ಭ್ರಷ್ಟತೆಯನ್ನು ತೊಲಗಿಸಲು ಒಡ್ಡು ಹಾಕುವ ಪ್ರಯಾಸ ಇಂದು ಹೆಚ್ಚಾಗಿ ನಡೆಯುತ್ತಿದೆ. ಪ್ರವಾಹದ ವೇಗ ಹೆಚ್ಚಾಗಿದ್ದರೆ ಒಡ್ಡು ಎಷ್ಟು ಕಾಲ ತಾನೇ ನಿಂತೀತು? ನೆರೆ ಬಂದಾಗ ಒಡ್ಡೂ ಕೊಚ್ಚಿಹೋಗುತ್ತದೆ. ಚಿಕ್ಕಚಿಕ್ಕ ಒಡ್ಡುಗಳಂತೂ ಸಣ್ಣ ನೆರೆಗೂ ಕಣ್ಮರೆಯಾಗುತ್ತವೆ. ಆದ್ದರಿಂದ ಒಡ್ಡು ಹಾಕುವುದರ ಜೊತೆಜೊತೆಗೇ ನೀರಿನ ಹರಿವಿನ ರಭಸವನ್ನು ಕಡಮೆ ಮಾಡುವತ್ತಲೂ ಗಮನಹರಿಸಬೇಕಾಗಿದೆ. ಹರಿವು ಕ್ಷೀಣಿಸಿದರೆ ಸಾಮಾನ್ಯ ಒಡ್ಡೂ ನೆರೆ ಹಾವಳಿಯನ್ನು ತಡೆಯಲು ಸಮರ್ಥವಾದೀತು.
ಲೋಕಾಯುಕ್ತ ದಾಳಿಯಿಂದ ‘೪೦ ಲಕ್ಷ ವಶ’, ‘ಮತ್ತೊಂದೆಡೆ ೪೨ ಲಕ್ಷ ವಶ’, ‘ಕೆ.ಇ.ಎಸ್. ಪರೀಕ್ಷೆ – ಬ್ಲೂಟೂತ್ ಬಳಕೆ ಬಯಲು’, ‘ಎಲ್ಲ ಪರೀಕ್ಷೆಗಳಲ್ಲಿ ಅಕ್ರಮ ಸಾಬೀತು’, ‘ಇಪ್ಪತ್ತೊಂದು ಅಧಿಕಾರಿಗಳ ಮನೆಗೆ ದಾಳಿ – ಹಲವಾರು ಕೋಟಿ ಅಕ್ರಮ ಬಯಲು’, ‘ನೌಕರನ ಖಾತೆಗೆ ಕಂತೆ ಕಂತೆ ಹಣ.’
ಇವು ಇತ್ತೀಚಿನ ತಾಜಾ ಸುದ್ದಿಗಳಲ್ಲಿ ಕೆಲವು. ಇಂತಹವನ್ನೆಲ್ಲ ಓದುತ್ತಿದ್ದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ, ನಾವು ಎತ್ತಕಡೆ ಹೆಜ್ಜೆ ಹಾಕುತ್ತಿದ್ದೇವೆ, ಮುಂದೆ ಎಂತಹ ದಿನಗಳು ನಮ್ಮೆದುರು ಬಂದು ನಿಂತಾವು ಎಂದು ಮುಂತಾದವನ್ನು ನೆನೆದಾಗ ಮನಸ್ಸಿನ ದುಗುಡ ಹೆಚ್ಚುತ್ತದೆ. ನಾವೆಲ್ಲ ತಪ್ಪುತ್ತಿದ್ದೇವೆ ಎಲ್ಲಿ, ಎಲ್ಲಿ, ಎಲ್ಲಿ?
ಮೇಲೆ ಹಲವು ಸುದ್ದಿಗಳನ್ನು ಸಾದರಪಡಿಸಲಾಯಿತಲ್ಲ, ಈ ಘಟನೆಗಳ ಪರಿಣಾಮ ಏನಾದೀತು? ‘ಪರಿಣಾಮೇ ನ ಕಿಂಚನ.’ ಅಂದರೆ ಕೊನೆಗೆ (ಪರಿಣಾಮದಲ್ಲಿ) ಏನೂ ಆಗುವುದೇ ಇಲ್ಲ. ಲೋಕಾಯುಕ್ತವೇ ಮೊದಲಾದವಕ್ಕೆ ದಾಳಿ ಮಾಡುವ ಕೆಲಸ ಮಾತ್ರ. ದಂಡನೆಯ ಹಕ್ಕು ಅವರಿಗಿರುವುದಿಲ್ಲ. ಇಂತಹ ದಾಳಿಗಳನ್ನು ಪತ್ರಿಕೆಗಳು ರಂಗುರಂಗಾಗಿ ಮುದ್ರಿಸುತ್ತವೆ. ಏಕೆಂದರೆ ಪ್ರಸಾರಸಂಖ್ಯೆ ಹೆಚ್ಚಿಸಿಕೊಳ್ಳಬೇಕಾಗಿದೆ ಅವಕ್ಕೆ. ದೂರದರ್ಶನ ವಾಹಿನಿಗಳೂ ಪ್ರಮುಖ ಸುದ್ದಿಯಾಗಿ (‘ಬ್ರೇಕಿಂಗ್ ನ್ಯೂಸ್’) ಇವನ್ನು ಸಾದರಪಡಿಸಿ ಅಬ್ಬರಿಸುತ್ತವೆ. ಏಕೆಂದರೆ ಟಿ.ಆರ್.ಪಿ. ಹೆಚ್ಚಿದರಷ್ಟೇ ಅವರ ಜನಪ್ರಿಯತೆ ಉಳಿದೀತು. ಮುಂದೇನಾಯಿತೆಂಬುದರ ಬಗ್ಗೆ ಪತ್ರಿಕೆಗಳಿಗೂ ಆಸಕ್ತಿಯಿಲ್ಲ, ದೂರದರ್ಶನ ವಾಹಿನಿಗಳಿಗೂ ಉಮೇದಿಲ್ಲ. ಸುದ್ದಿ ಬಿತ್ತರಿಸಿ ‘ಸಾಧಿಸಬೇಕಾದುದನ್ನು’ ಸಾಧಿಸಿಯಾದ ಮೇಲೆ ಮುಂದಿನ ಕಥೆಯ ಬಗ್ಗೆ ಏತಕ್ಕಾಗಿ ಚಿಂತಿಸಿಯಾರು ಅವರು? ಆದ್ದರಿಂದ ಇಂತಹ ಪ್ರಸಂಗಗಳಲ್ಲಿ ಮುಂದೇನಾಯಿತೆಂಬುದು ಜನರಿಗೆ ತಿಳಿಯುವುದೇ ಇಲ್ಲ.
ಹಾಗೆ ನೋಡಿದರೆ ಮುಂದೆ ಏನೂ ಆಗುವುದೂ ಇಲ್ಲ ಬಿಡಿ. ನಲವತ್ತು ಕೋಟಿ ಸಿಕ್ಕಿತಷ್ಟೇ. ಅದು ಯಾರದ್ದಿರಬಹುದೋ ಅವರು ಅದಕ್ಕೆ ‘ಹೊಂದಿಕೆ’ಯಾಗುವ ಲೆಕ್ಕ ಕೊಡುತ್ತಾರೆ. ಅದನ್ನು ಹೇಗೆ ಕೊಟ್ಟಾರು ಎಂದು ಕೇಳಬೇಡಿ. ಯಾವ ಬಗೆಯ ಲೆಕ್ಕ ಕೊಡಬೇಕೆಂದು ಲೆಕ್ಕಪರಿಶೋಧಕರು ತಿಳಿಸುತ್ತಾರೆ. ಅವರಿರುವುದೇ ಅದಕ್ಕೆ! ಹಣ ಪಡೆದುದಕ್ಕಾಗಿ ಅವರು ಅದನ್ನು ಮಾಡಲೇಬೇಕು. ಇಂತಹ ಪ್ರಕರಣಗಳಲ್ಲಿ ಹೇಗೆ ಲೆಕ್ಕ ಸೃಷ್ಟಿಸಬೇಕೆಂಬ ಸಂಗತಿ ಅವರಿಗೆ ತಿಳಿದೇ ಇರುತ್ತದೆ. ಅನೇಕ ಲೆಕ್ಕಪರಿಶೋಧಕರ ಹಾಗೂ ನ್ಯಾಯವಾದಿಗಳ ನಡೆ ಹೀಗೆಯೇ ಇರುತ್ತದೆ. ಸುಳ್ಳು ಲೆಕ್ಕ ಹೇಗೆ ತೋರಿಸಬೇಕೆಂಬ ವಿಷಯ, ಸುಳ್ಳು ಸಾಕ್ಷಿ ಹೇಗೆ ಹುಟ್ಟುಹಾಕಬೇಕೆಂಬ ಸಂಗತಿ ಅವರಿಗೆಲ್ಲ ನೀರು ಕುಡಿದಂತೆ ಸಲೀಸು. ಮುಂದೆ ಮತ್ತೇನು? ಲೋಕಾಯುಕ್ತರು ವಶಪಡಿಸಿಕೊಂಡ ಹಣ ಹಿಂದಿರುಗಿ ಹಣದ ಮಾಲೀಕರಿಗೇ ತಲಪುತ್ತದೆ. ಇದೆಲ್ಲ ಎಲ್ಲೂ ಸುದ್ದಿಯಾಗುವುದೇ ಇಲ್ಲ.
‘ಆಚಾರ ಕೆಟ್ಟರೂ….’
ಇನ್ನು ನೌಕರನ ಖಾತೆಗೆ ಕಂತೆ ಕಂತೆ ಹಣ ಜಮಾ ಆದುದರ ಕಥೆಯೂ ಇಂತಹದೇ ಆಗಿರುತ್ತದೆ. ತಿಂಗಳಿಗೆ ಹನ್ನೆರಡು ಸಾವಿರ ಮಾತ್ರ ಸಂಬಳ ಪಡೆಯುವ ಆತ ಕೋಟಿ ರೂಪಾಯಿಗೂ ಲೆಕ್ಕ ತೋರಿಸುತ್ತಾನೆ. ಅದೂ ಒಪ್ಪಲೇಬೇಕಾದ ಕ್ರಮದಲ್ಲಿ! ಆದ್ದರಿಂದ ಆತ ಶಿಕ್ಷೆಯಿಂದ ಅನಾಯಾಸವಾಗಿ ತಪ್ಪಿಸಿಕೊಳ್ಳುತ್ತಾನೆ. ಭ್ರಷ್ಟ ಅಧಿಕಾರಿಗಳದೂ ಇದೇ ಕಥೆ. ಅವರ ಸಂಪತ್ತು ಅಕ್ರಮದ್ದಾಗಿರಬಹುದು. ಆದರೆ ‘ಲೆಕ್ಕಪತ್ರ’ ಮಾತ್ರ ಸಕ್ರಮ. ಮತ್ತೆ ಶಿಕ್ಷೆಯಾಗುವುದೆಂತು?
ಪರೀಕ್ಷೆಗಳಲ್ಲಿ ಅಕ್ರಮವೆಸಗಿ ಸಿಕ್ಕಿಬಿದ್ದವರು ಕೆಲವೇ ಕೆಲವರು. ತಪ್ಪಿಸಿಕೊಂಡವರೇ ಅಧಿಕಮಂದಿ. ಅಕ್ರಮ ವ್ಯವಹಾರದ ಹಿಂದಿದ್ದ ಜನ ಒಮ್ಮೆ ಜೈಲು ಸೇರಿ ಜಾಮೀನಿನ ಮೇಲೆ ಹೊರಗೆ ಬರುತ್ತಾರೆ. ಈ ಬಾರಿಯ ಪರೀಕ್ಷೆಯ ಅಕ್ರಮದಲ್ಲಿ ಆತ ನೇರವಾಗಿ ಭಾಗಿಯಾಗಿರುವುದಿಲ್ಲ. ಬೇರೆಯವರ ಮೂಲಕ ಆತ ಮಾಡಿಸಿರುತ್ತಾನೆ. ಮೆದುಳು ಆತನದೇ. ಕೈ-ಕಾಲುಗಳು ಮಾತ್ರ ಬೇರೆಯವರದು. ಸಿಕ್ಕಿಬಿದ್ದ ಕೆಲವರು ಅಲ್ಪಸ್ವಲ್ಪ ಮಟ್ಟಿಗೆ ಶಿಕ್ಷೆಗೆ ಒಳಗಾದಾರು. ಅದೂ ಕೆಲವೊಮ್ಮೆ ಸಂದೇಹವೇ. ಹಿನ್ನೆಲೆಯಲ್ಲಿ ಕೆಲಸ ಮಾಡಿದ ಕುಳ ಮುಂದಿನ ಪರೀಕ್ಷೆಗಳ ಬಗ್ಗೆ ಹೊಸ ದಾರಿ ಹುಡುಕಿ ಎಲ್ಲೆಲ್ಲಿ ಸರಿಮಾಡಬೇಕೋ ಅಲ್ಲೆಲ್ಲ ಸರಿಮಾಡಿಕೊಂಡು ಮುನ್ನಡೆಯುತ್ತಾನೆ. ಆತನಿಗೆ ಸಹಕರಿಸುವ ಅಧಿಕಾರಿ/ನೌಕರ ವರ್ಗವೇ ಇರುವಾಗ ಅಕ್ರಮವೆಸಗುವುದಕ್ಕೆ ಆತನಿಗೆ ಹೆಚ್ಚು ಕಷ್ಟವೇನೂ ಆಗಲಾರದು. ಒಂದಷ್ಟು ಚಾಕಚಕ್ಯತೆ ಬೇಕಷ್ಟೇ. ಅದರಲ್ಲಿ ಆತ ಪಳಗಿದ ಹುಲಿ.
ಈ ಪರೀಕ್ಷೆಗಳೆಲ್ಲ ಮೇಲ್ಮಟ್ಟದ ಹುದ್ದೆಗಳಿಗಾಗಿ ನಡೆದವು. ಆ ಹುದ್ದೆಗಳಲ್ಲಿ ಈ ಪರಿಯಿಂದ ಪಾಸಾದವರೇ ಅಧಿಕಾರಿಗಳಾಗಿ ಕುಳಿತುಕೊಳ್ಳುತ್ತಾರೆ. ಮೇಲಕ್ಕೇರಲು ನೆರವಾದ ಏಣಿಯನ್ನು ದೂಡಲಾದೀತೇ? ಆದ್ದರಿಂದ ಅವರೂ ಅಕ್ರಮ ಕೃತ್ಯಗಳಿಗೆ ಪರೋಕ್ಷವಾಗಿ ನೆರವು ನೀಡುತ್ತಾರೆ. ನಲವತ್ತೈವತ್ತು ಲಕ್ಷ ಅಥವಾ ಕೋಟಿ ನೀಡಿ ಹುದ್ದೆ ಪಡೆದುಕೊಂಡ ಮೇಲೆ ಅದಕ್ಕೆ ಹತ್ತಿಪ್ಪತ್ತು ಪಟ್ಟಾದರೂ ಕಮಾಯಿಸದಿದ್ದರೆ ಹೇಗೆ?
ಇದೊಂದು ಭ್ರಷ್ಟ ವ್ಯವಸ್ಥೆಯ ಮಹಾಸುಳಿ, ಸುಂಟರಗಾಳಿ. ತನ್ನ ಕಕ್ಷೆಯಲ್ಲಿ ಬಂದುದನ್ನೆಲ್ಲ ಆಪೋಶನ ಮಾಡುತ್ತಾ ಕ್ಷಣಕ್ಷಣಕ್ಕೂ ಬೆಳೆಯುತ್ತಹೋಗುತ್ತದೆ ಅದು. ಬಲಿಯಾಗುವವರು ಸಾಮಾನ್ಯಜನತೆ. ಹಾಗಾದರೆ ಇದಕ್ಕೆ ಪರಿಹಾರವೇನೂ ಇಲ್ಲವೇ..?
ಹಿಂದೆ, ಇಂದು
ಇದೆ. ಖಂಡಿತ ಇದೆ. ಆದರೆ ನಾವು ಆ ದಾರಿಯಿಂದ ಈಗಾಗಲೇ ತುಂಬಾ ದೂರ ಸರಿದಿರುವುದರಿಂದ ಪರಿಹಾರ ಮಾರ್ಗ ಹಿಡಿಯಲು ಸಾಕಷ್ಟು ಪರಿಶ್ರಮಪಡಬೇಕಾದೀತು. ಬೆವರಿನ ಧಾರೆ ಹರಿಸಬೇಕಾದೀತು. ಅದು ಬೇಕೆಂಬ ಹಂಬಲ ನಮ್ಮನ್ನು ಬಲವಾಗಿ ಕಾಡಬೇಕು. ಜಗ್ಗದ ಸಂಕಲ್ಪಶಕ್ತಿ ಬೇಕು. ಸಾಧಿಸಲೇಬೇಕೆಂಬ ಛಲವಿರಬೇಕು. ನೇತೃತ್ವ ವಹಿಸುವ ಒಂದು ಪಡೆಯೂ ಬೇಕು.
ನೈತಿಕ ಕುಸಿತವೇ ಮೇಲೆ ತಿಳಿಸಿದ ಎಲ್ಲ ಘಟನೆಗಳಿಗೆ ಮುಖ್ಯ ಕಾರಣ. ಹಿಂದೆ ನಮ್ಮ ಸಮಾಜ ಹೀಗಿರಲಿಲ್ಲ. ಈ ಮಟ್ಟಿನ ಕುಸಿತ ಜರುಗುತ್ತಿರಲಿಲ್ಲ. ಸ್ವಾತಂತ್ರ್ಯ ಬರುವವರೆಗೂ ನಮ್ಮ ದೇಶದ ನೈತಿಕಮಟ್ಟ ಬಹುತೇಕ ಎತ್ತರದಲ್ಲೇ ಇತ್ತು. ಅಂದಿನ ಯಾವ ರಾಷ್ಟ್ರನಾಯಕರ ಬದುಕನ್ನಾದರೂ ನೋಡಿ. ನೈತಿಕ ಬಲವಿಲ್ಲದವರು ಅಲ್ಲಿ ತುಂಬ ಕಡಮೆ ಕಂಡುಬರುತ್ತಾರೆ. ಅದರಿಂದಾಗಿ ಜನರ ಮುಂದೆ ಆದರ್ಶದ ಬದುಕೊಂದು ಎದುರು ನಿಲ್ಲುತ್ತಿತ್ತು. ಇಂತಹದೇ ಬದುಕು ಕೆಳ-ಸ್ತರದಲ್ಲಿಯೂ ಒಡಮೂಡುತ್ತಿತ್ತು. ಅಷ್ಟೇ ಏಕೆ, ಮನೆಮನೆಯಲ್ಲೂ ಆದರ್ಶದ ದಾರಿಯಲ್ಲಿ ಸಾಗುವವರನ್ನು ಪ್ರತ್ಯಕ್ಷ ನೋಡಬಹುದಿತ್ತು. ಶಾಲೆಗಳಲ್ಲಿ ದೊರೆಯುವ ಶಿಕ್ಷಣವೂ ಅದಕ್ಕೆ ಪೂರಕವಾಗಿಯೇ ಇರುತ್ತಿತ್ತು. ಈ ನೈತಿಕ ವಾತಾವರಣ ಬಲವಾಗಿದ್ದುದರಿಂದ ಸಾಮಾನ್ಯ ಜನ, ಆಡಳಿತದ ಅಂಗವಾಗಿದ್ದ ನೌಕರರು ಮುಂತಾದವರೆಲ್ಲ ಭ್ರಷ್ಟ ನಡತೆ ತೋರಲು ಹೆದರುತ್ತಿದ್ದರು. ಅಪವಾದವೆಂಬಂತೆ ಭ್ರಷ್ಟತೆ ಅಲ್ಲಲ್ಲಿ ತೋರುತ್ತಿದ್ದಿರಬಹುದಾದರೂ ಅದು ಸಾರ್ವತ್ರಿಕವಾಗಿರಲಿಲ್ಲ. ಹೆಗ್ಗಳಿಕೆಯ ವಿಷಯವಂತೂ ಆಗಿರಲೇ ಇಲ್ಲ. ಜನ ಏನೆಂದಾರು ಎಂಬ ಭೀತಿ, ದೇವರು ಶಾಪ ಕೊಟ್ಟಾನು ಎಂಬ ಅಂತರಂಗದ ಅಳುಕು ಮುಂತಾದುವು ಅಂದು ದುರ್ನಡತೆಗಳನ್ನು ತಡೆಯುತ್ತಿದ್ದವು. ಸನ್ನಡತೆಯಿಂದ ಸಾಗುವುದೇ ಬದುಕಿನ ದಾರಿ ಎಂಬ ಭಾವನೆಯನ್ನು ಬಿತ್ತುವ, ಬಲಪಡಿಸುವ ವ್ಯವಸ್ಥೆ ಬಲವಾಗಿತ್ತು. ಹಣಕ್ಕಿಂತ ಸನ್ನಡತೆಯೇ ಮೇಲು ಎಂಬುದರಲ್ಲಿ ಜನರಿಗೆ ನಂಬಿಕೆಯಿತ್ತು.
ಆದರೆ ಮುಂದೆ ಬೇರೆಬೇರೆ ಕಾರಣಗಳಿಂದಾಗಿ ಹಣಕ್ಕೆ, ಭೋಗಜೀವನಕ್ಕೆ ಎಲ್ಲಿಲ್ಲದ ಪ್ರಾಧಾನ್ಯ ಬಂದೊದಗಿತು. ದಾರಿ ಎಂತಹದಾಗಿದ್ದರೂ ಪರವಾಗಿಲ್ಲ, ಹೇಗಾದರೂ ಹಣ ಮಾಡಬೇಕು ಎಂಬುದು ಧ್ಯೇಯವಾಯಿತು. ಬೇರೆಯವರನ್ನು ತುಳಿದಾದರೂ ಸರಿ, ಮಾನವನ್ನು ಅಥವಾ ಹೆಂಡತಿಯ ಶೀಲವನ್ನು ಅಡವಿಟ್ಟಾದರೂ ಸರಿ, ಒಟ್ಟಾರೆ ಮೇಲೇರಲೇಬೇಕು ಎಂಬ ಹಪಾಹಪಿ ವ್ಯಾಪಕವಾಯಿತು. ಗುರಿ ಬದಲಾದಾಗ ಪರಿಯೂ ಬದಲಾಗಲೇಬೇಕು ತಾನೇ. ಕೆಳಗೆ ಬೀಳುವುದರಲ್ಲೇ ಸುಖ ಕಾಣುವ ಹಂತ ತಲಪಿದ್ದಾಯಿತು. ಏನು ಮಾಡುವುದಕ್ಕೂ ಹೇಸಬಾರದೆಂಬ ಭಂಡತನ ತನ್ನ ಕಬಂಧಬಾಹುವನ್ನು ಎಲ್ಲೆಡೆ ಚಾಚಿತು.
ಈಗಿನ ‘ರೋಲ್ ಮಾಡೆಲ್’ಗಳು
ಇದು ತುಂಬಾ ಮೇಲ್ಮಟ್ಟದಲ್ಲೇ ಆದ ಬದಲಾವಣೆ. ರಾಜಕೀಯ ಮುಖಂಡರು, ಚಲನಚಿತ್ರ ನಟನಟಿಯರು, ಕ್ರೀಡಾಳುಗಳು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಮುಂತಾದವರು ನಮಗೆ ಆದರ್ಶವಾದರು. ಮತ ಪಡೆಯಲು, ಕುರ್ಚಿ ಭದ್ರಪಡಿಸಿಕೊಳ್ಳಲು ಯಾವುದೇ ಕೀಳು ಹಂತಕ್ಕೂ ಇಳಿಯಲು ತಯಾರಾದ ರಾಜಕೀಯ ಮುಖಂಡರು; ಹಣ, ಖ್ಯಾತಿಗಾಗಿ ಏನು ಬೇಕಾದರೂ ಮಾಡುತ್ತಿರುವ ನಟ-ನಟಿಯರು; (ನಟಿಯರಂತೂ ಮೈಮಾಟವನ್ನೇ, ತನ್ನ ಮೈಯನ್ನೇ ಮಾರಾಟದ ಸರಕನ್ನಾಗಿ ಮಾಡುತ್ತ ಹಣಗಳಿಸುವುದಕ್ಕೆ ಮುಂದಾಗುತ್ತಾರೆ) ಹಣಕ್ಕಾಗಿ ಮ್ಯಾಚ್ ಫಿಕ್ಸಿಂಗಿಗೂ ಹೇಸದ, ಹಣ ಕೊಟ್ಟು ಯಾರ ಪರವಾಗಿಯಾದರೂ ಆಡಲು ತಯಾರಾಗುವ ಕ್ರೀಡಾಳುಗಳು; ಹಾಗೆಯೇ ಹಣಕ್ಕಾಗಿ ರಾಜಕೀಯ ಧುರೀಣರ ಅಡಿಯಾಳಾಗಿ ಏನು ಬೇಕಾದರೂ ಮಾಡುವ ಅಧಿಕಾರಿಗಳು; ಭ್ರಷ್ಟತೆಯು ಮೂರ್ತಿವೆತ್ತಂತಿರುವ ಕಂಟ್ರಾಕ್ಟರುಗಳು; ಮೋಸ ಕುತಂತ್ರಗಳೇ ಉಸಿರಾಗಿರುವ ವ್ಯಾಪಾರಿ ಸಂಸ್ಥೆಗಳು – ಹೀಗೆ ಭ್ರಷ್ಟತೆಯ ಪಟ್ಟಿ ಮಾಡುತ್ತಹೋದರೆ ಅದು ಮುಗಿಯುವುದೇ ಇಲ್ಲವೇನೋ. ಚೊಕ್ಕ ಆಡಳಿತ, ಪಾರದರ್ಶಕ ನಡೆ, ಸಮಾಜಸೇವೆ, ಜಾತ್ಯತೀತ ದೃಷ್ಟಿ ಎಂದು ಮುಂತಾದ ಹೇಳಿಕೆಗಳ ಗುರಾಣಿ ಹಿಡಿದು ಮಾನ ಮುಚ್ಚಿಕೊಳ್ಳುವುದೂ, ಹೆಗ್ಗಳಿಕೆಯನ್ನು ಹೊಗಳಿಕೊಳ್ಳುವುದೂ ಇಂದು ಅವ್ಯಾಹತವಾಗಿ ನಡೆಯುತ್ತಿದೆ.
ಇದನ್ನು ತಡೆಯಲು ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನವೇನೂ ಕಡಮೆಯಲ್ಲ. ಆದರಿದೆಲ್ಲ ಕುರುವಿಗೆ ಮದ್ದು ಸವರಿದಂತೆ. ಹೊರಬದಿಯಲ್ಲಿ ಹಾಕುವ ತೇಪೆ. ಒಳಗಿನ ನಂಜಿನ ನಿವಾರಣೆಯಾದ ಹೊರತು ಕುರು ಇಲ್ಲವಾಗದು. ಸರ್ಕಾರ ಹೊಸಹೊಸ ಕಾನೂನನ್ನು ಜಾರಿಗೆ ತಂದು ಭ್ರಷ್ಟತೆಯನ್ನು ತಡೆಯಬಯಸುತ್ತದೆ ಅಥವಾ ಒಂದು ಕಡೆ ತಡೆಯುವ ಪ್ರಯತ್ನವನ್ನು ಜಾಹೀರುಗೊಳಿಸುತ್ತ, ಒಳಗೊಳಗೇ ತನ್ನ ಬೇಳೆಬೇಯಿಸಿಕೊಳ್ಳಲು ಭ್ರಷ್ಟತೆಗೆ ಶರಣಾಗುತ್ತದೆ. ಸಿ.ಸಿ ಕ್ಯಾಮರಾ ಹಾಕುವುದರ ಮೂಲಕ ಕಳ್ಳತನವನ್ನೂ, ಸಂಚಾರಿ ನಿಯಮಗಳ ಉಲ್ಲಂಘನೆಯನ್ನೂ ತಡೆಯಬಯಸುತ್ತದೆ ಅದು. ಕೆಲಸದ ಪ್ರಗತಿಯನ್ನು ಪರಿಶೀಲಿಸಿಯೇ ಹಣ ಸಂದಾಯ ಮಾಡಬೇಕೆನ್ನುತ್ತದೆ. ನಗದಿನ ಹರಿವು ಭ್ರಷ್ಟಾಚಾರಕ್ಕೆಡೆಮಾಡುತ್ತದಾದ್ದರಿಂದ ಬ್ಯಾಂಕಿನ ಮೂಲಕವೇ ಎಲ್ಲವೂ ಸಂದಾಯವಾಗಬೇಕು ಎನ್ನುತ್ತದೆ. ಬಿಲ್ಲನ್ನು ಸರಿಯಾಗಿ ಪರಿಶೀಲಿಸಿಯೇ ಅನುಮೋದನೆ ನೀಡಬೇಕೆನ್ನುತ್ತದೆ. ದಿನಗೂಲಿಯನ್ನು ನೀಡಲು ಹಾಜರಿಯನ್ನು ಖಚಿತಪಡಿಸಿಕೊಳ್ಳುವಂತೆ ತಾಕೀತು ಮಾಡುತ್ತದೆ. ಹೀಗೆಲ್ಲ ಮಾಡಿ ಸರ್ಕಾರ ಚಾಪೆಯ ಕೆಳಗೆ ನುಸುಳುವುದನ್ನು ತಡೆಯುವತ್ತ ಪ್ರಯತ್ನಿಸಿದರೆ ಅಷ್ಟರಲ್ಲೇ ರಂಗೋಲಿಯ ಕೆಳಗೆ ನುಸುಳಿಕೊಳ್ಳುವವರು ಹುಟ್ಟಿಕೊಳ್ಳುತ್ತಾರೆ. ಒಟ್ಟಾರೆ ನುಸುಳುವಿಕೆ ನಿಲ್ಲುವುದೇ ಇಲ್ಲ.
ಈಸಲೇಬೇಕು ಪ್ರವಾಹಕ್ಕೆದುರಾಗಿ
ಹಾಗಾದರೆ ಇದನ್ನೆಲ್ಲ ನೋಡುತ್ತಾ ಪರಿತಪಿಸುವುದೊಂದೇ ಪರಿಹಾರವೇ? ಹಾಗೇನೂ ಇಲ್ಲ. ಹಿಂದೆಯೇ ತಿಳಿಸಿದಂತೆ ಮುದುಡಿಹೋಗಿರುವ ನೈತಿಕತೆಯನ್ನು ಚಿಗುರಿಸುವತ್ತ ಗಮನಹರಿಸಬೇಕು. ನೈತಿಕತೆ ಮೊಳಕೆಯೊಡೆಯುವುದನ್ನು ಕಾಣುವುದೇ ವಿರಳವಾಗಿದೆಯಾದರೂ ನೈತಿಕತೆಯ ಬೀಜ ಇನ್ನೂ ಮುರುಟಿಹೋಗಿಲ್ಲ. ನೆಲದೊಳಗೆ ಅದು ಅವಿತುಕೊಂಡಿದೆ. ಸರಿಯಾಗಿ ನೀರು ಹನಿಸಿದರೆ, ಸರಿಯಾಗಿ ಮಳೆಯಾದರೆ, ಬೀಜಗಳು ಖಂಡಿತ ಮೊಳೆತಾವು.
ಭ್ರಷ್ಟತೆಯನ್ನು ತೊಲಗಿಸಲು ಒಡ್ಡು ಹಾಕುವ ಪ್ರಯಾಸ ಇಂದು ಹೆಚ್ಚಾಗಿ ನಡೆಯುತ್ತಿದೆ. ಪ್ರವಾಹದ ವೇಗ ಹೆಚ್ಚಾಗಿದ್ದರೆ ಒಡ್ಡು ಎಷ್ಟು ಕಾಲ ತಾನೇ ನಿಂತೀತು? ನೆರೆ ಬಂದಾಗ ಒಡ್ಡೂ ಕೊಚ್ಚಿಹೋಗುತ್ತದೆ. ಚಿಕ್ಕಚಿಕ್ಕ ಒಡ್ಡುಗಳಂತೂ ಸಣ್ಣ ನೆರೆಗೂ ಕಣ್ಮರೆಯಾಗುತ್ತವೆ. ಆದ್ದರಿಂದ ಒಡ್ಡು ಹಾಕುವುದರ ಜೊತೆ ಜೊತೆಗೇ ನೀರಿನ ಹರಿವಿನ ರಭಸವನ್ನು ಕಡಮೆ ಮಾಡುವತ್ತಲೂ ಗಮನಹರಿಸಬೇಕಾಗಿದೆ. ಹರಿವು ಕ್ಷೀಣಿಸಿದರೆ ಸಾಮಾನ್ಯ ಒಡ್ಡೂ ನೆರೆ ಹಾವಳಿಯನ್ನು ತಡೆಯಲು ಸಮರ್ಥವಾದೀತು.
ಯಾವುದೇ ಗೆರೆಯನ್ನು ಅಳಿಸಿಯೇ ಚಿಕ್ಕದಾಗಿಸಬೇಕಿಲ್ಲ. ಅದರ ಪಕ್ಕದಲ್ಲಿ ಅದಕ್ಕೂ ಉದ್ದದ ಗೆರೆ ಹಾಕಿದರೆ ಮೊದಲ ಗೆರೆ ತನ್ನಿಂದ ತಾನೇ ಚಿಕ್ಕದಾಗುತ್ತದೆ. ಸನ್ನಡತೆಯ ಸಂದೇಶ/ಪಾಠ/ಆಚರಣೆಗಳು ವ್ಯಾಪಕವಾಗಿ ನಡೆಯಬೇಕು. ಇದು ರಾಷ್ಟ್ರಮಟ್ಟದಲ್ಲೂ, ರಾಜ್ಯಮಟ್ಟದಲ್ಲೂ, ಮನೆಯ ಮಟ್ಟದಲ್ಲೂ ಜರುಗಬೇಕು. ಇದರ ವೇಗ ಕಡಮೆಯಿದ್ದೀತು. ಆದರೆ ಪರಿಣಾಮ ಮಾತ್ರ ಖಂಡಿತ ಶಾಶ್ವತವಾಗಿ ತೋರಿಬರುತ್ತದೆ.
ಅಸಾಧ್ಯವಲ್ಲ
ಕರೋನಾದ ಮೊದಲ ದಿನಗಳನ್ನು ಜ್ಞಾಪಿಸಿಕೊಳ್ಳಿ. ‘ಒಂದು ದಿನ ಬೆಳಗ್ಗೆಯಿಂದ ಸಂಜೆಯವರೆಗೆ ಲಾಕ್ಡೌನ್ ನಡೆಸಿ ಸಂಜೆ ಜಾಗಟೆ ಬಾರಿಸಿ’ ಎಂದು ಕರೆ ಕೊಡಲಾಯಿತು. ಜಾಗಟೆ ಬಾರಿಸಿದ್ದರಿಂದ ಕರೋನಾ ಹೋಗಿಬಿಟ್ಟಿತೇ ಎಂದು ಹಲವರು ಕುಹಕವಾಡಿದರು. ಅವರನ್ನು ಅವರ ಪಾಡಿಗೆ ಬಿಟ್ಟುಬಿಡೋಣ. ಏಕೆಂದರೆ ಕುಹಕವಾಡುವುದೇ ಅವರ ಕಸುಬು. ಮೊಸರಿನಲ್ಲಿಯೂ ಕಲ್ಲು ಹುಡುಕುವವರನ್ನು ಏನನ್ನೋಣ? ಆ ಒಂದು ದಿನ ಜಾಗಟೆ ಬಾರಿಸಿದ್ದು ಮುಂದಿನ ದೀರ್ಘಾವಧಿಯ ಲಾಕ್ಡೌನ್ಗೆ ನಾಂದಿಯಾಗಿತ್ತು. ಲಾಕ್ಡೌನ್ಗೆ ಜನರ ಮಾನಸಿಕತೆಯನ್ನು ಸಜ್ಜುಗೊಳಿಸುವುದರ ಮುನ್ನುಡಿಯಾಗಿತ್ತು ಅದು. ಮುಂದೆ ನಡೆದ ಹಲವಾರು ಪ್ರಯತ್ನಗಳ ಫಲದಿಂದಾಗಿ ನಮ್ಮ ದೇಶ ಕರೋನಾದ ಬಲವಾದ ಆಘಾತಕ್ಕೆ ತುತ್ತಾಗಿಯೂ ಬೇಗನೇ ಎದ್ದು ನಿಲ್ಲುವಂತಾಯಿತು. ಸರಿಯಾದ ತಯಾರಿಯಿಲ್ಲದ ದೊಡ್ಡದೊಡ್ಡ ದೇಶಗಳ ಆರ್ಥಿಕತೆಯು ನೆಲಕಚ್ಚಿದ್ದು ನಮ್ಮ ಕಣ್ಣೆದುರೇ ಇದೆ.
‘ಸ್ವಚ್ಛತೆಯನ್ನು ಕಾಪಾಡಿ’, ‘ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ’ ಎಂದು ಮುಂತಾಗಿ ಕರೆ ಕೊಡಲಾಯಿತು. ಬರೀ ಕರೆ ಕೊಟ್ಟಿದ್ದಷ್ಟೇ ಅಲ್ಲ, ಅದರ ಆಚರಣೆಯ ಬಗ್ಗೆಯೂ ಗಮನಹರಿಸಲಾಯಿತು. ಇದರಿಂದಾಗಿ ಪ್ಲಾಸ್ಟಿಕ್ ಬಳಕೆ ನಿಂತೇಹೋಯಿತೆಂದೇನಿಲ್ಲ. ಅಸ್ವಚ್ಛತೆ ಕಾಣದಾಯಿತೆಂದಿಲ್ಲ. ಆದರೆ ಗಣನೀಯ ಪ್ರಮಾಣದಲ್ಲಿ ಒಂದಿಷ್ಟು ಪ್ರಗತಿಯಾಗಿದ್ದಂತೂ ಸುಳ್ಳಲ್ಲ ತಾನೇ?
ಜನರನ್ನೆಲ್ಲ ಹುರಿದುಂಬಿಸಿ ರಾಷ್ಟ್ರ ಕಟ್ಟುವ ಕೆಲಸ ಜಗತ್ತಿನಲ್ಲಿ ಹಲವೆಡೆ ನಡೆದಿದೆ. ಹೀಬ್ರೂ ಭಾಷೆಯ ಅಭಿಮಾನ-ಉಜ್ಜೀವನವನ್ನು ಕೇಂದ್ರವಾಗಿಸಿ ಇಸ್ರೇಲನ್ನು ಕಟ್ಟಿ ಬಲಗೊಳಿಸಿದ್ದು ಯಾರಿಗೆ ತಾನೇ ತಿಳಿದಿಲ್ಲ? ಎರಡನೇ ಜಾಗತಿಕ ಯುದ್ಧದಲ್ಲಿ ಸುಟ್ಟು ಕರಕಲಾಗಿದ್ದ ಜಪಾನ್ ಅದೇ ಬೂದಿಯಿಂದಲೇ ಮೇಲೆದ್ದು ದೃಢವಾಗಿ ನಿಂತಿದ್ದನ್ನು ನಾವೆಲ್ಲ ಬಲ್ಲವರೇ ಆಗಿದ್ದೇವೆ. ಸಿಂಗಾಪುರವನ್ನು ಮಾದರಿ ದೇಶವಾಗಿ ಕಟ್ಟಿ ಬೆಳೆಸಿದ್ದು ಜನರನ್ನು ಸಜ್ಜುಗೊಳಿಸುವ ಮೂಲಕವೇ. ಇತಿಹಾಸಗಳಲ್ಲಿಯಂತೂ ಇಂತಹ ಉದಾಹರಣೆಗಳು ಹೇರಳವಾಗಿ ದೊರೆಯುತ್ತವೆ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಮ್ಮ ದೇಶದಲ್ಲಿಯೇ ರಾಷ್ಟ್ರಾಭಿಮಾನವನ್ನು ಚೇತರಿಸಿ ರಾಷ್ಟ್ರದಾದ್ಯಂತ ಚಳವಳಿಯ ಕಾವನ್ನು ಹೆಚ್ಚಿಸಿ ಜನರ ಕಣ ಕಣಗಳಲ್ಲೂ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸಿದ್ದನ್ನು ನಾವೆಂತು ಮರೆತೇವು? ಆದ್ದರಿಂದ ಯೋಗ್ಯ ನಾಯಕತ್ವವಿದ್ದಲ್ಲಿ ದೇಶದಲ್ಲಿ ನೈತಿಕತೆಯ ನೆಲಗಟ್ಟನ್ನು ಗಟ್ಟಿಗೊಳಿಸುವ ಕೆಲಸ ಅಸಾಧ್ಯವಾದುದೇನೂ ಅಲ್ಲ. ಆದರೆ ಅದಕ್ಕೆ ಸಂಘಟಿತ ಪ್ರಯತ್ನ ಬೇಕಾಗುತ್ತದೆ.
ವ್ಯಷ್ಟಿಸ್ತರದಿಂದ ಸಮಷ್ಟಿಯೆಡೆಗೆ
ನಮ್ಮ ನಮ್ಮ ಮನೆಯ ಮಟ್ಟದಲ್ಲೂ, ಶಾಲಾಮಟ್ಟದಲ್ಲೂ ಬದಲಾವಣೆಯಾಗಬೇಕಿದೆ. ಶಿಕ್ಷಕ ವೃತ್ತಿಯ ಪಾವಿತ್ರ್ಯ ಎಂದೋ ಇಲ್ಲವಾಗಿ ಅದೊಂದು ಸಂಬಳ ತರುವ ಹುದ್ದೆಯಾಗಿ ಎಷ್ಟೋ ಕಾಲವಾಗಿದೆ. ಆದ್ದರಿಂದ ಶಿಕ್ಷಕರ ನಡೆ ಮಕ್ಕಳಲ್ಲಿ ಸತ್ಪ್ರಭಾವ ಬೀರುತ್ತಿಲ್ಲ. ಬದಲಾಗಿ ಹಲವು ದುಷ್ಪçಭಾವಗಳಿಗೆ ಎಡೆ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಇಸಂಗಳೂ, ವಾಮಪಂಥ ಬಲಪಂಥ ಎಂದು ಮುಂತಾದ ವಿವಾದಗಳೂ ಬಲವಾಗಿ ಬೇರೂರಿರುವುದರಿಂದ ಸನ್ನಡತೆಗೆ ಪೂರಕವಾಗಬೇಕಾಗಿದ್ದ ಶಿಕ್ಷಣನೀತಿ ಅಡ್ಡದಾರಿ ಹಿಡಿಯುತ್ತಿದೆ. ಮಾಹಿತಿ ತುರುಕುವುದೇ, ಹೆಚ್ಚು ಸಂಬಳ ತರುವ ನೌಕರಿಯತ್ತ ವಿದ್ಯಾರ್ಥಿಗಳನ್ನು ದೂಡುವುದೇ ಶಿಕ್ಷಣದ ಗುರಿಯಾಗಿಬಿಟ್ಟಿದೆ. ಈ ಕ್ಷೇತ್ರದಲ್ಲಿ ಬದಲಾವಣೆಯುಂಟಾಗುವುದು ತುಸು ಕಷ್ಟವೇ ಎಂದೆನಿಸುತ್ತಿದೆ.
ಮನೆಯ ಮಟ್ಟದಲ್ಲಿ, ವ್ಯಕ್ತಿಯ ಮಟ್ಟದಲ್ಲಿ ಸನ್ನಡತೆಯೆಂದರೇನು? ‘ಕಳಬೇಡ, ಕೊಲಬೇಡ’ ಎಂಬುದು ಸನ್ನಡತೆ. ‘ಮಾ ಗೃಧಃ ಕಸ್ಯಸ್ವಿದ್ಧನಮ್ – ಬೇರೆಯವರ ಸಂಪತ್ತಿಗೆ ಆಸೆ ಪಡಬೇಡ’ ಎಂಬುದು ಸನ್ನಡತೆ. ‘ಸತ್ಯಂ ವದ, ಧರ್ಮಂ ಚರ’ (ಸತ್ಯವನ್ನೇ ನುಡಿ, ಧರ್ಮಮಾರ್ಗದಲ್ಲಿ ನಡೆ) ಎಂಬುದು ಸನ್ನಡತೆ. ಬೇರೆಯವರಿಗೆ ಉಪಕಾರ ಮಾಡು, ಭೋಗದ ದಾಸನಾಗಬೇಡ, ಇಂದ್ರಿಯಗಳು ವಶದಲ್ಲಿರಲಿ, ಪ್ರಾಮಾಣಿಕತೆಯನ್ನು ಬಿಡಬೇಡ, ಆಡಂಬರ ತರವಲ್ಲ, ಪ್ರಕೃತಿಯನ್ನು ಉಳಿಸಿ ಬೆಳೆಸು, ಒಳ್ಳೆಯವರ ಸಹವಾಸ/ಒಳ್ಳೆಯ ಓದು ನಿನ್ನದಾಗಿರಲಿ, ವಿನಯ ವಿಧೇಯತೆಗಳನ್ನು ಮೈಗೂಡಿಸಿಕೋ… ಮುಂತಾದವೆಲ್ಲ ಸನ್ನಡತೆಯ ಅಂಶಗಳೇ. ಇಂತಹ ಹಲವಾರು ಅಂಶಗಳು ನಮ್ಮ ನಿಮ್ಮ ನಡತೆಯಲ್ಲಿ ಒಡಮೂಡಬೇಕಾಗಿದೆ.
ಮನೆಯ ಮಟ್ಟದಲ್ಲಿ ಹಾಗೂ ನಮ್ಮ ಮಟ್ಟದಲ್ಲಿ ಬದಲಾವಣೆ ತರುವ ಕೆಲಸ ನಮ್ಮ ಕೈಯಲ್ಲೇ ಇದೆ. ನಮ್ಮ ವೈಯಕ್ತಿಕ ಹಾಗೂ ಮನೆಮಂದಿಯ ನಡತೆಯನ್ನು ನಾವು ತಿದ್ದಿಕೊಳ್ಳಬಲ್ಲವಾದರೆ ಸಮಾಜದಲ್ಲಿ ಖಂಡಿತ ಬದಲಾವಣೆ ತರಬಲ್ಲವು. ‘ವಿವೇಕಾನಂದರಂತಾಗು’, ‘ಸುಭಾಶ್ಚಂದ್ರರಂತಾಗು’ ಎಂದು ಹೇಳುವಂತೆ ‘ನನ್ನಂತಾಗು’ ಎಂದೂ ಹೇಳುವ ಮಟ್ಟಕ್ಕೆ ನಾವು ನಮ್ಮ ನಡೆಯನ್ನು ತಿದ್ದಿಕೊಳ್ಳಬಲ್ಲೆವಾದರೆ ನಮ್ಮ ನಮ್ಮ ಮನೆಗಳಲ್ಲಿ ಖಂಡಿತ ಬದಲಾವಣೆಯಾದೀತು. ಮನೆಗಳಲ್ಲಿಯ ಬದಲಾವಣೆ ದೇಶದ ಬದಲಾವಣೆಗೆ ನಾಂದಿಯಾದೀತು.