ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಾಣಿ ನಿಷೇವತೇ |
ಧ್ರುವಾಣಿ ತಸ್ಯ ನಶ್ಯಂತಿ ಅಧ್ರುವಂ ನಷ್ಟಮೇವ ಚ||
– ಪಂಚತಂತ್ರ
“ನಮ್ಮ ಲಕ್ಷ್ಯವು ಯಾವಾಗಲೂ ಉನ್ನತ ತತ್ತ್ವದ ಕಡೆಗೆ ಇರಬೇಕು. ಸ್ಥಿರವಾದುದನ್ನು ಬಿಟ್ಟು ಯಾರು ಸಣ್ಣಪುಟ್ಟ ಸಾಧನೆಗಳಿಂದಲೇ ತೃಪ್ತರಾಗುತ್ತಾರೋ ಅವರದು ವ್ಯರ್ಥ ಪ್ರಯಾಸ. ಅವರಿಗೆ ದೊಡ್ಡದೇನೂ ಲಭಿಸುವುದಿಲ್ಲ; ಅಲ್ಪವಾದವಂತೂ ತಾವಾಗಿ ನಶಿಸಿರುತ್ತವೆ.”
ಭಾರತದ ಸಸ್ಯಶಾಸ್ತ್ರಜ್ಞರಲ್ಲಿ ಮೂರ್ಧನ್ಯಭೂತರಾದವರು ಬೀರಬಲ್ ಸಾಹನೀ (೧೮೯೧-೧೯೪೯). ಅವರು ವಿದ್ಯಾರ್ಥಿದಶೆಯಲ್ಲಿದ್ದಾಗ ನಡೆದ ಘಟನೆ ಇದು. ಬಿ.ಎಸ್ಸಿ. ಪರೀಕ್ಷೆಗಾಗಿ ಅವರು ಹೋದರು. ಅವರ ಕೈಗೆ ಬಂದ ಪ್ರಶ್ನಪತ್ರಿಕೆ ತುಂಬಾ ಸುಲಭದ್ದಾಗಿತ್ತು. ಅವರು ಪರೀಕ್ಷಕರಿಗೆ ಹೇಳಿದರು: “ಇಷ್ಟು ಸರಳ ಪ್ರಶ್ನೆಗಳ ಮೂಲಕ ವಿದ್ಯಾರ್ಥಿಯೊಬ್ಬನ ಯೋಗ್ಯತೆಯನ್ನು ಅಳೆಯಲಾದೀತೆ? ಇದಕ್ಕೆ ಉತ್ತರಿಸಿ ನಾನು ಪದವೀಧರನೆನಿಸಿಕೊಂಡಲ್ಲಿ ಅದರಿಂದ ನನಗಾಗಲಿ ದೇಶಕ್ಕಾಗಲಿ ಆಗಬಹುದಾದ ಪ್ರಯೋಜನವೇನು? ನಾನು ಇದಕ್ಕೆ ಉತ್ತರಿಸಲು ಇಚ್ಛಿಸುವುದಿಲ್ಲ.” ಹೀಗೆ ಹೇಳಿ ಅಲ್ಲಿಂದ ನಿರ್ಗಮಿಸಲು ಸಜ್ಜಾದರು. ಪರೀಕ್ಷಕರಿಗೆ ಪೇಚಿಗಿಟ್ಟುಕೊಂಡಿತು. ಇಂತಹ ಪ್ರತಿಭಾವಂತ ವಿದ್ಯಾರ್ಥಿಯನ್ನು ವಿಶ್ವವಿದ್ಯಾಲಯ ಕಳೆದುಕೊಳ್ಳಬಾರದು – ಎನಿಸಿತು ಅವರಿಗೆ. ಯೋಚಿಸಿ ಅವರು ಈ ವಿದ್ಯಾರ್ಥಿಗಾಗಿಯೇ ಮೊದಲಿದ್ದುದಕ್ಕಿಂತ ಕಠಿಣವಾದ ಪ್ರಶ್ನಪತ್ರಿಕೆಯನ್ನು ಸಿದ್ಧಪಡಿಸಿ ನೀಡಿದರು! ಈ ಕಠಿಣತರ ಪತ್ರಿಕೆಗೂ ಬೀರಬಲ್ ಸಾಹನಿ ಲೀಲಾಜಾಲವಾಗಿ ಉತ್ತರಿಸಿದರು.
ಉನ್ನತ ವ್ಯಾಸಂಗಕ್ಕಾಗಿ ಅವರು ವಿದೇಶಗಳಿಗೆ ಹೋದೆಡೆಯೆಲ್ಲ ಯಶೋಭಾಜನರಾದರು; ಕೇಂಬ್ರಿಜ್, ಲಂಡನ್ ಮೊದಲಾದ ವಿಶ್ವವಿದ್ಯಾಲಯಗಳಿಂದ ಸಂಮಾನಿತರಾದರು. ವಿದೇಶಗಳಲ್ಲಿ ಉನ್ನತ ಹುದ್ದೆಗಳಿಗೆ ಆಮಂತ್ರಿತರಾದರೂ ತಮ್ಮ ಸೇವೆ ಭಾರತಕ್ಕೇ ಸಲ್ಲಬೇಕೆಂದು ನಿಶ್ಚಯಿಸಿ ಕಾಶೀ ಮತ್ತು ಪಂಜಾಬ್ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿದ್ದು ಜೊತೆಗೇ ಇಂದಿಗೂ ಸ್ಮರಿಸಲಾಗುತ್ತಿರುವ ಅಭೂತಪೂರ್ವ ಸಂಶೋಧನೆಗಳನ್ನು ನಡೆಸಿದರು.