅಂತಾನೇ ಬಿರುದುಗಳಿದ್ದದ್ದು. ಇಬ್ಬರು ತಮ್ಮಂದಿರ ಅಕ್ಕನಾದ ನನಗೆ ಯಾಕೋ ಗೊತ್ತಿಲ್ಲ, ತಮ್ಮಂದಿರು ಮಾಡೋ ಎಲ್ಲ ಕೆಲಸಗಳನ್ನೂ, ಆಡೋ ಎಲ್ಲ ಆಟಗಳನ್ನು ಆಡಬೇಕು ಅಂತಾ ಅನಿಸ್ತಿತ್ತು. ಈಜು ಕಲಿಸಲು ನಮ್ಮ ತಂದೆ-ತಮ್ಮಂದಿರನ್ನು ಕರೆದುಕೊಂಡು ಕೆರೆಗೆ ಹೋದರೆ, ನಾನೂ ನನ್ನ ಹಾಗೆಯೇ ಕುಖ್ಯಾತರಾದ ಕೆಲವರು ಗೆಳತಿಯರನ್ನು ಕಟ್ಟಿಕೊಂಡು, ನಮ್ಮೂರ ಕೆರೆಯ ಎಮ್ಮೆಹೊಂಡದಲ್ಲಿ ಈಜುಬೀಳಕ್ಕೆ ಹೋಗೋದು. ಕೆರೇಲಿ ಈಜುವುದಕ್ಕೆ ನಮಗೆ ಹೇಳ್ಕೊಡೋರು ಯಾರು? ಎಮ್ಮೆಹೊಂಡ ಹೆಸರೇ ಹೇಳೋ ಹಾಗೆ ಎಮ್ಮೆ ದನ ತೊಳಿಯೋಕೆ ಇದ್ದದ್ದು. ಹೆಚ್ಚು ಆಳ ಇರ್ತಾ ಇರಲಿಲ್ಲ. ಏನೋ ಹೇಗೋ ಒಂದು ಸ್ವಲ್ಪ ಹೊತ್ತು ಎಮ್ಮೆಗಳಂತೆಯೇ ನೀರಲ್ಲಿ ಬಿದ್ದು ಒದ್ದಾಡಿ, ನಾವೂ ಈಜು ಹೊಡೆದ್ವು ಅಂತಾ ಮನೆಗೆ ಬರುವುದು ಮಾಡ್ತಾ ಇದ್ದೆವು.
ಒಮ್ಮೆ ಹೀಗೆ ಹೋಗಿದ್ದಾಗ, ನಮ್ಮ ಈ ನಟ್ಟ ನಡು ಹಗಲಿನ ಜಲಕ್ರೀಡೆಯನ್ನು ನೋಡಿದ ಪರಿಚಿತರು ಯಾರೋ ಮನೆಗೆ ಹೋಗಿ ಚಾಡಿ ಚುಚ್ಚಿದ್ದರು. ಏನೂ ಗೊತ್ತಿಲ್ಲದ ನಾನು ಬಟ್ಟೆಯೆಲ್ಲ ಒಣಗಿಸಿಕೊಂಡು ಯಾವಾಗಲೂ ಕದ್ದು ಬರುವಂತೆ ಹಿತ್ತಲಕಡೆಯಿಂದ ಬಂದರೆ, ಯಾವಾಗಲೂ ಮುಂದಲ ವರಾಂಡದಲ್ಲೇ ಮಹಾರಾಜರ ತರಹ ಕೆಂಪು ಜರಿಶಾಲು ಹೊದ್ದು ಕೂತಿರ್ತಿದ್ದ ನಮ್ಮ ತಾತ ಅವತ್ತು ಹಿತ್ತಲಲ್ಲೇ ಹಸುಕಟ್ಟೋ ಹಗ್ಗ ಹಿಡಿದು ನಿಂತಿರಬೇಕೆ! ಈ ನನ್ನ ದುಂಡುರುಂಬೆತನಕ್ಕೆ ಎರಡು ಪೆಟ್ಟೂ ಬಿದ್ದಿದ್ದವು. ಆದರೇನು, ನನಗೆ ಆ ಕಾಲಕ್ಕೆ ಕೇವಲ ಗಂಡು ವಿದ್ಯೆಗಳೆನಿಸಿದ್ದ ಚಿಣ್ಣಿ ದಾಂಡು, ಲಗೋರಿ, ಕಬಡ್ಡಿ, ಈಜು, ಸೈಕಲ್ ಸವಾರಿ ಎಲ್ಲಾ ಕಲೀಬೇಕು ಅನ್ಸೋದೇನು ಕಡಮೆಯಾಗಲಿಲ್ಲ. ನಮ್ಮದು ಸಂಪ್ರದಾಯಸ್ಥರ ಮನೆ. ಊರಿನ, ಸುತ್ತಮುತ್ತಲ ಹಳ್ಳಿಗಳ ಪುರೋಹಿತರ ಮನೆ. ಅಂಥಾ ಜೋಯಸರ ಹಟ್ಟಿ ಹುಡುಗಿ ಹೀಗೆ ಎಡವಟ್ಟಾಗಿ ಆಡೋದೆ?
ನಮ್ಮ ತಂದೆ ಆ ಕಾಲಕ್ಕೆ ಸ್ವಲ್ಪ ಉದಾರಿಯೇ ಆಗಿದ್ದರು. ಏನು ಮಾಡಿದರೂ ಯಾವತ್ತೂ ಗಂಡುಮಕ್ಕಳು ಹೆಣ್ಣುಮಕ್ಕಳು ಅಂತಾ ಭೇದ ಮಾಡಿದ್ದಿಲ್ಲ. ನೀನು ಹೆಣ್ಣುಹುಡುಗಿ ಅದು ಮಾಡಬಾರದು, ಅಲ್ಲಿಗೆ ಹೋಗಬಾರದು, ಇಂಥಾ ಕರಾರುಗಳನ್ನು ಹಾಕ್ತಾ ಇದ್ದಿದ್ದು ತುಂಬಾ ತುಂಬಾ ವಿರಳ. ಅಮ್ಮ ಆಗಾಗ್ಗೆ ಕೂಗಾಡಿದರೂ, ಮನೆ ಕೆಲಸ ಬೊಗಸೆಯ ಮಧ್ಯೆ ನಮ್ಮನ್ನು ಗಮನಿಸುವುದು ಅವಳಿಗೆ ಆಗುತ್ತಿರಲಿಲ್ಲ. ಅಪ್ಪನ ಮೌನವಾದ ಕುಮ್ಮಕ್ಕು, ನನ್ನ ಹತ್ತಿಕ್ಕಲಾಗದ ಆಸೆ ಕುತೂಹಲಕ್ಕೆ ಒಂದು ರೀತಿಯ ಇಂಬು ಕೊಡುತ್ತಿತ್ತೋ ಏನೋ. ಅಂತೂ ನನಗೆ ಬೇಕಾದ್ದನ್ನು ಮಾಡುತ್ತಲೇ ಬೆಳೆದೆ ನಾನು. ಈ ಲಂಗ ಹರಿದುಕೊಂಡು ಬಂದದ್ದು ಹೀಗೆ ಒಂದು ದಿನ ಸೈಕಲ್ ಕಲಿಯಲು ಹೋದಾಗಲೇ. ಅದೂ ಒಂದು ಕಥೆಯೇ.
ಬೇಸಿಗೆ ರಜೆ ಬಂತೆಂದರೆ ಊರಿನ ಎಲ್ಲಾ ಹುಡುಗರು ಸಂಜೆಯಾಯ್ತೆಂದರೆ ಬೀದಿಗಳಲ್ಲಿ ಮಾತಾಡ್ತಾ, ಸೈಕಲ್ ರೇಸ್ ಹೋಗೋದನ್ನ ನೋಡ್ತಾ ನೋಡ್ತಾ ನನಗೂ ಸೈಕಲ್ ಕಲಿಯುವ ಆಸೆ. ಬೇಸಿಗೆ ರಜೆ ಬಂತೆಂದರೆ ನಮ್ಮೂರಿನಲ್ಲಿ ಸೈಕಲ್ ಬಾಡಿಗೆ ಕೊಡುವ ಅಂಗಡಿಗಳಲ್ಲಿ ಚಟುವಟಿಕೆ ಜಾಸ್ತಿಯಾಗಿಬಿಡ್ತಿತ್ತು. ಒಂದು ಗಂಟೆಗೆ 25 ಪೈಸಾನೋ ಎಷ್ಟೋ ಇಸ್ಕೊಂಡು ಸೈಕಲ್ ಬಾಡಿಗೆಗೆ ಕೊಡೋರು. ಅವೋ ಲಡಕಾಸಿಗಳು. ಚೈನ್ ಕಳಚಿಕೊಳ್ಳೋದು, ಪೆಡಲ್ ಹಿಡ್ಕೊಳೋದು ಏನೇನೋ ತಕರಾರುಗಳು. ಅದರೂ ಕಲಿಯೋ ಹುಮ್ಮಸ್ಸಲ್ಲಿ ಅವೆಲ್ಲಾ ಗಮನಕ್ಕೆ ಬರ್ತಾ ಇರಲಿಲ್ಲ. ಆ ತಾಂತ್ರಿಕ ದೋಷಗಳೆಲ್ಲಾ ಗೊತ್ತಾಗ್ತಾ ಇದ್ದಿದ್ದೂ ಅಷ್ಟರಲ್ಲೇ ಇತ್ತು ಬಿಡಿ. ಮನೇಲಿ ಅಪ್ಪನ ಸೈಕಲ್ ಇದ್ರೂ ಕಲಿಯೋಕೆ ಬಾಡಿಗೆ ಸೈಕಲ್ಲೇ ಗತಿ. ಪುರೋಹಿತರ ಮನೆ ಆದ್ದರಿಂದ ಚಿಲ್ಲರೆ ಕಾಸಿಗೇನು ಬರ ಇರ್ತಿರಲಿಲ್ಲ. ಯಾರನ್ನೂ ಕೇಳ್ದೆ ಎತ್ತಕೊಂಡು ಹೋದರೂ ಲೆಕ್ಕ ಸಿಕ್ತಾ ಇರಲಿಲ್ಲ. ಚಿಲ್ಲರೆ ಹಾಕಿಡೋ ಬುಟ್ಟಿ ಖಾಲಿಯಾಗಿತ್ತು ಅಂದ್ರೆ, ಹಿಂದಿನ ಹರಿಗೋಲೆ ಮನೆಯಲ್ಲಿರುತ್ತಿದ್ದ ಯಾವುದಾದರೂ ಒಂದು ಪೌರೋಹಿತಿಕೆ ಮಾಡಿ ತಂದಿದ್ದ ಗಂಟನ್ನು ಬಿಚ್ಚಿ ಅಕ್ಕಿಯಲ್ಲಿ ಕೈಯಾಡಿಸಿದರೆ ಸಾಕು. ಅವತ್ತಿನ ನಮ್ಮ ಕೆಲಸಕ್ಕೆ ದುಡ್ಡು ಸಿಕ್ತಾ ಇತ್ತು. ಆದರೆ ಈ ಪೌರೋಹಿತಿಕೆಯ ಗಂಟು ಬಿಚ್ಚೋದೇ ಕೆಲವೊಮ್ಮೆ ಹರಸಾಹಸವಾಗ್ತಾ ಇತ್ತು. ಪ್ಲಾಸ್ಟಿಕ್ ಚೀಲಗಳು ಅಂದ್ರೆ ಏನೂ ಅಂತಾಲೇ ಗೊತ್ತಿರದಿದ್ದ ಕಾಲ ಅದು. ಹಳ್ಳಿಗಳಿಗೆ ಮದುವೆ ಮಾಡ್ಸಕ್ಕೆ ಹೋಗಿ ಬರುವಾಗ ಅವರು ಕೊಡುವ ಅಕ್ಕಿ, ಬೇರೆ ಬೇರೆ ಧಾನ್ಯಗಳು, ವೀಳ್ಯದೆಲೆ ಅಡಿಕೆ, ಎಲ್ಲವನ್ನೂ ಒಂದೇ ಪಂಚೆಯಲ್ಲಿ ಬೇರೆ ಬೇರೆ ಗಂಟುಗಳಾಗಿ ಮಾಡಿ ತರುತ್ತಿದ್ದರು. ನೋಡಲು ಅದು ಬೇರೆ ಬೇರೆ ಅಳತೆಯ ದ್ರಾಕ್ಷಿಗೊಂಚಲಿನಂತೆ ಕಾಣುತ್ತಿತ್ತು. ಅದನ್ನು ಹುರಿ, ನೂಲು ಏನೂ ಇಲ್ಲದೆ, ಪಂಚೆಯಿಂದಲೇ ಭದ್ರವಾಗಿ, ಒಂದಕ್ಕೊಂದು ಬೆರೆಯದಂತೆ ಕಟ್ಟುತ್ತಿದ್ದುದು ಒಂದು ಕೌಶಲವೇ. ಈಗೆಲ್ಲಾ ಒಂದೇ ದೊಡ್ಡ ಚೀಲದಲ್ಲಿ ಹಲವಾರು ಮರಿ ಚೀಲಗಳನ್ನು ಹುದುಗಿಸಿ ತಯಾರಿಸುತ್ತಾರಲ್ಲ, ಅದಕ್ಕೆ ಪ್ರೇರಣೆ ಈ ಪುರೋಹಿತರ ಏಕಧೋತ್ರಗ್ರಂಥಿಬಂಧನ ಕಲೆಯೇ ಇರಬೇಕು ಅಂತಾ ನನಗೆ ಗುಮಾನಿ. ಪಾಪ ಆ ಕಾಲದಲ್ಲಿ ಇಂದಿನಂತೆ ಹಿಡಿದು ಮುಟ್ಟಿದ್ದಕ್ಕೆಲ್ಲಾ ಪೇಟೆಂಟ್ ಮಾಡೋದು ಗೊತ್ತಿರಲಿಲ್ಲವಲ್ಲ. ಇಲ್ಲದೇ ಇದ್ದಿದ್ದರೆ ಯಾರಾದರೂ ಪುರೋಹಿತರ ಗಂಟಿಗೂ ಪೇಟೆಂಟ್ ಮಾಡಿಸಿರ್ತಿದ್ದರೋ ಏನೋ. ವಿಷಯ ಎಲ್ಲಿಗೋ ಹೋಯಿತು. ನೆನಪಿನ ದೋಣಿ ಹತ್ತಿದರೆ ಹುಟ್ಟು ಹಾಕದೆಯೇ ಸಾಗಿಬಿಡುತ್ತದೆ.
ಅಂತೂ ಹೇಗೋ ದುಡ್ಡು ಸಂಪಾದಿಸಿಕೊಂಡು ನಮಗೆ ಇದೇ ಸೈಕಲ್ ಸವಾರಿಯದೇ ಕೆಲಸ. ಸೈಕಲ್ ಅಂಗಡಿಯಿಂದ ತಮ್ಮಂದಿರನ್ನ ಕಾಡಿ ಬೇಡಿ ಸೈಕಲ್ ತರಿಸಿಕೊಂಡು ಇನ್ನೊಬ್ಬರನ್ನು ಸೇರಿಸಿಕೊಂಡು, ಸ್ವಯಮಾಚಾರ್ಯರಾಗಿ ಕಲಿಯೋದು. ಗಂಜೀಫಾ ರಘುಪತಿ ಅಂತಾ ಈಗೊಂದು ಹಲವು ವರ್ಷಗಳ ಕೆಳಗೆ ತುಂಬಾ ಹೆಸರುವಾಸಿಯಾಗಿದ್ದ ರಘುಪತಿ ನಮ್ಮೂರ ಹುಡುಗಾನೆ. ಹೆಚ್ಚೂಕಡಿಮೆ ನಮ್ಮ ವಯಸ್ಸಿನವನೇ. ಆಗಾಗ ಅವನಿಗೂ ನಮಗೂ ಏನೇನೋ ಕಾರಣಕ್ಕೆ ಮಾತಲ್ಲಿ ಝಟಾಪಟಿ ನಡೀತಾ ಇರೋದು. ಹೀಗೆ ಆದಾಗ, ನಾನೊಮ್ಮೆ ಅವನಿಗೆ “ ರಘುಪತಿ ಕೋತಿಪತಿ’’ ಅಂತಾ ಪ್ರಾಸಬದ್ಧವಾಗಿ ಛೇಡಿಸಿ ಸೈಕಲ್ ಹತ್ತಿ ಬಂದು ಬಿಟ್ಟೆ. ಅವನೂ ಆಗ ಸೈಕಲ್ ಹೊಡ್ಕೊಂಡು ಅಟ್ಟಿಸಿಕೊಂಡು ಬಂದು, ಸೈಕಲ್ ಹೊಡಿಯೋದರಲ್ಲಿ ಇನ್ನೂ ಬಚ್ಚಾ ಆಗಿದ್ದ ನನ್ನನ್ನು ಅವನು ಶರವೇಗದ ಸರದಾರನಂತೆ ತೀರಾ ಪಕ್ಕಕ್ಕೇ ಬಂದು ಹೆದರಿಸಿ, ನಾನು ಹೇಗ್ಹೇಗೋ ಹ್ಯಾಂಡಲ್ ತಿರುಗಿಸಿ, ಬ್ಯಾಲೆನ್ಸ್ ತಪ್ಪಿ. ಉದ್ದದ ಲಂಗ ಚೈನ್ಗೆ ಸಿಕ್ಕಿ ಕೆಳಕ್ಕೆ ಬಿದ್ದು, ಲಂಗ ಹರಿದು… ಹಾಗಾದಾಗಲೇ ತಾತನ ಬೈಗುಳದ ಕಜ್ಜಾಯವೂ ಸಿಕ್ಕಿದ್ದು.
ಇದಾದ ಮೇಲೆ ಯಾರೇ ಅಟ್ಟಿಸಿಕೊಂಡು ಬಂದರೂ ಬೀಳದಂತೆ ಸರಿಯಾಗಿ ಸೈಕಲ್ ಕಲಿಯಲೇಬೇಕು ಅಂತಾ ಛಲ ಹುಟ್ಟಿತು. ಛಲ ಸಾಧಿಸಲು ನಾನು ಸಹಾಯಕನನ್ನಾಗಿ ಹಿಡಿದದ್ದು ನಮ್ಮ ಮನೆ ದನ ಕಾಯೋ ಆಳುಮಗ ನಿಂಗನನ್ನು. ಆಗ ನಮ್ಮ ಮನೆಯ ಹಿತ್ತಲಲ್ಲೇ ಮನೆ ಕೊಟ್ಟು ಅವನ ಅಣ್ಣ ಅತ್ತಿಗೆಯರನ್ನು ಇಟ್ಟುಕೊಂಡಿದ್ದೆವು. ಈ ನಿಂಗನೂ ಅಲ್ಲೇ ಅವರ ಜೊತೆಯಲ್ಲೇ ಇದ್ದು ನಮ್ಮ ಮನೆ ಕೊಟ್ಟಿಗೆಯ ನಿಗಾ ನೋಡ್ಕೋತಾ ಇದ್ದ. ನಿಂಗ ಆಗಲೇ 20ರ ಯುವಕ. ಅವನು ಆ ಮಕ್ಕಳಾಟಿಗೆಯಂತಹ ಬಾಡಿಗೆ ಸೈಕಲ್ನಲ್ಲಿ ಕಲಿಸಕ್ಕೆ ತಯಾರಿರಲ್ಲ. ಏನು ಮಾಡೋದು? ನಮ್ಮಪ್ಪ ಸ್ಕೂಲಿನ ಗುಮಾಸ್ತಿಕೆ ಕೆಲಸ ಮುಗಿಸಿ ಮನೆಗೆ ಬಂದ ಮೇಲೆ ತೋಟಕ್ಕೆ ಹೋಗೋರು. ಆಗ ಅವರ ಸೈಕಲ್ ಮನೇಲೇ ಇರೋದಲ್ಲ. ಅದರಲ್ಲೇ ಕಲಿಯೋದು ಅಂತಾ ಒಪ್ಪಂದ ಆಯ್ತು. ನಿಂಗನಿಗೂ ತಮ್ಮ ಯಜಮಾನರ ಹೀರೋ ಸೈಕಲ್ನಲ್ಲಿ ಹೀರೋ ತರಹ, ಯಜಮಾನರ ಮಗಳನ್ನು ಕುಂಡ್ರಿಸ್ಕೊಂಡು, ಸೈಕಲ್ ಕಲಿಸೋದು ಅಂದ್ರೆ ಕಡಿಮೆ ಐಭೋಗವೇ ಅವನ ಪಾಲಿಗೆ! ಖುಶಿಯಾಗಿ ಒಪ್ಪಿಕೊಂಡ.
ಒಂದೆರಡು ದಿನ ನಿರಾತಂಕವಾಗಿ ನಡೀತು ಈ ಪ್ರಶಿಕ್ಷಣ ಪರ್ವ. ಅವನು ಹಿಂದೆ ಕುಳಿತು, ನಾನು ಬಾರ್ ಮೇಲೆ ಅರೆಪೆಡಲ್ ಮಾಡ್ತಾ ಕಲಿಯೋ ಸರ್ಕಸ್. ಕಲಿಯೋ ಜಾಗವೋ ನಮ್ಮ ಮನೆಯ ಹಿಂದೇನೇ ಇರೋ ರಾಜಮಾರ್ಗ. ಆ ಬೀದಿಯ ಒಂದು ತುದಿಯಲ್ಲಿ ಕೇಶವದೇವಸ್ಥಾನದ ಹಿಂಬದಿಯ ಪೌಳಿಗೋಡೆ, ಮತ್ತೊಂದು ತುದಿಯಲ್ಲಿ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಮಹಾದ್ವಾರ, ಗರುಡಗಂಬ. ಯೋಗಾನರಸಿಂಹಸ್ವಾಮಿ ದೇವಾಲಯದ ಹಿಂಬದಿಗೆ ಒಕ್ಕಲಿಗರ, ಗೌಳಿಗರ ಕೇರಿ.
ಹೀಗೆ ಒಂದು ದಿನ ದೇವತಾದ್ವಂದ್ವ ಸಾಕ್ಷಿಯಾಗಿ ಸೈಕಲ್ ಕಲಿಕೆ ನಡೀತಾ ಇದೆ. ನಾನು ಬಾರ್ ಮೇಲೆ ಕೂತು, ನೆಪಕ್ಕೆ ಹ್ಯಾಂಡಲ್ ಹಿಡಿದು ಪೆಡಲ್ ಮಾಡೋದನ್ನು ಕಲೀತಿದಿದ್ದದ್ದು. ಹ್ಯಾಂಡಲ್ನೆಲ್ಲಾ ನಿಂಗನೇ ನಿಯಂತ್ರಿಸ್ತಾ ಇದ್ದದ್ದು. ಆದರೆ ನಾನು ನಾನೇ ಸೈಕಲ್ ಚಲಾಯ್ಸತಿದ್ದೀನಿ ಅಂತಾ ಭ್ರಮಿಸ್ತಾ ಇದ್ದದ್ದು.
ಮುಸ್ಸಂಜೆಯ ಹೊತ್ತು. ನಮ್ಮ ಮುಂದೆ ಒಬ್ಬಳು ಗೌಳಿಗಿತ್ತಿ ಹೋಗ್ತಾ ಇದ್ದಾಳೆ. ಯಾರದ್ದೋ ವರ್ತನೆಯೋರ ಮನೆಗೆ ಹಾಲು ಹಾಕೋಕೆ ಇರಬೇಕು. ಅವಳು ವಿಶಿಷ್ಟವಾದ ಒಂದು ಭಂಗಿಯಲ್ಲಿ, ಭುಜದವರೆಗೆ ಎತ್ತಿದ ಕೈಯಲ್ಲಿ ಚೊಂಬನ್ನು ಹಿಡಿದು ವೈಯಾರದಿಂದ ಕೃಷ್ಣಕರ್ಣಾಮೃತದಲ್ಲಿ ಲೀಲಾಶುಕ ಹೇಳುವಂತೆ “ವಿಕ್ರೇತು ಕಾಮಾ ಖಿಲ ಗೋಪಕನ್ಯಾ” ಎನ್ನುವಂತೆ ಹೆಜ್ಜೆ ಹಾಕ್ತಾ ಹೋಗ್ತಾ ಇದ್ದಾಳೆ. ಆ ನಿತಂಬಗುರ್ವಿಯನ್ನು ಕಂಡ ಈ ನಿಂಗನಿಗೇನಾಯಿತೋ ಗೊತ್ತಿಲ್ಲ. ಎಲ್ಲಿ ಯಾವ ಸ್ಕ್ರೂ ಕಳಚಿ ಸಡಿಲಾಯ್ತೋ, ಎಲ್ಲಿ ಸೈಕಲ್ನ ಡೈನಮೋದ ವಿದ್ಯುತ್ತಿನ ಝಟ್ಕಾ ತಗುಲಿತೋ ಗೊತ್ತಿಲ್ಲ. ಒಂದು ಸ್ವಲ್ಪ ಹೊತ್ತು ಹ್ಯಾಂಡಲ್ ಮೇಲೆ ಅವನ ಹಿಡಿತ ತಪ್ಪೇ ಹೋಯಿತು, ನಾನು ನನಗೇ ಬಿಟ್ಟಿದ್ದಾನೆ, ನನ್ನ ಕಲಿಕೆಯ ಪ್ರಗತಿ ತುಂಬಾ ಚೆನ್ನಾಗಿರೋ ಹಾಗಿದೆ ಎನ್ನುವ ಹುಮ್ಮಸ್ಸಿನಿಂದ ಎತ್ತೆತ್ತಲೋ ತಿರುಗಿಸಿ, ಅದು ನೇರ ಹೋಗಿ ಆ ಗೌಳಿಗಿತ್ತಿಗೆ ಗುದ್ದೇ ಬಿಡ್ತು ನೋಡಿ. ಅವಳು “ಯಪ್ಪೋ ಯಪ್ಪೋ” ಅಂತಾ ಬಡ್ಕೊಳ್ಳೋದನ್ನು ಕೇಳಿ ನಿಂಗನಿಗೆ ಗಾಬರಿ ಶುರು ಆಗಿ, ಹೇಗೋ ಸೈಕಲ್ ನಿಲ್ಸಿಸಿದ. ಆದರೇನು ಅಷ್ಟೊತ್ತಿಗೆ ಅವಳ ಕೈಯಲ್ಲಿದ್ದ ಹಾಲಿನ ಚೊಂಬು ಕೆಳಗೆ ಬಿದ್ದು ನೆಲತಾಯಿಗೆ ಕ್ಷೀರಾಭಿಷೇಕ ನಡೆದು ಹೋಗಿತ್ತು. ಅವಳು ನಮ್ಮಿಬ್ಬರಗೂ ಬೈದು, ನನ್ನನ್ನಂತೂ “ಅಯ್ನೋರ ಮಗಳು, ನೀವು ಇವ್ನ ಜೊತೆ ಸೈಕಲ್ ಕಲಿಯೋದಾ? ನಿಮ್ಗೆ ಯಾಕ್ರವ್ವಾ ಇದು, ಈ ಕೆಲಸ? ನಡೀರಿ ಬತ್ತೀನಿ ಹಿಂಗುಟ್ಟೆಯಾ ಅವ್ವಾರ್ಗೆ ಹೇಳ್ತೀನಿ, ನೀವು ಮಾಡಿದ ಘನಂದಾರಿ ಕೆಲಸಾವ” ಅಂತಾ ಗದರಿ, ಗರ್ಜಿಸಿ ಹೊರಟು ಹೋದಳು. ನಾನೂ ಏನೊಂದೂ ಮಾತಾಡದೆ ಮನೆಗೆ ಬಂದು ಸೇರ್ಕೊಂಡೆ. ಆ ಹಾಲಮ್ಮ ಬರ್ತಾಳೇನೋ ಅಂತಾ ತುಂಬಾ ಹೊತ್ತು ಭಯ ಆಗ್ತಾ ಇತ್ತು. ಅವಳೇನು ಬರಲಿಲ್ಲ. ಆದರೆ ಮುಂದೆ ನಿಂಗ ಗುರುವಿನ ಸಹವಾಸದಲ್ಲಿ ಸೈಕಲ್ ಕಲಿಯೋ ಪರ್ವಕ್ಕೆ ಬ್ರೇಕ್ ಅಂತೂ ಬಿತ್ತು. ಅಷ್ಟೊತ್ತಿಗೆ ಸ್ವಲ್ಪ ಬ್ಯಾಲೆನ್ಸೂ ಬಂದಿತ್ತು ಅಂದ್ಕೊಳ್ಳಿ. ಆದರೆ ಮುಂದೆಂದೂ ನಾನು ನಮ್ಮ ಊರಿನಲ್ಲಿ ಸೈಕಲ್ ಹೊಡಿಯೋ ಸಾಹಸ ಮಾಡಲಿಲ್ಲ. ಯಾಕೆ ಅಂದರೆ ಆಗೆಲ್ಲಾ ನಮ್ಮ ಊರಂತ ಸಣ್ಣ ಊರಲ್ಲಿ ಹೆಣ್ಣು ಹುಡುಗೀರು ಸೈಕಲ್ ಬಳಸೋ ಪ್ರಮೇಯಾನೇ ಬರ್ತಾ ಇರಲಿಲ್ಲ. ಎಡವಿ ಬಿದ್ದರೆ ನಾವು ಹೋಗಬೇಕಾದ ಜಾಗವೆಲ್ಲಾ ಕಾಲ್ಗೆ ಸಿಕ್ಕಿಹಾಕ್ಕೋತಿದ್ವು. ಆದರೆ ಹಟಕ್ಕೆ ಬಿದ್ದು ಕಲಿತ ಸೈಕಲ್ನಿಂದಾಗಿ, ಮುಂದೆ ಮದ್ರಾಸು, ಬೆಂಗಳೂರಿನಂತಹ ಪಟ್ಟಣಗಳಲ್ಲಿ ಸ್ವತಂತ್ರವಾಗಿ ಸ್ಕೂಟರ್ ಓಡಾಡಿಸೋ ಆತ್ಮವಿಶ್ವಾಸ ಬಂದಿದ್ದಂತೂ ನಿಜ. ಕಲಿತ ವಿದ್ಯೆ ಉಪಯೋಗಕ್ಕೆ ಬರದೆ ಹೋದೀತೆ!
ಅಲ್ಲಾ ಈ ಮನಸ್ಸಿನ ನೆನಪಿನ ಪಣತ ಎಷ್ಟು ಅದ್ಭುತವಲ್ಲವೇ? ಅಲ್ಲಿ ಒಮ್ಮೆ ಅನುಭವಗಳು ಬಂದು ಸೇರಿಕೊಂಡರಾಯಿತು. ಹುಳಿಯದು, ಕೊಳೆಯದು. ಯಾವ ವೈಟ್, ಬ್ಲಾಕ್ ಫಂಗಸ್ಗಳ ಕಾಟವಿಲ್ಲ. ಏನೋ ಒಂದು ಕೆಣಕು. ಒಂದು ಅಣಕು. ಒಂದು ಮಾತು. ಒಂದು ರಾಗ. ಒಂದು ನೋಟ. ಮನಸ್ಸು ಪಣತದಾಳದಿಂದ ಆ ಸ್ಮೃತಿಯ ಕಾಳನ್ನು ಹೆಕ್ಕಿ ಮೇಲೆತ್ತಿ ಕೊಟ್ಟುಬಿಡುತ್ತದೆ. ಹಸಿಹಸಿಯಾಗಲ್ಲದೆ ಕಾಲದ ಕಾವಿನಲ್ಲಿ ಪಾಕಗೊಳಿಸಿ ಸವಿಯಾಗಿಸಿ ಕೊಡುತ್ತದೆ ನೋಡಿ. ಅನುಭವಕಾಲದಲ್ಲಿ ಕಹಿಯೆನಿಸಿದ್ದ, ಅಹಿತವಾಗಿದ್ದ ಘಟನೆಗಳೂ, ಕಾಲಕಳೆದು ಸ್ಮೃತಿಯಾಗಿ ಸವಿಯುವಾಗ, ಕಾವು ತಣಿದ ಸಹ್ಯ ಭೋಜನವೇ ಆಗಿರುತ್ತದೆ. ಅದು ನೆನಪುಗಳ ವಿಶೇಷವೇನೋ! ಇಂದಾಗಿದ್ದೂ ಹಾಗೆಯೇ ನೋಡಿ. ಇವತ್ತು ಬೆಂಗಳೂರು ಆಕಾಶವಾಣಿಯ ವಿವಿಧಭಾರತಿಯಲ್ಲಿ ಶ್ರೋತೃಗಳ ಸೈಕಲ್ ಸವಾರಿಯ ನೆನಪುಗಳ ಜೊತೆ ಜೊತೆಯಲ್ಲಿ ಬೆಳಗಿನ ಚಿತ್ರಗೀತೆಗಳನ್ನು ಬಿತ್ತರಿಸುತ್ತಿದ್ದರು. ಅದನ್ನು ಕೇಳಿದ ನನಗೂ, ನಾನು ಸೈಕಲ್ ಕಲಿತ ದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದವು.