ಜೀವನದ ಈ ಆರು ಪ್ರಮುಖ ಸಂಗತಿಗಳಲ್ಲಿ ನಾವು ಬಲಶಾಲಿಗಳಾದಷ್ಟೂ ನಮ್ಮ ಜೀವನ ಹೆಚ್ಚು ಶಾಂತಿ, ನೆಮ್ಮದಿ ಹಾಗೂ ಆರೋಗ್ಯದಿಂದ ಇರುತ್ತದೆ.
ಆರೋಗ್ಯದ ರಕ್ಷಣೆಯಲ್ಲಿ ಯೋಗಜೀವನಶೈಲಿಯ ಅನ್ವಯವನ್ನು ಸಂಗ್ರಹವಾಗಿ ಹೇಳುವುದಾದರೆ, ಪ್ರತಿಯೊಬ್ಬರು ಜೀವನದಲ್ಲಿ ಅನುಸರಿಸಲೇಬೇಕಾದ ಆರು ಸಂಗತಿಗಳಿವೆ. ಅವು ನಾವು ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಹಾಗೂ ದೈವಿಕವಾಗಿ ಸಬಲರಾಗುವುದು. ಅರ್ಥಾತ್ ದೇಹಬಲ, ಮನೋಬಲ, ಧನಬಲ, ಜನಬಲ, ಆತ್ಮಬಲ ಹಾಗೂ ದೈವಬಲಗಳೆಂಬ ಷಡ್ಬಲಗಳನ್ನು ಜೀವನದಲ್ಲಿ ಸಂಪಾದಿಸಿಕೊಳ್ಳುವುದು. ಜೀವನದ ಈ ಆರು ಪ್ರಮುಖ ಸಂಗತಿಗಳಲ್ಲಿ ನಾವು ಬಲಶಾಲಿಗಳಾದಷ್ಟೂ ನಮ್ಮ ಜೀವನ ಹೆಚ್ಚು ಶಾಂತಿ, ನೆಮ್ಮದಿ ಹಾಗೂ ಆರೋಗ್ಯದಿಂದ ಇರುತ್ತದೆ.
೧. ದೇಹಬಲ
`ಶರೀರಮಾದ್ಯಂ ಖಲು ಧರ್ಮಸಾಧನಮ್’; ಈ ಜನ್ಮದಲ್ಲಿ ಏನನ್ನೇ ಆಗಲಿ ಯಶಸ್ವಿಯಾಗಿ ಮಾಡಬೇಕಾದರೆ ಅದಕ್ಕೆ ಶರೀರವೇ ಸಾಧನವಾಗಿದೆ. ಶರೀರವು ಆರೋಗ್ಯವಾಗಿಯೂ ಬಲಿಷ್ಠವಾಗಿಯೂ ಇದ್ದರಷ್ಟೇ ಅದರಿಂದ ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯ. ಸದಾ ಕಾಯಿಲೆ ಕಸಾಲೆಗಳಿಗೆ ತುತ್ತಾಗುವ ಶರೀರ ನಮ್ಮೆಲ್ಲ ಕೆಲಸ ಕಾರ್ಯಗಳಿಗೆ ಅಡ್ಡಿಯೇ ಸರಿ. ಆದ್ದರಿಂದ ಯಾವತ್ತೂ ಶರೀರವನ್ನು ಆರೋಗ್ಯವಾಗಿಯೂ ಬಲಿಷ್ಠವಾಗಿಯೂ ಇರುವಂತೆ ಜಾಗ್ರತೆಯಿಂದ ಪೋಷಿಸಿ ಕೊಳ್ಳಬೇಕು, ರಕ್ಷಿಸಿಕೊಳ್ಳಬೇಕು.
ಅದಕ್ಕೆ ಮೊದಲನೆಯದಾಗಿ, ಯಾವತ್ತೂ ಪೌಷ್ಟಿಕಾಂಶಭರಿತ ಉತ್ತಮ ಆಹಾರವನ್ನೇ ಸೇವಿಸಬೇಕು. ಅಶುದ್ಧ ಕಲಬೆರಕೆಯ ಆಹಾರಗಳು, ಅತಿ ಮಸಾಲೆ, ಸಿಹಿ, ಜಿಡ್ಡು ಬಳಸಿ ತಯಾರಿಸಿದ ಆಹಾರಗಳು, ರಾಸಾಯನಿಕ, ಕೃತಕ ಬಣ್ಣ ಅಥವಾ ಸುವಾಸನೆ, ರಕ್ಷಿತ ಆಹಾರಗಳು ಅಥವಾ ಕೃತಕ ಪಾನೀಯಗಳು ಇವುಗಳೆಲ್ಲ ಶರೀರದ ಆರೋಗ್ಯಕ್ಕೆ ಹಾನಿಕಾರಕ. ಅವುಗಳಿಂದಾಗಿ ಶರೀರದ ಮೇಲಾಗುವ ದುಷ್ಪರಿಣಾಮಗಳಿಂದ ಪಾರಾಗಲು ನಮ್ಮ ಶರೀರ ಇನ್ನಿಲ್ಲದಂತೆ ಒತ್ತಡಕ್ಕೆ ಒಳಗಾಗುತ್ತದೆ; ತತ್ಪ್ರಯತ್ನದಲ್ಲಿ ಸೋತಾಗ ಅದು ಅನಾರೋಗ್ಯಕ್ಕೆ ತುತ್ತಾಗುತ್ತದೆ.
ಆಹಾರದ ಬಗೆಗೆ ಇನ್ನೂ ಒಂದು ಹೆಜ್ಜೆ ಮುಂದುವರಿದು ಹೇಳಬೇಕಾಗಿದೆ. ಅದೆಂದರೆ, ನಾವು ನಮ್ಮ ಆಹಾರವನ್ನು ಯಾವತ್ತೂ ನ್ಯಾಯವಾದ ಹಾದಿಯಲ್ಲಿ ಕಷ್ಟಪಟ್ಟು ದುಡಿದು ಸಂಪಾದಿಸಿಕೊಳ್ಳಬೇಕು. ಇಲ್ಲವಾದರೆ ನಾವು ಉಣ್ಣುವ ಪ್ರತಿಯೊಂದು ತುತ್ತೂ ಕೂಡ ನಮ್ಮಲ್ಲಿ ಯಾವತ್ತೂ ಅಪರಾಧಪ್ರಜ್ಞೆಯನ್ನು ಉಂಟುಮಾಡುತ್ತ ಮಾನಸಿಕ ಹಿಂಸೆಯಾಗಿ ಕಾಡುತ್ತದೆ.
ಭಾರತೀಯರಾದ ನಮಗೆ ಆಹಾರ ಕೇವಲ ಆಹಾರವಲ್ಲ. ಅದು ದೈವಾಂಶಭರಿತವಾದದ್ದು. ನಾವು ಸೇವಿಸುವ ಆಹಾರ ಸಮಗ್ರವಾಗಿ ನಮ್ಮ ವ್ಯಕ್ತಿತ್ವವನ್ನೇ ಪೋಷಿಸುವಂಥದ್ದು. ಆದ್ದರಿಂದ ನಾವು ಯಾವತ್ತೂ ಆಹಾರವನ್ನು ಸೇವಿಸುವಾಗ ಅದರ ಪಾವಿತ್ರ್ಯ ಕೆಡದಂತೆ ಜಾಗ್ರತೆ ವಹಿಸಬೇಕು. ಆಹಾರವನ್ನು ಶ್ರದ್ಧೆಯಿಂದ ಸೇವಿಸಬೇಕು. ಆಗ ಮಾತ್ರ ಉಂಡ ಅನ್ನ ನಮ್ಮನ್ನು ಪರಿಪೂರ್ಣವಾಗಿ ಪೋಷಿಸುತ್ತದೆ.
ಎರಡನೆಯದಾಗಿ, ಉಂಡ ಅನ್ನವನ್ನು ಯಥೋಚಿತವಾಗಿ ಶಾರೀರಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ಇಲ್ಲವಾದರೆ ಶರೀರ ಎಂದಿಗೂ ಆರೋಗ್ಯವಾಗಿಯೂ ಸದೃಢವಾಗಿಯೂ ಇರಲಾರದು. ಉಂಡ ಅನ್ನವನ್ನು ಮೈಬಗ್ಗಿಸಿ ದುಡಿದು ಅರಗಿಸಿಕೊಳ್ಳದೇ ಇದ್ದರೆ ಅದರಿಂದ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಅದಕ್ಕಾಗಿ ಬೆವರು ಬಸಿಯುವಂತೆ ದೇಹವನ್ನು ಬಳಸಿ ಕೆಲಸಕಾರ್ಯಗಳನ್ನು ಮಾಡಬೇಕು. ಹಳ್ಳಿಗಳಲ್ಲಾದರೆ ಮೈಬಗ್ಗಿಸಿ ದುಡಿಯಲು ವಿಪುಲ ಅವಕಾಶಗಳಿವೆ. ಆದರೆ ನಗರವಾಸಿಗಳು ಅಂತಹ ಅವಕಾಶಗಳಿಂದ ವಂಚಿತರಾಗಿದ್ದಾರೆ. ಅದಕ್ಕೆ ಕಾರಣ ನಗರವಾಸಿಗಳಲ್ಲಿ ದೇಹಕ್ಕಿಂತ ಮಾನಸಿಕ ದುಡಿಮೆಯೇ ಪ್ರಧಾನವಾಗಿರುವುದು. ಆದ್ದರಿಂದ, ಅಂತಹವರು ಶರೀರವನ್ನು ಆರೋಗ್ಯವಾಗಿಯೂ ಸದೃಢವಾಗಿಯೂ ಇಟ್ಟುಕೊಳ್ಳಬೇಕಾದರೆ ಪರ್ಯಾಯವಾಗಿ ಯೋಗಾಸನ, ಸೂರ್ಯನಮಸ್ಕಾರ, ವಾಕಿಂಗ್, ವ್ಯಾಯಾಮ, ಆಟೋಟಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ.
ಮೂರನೆಯದಾಗಿ, ದೇಹಕ್ಕೂ ಮನಸ್ಸಿಗೂ ಚೆನ್ನಾಗಿ ವಿಶ್ರಾಂತಿಯನ್ನು ನೀಡುವುದಕ್ಕೋಸ್ಕರ, ಪ್ರಮಾಣಬದ್ಧವಾಗಿ ನಿಶ್ಚಿಂತೆಯಿಂದ ನಿದ್ರೆಯನ್ನು ಮಾಡಬೇಕು. ನಿದ್ರಾಹೀನತೆಯಿಂದ ಬಳಲುತ್ತಿರುವವರು ಶವಾಸನ, ಪ್ರಾಣಾಯಾಮ, ಧ್ಯಾನದ ಕ್ರಮ ಪ್ರತಿದಿನ ಅಭ್ಯಾಸ ಮಾಡುವುದರಿಂದ ವಿಶೇಷ ಅನುಕೂಲ ವಾಗುತ್ತದೆ. ಪ್ರತಿದಿನ ಶವಾಸನ, ಪ್ರಾಣಾಯಾಮ ಹಾಗೂ ಧ್ಯಾನ ವನ್ನು ಮಾಡುವುದರಿಂದ ಮನಸ್ಸು ಹಗುರವಾಗಿ ಶಾಂತವಾಗಿದ್ದು, ಮಲಗಿದಾಗ ಬಹುಬೇಗ ಸೊಂಪಾದ ನಿದ್ರೆ ಬರುತ್ತದೆ.
ಹೀಗೆ ಪೌಷ್ಟಿಕ ಆಹಾರ ಸೇವನೆ, ಯೋಗಾಸನವೇ ಮೊದಲಾದ ವ್ಯಾಯಾಮಗಳು ಹಾಗೂ ಉತ್ತಮವಾದ ನಿದ್ರೆಯನ್ನು ಯಥೋಚಿತವಾಗಿ ಮಾಡುವುದರಿಂದ ಅಗತ್ಯವಾದ ದೇಹಬಲವನ್ನು ಹೊಂದಲು ಸಾಧ್ಯವಾಗುತ್ತದೆ.
೨ . ಮನೋಬಲ
ಇನ್ನು ಮನೋಬಲದ ಕುರಿತು. ಮನಸ್ಸನ್ನು ಪರಿಶುದ್ಧವಾಗಿ, ಪವಿತ್ರವಾಗಿ, ಆರೋಗ್ಯವಾಗಿ ಇಟ್ಟುಕೊಳ್ಳದೇ ಇದ್ದರೆ ಇಡೀ ಜೀವಮಾನವನ್ನೇ ನಮ್ಮ ಕೈಯಾರೆ ಹಾಳುಮಾಡಿಕೊಳ್ಳುತ್ತೇವೆ. ಆರೋಗ್ಯಯುಕ್ತ ದೃಢಮನಸ್ಸು ನಮ್ಮದಾಗಬೇಕಾದರೆ, ನಾವು ನಮ್ಮ ದೇಹಬಲವನ್ನು ವೃದ್ಧಿಸಿಕೊಳ್ಳುವಂತೆ, ಮನಸ್ಸಿಗೂ ಕೂಡ ಉತ್ತಮ ಆಹಾರ, ಚಟುವಟಿಕೆ ಹಾಗೂ ವಿಶ್ರಾಂತಿಯನ್ನು ಶ್ರದ್ಧೆಯಿಂದ ನೀಡಬೇಕು.
ಮನಸ್ಸಿಗೆ ಪೌಷ್ಟಿಕ ಆಹಾರ ಎಂದರೆ ಅದು ಉತ್ತಮ, ಉದಾತ್ತ, ಸಂಸ್ಕಾರಪ್ರದ ವಿಚಾರಗಳನ್ನು ಮನಸ್ಸಿಗೆ ನೀಡುವುದಾಗಿದೆ. ಅದಕ್ಕಾಗಿ ಯಾವತ್ತೂ ಉತ್ತಮ ಸಂಸ್ಕಾರವನ್ನು ನೀಡುವಂತಹ ಕಾರ್ಯಕ್ರಮಗಳಲ್ಲಿ, ಉಪನ್ಯಾಸಗಳಲ್ಲಿ, ಸತ್ಸಂಗಗಳಲ್ಲಿ ಭಾಗವಹಿಸಬೇಕು; ಪುಸ್ತಕಗಳನ್ನು ಓದಬೇಕು; ಸ್ನೇಹಿತರ ಜೊತೆಗಾಗಲಿ ಬಂಧುಗಳ ಅಥವಾ ಹಿರಿಯರ ಜೊತೆಗಾಗಲಿ ವಿಚಾರವಿನಿಮಯ ಮಾಡಿಕೊಳ್ಳಬೇಕು, ಚರ್ಚಿಸಬೇಕು. ಅನ್ಯಥಾ ಅನೈತಿಕ, ಅಸಭ್ಯ, ಅಸಂಸ್ಕೃತ ಸಂಗತಿಗಳಿಗೆ ಯಾವತ್ತೂ ಅವಕಾಶವನ್ನು ನೀಡಬಾರದು. ಯಾವತ್ತೂ ಪವಿತ್ರವಾದ ವಿಚಾರ ಭಾವನೆಗಳನ್ನೇ ಹೊಂದಿರಬೇಕು. ಇಲ್ಲವಾದರೆ ಅವುಗಳ ಜಾಗವನ್ನು ಅನೈತಿಕ, ಅಸಭ್ಯ, ಅಸಂಸ್ಕೃತ ಸಂಗತಿಗಳು ಆಕ್ರಮಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಹಾಗಾಗಲು ಅವಕಾಶವನ್ನು ನೀಡಬಾರದು.
ಮನಸ್ಸಿನ ಉತ್ತಮ ಚಟುವಟಿಕೆ, ವ್ಯಾಯಾಮ ಎಂದರೆ – ಯಾವತ್ತೂ ಆದರ್ಶವಾದ ಉದಾತ್ತವಾದ ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಗುವಂತೆ ಸದಾ ಚಿಂತಿಸುವುದು, ಯೋಚಿಸುವುದು. ಯಾವುದೇ ಕಾರ್ಯಗಳನ್ನು ಮಾಡುವುದಿದ್ದರೂ ಅದರಲ್ಲಿ ಸ್ವಾರ್ಥಪರ ಯೋಚನೆಗಳನ್ನು ಬಿಟ್ಟು ಸದಾ ಸಮಾಜದ, ಹತ್ತುಜನರ ಹಿತವನ್ನು ಬಯಸಬೇಕು. ಆಗಲೇ ನಮ್ಮ ಜೀವನ ಆದರ್ಶವಾಗುವುದು, ಸಾರ್ಥಕವಾಗುವುದು.
ಮನಸ್ಸಿನ ವಿಶ್ರಾಂತಿ ಎಂದರೆ ಮನಸ್ಸನ್ನು ಶಾಂತವಾಗಿರಿಸಿ ಆನಂದವನ್ನು ಅನುಭವಿಸುವುದು. ಪ್ರಾಪಂಚಿಕ ವಿಷಯವಸ್ತುಗಳ ಬಗೆಗೆ ಮನಸ್ಸು ವ್ಯವಹರಿಸುತ್ತಿರುವಷ್ಟೂ ಕಾಲ ಅದು ಎಂದಿಗೂ ಶಾಂತತೆಯನ್ನೂ ಆನಂದವನ್ನೂ ಅನುಭವಿಸಲಾರದು. ಬದಲಿಗೆ, ಮನಸ್ಸು ಅಂತರಾತ್ಮನ ಅಥವಾ ಪರಮಾತ್ಮನ ಕುರಿತು ಚಿಂತಿಸುತ್ತಿದ್ದರೆ ಆಗ ಅದು ಸಹಜವಾಗಿಯೇ ಶಾಂತತೆಯನ್ನೂ ಆನಂದವನ್ನೂ ಅನುಭವಿಸುತ್ತಿರುತ್ತದೆ. ಅದಕ್ಕಾಗಿ ಪರಮಾತ್ಮನ ಬಗ್ಗೆ ಹಾಗೂ ಅವನದೇ ಅಂಶವಾದ ನಮ್ಮ ಅಂತರಾತ್ಮನ ಬಗೆಗೂ ಅಚಲವಾದ ವಿಶ್ವಾಸವನ್ನೂ ಶ್ರದ್ಧೆಯನ್ನೂ ಹೊಂದಿರಬೇಕು. ಆತ್ಮ-ಪರಮಾತ್ಮರಲ್ಲಿ ಅದ್ವೈತವನ್ನು ಕಾಣುತ್ತಿರಬೇಕು. ಆತ್ಮ-ಪರಮಾತ್ಮರ ಅನುಭವವನ್ನು ಹೊಂದುತ್ತಿರಬೇಕು. ಅದಕ್ಕಾಗಿ ಸದಾ ಆಧ್ಯಾತ್ಮಿಕ ಸಂಗತಿಗಳ ಕುರಿತು ಚಿಂತನ ಮಂಥನ ನಡೆಸುತ್ತಿರಬೇಕು. ಆಧ್ಯಾತ್ಮಿಕ ಸಂಗತಿಗಳ ಕುರಿತು ಆಸಕ್ತಿ ತಳೆದು ಅಧ್ಯಯನಗಳನ್ನು ನಡೆಸಬೇಕು. ತನ್ಮೂಲಕ ಮಾನಸಿಕ ಶಾಂತಿಯನ್ನೂ, ಆನಂದವನ್ನೂ ಅನುಭವಿಸಲು ಸಾಧ್ಯವಾಗುತ್ತದೆ.
೩.ಧನಬಲ
ನಾವು ಸಾಮಾಜಿಕ ವ್ಯಾವಹಾರಿಕ ಜೀವನವನ್ನು ನಡೆಸುವಷ್ಟೂ ಕಾಲ ಧನಬಲಕ್ಕೆ ವಿಶೇಷ ಮಹತ್ತ್ವವಿದೆ. ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ಹಣಬಲವಿಲ್ಲದೆ ಏನನ್ನೂ ಸಾಧಿಸಲಾಗದು. ಹಣ ಕಂಡರೆ ಹೆಣವೂ ಬಾಯ್ಬಿಡುವುದು! ಆದ್ದರಿಂದಲೇ, ಶಾಂತಿ, ನೆಮ್ಮದಿ, ಸಂತೋಷದ ವಿಷಯದಲ್ಲಿ ನಾವು ಧನಬಲವನ್ನು ಎಂದಿಗೂ ನಿರ್ಲಕ್ಷಿಸಲಾಗದು.
ವಿತ್ತಸಂಪತ್ತನ್ನು ಗಳಿಸಲು ನಮಗಿರುವ ಹಾದಿ ನಮ್ಮ ವೃತ್ತಿಜೀವನ. ದುಡಿಮೆಗಾಗಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ವೃತ್ತಿಯಿದೆ. ಅದನ್ನು ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ಮಾಡಬೇಕು. ಎಂದಿಗೂ ವೃತ್ತಿಯ ಬಗ್ಗೆ ಅನಾದರವನ್ನು ತೋರಬಾರದು. ನಮ್ಮನಮ್ಮ ವೃತ್ತಿಯನ್ನು ನಾವು ಪ್ರೀತಿಸಬೇಕು, ಗೌರವಿಸಬೇಕು. ಆಗಲೇ ನಮ್ಮ ವೃತ್ತಿ ನಮ್ಮ ಜೀವನಕ್ಕೆ ಆಧಾರವಾಗುವುದು; ನಮ್ಮ ಗಳಿಕೆ ವೃದ್ಧಿಸುವುದು. ಲೌಕಿಕ ಸಮಾಜದಲ್ಲಿ ಎಲ್ಲರೂ ಶ್ರೀಮಂತರಾಗಿರಲು ಸಾಧ್ಯವಿಲ್ಲ. ಇದು ವಾಸ್ತವ, ಸತ್ಯ. ಹಾಗೆಂದು ಕೊರಗಬೇಕಾಗಿಯೂ ಇಲ್ಲ. ಶ್ರದ್ಧೆಯ, ಪ್ರಾಮಾಣಿಕ ದುಡಿಮೆಗೆ ಯಾವತ್ತೂ ಸೂಕ್ತ ಪ್ರತಿಫಲ ಇದ್ದೇ ಇದೆ. ಭಗವಂತ ಕರುಣಿಸುವ ಅದರಲ್ಲೇ ತೃಪ್ತಿಯಿಂದ ಜೀವನವನ್ನು ಮಾಡಬೇಕು. ಆಗಲೇ ಮಾನಸಿಕ ನೆಮ್ಮದಿ. ಮಾನಸಿಕ ನೆಮ್ಮದಿಯೇ ಅಷ್ಟೈಶ್ವರ್ಯಗಳಿಗಿಂತ ಮಿಗಿಲಾದುದು.
ಧನಬಲವನ್ನು ಸಂಚಯಿಸಿಕೊಳ್ಳಬೇಕಾದರೆ ನ್ಯಾಯವಾದ ಹಾದಿಯಲ್ಲಿ ಕಷ್ಟಪಟ್ಟು ಗಳಿಸಿದ ಸಂಪತ್ತನ್ನು ಬೇಕಾಬಿಟ್ಟಿ ಖರ್ಚುಮಾಡದೆ ಉಳಿಸಿಕೊಳ್ಳಬೇಕು. ಅದಕ್ಕಾಗಿ ಅತ್ಯಂತ ಸರಳವಾದ ಜೀವನವನ್ನು ನಡೆಸಬೇಕು. ಎಂದರೆ ಆಹಾರ ವಿಹಾರಗಳಲ್ಲಿ, ಉಡುಗೆ ತೊಡುಗೆಯಲ್ಲಿ, ವಸತಿ ವಾಹನಗಳ ವಿಚಾರದಲ್ಲಿ ಸರಳತೆಯನ್ನು ರೂಢಿಸಿಕೊಳ್ಳಬೇಕು. ಕೆಲವರಿಗೆ ದುಡಿದು ಸಂಪಾದಿಸಿದ ಹಣವನ್ನು ಹೇಗೆ ಖರ್ಚು ಮಾಡುವುದು ಎಂದು ಚಿಂತೆಯಾದರೆ, ಇನ್ನು ಕೆಲವರಿಗೆ ಭೋಗಜೀವನವನ್ನು ನಡೆಸಲು ಹಣವನ್ನು ಯಾವ ಯಾವ ಹಾದಿಯಿಂದ ಹೇಗೆ ಹೇಗೆ ಸಂಪಾದಿಸಬಹುದು ಎಂಬ ಚಿಂತೆ ಕಾಡುತ್ತಿರುತ್ತದೆ. ಇಂತಹ ಪ್ರವೃತ್ತಿಯಿಂದ ಆರ್ಥಿಕಪರಿಸ್ಥಿತಿಯಲ್ಲಿ ಸ್ಥಿರತೆ ಎಂದಿಗೂ ಬರದು.
ಒಟ್ಟಿನಲ್ಲಿ, ಆರ್ಥಿಕವಾಗಿ ಸಬಲರಾಗಬೇಕಾದರೆ ಸರಳವಾದ ಜೀವನವನ್ನು ನಡೆಸುತ್ತ, ಅಶನ, ವಸನ, ವಸತಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಖರ್ಚುಮಾಡಬೇಕು. ಉಳಿದಂತೆ ಎಷ್ಟು ಸಾಧ್ಯವೋ ಅಷ್ಟು ಉಳಿತಾಯ ಮಾಡುವುದನ್ನು ಕಲಿಯಬೇಕು. ಎಷ್ಟೇ ದೊಡ್ಡ ಮೊತ್ತದ ಗಳಿಕೆಯನ್ನು ಮಾಡುತ್ತಿದ್ದರೂ ಕೂಡ ಸರಳವಾದ ಜೀವನವನ್ನೇ ನಡೆಸಬೇಕು. ಉಳಿಕೆಯನ್ನು ಉಳಿತಾಯಮಾಡಬೇಕು. ಉಳಿಸಿದ ಹಣ ಗಳಿಸಿದ ಹಣವೇ ಸರಿ.
ಇನ್ನೊಂದು ಸಂಗತಿಯೆಂದರೆ – ಗಳಿಸಿದ ಮತ್ತು ವ್ಯಯಿಸಿದ ಹಣಕ್ಕೆ ತಪ್ಪದೆ ಲೆಕ್ಕವನ್ನು ಬರೆದಿಟ್ಟುಕೊಳ್ಳಬೇಕು; ಮತ್ತು ನಿಯಮಿತವಾಗಿ ಅದನ್ನು ಪರಾಮರ್ಶಿಸಬೇಕು. ಅದರಿಂದ ಜೀವನದಲ್ಲಿ ಆರ್ಥಿಕ ಶಿಸ್ತನ್ನು ಪಾಲಿಸಲು ಸಾಧ್ಯವಾಗುತ್ತದೆ. ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ.
೪.ಜನಬಲ
ಜನಬಲ ಎಂದರೆ ಸಾಮಾಜಿಕ ಭದ್ರತೆ. ಜೀವನದಲ್ಲಿ ಸಾಮಾಜಿಕ ಭದ್ರತೆ ಇಲ್ಲವಾದರೆ ಸಮಾಜಜೀವನದಲ್ಲಿ ಭಯ ಯಾವತ್ತೂ ನಮ್ಮನ್ನು ಕಾಡುತ್ತಿರುತ್ತದೆ. ಸಮಾಜದಲ್ಲಿ ನಾವು ನಿರ್ಭಯವಾಗಿ ಜೀವನವನ್ನು ನಡೆಸಬೇಕಾದರೆ ಜನಮನ್ನಣೆಯನ್ನು ಗಳಿಸಿಕೊಳ್ಳಬೇಕು. ಜನರು ಆದರಿಸುವುದು, ಗೌರವಿಸುವುದು ಯಾವತ್ತೂ ಸರಳವಾದ ಆದರ್ಶವಾದ ನೀತಿಯುತ ಜೀವನವನ್ನು ನಡೆಸಿದಾಗ ಮಾತ್ರ. ನಮ್ಮ ರೂಪವನ್ನಾಗಲಿ, ದೈಹಿಕ ಸಾಮರ್ಥ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ ಸಮಾಜ ಎಂದಿಗೂ ಗೌರವಿಸುವುದಿಲ್ಲ; ಅವುಗಳ ಬಗೆಗೆ ಅದು ಅಸೂಯೆ, ಈರ್ಷ್ಯೆ ಇತ್ಯಾದಿ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ತೋರೀತು. ಆದ್ದರಿಂದ, ಸಾಮಾಜಿಕ ಜೀವನವನ್ನು ನಡೆಸುವಾಗ ಸದಾ ನ್ಯಾಯ ನೀತಿ ಧರ್ಮಗಳನ್ನು ಬಿಟ್ಟು ಜೀವಿಸಬಾರದು. ಯಾವತ್ತೂ ಸಾಮಾಜಿಕ ಹಾಗೂ ವೈಯಕ್ತಿಕ ಜೀವನಮೌಲ್ಯಗಳನ್ನು, ಅಂದರೆ, ಅಷ್ಟಾಂಗಯೋಗದಲ್ಲಿ ವಿವರವಾಗಿ ತಿಳಿಸಿರುವ ಯಮ, ನಿಯಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶುದ್ಧಚಾರಿತ್ರ್ಯವಂತರಾಗಿ ಸಮಾಜಜೀವನವನ್ನು ನಡೆಸಬೇಕು. ಮನಸಾ, ವಾಚಾ, ಕಾಯೇನ ನಾವು ಪವಿತ್ರಾತ್ಮರಾಗಿ ಇರಬೇಕು. ಆಗ ಇಡೀ ಸಮಾಜವೇ ನಮ್ಮ ಬೆಂಬಲಕ್ಕೆ ಬರುವುದು; ಸಮಾಜದಲ್ಲಿ ನಿರ್ಭಯವಾಗಿ, ನೆಮ್ಮದಿಯಿಂದ ಜೀವನವನ್ನು ನಡೆಸಲು ಸಾಧ್ಯವಾಗುವುದು.
೫.ಆತ್ಮಬಲ
ಪ್ರತಿಯೊಬ್ಬರಲ್ಲೂ ‘ನಾನು ಒಂದು ಉತ್ತಮವಾದ ಆದರ್ಶವಾದ ಜೀವನವನ್ನು ನಡೆಸಬೇಕು, ಸಾಮಾಜಿಕವಾಗಿ ಜನಮನ್ನಣೆಯನ್ನೂ, ಗೌರವವನ್ನೂ ಗಳಿಸಬೇಕು’ – ಎಂಬ ಆಂತರಿಕ ತುಡಿತ ಇದ್ದೇ ಇರುತ್ತದೆ. ಈ ಅಭಿಲಾಷೆ ಪೂರ್ಣಗೊಂಡಾಗಲಷ್ಟೆ ಆತ್ಮತೃಪ್ತಿ ಲಭಿಸುತ್ತದೆ. ಮಾನಸಿಕ ಸಂತೋಷ ಸಿಗುತ್ತದೆ. ಇಲ್ಲವಾದರೆ ಆತ್ಮಬಲ ಕುಗ್ಗಿ ಜೀವನದಲ್ಲಿ ಸದಾ ಕೊರಗನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಆರೋಗ್ಯಕರ ಜೀವನವನ್ನು ನಡೆಸಬೇಕಾದರೆ ಆತ್ಮಬಲವನ್ನು ವೃದ್ಧಿಸಿಕೊಳ್ಳುವುದೂ ಕೂಡ ಅತ್ಯಂತ ಪ್ರಮುಖ ಸಂಗತಿಯಾಗುತ್ತದೆ.
ಆತ್ಮಬಲ ಒದಗಿಬರುವುದು ಆದರ್ಶವಾದ ಜೀವನವನ್ನು ನಡೆಸುವ ಉತ್ಕಟೇಚ್ಛೆಯನ್ನು ಹೊಂದಿದ್ದಾಗ ಮಾತ್ರ. ಯಾವ ಜೀವನವನ್ನು ಸಮಾಜದಲ್ಲಿ ಇತರರು ಅನುಕರಿಸಲು ಇಚ್ಛಿಸುತ್ತಾರೋ ಮತ್ತು ಅಂತಹ ಜೀವನದಿಂದ ಅವರಿಗೆ ಸಾಮಾಜಿಕ ಔನ್ನತ್ಯವನ್ನು ಹೊಂದಲು ಸಾಧ್ಯವಾಗುತ್ತದೋ ಅಂತಹ ಜೀವನ ಆದರ್ಶವಾಗುತ್ತದೆ; ಇಲ್ಲವಾದರೆ ಹತ್ತರೊಂದಿಗೆ ಹನ್ನೊಂದು ಎಂಬಂತೆ ನಶಿಸಿಹೋಗುತ್ತದೆ. ಆದ್ದರಿಂದ ಆದರ್ಶವಾದ ಜೀವನವನ್ನೇ ನಡೆಸಲು ನಿರಂತರವಾಗಿ ಪ್ರಯತ್ನಿಸುತ್ತಿರಬೇಕು. ಉತ್ತಮವಾದ ಆದರ್ಶವಾದ ಜೀವನವನ್ನು ನಡೆಸಿದಾಗ `ನಾನು ನಿಸ್ಸಂಶಯವಾಗಿಯೂ ಒಂದು ಉತ್ತಮವಾದ ಸಾರ್ಥಕ ಜೀವನವನ್ನು ನಡೆಸುತ್ತಿದ್ದೇನೆ’ ಎಂಬ ಆತ್ಮತೃಪ್ತಿ ಹಾಗೂ ನೆಮ್ಮದಿ ದೊರೆಯುತ್ತದೆ. ಸಾರ್ಥಕಜೀವನ ನಡೆಸಿದ ತೃಪ್ತಿ ಇಲ್ಲವಾದರೆ ಜೀವನ ಸದಾ ಚಿಂತೆಯ ಗೂಡಾಗಿರುತ್ತದೆ.
೬.ದೈವಬಲ
`ತೇನ ವಿನಾ ತೃಣಮಪಿ ನ ಚಲತಿ’ – ದೇವರ ಇಚ್ಛೆಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಕೂಡ ಅಲುಗಾಡದು. ಈ ಸೃಷ್ಟಿ ಭಗವಂತನದು. ಅವನಿಗೆ ಏನು ಬೇಕೋ, ಹೇಗೆ ಬೇಕೋ ಹಾಗೆಯೇ ಎಲ್ಲವೂ ಆಗುತ್ತದೆ. ಯಾರು, ಎಷ್ಟೇ ತಿಪ್ಪರಲಾಗ ಹಾಕಿದರೂ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಜಗನ್ನಿಯಾಮಕ ರಚಿಸಿರುವ ಈ ಜೀವನವೆಂಬ ಸುಂದರ ಕಾವ್ಯದ ಕವಿ ಅವನೇ ಹೊರತು ನಾವಲ್ಲ. ನಾವು ಕೇವಲ ಅವನ ಕೈಯೊಳಗಿನ ಲೇಖನಿಗಳಷ್ಟೆ. ಲೇಖನಿ ಯಾವ ಯಾವ ಬಗೆಯಲ್ಲಿ ಕಾವ್ಯ ಬರೆದರೂ ಲೇಖನಿಯೇ ಎಂದಿಗೂ ಕವಿಯಾಗಲು ಸಾಧ್ಯವಿಲ್ಲವಷ್ಟೆ! ಹಾಗೆಯೇ ನಮ್ಮ ಜೀವನವೂ ಕೂಡ. ನಮ್ಮ ಜೀವನ ಹೇಗೆ ಇರಬೇಕು ಎಂದು ಭಗವಂತ ಆಗಲೇ ನಿಶ್ಚಯಿಸಿ ಆಗಿದೆ. ಅದರಂತೆ ಏನು ನಡೆಯಬೇಕೋ ಅದು ನಡೆದೇ ತೀರುತ್ತದೆ. ಈ ವಾಸ್ತವ ಸತ್ಯವನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು ಮತ್ತು ಆ ನಂಬಿಕೆಯಿಂದಲೇ ಜೀವನವನ್ನು ನಡೆಸಬೇಕು.
ದೈವಕೃಪೆ ಯಾವತ್ತೂ ನಮ್ಮದಾಗಿರಬೇಕಾದರೆ ಸದಾ ಅವನ ನಿಯಮಗಳಿಗೆ ಅನುಸಾರವಾಗಿ ಜೀವನವನ್ನು ನಡೆಸಬೇಕು. ಇಲ್ಲವಾದರೆ ಜೀವನದಲ್ಲಿ ದುಃಖಗಳು, ಕಷ್ಟಗಳು ಶಿಕ್ಷೆಯ ರೂಪದಲ್ಲಿ ಬರುವುದ ನಿಶ್ಚಿತ. ದೇವರ ನಿಯಮಗಳು ಅಂದರೆ ಅದು ನ್ಯಾಯ, ಧರ್ಮ, ನೀತಿಗಳು. ಜೀವನದಲ್ಲಿ ಯಾವತ್ತು ಅವುಗಳನ್ನು ಮೀರಿ ಹೋಗಬಾರದು.