ಜೂನ್ ೨೧ರಂದು ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನ – ಐತಿಹಾಸಿಕ ಕ್ಷಣ
ಇದೀಗ ಜೂನ್ ೨೧ನೇ ದಿನಾಂಕವನ್ನು ‘ವಿಶ್ವ ಯೋಗದಿನ’ವಾಗಿ ಆಚರಿಸುವುದಾಗಿ ವಿಶ್ವಸಂಸ್ಥೆ ಘೋಷಿಸಿದೆ. ಇದರಿಂದ ವಿಶ್ವದಾದ್ಯಂತ ಇರುವ ಯೋಗಾಭ್ಯಾಸಿಗಳಿಗೂ ಯೋಗಾಭಿಮಾನಿಗಳಿಗೂ ಸಂತಸವುಂಟಾಗಿದೆ. ಭಾರತೀಯರಿಗಂತೂ ಯೋಗವಿದ್ಯೆ ಈ ರೀತಿಯಾಗಿ ಜಗನ್ಮಾನ್ಯತೆ ಗೌರವ ಗಳಿಸುತ್ತಿರುವುದು ಅಭಿಮಾನದ ಸಂಗತಿ. ಭಾರತೀಯ ಮೂಲದ ಯೋಗವಿದ್ಯೆಯ ಮಹತ್ತ್ವವು ಜಗತ್ತಿನಾದ್ಯಂತ ಪ್ರಸಾರಗೊಳ್ಳಲು ಕಾರಣರಾದವರಲ್ಲಿ ಸ್ವಾಮಿ ವಿವೇಕಾನಂದರಾದಿಯಾಗಿ ಸ್ವಾಮಿ ಶಿವಾನಂದ, ಮಹರ್ಷಿ ಅರಬಿಂದೋ, ಸ್ವಾಮಿ ಕುವಲಯಾನಂದ, ಸ್ವಾಮಿ ಚಿನ್ಮಯಾನಂದ, ಮಹರ್ಷಿ ಮಹೇಶಯೋಗಿ, ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್, ರವಿಶಂಕರ್ ಗುರುಜೀ, ಬಾಬಾ ರಾಮದೇವ್ ಮುಂತಾದವರಿದ್ದಾರೆ.
ವಿಶ್ವಸಂಸ್ಥೆ ತನ್ನ ೬೯ನೇ ಸಾಮಾನ್ಯ ಸಭೆಯಲ್ಲಿ ಪ್ರತಿವರ್ಷ ಜೂನ್ ೨೧ರ ದಿನಾಂಕವನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ವಾಗಿ ಆಚರಿಸುವುದಾಗಿ ಇದೀಗ ಘೋಷಿಸಿದೆ. ಇದರಿಂದ ವಿಶ್ವದಾದ್ಯಂತ ಇರುವ ಯೋಗಾಭ್ಯಾಸಿಗಳಿಗೂ ಯೋಗಾಭಿಮಾನಿಗಳಿಗೂ ಸಂತಸವುಂಟಾಗಿದೆ. ಭಾರತೀಯರಿಗಂತೂ ಯೋಗವಿದ್ಯೆ ಈ ರೀತಿಯಾಗಿ ಜಾಗತಿಕ ಮಾನ್ಯತೆ ಗೌರವ ಗಳಿಸುತ್ತಿರುವುದು ಅಭಿಮಾನದ ಸಂಗತಿ. ಭಾರತದ ಪ್ರಧಾನಿಯವರು ೨೭ ಸೆಪ್ಟೆಂಬರ್, ೨೦೧೪ರಂದು ವಿಶ್ವಸಂಸ್ಥೆಯ ಮಹಾಧಿವೇಶನದ ಸಂದರ್ಭದಲ್ಲಿ ಮಾಡಿದ ಆ ಬಗೆಗಿನ ಪ್ರಸ್ತಾವನೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಮತ್ತು ಜಗತ್ತಿನ ೧೭೭ ದೇಶಗಳು ಪ್ರಸ್ತಾಪವನ್ನು ಬೆಂಬಲಿಸಿದವು.
ಯೋಗ ದೈಹಿಕ ವ್ಯಾಯಾಮಕ್ಕೆ ಸೀಮಿತವಾದುದಲ್ಲ; ಬದಲಾಗಿ ಅದು ಪೂರ್ಣವಾದ ಜೀವನ ವಿಧಾನ. ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮಗಳ ನಡುವೆ ಅದು ಸಮನ್ವಯವನ್ನು ಸಾಧಿಸುತ್ತದೆ. ಅದರಿಂದ ಶಾಂತಿಯುತ ಮತ್ತು ಆರೋಗ್ಯಕರ ಜೀವನವನ್ನು ಸಾಧಿಸಬಹುದು; ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕವಾಗಿ ಉನ್ನತ ಸಂಸ್ಕಾರವನ್ನು ಪಡೆಯಬಹುದು. ಇಂದು ಜನಸಾಮಾನ್ಯರು, ಸೆಲೆಬ್ರಿಟಿಗಳು, ಉದ್ಯಮಿಗಳು, ಜಗತ್ತಿನಾದ್ಯಂತ ವಿವಿಧ ಸಂಸ್ಕೃತಿಗಳ ಮುತ್ಸದ್ದಿಗಳು ಸೇರಿದಂತೆ ಜನ ವ್ಯಾಪಕವಾಗಿ ಯೋಗದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಆದ್ದರಿಂದ ಯೋಗಭೂಮಿ ಭಾರತದಲ್ಲಿ ಜನಿಸಿದ ನಾವು ಯೋಗದ ಸಂದೇಶವನ್ನು ಇನ್ನಷ್ಟು ವ್ಯಾಪಕವಾಗಿ ಪ್ರಸಾರಮಾಡಬೇಕಾದ ಹೊಣೆಯನ್ನು ಸಹಜವಾಗಿ ಹೊಂದಿದ್ದೇವೆ.
‘ಯೋಗ’ವು ಭಾರತದ ನಾಗರಿಕತೆ ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ. ‘ಯುಜ-ಸಮಾಧೌ’ ಎಂಬ ಧಾತುವಿನಿಂದ ‘ಯೋಗ’ ಶಬ್ದ ಹುಟ್ಟಿದೆ. ಮನಸ್ಸನ್ನು ಏಕಾಗ್ರಗೊಳಿಸುವಿಕೆ ಎಂಬುದಾಗಿ ಈ ಧಾತುವಿನ ಅರ್ಥ (ಧಾತುಪಾಠ, ೪, ೬೮). ಮನಸ್ಸಿನ ಅತ್ಯಂತ ಏಕಾಗ್ರಸ್ಥಿತಿಯೇ ಯೋಗ.
ಮನಸ್ಸು ಚಂಚಲತೆಯನ್ನು ತನ್ನ ಸ್ವಭಾವವನ್ನಾಗಿಸಿಕೊಂಡಿದೆ. ಅದರ ಚಂಚಲತೆಯನ್ನು ಅಭ್ಯಾಸ ಮತ್ತು ವೈರಾಗ್ಯಗಳಿಂದ ಹೋಗಲಾಡಿಸಬೇಕಾಗುತ್ತದೆ; ಅದರಿಂದ ಪುರುಷಾರ್ಥದ ಸಾಧನೆಯು ಸಾಧ್ಯವಾಗುತ್ತದೆ. ಎಲ್ಲ ಪುರುಷಾರ್ಥಸಾಧನೆಗೂ ಬೇಕಾಗುವ ದೈಹಿಕ-ಮಾನಸಿಕ ಸ್ವಾಸ್ಥ್ಯ, ಏಕಾಗ್ರತೆಗಳನ್ನು ಯೋಗಶಾಸ್ತ್ರವು ನೀಡುತ್ತದೆ. ಮಾತ್ರವಲ್ಲ, ಲೌಕಿಕವಾಗಿ ಅನೇಕ ವಿಧದ ಸಾಧನೆಗಳಲ್ಲಿ ಯೋಗಶಾಸ್ತ್ರವು ಪ್ರಯೋಜನಕಾರಿಯಾಗಿದೆ. ಏಕೆಂದರೆ ಎಲ್ಲ ಸಾಧನೆಗಳಿಗೂ ಬೇಕಾಗುವ ಶರೀರ-ಮನಸ್ಸುಗಳ ಸ್ವಾಸ್ಥ್ಯ ಮತ್ತು ಏಕಾಗ್ರತೆಯನ್ನು ಅದು ನೀಡುತ್ತದೆ.
ಯೋಗ ಪರಿಣಾಮಗಳ ಅಧ್ಯಯನ
ಭಾವಸಮಾಧಿ ಸ್ಥಿತಿಯಲ್ಲಿರುವ ವಿದ್ಯಾರ್ಥಿಯ ಮೇಲೆ ಡಾ|| ಎಸ್.ಎಲ್. ವೇಣೇಕರ್ ಅವರ ಅಧ್ಯಯನ
ಯೋಗದ ಪರಿಣಾಮಗಳ ಕುರಿತು ತಾವು ನಡೆಸುತ್ತಿರುವ ಅಧ್ಯಯನವನ್ನು ಆಗಿನ (೧೯೫೭) ಮುಂಬಯಿ ಪ್ರಾಂತದ ಶಿಕ್ಷಣಸಚಿವ ಹಿತೇಂದ್ರಭಾಯಿ ದೇಸಾಯಿ ಅವರಿಗೆ ವಿವರಿಸುತ್ತಿರುವ ಡಾ|| ಎಸ್.ಎಲ್. ವೇಣೇಕರ್; ಇವರಿಬ್ಬರ ಮಧ್ಯದಲ್ಲಿ ಸ್ವಾಮಿ ಕುವಲಯಾನಂದರನ್ನು ಕಾಣಬಹುದು
ಯೋಗಚಿಕಿತ್ಸೆಯ ಪ್ರಗತಿ
ಪ್ರಾಚೀನ ಕಾಲದಿಂದಲೂ ಪ್ರಧಾನವಾಗಿ ಅಧ್ಯಾತ್ಮಸಾಧನೆಗಾಗಿ ಮೀಸಲಿದ್ದ ಯೋಗವಿದ್ಯೆಯ ಅಭ್ಯಾಸ ಇದೀಗ ಶರೀರ-ಮನಸ್ಸುಗಳ ಸ್ವಾಸ್ಥ್ಯದ ಕಾರಣಕ್ಕಾಗಿ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವುದು ಗಮನಾರ್ಹ ಹಾಗೂ ಚಿಂತನಾರ್ಹ. ಇದಕ್ಕೆ ಕಾರಣ ಪ್ರಪಂಚಾದ್ಯಂತ ಜನರನ್ನು ಬಾಧಿಸುತ್ತಿರುವ, ದಿನೇ ದಿನೇ ಹೆಚ್ಚುತ್ತಿರುವ ರಕ್ತದ ಒತ್ತಡ, ಹೃದಯಾಘಾತ, ಮಧುಮೇಹ, ಆಸ್ತ್ಮ, ಮೈಗ್ರೇನ್, ಮನೋವೈಕಲ್ಯ, ಮುಂತಾದ ಮನೋದೈಹಿಕ ಕಾಯಿಲೆಗಳು. ಮತ್ತು, ಔಷಧೋಪಚಾರಗಳಿಂದಾಗಲಿ, ಶಸ್ತ್ರಚಿಕಿತ್ಸೆಯಿಂದಾಗಲಿ ಅವುಗಳನ್ನು ಗುಣಪಡಿಸಲು ಇನ್ನೂ ಸಾಧ್ಯವಾಗದೆ ಇರುವುದು.
“ಮನುಷ್ಯನು ಆರೋಗ್ಯಪೂರ್ಣವಾದ ದೇಹ, ಮನಸ್ಸು ಮತ್ತು ಬುದ್ಧಿಯನ್ನು ಪಡೆಯಲು ಪಾತಂಜಲ-ಯೋಗವು ಸಹಾಯಕ. ಸ್ವಸ್ಥ ಶರೀರದ ಜೊತೆಗೆ, ಸ್ಪಷ್ಟ-ಶುದ್ಧ-ಶ್ರೇಷ್ಠ ಆಲೋಚನೆಗಳಿಂದ ಕೂಡಿದ ಬುದ್ಧಿಯನ್ನು ಹಾಗೂ ಕಾಮರಹಿತ ಪ್ರೇಮವನ್ನು ಹೊಂದಲು ಅಗತ್ಯವಾದ ಉದಾತ್ತಹೃದಯವನ್ನು ರೂಪಿಸಿಕೊಳ್ಳಲು ಈ ಯೋಗದಿಂದ ಸಾಧ್ಯ. ಚೆನ್ನಾಗಿ ಸಂಗೋಪನೆಗೊಂಡ ವ್ಯಕ್ತಿಗತ ಆರೋಗ್ಯದಿಂದ ಸಾಮಾಜಿಕ ಸ್ವಾಸ್ಥ್ಯವನ್ನು ಬೆಳೆಸಲು ಪತಂಜಲಿಯು ‘ಮೈತ್ರೀ ಕರುಣಾಮುದಿತೋಪೇಕ್ಷಾಣಾಂ ಸುಖದುಃಖಪುಣ್ಯಾಪುಣ್ಯವಿಷಯಾಣಾಂ ಭಾವನಾತಶ್ಚಿತ್ತಪ್ರಸಾದನಮ್ ಎಂಬ ಸೂತ್ರವನ್ನು ಹೇಳಿದ್ದಾನೆ. ಉತ್ತಮರಲ್ಲಿ ಸಾಧುಗಳಲ್ಲಿ ಸ್ನೇಹಭಾವ, ನೊಂದವರಿಗೆ ಕರುಣೆ, (ದುಷ್ಟಬುದ್ಧಿಯಿರುವವರನ್ನು ಪರಿವರ್ತಿಸಲು ಯತ್ನಿಸಿ ಅದು ಸಾಧ್ಯವಾಗದಿದ್ದಾಗ) ಅವರ ಬಗೆಗೆ ಉಪೇಕ್ಷೆ ಮತ್ತು ಸುಖ-ದುಃಖ, ಗುಣ-ದೋಷಗಳನ್ನು ಒಂದೇ ರೀತಿಯಿಂದ ಕಾಣುವುದರಿಂದ ಮನಸ್ಸು ಪ್ರಶಾಂತಗೊಳ್ಳುತ್ತದೆ” – ಎಂದು ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಅವರು ವ್ಯಕ್ತಿಗತ ಮತ್ತು ತನ್ಮೂಲಕ ಸಾಮಾಜಿಕ ಸ್ವಾಸ್ಥ್ಯರಕ್ಷಣೆಯಲ್ಲಿ ಯೋಗದ ಪಾತ್ರದ ಬಗ್ಗೆ ತಮ್ಮ ಸ್ಪಷ್ಟಾಭಿಪ್ರಾಯವನ್ನು ‘ಸಮಾಜಯೋಗ’ ಎಂಬ ಹೊತ್ತಿಗೆಯ ಮುನ್ನುಡಿಯಲ್ಲಿ ಬರೆದು ವ್ಯಕ್ತಪಡಿಸಿದ್ದಾರೆ (ಲೇಖಕರು: ಹೊ.ವೆ. ಶೇಷಾದ್ರಿ; ಪ್ರಕಾಶಕರು: ಸಾಹಿತ್ಯ ಸಿಂಧು ಪ್ರಕಾಶನ, ಬೆಂಗಳೂರು).
ಬಹಳ ವರ್ಷಗಳ ಹಿಂದೆಯೇ “ಸ್ವಾಮಿ ಕುವಲಯಾನಂದ (೧೮೮೩-೧೯೬೬) ಹಾಗೂ ಡಾ. ಎಸ್.ಎಲ್. ವೇಣೇಕರ್ ಎಂಬವರು ಯೋಗಚಿಕಿತ್ಸೆಯ ಸಾಧ್ಯತೆಗಳ ಬಗ್ಗೆ ಮೊತ್ತಮೊದಲಿಗೆ ವೈಜ್ಞಾನಿಕ ಅಧ್ಯಯನವನ್ನು ನಡೆಸಿದ್ದರು; ಮತ್ತು ಮನೋದೈಹಿಕ ಕಾಯಿಲೆಗಳನ್ನು ಯೋಗಚಿಕಿತ್ಸೆಯ ಮೂಲಕ ಗುಣಪಡಿಸಲು ಸಾಧ್ಯವಾಗಬಹುದು. ಆದರೆ ಕೇವಲ ಯೋಗಚಿಕಿತ್ಸೆಯ ವಿಧಾನಗಳಿಂದ ಉಲ್ಬಣಾವಸ್ಥೆಯಲ್ಲಿರುವ ರೋಗಗಳನ್ನು ಗುಣಪಡಿಸುವುದು ಕಷ್ಟಸಾಧ್ಯವಾಗಬಹುದು. ಹಾಗೆಯೇ ಅಂತಹ ರೋಗಗಳು ಸಾಂಕ್ರಾಮಿಕ ಮಟ್ಟವನ್ನು ತಲಪಿದಾಗಲೂ ಅವುಗಳನ್ನು ಗುಣಪಡಿಸುವುದು ಸಾಧ್ಯವಾಗದು. ಆದರೆ, ಯೋಗಾಭ್ಯಾಸವನ್ನು ನಡೆಸುವುದರ ಮೂಲಕ, ನಮ್ಮ ದೈಹಿಕ-ಮಾನಸಿಕ ಸಾಮರ್ಥ್ಯ ವೃದ್ಧಿಸುವುದರಿಂದ ನಮ್ಮಲ್ಲಿ ರೋಗಪ್ರತಿರೋಧಕಶಕ್ತಿ ಹೆಚ್ಚಿ, ಅಂತಹ ರೋಗಗಳು ಬಾರದಂತೆ ಮೊದಲೇ ತಡೆಗಟ್ಟಲು ನಮಗೆ ಸಾಧ್ಯವಾಗಬಹುದು ಎಂಬುದಾಗಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು” – ಎಂದು ಡಾ. ಕೆ.ಎನ್. ಉಡುಪ ಅವರ A Manual of Science and Philosophy of Yoga’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಈ ಅಭಿಪ್ರಾಯವನ್ನು ಆಧಾರವಾಗಿಸಿಕೊಂಡು, ಡಾ. ಕೆ.ಎನ್. ಉಡುಪರು ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ – ಚಿಕಿತ್ಸೆಯಲ್ಲಿ ‘ಸಮಗ್ರ ಯೋಗ (‘ Integrated Yoga) – ಅಂದರೆ, ಅಷ್ಟಾಂಗಯೋಗದ ಎಂಟೂ ಅಂಗಗಳ ಪೂರ್ಣ ಅನುಷ್ಠಾನದ ಸಾಧ್ಯತೆಗಳ ಕುರಿತು ಸುದೀರ್ಘ ಕಾಲ ಪ್ರಯೋಗಗಳನ್ನೂ ಅಧ್ಯಯನವನ್ನೂ ನಡೆಸಿದ್ದರು (ಅವರು ತಮ್ಮ ಅಧ್ಯಯನ ಹಾಗೂ ಪ್ರಯೋಗಗಳ ವಿವರಗಳನ್ನು ಲೇಖನಗಳ ರೂಪದಲ್ಲೂ ಪುಸ್ತಕರೂಪದಲ್ಲೂ ಪ್ರಕಟಿಸಿದ್ದಾರೆ. ಅವುಗಳಲ್ಲಿ ಮೇಲೆ ತಿಳಿಸಿದ ಪುಸ್ತಕವೂ ಒಂದು. ಕೆಲವು ಬರಹಗಳನ್ನು ಅವರ ಸಹೋದರ ಪ್ರೊ. ಕೆ.ಆರ್. ಉಡುಪರು ಕನ್ನಡಕ್ಕೆ ಅನುವಾದಿಸಿರುತ್ತಾರೆ); ಮಾತ್ರವಲ್ಲ, ಈ ಕುರಿತು ‘ವಿಶ್ವ ಆರೋಗ್ಯ ಸಂಸ್ಥೆ’ – WHOದ ಗಮನಸೆಳೆಯುವ ಮೂಲಕ ಇಡೀ ವಿಶ್ವದ ಗಮನಕ್ಕೂ ತಂದರು; UNESCO ಪ್ರಕಟಿಸಿದ, ಜಗತ್ತಿನಲ್ಲಿ ಬಹುಕಾಲದಿಂದ ಆಚರಣೆಯಲ್ಲಿರುವ ಬೇರೆಬೇರೆ ಪರ್ಯಾಯ ಚಿಕಿತ್ಸಾಕ್ರಮಗಳ ಕುರಿತಾದ ಹೊತ್ತಗೆಯಲ್ಲಿ ‘ಯೋಗಚಿಕಿತ್ಸೆಯ ಕುರಿತಾಗಿ ತಮ್ಮ ಅಧ್ಯಯನ ಮತ್ತು ಪ್ರಯೋಗಗಳ ಫಲಿತಾಂಶಗಳ ಬಗ್ಗೆ ಲೇಖನವನ್ನೂ ಬರೆದರು. ಅಂತಿಮವಾಗಿ ಡಾ. ಉಡುಪರೂ ಕೂಡ ‘ಯೋಗಾಭ್ಯಾಸವನ್ನು ನಡೆಸುವುದರ ಮೂಲಕ, ನಮ್ಮ ದೈಹಿಕ-ಮಾನಸಿಕ ಸಾಮರ್ಥ್ಯ ವೃದ್ಧಿಸುವುದರಿಂದ ನಮ್ಮಲ್ಲಿ ರೋಗಪ್ರತಿರೋಧಕಶಕ್ತಿ ಹೆಚ್ಚಿ, ಮಾರಕ ಮನೋದೈಹಿಕ ಕಾಯಿಲೆಗಳು ಬಾರದಂತೆ ಮೊದಲೇ ತಡೆಗಟ್ಟಲು ನಮಗೆ ಸಾಧ್ಯವಾಗಬಹುದು’ ಎಂಬ ಡಾ. ಕುವಲಯಾನಂದ ಹಾಗೂ ಡಾ. ವೇಣೇಕರರ ಅಭಿಪ್ರಾಯವನ್ನೇ ಮತ್ತೆ ದೃಢೀಕರಿಸಿದ್ದಾರೆ.
ಮುಂದಿನ ಹಂತದಲ್ಲಿ, ಇದೀಗ ಬೆಂಗಳೂರಿಗೆ ಸಮೀಪದ ಜಿಗಣಿಯಲ್ಲಿ ಕೇಂದ್ರವುಳ್ಳ ‘ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ’ (S-VYASA)ದ ಡಾ. ಎಚ್.ಆರ್. ನಾಗೇಂದ್ರ ಹಾಗೂ ಡಾ. ಆರ್. ನಾಗರತ್ನ ಅವರ ತಂಡ ದಶಕಗಳಿಂದ ತಲಸ್ಪರ್ಶಿ ಸಂಶೋಧನೆಯನ್ನು ನಡೆಸುತ್ತಾ ಪ್ರಚಾರಗೊಳಿಸುತ್ತಿರುವ – ‘ಸಮಗ್ರ ಯೋಗ ಚಿಕಿತ್ಸೆ (Integrated Approach of Yoga Therapy) ಪ್ರಸಿದ್ಧಿಪಡೆದಿದೆ.
‘ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಹಾಗೂ ರಾಜಯೋಗ – ಇವು ಯೋಗದ ನಾಲ್ಕು ಮಾರ್ಗಗಳು…. ಹೀಗೆ ಒಂದಕ್ಕಿಂತ ಹೆಚ್ಚು ಅಥವಾ ಎಲ್ಲ ಮಾರ್ಗಗಳನ್ನು ಒಟ್ಟಾಗಿ ಅಳವಡಿಸಿಕೊಂಡರೆ ಅದು ಸಮಗ್ರ ಯೋಗವೆನಿಸುತ್ತದೆ. ಇಂತಹ ಯೋಗಸಾಧನೆ ನಮ್ಮ ಪ್ರಗತಿಯನ್ನು ಶೀಘ್ರಗೊಳಿಸುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿದ್ದು ಪರಿಪೂರ್ಣ ಆರೋಗ್ಯವನ್ನು ಪಡೆಯಲು ನೆರವಾಗುತ್ತದೆ’ – ಎಂದು S-VYASA ದ ಡಾ. ಎಚ್.ಆರ್. ನಾಗೇಂದ್ರ ಹಾಗೂ ಡಾ. ಆರ್. ನಾಗರತ್ನ ಅವರೂ ಕೂಡ ಅಭಿಪ್ರಾಯಪಡುತ್ತಾರೆ (ನೋಡಿ: ‘ಸಮಗ್ರ ಯೋಗ ಚಿಕಿತ್ಸೆ, ಪುಟ ೨೦, ಲೇಖಕರು: ಡಾ. ಎಚ್.ಆರ್. ನಾಗೇಂದ್ರ ಹಾಗೂ ಡಾ. ಆರ್. ನಾಗರತ್ನ, ಪ್ರಕಾಶಕರು: ಸ್ವಾಮಿ ವಿವೇಕಾನಂದ ಯೋಗ ಪ್ರಕಾಶನ, ಬೆಂಗಳೂರು – ೧೯).
ಜಾಣ ನಡೆ
ಒಟ್ಟಿನಲ್ಲಿ ಎಲ್ಲ ಮಹನೀಯರು – ‘ಕಾಯಿಲೆ ಬಂದ ಮೇಲೆ ವಾಸಿಮಾಡಿಕೊಳ್ಳುವುದಕ್ಕಿಂತ ಕಾಯಿಲೆಯೇ ಬಾರದಂತೆ ತಡೆಯುವುದೇ ಜಾಣತನ; ಯೋಗ ಜೀವನಶೈಲಿಯನ್ನು ನಮ್ಮ ಜೀವನಕ್ರಮವಾಗಿ ಅಳವಡಿಸಿಕೊಳ್ಳುವುದರಿಂದ ಇದು ಸಾಧ್ಯವಾಗುತ್ತದೆ’ ಎಂದು ಏಕಪ್ರಕಾರವಾಗಿ ಅಭಿಪ್ರಾಯಪಡುತ್ತಾರೆ. ಇದು ಒಂದು ಗಮನಾರ್ಹ ಸಂಗತಿ.
ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ ‘ಆರೋಗ್ಯ ಎಂದರೆ ‘ಕೇವಲ ದೈಹಿಕವಾಗಿ ಅನಾರೋಗ್ಯವಿಲ್ಲದ ಸ್ಥಿತಿ ಅಲ್ಲ; ಬದಲಿಗೆ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ವ್ಯಕ್ತಿಯು ನೆಮ್ಮದಿಯಿಂದ ಇರುವ ಸ್ಥಿತಿ’. ಆಧುನಿಕ ಜಗತ್ತಿನಲ್ಲಿ ಬಾಳುತ್ತಿರುವ ನಾವು, ‘ಕಾಯಿಲೆ ಬಂದ ಮೇಲೆ ವಾಸಿಮಾಡಿಕೊಳ್ಳುವುದಕ್ಕಿಂತ ಕಾಯಿಲೆಯೇ ಬಾರದಂತೆ ತಡೆಯುವುದು ಜಾಣತನ’ ಎಂದು ತಿಳಿದಿದ್ದರೂ ಕೂಡ, ಇರುವ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಕಡೆಗೆ ಸಾಕಷ್ಟು ಕಾಳಜಿವಹಿಸುತ್ತಿಲ್ಲ ಎಂದೇ ಹೇಳಬೇಕಾಗುತ್ತದೆ. ನಾವು ಒಡವೆ ವಸ್ತುಗಳನ್ನು, ಧನಸಂಪತ್ತನ್ನು ತಿಜೋರಿಯಲ್ಲೊ, ಬ್ಯಾಂಕಿನ ಲಾಕರಿನ ಒಳಗೊ ಇಟ್ಟು ಜೋಪಾನವಾಗಿ ಕಾಪಾಡಿಕೊಳ್ಳುತ್ತೇವೆ; ಆದರೆ ಅವೆಲ್ಲವನ್ನು ನೆಮ್ಮದಿಯಿಂದ ಅನುಭವಿಸಬೇಕಾದರೆ ಮೊದಲಿಗೆ ನಮ್ಮ ಆರೋಗ್ಯ ಚೆನ್ನಾಗಿರಬೇಕು ಎಂಬ ತಥ್ಯವನ್ನೇ ಮರೆತಿದ್ದೇವೆ. ಇದರಿಂದಾಗಿ ಒಂದೊಮ್ಮೆ ಷಡ್ರಸಗಳಿಂದ ಕೂಡಿದ ರುಚಿಕಟ್ಟಾದ ಊಟವನ್ನು ಮಾಡಬೇಕೆಂದು ಮನಸ್ಸು ಬಯಸಿದರೂ ಅದನ್ನು ಮನಸೋಇಚ್ಛೆ ಸೇವಿಸುವ ಪರಿಸ್ಥಿತಿಯಲ್ಲಿ ನಾವು ಇಂದು ಇಲ್ಲ. ಏನೇ ತಿನ್ನಬೇಕಾದರೂ, ಏನನ್ನೇ ಅನುಭವಿಸಬೇಕಾದರೂ, ಕೊನೆಗೆ ನಿದ್ದೆ ಮಾಡಬೇಕಾದರೂ ಕೂಡ ಔಷಧಿಯನ್ನು ಸೇವಿಸಬೇಕಾದಂಥ ಪರಿಸ್ಥಿತಿಗೆ ನಾವಿಂದು ಬಂದು ತಲಪಿದ್ದೇವೆ ಎಂದರೆ ಅದು ಅತಿಶಯೋಕ್ತಿಯೇನೂ ಆಗಲಾರದು.
ಇದಕ್ಕೆಲ್ಲ ಕಾರಣ ಇಂದು ನಾವು ರೂಢಿಸಿಕೊಂಡು ಬಂದಿರುವ ಧಾವಂತದ ಜೀವನಶೈಲಿ. ಐಹಿಕ ಸುಖ-ಸಂಪತ್ತಿನ ಬಗೆಗಿನ ಅತಿಯಾದ ವ್ಯಾಮೋಹ ಮತ್ತು ಅದನ್ನು ತ್ವರಿತವಾಗಿ ಗಳಿಸಲು ಉತ್ಸುಕರಾಗಿ ಅನುಸರಿಸುತ್ತಿರುವ ಹದತಪ್ಪಿದ ಜೀವನಕ್ರಮ. ಇಂದು ನಮಗೆ ಐಹಿಕ ಸುಖ-ಸಂಪತ್ತೇ ಪ್ರಧಾನವಾಗಿ ತೋರುತ್ತಿರುವುದರಿಂದ ನಮ್ಮ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಅಸ್ತಿತ್ವದ ಬಗ್ಗೆ ಹೆಚ್ಚಿನ ಮಹತ್ತ್ವವನ್ನು ಕೊಡುತ್ತಿಲ್ಲ. ಹಾಗಾಗಿ ನಮ್ಮ ಅಸ್ತಿತ್ವದ ಈ ಎಲ್ಲ ಹಂತಗಳಲ್ಲೂ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ; ಸಹನಾತೀತ ಒತ್ತಡಕ್ಕೆ ಒಳಗಾಗುತ್ತಿದ್ದೇವೆ; ಪರಿಣಾಮವಾಗಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಬುದ್ಧಿವಂತರಾಗಿದ್ದೂ ಭಗವಂತ ಕರುಣಿಸಿರುವ ಶ್ರೇಷ್ಠವಾದ ಬದುಕಿನಲ್ಲಿ ನೆಮ್ಮದಿಯನ್ನು, ಆರೋಗ್ಯವನ್ನು ಕೈಯಾರೆ ಕಳೆದುಕೊಳ್ಳುತ್ತಿದ್ದೇವೆ; ಆನಂದವನ್ನು ಸವಿಯಲು ವಿಫಲರಾಗುತ್ತಿದ್ದೇವೆ.
ನಿರ್ಭಯವಾಗಿ, ಆತಂಕರಹಿತವಾಗಿ, ಆರೋಗ್ಯಕರವಾಗಿ ಒಂದು ಆದರ್ಶವಾದ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಮತ್ತು ಜೀವನವನ್ನು ಸಂಪೂರ್ಣವಾಗಿ ಅನುಭವಿಸಬೇಕಾದರೆ ಪಾತಂಜಲಯೋಗವು ವಿವರಿಸುವ ಅಷ್ಟಾಂಗಗಳನ್ನು ಸಮಗ್ರವಾಗಿ ನಮ್ಮ ಜೀವನಶೈಲಿಯಾಗಿ ಸ್ವೀಕರಿಸಬೇಕಾಗುತ್ತದೆ. ಏಕೆಂದರೆ ಅಷ್ಟಾಂಗಯೋಗವು ನಮ್ಮ ಶಾರೀರಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕ್ರಿಯೆಗಳನ್ನು ಸತ್ಸಂಸ್ಕಾರಕ್ಕೆ ಒಳಪಡಿಸುತ್ತದೆ ಹಾಗೂ ಅದಕ್ಕೆ ಸಮಾಜದಿಂದ ಒದಗಿಬರುವ ಪ್ರತಿಕ್ರಿಯೆಗಳು ನಮ್ಮನ್ನು ಬಾಧಿಸದಂತೆ ರಕ್ಷಿಸುತ್ತವೆ.
ಇಲ್ಲಿ ಒಂದು ಉದಾಹರಣೆಯನ್ನು ಕೊಡಬಹುದು: ಹಲಸಿನಹಣ್ಣು ನಮಗೆಲ್ಲರಿಗೂ ಇಷ್ಟವಾದ ಹಣ್ಣು. ಬಿಡಿಸಿದ ಅದರ ಸೊಳೆ ತಿನ್ನುವುದೆಂದರೆ ಆನಂದ. ಆದರೆ ಸೊಳೆಯನ್ನು ಬಿಡಿಸುವಾಗ ಕೈಗಳಿಗೆ ಅದರಲ್ಲಿರುವ ಮೇಣ ಅಂಟಿಕೊಳ್ಳುತ್ತದೆ; ಅದು ನಮಗೆ ಇಷ್ಟವಾಗುವುದಿಲ್ಲ. ಅದಕ್ಕಾಗಿ ಸೊಳೆಯನ್ನು ಬಿಡಿಸುವಾಗ ಮೇಣ ಅಂಟಿಕೊಳ್ಳದೇ ಇರಲಿ ಎಂದು ಕೈಗಳಿಗೆ ಮೊದಲು ಎಣ್ಣೆಜಿಡ್ಡನ್ನು ಸವರಿಕೊಳ್ಳುತ್ತೇವೆ; ಅನಂತರ ಸಿಹಿಯಾದ ಸೊಳೆಯನ್ನು ಬಿಡಿಸಿ ತಿಂದು ಆನಂದಿಸುತ್ತೇವೆ. ಜೀವನದಲ್ಲಿ ಸುಖ-ದುಃಖಗಳು, ಹಿತ-ಅಹಿತಗಳು ಇದ್ದೇ ಇರುತ್ತವೆ. ಅವುಗಳನ್ನು ಅನುಭವಿಸುತ್ತಲೇ ನಮ್ಮ ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಸುಖ-ಸಂತೋಷಗಳಿಗೆ ಹಿಗ್ಗದೆ, ದುಃಖ-ದುಮ್ಮಾನಗಳಿಗೆ ಕುಗ್ಗದೆ, ಕಷ್ಟ-ಕಾರ್ಪಣ್ಯಗಳಿಗೆ ಸೋಲದೆ ನಮ್ಮ ಮನಸ್ಸನ್ನು ಸಮತೋಲದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಹೇಗೆ ಹಲಸಿನಹಣ್ಣಿನ ಸೊಳೆಯನ್ನು ಬಿಡಿಸುವಾಗ ಕೈಗಳಿಗೆ ಎಣ್ಣೆಜಿಡ್ಡನ್ನು ಸವರಿಕೊಳ್ಳಬೇಕಾಗುತ್ತದೆಯೋ ಹಾಗೆ ಜೀವನದಲ್ಲಿ ಎದುರಾಗುವ ಸುಖ-ಸಂತೋಷಗಳಿಗೆ, ದುಃಖ-ದುಮ್ಮಾನಗಳಿಗೆ, ಕಷ್ಟ-ಕಾರ್ಪಣ್ಯಗಳಿಗೆ ಮನಸ್ಸು ಅಂಟಿಕೊಳ್ಳದಂತೆ ಇರಲು ಅಷ್ಟಾಂಗಯೋಗವು ನಮಗೆ ನೆರವಾಗುತ್ತದೆ. ಅದರಿಂದಾಗಿ ನಮ್ಮ ದೈಹಿಕ-ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ. ನಮ್ಮಲ್ಲಿ ರೋಗಪ್ರತಿರೋಧಕಶಕ್ತಿ ಹೆಚ್ಚುತ್ತದೆ ಮತ್ತು (ರಕ್ತದ ಒತ್ತಡ, ಮಧುಮೇಹ, ಮೈಗ್ರೇನ್, ಸ್ಥೂಲಕಾಯ, ಆಸ್ತ್ಮ, ಖಿನ್ನತೆ, ನಿದ್ರಾಹೀನತೆ ಮುಂತಾದ) ಮಾರಕ ಮನೋದೈಹಿಕ ಕಾಯಿಲೆಗಳು ಬಾರದಂತೆ ಮೊದಲೇ ತಡೆಗಟ್ಟಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ; ಜೀವನದ ಆನಂದವನ್ನು ಸವಿಯಲು ಸಾಧ್ಯವಾಗುತ್ತದೆ.
ಸಮಗ್ರಯೋಗದ ಕಾರ್ಯವಿಧಾನ
ಯೋಗವು ಮೊತ್ತಮೊದಲಿಗೆ ವ್ಯಕ್ತಿತ್ವವನ್ನು – ಸಾಮಾಜಿಕ, ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಎಂದು ನಾಲ್ಕು ವಿಧವಾಗಿ ವಿಂಗಡಿಸುತ್ತದೆ. ತದನಂತರ ಪ್ರತಿಯೊಂದು ವಿಭಾಗವನ್ನೂ ಸಂಸ್ಕಾರಕ್ಕೊಳಪಡಿಸುತ್ತದೆ. ತನ್ಮೂಲಕ ಪ್ರತಿಯೊಂದು ವಿಭಾಗದಿಂದಲೂ ಮನಸ್ಸಿನ ಮೇಲಾಗುವ ಪರಿಣಾಮಗಳನ್ನು ಸಕಾರಾತ್ಮಕವಾಗಿ, ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳುತ್ತದೆ.
ಸಾಮಾಜಿಕ ಸಂಸ್ಕಾರ
ನಾವು ಈ ಪ್ರಪಂಚದಲ್ಲಿ ಜನ್ಮತಳೆದ ಕ್ಷಣದಿಂದಲೇ ಸಮಾಜದ ಒಂದು ಅವಿಭಾಜ್ಯ ಅಂಗವಾಗಿ ಬೆಳೆಯುತ್ತೇವೆ. ಸಮಾಜದಲ್ಲಿ ನಡೆಯುವ ಎಲ್ಲ ಕ್ರಿಯೆಗಳಿಗೂ ಸ್ಪಂದಿಸುತ್ತ ಅವುಗಳಿಗೆ ಪ್ರತಿಕ್ರಿಯೆಗಳನ್ನು ತೋರುತ್ತೇವೆ. ಹಾಗೆಯೇ ಸಮಾಜ ನಮ್ಮೆಲ್ಲ ಕ್ರಿಯೆಗಳಿಗೂ ತನ್ನ ಪ್ರತಿಕ್ರಿಯೆಯನ್ನು ನೀಡುತ್ತದೆ. ಹೀಗೆ ನಮ್ಮ ಮತ್ತು ಸಮಾಜದ ನಡುವೆ ನಡೆಯುವ ಕ್ರಿಯೆ-ಪ್ರತಿಕ್ರಿಯೆಗಳ ಕೊಡು-ಕೊಳ್ಳುವಿಕೆಯೇ ನಮ್ಮ ಜೀವನ ಎನಿಸಿಕೊಳ್ಳುತ್ತದೆ. ಸುಖ-ದುಃಖಗಳಿಗೆ, ಕೋಪ-ತಾಪಗಳಿಗೆ, ಹಿಗ್ಗು-ಕುಗ್ಗುಗಳಿಗೆ, ಆತಂಕ, ಭಯ, ಧೈರ್ಯ, ಸಂತೋಷವೇ ಮೊದಲಾದ ಎಲ್ಲಾ ರೀತಿಯ ಮನೋಭಾವನೆಗಳಿಗೆ ಈ ಕ್ರಿಯೆ-ಪ್ರತಿಕ್ರಿಯೆಗಳ ಕೊಡು-ಕೊಳ್ಳುವಿಕೆಯೇ ಮೂಲ ಕಾರಣವಾಗಿದೆ. ಸಮಾಜದಲ್ಲಿ ನಡೆಯುವ ಕ್ರಿಯೆಗಳನ್ನಾಗಲಿ, ಸಮಾಜ ನಮ್ಮ ಕ್ರಿಯೆಗಳಿಗೆ ತೋರುವ ಪ್ರತಿಕ್ರಿಯೆಗಳನ್ನಾಗಲಿ ತಿದ್ದುವುದೆಂದರೆ ಅದು ಕಷ್ಟಸಾಧ್ಯವಾದ ಸಂಗತಿಯಾಗುತ್ತದೆ. ಬದಲಿಗೆ, ಸಮಾಜದಲ್ಲಿ ನಾವು ನಡೆಸುವ ಕ್ರಿಯೆಗಳಿಗೆ ಹಾಗೂ ನಾವು ಸಮಾಜಕ್ಕೆ ತೋರುವ ಪ್ರತಿಕ್ರಿಯೆಗಳಿಗೆ ಮೂಲದಲ್ಲೇ ಸಂಸ್ಕಾರ ನೀಡುವುದು ಸುಲಭಸಾಧ್ಯವಾಗಿದೆ. ಅದರಿಂದಾಗಿ ಸಮಾಜದಲ್ಲಿ ನಡೆಯುವ ಕ್ರಿಯೆಗಳಿಂದಾಗಲಿ, ಸಮಾಜ ತೋರುವ ಪ್ರತಿಕ್ರಿಯೆಗಳಿಂದಾಗಲಿ ನಮ್ಮ ಮನಸ್ಸಿನ ಮೇಲೆ ಆಗುವ ಪರಿಣಾಮಗಳನ್ನು ನಾವು ಸಕಾರಾತ್ಮಕವಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ ನಮ್ಮ ಜೀವನಶೈಲಿಯನ್ನೇ ನಾವು ಬದಲಾಯಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅದೇ ಜಾಣತನದ ಉಪಾಯವೂ ಹೌದು.
ಪಾತಂಜಲ ಯೋಗಶಾಸ್ತ್ರದ ಎಂದರೆ ಅಷ್ಟಾಂಗಯೋಗದ ಮೊದಲೆರಡು ಅಂಗಗಳಾದ ಯಮ, ನಿಯಮಗಳು – ಸಮಾಜದಲ್ಲಿ ನಾವು ನಡೆಸುವ ಕ್ರಿಯೆಗಳಿಗೆ ಹಾಗೂ ನಾವು ಸಮಾಜಕ್ಕೆ ತೋರುವ ಪ್ರತಿಕ್ರಿಯೆಗಳಿಗೆ ಮೂಲದಲ್ಲೇ ಸಂಸ್ಕಾರ ನೀಡುವುದರ ಮೂಲಕ – ನಮ್ಮ ಮನಸ್ಸನ್ನು ಸಾಮಾಜಿಕ ಕ್ರಿಯೆ-ಪ್ರತಿಕ್ರಿಯೆಗಳಿಂದಾಗಿ ಉಂಟಾಗುವ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳುತ್ತದೆ. ಮಾತ್ರವಲ್ಲ, ಜೀವನದಲ್ಲಿ ನಾವು ನಡೆಸುವ ಕೆಲಸ ಕಾರ್ಯಗಳಿಗೆ ಸಮಾಜ ಸಕಾರಾತ್ಮಕವಾಗಿಯೇ ಪ್ರತಿಕ್ರಿಯೆ ತೋರುವಂತೆ ಮಾಡುತ್ತದೆ.
ಯಮ, ನಿಯಮಗಳೆಂದರೆ ಜೀವನದಲ್ಲಿ ಪಾಲಿಸಬೇಕಾದ ಆಧಾರಮೌಲ್ಯಗಳು. ಯಮವೆಂಬುದು ಸಾಮಾಜಿಕ ಜೀವನಮೌಲ್ಯಗಳಾದರೆ, ನಿಯಮವೆಂಬುದು ವೈಯಕ್ತಿಕ ಜೀವನಮೌಲ್ಯಗಳಾಗಿವೆ. ಸಮಾಜದಲ್ಲಿ ನಿರ್ಭಯವಾಗಿ, ನಿರಾತಂಕವಾಗಿ ಬದುಕಬೇಕಾದರೆ ಯಮ-ನಿಯಮಗಳನ್ನು ತ್ರಿಕರಣ ಪೂರ್ವಕವಾಗಿ, ಅಂದರೆ ಕಾಯೇನ, ವಾಚಾ, ಮನಸಾ ಅಳವಡಿಸಿಕೊಂಡರಷ್ಟೆ ಸಾಧ್ಯವಾಗುತ್ತದೆ. ಇಲ್ಲವಾದರೆ ಜೀವನದಲ್ಲಿ ಸದಾ ಭಯ, ಆತಂಕಗಳನ್ನು ಎದುರಿಸಬೇಕಾಗುತ್ತದೆ.
ಯಮ-ನಿಯಮಗಳಲ್ಲಿ ತಿಳಿಸಿರುವ ನೈತಿಕಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ಮನಸ್ಸಿನಲ್ಲಿ ಕಾಮ ಕ್ರೋಧಾದಿ ಅರಿಷಡ್ವರ್ಗಗಳು ಹುಟ್ಟಿಕೊಳ್ಳುವವು. ಹಿಂಸೆ, ಕೇಡು, ಅಸತ್ಯ, ಕಳ್ಳತನ, ಅನೈತಿಕ ಅಸಭ್ಯ ವಿಚಾರಗಳು ಮನಸ್ಸಿನಲ್ಲೂ, ನಡೆ-ನುಡಿಗಳಲ್ಲೂ ಬಲವಾಗಿ ಬೇರುಬಿಡುವವು. ಇದರಿಂದಾಗಿ ಆದರ್ಶವಾದ ಆರೋಗ್ಯಕರ ಜೀವನ ನಡೆಸುವ ಮೂಲ ಉದ್ದೇಶವೇ ವಿಫಲವಾಗುವುದು.
ಯಮದಲ್ಲಿ ಅಡಕವಾಗಿರುವ ಸಾಮಾಜಿಕ ಜೀವನಮೌಲ್ಯಗಳೆಂದರೆ – ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯ. ನಾವು ನಮ್ಮ ನಡೆ-ನುಡಿ, ಆಚಾರ-ವಿಚಾರ, ಕೆಲಸ-ಕಾರ್ಯಗಳಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಸಮಾಜ ನಮ್ಮನ್ನು ಗೌರವಿಸುತ್ತದೆ. ಈ ಜೀವನಮೌಲ್ಯಗಳನ್ನು ನಾವು ನಮ್ಮ ಸಾಮಾಜಿಕ ಜೀವನದಲ್ಲಿ ಪಾಲಿಸದೆ ಹೋದಾಗ ಅದೇ ಸಮಾಜ ನಮ್ಮನ್ನು ನಿಂದಿಸಿ ಧಿಕ್ಕರಿಸುತ್ತದೆ, ಶಿಕ್ಷಿಸುತ್ತದೆ. ಆದ್ದರಿಂದ ಯಮದ ಆಚರಣೆಯನ್ನು ಆಗ್ರಹಿಸುವ ಮೂಲಕ ಯೋಗ ಮೊತ್ತಮೊದಲಿಗೆ, ನಮ್ಮ ಜೀವನಕ್ಕೆ ಭದ್ರ ಬುನಾದಿಯಾಗಿ, ಸಾಮಾಜಿಕ ಭದ್ರತೆಯನ್ನೂ ಸ್ಥಾನಮಾನ ಗೌರವಗಳನ್ನೂ ಅಭಯವನ್ನೂ ತಂದುಕೊಡುತ್ತದೆ. ಸಮಾಜದಲ್ಲಿ ನಾವು ನಿರ್ಭಯವಾಗಿ ಗೌರವದಿಂದ ಜೀವಿಸುವುದಕ್ಕೆ ಅನುವು ಮಾಡಿಕೊಡುತ್ತದೆ.
ದೈಹಿಕ ಸಂಸ್ಕಾರ
ಸಕಲ ಸಾಧನೆಗಳಿಗೂ, ಕೆಲಸಕಾರ್ಯಗಳಿಗೂ ಮೊತ್ತಮೊದಲು ಬೇಕಾಗಿರುವುದು ಆರೋಗ್ಯವಾಗಿರುವ ಸದೃಢ ಶರೀರ. ಯೋಗಾಸನಗಳು ಶಾರೀರಿಕ ಆರೋಗ್ಯವನ್ನು ತಂದುಕೊಡುವವು. ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಯೋಗಾಸನಗಳನ್ನು ಅತ್ಯಗತ್ಯವಾಗಿ ಮಾಡಬೇಕು. ಯೋಗಾಸನಗಳ ಅಭ್ಯಾಸ ನಮ್ಮ ದೇಹವನ್ನು ಸದೃಢಗೊಳಿಸುವುದರ ಜೊತೆಗೆ ಅದರ ರೋಗನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಮನಸ್ಸಿನ ಚಂಚಲತೆಯನ್ನು ತಾನೇತಾನಾಗಿ ನಿವಾರಿಸುತ್ತದೆ. ಆರೋಗ್ಯದಿಂದ ಕೂಡಿದ ದೇಹ, ದೃಢವಾದ ಮನಸ್ಸು ಇಲ್ಲವಾದರೆ ಪೂರ್ವೋಕ್ತ ಯಮ-ನಿಯಮಾದಿಗಳ ಪಾಲನೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿದಿನ ತಪ್ಪದೆ ಯೋಗಾಸನಗಳ ಅಭ್ಯಾಸವನ್ನು ನಡೆಸಬೇಕು. ಅದಕ್ಕೆಂದೇ ಒಂದು ಸಮಯವನ್ನೂ ಜಾಗವನ್ನೂ ನಿಶ್ಚಯಿಸಿಕೊಳ್ಳಬೇಕು. ಪ್ರತಿದಿನ ನಾವು ವ್ರತತಪ್ಪದಂತೆ ಒಂದೇ ಜಾಗದಲ್ಲಿ ಯೋಗಾಸನದ ಅಭ್ಯಾಸವನ್ನು ನಡೆಸುವುದು ತಪಸ್ಸು ಮಾಡಿದಂತೆಯೇ ಸರಿ. ಅದರಿಂದ ಶಿಸ್ತಿನ ಗುಣವೂ ನಮ್ಮಲ್ಲಿ ನೆಲೆಗೊಳ್ಳುತ್ತದೆ.
ಮಾನಸಿಕ ಸಂಸ್ಕಾರ
ಅಷ್ಟಾಂಗ ಯೋಗದಲ್ಲಿ ನಾಲ್ಕನೆಯ ಅಂಗವಾಗಿ ಪ್ರಾಣಾಯಾಮವನ್ನು ಹೇಳಿದೆ. ಪ್ರಾಣಾಯಾಮ ಎಂದರೆ ಉಸಿರಾಟದ ವಿಜ್ಞಾನ. ನಮ್ಮ ಮನಸ್ಸನ್ನು ಶಾಂತವಾಗಿಸಬೇಕಾದರೆ ನಾವು ಮೃದುವಾಗಿ ನಿಧಾನವಾಗಿ ಉಸಿರಾಡುವುದನ್ನು ಕಲಿಯಬೇಕು. ಮೃದುವಾದ ನಿಧಾನವಾದ ಉಸಿರಾಟ ನಮ್ಮ ಚಿತ್ತಚಾಂಚಲ್ಯವನ್ನು ಕ್ರಮೇಣ ತೊಡೆದುಹಾಕುತ್ತದೆ. ಹದಿನೇಳನೆಯ ಶತಮಾನದ ಯೋಗಿ `ಕರೀಬ ಎಕ್ಕನ್’ನ ಅಭಿಪ್ರಾಯದಂತೆ – `ನಮ್ಮ ಮನಸ್ಸಿನಲ್ಲಿ ಶಾಂತತೆಯ ಸ್ವಭಾವವನ್ನು ರೂಢಿಸಿಕೊಳ್ಳಬೇಕಾದರೆ ಮೊದಲಿಗೆ ನಾವು ನಮ್ಮ ಉಸಿರಾಟವನ್ನು ಕ್ರಮಬದ್ಧಗೊಳಿಸಬೇಕು. ಏಕೆಂದರೆ ಉಸಿರಿಗೂ ಮನಸ್ಸಿಗೂ ಅವಿನಾಭಾವ ನಂಟಿದೆ. ನಮ್ಮ ಉಸಿರಾಟ ಸರಿಯಾದ ಕ್ರಮದಲ್ಲಿ ನಡೆಯುತ್ತಿದ್ದರೆ ನಮ್ಮ ಮನಸ್ಸೂ ಶಾಂತತೆಯಿಂದ ಕೂಡಿರುತ್ತದೆ. ಉಸಿರಾಟ ಸರಿಯಾದ ಕ್ರಮದಲ್ಲಿ ಇಲ್ಲದೇ ಇದ್ದರೆ ಆಗ ನಾವು ಅನೇಕ ವಿಧವಾಗಿ ದೈಹಿಕ ಹಾಗೂ ಮಾನಸಿಕ ತೊಂದರೆಗಳಿಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ, ಮೊದಲಿಗೆ ನಾವು ನಮ್ಮ ಉಸಿರಾಟವನ್ನು ಕ್ರಮಬದ್ಧಗೊಳಿಸಬೇಕು. ಅದರಿಂದ ನಮ್ಮ ಬುದ್ಧಿ, ಅಹಂಕಾರಗಳು ತಿಳಿಯಾಗುತ್ತವೆ. ಮನಸ್ಸು ಶಾಂತವಾಗುತ್ತದೆ.’
ಪ್ರಾಣಾಯಾಮ ನಮಗೆ ಕಾಮ, ಬಯಕೆ, ಆಸೆಗಳನ್ನು ಜಯಿಸಲು ಒಂದು ಪ್ರಬಲವಾದ ಅಸ್ತ್ರ. ಪ್ರಾಣಾಯಾಮದ ಅಭ್ಯಾಸದಿಂದ ನಮಗೆ ಇಂದ್ರಿಯಗಳ ನಿಗ್ರಹ ಸುಲಭವಾಗುತ್ತದೆ. ಪ್ರಾಣಾಯಾಮದ ಅಭ್ಯಾಸದ ಸಂದರ್ಭದಲ್ಲಿ ನಾವು ಕಣ್ಣುಮುಚ್ಚಿ ಅಭ್ಯಾಸ ಮಾಡುತ್ತೇವೆ. ಹಾಗೆ ಉಸಿರು ಮತ್ತು ಮನಸ್ಸುಗಳನ್ನು ಸುವ್ಯವಸ್ಥೆಗೊಳಿಸುವುದರಿಂದ ಅನಿರ್ವಚನೀಯವಾದ ಮಾನಸಿಕ ಶಾಂತಿ ನಮ್ಮಲ್ಲಿ ನೆಲೆಗೊಳ್ಳುತ್ತದೆ. ನಮ್ಮ ಮನಸ್ಸು ಭಾವೋದ್ರೇಕಕ್ಕೆ ಒಳಗಾಗುವುದನ್ನು ತಡೆಯುವುದಕ್ಕೆ ಸಾಧ್ಯವಾಗುತ್ತದೆ.
ಇಂದ್ರಿಯಗಳ ಹತೋಟಿಯ ಬಗೆಗೆ ಯೋಗಶಾಸ್ತ್ರ ತಿಳಿಸುವ ಇನ್ನೊಂದು ಅಂಗ ಪ್ರತ್ಯಾಹಾರ. ನಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಕಲೆಯನ್ನು ಈ ಅಂಗ ವಿವರವಾಗಿ ಕಲಿಸುತ್ತದೆ. ನಾವು ಇಂದ್ರಿಯಗಳ ಸೆಳೆತಕ್ಕೆ ಬಲಿಯಾದರೆ ನಮ್ಮ ಸಾಮಾಜಿಕ ಜೀವನವೂ ಪತನವಾಗುತ್ತದೆ.
ನಮಗೆ ಹೊರಗಿನ ಪ್ರಪಂಚ ಅರ್ಥವಾಗುವುದು, ಜೀವನ ನಡೆಸಲು ಸಾಧ್ಯವಾಗುವುದು ಪಂಚೇಂದ್ರಿಯಗಳ ಕಾರ್ಯಗಳಿಂದಾಗಿ. ಪಂಚೇಂದ್ರಿಯಗಳಲ್ಲಿ ಯಾವುದೇ ಒಂದು ಊನವಾದರೂ ಅಷ್ಟರಮಟ್ಟಿಗೆ ಹೊರಗಿನ ಪ್ರಪಂಚವೂ ಊನವಾಗಿರುತ್ತದೆ. ಕಣ್ಣಿಲ್ಲದವನಿಗೆ ಬಣ್ಣ ರೂಪಗಳ ಪ್ರಪಂಚ ಅರ್ಥವಾಗುವುದಿಲ್ಲ. ಹಾಗೆಯೇ ಕಿವುಡನಿಗೆ ಶಬ್ದರೂಪದ ಪ್ರಪಂಚದ ಅರಿವಿರದು… ಹೀಗೆ. ಯಶಸ್ವಿಯಾಗಿ ಜೀವನ ನಡೆಸಲು ಸಾಧ್ಯವಾಗುವುದು ಪಂಚೇಂದ್ರಿಯಗಳನ್ನು ಆದರ್ಶ ಕಾರ್ಯಗಳಿಗೆ ಬಳಸಿಕೊಂಡಾಗ. ಆದ್ದರಿಂದ ಸರಿಯಾದ ರೀತಿಯಲ್ಲಿ ಪಂಚೇಂದ್ರಿಯಗಳನ್ನು ಬಳಸಿಕೊಳ್ಳಬೇಕು. ಅವುಗಳನ್ನು ಯಾವತ್ತೂ ನಮ್ಮ ಹಿಡಿತದಲ್ಲೇ ಇಟ್ಟುಕೊಂಡಿರಬೇಕು. ಅವುಗಳನ್ನು ಯಥೋಚಿತವಾಗಿ ಎಷ್ಟು ಬೇಕೋ ಅಷ್ಟು ಮಾತ್ರವೇ ಬಳಸಿಕೊಳ್ಳಬೇಕು. ಇಲ್ಲವಾದರೆ ಅವುಗಳಿಗೆ ದಾಸರಾಗಬೇಕಾಗುತ್ತದೆ. ಆ ನಿಯಂತ್ರಣಶಕ್ತಿ ದೊರಕುವುದು ಪ್ರತ್ಯಾಹಾರದ ಕಲೆಯನ್ನು ಕಲಿತಾಗ. ವಿಷಯವಸ್ತುಗಳ ಜಾಣ ಬಳಕೆಯ ಮೂಲಕ ಸಂಸಾರ ಮತ್ತು ಸಮಾಜದಲ್ಲಿ ಇದ್ದೂ ಇಲ್ಲದಂತೆ ಬದುಕಬೇಕು. ತಾವರೆಯ ಎಲೆಯ ಮೇಲಿರುವ ನೀರಬಿಂದು ಎಲೆಯ ಮೇಲೆಯೇ ಇದ್ದರೂ ಅದಕ್ಕೆ ಅಂಟಿಕೊಂಡಿರುವುದಿಲ್ಲ. ಹಾಗೆಯೇ ಮನಸ್ಸು ಸಂಸಾರ, ಸಮಾಜದಲ್ಲಿ ಇದ್ದರೂ ಇಲ್ಲದಂತಿರಬೇಕು. ಆಗ ಮನಸ್ಸು ನಿರಾತಂಕವಾಗಿ, ನಿರ್ಭಯವಾಗಿ ಶಾಂತಿ, ಆನಂದದಿಂದ ಕೂಡಿರುತ್ತದೆ.
ಮನಸ್ಸಂಸ್ಕಾರದ ಇನ್ನೊಂದು ಹಂತವೇ ಯೋಗದ ಆರನೆಯ ಅಂಗವಾದ ಧಾರಣ. ನಮ್ಮ ಮನಸ್ಸು ಬಾಹ್ಯ ಅಥವಾ ಆಂತರಿಕ ಅನುಭವಗಳನ್ನು ವಿಶ್ಲೇಷಿಸುವ, ಅಂಗೀಕರಿಸುವ, ತುಲನೆ ಮಾಡುವ ಮತ್ತು ಸಂಯೋಜನೆ ಮಾಡುವ ಒಂದು ಸಾಧನವೇ ಧಾರಣ. ಪ್ರತ್ಯಾಹಾರದ ಮೂಲಕ ಇಂದ್ರಿಯಗಳನ್ನು ಒಳಸೆಳೆದು ಅವುಗಳ ಕಾರ್ಯವನ್ನು ಸುಮ್ಮಗಾಗಿಸುವುದರಿಂದ ಮಾನಸಿಕ ಏಕಾಗ್ರತೆ ಸಿದ್ಧಿಸುತ್ತದೆ. ಮನಸ್ಸಿನ ಏಕಾಗ್ರತೆ ಧಾರಣದಿಂದ ನಮಗೆ ಸಿಗುವ ಫಲ.
ಮನಸ್ಸು ಬಲು ಸೂಕ್ಷ್ಮ, ಚಂಚಲ. ಅದು ಅಷ್ಟು ಸುಲಭವಾಗಿ ಹತೋಟಿಗೆ ಸಿಗುವುದಿಲ್ಲ. ಆದರೆ ಧಾರಣ ಮತ್ತು ಸದಸದ್ವಿವಿವೇಚನೆಯಿಂದ ಮನಸ್ಸಿನ ಹತೋಟಿ ಸಾಧ್ಯವಾಗುತ್ತದೆ. ಮನಸ್ಸಿನ ಹತೋಟಿಯಿಂದ ಏಕಾಗ್ರತೆ ಹೊಂದುವುದು ಸುಲಭವಾಗುತ್ತದೆ. ಏಕಾಗ್ರತೆಯಿಂದ ಎಲ್ಲಾ ಭಾವನೆಗಳೂ, ಯೋಚನೆಗಳೂ ಮನಸ್ಸಿಗೆ ಸಂತೋಷವನ್ನೂ ನೆಮ್ಮದಿಯನ್ನೂ ತಂದುಕೊಡುತ್ತವೆ.
ಆಧ್ಯಾತ್ಮಿಕ ಸಂಸ್ಕಾರ
ಯೋಗದ ಏಳು ಮತ್ತು ಎಂಟನೆಯ ಅಂಗಗಳಾದ ಧ್ಯಾನ ಮತ್ತು ಸಮಾಧಿಯು ಮನಸ್ಸಿಗೆ ಆಧ್ಯಾತ್ಮಿಕ ಸಂಸ್ಕಾರವನ್ನು ನೀಡುತ್ತವೆ. ಧ್ಯಾನ ಎಂದರೆ ಒಂದೇ ವಿಷಯದ ಕಡೆಗೆ ಮನಸ್ಸನ್ನು ನಿರಂತರವಾಗಿ ಹರಿಸುವುದು, ಅಥವಾ ಒಂದೇ ವಿಷಯದ ಕುರಿತಾಗಿ ತದೇಕಚಿತ್ತದಿಂದ ಚಿಂತಿಸುವುದು. ತೈಲಧಾರೆ ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಹೇಗೆ ಅಖಂಡವಾಗಿ ಹರಿಯುತ್ತದೆಯೋ ಹಾಗೆ ನಮ್ಮ ಮನಸ್ಸು ಒಂದೇ ವಿಷಯದ ಕಡೆಗೆ, ಅಂದರೆ, ಭಗವಂತನ ಕಡೆಗೆ ಅಖಂಡವಾಗಿ ಹರಿಯುತ್ತಿದ್ದರೆ ಅದು ಧ್ಯಾನ ಎನಿಸಿಕೊಳ್ಳುತ್ತದೆ.
ಮನಸ್ಸು ಚಿತ್ರವಿಚಿತ್ರವಾಗಿ ವರ್ತಿಸುತ್ತಿರುತ್ತದೆ. ಮರ್ಕಟದಂತೆ ಒಂದು ಆಲೋಚನೆಯಿಂದ ಇನ್ನೊಂದರೆಡೆಗೆ ಹಾರುತ್ತಲಿರುತ್ತದೆ. ಇಂತಹ ವಿಶ್ರಾಂತಿಯಿಲ್ಲದ ಮನಸ್ಸು ಬಹುಬೇಗ ಆಯಾಸಗೊಳ್ಳುತ್ತದೆ. ಪ್ರತಿದಿನ ನಿಯಮಿತವಾಗಿ ಧ್ಯಾನದ ಅಭ್ಯಾಸಮಾಡುವುದರಿಂದ ಗೊತ್ತುಗುರಿಯಿಲ್ಲದ ಅಂತಹ ಆಲೋಚನೆಗಳು ನಿಯಂತ್ರಣಗೊಂಡು ಮನಸ್ಸು ಏಕಾಗ್ರಗೊಳ್ಳುತ್ತದೆ. ಪ್ರತಿದಿನ ಧ್ಯಾನಮಾಡುವ ಅಭ್ಯಾಸವನ್ನು ಇಟ್ಟುಕೊಳ್ಳದೇ ಹೋದರೆ ಮನಸ್ಸಿನಲ್ಲೇಳುವ ಆಲೋಚನೆಗಳಿಗೆಲ್ಲ ನಾವು ತ್ವರಿತವಾಗಿ ತೀವ್ರತರಹದ ಪ್ರತಿಕ್ರಿಯೆ ವ್ಯಕ್ತಪಡಿಸುತ್ತೇವೆ. ತಾಳ್ಮೆ ವಿವೇಚನೆಗಳಿಲ್ಲದ ಅಂತಹ ಪ್ರತಿಕ್ರಿಯೆಗಳ ಅಂತಿಮ ಪರಿಣಾಮ ಅಶಾಂತಿಯೇ ಆಗಿರುತ್ತದೆ. ನಾವು ಪ್ರತಿದಿನ ಧ್ಯಾನದ ಅಭ್ಯಾಸ ಮಾಡುವುದರಿಂದ ಅಂತಹ ಆಲೋಚನೆಗಳು ಮನಸ್ಸಿಗೆ ಬಂದರೂ ಅವುಗಳು ತಾವೇತಾವಾಗಿ ಶಮನಗೊಳ್ಳುತ್ತವೆ. ಯಾವುದೇ ವಿಧವಾದ ಮಾನಸಿಕ ಒತ್ತಡವಿಲ್ಲದಂತೆ ಶಾಂತಿಯಿಂದ ಇರಬೇಕಾದರೆ ಪ್ರತಿನಿತ್ಯ ಧ್ಯಾನದ ಅಭ್ಯಾಸ ಇಟ್ಟುಕೊಳ್ಳುವುದು ಒಂದು ಉತ್ತಮ ಉಪಾಯ. ಧ್ಯಾನವು ಮನಸ್ಸಿನ ಇಚ್ಛಾಶಕ್ತಿಯನ್ನು ಬಲಗೊಳಿಸುತ್ತದೆ. ಅದರಿಂದಾಗಿ ಜೀವನದ ಯಾವುದೇ ಸವಾಲುಗಳನ್ನು ಎದುರಿಸಲು ಸದಾ ಸರ್ವಸನ್ನದ್ಧರಾಗಿ ಇರುತ್ತೇವೆ.
ಧ್ಯಾನದ ಪಕ್ವಾವಸ್ಥೆಯೇ ಸಮಾಧಿ. ಛಲಬಿಡದ ಧ್ಯಾನಾಭ್ಯಾಸದಿಂದ ಮಾತ್ರ ಸಮಾಧಿಯ ಹಂತವನ್ನು ತಲಪಲು ಸಾಧ್ಯ. ಸಮಾಧಿಯು, ಮೇಲೆ ವಿವರವಾಗಿ ತಿಳಿಸಿದ, ಯೋಗದ ಎಲ್ಲ ಆದರ್ಶ ಗುಣಗಳನ್ನು ನಮ್ಮ ಗುಣಧರ್ಮವಾಗಿ ಇರುವಂತೆ ಭದ್ರವಾಗಿ ನೆಲೆಗೊಳಿಸುತ್ತದೆ. ನಮ್ಮ ಮನಸ್ಸಿನಿಂದ `ನಾನು’ ಮತ್ತು `ನನ್ನದು’ ಎನ್ನುವ ಅಹಂಕಾರದ ವಿಚಾರಗಳನ್ನು ಅಳಿಸಿಹಾಕುತ್ತದೆ. ಪ್ರತಿ ದಿನ ಭಗವಂತನ ಕುರಿತು ಧ್ಯಾನ ಮಾಡುವುದರ ಮೂಲಕ ಮನಸ್ಸಿನ ಸ್ವಾರ್ಥಪರ ಭಾವನೆಗಳನ್ನೆಲ್ಲ ಕಳೆದುಕೊಳ್ಳಬೇಕು. ಯೋಗದ ಮೂಲ ಉದ್ದೇಶವೆಂದರೆ ಅಹಂಕಾರವೇ ಮೊದಲಾದ ದುರ್ಗುಣಗಳನ್ನೆಲ್ಲ ಕಳೆದುಕೊಂಡು ಪವಿತ್ರಾತ್ಮರಾಗುವುದು. ಸಮಾಜಮುಖೀ ನಿಸ್ಸ್ವಾರ್ಥದ ಬದುಕೇ ಆರೋಗ್ಯಕರ ಬದುಕಿನ ಕೀಲಿಕೈ. `ತ್ಯಾಗವೊಂದರಿಂದ ಮಾತ್ರವೇ ನಾವು ಅಮೃತತ್ವವನ್ನು ಹೊಂದಲು ಸಾಧ್ಯ; ಆದರ್ಶ ಜೀವನವನ್ನು ನಡೆಸಲು ಸಾಧ್ಯ. ನಮ್ಮ ಆದರ್ಶ ಜೀವನವೇ ನಮ್ಮ ಆತ್ಮತೃಪ್ತಿಗೆ ಹೇತು. ಮತ್ತು, ಆತ್ಮತೃಪ್ತಿಯೇ ಆಧ್ಯಾತ್ಮಿಕ ಸಂಸ್ಕಾರದ ಲಕ್ಷಣ.
ಉಪಸಂಹಾರ
ಮೇಲೆ ತಿಳಿಸಿದ ಯೋಗಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮೊದಲಿಗೆ ಕಷ್ಟವಾಗಿ ಕಾಣಬಹುದು. ಆದರೆ ಅದರಿಂದ ಅನಂತರದಲ್ಲಿ ಆಯುರಾರೋಗ್ಯ ದೊರೆಯುವುದಂತೂ ನಿಶ್ಚಿತ. ಅಶಿಸ್ತಿನಿಂದ ಕೂಡಿದ ನಮ್ಮ ಜೀವನಕ್ರಮವನ್ನು ಶಿಸ್ತುಬದ್ಧಗೊಳಿಸಲು ಹೊರಟಾಗ ಮೊದಲಿಗೆ ದೇಹ, ಮನಸ್ಸು, ಭಾವನೆಗಳು ಪ್ರತಿಭಟಿಸಲೆಳಸುವುದು ಸ್ವಾಭಾವಿಕ. ಹಾಗೆಂದು ಅಭ್ಯಾಸವನ್ನೇ ಬಿಟ್ಟುಬಿಡಬಾರದು, ಹಠತೊಟ್ಟು ಮತ್ತೆಮತ್ತೆ ಯತ್ನವನ್ನು ಮಾಡುತ್ತ ಅವುಗಳನ್ನು ಗೆಲ್ಲಬೇಕು. ಅನಂತರ ಅಧಿಕಾಧಿಕ ಸಮಯವನ್ನು ಅಭ್ಯಾಸಕ್ಕಾಗಿ ವಿನಿಯೋಗಿಸಿದಾಗ ಆನಂದ, ಆರೋಗ್ಯ ಹೆಚ್ಚಿ ಶಾಂತಿ ನೆಮ್ಮದಿಯನ್ನು ಹೊಂದಲು ಸಾಧ್ಯವಾಗುತ್ತದೆ.
ನಮ್ಮ ಆರೋಗ್ಯದ ರಕ್ಷಣೆ ಬೇರೆಲ್ಲಿಯೂ ಇಲ್ಲ; ನಮ್ಮ ಕೈಯಲ್ಲೇ ಇದೆ. ಯೋಗಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನಷ್ಟೇ ಅಲ್ಲ, ಆರೋಗ್ಯದ ಪರಮಸ್ಥಿತಿಯಾದ ಪರಿಪೂರ್ಣ ಆನಂದವನ್ನು ಪಡೆಯಲು ಪ್ರತಿಯೊಬ್ಬರಿಗೂ ಸಾಧ್ಯ. ನಮ್ಮ ಆರೋಗ್ಯವನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ನಮ್ಮದೇ ಹೊಣೆ. ಪುರಂದರದಾಸರು ಹಾಡೊಂದರಲ್ಲಿ ಈ ರೀತಿಯಾಗಿ ಎಚ್ಚರಿಸಿದ್ದಾರೆ: ‘ಮಾನವಜನ್ಮ ದೊಡ್ಡದು ಅದ ಹಾಳುಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ’ – ಎಂದು. ಅವರ ಈ ಹಿತವಚನವನ್ನು ಅರ್ಥಮಾಡಿಕೊಂಡು ಭಗವಂತ ನಮಗಾಗಿ ಕರುಣಿಸಿದ ಈ ಮಾನವಜೀವನವನ್ನು ಸಾರ್ಥಕಮಾಡಿಕೊಳ್ಳುವುದರ ಕಡೆಗೆ ತುರ್ತಾಗಿ ನಾವೀಗ ಮನಸ್ಸುಮಾಡಬೇಕಾಗಿದೆ.
ಉತ್ತಮ ಲೇಖನ..
ಯೋಗ ಜೀವನದಲ್ಲಿದ್ದರೆ ಮಾತ್ರ ಮನುಷ್ಯ ಜೀವನ ಸಾರ್ಥಕ ..
ಅನಾದಿ ಕಾಲದಿಂದಲು ಆತ್ಮ ಎಂದರೇನು
ನಾನು ನಾನಾಗೆ ಇದ್ದು, ನಾನು ಮಾತ್ರ ನನ್ನನ್ನು ಗುರುತಿಸಬೇಕು. ಅಂತಃಕರಣದಲ್ಲಿ ವೃತ್ತಿ ಬದಲಾದರೂ, ಅಂತಃಕರಣ ಬದಲಾಗದೆ ಸ್ಥಿರವಾಗಿ ಇರುತ್ತದೆ. ಎಲ್ಲಕ್ಕೂ ನಾನು ಸಾಕ್ಷಿ ಮಾತ್ರ. ದೇಹ ಧ್ಯಾನ ಮಾಡುತ್ತದೆ, ಮನಸ್ಸು ಜಪ ಮಾಡುತ್ತದೆ, ನಾನು ಸಾಕ್ಷಿ ಮಾತ್ರ. ನಾನು ಎಚ್ಚರ. ಶಾಂತಿ ಸ್ಥಿತಿಯಲ್ಲಿ ನಾನು. ಅಂತಃಕರಣ ಶಾಂತ ಸ್ಥಿತಿ ಗುರುತಿಸುವಾಗ ನನ್ನ ಸ್ವಭಾವ ಏನು? ನನ್ನ ಸ್ವಭಾವ ಶಾಂತಿ ಇದ್ದರೆ ನಾನು ಶಾಂತಿ ಗುರುತಿಸುತ್ತೇನೆ.
ನಾನು ಸಾಕ್ಷಿ – ಇದು ಸತ್, ನಾನು ಎಚ್ಚರ – ಇದು ಚಿತ್, ನಾನು ಶಾಂತ – ಇದು ಆನಂದ. ಸತ್, ಚಿತ್, ಆನಂದದ ಸಂಗಮವೇ ಸಚ್ಚಿದಾನಂದ, ಇದು ನಾನೇ, ಸಚ್ಚಿದಾನಂದವು ನನ್ನ ಸ್ವರೂಪವೇ ಆಗಿದೆ. ಎಚ್ಚರದ ಇರುವಿಕೆ ಸತ್ ನಿಂದ ಕೂಡಿದೆ. ಶಾಂತವಾಗಿದೆ. ಸಚ್ಚಿದಾನಂದನಾಗಿದ್ದೇನೆ ಸ್ಥಿತಪ್ರಜ್ನನಾಗಿದ್ದೇನೆ. ಇದೇ ನಾನು.