ಒಬ್ಬ ವ್ಯಕ್ತಿಯ ಅಕಾಲಿಕ ಮರಣ ಇಡೀ ರಾಜ್ಯವನ್ನೇ ಕ್ಷುಬ್ಧಗೊಳಿಸುವುದು ವಿರಳ. ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಅವರ ಅಸಹಜ ಸಾವು ಎಷ್ಟು ವ್ಯಾಪಕ ಸಂಚಲನವನ್ನು ಸೃಷ್ಟಿಸಿದೆಯೆಂಬುದು ಈ ದಿನಗಳಲ್ಲಿ ಪ್ರಾಮಾಣಿಕತೆಯೂ ದಕ್ಷತೆಯೂ ಆಡಳಿತಯಂತ್ರದಲ್ಲಿ ಎಷ್ಟು ವಿರಳವಾಗಿವೆಯೆಂಬುದನ್ನು ಎತ್ತಿತೋರಿಸಿದೆ.ಪ್ರಚಲಿತ ಪರಿಸರದ ಕಾರಣದಿಂದಾಗಿ ಹೆಚ್ಚು ಸಮಯ ಜಡರಾಗಿರುವಂತೆ ತೋರುವ ಜನತೆಯು ಆಡಳಿತಶಾಹಿಯಲ್ಲಿ ಪ್ರಾಮಾಣಿಕತೆಯೂ ಜನಾಭಿಮುಖವರ್ತನೆಯೂ ಕಂಡಾಗ ಎಷ್ಟು ಪ್ರಖರವಾಗಿ ಹೃದಯದಾಳದಿಂದ ಸ್ಪಂದಿಸುತ್ತಾರೆಂಬುದನ್ನು ಈ ಪ್ರಕರಣ ನಿದರ್ಶನಪಡಿಸಿದೆ.
ರವಿ ಅವರ ದಿಟ್ಟತನವೂ ನಿರ್ಭೀತಿಯೂ ಜನಹಿತಚಿಂತನೆಯೂ ಪ್ರಕಾಶಗೊಂಡಿದ್ದ ಕೋಲಾರ ಜಿಲ್ಲೆ ಮಾತ್ರವಲ್ಲದೆ ದೂರದ ಕಲಬುರ್ಗಿ, ಕೊಪ್ಪಳ ಮೊದಲಾದೆಡೆಯೂ ಜನರ ಆಕ್ರೋಶ ಅಸಾಮಾನ್ಯ ಮಟ್ಟದಲ್ಲಿ ಹೊಮ್ಮಿದುದನ್ನು ಕಂಡೆವು. ಆದರೆ ಆ ಕ್ರೋಧವು ಭುಗಿಲೆದ್ದುದು ಈಗಿನ ವ್ಯವಸ್ಥೆಯ ಅಧಃಪಾತದ ವಿರುದ್ಧ ಎಂಬುದನ್ನು ಗ್ರಹಿಸದಿರುವುದು ತಪ್ಪಾಗುತ್ತದೆ. ಜನತೆಯ ಮನಃಸ್ಥಿತಿಗೆ ವಿಮುಖವಾಗಿ ರಾಜ್ಯಸರ್ಕಾರವು ತನಿಖೆಯ ಉಪಕ್ರಮಕ್ಕೂ ಮೊದಲೇ ಇಡೀ ಪ್ರಕರಣಕ್ಕೆ ಬೇರೆ ಬಣ್ಣ ನೀಡಹೊರಟದ್ದಾಗಲಿ ಕೇಂದ್ರತನಿಖಾದಳಕ್ಕೆ ಒಪ್ಪಿಸುವುದನ್ನು ನಿರೋಧಿಸಿದುದಾಗಲಿ ಶೋಭಾಕರವಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯ ಮರಣದ ಪ್ರಸಂಗದಲ್ಲಿಯೂ ಅನುಸರಿಸಲಾಗುವ ನಿಯಮಗಳನ್ನು ಈ ಅಸಾಮಾನ್ಯ ಪ್ರಸಂಗದಲ್ಲಿ ಅಲಕ್ಷ್ಯಮಾಡಿದುದು ಅಕ್ಷಮ್ಯ.
ಈಗ್ಗೆ ಒಂದೂವರೆ ವರ್ಷ ಹಿಂದೆ ಸಹಕಾರಸಂಘಗಳ ಲೆಕ್ಕಪರಿಶೋಧಕರಾಗಿದ್ದ ಮಹಾಂತೇಶ್ ಎಂಬ ಋಜುತೆಗೆ ಹೆಸರಾಗಿದ್ದ ಅಧಿಕಾರಿಯ ಮರಣದ ತನಿಖೆಯ ಬಗ್ಗೆ ಜನರಲ್ಲಿ ಅತೃಪ್ತಿ ನೆಲೆಸಿದೆ. ಈಗಿನ ಪ್ರಕರಣದ ಜಾಡೂ ಹಾಗೆಯೇ ಆದೀತೆ? ಡಿ.ಕೆ. ರವಿಯ ದುರ್ಮರಣದ ಪರಿಣಾಮವಾಗಿಯಾದರೂ ಆಡಳಿತಾಂಗದ ದಕ್ಷತೆಯ ಮತ್ತು ನೈತಿಕತೆಯ ಮಟ್ಟ ಉನ್ಮುಖವಾಗಲಿ ಎಂದು ಆಶಿಸೋಣ.?