ಎಷ್ಟೇ ಬದಲಾದಂತೆ ಕಂಡರೂ ವಾಸ್ತವವಾಗಿ ಯಾವುದರ ಸ್ವರೂಪವೂ ಬದಲಾಗುವುದಿಲ್ಲ – ಎಂಬುದು ಫ್ರೆಂಚ್ ಭಾಷೆಯ ಪ್ರಸಿದ್ಧ ನಾಣ್ಣುಡಿ. ಭಾರತವು ಹಾವಾಡಿಗರ ದೇಶ, ಅಲ್ಲಿ ಹುಟ್ಟಿದ ಹೆಣ್ಣುಮಕ್ಕಳನ್ನು ನದಿಯಲ್ಲಿ ಬಿಸಾಡುತ್ತಾರೆ – ಎಂದೆಲ್ಲ ಹದಿನೆಂಟು-ಹತ್ತೊಂಬತ್ತನೇ ಶತಮಾನಗಳಲ್ಲಿ ಬ್ರಿಟಿಷರು ಪ್ರಚಾರಮಾಡುತ್ತಿದ್ದರು. ಒಟ್ಟಿನ ಮೇಲೆ ಭಾರತವು ಅನಾಗರಿಕ ದೇಶವೆಂದೂ ಅದನ್ನು `ನಾಗರಿಕ’ಗೊಳಿಸುವ ಹೊಣೆಯನ್ನು ಭಗವಂತನು ತಮಗೆ ವಹಿಸಿದ್ದಾನೆಂದೂ (`ವ್ಹೈಟ್ ಮ್ಯಾನ್ಸ್ ಬರ್ಡನ್’) ಬ್ರಿಟಿಷರ ಅಭಿಮತವಿದ್ದಿತು. ಸಾಮ್ರಾಜ್ಯಾಧಿಕಾರದಿಂದ ಪೋಷಿತವಾದ ಈ ಕಥನವು ದಶಕಗಳುದ್ದಕ್ಕೂ ಎಷ್ಟು ಪ್ರಬಲವಾಗಿ ಪ್ರಚಾರಗೊಂಡಿತೆಂದರೆ ಭಾರತವು ನಾಗರಿಕತೆಯ ನಿಚ್ಚಣಿಗೆಯ ಅತಿ ಕೆಳ ಸ್ಥಾನದಲ್ಲಿದೆ ಎಂದು ಬ್ರಿಟಿಷರ ಆಧಿಪತ್ಯದಿಂದ ಪ್ರಭಾವಿತರಾದ ಭಾರತೀಯ `ಸಮಾಜೋನ್ನತ’ರೂ ನಂಬಿದ್ದರು. ಆ ವಿಕೃತಿಯ ಕಮಟು ವಾಸನೆ ಈಗಲೂ ಮರೆಯಾಗಿಲ್ಲ. ಅದರ ಇತ್ತೀಚಿನ ನಿದರ್ಶನವೆಂದರೆ ಲೆಸ್ಲೀ ಅಡ್ವಿನ್ ಎಂಬ ಆಂಗ್ಲ ಮಹಿಳೆಯು ಭಾರತವೆಂದರೆ ನಿರಂತರವಾಗಿ ಸ್ತ್ರೀಯರ ಮೇಲೆ ಅತ್ಯಾಚಾರ ನಡೆಯುವ ದೇಶ ಎಂದು ಪ್ರತಿಪಾದಿಸಿ ತಯಾರಿಸಿರುವ `ಇಂಡಿಯಾಸ್ ಡಾಟರ್’ ಎಂಬ ಸಾಕ್ಷ್ಯಚಿತ್ರ. ಅದರ ವಸ್ತು ೨೦೧೨ರ ಡಿಸೆಂಬರ್ ೧೬ರಂದು ನಡೆದಿದ್ದ ಒಂದು ಅತ್ಯಾಚಾರ ಪ್ರಕರಣ. ಆ ಅಪಕ್ವ ಚಿತ್ರವನ್ನು ಬಿ.ಬಿ.ಸಿ. ಪ್ರಸಾರಮಾಡಲು ಹವಣಿಸಿತ್ತು. ಈ ಚಿತ್ರದ ನಿರ್ಮಾಣವೇ ದುರುದ್ದೇಶಪ್ರೇರಿತ ವಾಗಿತ್ತೆಂಬುದನ್ನು ಹಲವಾರು ಸಂಗತಿಗಳು ಸ್ಪಷ್ಟಪಡಿಸಿವೆ. ಬಂಧನದಲ್ಲಿರುವ ಆರೋಪಿಯನ್ನು ಭೇಟಿಯಾಗುವುದು ಭಾರತೀಯ ವರದಿಗಾರರಿಗೇ ದುಸ್ತರವಿರುವಾಗ ಯು.ಪಿ.ಎ. ಸರ್ಕಾರ (ಬಹುಶಃ ಚಿತ್ರನಿರ್ಮಾಪಕಿ ಆಂಗ್ಲಳೆಂಬ ಕಾರಣದಿಂದ) ಭೇಟಿಗೆ ಅನುಮತಿ ನೀಡಿತ್ತು. ಇಷ್ಟಾಗಿ ಲೆಸ್ಲಿ ಅಡ್ವಿನ್ ಎಂಬಾಕೆ ಚಲನಚಿತ್ರೋದ್ಯಮದಲ್ಲಿ ಪ್ರತಿಷ್ಠಿತರಾದಾಕೆಯೇನಲ್ಲ. ಸಾಕ್ಷ್ಯಚಿತ್ರವನ್ನು ತಯಾರಿಸಿದುದು ಈ ಉದ್ದೇಶಕ್ಕಾಗಷ್ಟೇ ಹುಟ್ಟುಹಾಕಿದ್ದ ಅನಾಮಧೇಯ ಸಂಸ್ಥೆ. ತಯಾರಿಕೆಗೆ ಪರೋಕ್ಷವಾಗಿ ಹಣ ಒದಗಿದ್ದು ಅಮೆರಿಕದ ಫೋರ್ಡ್ ಫೌಂಡೇಶನ್ನಿನಿಂದ. ತಿಹಾರ್ ಜೈಲಿನಲ್ಲಿ ಬಂದಿಯಾಗಿರುವ ಆರೋಪಿ ಮುಕೇಶ್ ನಿರ್ಮಾಪಕರಿಗೆ ಅನುಕೂಲಕರ ರೀತಿಯಲ್ಲಿ ಹೇಳಿಕೆ ನೀಡುವುದಕ್ಕಾಗಿ ಅವನಿಗೆ ಯಥೇಷ್ಟ ಹಣ ನೀಡಿದ್ದರು. ಗಮನ ಸೆಳೆಯುವ ಸಂಗತಿಯೆಂದರೆ – ಲೈಂಗಿಕ ಅತ್ಯಾಚಾರ ಕುರಿತು ಅರಿವನ್ನು ಹರಡುವ ಆಶಯ ಇದ್ದಿದ್ದರೆ ಈ `ಸಾಧನೆ’ಯಲ್ಲಿ ಭಾರತಕ್ಕಿಂತ ಬಹುಪಾಲು ಮುಂದಿರುವ ಇಂಗ್ಲೆಂಡನ್ನೋ ಅಮೆರಿಕವನ್ನೋ ಆಫ್ರಿಕವನ್ನೋ ಆಯ್ದುಕೊಳ್ಳಬಹುದಿತ್ತಲ್ಲ? ಭಾರತದ ಪ್ರತಿಮೆಗೆ ಮಸಿ ಬಳಿಯುವುದೇ ಪ್ರಗತಿಪರತೆಯೆಂಬ ಮತ್ತು ಅಭಿಪ್ರಾಯ ಸ್ವಾತಂತ್ರ್ಯವೆಂಬ ಸ್ಥಿತಿ ಕೊನೆಗೊಳ್ಳುವುದು ಯಾವಾಗ?
ಮುಗಿಯದ ದುಷ್ಪ್ರಚಾರ
Month : May-2015 Episode : Author :