ರಷ್ಯಾ–ಯುಕ್ರೇನ್ ಸಮರದಿಂದ ಭಾರತದಂಥ ತ್ರಯಸ್ಥ ರಾಷ್ಟ್ರಗಳು ಕಲಿಯಬೇಕಾದ ಪಾಠಗಳು ಹಲವಾರು. ಮೊತ್ತಮೊದಲನೆಯದಾಗಿ ವಿಷಮ ಪರಿಸ್ಥಿತಿ ಎದುರಾದಾಗ ಅನ್ಯ ದೇಶಗಳಿಂದ ಲಭಿಸಬಹುದಾದ ನೆರವು–ಸಹಾನುಭೂತಿಗಳು ಪರ್ಯಾಪ್ತವಾಗಲಾರದೆಂಬುದನ್ನು ಯುಕ್ರೇನ್ ಸನ್ನಿವೇಶ ಸ್ಪಷ್ಟೀಕರಿಸಿದೆ. ಕಾರ್ಗಿಲ್ನಂತಹ ಪರಿಮಿತ ಯುದ್ಧ ಸಂದರ್ಭದಲ್ಲಿಯೂ ಭಾರತ ಯುದ್ಧಸಾಮಗ್ರಿಗಳ ಕೊರತೆಯನ್ನು ಅನುಭವಿಸಿತ್ತು ಎಂಬುದನ್ನು ಮರೆಯುವಂತಿಲ್ಲ. ಸದಾ ಆಕ್ರಮಣಶೀಲಗಳಾದ ಚೀಣಾ ಮತ್ತು ಪಾಕಿಸ್ತಾನ ಎರಡೂ ಶತ್ರುದೇಶಗಳ ಆಕ್ರಮಣವನ್ನು ಏಕಕಾಲಕ್ಕೆ ಎದುರಿಸಲಾಗುವ ಸಾಮರ್ಥ್ಯವನ್ನು ಭಾರತ ಬೆಳೆಸಿಕೊಳ್ಳದೆ ಗತ್ಯಂತರವಿಲ್ಲ.
ಯುದ್ಧಗಳು ಮುಗಿಯುವುದಿಲ್ಲ. ಏಕೆಂದರೆ ಯುದ್ಧಗಳ ಪ್ರವರ್ತಕರ ಆಶಯ ಯಾವುದೊ ಭೌಗೋಲಿಕಾದಿ ಪ್ರಯೋಜನಗಳಿಗೆ ಸೀಮಿತವಿರುವುದಿಲ್ಲ. ಹೀಗಾಗಿ ಘೋಷಿತ ಗುರಿಗಳು ಒಂದಷ್ಟುಮಟ್ಟಿಗೆ ಈಡೇರಿದಂತೆನಿಸಿದರೂ ಶಿಲ್ಕು ಉಳಿದೇ ಇರುತ್ತದೆ. ಯುಕ್ರೇನ್ ದೇಶದ ಮೇಲೆ ರಷ್ಯಾ ನಡೆಸಿದ ಆಕ್ರಮಣಕ್ಕೆ ಒಂದು ವರ್ಷ ಮುಗಿದು ಎರಡನೇ ವರ್ಷ ಶುರುವಾಗಿದ್ದರೂ ಯುದ್ಧದ ಮುಗಿವಿನ ಲಕ್ಷಣಗಳೇನೂ ಕಾಣುತ್ತಿಲ್ಲ. ಪ್ರಾಣಹಾನಿ, ಸಂಪನ್ಮೂಲ ದುರ್ವ್ಯಯ ಮತ್ತು ಆಯಾಸಗಳಿಂದಲಾದರೂ ಯುದ್ಧೋತ್ಸುಕ ರಷ್ಯಾ ರಣಾಂಗಣದಿಂದ ಹಿಂದೆ ಸರಿಯುವಂತಾಗಲಿ ಎಂಬ ಆಕಾಂಕ್ಷೆಗೆ ಉಳಿದ ಜಗತ್ತು ಜೋತುಬೀಳಬೇಕಾಗಿ ಬಂದಿದೆಯೆ?
ಜಗತ್ತಿನ ಪ್ರಾದೇಶಿಕ ಸಮರಗಳಲ್ಲಿ ಇತ್ತೀಚಿನದಾದ ರಷ್ಯಾ-ಯುಕ್ರೇನ್ ಸಂಘರ್ಷದ ಕೆಲವು ಆಯಾಮಗಳನ್ನು ಸಾಂದರ್ಭಿಕವಾಗಿ ಸ್ಮರಿಸಬಹುದು.
ಮೊದಲನೆಯದಾಗಿ ಎದ್ದುಕಾಣುವ ಸಂಗತಿಯೆಂದರೆ – ಸದ್ದಾಮನ ದುರಾಕ್ರಮಣಕ್ಕೊಳಗಾದ ಕುವೈತ್ನಂತೆ ಯುಕ್ರೇನ್ ಅಂಗೈಯಗಲದ ದೇಶವಲ್ಲ. ಆರು ಲಕ್ಷ ಚದರಕಿಲೋಮೀಟರಿನಷ್ಟು ವಿಸ್ತಾರವಾದ, ೪.೧೩ ಕೋಟಿ ಜನಸಂಖ್ಯೆಯುಳ್ಳ ಯುಕ್ರೇನ್ ಇಡೀ ಯುರೋಪಿನಲ್ಲಿಯೆ ಎರಡನೇ ಅತಿ ದೊಡ್ಡ ದೇಶ; ಅದಕ್ಕಿಂತ ದೊಡ್ಡದು ರಷ್ಯಾ ಮಾತ್ರ. ಜಗತ್ತಿನಲ್ಲಿಯೆ ಅತ್ಯಂತ ಹೆಚ್ಚು ಪ್ರಮಾಣದ ಧಾನ್ಯ ರಫ್ತು ಮಾಡುತ್ತಿರುವ ದೇಶಗಳಲ್ಲೊಂದು, ಯುಕ್ರೇನ್. ಜಗತ್ತಿನಲ್ಲಿಯೆ ಅತಿ ಹೆಚ್ಚು ಸೂರ್ಯಕಾಂತಿ ಬೀಜಗಳನ್ನು ಉತ್ಪಾದಿಸುತ್ತಿರುವ ದೇಶ ಯುಕ್ರೇನ್. ಹತ್ತಿರಹತ್ತಿರ ಏಳು ದಶಕಗಳ ಕಾಲ ಅದು ರಷ್ಯಾ ಒಕ್ಕೂಟದ ಭಾಗವಾಗಿತ್ತಾದರೂ ರಷ್ಯಾದಿಂದ ಪ್ರತ್ಯೇಕಗೊಂಡು ಸ್ವತಂತ್ರವಾಗಿ ಮೂವತ್ತೊಂದು ವರ್ಷಗಳೇ ಕಳೆದಿವೆ. ಯುರೋಪಿಯನ್ ಯೂನಿಯನಿನ ಪ್ರಮುಖ ವಾಣಿಜ್ಯ-ಸಹಯೋಗಿ ದೇಶಗಳಲ್ಲೊಂದು ಯುಕ್ರೇನ್. ಅದು ಬೇರೆಡೆಗಳಲ್ಲಿರುವಂತಹ ಸಣ್ಣ ‘ಬಕೆಟ್’ ದೇಶ ಅಥವಾ ‘ಬ್ಯಾಸ್ಕೆಟ್ ಕೇಸ್’ ಅಲ್ಲವೆಂದು ಸೂಚಿಸಲು ಈ ವಿವರಗಳನ್ನು ಸ್ಮರಿಸಿದ್ದಾಯಿತು. ಗಮನಿಸಬೇಕಾದ್ದೆಂದರೆ ಇಂತಹ ಬೃಹತ್ ಸಂಪನ್ನ ದೇಶವೂ ದುರಾಕ್ರಮಣವನ್ನು ತಪ್ಪಿಸಿಕೊಳ್ಳಲಾಗಲಿಲ್ಲವೆಂಬುದು.
ಇದುವರೆಗೆ ಮೂರು ಲಕ್ಷದಷ್ಟು ಜೀವಗಳನ್ನು ಯುದ್ಧವು ಆಹುತಿ ತೆಗೆದುಕೊಂಡಿದೆ. ನಿರ್ವಾಸಿತರಾಗಿರುವವರ ಲೆಕ್ಕವೇ ಸಿಗದು. ಜಗತ್ತು ಕೋವಿಡ್ ಸಾಂಕ್ರಾಮಿಕದ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದುದರ ಹಿಂದುಗೂಡಿ ಈ ಯುದ್ಧದ ಪರಿಣಾಮಗಳನ್ನು ಎದುರಿಸಬೇಕಾಗಿ ಬಂದದ್ದು ಒಂದು ದೊಡ್ಡ ದುರಂತ. ಅದು ದೇಶವಿದೇಶಗಳಲ್ಲಿ ಆರ್ಥಿಕ ಸಂಕಷ್ಟಕ್ಕೂ ಆಹಾರಾಭಾವಕ್ಕೂ ಇಂಧನಕೊರತೆಗೂ ಕಾರಣವಾಗಿದೆ. ಕಡಮೆ ವರಮಾನದ ದೇಶಗಳವರ ಮೇಲೆ ಪರಿಣಾಮ ಹೆಚ್ಚು ತೀಕ್ಷ್ಣವಾಗಿದೆ.
ಪ್ರಬಲ ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಹೇರಿದ ‘ಪ್ರತಿಬಂಧಕಗಳು’ (‘ಸ್ಯಾಂಕ್ಶನ್ಸ್’) ಹೆಚ್ಚಿನ ಪರಿಣಾಮ ಬೀರಿದಂತಿಲ್ಲ. ವಿಶ್ವಸಂಸ್ಥೆಯಂತೂ ಇದುವರೆಗೆ ಯಾವ ದೊಡ್ಡ ಜಾಗತಿಕ ಯುದ್ಧವನ್ನೂ ನಿವಾರಿಸಿದ ಅಥವಾ ನಿಯಂತ್ರಿಸಿದ ದಾಖಲೆ ಇಲ್ಲ. ಅದರ ಭದ್ರತಾ ಮಂಡಳಿಗೆ (‘ಸೆಕ್ಯುರಿಟಿ ಕೌನ್ಸಿಲ್’) ಪ್ರಾತಿನಿಧಿಕ ಗುಣವತ್ತತೆಯೂ ಇಲ್ಲ. ಅದರ ಈಚಿನ ಸಭೆಯಲ್ಲಿ ಯುದ್ಧಸಂತ್ರಸ್ತರಿಗೆ ಅನುಕಂಪ ಸೂಚಿಸುವ ಒಂದು ನಿಮಿಷದ ಮೌನಾಚರಣೆಯೂ ಶಕ್ಯವಾಗಲಿಲ್ಲ.
ರಷ್ಯಾ-ಯುಕ್ರೇನ್ ಸಮರದಿಂದ ಭಾರತದಂಥ ತ್ರಯಸ್ಥ ರಾಷ್ಟ್ರಗಳು ಕಲಿಯಬೇಕಾದ ಪಾಠಗಳು ಹಲವಾರು. ಮೊತ್ತಮೊದಲನೆಯದಾಗಿ ವಿಷಮ ಪರಿಸ್ಥಿತಿ ಎದುರಾದಾಗ ಅನ್ಯ ದೇಶಗಳಿಂದ ಲಭಿಸಬಹುದಾದ ನೆರವು-ಸಹಾನುಭೂತಿಗಳು ಪರ್ಯಾಪ್ತವಾಗಲಾರದೆಂಬುದನ್ನು ಯುಕ್ರೇನ್ ಸನ್ನಿವೇಶ ಸ್ಪಷ್ಟೀಕರಿಸಿದೆ. ಕಾರ್ಗಿಲ್ನಂತಹ ಪರಿಮಿತ ಯುದ್ಧ ಸಂದರ್ಭದಲ್ಲಿಯೂ ಭಾರತ ಯುದ್ಧಸಾಮಗ್ರಿಗಳ ಕೊರತೆಯನ್ನು ಅನುಭವಿಸಿತ್ತು ಎಂಬುದನ್ನು ಮರೆಯುವಂತಿಲ್ಲ. ಸದಾ ಆಕ್ರಮಣಶೀಲಗಳಾದ ಚೀನಾ ಮತ್ತು ಪಾಕಿಸ್ತಾನ ಎರಡೂ ಶತ್ರುದೇಶಗಳ ಆಕ್ರಮಣವನ್ನು ಏಕಕಾಲಕ್ಕೆ ಎದುರಿಸಲಾಗುವ ಸಾಮರ್ಥ್ಯವನ್ನು ಭಾರತ ಬೆಳೆಸಿಕೊಳ್ಳದೆ ಗತ್ಯಂತರವಿಲ್ಲ.
ಪಾಕಿಸ್ತಾನದ ಆಕ್ರಮಕತೆಗಿಂತ ಭಾರತಕಕ್ಕೆ ಹೆಚ್ಚಿನ ಆತಂಕವಿರುವುದು ಚೀಣಾದಿಂದ.
ಒಂದು ವೇಳೆ ಚೀಣಾ ಆಕ್ರಮಣವನ್ನು ಎದುರಿಸಬೇಕಾದ ಸ್ಥಿತಿ ಭಾರತಕ್ಕೆ ಒದಗಿದರೆ ಭಾರತದ ನೆರವಿಗೆ ಪಾಶ್ಚಾತ್ಯ ದೇಶಗಳು ಕೂಡಲೆ ಧಾವಿಸಿಬಿಡುವವೆಂದು ವಿಶ್ವಾಸ ತಳೆಯಲು ಆಧಾರವಿಲ್ಲ. ಏಕೆಂದರೆ ಹೆಚ್ಚಿನ ಪಾಶ್ಚಾತ್ಯ ದೇಶಗಳಿಗೆ ಚೀಣಾದೊಡನೆ ಘನಿಷ್ಠ ವಾಣಿಜ್ಯಸಂಬಂಧಗಳಿವೆ. ಈ ಸೂಕ್ಷ್ಮತೆಯನ್ನೂ ಭಾರತ ಅಲಕ್ಷಿಸುವಂತಿಲ್ಲ. ಪ್ರಕೃತ ಸನ್ನಿವೇಶದಲ್ಲಿ ಸೈಬರ್ ಸಮರದ ಪ್ರಾಥಮಿಕತೆಯನ್ನೂ ರಷ್ಯಾ-ಯುಕ್ರೇನ್ ಯುದ್ಧ ಸಾಕ್ಷ್ಯಪಡಿಸಿದೆ. ಹೀಗೆ ಭಾರತ ಸೈಬರ್ ಸಾಮರ್ಥ್ಯ ಬೆಳೆಸಿಕೊಳ್ಳುವುದು, ಚೀಣಾದ ಹ್ಯಾಕಿಂಗನ್ನು ನಿಷ್ಕ್ರಿಯಗೊಳಿಸುವುದು ಮೊದಲಾದವಕ್ಕೂ ಆದ್ಯತೆ ನೀಡಲೇಬೇಕಾಗಿದೆ.