ಎರಡೂ ಕಡೆಯವರು ಸುಮಾರು ಎರಡು ತಾಸು ಇದೇ ರೀತಿ ಗುಂಡು ಹಾರಿಸುತ್ತಲೇ ಇದ್ದರು. ಕ್ಲೈವ್ ಸೇನೆಗೆ ಪರಿಸ್ಥಿತಿ ಕಷ್ಟಕರವಾಗಿಯೇ ಇತ್ತು. ಆದರೆ ಸಂಜೆ ೪ ಗಂಟೆಯ ಹೊತ್ತಿಗೆ ಈ ಮೊದಲು ನಿಷ್ಕಿçಯವಾಗಿದ್ದ ಒಂದಷ್ಟು ಸೈನ್ಯ ರಣರಂಗದಿಂದ ದೂರ ಹೋಗುತ್ತಿತ್ತು; ಹೋಗುವುದು ನವಾಬನ ಸೈನ್ಯದ ಜೊತೆಗಲ್ಲ. ಆಗ ಕ್ಲೈವ್ಗೆ ಪಿತೂರಿಗಾರ ಮೀರ್ಜಾಫರ್ ಹೇಳಿದ ಮಾತು ಸತ್ಯವೆಂದು ಗಮನಕ್ಕೆ ಬಂತು; ತಾವು ಸಿರಾಜ್ ಪರವಾಗಿ ಯುದ್ಧಕ್ಕೆ ಇಳಿಯುವುದಿಲ್ಲವೆಂದು ಮೀರ್ಜಾಫರ್ ಮತ್ತಿತರರು ಹೇಳಿದ್ದರು. ಆಗ ಚುರುಕಾದ ಕರ್ನಲ್ ಕ್ಲೈವ್ ನೇರವಾಗಿ ಶತ್ರುಸೈನ್ಯದ ಮಧ್ಯಕ್ಕೆ ಮುನ್ನುಗ್ಗಲು ನಿರ್ಧರಿಸಿದ. ಐರೋಪ್ಯರು ಮತ್ತು ಭಾರತೀಯ ಸಿಪಾಯಿಗಳನ್ನು ಒಳಗೊಂಡ ಒಂದು ಸೇನಾವಿಭಾಗಕ್ಕೆ ಫ್ರೆಂಚ್ಪಡೆಯ ಮೇಲೆ ದಾಳಿ ನಡೆಸಲು ಹೇಳಿದ. ಅಂಥದೇ ಇನ್ನೊಂದು ವಿಭಾಗವನ್ನು ಪೂರ್ವದ ಗುಡ್ಡದ ಕಡೆಗೆ ಕಳುಹಿಸಿದ. ಅಲ್ಲೊಂದು ಹೊಂಚುದಾಳಿ (ambush) ನಡೆಯಬಹುದೆಂದು ಆತನ ನಿರೀಕ್ಷೆಯಿತ್ತು. ಸೈನ್ಯದ ಪ್ರಮುಖ ಭಾಗ ಮಧ್ಯದಲ್ಲಿದ್ದು ಆಚೀಚಿನವರಿಗೆ ನೆರವಾಗಲು ಸಿದ್ಧವಾಗಿತ್ತು.
ಅಂದು ಜೂನ್ ೨೩, ೧೭೫೭. ನವಾಬ ಸಿರಾಜುದ್ದೌಲ ಮತ್ತು ಬ್ರಿಟಿಷರ ಸೈನ್ಯಗಳು ಪ್ಲಾಸಿಯ ಮಾವಿನತೋಪಿನ ಬಳಿ ಯುದ್ಧ ಸನ್ನದ್ಧವಾಗಿ ಕುಳಿತಿದ್ದವು. ಯಾವುದೇ ಕ್ಷಣದಲ್ಲಿ ಯುದ್ಧದ ಕಿಡಿ ಸ್ಫೋಟಗೊಳ್ಳಬಹುದಿತ್ತು. ಬೆಳಗ್ಗೆ ೭ ಗಂಟೆಯ ಹೊತ್ತಿಗೆ ನವಾಬನ ಸೇನೆ ಮಾವಿನತೋಟದಲ್ಲಿದ್ದ ಬ್ರಿಟಿಷ್ ಸೈನ್ಯವನ್ನು ಸುತ್ತುವರಿಯುವ ಉದ್ದೇಶದಿಂದ ಆ ಕಡೆಗೆ ಹೋಯಿತು; ಬ್ರಿಟಿಷ್ ಸೈನ್ಯದ ಉತ್ತರ, ಈಶಾನ್ಯ ಮತ್ತು ಆಗ್ನೇಯ ಭಾಗಗಳಲ್ಲಿ ಬಂತು. ಇದು ಬ್ರಿಟಿಷ್ ಸೈನ್ಯದ ನಾಯಕ ಕರ್ನಲ್ ರಾಬರ್ಟ್ ಕ್ಲೈವ್ ಎಣಿಸಿದ್ದಕ್ಕಿಂತ ಜಾಸ್ತಿ ಭಯಹುಟ್ಟಿಸುವ ಸ್ಥಿತಿಯಲ್ಲಿತ್ತು.
ಕ್ಲೈವ್ ಹೂಗ್ಲಿ-ಭಾಗೀರಥಿ ನದಿಗಳ ಪ್ರದೇಶಗಳ ಜನರಲ್ಲಿ ನವಾಬನ ಸೈನ್ಯದ ಬಲಾಬಲಗಳ ಬಗ್ಗೆ ವಿಚಾರಿಸಿದ್ದ. ಆ ಸೈನ್ಯದಲ್ಲಿ ಸುಮಾರು ೫೦ ಸಾವಿರ ಕಾಲಾಳುಗಳು, ೧೮ ಸಾವಿರ ಕುದುರೆಪಡೆಯ ಯೋಧರು ಮತ್ತು ೫೦ ಫಿರಂಗಿಗಳು ಇದ್ದಾವೆಂದು ಜನ ಹೇಳಿದ್ದರು. ಅದರಿಂದ ಬ್ರಿಟಿಷ್ ಸೈನ್ಯ ಧೂಳೀಪಟವೇ ಆಗಬಹುದು ಎಂಬಂತಿತ್ತು. ಬ್ರಿಟಿಷ್ ಸೈನ್ಯದ ಪಶ್ಚಿಮದಲ್ಲಿ, ಅಂದರೆ ಮಾವಿನತೋಪಿನ ಸುತ್ತ ಗಂಗಾನದಿ ಇತ್ತು. ದಕ್ಷಿಣದಲ್ಲಿ ಗದ್ದೆಗಳು, ತೋಟಗಳು. ಈಶಾನ್ಯದಲ್ಲಿ ಅರ್ಧಚಂದ್ರಾಕಾರದಲ್ಲಿ ದೊಡ್ಡದಾದ ಕೆರೆ ಮತ್ತು ಸ್ವಲ್ಪ ದೂರದಲ್ಲಿ ಗುಡ್ಡ ಇದ್ದವು. ದೊಡ್ಡದಾದ ಬಯಲು ಸುಮಾರು ೫ ಕಿ.ಮೀ. ವರೆಗೆ ಹಬ್ಬಿತ್ತು. ಮಾವಿನತೋಟದ ಆಗ್ನೇಯದಲ್ಲಿ ನವಾಬನ ಸೈನ್ಯದ ಭಾಗವಾಗಿದ್ದರೂ ಪ್ರತ್ಯೇಕವಾದಂತಿದ್ದ ಪಿತೂರಿಗಾರರಾದ ಮೀರ್ಜಾಫರ್, ರಾ ದುರ್ಲಭ್ ಮತ್ತು ಯಾರ್ ಲತೀಫ್ಖಾನ್ ಅವರ ಕೆಳಗಿನ ಸೇನಾವಿಭಾಗಗಳಿದ್ದವು. ಈ ಮೂವರು ಜನರಲ್ಗಳ ಪಡೆಗಳ ಮಧ್ಯೆ ಅಲ್ಲಲ್ಲಿ ರೈಫಲ್ ಪಡೆಗಳಿದ್ದವು. ಈ ಮೂವರು ಕ್ಲೈವ್ ಜೊತೆ ಪಿತೂರಿಗಾರರೆಂದು ಗುರುತಿಸಿಕೊಂಡಿದ್ದರೂ ಕೂಡ ಅವರನ್ನು ಪೂರ್ತಿಯಾಗಿ ನಂಬುವಂತಿರಲಿಲ್ಲ; ಅಂದರೆ ಆ ಭಾಗದ ಯುದ್ಧದ ಹೊಣೆಯನ್ನು ಅವರಿಗೆ ವಹಿಸುವಂತಿರಲಿಲ್ಲ. ಅದೇ ಕ್ಲೈವ್ಗಿದ್ದ ಸಂದೇಹ, ತೊಂದರೆ.
ಸಿರಾಜ್ನ ಸೇನೆಯ ಉಳಿದ ಭಾಗ ಮಾವಿನತೋಟದ ಉತ್ತರದಲ್ಲಿ ನಂಬಿಕಸ್ತನಾದ ಮೀರ್ ಮದನ್ ಮತ್ತು ದಿವಾನ ಮೋಹನಲಾಲ್ ಅಳಿಯನ (ಮಗಳ ಗಂಡ) ಕೆಳಗಿದ್ದು ಅಲ್ಲಿ ಸುಮಾರು ೭೦೦೦ ಕಾಲಾಳುಗಳು ಮತ್ತು ೫೦೦೦ ಅಶ್ವಪಡೆ ಯೋಧರಿದ್ದರು. ಕಾಲಾಳುಗಳ ಬಳಿ ಖಡ್ಗ, ಬಿಲ್ಲು-ಬಾಣ, ರಾಕೆಟ್, ಬಂದೂಕುಗಳಿದ್ದವು. ಕುದುರೆಗಳು, ಅವುಗಳ ಸವಾರರು ಗಟ್ಟಿಮುಟ್ಟಾಗಿದ್ದರು. ಇವರೆಲ್ಲ ದಕ್ಷಿಣಭಾರತದ ಕೋರಮಾಂಡಲದವರಿಗೆ ಹೋಲಿಸಿದರೆ ತುಂಬ ಬಲಶಾಲಿಗಳು.
ಕಾಣದ ಯುದ್ಧೋತ್ಸಾಹ
ಅಷ್ಟಿದ್ದರೂ ನವಾಬನ ಸೈನಿಕರಲ್ಲಿ ಯುದ್ಧೋತ್ಸಾಹವು ಅಷ್ಟಾಗಿ ಇರಲಿಲ್ಲವಂತೆ. ಏಕೆಂದರೆ ಅವರಿಗೆ ಯುದ್ಧದ ಅನಂತರ ಲೂಟಿ ಸಿಗುವ ನಿರೀಕ್ಷೆ ಇರಲಿಲ್ಲ; ಮತ್ತು ಸಂಬಳವೇ ಬಾಕಿಯಿತ್ತು. ಅದರಿಂದ ಅವರು ರಾಜಧಾನಿ ಮುರ್ಷಿದಾಬಾದ್ ಬಿಟ್ಟು ಬರುವುದಕ್ಕೇ ಸಿದ್ಧರಿರಲಿಲ್ಲ ಎನ್ನುವ ಅಭಿಪ್ರಾಯ ಕೂಡ ಇದೆ. ಆದರೆ ಕ್ಲೈವ್ ಪಡೆಯ ಸೈನಿಕರು ದೃಢವಾಗಿದ್ದರು; ಅವರು ಯಾರಿಗೂ ಮಾರಾಟವಾಗಿರಲಿಲ್ಲ ಎನ್ನಲಾಗಿದೆ.
ಈ ಸೈನ್ಯದ ಮುಂಭಾಗದಲ್ಲಿ ಎರಡೂವರೆ ಟನ್ನಿಗೂ ಅಧಿಕ ತೂಕದ ಬೃಹತ್ ಫಿರಂಗಿಗಳಿದ್ದವು. ದೊಡ್ಡ ಚಕ್ರಗಳ ಮೇಲೆ ಆರಡಿ ಎತ್ತರದ ವೇದಿಕೆಯಲ್ಲಿ ಅವನ್ನು ಇರಿಸಿದ್ದು, ಗುಂಡು, ಗನ್ಪೌಡರ್ ಮತ್ತಿತರ ಅದರ ಸಲಕರಣೆಗಳು ಅಲ್ಲೇ ಇದ್ದವು. ೪೦-೫೦ ದೊಡ್ಡ ಬಿಳಿ ಎತ್ತುಗಳು ಅವುಗಳನ್ನು ಎಳೆಯುತ್ತವೆ. ವೇದಿಕೆಯ (ಪ್ಲಾಟ್ಫಾರ್ಮ್) ಹಿಂಭಾಗದಲ್ಲಿ ಒಂದು ಆನೆ ಇರುತ್ತದೆ. ವೇದಿಕೆಗೆ ಮುಂದೆ ಸಾಗಲು ಕಷ್ಟವಾದರೆ ಅಥವಾ ಸಿಕ್ಕಿಬಿದ್ದರೆ ತಳ್ಳಿ ಸರಿಪಡಿಸುವುದು ಈ ಆನೆಯ ಕೆಲಸ. ಕಾಲಾಳು ಮತ್ತು ಅಶ್ವಪಡೆ ಪ್ರತ್ಯೇಕವಾಗಿಯೂ ಹೋಗಬಹುದು ಅಥವಾ ಒಟ್ಟಾಗಿಯೂ ಚಲಿಸಬಹುದು. ಇದರೊಂದಿಗೆ ಫಿರಂಗಿ ಇತ್ಯಾದಿ ಚಾಲನೆಗೆ ಸುಮಾರು ೪೦ ಜನ ಫ್ರೆಂಚ್ ಯೋಧರಿದ್ದರು. ಚಂದ್ರನಗರ (ಚಂದ್ರನಾಗೋರ್) ಬ್ರಿಟಿಷರ ವಶವಾಗುವ ವೇಳೆ ತಪ್ಪಿಸಿಕೊಂಡ ಅವರು ನವಾಬನ ಸೇನೆಗೆ ಸೇರಿದ್ದರು. ಈಗ ಇವರು ಮೀರ್ ಮದನ್ ಸೇನಾಘಟಕದಲ್ಲಿ ಮುಂಭಾಗದ ಫಿರಂಗಿಪಡೆಯಲ್ಲಿದ್ದರು. ಬ್ರಿಟಿಷ್ ಸೈನ್ಯ ಸುಮಾರು ಇನ್ನೂರು ಗಜ ದೂರದಲ್ಲಿತ್ತು.
ರಾಬರ್ಟ್ ಕ್ಲೈವ್ ಬ್ರಿಟಿಷ್ ಸೈನ್ಯವನ್ನು ಸಜ್ಜಾಗಿ ನಿಲ್ಲಿಸಿ, ತನ್ನ ‘ಹಂಟಿಂಗ್ ಹೌಸ್’ ಮೇಲಿನಿಂದ ಎಲ್ಲವನ್ನೂ ಗಮನಿಸುತ್ತಿದ್ದ. ದೊಡ್ಡ ಸಂಖ್ಯೆಯಲ್ಲಿದ್ದ ಶತ್ರುಸೈನ್ಯವನ್ನು ಕಂಡು ಆತನಿಗೆ ಆಶ್ಚರ್ಯವೂ ಭಯವೂ ಆಯಿತು. ತನ್ನ ಸೈನ್ಯ ಇನ್ನೂ ತೋಟದ ಒಳಗೇ ಇದ್ದರೆ ಶತ್ರುಗಳ ಧೈರ್ಯ, ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಆತನಿಗೆ ಅನ್ನಿಸಿತು. ಅದಕ್ಕಾಗಿ ಸೇನೆಯ ಒಂದು ಭಾಗವನ್ನು ಹಂಟಿಂಗ್ ಹೌಸ್ನ ಎದುರು ಫ್ರೆಂಚರ ಫಿರಂಗಿ ಪಡೆಗೆ ಎದುರಾಗಿ ನಿಲ್ಲಿಸಿದ. ಉಳಿದಂತೆ ಬ್ರಿಟಿಷ್ ಸೈನ್ಯ ಮಾವಿನತೋಪಿನ ಆಚೆಗೆ ಪ್ಲಾಸಿಯ ದೊಡ್ಡ ಬಯಲಿಗೆ ವಿಸ್ತರಿಸಿತು. ಅದರ ಎರಡು ಕೊನೆಗಳಲ್ಲಿ ತಲಾ ಮೂರು ಫಿರಂಗಿಗಳು ಮತ್ತು ಒಂದಷ್ಟು ಸಿಪಾಯಿಗಳು (ಭಾರತೀಯ ಸೈನಿಕರು) ಇದ್ದರು. ಕ್ಲೈವ್ ಹಂಟಿಂಗ್ ಹೌಸ್ನ ಮೇಲಿನಿಂದ ಎಲ್ಲವನ್ನೂ ನೋಡುತ್ತಿದ್ದರೆ, ಸಿರಾಜ್ ತನ್ನ ಸೇನಾವ್ಯೂಹದ ಹಿಂಭಾಗದಲ್ಲಿ ತನ್ನ ಟೆಂಟ್ನ ಒಳಗಿದ್ದ. ಸುತ್ತ ಅವನ ರಕ್ಷಣೆಗಾಗಿ ಒಂದು ಸೇನಾ ವಿಭಾಗವೂ ಇತ್ತು.
ಮಾಡು ಇಲ್ಲವೆ ಮಡಿ
ಫೋರ್ಟ್ ವಿಲಿಯಮ್ನಲ್ಲಿ ಸಭೆ ಸೇರಿದ ಸೆಲೆಕ್ಟ್ ಕಮಿಟಿ ಈ ಯುದ್ಧ ಕ್ಲೈವ್ ಮತ್ತು ಬಳಗದವರಿಗೆ ‘ಈಗ ಅಥವಾ ಎಂದಿಗೂ ಇಲ್ಲ’ (ಮಾಡು ಇಲ್ಲವೆ ಮಡಿ) ಎಂದು ತೀರ್ಮಾನಿಸಿತು. ಸೆಲೆಕ್ಟ್ ಕಮಿಟಿಗೆ ಆತ ಬರೆದ ಪತ್ರದಲ್ಲಿ ತನ್ನ ಅದೇ ನಿಲವನ್ನು ತಿಳಿಸಿದ್ದ. ಕೆಲವು ಸಮಯದ ಹಿಂದೆ ಬರೆದ ಮೂರು ಪತ್ರಗಳಲ್ಲಿ ಕ್ಲೈವ್, ವಿಷಯಗಳು ವೇಗವಾಗಿ ಚಲಿಸುತ್ತಿವೆ ಎಂದು ತಿಳಿಸಿದ್ದ. ಒಂದು ಪತ್ರದಲ್ಲಿ ಮುರ್ಷಿದಾಬಾದನ್ನು ವಶಪಡಿಸಿಕೊಳ್ಳಬೇಕಿದ್ದರೆ ಕಟ್ವಾ ಕೋಟೆಯನ್ನು ಗೆದ್ದರೆ ಉತ್ತಮ ಎಂದು ತಿಳಿಸಿದ. ಅದೇ ಜೂನ್ ೧೯ರ ಪತ್ರದಲ್ಲಿ ಕಟ್ವಾ ಕೋಟೆ ಮತ್ತು ಪಟ್ಟಣವನ್ನು ವಶಪಡಿಸಿಕೊಳ್ಳುವ ಸಲುವಾಗಿ ಸೈನ್ಯವನ್ನು (೨೦೦ ಐರೋಪ್ಯ ಸೈನಿಕರು, ೫೦೦ ಸಿಪಾಯಿಗಳು) ಕಳುಹಿಸಿದ್ದಾಗಿ ತಿಳಿಸಿದ್ದ; ಮರುದಿನ – ಸೆಲೆಕ್ಟ್ ಕಮಿಟಿಗೆ ಬರೆದ ಪತ್ರದಲ್ಲಿ ಕಟ್ವಾ ಬ್ರಿಟಿಷರ ವಶವಾಗಿದೆ ಎಂದಿದ್ದ.
ಕರ್ನಲ್ ಕ್ಲೈವ್ನ ಈ ಮೂರು ಪತ್ರಗಳನ್ನು ಗಮನಿಸಿ ಸೆಲೆಕ್ಟ್ ಕಮಿಟಿ ನೇರವಾಗಿ ಯುದ್ಧದ ವಿಷಯವನ್ನು ಎತ್ತಿಕೊಂಡಿತು. ಅಲ್ಲಿದ್ದ ಪಿತೂರಿಗಳನ್ನು ಪರಿಶೀಲಿಸಿತು; ಮೀರ್ಜಾಫರ್ ಕಂಪೆನಿಗೆ ನಿಜವಾಗಿಯೂ ವಿಧೇಯನಾಗಿದ್ದಾನೆ ಎಂಬ ಅಂಶವನ್ನು ಗುರುತಿಸಿತು. ನವಾಬ ಮುರ್ಷಿದಾಬಾದ್ನಿಂದ ಹೊರಟಿದ್ದಾನೆ ಎಂಬ ಅಂಶ ಗಮನಕ್ಕೆ ಬಂದ ಮೇಲೆ, ಮೀರ್ಜಾಫರ್ನ ಪಿತೂರಿ ನಮಗೆ ಯಾವ ರೀತಿಯಲ್ಲಿ ಅನುಕೂಲಕರವಾಗಿದೆ, ಅದರಿಂದ ಎಷ್ಟು ಲಾಭ ಇತ್ಯಾದಿ ಅಂಶಗಳನ್ನು ಕಮಿಟಿ ಪ್ರಸ್ತಾವಿಸಿತು. ಏನಿದ್ದರೂ ಈ ಎಲ್ಲ ಅಂಶಗಳಿಗಿಂತ ಶೀಘ್ರ ಕ್ರಮ ಆಗಬೇಕೆಂಬುದೇ ಮುಖ್ಯವಾಯಿತು. ಮೀರ್ಜಾಫರ್ನಿಂದ ಮತ್ತೇನೂ ವಿಷಯ ಬಾರದಿದ್ದರೂ “ನವಾಬನ ಜೊತೆ ಮತ್ತೆ ಒಪ್ಪಂದ ಬೇಕಾಗಿಲ್ಲ; ನಮ್ಮ ವ್ಯವಹಾರವನ್ನು ನಿರ್ಣಯಾತ್ಮಕವಾಗಿ ಮುನ್ನಡೆಸಬೇಕು. ತಡ ಮಾಡಿದರೆ ಅದು ನಮ್ಮ ವ್ಯವಹಾರಕ್ಕೆ ಮಾರಣಾಂತಿಕವಾದೀತು. ನಮ್ಮ ಪಡೆಯ ಸೈನಿಕರ ಸಂಖ್ಯೆ ಇಳಿಯಬಹುದು. ನವಾಬ ಎಲ್ಲ ಕಡೆಯಿಂದ ಸೇರಿಸಿ ಸಂಖ್ಯೆಯನ್ನು ಬೆಳೆಸಬಹುದು” ಎಂದು ಅಭಿಪ್ರಾಯಪಟ್ಟ ಸೆಲೆಕ್ಟ್ ಕಮಿಟಿ, ಯುದ್ಧಕ್ಕೆ ಇಳಿಯಲು ಒಪ್ಪಿಗೆ ನೀಡಿತು; ಜೊತೆಗೆ ಪಿತೂರಿಗಾರರು ನಮ್ಮ ಕಡೆ ಇರುವಂತೆ ಎಚ್ಚರ ವಹಿಸಿ ಎಂಬ ಸಲಹೆಯನ್ನೂ ನೀಡಿತು.
ಮೊದಲ ಗುಂಡು
ಬೆಳಗ್ಗೆ ೮ ಗಂಟೆಗೆ (ಜೂನ್ ೨೩) ಮೊದಲ ಗುಂಡು ಹಾರಿತು; ನವಾಬನ ಸೈನಿಕರ ಆ ಗುಂಡಿಗೆ ಬ್ರಿಟಿಷ್ ಸೇನೆಯ ಒಬ್ಬ ಸತ್ತು ಇನ್ನೊಬ್ಬನಿಗೆ ಗಾಯವಾಯಿತು. ಆಗ ಬ್ರಿಟಿಷ್ ಸೈನ್ಯದ ಒಂದು ಭಾಗ ತೋಟದ ಮುಂಭಾಗದಲ್ಲಿ ವಿರಳವಾಗಿ ನಿಂತಿತ್ತು. ದಾಳಿ ಆರಂಭಕ್ಕೆ ಇದೊಂದು ಸೂಚನೆಯಂತಿದ್ದು ನವಾಬನ ಮದ್ದುಗುಂಡು ಸೈನ್ಯದ ಇತರರು ಕೂಡ ಗುಂಡುಹಾರಿಸಲು ಆರಂಭಿಸಿ ನಿರಂತರ ಗುಂಡಿನ ಮಳೆಯನ್ನೇ ಹರಿಸಿದರು. ಸಮೀಪದ ಇಟ್ಟಿಗೆಗೂಡಿನ ಬಳಿ ಇದ್ದ ಬ್ರಿಟಿಷರ ಎರಡು ಸಣ್ಣ ಫಿರಂಗಿಗಳು ಅದಕ್ಕೆ ತಿರುಗೇಟು ನೀಡಿದವು; ಬ್ರಿಟಿಷ್ ಸೈನ್ಯದ ಗುಂಡಿನ ದಾಳಿಯಿಂದ ನವಾಬನ ಕಾಲಾಳು ಸೈನ್ಯದ ಕೆಲವರು ಮೃತಪಟ್ಟರು; ಇನ್ನಷ್ಟು ಜನ ಗಾಯಗೊಂಡರು. ಬ್ರಿಟಿಷರ ಕಡೆ ಒಬ್ಬ ಸತ್ತರೆ ಈಚೆ ಕಡೆ ಹತ್ತರಷ್ಟು ಸೈನಿಕರು ಮೃತಪಟ್ಟರು. ನವಾಬನ ಸೈನ್ಯದ ೨/೩ರಷ್ಟು ಭಾಗ ಕೂಡ ಯುದ್ಧದಲ್ಲಿ ತೊಡಗಿರಲಿಲ್ಲ. ಆದರೂ ಅಲ್ಲಿದ್ದ ನವಾಬನ ಸೇನೆ ಮತ್ತು ಬ್ರಿಟಿಷ್ ಸೇನೆಯ ಅನುಪಾತ ೩:೧ ರಷ್ಟು. ಆದರೆ ಮದ್ದುಗುಂಡು ಸೈನ್ಯದಲ್ಲಿ ಬ್ರಿಟಿಷರ ಮೇಲುಗೈ ಇತ್ತು. ನವಾಬನ ಸೈನ್ಯದ ಹೆಚ್ಚಿನ ಗುಂಡುಗಳು ಬ್ರಿಟಿಷ್ ಸೈನಿಕರ ಮೇಲಿಂದಲೇ ಹೋದವು. ಅರ್ಧಗಂಟೆಯ ಕೊನೆಯಲ್ಲಿ ಬ್ರಿಟಿಷ್ ಕಡೆಯಲ್ಲಿ ಸತ್ತವರು ಹತ್ತು ಐರೋಪ್ಯ ಸೈನಿಕರು ಮತ್ತು ಇಪ್ಪತ್ತು ಸಿಪಾಯಿಗಳು.
ಈ ವಿದ್ಯಮಾನವನ್ನು ಸಾಕಷ್ಟು ಸಮಯ ನೋಡಿ ಕ್ಲೈವ್ ತನ್ನ ಸೈನ್ಯಕ್ಕೆ ಹಿಂದೆ, ತೋಪಿನ ದಂಡೆಯ ಹಿಂದೆ ಹೋಗಲು ಆದೇಶ ನೀಡಿದ. ಏಕೆಂದರೆ ಆಗ ತೋಪಿನೊಳಗೆ ಸುಮ್ಮನೆ ಕುಳಿತಿರುವುದೇ ಸರಿ ಎಂಬಂತಿತ್ತು.
ಈ ಪುಟ್ಟ ಹಿನ್ನಡೆ ನವಾಬನ ವಿಧೇಯ ಸೈನಿಕರಲ್ಲಿ ಶಕ್ತಿ ತುಂಬಿತು. ಅವರ ಗುಂಡಿನ ತೀವ್ರತೆ ಹೆಚ್ಚಾಯಿತು. ಆದರೆ ಪರಿಣಾಮವೇನೂ ಇಲ್ಲ. ಏಕೆಂದರೆ ಗುಂಡೇಟು ಬಿದ್ದದ್ದು ಮರಗಳಿಗೆ. ಸೈನಿಕರಿಗೆ ಮಲಗಲು ಅಥವಾ ಕುಳಿತುಕೊಳ್ಳಲು ಸೂಚಿಸಲಾಗಿತ್ತು. ಬ್ರಿಟಿಷರ ಫಿರಂಗಿಗಳು ಹಿಂಭಾಗದಿಂದ ಉತ್ತರಿಸಿದವು. ಆಗ ನವಾಬನ ಸೈನ್ಯ ಕಾಯಲು ನಿರ್ಧರಿಸಿತು. ಅಶ್ವಪಡೆ, ಕಾಲಾಳುಗಳ ಬದಲು ಫಿರಂಗಿಗಳನ್ನು ಬಳಸಲು ಆರಂಭಿಸಿತು. ಬ್ರಿಟಿಷ್ ಸೈನಿಕರು ತಗ್ಗಾದ ಸುರಕ್ಷಿತ ಜಾಗಗಳಲ್ಲಿ ತಂಗಿದರು.
ಬೆಳಗ್ಗೆ ೧೧ ಗಂಟೆಗೆ ಕರ್ನಲ್ ಕ್ಲೈವ್ ತನ್ನ ಅಧಿಕಾರಿಗಳ ಜೊತೆ ಚರ್ಚಿಸಿದ; ಮತ್ತು ಕಲ್ಕತ್ತಾವನ್ನು ನವಾಬ ಸಿರಾಜ್ನಿಂದ ವಾಪಸ್ ತೆಗೆದುಕೊಳ್ಳುವಾಗ ಬಳಸಿದ ತಂತ್ರವನ್ನೇ ಅನುಸರಿಸಲು ನಿರ್ಧರಿಸಿದ. ಇಡೀ ದಿನ ಫಿರಂಗಿ ದಾಳಿಯನ್ನು ಸರಿಯಾಗಿ ನಿರ್ವಹಿಸುವುದಕ್ಕೆ ಸೀಮಿತವಾಗಿರುವುದು; ಆಗ ಸೈನ್ಯದ ಹೆಚ್ಚಿನ ಭಾಗ ಮಾವಿನತೋಟದ ಆಶ್ರಯದಲ್ಲಿರುವುದು; ಮುಂದೆ ಮಧ್ಯರಾತ್ರಿಯ ವೇಳೆ ನವಾಬನ ಸೈನ್ಯದ ಮೇಲೆ ದಾಳಿ ನಡೆಸುವುದು.
ಇನ್ನೊಂದು ಮಾಹಿತಿಯ ಪ್ರಕಾರ ಬ್ರಿಟಿಷ್ ಸೈನ್ಯ ಫಿರಂಗಿ ಮೂಲಕ ದಾಳಿ ನಡೆಸಿತು. ಆಗ ಕ್ಲೈವ್ ತನ್ನ ಪ್ಲಾಸಿಹೌಸ್ನಿಂದ ಬಂದು ಕ್ಯಾಪ್ಟನ್ಗಳನ್ನು ಕರೆದು ‘ಕೌನ್ಸಿಲ್ ಆಫ್ ವಾರ್’ (ರಣರಂಗದ ಸಭೆ) ನಡೆಸೋಣ ಎಂದು ಹೇಳಿದ; ಆದರೆ ಸಭೆ ನಡೆಸದೆ ವಾಪಸಾದ. ಇದು ಬ್ರಿಟಿಷ್ ಕ್ಯಾಂಪ್ನ ಗೊಂದಲವನ್ನು ತಿಳಿಸುತ್ತದೆ ಎಂದು ಲೇಖಕ ಸುದೀಪ್ ಚಕ್ರವರ್ತಿ ತಮ್ಮ ‘Plassey’ಯಲ್ಲಿ ವಿವರಿಸಿದ್ದಾರೆ.
ಆಗ ಹವಾಮಾನ ಪರಿಸ್ಥಿತಿಯು ಮಧ್ಯಪ್ರವೇಶ ಮಾಡಿತು; ಹೇಳಿಕೇಳಿ ಅದು ಮಳೆಗಾಲ. ಆಗಿನ ಭೂಮಿ ಮತ್ತು ಹವಾಮಾನದ ಪರಿಸ್ಥಿತಿ ಗೊತ್ತಿದ್ದರೂ ಸಿರಾಜ್ನ ಜನರಲ್ಗಳು ಮತ್ತು ಫಿರಂಗಿ ಪಡೆಯವರು ಒಂದು ದೊಡ್ಡ ತಪ್ಪು ಮಾಡಿದರು; ಮಳೆ ಬಂದರೆ ಏನಾಗಬಹುದೆಂದು ಊಹಿಸಿರಲಿಲ್ಲ. ತೋಪಿಗೆ ಹಿಂದೆ ಸರಿಯುವ ಮೂಲಕ ಕ್ಲೈವ್ ಆ ತೊಂದರೆಯನ್ನು ನಿವಾರಿಸಿಕೊಂಡ. ನವಾಬನ ಸೈನ್ಯ ಮಳೆಗೆ ಗುರಿಯಾದರೆ, ಬ್ರಿಟಿಷ್ ಸೈನ್ಯ ತೋಟದೊಳಗೆ ಮಳೆಯಿಂದ ರಕ್ಷಣೆ ಪಡೆದುಕೊಂಡಿತು. ಆ ರಕ್ಷಣೆ (ಕವರ್) ಮೂಲಕ ಗನ್ಪೌಡರ್ ದಾಸ್ತಾನು ಒದ್ದೆಯಾಗದಂತೆ ನೋಡಿಕೊಂಡರು.
ಒದ್ದೆಯಾದ ಗನ್ಪೌಡರ್
ಮಧ್ಯಾಹ್ನದ ಹೊತ್ತಿಗೆ ದೊಡ್ಡ ಮಳೆ ಬಂತು. ಅದರಿಂದ ನವಾಬನ ಸೈನ್ಯದ ಮದ್ದುಗುಂಡುಗಳಿಗೆ ಹಾನಿಯಾಗಿ ಅವರ ಗುಂಡು ಹಾರಾಟವು ಕ್ರಮೇಣ ದುರ್ಬಲವಾಯಿತು. ಅದೇ ವೇಳೆ ಇಂಗ್ಲಿಷರ ಮದ್ದುಗುಂಡುಗಳು ದಾಳಿಯನ್ನು ಮುಂದುವರಿಸಿದವು. ಮಳೆ ಬಂದಾಗ ನವಾಬನ ಕಡೆಯವರು ಅದರ ಲಾಭ ಪಡೆಯುತ್ತಾರೇನೋ ಎಂಬ ಭಯ ಬ್ರಿಟಿಷ್ ಸೈನ್ಯಾಧಿಕಾರಿಗಳಿಗಿತ್ತು. ಅವರು ತಮ್ಮ ಕುದುರೆಗಳನ್ನು ಮುನ್ನುಗ್ಗಿಸಬಹುದೆನ್ನುವ ಶಂಕೆಯಿತ್ತು. ಅದಕ್ಕಾಗಿ ಬ್ರಿಟಿಷರ ಬಂದೂಕುಗಳು ಬಿರುಸಿನಿಂದ ಕೆಲಸ ಮಾಡಿ ತಮ್ಮ ಭಯವನ್ನು ದೂರಮಾಡಿಕೊಂಡವು. ಮಳೆಯ ಹೊತ್ತಿಗೆ ಸುಮಾರು ಅರ್ಧ ಗಂಟೆ ನವಾಬನ ಸೇನೆಯಿಂದ ಒಂದೇ ಒಂದು ಗುಂಡು ಹಾರಲಿಲ್ಲ.
ಇದೆಲ್ಲ ನಡೆಯುವಾಗ ಪಿತೂರಿಗಾರರಾದ ಮೀರ್ಜಾಫರ್, ಯಾರ್ ಲತೀಫ್ ಮತ್ತು ರಾÊ ದುರ್ಲಭ್ ಅವರ ಪಡೆಗಳು ತಾವು ಇದ್ದಲ್ಲಿಂದ ಸ್ವಲ್ಪವೂ ಕದಲಲಿಲ್ಲ; ಯುದ್ಧದಲ್ಲಿ ಮಧ್ಯಪ್ರವೇಶ ಮಾಡಲಿಲ್ಲ. ಅವರ ಜನರಲ್ಗಳು ಸುಮ್ಮನೆ ಗಮನಿಸುತ್ತಿದ್ದರು. ಆಗ ಪರಿಸ್ಥಿತಿ ಹೇಗೆ ಇದ್ದಿರಬಹುದೆಂದು ಊಹಿಸುವುದು ಕಷ್ಟವಲ್ಲ. ಪಿತೂರಿಗಾರರು ಯುದ್ಧಕ್ಕೆ ಇಳಿಯಬಹುದೆ, ಇಲ್ಲವೆ? ಇಳಿಯುವುದಾದರೆ ಯಾರ ಪರವಾಗಿ? ಅವರೇಕೆ ಯುದ್ಧಕ್ಕೆ ಇಳಿಯುತ್ತಿಲ್ಲ – ಎಂಬ ಪ್ರಶ್ನೆಗಳು ಸಮಾನವಾಗಿ ಕ್ಲೈವ್ ಮತ್ತು ಸಿರಾಜುದ್ದೌಲ ಇಬ್ಬರಲ್ಲೂ ಇದ್ದವು. ಕೊಟ್ಟ ಮಾತಿಗೆ ಅವರು ತಪ್ಪಿದರೆ ಏನಾದೀತು ಎಂದು ಕ್ಲೈವ್ನಲ್ಲಿ ಆತಂಕ ಸ್ವಲ್ಪ ಜಾಸ್ತಿಯಾಗಿಯೇ ಇತ್ತು.
ಈ ಎಲ್ಲ ಅನಿಷ್ಟಗಳ ವ್ಯಕ್ತಿಯಾದ ಮೀರ್ಜಾಫರ್ ದೂರದಲ್ಲೇ ನಿಂತಿರುವುದರಲ್ಲಿ ತೃಪ್ತನಾಗಿದ್ದ. ಅವನ ಗುಂಪು ಅವನ ಸಮೀಪದಲ್ಲೇ ಇತ್ತು. ಅದನ್ನು ನೋಡಿದರೆ ಅವರೆಲ್ಲ ಕೇವಲ ಯುದ್ಧವನ್ನು ನೋಡಲು ಬಂದಂತೆ ತೋರುತ್ತಿತ್ತು. ಆ ಹೊತ್ತಿಗೆ ಮೀರ್ಜಾಫರ್ನ ಏಕೈಕ ಗುರಿ ಸಿರಾಜುದ್ದೌಲನ ಪತನವಾಗಿತ್ತು ಎಂದು ಕೆಲವು ಇತಿಹಾಸಕಾರರು ಅನುಕಂಪದಿಂದ ಹೇಳಿದ್ದಿದೆ. ಕ್ಲೈವ್ ತುಂಬ ಆತಂಕದಲ್ಲಿದ್ದರೂ ಕೂಡ ನಡುವೆ ಒಂದು ಸಮಾಧಾನವೂ ಇತ್ತು. ಅದೆಂದರೆ ಪಿತೂರಿಗಾರರು ತನ್ನೊಂದಿಗೆ ಸೇರಿಕೊಳ್ಳದಿದ್ದರೂ ಕೂಡ ನವಾಬನ ಕಡೆಗೂ ಹೋಗಿಲ್ಲ ಎನ್ನುವುದು.
ಅದೇ ವೇಳೆ ಸಿರಾಜ್ನ ಆತಂಕ ಬೆಳೆಯುತ್ತಿತ್ತು. ಯುದ್ಧ ಆರಂಭವಾಗಿ ನಾಲ್ಕು ತಾಸು ಕಳೆದರೂ ಈ ಮೂವರು ಪ್ರಮುಖ ಪಿತೂರಿಗಾರರು ಬ್ರಿಟಿಷ್ ಸೇನೆಯ ಸಮೀಪವಿದ್ದರೂ ಕೂಡ ತಟಸ್ಥರಾಗಿದ್ದರು. ಅವರು ಮನಸ್ಸು ಮಾಡಿದ್ದರೆ ಬ್ರಿಟಿಷ್ ಸೈನ್ಯವನ್ನು ಹಣ್ಣುಗಾಯಿ ನೀರುಗಾಯಿ ಮಾಡಬಹುದಿತ್ತು. ಕೇವಲ ತಮ್ಮ ಸಂಖ್ಯೆಯ ಬಲದಿಂದ ಮಾವಿನತೋಪನ್ನು ಗುಡಿಸಿಹಾಕಬಹುದಿತ್ತು. ಆದರೆ ಅದು ಅಸಂಭವ. ನವಾಬನಿಗೆ ವಿರುದ್ಧವಾದ ಅವರ ಮನೋಧರ್ಮ ಅಚಲವಾಗಿತ್ತು.
ಸಿರಾಜ್ ಹಿಂಭಾಗದಲ್ಲಿ
ಇನ್ನು ಸಿರಾಜ್ ಸೈನ್ಯದ ಮುಂದೆ ಏನೂ ಇರಲಿಲ್ಲ. ತಾನು ಹಿಂಭಾಗದಲ್ಲಿದ್ದು ಜನರಲ್ಗಳು ಯುದ್ಧ ಮಾಡಬೇಕೆಂಬ ನಿರೀಕ್ಷೆಯಲ್ಲಿದ್ದ; ಯುದ್ಧದ ಅಪಾಯ ತಾಗದಷ್ಟು ದೂರ ತನ್ನ ಟೆಂಟಿನಲ್ಲಿದ್ದ. ಸುತ್ತ ಇದ್ದ ಭಟರು, ಅಧಿಕಾರಿಗಳು ಆತನನ್ನು ಹೊಗಳುತ್ತಿದ್ದು, ನವಾಬ ಅದನ್ನು ಕೇಳುವುದರಲ್ಲಿ ಮೈಮರೆತಿದ್ದ. ಈ ಹೊಗಳುಭಟರಲ್ಲಿ ಅರ್ಧದಷ್ಟು ಜನ ದೇಶದ್ರೋಹಿಗಳು. ಆ ಹೊಗಳಿಕೆಯೆಲ್ಲ ಪೊಳ್ಳು ಮಾತುಗಳೇ. ಒಂದು ರೀತಿಯಲ್ಲಿ ಹತಾಶನಾಗಿದ್ದ ನವಾಬ ಯುದ್ಧದ ಹೊಣೆಯನ್ನು ವಿಧೇಯ ಜನರಲ್ಗಳಿಗೆ ಒಪ್ಪಿಸಿದ್ದ.
ಎರಡೂ ಸೈನ್ಯಗಳ ನಡುವೆ ಫಿರಂಗಿಗಳು ಗುಂಡು ಹಾರಿಸುತ್ತಲೇ ಇದ್ದವು. ಒಂದು ವ್ಯತ್ಯಾಸವೆಂದರೆ ತಮ್ಮ ಫಿರಂಗಿಗಳ ದಕ್ಷತೆ ಕುಸಿದಿದ್ದು ಸೇನಾಧಿಕಾರಿಗಳಾದ ಮೀರ್ ಮದನ್ ಮತ್ತು ಮೋಹನಲಾಲ್ ಅವರ ಗಮನಕ್ಕೆ ಬಂದಿತ್ತು. ಅದಕ್ಕಾಗಿ ಅವರು ತಮ್ಮ ಸೇನೆಯ ಜೊತೆಗೆ ನಿಧಾನವಾಗಿ ಮಾವಿನತೋಟದತ್ತ ಹೋಗುತ್ತಿದ್ದರು. ತೋಟದ ಕಡೆಯಿಂದ ಫಿರಂಗಿ ಗುಂಡುಗಳು ಅವರತ್ತ ಹಾರಿ ಬರುತ್ತಿದ್ದವು. ಆದರೆ ಅವರು ಜಗ್ಗಲಿಲ್ಲ. ಏಕೆಂದರೆ ತಮ್ಮ ಬಳಿ ಸಂಖ್ಯೆ ಜಾಸ್ತಿ ಇದೆ ಎನ್ನುವ ಹುಂಬ ಧೈರ್ಯ. ಮದ್ದುಗುಂಡುಗಳ ಬಗ್ಗೆ ಹೇಳುವುದಾದರೆ ಅವು ಬ್ರಿಟಿಷ್ ಸೇನೆಗಿಂತ ಒಂದು ತಲೆಮಾರು ಹಿಂದಿನವು. ಬಂಗಾಳಿ ಸೈನ್ಯದ ಫಿರಂಗಿಗಳು ದೊಡ್ಡದಾದರೂ ಕೂಡ ಬ್ರಿಟಿಷ್ ಫಿರಂಗಿಗಳ ಕ್ಷಿಪ್ರ ಗುಂಡೆಸೆತವನ್ನು (Rapid fire) ಇವು ಸರಿಗಟ್ಟುತ್ತಿರಲಿಲ್ಲ. ಬ್ರಿಟಿಷರಂತೆ ಫಯರಿಂಗ್ನಲ್ಲಿ ತರಬೇತಾದ ಕೆಲವು ಜನ ಫ್ರೆಂಚ್ ಸೈನಿಕರು ಇದ್ದುದಷ್ಟೇ ಸಮಾಧಾನ.
ನವಾಬನ ಸೈನ್ಯ ಮುಂದುವರಿದಂತೆ ಕ್ಲೈವ್ನ ಆತಂಕ ಹೆಚ್ಚಾಯಿತು. ಮೀರ್ಜಾಫರ್ ಮುಂತಾದವರು ಇನ್ನೂ ತಟಸ್ಥವಾಗಿದ್ದುದರಿಂದ ಕೋಪಗೊಂಡ ಆತ ಸ್ಥಳದಲ್ಲಿದ್ದ ಓರ್ವ ಏಜೆಂಟ್ಗೆ ಚೆನ್ನಾಗಿ ಬೈದ: “ಯುದ್ಧದ ವೇಳೆ ತನ್ನನ್ನು ಒಪ್ಪಿಸುವುದಾಗಿ ನಿನ್ನ ಯಜಮಾನ ಭರವಸೆ ನೀಡಿದ್ದ. ಆದರೆ ಏನೂ ಮಾಡುತ್ತಿಲ್ಲ. ನಿಮ್ಮ ಕಮಾಂಡರ್ಗಳು ಮತ್ತವರ ಸೈನ್ಯ ಈಗ ನವಾಬನಿಂದ ದೂರವಿದ್ದಾರೆ. ಈಗ ಏನಾದರೂ ಮಾಡಿದರೆ ಪ್ರಯೋಜನವಾಗುತ್ತದೆ” ಎಂದು ಪ್ರಚೋದಿಸಿದ. ಏಜೆಂಟ್ ಅದಕ್ಕೆ ಉತ್ತರಿಸಿ “ನೀಡಿದ ಭರವಸೆಯನ್ನು ಈಡೇರಿಸದೆ ಇರುವುದಿಲ್ಲ” ಎಂದು ಮೀರ್ಜಾಫರ್ ಮುಂತಾದವರ ಪರವಾಗಿ ಹೇಳಿದ.
ಮುಖ್ಯವಾಗಿ ಕ್ಲೈವ್ ಆಗ ಉಂಟಾದ ಪರಿಸ್ಥಿತಿಯನ್ನು ಆದಷ್ಟು ಚೆನ್ನಾಗಿ ನಿಭಾಯಿಸಬೇಕಿತ್ತು. ಆತ ಅದನ್ನು ಮಾಡದೆ ಬಿಡುವವನಲ್ಲ. ಆಗಿನ ಯುದ್ಧದ ಒಂದು ವರ್ಣನೆ ಹೀಗಿದೆ: “ಗುಂಡು ಹಾರಿಸುವುದರಲ್ಲಿ, ಹ್ಯಾಟ್ಧಾರಿ(ಐರೋಪ್ಯರು)ಗಳಿಗೆ ಸಮಾನರಾದವರಿಲ್ಲ. ಅದರಂತೆ ಬಾಲ್ಗಳು, ಗುಂಡುಗಳು ಹಾರಿದವು. ಅವು ನೋಡುಗರಿಗೆ ಅಚ್ಚರಿ ಆಗುವಂತಿತ್ತು. ಫಿರಂಗಿ ಮತ್ತು ಕೋವಿಗಳ ಗುಂಡುಹಾರಾಟ ಕಿವಿ ಕಿವುಡಾಗುವಂತಿತ್ತು. ಬಂದೂಕಿನಿAದ ಹಾರುವ ಬೆಂಕಿ ಮತ್ತು ಮಿಂಚುಗಳಿAದ ಕಣ್ಣಿನ ದೃಷ್ಟಿ ಮಂಕಾಗುವಂತಿತ್ತು.”
“ಪ್ಲಾಸಿ ಯುದ್ಧದ ಬಗೆಗಿನ ಪ್ರಸಿದ್ಧ ವರ್ಣನೆಗಳು, ನಾಟಕೀಯ ವಿವರಗಳು ಲಭ್ಯವಿವೆ. ಆದರೆ ಯಾರು ಕೂಡ ಆ ರಣರಂಗದ ಮಳೆ, ಕೆಸರು, ಒದ್ದೆಯಾದ ಸೈನಿಕರು, ಕೊಳೆಯಾದ ಅವರ ಸಮವಸ್ತç, ಅಸ್ತವ್ಯಸ್ತವಾದ ಯುದ್ಧದ ಪರಿಕರಗಳ ಬಗ್ಗೆ ಹೇಳುವುದಿಲ್ಲ. ಅಂದಿನ ಪೈಂಟಿಂಗ್ಗಳು ಕೂಡ ಕಮಾಂಡರ್ಗಳು, ಸೈನಿಕರನ್ನು ಚೆನ್ನಾಗಿರುವ ಬಟ್ಟೆಬರೆಯಲ್ಲಿ ತೋರಿಸುತ್ತವೆ. ಕೆಲವು ಚಿತ್ರಗಳು ರಾಬರ್ಟ್ ಕ್ಲೈವ್ನನ್ನು ಫ್ರೆಂಚ್ ವೀರ ನೆಪೋಲಿಯನ್ನಂತೆ ತೋರಿಸುತ್ತವೆ. ಆತ ಹಂಟಿಂಗ್ ಲಾಡ್ಜ್ನ ಮೇಲಿನಿಂದ ಯುದ್ಧವನ್ನು ನೋಡುವಂತೆ ಚಿತ್ರಿಸಲಾಗಿದೆ” ಎಂದು ಪುಸ್ತಕ ವಿವರಿಸುತ್ತದೆ.
ಮೀರ್ ಮದನ್ ಬಲಿ
ಸಂಜೆ ಯುದ್ಧ ನಡೆಯುತ್ತಿದ್ದಂತೆ ಬ್ರಿಟಿಷರ ಕಡೆಯ ಒಂದು ಫಿರಂಗಿ ಗುಂಡು ನವಾಬನ ಜನರಲ್ ಮೀರ್ ಮದನ್ಗೆ ಬಂದು ಬಡಿಯಿತು. ಕೂಡಲೆ ಆತನನ್ನು ನವಾಬನ ಟೆಂಟಿಗೆ ಸಾಗಿಸಿದರು; ಅಲ್ಲಿ ಆತ ನವಾಬನ ಎದುರೇ ಅಸುನೀಗಿದ. ಅದರಿಂದ ದೊಡ್ಡ ಪರಿಣಾಮವೇ ಉಂಟಾಯಿತು. ಅದು ನವಾಬನ ಸೋಲು ಅಲ್ಲವಾದರೂ ಕೂಡ ಬ್ರಿಟಿಷರ ವಿಜಯಕ್ಕೆ ಸವಾಲೊಡ್ಡುವ ಒಂದು ಅವಕಾಶವನ್ನು ಕಸಿದದ್ದು ಸತ್ಯ. ಸಿರಾಜ್ ತಿಂಗಳುಗಳಿAದ ಹೊಂದಿದ್ದ ಆತಂಕಕ್ಕೆ ಇದೊಂದು ನಿದರ್ಶನವಾಯಿತು.
ಸಿರಾಜ್-ಜಾಫರ್ ಬೇಟೆ
ಆಗಲೂ ನವಾಬ ಸಿರಾಜ್ ಭಾವನೆಗಳನ್ನು ಬದಿಗೊತ್ತಿ ದೃಢನಿರ್ಧಾರದೊಂದಿಗೆ ಮುಂದುವರಿಯಬಹುದಿತ್ತು. ಯುದ್ಧವನ್ನು ಕ್ಲೈವ್ನ ಶಿಬಿರಕ್ಕೆ ಒಯ್ಯಬಹುದಿತ್ತು. ಹಗಲಿನ ಯುದ್ಧ ಮುಗಿದ ಬಳಿಕವೂ ಯುದ್ಧವನ್ನು ಮುಂದುವರಿಸಬಹುದಿತ್ತು. ಮೀರ್ಜಾಫರ್ ಇತ್ಯಾದಿಗಳ ಕಾರ್ಯತಂತ್ರಕ್ಕೆ ಪ್ರತಿತಂತ್ರ ಹೂಡಿ ಅದರಿಂದ ಬಚಾವಾಗಬಹುದಿತ್ತು. ಆದರೆ ಕೇವಲ ೨೪ ವರ್ಷದ ನವಾಬ ಸಿರಾಜುದ್ದೌಲ ಅದೆಲ್ಲದರಿಂದ ದೂರ ಉಳಿದ; ದುರದೃಷ್ಟ ಅವನನ್ನು ಬಾಧಿಸಿತು.
ಕೊನೆಯ ಒಂದು ಪ್ರಯತ್ನವೆಂಬಂತೆ ಸಿರಾಜ್ ಕೂಡಲೆ ಬರುವಂತೆ ಮೀರ್ಜಾಫರ್ಗೆ ಹೇಳಿಕಳುಹಿಸಿದ. ಆತ ತನ್ನ ಟೆಂಟಿಗೆ ಬರುತ್ತಲೇ ತನ್ನ ಮುಂಡಾಸನ್ನು ನೆಲದ ಮೇಲೆ ಹಾಕಿ “ಜಾಫರ್, ಈ ಮುಂಡಾಸನ್ನು ನೀನು ರಕ್ಷಿಸಬೇಕು” ಎಂದು ಮನವಿ ಮಾಡಿದ ಎನ್ನಲಾಗಿದೆ. ನಿಜವೆಂದರೆ, ಮೀರ್ಜಾಫರ್ ಬರಹೇಳಿದ ಕೂಡಲೆ ಬರಲಿಲ್ಲ. ಆತ ಬರುವವರೆಗೆ ಸಿರಾಜ್ ಕಾದ. ಹಲವು ಸಲ ಕರೆದ ಮೇಲೆ ಆತ ಬಂದ. ಮಗ ಮೀರ್ ಮಿರಾನ್ ಜೊತೆಗಿದ್ದ. ಅದಲ್ಲದೆ ಶಸ್ತ್ರಸಜ್ಜಿತ ಸ್ನೇಹಿತರು, ಬೆಂಬಲಿಗರು ಕೂಡ ಇದ್ದರು.
ಆತನೊಂದಿಗೆ ಯುವ ನವಾಬ ಅತ್ಯಂತ ವಿನೀತನಾಗಿ ಮಾತನಾಡಿದ; ತಲೆಯಿಂದ ಮುಂಡಾಸು ಕೂಡ ತೆಗೆದ. ಅದನ್ನು ಜನರಲ್ನ ಮುಂದೆ ಇಟ್ಟು “ನಾನು ಮಾಡಿದ್ದರ ಬಗ್ಗೆ ನನಗೀಗ ಪಶ್ಚಾತ್ತಾಪ ಎನಿಸುತ್ತದೆ. ನಮ್ಮ ನಡುವೆ ಇರುವ ಸಂಬಂಧದ ಮೂಲಕ ಮತ್ತು ಅಜ್ಜ ಅಲಿವರ್ದಿ ಅವರಿಂದ ಬಂದ ಹಕ್ಕಿನ ಮೂಲಕ ನಾನು ಕೇಳುವುದೆಂದರೆ, ನನ್ನ ಹಿಂದಿನ ಅಕ್ರಮ (ಅಧಿಕ ಪ್ರಸಂಗ)ಗಳನ್ನು ಮರೆತು ನೀನು ಇನ್ನು ಮುಂದೆ ಒಬ್ಬ ಮರ್ಯಾದಸ್ತನಾಗಿ, ನನ್ನ ರಕ್ತಸಂಬಂಧಿಯಾಗಿ, ಭಾವನೆಗಳಿರುವ ಮನುಷ್ಯನಾಗಿ, ನನ್ನ ಕುಟುಂಬದಿAದ ದೊರೆತ ಎಲ್ಲ ಅನುಕೂಲಗಳ ಬಗ್ಗೆ ಕೃತಜ್ಞತೆಯಿಂದ ನಡೆದುಕೊಳ್ಳಬೇಕು; ಮತ್ತು ನನ್ನ ಗೌರವ ಹಾಗೂ ಜೀವಗಳನ್ನು ನೀನು ರಕ್ಷಿಸಬೇಕು” ಎಂದು ವಿನಂತಿಸಿದ.
ಈ ಭಾಷಣವು ದೇಶದ್ರೋಹಿ ಮೀರ್ಜಾಫರ್ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಆತ ಸುದೀರ್ಘ ಕಾಲದಿಂದ ಕಾಯುತ್ತಿದ್ದ ಅವಕಾಶವು ಈಗ ಅವನ ಕೈಯಳತೆಗೆ ಬಂದಿತ್ತು. ಅದನ್ನು ಗಳಿಸಿಕೊಳ್ಳುವುದು ಮಾತ್ರ ಈಗ ಅವನ ಗುರಿಯಾಗಿತ್ತು. ದೇಶದ್ರೋಹವು ಅವನ ಹೃದಯವನ್ನು ಪೂರ್ತಿಯಾಗಿ ಆಕ್ರಮಿಸಿತ್ತು. ಅದಕ್ಕೊಪ್ಪುವಂತೆ ಮೀರ್ಜಾಫರ್ ತಣ್ಣಗೆ ಹೇಳಿದ: “ದಿನವು ಈಗ ಕೊನೆಗೆ ಬರುತ್ತಿದೆ. ದಾಳಿಗೆ ಈಗ ಸಮಯ ಉಳಿದಿಲ್ಲ. ಮುಂದುವರಿಯುತ್ತಿರುವ ಸೈನ್ಯಕ್ಕೆ ನೀವೀಗ ವಿರುದ್ಧವಾದ (ಉಲ್ಟಾ) ಆದೇಶ ನೀಡಬೇಕು. ಯುದ್ಧದಲ್ಲಿ ನಿರತರಾಗಿರುವವರನ್ನು ವಾಪಸು ಕರೆಯಬೇಕು. ನಾಳೆ ದೇವರ ಅನುಗ್ರಹದೊಂದಿಗೆ ನಾನು ಎಲ್ಲ ಸೈನ್ಯವನ್ನು ಒಂದುಗೂಡಿಸಿ ಈ ಕೆಲಸಕ್ಕೆ ನೆರವಾಗುತ್ತೇನೆ.”
ಆಗ ಸಿರಾಜ್ ಶತ್ರುಗಳು (ಬ್ರಿಟಿಷ್ ಸೇನೆ) ರಾತ್ರಿ ದಾಳಿ ನಡೆಸಬಹುದೆನ್ನುವ ಅನುಮಾನವನ್ನು ಮುಂದಿಟ್ಟ. ಅದಕ್ಕೆ ಜನರಲ್ ಮೀರ್ಜಾಫರ್ “ಶತ್ರುಗಳು ರಾತ್ರಿ ದಾಳಿಯನ್ನು ನಡೆಸದಂತೆ ನಾನು ತಡೆಯುತ್ತೇನೆ” ಎಂದು ಭರವಸೆ ನೀಡಿದ. ಸ್ವಲ್ಪ ಸಮಯದ ಅನಂತರ ನವಾಬನ ಭಯ ಏರತೊಡಗಿತು. ಆಗ ಪಿತೂರಿಗಾರ ರಾ ದುರ್ಲಭ್ “ಸೈನ್ಯವು ಹಿಂದೆ ಸರಿಯುವ ಬಗ್ಗೆ ಆದೇಶ ಹೊರಡಿಸಿ; ಮುರ್ಷಿದಾಬಾದ್ಗೆ ಮರಳೋಣ” ಎಂದು ಸಲಹೆ ನೀಡಿದ. ಮಂತ್ರಮುಗ್ಧನಂತೆ ನವಾಬ ಸಿರಾಜ್ ಆ ಸಲಹೆಗೆ ಒಪ್ಪಿದ.
ಯುದ್ಧ ನಿಲ್ಲಿಸಲು ಸಲಹೆ
ಈ ತೀರ್ಮಾನದಂತೆ ಯುದ್ಧವನ್ನು ನಿಲ್ಲಿಸುವ ಬಗ್ಗೆ ಮೋಹನ್ಲಾಲ್ಗೆ ಸೂಚನೆ ಹೋಯಿತು. ದಿವಾನ ಮತ್ತು ಜನರಲ್ ಆಗಿದ್ದ ಆತ ಬ್ರಿಟಿಷ್ ಸೈನ್ಯದ ಮೇಲಣ ದಾಳಿಯನ್ನು ನಡೆಸುತ್ತಿದ್ದ. ಅದರಂತೆ ಶತ್ರುಸೈನ್ಯಕ್ಕೆ ಸಮೀಪವಿದ್ದ ಫಿರಂಗಿಗಳನ್ನು ನಿಲ್ಲಿಸಲಾಯಿತು. ಕಾಲಾಳುಗಳು ಅನುಕೂಲವಾದ ಜಾಗದಲ್ಲಿ ನಿಂತು ಗುಂಡು ಹಾರಿಸುತ್ತಿದ್ದರು. ಹಿಂದೆ ಸರಿಯಬೇಕೆನ್ನುವ ಆದೇಶ ಅವರಿಗೂ ಅನ್ವಯವಾಯಿತು. ಆಗ ಮೋಹನ್ಲಾಲ್ “ಇದು ಹಿಂದೆ ಸರಿಯುವ ಅಥವಾ ವಾಪಸಾಗುವ ಸಮಯವಲ್ಲ. ಏಕೆಂದರೆ ಇಲ್ಲಿಯತನಕ ಮುಂದುವರಿದಿದ್ದೇವೆ. ಏನಾದರೂ ಆಗುವುದಿದ್ದರೆ (ಫಲಿತಾಂಶ ಬರುವುದಿದ್ದರೆ) ಈಗ ಆಗುತ್ತದೆ. ಈಗ ಆತ (ಮೀರ್ಜಾಫರ್) ಕ್ಯಾಂಪ್ಗೆ ವಾಪಸಾಗಲು ಹೇಳುತ್ತಾರಾ? ಇದರಿಂದ ಅವರ ಜನ ಚದರಿಹೋಗಿ ಓಪನ್ ಫೈಟ್ (ಮುಕ್ತ ಕಾದಾಟ) ಮಾಡಬಹುದು” ಎಂದನೆನ್ನಲಾಗಿದೆ. ಈ ಉತ್ತರ ಬಂದಾಗ ನವಾಬ ಮೀರ್ಜಾಫರ್ನತ್ತ ತಿರುಗಿದ. ಆಗ ಆತ ತಣ್ಣಗೆ ಹೇಳಿದ: “ನನಗೆ ಸಾಧ್ಯವಾದ ಉತ್ತಮ ಸಲಹೆಯನ್ನು ನೀಡಿದ್ದೇನೆ. ಉಳಿದಂತೆ ಯಜಮಾನರು ತಮ್ಮ ನಿರ್ಧಾರವನ್ನು ತೆಗೆದುಕೊಳ್ಳಬಹುದು.”
ತನ್ನ ಜನರಲ್ನ ಈ ತಣ್ಣಗಿನ ಉತ್ತರದಿಂದ ನವಾಬನಿಗೆ ಅವಮಾನ ಆದಂತಾಗಿ ಆತ ಭಯ ಮತ್ತು ಅಳುಕಿಗೆ ಗುರಿಯಾದ. ಏನು ಮಾಡಬೇಕೆಂದು ತೋಚದಾಯಿತು. ತನ್ನ ಸಹಜ ತಿಳಿವಳಿಕೆಯನ್ನು ಕೂಡ ಬಿಟ್ಟುಕೊಟ್ಟು ದೇಶದ್ರೋಹಿ ಮೀರ್ಜಾಫರ್ಗೆ ಖುಷಿಯಾಗುವಂತೆ ನಡೆದುಕೊಳ್ಳಲು ಮುಂದಾದ. ಯುದ್ಧದಿಂದ ಹಿಂದೆ ಸರಿಯುವಂತೆ ಮೋಹನ್ಲಾಲ್ಗೆ ಮತ್ತೆ ಮತ್ತೆ ಆದೇಶ ನೀಡಿದ. ಆತ ಕೊನೆಯಲ್ಲಿ ಒಪ್ಪಿಕೊಂಡು ಎಲ್ಲಿಯವರೆಗೆ ಮುಂದುವರಿದಿದ್ದನೋ ಆ ಪೋಸ್ಟ್ (ತಾಣ)ನಿಂದ ಹಿಂದೆ ಬಂದ.
ಸೇನೆಯ ವಿಧೇಯ ವಿಭಾಗಗಳು ಯುದ್ಧ ನಿಲ್ಲಿಸಿ ‘ಇನ್ನೊಂದು ದಿನ ಯುದ್ಧ ಮಾಡುವುದು’ ಎಂಬ ಆದೇಶದಂತೆ ವಾಪಸಾದವು. ಆ ಬಗ್ಗೆ ಮೇಜರ್ ಕೂಟ್ “ಅಪರಾಹ್ನ ೨ ಗಂಟೆಯವರೆಗೆ ಎರಡೂ ಕಡೆಯ ಫಿರಂಗಿಗಳು ಸದ್ದು ಮಾಡಿದವು. ಆಗ ಶತ್ರುಸೈನ್ಯ (ನವಾಬನ ಸೈನ್ಯ) ತಮ್ಮ ಲೈನಿಗೆ ವಾಪಸಾಗುವುದು ನಮಗೆ ಕಾಣಿಸುತ್ತಿತ್ತು” ಎಂದಿದ್ದಾನೆ. ಫಿರಂಗಿಗಳು ಸ್ತಬ್ಧವಾದವು. ಸಿರಾಜ್ಸೈನ್ಯದ ಎತ್ತಿನ ಗಾಡಿಗಳು ವಾಪಸಾದವು. ಮತ್ತೆ ಎಲ್ಲ ಸೈನ್ಯ ಕ್ಯಾಂಪಿನತ್ತ ಹೊರಟಿತು. ಈ ನಡುವೆ ಗೊಂದಲಕ್ಕೀಡಾದ ಫ್ರೆಂಚ್ ಯೋಧರು ಫಿರಂಗಿಯಿಂದ ಗುಂಡು ಹಾರಿಸುತ್ತಲೇ ಇದ್ದರು; ಆ ಮೂಲಕ ವಾಪಸಾಗುತ್ತಿದ್ದ ಸೈನ್ಯಕ್ಕೆ ರಕ್ಷಣೆ (ಕವರ್) ನೀಡುತ್ತಿದ್ದರು. ಬೆಳಗ್ಗೆ ಜೋರಾಗಿ ಯುದ್ಧವನ್ನು ಆರಂಭಿಸಿದ ಒಂದು ವಿಭಾಗವು (ಮೀರ್ ಮದನ್ ಸಾವಿನ ಕಾರಣದಿಂದ) ನಾಯಕನಿಲ್ಲದ್ದು ಎಂದಾಯಿತು. ಜನರಲ್ ಮೋಹನ್ಲಾಲ್ ಗೊಂದಲದಲ್ಲಿದ್ದ. ಸಿರಾಜ್ ಸೇನೆಯ ದೊಡ್ಡ ಭಾಗವಾಗಿದ್ದ ಪಿತೂರಿಗಾರರ ಸೇನಾ ವಿಭಾಗಗಳು ಕೂಡ ನಿಧಾನವಾಗಿ ಹಿಂತೆಗೆತವನ್ನು ಆರಂಭಿಸಿದವು.
ಬ್ರಿಟಿಷ್ ಪಡೆಯಲ್ಲಿ ಆಶ್ಚರ್ಯ-ಗೊಂದಲಗಳು ಉಂಟಾದವು. ಅವರ ವಾಪಸಾತಿಗೆ ನಮ್ಮ ಬಂದೂಕುಗಳ ಚುರುಕಿನ ದಾಳಿ ಕಾರಣವೆ? ಅವರ ಸೈನ್ಯದ ಒಬ್ಬ ಜನರಲ್ನ ಸಾವು ಕಾರಣವೆ? ಅಥವಾ ಬೇರೆ ಕಾರಣವೇನು – ಎಂದವರು ಪ್ರಶ್ನಿಸಿಕೊಂಡರು. ಇದು ತಮ್ಮ ಪ್ರತಿದಾಳಿಯ ಸಮಯ ಎಂದು ಬ್ರಿಟಿಷ್ ಕಮಾಂಡರ್ಗಳು ಕಂಡುಕೊಂಡರು. ಮೇಜರ್ ಕಿಲ್ಪ್ಯಾಟ್ರಿಕ್ ಸನ್ನಿವೇಶವನ್ನು ಅರ್ಥೈಸಿಕೊಂಡ: “ಅವರ ಮೇಲೆ ದಾಳಿ ನಡೆಸಲು ಇದು ಸರಿಯಾದ ಸಮಯವಾಗಿದ್ದು ಬಿಡುವ ಪ್ರಶ್ನೆಯೇ ಇಲ್ಲ” ಎನ್ನುವ ತೀರ್ಮಾನಕ್ಕೆ ಬಂದು ತೋಟದಿಂದ ಹೊರಗೆ ಬಂದು ಸಿರಾಜ್ನ ಸೇನೆಯಿದ್ದ ಕೆರೆಯತ್ತ ಹೋದ. ಬೆಟಾಲಿಯನ್ನ ಎರಡು ಕಂಪೆನಿಗಳು ಮತ್ತು ಲೈಟ್ ಆರ್ಟಿಲರಿಯ ಎರಡು ವಿಭಾಗಗಳು ಆತನೊಂದಿಗಿದ್ದವು; ಆ ಬಗ್ಗೆ ತನ್ನ ಕಮಾಂಡರ್ಗೆ ಮಾಹಿತಿ ನೀಡಿದ.
ಹಂಟಿಂಗ್ ಹೌಸ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ರಾಬರ್ಟ್ ಕ್ಲೈವ್ ಈ ಮಾಹಿತಿ ಬರುತ್ತಲೇ ಕಿಲ್ಪ್ಯಾಟ್ರಿಕ್ ಇದ್ದಲ್ಲಿಗೆ ಹೋಗಿ ಆತನನ್ನು ಬೈದ. ತನ್ನ ಆದೇಶವಿಲ್ಲದೆ ಶತ್ರುಗಳನ್ನು ಬೆನ್ನಟ್ಟಲು ಹೋದದ್ದೇಕೆ ಎಂದು ಪ್ರಶ್ನಿಸಿದ. ತೋಟಕ್ಕೆ ವಾಪಸಾಗಿ ಇನ್ನಷ್ಟು ಸೈನ್ಯವನ್ನು ತರಿಸಿಕೊಳ್ಳಲು ಹೇಳಿದ. ಆಗ ಕೂಟ್ ನಾಯಕತ್ವದ ಪಡೆ ಅಲ್ಲಿಗೆ ಹೋಯಿತು. ಸ್ವತಃ ಕ್ಲೈವ್ ಕೂಡ ಒಂದಷ್ಟು ಸೈನಿಕರೊಂದಿಗೆ ಕೆರೆಯತ್ತ ಹೋದ. ಮೊದಲಿಗೆ ಫ್ರೆಂಚರನ್ನು ವಾಪಸು ಹೋಗುವಂತೆ ಮಾಡಿದರು. ಆಗ ಅವರಿಗೆ ಸಿರಾಜ್ ಸೇನೆಯ ಬೆಂಬಲ ಇರಲಿಲ್ಲ. ಆದರೆ ಅವರನ್ನು ಕೊಲ್ಲಲು ಸಾಧ್ಯವಿರಲಿಲ್ಲ.
ಪಿತೂರಿ ಕಾರ್ಯಗತ
ಏನಿದ್ದರೂ ಕರ್ನಲ್ ಕ್ಲೈವ್ಗೆ ಯುದ್ಧದ ಗೆಲವು ದೂರವೇ ಇತ್ತು. ಪಿತೂರಿಗಾರರು ನವಾಬ ಸಿರಾಜ್ಗೆ ವಿರುದ್ಧ ಇದ್ದರೂ ಕೂಡ ಕ್ಲೈವ್ ಬಳಗ ಇನ್ನಷ್ಟು ಹೋರಾಡಿ ಪ್ಲಾಸಿಯಿಂದ ಪಾರಾಗಿ ಹೊರಗೆ ಬರಬೇಕಿತ್ತು. ಮೋಹನಲಾಲ್ ಅಳಿಯ (ಮಗಳ ಗಂಡ) ಬಹಾದುರ್ ಅಲಿಖಾನ್ ಬಂದೂಕು ಪಡೆಯ ಕಮಾಂಡರ್ ಆಗಿದ್ದು, ತಮ್ಮ ಸೈನ್ಯದ ಹಿಂತೆಗೆತಕ್ಕೆ ರಕ್ಷಣೆ ನೀಡುತ್ತಿದ್ದ. ಬ್ರಿಟಿಷ್ ಸೈನ್ಯ ಅವರ ಕಮಾಂಡರ್ ರಕ್ಷಣೆಗೆ ಹೋಗುತ್ತಲೇ ನವಾಬನ ಸೈನ್ಯದ ನಿಷ್ಕಿçಯ ಭಾಗ (ಮೀರ್ಜಾಫರ್ ಮತ್ತಿತರರ ಕೆಳಗಿನದ್ದು) ಬ್ರಿಟಿಷ್ ಸೈನ್ಯದ ಸಮೀಪ ಹೋಯಿತು. ನಿಂತು ಎದುರಿಸಿದಂತೆ ಕಂಡರೂ ಕೂಡ ಅದು ನಿಜವಾಗಿ ಮಾಡಿದ ಕೆಲಸವೆಂದರೆ ಕ್ಲೈವ್ಗೆ ನೆರವಾಗಲು ಹೋಗಿದ್ದ ಬ್ರಿಟಿಷರ ದಾರಿಯಲ್ಲೇ ಹೋದದ್ದು.
“ಅವರ ಸಿಗ್ನಲ್ ನಮಗೆ ಅರ್ಥವಾಗಲಿಲ್ಲ. ಅವರು ತೋಟದಲ್ಲಿದ್ದ ನಮ್ಮ ಬ್ಯಾಗೇಜ್ ಮತ್ತು ದೋಣಿಗಳ ಮೇಲೆ ದಾಳಿ ನಡೆಸುತ್ತಾರೇನೋ ಎಂಬಂತಿತ್ತು. ಆದರೆ ಹಾಗೇನೂ ಆಗಲಿಲ್ಲ” ಎಂದು ಓರ್ವ ಬ್ರಿಟಿಷ್ ಅಧಿಕಾರಿ ಪಿತೂರಿಗಾರರ ಬಗ್ಗೆ ಹೇಳಿದ್ದಾನೆ; ಆಗ ಇಂಗ್ಲಿಷ್ ಸೈನ್ಯವು ಕೆರೆಯ ಬಳಿ ಕಾರ್ಯನಿರತವಾಗಿತ್ತು. ಅವರನ್ನು ಎದುರಿಸುವುದಕ್ಕಾಗಿ ಬ್ರಿಟಿಷರ ಮೂರು ಪ್ಲಟೂನ್ಗಳು ಮತ್ತೊಂದು ಕಾಲಾಳು ವಿಭಾಗ ಸಂಪರ್ಕ ಕಡಿದುಕೊಂಡವು. ಅವರ ಮೇಲೆ ಬ್ರಿಟಿಷ್ ಸೈನ್ಯ ಕೆಲವು ಗುಂಡುಗಳನ್ನು ಹಾರಿಸಿತು. ಆಗ ಒಬ್ಬ ದೂತ ಮೀರ್ಜಾಫರ್ ಕ್ಲೈವ್ಗೆ ಬರೆದ ಒಂದು ಪತ್ರವನ್ನು ತಂದಿದ್ದ. ಸಂಜೆ ೫ ಗಂಟೆಗೆ ಬಂದ ಆ ಪತ್ರದಲ್ಲಿ ಅಂದು ರಾತ್ರಿ ಅಥವಾ ಮರುದಿನ ಬೆಳಗ್ಗೆ ಭೇಟಿಗೆ ಅವಕಾಶವನ್ನು ಕೋರಲಾಗಿತ್ತು.
ಪತ್ರದಲ್ಲಿ ಹೀಗಿತ್ತು: “ನಿಮ್ಮ ಸೂಚನೆ ಬರುವಾಗ ನಾನು ನವಾಬನ ಎದುರಲ್ಲಿದ್ದೆ. ಆತ ಎಲ್ಲರನ್ನೂ ಅವಮಾನಿಸುತ್ತಿದ್ದಾನೆ. ನನ್ನನ್ನು ಕರೆಸಿ ನನ್ನ ಮುಂದೆ ಅವನ ಮುಂಡಾಸನ್ನು ಬೀಳಿಸಿದ. ಕುರಾನಿನ ಬದಿಯಲ್ಲಿ ನನ್ನಿಂದ ಬರೆಯಿಸಿಕೊಂಡ. ಆದ್ದರಿಂದ ನಿಮ್ಮ ಕಡೆಗೆ ಬರಲಾರೆ. ದೇವರ ಅನುಗ್ರಹದಿಂದ ಇಂದು ನಿಮಗೆ ಒಳ್ಳೆಯದಾಯಿತು. ಒಂದು ಬಾಲ್ (ಸಿಡಿಗುಂಡು) ಬಿದ್ದು ಜನರಲ್ ಮೀರ್ ಮದನ್ ಸತ್ತುಹೋದ. ಬಶೀರ್ ಹಜಾರೆ (ನೋವೇಸಿಂಗ್) ಕೂಡ ಮೃತನಾದ. ೧೦-೧೫ ಜನ ಅಶ್ವಾರೋಹಿಗಳು ಮೃತಪಟ್ಟರು (ನವಾಬನ ಸೈನ್ಯದಲ್ಲಿ). ನಾವು ಮೂವರನ್ನು (ಪಿತೂರಿಗಾರರು) ಬಲದಿಂದ ಎಡಕ್ಕೆ ಸ್ಥಳಾಂತರಿಸಿದರು. ಶೀಘ್ರವೇ ದೊಡ್ಡ ದಾಳಿಯನ್ನು ನಡೆಸಿ ಆಗ ಅವರು ಓಡುತ್ತಾರೆ; ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ನೀವು, ರಾ ದುರ್ಲಭ್, ಯಾರ್ ಲತೀಫ್ ಮತ್ತು ನಾನು (ನಾಲ್ವರು) ಮುಂದಿನ ಕ್ರಮದ ಬಗ್ಗೆ ನಿರ್ಧರಿಸಬೇಕು.
“ಈ ವಿಷಯವನ್ನು ನೀವು ಇತ್ಯರ್ಥಗೊಳಿಸುವುದು ನಿಶ್ಚಿತ. ಗನ್ನರ್ಗಳು ಮತ್ತು ಪಯೊನೀರ್ಗಳು ಅವರ ಒಪ್ಪಂದದಂತೆ ಮಾಡಿದ್ದಾರೆ. ನಾನು ಪ್ರವಾದಿಯವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿ ಹೇಳುತ್ತೇನೆ; ಮೇಲಿನದು ಸತ್ಯ. ಬೆಳಗಿನ ಜಾವ ೩ ಗಂಟೆಗೆ ಆತನ ಮೇಲೆ ದಾಳಿ ನಡೆಸಿ. ಆಗ ಅವರು ಪಲಾಯನ ಮಾಡುತ್ತಾರೆ; ಮತ್ತು ಅದು ನನ್ನ ಅವಕಾಶವಾಗಿರುತ್ತದೆ” ಎಂದು ಮೀರ್ಜಾಫರ್ ನೇರಮಾತುಗಳಲ್ಲಿ ಪಿತೂರಿಯನ್ನು ಬಿಚ್ಚಿಟ್ಟಿದ್ದಾನೆ.
ಮುಂದುವರಿದು, ಸೈನಿಕರು ನಗರಕ್ಕೆ (ಮುರ್ಷಿದಾಬಾದ್) ಮರಳಲು ಬಯಸುತ್ತಾರೆ. ಏನಿದ್ದರೂ ರಾತ್ರಿ ವೇಳೆ ದಾಳಿ ಮಾಡಿ. ನಾವು ಮೂವರು ನವಾಬನ ಎಡಭಾಗದಲ್ಲಿರುತ್ತೇವೆ. ಖೋಜಾಹದ್ದೀ ನವಾಬನ ಜೊತೆ ದೃಢವಾಗಿರುತ್ತಾನೆ. ನೀವು ಬಂದಲ್ಲಿ ಅವನನ್ನು ವಶಪಡಿಸಿಕೊಳ್ಳಬಹುದು. ನಾವು ಮೂವರು ನಿಮ್ಮ ಸೇವೆಗೆ ಸಿದ್ಧರಿದ್ದೇವೆ. ಅಲ್ಲಿ ನಿಮ್ಮನ್ನು ಕಾಣುತ್ತೇವೆ… ಕಾಲಾಳುಗಳ ಕಮಾಂಡರ್ಗಳು ತಮ್ಮ ಜಾಗ ಬಿಟ್ಟಿದ್ದಾರೆ. ಕೋವಿಗಳನ್ನು ಅಲ್ಲೇ ಬಿಟ್ಟಿದ್ದಾರೆ. ಮೀರ್ ಮದನ್ ಸೈನ್ಯ ಭಾಗಶಃ ಮಾತ್ರ ಉಳಿದುಕೊಂಡಿದೆ. ಆ ಅವಕಾಶವನ್ನು ನೀವು ಬಳಸಿಕೊಂಡು ಸೈನ್ಯವನ್ನು ಮುನ್ನುಗ್ಗಿಸಿದ್ದರೆ ಕೆಲಸ ಮುಗಿಯುತ್ತಿತ್ತು. ಆಗ ನಾನು ದೂರದಲ್ಲಿದ್ದ ಬಗ್ಗೆ ಬೇಸರವೆನಿಸುತ್ತದೆ. ಕೊದ್ದಂ ಹುಸೇನ್, ಮೀರಾನ್, ಮೀರ್ಕಾಸಿಂ, ಲತೀಫ್ಖಾನ್, ರಾ ದುರ್ಲಭ್ ಸೇರಿ ನಾವೆಲ್ಲ ಕರ್ನಲ್ಗೆ (ಕ್ಲೈವ್ಗೆ) ನಮ್ಮ ಸಲಾಂಗಳನ್ನು ಸಲ್ಲಿಸುತ್ತೇವೆ” ಎಂದಿದ್ದ ತನ್ನ ಪತ್ರದಲ್ಲಿ ಮೀರ್ಜಾಫರ್.
ಇದೆಲ್ಲ ಮುಂದಿನ ಕಥೆ. ಈ ರೀತಿ ದಾರಿಯನ್ನು ಸುಗಮಗೊಳಿಸಿದ್ದು ಗೊತ್ತಿಲ್ಲದೆ ಕ್ಲೈವ್ ಇನ್ನೂ ತನ್ನ ಕೆಲಸದಲ್ಲಿ ನಿರತನಾಗಿದ್ದ. ಇಕ್ಕಟ್ಟಾದ ಮುಂಭಾಗದಲ್ಲಿ ಕಾದಾಟ ಜೋರಾಗಿತ್ತು. ಫ್ರೆಂಚರು ಮತ್ತು ಕೆಲವು ಬಂದೂಕುಧಾರಿಗಳು ಲಭ್ಯವಿದ್ದ ಎಲ್ಲ ರಕ್ಷಣಾತ್ಮಕ ಸ್ಥಳಗಳಿಂದ ಗುಂಡುಹಾರಿಸುತ್ತಿದ್ದರು. ಕ್ಲೈವ್ ಸಿಪಾಯಿಗಳ ಒಂದು ಕಂಪೆನಿಯನ್ನು ದಂಡೆಯ ಹಿಂಭಾಗಕ್ಕೆ ಕಳುಹಿಸಿದ. ಅದು ನವಾಬನ ಸೈನ್ಯಕ್ಕೆ ಸಮೀಪವಿತ್ತು. ಅಲ್ಲಿಂದ ಅವರು ಸಣ್ಣ ಆಯುಧಗಳಿಂದ ಗುಂಡು ಹಾರಿಸಿದರೆ ಬ್ರಿಟಿಷ್ ಸೈನ್ಯ ಕೆರೆ ಬದಿಯ ನಾಲ್ಕು ಫಿರಂಗಿಗಳಿಂದ ದಾಳಿ ನಡೆಸುತ್ತಿತ್ತು. ಅಲ್ಲಿ ಕೆರೆಯ ಬಳಿ ಮಣ್ಣಿನ ದಿಬ್ಬವಿದ್ದು ಅಲ್ಲಿಂದ ಗುಂಡು ಹಾರಿಸಲು ಬ್ರಿಟಿಷರಿಗೆ ಅನುಕೂಲವಿತ್ತು. ಆ ಮೂಲಕ ನವಾಬನ ಸೈನ್ಯವನ್ನು ಪ್ರಚೋದಿಸಿ ರಕ್ಷಣಾತ್ಮಕ ನೆಲೆಯಿಂದ ಹೊರಗೆ ಎಳೆಯಬಹುದಿತ್ತು. ಕೆಲವು ಕೋವಿಧಾರಿಗಳ ಸಹಿತ ಅವರು ದಾಳಿಗೆ ಮುಂದೆ ಬಂದರು. ಅಪಾಯವನ್ನು ಅರಿತ ಕ್ಲೈವ್ ತನ್ನ ಸೈನ್ಯದ ಒಂದು ಭಾಗವನ್ನು ಜಾಗ ಬದಲಿಸಿ ನಿಲ್ಲಿಸಿದ.
ತನ್ನ ಬಳಿ ಇದ್ದ ಸೈನ್ಯದ ಅರ್ಧಭಾಗ ಮತ್ತು ಮದ್ದುಗುಂಡು ಪಡೆ(ಆರ್ಟಿಲರಿ)ಯನ್ನು ಜಾಗ ನೋಡಿ ನಿಲ್ಲಿಸಿದ. ಉಳಿದ ಅರ್ಧವನ್ನು ಎಡದಲ್ಲಿ ಸುಮಾರು ಇನ್ನೂರು ಗಜ ದೂರ ಸ್ವಲ್ಪ ಎತ್ತರದ ಜಾಗದಲ್ಲಿ ನಿಲ್ಲಿಸಿದ; ಫಿರಂಗಿದಳವನ್ನು ಅದಕ್ಕೆ ಅನುಗುಣವಾಗಿ ನಿಲ್ಲಿಸಿದ. ನವಾಬನ ಸೈನ್ಯದಲ್ಲಿ ಆರ್ಟಿಲರಿ ಗಾಡಿಗಳನ್ನು ಎಳೆಯುತ್ತಿದ್ದ ಎತ್ತುಗಳನ್ನು ಗುಂಡುಹಾರಿಸಿ ಕೊಂದಾಗ ಅದೆಲ್ಲ ಅಸ್ತವ್ಯಸ್ತವಾಯಿತು. ಆದರೆ ಫ್ರೆಂಚ್ ಪಡೆಯಿಂದ ಫಿರಂಗಿ ದಾಳಿ ಹಾಗೂ ಬೇರೆ ಬೇರೆ ಕಡೆಯಿಂದ ಬಂದೂಕುಗಳ ಗುಂಡು ಹಾರಾಟ ನಡೆಯುತ್ತಲೇ ಇತ್ತು. ನವಾಬನ ಕಡೆಯ ಕುದುರೆ ಸವಾರರು ಕೈಯಲ್ಲಿ ಖಡ್ಗ ಹಿಡಿದು ಮುನ್ನುಗ್ಗುತ್ತಿದ್ದರು. ಆದರೆ ಇಂಗ್ಲಿಷರ ಗುಂಡು ಬರುತ್ತಲೇ ನಿಲ್ಲುತ್ತಿದ್ದರು; ಮತ್ತು ಹಿಂದೆ ಸರಿಯುತ್ತಿದ್ದರು.
ಸೈನ್ಯ ವಾಪಸು
ಎರಡೂ ಕಡೆಯವರು ಸುಮಾರು ಎರಡು ತಾಸು ಇದೇ ರೀತಿ ಗುಂಡು ಹಾರಿಸುತ್ತಲೇ ಇದ್ದರು. ಕ್ಲೈವ್ ಸೇನೆಗೆ ಪರಿಸ್ಥಿತಿ ಕಷ್ಟಕರವಾಗಿಯೇ ಇತ್ತು. ಆದರೆ ಸಂಜೆ ೪ ಗಂಟೆಯ ಹೊತ್ತಿಗೆ ಈ ಮೊದಲು ನಿಷ್ಕ್ರಿಯವಾಗಿದ್ದ ಒಂದಷ್ಟು ಸೈನ್ಯ ರಣರಂಗದಿಂದ ದೂರ ಹೋಗುತ್ತಿತ್ತು; ಹೋಗುವುದು ನವಾಬನ ಸೈನ್ಯದ ಜೊತೆಗಲ್ಲ. ಆಗ ಕ್ಲೈವ್ಗೆ ಪಿತೂರಿಗಾರ ಮೀರ್ಜಾಫರ್ ಹೇಳಿದ ಮಾತು ಸತ್ಯವೆಂದು ಗಮನಕ್ಕೆ ಬಂತು; ತಾವು ಸಿರಾಜ್ ಪರವಾಗಿ ಯುದ್ಧಕ್ಕೆ ಇಳಿಯುವುದಿಲ್ಲವೆಂದು ಮೀರ್ಜಾಫರ್ ಮತ್ತಿತರರು ಹೇಳಿದ್ದರು. ಆಗ ಚುರುಕಾದ ಕರ್ನಲ್ ಕ್ಲೈವ್ ನೇರವಾಗಿ ಶತ್ರುಸೈನ್ಯದ ಮಧ್ಯಕ್ಕೆ ಮುನ್ನುಗ್ಗಲು ನಿರ್ಧರಿಸಿದ. ಐರೋಪ್ಯರು ಮತ್ತು ಭಾರತೀಯ ಸಿಪಾಯಿಗಳನ್ನು ಒಳಗೊಂಡ ಒಂದು ಸೇನಾವಿಭಾಗಕ್ಕೆ ಫ್ರೆಂಚ್ಪಡೆಯ ಮೇಲೆ ದಾಳಿ ನಡೆಸಲು ಹೇಳಿದ. ಅಂಥದೇ ಇನ್ನೊಂದು ವಿಭಾಗವನ್ನು ಪೂರ್ವದ ಗುಡ್ಡದ ಕಡೆಗೆ ಕಳುಹಿಸಿದ. ಅಲ್ಲೊಂದು ಹೊಂಚುದಾಳಿ (ambush) ನಡೆಯಬಹುದೆಂದು ಆತನ ನಿರೀಕ್ಷೆಯಿತ್ತು. ಸೈನ್ಯದ ಪ್ರಮುಖ ಭಾಗ ಮಧ್ಯದಲ್ಲಿದ್ದು ಆಚೀಚಿನವರಿಗೆ ನೆರವಾಗಲು ಸಿದ್ಧವಾಗಿತ್ತು.
ಈ ಬಗೆಯ ಮುನ್ನುಗ್ಗುವಿಕೆ ಫಲ ನೀಡಿತು. ಒಂದೇ ಒಂದು ಗುಂಡುಹಾರಿಸದೆ ಗುಡ್ಡದ ಪ್ರದೇಶವು ವಶಕ್ಕೆ ಬಂತು. ಫ್ರೆಂಚ್ ಪಡೆಗೆ ಇದು ದುಬಾರಿಯಾಯಿತು. ಫಿರಂಗಿಗಳನ್ನು ಬಿಟ್ಟು ಅವರು ಹಿಂದೆ ಸರಿದರು. ಕಲ್ಕತ್ತಾ ಸೆಲೆಕ್ಟ್ ಕಮಿಟಿಗೆ ಬರೆದ ಪತ್ರದಲ್ಲಿ ರಾಬರ್ಟ್ ಕ್ಲೈವ್ ಆ ಬಗ್ಗೆ ಹೇಳಿದ್ದ: “ಫ್ರೆಂಚರು ತಮ್ಮ ಹಳೆಯ ನೆಲೆಯಲ್ಲಿ ತಮ್ಮ ಘಟಕಕ್ಕೆ ಮತ್ತೆ ಧೈರ್ಯ ತುಂಬಲು ಯತ್ನಿಸಿದರು; ತೋಟದ ಎದುರುಭಾಗದಿಂದ ನಮ್ಮ ಮೇಲೆ ಗುಂಡುಹಾರಿಸಿದರು. ಮತ್ತೆ ತಮ್ಮ ಫಿರಂಗಿಗಳ ಬಳಿ ಬರಲು ಪ್ರಯತ್ನಿಸಿದರು. ಆದರೆ ನಾವು ಬಿರುಸಾಗಿ ಗುಂಡುಹಾರಿಸಿದ ಕಾರಣ ಅವರಿಗೆ ತಮ್ಮ ಕೂಲಿಯಾಳುಗಳು ಮತ್ತು ಎತ್ತುಗಳನ್ನು ಮುಂದೆ ತರಲು ಸಾಧ್ಯವಾಗಲಿಲ್ಲ. ಸಂಜೆ ೪ ಗಂಟೆಯ ಹೊತ್ತಿಗೆ ನಮ್ಮ ಗ್ರೆನೇಡ್ನವರು ಮತ್ತು ಸಿಪಾಯಿಗಳು ಆ ಎರಡೂ ಸ್ಥಳಗಳ ಮೇಲೆ ದಾಳಿ ನಡೆಸಿದರು; ಆಗಲೇ ಅವರ ಮದ್ದುಗುಂಡುಗಳು ಸ್ಫೋಟಗೊಂಡವು” ಎಂದಾತ ಸೆಲೆಕ್ಟ್ ಕಮಿಟಿಗೆ ತಿಳಿಸಿದ್ದ.
ಜನರಲ್ಗಳು ವಾಪಸು
ನವಾಬನ ಕಡೆಯ ಪ್ರತಿರೋಧವು ಧೂಳೀಪಟದಲ್ಲಿ ಪರ್ಯವಸಾನಗೊಂಡಿತು. ದಂಡನಾಯಕ ಮೋಹನ್ಲಾಲ್ನನ್ನು ಸಿರಾಜ್ ವಾಪಸು ಕರೆಸಿಕೊಂಡ. ಫ್ರೆಂಚ್ ಯೋಧರು ತಮ್ಮ ನೆಲೆಯನ್ನು ಬಿಟ್ಟುಕೊಟ್ಟರು. ಮಾಣಿಕ್ಚಂದ್ (ಕಲ್ಕತ್ತಾ ಸಂರಕ್ಷಕ) ಕೂಡ ಹಿಂದೆ ಸರಿದ. ಮೀರ್ಜಾಫರ್, ರಾ ದುರ್ಲಭ್ ಮತ್ತು ಯಾರ್ ಲತೀಫರ ಸೈನ್ಯಗಳು ರಣರಂಗದಿಂದ ವಾಪಸು ಹೋಗುತ್ತಿರುವ ದೃಶ್ಯ ನವಾಬನ ಸೇನೆಯ ಸ್ಥೈರ್ಯವನ್ನು ಪೂರ್ತಿ ಕುಂದಿಸಿತು. ಜೊತೆಗೆ ನವಾಬನಿಗೆ ವಿಧೇಯವಾಗಿದ್ದ ಸೈನ್ಯ ಪಲಾಯನ ಮಾಡಿತು. ಸಿರಾಜ್ ಸೂಚನೆಯಂತೆ ಮೋಹನಲಾಲ್ ಕೆಳಗಿನ ಪಡೆ ಹಿಂದೆ ಸರಿದಿದ್ದು ಸೇನೆಯ ಮೇಲೆ ಪೂರ್ಣ ಪ್ರಭಾವವನ್ನು ಬೀರಿತು. ಆ ಬಗ್ಗೆ ಯುದ್ಧದ ದಾಖಲೆ ‘ಸಿಯಾರ್’ ಹೀಗೆ ಹೇಳಿದೆ: “ಜನರಲ್ಗಳು ವಾಪಸಾಗುವ ದೃಶ್ಯ ಸೈನಿಕರ ಧೈರ್ಯವನ್ನು ಕುಸಿಯುವಂತೆ ಮಾಡಿತು. ಅದೇ ವೇಳೆ ಗುಪ್ತಚರರ ಕೆಲಸ ಕೂಡ ನಡೆಯುತ್ತಿತ್ತು. ಸಮೀಪದವರು ಮಾಡಿದಂತೆ ಇತರರು ಕೂಡ ಗುಂಪುಗಳನ್ನು ಒಡೆದರು. ಈ ಪರಿಸ್ಥಿತಿ ನಾಚಿಕೆಗೇಡಿಗೆ ಉದಾಹರಣೆಯಂತಿತ್ತು. ಬೆಂಬತ್ತದಿದ್ದರೂ ಕೂಡ ಎಲ್ಲರೂ (ರಣರಂಗದಿಂದ) ಓಡುತ್ತಿದ್ದರು.
ಈ ಪರಿಸ್ಥಿತಿ ಸಿರಾಜ್ನನ್ನು ಭಯಭೀತನನ್ನಾಗಿ ಮಾಡಿತು. ಮೀರ್ಜಾಫರ್ ಹೇಳಿದಾಗ ಆತ ಹಿಂದೆ ಸರಿಯಲು ಒಪ್ಪಿದ ಕಾರಣವೆಂದರೆ, ಇನ್ನೊಂದು ದಿನ ಯುದ್ಧ ಮಾಡಬಹುದು ಎಂಬುದಾಗಿತ್ತು. ಅವನ ಮೂವರು ಜನರಲ್ಗಳು ಯುದ್ಧವನ್ನೇ ಮಾಡದೆ ವಾಪಸಾದರೆನ್ನುವ ಸುದ್ದಿ ಕೇಳಿಸಿತು; ಮತ್ತೆ ಆ ದೃಶ್ಯ ಕಣ್ಣೆದುರು ಬಂತು. ತಾನು ದಮ್ಮಯ್ಯ ಹಾಕಿದರೂ ಕೂಡ ಮೀರ್ಜಾಫರ್ ಯುದ್ಧದಲ್ಲಿ ಅವರ ಪರವಾಗಿ ಒಂದು ಬೆರಳನ್ನೂ ಎತ್ತಲಿಲ್ಲ. ಇದರಿಂದ ಅವರ ಪಿತೂರಿ ಪೂರ್ತಿ ಬಯಲಾಯಿತು. ಅದು ಪೂರ್ಣರೂಪದ ಪಿತೂರಿಯಾಗಿತ್ತು. ಈಗ ಸಿರಾಜ್ ತನ್ನ ಸೈನ್ಯವು ಯಾರೂ ಬೆನ್ನಟ್ಟದಿದ್ದರೂ ಕೂಡ ಓಡುವುದನ್ನು ಕಂಡ; ಮತ್ತೆ ಈ ಓಡುವವರನ್ನು ಕ್ಲೈವ್ ಸೈನ್ಯ ಬೆನ್ನಟ್ಟಿತು.
ನವಾಬನ ಪಲಾಯನ
ತನ್ನ ಸೈನ್ಯ ರಣರಂಗವನ್ನು ಬಿಟ್ಟು ಹೋಗುತ್ತಿದೆ ಎಂದು ಕೇಳಿದಾಗ ನವಾಬ ಸಿರಾಜುದ್ದೌಲನಿಗೆ ಮೊದಲಿಗೆ ಆಶ್ಚರ್ಯವಾಯಿತು. ಅವನ ಮುಂದೆ ಇಂಗ್ಲಿಷರ ಭಯ ಮಾತ್ರ ಇದ್ದುದಲ್ಲ; ಜೊತೆಗೆ ದೇಶದ ಒಳಗಿನ ಶತ್ರುಗಳು ಕೂಡ ಇದ್ದರು. ಇದನ್ನು ಕಂಡು ಅವನ ಮನಸ್ಸಿನ ನಿರ್ಧಾರ ಪೂರ್ತಿ ಕುಸಿಯಿತು. ರಣರಂಗವನ್ನು ಬಿಟ್ಟು ಓಡುವ ಸಾಮಾನ್ಯರೊಂದಿಗೆ ಅವನು ಕೂಡ ಸೇರಿಕೊಂಡ. ಒಂದು ಒಂಟೆಯನ್ನು ಏರಿದ, ನವಾಬ ಅದನ್ನು ಸಾಧ್ಯವಾದಷ್ಟು ವೇಗವಾಗಿ ಓಡಿಸುವಂತೆ ಆದೇಶ ನೀಡಿದ; ಜೊತೆಗೆ ಸುಮಾರು ೨,೦೦೦ ಕುದುರೆ ಸವಾರರ ಪಡೆ ಇತ್ತು.
ಸಂಜೆ ೫ ಗಂಟೆಯ ಹೊತ್ತಿಗೆ ರಾಬರ್ಟ್ ಕ್ಲೈವ್ ಸೇನಾಶಿಬಿರಕ್ಕೆ ಬಂದಾಗ ಅದು ಖಾಲಿಯಾಗಿತ್ತು. ಟೆಂಟ್ಗಳು, ಮದ್ದುಗುಂಡು, ಬ್ಯಾಗೇಜ್, ಉಗ್ರಾಣ (ಆಹಾರ ಪದಾರ್ಥ) ಮಾತ್ರ ಅಲ್ಲಿದ್ದವು. ಒಬ್ಬ ಬ್ರಿಟಿಷ್ ಕ್ಯಾಪ್ಟನ್ ಹೇಳಿದಂತೆ, ಬೆಳಗ್ಗೆ ಭೀಕರವಾಗಿ ಗುಂಡಿನ ಮಳೆ ಕರೆಯುತ್ತಿದ್ದ ಫಿರಂಗಿಗಳು, ಅವುಗಳಿಗೆ ಕಟ್ಟಿದ ನೂರಾರು ಎತ್ತುಗಳು ಅನಾಥ ಸ್ಥಿತಿಯಲ್ಲಿದ್ದವು; ಒಟ್ಟಿನಲ್ಲಿ ಅತ್ಯಂತ ಗೊಂದಲಮಯ ಪರಿಸ್ಥಿತಿ.
ಒಟ್ಟಿನಲ್ಲಿ ತನಗೊಂದು ವಿಜಯ ಲಭಿಸಿತೆನ್ನುವುದು ರಾಬರ್ಟ್ ಕ್ಲೈವ್ ಗಮನಕ್ಕೆ ಬಂತು. ಮೀರ್ಜಾಫರ್ ಅಪರಾಹ್ನ ಕಳುಹಿಸಿದ ಪತ್ರ ನಿಜವಾಯಿತೆಂದು ಅನ್ನಿಸಿತು. ಸ್ವಲ್ಪ ಹೊತ್ತಿನಲ್ಲಿ ಜಾಫರ್ನಿಂದ ಇನ್ನೊಂದು ಪತ್ರ ಬಂತು. “ನಿಮ್ಮ ತಂತ್ರವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ಮಿರ್ಜಾ ಅಮರ್ಬೇಗ್, ವಾಟ್ಸ್ ಅಥವಾ ಖೋಜಾ ಪೆದ್ರೂಸ್ರಲ್ಲಿ ಒಬ್ಬನನ್ನು ನನ್ನ ಬಳಿ ಕಳುಹಿಸಿ. ನಿಮ್ಮ ಅಪೇಕ್ಷೆ ಮೇರೆಗೆ ನಾನಿಲ್ಲಿ ಕೆರೆಯ ದಂಡೆಯ ಮೇಲೆ ಇದ್ದೇನೆ” ಎಂದು ಆ ದೇಶದ್ರೋಹಿ ತಿಳಿಸಿದ್ದ.
ಕ್ಲೈವ್ ಕೂಡಲೆ ಉತ್ತರಿಸಿ ತನ್ನನ್ನು ಮರುದಿನ ಬೆಳಗ್ಗೆ ದೌಡ್ಪುರದಲ್ಲಿ ಕಾಣುವಂತೆ ಹೇಳಿದ. ಅದಕ್ಕೆ ಮುನ್ನ ಆ ದಿನ ಮಾಡಬೇಕಾದ ಹಲವು ಕೆಲಸಗಳಿದ್ದವು. ಯಾವುದೇ ಹಂತದಲ್ಲಿ ಸಿರಾಜ್ನ ಸೈನಿಕರು ತಿರುಗಿ ನಿಲ್ಲದಂತೆ ರ್ಯಾಲಿ ಮಾಡದಂತೆ) ಅವರನ್ನು ಬೆನ್ನಟ್ಟಬೇಕಾಗಿತ್ತು. ತನ್ನ ಸೈನಿಕರಿಗೆ ಆ ಕೆಲಸವನ್ನು ವಹಿಸಬೇಕಿತ್ತು. ಯಾವುದೇ ಕುದುರೆಯಿಲ್ಲದೆ ನಡೆದುಕೊಂಡು ಹೋಗಿ ಬೆನ್ನಟ್ಟಬೇಕಿತ್ತು. ನವಾಬನ ಕಡೆಯವರು ಬಿಟ್ಟುಹೋದ ಲೂಟಿಯ ವಸ್ತುಗಳನ್ನು ಪರಿಶೀಲಿಸಬೇಕಿತ್ತು. ವಿಜಯದ ಸಂತೋಷದಲ್ಲಿ ಕ್ಲೈವ್ ತನ್ನ ಸೈನಿಕರೊಂದಿಗೆ ತಮಾಷೆಯಾಗಿ ಮಾತನಾಡುತ್ತಿದ್ದ. ಅವರಿಗೆ ಖರ್ಚಿಗೆ ಹಣ, ಇನಾಮುಗಳನ್ನು ಕೂಡ ನೀಡಿದ. ನಿಮಗಿನ್ನು ಹಣ ಸಿಗುತ್ತದೆಂದು ಇಂಗ್ಲಿಷ್ ಸೈನಿಕರಿಗೆ ತಿಳಿಸಲಾಯಿತು. ಜೊತೆಗೆ ಸೊತ್ತುಗಳೊಂದಿಗೆ ದೌಡ್ಪುರಕ್ಕೆ ಹೋಗಲು ಆದೇಶ ನೀಡಲಾಯಿತು. ಅಲ್ಲಿದ್ದ ಲೂಟಿಯ ವಸ್ತುಗಳನ್ನು ನೋಡುತ್ತಾ ಅವರು ನಿಲ್ಲಬಾರದೆಂಬುದು ಉದ್ದೇಶ. ಆದರೂ ಅವರು ನಿಂತರು. ಅಧಿಕಾರಿಗಳು ಎತ್ತುಗಳನ್ನು ವಶಕ್ಕೆ ಪಡೆಯುವವರೆಗೂ ನಿಂತರು. ನವಾಬನ ಕಡೆಯ ೪೨ ಫಿರಂಗಿಗಳು, ಕ್ಯಾರಿಯೇಜ್ಗಳು ಅಲ್ಲಿದ್ದವು.
ಪಲಾಯನ ಮಾಡುತ್ತಿದ್ದ ನವಾಬನ ಸೈನಿಕರನ್ನು ಬೆನ್ನಟ್ಟಿದ ಮೇಜರ್ ಕೂಟ್ ನವಾಬನ ಕ್ಯಾಂಪಿಗೆ ಭೇಟಿ ನೀಡಿದ. ಶತ್ರು ಸೈನಿಕರನ್ನು ಬೆನ್ನಟ್ಟುವ ಕೆಲಸವನ್ನು ಕತ್ತಲೆಯಾಗುವವರೆಗೂ ಮುಂದುವರಿಸಿದರು. ಪ್ಲಾಸಿಯಿಂದ ಸುಮಾರು ಹತ್ತು ಕಿ.ಮೀ. ಉತ್ತರದ ದೌಡ್ಪುರದವರೆಗೆ ಬೆನ್ನಟ್ಟಿ ಅಲ್ಲಿ ನಿಂತರು. ಮೇಜರ್ ಕಿಲ್ಪ್ಯಾಟ್ರಿಕ್ನ ಕೆಳಗಿನ ಸೈನ್ಯ ಅನಂತರ ಬಂದು ಅವರನ್ನು ಸೇರಿಕೊಂಡಿತು. ಆಗ ರಾತ್ರಿ ೮ ಗಂಟೆ. ಈ ರೀತಿಯಲ್ಲಿ ಪ್ಲಾಸಿ ಯುದ್ಧ ಕೊನೆಗೊಂಡಿತು.
* * *
ಸಾಮ್ರಾಜ್ಯ ಸ್ಥಾಪನೆಗೆ ನಾಂದಿ
ಇದು ಒಂದು ಸಾಮ್ರಾಜ್ಯ ಸ್ಥಾಪನೆಗೆ ನಾಂದಿಯಾಗುವ ಸಂದರ್ಭ. ನವಾಬನ ವಿರುದ್ಧ ಷಡ್ಯಂತ್ರ ನಡೆಸಿದ ಪಿತೂರಿಗಾರರು ದೊಡ್ಡ ಸಂಖ್ಯೆಯ ಸೈನಿಕರನ್ನು ಯುದ್ಧದಿಂದ ಹೊರಗಿಟ್ಟರು. ಅದರಿಂದಾಗಿ ಇದು ತುಂಬ ಕಡಮೆ ಖರ್ಚಿನಲ್ಲಿ ಲಭಿಸಿದ ವಿಜಯವಾಯಿತು. ಯುದ್ಧದಲ್ಲಿ ಸತ್ತವರ ಸಂಖ್ಯೆಯೂ ಕಡಮೆಯೇ. ಅದರಲ್ಲಿ ಮದ್ದುಗುಂಡಿನ ಸೈನಿಕರು ಮೃತಪಟ್ಟದ್ದು ಜಾಸ್ತಿ. ತನ್ನ ಕಡೆ ಹೆಚ್ಚು ಜೀವಹಾನಿಯಾಗಿಲ್ಲ ಎಂಬುದು ಕ್ಲೈವ್ಗೆ ಸಮಾಧಾನ ನೀಡಿತು. ಅದರಲ್ಲೂ ಯೂರೋಪ್ನವರ ಜೀವಗಳು ಹೆಚ್ಚು ಹಾನಿಯಾಗಲೇ ಇಲ್ಲ. ಆ ಬಗ್ಗೆ ಕ್ಲೈವ್ ಮದ್ರಾಸಿನ ಸೈಂಟ್ ಜಾರ್ಜ್ ಕೋಟೆಯ ಸೆಲೆಕ್ಟ್ ಕಮಿಟಿಗೆ ವರದಿ ನೀಡಿದ. “ನಮ್ಮ ಕಡೆ ೨೨ ಜನ ಸತ್ತು ೫೦ ಜನರಿಗೆ ಗಾಯಗಳಾದವು. ಇದು ಮುಖ್ಯವಾಗಿ ಕರಿಯರು” ಎಂದಾತ ಹೇಳಿದ್ದ.
ಕ್ಲೈವ್ ಸಿಪಾಯಿಗಳಂತೆಯೇ ಸಂಚಾರಿ ಬಾಡಿಗೆ ಸೈನಿಕರ ಬಗ್ಗೆ ಕೂಡ ಅಗೌರವದ ಮಾತನಾಡಿದ್ದಾನೆ. ಫ್ರೆಂಚ್ ಅಧಿಕಾರಿ ಲಾ ಕೂಡ ಸಿಪಾಯಿಗಳ ಬಗ್ಗೆ ತುಂಬ ಕಟುವಾಗಿ ಹೇಳಿದ್ದಿದೆ. ನಾಟಿ ಸೈನಿಕರು ಸಾಮಾನ್ಯವಾಗಿ (ಬ್ರಿಟಿಷ್) ಕಂಪೆನಿ ಮತ್ತು ರಾಜ್ (ಭಾರತೀಯ ಸಂಸ್ಥಾನಗಳು) ಜೊತೆ ನಿಲ್ಲುತ್ತಾರೆ. ವಿಶೇಷವಾಗಿ ಒಂದು ಶಿಸ್ತಿನ ಪ್ರಜ್ಞೆಯನ್ನು ಗಳಿಸುವವರೆಗೆ ಸಿಪಾಯಿ ಎಂಬುದೊಂದು ಪ್ರಾಣಿ ಎಂದು ಹೇಳಿದ್ದಾನೆ. “ಕೆಂಪು ಜಾಕೆಟ್ ಮತ್ತು ಕೋವಿ ಸಿಕ್ಕಿದೊಡನೆ ಸಿಪಾಯಿ ತಾನೊಬ್ಬ ವಿಭಿನ್ನ ವ್ಯಕ್ತಿ ಎಂದು ತಿಳಿಯುತ್ತಾನೆ. ತಾನು ಕೂಡ ಒಬ್ಬ ಐರೋಪ್ಯ. ತನ್ನ ಅರ್ಹತೆ ತುಂಬ ದೊಡ್ಡದು. ದೇಶದ ಎಲ್ಲರ ಮೇಲೆ ಅಧಿಕಾರ ಚಲಾಯಿಸುವ ಹಕ್ಕು ತನಗಿದೆ. ಅವರು ಕಾಫಿರರು ಅಥವಾ ದರಿದ್ರ ನೀಗ್ರೋಗಳು ಎಂದಾತ ತಿಳಿಯುತ್ತಾನೆ. ತಾನು ಇತರರಂತೆಯೇ ಕರಿಯ ಎಂಬುದು ಮರೆತುಹೋಗುತ್ತದೆ” ಎಂದಿದ್ದಾನೆ ಲಾ.
ಸಿರಾಜ್ನ ಸೈನ್ಯದ ಸುಮಾರು ೫೦೦ ಜನ ಸತ್ತಿರಬೇಕೆಂದು ಮೀರ್ಜಾಫರ್ ಹಾಗೂ ಕ್ಲೈವ್ ಹೇಳಿದ್ದಾರೆ. ಕಾಲಾಳುಗಳು, ಅಶ್ವಪಡೆಯವರು ಸೇರಿದಂತೆ ಒಟ್ಟು ಸುಮಾರು ೧,೫೦೦ ಸೈನಿಕರು ಸತ್ತರೆನ್ನುವ ಅಂದಾಜು ಕೂಡ ಇದೆ.
ಯುದ್ಧ ಮುಗಿದು ಮೂರು ದಿನಗಳಾದರೂ ರಾಬರ್ಟ್ ಕ್ಲೈವ್ ತೊಳಲಾಟ ನಿಂತಿರಲಿಲ್ಲ. ಜೂನ್ ೨೬ರಂದು ಕಲ್ಕತ್ತಾ ಸೆಲೆಕ್ಟ್ ಕಮಿಟಿಗೆ ಆತ ಬರೆದ ಪತ್ರ ಹೀಗಿದೆ: “ಗೌರವಾನ್ವಿತರೆ, ನಾನು ಕಮಿಟಿಗೆ ಬರೆದ ಪತ್ರಗಳಿಗೆ ಬಂದ ಉತ್ತರವು ವಿಲಕ್ಷಣವಾಗಿದೆ. ಒಂದು ವೇಳೆ ನಮ್ಮ ಈ ಸಾಹಸವು ವಿಫಲವಾಗಿದ್ದರೆ ನೀವು ಪೂರ್ತಿ ತಪ್ಪು ನನ್ನದೇ ಎಂದು ಹೇಳುತ್ತಿದ್ದಿರಿ ಎನಿಸುತ್ತದೆ.”
ಹೊಣೆ ವಹಿಸಿದ ಕೆಲವೇ ತಿಂಗಳಲ್ಲಿ ಕ್ಲೈವ್ ಬಂಗಾಳದಲ್ಲಿ ಭಾರೀ ಸೇನಾ ಯಶಸ್ಸು ಗಳಿಸಿದ. ಆದರೂ ಆತನಿಗೆ ಕಂಪೆನಿಯ ಅಧಿಕಾರಿಗಳು ಮತ್ತು ಬ್ರಿಟಿಷ್ ವ್ಯಕ್ತಿಗಳೊಂದಿಗೆ ಸಂಬAಧ ಸರಿಯಾಗಿರಲಿಲ್ಲ. ಬಾಯಲ್ಲಿ ಬೈಗುಳ ಮಾಮೂಲು; ಜಗಳಗಂಟ ಬೇರೆ. “ಪ್ಲಾಸಿಯುದ್ಧದ ನಮ್ಮ ಸಾಹಸ ವಿಫಲ ಎಂಬAತೆ ನೀವು ಎಲ್ಲ ಹೊಣೆಯನ್ನು ನನ್ನ ಮೇಲೆ ಹಾಕಿ ಪಾರಾಗುತ್ತಿದ್ದೀರಿ” ಎಂದು ಕೂಡ ಕ್ಲೈವ್ ಸೆಲೆಕ್ಟ್ ಕಮಿಟಿಗೆ ಹೇಳಿದ್ದ.
ಸೋತ ನವಾಬ ಅರಮನೆಯಲ್ಲಿ
ರಣರಂಗದಿಂದ ತರಾತುರಿಯಲ್ಲಿ ಹೊರಟ ನವಾಬ ಸಿರಾಜುದ್ದೌಲ ಮುರ್ಷಿದಾಬಾದ್ಗೆ ಬಂದ. ಬೇಸರದ ಛಾಯೆ ತುಂಬಿತ್ತು. ಕೆಲವು ಅಶ್ವಾರೋಹಿಗಳು ಇವನಿಗಿಂತ ತುಂಬ ಮೊದಲೇ ಬಂದಿದ್ದರು. ಮಧ್ಯರಾತ್ರಿಯ ಹೊತ್ತಿಗೆ ಬಂದ ಆತ ಸೀದಾ ತನ್ನ ಅರಮನೆಗೆ ಹೋದ. ಅಧಿಕಾರವಿಲ್ಲದ ತಾನೀಗ ಅಲ್ಲಿ ‘ಪರಯಾ’ ಎಂಬುದು ಆತನಿಗೆ ತಿಳಿಯಿತು. ತನ್ನ ರಕ್ಷಣೆಯ ಬಗ್ಗೆ ಪ್ರಮುಖ ಕಮಾಂಡರ್ಗಳಿಗೆ ಹೇಳಿ, ಅವರ ಸೇನೆಯನ್ನು ಸಜ್ಜುಗೊಳಿಸಿ ಇರಿಸಲು ಸೂಚಿಸಿದ. ಆದರೆ ಅವರೆಲ್ಲ ತಮ್ಮ ಮನೆಗಳಿಗೆ ಹೋದರು. ಅವನ ಮಾವ (ಪತ್ನಿಯ ತಂದೆ) ಮೊಹಮ್ಮದ್ ಇರಾಜ್ಖಾನ್ ಕೂಡ ಹಾಗೆಯೇ ಮಾಡಿದರು. ನವಾಬ ತನ್ನ ಮುಂಡಾಸನ್ನು ಮಾವನ ಕಾಲ ಬುಡದಲ್ಲಿಟ್ಟು ‘ದೇವರಾಣೆಗೂ ನನ್ನ ಬಳಿ ನಿಲ್ಲಿ’ ಎಂದು ವಿನಂತಿಸಿದ. ಆದರೆ ಅವರು ‘ನಿಲ್ಲಲಾರೆ’ ಎಂದು ವಿನೀತರಾಗಿ ಹೇಳಿ ಹೊರಟುಹೋದರು. ತನ್ನ ರಕ್ಷಣೆಗಾಗಿ ಅರಮನೆಯ ಬಳಿ ಕೆಲವು ಸೈನಿಕರನ್ನು ನಿಲ್ಲಿಸಲು ಯತ್ನಿಸಿದ.
ಸೇನೆ ಮತ್ತು ಆಸ್ಥಾನಗಳು ಆತನನ್ನು ತ್ಯಜಿಸಿದರೂ ಕೂಡ ಸಿರಾಜ್ ಕೆಲವರನ್ನು, ಮುಖ್ಯವಾಗಿ ಸ್ವಂತ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಯತ್ನಿಸಿದ. ಯಾರಾದರೂ ಹಣ ಕೇಳಿದರೆ ಕೂಡಲೆ ಕೊಡಿ ಎಂದು ಖಜಾನೆಯವರಿಗೆ ಆದೇಶಿಸಿದ. ಕೂಡಲೆ ಹಲವರು ಮುಂದೆ ಬಂದರು. ಸೈನಿಕರು ಸೇರಿದಂತೆ ಕೆಲವರು ಬಾಕಿ ಸಂಬಳವನ್ನು ಕೇಳಿದರು. ಮತ್ತೆ ಕೆಲವು ಸಿಬ್ಬಂದಿ ಮುಂಗಡ(ಸಾಲ)ಕ್ಕಾಗಿ ಬಂದರು. ಇನ್ನಷ್ಟು ಜನ ಏನೇನೋ ಕಥೆ ಕಟ್ಟಿ ಹಣ ಕೇಳಿದರು. ಅವರು ಮಾಡಿದ ನಾಟಕಕ್ಕೆ ಅನುಗುಣವಾಗಿ ಹಣ ಸಿಕ್ಕಿತು. ಯಾರಿಗೂ ನಿರಾಕರಿಸಬಾರದೆಂದು ನವಾಬನ ಸೂಚನೆಯಿತ್ತು. ಈ ವ್ಯವಹಾರ ಖಜಾನೆಯಲ್ಲಿ ಇಡೀ ರಾತ್ರಿ ನಡೆಯಿತು.
‘ದೇಶದ್ರೋಹ ಬೇಡ’
ಸಿರಾಜ್ಗೆ ಕೆಲವರು ಇಂಗ್ಲಿಷರ ಮುಂದೆ ಹಾಜರಾಗಿ ಎಂದು ಸಲಹೆ ನೀಡಿದರು. ‘ಅದು ದೇಶದ್ರೋಹವಾಗುತ್ತದೆ’ ಎಂದ ಆತ ಅದನ್ನು ತಿರಸ್ಕರಿಸಿದ. ಬೇರೆ ಕೆಲವರು ಭಾರೀ ಉಡುಗೊರೆ ನೀಡಿ ಸೈನಿಕರನ್ನು ಹುರಿದುಂಬಿಸಿ; ಅವರ ಮುಖ್ಯಸ್ಥರಾಗಿ ಕಾಣಿಸಿಕೊಳ್ಳಿ’ ಎಂದರು. ಅದಕ್ಕೆ ಆತ ಒಪ್ಪಿದಂತೆ ತೋರಿದರೂ ಕೂಡ ಬಹುಬೇಗ ಭಯ ಮರಳಿತು. ಬೆಳಗಾಗುವಾಗ ಆತನ ಬಳಿ ಇದ್ದದ್ದು ಅವನ ಅಂತಃಪುರದ ಹೆಂಗಸರು ಮತ್ತು ಕೆಲವರು ಮಾತ್ರ. ಜೂನ್ ೨೪ರ ಬೆಳಗ್ಗೆ ತನ್ನ ಹೆಂಗಸರನ್ನು ಕಳುಹಿಸಿದ. ಅವರ ಪೀಠೋಪಕರಣಗಳು ಮತ್ತು ಅಗತ್ಯ ವಸ್ತುಗಳನ್ನು ಆನೆಗಳ ಮೇಲೆ ಹೊರಿಸಿ ಕಳುಹಿಸಿದ. ತನ್ನ ಆಭರಣಗಳ ದೊಡ್ಡ ಭಾಗ ಮತ್ತು ಚಿನ್ನದ ರೂಪಾಯಿಗಳನ್ನು ಮೋಹನ್ಲಾಲ್ ಕೈಯಲ್ಲಿ ಪೂರ್ಣಿಯಾಗೆ ಕಳುಹಿಸಿದ. ಒಬ್ಬನೇ ಒಬ್ಬ ಗೆಳೆಯ ಕೂಡ ಇಲ್ಲದ ಸ್ಥಿತಿ. ಜೂನ್ ೨೪ರ ತಡರಾತ್ರಿ ಪತ್ನಿ, ಪ್ರಧಾನ ಪ್ರೇಯಸಿ ಮತ್ತು ಕೆಲವು ಇಷ್ಟದ ಸ್ತ್ರೀಯರೊಂದಿಗೆ ಸಾಧ್ಯವಾದಷ್ಟು ಚಿನ್ನ, ಆಭರಣಗಳ ಸಹಿತ ಮುರ್ಷಿದಾಬಾದ್ನಿಂದ ಈಶಾನ್ಯದಲ್ಲಿ ೨೦ ಕಿ.ಮೀ. ದೂರದಲ್ಲಿದ್ದ ಭಗವಾನ್ಗೋಲದ ಕಡೆಗೆ ಹೊರಟ. ದೋಣಿಯಲ್ಲಿ ಗಂಗಾನದಿಯನ್ನು (ಅಲ್ಲಿ ಅದಕ್ಕೆ ಪದ್ಮಾ ಎಂದು ಹೆಸರು) ದಾಟಿ ಪರಾರಿ ಆಗುವುದು ಆತನ ಉದ್ದೇಶವಾಗಿತ್ತು.
ಜೂನ್ ೨೪ರ ಸಂಜೆ ಮೀರ್ಜಾಫರ್ ಮುರ್ಷಿದಾಬಾದ್ಗೆ ಬಂದ. ಆತ ಸಿರಾಜ್ಗೆ ಕೂಡಲೆ ಏನನ್ನೂ ಮಾಡಲಿಲ್ಲ. ಮುರ್ಷಿದಾಬಾದ್ನ ಜನಾಭಿಪ್ರಾಯ ಹೇಗಿದೆ ಎಂದು ತಿಳಿಯದೆ ಏನನ್ನೂ ಮಾಡುವಂತಿರಲಿಲ್ಲ. ಜನ ಸಿರಾಜ್ಗೆ ಪರ ಇದ್ದಾರಾ, ವಿರೋಧವಿದ್ದಾರಾ ಎಂಬುದು ಅವನಿಗೆ ಬೇಕಿತ್ತು. ೨೪ರಂದು ಸಂಜೆ ಕ್ಲೈವ್ಗೆ ಪತ್ರ ಬರೆದು, “ಸಿರಾಜ್ ಇನ್ನೂ ಅರಮನೆಯಲ್ಲಿದ್ದಾನೆ. ನೀವು ಸೇನೆಯೊಂದಿಗೆ ಬರುವಿರೆಂದು ನಂಬುತ್ತೇನೆ. ನಾಳೆ ನೀವು ಬಂದಾಗ ಆತನನ್ನು ಬಂಧಿಸಬಹುದು; ಅಥವಾ ಕೊಲ್ಲಬಹುದು. ಬೇಗ ಬನ್ನಿ; ತಡಮಾಡಬೇಡಿ” ಎಂದು ಒತ್ತಾಯಿಸಿದ.
ಮೀರ್ಜಾಫರ್ ಭವಿಷ್ಯದ ದೊರೆ ಎನ್ನುವ ಸಂದರ್ಭ ಅಲ್ಲಿ ಕೂಡಿಬಂತು. ಆತ ಜಾನ್ ಕಂಪೆನಿಯ ಬಂಗಾಳದ ಸುಪ್ರೀಂ ಪವರ್ ಆದರೆ, ಕ್ಲೈವ್ ನೈಜ ಹೀರೋ ಆಗಿದ್ದ. ಮೀರ್ಜಾಫರ್ ಇಲ್ಲದಿದ್ದರೆ ನವಾಬ ಸಿರಾಜ್ ಏನೆಂಬುದು ಯುದ್ಧದಲ್ಲಿ ಗೊತ್ತಾಯಿತು. ಮಳೆಯಿಂದ ನವಾಬನ ಸೇನೆಯ ಗನ್ಪೌಡರ್ ಒದ್ದೆ ಆಗದಿದ್ದರೆ ಏನಾಗಬಹುದಿತ್ತು ಎಂಬ ಪ್ರಶ್ನೆ ಇದೆಯಾದರೂ ಪಿತೂರಿಗೆ ಭವಿಷ್ಯವು ಉಡುಗೊರೆ ನೀಡಿದ್ದು ಸತ್ಯ.
ಜೂನ್ ೨೫ರ ಮಧ್ಯಾಹ್ನದ ಹೊತ್ತಿಗೆ ಕ್ಲೈವ್ ಸೈನ್ಯ ಮುರ್ಷಿದಾಬಾದ್ನ ಹೊರಭಾಗಕ್ಕೆ ಬಂತು. ಕ್ಲೈವ್ ಎಚ್ಚರದಿಂದಿದ್ದ. ಗೊಂದಲದಲ್ಲಿದ್ದ ರಾಜಧಾನಿಯಲ್ಲಿ ವೈಯಕ್ತಿಕವಾಗಿ ಅಥವಾ ಸೈನ್ಯಕ್ಕೆ ಅಪಾಯವಾಗುವುದು ಅವನಿಗೆ ಬೇಕಿರಲಿಲ್ಲ. ಅಡ್ಮಿರಲ್ ವಾಟ್ಸನ್ ಮತ್ತು ಜಾನ್ ವಾಟ್ಸ್ರನ್ನು ಮೀರ್ಜಾಫರ್ ಭೇಟಿಗೆ ಕಳುಹಿಸಿದ. ಜೊತೆಗೆ ೧೦೦ ಸೈನಿಕರಿದ್ದರು. ಬ್ರಿಟಿಷ್ ಸೇನೆ ಬಂದಾಗ ಬಂಗಾಳದ ರಾಜಧಾನಿಯ ನಾಗರಿಕರಿಗೆ ಅಧಿಕಾರಿವು ಹಸ್ತಾಂತರವಾಗುತ್ತಿರುವುದು ಗಮನಕ್ಕೆ ಬಂತು. ತಮ್ಮ ಮುಂದಿನ ಲಾರ್ಡ್ಗಳು ಯಾರೆಂಬುದನ್ನು ಈ ಭೇಟಿ ತಿಳಿಸಿಕೊಟ್ಟಿತು.
ಇತ್ತ ಪಿತೂರಿಗಾರರ ಮುಂದಿದ್ದ ಸವಾಲೆಂದರೆ ನವಾಬ ಸಿರಾಜ್ನ ಸೋಲಿನಿಂದಾದ ಖಾಲಿಸ್ಥಳವನ್ನು ಅವರು ತುಂಬಬೇಕಿತ್ತು. ಸಿರಾಜ್ನನ್ನು ಪೂರ್ತಿಯಾಗಿ ಮುಗಿಸಬೇಕಿತ್ತು. ಜಾಫರ್ನನ್ನು ಔಪಚಾರಿಕವಾಗಿ ನವಾಬ ಎಂದು ಘೋಷಿಸಬೇಕಿತ್ತು. ಬಂಗಾಳ, ಬಿಹಾರ, ಬಿಹಾರಗಳ ಸುಬಾಗಳ ಅಧಿಕಾರವನ್ನು ಆತನಿಗೆ ವಹಿಸಬೇಕಿತ್ತು. ಆಗ ಮೀರ್ಜಾಫರ್ ತಾನೇ ನವಾಬನೆಂದು ಘೋಷಿಸಿಕೊಂಡು ಇಡೀ ಮುರ್ಷಿದಾಬಾದ್ನಲ್ಲಿ ಡಂಗುರ ಹೊಡೆಸಿದ. ಅಳಿಯ ಮೀರ್ ಕಾಸಿಮ್ನನ್ನು ಸಿರಾಜ್ನನ್ನು ಬೆನ್ನಟ್ಟಲು ಕಳುಹಿಸಿದ. ಸೋದರ ಮೀರ್ ದೌಡ್ನನ್ನು ರಾಜಮಹಲ್ನ ಫೌಜದಾರ್ ಆಗಿ ನೇಮಿಸಿ ಸಿರಾಜ್ ಬಂಧನದ ಕೆಲಸವನ್ನು ವಹಿಸಿದ. ದಿವಾನ ಮೋಹನಲಾಲ್, ಆತನ ಪುತ್ರ ಮತ್ತು ಜೊತೆಗಿದ್ದವರನ್ನು ಸೆರೆಹಿಡಿಯಲಾಯಿತು.
* * *
ಸುಲಿಗೆ ಆರಂಭ
ಪ್ಲಾಸಿ ಯುದ್ಧದ ಗೆಲವು ಬ್ರಿಟಿಷರಿಗೆ ಭಾರತದಲ್ಲಿ ಸಾಮ್ರಾಜ್ಯ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು ಎನ್ನುವುದು ಒಂದಾದರೆ, ಈ ದೇಶದಿಂದ ಸಾಧ್ಯವಾದಷ್ಟು ಸಂಪತ್ತನ್ನು ಕೊಳ್ಳೆಹೊಡೆಯುವುದು ಅವರ ಪರಮ ಧ್ಯೇಯವಾಗಿತ್ತು ಎನ್ನುವುದು ಮುರ್ಷಿದಾಬಾದ್ನಲ್ಲಿ ಒಂದೆರಡು ದಿನಗಳಲ್ಲೇ ಬಯಲಿಗೆ ಬಂತು. ಬಂಗಾಳ ಮತ್ತು ಒಟ್ಟು ಭಾರತದ ಲೂಟಿಯ ಆರಂಭವಾಗಿತ್ತು. ಸೇನಾಧಿಕಾರಿಗಳು, ಸೇನೆ ಮತ್ತು ಸೆಲೆಕ್ಟ್ ಕಮಿಟಿಗೆ ಉದಾರ ದಾನವಾಗಿ (ಡೊನೇಶನ್) ೨೨೦ ಲಕ್ಷ ರೂ.ಗಳನ್ನು ಕೊಡಬೇಕು ಎನ್ನುವ ಬೇಡಿಕೆಯನ್ನು ಅವರು ಔಪಚಾರಿಕ ಪಟ್ಟಾಭಿಷೇಕಕ್ಕೆ ಮುನ್ನವೇ ಮೀರ್ಜಾಫರ್ ಮುಂದಿಟ್ಟರು. ಕಂಪೆನಿ (ಈಸ್ಟ್ ಇಂಡಿಯಾ ಕಂಪೆನಿ)ಯೊಂದಿಗೆ ಈ ವ್ಯವಹಾರ ನಡೆಸಿದವ ಪಿತೂರಿಗಾರರಲ್ಲಿ ಒಬ್ಬನಾದ ರಾ ದುರ್ಲಭ್.
ಈ ಕುರಿತು ಬ್ರಿಟಿಷ್ ಅಧಿಕಾರಿ ವಾಟ್ಸ್ ರಾ ದುರ್ಲಭ್ ಜೊತೆ ಚೌಕಾಸಿಗಿಳಿದ. ಖಜಾನೆಯಲ್ಲಿರುವುದು ೧೪೦ ಲಕ್ಷ ರೂ. ಮಾತ್ರ; ೨೨೦ ಲಕ್ಷ ಎಲ್ಲಿಂದ ತರೋಣವೆಂದು ರಾ ಕೇಳಿದಾಗ (ಜೂನ್ ೨೬) ವಾಟ್ಸ್ ಕಟುವಾಗಿ ಮಾತನಾಡಿ ಒಪ್ಪಂದದಂತೆ ಕಂಪೆನಿಗೆ ಪೂರ್ತಿ ಹಣ ಕೊಡಬೇಕು ಎಂದ. ಖಜಾನೆಯಲ್ಲಿ ಇಲ್ಲವಾದರೆ, ಬ್ಯಾಂಕರ್ ಜಗತ್ಸೇಠ್ನಿಂದ ಸಾಲ ಪಡೆಯಬಹುದೆನ್ನುವ ಸಲಹೆಯನ್ನು ಕೂಡ ನೀಡಿದ. ಅದಕ್ಕೆ ರಾ ದುರ್ಲಭ್ ಒಪ್ಪಲಿಲ್ಲ; ಮಿಲಿಯಗಟ್ಟಲೆ ಸಾಲ ಕೊಡಲು ಸೇಠ್ಗಳಿಗೆ ಅಸಾಧ್ಯ ಎಂದು ಹೇಳಿದ.
ಆ ಬಗ್ಗೆ ವಾಟ್ಸ್ ಮೈದಾಪುರದಲ್ಲಿದ್ದ ಕ್ಲೈವ್ಗೆ ಪತ್ರ ಬರೆದು ದೂರು ಸಲ್ಲಿಸಿದ. ಏನಿದ್ದರೂ ಖಜಾನೆ ಪೂರ್ತಿ ಅವರಿಗೇ. ಹಣವನ್ನು ಯಾರೋ ಎಲ್ಲೋ ಬಚ್ಚಿಟ್ಟಿರಬಹುದೆಂಬ ಗುಮಾನಿಯಿಂದ ಅದರ ಶೋಧದಲ್ಲೂ ಬ್ರಿಟಿಷ್ ಅಧಿಕಾರಿಗಳು ತೊಡಗಿದರು. ಯುದ್ಧದಲ್ಲಿ ಜಯ ಗಳಿಸಿದರೂ ಕೂಡ ಒಪ್ಪಿಕೊಂಡಂತೆ ಹಣ ಕೊಡಲಿಲ್ಲವೆಂದು ರಾಬರ್ಟ್ ಕ್ಲೈವ್ ಗೂ ತಳಮಳವಾಗಿತ್ತು. ಜೊತೆಗೆ ಹೊಸ ಸರ್ಕಾರ ಸುಭದ್ರವಾಗಿ ರೂಪಗೊಂಡಿಲ್ಲ. ಅದಾಗದಿದ್ದರೆ ಪ್ಲಾಸಿಯ ಪಿತೂರಿ ವಿಫಲವಾದಂತೆ ಎಂಬ ಚಿಂತೆಯೂ ಇತ್ತು. ಪದಚ್ಯುತ ಸಿರಾಜ್ ತಮ್ಮ ಕೈಗೆ ಸಿಗುವ ಬಗ್ಗೆ ಏನು ಮಾಡಬೇಕೆಂದು ಕ್ಲೈವ್ ಮೀರ್ಜಾಫರ್ ಮತ್ತು ಜಗತ್ಸೇಠ್ ಅವರೊಂದಿಗೆ ಚರ್ಚಿಸಿದ.
ಕಿಂಗ್ಮೇಕರ್ ಕ್ಲೈವ್
ಬಂಗಾಳದ ನವಾಬನಾಗಿ ಮೀರ್ಜಾಫರ್ನ ಪಟ್ಟಾಭಿಷೇಕವನ್ನು ದೃಢೀಕರಿಸಿದ್ದು (ಆಥರೈಸ್ ಮಾಡಿದ್ದು) ರಾಬರ್ಟ್ ಕ್ಲೈವ್ ಹೊರತು ದುರ್ಬಲವಾಗುತ್ತಾ ಸಾಗುತ್ತಿದ್ದ ದೆಹಲಿಯ ಮೊಘಲ್ ಚಕ್ರವರ್ತಿ ಅಲ್ಲ. “ಹೊಸ ನವಾಬನನ್ನು ಪೂರ್ತಿ ದೃಢೀಕರಿಸಲಾಗಿದೆ; ಮತ್ತು ಮೂರು ಪ್ರಾಂತಗಳ (ಬಂಗಾಳ, ಬಿಹಾರ, ಒರಿಸ್ಸಾ) ಸುಬಾ ಎಂದು ಘೋಷಿಸಲಾಗಿದೆ ಎಂದು ಕಲ್ಕತ್ತಾದ ಸೆಲೆಕ್ಟ್ ಕಮಿಟಿಗೆ ಆತ ತಿಳಿಸಿದ; ಹೀಗೆ ಕರ್ನಲ್ ಕ್ಲೈವ್ ‘ಕಿಂಗ್ಮೇಕರ್’ ಕೂಡ ಆದ. ಆತನ ಧಣಿಗಳು (employer) ಈಗ ಬಂಗಾಳದ ನವಾಬನ ಧಣಿ ಕೂಡ ಆದರು.
ಕ್ಲೈವ್ಗಾದ ಲಾಭ
ಅಂತಿಮವಾಗಿ ಕ್ಲೈವ್ನ ವಸೂಲಿಯಲ್ಲಿ ಕ್ಲೈವ್, ಮೀರ್ಜಾಫರ್ ಮತ್ತು ಜಗತ್ ಸೇಠ್ ಭಾಗಿಯಾದರು. ಈ ವ್ಯವಹಾರದಲ್ಲಿ ಸೇಠ್ಗಳು ಮಧ್ಯಸ್ಥ (ಮೀಡಿಯೇಟರ್)ರಾಗಿರಲಿ ಎಂದು ಕ್ಲೈವ್ ಸೂಚಿಸಿದಾಗ, ಮೀರ್ಜಾಫರ್ ಒಪ್ಪಿಕೊಂಡ. ಕೊಡಬೇಕಾದ ಅರ್ಧ ಹಣವನ್ನು ಕೂಡಲೇ ಕೊಡಬೇಕು. ಅದರ ಶೇ.೬೭ ಭಾಗ ನಾಣ್ಯಗಳ ರೂಪದಲ್ಲಿದ್ದರೆ ಶೇ.೩೩ ಭಾಗ ಆಭರಣ ಇತ್ಯಾದಿ ರೂಪದಲ್ಲಿರಬೇಕು. ಉಳಿದ ಅರ್ಧವನ್ನು ಮುಂದಿನ ಮೂರು ವರ್ಷದಲ್ಲಿ ಮೂರು ಕಂತುಗಳಲ್ಲಿ ಕೊಡಬೇಕು. ಮೂರು ಕಂತುಗಳ ಒಟ್ಟು ಮೌಲ್ಯ ೧೭೭ ಲಕ್ಷ ರೂ. ಅದಲ್ಲದೆ, ಮೊಘಲರು ಸಾಕಷ್ಟು ಹಿಂದೆ ಜಾನ್ ಕಂಪೆನಿಗೆ ನೀಡಿದ್ದ ಸುಂಕರಹಿತ ವ್ಯಾಪಾರಕ್ಕೆ ಮೀರ್ಜಾಫರ್ ಸಮ್ಮತಿಸಿದ. ಕೊಟ್ಟ ಹಣದಲ್ಲಿ ದೊಡ್ಡ ಪಾಲು (೧೯ ಲಕ್ಷ ರೂ.) ಕ್ಲೈವ್ಗಿತ್ತು; ಮತ್ತು ಕಲ್ಕತ್ತಾದ ಬಳಿ ಒಂದು ಜಾಗೀರನ್ನು ಕೂಡ ನೀಡಲಾಯಿತು. ನವಾಬನ ಕೊಡುಗೆಯಿಂದಾಗಿ ತನಗೆ ನೆಮ್ಮದಿಯ ಜೀವನ ದೊರೆಯಿತೆಂದು ಮುಂದೆ ಆತ ಇಂಗ್ಲೆಂಡ್ನಲ್ಲಿ ಹೇಳಿದ್ದ.
* * *
ಸಿರಾಜ್ ಬಂಧನ, ಮರಣದಂಡನೆ
ಕೆಲವೇ ದಿನಗಳಲ್ಲಿ ಮೀರ್ಜಾಫರ್ನ ಮಗ ಮೀರ್ ಮಿರಾನ್ ಸಿರಾಜುದ್ದೌಲನನ್ನು ಬಂಧಿಸಿ ಮುರ್ಷಿದಾಬಾದ್ಗೆ ಕರೆತರುವಲ್ಲಿ ಯಶಸ್ವಿಯಾದ (ಜುಲೈ ೨). ಆತನನ್ನು ಜೈಲಿಗೆ ಹಾಕುವುದೇ ಅಥವಾ ಗಡೀಪಾರು ಮಾಡುವುದೇ ಎಂಬ ಬಗ್ಗೆ ಚರ್ಚೆ ನಡೆಯಿತು. ಹೊಸ ನವಾಬ ಮೀರ್ಜಾಫರ್ ಆತನನ್ನು ಬಿಟ್ಟುಬಿಡುತ್ತಿದ್ದನೇನೋ. ಆದರೆ ಮಗ ಮಿರಾನ್ ಮತ್ತು ಕೆಲವು ದೊಡ್ಡ ವ್ಯಕ್ತಿಗಳು ನಾಡಿನ ಶಾಂತಿಗೆ ಅವನ ಸಾವು ಅಗತ್ಯವೆಂದು ಭಾವಿಸಿದರು.
ಜುಲೈ ೨ ರಂದು ಮಧ್ಯರಾತ್ರಿಯ ಹೊತ್ತಿಗೆ ಆತನನ್ನು ಮೀರ್ಜಾಫರ್ನ ಎದುರು ತಂದು ನಿಲ್ಲಿಸಿದರು. ಅವನದೇ ಅರಮನೆಯಲ್ಲಿ ಅವನೀಗ ಒಬ್ಬ ಸಾಮಾನ್ಯ ಕೈದಿ. ಜಾಫರ್ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದ ಸಿರಾಜ್ ನಡುಗುತ್ತಿದ್ದ; ಅಳುತ್ತಾ ಕೊಲ್ಲಬೇಡಿ ಎಂದು ಬೇಡಿಕೊಂಡ. ಅನಂತರ ಸೈನಿಕರು ಬೇರೆ ಕೋಣೆಗೆ ಒಯ್ದರು. ಆತನಿಗೆ ಗೌರವ ಕೊಡುವುದೇ ಅಥವಾ ಇದನ್ನು ಮಾಮೂಲಿ ವ್ಯವಹಾರದ ರೀತಿ ನೋಡುವುದೇ ಎಂಬ ಬಗ್ಗೆ ಆಸ್ಥಾನಿಕರಲ್ಲಿ ಚರ್ಚೆ ನಡೆಯಿತು. ಅಲ್ಲಿ ಮೂರು ದಾರಿಗಳಿದ್ದವು – ಮುರ್ಷಿದಾಬಾದ್ನಲ್ಲಿ ಬಂಧನದಲ್ಲಿಡುವುದು, ಗಡಿಪಾರು ಮಾಡಿ ಯಾವುದಾದರೊಂದು ಕಡೆ ಬಂಧಿಸಿ ಇಡುವುದು ಅಥವಾ ಮರಣದಂಡನೆ.
ಕೆಲವರು ಕೊಲ್ಲುವುದು ಬೇಡ ಎಂದರಾದರೂ ಆತ ಬದುಕಿದ್ದರೆ ಮೀರ್ಜಾಫರ್ ಆಳ್ವಿಕೆಗೆ ಜನರಿಂದ ವಿರೋಧ ಬರಬಹುದು ಎಂಬ ಮಾತು ಬಂತು. ಮೀರ್ಜಾಫರ್ ಮಾತನಾಡಲಿಲ್ಲ. ಆತನ ೧೭ ವರ್ಷದ ಮಗ ತಂದೆಗೆ ‘ನೀವು ವಿಶ್ರಾಂತಿ ಮಾಡಿ’ ಎಂದ. ಬಳಿಕ ಅರಮನೆಯಲ್ಲೇ ಡ್ರ್ಯಾಗರ್ನಿಂದ ಇರಿದು, ಖಡ್ಗದಿಂದ ಕಡಿದು ಕೊಂದರೆನ್ನಲಾಗಿದೆ. ಅದಕ್ಕಾಗಿ ಮಿರಾನ್ ಬಂದಾಗ ಸಿರಾಜ್ ಮೊದಲು ಬೊಬ್ಬೆಹೊಡೆದ; ಅನಂತರ ಪ್ರಾರ್ಥನೆ ಮಾಡುವೆ ಎಂದು ಅದನ್ನು ಪೂರೈಸಿ ಶಿಕ್ಷೆಗೆ ಅಣಿಯಾದ ಎನ್ನಲಾಗಿದೆ.
ಅಂತಿಮಯಾತ್ರೆ
ಮರುದಿನ ಬೆಳಗ್ಗೆ ಸಿರಾಜ್ ಶವವನ್ನು ಆನೆಯ ಬೆನ್ನ ಮೇಲಿರಿಸಿ ಮುರ್ಷಿದಾಬಾದ್ನ ಬೀದಿ-ರಸ್ತೆಗಳಲ್ಲಿ ಸಾಗಿಸಿದರು. ಅದು ಆತನ ಸೋಲಿನ ಅಂತಿಮದರ್ಶನ ಕೂಡ ಆಗಿತ್ತು. ೧೮ ತಿಂಗಳ ಹಿಂದೆ ಸಿರಾಜ್ ಸ್ವತಃ ಕೊಂದಿದ್ದ ಹುಸೇನ್ ಕೂಲಿಖಾನ್ ಮನೆಯ ಮುಂದೆ ಬಂದಾಗ ಮಾವುತ ಆನೆಯನ್ನು ಒಂದು ಕ್ಷಣ ನಿಲ್ಲಿಸಿದನಂತೆ; ಅದು ಒಂದು ಬಗೆಯ ಆಕ್ರೋಶ ಹಾಗೂ ಸೇಡು ತೀರಿದ ಬಗೆಗಿನ ಸಮಾಧಾನ ಕೂಡ ಆಗಿತ್ತು.
ಅದೇ ವೇಳೆ ಮಗನ ಶವವನ್ನು ಕಂಡ ತಾಯಿ ಅಮೀನಾ ಬೇಗಮ್ಳ ದುಃಖದ ಕಟ್ಟೆಯೊಡೆದು ಬೀದಿಗೆ ಬಂದು ಆರ್ತನಾದಗೈದ ಸಂದರ್ಭವೂ ಕಂಡುಬಂತು. ಹೊರಗಿನ ಗಲಾಟೆ ಏನೆಂದು ಕೇಳಿ ಹೊರಗೆ ಬಂದು ವಿಷಯ ತಿಳಿದ ಆಕೆ, ತನ್ನ ನಿಯಂತ್ರಣವನ್ನು ಮರೆತು, ಹೆಣ್ಣೆಂಬುದನ್ನೂ ಮರೆತು, ಪರ್ದಾ, ಚಪ್ಪಲಿಗಳಿಲ್ಲದೆ ಮನೆಯಿಂದ ಹೊರಗೆ ಓಡಿ ಬಂದು ಶವದ ಮೇಲೆ ಬಿದ್ದು ಗೋಳಾಡಿದಳು; ಮುತ್ತಿಕ್ಕಿದಳು. ಅಲ್ಲೇ ಕುಳಿತು ಮುಖ, ಎದೆಗೆ ಹೊಡೆದುಕೊಂಡಳು. ಈ ದೃಶ್ಯವನ್ನು ಜನ ಬೇಸರದಿಂದ ಕಂಡರು ಎಂದು ಸುದೀಪ್ ಚಕ್ರವರ್ತಿ ವಿವರಿಸಿದ್ದಾರೆ.
ಒಟ್ಟಿನಲ್ಲಿ ಓರ್ವ ವಿವಾದಾಸ್ಪದ ವ್ಯಕ್ತಿ ಎನಿಸಿದ್ದ ಸಿರಾಜುದ್ದೌಲನ ಮರಣವನ್ನು ಅಂದಿನ ಪ್ರಖ್ಯಾತ ಸುಧಾರಕರಾದ ಈಶ್ವರಚಂದ್ರ ವಿದ್ಯಾಸಾಗರರು ಸ್ವಾಗತಿಸಿದ್ದು ಕೂಡ ನಡೆಯಿತು. ಕಂಪೆನಿ ಪ್ರಾಯೋಜಿತ ಹೊಸ ಬಂಗಾಳದ ಮಹಾನ್ ವ್ಯಕ್ತಿಯಾದ ಅವರು ‘ಇದೊಂದು ನ್ಯಾಯಸಮ್ಮತ ಘಟನೆ’ ಎಂದು ಹೇಳಿದ್ದರು. ಏನಿದ್ದರೂ ಚರಿತ್ರೆ ಚರಿತ್ರೆಯೇ. ವಿಶ್ಲೇಷಣೆಯ ಎಲ್ಲ ಅಧಿಕಾರವೂ ನಮಗಿದೆ. ಅಂದು ಭಾರತದಲ್ಲಿ ಕಾಲೂರಿದ ಬ್ರಿಟಿಷರು ಮುಂದಿನ ಸುಮಾರು ಎರಡು ಶತಮಾನಗಳ ಕಾಲ ಈ ದೇಶದಲ್ಲಿ ಎಸಗಿದ ಅನ್ಯಾಯ ಮತ್ತು ಸುಲಿಗೆಗಳನ್ನು ಗಮನಿಸಿದರೆ ಸಿರಾಜ್ನ ಬದಲಿಗೆ ಬೇರೆ ಯಾರಾದರೂ ಅಲ್ಲಿದ್ದು ಸರಿಯಾಗಿ ನಿರ್ವಹಿಸಬಾರದಿತ್ತೇ ಅನ್ನಿಸದಿರದು.
(ಮುಗಿಯಿತು)