ಸಂಸದೀಯ ಪ್ರಜಾಪ್ರಭುತ್ವದಲ್ಲಿ ಅಧೀನರ ಕೃತ್ಯಾಕೃತ್ಯಗಳಿಗೆ ಅಂತಿಮವಾಗಿನೇರ ಹೊಣೆಗಾರಿಕೆ ಇರುವುದು ಅತ್ಯುನ್ನತ ಪದಾಧಿಷ್ಠಿತರಿಗೇ ಎಂಬುದುಅಂಗೀಕೃತ ತತ್ತ್ವ. ಅಧರ್ಮವನ್ನು ನಿವಾರಿಸುವುದೂ ತಡೆಗಟ್ಟುವುದೂ ಕೂಡಾ ಅಧಿಕಾರಸ್ಥಾನದ ಪ್ರಾಥಮಿಕ ಹೊಣೆಗಾರಿಕೆಯೇ. ಈ ಆಧಾರತತ್ತ್ವದ ಅನನುಸರಣೆಯೇ ಈಗ ಮನಮೋಹನಸಿಂಗ್ರವರನ್ನು ಆಪಾದಿತನ ಸ್ಥಾನದಲ್ಲಿ ನಿಲ್ಲಿಸಿರುವುದು.
ಬಿರ್ಲಾ ಒಡೆತನದ ಹಿಂಡಾಲ್ಕೋ ಸಂಸ್ಥೆಗೆ ನಿಯಮಬಾಹಿರವಾಗಿ ಕಲ್ಲಿದ್ದಲ ಗಣಿಗಾರಿಕೆಯ ಪರವಾನಗಿಯನ್ನು ನೀಡಲಾಗಿದ್ದುದು ಮನಮೋಹನಸಿಂಗ್ ಯಾಜಮಾನ್ಯದಲ್ಲಿ ಎಂಬ ಆಪಾದನೆ ದೀರ್ಘಕಾಲದಿಂದ ಇದ್ದದ್ದೇ. ಈ ಅವ್ಯವಹಾರದ ವಿವರಗಳು ಜನಜನಿತವೇ ಆಗಿದ್ದುದರಿಂದ ಮನಮೋಹನಸಿಂಗ್ರವರನ್ನು ರಾಜಕೀಯೋದ್ದೇಶದಿಂದ ಅಪರಾಧಿಯನ್ನಾಗಿಸಲಾಗಿದೆ ಎಂಬ ಸೋನಿಯಾಗಾಂಧಿ ಬಣದ ಧೋರಣೆಯಲ್ಲಿ ಹುರುಳಿಲ್ಲವೆಂಬುದು ಮೇಲ್ನೋಟಕ್ಕೇ ಎದ್ದುಕಾಣುತ್ತದೆ.
ಒಂದು ಅಂಶವಂತೂ ಗಮನ ಸೆಳೆಯುತ್ತದೆ. ಇಂದಿರಾಗಾಂಧಿ ತಿಹಾರ್ ಸೆರೆಮನೆಗೆ ಹೋದಾಗ ಇಡೀ ಕಾಂಗ್ರೆಸ್ ಪ್ರತಿಭಟಿಸಿತ್ತು. ಆದರೆ ನೆಹರು ಪರಿವಾರದವರಲ್ಲದ ಪ್ರಧಾನಮಂತ್ರಿ-ಪದಾಧಿಷ್ಠಿತರ ಬಗೆಗೆ ಕಾಂಗ್ರೆಸ್ಸಿನ ಕಾಳಜಿ ಅಷ್ಟಕ್ಕಷ್ಟೆ. ಸಂಸತ್ತಿನಲ್ಲಿ ಕಾಂಗ್ರೆಸ್ ಬಹುಮತವನ್ನು ಕಳೆದುಕೊಳ್ಳುವ ಸ್ಥಿತಿ ಇದ್ದಾಗ ಝಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದಿಂದ ೧೯೯೩ರಲ್ಲಿ ನಾಲ್ವರು ಲೋಕಸಭಾ ಸದಸ್ಯರನ್ನು ಖರೀದಿ ಮಾಡಿದ್ದರೆಂಬ ಆರೋಪದ ಆಧಾರದ ಮೇಲೆ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವರ್ಷ ಕಾರಾಗೃಹವಾಸವನ್ನು ವಿಧಿಸಿತ್ತು (೧೨ ಅಕ್ಟೋಬರ್ ೨೦೦೦). ಅಂತಿಮವಾಗಿಪಿ.ವಿ. ನರಸಿಂಹರಾಯರು ನಿರಪರಾಧಿಯೆಂದು ತೀರ್ಪು ನೀಡಲಾಯಿತು. ಸೈಂಟ್ ಕಿಟ್ಸ್ ಪ್ರಕರಣದಲ್ಲಿಯೂ ಪಿ.ವಿ. ನರಸಿಂಹರಾಯರು ದೋಷಿಯಲ್ಲವೆಂದು ನಿರ್ಣಯ ಹೊರಬಿದ್ದಿತು. ಇಲ್ಲಿ ನೆನಪು ಮಾಡಿಕೊಳ್ಳಬೇಕಾದ ಸಂಗತಿಯೆಂದರೆ – ನರಸಿಂಹರಾಯರು ಈ ನ್ಯಾಯಾಂಗೀಯ ಸೆಣಸಾಟ ನಡೆಸುತ್ತಿದ್ದ ಕಾಲದಲ್ಲಿ ಅವರಿಗೆ ನೆರವನ್ನೀಯಲಾಗಲಿ ಸಹಾನುಭೂತಿ ಸೂಚಿಸುವುದಕ್ಕಾಗಲಿ ಒಬ್ಬ ಕಾಂಗ್ರೆಸ್ ಪ್ರಭೃತಿಯೂ ಮುಂದಾಗಲಿಲ್ಲ! ಅವರು ಏಕಾಂಗಿಯಾಗಿಯೇ ಹೋರಾಡಿದರು (ಸ್ವಲ್ಪ `ಫ್ಲಾಶ್ಬ್ಯಾಕ್’ ಮಾಡುವುದಾದರೆ: ರಾಜೀವ್ಗಾಂಧಿ ನಿವಾಸದ ಮುಂದೆ ಇಬ್ಬರು ಕಾನ್ಸ್ಟೆಬಲ್ಗಳು ಅಡ್ಡಾಡುತ್ತಿದ್ದರೆಂಬ ಅಷ್ಟೆ ಕಾರಣಕ್ಕಾಗಿ ಕಾಂಗ್ರೆಸ್ ಆಗಿನ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡು ಚಂದ್ರಶೇಖರ್ ಸರ್ಕಾರದ ಪತನಕ್ಕೆ ಕಾರಣವಾಗಿತ್ತು).
ಆದರೆ ಇದೀಗ ಮನಮೋಹನಸಿಂಗ್ ಅವರ ವಿರುದ್ಧ ತನಿಖೆ ನಡೆದಿರುವಾಗ ಸೋನಿಯಾ ಪಡೆಯಷ್ಟೂ ತನಿಖೆಯನ್ನು ಪ್ರತಿರೋಧಿಸಲು ಮುಂದಾಗಿದೆ. ತನಿಖೆ ಮುಂದುವರಿದರೆ ತಮ್ಮ ಬಣ್ಣವೂ ಬಯಲಾದೀತೆಂದು ಕಾಂಗ್ರೆಸ್ ವರಿಷ್ಠರು ಚಿಂತಿತರಾದಂತಿದೆ.
ಹೆಚ್ಚಿನ ವ್ಯಾಖ್ಯಾನದ ಆವಶ್ಯಕತೆಯಿಲ್ಲ. ಇಷ್ಟಾಗಿ ಬೀದಿ ರಂಪಾಟಗಳು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಎಷ್ಟು ಮಾತ್ರ ಪರಿಣಾಮ ಬೀರಬಹುದು?
ಸಹಾನುಭೂತಿಗೂ ಇಲ್ಲದ ಅರ್ಹತೆ
ಮನಮೋಹನಸಿಂಗ್ ಯಾವ ದೃಷ್ಟಿಯಿಂದಲೂ ಸಹಾನುಭೂತಿಗೆ ಅರ್ಹರಲ್ಲವೆಂಬುದೂ ಹಗಲಿನಷ್ಟು ಸ್ಪಷ್ಟವಿದೆ. ಅವರಿಗೆ ಅತ್ಯಲ್ಪ ಸ್ವಾಭಿಮಾನವಾದರೂ ಇದ್ದಿದ್ದರೆ ರಾಜೀನಾಮೆ ಕೊಡಬೇಕಾಗಿದ್ದ ಪ್ರಸಂಗಗಳು ಅವರಿಗೆ ಉದ್ದಕ್ಕೂ ಎದುರಾಗಿದ್ದವು. ನರಸಿಂಹರಾಯರು ಅರ್ಜುನಸಿಂಗ್ ಕಿರುಕುಳ ಮೊದಲಾದ ಅಪಮಾನಗಳನ್ನೆಲ್ಲ ನುಂಗಿಕೊಂಡರೂ ಎಂದೂ ತಮ್ಮ ಘನತೆಗೆ ಚ್ಯುತಿ ತಂದುಕೊಂಡಿರಲಿಲ್ಲ. ಮನಮೋಹನಸಿಂಗ್ ಅವರಾದರೂ ನರಸಿಂಹರಾಯರಿಂದಲೇ ಆರ್ಥಿಕ ಸಚಿವರಾಗಿ ನಿಯುಕ್ತಿಗೊಂಡಿದ್ದರೂ ಉದ್ದಕ್ಕೂ ಸೋನಿಯಾಗಾಂಧಿ ಆಜ್ಞಾಧಾರಕರಾಗಿಯೆ ಉಳಿದುಬಿಟ್ಟರು; ತಾವು ಪ್ರಧಾನಿ ಎಂಬ ಪ್ರಜ್ಞೆಯೇ ಅವರಿಂದ ಪೂರ್ತಿ ಮರೆಯಾದಂತೆ ಅನಿಸುತ್ತಿತ್ತು. ಅವರು ಎರಡನೇ ಬಾರಿ ಗಾದಿಗೇರಿದ ಮೇಲಂತೂ ಸೋನಿಯಾಗಾಂಧಿ ಮತ್ತು ರಾಹುಲ್ಗಾಂಧಿ ತಾವೇ ಬಹಿರಂಗವಾಗಿಯೆ ಸರ್ಕಾರದ ಸೂತ್ರಚಾಲನೆ ಮಾಡುತ್ತಿದ್ದರು. ಪೂರ್ವವಿಮರ್ಶಿತ ನೀತಿಗಳನ್ನು ಪಕ್ಕಕ್ಕೆ ಸರಿಸಿ ಅಪಕ್ವವಾದ ಮತ್ತು ಜನರನ್ನು ಮೆಚ್ಚಿಸುವಂತಿದ್ದ ಧೋರಣೆಗಳನ್ನು ಸೋನಿಯಾಗಾಂಧಿ ಮತ್ತು ರಾಹುಲ್ಗಾಂಧಿ ಪ್ರಕಟಿಸುತ್ತ ಸಾಗಿದ್ದರೂ, ಮನಮೋಹನಸಿಂಗ್ ತೂಷ್ಣೀಭಾವ ತಳೆದು ಈವರೆಗಿನ ಅತ್ಯಂತ ನಿಷ್ಪ್ರಯೋಜಕ ಮತ್ತು ಬೆನ್ನೆಲುಬಿಲ್ಲದ ಪ್ರಧಾನಿ ಎಂಬ `ಪ್ರಶಸ್ತಿ’ಯನ್ನು ಪಡೆದುಕೊಂಡರು. ದೀರ್ಘಾವಧಿ ಉಪಯುಕ್ತತೆಯನ್ನು ಅಲಕ್ಷಿಸಿ ರಂಜನೀಯ ಯೋಜನೆಗಳನ್ನು ಸೋನಿಯಾಗಾಂಧಿ ತಾವೇ ಘೋಷಿಸಿ ತಮ್ಮ ಕಡೆಯಿಂದಲೇ ರಹಸ್ಯವಾಗಿ ಆ ವಿವರಗಳನ್ನು ಮಾಧ್ಯಮಗಳಿಗೆ ಲಭ್ಯವಾಗಿಸುತ್ತಿದ್ದಾಗಲೂ ಈ `ಪ್ರಧಾನಿ’ ಕಿಮಕ್ಕೆನ್ನದೆ ಸಹಿಸಿದರು. ಸರ್ಕಾರವು ಅಧಿಕೃತ ಪ್ರಕ್ರಿಯೆಯ ದ್ವಾರಾ ಸ್ವೀಕರಿಸಿದ್ದ ಭ್ರಷ್ಟಾಚಾರವಿರೋಧಿ ಅಧ್ಯಾದೇಶದ ಪ್ರತಿಯನ್ನು ರಾಹುಲ್ಗಾಂಧಿ ದೆಹಲಿಯ ಪ್ರೆಸ್ಕ್ಲಬ್ನಲ್ಲಿ `ಅಟ್ಟರ್ ನಾನ್ಸೆನ್ಸ್!’ ಎಂಬ ಉದ್ಗಾರದೊಡನೆ ಚಿಂದಿಮಾಡಿ ಎಸೆದಾಗಲಾದರೂ ಮನಮೋಹನಸಿಂಗ್ ರಾಜೀನಾಮೆ ನೀಡಿದ್ದಿದ್ದರೆ ಸ್ವಲ್ಪಮಟ್ಟಿನ ಸ್ವಮರ್ಯಾದೆಯನ್ನು ಉಳಿಸಿಕೊಳ್ಳಬಹುದಾಗಿತ್ತೇನೋ (ಈ ಘಟನೆ ನಡೆದಾಗ ಪ್ರಧಾನಿ ವಿದೇಶಪ್ರವಾಸದಲ್ಲಿದ್ದರು).
ಹೀಗೆ ಅವಧಿಯುದ್ದಕ್ಕೂ ಸತ್ತ್ವಹೀನತೆಯನ್ನೇ ಮೆರೆದು ಅವರು ಸಾಧಿಸಿದುದು ಏನು ಎಂಬುದಕ್ಕೆ ಇತಿಹಾಸಕ್ಕೆ ಸಮಾಧಾನ ನೀಡುವ ಬಾಧ್ಯತೆಯಿಂದ ಅವರಿಗೆ ಮುಕ್ತಿಯಿರದು. ಈ ವರ್ತನೆಯಿಂದಾಗಿ ಹಿಂದೆ ಇದ್ದ ಅವರು ಪ್ರಾಮಾಣಿಕರೆಂಬ ಪ್ರತಿಮೆ ಈಗ ಪೂರ್ತಿ ಗ್ರಹಣಗ್ರಸ್ತವಾಗಿದೆ.
ತಾವು ಸೋನಿಯಾಗಾಂಧಿ ಕೃಪಾಶ್ರಯದಿಂದಲೇ ಪದವಿಯಲ್ಲಿ ಇರುವೆನೆಂಬ ನಿಶ್ಚಯದಿಂದ ಅವರು ಎಂದೂ ಕದಲಲಿಲ್ಲ. ಹೀಗೆ `ಬಂದಿ’ಯಾಗಿಯೇ ಅಧಿಕಾರಾವಧಿಯಷ್ಟನ್ನೂ ಮುಗಿಸಿದ ಅನನ್ಯ ನಿದರ್ಶನ ಮನಮೋಹನಸಿಂಗ್ರವರದು. ಸಾಮಾನ್ಯವಾಗಿ ಹಣದ ಅಥವಾ ಅಧಿಕಾರದ ದುರುಪಯೋಗವನ್ನು ಭ್ರಷ್ಟಾಚಾರವೆಂದು ವರ್ಣಿಸಲಾಗುತ್ತದೆ. ಆದರೆ ತಮ್ಮ ಶಾಸನವಿಹಿತ ಹೊಣೆಗಾರಿಕೆಯಿಂದ ಚ್ಯುತರಾಗುವುದೂ ವಿಶಾಲಾರ್ಥದಲ್ಲಿ ಭ್ರಷ್ಟಾಚಾರದ ಮತ್ತೊಂದು ರೂಪವೇ ಎಂಬುದನ್ನು ಅಲ್ಲಗಳೆಯಲಾಗದು. ಪಿ.ವಿ.ಎನ್. ಆಮಂತ್ರಣದಂತೆ ಸರ್ಕಾರ ಸೇರಿಕೊಂಡ ಆರಂಭದ ದಿನಗಳಲ್ಲಿ ಪ್ರಾಮಾಣಿಕರೆಂದೂ ಋಜುವರ್ತನೆಯವರೆಂದೂ ಸ್ವಲ್ಪಮಟ್ಟಿಗೆ ಅವರು ಗಳಿಸಿಕೊಂಡಿದ್ದ ಪ್ರತಿಮೆ ಅವರ ಅಧಿಕಾರದ ಕಡೆಯ ಐದು ವರ್ಷಗಳಲ್ಲಿ ಪೂರ್ತಿ ನೆಲಕಚ್ಚಿತು ಎಂದೇ ಇತಿಹಾಸವು ನಿರ್ಣಯಿಸದೆ ಗತ್ಯಂತರವಿಲ್ಲ.
ಬದಲಾದ ಬಣ್ಣ
ಅವರ ರಾಜಕೀಯ ಪ್ರವೇಶವನ್ನೂ ಪೂರ್ತಿ ಸ್ಫಟಿಕೋಪಮವೆಂದು ಗಣಿಸಲು ಆಧಾರ ಕಡಮೆ. ಅಲ್ಪಸಮಯದ ಹಿಂದೆ ಸೌತ್ ಕಮಿಷನ್ ಪ್ರಮುಖರಾಗಿದ್ದಾಗ ಜಾಗತೀಕರಣವನ್ನು ಪ್ರಬಲವಾಗಿ ವಿರೋಧಿಸಿದ್ದ ಮನಮೋಹನಸಿಂಗ್ ಪಿ.ವಿ.ಎನ್. ಸರ್ಕಾರ ಸೇರಿದೊಡನೆ ಏಕಾಏಕಿ ಜಾಗತೀಕರಣದ ಪ್ರವರ್ತಕರಾಗಿಬಿಟ್ಟರು – ಎಂಬುದನ್ನು ಪ್ರಾಮಾಣಿಕತೆಯ ಸೂಚಕ ಎನ್ನಲಾಗದು. ಆ ಸಂಗತಿಗಳನ್ನೆಲ್ಲ ನೆನೆದಾಗ ಉತ್ತರೋತ್ತರ ಅವರು ಬೆನ್ನೆಲುಬೇ ಇಲ್ಲದ ಪ್ರಧಾನಿ ಎನಿಸಿದುದು ಅಚ್ಚರಿ ತರುವ ಸಂಗತಿಯೇನಲ್ಲ. ಅವರದು ಅತ್ಯಂತ ಸರಳ ಜೀವನವೆಂಬ ಸಂಗತಿ ವಿವಾದಾತೀತವೇ ಆಗಿದ್ದರೂ, ಪ್ರಧಾನಿಯಾಗಿ ಅವರ ಹಯಾಮಿನಲ್ಲಿ ನಡೆದ ಹಲವಾರು ಹಗರಣಗಳ ನೈತಿಕ ಹಾಗೂ ಶಾಸಕೀಯ ಹೊಣೆಗಾರಿಕೆಯಿಂದ ಅವರಿಗೆ ಮುಕ್ತಿ ದೊರೆಯುವ ಅವಕಾಶವಿಲ್ಲ. ಏಕೆಂದರೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಅಧೀನರ ಕೃತ್ಯಾಕೃತ್ಯಗಳಿಗೆ ಅಂತಿಮವಾಗಿ ನೇರ ಹೊಣೆಗಾರಿಕೆ ಇರುವುದು ಅತ್ಯುನ್ನತ ಪದಾಧಿಷ್ಠಿತರಿಗೇ ಎಂಬುದು ಅಂಗೀಕೃತ ತತ್ತ್ವ. ಅಧರ್ಮವನ್ನು ನಿವಾರಿಸುವುದೂ ತಡೆಗಟ್ಟುವುದೂ ಕೂಡಾ ಅಧಿಕಾರಸ್ಥಾನದ ಪ್ರಾಥಮಿಕ ಹೊಣೆಗಾರಿಕೆಯೇ. ಈ ಆಧಾರತತ್ತ್ವದ ಅನನುಸರಣೆಯೇ ಈಗ ಮನಮೋಹನಸಿಂಗ್ರವರನ್ನು ಆಪಾದಿತನ ಸ್ಥಾನದಲ್ಲಿ ನಿಲ್ಲಿಸಿರುವುದು. ಕಲ್ಲಿದ್ದಲು ಗಣಿಗಾರಿಕೆಯ ಸಂಬಂಧದಲ್ಲಿ ನಡೆದಿದ್ದ ಅಕ್ರಮಗಳನ್ನು ತಿಳಿದೂ ಮನಮೋಹನಸಿಂಗ್ ಅವನ್ನು ನಿವಾರಿಸಲಿಲ್ಲವೆಂದರೆ ಅವಕ್ಕೆ ಅವರ ಸಮ್ಮತಿ ಇದ್ದಿತೆಂದೇ ನಿಷ್ಕರ್ಷೆಯಾಗುವುದು ಅನಿವಾರ್ಯ. ಮನಮೋಹನಸಿಂಗ್ ಆಗಲಿ ಬೇರೆ ಯಾರೇ ಆಗಲಿ ಈ ಅಂತಿಮ ಉತ್ತರಬಾಧ್ಯತೆಯಿಂದ ತಪ್ಪಿಸಿಕೊಳ್ಳಲಾಗದು.
ಸ್ವಾಭಿಮಾನಶೂನ್ಯತೆ
ಋಜುವರ್ತನೆಗೆ ಭಂಗ ಒದಗಿದಾಗಲೂ ನಿರ್ಲಿಪ್ತರಂತಿರುವುದು ಸ್ವಾಭಿಮಾನವೆನಿಸದು, ಪ್ರಾಮಾಣಿಕತೆಯೆಂದೂ ಎನಿಸದು. ನಿದರ್ಶನಕ್ಕೆ : ೨೬/೧೧ ಘಟನೆಯ ನಂತರ ಸ್ಥಗಿತಗೊಂಡಿದ್ದ ಭಾರತ-ಪಾಕಿಸ್ತಾನ ಸಂವಾದವನ್ನು ಪುನರಾರಂಭಿಸಲು ಪಾಕಿಸ್ತಾನದೊಡನೆ ಮನಮೋಹನಸಿಂಗ್ ಪ್ರಧಾನಿಯಾಗಿ ಮಾಡಿಕೊಂಡಿದ್ದ ಶರ್ಮ್-ಎಲ್-ಶೇಖ್ ಕರಾರನ್ನು ಕಾಂಗ್ರೆಸ್ ಪಕ್ಷವು ಬಹಿರಂಗವಾಗಿ ತಿರಸ್ಕರಿಸಿತು. ಇದೊಂದು ಅಭೂತಪೂರ್ವ ಘಟನೆ. ಇಂತಹದನ್ನು ಯಾವ ಸ್ವಾಭಿಮಾನಿ ಪ್ರಧಾನಿಯೂ ಸಹಿಸುತ್ತಿರಲಿಲ್ಲ. ಹಲವು ಸಚಿವಖಾತೆಗಳ ಸಚಿವರು ತಮ್ಮನ್ನು ಸಂಬೋಧಿಸಿ ಬರೆದ ಪತ್ರಗಳು ತಮಗೆ ತಲಪುವುದಕ್ಕೆ ಮುಂಚೆಯೇ ವೃತ್ತಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು ಎಂದು ಮನಮೋಹನಸಿಂಗ್ ಆಪ್ತರಲ್ಲಿ ತೋಡಿಕೊಳ್ಳುತ್ತಿದ್ದರೆಂದು ಹೇಳಲಾಗಿದೆ. ಆದರೆ ಅವರು ಏನು ಮಾಡುತ್ತಿದ್ದರು?
`ಆರ್ಥಿಕ ತಜ್ಞ’ರೆಂದು ಪ್ರತೀತಿ ಇದ್ದ ಮತ್ತು ಪ್ರಧಾನಮಂತ್ರಿಯೂ ಆಗಿದ್ದ ಇವರ ಹಲವು ಸಲಹೆಗಳನ್ನು ರಿಸರ್ವ್ ಬ್ಯಾಂಕಿನ ಗವರ್ನರರೂ ಮಾನ್ಯ ಮಾಡಲಿಲ್ಲ.
ಹಲವು ತಥಾಕಥಿತ `ಜನಪ್ರಿಯ’ ಯೋಜನೆಗಳಿಗೆ ತಾವು ಕೀರ್ತಿ ಪಡೆದುಕೊಳ್ಳಲು ಸೋನಿಯಾ ಪರಿವಾರವು ಪ್ರಧಾನಿಗೆ ಪತ್ರಗಳನ್ನು ಕಳಿಸುತ್ತಿದ್ದುದು – ಮೊದಲಾದವೆಲ್ಲ ಜನಜನಿತವೇ ಆಗಿವೆ. ತಮ್ಮ ನೇರ ಸುಪರ್ದಿಗೆ ಒಳಪಟ್ಟ ಸ್ಥಾನಗಳಿಗೆ ತಾವು ಬಯಸಿದ ಅಧಿಕಾರಿಗಳನ್ನು ಕೂಡಾ ನೇಮಿಸಿಕೊಳ್ಳಲಾಗದಷ್ಟು ನಿಸ್ಸತ್ತ್ವತೆ ಇವರದಾಗಿತ್ತು. ಇಂತಹವರ ಕೈಯಲ್ಲಿ ಈ ದೊಡ್ಡ ದೇಶದ ಭವಿತವ್ಯವು ಸುಭದ್ರವಾಗಿರುತ್ತದೆ ಎಂದು ಯಾರು ತಾನೆ ಅಂದುಕೊಳ್ಳುವುದು ಶಕ್ಯ?
ಅವರದು ಅತ್ಯಂತ ಸರಳ ಜೀವನವೆಂಬ ಸಂಗತಿ ವಿವಾದಾತೀತವೇ ಆಗಿದ್ದರೂ, ಪ್ರಧಾನಿಯಾಗಿ ಅವರ ಹಯಾಮಿನಲ್ಲಿ ನಡೆದ ಹಲವಾರು ಹಗರಣಗಳ ನೈತಿಕ ಹಾಗೂ ಶಾಸಕೀಯ ಹೊಣೆಗಾರಿಕೆಯಿಂದ ಅವರಿಗೆ ಮುಕ್ತಿ ದೊರೆಯುವ ಅವಕಾಶವಿಲ್ಲ.
ಹೇಳಿದುದಕ್ಕೆಲ್ಲ ಇವರು ಮುದ್ರೆಯೊತ್ತುವ ನೌಕರಮಾತ್ರರೆಂದು ಪಕ್ಷವರಿಷ್ಠರು ಭಾವಿಸಿ ಅದರಂತೆ ವರ್ತಿಸಿದುದು ಸ್ವಾಭಾವಿಕ. ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಮನಮೋಹನಸಿಂಗ್ರವರ ಈಗಿನ ಬವಣೆ ನೂರಕ್ಕೆ ನೂರರಷ್ಟು ಸ್ವಯಂಕೃತವೇ ಎನ್ನದೆ ವಿದಿಯಿಲ್ಲ. ಇನ್ನು ಕಲ್ಲಿದ್ದಲ ಹಗರಣ ಕುರಿತು ಹೇಳುವುದಾದರೆ: ಇದು ಇಡೀ ವ್ಯವಸ್ಥೆಯನ್ನು ಮುಷ್ಟಿಯಲ್ಲಿರಿಸಿಕೊಂಡಿರುವ
ಉದ್ಯಮಪತಿ-ರಾಜಕೀಯಸ್ಥ ದುಷ್ಕೂಟದ ಅಂಚಿನ ಸೆರಗು ಮಾತ್ರ.?