ಈ ಜಗತ್ತೆಂಬುದು ನನ್ನ ವಿಸ್ತಾರವಲ್ಲವೆ? ಹಾಲು ಹೆಪ್ಪುಗಟ್ಟಿ ಮೊಸರಾಗುವುದು. ಅಥವಾ ಬೀಜವೇ ಗಿಡವಾಗುವುದು, ಅಥವಾ ಬಂಗಾರವೇ ಅಲಂಕಾರವಾಗುವುದು. ಅದರಂತೆ ಈ ಜಗತ್ತೆಂದರೆ, ನನ್ನೊಬ್ಬನ ವಿಸ್ತಾರವೇ ಅಹುದು. ಇದು ಜಗದುತ್ಪತ್ತಿಯ ಮೊದಲು ಅವ್ಯಕ್ತತೆಯಿಂದ ಹೆಪ್ಪುಗಟ್ಟಿರುವುದು. ಬಳಿಕ ಅದೇ ವಿಶ್ವದ ರೂಪದಿಂದ ಹಬ್ಬುವುದು. ಇಂತು ಅವ್ಯಕ್ತ ರೂಪದಿಂದಿರುವ ನಾನೇ ನಾನು ತ್ರೈಲೋಕ್ಯದ ರೂಪದಿಂದ ವಿಸ್ತಾರಗೊಂಡಿರುವೆನೆಂದು ತಿಳಿ. ನೀರಿನ ಮೇಲೆ ಬುರುಗು (ನೊರೆಯು) ಭಾಸವಾಗುವಂತೆ, ಮಹತ್ತತ್ತ್ವದಿಂದ ದೇಹದವರೆಗಿನ ಎಲ್ಲ ಭೂತಗಳು ನನ್ನ ಆಶ್ರಯದ ಮೇಲೆ ಭಾಸವಾಗುವವು.
ನನ್ನ ಆಶ್ರಯದ ಮೇಲೆ ಈ ಭೂತಗಳು ಭಾಸಿಸುವವು. ಮತ್ತು ನಾನಾದರೂ ಒಬ್ಬನು ಅವುಗಳಲ್ಲಿರುವೆನೆಂಬ ಕಲ್ಪನೆಯನ್ನಾದರೂ ಅವರು ಮಾಡುವರು. ಈ ಬಗೆಯಾಗಿ ನಾನು ಪ್ರಾಣಿಗಳ ಉತ್ಪತ್ತಿಕರ್ತನೆಂದು ಅನ್ನುವರು. ಆದರೆ ನಿಜವಾಗಿ ಪ್ರಾಣಿ ಮತ್ತು ನಾನು ಒಂದೇ!
ಭೂತಮಾತ್ರಗಳನ್ನು ನನ್ನಲ್ಲಿ ಕಲ್ಪಿಸಿದರೆ ಮಾತ್ರ ಭಾಸಿಸುವವು. ಮತ್ತು ಅದೇ ಆ ಕಲ್ಪನೆಯನ್ನು ಬಿಟ್ಟುಕೊಟ್ಟರೆ, ಭೂತಗಳಿರದೆ ನಾನೇ ಎಲ್ಲವೂ ಇರುವೆನೆಂದು ಗೊತ್ತಾಗುವುದು. ಆದ್ದರಿಂದ ಭೂತಗಳ ಇರುವಿಕೆ ಮತ್ತು ಇಲ್ಲದಿರುವಿಕೆಗಳು, ಕೇವಲ ಕಲ್ಪನೆಯ ಇರುವಿಕೆ ಮತ್ತು ಇಲ್ಲದಿರುವಿಕೆಗಳ ಮೇಲೆ ಅವಲಂಬಿಸಿವೆ. ಯಾಕೆಂದರೆ ಕಲ್ಪನೆ ಇರುವವರೆಗೆ ಅವು ಭಾಸಿಸುವವು. ಕಲ್ಪನೆಯು ನಷ್ಟವಾದೊಡನೆ, ಅವುಗಳ ಭಾಸವೂ ಇಲ್ಲವಾಗುವುದು. ಆ ಕಲ್ಪನೆಯೇ ಇಲ್ಲದಾಗಲು, ಭೂತಗಳು ಅವೆ, ಇಲ್ಲ ಎಂಬ ಭಾಷೆಯು ಉಳಿಯುವುದೆಲ್ಲಿ? ಆದ್ದರಿಂದ ಮತ್ತೆ ಈ ನನ್ನ ಐಶ್ವರ್ಯಯೋಗವನ್ನು ನೋಡು.
ಕಲ್ಪನಾರೂಪ ಪ್ರಕೃತಿಯು ಇಲ್ಲದಂತಾಗಲು ಈ ಭೂತಾಭಾಸವು ಮೊದಲಿನದೇ ಅಲ್ಲವೆಂಬ ನಿಶ್ಚಯವುಂಟಾಗುವುದು. ಮತ್ತು ಅನಂತರ ಕೇವಲ ನನ್ನ ಶುದ್ಧ ಸ್ವರೂಪವೇ ಉಳಿಯುವುದು.
[ಜ್ಞಾನೇಶ್ವರೀ ಗೀತೆ, ಅಧ್ಯಾಯ ೯.
ಕನ್ನಡ ಅನುವಾದ:
ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ.]