ಹರ್ಷವತಿ ಎಂಬ ನಗರದಲ್ಲಿ ಧರ್ಮದತ್ತನೆಂಬ ವರ್ತಕನಿದ್ದನು. ಅವನು ಕೋಟೀಶ್ವರ. ಅವನಿಗೆ ವಸುದತ್ತೆಯೆಂಬ ರೂಪವತಿಯಾದ ಮಗಳಿದ್ದಳು. ಅವಳು ಪ್ರಾಪ್ತವಯಸ್ಕಳಾದಾಗ ಧರ್ಮದತ್ತನು ತಾಮ್ರಲಿಪಿಯಲ್ಲಿದ್ದ ಸಮುದ್ರದತ್ತನೆಂಬ ವರನಿಗೆ ಅವಳನ್ನು ಕೊಟ್ಟು ಮದುವೆ ಮಾಡಿದನು. ಸಮುದ್ರದತ್ತನು ರೂಪವಂತನೂ, ಗುಣವಂತನೂ, ಎಲ್ಲ ದೃಷ್ಟಿಯಿಂದ ಅವಳಿಗೆ ಅನುರೂಪನೂ ಆಗಿದ್ದನು. ಆದರೆ ವಸುದತ್ತೆಯೇ ಚಪಲಚಿತ್ತೆ ಆಗಿದ್ದಳು.
ಛಲ ಬಿಡದ ತ್ರಿವಿಕ್ರಮಸೇನನು ಮತ್ತೆ ಅದೇ ಮುಳ್ಳುಮುತ್ತುಗದ ಮರದ ಬಳಿಗೆ ಬಂದು, ಅದರ ಬುಡದಲ್ಲಿ ಬಿದ್ದಿದ್ದ ಹೆಣವನ್ನು ಹೆಗಲಮೇಲೆ ಹೊತ್ತುಕೊಂಡು, ಮೌನವಾಗಿ ಸ್ಮಶಾನಾಭಿಮುಖವಾಗಿ ನಡೆದನು. ಹೆಣದೊಳಗಿದ್ದ ಬೇತಾಳನು ಈಗ ಮತ್ತೊಂದು ಕಥೆಯನ್ನು ಹೇಳತೊಡಗಿದನು – ಪಾಟಲೀಪುತ್ರವೆಂಬ ನಗರದಲ್ಲಿ ವಿಕ್ರಮಕೇಸರಿ ಎಂಬ ರಾಜನಿದ್ದನು. ಅವನ ಬಳಿ ವಿದಗ್ಧಚೂಡಾಮಣಿಯೆಂಬ ಗಂಡು ಗಿಣಿಯಿತ್ತು. ಅದು ಅಂತಿಂಥ ಗಿಳಿಯಾಗಿರದೆ ಅತ್ಯಂತ ಬುದ್ಧಿವಂತನೂ, ಸಕಲಶಾಸ್ತçಪಾರಂಗತನೂ ಆಗಿತ್ತು. ಒಮ್ಮೆ ಅದು ರಾಜನಿಗೆ “ಮಗಧರಾಜನಿಗೆ ಚಂದ್ರಪ್ರಭೆಯೆಂಬ ಸುಂದರಿಯಾದ ಮಗಳಿದ್ದಾಳೆ. ಅವಳು ನಿನಗೆ ಅನುರೂಪಳಾದ ವಧು. ಅವಳನ್ನು ಮದುವೆಯಾಗು” ಎಂದಿತು. ಅದರಂತೆ ಅವನು ಅವಳನ್ನು ಮದುವೆ ಮಾಡಿಕೊಂಡನು. ಚಂದ್ರಪ್ರಭೆಯ ಬಳಿ ಸೋಮಿಕೆ ಎಂಬ ಹೆಣ್ಣು ಶಾರಿಕೆ (ಮೈನಾಹಕ್ಕಿ) ಇತ್ತು. ಅವಳು ತನ್ನ ಜೊತೆಯಲ್ಲಿ ಆ ಶಾರಿಕೆಯನ್ನೂ ತಂದಳು. ಆಮೇಲೆ ಅವೆರಡು ಪಕ್ಷಿಗಳನ್ನೂ ಒಂದೇ ಪಂಜರದಲ್ಲಿರಿಸಲಾಯ್ತು. ಆಗ ಒಮ್ಮೆ ಗಂಡುಗಿಣಿಯು ಶಾರಿಕೆಗೆ ಹೇಳಿತು – “ನಾವು ಇನ್ನು ಮೇಲೆ ಒಂದೇ ಕಡೆ ತಿಂದು ಕುಳಿತು ಮಲಗೋಣ.’’
ಆದರೆ ಶಾರಿಕೆ ಒಪ್ಪಲಿಲ್ಲ. “ನನಗೆ ಗಂಡಸರ ಸಹವಾಸವೆಂದರೆ ಆಗದು. ಏಕೆಂದರೆ ಅವರು ದುಷ್ಟರು. ಮಾಡಿದ ಉಪಕಾರವನ್ನೂ ನೆನೆಯದ ಕೃತಘ್ನರು” ಎಂದಿತು. ಗಂಡು ಗಿಳಿಯಾದರೋ “ನೀನು ತಪ್ಪು ತಿಳಿದಿದ್ದಿ. ಗಂಡಸರು ದುಷ್ಟರಲ್ಲ, ಹೆಂಗಸರು ಕಲ್ಲೆದೆಯವರು” ಎಂದು ಹೇಳಿತು. ಹೀಗೆ ಅವರ ಜಗಳ ಮುಂದುವರಿಯಿತು. ಕೊನೆಗೂ ತೀರ್ಮಾನ ಕಾಣದೆ ಅವು ಜಗಳವನ್ನು ರಾಜನ ಹತ್ತಿರಕ್ಕೆ ತೆಗೆದುಕೊಂಡು ಹೋದವು. ಗಿಣಿ ಗೆದ್ದರೆ ಶಾರಿಕೆ ಅದರ ಹೆಂಡತಿಯಾಗಬೇಕೆAದೂ, ಶಾರಿಕೆಯೇ ಗೆದ್ದರೆ ಗಿಣಿ ಅದರ ದಾಸನಾಗಬೇಕೆಂದೂ ಗೊತ್ತಾಯಿತು.
“ಮೊದಲು ನಿನ್ನ ವಾದವನ್ನು ಹೇಳು. ಗಂಡಸರು ಹೇಗೆ ಕೃತಘ್ನರು ಎಂಬುದನ್ನು ವಿವರಿಸು” ಎಂದು ರಾಜನು ಶಾರಿಕೆಗೆ ಹೇಳಿದನು. ಆಗ ಅದು ಈ ಕಥೆಯನ್ನು ಹೇಳಿತು- ಕಾಮಂದಿಕಾನಗರದಲ್ಲಿ ಅರ್ಥದತ್ತನೆಂಬ ವರ್ತಕನಿದ್ದ. ಅವನ ಮಗ ಧನದತ್ತ. ತಂದೆಯು ಕಾಲವಾದ ಮೇಲೆ ಧನದತ್ತನು ಜೂಜು ಮೊದಲಾದ ದುರಭ್ಯಾಸಗಳ ದಾಸನಾಗಿ ತನ್ನಲ್ಲಿದ್ದ ಸಂಪತ್ತೆಲ್ಲವನ್ನೂ ಕಳೆದುಕೊಂಡ. ಕೊನೆಗೆ ಊರಿನವರಿಗೆ ಮುಖ ತೋರಿಸಲು ನಾಚಿಕೆಯಾಗಿ ಊರನ್ನೇ ಬಿಟ್ಟುಹೋದ. ಹೀಗೇ ತಿರುಗಾಡುತ್ತ ಅವನು ಚಂದನಪುರವೆಂಬ ಊರಿಗೆ ಬಂದನು. ಅಲ್ಲಿ ವರ್ತಕನೊಬ್ಬನ ಮನೆಗೆ ಊಟಕ್ಕೆ ಹೋದನು. ಆ ವರ್ತಕನು ಇವನ ಕುಲ-ಗೋತ್ರಾದಿಗಳನ್ನು ವಿಚಾರಿಸಲಾಗಿ ಇವನು ಸತ್ಕುಲಪ್ರಸೂತನೆಂದು ತಿಳಿದುಬಂತು. ಅವನು ಸಂತುಷ್ಟನಾಗಿ ತನ್ನ ಮಗಳಾದ ರತ್ನಾವಳಿಯನ್ನು ಇವನಿಗೆ ಕೊಟ್ಟು ಮದುವೆ ಮಾಡಿದನು. ಧನದತ್ತನು ಮಾವನ ಮನೆಯಲ್ಲಿಯೇ ಕೆಲವು ಕಾಲ ಸುಖವಾಗಿದ್ದನು.
ಆಮೇಲೆ ಅವನಿಗೆ ಸ್ವಂತ ಊರಿಗೆ ಹಿಂದಿರುಗಬೇಕು ಎಂಬ ಬಯಕೆಯಾಯ್ತು. ಮಾವನಿಗೆ ಆ ವಿಷಯ ತಿಳಿಸಿದಾಗ ಅವನು ಹಾಗೇ ಆಗಲೆಂದು ಒಬ್ಬ ಮುದುಕಿಯನ್ನು ಜೊತೆಮಾಡಿ ಮಗಳನ್ನೂ, ಅಳಿಯನನ್ನೂ ಕಳುಹಿಸಿಕೊಟ್ಟನು. ಧನದತ್ತನು ಅವರಿಬ್ಬರೊಂದಿಗೆ ಹೊರಟುಬರುತ್ತ ಇರುವಾಗ ದಾರಿಯಲ್ಲಿ ಒಂದು ಕಾಡು ಎದುರಾಯ್ತು. ‘ಕಾಡೊಳಗೆ ದರೋಡೆಕೋರರೋ, ಕಳ್ಳರೋ ಎದುರಾಗಿಬಿಡಬಹುದು. ಒಡವೆಗಳನ್ನೆಲ್ಲ ಹೀಗೆ ಕಾಣಿಸುವಂತೆ ಧರಿಸಿಕೊಂಡು ಹೋಗುವುದು ಅಪಾಯ’ ಎಂದು ಧನದತ್ತನು ಹೆಂಡತಿಯನ್ನೂ ಮುದುಕಿಯನ್ನೂ ನಂಬಿಸಿ ಒಡವೆಗಳನ್ನೆಲ್ಲ್ಲ ತೆಗೆಸಿ ಗಂಟುಕಟ್ಟಿ ತಾನೇ ಹಿಡಿದುಕೊಂಡನು. ಕಾಡಿನೊಳಗೆ ಹೋಗುತ್ತಿರುವಾಗ ದಾರಿಯ ಪಕ್ಕದಲ್ಲಿ ಒಂದು ಆಳವಾದ ಕಮರಿ ಕಾಣಿಸಿತು. ದುರಾತ್ಮನಾದ ಧನದತ್ತನು ಹೆಂಡತಿಯನ್ನೂ, ಮುದುಕಿಯನ್ನೂ ಆ ಕಮರಿಗೆ ತಳ್ಳಿ ತಾನೊಬ್ಬನೇ ಊರಿಗೆ ಹೋಗಿಬಿಟ್ಟನು!
ಇತ್ತ ಕಮರಿಗೆ ಬಿದ್ದ ಮುದುಕಿ ಅಲ್ಲೇ ಸತ್ತುಹೋದಳು. ರತ್ನಾವಳಿಯು ಬಳ್ಳಿಗಳ ಬಿದುರುಮೆಳೆಗಳ ನಡುವೆ ಸಿಕ್ಕಿಹಾಕಿಕೊಂಡು ಹೇಗೋ ಬದುಕಿಕೊಂಡಳು. ಅವಳು ಸಹಾಯಕ್ಕಾಗಿ ಕಿರುಚಾಡಿದರೂ ಕೇಳಿಸಿಕೊಳ್ಳುವವರೇ ಇರಲಿಲ್ಲ. ಕೊನೆಗೆ ತುಂಬ ಪ್ರಯತ್ನಪಟ್ಟು ಬಳ್ಳಿಗಳನ್ನು ಹಿಡಿದುಕೊಂಡು ಮೆಲ್ಲಗೆ ಮೇಲೆ ಬಂದಳು. ಅವಳ ಮೈಯೆಲ್ಲ ತರೆದು ಹೋಗಿತ್ತು. ಹೆಜ್ಜೆ ಇಡಲೂ ಕಷ್ಟವಾಗುತ್ತಿತ್ತು. ಆದರೂ ಅವಳು ಹೇಗೋ ಬಂದ ದಾರಿಯನ್ನು ಹಿಡಿದು ತವರುಮನೆಗೆ ಬಂದಳು. ಈ ಸ್ಥಿತಿಯಲ್ಲಿ ಮಗಳನ್ನು ಕಂಡು ತಂದೆತಾಯಿಗಳಿಗೆ ಗಾಬರಿಯಾಯ್ತು. ಏನಾಯ್ತೆಂದು ಅವರು ವಿಚಾರಿಸಿದರು. ಪತಿವ್ರತೆಯಾದ ಅವಳು ಏನು ಹೇಳಿದಳು ಗೊತ್ತೆ? “ಕಾಡಿನಲ್ಲಿ ಕಳ್ಳರ ಕೈಗೆ ಸಿಕ್ಕಿದೆವು. ಅವರು ಒಡವೆಗಳನ್ನೆಲ್ಲ ಕಿತ್ತುಕೊಂಡರು. ಅಷ್ಟೇ ಅಲ್ಲ, ನನ್ನ ಗಂಡನನ್ನೂ ಕೈಕಾಲು ಕಟ್ಟಿ ಎತ್ತಿಕೊಂಡು ಹೋದರು. ನಾವಿಬ್ಬರೂ ಒಂದು ಕಮರಿಗೆ ಬಿದ್ದೆವು. ಅಜ್ಜಿ ಅಲ್ಲೇ ಸತ್ತುಹೋದಳು. ನನ್ನ ಆಯುಷ್ಯ ಗಟ್ಟಿಯಾಗಿತ್ತು. ಹೇಗೋ ಬದುಕಿಕೊಂಡೆ. ದಯಾಳುವಾದ ಯಾರೋ ಒಬ್ಬ ದಾರಿಹೋಕ ನನ್ನನ್ನು ಮೇಲಕ್ಕೆ ಎತ್ತಿದ. ಹೇಗೋ ಇಲ್ಲಿಯವರೆಗೆ ಬಂದೆ” ಎಂದಳು. ತಂದೆತಾಯಿಗಳು ಅದನ್ನು ಕೇಳಿ ದುಃಖಪಟ್ಟು, ಮಗಳನ್ನು ಸಂತೈಸಿ ಮನೆಯಲ್ಲೇ ಇಟ್ಟುಕೊಂಡರು.
ಅತ್ತ ಊರಿಗೆ ತಲಪಿದ ಅವಳ ಗಂಡ ಮತ್ತೆ ಜೂಜಾಡುವುದಕ್ಕೆ ಆರಂಭಿಸಿದ. ಹೆಂಡತಿಯ ಒಡವೆಗಳನ್ನೆಲ್ಲ ಒಂದೊಂದಾಗಿ ಮಾರಿದ. ಕೆಲವೇ ದಿನಗಳಲ್ಲಿ ಕೈ ಖಾಲಿಯಾಯ್ತು. ಆಗ ಅವನು ಒಂದು ಉಪಾಯ ಚಿಂತಿಸಿದ. ಮಾವನ ಮನೆಗೆ ಹೋಗಿ, ಹೆಂಡತಿ ಊರಿನಲ್ಲಿ ಚೆನ್ನಾಗಿದ್ದಾಳೆ ಎಂದು ತಿಳಿಸಿ ಖರ್ಚಿಗೆ ಸ್ವಲ್ಪ ಹಣ ಬೇಕಿತ್ತೆಂದು ಕೇಳಿ ಅವರಿಂದ ತರಬೇಕು ಎಂದು. ಅದರಂತೆ ಅವನು ಮಾವನ ಮನೆಗೆ ಹೋಗುತ್ತಿರುವಾಗ ಹೆಂಡತಿ ದೂರದಿಂದಲೇ ಅವನನ್ನು ಕಂಡಳು. ಓಡಿಹೋಗಿ ಅವನ ಕಾಲಮೇಲೆ ಬಿದ್ದಳು. ಗಂಡ ಎಂತಹ ದುಷ್ಟನೇ ಆಗಿದ್ದರೂ ಸಾಧ್ವಿಯರು ಅವನ ಬಗೆಗೆ ಕೆಟ್ಟದ್ದಾಗಿ ಭಾವಿಸುವುದಿಲ್ಲ. ಅವನಿಗೆ ಗಾಬರಿಯಾಯಿತು. ಆದರೆ ಅವಳೇ ಅವನಿಗೆ ಧೈರ್ಯ ಹೇಳಿ ತಾನು ತಂದೆಗೆ ಹೀಗೆ ಸುಳ್ಳು ಹೇಳಿದ್ದೇನೆ, ನೀನೂ ಅದನ್ನೇ ಹೇಳಬೇಕು ಎಂದು ಹೇಳಿಕೊಟ್ಟಳು. ಅದರಂತೆ ಧನದತ್ತನು ಕಳ್ಳರು ತನ್ನನ್ನು ಕೈಕಾಲು ಕಟ್ಟಿ ಎತ್ತಿಕೊಂಡು ಹೋಗಿದ್ದರೆಂದೂ, ಹೇಗೋ ಅವರಿಂದ ತಪ್ಪಿಸಿಕೊಂಡು ಬಂದೆನೆAದೂ ರಂಜಕವಾಗಿ ಕಥೆ ಹೇಳಿದನು. ಮಾವನ ಮನೆಯವರು ಅಳಿಯ ಬದುಕಿ ಬಂದನಲ್ಲ ಎಂದು ಸಂತೋಷಪಟ್ಟು ದೇವರಿಗೆ ಪೂಜೆ ಮಾಡಿಸಿ, ನೆಂಟರಿಷ್ಟರನ್ನೆಲ್ಲ್ಲ ಕರೆದು ದೊಡ್ಡ ಹಬ್ಬ ಮಾಡಿದರು. ಆಮೇಲೆ ಅವನು ಯಾವುದೇ ಚಿಂತೆಯಿಲ್ಲದೆ ಮಾವನ ಮನೆಯಲ್ಲಿ ಸುಖವಾಗಿದ್ದನು.
ಇಷ್ಟಾದರೂ ಕೊನೆಗೊಂದು ದಿನ ಆ ಧೂರ್ತ ಏನು ಮಾಡಿದ ಗೊತ್ತೆ? ಅದನ್ನು ಹೇಳುವುದಕ್ಕೆ ನನಗೆ ಬಾಯೇ ಬರುವುದಿಲ್ಲ. ಆದರೂ ಕಥೆಯಾದ್ದರಿಂದ ಹೇಳಲೇಬೇಕು, ಹಾಗಾಗಿ ಹೇಳುತ್ತೇನೆ. ರಾತ್ರಿ ಮಗ್ಗುಲಲ್ಲಿ ಮಲಗಿದ್ದ ಆ ಸಾಧ್ವಿ ಹೆಂಡತಿಯನ್ನು ಕೊಂದು, ಅವಳ ಒಡವೆಗಳನ್ನೆಲ್ಲ ಗಂಟುಕಟ್ಟಿಕೊಂಡು ತನ್ನ ಊರಿಗೆ ಗುಟ್ಟಾಗಿ ಹೋಗಿಬಿಟ್ಟನು. ಗಂಡಸರು ಇಂಥ ಪಾಪಿಗಳು!
ಶಾರಿಕೆ ಹೀಗೆ ಕಥೆಯನ್ನು ಹೇಳಿ ಮುಗಿಸಿತು. ಆಗ ರಾಜನು ಗಿಣಿಯನ್ನು ಕುರಿತು “ಈಗ ನೀನು ನಿನ್ನ ವಾದವನ್ನು ಹೇಳು” ಎಂದನು. ಆಗ ಗಿಣಿ ಈ ಕಥೆಯನ್ನು ಹೇಳಿತು –
ಹರ್ಷವತಿ ಎಂಬ ನಗರದಲ್ಲಿ ಧರ್ಮದತ್ತನೆಂಬ ವರ್ತಕನಿದ್ದನು. ಅವನು ಕೋಟೀಶ್ವರ. ಅವನಿಗೆ ವಸುದತ್ತೆಯೆಂಬ ರೂಪವತಿಯಾದ ಮಗಳಿದ್ದಳು. ಅವಳು ಪ್ರಾಪ್ತವಯಸ್ಕಳಾದಾಗ ಧರ್ಮದತ್ತನು ತಾಮ್ರಲಿಪಿಯಲ್ಲಿದ್ದ ಸಮುದ್ರದತ್ತನೆಂಬ ವರನಿಗೆ ಅವಳನ್ನು ಕೊಟ್ಟು ಮದುವೆ ಮಾಡಿದನು. ಸಮುದ್ರದತ್ತನು ರೂಪವಂತನೂ, ಗುಣವಂತನೂ, ಎಲ್ಲ ದೃಷ್ಟಿಯಿಂದ ಅವಳಿಗೆ ಅನುರೂಪನೂ ಆಗಿದ್ದನು. ಆದರೆ ವಸುದತ್ತೆಯೇ ಚಪಲಚಿತ್ತೆ ಆಗಿದ್ದಳು. ಒಮ್ಮೆ ಸಮುದ್ರದತ್ತನು ಹೆಂಡತಿಯನ್ನು ತವರುಮನೆಯಲ್ಲಿ ಬಿಟ್ಟು ತಾನು ತನ್ನ ಊರಿಗೆ ಹೋಗಿದ್ದನು. ಆಗ ವಸುದತ್ತೆಯು ತನ್ನ ಊರಿನಲ್ಲಿಯೇ ಸುಂದರ ಯುವಕನೊಬ್ಬನನ್ನು ಕಂಡು ಮೋಹಗೊಂಡಳು. ದಾಸಿಯ ಮುಖಾಂತರ ಅವನನ್ನು ರಹಸ್ಯವಾಗಿ ಮನೆಗೆ ಕರೆಸಿಕೊಂಡು ಸುಖವನ್ನು ಅನುಭವಿಸಿದಳು. ಆಮೇಲೆ ಮತ್ತೆ ಮತ್ತೆ ಅವನ ಸಹವಾಸ ಮಾಡತೊಡಗಿದಳು.
ಕೆಲವು ದಿನಗಳಾದ ಮೇಲೆ ಸಮುದ್ರದತ್ತನು ಹೆಂಡತಿಯನ್ನು ಕರೆದುಕೊಂಡು ಹೋಗುವುದಕ್ಕೆಂದು ಮಾವನ ಮನೆಗೆ ಬಂದನು. ಅಂದು ರಾತ್ರಿ ಅವನು ಹೆಂಡತಿಯನ್ನು ಸೇರಲು ಬಯಸಿದರೂ ಅವಳು ಮನಸ್ಸಿಲ್ಲದೆ ನಿದ್ದೆ ಬಂದಂತೆ ಮಲಗಿಬಿಟ್ಟಳು. ಅವನಿಗೆ ನಿರಾಶೆಯಾದರೂ ಪ್ರಯಾಣದ ಆಯಾಸದಿಂದಾಗಿ ಅವನೂ ಬೇಗನೆ ನಿದ್ದೆ ಮಾಡಿದನು. ಗಂಡನಿಗೆ ಚೆನ್ನಾಗಿ ನಿದ್ದೆ ಬಂತೆಂದು ತಿಳಿದ ಮೇಲೆ ವಸುದತ್ತೆ ಎದ್ದು ಆಭರಣಗಳನ್ನೆಲ್ಲ ಧರಿಸಿಕೊಂಡು ತನ್ನ ಪ್ರಿಯಕರನನ್ನು ಹುಡುಕಿಕೊಂಡು ಹೊರಟಳು. ಅದೇ ಹೊತ್ತಿಗೆ ಕಳ್ಳನೊಬ್ಬನು ಕದಿಯಲೆಂದೇ ಆ ಮನೆಗೆ ಹೊಕ್ಕಿದ್ದನು. ಅವಳನ್ನು ಕಂಡು ಅವನು ‘ನಾನು ಯಾವ ಆಭರಣಗಳಿಗಾಗಿ ಇಲ್ಲಿ ಬಂದೆನೋ ಅವುಗಳನ್ನು ಧರಿಸಿಕೊಂಡೇ ಇವಳು ಎಲ್ಲಿಗೋ ಹೊರಟಿದ್ದಾಳೆ. ಇವಳ ಹಿಂದೆಯೇ ಹೋಗಿ ನೋಡುತ್ತೇನೆ. ದಾರಿಯಲ್ಲಿ ಎಲ್ಲಾದರೂ ಇವಳಿಂದ ಆಭರಣಗಳನ್ನು ವಶಪಡಿಸಿಕೊಳ್ಳುತ್ತೇನೆ’ ಎಂದು ಅಂದುಕೊಂಡು ಅವಳಿಗೆ ಗೊತ್ತಾಗದ ಹಾಗೆ ಅವಳ ಹಿಂದೆಯೇ ಹೋದನು. ಅವಳು ಮನೆಯ ಹತ್ತಿರವಿದ್ದ ಉದ್ಯಾನಕ್ಕೆ ಬಂದಳು. ಅಲ್ಲಿ ನೋಡುತ್ತಾಳೆ, ಅವಳ ಪ್ರಿಯಕರನ ಶರೀರವು ಮರದಿಂದ ತೂಗಾಡುತ್ತಿತ್ತು! ಅವನು ರಾತ್ರಿಯ ಹೊತ್ತು ಅಲ್ಲಿ ಸುಳಿದಾಡುತ್ತಿದ್ದುದನ್ನು ಕಂಡು ನಗರರಕ್ಷಕರು ಕಳ್ಳನಿರಬೇಕೆಂದು ಭಾವಿಸಿ ಅವನನ್ನು ಹಿಡಿದು ಮರಕ್ಕೆ ನೇತು ಹಾಕಿ ಹೋಗಿದ್ದರು. ಅವಳು ಹೇಗೋ ಕಷ್ಟಪಟ್ಟು ಪ್ರಿಯಕರನ ಶರೀರವನ್ನು ಮರದಿಂದ ಕೆಳಕ್ಕೆ ಇಳಿಸಿದಳು. ಆಮೇಲೆ ಅವನ ಮುಖದ ಮೇಲೆ ಮುಖವಿಟ್ಟು ಗೋಳಾಡತೊಡಗಿದಳು. ಅದೇ ಹೊತ್ತಿಗೆ ಒಂದು ಬೇತಾಳವು ಆ ಶರೀರದೊಳಗೆ ಪ್ರವೇಶ ಮಾಡಿತ್ತು. ಅದು ವಸುದತ್ತೆಯ ಮೂಗನ್ನು ಛಕ್ಕನೆ ಕಚ್ಚಿ ಹಾಕಿತು. ಆ ಕ್ಷಣವೇ ಆ ಶರೀರವನ್ನು ಬಿಟ್ಟು ಹೋಗಿಯೂ ಬಿಟ್ಟಿತು.
ಅವಳ ಹಿಂದೆಯೇ ಬಂದಿದ್ದ ಕಳ್ಳ ಇದೆಲ್ಲವನ್ನೂ ನೋಡಿದ್ದ. ಅವಳು ಈಗ ಏನು ಮಾಡುತ್ತಾಳೆಂದು ಅವನು ನೋಡುತ್ತಲೇ ಇದ್ದ. ವಸುದತ್ತೆ ಕೂಡಲೇ ಮನೆಗೆ ಹಿಂದಿರುಗಿದಳು. ತನ್ನ ಗಂಡ ಮಲಗಿದ್ದ ಕೋಣೆಗೆ ಹೋಗಿ ಅಲ್ಲಿಂದಲೇ “ಅಯ್ಯೋ! ಈ ಗಂಡನ ರೂಪದ ಶತ್ರು ಏನು ಮಾಡಿಬಿಟ್ಟ, ಏನೂ ತಪ್ಪು ಮಾಡದ ನನ್ನ ಮೂಗನ್ನೇ ಕತ್ತರಿಸಿ ಬಿಟ್ಟನಲ್ಲ..!’’ ಎಂದು ಕಿರುಚಿಕೊಂಡಳು. ಮನೆಯಲ್ಲಿದ್ದವರೆಲ್ಲ ಓಡಿಬಂದರು. ಗಂಡನೂ ಎಚ್ಚರವಾಗಿ ಎದ್ದು ಕುಳಿತನು. ಧರ್ಮದತ್ತನು ಒಳಗೆ ಬಂದು ನೋಡುತ್ತಾನೆ, ಮಗಳ ಮೂಗು ಕತ್ತರಿಸಿ ಹೋಗಿದೆ, ರಕ್ತ ಸುರಿಯುತ್ತಿದೆ. ಅಳಿಯನೇ ಆ ಕೆಲಸ ಮಾಡಿದ್ದಾನೆಂದು ನಿಶ್ಚಯಿಸಿ ಅವನು ಆ ಕ್ಷಣವೇ ಅವನನ್ನು ಬಂಧಿಸಿ, ಬೆಳಿಗ್ಗೆ ರಾಜನ ಬಳಿಗೆ ಕರೆದುಕೊಂಡು ಹೋದನು. ರಾಜನು ಸಮುದ್ರಗುಪ್ತನು ಏನನ್ನೋ ಹೇಳುತ್ತಿದ್ದರೂ ಅದನ್ನು ಕೇಳಿಸಿಕೊಳ್ಳದೆ “ಇವನನ್ನು ಶೂಲಕ್ಕೇರಿಸಿ’’ ಎಂದು ಅಧಿಕಾರಿಗಳಿಗೆ ಅಪ್ಪಣೆ ಮಾಡಿದನು. ಅವರು ಅವನನ್ನು ವಧಾಸ್ಥಾನಕ್ಕೆ ಕರೆದುಕೊಂಡು ಹೊರಟರು. ಆವರೆಗೂ ದೂರದಿಂದಲೇ ಎಲ್ಲವನ್ನೂ ಗಮನಿಸುತ್ತಿದ್ದ ಕಳ್ಳನು ಈಗ ಎದುರಿಗೆ ಬಂದು ಅಧಿಕಾರಿಗಳನ್ನು ಕುರಿತು “ಇವನು ನಿರಪರಾಧಿ, ಇವನನ್ನೇಕೆ ದಂಡಿಸುತ್ತೀರಿ? ನಿಜವಾಗಿ ನಡೆದಿದ್ದೇನು ಎಂದು ನನಗೆ ಗೊತ್ತಿದೆ. ನನ್ನನ್ನು ರಾಜನ ಬಳಿಗೆ ಕರೆದುಕೊಂಡು ಹೋಗಿ. ನಾನು ಎಲ್ಲವನ್ನೂ ವಿವರಿಸುತ್ತೇನೆ” ಎಂದನು.
ಅದರಂತೆ ಅವರು ಕರೆದುಕೊಂಡು ಹೋಗಲು ಅವನು ರಾಜನಿಗೆ ತಾನು ನೋಡಿದ್ದೆಲ್ಲವನ್ನೂ ಆದ್ಯಂತವಾಗಿ ವಿವರಿಸಿದನು. ಉದ್ಯಾನಕ್ಕೆ ಹೋಗಿ ನೋಡಲು ಅವಳ ಮೂಗು ಇನ್ನೂ ಹೆಣದ ಬಾಯಿಯಲ್ಲಿಯೇ ಇತ್ತು. ಅವನು ಹೇಳಿದ್ದೆಲ್ಲ ನಿಜವೆಂದು ರಾಜನಿಗೆ ಮನದಟ್ಟಾಯ್ತು. ಅವನು ಸಮುದ್ರದತ್ತನನ್ನು ಬಿಡುಗಡೆ ಮಾಡಿ, ಅವನ ಹೆಂಡತಿಯ ಕಿವಿಗಳನ್ನು ಕತ್ತರಿಸಿ ಹಾಕಿಸಿ, ಅವಳನ್ನು ತನ್ನ ರಾಜ್ಯದಿಂದ ಹೊರಕ್ಕೆ ಹಾಕಿದನು. ಸುಳ್ಳು ದೂರು ಕೊಟ್ಟಿದ್ದಕ್ಕಾಗಿ ಧರ್ಮದತ್ತನನ್ನೂ ದಂಡಿಸಿದನು. ಒಳ್ಳೆಯ ಕೆಲಸ ಮಾಡಿದ್ದಕ್ಕಾಗಿ ಕಳ್ಳನಿಗೆ ನಗರಾಧ್ಯಕ್ಷನ ಕೆಲಸವನ್ನು ಕೊಟ್ಟನು. ಹೆಂಗಸರೇ ಹೀಗೆ. ಅವರ ಸ್ವಭಾವವೇ ವಕ್ರ. ಅವರ ಹೃದಯ ಕಲ್ಲಿನಂಥದ್ದು.
ಹೀಗೆ ಗಿಣಿಯು ಕಥೆಯನ್ನು ಹೇಳಿ ಮುಗಿಸಿತು. ಆ ಕೂಡಲೇ ಅದು ಶಾಪಮುಕ್ತಿಯಾಗಿ ಚಿತ್ರರಥನೆಂಬ ಗಂಧರ್ವನಾಯ್ತು. ಶಾರಿಕೆಯೂ ಶಾಪಮುಕ್ತಿಯಾಗಿ ತಿಲೋತ್ತಮೆಯೆಂಬ ಅವನ ಹೆಂಡತಿಯಾಯ್ತು. ಇಬ್ಬರೂ ಶಾಪಮುಕ್ತರಾಗಿ ಆಕಾಶಮಾರ್ಗದಿಂದ ಗಂಧರ್ವಲೋಕಕ್ಕೆ ಹೋಗಿ ಸೇರಿಕೊಂಡರು.
ಹೀಗೆAದು ಕಥೆಯನ್ನು ಹೇಳಿ ಮುಗಿಸಿ ಬೇತಾಳನು “ಮಹಾರಾಜ! ಈಗ ನೀನು ಹೇಳು, ಗಂಡಸರು ಪಾಪಿಗಳೋ, ಹೆಂಗಸರು ಪಾಪಿಗಳೋ? ಇದಕ್ಕೆ ಉತ್ತರವನ್ನು ನೀನು ತಿಳಿದಿದ್ದೂ ಹೇಳದಿದ್ದರೆ ನಿನ್ನ ತಲೆ ಒಡೆದು ಚೂರುಚೂರಾಗುತ್ತದೆ” ಎಂದನು. ರಾಜನು – “ಹೆಂಗಸರೇ ಪಾಪಿಗಳು. ಗಂಡಸರಲ್ಲಿಯೂ ಎಲ್ಲೋ ಕೆಲವರು ದುರಾಚಾರಿಗಳಾಗಿರಬಹುದು. ಆದರೆ ಎಲ್ಲ ಕಡೆಯಲ್ಲೂ, ಎಲ್ಲ ಕಾಲದಲ್ಲೂ ಪ್ರಾಯಶಃ ಹೆಂಗಸರೇ ಪಾಪಿಗಳು” ಎಂದನು.