ವಸ್ತುಸ್ಥಿತಿಯೆಂದರೆ ಈಗ ಹರಡಿರುವ ಅವ್ಯವಸ್ಥೆಗಳೆಲ್ಲ ಕಾನೂನಿನ ಕೊರತೆಯ ಕಾರಣದಿಂದ ಉತ್ಪನ್ನವಾದುವಲ್ಲ; ನೈತಿಕ ಅಧಃಪಾತವೇ ಮುಖ್ಯ ಕಾರಣ. ಪೂರ್ಣವಾಗಿ ಸಾಬೀತಾಗಿರುವ ಉಲ್ಲಂಘನೆಗಳಿಗಾಗಿ ಇದುವರೆಗೆ ಎಷ್ಟು ರಾಜಕಾರಣಿಗಳಿಗೆ ದಂಡನೆಯಾಗಿದೆ? – ಎಂದು ಪ್ರಶ್ನಿಸಿಕೊಂಡಲ್ಲಿ ಈಗಿನ ಪರಿಸ್ಥಿತಿಯ ಸಂಕೀರ್ಣತೆ ಬಯಲಾಗುತ್ತದೆ.
ದೇಶವು ಸ್ವೀಕರಿಸಿರುವ ಸಂಸದೀಯ ಪ್ರಜಾಪ್ರಭುತ್ವ ಪದ್ಧತಿಯ ಆಧಾರವೆಂದರೆ ಚುನಾವಣೆಯ ಮೂಲಕ ಜನಪ್ರತಿನಿಧಿಗಳ ಆಯ್ಕೆ. ಇದಕ್ಕೆ ಪರ್ಯಾಯವಿಲ್ಲವೆಂಬುದು ಸ್ಪಷ್ಟವೇ ಆಗಿದೆ. ಈ ಪದ್ಧತಿಯು ಆರೂವರೆ ದಶಕಗಳ ಕಾಲ ಪ್ರಜಾಪ್ರಭುತ್ವ ಕಾರ್ಯಾನ್ವಯವನ್ನು ಪೋಷಿಸಿರುವುದು ಕಡಮೆಯ ಸಾಧನೆಯೇನಲ್ಲ. (ನೆರೆಯ ದೇಶದಲ್ಲಿ ಜನರಲ್ ಎಲೆಕ್ಶನ್ ಎಂದರೆ ‘ಎಲೆಕ್ಟಿಂಗ್ ದಿ ಜನರಲ್ ಎಂಬ ವ್ಯಂಗ್ಯೋಕ್ತಿಯು ರೂಢಿಯಲ್ಲಿದ್ದುದು ಸುವಿದಿತ.) ಭಾರತದಲ್ಲಿಯಾದರೋ ಆಚರಣೆಯಮಟ್ಟಿಗಾದರೂ ಚುನಾವಣೆಯ ಪ್ರಕ್ರಿಯೆಯು ವ್ಯವಸ್ಥಾನುಗುಣವಾಗಿ ನಡೆದಿದೆ. ಆದರೆ ವರ್ಷಗಳು ಕಳೆದಂತೆ ಪಕ್ಷರಾಜಕೀಯದ, ಸಾಮಾಜಿಕ ಸಂಕೀರ್ಣತೆಯ ಮತ್ತಿತರ ಕಾರಣಗಳಿಂದಾಗಿ ಚುನಾವಣೆಯ ಪ್ರಕ್ರಿಯೆಯ ಬಾಹ್ಯಸ್ವರೂಪವು ಸಂವಿಧಾನಾನುಗುಣವಾಗಿ ಮುಂದುವರಿದಿದ್ದರೂ ಅದರ ಸತ್ತ್ವವು ಒಂದಷ್ಟುಮಟ್ಟಿಗೆ ಶಿಥಿಲಗೊಂಡಿದೆಯೆಂಬುದು ಜನತೆಯ ಅನಿಸಿಕೆಯೂ ಅನುಭವವೂ ಆಗಿದೆ. ವಿಶೇಷವಾಗಿ ಆತಂಕಕ್ಕೆ ಕಾರಣವಾಗಿರುವುದು ಅಧಿಕಗೊಂಡಿರುವ ಹಣದ ಪ್ರಭಾವ ಮತ್ತು ಅನಪೇಕ್ಷಿತ ವ್ಯಕ್ತಿಗಳ ಆಯ್ಕೆ. ಜನಪ್ರತಿನಿಧಿಗಳ ಸೋಲು-ಗೆಲವುಗಳು ಚುನಾವಣೆಯಲ್ಲಿ ದಾಖಲೆಗೊಂಡ ಮತಗಳ ಸಂಖ್ಯಾಪ್ರಮಾಣಕ್ಕೆ ಅನುಸಾರಿಯಾಗಿ ಇರುವುದು ಅನಿವಾರಣೀಯವೇ ಆಗಿದೆ. ಈ ಪ್ರಾಕಾರವು ಅಪರಿವರ್ತನೀಯ. ಆದುದರಿಂದ ಕಾಲದಿಂದ ಕಾಲಕ್ಕೆ ಚುನಾವಣೆಯ ಪ್ರಕ್ರಿಯೆಯ ಆಚರಣೆಯಲ್ಲಿ ಸಾಧ್ಯವಾದಷ್ಟು ಸುಧಾರಣೆಗಳನ್ನು ಅಳವಡಿಸಿ ಪ್ರತಿನಿಧಿವರಣದ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುವುದೊಂದೇ ಮಾರ್ಗ.
ಕಳೆದ ಮೂರು ದಶಕಗಳಿಂದಲೇ ವಿವಿಧ ವೇದಿಕೆಗಳಲ್ಲಿ ಚುನಾವಣೆಯ ಕಾಯ್ದೆಯಲ್ಲಿ ತರಬಹುದಾದ ಬದಲಾವಣೆಗಳ ಬಗೆಗೆ ಚರ್ಚೆಗಳು ಆಗಿವೆ. ಸಾಕಷ್ಟು ದಾರ್ಢ್ಯಪೂರ್ವಕ ಪ್ರಯತ್ನಗಳ ಫಲವಾಗಿ ಹಲಕೆಲವು ಸುಧಾರಣೆಗಳು ಈಗಾಗಲೇ ಅಮಲುಗೊಂಡಿವೆ. ರಾಷ್ಟ್ರದ ಕಾನೂನು ಸ್ಥಿತಿಗತಿ ಪರಾಮರ್ಶನೆಯ ಶೃಂಗವೇದಿಕೆಯಾದ ಕಾನೂನು ಆಯೋಗದ (ಲಾ ಕಮಿಷನ್) ಹಿಂದಿನ (೧೯೯೯) ತಜ್ಞವರದಿಯು ಕ್ರಿಮಿನಲ್ ಅಪರಾಧಿಗಳನ್ನು ಚುನಾವಣಾಪ್ರಕ್ರಿಯೆಯಿಂದ ಹೊರಗಿರಿಸುವಂತೆ ಶಿಫಾರಸು ಮಾಡಿತ್ತು. ಈಚಿನ ದಿನಗಳಲ್ಲಿ ಅಭ್ಯರ್ಥಿಗಳ ಸ್ವಂತ ಆಸ್ತಿಯ ಘೋಷಣೆ, ಮತದಾರನಿಗೆ ಎಲ್ಲ ಅಭ್ಯರ್ಥಿಗಳನ್ನೂ ತಿರಸ್ಕರಿಸುವ ಅವಕಾಶ – ಮೊದಲಾದ ಹಲವು ಕ್ರಮಗಳು ಜಾರಿಗೆ ಬಂದಿವೆ.
ಇದೀಗ ಕಾನೂನು ಆಯೋಗದ ಇತ್ತೀಚಿನ ಪರಾಮರ್ಶನೆಯನ್ನೂ ಸೂಚನಾವಳಿಯನ್ನೂ ಒಳಗೊಂಡ ವರದಿಯನ್ನು ಕೇಂದ್ರಸರ್ಕಾರಕ್ಕೆ ಸಲ್ಲಿಸಲಾಗಿದೆ. ಕಾನೂನು ಆಯೋಗವು ಮಂಡಿಸಿರುವ ಸಲಹೆಗಳು ಗಂಭೀರ ಚಿಂತನೆಗೆ ಅರ್ಹವಾಗಿವೆ. ಚುನಾವಣಾ ಪ್ರಕ್ರಿಯೆಯಂತಹ ಜಟಿಲ ವಿಷಯದಲ್ಲಿ ಸಂಗತವಾದ ಎಲ್ಲ ಸಮಸ್ಯೆಗಳಿಗೆ ಒಮ್ಮೆಗೇ ಪರಿಹಾರವನ್ನು ನಿರೀಕ್ಷಿಸುವುದು ವ್ಯಾವಹಾರಿಕವಲ್ಲ. ಆದರೆ ಈಗ ಮಂಡಿತವಾಗಿರುವ ಸಲಹೆಗಳನ್ನು ಸುಧಾರಣೆಯ ದಿಶೆಯ ಸ್ವೀಕಾರಾರ್ಹ ಸೂಚನೆಗಳೆಂದು ಪರಿಗಣಿಸಲು ಅಭ್ಯಂತರವಿರದೆನಿಸುತ್ತದೆ.
ಹಣದ ಬಳಕೆಯ ಪ್ರಭಾವ ಮತ್ತು ಅಪರಾಧ ಹಿನ್ನೆಲೆಯವರ ಉಮೇದುವಾರಿಕೆಗಳಲ್ಲದೆ ಈಚಿನ ಹಲವಾರು ವರ್ಷಗಳಲ್ಲಿ ಉಲ್ಬಣಿಸಿರುವ ಒಂದು ಸಮಸ್ಯೆಯೆಂದರೆ ಎಣಿಕೆಗೆಟುಕದಷ್ಟು ದೊಡ್ಡ ಪ್ರಮಾಣದ ‘ಸ್ವತಂತ್ರ ಅಭ್ಯರ್ಥಿಗಳ ಪ್ರಚುರತೆ. ಈ ಸ್ವತಂತ್ರ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ‘ಡಮ್ಮಿ ಉಮೇದುವಾರರಾಗಿರುತ್ತಾರೆ (ಎಂದರೆ ಯಾವುದೋ ಪಕ್ಷಗಳ ಮತಗಳನ್ನು ಒಡೆಯುವ ಏಕೈಕ ಉದ್ದೇಶದವರು). ಆಕಸ್ಮಿಕವಾಗಿ ಗೆದ್ದರಂತೂ ಇವರು ‘ಕುದುರೆ ವ್ಯಾಪಾರ’ದ ದಾಳಗಳಾಗುತ್ತಾರೆ. ಅವರು ಜನಪ್ರತಿನಿಧಿಗಳಾಗಿ ಸೇವೆಸಲ್ಲಿಸುವ ಉದ್ದೇಶದವರಂತೂ ಅಲ್ಲ.
ಆಯ್ಕೆಗೊಂಡ ಸದಸ್ಯರ ಪಕ್ಷಾಂತರವೂ ಒಂದು ಗಂಭೀರ ಸಮಸ್ಯೆ.
ಚುನಾವಣೆಯಲ್ಲಿ ತೊಡಗಿಸಲಾಗುವ ಹಣದ ವಹಿವಾಟನ್ನು ನಿಯಂತ್ರಣಕ್ಕೆ ಒಳಪಡಿಸುವುದರ ಆವಶ್ಯಕತೆಯೂ ತೀವ್ರವಾಗಿದೆ.
ಈ ಹಲವು ಅಂಶಗಳನ್ನು ಕೇಂದ್ರೀಕರಿಸಿಕೊಂಡು ಕಾನೂನು ಆಯೋಗವು ತೀಕ್ಷ್ಣ ಪರಾಮರ್ಶನೆ ನಡೆಸಿ ತನ್ನ ಎರಡನೇ ವರದಿಯನ್ನು ಸಿದ್ಧಪಡಿಸಿ ಇದೀಗ ಕೇಂದ್ರಸರ್ಕಾರಕ್ಕೆ ನೀಡಿದೆ. ಈ ವರದಿಯಲ್ಲಿ ಅಡಕಗೊಂಡಿರುವ ಹಲವು ಮುಖ್ಯ ಶಿಫಾರಸುಗಳು ಇವು:
- ಕಾನೂನಿನಂತೆ ನೋಂದಾಯಿತವಾಗಿರುವ ರಾಜಕೀಯ ಪಕ್ಷಗಳು ಮಾತ್ರ ಚುನಾವಣೆಯಲ್ಲಿ ಉಮೇದುವಾರರನ್ನು ತೊಡಗಿಸಲು ಅವಕಾಶವಿರುತ್ತದೆ.
- ಒಬ್ಬ ಅಭ್ಯರ್ಥಿಯು ಒಂದು ಸ್ಥಾನದಿಂದ ಮಾತ್ರ ಸ್ಪರ್ಧಿಸಬಹುದು.
- ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಯಸುವ ಉದ್ಯಮಸಂಸ್ಥೆಗಳು ಆ ದೇಣಿಗೆಗೆ ಕಂಪೆನಿಯ ಸರ್ವಸದಸ್ಯ ಸಭೆಯ ಪೂರ್ವಾಂಗೀಕಾರ ಪಡೆದಿರಬೇಕು.
- ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ತಮ್ಮ ‘ಸಾಧನೆ’ಗಳನ್ನು ಕುರಿತು ಪ್ರಚಾರಮಾಡುವ ಜಾಹೀರಾತುಗಳನ್ನು ಪ್ರಕಟಿಸಬಯಸಿದರೆ ಅವನ್ನು ಚುನಾವಣೆಯ ದಿನಾಂಕಕ್ಕೆ ಆರು ತಿಂಗಳ ಹಿಂದೆ ಮಾತ್ರ ಪ್ರಕಟಿಸಬಹುದು.
- ಜನಾಭಿಮತ ಸಮೀಕ್ಷೆಗಳನ್ನು ಪ್ರಕಟಿಸಬಯಸುವ ಒಪಿನಿಯನ್ ಪೋಲ್ ಸಂಸ್ಥೆಗಳು ತಾವು ಅಭಿಪ್ರಾಯಸಂಗ್ರಹಕ್ಕಾಗಿ ಬಳಸುವ ವಿಧಾನಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸಬೇಕು.
- ಅನೇಕ ವರ್ಷಗಳಿಂದ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿಲ್ಲದ ರಾಜಕೀಯ ಪಕ್ಷಗಳ ನೋಂದಾವಣೆಯನ್ನು ರದ್ದುಪಡಿಸಬೇಕು.
- ಈಚಿನ ವರ್ಷಗಳಲ್ಲಿ ಬಳಕೆಗೆಬಂದಿರುವ ‘ಪೇಯ್ಡ್ ನ್ಯೂಸ್ ಪ್ರಕಟಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಬೇಕು.
- ಪ್ರಧಾನ ಚುನಾವಣಾ ಆಯುಕ್ತರ ಆಯ್ಕೆಯನ್ನು ಪ್ರಧಾನಮಂತ್ರಿಗಳು, ಲೋಕಸಭೆಯ ಅಧ್ಯಕ್ಷರು ಮತ್ತು ವಿರೋಧಪಕ್ಷ ನಾಯಕರು – ಇವರನ್ನೊಳಗೊಂಡ ತ್ರಿಸದಸ್ಯ ಸಮಿತಿಯು ನಿಶ್ಚಯಿಸಬೇಕು.
- ಪಕ್ಷಾಂತರ ಸಂದರ್ಭಗಳಲ್ಲಿ ಅವಶ್ಯಬಿದ್ದಲ್ಲಿ ಅಂತಹವರ ಸದಸ್ಯತ್ವವನ್ನು ರದ್ದುಪಡಿಸುವ ಅಧಿಕಾರವು ಸಂಬಂಧಿತ ಸದನದ ಅಧ್ಯಕ್ಷರಿಗೆ ಮಾತ್ರವಲ್ಲದೆ ರಾಷ್ಟ್ರಪತಿಗಳಿಗೆ ಅಥವಾ ರಾಜ್ಯಪಾಲರಿಗೂ ಇರಬೇಕು.
- ಎಲ್ಲ ರಾಜಕೀಯ ಪಕ್ಷಗಳಿಗೂ ಅವುಗಳ ಆಂತರಿಕ ನಡವಳಿಯಲ್ಲಿ ಪ್ರಜಾಪ್ರಭುತ್ವಾನುಗುಣ ನಿಯಮಾನುಸರಣೆಯನ್ನು ಕಡ್ಡಾಯಗೊಳಿಸಬೇಕು. ಈ ನಿಯಮಾವಳಿಯನ್ನು ಉಲ್ಲಂಘಿಸಿದ ಪಕ್ಷಗಳ ನೋಂದಾವಣೆಯನ್ನು ರದ್ದುಗೊಳಿಸುವುದಲ್ಲದೆ ಅವು ಮುಂದಿನ ೧೦ ವರ್ಷ ಕಾಲ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಬೇಕು.
- ಚುನಾವಣೆಗಾಗಿ ವೆಚ್ಚಮಾಡಿದ ಹಣದ ಲೆಕ್ಕವನ್ನು ಜಾಹೀರುಪಡಿಸದ ಉಮೇದುವಾರರು ಮುಂದಿನ ೫ ವರ್ಷ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲಾಗದಂತೆ ನಿರ್ಬಂಧ ವಿಧಿಸಬೇಕು.
- ಈ ಹಿಂದೆ ಹಲವುಬಾರಿ ಸಮಾಲೋಚನೆ ನಡೆದಿದ್ದಂತೆ ಚುನಾವಣಾ ವೆಚ್ಚವನ್ನು ಸರ್ಕಾರವು ಭರಿಸಲೆಂಬುದು ವ್ಯವಹಾರ್ಯವಲ್ಲ.
- ರೂ. ೨೦ ಸಾವಿರಕ್ಕಿಂತ ಕಡಮೆ ಮೊಬಲಗುಗಳನ್ನು ದೇಣಿಗೆಯಾಗಿ ಪಡೆದ ಪಕ್ಷಗಳು ಒಟ್ಟು ರೂ. ೨೦ ಕೋಟಿಗಿಂತ ಅಧಿಕ ಹಣ ಸಂಗ್ರಹಿಸಿದ್ದಲ್ಲಿ ಅವು ಪ್ರತ್ಯೇಕ ದಾನಿಗಳ ವಿವರಗಳನ್ನು ನೀಡಬೇಕು.
- ಅಭ್ಯರ್ಥಿಗಳ ವೆಚ್ಚವನ್ನು ಫಲಿತಾಂಶ ಪ್ರಕಟಗೊಳ್ಳುವವರೆಗೆ ಪ್ರಕಟಪಡಿಸಬೇಕು.
ಚುನಾವಣೆಗಳ ಪಾರಿಶುದ್ಧ್ಯ ಉಳಿಯಬೇಕಾದರೆ ರಾಜಕೀಯ ಪಕ್ಷಗಳು ಆದಾಯ
ಮೂಲಗಳ ಮತ್ತು ವೆಚ್ಚಗಳ ವಿವರಗಳನ್ನೊಳಗೊಂಡ ಲೆಕ್ಕಪತ್ರಗಳನ್ನು ಕಡ್ಡಾಯವಾಗಿ ದಾಖಲೆ ಮಾಡಬೇಕು.”
– ಸರ್ವೋಚ್ಚ ನ್ಯಾಯಾಲಯ, ೧೯೯೫
(ಗುಂಜನ್ ಬಾಪಟ್ ಪ್ರಕರಣದಲ್ಲಿ)
೧೯೫೧ರಷ್ಟು ಹಿಂದೆಯೇ ಉತ್ತರಪ್ರದೇಶದಲ್ಲಿ ಸಿ.ಬಿ. ಗುಪ್ತಾ ಅವರು ಕಾಂಗ್ರೆಸ್ಪಕ್ಷದ ಚುನಾವಣಾನಿಧಿಗೆ ಹಣವನ್ನು ಸಂಗ್ರಹಿಸುತ್ತಿದ್ದುದು ಬಯಲಾಗಿತ್ತು. ಉದ್ಯಮಿಗಳಿಂದ ಸಿ.ಬಿ. ಗುಪ್ತಾ ೨೦೦೦ ಜೀಪುಗಳನ್ನೂ ಡಿಮ್ಯಾಂಡ್ ಮಾಡಿದ್ದರು, ಅವನ್ನು ನೀಡಲು ನಿರಾಕರಿಸಿದವರನ್ನು ಜೈಲಿಗೆ ತಳ್ಳಲಾಗುವುದೆಂದೂ ಬೆದರಿಕೆಯನ್ನೊಡ್ಡಿದ್ದರು. ಇದನ್ನೆಲ್ಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಗಮನಕ್ಕೆ ತರಲಾಯಿತು. ನೆಹರು ಇದರ ಬಗೆಗೆ ಆಗಿನ ಉ.ಪ್ರ. ಮುಖ್ಯಮಂತ್ರಿ ಜಿ.ಬಿ. ಪಂತ್ ಅವರಿಗೆ ಪತ್ರ ಬರೆದರು. ವಿಷಯ ಅಲ್ಲಿಗೆ ಬರಖಾಸ್ತಾಯಿತು.
೨೦೦೪ರ ಲೋಕಸಭಾ ಚುನಾವಣೆಯಲ್ಲಿ ೩,೧೮೨ ಅಭ್ಯರ್ಥಿಗಳ ಪೈಕಿ ೫೧೮ ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇದ್ದವು.
ಸೋನಿಯಾಗಾಂಧಿ ಉಮೇದುವಾರಿಕೆಯ ಅಭ್ಯರ್ಥನಪತ್ರ ಸಲ್ಲಿಸುವಾಗ ತಮ್ಮಲ್ಲಿ ಒಂದು ಕಾರು ಕೂಡಾ ಇಲ್ಲ ಎಂದು ಅಫಿಡವಿಟ್ ನೀಡಿದ್ದರು. (ಆದರೆ ರೂ. ೭೫ ಲಕ್ಷ ನಗದು, ಷೇರುಗಳು, ಒಡವೆಗಳು ಇತ್ಯಾದಿ ಇದ್ದುದನ್ನು ಒಪ್ಪಿಕೊಂಡಿದ್ದರು.)
“ಚುನಾವಣೆಗಳಲ್ಲಿ ಪಕ್ಷಗಳಿಂದ ಹಣದ ದುರ್ಬಳಕೆಯೂ ಕ್ರಿಮಿನಲ್ ಅಪರಾಧೀಕರಣವೆಂದು ಪರಿಗಣಿಸಬೇಕು.”
-ಸರ್ವೋಚ್ಚ ನ್ಯಾಯಾಲಯ, ೧೯೯೪ (ಗಡಕ್ ಪ್ರಕರಣದಲ್ಲಿ)
ಚುನಾವಣೆಯ ಪ್ರಚಾರಪತ್ರಗಳಲ್ಲಿ ತಮಿಳುನಾಡಿನ ಡಿ.ಎಂ.ಕೆ. ಪಕ್ಷ ಕಿಲೋಗೆ ೨ ರೂ. ದರದಲ್ಲಿ ಅಕ್ಕಿಯನ್ನು ವಿತರಿಸುವೆನೆಂದು ಹೇಳಿಕೆ ಸೇರಿಸಿದ್ದುದು, ಅದಕ್ಕೆ ಸಂವಾದಿಯಾಗಿ ಎಐಎಡಿಎಂಕೆ ಪಕ್ಷ “ಹತ್ತು ಕಿಲೋ ಅಕ್ಕಿ ಕೊಂಡರೆ ಹತ್ತು ಕಿಲೋ ಉಚಿತ” ಎಂದು ಘೋಷಿಸಿದ್ದುದು – ಇಂತಹ ಕ್ರಮಗಳು ನ್ಯಾಯಾನುಗುಣವೆ, ಅಲ್ಲವೆ? ಈಚಿನ ಎಲ್ಲ ಚುನಾವಣೆಗಳಲ್ಲೂ ಇಂತಹ ಮುಕ್ತಕಗಳನ್ನು ಕಾಣುತ್ತಿದ್ದೇವೆ.
ಚುನಾವಣೆಗಳ ಪಾರಿಶುದ್ಧ್ಯ ಉಳಿಯಬೇಕಾದರೆ ರಾಜಕೀಯ ಪಕ್ಷಗಳು ಆದಾಯಮೂಲಗಳ ಮತ್ತು ವೆಚ್ಚಗಳ ವಿವರಗಳನ್ನೊಳಗೊಂಡ ಲೆಕ್ಕಪತ್ರಗಳನ್ನು ಕಡ್ಡಾಯವಾಗಿ ದಾಖಲೆ ಮಾಡಬೇಕು.
– ಸರ್ವೋಚ್ಚ ನ್ಯಾಯಾಲಯ, ೧೯೯೫
(ಗುಂಜನ್ ಬಾಪಟ್ ಪ್ರಕರಣದಲ್ಲಿ)
ಚುನಾವಣೆಯ ಸಂಬಂಧದಲ್ಲಿ ಪರಾಮರ್ಶನೀಯವಾದ ಇನ್ನೂ ಹಲವಾರು ಅಂಶಗಳುಂಟು: ‘ನೋಟಾ'( None of the above) ಎಂದು ಎಲ್ಲ ಅಭ್ಯರ್ಥಿಗಳನ್ನೂ ಒಂದು ಪ್ರಮಾಣದಷ್ಟು ಮತದಾರರು ತಿರಸ್ಕರಿಸಿದರೆ ಚುನಾವಣೆಯನ್ನು ಅಸಿಂಧುವೆಂದು ಗಣಿಸಬಹುದೆ, ಅಧಿಕ ಮತದಾರರು ಅಪೇಕ್ಷಿಸಿದಲ್ಲಿ ಅಭ್ಯರ್ಥಿಯ ಆಯ್ಕೆಯನ್ನು ನಿರಸ್ತಗೊಳಿಸಬಹುದೆ (ರಿಕಾಲ್), ಪ್ರತಿ ಪ್ರಜೆಗೆ ಮತದಾನವನ್ನು ಕಡ್ಡಾಯಗೊಳಿಸಬಹುದೆ – ಇತ್ಯಾದಿ. ಇಂತಹ ಅಂಶಗಳ ಪರಾಮರ್ಶನೆಗೆ ಕಾಲವು ಇನ್ನೂ ಪಕ್ವಗೊಳ್ಳಬೇಕಾಗಿದೆ.
ಇತ್ತೀಚಿನ (೨೧-೩-೨೦೧೫) ಗೋಷ್ಠಿಯೊಂದರಲ್ಲಿ ಪ್ರಧಾನ ಚುನಾವಣಾ ಆಯುಕ್ತ ಎಚ್.ಎಸ್. ಬ್ರಹ್ಮಾ ಅವರು ಹೇಳಿದಂತೆ ಎಲ್ಲ ಚುನಾವಣಾ ಸಂಬಂಧಿತ ಸಮಸ್ಯೆಗಳಿಗೂ ಕಾನೂನಿನಲ್ಲಿ ಪರಿಹಾರವನ್ನು ಅರಸುವುದು ಈಗಿನ ಸನ್ನಿವೇಶದಲ್ಲಿ ಪರ್ಯಾಪ್ತವಾಗದು. ಬ್ರಹ್ಮಾ ಅವರೇ ಹೇಳಿದ ಇನ್ನೊಂದು ಮಾತು: ಇದೀಗ ಚುನಾವಣಾ ಆಯೋಗದಂತಹ ಸಂರಚನೆಗಳೂ ರಾಜ್ಯಾಧಿಕಾರವೂ ಒಂದರಿಂದೊಂದು ಪೂರ್ಣ ಸ್ವತಂತ್ರವಾಗಿಲ್ಲವೆಂಬುದನ್ನು ಅಲ್ಲಗಳೆಯಲಾಗದು – ಎಂದು. ಈ ಸನ್ನಿವೇಶವೂ ಸುಧಾರಿಸಬೇಕಾಗಿದೆ. ವಸ್ತುಸ್ಥಿತಿಯೆಂದರೆ ಈಗ ಹರಡಿರುವ ಅವ್ಯವಸ್ಥೆಗಳೆಲ್ಲ ಕಾನೂನಿನ ಕೊರತೆಯ ಕಾರಣದಿಂದ ಉತ್ಪನ್ನವಾದುವಲ್ಲ; ನೈತಿಕ ಅಧಃಪಾತವೇ ಮುಖ್ಯ ಕಾರಣ. ಪೂರ್ಣವಾಗಿ ಸಾಬೀತಾಗಿರುವ ಉಲ್ಲಂಘನೆಗಳಿಗಾಗಿ ಇದುವರೆಗೆ ಎಷ್ಟು ರಾಜಕಾರಣಿಗಳಿಗೆ ದಂಡನೆಯಾಗಿದೆ? – ಎಂದು ಪ್ರಶ್ನಿಸಿಕೊಂಡಲ್ಲಿ ಈಗಿನ ಪರಿಸ್ಥಿತಿಯ ಸಂಕೀರ್ಣತೆ ಬಯಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ದಂಡನಿರ್ಣಯಾಧಿಕಾರಿಗಳಿಗೆ ಆ ಸ್ಥಾನವು ಪ್ರಾಪ್ತವಾಗಿರುವುದೇ ರಾಜಕೀಯಸ್ಥರ ಕೃಪಾನುಗ್ರಹದಿಂದ. ಇಂತಹ ಸನ್ನಿವೇಶದಲ್ಲಿ ಹೆಚ್ಚಿನದೇನನ್ನು ನಿರೀಕ್ಷಿಸಬಹುದು? ಇನ್ನು ನಿಗದಿತವಾಗಿರುವುದಕ್ಕಿಂತ ಹೆಚ್ಚು ಹಣ ಚುನಾವಣೆಯಲ್ಲಿ ವ್ಯಯವಾಗಿರುವುದು ತಿಳಿದುಬಂದರೂ ಚುನಾವಣಾ ಆಯೋಗವು ಆದಾಯಕರ ವಿಭಾಗಕ್ಕೆ ಮಾಹಿತಿ ನೀಡುವುದಕ್ಕಿಂತ ಹೆಚ್ಚೇನನ್ನು ಮಾಡೀತು?
ಹೀಗೆ ಹಲವು ಪರಿಮಿತಿಗಳು ಇರುವುದು ಸ್ಪಷ್ಟ. ಆದರೂ ಸುಧಾರಣೆಯ ದಿಕ್ಕಿನಲ್ಲಿ ಕ್ರಮಿಸಬೇಕಾದುದರ ತೀವ್ರತೆ ಇರುವ ಭೂಮಿಕೆಯಲ್ಲಿ ಇದೀಗ ಕಾನೂನು ಆಯೋಗವು ನೀಡಿರುವ ಶಿಫಾರಸುಗಳು ಗಂಭೀರ ಪರ್ಯಾಲೋಚನೆಗೆ ಅರ್ಹವಾಗಿವೆ.