ಪ್ರಧಾನಮಂತ್ರಿ ನರೇಂದ್ರ ಮೋದಿಯವರದು ಅಮೆರಿಕಕ್ಕೆ ಈಗಿನದು ಮೊದಲ ಭೇಟಿಯಲ್ಲವಾದರೂ ಹಲವು ಕಾರಣಗಳಿಂದ ಇದು ವಿಶಿಷ್ಟವೆನಿಸಿತು – ವಿಶೇಷವಾಗಿ ಪ್ರಕೃತದ ರಾಷ್ಟ್ರ-ರಾಷ್ಟ್ರಗಳ ಸಂಬಂಧಗಳ ಸಂಕೀರ್ಣತೆಯಿಂದಾಗಿ.
‘ಶೀತಲ ಯುದ್ಧ’ ವರ್ಷಗಳ ಅವಧಿಯಲ್ಲಿ ಮತ್ತು ಅದಕ್ಕೆ ಹಿಂದೆ ಭಾರತ-ಅಮೆರಿಕಗಳ ನಡುವೆ ಸ್ನೇಹವು ಸಾಧ್ಯವೇ ಇಲ್ಲವೆನಿಸುವ ಸ್ಥಿತಿ ಇತ್ತು. ಆ ಹಿಂದಿನ ಮಾನಸಿಕತೆಯಿಂದ ಹೊರಬರಲು ೧೯೯೦ರ ದಶಕದಿಂದಾಚೆಗೆ ಭಾರತ ಹೆಣಗಬೇಕಾಯಿತು. ಹೊಸ ಸಹಸ್ರಾಬ್ದದ ಮೊದಲ ದಶಕದ ನಡುಭಾಗದಲ್ಲಿ ‘ಅಣುಶಕ್ತಿ ಒಡಂಬಡಿಕೆ’ ನಿರ್ಮಿಸಿದ ವಿರಸದಿಂದ ಚೇತರಿಸಿಕೊಳ್ಳಲು ದೀರ್ಘ ಕಾಲ ಹಿಡಿಯಿತು. ಇತ್ತೀಚಿನ ರಷ್ಯ-ಯುಕ್ರೇನ್ ಸಮರದ ಹಿನ್ನೆಲೆಯಲ್ಲಿ ಭಾರತ ತನ್ನ ದೀರ್ಘಕಾಲಿಕ ನಿಲವನ್ನು ಶಿಥಿಲಗೊಳಿಸದೆ ಅನ್ಯ ದೇಶಗಳಿಗೆ ಪೂರ್ಣ ಅಸಮ್ಮತವಾಗದ ರೀತಿಯಲ್ಲಿ ನಾಜೂಕಾಗಿ ವ್ಯವಹರಿಸಿ ಪ್ರಬುದ್ಧತೆಯನ್ನು ತೋರಿತು. ಈಗಿನ ಸನ್ನಿವೇಶದಲ್ಲಿ ಹಿಂದಿನ ದಶಕಗಳ ಒಣ-ಸಿದ್ಧಾಂತಗಳ ಭಾರವನ್ನು ಹಿಂದಿಕ್ಕಿ ಗಟ್ಟಿ ತಳಪಾಯದ ವ್ಯಾವಹಾರಿಕ ಪ್ರಾಜ್ಞತೆ ಎನ್ನಬಹುದಾದ ನಿಲುಮೆಯನ್ನು ಮುಂದೊಡ್ಡಿರುವ ನರೇಂದ್ರ ಮೋದಿಯವರ ‘ಜಗತ್ತಿಗೆ ಒಳ್ಳೆಯ ಭವಿಷ್ಯವನ್ನು ಕೊಡೋಣ, ಭವಿಷ್ಯತ್ಕಾಲಕ್ಕೆ ಒಳ್ಳೆಯ ಜಗತ್ತನ್ನು ಕೊಡೋಣ’ ಎಂಬ ಕಾವ್ಯಮಯ ಸೂತ್ರೀಕರಣ ಅಂತರರಾಷ್ಟ್ರ ಸ್ತರದಲ್ಲಿ ಅತಿಶಯವಾದ ಅನುಮೋದನಪೂರ್ವಕ ಪ್ರಶಂಸೆಗೆ ಪಾತ್ರವಾಗಿದೆ.