ಶಾಲೆಗೆ ರಜೆ ಇದೆಯಲ್ಲ ಎಂದು ನಗರದ ಸಂಬಂಧಿಗಳ ಮನೆಗೆ ಹೋಗುವ ಮಕ್ಕಳು, ಅಲ್ಲಿನ ವೈಭವದ ಮನೆ, ತಿನ್ನುವ ಆಹಾರ, ಮನೆಯಲ್ಲಿ ಇರುವ ಆಧುನಿಕ ಯಂತ್ರಗಳು, ಪರಿಕರಗಳು, ಅವರ ಮನೆಯಲ್ಲಿ ಇರುವ ಚಪ್ಪಲಿ, ಶೂಗಳ ರಾಶಿ. ವಾರಾಂತ್ಯದ ಮೋಜು ಇತ್ಯಾದಿಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಊರಿಗೆ ಮರಳಿದಾಗ ಇನ್ನೊಂದು ರೀತಿಯ ಗೋಳು ಹಳ್ಳಿಯಲ್ಲಿ ಅಥವಾ ಮೂಲಮನೆಯಲ್ಲಿ ಇರುವ ಪೋಷಕರಿಗೆ.
ಬೆಳ್ಳಂಬೆಳಗ್ಗೆ ಹುಲ್ಲು ಸವರಲು ಬಂದಿದ್ದ ಗುಲಾಬಿಯದ್ದು ಒಂದೇ ರಾಗ. “ಅಯ್ಯೋ ಅಮ್ಮಾ ಮನೆಗ್ ಬೆಂಗಳೂರಿನ ನೆಂಟ್ರ್ ಬಂದ್ ಹೋದ್ ಅಂಬ್ದ್ ದೊಡ್ ಮಳೆ ಬಂದ್ ಹಿರ್ದ್ ಹಾಂಗ್ ಆಯ್ತ್ ರ್ರೆ. ಯಬ್ಬಾ, ಅವ್ರೆಲ್ಲಾ ಮಸ್ತ್ ದುಡಿತ್ರ್, ಹಾಂಗೆ ಖರ್ಚೂ ಮಾಡ್ತ್ರ್.ಅದೆಲ್ಲಾ ನಮ್ ಮನಿ ಮಕ್ಳಿಗ್ ಹೇಳ್ರೆ ಗೊತಾತ್ತಾ? ನಮ್ಮನೆ ಗಂಡಿದ್ ಒಂದೇ ರಗ್ಳಿ, ಆ ಬೆಂಗಳೂರು ಅತ್ತೆ ಮಗ ನನ್ಕಿಂತ ಸಣ್ ಗಂಡ್ ಅದ್ರ ಹತ್ರೆ ಹ್ಯಾಂಗಿನ್ ಮೆಟ್ ಇತ್ ಕಾಣ್. ಆ ಅತ್ತೆ ಮಗಳ ವಾಚ್ ಕಂಡಿದ್ಯಾ? ಅಂದ್ ನಮ್ ಹೆಣ್ಣಿನ ರಗ್ಳಿ.”
“ಅದೆಲ್ಲಾ ಎಂತದೋ ಬ್ರಾಂಡ್ ಅಂಬ್ರ್ ಮರ್ರೆ. ಆ ಮಕ್ಕಳ್ ಮಕ್ಕಳ್ ಮಾತಾಡ್ತೆ ಅದನ್ನೇ ಹೇಳುದ್. ಈ ಬಲಾದರ್(ಹಿರಿಯರು) ಆದರೂ ಸುಮ್ನೆ ಆಯ್ಕಂತ್ರಾ? ಗಡೆ ನೀನಿನ್ನೂ ಈ ಹಬ್ಬದ ಗರದಂಗ್ ತಕಂಡ್ ವಾಚ್ ಹೈಕಂಡೇ ಕಾಲೇಜಿಗ್ ಹೋಪ್ದಾ?” ಅಂದ್ ರಾಗ ಎಳುದ್.

“ಪಟ್ನದಿಂದ್ ಬಂದರಿಗೆ ನಮ್ ಬಚ್ಲ್ ಮನಿಯಂಗ್ ಇಪ್ ಸಾಬೂನೂ ಸದ್ರ ಆತ್ ರ್ರೆ, ಕುಡು ಚಾ ಹೊಡಿನೂ ರೇಟ್ ಕೇಂಡ್ ತೂಗ್ತ್ರ್. ಯಬ್ಬ್ಯಾ… ಯಾರಾರೂ ಪರೂರಂಗ್ ಇಪ್ ನೆಂಟ್ರ್ ಬತ್ರ್ ಅಂದ್ರೆ ಚಳಿ ಜರ ಬತ್” ಅಂದ್ ಒಂದೇ ಉಸುರಿಗೆ ಹೇಳಿ ಮುಗ್ಸಿ… ಚಹಾ ಕುಡಿದು ತೋಟದೆಡೆ ನೆಡೆದಳು ಗುಲಾಬಿ.
ಈಗ ಈ ಕುರಿತು ಯೋಚಿಸುವ ಸರದಿ ನನ್ನದೂ ಆಯಿತು. ಜೊತೆಗೆ ನಾವು ಇಂತಹ ಹಲವು ಸಂದರ್ಭ ಎದುರಿಸಿದ ದಿನಗಳ ನೆನಪೂ ಕಾಡಿತು.
ಅವಿಭಕ್ತ ಕುಟುಂಬಗಳು ಚಿಂದಿ ಚಿತ್ರಾನ್ನವಾದ ಈ ಕಾಲಘಟ್ಟದಲ್ಲಿ, ಐವತ್ತು ವರ್ಷದ ಹಿಂದೆ ಹತ್ತು-ಹನ್ನೆರಡು ಮಕ್ಕಳನ್ನು ಹೆತ್ತು ತುಂಬುಜೀವನ ನಡೆಸಿ ಇಹತೊರೆದ ಹಲವರು, ವೃದ್ಧರಾಗಿರುವ ಕೆಲವರ ಮನೆಯಲ್ಲಿ ಮನೆಯ ಹಿರಿಮಗನೋ, ಅಥವಾ ಇನ್ನೊಬ್ಬ ಕೃಷಿಯಲ್ಲಿ ಪ್ರೀತಿ ಇರುವ ಮಗನೋ ಮಗಳೋ, ಅದಕ್ಕೂ ಮೀರಿ ಹಿರಿಯರು ಬಾಳಿದ ಊರಿನಲ್ಲಿ, ಬಾಲ್ಯದ ಸವಿ ಇತ್ತ ಊರಿನಲ್ಲೇ ಇರಬೇಕು ಎಂಬ ಛಲದಲ್ಲೋ ಕೆಲವರು ಬದುಕು ಸವೆಸುವ ಮನ ಮಾಡಿದರೆ, ಕೆಲವು ಮಕ್ಕಳು ಅನಿವಾರ್ಯಕ್ಕೆ ಕಟ್ಟುಬಿದ್ದು ಹುಟ್ಟಿದ ಮನೆ, ಊರು ಬಿಡಲು ಸಾಧ್ಯವಾಗದೆ ಇಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.
ಇಂತಹ ಸಂದರ್ಭದಲ್ಲಿ ಊರಿನ ಮನೆ, ತೋಟದ ಜವಾಬ್ದಾರಿ ನಿರ್ವಹಿಸುವುದರ ಜೊತೆಗೆ, ಇನ್ನೊಂದು ಪರ್ಯಾಯ ದುಡಿಮೆಗೆ ಆತುಕೊಂಡು ಬದುಕುವುದು ಹಳ್ಳಿಗಳಲ್ಲಿ ಅನಿವಾರ್ಯ.
ಇದಲ್ಲದೆ ಹುಟ್ಟೂರಿನಲ್ಲಿ ಕೇವಲ ಸೆಂಟ್ಸ್ ಲೆಕ್ಕದ ಜಾಗ ಖರೀದಿಸಿ ಬದುಕು ಕಟ್ಟಿಕೊಂಡವರು ಅದೆಷ್ಟೋ ಜನ.
ಹೀಗೆ ಬದುಕುತ್ತಿರುವ ಮನೆಯವರ ಮಕ್ಕಳ ಮನಃಸ್ಥಿತಿಯ ಬಗ್ಗೆ ನನಗೆ ಕೆಲವೊಮ್ಮೆ ತೀರಾ ಯೋಚನೆ ಬರುತ್ತದೆ.
ಹಳ್ಳಿಯ ಜೀವನವೇ ಹಾಗೆ. ಐಷಾರಾಮವಿಲ್ಲ, ವೀಕೆಂಡ್ ಇಲ್ಲ, ಮಾಲ್, ಶಾಪಿಂಗ್, ಸಿನೆಮಾ, ಔಟಿಂಗ್ ಇದೆಲ್ಲವೂ ಇಲ್ಲಿ ಕನಸು. ನೂರರಲ್ಲಿ ಹತ್ತು ಜನ ಹಳ್ಳಿಯ ಕೋಟ್ಯಧೀಶರು ಇದೆಲ್ಲವನ್ನೂ ಅನುಭವಿಸುತ್ತಾರೆ. ಆದರೆ ಅಲ್ಪ ದುಡಿಮೆಯ ಸಾಮಾನ್ಯರು ಇದಕ್ಕೆಲ್ಲ ಅಂಟಿಕೊಂಡರೆ ಬದುಕು ದುಸ್ತರವಾಗುತ್ತದೆ ಎಂಬ ಭಯ.
ಹಾಗಾಗಿ ಸಾಮಾನ್ಯ ವರ್ಗದ ಪೋಷಕರು ಮಕ್ಕಳನ್ನು ಸಾಮಾನ್ಯರಂತೆ ಬದುಕಬೇಕು. ಬ್ರಾಂಡ್ಗಳ ಮೊರೆ ಹೋಗಬೇಡಿ. ವೀಕೆಂಡು, ಸಿನೆಮಾ, ಸುತ್ತಾಟದ ಕನಸು, ಮನೆಯನ್ನು ಮಹಲ್ ಮಾಡುವ ಗೋಜು, ತರತರದ ಮೋಜಿನಿಂದ ಆದಷ್ಟು ದೂರವಿರುವಂತೆ ಬೆಳೆಸುತ್ತಾರೆ. ಅದು ಅನಿವಾರ್ಯವೂ ಆಗಿರುತ್ತದೆ. ಆದರೆ ಆ ಬದುಕು ಮಕ್ಕಳಿಗೆ ಸಜೆಯಂತಾಗುತ್ತದೆ.
ತಂದೆ ತಾಯಿಗಳು ಕಂಜ್ಯೂಸಿಗಳಂತೆ ತೋರುತ್ತಾರೆ ಈ ಮಕ್ಕಳಿಗೆ, ಏಕೆ ಮತ್ತು ಯಾವಾಗ? ಎಂದರೆ, ಈ ಹಳ್ಳಿಯ ಮೂಲಮನೆಗೆ ನಗರದಲ್ಲಿ ಇರುವ ಅತ್ತೆ, ಚಿಕ್ಕಪ್ಪ, ಮಾವ, ದೊಡ್ಡಮ್ಮ, ಚಿಕ್ಕಮ್ಮ – ಹೀಗೆ ಹಲವರ ಕುಟುಂಬದವರು ಅವರ ಕುಟುಂಬಸಮೇತ ಸಕಾರಣಗಳಿಗೆ ಬಂದಾಗ.
ಆ ಹಿರಿಯರು ಕಿರಿಯರೆಲ್ಲ ಇಲ್ಲಿನ ಮಕ್ಕಳು ಧರಿಸುವ ಚಪ್ಪಲಿ, ಹಾಕುವ ವಸ್ತç-ಬಟ್ಟೆ, ಬಳಸುವ ಸೋಪು, ಶಾಂಪು – ಇವೆಲ್ಲವನ್ನೂ ನಾಜೂಕಾಗಿ ಅಂದಾಜಿಸಿ ಅಸಡ್ಡೆ ಮಾಡುವುದು ನಿಜಕ್ಕೂ ವಿಪರ್ಯಾಸ.
ಇದೆಲ್ಲವೂ ಇಲ್ಲಿರುವ ಕಿರಿಯ ಮಕ್ಕಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮುಖ್ಯವಾಗಿ ಹಳ್ಳಿಯ ಮಕ್ಕಳು ತಮ್ಮ ಪೋಷಕರನ್ನು ದ್ವೇಷಿಸಲು ಆರಂಭಿಸುತ್ತಾರೆ.
ಈ ನಗರವಾಸಿಗಳ ದುಡಿಮೆ ತಿಂಗಳಿಗೆ ಆರಂಕಿ ದಾಟಿದ್ದರೆ, ಅವರ ಐಷಾರಾಮ ಅಗಾಧವಾಗಿರುತ್ತದೆ.
ಅವರು ಧರಿಸುವ ವಾಚ್, ಬಳಸುವ ಮೊಬೈಲ್ ಲ್ಯಾಪ್ಟಾಪ್, ಕಾರು, ಸನ್ಗ್ಲಾಸ್, ಚಪ್ಪಲಿ, ಬೆಲ್ಟ್, ಬ್ಯಾಗ್ – ಇವೆಲ್ಲವೂ ಬ್ರ್ಯಾಂಡೆಡ್. ಊಟಮಾಡುವ ಅಕ್ಕಿ ಮಾತ್ರ ದೇಶಿಯೇ ಆಗಬೇಕು ಬಿಡಿ. ಬಳಸಲು ಊರಿನ ತೆಂಗಿನೆಣ್ಣೆ, ತುಪ್ಪ, ಉಪ್ಪಿನಕಾಯಿ, ತೆಂಗಿನಕಾಯಿ, ಸಾವಯವ ತರಕಾರಿಯೇ ಬೇಕು – ಅದೊಂದು ಪುಣ್ಯ.
ಇದನ್ನೆಲ್ಲಾ ಗಮನಿಸುವ ಹಳ್ಳಿಯ ಮಕ್ಕಳಿಗೆ ತಮ್ಮ ಬಗ್ಗೆ, ತಾವು ಬದುಕುತ್ತಿರುವ ಸರಳಜೀವನದ ಬಗ್ಗೆ, ತಮ್ಮ ಪೋಷಕರ ಬಗ್ಗೆ ಕೀಳರಿಮೆ ಮೂಡುವುದು ಸಹಜ.
ಈಗಂತೂ ಈ ಮೊಬೈಲ್ ಬಂದ ಮೇಲೆ ಸ್ಟೇಟಸ್ ಅಪ್ಲೋಡ್ ಕತೆಯಿಂದ ಮಧ್ಯಮವರ್ಗದ ಹಳ್ಳಿಯ ಮಕ್ಕಳು ತುಂಬಾ ಅಪ್ಸೆಟ್ ಆಗುವುದು ಅಧಿಕವಾಗಿದೆ.
ಈ ಅಪ್ಡೇಟ್ ಗಮನಿಸುವ ಹಳ್ಳಿಯ ಮಕ್ಕಳು, ಪೋಷಕರಿಗೆ ಸದಾ ಅದೇ ನೆಪದಲ್ಲಿ ಟಾರ್ಗೆಟ್ ಮಾಡಿ ಮಾತನಾಡುತ್ತಾರೆ. ಅಪ್ಪ-ಅಮ್ಮನ ಬಳಿ “ನೋಡಿ ಇಲ್ಲಿ, ಅವರೆಲ್ಲ ಅವರ ಮಕ್ಕಳನ್ನು ಎಲ್ಲೆಲ್ಲ ಕರೆದೊಯ್ಯುತ್ತಾರೆ, ಏನೇನೆಲ್ಲಾ ಕೊಡಿಸುತ್ತಾರೆ. ನಮಗೆ ವರ್ಷಕ್ಕೊಮ್ಮೆ ಚಪ್ಪಲಿ, ಅಂಗಿ ಕೊಡಿಸಲೂ ನೀವು ಲೆಕ್ಕಾಚಾರ ಹಾಕುತ್ತೀರಿ. ಇನ್ನು ಪ್ರವಾಸ ಹೋಗುವ ಮಾತಂತೂ ಕನಸೇ ಸರಿ” ಎಂದೆಲ್ಲಾ ಹೇಳಿ ಹೇಳಿ ಕೊರಗುತ್ತಾರೆ.
ಶಾಲೆಗೆ ರಜೆ ಇದೆಯಲ್ಲ ಎಂದು ನಗರದ ಸಂಬಂಧಿಗಳ ಮನೆಗೆ ಹೋಗುವ ಮಕ್ಕಳು, ಅಲ್ಲಿನ ವೈಭವದ ಮನೆ, ತಿನ್ನುವ ಆಹಾರ, ಮನೆಯಲ್ಲಿ ಇರುವ ಆಧುನಿಕ ಯಂತ್ರಗಳು, ಪರಿಕರಗಳು, ಅವರ ಮನೆಯಲ್ಲಿ ಇರುವ ಚಪ್ಪಲಿ, ಶೂಗಳ ರಾಶಿ. ವಾರಾಂತ್ಯದ ಮೋಜು ಇತ್ಯಾದಿಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿ ಊರಿಗೆ ಮರಳಿದಾಗ ಇನ್ನೊಂದು ರೀತಿಯ ಗೋಳು ಹಳ್ಳಿಯಲ್ಲಿ ಅಥವಾ ಮೂಲಮನೆಯಲ್ಲಿ ಇರುವ ಪೋಷಕರಿಗೆ.
“ನೋಡಿ ಅವರ ಮನೆ ಎಷ್ಟು ಚೆಂದ ಇದೆ. ಅವರು ಜೀವನವನ್ನು ಎಷ್ಟು ಮಜಾದಲ್ಲಿ ಕಳೆಯುತ್ತಿದ್ದಾರೆ. ನಮಗೆ ಆ ಭಾಗ್ಯವೆಲ್ಲ ಏಕೆ ಕನಸಾಯ್ತು?” ಎಂದು ಪದೇ ಪದೇ ಪ್ರಶ್ನಿಸುತ್ತಾರೆ.
ದಿನಕ್ಕೆ ಮೂರಂಕಿ ಸಂಬಳ, ಕೂಲಿ ಅಥವಾ ವೇತನ ಪಡೆವ ಜನಸಾಮಾನ್ಯರಿಗೆ ಆ ವೈಭವದ ಬದುಕು ಕಟ್ಟಲು ಸಾಧ್ಯವಾಗುವುದಾದರೂ ಹೇಗೆ?
ಹಳ್ಳಿಗಳಲ್ಲಿ ದೊಡ್ಡ ಜಮೀನ್ದಾರರರಾದರೆ, ತೋಟ, ವ್ಯವಸಾಯ, ಇತರ ಕೃಷಿ ಮತ್ತು ಕಾಡುತ್ಪನ್ನ ಹೇರಳವಾಗಿ ಸಿಗುವ ಎಕರೆಗಟ್ಟಲೆ ಭೂಮಿಯ ಯಜಮಾನನಾದರೆ ಈ ಐಷಾರಾಮಿ ಜೀವನ ಕಷ್ಟವಲ್ಲ. ಅದೇ ಸಣ್ಣ ಕೃಷಿಕರಾದರೆ, ಅತಿ ಸಣ್ಣ ಉದ್ಯೋಗ ನಂಬಿ ನಡೆವ ನಮ್ಮಂತವರಿಗೆ ಈ ಪಟ್ಟಣದ ಭೋಗಭಾಗ್ಯ ಅಂದಾಜಿಸಿಯೆ ಮೈ ನಡುಗುತ್ತದೆ.
ಇರುವ ಒಂದೋ ಎರಡೋ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಕೊಟ್ಟು ದಡ ಸೇರಿಸಲು ಹೋರಾಡುವ ಸಾಮಾನ್ಯರಿಗೆ ಈ ತಿಂಗಳಿಗೆ ಆರಂಕಿ ಸಂಬಳ ಪಡೆವವರಂತೆ ಬದುಕಲು ಅಸಾಧ್ಯ.
ಹಳ್ಳಿಯಲ್ಲಿ ಆರೋಗ್ಯಪೂರ್ಣವಾಗಿ, ಸರಳ ಜೀವನ ಸಾಗಿಸುವ ಇರಾದೆ ಹೊಂದಿರುವ ಸಾಮಾನ್ಯವರ್ಗದ ಮಕ್ಕಳಿಗೆ ನಗರ ವ್ಯಾಮೋಹ ಯಾಕೆ? ಹೇಗೆ ಬರುತ್ತದೆ ಎಂಬುದಕ್ಕೆ ಈ ಮೇಲಿನ ಎಲ್ಲ ಅಂಶಗಳೂ ಕಾರಣವಾಗುತ್ತವೆ. ಹೀಗಾಗಿ ನಗರವಾಸಿ ಬಂಧುಗಳಲ್ಲಿ ನನ್ನದೊಂದು ಮನವಿ, ನೀವು ಬದುಕಿ, ನಮಗೂ ಬದುಕಲು ಬಿಡಿ.
ಎಲ್ಲವನ್ನೂ ಹಣ, ಬ್ರಾಂಡ್, ಔಟಿಂಗ್, ಪಿಕ್ನಿಕ್ – ಇವುಗಳಲ್ಲೇ ಅಳೆಯಬೇಡಿ. ಅದಕ್ಕೂ ಮೀರಿದ ಆಹ್ಲಾದಕರ ವಾತಾವರಣದಲ್ಲಿ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವ ನಮ್ಮ ಮಕ್ಕಳನ್ನು ಅಸಡ್ಡೆಯಿಂದ ಪ್ರಶ್ನಿಸುವ ಮನೋಭಾವವನ್ನು ಇನ್ನಾದರೂ ಕೈಬಿಡಿ. ಇಲ್ಲಿಯ ಸುಪ್ತ-ಪ್ರತಿಭೆಗಳನ್ನು ಪ್ರೋತ್ಸಾಹಿಸಿ. ಹಳ್ಳಿಯವರು ಹಿತಮಿತ ಆದಾಯದಲ್ಲಿ ಹೇಗೆ ಜೀವನ ಜೋಡಿಸಿಕೊಳ್ಳಲು, ಎಲ್ಲರಂತೆ ಬದುಕಲು ಹೆಣಗುತ್ತಾರೆ ಎಂಬ ಬಗ್ಗೆ ಕೊಂಚ ಕಣ್ಣುಹಾಯಿಸಿ. ಆಗ ಕುಹಕ-ವ್ಯಂಗ್ಯ ದೂರವಾಗಿ, ಕಣ್ಣಂಚು ಒದ್ದೆಯಾಗುವ ತೆರೆಮರೆಯ ಹೋರಾಟದ ಚಿತ್ರಗಳು ನಿಮಗೂ ತೋರಬಹುದು.