ಶಾಸ್ತ್ರಿಗಳ ಕಚೇರಿ ಅತ್ಯಂತ ವಿಶಿಷ್ಟ. ಯಾವುದೇ ರಾಗವನ್ನು ಹಿಗ್ಗಿಸಿ ಹಿಗ್ಗಿಸಿ ಎಳೆದು ತುಂಬಾ ಹೊತ್ತು ಆಲಾಪನೆ ಮಾಡುವುದು ಅವರ ಪರಿಪಾಟಿ ಆಗಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಇಡೀ ರಾಗದ ಸತ್ತ್ವವನ್ನು ಶ್ರೋತೃಗಳ ಮುಂದೆ ತೆರೆದಿಟ್ಟುಬಿಡುತ್ತಿದ್ದರು. ಚಿಕ್ಕ ಚೊಕ್ಕ ಹಿತವಾದ ಆಲಾಪನೆ; ಮುಂದಿನ ಹಂತ ಕೃತಿ, ನೆರವಲ್, ಸ್ವರಪ್ರಸ್ತಾರ. ನೆರವಲ್ ಮಾಡುವಾಗ ಅದರಲ್ಲೇ ಮುಳುಗಿ, ಆಮೇಲೆ ಅದರ ಜೊತೆಯಲ್ಲೇ ಎಲ್ಲೆಲ್ಲೋ ಪಯಣಿಸಿ ಸ್ವರಪ್ರಸ್ತಾರ ಮಾಡುವಾಗ ಉಸಿರು ಬಿಗಿಹಿಡಿದು ಕೇಳಿ, ಕೊನೆಗೆ ಪಲ್ಲವಿ ಹಾಡಿ ನಿಲ್ಲಿಸಿದಾಗ ದಡಕ್ಕನೆ ಕೆಳಗೆ ಬಿದ್ದ ಅನುಭವ; ಒಂದು ಅವರ್ಣನೀಯ ಅನುಭವ.

ಚಕ್ರಕೋಡಿ ನಾರಾಯಣಶಾಸ್ತ್ರಿ `ವಚನಗಾಯನ ಆದ್ಯಪ್ರವರ್ತಕ’ರೂ ಹೌದು
ಹಿಂದುಸ್ತಾನಿ ಸಂಗೀತಕ್ಕೆ ಕರ್ನಾಟಕದ ಒಂದು ಕೊಡುಗೆ ಏನೆಂದು ಕೇಳಿದರೆ ಶಿವಶರಣರ ವಚನಗಳು ಎಂಬುದಾಗಿ ಧಾರಾಳವಾಗಿ ಹೇಳಬಹುದು. ಆ ಕಚೇರಿಗಳಲ್ಲಿ ವಚನಗಳು ಹಾಸುಹೊಕ್ಕಾಗಿ ಸೇರಿಕೊಂಡಿವೆ. ಆದರೆ ಇದು ಪ್ರಾಚೀನದಿಂದ ಬಂದದ್ದಲ್ಲ. ಕರ್ನಾಟಕ ಸಂಗೀತದ ಒಬ್ಬ ಗಾಯಕರು ವಚನಗಳನ್ನು ಮೊದಲಾಗಿ ಕಚೇರಿಯೊಳಗೆ ತಂದರೆನ್ನುವುದು ಅಲ್ಲಗಳೆಯಲಾಗದ ಸತ್ಯ. ಕಚೇರಿಯ ಚೌಕಟ್ಟಿನೊಳಗೆ ವಚನಗಳನ್ನು ತಂದವರು ಯಾರು ಎನ್ನುವ ಪ್ರಶ್ನೆಗೆ `ಮಲ್ಲಿಕಾರ್ಜುನ ಮನ್ಸೂರ್’ ಎನ್ನುವ ಉತ್ತರ ಸುಲಭವಾಗಿ ಬರಬಹುದು. ಆದರೆ ಅವರಿಗಿಂತಲೂ ಹಿಂದೆ ೧೯೩೦ರ ಸುಮಾರಿಗೆ ಕಚೇರಿಗಳಲ್ಲಿ ವಚನಗಳನ್ನು ಹಾಡಿ ಮನ್ಸೂರರಿಗೂ ಪ್ರೇರಣೆಯಾದವರು ಸುಮಾರು ಎರಡು ದಶಕಗಳ ಕಾಲ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಕರ್ನಾಟಕ ಸಂಗೀತದ ನಿಲಯಕಲಾವಿದರಾಗಿ ಸೇವೆ ಸಲ್ಲಿಸಿದ ವಿದ್ವಾನ್ ಚಕ್ರಕೋಡಿ ನಾರಾಯಣಶಾಸ್ತ್ರಿಗಳು. ಈ ಘಟನೆಯಲ್ಲಿ ಮಹಾನ್ ಸಾಹಿತಿ ಅ.ನ. ಕೃಷ್ಣರಾಯರ ಹೆಸರು ಕೂಡ ಬೆಸೆದುಕೊಂಡಿದೆ.
ಸಿ.ಎನ್. ಶಾಸ್ತ್ರಿ ಎಂದೇ ಪ್ರಸಿದ್ಧರಾದ ಚಕ್ರಕೋಡಿ ನಾರಾಯಣಶಾಸ್ತ್ರಿಗಳು (೧೯೧೩-೧೯೯೩) ಆಗ ಇನ್ನೂ ೧೭-೧೮ರ ಯುವಕ. ಮೈಸೂರಿನ ಬಿ.ದೇವೇಂದ್ರಪ್ಪನವರಲ್ಲಿ ಶಿಷ್ಯವೃತ್ತಿಯನ್ನು ಕೈಗೊಂಡು ಕರ್ನಾಟಕ ಸಂಗೀತದ ಅಭ್ಯಾಸದಲ್ಲಿ ತೊಡಗಿದ್ದರು. ಒಂದು ದಿನ ಈ ಯುವಕ ಗುರುಗಳಲ್ಲಿ ನೇರವಾಗಿ “ನೀವು ಶಿವಶರಣರ ವಚನಗಳನ್ನೇಕೆ ಹಾಡುವುದಿಲ್ಲ?” ಎಂದು ಕೇಳಿದ. ಅದಕ್ಕೆ ಅವರು, “ಅವು ಗದ್ಯರೂಪಗಳು. ಅವುಗಳಿಗೆ ರಾಗ ಹಾಕಿ ಹಾಡಬಹುದಾಗಿದ್ದರೆ ಇಷ್ಟು ದಿನ ಯಾರೂ ಸುಮ್ಮನಿರುತ್ತಿರಲಿಲ್ಲ” ಎಂದು ಸಮಾಧಾನ ಹೇಳಿದರು. ಆದರೆ ಇವನ ಮನಸ್ಸು ಕೇಳಲಿಲ್ಲ. ಪ್ರಯತ್ನಪಟ್ಟು ನಾಲ್ಕಾರು ವಚನಗಳಿಗೆ ರಾಗ ಹಾಕಿ ಗುರುಗಳ ಮುಂದೆ ತೋರಿಸಿದ. ಅವರಿಗೆ ತುಂಬ ಸಂತೋಷವಾಯಿತು. ಅಂದು ರಾತ್ರಿ ತಾವು ಕುಡಿಯುವ ಬಾದಾಮಿಹಾಲನ್ನು ಈ ಶಿಷ್ಯನಿಗೆ ನೀಡಿ ಹರಸಿದರು. ವಚನಗಾಯನಕ್ಕೆ ಅದೇ ನಾಂದಿಯಾಯಿತು ಎಂದು ವಿವರಿಸಿದ್ದಾರೆ, ಈಗ ಮೈಸೂರಿನಲ್ಲಿ ವಾಸವಿರುವ ಶಾಸ್ತ್ರಿಗಳ ಪುತ್ರಿ ಮುಳಿಯ ಸರಸ್ವತಿ ಅವರು. ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಅರುಣಕುಮಾರ್ ಎಸ್.ಆರ್. ಕನ್ಯಾಡಿ ಅವರು `ವಚನ ಕೋಗಿಲೆ’ ಎನ್ನುವ ಶಾಸ್ತ್ರಿಗಳ ಸಂಸ್ಮರಣಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದ್ದು, (ಪ್ರಕಾಶನ – ಸಿ.ಎನ್. ಶಾಸ್ತ್ರಿ ಜನ್ಮಶತಮಾನೋತ್ಸವ ಸಮಿತಿ, ಕುತ್ತಾರು-ಮುನ್ನೂರು, ಮಂಗಳೂರು) ಗ್ರಂಥದ ಲೇಖನಗಳು ಶಾಸ್ತ್ರಿಗಳ ಭೂಮವ್ಯಕ್ತಿತ್ವವನ್ನು ಸಾಕಷ್ಟು ತೆರೆದಿಡುತ್ತವೆ.
`ವಚನಗಾಯನ ಆದ್ಯಪ್ರವರ್ತಕ‘
ಅಷ್ಟು ಮಾತ್ರವಲ್ಲ; ಶಾಸ್ತ್ರಿಗಳ ಈ ಸಾಧನೆಯನ್ನು ಅಂದೇ ಗುರುತಿಸಲಾಗಿತ್ತು. ೧೯೩೧ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನದಲ್ಲಿ ಅ.ನ. ಕೃಷ್ಣರಾಯರು ಶಾಸ್ತ್ರಿಗಳಿಗೆ `ವಚನಗಾಯನ ಆದ್ಯಪ್ರವರ್ತಕ’ ಎನ್ನುವ ಬಿರುದು ನೀಡಿ ಸಂಮಾನಿಸಿದ್ದರೆಂದು ಮಹಾಮಹೋಪಾಧ್ಯಾಯ ರಾ. ಸತ್ಯನಾರಾಯಣ, ಮೈಸೂರು ಅವರು ಉಲ್ಲೇಖಿಸಿದ್ದಾರೆ.
ಜುಲೈ ೭, ೧೯೩೭ರಂದು ಬೆಂಗಳೂರಿನ ವೀರಶೈವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ನಾರಾಯಣಶಾಸ್ತ್ರಿಗಳು ಶಿವಶರಣರ ವಚನ ಸಂಗೀತ ಕಚೇರಿಯನ್ನು ನಡೆಸಿದರು. ಅಂದಿನ ಮುಖ್ಯ ಅತಿಥಿ ಅ.ನ. ಕೃಷ್ಣರಾಯರು ತಮ್ಮ ಭಾಷಣದಲ್ಲಿ ಹೀಗೆ ಹೇಳಿದ್ದರು: “ಗದ್ಯಸಾಹಿತ್ಯ ಎನಿಸಿಕೊಂಡಿದ್ದ ವಚನವಾಙ್ಮಯವನ್ನು ಶಾಸ್ತ್ರಿಗಳು ರಾಗ, ತಾಳ, ಸ್ವರಗಳಿಂದ ಅಲಂಕರಿಸಿ, ಭಾರತೀಯ ಸಂಗೀತ ಪ್ರಪಂಚಕ್ಕೊಂದು ನೂತನ ಕಾಣಿಕೆಯನ್ನು ಸಮರ್ಪಿಸಿದ್ದಾರೆ. ನಾಡಿನ ಶ್ರೀಮಂತರು ವಿವಾಹಾದಿ ಶುಭಕಾರ್ಯಗಳಲ್ಲಿ ಇಂತಹ ಕನ್ನಡ ಸಂಗೀತ ಕಛೇರಿಯನ್ನು ಏರ್ಪಡಿಸಬೇಕು.”
ಅ.ನ.ಕೃ. ತಮ್ಮ ಈ ಅಭಿಯಾನವನ್ನು ಅಲ್ಲಿಗೇ ನಿಲ್ಲಿಸದೆ ಖ್ಯಾತ ಗಾಯಕ ಮಲ್ಲಿಕಾರ್ಜುನ ಮನ್ಸೂರ್ ಅವರ ಮುಂದೆಯೇ ಪ್ರಸ್ತಾವಿಸಿದರು ಎಂಬುದರತ್ತ ವಿಜ್ಞಾನ ಲೇಖಕ, ಸಂಗೀತ ವಿಮರ್ಶಕ ಪ್ರೊ|| ಜಿ.ಟಿ. ನಾರಾಯಣರಾಯರು ಗಮನ ಸೆಳೆದಿದ್ದಾರೆ. “ಪಂಡಿತ್ಜೀ, ನೀವೇಕೆ ನಿಮ್ಮ ಬೈಠಕ್ಕುಗಳಲ್ಲಿ ಕನ್ನಡದ ಒಂದು ಹಾಡನ್ನೂ ಅಳವಡಿಸುವುದಿಲ್ಲವಲ್ಲ?” ಎಂದು ಸಾಹಿತಿ ಅ.ನ.ಕೃ. ಪೀಠಿಕೆ ಹಾಕಿದರು. ಅದಕ್ಕೆ ಮನ್ಸೂರ್ “ಹೇ, ಅದರಲ್ಲೇನಿದೆ? ಬರೇ ಪದಗಳ ಗೊಂದಲ” ಎಂದು ತುಸು ಅಸಹನೆ, ತಿರಸ್ಕಾರ ಸಹಿತ ಉತ್ತರಿಸಿದರಂತೆ. ಅ.ನ.ಕೃ. ಮುಂದುವರಿದು, “ಹಾಗಲ್ಲ, ನೀವು ನಮ್ಮ ಸಿ.ಎನ್. ಶಾಸ್ತ್ರಿಗಳು ವಚನವಾಙ್ಮಯಕ್ಕೆ ಮಟ್ಟು ಹಾಕಿ ಹಾಡಿದ್ದನ್ನು ಆಲಿಸಿದ್ದೀರಾ?” ಎಂದು ಕೇಳಿದಾಗ ಮನ್ಸೂರ್ “ಇಲ್ಲ” ಎಂದು ಒಪ್ಪಿಕೊಂಡರು. ಸಂದರ್ಭದ ಬಗ್ಗೆ ಅ.ನ.ಕೃ. ಮುಂದಿನ ಟಿಪ್ಪಣಿ ಹೀಗಿದೆ: “ಆಗ ನಾನು ನನ್ನ ಗೊಗ್ಗರದನಿಯಲ್ಲಿ ಶಾಸ್ತ್ರಿಯವರ ಧಾಟಿಯನ್ನು ಅನುಕರಿಸುತ್ತ `ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ಯನ್ನು ಹಾಡಿದೆ. ಮನ್ಸೂರರ ಯುಗಪ್ರತಿಭೆ ಆ ಗಳಿಗೆ ಮಿಂಚಿತು. ಈ ಮಟ್ಟನ್ನು ಹಿಡಿದುಕೊಂಡು, ಅದಕ್ಕೆ ಸ್ವಂತ ಪ್ರತಿಭೆಯ ಛಾಪನ್ನು ಒತ್ತಿ ಪ್ರಸರಿಸಲು ತೊಡಗಿತು.” ಆದರೆ ಒಂದು ಸತ್ಯ; ಹಿಂದುಸ್ತಾನಿ ಸಂಗೀತ ಕಚೇರಿಗೆ ವಚನಗಳನ್ನು ಮೊದಲಾಗಿ ತಂದವರು ಮನ್ಸೂರ್. “ಮನ್ಸೂರ್ ಅನೇಕ ಸಲ ಧಾರವಾಡದ ನಮ್ಮ ಮನೆಗೆ ಬಂದು ತಂದೆಯವರಿಂದ ವಚನ ಹಾಡಿಸಿ ಕೇಳಿಕೊಂಡಿದ್ದರು” ಎಂದಿದ್ದಾರೆ ಮುಳಿಯ ಸರಸ್ವತಿ. ೧೯೫೭ರಲ್ಲಿ ಆಕಾಶವಾಣಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಇಡೀ ೯೦ ನಿಮಿಷಗಳ ಕಚೇರಿಯನ್ನು ಶಾಸ್ತ್ರಿಗಳು ವಚನಗಳಿಂದಲೇ ಮಾಡಿದ್ದರು.
ವಿವಾದದಿಂದ ದೂರ
ಹೀಗಿದ್ದರೂ ಒಮ್ಮೆ ಪತ್ರಿಕೆಯಲ್ಲಿ “ವಚನಗಳನ್ನು ಶಾಸ್ತ್ರೀಯವಾಗಿ ಹಾಡಲು ಸಾಧ್ಯವೆಂದು ಒಬ್ಬ ಹಿಂದುಸ್ತಾನಿ ಗಾಯಕರು ಪ್ರಪ್ರಥಮವಾಗಿ ಹಾಡಿ ತೋರಿಸಿದರು” ಎಂದು ಪ್ರಕಟವಾಯಿತು. ಅದನ್ನು ಕಂಡ ಎಂ. ಜಯಲಕ್ಷ್ಮಿ ರಮೇಶ್ ಅವರು (ಸಾಹಿತಿ ಮುಳಿಯ ತಿಮ್ಮಪ್ಪಯ್ಯ ಅವರ ಪುತ್ರಿ) ಶಾಸ್ತ್ರಿಗಳ ಗಮನಕ್ಕೆ ತಂದು ಆಕ್ಷೇಪಿಸೋಣ ಎಂದಾಗ ಅವರು “ವಚನಗಳನ್ನು ಕರ್ನಾಟಕ ಸಂಗೀತಕ್ಕೆ ಮೊತ್ತಮೊದಲು ಅಳವಡಿಸಿದ್ದು ನಾನೆಂಬುದರಲ್ಲಿ ಯಾವುದೇ ಸಂದೇಹ ಇಲ್ಲ. ಅವರು (ಹಿಂದುಸ್ತಾನಿ ಗಾಯಕ) ನಾನು ಹಾಡುವಾಗ ಬಂದು ಕುಳಿತು ಕೇಳುತ್ತಾ ಇದ್ದರು. ಆಮೇಲೆ ಅವರು ಮಾಡಿದರು. ಯಾರು ಮಾಡಿದರೇನು? ಈಗ ಯಾಕೆ ಅದು? ಏನೂ ಬರೆಯುವುದು ಬೇಡ” ಎಂದು ವಿಷಯಕ್ಕೆ ತೆರೆ ಎಳೆದರಂತೆ. ಅಧ್ಯಾತ್ಮಕ್ಕೆ ಗಾಢವಾಗಿ ಅಂಟಿಕೊಂಡಿದ್ದ ಶಾಸ್ತ್ರಿಗಳು ಎಂದೂ ವಿವಾದಪ್ರಿಯರಾಗಿರಲಿಲ್ಲ.
ಮುಂದೆ ಮನ್ಸೂರ್ ಅವರಲ್ಲದೆ ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಅವರೆಲ್ಲ ವಚನಗಳನ್ನು ಹಾಡಲಾರಂಭಿಸಿದರು. ಅದೊಂದು ಪರಂಪರೆಯೇ ಆಯಿತು. ಶಾಸ್ತ್ರಿಗಳ ಗುರು ದೇವೇಂದ್ರಪ್ಪ ಅವರು ವಚನಗಳನ್ನು ಹಾಡುತ್ತಿದ್ದುದಲ್ಲದೆ, `ಬಸವೇಶ್ವರ ಅಷ್ಟೋತ್ತರಶತ ವಚನ ಕೀರ್ತನ ಸುಧಾ’ ಎನ್ನುವ ಗ್ರಂಥವನ್ನು ಪ್ರಕಟಿಸಿದರು. ಆಗ ವಚನಗಳಿಗೆ ಕರ್ನಾಟಕ ಹಾಗೂ ಹಿಂದುಸ್ತಾನಿ ರಾಗ ಹಾಕುವಲ್ಲಿ ಶಾಸ್ತ್ರಿಗಳು ಸಹಕರಿಸಿದರೆಂದು ಮಕ್ಕಳು ನೆನಪಿಸಿಕೊಂಡಿದ್ದಾರೆ. ಶಾಸ್ತ್ರಿಗಳು ಸುಮಾರು ೨೦ ವಚನಗಳಿಗೆ ರಾಗ ಹಾಕಿದ್ದರು.
ಸಿದ್ಧಿ-ಪ್ರಸಿದ್ಧಿಯ ಅಂತರ
ಪುಸ್ತಕದ ಬಹಳಷ್ಟು ಲೇಖನಗಳಲ್ಲಿ ಕಂಡುಬರುವ ಒಂದು ಸಾಮಾನ್ಯ ಅಭಿಪ್ರಾಯವೆಂದರೆ, ಶಾಸ್ತ್ರಿಗಳಿಗೆ ಸಿದ್ಧಿ ಇದ್ದೂ ಪ್ರಸಿದ್ಧಿ ಸಿಗಲಿಲ್ಲ; ಅವರು ನಿರಂತರವಾಗಿ ಅವಕಾಶವಂಚಿತರಾದರು ಎನ್ನುವುದು. ಅದಕ್ಕೆ ಮುಖ್ಯ ಕಾರಣವೆಂದರೆ ಅವರು ತಮ್ಮ ಜೀವನದ ಬಹುಮುಖ್ಯ ಕಾಲವನ್ನು ಹಿಂದುಸ್ತಾನಿ ಸಂಗೀತದ ಆಡುಂಬೊಲವಾದ ಧಾರವಾಡ-ಹುಬ್ಬಳ್ಳಿಗಳಲ್ಲಿ ಕಳೆದದ್ದು. ಸಂಗೀತದಲ್ಲೇ ಜೀವನವನ್ನು ಕಾಣಬೇಕೆಂದು ಒಂದೆರಡು ದಶಕ ಊರೂರು ಅಲೆದ ಅವರಿಗೆ ಆಕಾಶವಾಣಿ ಉದ್ಯೋಗ ನೀಡಿತಾದರೂ ನೆಲೆಗೊಳಿಸಿದ್ದು ಧಾರವಾಡದಲ್ಲಿ. ಬದಲಾಗಿ ಬೆಂಗಳೂರು ಅಥವಾ ಮೈಸೂರು ಕೇಂದ್ರಗಳಲ್ಲಿ ಸೇವೆಗೆ ಅವಕಾಶ ಕಲ್ಪಿಸಿದ್ದಲ್ಲಿ ಅವರ ಪ್ರತಿಭೆ ಸದುಪಯೋಗಗೊಳ್ಳಲು ಇನ್ನಷ್ಟು ಅವಕಾಶವಾಗುತ್ತಿತ್ತು. ಆದರೆ ಅವರು ಅದಕ್ಕೆ ತಲೆಕೆಡಿಸಿಕೊಂಡವರಲ್ಲ. `ತೇನ ತ್ಯಕ್ತೇನ ಭುಂಜೀಥಾಃ’ (ಅವನು ಕೊಟ್ಟುದರಲ್ಲಿ ಉಣ್ಣುವುದು) ಎಂಬಂತೆ ತೃಪ್ತರಾಗಿ ಬದುಕಿದವರು. ಇಲ್ಲಿ `ಅವನು’ ಎಂಬಲ್ಲಿಗೆ ದೇವರು ಎನ್ನುವ ಬದಲು ಅವರ ಗುರುದೇವ ಶ್ರೀ ರಮಣಮಹರ್ಷಿಗಳನ್ನು ಅಳವಡಿಸಿಕೊಳ್ಳಬೇಕಾಗಬಹುದು, ಅಷ್ಟೆ.
“ಗದ್ಯಸಾಹಿತ್ಯ ಎನಿಸಿಕೊಂಡಿದ್ದ ವಚನವಾಙ್ಮಯವನ್ನು ಶಾಸ್ತ್ರಿಗಳು ರಾಗ, ತಾಳ, ಸ್ವರಗಳಿಂದ ಅಲಂಕರಿಸಿ, ಭಾರತೀಯ ಸಂಗೀತ ಪ್ರಪಂಚಕ್ಕೊಂದು ನೂತನ ಕಾಣಿಕೆಯನ್ನು ಸಮರ್ಪಿಸಿದ್ದಾರೆ. ನಾಡಿನ ಶ್ರೀಮಂತರು ವಿವಾಹಾದಿ ಶುಭಕಾರ್ಯಗಳಲ್ಲಿ ಇಂತಹ ಕನ್ನಡ ಸಂಗೀತ ಕಛೇರಿಯನ್ನು ಏರ್ಪಡಿಸಬೇಕು” – ಅ.ನ.ಕೃ.
ನಾರಾಯಣಶಾಸ್ತ್ರಿಗಳ ಸಂಗೀತವಾದರೋ ಅಪ್ಪಟ ಅಪರಂಜಿಯಂತಿತ್ತು. ಮಂಜೇಶ್ವರ ಸಮೀಪದ ಕೋಳ್ಯೂರು ಗ್ರಾಮದ ಚಕ್ರಕೋಡಿ ಅವರ ಹುಟ್ಟೂರಾದರೂ ತಂದೆ ಶ್ಯಾಮಶಾಸ್ತ್ರಿಗಳು (ತಾಯಿ ಸರಸ್ವತಿ ಅಮ್ಮ) ಸಂಗೀತ ಸೇರಿದಂತೆ ವಿವಿಧ ಹವ್ಯಾಸ ಉಳ್ಳವರಾಗಿದ್ದರು; ಪಿತ್ರಾರ್ಜಿತ ಆಸ್ತಿಯನ್ನು ಕಳೆದುಕೊಂಡ ಕಾರಣ ಬೇರೆ ಬೇರೆ ಕಡೆ ನೆಲೆಸುವುದು ಅವರ ಪ್ರವೃತ್ತಿಯಾಗಿತ್ತು. ನಾರಾಯಣಶಾಸ್ತ್ರಿಯ ಬಾಲ್ಯ ವಿಟ್ಲ ಸಮೀಪದ ಪುಣಚದ ಮಲೆತ್ತಡ್ಕ ಎಂಬಲ್ಲಿ ಕಳೆಯಿತು; ನಾಲ್ಕು ವರ್ಷ ಇರುವಾಗ ತಾಯಿ ಅಗಲಿದರು. ಶಾಲಾಶಿಕ್ಷಣ ಒಂಭತ್ತನೇ ತರಗತಿಯ ಆಚೆಗೆ ಮುಂದುವರಿಯಲಿಲ್ಲ. ಸಂಗೀತದ ಆರಂಭಿಕ ಶಿಕ್ಷಣ ಉಡುಪಿ ಲಕ್ಷ್ಮೀಬಾಯಿ ಮತ್ತು ಪಾಲ್ಘಾಟ್ ವೀರಮಣಿ ಭಾಗವತರ್ ಅವರ ಬಳಿ ಆಯಿತಾದರೂ ತಿದ್ದಿತೀಡಿ ರೂಪಕೊಟ್ಟವರು ಮೈಸೂರಿನ ಬಿ. ದೇವೇಂದ್ರಪ್ಪ ಅವರು. ವೀಣೆ, ವಯೊಲಿನ್, ಜಲತರಂಗಗಳನ್ನು ನುಡಿಸಬಲ್ಲವರಾಗಿದ್ದರೂ ಸಿ.ಎನ್. ಶಾಸ್ತ್ರಿ ಗಟ್ಟಿಯಾಗಿ ನೆಲೆನಿಂತದ್ದು ಗಾಯಕರಾಗಿ.
ಮದ್ರಾಸಿಗೆ ಸರಿಮಿಗಿಲು
ಸಾಮಾನ್ಯರು ಹೇಗೋ ಹಾಗೆ ಪಂಡಿತರು ಕೂಡ ಕೇಳಿ ತಲೆದೂಗಿದ್ದು, ಸಿ.ಎನ್. ಶಾಸ್ತ್ರಿ ಅವರ ಸಂಗೀತದ ವಿಶೇಷ ಎನ್ನಬಹುದು. ಪ್ರೊ|| ಜಿ.ಟಿ. ನಾರಾಯಣರಾವ್ ಅವರು “ಕರ್ನಾಟಕ ಸಂಗೀತದಲ್ಲಿ ಮದ್ರಾಸು ಛಾಪಿನವರ ಹೊರತಾಗಿ ಉಳಿದೆಲ್ಲ ಪ್ರಕಾರಗಳು ಶ್ರವಣಯೋಗ್ಯವಲ್ಲ ಎಂಬುದು ಹಿಂದೆ ನನ್ನ ಅಭಿಪ್ರಾಯವಾಗಿತ್ತು. ಅದು ಜಿ.ಎನ್. ಬಾಲಸುಬ್ರಹ್ಮಣ್ಯಂ, ಮಧುರೆ ಮಣಿ ಅಯ್ಯರ್, ಮುಸಿರಿ ಸುಬ್ರಹ್ಮಣ್ಯ ಅಯ್ಯರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಆಲತ್ತೂರು ಸಹೋದರರು ಮುಂತಾದವರ ಸಂಗೀತವನ್ನು ಕೇಳಿ ಉಂಟಾದ್ದು. ಚಕ್ರಕೋಡಿ ನಾರಾಯಣಶಾಸ್ತ್ರಿಗಳು ಅದನ್ನು ಅಲ್ಲಾಡಿಸಿದರು. ಮೈಸೂರು ವಾಸುದೇವಾಚಾರ್ಯರ `ಬ್ರೋಚೇವಾರೆವರುರಾ’ವನ್ನು ಅವರು ಜಿಎನ್ಬಿಗೆ ಸರಿಮಿಗಿಲೆನಿಸುವಂತೆ ಹಾಡಿದರು. ಮಧುರ ಮತ್ತು ಭಾವ ಸುಪುಷ್ಟ ಶಾರೀರ, ಸ್ಫುಟ ಹಾಗೂ ಅರ್ಥಪೂರ್ಣವಾದ ಸಾಹಿತ್ಯೋಚ್ಚಾರ, ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗಳ ಗಹನವಾದ ಜ್ಞಾನ ಇವು ಶಾಸ್ತ್ರಿಗಳ ವ್ಯಕ್ತಿತ್ವದಲ್ಲಿ ಆ ಮೂಲಕ ಶೈಲಿಯಲ್ಲಿ ಸೇರಿಹೋಗಿವೆ. ಸಂಗೀತದ ಯಾಂತ್ರಿಕ ಅಂಶಗಳಾದ ಶ್ರುತಿಭೇದ, ಗತಿಭೇದ, ತಾನ, ಕಲ್ಪನಾಸ್ವರ ಪ್ರಸ್ತಾರ ಇತ್ಯಾದಿಗಳಲ್ಲಿ ಅವರು ಪರಿಣತರು. ಅವುಗಳಿಗೆ ಕೂಡ ಸೃಜನಶೀಲತೆಯ ಮೆರುಗನ್ನು ಪೂಸಿದರು” ಎಂದಿದ್ದಾರೆ. ಮುಂದುವರಿದು, “ರಾಜ್ಯದ ಮೂಲೆಮೂಲೆಗಳಲ್ಲಿ ಕೇಳಿ ಅವರ ವಿನೂತನ ಶೈಲಿಗೆ ಮಾರುಹೋಗಿದ್ದೇನೆ. ಮೃದುಮಧುರ ಕಂಠ, ಸಾಹಿತ್ಯಾರ್ಥ ಮತ್ತು ಅಂತರ್ಗತ ಭಾವಗಳನ್ನು ಅರಿತು ಹಾಡುವ ಪ್ರತಿಭೆ, ಅದ್ರುತ ಹಾಗೂ ಅವಿಳಂಬಿತ ಗತಿ ಮತ್ತು ರಸಿಕರ ಬಗ್ಗೆ ಅನನ್ಯ ಗೌರವ – ಇವುಗಳ ಯುಕ್ತಮೇಳನವದು. ವಚನ, ದೇವರನಾಮ, ಶಿಶುನಾಳ ಶರೀಫರ ಗೀತೆಗಳು ಶಾಸ್ತ್ರಿಗಳ ಕೈಯಲ್ಲಿ ಮರುಹುಟ್ಟು ಪಡೆದು ಪಂಡಿತ-ಪಾಮರ ಪ್ರಿಯವಾದದ್ದು ಇತಿಹಾಸ” ಎಂದಿದ್ದಾರೆ, ತೀಕ್ಷ್ಣವಿಮರ್ಶಕರೆಂದೇ ಖ್ಯಾತರಾದ ಜಿಟಿಎನ್. “ರಚನೆ ಯಾವುದೇ ಇರಲಿ, ಅದರ ಭಾವಾರ್ಥವನ್ನು ಸ್ವಾಂಗೀಕರಿಸಿ, ಅದಕ್ಕೆ ಯುಕ್ತ ಸಂಗೀತ ಪೋಷಾಕು ತೊಡಿಸಿ ಆತ್ಮನಿವೇದನೆ ಸಲ್ಲಿಸುವುದು ಶಾಸ್ತ್ರಿಗಳ ವಿಧಾನ” ಎಂದು ಕೂಡ ಹೇಳಿದ್ದಾರೆ. ನಿಜವೆಂದರೆ ಅವರಿಗೆ ಆತ್ಮನಿವೇದನೆ ಸಂಗೀತದ ಪ್ರಮುಖ ಮಾರ್ಗವಾಗಿತ್ತು. ಅವರು ಹಾಡುವ ದೇವರನಾಮಗಳ ಕೆಲವು ಸಾಲುಗಳನ್ನು ಕೇಳುವಾಗ ಶ್ರೋತೃಗಳ ಕಣ್ಣಲ್ಲಿ ಹನಿಗೂಡುತ್ತಿತ್ತು.
ಹಿಂದುಸ್ತಾನಿಯ ಛಾಪು
ಅವರ ಸೋದರಸೊಸೆ ಪಿ.ಎನ್. ಅಂಬಿಕೆ ಅವರು (ಸೇಡಿಯಾಪು ಕೃಷ್ಣಭಟ್ಟರ ಪುತ್ರಿ) “ಮಾವನ ಕರ್ನಾಟಕ ಗಾಯನದಲ್ಲಿ ಹಿಂದುಸ್ತಾನಿಯ ಛಾಪಿದೆ” ಎನ್ನುತ್ತಾರೆ. “ಅವರದು ಕರ್ಕಶತೆ ಇಲ್ಲದ ಮಧುರ ಕಂಠ. ಭಕ್ತಿಯಲ್ಲಿ ಭಾವಪರವಶರಾಗುವ ಅವರು ಅದರಲ್ಲಿ ತಲ್ಲೀನರಾಗುತ್ತಾರೆ” ಎಂದಿದ್ದಾರೆ. ಇವರ ತಂಗಿ ಸರಸ್ವತಿ ಬಡೆಕ್ಕಿಲ ಅವರು ಮಾವನ ಬೋಧನೆಯ ಕ್ರಮದ ಬಗ್ಗೆ ಹೇಳುತ್ತಾ, “ಅವರ ಪಾಠದ ಕ್ರಮ ಎಂದರೆ ಒಂದೇ ಬಾರಿಯ ಪಾಠದಲ್ಲಿ ನಮಗೆ ರಾಗಧಾಟಿ ಅಚ್ಚು ಹೊಡೆದಂತೆ ಆಗುತ್ತಿತ್ತು. ಅವರು ದಕ್ಷಿಣಾದಿ, ಉತ್ತರಾದಿ ಎರಡರಲ್ಲೂ ಹಾಡುತ್ತಾರೆ. ಮಧ್ಯೆ ಎರಡು ವರ್ಷ ಗಂಟಲುಕೆಟ್ಟು ಹಾಡಲು ಸಾಧ್ಯವಾಗಲಿಲ್ಲ. ಆಗ ಕೊಳಲು ಮತ್ತು ವಯೊಲಿನ್ ನುಡಿಸತೊಡಗಿದರು; ಮತ್ತೆ ಸ್ವರ ಸರಿಯಾಯಿತು” ಎಂದಿದ್ದಾರೆ. ಕೆಲವು ಕಾಲ ಶಾಸ್ತ್ರಿಗಳು ಮನೆಮನೆಗೆ ಹೋಗಿ ಸಂಗೀತ ಕಲಿಸುತ್ತಿದ್ದರು. “ಚೆನ್ನಾಗಿ ಕಲಿಯದಿದ್ದರೆ ತಮ್ಮ ಜೀವನೋಪಾಯಕ್ಕೆ ಕಷ್ಟವಾದರೂ ಲೆಕ್ಕಿಸದೆ ಆ ವಿದ್ಯಾರ್ಥಿಯ ಮನೆಗೆ ಹೋಗುವುದನ್ನೇ ನಿಲ್ಲಿಸುತ್ತಿದ್ದರು” ಎನ್ನುತ್ತಾರೆ ಸರಸ್ವತಿ ಬಡೆಕ್ಕಿಲ. ಶಾಸ್ತ್ರಿಗಳು ತಮ್ಮ ಶಿಷ್ಯರಿಗೆ “ಎಷ್ಟು ಕಲಿತಿದ್ದಿ ಎನ್ನುವುದು ಮುಖ್ಯವಲ್ಲ. ಹೇಗೆ ಹಾಡುತ್ತಿ ಎನ್ನುವುದೇ ಮುಖ್ಯ. ಒಂದು ಗೀತೆ ಸಣ್ಣದೇ ಆಗಿರಬಹುದು, ಆದರೂ ಅದರ ಒಂದೊಂದು ಸ್ವರವೂ ಸರಿಯಾದ ಜಾಗದಲ್ಲೇ ಇರಬೇಕು. ಹಾಡುವ ಸ್ವರಗಳು ಮೆದುಳಿನಲ್ಲಿ ಹಾಡುತ್ತಿರಬೇಕು; ಅದೇ ನಾದಶುದ್ಧಿ” ಎಂದು ಕಟ್ಟುನಿಟ್ಟಿನ ಮಾತುಗಳನ್ನಾಡುತ್ತಿದ್ದರು.
ತಮ್ಮ ಅಕ್ಕ ಗೌರಮ್ಮನವರ ಮಕ್ಕಳಾದ ವಿ.ಆರ್. ಶಾರದಾ ಕನ್ಯಾಡಿ, ಶಕುಂತಲಾ ಕೆ. ಭಟ್ ಕಂಚಿನಡ್ಕ ಮತ್ತು ಶ್ಯಾಮಸುಂದರಿ ಜಿ. ಭಟ್ ಅವರಿಗೆ ಸಂಗೀತವನ್ನು ಕಲಿಸಲು, ಕಲಿತ ಸಂಗೀತವನ್ನು ಗಟ್ಟಿಗೊಳಿಸಲು ಶಾಸ್ತ್ರಿಗಳು ಸಾಕಷ್ಟು ಶ್ರಮವಹಿಸಿದ್ದರು. ಇವರಲ್ಲಿ ಶಕುಂತಲಾ ಭಟ್ ಸಂಗೀತದಲ್ಲಿ ಹೆಚ್ಚಿನ ವ್ಯವಸಾಯ ಮಾಡಿದ್ದಲ್ಲದೆ ಇನ್ನಷ್ಟು ಜನರಿಗೆ ಸಂಗೀತವಿದ್ಯೆಯನ್ನು ಕಲಿಸಿ ಶಾಸ್ತ್ರಿಗಳ ಪರಂಪರೆಯ ಮುಂದುವರಿಕೆಗೆ ಶ್ರಮಿಸಿದ್ದಾರೆ; ಮತ್ತು ೨೦೦೪ರಲ್ಲಿ ಶಾಸ್ತ್ರಿಗಳ ೨೮ ರಚನೆಗಳಿರುವ ಕೃತಿಯನ್ನು ಪ್ರಕಟಿಸಿದರು. ಈ ರಚನೆಗಳ ಕುರಿತು ಡಾ| ಸುಕನ್ಯಾ ಪ್ರಭಾಕರ್ ಅವರು, “ಗಮನಿಸಬೇಕಾದ ವಿಚಾರವೆಂದರೆ, ವಾಗ್ಗೇಯಕಾರರಿಗೆ ಇರುವ ಅಧ್ಯಾತ್ಮಜ್ಞಾನ ಈ ಕೃತಿಗಳಲ್ಲಿ ಚೆನ್ನಾಗಿ ವ್ಯಕ್ತವಾಗಿದೆ. ಆತ್ಮದ ತುಡಿತ, ಕೂಗು, ಮೊರೆ ರಚನೆಗಳ ಸಾಹಿತ್ಯದಲ್ಲಿ ಧ್ವನಿತವಾಗಿವೆ. ಎಲ್ಲ ರಚನೆಗಳಲ್ಲೂ ಅಚ್ಚುಕಟ್ಟಾದ ಸ್ವರಸಂಯೋಜನೆ ನೀಡಿರುವುದು ಕಂಡುಬರುತ್ತದೆ……. ಸಂಗತಿಗಳ ಮೂಲಕ ರಾಗಗಳನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ” ಎಂದು ವಿವರಿಸಿದ್ದಾರೆ. ಶಾಸ್ತ್ರಿಗಳ ಗಾಯನದಲ್ಲೇ ಅಧ್ಯಾತ್ಮ, ಆತ್ಮದ ತುಡಿತಗಳು ಇದ್ದ ಮೇಲೆ ಕೃತಿಗಳಲ್ಲಿ ಬಂದುದು ಸಹಜವೇ ಸರಿ. ಅವರ ಹೆಚ್ಚಿನ ರಚನೆಗಳು ರಮಣಮಹರ್ಷಿಗಳ ಮೇಲಿವೆ.
ಎಲ್ಲೋ ಕಂಡ ಮುಖ
ಸಿ.ಎನ್. ಶಾಸ್ತ್ರಿಗಳಲ್ಲಿ ಅಧ್ಯಾತ್ಮದ ತುಡಿತ ಆರಂಭವಾದದ್ದು, ಅವರು ರಮಣಮಹರ್ಷಿಗಳತ್ತ ಆಕರ್ಷಿತರಾಗಿ ಅವರನ್ನು ತಮ್ಮ ಗುರುದೇವನೆಂದು ಅಂಗೀಕರಿಸಿದ್ದು ಕುತೂಹಲಕರವಾಗಿದೆ. ಮುಳಿಯ ಸರಸ್ವತಿ ಅದನ್ನು ಹೀಗೆ ವಿವರಿಸುತ್ತಾರೆ: “ನಮ್ಮ ತಂದೆ ನಾಲ್ಕು ವರ್ಷವಿದ್ದಾಗ ತಾಯಿಯನ್ನೂ ಹರೆಯದಲ್ಲೇ ತಂದೆಯನ್ನೂ ಕಳೆದುಕೊಂಡಿದ್ದರಿಂದಲೋ ಏನೋ, ಯಾವಾಗಲೂ ವ್ಯಾಕುಲಚಿತ್ತರಾಗಿರುತ್ತಿದ್ದರಂತೆ. ಆಗ ಅವರಿಗೆ ಕನಸಿನಲ್ಲಿ ಒಬ್ಬ ಗಡ್ಡ ಧರಿಸಿದ ಯೋಗಿಯ ಮುಖ ಕಾಣುತ್ತಿತ್ತಂತೆ. ಮುಂದೆ ಅದೇ ಯೋಗಿ ಭಗವಾನ್ ರಮಣಮಹರ್ಷಿಗಳೆಂದು ಹಳೆಯ ಪೇಪರಿನ ವರದಿಯಿಂದ ಗೊತ್ತಾಗಿ, ಕೂಡಲೆ ರಮಣಾಶ್ರಮಕ್ಕೆ ಹೋಗಿ ಬಂದರಂತೆ. ಅಂದಿನಿಂದ ಕೊನೆಯವರೆಗೂ ಅವರು ರಮಣಮಹರ್ಷಿಗಳ ಸೇವೆಯಲ್ಲಿ, ಅವರು ತೋರಿದ ದಾರಿಯಲ್ಲೇ ನಡೆದರು.” ಕನಿಷ್ಠ ವರ್ಷಕ್ಕೊಮ್ಮೆ ತಿರುವಣ್ಣಾಮಲೆಗೆ ಹೋಗಿ ರಮಣರನ್ನು ಕಾಣುತ್ತಿದ್ದರು; ತಪ್ಪದೆ ಕಾಣಿಕೆ ಸಲ್ಲಿಸುತ್ತಿದ್ದರು; ನಿಂತಾಗ, ಕೂತಾಗ `ಗುರುದೇವ, ಗುರುದೇವ’ ಎನ್ನುವ ಉದ್ಗಾರ ಬದುಕಿನ ಶ್ರುತಿಯಾಗಿತ್ತು.
“ರಚನೆ ಯಾವುದೇ ಇರಲಿ, ಅದರ ಭಾವಾರ್ಥವನ್ನು ಸ್ವಾಂಗೀಕರಿಸಿ, ಅದಕ್ಕೆ ಯುಕ್ತ ಸಂಗೀತ ಪೋಷಾಕು ತೊಡಿಸಿ ಆತ್ಮನಿವೇದನೆ ಸಲ್ಲಿಸುವುದು ಶಾಸ್ತ್ರಿಗಳ ವಿಧಾನ.”
ಅತ್ಯಂತ ಆರ್ದ್ರವಾದ ಅಂತಃಕರಣವನ್ನು ನಾರಾಯಣಶಾಸ್ತ್ರಿಗಳು ಹೊಂದಿದ್ದರು. ದೂರದ ಧಾರವಾಡ, ಹುಬ್ಬಳ್ಳಿಯಲ್ಲಿದ್ದರೂ ತಮ್ಮ ಬಂಧುಗಳಲ್ಲಿ ಅವರು ಹೊಂದಿದ್ದ ಸ್ನೇಹ-ಪ್ರೀತಿ, ಪತ್ರವೇ ಸಂಪರ್ಕಸಾಧನವಾಗಿದ್ದ ಆ ಕಾಲದಲ್ಲಿ ನಿಗದಿತವಾಗಿ ಪತ್ರ ಬರೆಯುತ್ತಿದ್ದುದು, ಬಂಧುಗಳ ಮನೆಗೆ ಬಂದರೆ ನಾಲ್ಕು ದಿನ ಇದ್ದುಹೋಗುವುದು ಇದೆಲ್ಲ ಅನುಕರಣೀಯ. ಸೋದರಸೊಸೆ ವಿ.ಆರ್. ಶಾರದಾ ಧರ್ಮಸ್ಥಳ ಸಮೀಪದ ಕನ್ಯಾಡಿಯ ತಮ್ಮ ಮನೆಗೆ ಬಂದಾಗಿನ ಶಾಸ್ತ್ರಿಗಳ ದಿನಚರಿಯನ್ನು ವಿವರಿಸುತ್ತಾರೆ: “ಬೆಳಗ್ಗೆ ೫ ಗಂಟೆಗೆದ್ದು ಧ್ಯಾನ, ಯೋಗ. ೬ ಗಂಟೆಗೆ ಚಹಾ ಸೇವನೆ, ಮತ್ತೆ ಸ್ವಲ್ಪ ನಿದ್ರೆ. ೭.೩೦ಕ್ಕೆ ತಿಂಡಿ-ಕಾಫಿ (ಇಡ್ಲಿ, ಉದ್ದಿನ ದೋಸೆ ಅವರಿಗೆ ಇಷ್ಟ); ಮತ್ತೆ ಓದು ಅಥವಾ ಧ್ಯಾನ. ನಾನು ಅಡುಗೆಯಲ್ಲಿ ತೊಡಗಿದ್ದರೆ ಅಲ್ಲಿಗೆ ಬಂದು ಗುರುದೇವನ ವಿಚಾರ ಅಥವಾ ಊರಿನ ಸುದ್ದಿಯ ಮಾತು. ೧೨ ಗಂಟೆಗೆ ಸ್ನಾನ, ದೇವರ ಕೋಣೆಯಲ್ಲಿ ಧ್ಯಾನ, ಬಳಿಕ ಊಟ, ನಿದ್ರೆ. ಅಪರಾಹ್ನ ೩ ಗಂಟೆಗೆ ಸಂಗೀತಪಾಠ, ೪.೩೦ಕ್ಕೆ ಕಾಫಿ (ಆಗ ಚಕ್ಕುಲಿ, ತುಕಡಿ ಅಥವಾ ಕೇಸರಿಬಾತ್ ಇದ್ದರೆ ಇಷ್ಟ), ೫ ಗಂಟೆಗೆ ನನ್ನವರ (ಕೆ.ವಿ. ರಾಮಚಂದ್ರಭಟ್ಟರು) ಜೊತೆ ವಾಕಿಂಗ್, ಸಂಜೆ ೭ ಗಂಟೆಗೆ ಧ್ಯಾನ, ೮.೩೦ಕ್ಕೆ ಊಟ, ರಾತ್ರಿ ೧೧.೩೦ರವರೆಗೆ ಮಾತುಕತೆ.” ಶಾಸ್ತ್ರಿಗಳ ಪತ್ನಿ ಕುಸುಮಾಂಬಿಕೆ ಸೇಡಿಯಾಪು ಅವರ ಅಣ್ಣನ ಮಗಳು; ಎಂಟುಮಕ್ಕಳ ತುಂಬು ಸಂಸಾರ ಶಾಸ್ತ್ರಿಗಳದ್ದು. ನಿವೃತ್ತ ಜೀವನವನ್ನು ಬಹುತೇಕ ಹುಬ್ಬಳ್ಳಿಯ ಮಗನ ಮನೆಯಲ್ಲಿ ಕಳೆದರು. ೮೦ರ ಹರೆಯದಲ್ಲಿ ಉಲ್ಬಣಿಸಿದ ಕ್ಯಾನ್ಸರ್ ಅವರ ಬಲಿ ಪಡೆಯಿತು.
ಚೆಂಬೈ-ಶಾಸ್ತ್ರಿ
ಚೆಂಬೈ ವೈದ್ಯನಾಥ ಭಾಗವತರ್ ಶಾಸ್ತ್ರಿಗಳ ಸಂಗೀತವನ್ನು ತುಂಬ ಮೆಚ್ಚಿದ್ದರು. ಶಾಸ್ತ್ರಿಗಳ ಶಿಷ್ಯ ಹಾಗೂ ಗಮಕಿ ಎಂ.ಎ. ಜಯರಾಮರಾವ್ ಅವರಿಬ್ಬರ ಸಂಗೀತವನ್ನು ಹೀಗೆ ಹೋಲಿಸುತ್ತಾರೆ: “ಚೆಂಬೈ ಅವರದ್ದು ತುಂಬು ಕಂಠದ ಗಾಯನ; ಸ್ವಲ್ಪ ಒರಟು. ಶಾಸ್ತ್ರಿಗಳದ್ದು ಸಣ್ಣ ದನಿ, ಇಂಪಿನ ಗಣಿ. ದೈವದತ್ತ ಪಲುಕುಗಳು, ಮನೋಧರ್ಮದಿಂದ ಕೂಡಿದ ಕಲ್ಪನಾಸ್ವರ; ಅವರ ಸಂಗೀತ ಎಲ್ಲ ವರ್ಗದ ಶ್ರೋತೃಗಳಿಗೆ ಇಷ್ಟವಾಗಿತ್ತು.”
ಜಯಲಕ್ಷ್ಮಿ ರಮೇಶ್ ಅವರ ಕೆಳಗಿನ ಮಾತು ಶಾಸ್ತ್ರಿಗಳ ಸಂಗೀತವನ್ನು ಬಹು ಚೆನ್ನಾಗಿ ಹಿಡಿದಿಟ್ಟಿದೆ ಎನ್ನಬಹುದು: “ಶಾಸ್ತ್ರಿಗಳ ಕಚೇರಿ ಅತ್ಯಂತ ವಿಶಿಷ್ಟ. ಯಾವುದೇ ರಾಗವನ್ನು ಹಿಗ್ಗಿಸಿ ಹಿಗ್ಗಿಸಿ ಎಳೆದು ತುಂಬಾ ಹೊತ್ತು ಆಲಾಪನೆ ಮಾಡುವುದು ಅವರ ಪರಿಪಾಟಿ ಆಗಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಇಡೀ ರಾಗದ ಸತ್ತ್ವವನ್ನು ಶ್ರೋತೃಗಳ ಮುಂದೆ ತೆರೆದಿಟ್ಟುಬಿಡುತ್ತಿದ್ದರು. ಚಿಕ್ಕ ಚೊಕ್ಕ ಹಿತವಾದ ಆಲಾಪನೆ; ಮುಂದಿನ ಹಂತ ಕೃತಿ, ನೆರವಲ್, ಸ್ವರಪ್ರಸ್ತಾರ. ನೆರವಲ್ ಮಾಡುವಾಗ ಅದರಲ್ಲೇ ಮುಳುಗಿ, ಆಮೇಲೆ ಅದರ ಜೊತೆಯಲ್ಲೇ ಎಲ್ಲೆಲ್ಲೋ ಪಯಣಿಸಿ ಸ್ವರಪ್ರಸ್ತಾರ ಮಾಡುವಾಗ ಉಸಿರು ಬಿಗಿಹಿಡಿದು ಕೇಳಿ, ಕೊನೆಗೆ ಪಲ್ಲವಿ ಹಾಡಿ ನಿಲ್ಲಿಸಿದಾಗ ದಡಕ್ಕನೆ ಕೆಳಗೆ ಬಿದ್ದ ಅನುಭವ; ಒಂದು ಅವರ್ಣನೀಯ ಅನುಭವ.”