ಶ್ರಾದ್ಧಕ್ಕೇ ಆದರೂ ತೀರಾ ಅನಿವಾರ್ಯವಾಗಿ ಬರಲೇಬೇಕಾದವರು ಆಯಾ ದಿನಕ್ಕೆ ಬಂದುಹೋದರೆ ಹೆಚ್ಚು. ಇಲ್ಲದಿದ್ದರೆ ತಾವಿದ್ದಲ್ಲಿಂದಲೇ ತಿಲೋದಕ ಬಿಡುವ ಹೊತ್ತಿಗೆ ವಿಡಿಯೋಕಾಲ್ ಮಾಡಿದರೂ ಆಯಿತು ಎನ್ನುವವರೂ ಇಲ್ಲದಿಲ್ಲ! ನಮ್ಮ ಬದುಕು ಎತ್ತೆತ್ತಲೋ ಓಡುತ್ತಿರುವುದಕ್ಕೆ ಮತ್ತೆ ಮಮತೆಯ ಬೇಡಿ ಬಿಗಿದು ಕಟ್ಟಿಹಾಕಿಕೊಳ್ಳದಿದ್ದರೆ ಮುಂದಕ್ಕೆ ಉಳಿಯುವುದೇನು? ಎಲ್ಲರೂ ಒಂದೊಂದು ದ್ವೀಪವಾಗಿ ಬದಲಾಗುತ್ತಿದ್ದೇವೆಯೇ? ಸಂಬಂಧಗಳನ್ನು ನವೀಕರಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆಯೇ? ಯೋಚಿಸಬೇಕಿದೆ.
ನಾವು ಬಹಳ ಚಿಕ್ಕವರಿದ್ದಾಗಿನ ಒಂದು ನೆನಪು. ಅಮ್ಮ ಬಾವಿಯಿಂದ ನೀರು ಸೇದಿ ಬಟ್ಟೆಯೊಗೆಯುತ್ತಿದ್ದರು. ಹಾಸಿಗೆ ಹಿಡಿದಿದ್ದ ಅಜ್ಜ ಅವರಷ್ಟಕ್ಕೆ ಮಲಗಿದ್ದರು. ಅಪ್ಪ ದಿನಸಿ ತರುವುದಕ್ಕೆಂದು ಅಂಗಡಿಗೆ ಹೋಗಿದ್ದಿರಬೇಕು, ಮನೆಯಲ್ಲಿರಲಿಲ್ಲ. ಅಕ್ಕಂದಿರಿಬ್ಬರೂ ಬರೆಯುತ್ತಿದ್ದರೆ ನಾನು ಏನೂ ಕೆಲಸವಿಲ್ಲದೆ ಅಡ್ಡಾಡುತ್ತಿದ್ದೆ. ಅಕ್ಕಂದಿರು ಕೇಳುವ ವಸ್ತುಗಳನ್ನು ಒದಗಿಸಿಕೊಡುವ ಬಿಟ್ಟಿಕೆಲಸ ಮಾಡುತ್ತಿದ್ದಿರಬೇಕು. ಅಷ್ಟರಲ್ಲಿ ನಮ್ಮ ಮನೆಯಂಗಳದ ಕೊನೆಯಲ್ಲಿದ್ದ ಬಿದಿರಿನ ಗೇಟನ್ನು ತೆಗೆದ ಸದ್ದಾಯಿತು. ನೋಡಿದರೆ ಬಿಳಿವಸ್ತ್ರ ಧರಿಸಿ, ಬಿಳಿಯಂಗಿ ಧರಿಸಿದ್ದ ಹಿರಿಯರೋರ್ವರು ಗೇಟು ತೆರೆದು ಒಳಬರುತ್ತಿದ್ದರು. ನನಗೆ ಭಯ. ಅಕ್ಕಂದಿರು ಹೊರಬಂದರು. ಬಂದ ವ್ಯಕ್ತಿ ‘ಮಕ್ಕಳೇ, ನಾನು ನಿಮ್ಮ ಅಮ್ಮನ ದೊಡ್ಡಣ್ಣ, ನಿಮ್ಮ ದೊಡ್ಡ ಮಾವ. ಅಮ್ಮ ಎಲ್ಲಿ?’ ಎಂದು ಮುಗುಳ್ನಗೆಯಿಂದಲೇ ಮಾತಾಡಿಸಿದರು. ನಮಗೋ ಆತಂಕ. ಇಲ್ಲಿಯವರೆಗೆ ನಾವು ಕಂಡುಕೇಳರಿಯದ ಈ ವ್ಯಕ್ತಿ ಅಮ್ಮನ ಅಣ್ಣನೇ? ಹಾಗೆಂದು ಮುಖವನ್ನು ಸರಿಯಾಗಿ ನೋಡಿದರೆ ನಮ್ಮ ಇನ್ನೋರ್ವ ಸೋದರಮಾವನಂತೆ ಮುಖಚಹರೆ ಇದ್ದುದು ಹೌದು. ಅಷ್ಟರಲ್ಲಿ ಅಮ್ಮ ತನ್ನ ಎಂದಿನ ಹಸನ್ಮುಖದೊಂದಿಗೆ ಬಂದು ಅವರನ್ನು ಮಾತಾಡಿಸಿ ಮನೆಯ ಜಗುಲಿಗೆ ಬರಮಾಡಿಕೊಂಡರು. ಅಂತೂ ನಮಗೆ ಈ ಆಗಂತುಕನ ಬಗ್ಗೆ ಇದ್ದ ಭಯ ಮಾಯವಾಯಿತು.
ಬೇರೆಬೇರೆ ಕಾರಣಗಳಿಂದಾಗಿ, ಜೊತೆಗೆ ಅಮ್ಮನ ತಂದೆತಾಯಿ ಅಮ್ಮ ಚಿಕ್ಕವರಿದ್ದಾಗಲೇ ಸಂದುಹೋದುದರಿಂದ ಮದುವೆಯ ಬಳಿಕ ಅಮ್ಮ ತವರಿಗೆಂದು ಹೋಗುತ್ತಿದ್ದ ಸಂದರ್ಭಗಳು ಬಹಳ ಕಡಮೆ. ಜೊತೆಗೆ ಮನೆಯಲ್ಲಿ ಅಜ್ಜ ಹಾಸಿಗೆ ಹಿಡಿದಿದ್ದುದರಿಂದ ಬಿಟ್ಟು ಹೋಗುವಂತೆಯೂ ಇರಲಿಲ್ಲ. ಹೀಗಾಗಿ ನಮಗೆ ಬಹುತೇಕ ಸಂಬಂಧಿಕರ ಪರಿಚಯವೇ ಇರಲಿಲ್ಲ. ಹೋಗಲೇಬೇಕಾದ ಮದುವೆ, ಉಪನಯನದಂಥ ಕಾರ್ಯಕ್ರಮಗಳಿಗೆ ಮನೆಯಿಂದ ಯಾರಾದರೊಬ್ಬರು ಹೋಗಿ ಬಂದರಾಯಿತು. ಒಂದೊಮ್ಮೆ ನಾವು ಜತೆಗೆ ಹೋದರೂ ಅಲ್ಲಿ ಜನಜಂಗುಳಿಯ ನಡುವೆ ದೊಡ್ಡವರು ಯಾರ ಹತ್ತಿರ ಮಾತಾಡಿದರೋ ಯಾಕೆ ಮಾತಾಡಿದರೋ ನಮಗೆ ಅರ್ಥವೇ ಆಗದು. ನಮ್ಮ ವಯಸ್ಸಿನ ಮಕ್ಕಳಿದ್ದರೆ ಅವರೊಂದಿಗೆ ಹಲವು ಬಗೆಯ ಆಟಗಳನ್ನು ಆಡುವುದರಲ್ಲಿ ನಮ್ಮ ವೇಳೆಗಳೆಯುವುದು ಸುಲಭವಿತ್ತು. ‘ಇನ್ನು ಹೊರಡೋಣ’ ಎಂದು ಅಪ್ಪನೋ ಅಮ್ಮನೋ ಹೇಳಿದಲ್ಲಿಗೆ ‘ಆಟವಾಡಿ ಆಗಲಿಲ್ಲ’ ಎಂದು ಮುಖಬಾಡಿಸಿಕೊಂಡು ಹೊರಡುವುದಷ್ಟೇ ನಮಗೆ ಅನ್ನಿಸುತ್ತಿದ್ದುದು. ಇದು ನಮ್ಮ ಮನೆಯ ಕಥೆಯಷ್ಟೇ ಅಲ್ಲ, ನಮ್ಮ ತಲೆಮಾರಿನ ಅನೇಕರು ಈ ಬಗೆಯ ಸಂದರ್ಭಗಳನ್ನು ಉಲ್ಲೇಖಿಸುವುದನ್ನು ಕೇಳಿದ್ದೇನೆ. ಬಂಧುಗಳೆನ್ನುವವರು ಇದ್ದಾರೆಂಬುದೇ ಗೊತ್ತಿರಲಿಲ್ಲವೆಂದೋ, ದೊಡ್ಡಪ್ಪ, ಅವರ ಮಕ್ಕಳ ಪರಿಚಯವೇ ಇರಲಿಲ್ಲ ಎಂಬ ಸಂದರ್ಭಗಳೂ ಇದ್ದವು ಎಂಬುವವರನ್ನೂ ನೋಡಿದ್ದೇನೆ. ಹಾಗೆಂದು ಪರಸ್ಪರ ಜಗಳಾಡಿ ದೂರವಾದವರೇ ಎಂದರೆ ಖಂಡಿತಾ ಅಲ್ಲ. ಆದರೆ ಸೌಕರ್ಯದ ಕೊರತೆಯಿಂದ, ಜೊತೆಗೆ ಆಗಿನ ಕಾಲಕ್ಕೆ ಇದ್ದ ಬಡತನದ ಸ್ಥಿತಿಯಲ್ಲಿ ಪ್ರಯಾಣವೂ ಸುಲಭಸಾಧ್ಯವಾದುದಾಗಿರಲಿಲ್ಲ. ಒಂದೋ ಮೈಲುಗಟ್ಟಲೆ ನಡೆದು, ಬಳಿಕ ಬಸ್ಸಿನಲ್ಲಿ ಹೋಗಿ, ಮತ್ತೆ ನಡೆದು… ಹೀಗೆ ಪ್ರಯಾಣವೇ ದುರ್ಲಭವಾಗಿತ್ತು. ಈಗಿನ ಮಕ್ಕಳಿಗೆ ಬಹುಶಃ ನಾವು ಹೇಳಿದರೂ ಅರ್ಥವಾಗದ ಪರಿಸ್ಥಿತಿಯದು. ವರ್ಷಕ್ಕೊಮ್ಮೆಯಾದರೂ ಕಾಣದೇ ಇದ್ದರೆ ಯಾವ ಸಂಬಂಧಗಳು ಉಳಿದಾವು?
ಇಂದು ತಂತ್ರಜ್ಞಾನದ ಸುಧಾರಣೆಯಿಂದ ವಿಶ್ವವೆಂಬುದು ಅಂಗೈಯಲ್ಲಿ ಬಂದು ಕುಳಿತಿದೆಯೆಂಬುದೇನೋ ನಿಜವೇ. ಪ್ರಪಂಚದ ಯಾವ ಮೂಲೆಯಲ್ಲಿ ಇದ್ದವರೊಂದಿಗಾದರೂ ವೀಡಿಯೋ ಕಾಲ್ ಮೂಲಕ ನೋಡಿ ಮಾತಾಡಬಹುದು ಎಂಬುದು ಸತ್ಯವೇ. ಆದರೂ ಎದುರುಬದುರಾಗಿ ಕುಳಿತು ಮಾತನಾಡುವ ಅನುಭವವು ವಿಶಿಷ್ಟವಾದುದು ಹೌದಲ್ಲವೇ? ಪರಸ್ಪರ ಭೇಟಿಯೆಂಬುದೇ ಒಂದು ಹಿತಾನುಭವ. ನಮಗೆ ಪ್ರಿಯವಾದವರು ಬರುತ್ತಾರೆಂದು ನಮ್ಮ ಮನೆಯನ್ನು ಒಪ್ಪ ಓರಣಗೊಳಿಸಿ, ಬರುವವರಿಗೆ ಇಷ್ಟವಾದ ಅಡುಗೆಯನ್ನು ಸಿದ್ಧ ಮಾಡುವುದರಲ್ಲಿ ಅಡಗಿರುವ ಸಂತೋಷಕ್ಕೆ ಮೌಲ್ಯ ಕಟ್ಟಲಾಗದು. ನನ್ನ ಪತಿಯ ಸ್ನೇಹಿತರೋರ್ವರ ಮನೆಗೆ ಕೆಲವು ವರ್ಷಗಳ ಹಿಂದೆ ಮೊದಲಬಾರಿಗೆ ಹೋಗುವಾಗ ಅವರು ಪ್ರತ್ಯೇಕವಾಗಿ ನನಗಿಷ್ಟದ ತಿನಿಸೇನು ಎಂಬುದನ್ನು ನನ್ನ ಗಂಡನಲ್ಲಿ ತಿಳಿದುಕೊಂಡು ಅದನ್ನೇ ಮಾಡಿಬಡಿಸಿದ್ದರು! ವಿಡಿಯೋ ಭೇಟಿಯಲ್ಲಿ ಈ ಸಂತೋಷವನ್ನು ಗಿಟ್ಟಿಸಿಕೊಳ್ಳುವುದು ಅಸಂಭವವೇ ತಾನೇ?
ಹಿಂದೆ ಮನೆಗಳು ಚಿಕ್ಕವಿದ್ದರೂ ಬಂಧುಗಳಿಗೆ ಈಗಿರುವುದಕ್ಕಿಂತ ಹೆಚ್ಚು ಬಿಡುವಿತ್ತು. ಶಾಲಾಕಾಲೇಜುಗಳ ಪರೀಕ್ಷೆಗಳು ವಾರ್ಷಿಕವೇ ಆಗಿದ್ದುದರಿಂದ ಹೆಚ್ಚುಕಡಮೆ ಎಲ್ಲರ ರಜೆಗಳೂ ಹೊಂದುತ್ತಿದ್ದವು. ನಮ್ಮ ಮನೆಗೆ ನೆಂಟರು ಬರುವುದಕ್ಕೂ ಅವರ ಮನೆಗೆ ನಾವು ಹೋಗುವುದಕ್ಕೂ ಸಮಯವೆಂಬುವುದು ಒದಗುತ್ತಿತ್ತು. ಬೇರಾವ ಸಂದರ್ಭದಲ್ಲಿ ಅಲ್ಲದಿದ್ದರೂ ಗತಿಸಿದ ಹಿರಿಯರ ಶ್ರಾದ್ಧಕ್ಕಂತೂ ಬಹುತೇಕ ಎಲ್ಲರೂ ಬಂದೇ ಬರುತ್ತಿದ್ದರು. ವಾಹನ ಸೌಕರ್ಯವಿಲ್ಲದೇ ಇದ್ದುದರಿಂದ ಮುನ್ನಾ ದಿನವೇ ಬಂದು, ಶ್ರಾದ್ಧದ ದಿನ ಉಳಿದುಕೊಂಡು ಮರುದಿನ ಹೊರಡುತ್ತಿದ್ದುದು ವಾಡಿಕೆ. ರಾತ್ರಿ ಮಲಗುವುದಕ್ಕೆ ಪ್ರಪ್ರತ್ಯೇಕ ಕೋಣೆಗಳಿಲ್ಲ. ಜಗುಲಿಯುದ್ದಕ್ಕೂ ಪುರುಷರು ಒಂದು ಕಡೆ, ಹೆಣ್ಮಕ್ಕಳು ಒಂದು ಕಡೆ ಮಕ್ಕಳೆಲ್ಲ ಇನ್ನೊಂದು ಕಡೆಯೆಂದು ಚಾಪೆ ಹಾಸಿ ಮಲಗಿಕೊಂಡರೆ ಮತ್ತೆ ಅಲ್ಲಿ ಪಟ್ಟಾಂಗ, ನಗು! ಮತ್ತೆ ಹಿರಿಯರಾರಾದರೂ ಗದರಿಯಾಗಬೇಕು, ನಿದ್ದೆ ಮಾಡಬೇಕಾದರೆ. ಇಂದು ನಮಗೆ ಸೌಕರ್ಯಗಳು ಜಾಸ್ತಿಯಾಗಿವೆ, ನಮ್ಮ ಮನೆಗಳೂ ದೊಡ್ಡದಿವೆ. ಆದರೆ ಬಿಡುವು ಎಂಬುದು ಯಾರಿಗೂ ಇಲ್ಲ. ಕಾರ್ಯಕ್ರಮಗಳು ಮನೆಯಲ್ಲಿ ಆಗುವುದಕ್ಕಿಂತ ಹಾಲ್ನಲ್ಲಿ ಆಗುವುದು ಹೆಚ್ಚು. ಊಟದ ಹೊತ್ತಿಗೆ ಹೋಗಿ, ಫೋಟೋಗೆ ಫೋಸು ಕೊಟ್ಟು, ಉಡುಗೊರೆ ನೀಡಿ ಬಂದರೆ ಆಯ್ತು.
ಶ್ರಾದ್ಧಕ್ಕೇ ಆದರೂ ತೀರಾ ಅನಿವಾರ್ಯವಾಗಿ ಬರಲೇಬೇಕಾದವರು ಆಯಾ ದಿನಕ್ಕೆ ಬಂದುಹೋದರೆ ಹೆಚ್ಚು. ಇಲ್ಲದಿದ್ದರೆ ತಾವಿದ್ದಲ್ಲಿಂದಲೇ ತಿಲೋದಕ ಬಿಡುವ ಹೊತ್ತಿಗೆ ವಿಡಿಯೋಕಾಲ್ ಮಾಡಿದರೂ ಆಯಿತು ಎನ್ನುವವರೂ ಇಲ್ಲದಿಲ್ಲ! ನಮ್ಮ ಬದುಕು ಎತ್ತೆತ್ತಲೋ ಓಡುತ್ತಿರುವುದಕ್ಕೆ ಮತ್ತೆ ಮಮತೆಯ ಬೇಡಿ ಬಿಗಿದು ಕಟ್ಟಿ ಹಾಕಿಕೊಳ್ಳದಿದ್ದರೆ ಮುಂದಕ್ಕೆ ಉಳಿಯುವುದೇನು? ಎಲ್ಲರೂ ಒಂದೊAದು ದ್ವೀಪವಾಗಿ ಬದಲಾಗುತ್ತಿದ್ದೇವೆಯೇ? ಸಂಬಂಧಗಳನ್ನು ನವೀಕರಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆಯೇ? ಯೋಚಿಸಬೇಕಿದೆ.
ಸಂಬಂಧಗಳನ್ನು ಸದಾ ಹೊಸದಾಗಿರಿಸಿಕೊಳ್ಳುವುದಕ್ಕೆ ಅಗತ್ಯವಿರುವುದು ಆಗೀಗ ಭೇಟಿ. ಈಗ ಅದೇ ಹೆಚ್ಚು ಕಠಿಣವಾದ ಸಂಗತಿ. ತೀರಾ ಆಪ್ತರಾದವರೂ ಸಮಯದ ಅಭಾವದಿಂದ ಪರಸ್ಪರ ಭೇಟಿಯಾಗುವುದು ಸಾಧ್ಯವಾಗುತ್ತಿಲ್ಲ. ಕಣ್ಣಿಂದ ದೂರಾದವರು ಮನಸ್ಸಿಂದ ದೂರವಾಗುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ ಎನ್ನುವುದು ವಾಸ್ತವ. ವಾರದಲ್ಲೊಮ್ಮೆಯಾದರೂ ಕರೆ ಮಾಡಿ ಮಾತನಾಡುವುದು, ಅವರ ಮನೆಗೆ ನಾವು, ನಮ್ಮ ಮನೆಗೆ ಅವರು ಭೇಟಿಕೊಡುವುದು ಪರಸ್ಪರರ ಬದುಕಿನಲ್ಲಿ ನಮ್ಮ ಸ್ಥಾನವನ್ನು ವಿಶಿಷ್ಟವಾಗಿ ಕಾಯ್ದಿರಿಸಿಕೊಳ್ಳಲು ನೆರವಾಗುತ್ತದೆ. ‘ನಿಮ್ಮ ಮನೆಗೆ ನಾನು ಎರಡು ಸಲ ಬಂದಾಯ್ತು, ನೀನು ಒಮ್ಮೆಯೂ ಬಂದಿಲ್ಲ. ಇನ್ನು ನೀನು ಬಂದಮೇಲೆಯೇ ನಾನು ಬರುವುದು’ ಎಂದು ರೇಗುವ ಗೆಳತಿಯ ಮಾತಿನೊಳಗಣ ಪ್ರೀತಿ ನಮಗರ್ಥವಾಗದೇ?
ಕಡಿದುಹೋಗುತ್ತಿರುವ ಸಂಸ್ಕೃತಿಯ ಬೇರುಗಳನ್ನು ಮತ್ತೆ ಜತನ ಮಾಡುವುದನ್ನು ಕಲಿಯಬೇಕಿದೆ ನಾವು. ಚಿಗುರೊಡೆಸುವಲ್ಲಿ ಶ್ರಮವಹಿಸಬೇಕಾದ ಅಗತ್ಯವೂ ಇದೆ. ಎಲ್ಲರೂ ಒಟ್ಟು ಸೇರಿ ಅಡುಗೆ ಮಾಡಿ ಉಣಬಡಿಸುವುದರಿಂದ ತೊಡಗಿ ಪಾತ್ರೆ ತೊಳೆಯುವಲ್ಲಿಯವರೆಗೂ ಜೊತೆಗೆ ಮಾಡುವುದರಲ್ಲಿ ಒಡನಾಟವೆಂಬುದು ಹೊಸದಾಗುತ್ತದೆ. ಮೆಲುಕು ಹಾಕುವುದಕ್ಕೆ ನೆನಪುಗಳೂ ಮನದ ತುಂಬಾ ರೂಪುಗೊಳ್ಳುತ್ತವೆ. ನಾವು ದಣಿದಾಗ, ಬದುಕಲ್ಲಿ ಹಿನ್ನೆಡೆಯಾದಾಗ, ಒಂಟಿತನ ಕಾಡಿದಾಗ ನಮಗೆ ಹಿತಾನುಭವವನ್ನು ಕೊಡುವವು ಇಂತಹ ನೆನಪುಗಳು.
ಇದೆಲ್ಲದರ ಜೊತೆಗೆ ಬಂಧುಗಳ ಮನೆಗಳಿಗೆ ಭೇಟಿ ಕೊಡುವುದು ಮಕ್ಕಳಿಗೆ ಬದುಕನ್ನು ಅರ್ಥಮಾಡಿಸುವುದಕ್ಕೆ ಅಗತ್ಯವಾದ ವ್ಯವಸ್ಥೆಯೂ ಹೌದು. ನಮ್ಮ ಮನೆಯಲ್ಲಿದ್ದಂತೆ ಎಲ್ಲ ಕಡೆಯೂ ಅಲ್ಲ ಎಂಬುದನ್ನು ಕಲಿಸುವುದರ ಜತೆಗೆ ಬದುಕಿಗೆ ಅಗತ್ಯವಾದ ಹೊಂದಾಣಿಕೆಯನ್ನು ಈ ಬಗೆಯ ಭೇಟಿಗಳು ಕಲಿಸುತ್ತವೆ. ವಿಚ್ಛೇದನಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮಕ್ಕಳು ತೀರಾ ಒಂಟಿತನವನ್ನೇ ನೆಚ್ಚಿಕೊಳ್ಳದೇ ಮನೆಮಂದಿಯ ಜತೆಗೆ ಒಡನಾಡುವಂಥ ಅವಕಾಶವನ್ನು ಕಲ್ಪಿಸಿಕೊಡಬೇಕಿದೆ. ಕುಟುಂಬ, ಬಂಧುಬಳಗದ ಪ್ರಾಮುಖ್ಯತೆಯನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದಕ್ಕೂ ಈ ಬಗೆಯ ಒಡನಾಟ ಬೇಕು. ಅದರಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡಿದರೆ ಮುಂದೆ ಅವರ ಬದುಕಿಗೆ ನಾವು ಉಳಿಸಿಹೋಗುವುದು ಏನನ್ನು ಎಂಬ ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಿದು.