ಅರ್ಕೇ ಚೇನ್ಮಧು ವಿಂದೇತ
ಕಿಮರ್ಥಂ ಪರ್ವತಂ ವ್ರಜೇತ್|
ಇಷ್ಟಸ್ಯಾರ್ಥಸ್ಯ ಸಂಸಿದ್ಧೌ ಕೋ ವಿದ್ವಾನ್ ಯತ್ನಮಾಚರೇತ್||
– ಶಾಬರಭಾಷ್ಯ
ಹೋಗುತ್ತಿರುವಾಗ ದಾರಿಯ ಬದಿಯಲ್ಲಿಯೇ ಎಕ್ಕದ ಗಿಡದಲ್ಲಿ ಜೇನು ಇರುವುದು ಕಣ್ಣಿಗೆ ಬಿದ್ದರೆ, ಜೇನನ್ನರಸುತ್ತಾ ಬೆಟ್ಟದ ಮೇಲಕ್ಕೆ ಏಕಾದರೂ ಹೋಗಬೇಕು? ಬಯಸಿದ ಪದಾರ್ಥವು ಕೈಗೆ ಸಿಕ್ಕಿದ ಮೇಲೆ ಜ್ಞಾನಿಯು ಪ್ರಯತ್ನವನ್ನು ಮುಂದುವರಿಸದೆ ವಿರಮಿಸುತ್ತಾನೆ.”
ಗುರಿಗೂ ಪ್ರಯತ್ನಕ್ಕೂ ನಡುವೆ ಸುಸಂಬದ್ಧತೆ ಇರಬೇಕು
ಜೀವಿಸಿರುವವರೆಗೆ ಕಾರ್ಯಶೀಲರಾಗಿರಬೇಕು, ನಿಷ್ಕ್ರಿಯರಾಗಬಾರದು, ಸದಾ ಉತ್ಸಾಹಪೂರ್ಣರಾಗಿರಬೇಕಾದುದೇ ಮನುಷ್ಯಧರ್ಮ – ಎಂಬ ಆಶಯದ ಸೂಕ್ತಿಗಳೂ ಗಾದೆಮಾತುಗಳೂ ಹೇರಳವಾಗಿವೆ. ಏನನ್ನು ಸಾಧಿಸಬೇಕಾದರೂ ಪ್ರಯತ್ನವು ಅನಿವಾರ್ಯ ಮಾತ್ರವಲ್ಲ, ದೈಹಿಕ-ಮಾನಸಿಕ ಸ್ವಾಸ್ಥ್ಯರಕ್ಷಣೆಗೂ ಲವಲವಿಕೆಯು ಅವಶ್ಯವೆಂಬುದು ಸ್ವತಃಸಿದ್ಧವಾಗಿದೆ. “ಉತ್ಸಾಹಾರಂಭಮಾತ್ರೇಣ ಜಾಯನ್ತೇ ಸರ್ವಸಂಪದಃ” ಎಂಬ ರಾಮಾಯಣವಾಕ್ಯವು ಪ್ರಸಿದ್ಧವೇ.
ಆದರೆ ಈ ಜೀವನಸೂತ್ರಕ್ಕೆ ಇನ್ನೊಂದು ಮುಖವೂ ಉಂಟು. ಮನುಷ್ಯರು ಕಾರ್ಯಶೀಲರಾಗಿದ್ದರಷ್ಟೆ ಸಾಲದು, ಗುರಿಯ ಸ್ಪಷ್ಟತೆಯೂ ಇರಬೇಕಾಗುತ್ತದೆ. ಲಕ್ಷ್ಯವನ್ನು ಸ್ಫುಟಗೊಳಿಸಿಕೊಂಡು ಅದರ ಈಡೇರಿಕೆಗೆ ಅನುಗುಣವಾಗಿ ಶ್ರಮವನ್ನು ತೊಡಗಿಸುವುದು ವಿವೇಕದ ದಾರಿ. ಇದನ್ನೇ ಕೌಶಲವೆಂದೂ ದಕ್ಷತೆಯೆಂದೂ ಕರೆಯುತ್ತಾರೆ. ದಕ್ಷತೆಯೆಂದರೆ `ಉದ್ದಿಷ್ಟಫಲವನ್ನು ನಿರೀಕ್ಷಿಸಿದ ರೀತಿಯಲ್ಲಿ ಪಡೆಯುವ ಸಾಮರ್ಥ್ಯ’ (“ದಕ್ಷಃ = ಪ್ರತ್ಯುತ್ಪನ್ನೇಷು ಕಾರ್ಯೇಷು ಸದ್ಯೋ ಯಥಾವತ್ ಪ್ರತಿಪತ್ತುಂ ಸಮರ್ಥಃ”) – ಎಂದಿದ್ದಾರೆ ಆಚಾರ್ಯ ಶಂಕರರು. ಗುರಿಯಲ್ಲಿ ಸ್ಪಷ್ಟತೆಯೂ ಪ್ರಯತ್ನದಲ್ಲಿ ವ್ಯವಸ್ಥಿತತೆಯೂ ಇರದಿದ್ದಲ್ಲಿ ವ್ಯರ್ಥಶ್ರಮವಷ್ಟೇ ಆದೀತು.
ಒಂದು ವಿನೋದದ ಪ್ರಸಂಗವನ್ನು ನೆನೆಯಬಹುದು.
ಯಾಕೊಬಿ ಎಂಬ ಪ್ರಸಿದ್ಧ ಗಣಿತಶಾಸ್ತ್ರಜ್ಞನಲ್ಲಿಗೆ ಆತನ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಲು ಇಚ್ಛಿಸಿ ವಿದ್ಯಾರ್ಥಿಯೊಬ್ಬ ಬಂದ. ಬಂದು ಹಲವು ತಿಂಗಳುಗಳೇ ಕಳೆದಿದ್ದರೂ ವಿದ್ಯಾರ್ಥಿಯು ಕೆಲಸವನ್ನೇ ಆರಂಭಿಸಿರಲಿಲ್ಲ. ಯಾಕೊಬಿ ವಿದ್ಯಾರ್ಥಿಯನ್ನು ಕೇಳಿದ:
ಯಾಕೊಬಿ: “ಏನಪ್ಪಾ, ನೀನು ಇನ್ನೂ ನಿನ್ನ ಕೆಲಸವನ್ನು ಶುರು ಮಾಡಿಯೇ ಇಲ್ಲವಲ್ಲ? ಏಕೆ?”
ವಿದ್ಯಾರ್ಥಿ: “ನನ್ನ ವಿಷಯಕ್ಕೆ ಸಂಬಂಧಿಸಿದ ಅಷ್ಟೂ ಸಾಹಿತ್ಯವನ್ನು ನಾನು ಇನ್ನೂ ಓದಿ ಮುಗಿಸಿಲ್ಲ.”
ಯಾಕೊಬಿ: “ಅಯ್ಯಾ ಪುಣ್ಯಾತ್ಮ! ಮದುವೆಯನ್ನು ನಿಶ್ಚಯಿಸುವುದಕ್ಕೆ ಮೊದಲು ಜಗತ್ತಿನ ಎಲ್ಲ ಹೆಣ್ಣುಗಳನ್ನೂ ಪರಿಶೀಲನೆ ಮಾಡಬೇಕು ಎಂದು ನಿನ್ನ ತಂದೆ ಹೊರಟಿದ್ದಿದ್ದರೆ ನೀನು ಇಲ್ಲಿ ಇರುತ್ತಿರಲೇ ಇಲ್ಲ!”
ಗುರಿಗೂ ಪ್ರಯತ್ನಕ್ಕೂ ನಡುವೆ ಸುಸಂಬದ್ಧತೆ ಇರುವುದು ಅನಿವಾರ್ಯ.