ಬಾಗಿದನು ಶ್ರೀರಾಮ ಶುದ್ಧ ಭಕುತಿಯ ಕರೆಗೆ
ನೀಗಿದನು ಕೀಳರಿಮೆ ತಡೆಯನೆಲ್ಲ
ರಾಘವನ ನಡೆನುಡಿಯೊಳಂತರವು ಸಿಗದೆಮಗೆ
ಸೋಗಲಾಡಿಯ ತೆರದ ಬದುಕದಲ್ಲ
ಅಂಬಿಗರ ಗುಹನೊಡನೆ ರಾಮಗಾಯಿತು ಸಖ್ಯ
ನಂಬಿಕೆಯು ಬೆಳೆಯಿಸಿತು ಪ್ರೇಮವನ್ನು
ತುಂಬು ಮನದಲಿ ಬಾಹು ಬಂಧನವ ಗುಹಗಿತ್ತು
ಬಿಂಬಿಸಿದನೇಕತೆಯ ಸೂತ್ರವನ್ನು
ಇಕ್ಷುಕುಲ ಸಂಭವಗೆ ಭೇದಭಾವಗಳಿಲ್ಲ
ಪಕ್ಷಿಯಲು ರಾಮನಿಗೆ ಭಕ್ತಿಭಾವ
ರಕ್ಷಿಸುವ ಭರವಸೆಯು ಕಪಿಕುಲದ ವೀರರಿಗೆ
ಕುಕ್ಷಿಯೊಳು ರವಿಸೂನು ದೇವದೇವ
ಇನಕುಲದ ಚಂದಿರನು ಶಬರಿಯನು ಸಂಧಿಸಿದ
ನಿನದ್ಯಾವ ಕುಲವೆಂದು ಕೇಳಲಿಲ್ಲ
ವನವಾಸಿಯವಳೆದೆಯ ಭಕ್ತಿ ಸುಧೆಯಲಿ ಮಿಂದ
ಮನ, ಬುದ್ಧಿಗಳು ಬೇರೆ ಬಯಸಲಿಲ್ಲ
ಮಾತೆಯರು ಮೂವರಿಹರವಗಲ್ಲಿ ನಗರಿಯಲಿ
ದಾತೆ ನಿನ್ನಲಿ ರಾಮನವರ ಕಂಡ
ಸೋತು ಕರಗಿದೆಯೆನುತ ನಿಷ್ಕಪಟ ಪ್ರೇಮದಲಿ ಮಾತು ಮರೆಯುತ ಸವಿಯ ಫಲವನುಂಡ