ನಿಮ್ಮನ್ನ ಕಳಕೊಂಡು ನಾನು ಇರೋದಾ? ಸತ್ತರೆ ಇಬ್ಬರೂ….. ಬದುಕಿದ್ರೆ ಇಬ್ಬರೂ…..
“ರೀ ಅವರು ಬಂದಿದ್ದರು…”
“ಯಾರು….?”
“ಏನೋ ಮಾರಲಗೋಡು ಅಂತ ಹೇಳಿದ್ರು, ಸ್ವಲ್ಪ ಅರ್ಜೆಂಟ್ ಇದೆ ಅಂತ ಅಂದ್ರು…”
“ಏನ್ ಮಾಡೋದೋ ಗೊತ್ತಾಗುತ್ತಿಲ್ಲ, ಎಲ್ಲರೂ ಅರ್ಜೆಂಟ್ ಅಂತಿದಾರೆ. ಊರು ಬಿಡೋಣ ಅಂದ್ರು ಆಗ್ತಿಲ್ಲ, ಸಾಯೋಣಾ ಅಂದ್ರೆ ಮಗಳದ್ದೇ ಯೋಚನೆ…”
“ನಾವು ಮಗಳನ್ನ ಅವಳ ಅಜ್ಜಿ ಮನೆಗೆ ಕಳಿಸಿಬಿಡುವ…”
“ಯಾಕೋ ಅವಳು ಇಲ್ಲದಿದ್ದರೆ ನನಗೆ ಇರೋಕೇ ಆಗಲ್ಲ ಕಣೇ; ನಾನು ಅವಳನ್ನು ತುಂಬಾ ಹಚ್ಕೊಂಡುಬಿಟ್ಟಿದೀನಿ…”
“ಅಲ್ಲ…. ನಾವು ಸುಮ್ಮನೆ ಇರೋದಕ್ಕಿಂತ….”
“ನೀನು ಹೇಳೋದು…. ನನಗೆ ಅರ್ಥವಾಗುತ್ತೆ, ಸಾಯೋದು ಸುಲಭ ಅಲ್ಲ…”
“ಮತ್ತೆ ಈ ರೀತಿ ಸಮಸ್ಯೆಗೆ ಯಾವ ಪರಿಹಾರವೂ ಕಾಣಲ್ಲ. ಯಾರಿಗಾದ್ರೂ ಹೇಳುವಾ ಅಂದ್ರೆ ಯಾರೂ ನಮ್ಮನ್ನ ಮಾತಾಡ್ಸಲ್ಲ. ಸೋತಾಗ ಮನುಷ್ಯನ ಬಾಳುವೆ ಇದೇ ತರಹ…”
“ಹೌದು ಕಣೇ, ಮನುಷ್ಯ ಜೀವನವನ್ನ ಸರಿಯಾಗಿ ಅರ್ಥಮಾಡ್ಕೊಬೇಕು ಅಂದ್ರೆ ಸೋಲಬೇಕು. ಕೈಯಾಗ ಕಾಸು ಇಲ್ಲ ಅಂದ್ರೆ ಜೀವನ ಇಷ್ಟೆ. ಯಾರೂ ಇಲ್ಲದಂಗೆ ಆಯ್ತು ನಮ್ಮ ಬಾಳುವೆ.”
“ನಿನ್ನೆ ನಿಮ್ಮ ಸದಣ್ಣ ಬಂದಿದ್ರು. ಸುಮಾರು ಹೊತ್ತು ಇದ್ದು, ಏನ್ಮಾಡ್ತೀರಿ ಅಂದ್ರು, ನನ್ನ ಕಣ್ಣಾಗ ನೀರು ತುಂಬಿ ಬಂತು. ಏನೂ ಮಾತಾಡಿಲ್ಲ.”
“ಬಾಯಾಗ ಸುಮ್ಮನೆ ಮಾತಾಡೋರು ಭಾರೀ ಜನ ಇದಾರೆ; ಆದರೆ ಅದು ಏನಕ್ ಬಂತು. ನಮ್ಮ ಸದಣ್ಣ ಹೇಳ್ತಾನೆ, ಆದರೆ ಮನಿಯಾಗ ಏನೂ ನಡಿಯಾಕಿಲ್ಲ. ಅವನಾದ್ರೂ ಏನ್ ಮಾಡಿಯಾನು, ಇರಲಿ ಬಂದಾದ್ರೂ ಹೋದನಲ್ಲ ಸಾಕು…”
“ರೀ….. ಉಳಿದ ಸ್ವಲ್ಪ ಬಂಗಾರವನ್ನು ಮಾರಿಬಿಡ್ರೀ.”
“ಮಾರೋದು ಸರಿ, ನಿಮ್ಮ ಅಪ್ಪ, ಅಮ್ಮ ಕೇಳಿದ್ರೆ ಏನ್ ಹೇಳೋದು. ಇನ್ನು ಬೇಸಿಗೆ ಬಂತು; ಮದುವೆ, ಕಾರ್ಯ ಶುರುವಾಯ್ತು; ಅದ್ರಾಗ ಬಂಗಾರ ಇಲ್ಲ ಅಂದ್ರೆ ನಿಮ್ಮ ಮನೆಯೋರು ಬೇಜಾರು ಮಾಡ್ತಾರೆ. ಅದಕ್ಕಿಂತ ಸಾಯೋದೇ…..”
“ಹಾಗಾದ್ರೂ ಮಾಡುವ, ಸುಮ್ಮನೆ ದಿನಾ ಚಿಂತ್ಯಾಗ ಕೊರಗಾಕಿಂತ ಚಿತಿಯಾಗ ಬೀಳೋದೇ ಲೇಸು.”
“ಅಂತರಂಗದ ಮೃದಂಗ ಅಂತು ತೋಂತನಾನ…”
“ರೀ ಯಾರದ್ದೋ ಫೋನ್…”
“ಯಾರದ್ದರ್ರೀ, ಬಹಳ ನೋವಾಗ ಮಾತನಾಡಿದ್ರೀ?”
“ಹೊನಗೋಡು ಭಟ್ಟರದ್ದು; ಅವರು ದುಡ್ಡಿಗೆ ಅರ್ಜೆಂಟ್ ಮಾಡ್ತಾ ಇದಾರೆ.”
“ಮೊನ್ನೆ ಅಂಗಡಿಗೆ ಬಂದಿದ್ರು, ‘ಇನ್ನು ವಾರದವಳಗೆ ದುಡ್ಡು ಕೊಟ್ಟಿಲ್ಲ ಅಂದ್ರೆ ಅಂಗಡಿಯಲ್ಲೇ ಕೂರ್ತೀನಿ ಹೇಳು’ – ಅಂತ ಹೇಳಿದ್ರು.”
“ನಾಳೆ ಹೋಗೇಬಿಡುವ, ಏನಾದ್ರೂ ಆಗಲಿ, ನಮ್ಮ ಬದುಕು ಇಷ್ಟಕ್ಕೇ ಮುಗಿಲಿ ಬಿಡು.”
“ಎಲ್ಲಿಗ್ರೀ….. ಮಗಳು…..?”
“ಮಗಳನ್ನ ಅವರ ಅಜ್ಜಿಮನೆಗೆ ಬಿಡುವ. ನಾವು ಯಾರ್ಯಾರಿಗೆ ಎಷ್ಟೆಷ್ಟು ಕೊಡಬೇಕು ಅಂತ ಬರೆದು ಇಟ್ರೆ, ಈ ಮನೆ ಮಾರಿ ನಮ್ಮ ಅಣ್ಣ ಕೊಡ್ತಾರೆ. ಎಲ್ಲವನ್ನೂ ಕಳಕೊಂಡು ನಾವು ಇರೋದಕ್ಕಿಂತ ಹೋಗೋದೇ……”
“ಅಲ್ಲಾರೀ….. ನಿಮ್ಮ ಮನೆಯವರನ್ನಾದ್ರು ಒಂದು ಮಾತು ಕೇಳಬಹುದಿತ್ತು. ಅಷ್ಟೆಲ್ಲಾ ಇದಿಯಲ್ರೀ…. ಸ್ವಲ್ಪನಾದ್ರೂ ಕೊಡಲ್ವಾ?”
“ನಮ್ಮ ಮಂಜಣ್ಣ ಬರೇ ಐದು ಸಾವಿರಕ್ಕೆ ಅವತ್ತು ಅಂಗಡಿ ಬಾಗ್ಲಾಗ ಗಲಾಟೆ ಮಾಡ್ದ. ಯಾರೋ ಕೊಟ್ಟು ಹೋಗಿದ್ರು, ನಾನು ಖರ್ಚು ಮಾಡ್ಕೊಂಡೆ, ನನಗೆ ಈಗ್ಲೇ ಬೇಕು ಅಂತ ಭಾರೀ ರಗಳೆ ಮಾಡ್ದ…..”
“ನಮಗೆ ಯಾವ ತರಹ ಕಷ್ಟ ಬಂತುರೀ, ನಾವು ಬೇಕಂತ ಮಾಡ್ಕಂಡಿಲ್ಲ. ಶುಂಠಿಗೆ ರೇಟು ಇಷ್ಟು ಕಡಮೆ ಆಗುತ್ತೇ ಅಂತ ಯಾರಿಗ್ ಗೊತ್ತು. ನಮ್ಮ ಹಣೇಬರಹ, ನಮ್ಮ ಕಷ್ಟಕ್ಕೆ ಒಂದೂ ಪ್ರಯೋಜನ ಕಾಣ್ಲೇ ಇಲ್ಲ.”
“ಹಾಗೇ ಕಣೇ, ಬದುಕು ಎಲ್ಲವನ್ನೂ ಮಾಡ್ಸುತ್ತೆ; ಇರ್ಲಿ ಬಿಡು, ಇದು ನಮಗೆ ಸರಿಯಾದ ಪಾಠ ಕಲಿಸಿದೆ.”
“ರೀ….. ಬಾಗ್ಲು ತೆಗೀರಿ, ಯಾರೋ ಕರೀತಿದಾರೆ.”
“ಅಪ್ಪಾ ಆಟ ಚೆನ್ನಾಗಿತ್ತು, ನಾಳೇನೂ ಹೋಗ್ತೀನಿ.”
“ಏನ್ ಆಟ ಮಗಾ, ಕಣ್ಣಾಮುಚ್ಚಾಲೇನಾ?”
“ಅದಲ್ಲ ಅಪ್ಪಾ, ಪಕ್ಕದ ಮನೆ ಮೇಷ್ಟ್ರು ಮಗಳಿಗೆ ಅದೇನೋ ಮೊಬೈಲ್ನಲ್ಲೇ ದೊಡ್ಡದು ಟ್ಯಾಬ್ ಅಂತ ಕೊಡ್ಸಿದಾರೆ. ಆಟ ಇದೆ, ಪ್ರಾಣಿ ಇದೆ, ಪಕ್ಷಿ ಇದೆ, ಏನೇನೋ ಇದೆ. ನಂಗೂ ಕೊಡುಸ್ತೀಯಾ?”
“ಆಯ್ತು ಮಗಳೇ….. ನನ್ನ ಪರಿಸ್ಥಿತಿ ಸರಿಯಿಲ್ಲ, ಇಲ್ಲಾ ಅಂದ್ರೆ ನಿನಗೆ ಏನ್ ಬೇಕಾದ್ರು ಕೊಡುಸ್ತಿದ್ದೆ. ಸ್ವಲ್ಪ ದಿನದ ನಂತರ ಕೊಡುಸ್ತೀನಿ. ಬೇಜಾರ್ ಮಾಡ್ಬೇಡಾ…..”
“ಅಪ್ಪಾ ನಾನು ಏನೂ ಕೇಳಿಲ್ಲ, ಇದೊಂದು ಕೊಡ್ಸು. ನನಗೂ ಆಡ್ಬೇಕು ಅಂತಾ ಆಸೆ. ಮೇಷ್ಟ್ರು ಮಗಳು ಅದನ್ನ ನನ್ನ ಕೈಗೆ ಕೊಡೋದೇ ಇಲ್ಲಾ. ‘ಮುಟ್ಬೇಡ ಕಣೇ’ ಅಂತ ದೂರದಿಂದ ತೋರಿಸ್ತಾಳೆ.”
“ರೀ….. ನನ್ನ ಬಂಗಾರ ಮಾರಿ. ನಾನು ಅಪ್ಪ ಅಮ್ಮಗೆ ಏನಾದ್ರೂ ಹೇಳ್ತೀನಿ. ಇವಳಿಗೆ ಅದನ್ನ ಕೊಡಿಸ್ರಿ. ಇರೋಳು ಒಬ್ಬಳೇ ಮಗಳು ಅವಳಿಗೆ ಕೊರತೆ ಮಾಡೋದು ಬೇಡ. ಇವಳು ಚೆನ್ನಾಗ್ ಇರ್ಲಿ.”
“ನೋಡೋಣ ತಡಿಯಮ್ಮ, ಒಂದೆರಡು ದಿನ ತಡ್ಕೊ, ಎಲ್ಲಾದ್ರೂ ಸ್ವಲ್ಪ ದುಡ್ಡು ಸಿಗುತ್ತಾ ನೋಡ್ತೀನಿ.”
“ಅಲ್ಲಾರೀ…. ಕೋಡೋದೇ ಅಷ್ಟಿದೆ, ಮತ್ತೂ ಸಾಲ ಎಲ್ಲಿ ಸಿಗುತ್ತೆ? ಭಟ್ರು, ಮಾರಲಗೋಡ್ನವರು, ಬ್ಯಾಂಕ್ನವರು…. ನನಗಂತೂ ಹುಚ್ಚು ಹಿಡ್ದಂಗಾಗಿದೆ.”
“ನೋಡು ನಾವು ಬೇಕಂತಾ ಮಾಡ್ಕೊಂಡಿದ್ದಲ್ಲ, ನಮ್ಮ ಹಣೇಬರಹ ಯಾರಿಗ್ ಹೇಳೋದು; ದೇವರು ಯಾವ ರೀತಿ ಆಡಸ್ತಾನೋ ಆಡಸ್ಲಿ ಬಿಡು.”
“ರೀ….. ನನಗೆ ಇದೆಲ್ಲಾ ಯೋಚನೆ ಮಾಡ್ದ್ರೆ ಸತ್ಬಿಡೋದೇ ಒಳ್ಳೇದು ಅನ್ಸುತ್ತೆ. ಹಾಗೇ ಮಾಡುವ, ನಾಳೆ ಮಗಳನ್ನ ಫಸ್ಟ್ ಬಿಟ್ ಬನ್ನಿ.”
“ನನಗೂ ಈಚೆಗೆ ಹಾಗೇ ಅನ್ನಿಸ್ತಾ ಇದೆ. ಬದುಕು ತುಂಬಾ ಕಷ್ಟ ಆಗ್ತಾ ಬಂತು. ಯಾರಾದ್ರು ಏನಾದ್ರು ಹೇಳಿದ್ರೆ ನನಗೆ ಸುದಾರ್ಸ್ಕೊಳ್ಳೋಕೆ ಆಗಲ್ಲ. ನನ್ನ ಓದು, ಎಂ.ಎ.ನಲ್ಲಿ ಪಡೆದ ರ್ಯಾಂಕ್, ಸಿಕ್ಕಿದ ಚಿನ್ನದ ಪದಕ, ಸಾಹಿತ್ಯಕ್ಕೆ ಸಂದ ಗೌರವ, ಇವೆಲ್ಲಾ ಒಟ್ಟಿಗೇ ನೆನಪಾಗುತ್ತೆ.”
“ಯಾವ ಬಹುಮಾನ, ಪದಕ ಬಂದ್ರೆ ಅವು ಈಗ ನಮಗೆ ಏನೂ ಪ್ರಯೋಜನವಿಲ್ಲ, ಮನುಷ್ಯನ ಕೈಯಲ್ಲಿ ದುಡ್ಡು ಇರೋತನಕ ಮಾತ್ರ ಗೌರವ. ಈಗ ಯಾರೂ ಮಾತಾಡ್ಸೋರು ಇಲ್ಲ.”
“ಅಪ್ಪಾ ನನಗೆ ಟ್ಯಾಬ್ ಕೊಡಸದೇ ಇದ್ರೆ ನಾನು ಶಾಲೆಗೆ ಹೋಗಲ್ಲ. ನನಗೆ ಏನೂ ಬೇಡ ಅದೊಂದು ಕೊಡ್ಸು.”
“ಆಯ್ತು ಮಗಾ, ಇನ್ನೆರಡು ದಿನ ತಡ್ಕೊ…..”
“ಅಪ್ಪಾ ಫೋನ್ ಬರ್ತಾ ಇದೆ.”
*****
“ಯಾರ್ರೀ, ಭಾರೀ ಹೊತ್ತು ಮಾತನಾಡಿದ್ರೀ…..?”
“ಹೊನಗೋಡು ಭಟ್ರುದ್ದು, ಅವರಿಗೆ ದುಡ್ಡು ನಾಳೇನೇ ಬೇಕಂತೆ. ನನಗೆ ತಡಿಯೋಕೆ ಆಗಲ್ಲ ಅಂತಿದಾರೆ. ನಾಳೆ ಬರ್ತಾರಂತೆ. ಏನ್ ಮಾಡೋದು ಅಂತ ಗೊತ್ತಾಗ್ತಿಲ್ಲ. ನಾಳೆ ನಾನು ಸಾಗರಕ್ಕೆ ಹೋಗ್ತೀನಿ, ಅಂಗಡಿಯಲ್ಲಿ ಸಾಮಾನು ಏನೂ ಇಲ್ಲ. ಸಾಮಾನಿಗೆ ದುಡ್ಡೂ ಇಲ್ಲ. ಏನ್ ಮಾಡೋದು ಅಂತ ದಿಕ್ಕೇ ತೋಚ್ತಾ ಇಲ್ಲ.”
“ರೀ….. ಇನ್ನೂ ಮರ್ಯಾದೆ ಹೋಗೋತನಕ ನಾವು ಇರೋದು ಬೇಡ.”
“ಆಯ್ತು ಕಣೇ, ನಾಳೆ ಮಗಳನ್ನ ಬಿಟ್ ಬರ್ತೀನಿ. ಆದ್ರೂ ನಮ್ಮ ಪಾಲಿಗೆ ಯಾರೂ ಇಲ್ಲ ಅಂತ ಅನ್ನಿಸ್ತಾ ಇದೆ. ನಿಮ್ಮ ಮನೆಯವರು ತುಂಬಾನೇ ಕೊಟ್ರು. ಅವರು ಇನ್ನೂ ಏನ್ ಕೊಡ್ತಾರೆ. ಅವರ ಹತ್ತಿರ ಕೇಳೋಕೂ ಆಗಲ್ಲ. ಹೋಗಲಿ ಬಿಡು, ಹೀಗೇ ಮಾಡುವ.”
“ಮಗಾ ಅಪ್ಪ ನಿನ್ನನ್ನ ಅಜ್ಜಿ ಮನೆಗೆ ಕರ್ಕೊಂಡು ಹೋಗ್ತಾರೆ, ಬಾ ಹೊಸ ಬಟ್ಟೆ ಹಾಕ್ತೀನಿ, ಅಲ್ಲಿ ಹಠ ಮಾಡ್ಬೇಡ, ಮಾವನಿಗೆ ಬೈಯ್ಯಬೇಡ, ಚೆನ್ನಾಗ್ ಇರು. ಏನಾದ್ರೂ ಬೇಕು ಅಂತ ರಗಳೆ ಮಾಡ್ಬೇಡ. ಶಾಲೆಗೆ ಅಲ್ಲೇ ಸೇರ್ಸ್ತೀವಿ. ಅಳ್ಬೇಡ, ಅಪ್ಪ-ಅಮ್ಮ ಬೇಕು ಅಂತ ಹಠ ಹಿಡಿಬೇಡ.”
“ಅಮ್ಮಾ….. ನಾನು ಇನ್ನು ಅಲ್ಲೇ ಇರೋದಾ? ನನಗೆ ಅಪ್ಪನ್ನ ಬಿಟ್ಟು ಇರೋಕೆ ಆಗಲ್ಲ. ಅಪ್ಪ ನೆನಪಾಗ್ತಾರೆ, ಕಣ್ಣಲ್ಲಿ ನೀರ್ ಬರುತ್ತೆ, ಅಪ್ಪನ ಜೊತೆ ಹೋಗಿ ನಾಳೇನೇ ಬರ್ತೀನಿ. ಆದರೆ ಅಲ್ಲೇ ಇರೋಕಾಗಲ್ಲ, ಅಪ್ಪ ಟ್ಯಾಬ್ ಕೊಡುಸ್ತಾರಾ?”
“ಕೊಡುಸ್ತಾರೆ, ನೀನು ಅಜ್ಜಿ ಮನೇಲೇ ಇರೋದಾದ್ರೆ ಮಾತ್ರ. ಇಲ್ಲ ಅಂದ್ರೆ ಕೊಡ್ಸಲ್ಲ.”
“ಅಪ್ಪಾ….. ಹೋಗೋಣಾ ಬಸ್ಸು ಬಂತು.”
“ಮಗಾ ಲಂಗ ಕಾಲಿಗೆ ಸಿಗುತ್ತೆ, ಮೇಲೆತ್ಗೋ, ರಗಳೆ ಮಾಡ್ಬೇಡ ಚೆನ್ನಾಗಿರು, ರೀ….. ಬೇಗ ಬನ್ನಿ.”
“ಆಯ್ತು, ಭಟ್ರು ಬಂದ್ರೆ ನಾಳೆ ಸಿಕ್ತೀನಿ ಅಂತ ಹೇಳು, ಮಾರಲಗೋಡಿನವರಿಗೂ ಹೀಗೆ ಹೇಳು, ಬೇಗ ಬರ್ತೀನಿ.”
*****
“ಎಲ್ಲಿಗೆ ಹೋಗಿದ್ದಾನೆ.”
“ಅವರು ಸಾಗರಕ್ಕೆ ಹೋಗಿದಾರೆ, ಸಂಜೆ ಬರ್ತಾರೆ.”
“ಸಂಜೆನಾದ್ರೂ ಬರ್ಲಿ, ನಾಳೆನಾದ್ರೂ ಬರ್ಲಿ, ನಾನು ಇಲ್ಲಿಂದ ಹೋಗಲ್ಲ; ನನಗೆ ದುಡ್ಡು ಬೇಕು, ಬೇಕೇ ಬೇಕು….. ನಿನ್ನೆ ಫೋನ್ ಮಾಡಿದ್ದೆ… ಬೇಕಂತನೇ ಹೋಗಿದ್ದಾನೆ ಅಂತ ಕಾಣ್ಸತ್ತೆ.”
“ಇಲ್ಲ ಮಗಳಿಗೆ ಆರಾಮಿಲ್ಲ, ಆಸ್ಪತ್ರೆಗೆ ಕರ್ಕಂಡು ಹೋಗಿದಾರೆ…. ನಿನ್ನೆ ನೀವು ಫೋನ್ ಮಾಡಿದ್ರಿ ಅಂತ ಹೇಳ್ತಾ ಇದ್ರು. ದುಡ್ಡು ಏನೂ ಇಲ್ಲ… ಸ್ವಲ್ಪ ದಿನ ಸುಧಾರಿಸೋಕೆ ಆಗುತ್ತಾ?”
“ನನಗೆ ದುಡ್ಡು ಬೇಕೇ ಬೇಕು, ಇಲ್ಲಾ ಅಂದ್ರೆ ನಿಮ್ಮ ಮನೆಗೆ ಬಂದು ಕೂರ್ತೀನಿ….. ನಿಮ್ಮ ಹತ್ತಿರ ದುಡ್ಡಿಲ್ಲ ಅಂದ್ರೆ ನಿಮ್ಮ ಮನೆಯವರು ಮನೇನ ಕೇಳ್ತಾ ಇದಾರೆ, ಕೊಟ್ಟು ನನ್ನ ದುಡ್ಡು ಕೊಡಿ.”
“ಆಯ್ತು ಏನಾದರೂ ಒಂದು ವ್ಯವಸ್ಥೆ ಮಾಡ್ತೀವಿ. ಸ್ವಲ್ಪ ದಿನ ಅವಕಾಶ ಕೊಡಿ.”
“ಅವಕಾಶ ಕೊಡ್ತೀನಿ, ಆದರೆ ನಿಮ್ಮ ಭಾವಂದಿರು ಯಾರಾದ್ರೂ ಜಾಮೀನು ಹೇಳ್ಬೇಕು. ಅವರನ್ನ ಕೇಳಿದ್ರೆ ನಮಗೆ ಸಂಬಂಧ ಇಲ್ಲ ಅಂತಾರೆ. ಅದಕ್ಕೆ ನಾನು ಇಷ್ಟು ಬಿಗಿಯಾಗಿದ್ದು.”
“ಆಯ್ತು, ಭಾವ ಯಾರಾದ್ರು ಬಂದ್ರೆ ನಾನೇ ಹೇಳ್ತೀನಿ….. ಮನೇನಾದ್ರು ಮಾರಿ ನಿಮಗೆ ದುಡ್ಡು ಕೊಡ್ತೀವಿ.”
“ನಾನು ಇವತ್ತು ಹೋಗ್ತೀನಿ, ಆದರೆ ಇನ್ನು ಒಂದು ವಾರ ಬಿಟ್ಟು ಬರ್ತೀನಿ; ಆಗ ದುಡ್ಡು ಇಲ್ಲದೆ ನಿಮ್ಮ ಮನೆ ಬಿಟ್ಟು ಹೋಗಲ್ಲ.”
“ಹಲೋ….. ರೀ….. ಭಟ್ರು ಬಂದಿದ್ರು. ತುಂಬಾ ಮಾತಾಡಿದ್ರು, ಮನೆ ಮಾರಿ ದುಡ್ಡು ಕೊಡಿ ಅಂತ ಹೇಳಿದ್ರು. ನಿಮ್ಮ ಅಣ್ಣ ಮನೆ ನಾನು ತಗೋತೀನಿ ಅಂತ ಹೇಳಿದ್ದಾರಂತೆ. ಅವರಿಗೇ ಕೊಟ್ಟು ನನಗೆ ದುಡ್ಡು ಕೊಡಿ ಅಂತ ಹೇಳಿದ್ರು. ಏನಾದ್ರು ಆಗ್ಲಿ ನೀವು ಬರ್ತಾ ವಿಷದ ಬಾಟ್ಲಿ ತರೋದು ಮರೀಬೇಡಿ. ನಾವು ಇದ್ದು ಏನಾಗಬೇಕು, ಇವತ್ತು ದೂರಾಗಿ ಬಿಡೋಣ.”
“ಆಯ್ತು ತರ್ತೀನಿ. ಮಗಳು ಅಜ್ಜಿ ಜೊತೆ ಚೆನ್ನಾಗಿದಾಳೆ. ನಾನು ಆದಷ್ಟು ಬೇಗ ಬರ್ತೀನಿ.
*****
“ಹಲೋ ಅಮ್ಮಾ, ಮಗಳು ಹೇಗಿದಾಳೆ? ಹೊರಗಡೆ ಹೋಗದ ಹಾಗೆ ನೋಡ್ಕೊ, ಅವಳು ಏನಾದರೂ ಕಿತಾಪತಿ ಮಾಡಿದ್ರೆ ಏನೂ ಹೇಳ್ಬೇಡ, ಹೊಡಿಬೇಡ…..”
“ಇಲ್ಲಾ ಮಗ ಈಗ ಊಟ ಮಾಡಿದ್ಲು, ಆರಾಮಾಗಿ ಇದಾಳೆ, ಕೊಟ್ಗೇಲಿ ಕರುವಿನ ಹತ್ರ ಆಡ್ತಾ ಇದ್ದಾಳೆ…..”
“ಪುಟ್ಟಾ, ಬಾಗಿಲು ತೆಗಿ, ಏನು, ಕರೆಂಟ್ ಹೋಗಿದೆಯಾ… ಏನ್ ಮಾಡ್ತಾ ಇದೀಯಾ…..?”
“ಬಂದೆ, ಅಡುಗೆ ಮನೇಲಿ ಇದೀನಿ.”
“ನಾನು ಹೇಳಿದ ಬಾಟ್ಲಿ ತಂದ್ರಾ…..?”
“ಹೌದು, ನನಗೆ ಯಾಕೋ ತುಂಬಾ ಬೇಜಾರಾಗ್ತಾ ಇದೆ; ನನ್ ಮಗಳನ್ನ ಬಿಟ್ಟು ಇರೋಕೆ ಆಗ್ತಾ ಇಲ್ಲ. ಬಿಟ್ಟುಬರುವಾಗ ‘ಅಪ್ಪಾ ಬೇಗ ಬಾ, ಬೇಗ ಬಾ’ ಅಂತ ಮತ್ತೆ ಮತ್ತೆ ಹೇಳಿದ್ಲು. ನನ್ನ ಕಣ್ಣಲ್ಲಿ ನೀರು ತುಂಬಿ ಬಂತು. ಆದ್ರು ಮನಸ್ಸು ಗಟ್ಟಿ ಮಾಡ್ಕೊಂಡು ಬಂದೆ.”
“ನನಗೆ ಅಳು ತಡೆಯೋಕಾಗಲ್ರೀ, ನೀವ್ ಏನೂ ಹೇಳ್ಬೇಡ್ರಿ, ನಮ್ಮ ಜೀವನ ಅಂತೂ ಇವತ್ತಿಗೆ ಮುಗೀತಲ್ಲ…..”
“ಮುಗೀಲಿ ಬಿಡು, ಊಟ ಮಾಡಿ ತಗೋಳೋಣ; ಮಗಳಿಗೆ ಒಂದು ಫೋನ್ ಮಾಡು, ನನಗೆ ಯಾಕೋ ಒಂದ್ ತರಾ ಆಗ್ತಾ ಇದೆ…..”
“ಊಟ ಮಾಡಿ ಎಲ್ಲಾ ಮುಗ್ಸ್ಕೊಂಡು ಫೋನ್ ಮಾಡ್ತೀನಿ. ನನಗೂ ಯಾಕೋ ಮಾತಾಡೋಕೆ ಆಗ್ತಾ ಇಲ್ಲ. ನಮ್ಮ ಬದುಕು ಇವತ್ತಿಗೆ ಮುಗೀತು ಅಂತ ಆಯ್ತು. ಆ ದೇವರು ನನ್ ಮಗಳನ್ನ ಚೆನ್ನಾಗಿ ಇಡ್ಲಿ.”
“ಅಳ್ಬೇಡ ಕಣೇ, ಜೀವನ ಸಾಕಾಗ್ಬಿಟ್ಟಿದೆ. ನನ್ನ ಹಣೆಬರಹಾ ಹೇಗೂ ಸರಿಯಿಲ್ಲ, ನನ್ ಜೊತೆ ನಿನ್ನ ಬದುಕನ್ನೂ ನಾನು ಹಾಳ್ಮಾಡ್ಬಿಟ್ಟೆ, ನೀನು ಸುಖದಿಂದ ಬೆಳೆದೋಳು. ಹೋಗ್ಲೀ….. ನಿನಗೆ ಸಾಯೋಕೆ ಇಷ್ಟ ಇದಿಯಾ? ಯೋಚನೆ ಮಾಡು….. ಇಲ್ಲಾ ಅಂದ್ರೆ…..”
“ಅಂದ್ರೆ ನಿಮ್ಮನ್ನ ಕಳಕೊಂಡು ನಾನು ಇರೋದಾ? ಸತ್ತರೆ ಇಬ್ಬರೂ….. ಬದುಕಿದ್ರೆ ಇಬ್ಬರೂ….., ನನಗೂ ಜೀವನ ಬೇಜಾರಾಗಿದೆ. ಹಣ ಒಂದೇ ಸರ್ವಸ್ವ ಅಂತ ತಿಳಿದ ಈ ಪ್ರಪಂಚ ನನಗಂತೂ ಬೇಡ. ಎಲ್ಲರಿಗೂ ನಾವು ಸಸಾರ ಆಗಿದ್ದೀವಿ; ಬದುಕು ಸಾಕು, ಊಟ ಮಾಡುವ ಏಳಿ.”
“ಇದು ನಮ್ಮ ಕಡೇ ಊಟ, ಚೆನ್ನಾಗಿ ಊಟ ಮಾಡು, ಅನ್ನದ ಋಣ ನಮ್ಮ ಜೀವನಕ್ಕೆ ಅಂತ್ಯವಾಯ್ತು.”
“ರೀ….. ನಾನು ನಿಮ್ಮನ್ನ ಒಂದ್ ಸಾರಿ ತಬ್ಕೊಂಡು ಅತ್ಬಿಡ್ತೀನಿ. ಇನ್ನು ಈ ತೋಳಬಂದಿ ಸ್ವರ್ಗಾನೋ-ನರಕಾನೋ….., ಅಳಬೇಡಿ ನಿಮ್ಮ ಕಣ್ಣಲ್ಲಿ ನೀರು ಬರಬಾರದು. ನೀವು ರಾಜನ ಹಾಗೆ ಮೆರೆದೋರು, ಈಗ ನೀವು ಅತ್ರೆ? ನಿಮ್ಮಮ್ಮ ಸಾಯುವಾಗ ಯಾರಿಗೂ ತಲೆ ತಗ್ಗಿಸಬೇಡ ಮಗಾ ಅಂತ ಹೇಳಿದ್ದು ನೆನಪು ಹೋಗಿಲ್ಲ ತಾನೆ, ಅಳಬೇಡಿ.”
“ನಿನ್ನೆ ನಮ್ಮ ಅಕ್ಕನ ಹತ್ತಿರ ಸ್ವಲ್ಪ ದುಡ್ಡು ಕೇಳ್ದೆ, ಆದರೆ ನಾವೇ ಸಾಲ ಮಾಡ್ಕೊಂಡಿದೀವಿ ಅಂದ್ಲು…..”
“ಅವರು ಕೊಟ್ಟಿಲ್ಲ ಅಂತ ಬೇಜಾರು ಮಾಡ್ಕೊಬೇಡಿ, ನಮ್ಮ ಗ್ರಾಚಾರ ಸರಿ ಇಲ್ಲದಾಗ ದೇವರು ಅವರ ಬಾಯಲ್ಲಿ ಇಲ್ಲಾ ಅನ್ನಿಸ್ತಾನೆ.”
“ಹೋಗ್ಲಿಬಿಡು.”
“ಕೊಟ್ಟ ಭಾಷೆಗೆ ತಪ್ಪಲಾರೆನು,
ಕೆಟ್ಟ ಯೋಚನೆ ಮಾಡಲಾರೆನು,
ನಿಷ್ಠೆಯಿಂದಲಿ ಪೋಪೆನಲ್ಲಿಗೆ,
ಕಟ್ಟಕಡೆಗಿದು ಖಂಡಿತ….”
“ರೀ….. ನನ್ನ ಫೋನ್ಗೆ ಕಾಲ್…..”
“ಹಲೋ….. ಹೌದಾ, ಹೌದಾ, ಹಾಗಾದ್ರೆ ನಾಳೇನೇ ಬರ್ತೀನಿ.”
“ಏನ್ರೀ, ಯಾರು ಫೋನ್ ಮಾಡಿದ್ದು…?”
“ನಿಮ್ಮಮ್ಮ, ಮಗಳು ಅಪ್ಪ-ಅಮ್ಮ ಬೇಕು ಅಂತ ಅಳ್ತಾ ಇದ್ದಾಳಂತೆ. ನಾನು ಇಲ್ಲಿರೋಲ್ಲ ಅಂತ ಊಟಾನೇ ಮಾಡಿಲ್ವಂತೆ.”
“ಹಾಗಾದ್ರೆ ನಾವು ಸತ್ತ್ರೆ ಮಗಳು ಹೇಗಿರ್ತಾಳೆ? ಅವಳದ್ದೇ ಯೋಚನೆ ಆಗುತ್ತೆ….. ಅವಳನ್ನ ಬಿಟ್ಟು ಹೋಗೇಬಿಡೋಣ್ವಾ?”
“ಬೇಡ ಕಣೇ, ಇವತ್ತು ಸಾಯೋದು ಬೇಡ, ನನಗೆ ಮಗಳು ತುಂಬಾ ನೆನಪಾಗ್ತಾಳೆ, ಎರಡು ದಿನ ಬಿಟ್ಟು ಯೋಚನೆ ಮಾಡುವ.”
*****
“ಈ ಮನೆ ನಿಮ್ಮ ಅಣ್ಣನಿಗೆ ಕೊಟ್ಬಿಡುವ, ಸ್ವಲ್ಪವಾದ್ರು ನಮ್ಮ ಸಾಲ ತೀರುತ್ತೆ.”
“ನೀನು ಯೋಚನೆ ಮಾಡು, ನಮ್ಮ ಅಣ್ಣನ ಹತ್ರಾ ಮನೆ ತಗೋಳೋಕೆ ದುಡ್ಡಿದೆ. ಆದ್ರೆ ಅವತ್ತು ಐದ್ ಸಾವಿರಕ್ಕೆ ನನ್ನ ಹತ್ತಿರ ಗಲಾಟೆ ಮಾಡ್ದಾ. ಪರಿಸ್ಥಿತಿ ಏನೆಲ್ಲ ಹೇಳುಸ್ತೆ….. ನೀನು ಅಂಗಡೀಲಿ ಇರು, ನಾನು ಮಗಳನ್ನ ಕರ್ಕೊಂಡು ಬರ್ತೀನಿ. ಯಾಕೋ ಮಗಳು ಬಿಟ್ ಇರೋಕೆ ಆಗಲ್ಲ.”
“ಎಲ್ಲಾ ಹೋಗ್ಲೀ, ನಿಮಗೊಂದು ಕೆಲಸಾನಾದ್ರು ಸಿಕ್ಕಿದ್ದ್ರೆ ಸಾಕಿತ್ತು. ಎಷ್ಟು ಕಷ್ಟಪಟ್ರು ಅದೂ ಆಗ್ತಾ ಇಲ್ಲ. ಯಾವುದಾದ್ರೂ ಒಂದು ಕಾಲೇಜಲ್ಲಿ ಕೆಲಸ ಆದ್ರೆ ಸಾಕು. ಈ ಊರೇ ಬೇಡ, ಗಂಜಿನೋ, ನೀರೋ ಕುಡ್ಕೊಂಡು ಜೀವನ ಮಾಡಬೋದಿತ್ತು.”
“ಸಾಗರ ಕಾಲೇಜಿಂದು ಆಗಬಹುದು, ಚದರವಳ್ಳಿ ಭಟ್ರು ದೊಡ್ಡಮನಸ್ಸು ಮಾಡಿ ಮಾಡಿಕೊಡ್ತೀನಿ ಅಂದಿದ್ದಾರೆ.”
“ರೀ….. ಯಾರದ್ದೋ ಫೋನ್……”
“ಹಲೋ, ಆಯ್ತು ಭಟ್ರೆ, ಮನೇನ ನಮ್ಮ ಅಣ್ಣಂಗೆ ಮಾರಿ ನಿಮಗೆ ಇನ್ನೊಂದು ವಾರದೊಳಗೆ ದುಡ್ಡು ಕೊಡ್ತೀನಿ. ಸರೀ ನೀವು ಬರೋದು ಬೇಡ, ನಾನೇ ತಂದು ಕೊಡ್ತೀನಿ.”
“ಹೊನಗೋಡು ಭಟ್ರಾ? ಸರಿ ಹಾಗೇ ಮಾಡಿ, ಸಾಲ ಇರುವಾಗ ಮನೆ ಇಟ್ಕೊಂಡು ಏನ್ ಮಾಡೋದು?”
“ಸಾಲ ಕೊಡೋರಿಗೆ ಎಲ್ಲಾ ಕೊಡಿ, ಯಾರೂ ಕೊಡೋದಿದೆ ಅಂತ ಹೇಳ್ಬಾರದು, ಸರ್ವಸ್ವನೇ ಹೋದ್ರೂ ಹೋಗ್ಲಿ, ಸಾಲ ಇರಬಾರದು.”
*****
“ಅಂತೂ ಮನೆ ಮಾರಿ ಎಲ್ಲರಿಗೂ ಕೊಟ್ಟಾಯ್ತು, ನಮ್ಮ ಅಣ್ಣನ ಹತ್ತಿರ ಬ್ಯಾಂಕ್ ಲೋನ್ ಅರ್ಧ ಕಟ್ಟುವ ಅಂದ್ರೆ ಆಗಲ್ಲ, ನನ್ನ ಜಾಮೀನು ಇದೆ ಅಂದ್ಬಿಟ್ಟ.”
“ಹೋಗ್ಲಿ ಬಿಡಿ, ಎಲ್ಲ ಸರಿಯಾಯ್ತು, ಬದುಕು ಸರಿ ಹೋಗುತ್ತಾ ನೋಡುವಾ……”
“ನೀವು ಅಂಗಡಿಗೆ ಹೋಗಿ, ನಾನು ಮಗಳಿಗೆ ಸ್ನಾನ ಮಾಡಿಸ್ತೀನಿ.”
“ಆಯ್ತು ನಾನು ಹೊರಟೆ ಬಾಗಿಲು ಹಾಕ್ಕೋ…..”
“ಮಧ್ಯಾಹ್ನ ಬೇಗ ಬನ್ನಿ…..”
“ಏನ್ ಬೇಕು ರಾಜಣ್ಣ, ಆರಾಮಿದಿರಾ, ಮತ್ತೆ ವಿಶೇಷ….?”
“ನಿಮ್ಮ ಮನೆ ನಿಮ್ಮ ಅಣ್ಣಂಗೆ ಕೊಟ್ರಂತೆ, ನಿಮ್ಮ ಅಣ್ಣ ನಿನ್ನೆ ಹೇಳಿದ್ರು, ಮತ್ತೆ ನಿಮ್ಮ ಕತೆ…..?”
“ಹೌದು ರಾಜಣ್ಣ, ನನಗೆ ಸ್ವಲ್ಪ ತೊಂದರೆ ಇತ್ತು…..”
“ಅಲ್ಲಾ, ನಿಮ್ಮ ಅಣ್ಣನಿಗೂ ನಿಮಗೂ ಸರಿ ಇಲ್ವಾ, ಅವರು-ನೀವೂ ಒಂದೇ ಮನೆಯೋರು, ಅವರು ಯಾಕೆ ತಗೊಂಡ್ರು.”
“ಅದೆಲ್ಲಾ ಬೇಡ ಬಿಡಿ ರಾಜಣ್ಣ, ನನಗೆ ಮನಸ್ಸಿಗೆ ಬೇಜಾರಿದೆ.”
“ಊಟಕ್ಕೆ ಹೊರಟ್ರಾ, ಹೋಗ್ಬನ್ನಿ.”
*****
“ಯಾಕ್ರೀ, ತಣ್ಣಗೆ ಇದೀರಿ, ಏನಾಗಿದೆ, ಊಟ ಮಾಡ್ವಾ ಬನ್ನಿ.”
“ಇಲ್ಲಾ ಕಣೇ ಸಾಯೋದು ಸಾಯೋದೇ…..”
“ಮಗಳು…?”
“ನೋಡುವಾ, ಎಲ್ಲಾದ್ರೂ ಬಿಡುವ; ಇಲ್ಲಾ ಅಂದ್ರೆ…. ನಾವೇ ಇಲ್ಲದೆ ಅವಳನ್ನ ಯಾಕೆ ಯಾರೋ ಕೈಯಲ್ಲಿ ಬಿಡೋದು, ಅವಳಿಗೂ ಕುಡ್ಸೇ ಬಿಡುವ.”
“ಏನಾಯ್ತು, ಮತ್ತೆ ಯಾಕೆ ಈ ನಿರ್ಧಾರ?”
“ನಮ್ಮ ಅಣ್ಣ ಎಲ್ಲರ ಹತ್ರಾನೂ ಮನೆ ತಗೊಂಡ ವಿಚಾರ ಹೇಳಿದಾನಂತೆ, ಎಲ್ಲರೂ ಕೇಳ್ತಾರೆ…. ನಾನು ಇದ್ದೂ ಸತ್ತ ಹಾಗೆ.”
“ಸರಿ ಹಾಗಾದರೆ, ಎಲ್ರೂ ಸತ್ತುಬಿಡುವ; ಆದರೆ ನನ್ನ ಮಗಳನ್ನ ಸಾಯಿಸೋಕೆ ನನಗೆ ಮನಸಿಲ್ಲ.”
“ಇರಲಿ ಬಿಡು, ಯಾರದ್ದೋ ಹಂಗಲ್ಲಿ ಬಿಡೋದಕ್ಕಿಂತ ಸಾಯಿಸೋದೇ ಸರಿ…. ಇವತ್ತು ಸಂಜೆ ಬೇಗ ಊಟಕ್ಕೆ ಮಾಡು; ಇವತ್ತೇ ತಗೊಂಡುಬಿಡುವ, ಮಗಳಿಗೆ ಅನ್ನದಲ್ಲೇ ಹಾಕಿಕೊಡು, ಇಲ್ಲಾ ಅಂದ್ರೆ ಕಷ್ಟ ಆಗುತ್ತೆ.”
“ಅಂಗಡಿಯಿಂದ ಬೇಗ ಬನ್ನಿ, ನಿಮಗೆ ಏನಾದರೂ ಮಾಡಬೇಕಾ?”
“ಬೇಡ….. ಮಗಳು ಜಾಗ್ರತೆ, ಅವಳಿಗೆ ಏನಾದ್ರೂ ಬೇಕಾದ್ರೆ ಮಾಡ್ಕೊಡು.”
*****
“ಆದರೂ ನನ್ನ ಮನಸ್ಸು ಸರಿಯಾಗಲಿಲ್ಲ ನೆನಪಾಗುವ ಹಲವು ಯೋಚನೆಗಳು ತುಡಿಯತೊಡಗಿದವು. ಬಂಗಾರವೆಲ್ಲಾ ಮಾರಿದ್ದು ಮಾವನ ಮನೆಗೆ ಗೊತ್ತಾಗಿದ್ದು, ಅವರ ಎದುರಿಗೆ ತಲೆ ತಗ್ಗಿಸಿದ್ದು, ಮಗಳಿಗೆ ಟ್ಯಾಬ್ ಕೊಡಿಸಲಾಗದೆ ಸುಳ್ಳು ಹೇಳಿದ್ದು, ಸಾಮಾನಿಲ್ಲದ ಅಂಗಡಿ, ಎಲ್ಲರ ಎದುರಿಗೂ ಮರ್ಯಾದೆಗೇಡುತನ, ಇವೆಲ್ಲದರ ಎದುರಿಗೆ ನೆನಪಾಗುವ ಬಂಗಾರದ ಪದಕ, ಅಂಕಪಟ್ಟಿ, ಸಾಹಿತ್ಯಕ್ಕೆ ಸಂದ ಬಹುಮಾನ, ಪಾಠ ಮಾಡಿದ ಹುಡುಗರು ಬಂದು ಆಗಾಗ ಕೊಡುವ ನಮಸ್ಕಾರಗಳು. ಮನಸ್ಸು ಯಾಕೋ ಹಲವು ಚಿಂತೆಗಳ ಆಗರವಾಗಿದೆ….”
“ಅಂತರಂಗದ ಮೃದಂಗ ಅಂತು ತೋಂತನಾನ…..”
“ರೀ….. ಗಂಟೆ ಎಂಟು, ಬನ್ನಿ….. ನನಗೆ ಯಾಕೋ ಬೇಜಾರಾಗಿದೆ…. ಮಗಳು ಮಲಗ್ತಾಳೆ, ಊಟಕ್ಕೆ ನೀವೇ ಹಾಕಿ; ನನ್ನ ಹತ್ರಾ ಆಗಲ್ಲ….. ತುಂಬಾ ಅಳು ಬರ್ತಾ ಇದೆ, ನಮ್ಮ ಜೀವನ ಮುಗಿದೇ ಹೋಗುತ್ತಲ್ಲ….. ನಾನು ಎಲ್ಲರ ಹತ್ತಿರ ಮಾತಾಡ್ತೀನಿ, ಕರೆನ್ಸಿ ಹಾಕ್ಸಿ….. ಅಮ್ಮನ ಹತ್ತಿರ ತುಂಬಾ ಮಾತಾಡ್ಬೇಕು, ಇದು ಲಾಸ್ಟ್ ಮಾತು, ನೀವು ನಿಮ್ಮ ಮನೆಗೆ ಫೋನ್ ಮಾಡಿ. ಇಡ್ತೀನಿ, ಕರೆನ್ಸಿ ಮರಿಬೇಡಿ.”
“ಮಗಳೇ ಬಾಗಿಲು ತೆಗಿ…..”
“ಅಪ್ಪಾ ಟ್ಯಾಬ್ ತಂದ್ರಾ?”
“ಇಲ್ಲ ಮಗಾ, ಕೊಡಿಸ್ತೀನಿ…..”
“ಬೀರು ಒಳಗೆ ಬಾಟ್ಲಿ ಇದೆ ತಕೊಂಡು ಬಾ. ಮೊದಲು ಮಗಳಿಗೆ ಹಾಕಿ ಊಟ ಮಾಡ್ಸು, ಸ್ವಲ್ಪ ಸಕ್ಕರೆ ಸೇರಿಸ್ಕೋ, ಇಲ್ಲ ಅಂದ್ರೆ ಕಹಿಯಾಗುತ್ತೆ….. ಆಮೇಲೆ ನಾವಿಬ್ಬರೂ ತಗೊಳುವ.”
“ಯಾರು ಮನೇಲಿ….. ಬಾಗ್ಲು ತೆಗೀರಿ.”
“ಬನ್ನಿ ಕೃಷ್ಣಣ್ಣ, ಒಳಗೆ ಬನ್ನಿ; ಸುಮಾರು ದಿನ ಆಯ್ತು ಈ ಕಡೆ ಪತ್ತೆನೇ ಇಲ್ಲಾ……”
“ಹೌದು ಮಾರಾಯ, ಪುರುಸೊತ್ತಿಲ್ಲ, ಏನೋ ಮನೆ ಕೊಟ್ಯಂತೆ, ನಿಮ್ಮಣ್ಣ ಹೇಳ್ದಾ, ಅದರ ಬದಲು ಅವರು ನಿನಗೆ ಸ್ವಲ್ಪ ದುಡ್ಡು ಕೊಡಬಹುದಿತ್ತಾ? ನಿಮ್ಮ ಮನೆಯವರು ತುಂಬಾ ಸ್ವಾರ್ಥಿಗಳು. ಇರ್ಲಿ ಬಿಡು, ನೀನು ಏನಾದರೂ ಮಾಡಿ ಒಂದು ಗೌರ್ಮೆಂಟ್ ಕೆಲಸಕ್ಕೆ ಹೋಗ್ಬಿಡು. ಓದಿ ಇಲ್ಲಿ ಬರಬಾರದಿತ್ತು. ಈಗಲಾದರೂ ಕಾಲ ಮಿಂಚಿಲ್ಲ, ಯೋಚನೆ ಮಾಡು.”
“ಹೌದು ಕೃಷ್ಣಣ್ಣ, ನಮ್ಮ ಮನೆಯವರಿಗೆ ಆಗ ಹೇಳಿದ್ರೆ ಸುಮ್ನೆ ಕಾಲಹರಣ ಮಾಡಿದ್ರು, ನೌಕ್ರಿ ಬೇಡ ಅಂದ್ರು. ಈಗ ಅದೂ ಇಲ್ಲ, ದುಡ್ಡೂ ಇಲ್ಲ. ಯಾರೂ ನಮ್ಮ ಪಾಲಿಗೆ ಇಲ್ವಾದ್ರು.”
“ಈ ಕಾಲವೇ ಹಾಗೆ, ಕೈಸೋತ್ರೆ ಯಾರೂ ಇಲ್ಲ, ಎಲ್ಲರೂ ಸಸಾರ ಮಾಡ್ತಾರೆ, ಇರ್ಲಿ ನಾವೆಲ್ಲ ಇದೀವಿ, ಏನಾದರೂ ಸಹಾಯ ಮಾಡ್ತೀವಿ. ನೀನು ಏನಾದರೂ ಒಂದು ನಿರ್ಧಾರ ತಗೋ. ಹತ್ತು ಗಂಟೆ ಆಯ್ತು ನಾನಿನ್ನು ಬರ್ತೀನಿ.”
“ಮಗಳು ಮಲಗಿದ್ಲು, ಊಟನೂ ಮಾಡಿಲ್ಲ, ಏನ್ ಮಾಡೋದು, ಅವಳಂತೂ ಏಳಲ್ಲ, ಅವಳ್ನ ಬಿಟ್ಟು ನಾವು……?”
“ಇರ್ಲಿ ನಾಳೆ ನೋಡುವ, ಅವಳನ್ನ ಎಬ್ಬಿಸಿದ್ರೆ ಹ್ಯಾಗೂ ಊಟ ಮಾಡಲ್ಲ. ಚೌತಿ ಹಬ್ಬ ಬಂತು ಸಾಮಾನಿಗೂ ದುಡ್ಡಿಲ್ಲ, ಅಷ್ಟರೊಳಗೆ ಹೋಗ್ಬಿಡುವ. ತುಂಬಾ ಸಮಸ್ಯೆ….. ಬದುಕು ಸಾಕಾಗ್ಬಿಟ್ಟಿದೆ.”
“ಅಂತರಂಗದ…..”
“ಹಲೋ, ಹೌದಾ ಸಾರ್ ತುಂಬಾ ಖುಷಿ ಆಯ್ತು. ನನ್ನ ಜೀವನಕ್ಕೆ ಏನೋ ಒಂದು ಬದಲಾವಣೆ ಬಂತು ಸಾರ್, ನಿಮ್ಮ ಋಣ ಯಾವತ್ತೂ ಮರೆಯೊಲ್ಲ. ತುಂಬಾ ಥ್ಯಾಂಕ್ಸ್ ಸಾರ್. ನಾಳೆ ನಿಮ್ಮ ಮನೇಗೆ ಬರ್ತೀನಿ, ಆಯ್ತು ಸಾರ್…..”
*****
“ಅಂತೂ ಇವತ್ತು ನಮ್ಮ ಜನ್ಮ ಉಳೀತು, ನಾಳೇ ಏನೋ….. ಎಂತೋ…..?”
“ಭಾರೀ ಖುಷಿಯಾಗಿದ್ದೀರಿ, ಏನ್ ಹೇಳ್ರೀ, ಯಾರದ್ದು ಫೋನ್, ಏನಂತೆ?!”
“ಅದೇ ಚದರವಳ್ಳಿ ಭಟ್ರು…”
“ಏನ್ ಹೇಳಿದ್ರು, ಕೆಲಸ ಸಿಗಬಹುದು ಅಂದ್ರಾ?”
“ಇಲ್ಲಾ, ತಾಳಗುಪ್ಪ ಕಾಲೇಜಿನಾಗೆ ಕೆಲಸ ಆಗಿದೆಯಂತೆ. ಬೇಗ ಹೋಗಿ ಸೇರಿಕೊಳ್ಳಿ ಅಂದ್ರು, ನನಗೆ ತುಂಬಾ ಖುಷಿ ಆಯ್ತು…..”
“ರೀ….. ಇನ್ನಾದ್ರೂ ನಮ್ಮ ಕಷ್ಟ ಬಗೆಹರಿಯುತ್ತಾ ನೋಡೋಣ, ದೇವರಿಗೆ ಈಗಲಾದ್ರೂ ನಮ್ಮ ಮೇಲೆ ಕರುಣೆ ಬಂತು ಅಂತಾಯ್ತು. ಆದರೂ ನನಗೆ ಅದೇ ಯೋಚನೆ…. ಬಂಗಾರ, ಮನೆ, ಮಗಳು. ಮನೆ, ಬಂಗಾರ ಯಾವುದಾದರೂ ಹೋಗ್ಲಿ, ಮಗಳು ಉಳ್ದ್ರೇ ಸಾಕು. ನಮ್ಮ ಅಮ್ಮನಿಗೆ ಒಂದು ಫೋನ್ ಮಾಡ್ತೀನಿ…..”
“ನಿದ್ದೆ ಬರ್ತಿದೆ, ಹಾಸಿಗೆ ಹಾಕು….. ಆದ್ರೂ ಸತ್ಯಕ್ಕೆ ಒಂದು ಬದುಕಿದೆ ಎನ್ನೋದು ನಿಜ. ನಾವು ಹತ್ತು ಜನರಿಗೆ ಮಾಡಿದ ಉಪಕಾರ ನಮ್ಮನ್ನು ಇವತ್ತು ಉಳುಸ್ತು…. ಇರ್ಲಿ ಬಿಡು, ನಮ್ಮ ಮನೆಯೋರು ಚೆನ್ನಾಗಿರ್ಲಿ….. ಸಾಯೋದು ಸುಲಭ
ಅಲ್ಲ ಕಣೇ….” ?
——————————–
(ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೧೪ರಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ)