ಮೋದಿಯವರ ಸುಧಾರಣಾ ಕ್ರಮಗಳು ಭಾರತವನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಿವೆ. ಆ ನಿಟ್ಟಿನಲ್ಲಿ ಅವರು ನೂರಾರು ಅನುಪಯುಕ್ತ ವಸಾಹತುಯುಗದ ಕಾನೂನುಗಳನ್ನು ರದ್ದುಗೊಳಿಸುವ ಕ್ರಮಗಳನ್ನು ಕೈಗೊಂಡಿದ್ದಾರೆ. ಆರ್ಥಿಕ ಬೆಳವಣಿಗೆ ಮತ್ತು ವೇಗದ ಅಭಿವೃದ್ಧಿಯ ಹೊಸ ಅಧ್ಯಾಯ ತೆರೆದುಕೊಂಡಿದ್ದು, ೨೦೧೪ರಲ್ಲಿ ದೇಶದ ಬಡತನದ ಮಾಪನ ೨೨% ಇದ್ದುದು ಈಗ ೧೦%ರ ಗಡಿಯಿಂದ ಮತ್ತೆ ಇಳಿಕೆ ಕಾಣುತ್ತಿದೆ. ತೀವ್ರ ಬಡತನವು ೧%ಕ್ಕಿಂತ ಕಡಮೆಯಾಗಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಸೃಷ್ಟಿಸಿದೆ ಮತ್ತು ಕಳೆದ ಐದು ವರ್ಷಗಳಲ್ಲಿ ನಮ್ಮ ಸೌರ ಮತ್ತು ಪವನವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಎರಡುಪಟ್ಟು ಹೆಚ್ಚಾಗಿದೆ.
ದೇಶದ ಆರ್ಥಿಕ ಮಟ್ಟವನ್ನು ನಿರ್ಣಯಿಸುವ ಅಳತೆಗೋಲಾಗಿ ಮೊದಲು ಗಣನೆಯಾಗುವುದು ದೇಶೀಯ ಉತ್ಪನ್ನದ (ಜಿಡಿಪಿ) ಒಟ್ಟು ಮೌಲ್ಯ. ಬಳಕೆ ಮತ್ತು ಹೂಡಿಕೆಯಂತಹ ವಿವಿಧ ಆರ್ಥಿಕ ಘಟಕಗಳ ವ್ಯಾಪ್ತಿಯನ್ನು ಗಣನೆಗೆ ತೆಗೆದುಕೊಂಡು ದೇಶದ ಜಿಡಿಪಿಯನ್ನು ಲೆಕ್ಕಹಾಕಲಾಗುತ್ತದೆ. ಒಂದು ನಿರ್ದಿಷ್ಟ ಅವಧಿಯಲ್ಲಿ ಆರ್ಥಿಕತೆಯು ಉತ್ಪಾದಿಸುವ ಸೇವೆಗಳು ಮತ್ತು ಸರಕುಗಳ ಒಟ್ಟು ಮೌಲ್ಯವನ್ನು ಜಿಡಿಪಿ ಸೂಚಿಸುತ್ತದೆ.
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್ಡಿಪಿ) ಪ್ರಕಾರ ದೇಶವೊಂದರ ಅಭಿವೃದ್ಧಿಯ ಮಾಪನವು ಒಟ್ಟು ರಾಷ್ಟ್ರೀಯ ಆದಾಯ ಸೂಚ್ಯಂಕ (ಜಿಎನ್ಐ) ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು (ಎಚ್ಡಿಐ) ಗಣನೆಗೆ ತೆಗೆದುಕೊಂಡು ಅಳೆಯಲಾಗುತ್ತದೆ. ಅಷ್ಟುಮಾತ್ರವಲ್ಲದೆ, ದೇಶದ ಕೈಗಾರಿಕೀಕರಣ, ಆರೋಗ್ಯ, ಶಿಕ್ಷಣ, ಪ್ರಜೆಗಳ ಒಳಿತಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನೂ ಆರ್ಥಿಕ ಪ್ರಗತಿಯ ಮಾಪನವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಸ್ವಾತಂತ್ರ್ಯಾನಂತರದಲ್ಲಿ ಭಾರತವು ಕೈಗಾರಿಕೆ, ವ್ಯವಸಾಯ, ವ್ಯಾಪಾರ ಇತ್ಯಾದಿ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಯೋಜನೆಗಳನ್ನು ಅಳವಡಿಸಿಕೊಂಡಿತು. ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದಾಗ ಭಾರತದ ಅಭಿವೃದ್ಧಿಯ ವೇಗ ಅನೇಕ ಕಾರಣಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಸಾಗಲಿಲ್ಲ ಎನ್ನುವುದು ವಾಸ್ತವ.
ಭಾರತದ ಮೊದಲ ಪ್ರಧಾನಿ ನೆಹರೂರವರು ಬಂಡವಾಳಶಾಹಿ ಮತ್ತು ವೈಯಕ್ತಿಕ ವಾಣಿಜ್ಯ ಸ್ವಾತಂತ್ರ್ಯದ ವಿರೋಧಿ ನಿಲವು ತಳೆದಿದ್ದವರು. ಆಗ ಲೈಸೆನ್ಸ್ ರಾಜ್ನ ಉಗಮವಾಗಿ, ದೇಶದಲ್ಲಿ ಏನನ್ನು, ಯಾರಿಂದ ಮತ್ತು ಎಷ್ಟು ಉತ್ಪಾದಿಸಬಹುದು ಎನ್ನುವುದು ಸರ್ಕಾರದ ನಿರ್ಧಾರಗಳಿಗೆ ಒಳಪಟ್ಟವು. ಅನಂತರದಲ್ಲಿ ಪ್ರಧಾನಿ ಇಂದಿರಾಗಾಂಧಿಯವರು ಬ್ಯಾಂಕಿಂಗ್, ಗಣಿಗಾರಿಕೆ, ಟೆಲಿಕಾಂ ಮತ್ತು ಜವಳಿಗಳಂತಹ ಪ್ರಮುಖ ಉದ್ಯಮಗಳನ್ನು ರಾಷ್ಟ್ರೀಕರಣಗೊಳಿಸಿದರು. ಈ ಬೆಳವಣಿಗೆಗಳಿಂದ ಬಹಳಷ್ಟು ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್ಯು) ನಷ್ಟದ ಹಾದಿ ಹಿಡಿದವು. ಅನಂತರದಲ್ಲಿ ದೇಶದ ಚುಕ್ಕಾಣಿ ಹಿಡಿದ ಪಿ.ವಿ. ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ಸಿಂಗ್ ಅವರುಗಳ ಸುಧಾರಣಾ ನೀತಿಗಳಿಂದಾಗಿ ಖಾಸಗಿ ಉದ್ಯಮಗಳ ಮೇಲಿನ ಸಂಕೋಲೆಗಳು ಕಾಲಕ್ರಮೇಣ ಸಡಿಲಗೊಂಡವು.
೨೦೧೪ ಮೇ ತಿಂಗಳಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿಯವರ ಆರ್ಥಿಕ ನೀತಿಗಳು ಸುಧಾರಣೆಯ ಮಹತ್ತರ ಹೆಜ್ಜೆಗಳೆಂದು ಕಾಲಕ್ರಮೇಣ ಆರ್ಥಿಕತಜ್ಞರನ್ನೂ ಒಳಗೊಂಡು ಶ್ರೀಸಾಮಾನ್ಯನವರೆಗೂ ಅರ್ಥವಾಗತೊಡಗಿತು. ಅವರ ‘ಸ್ಟಾರ್ಟ್ಅಪ್’, ‘ಸ್ಟ್ಯಾಂಡಪ್’ ಮತ್ತು ‘ಮೇಕ್ ಇನ್ ಇಂಡಿಯಾ’ದಂತಹ ಅಭಿಯಾನಗಳಿಂದ ದೇಶದ ಉದ್ದಗಲ ಉದ್ಯಮಶೀಲ ಮನೋಭಾವವು ಹೊಸ ಚೈತನ್ಯ ಪಡೆದವು.
ಪ್ರಧಾನಿ ಮೋದಿಯವರ ಸುಧಾರಣೆಯ ಕನಸುಗಳು ಒಂಭತ್ತು ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕತೆಯನ್ನು ನಿರ್ದಿಷ್ಟವೂ ಮತ್ತು ಮಹತ್ತರವೂ ಆದ ರೀತಿಯಲ್ಲಿ ಬದಲಾಯಿಸಿರುವುದು ಎದ್ದುಕಾಣುತ್ತದೆ. ಮೋದಿ ತೆಗೆದುಕೊಂಡ ನಿರ್ಣಾಯಕ ನಿರ್ಧಾರಗಳು ಆರ್ಥಿಕತೆಯ ಮೇಲೆ ಆಳವಾದ ಪರಿಣಾಮಗಳನ್ನು ಬೀರಿದ್ದು ವೇದ್ಯ.
ಜಡ ಮತ್ತು ಜಡ್ಡುಗಟ್ಟಿಹೋಗಿದ್ದ ಆಡಳಿತಯಂತ್ರವನ್ನು ಚುರುಕಾಗಿಸಿ ವೇಗಗೊಳಿಸಿದ ಹೆಗ್ಗಳಿಕೆ ಮೋದಿಯವರ ಸರ್ಕಾರಕ್ಕೆ ಸಲ್ಲುತ್ತದೆ. ತಳಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಭಾರತ ಕಳೆದ ಒಂಭತ್ತು ವರ್ಷಗಳಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ರೀತಿ ಬೆರಗುಗೊಳಿಸುವಂಥದ್ದು.
ಆರ್ಥಿಕ ಸುಧಾರಣೆಯ ನಿರ್ಧಾರಗಳು
ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ನಿರ್ಧಾರಗಳನ್ನು ಮೋದಿಯವರು ಕೈಗೊಂಡರು. ಅವುಗಳನ್ನು ಪ್ರಮುಖವಾಗಿ ಎರಡು ರೀತಿಯಲ್ಲಿ ಕಾಣಬಹುದು: ದೇಶದ ಆರ್ಥಿಕ ಸುಧಾರಣೆಗೆ ತೆಗೆದುಕೊಂಡ ಉಪಕ್ರಮಗಳು ಮತ್ತು ಜನಕಲ್ಯಾಣ ಯೋಜನೆಗಳ ಜಾರಿಯಿಂದ ಬಡವರು, ರೈತರು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲರ ಕ್ಷೇಮಾಭಿವೃದ್ಧಿಯ ಗುರಿ.
ಮೋದಿಯವರ ಸುಧಾರಣಾ ಕ್ರಮಗಳು ಭಾರತವನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಿವೆ. ಆ ನಿಟ್ಟಿನಲ್ಲಿ ಅವರು ನೂರಾರು ಅನುಪಯುಕ್ತ ವಸಾಹತುಯುಗದ ಕಾನೂನುಗಳನ್ನು ರದ್ದುಗೊಳಿಸುವ ಕ್ರಮಗಳನ್ನು ಕೈಗೊಂಡಿದ್ದಾರೆ. ಆರ್ಥಿಕ ಬೆಳವಣಿಗೆ ಮತ್ತು ವೇಗದ ಅಭಿವೃದ್ಧಿಯ ಹೊಸ ಅಧ್ಯಾಯ ತೆರೆದುಕೊಂಡಿದ್ದು, ೨೦೧೪ರಲ್ಲಿ ದೇಶದ ಬಡತನದ ಮಾಪನ ೨೨% ಇದ್ದುದು ಈಗ ೧೦%ರ ಗಡಿಯಿಂದ ಮತ್ತೆ ಇಳಿಕೆ ಕಾಣುತ್ತಿದೆ. ತೀವ್ರ ಬಡತನವು ೧%ಕ್ಕಿಂತ ಕಡಮೆಯಾಗಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಸೃಷ್ಟಿಸಿದೆ ಮತ್ತು ಕಳೆದ ಐದು ವರ್ಷಗಳಲ್ಲಿ ನಮ್ಮ ಸೌರ ಮತ್ತು ಪವನವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಎರಡುಪಟ್ಟು ಹೆಚ್ಚಾಗಿದೆ.
ಮೇಕ್ ಇನ್ ಇಂಡಿಯಾ
‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ೨೦೧೪ ಸೆಪ್ಟೆಂಬರ್ನಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದರು. ಭಾರತದಲ್ಲಿ ಹೂಡಿಕೆಗಾಗಿ ಪ್ರಪಂಚದಾದ್ಯಂತದ ಉನ್ನತ ವ್ಯಾಪಾರದ ಹೂಡಿಕೆದಾರರಿಗೆ ಅವಕಾಶದ ಬಾಗಿಲು ತೆರೆಯುವ ಉಪಕ್ರಮವಾಗಿದೆ. ವಿದೇಶೀ ಹೂಡಿಕೆದಾರರಿಗೆ ಭಾರತದ ಯಾವುದೇ ಕ್ಷೇತ್ರದಲ್ಲಿ ತಮ್ಮ ವ್ಯವಹಾರವನ್ನು ಪ್ರಾರಂಭಿಸಲು ಇದು ಅವಕಾಶಮಾಡಿಕೊಡುತ್ತದೆ. ಈ ಯೋಜನೆಯು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ವಿದೇಶೀ ಕಂಪೆನಿಗಳಿಗೆ ಸಂಪನ್ಮೂಲ ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯ ಅನುಷ್ಠಾನದಿಂದ ದೇಶದಲ್ಲಿ ಉತ್ಪನ್ನಗಳ ಹೆಚ್ಚಳದೊಂದಿಗೆ ಉದ್ಯೋಗಸೃಷ್ಟಿಯ ಅವಕಾಶಗಳೂ ಹೆಚ್ಚಾದವು. ಹೂಡಿಕೆದಾರರ ಸಹಾಯದಿಂದ ದೇಶವು ಉತ್ಪಾದನಾವಲಯದಲ್ಲಿ ಸಂಪೂರ್ಣವಾಗಿ ಸ್ವಾವಲಂಬಿಯಾಗಲಿದೆ.
ಸಂಪನ್ಮೂಲಗಳ ಕೊರತೆ ಮತ್ತು ನೀತಿ ವಿಷಯಗಳ ಸ್ಪಷ್ಟತೆಯಿಂದಾಗಿ ತಮ್ಮ ವ್ಯಾಪಾರವನ್ನು ಭಾರತದ ಹೊರಗೆ ಸ್ಥಳಾಂತರಿಸಲು ಯೋಜಿಸುತ್ತಿದ್ದ ದೇಶೀಯ ಹೂಡಿಕೆದಾರರು ಭಾರತದಲ್ಲಿಯೇ ಉಳಿದುಕೊಳ್ಳಲು ಈ ಯೋಜನೆ ಸಹಕಾರಿಯಾಯಿತು. ಇದು ಭಾರತೀಯ ಜಿಡಿಪಿಯ ಬೆಳವಣಿಗೆಗೆ ಮತ್ತು ಭಾರತೀಯ ಕರೆನ್ಸಿಯ ಮೌಲ್ಯವೃದ್ಧಿಗೆ ಸಹಾಯಕಾರಿಯಾಗಿದೆ.
ಈ ಯೋಜನೆಯು ಕೌಶಲ-ಆಧಾರಿತ ಉದ್ಯೋಗಗಳನ್ನು ಸೃಷ್ಟಿಸಲು ಸಹಕಾರಿಯಾಗಿದ್ದು ವಿದೇಶೀ ಕಂಪೆನಿಗಳನ್ನು ಆಕರ್ಷಿಸಿ ಭಾರಿ ಹೂಡಿಕೆಯನ್ನು ಉತ್ತೇಜಿಸುವಲ್ಲಿ ಫಲಕಾರಿಯಾಯಿತು. ಭಾರತಕ್ಕೆ ವಿದೇಶೀ ನೇರ ಹೂಡಿಕೆಯು (ಎಫ್ಡಿಐ) ಮೊದಲಿಗಿಂತಲೂ ಎರಡುಪಟ್ಟು ಹೆಚ್ಚಳ ಕಂಡಿತು.
ನೋಟುಗಳ ಅಮಾನ್ಯೀಕರಣ ಕ್ರಮ
ಪ್ರಧಾನಿ ಮೋದಿ ಅವರು ನವೆಂಬರ್ ೮, ೨೦೧೬ರಂದು ರೂ. ೫೦೦ ಮತ್ತು ರೂ. ೧೦೦೦ ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದರು. ಆ ನಿರ್ಧಾರವು ವಿವಾದಾತ್ಮಕ ಆರ್ಥಿಕ ನಿರ್ಧಾರವೆಂದು ಹಲವರು ಆರ್ಥಿಕ ತಜ್ಞರ ಅಭಿಪ್ರಾಯವಿದ್ದರೂ, ವಾಸ್ತವದಲ್ಲಿ ಈ ಕ್ರಮವು ಕಪ್ಪುಹಣದ ವಿರುದ್ಧದ ಹೋರಾಟ, ನಕಲಿ ನೋಟುಗಳಿಗೆ ಕಡಿವಾಣ ಹಾಕುವುದು, ಅಕ್ರಮ ಹಣದ ವರ್ಗಾವಣೆಯನ್ನೂ, ತೆರಿಗೆ ವಂಚನೆಯನ್ನೂ ತಡೆಯುವ ಉದ್ದೇಶದಿಂದ ಕೂಡಿತ್ತು ಎನ್ನುವುದು ಬಹುಬೇಗ ತಿಳಿಯತೊಡಗಿತು. ಕಪ್ಪುಹಣವನ್ನು ಹೊಂದಿರುವ ವ್ಯಕ್ತಿ/ಸಂಸ್ಥೆಗಳು ಅಧಿಕ ಮೌಲ್ಯದ ನೋಟುಗಳನ್ನು ಹೊರತೆಗೆಯಬೇಕಾಯಿತು ಮತ್ತು ಆ ಹಣದ ಮೂಲವನ್ನು ತಿಳಿಸುವುದು ಅನಿವಾರ್ಯವಾಯಿತು. ತೆರಿಗೆ ಪಾವತಿ ಮಾಡದಿರುವ ಮೊತ್ತಗಳಿಗೆ ೨೦೦%ರಷ್ಟು ದಂಡ ವಿಧಿಸಲಾಯಿತು. ಅಮಾನ್ಯೀಕರಣದ ಕ್ರಮದಿಂದ ಡಿಜಿಟಲ್ ಪಾವತಿಯ ಸೌಕರ್ಯಗಳತ್ತ ಜನರು ಮುಖಮಾಡತೊಡಗಿದ್ದು ಧನಾತ್ಮಕ ಬದಲಾವಣೆಯೆನಿಸಿತು.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)
೨೦೧೭ ಜುಲೈನಿಂದ ಹೊಸ ‘ಸರಕು ಮತ್ತು ಸೇವಾ ತೆರಿಗೆ’ (ಜಿಎಸ್ಟಿ) ಪದ್ಧತಿ ಜಾರಿಗೆ ಬಂದಿತು. ಇದು ಏಕರೂಪ ಪರೋಕ್ಷ ತೆರಿಗೆ ಪದ್ಧತಿಯಾಗಿದ್ದು, ತೆರಿಗೆ, ಸುಂಕ, ಕೇಂದ್ರೀಯ ಅಬಕಾರಿ ಸುಂಕ, ಸೇವಾ ತೆರಿಗೆ, ಹೆಚ್ಚುವರಿ ಕಸ್ಟಮ್ಸ್ ಸುಂಕ, ಇತರ ಹೆಚ್ಚುವರಿ ಶುಲ್ಕ, ರಾಜ್ಯಗಳ ಮೌಲ್ಯವರ್ಧಿತ ತೆರಿಗೆ ಮತ್ತು ಆಕ್ಟಾçಯ್ ಒಳಗೊಂಡಿದೆ. ಅಂತರರಾಜ್ಯ ಸರಕು ಸಾಗಣೆಯ ಮೇಲೆ ಅನ್ವಯವಾಗುತ್ತಿದ್ದ ಇತರ ಸುಂಕಗಳು, ಸರಕು ಮತ್ತು ಸೇವೆಗಳ ಮಾರಾಟ, ವರ್ಗಾವಣೆ, ಖರೀದಿ, ವಿನಿಮಯ, ಗುತ್ತಿಗೆ ಅಥವಾ ಆಮದು ಮುಂತಾದ ಎಲ್ಲ ವಹಿವಾಟುಗಳನ್ನು ‘ಜಿಎಸ್ಟಿ’ ಒಳಗೊಳ್ಳುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿದ್ದ ಬಹುತೆರಿಗೆಗಳು ‘ಜಿಎಸ್ಟಿ’ ಜಾರಿಯಾದ ನಂತರದಲ್ಲಿ ನಿಷ್ಕ್ರಿಯಗೊಂಡಿವೆ.
ಈ ಕ್ರಮವು ಮೋದಿ ಸರ್ಕಾರದ ಅಧಿಕಾರಾವಧಿಯ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದ್ದು “ಒಂದು ರಾಷ್ಟ್ರ, ಒಂದು ತೆರಿಗೆ” ಘೋಷಣೆಯ ಸಾಕಾರ ರೂಪವಾಗಿದೆ. ಹೊಸ ತೆರಿಗೆಯ ಪರಿಣಾಮವಾಗಿ, ದೇಶದ ನಿವ್ವಳ ರಫ್ತು ಹೆಚ್ಚಳವಾಯಿತು. ಸರಕುಗಳ ಉತ್ಪಾದನೆ ಹೆಚ್ಚಿತು. ದೇಶದ ವ್ಯಾಪಾರ ವಹಿವಾಟು ಏರಿಕೆ ಕಂಡು ಉದ್ಯೋಗಿಗಳ ಸಂಖ್ಯೆಯೂ ಬೆಳೆಯಿತು.
ಸರಳಗೊಂಡ ತೆರಿಗೆ ಕೋಡ್, ಅಂತರರಾಜ್ಯ ನಿರ್ಬಂಧಗಳ ಸಡಿಲಿಕೆ, ಚೆಕ್ಪೋಸ್ಟ್ ಮತ್ತು ರಾಜ್ಯ ಗಡಿಗಳಲ್ಲಿನ ಪ್ರವೇಶ ತೆರಿಗೆ ಮುಂತಾದ ಅಡೆತಡೆಗಳ ಮುಕ್ತಿಯಿಂದ ಕರಸಂಗ್ರಹದ ದಕ್ಷತೆ ಹೆಚ್ಚಾಗಿದೆ. ವೆಚ್ಚಗಳಲ್ಲಿ ಕಡಿತವಾದ ಕಾರಣ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಅದು ಉತ್ಪಾದನೆಯಿಂದ ಮೊದಲುಗೊಂಡು ಪೂರೈಕೆಯಾಗುವವರೆಗಿನ (ಲಾಜಿಸ್ಟಿಕ್ಸ್) ಉದ್ಯಮಗಳು ಅಭಿವೃದ್ಧಿ ಹೊಂದಲು ಸಹಾಯ ಮಾಡಿದೆ.
ಡಿಜಿಟಲ್ ಪಾವತಿಯ ಕ್ರಾಂತಿ
ಜನಕಲ್ಯಾಣ ಕಾರ್ಯಕ್ರಮಗಳಿಗೆ ತಂತ್ರಜ್ಞಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡ ಭಾರತದ ಮೊದಲ ಪ್ರಧಾನಿ ಮೋದಿ ಎನ್ನುವುದು ನಿಃಸಂಶಯ. ಸರ್ಕಾರದ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ನಗರ ಮತ್ತು ಹಳ್ಳಿಗಳಲ್ಲಿ ಡಿಜಿಟಲ್ ಪಾವತಿಯ ಯುಗವೊಂದನ್ನು ತೆರೆಯಿತು.
ಕೇಂದ್ರಸರ್ಕಾರದ ಮಹತ್ತ್ವಾಕಾಂಕ್ಷೆಯ ಡಿಜಿಟಲ್ ಅಭಿಯಾನವು ೨೦೧೫ ಜುಲೈನಲ್ಲಿ ಜಾರಿಗೆ ಬಂದಿತು. ಇದು ಆನ್ಲೈನ್ ಮೂಲಸೌಕರ್ಯಗಳನ್ನು ಇಂಟರ್ನೆಟ್ ಸಂಪರ್ಕಗಳನ್ನು ಹೆಚ್ಚಿಸಿ ಆ ಮೂಲಕ ಡಿಜಿಟಲ್ ತಂತ್ರಜ್ಞಾನವನ್ನು ಸಶಕ್ತಗೊಳಿಸುವ ಉಪಕ್ರಮವಾಗಿದೆ. ಸರ್ಕಾರದ ಸೇವೆಗಳನ್ನು ವಿದ್ಯುನ್ಮಾನ ಮಾರ್ಗದ ಮೂಲಕ ಜನರಿಗೆ ಲಭ್ಯವಾಗಿಸುವುದು ಪ್ರಮುಖ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳನ್ನೂ ಸಹ ಅತಿವೇಗದ ಇಂಟರ್ನೆಟ್ ನೆಟ್ವರ್ಕ್ಗಳೊಂದಿಗೆ ಸಂಪರ್ಕಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ.
ಭಾರತ ಮುಂಬರುವ ದಿನಗಳಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾಗಲಿದ್ದು, ಭಾರತದ ಆರ್ಥಿಕ ಶಕ್ತಿಗೆ ಡಿಜಿಟಲ್ ಕ್ರಾಂತಿ ಹೆಚ್ಚು ಬಲ ನೀಡಿದೆ. ಈ ಕ್ರಾಂತಿಯಿಂದ ಎಲ್ಲೆಡೆ ನಗದು ರಹಿತ ವ್ಯವಹಾರಗಳು ನಡೆಯುತ್ತಿವೆ. ಪಾರದರ್ಶಕತೆ, ವ್ಯವಹಾರದ ನಿಖರ ಲೆಕ್ಕ ಸಿಗುತ್ತಿದೆ. ಡಿಜಿಟಲ್ ಮಾದರಿಯ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದದ್ದು ಕೇಂದ್ರದ ದೂರದೃಷ್ಟಿಗೆ ಮತ್ತೊಂದು ಸಾಕ್ಷಿ. ಹಣ್ಣು, ಸೊಪ್ಪು, ತರಕಾರಿ ಇತ್ಯಾದಿ ಕೊಳ್ಳುವುದರಿಂದ ಹಿಡಿದು ಐಶಾರಾಮಿ ವಸ್ತುಗಳನ್ನು ಖರೀದಿಸುವವರೆಗೆ ಡಿಜಿಟಲ್ ಪಾವತಿ ಮಾಡುವ ಸೌಲಭ್ಯವನ್ನು ಜಾರಿಗೆ ತಂದಿರುವುದು ಜನರಿಗೆ ಹೆಚ್ಚು ಉಪಯೋಗವಾಗಿದೆ.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಭಾರತವನ್ನು ಬಹು ಸೂಕ್ಷ್ಮ ಆರ್ಥಿಕತೆಗಳಿಂದ “ಒಂದು ಮೆಗಾ ಆರ್ಥಿಕತೆಗೆ ಒಯ್ಯುತ್ತಿದೆ” ಎಂಬುದು ಇನ್ಫೋಸಿಸ್ ಅಧ್ಯಕ್ಷ ಮತ್ತು ಸಹ-ಸಂಸ್ಥಾಪಕ ಮತ್ತು ಯುಐಡಿಎಐ (ಆಧಾರ್) ಸಂಸ್ಥಾಪಕ ಅಧ್ಯಕ್ಷ ನಂದನ್ ನೀಲೇಕಣಿಯವರ ಅಭಿಪ್ರಾಯವಾಗಿದೆ.
‘ಯುಪಿಐ’ ಪ್ಲಾಟ್ಫಾರ್ಮ್ ಪ್ರಸ್ತುತ ವಿಶ್ವದ ಅತಿದೊಡ್ಡ ಪಾವತಿ ವೇದಿಕೆಯಾಗಿದ್ದು, ಪ್ರತಿ ತಿಂಗಳು ಸುಮಾರು ೧೦ ಶತಕೋಟಿಯಷ್ಟು ವಹಿವಾಟುಗಳು ಸುಗಮವಾಗಿ ನಡೆಯುತ್ತಿವೆ. ಸುಮಾರು ೩೫೦ ಮಿಲಿಯನ್ ಬಳಕೆದಾರರಿದ್ದು, ಯುಪಿಐ ವ್ಯವಸ್ಥೆಯು ಸರಿಸುಮಾರು ೫೦ ಮಿಲಿಯನ್ ವ್ಯಾಪಾರಿಗಳಲ್ಲಿ ‘ಕ್ಯುಆರ್’ ಕೋಡ್ಗಳ ಮೂಲಕ ಡಿಜಿಟಲ್ ಪಾವತಿಗಳು ನಡೆಯುತ್ತಿದ್ದು ಇದು ವಿಶ್ವದ ಗಮನ ಸೆಳೆದಿದೆ.
ಜನ್ಧನ್ ಯೋಜನೆ
ಯುಪಿಎ ಸರಕಾರ ‘ಜನ್ಧನ್’ ಯೋಜನೆಯನ್ನು ತಂದಿದ್ದರೂ ಅದು ಯಶಸ್ವಿಯಾಗಿ ಜಾರಿಯಾದದ್ದು ೨೦೧೪ ಆಗಸ್ಟ್ ೨೮ರಂದು ಪ್ರಧಾನಿ ಮೋದಿ ಈ ಯೋಜನೆಯ ಚಾಲನೆಗೆ ಹೆಚ್ಚಿನ ಮಹತ್ತ್ವ ಕೊಟ್ಟದ್ದರಿಂದ. ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ, ವಿಮೆ, ಅಪಘಾತ ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸುವುದು ಈ ಯೋಜನೆಯ ಗುರಿಯಾಗಿದೆ. ಖಾತೆದಾರರಿಗೆ ಸಾಲ ಸೌಲಭ್ಯ, ಪಿಂಚಣಿಯ ಸೌಲಭ್ಯವನ್ನೂ ಈ ಯೋಜನೆ ಒಳಗೊಂಡಿದೆ. ಹಣಕಾಸು ಸಚಿವಾಲಯದ ಅಂಕಿಅAಶಗಳ ಪ್ರಕಾರ, ಇದುವರೆಗೆ ಒಟ್ಟು ೫೦.೫೬ ಕೋಟಿ ಜನ್ಧನ್ ಖಾತೆಗಳನ್ನು ತೆರೆಯಲಾಗಿದ್ದು, ಖಾತೆಗಳಲ್ಲಿನ ಒಟ್ಟು ಮೊತ್ತ ರೂ. ೨೦೪ ಲಕ್ಷ ಕೋಟಿಗೂ ಅಧಿಕವಿದೆ.
ಸರ್ಕಾರೀ ಪ್ರಯೋಜನಗಳ ನೇರ ವರ್ಗಾವಣೆ
ವಿವಿಧ ಕಲ್ಯಾಣ ಯೋಜನೆಗಳ ಕಾರ್ಯವಿಧಾನ ಮತ್ತು ವಿತರಣಾ ವ್ಯವಸ್ಥೆಯನ್ನು ಸುಧಾರಣೆಗೊಳಿಸಲು ೨೦೧೩ ಜನವರಿಯಿಂದ ಪ್ರಯೋಜನಗಳ ನೇರ ವರ್ಗಾವಣೆ (ಡಿಬಿಟಿ) ಪದ್ಧತಿಯನ್ನು ಹಿಂದಿನ ಸರ್ಕಾರವು ಜಾರಿಗೊಳಿಸಿತು. ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ಕೀರ್ತಿ ಮೋದಿಯವರ ಸರ್ಕಾರಕ್ಕೆ ಸಲ್ಲಬೇಕು. ಜನ್ಧನ್, ಆಧಾರ್ ಸಂಖ್ಯೆಯ ಮೂಲಕ ಮೊಬೈಲ್ ಸಹಾಯದಿಂದ ಸರ್ಕಾರ ಬಿಡುಗಡೆ ಮಾಡುವ ಸಹಾಯಧನ ಜನರ ಖಾತೆಗಳಿಗೇ ಜಮೆಯಾಗುವ ‘ಪ್ರಯೋಜನಗಳ ನೇರ ವರ್ಗಾವಣೆ (ಡಿಬಿಟಿ)’ ಪ್ರಕ್ರಿಯೆ ಪೂರ್ಣ ಯಶಸ್ವಿಯಾಗಿರುವುದು ಒಂದು ಕ್ರಾಂತಿಕಾರಿ ಹೆಜ್ಜೆಯೆನಿಸಿದೆ. ಅನುದಾನ ಅಥವಾ ಸಬ್ಸಿಡಿಗಳ ನೇರ ವರ್ಗಾವಣೆ ಮೊದಲಿದ್ದ ವಿಳಂಬ, ವಂಚನೆ, ಸೋರಿಕೆಗಳನ್ನು ಪೂರ್ಣ ತೊಡೆದುಹಾಕಿದೆ.
ಸಣ್ಣ ಕೈಗಾರಿಕೆ ಮತ್ತು ಉದ್ಯಮಗಳಿಗೆ ಮುದ್ರಾ ಯೋಜನೆ
೨೦೧೫ ಏಪ್ರಿಲ್ ನಿಂದ ‘ಮುದ್ರಾ ಯೋಜನೆ’ಯು ಜಾರಿಗೆ ಬಂದಿದೆ. ಯುವಜನತೆಯನ್ನು ಉದ್ಯಮಶೀಲತೆಯತ್ತ ಆಕರ್ಷಿಸುವುದು ಹಾಗೂ ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ಯಮಶೀಲರಿಗೆ ಹಣಕಾಸಿನ ನೆರವು ನೀಡುವುದು ಇದರ ಉದ್ದೇಶ. ಯಾವುದೇ ಕೃಷಿಯೇತರ ಆದಾಯದ ಚಟುವಟಿಕೆಗೆ ರೂ. ಹತ್ತು ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯಬಹುದು. ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ/ಸೂಕ್ಷ್ಮ ಉದ್ಯಮಗಳಿಗೆ ಈ ಸಾಲಗಳನ್ನು ‘ಪಿಎಂಎಂವೈ’ ಅಡಿಯಲ್ಲಿ ಮುದ್ರಾ ಸಾಲಗಳೆಂದು ವರ್ಗೀಕರಿಸಲಾಗಿದೆ. ಈ ಸಾಲಗಳನ್ನು ವಾಣಿಜ್ಯ ಬ್ಯಾಂಕುಗಳು, ಆರ್ಆರ್ಬಿಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಎಂಎಫ್ಐಗಳು ಮತ್ತು ಎನ್ಬಿಎಫ್ಸಿಗಳು ನೀಡುತ್ತವೆ.
ದೇಶದ ಸಣ್ಣ ಉತ್ಪಾದಕರು ಮತ್ತು ವ್ಯಾಪಾರಿಗಳ ಶ್ರಮಶೀಲತೆ ಮತ್ತು ನಾವೀನ್ಯದ ತಳಹದಿಯ ಮೇಲೆ ನಿರ್ಮಿಸಲಾದ ಆರ್ಥಿಕ ಚಟುವಟಿಕೆಗಳು ‘ಮೋದಿ ಯುಗ’ದಲ್ಲಿ ಮರುಹುಟ್ಟು ಪಡೆದಿವೆ. ಸ್ಟಾರ್ಟ್ಅಪ್ಗಳು ಮತ್ತು ಸಣ್ಣ ಕೈಗಾರಿಕೆಗಳನ್ನು (ಎಂಎಸ್ಎಂಇ) ಸಕ್ರಿಯಗೊಳಿಸುವ ನೀತಿಗಳ ಜೊತೆಗೆ, ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳ ಬೆಳವಣಿಗೆಯು ಮುನ್ನೆಲೆಗೆ ಬಂದಿದೆ. ನಿಯಂತ್ರಿತ ಆರ್ಥಿಕ ನೀತಿಗಳ ಸಹಾಯದಿಂದ ಭಾರತವು ಸಮಾನವಾದ ಅವಕಾಶ, ಬೆಳವಣಿಗೆ ಮತ್ತು ಸಮೃದ್ಧಿಯನ್ನು ಕಾಣತೊಡಗಿದೆ.
ಸ್ಟಾರ್ಟ್ಅಪ್ ಯೋಜನೆ
೨೦೧೬ ಜನವರಿಯಲ್ಲಿ ಈ ಯೋಜನೆ ಪ್ರಾರಂಭವಾಯಿತು. ಹೊಸ ಉದ್ಯಮಗಳನ್ನು ಉತ್ತೇಜಿಸುವ ಈ ಯೋಜನೆಯು ಮೋದಿಯವರ ಮಹತ್ತ್ವಾಕಾಂಕ್ಷೆಯ ಮತ್ತೊಂದು ಕನಸು ಎಂದು ಹೇಳಬಹುದು. ದೇಶದಲ್ಲಿ ಸ್ಟಾರ್ಟ್ಅಪ್ ಉದ್ಯಮದ ವೇಗವರ್ಧನೆಗೆ ಉದ್ಯಮಿಗಳನ್ನು ಬೆಂಬಲಿಸುವ ಅನೇಕ ಕಾರ್ಯಕ್ರಮಗಳನ್ನು ಈ ಯೋಜನೆ ಜಾರಿಗೊಳಿಸಿದೆ.
ಹತ್ತು ವರ್ಷಗಳನ್ನು ಪೂರೈಸದೆ ಇರುವ ಮತ್ತು ೧೦೦ ಕೋಟಿ ರೂ. ವಾರ್ಷಿಕ ವಹಿವಾಟು ಮೀರದ ಕಂಪೆನಿಗಳನ್ನು ಸ್ಟಾರ್ಟ್ಅಪ್ ಎಂದು ಪರಿಗಣಿಸಲಾಗುತ್ತದೆ. ಹೊಸ ಉತ್ಪನ್ನ ಅಥವಾ ಸೇವೆ ಅನ್ವೇಷಣೆ, ಅಭಿವೃದ್ಧಿ ಅಥವಾ ಪ್ರಗತಿಯ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸಂಸ್ಥೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.
ರಸ್ತೆಗಳ ಅಭಿವೃದ್ಧಿ ಮತ್ತು ನಿರ್ಮಾಣ
೨೦೧೪ರಿಂದ ಈಚೆಗೆ ದೇಶದಲ್ಲಿ ೬೪ ಲಕ್ಷ ಕಿಲೊಮೀಟರಿಗೂ ಹೆಚ್ಚಿನ ಉದ್ದದ ರಸ್ತೆ ನಿರ್ಮಾಣ ಮಾಡಲಾಗಿದೆ. ಆ ಮೂಲಕ, ಅತಿ ದೊಡ್ಡ ರಸ್ತೆ ಸಾರಿಗೆ ಹೊಂದಿರುವ ರಾಷ್ಟ್ರಗಳಲ್ಲಿ ಭಾರತಕ್ಕೀಗ ೨ನೇ ಸ್ಥಾನ ಲಭ್ಯವಾಗಿದೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಾತ್ರ ಹಿರಿದು. ೨೦೧೪ರಲ್ಲಿ ನಮ್ಮಲ್ಲಿದ್ದ ತಂತ್ರಜ್ಞಾನದಡಿ ಒಂದು ದಿನಕ್ಕೆ ೧೨ ಕಿ.ಮೀ.ನಷ್ಟು ರಸ್ತೆಯನ್ನು ನಿರ್ಮಿಸಲು ಸಾಧ್ಯವಾಗುತ್ತಿತ್ತು. ಆದರೀಗ ನಮ್ಮಲ್ಲಿರುವ ತಾಂತ್ರಿಕ ಕೌಶಲ ಮತ್ತು ತಂತ್ರಜ್ಞಾನದ ಸಹಾಯದಿಂದ ದಿನಕ್ಕೆ ೨೯ ಕಿ.ಮೀ.ನಷ್ಟು ರಸ್ತೆಯನ್ನು ನಿರ್ಮಿಸುವ ಸಾಮರ್ಥ್ಯ ವೃದ್ಧಿಗೊಂಡಿದೆ.
ರಸ್ತೆಗಳು, ರೈಲು, ರೈಲ್ವೆಗಳು, ಬಂದರುಗಳು ಮತ್ತು ಸೇತುವೆಗಳನ್ನು ನಿರ್ಮಿಸಿ ಸರಕುಗಳನ್ನು ಭಾರತದಾದ್ಯಂತ ವೇಗವಾಗಿ ಮುಟ್ಟಿಸುವ ಮೂಲಕ ಭಾರತದ ವ್ಯಾಪಾರವನ್ನು ಹೆಚ್ಚಿಸುವ ಕ್ರಾಂತಿಕಾರಕ ‘ಲಾಜಿಸ್ಟಿಕ್ಸ್’ ನೀತಿಯನ್ನು ಜಾರಿಗೊಳಿಸಲಾಗಿದೆ.
ಮೋದಿಯವರ ಜನಪರ ಯೋಜನೆಗಳು
ದೇಶದ ಆರ್ಥಿಕ ಅಭಿವೃದ್ಧಿಯ ಅನೇಕ ನೂತನ ಉಪಕ್ರಮಗಳಲ್ಲದೆ, ಮೋದಿ ಸರ್ಕಾರವು ಹಿಂದೆAದೂ ಕಾಣದ ಅನೇಕ ಜನಪರ ಕಾಳಜಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿ ಭಾರತೀಯನಿಗೂ ಜೀವ ವಿಮೆಯನ್ನು ಒದಗಿಸುವ ಜೀವನ ಜ್ಯೋತಿ ಭೀಮಾ ಯೋಜನೆ; ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವ ಉದ್ದೇಶ ಹೊತ್ತ ಅಟಲ್ ಪಿಂಚಣಿ ಯೋಜನೆ; ಬಡ ಕುಟುಂಬಗಳಿಗೆ ಆರೋಗ್ಯ ವಿಮೆ ಭರವಸೆಯ ಆಯುಷ್ಮಾನ್ ಭಾರತ್; ಅಪಘಾತ ವಿಮಾ ಸೌಲಭ್ಯದ ಸುರಕ್ಷಾ ಭೀಮಾ ಯೋಜನೆ; ಅಲ್ಲದೆ ಹೆಣ್ಣು ಮಗುವಿನ ಭವಿಷ್ಯದ ಭದ್ರತೆ, ಶಿಕ್ಷಣ ಮತ್ತು ಮದುವೆಯ ಸಹಾಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ – ಇವು ಸಾಮಾನ್ಯ ಪ್ರಜೆಗಳನ್ನು ಮುಟ್ಟತೊಡಗಿವೆ.
೮೦ ಕೋಟಿ ಬಡಜನರಿಗೆ ಆಹಾರಧಾನ್ಯ ವಿತರಿಸಲು ಜಾರಿಯಾದ ಪಿಎಂ ಗರೀಬ್ ಕಲ್ಯಾಣ ಯೋಜನೆ; ದೇಶದ ಪ್ರತಿಯೊಬ್ಬರಿಗೂ ಮನೆ ದೊರಕಬೇಕೆನ್ನುವ ಉದ್ದೇಶದ ಗೃಹ ನಿರ್ಮಾಣ ಯೋಜನೆ (ಅವಾಸ್ ಯೋಜನೆ); ಬಡವರಿಗೆ ಎಲ್ಪಿಜಿ ಸಿಲಿಂಡರ್ ವ್ಯವಸ್ಥೆಯ ಪ್ರಧಾನಮಂತ್ರಿ ಉಜ್ವಲ ಯೋಜನೆ; ಮಹಿಳಾ ಸಶಕ್ತೀಕರಣ ಯೋಜನೆ, ರೈತಪರವಾದ ಅನೇಕ ಯೋಜನೆಗಳೂ ಸಹ ಜನಪ್ರೀತಿ ಗಳಿಸಿವೆ.
ತುರ್ತು ಔಷಧಿಗಳು ಮತ್ತು ಅತ್ಯಾವಶ್ಯಕ ಔಷಧಿಗಳು ಜನರ ಕೈಗೆಟಕುವ ಬೆಲೆಯಲ್ಲಿ ಸಿಗುವಂತೆ ಮಾಡಲು ದೇಶದಾದ್ಯಂತ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಮನೆಗೂ ನೀರು ನೀಡುವ ಯೋಜನೆಯನ್ನು ಕೇಂದ್ರಸರ್ಕಾರವು ‘ಜಲಜೀವನ್ ಮಿಷನ್’ ಪರಿಕಲ್ಪನೆಯಡಿ ಜಾರಿಗೆ ತಂದಿದೆ. ಅದೇ ರೀತಿ ‘ಸ್ವಚ್ಛ ಭಾರತ್’ ಯೋಜನೆಯಿಂದ ೧೧.೫ ಕೋಟಿ ಶೌಚಾಲಯಗಳ ನಿರ್ಮಾಣ ವಿಶ್ವದಾಖಲೆಯೆನಿಸಿದೆ.
ಇತರ ಸುಧಾರಣಾ ಕ್ರಮಗಳು
ದೇಶದ ರೈಲ್ವೆ ಸಾರಿಗೆಯನ್ನು ಉನ್ನತ ಮಟ್ಟಕ್ಕೇರಿಸಿದ್ದು ಮೋದಿ ಸರ್ಕಾರದ ಮತ್ತೊಂದು ಸಾಧನೆ. ಇಡೀ ದೇಶದಲ್ಲಿ ರೈಲುಗಳ ಸಂಖ್ಯೆಯನ್ನು ಹೆಚ್ಚು ಮಾಡಿದ್ದಲ್ಲದೆ, ವಂದೇ ಭಾರತ್ನಂಥ ರೈಲುಗಳ ಸೌಕರ್ಯವನ್ನು ಕಲ್ಪಿಸಿ ತ್ವರಿತ ಪ್ರಯಾಣವನ್ನು ಸುಗಮಗೊಳಿಸಲಾಗಿದೆ. ಇದಲ್ಲದೆ ರೈಲ್ವೆ ಆಧಾರಿತ ‘ವಿಸ್ತಾ ಡೂಮ್’ ರೈಲುಗಳನ್ನು ಪರಿಚಯಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ. ಇದೇ ವೇಳೆ, ರೈಲು ಸಾರಿಗೆಯ ಖರ್ಚು-ವೆಚ್ಚಗಳನ್ನು ತಗ್ಗಿಸಲು ಹಾಗೂ ಅವುಗಳಿಂದಾಗುವ ಪರಿಸರ ಮಾಲಿನ್ಯವನ್ನು ತಪ್ಪಿಸಲು ಇಡೀ ರೈಲು ಜಾಲವನ್ನು ವಿದ್ಯುದೀಕರಣಗೊಳಿಸಿರುವುದು ಮೋದಿ ಸರ್ಕಾರದ ಮತ್ತೊಂದು ಸಾಧನೆ. ‘ಡೈಮಂಡ್ ಕ್ವಾಡ್ರಿಲ್ಯಾಟರಲ್ ರೈಲು ಕಾರಿಡಾರ್’ ಯೋಜನೆಯ ಜಾರಿಯಿಂದ ಪ್ರಮುಖ ನಗರಗಳ ಸಂಪರ್ಕ ಕಾರ್ಯ ವೇಗಗೊಂಡಿದೆ.
ಮೋದಿ ಸರ್ಕಾರದ ಪ್ರಾಥಮಿಕ ಗಮನವು ಉತ್ಪಾದನೆ ಮತ್ತು ರಫ್ತು ವಲಯದಲ್ಲಿ ಪ್ರಮುಖ ಸುಧಾರಣೆಗಳನ್ನು ತಂದು ಆ ಮೂಲಕ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಗುರಿಹೊಂದಿದೆ. ಈ ನಿಟ್ಟಿನಲ್ಲಿ ರೈಲ್ವೇ, ವಿಮೆ ಮತ್ತು ರಕ್ಷಣೆಯಲ್ಲಿ ಎಫ್ಡಿಐ ಮಿತಿಗಳನ್ನು ಸರ್ಕಾರ ಹೆಚ್ಚಿಸಿತು. ಅದೇ ರೀತಿಯಲ್ಲಿ ನಷ್ಟದಲ್ಲಿರುವ ಸಾರ್ವಜನಿಕ ವಲಯದ ಕಂಪೆನಿಗಳ ಖಾಸಗೀಕರಣಕ್ಕೆ ಒತ್ತು ನೀಡಿತು.
ಎರಡು ಯೋಜನೆಗಳಾದ ೧೦೦ ಸ್ಮಾರ್ಟ್ಸಿಟಿಗಳು ಮತ್ತು ಸ್ವಚ್ಛ ಗಂಗಾ ಪ್ರಕ್ರಿಯೆ ಕಾರ್ಯರೂಪಕ್ಕಿಳಿದಿದ್ದು ಅವುಗಳು ಬಹುತೇಕ ಯಶಸ್ವಿಯಾಗಿವೆ.
ಭವಿಷ್ಯದ ಭಾರತ
ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರö್ಯ ಪಡೆದು ೭೬ ವರ್ಷಗಳನ್ನು ಪೂರೈಸಿದ ಭಾರತದ ಪ್ರಗತಿ ಪಥದ ಬಗೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನು ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ವಿಶ್ವದ ಅಗ್ರ ಮೂರರಲ್ಲಿ ಸ್ಥಾನ ಪಡೆಯಲಿದೆ ಎನ್ನುವ ಭರವಸೆ ಹೊಂದಿದ್ದಾರೆ.
೨೦೩೦ರ ವೇಳೆಗೆ ಭಾರತದ ಆರ್ಥಿಕತೆಯು ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಲಿದೆ ಎಂದು ‘ಎಸ್ಪಿ ಗ್ಲೋಬಲ್ ಮತ್ತು ಮಾರ್ಗನ್ ಸ್ಟ್ಯಾನ್ಲಿ’ ವರದಿಯು ಇತ್ತೀಚೆಗಷ್ಟೇ ತಿಳಿಸಿದೆ. ೭.೨% ಜಿಡಿಪಿ ಬೆಳವಣಿಗೆಯೊಂದಿಗೆ, ೨೦೨೭ರ ಸಮಯಕ್ಕೆ ಭಾರತವು ಅತಿದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆಯಿದೆ. ಸರ್ಕಾರವು ಬೆಳವಣಿಗೆ ಮತ್ತು ಹಣದುಬ್ಬರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದೆ, ಹಣದುಬ್ಬರ ದರಗಳನ್ನು ಶೇ. ೪.೬೫ರ ಮಿತಿಯಲ್ಲಿರಿಸಿದೆ.
ಜಿಡಿಪಿ ಬೆಳವಣಿಗೆಯ ದೃಷ್ಟಿಯಲ್ಲಿ ೨೦೧೪ರಿಂದೀಚೆಗೆ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ವಿಶ್ವದ ೨೦ ದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತವು ಸ್ಥಾನ ಪಡೆದಿದ್ದು, ಸ್ವಾತಂತ್ರ್ಯಾನಂತರದಲ್ಲಿ ಈ ಸಾಧನೆ ಮೊದಲ ಬಾರಿಯಾಗಿದೆ.
ಭಾರತದ ಆರ್ಥಿಕ ಬೆಳವಣಿಗೆ ೨೦೨೪-೨೫ರ ಸಮಯಕ್ಕೆ ನಾಲ್ಕು ಟ್ರಿಲಿಯನ್ ಡಾಲರ್ ದಾಟಲಿದೆ ಮತ್ತು ಜಿಡಿಪಿ ೨೮೦೦ ಡಾಲರ್ ಅನ್ನು ಮೀರಿ ಬೆಳೆಯಲಿದೆ ಎಂದು ಪಿಎಚ್ಡಿ ರಿಸರ್ಚ್ ಬ್ಯುರೋ, ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ವಿಶ್ಲೇಷಣೆ ಮಾಡಿದೆ. ಆರ್ಥಿಕ ಚಟುವಟಿಕೆಯ ವೇಗವು ವಿವಿಧ ರಚನಾತ್ಮಕ ಯೊಜನೆಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಮತ್ತಷ್ಟು ಬಲವಾಗಿ ಬೆಳೆಯುವ ನಿರೀಕ್ಷೆಯಿದೆ
ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಂತಹ ಸಂಸ್ಥೆಗಳ ಅಭಿಪ್ರಾಯದಲ್ಲಿ ಭಾರತವು ಪ್ರಸ್ತುತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಕೋವಿಡ್ ಸಮಯದ ಆರ್ಥಿಕ ಹೊಡೆತದ ಹೊರತಾಗಿಯೂ ದೇಶದಲ್ಲಿ ಏರುತ್ತಿರುವ ಜಿಎಸ್ಟಿ ಸಂಗ್ರಹ, ಬಂಡವಾಳ ವೆಚ್ಚದ ಹೆಚ್ಚಳ ಮತ್ತು ರಫ್ತು ಮಾರುಕಟ್ಟೆಯ ಅಭೂತಪೂರ್ವ ಚೇತರಿಕೆಯು ಧನಾತ್ಮಕ ಆರ್ಥಿಕ ಬೆಳವಣಿಗೆಯ ಸೂಚನೆ ಎಂದು ಅವುಗಳ ಅಭಿಪ್ರಾಯವಾಗಿದೆ.
ಸಾಮಾಜಿಕ ಪರಿಭಾಷೆಯಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ಫಲವು ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಳ್ಳುವ ಮತ್ತು ಅದರ ಪ್ರಯೋಜನಗಳನ್ನು ನ್ಯಾಯಯುತವಾಗಿ ವಿತರಿಸಲಾಗುವ ಪ್ರಕ್ರಿಯೆಯಾಗಿದೆ. ಮೋದಿಯವರ ಕಳೆದ ಒಂಭತ್ತು ವರ್ಷಗಳ ಆಡಳಿತದಲ್ಲಿ ಅಂತಹ ಆರೋಗ್ಯಕರ ಬೆಳವಣಿಗೆ ಕಂಡಿದ್ದು, ಮುಂಬರುವ ವರ್ಷಗಳಲ್ಲಿ ದೇಶವು ಮತ್ತಷ್ಟು ಉತ್ಕರ್ಷದ ಹಾದಿಯಲ್ಲಿ ಪಯಣಿಸಲಿ ಎಂಬುದು ಪ್ರತಿ ಭಾರತೀಯನ ಆಶಯ ಮತ್ತು ಹಾರೈಕೆಯಾಗಿದೆ.