ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
59ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮೇ 2015 > ದೀಪ್ತಿ: ಆದರ್ಶದ ಕಡೆಗೆ ಕ್ರಮಿಸುವುದು ಮನಃಪಕ್ವತೆಗೆ ದಾರಿ

ದೀಪ್ತಿ: ಆದರ್ಶದ ಕಡೆಗೆ ಕ್ರಮಿಸುವುದು ಮನಃಪಕ್ವತೆಗೆ ದಾರಿ

ಯಚ್ಚ ಕಾಮಸುಖಂ ಲೋಕೇ ಯಚ್ಚ ದಿವ್ಯಂ ಮಹತ್ ಸುಖಂ|

ತೃಷ್ಣಾಕ್ಷಯಸುಖಸ್ಯೈತೇ ನಾರ್ಹತಃ ಷೋಡಶೀಂ ಕಲಾಮ್||

                                                          – ಧ್ವನ್ಯಾಲೋಕ

ಜಗತ್ತಿನಲ್ಲಿ ಕಾಮನೆಗಳ ಪರೈಕೆಯನ್ನು ಸುಖವೆಂದುಕೊಳ್ಳುತ್ತಾರೆ. ಪರಾಣಗಳು ವರ್ಣಿಸುವ ಸ್ವರ್ಗವನ್ನು ಅತ್ಯಂತ ಸುಖಮಯವೆಂದು ಭಾವಿಸುತ್ತಾರೆ. ಆದರೆ ಮೇಲಿನೆರಡೂ ಎಲ್ಲ ಆಸೆಗಳನ್ನು ತ್ಯಜಿಸುವುದರಿಂದ ಯಾವ ಸುಖವು ಪ್ರಾಪ್ತವಾಗುತ್ತದೋ ಆ ಸುಖದ ಹದಿನಾರರಲ್ಲೊಂದಂಶವೂ ಆಗಿರುವುದಿಲ್ಲ.

ಆದರ್ಶದ ಕಡೆಗೆ ಕ್ರಮಿಸುವುದು ಮನಃಪಕ್ವತೆಗೆ ದಾರಿ

ನಿಜವಾದ ಸುಖವು ದೊರೆಯುವುದು ಸಂತೃಪ್ತಿಯ ಅಭ್ಯಾಸದಿಂದಲೇ ಹೊರತು ಬಾಹ್ಯಸನ್ನಿವೇಶ-ಪರಿಕರಗಳಿಂದ ಅಲ್ಲ – ಎಂಬುದು ಪ್ರಾಜ್ಞೋಕ್ತಿ. ಇದು ಮನೋವಿಜ್ಞಾನಕ್ಕೆ ಅನುಗುಣವಾದ ನಿರ್ಣಯವೂ ಆಗಿದೆ. ಬಾಹ್ಯಮೂಲಗಳಿಂದ ಸುಖವನ್ನರಸುವುದು ಕ್ಲೇಶಕಾರಿಯಾಗಿರುವಂತೆ ಆ ಸುಖವು ಲಭಿಸಿದ ಮೇಲೂ ಅದು ಯಾವಾಗ ಬಿಟ್ಟುಹೋದೀತೋ ಎಂಬ ಆತಂಕ ತಪ್ಪಿದ್ದಲ್ಲ. ವಿವೇಕಿಗಳಾದವರು ಈ ಶೃಂಖಲೆಗೆ ಸಿಲುಕಿಕೊಳ್ಳದೆ ಸ್ಥಿತಪ್ರಜ್ಞರೂ ಸಂತೃಪ್ತರೂ ಆಗಿರುತ್ತಾರೆ. ಪ್ರಶಾಂತಿಯೇ ನಿಜವಾದ ಸುಖ. ಇದು ನೈರಾಶ್ಯವಾಗಲಿ ಅನುತ್ಸಾಹವಾಗಲಿ ಅಲ್ಲ. ಬಾಹ್ಯ ತಾತ್ಕಾಲಿಕಸುಖಕ್ಕಿಂತ ಆಂತರಿಕ ಸ್ಥಿರಸುಖವು ಆದರ್ಶವಾಗಲರ್ಹವಾದುದೆಂದು ತಾತ್ಪರ್ಯ. ಅಲ್ಪಸುಖವು ಮನುಷ್ಯನನ್ನು ದಾಸನನ್ನಾಗಿಸುತ್ತದೆ; ಸಂತೃಪ್ತಿ-ಉಪಶಾಂತಿಗಳು ಅವನನ್ನು ಒಡೆಯನನ್ನಾಗಿಸುತ್ತವೆ. ಯೋ ವೈ ಭೂಮಾ ತತ್ಸುಖಂ, ನಾಲ್ಪೇ ಸುಖಮಸ್ತಿ ಎಂಬ ಉಪನಿಷದುಕ್ತಿಯೂ ಪ್ರಸಿದ್ಧವಾಗಿದೆ. ಈ ಆದರ್ಶದ ಕಡೆಗೆ ಕ್ರಮಿಸುವುದು ಮನಃಪಕ್ವತೆಗೆ ದಾರಿಮಾಡುತ್ತದೆ. ಈ ಆಶಯದ ಒಂದು ದಾರ್ಶನಿಕ ಕಥೆ ಹೀಗಿದೆ:
ಒಂದು ತೀರ್ಥಕ್ಷೇತ್ರದಲ್ಲಿ ದೇವಾಲಯದೆಡೆಗೆ ಹೋಗುತ್ತಿದ್ದ ಭಕ್ತನೊಬ್ಬನು ರಸ್ತೆಬದಿಯಲ್ಲಿದ್ದ ವೃದ್ಧನೊಬ್ಬನನ್ನು ನೋಡಿದ. ವೃದ್ಧನ ಮಲಿನಶರೀರ, ಜೀರ್ಣವಸ್ತ್ರಗಳೇ ಅವನ ಸ್ಥಿತಿಯನ್ನು ಸಾರುತ್ತಿದ್ದವು. ಭಕ್ತನು ಅನುಕಂಪಗೊಂಡು ವೃದ್ಧನ ಕೈಯಲ್ಲಿ ಹತ್ತುರೂಪಾಯಿಯನ್ನಿರಿಸಿ ಕಾಫಿಯೋ ಚಹವೋ ಕುಡಿದು ಸಂತೋಷದಿಂದಿರಪ್ಪಾ ಎಂದ. ವೃದ್ಧನು ನಿಮ್ಮ ಮೇಲೆ ದೇವರ ಅನುಗ್ರಹವಿರಲಿ. ನನಗಂತೂ ದುಃಖವೆಂದರೆ ಏನೆಂದೇ ತಿಳಿಯದು ಎಂದು ಉತ್ತರಿಸಿದ. ಭಕ್ತನು ಚಕಿತನಾಗಿ ಕೇಳಿದ:

“ಅದು ಹೇಗೆ ಸಾಧ್ಯ?”

“ತುಂಬಾ ಬಿಸಿಲಿದ್ದಾಗ ನಾನು ‘ಸದ್ಯ ಕೊರೆಯುವ ಚಳಿ ಇಲ್ಲವಲ್ಲ!’ ಎಂದುಕೊಳ್ಳುತ್ತೇನೆ. ಮಳೆ ಸುರಿಯುತ್ತಿದ್ದಾಗ ‘ಸದ್ಯ ಬಿಸಿಲಿನ ಬೇಗೆ ಇಲ್ಲ!’ ಎಂದು ಆನಂದಪಡುತ್ತೇನೆ. ಹಸಿವಾದಾಗ ‘ಇಷ್ಟು ಸಮಯ ಭಗವಂತನು ನನಗೆ ಅನ್ನವನ್ನಿತ್ತು ಕಾಪಾಡಿದನಲ್ಲ!’ ಎಂದು ವಂದಿಸುತ್ತೇನೆ. ದೇವರು ನನಗೆ ಏನೇನನ್ನು ಅನುಗ್ರಹಿಸಿದರೂ ಅದೆಲ್ಲವೂ ನನ್ನ ಆನಂದಕ್ಕಾಗಿಯೇ – ಎಂದು ನಂಬಿರುವ ನನ್ನ ಹತ್ತಿರ ದುಃಖ ಹೇಗೆ ಸುಳಿದೀತು?”

“ನೀವು ಯಾರು?” ಎಂದು ಭಕ್ತನು ಕೇಳಿದ.

“ನಾನು ಮಹಾರಾಜ” ಎಂದ, ವೃದ್ಧ.

“ನಿಮ್ಮ ರಾಜ್ಯ ಎಲ್ಲಿದೆ?”

“ನನ್ನ ಹೃದಯದಲ್ಲಿ” ಎಂದ, ಆತ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ