ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೧೪ರಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ
ಅವಳ ಬದುಕಿನ ಪ್ರತಿ ಮಿಡಿತವನ್ನೂ ತಿಳಿದವುಗಳೆಂದರೆ ಆ ಕೋಣೆಯ ಗೋಡೆಗಳು. ಅವಳ ಬದುಕಿನ ಎಲ್ಲಾ ಘಟನೆಗಳನ್ನು ಅದರಷ್ಟು ಸ್ಪಷ್ಟವಾಗಿ ತಿಳಿದವರು ಯಾರೂ ಇರಲಿಲ್ಲ….
ಇಷ್ಟು ಹೊತ್ತು ಕಥೆ ಹೇಳುತ್ತಿದ್ದ ಗೋಡೆಗಳೀಗ ಯಾವುದೋ ಶಬ್ದಕ್ಕೆ ಅಂಜಿ ಮೌನವಾದವು.
ಅಡಿಕೆ ತೋಟದ ಮಧ್ಯೆ ಹೆಣ್ಮಕ್ಕಳ ಹಣೆಯ ಮೇಲಿನ ಕುಂಕುಮದಂತೆ ಕಾಣುವ ಮಂಗಳೂರಿನ ಹೆಂಚಿನ ಸುಂದರ ಮನೆ. ದೊಡ್ಡ ಕಬ್ಬಿಣದ ಗೇಟಿನ ಹೊರಗೆ ‘ಪಾರ್ವತಿ ಸದನ’ ಎಂಬ ಹೆಸರು ಹೊತ್ತ ಬೋರ್ಡು. ಗೇಟು ಸರಿಸಿ ಅಂಗಳಕ್ಕೆ ಕಾಲಿಟ್ಟರೆ ಸುತ್ತೆಲ್ಲ ಅರಳಿ ನಗುವ ಮಲ್ಲಿಗೆ, ಜಾಜಿ, ಗುಲಾಬಿ ಹೂಗಳು; ಅವುಗಳೊಡನೆ ಸ್ಪರ್ಧೆಗಿಳಿದಂತೆ ಕಾಣುವ ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ ಮನಸ್ಸಿಗೆ ಮುದ ನೀಡುವಂತಿತ್ತು. ಮನೆಯೆದುರಿನ ಅಂಗಳಕ್ಕೆ ತಾಗಿಕೊಂಡಂತೆ ಇರುವ ಇನ್ನೊಂದು ವಿಶಾಲವಾದ ಅಡಿಕೆ ಅಂಗಳ ಮನೆಯ ಯಜಮಾನನ ವರಮಾನವನ್ನು ಅಂದಾಜಿಸುವಂತೆ ಮಾಡುತ್ತಿತ್ತು. ಮಳೆಗಾಲವಾದ್ದರಿಂದ ಇಳಿಸಿ ಕಟ್ಟಿದ ಮನೆಯ ಹೊರ ಜಗಲಿಯಲ್ಲೆಲ್ಲಾ ಒಣ ಹಾಕಿದ ಬಟ್ಟೆಗಳೇ ಕಾಣಿಸಿ ಮನೆಯ ಬಾಗಿಲನ್ನು ಹೊರ ಜಗತ್ತಿಗೆ ಕಾಣದಂತೆ ಮಾಡಿದ್ದವು.
“ಕಾವೇರೀ… ಎಲ್ಲಿದ್ದೀಯಾ?… ಒಂದು ತೊಟ್ಟು ಕಾಫಿ ಕೊಡು” ಎಂಬ ಸ್ವರಕ್ಕೆ ಉತ್ತರವಾಗಿ ಸ್ಟೀಲಿನ ಪಾತ್ರೆ, ಲೋಟಗಳ ಸದ್ದು ಅಡುಗೆ ಮನೆಯಲ್ಲಿ ಕೇಳತೊಡಗಿತು.
ಪಕ್ಕನೆ ಮನೆಯೊಳಗೆ ಬಂದವರಿಗೆ ಬಟ್ಟೆಗಳ ಕಮಟು ವಾಸನೆಯ ಜೊತೆಗೆ ಡೆಟ್ಟಾಲಿನ ವಾಸನೆಯೂ ಸೇರಿ ಒಂದು ವಿಚಿತ್ರ ಭಾವನೆಯನ್ನು ಮೂಡಿಸಿದರೆ, ಈ ಮನೆಯಲ್ಲೇ ವಾಸಿಸುವ ನರಹರಿ ಮತ್ತು ಕಾವೇರಿಗೆ ಇದು ಅಭ್ಯಾಸವಾಗಿ ಹೋಗಿತ್ತು. ಕೋಣೆಯಲ್ಲಿ ಹಾಕಿದ್ದ ಒಂಟಿ ಮಂಚದ ಮೇಲೆ ಕೇವಲ ಮೂಳೆ ಚರ್ಮವನ್ನು ಮಾತ್ರ ಹೊದ್ದ ಜೀವವೊಂದು ಮಲಗಿತ್ತು. ಕಳೆದ ಮೂರು ವರ್ಷಗಳಿಂದ ಈ ಮನೆಗೆ ಯಾರೇ ಬಂದರೂ ಈ ದೃಶ್ಯದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ.
ಒಂದು ಕಾಲದಲ್ಲಿ ಇಡೀ ಮನೆಯ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತು ಸಂಸಾರವನ್ನು ನಡೆಸಿದ ಪಾರ್ವತಿ, ಇಡೀ ಊರಿಗೆ ಪಾರ್ತತ್ತೆಯಾಗಿ ಬದಲಾಗಿ ಇಂದು ತಾನಾಗಿ ಹಾಸಿಗೆ ಬಿಟ್ಟು ಮೇಲೇಳಲಾರದ ಸ್ಥಿತಿಯಲ್ಲಿ ಅರೆಗಣ್ಣು ಮುಚ್ಚಿ ತೆರೆದು ಮಾಡುತ್ತಾ ಮಲಗಿದ್ದಳಲ್ಲಿ.
ಅವಳ ಬದುಕಿನ ಪ್ರತಿ ಮಿಡಿತವನ್ನೂ ತಿಳಿದವುಗಳೆಂದರೆ ಆ ಕೋಣೆಯ ಗೋಡೆಗಳು. ಅವಳ ಬದುಕಿನ ಎಲ್ಲಾ ಘಟನೆಗಳನ್ನು ಅದರಷ್ಟು ಸ್ಪಷ್ಟವಾಗಿ ತಿಳಿದವರು ಯಾರೂ ಇರಲಿಲ್ಲ. ನೀವು ಕೇಳುತ್ತೀರೆಂದರೆ ಈಗಲೂ ಅವುಗಳು ಅದೇ ಕಥೆಯನ್ನು ಪುನರಾವರ್ತಿಸಿಯಾವು. ಕಳೆದ ಎಪ್ಪತ್ತು ವರ್ಷಗಳಿಂದ ಅವಳ ನೋವನ್ನು ಹಂಚಿಕೊಂಡ ಈ ಗೋಡೆಗಳಿಗೆ ಅವಳ ಕಥೆ ಹೇಳುವುದನ್ನು ಬಿಟ್ಟು ಬೇರೇನು ಕೆಲಸವೂ ಇರಲಿಲ್ಲ.
ಇಪ್ಪತ್ತೆಂಟರ ಯುವಕ ತಿಮ್ಮಣ್ಣನ ಹೆಂಡತಿಯಾಗಿ ಪಾರ್ವತಿ ಈ ಮನೆಗೆ ಸೊಸೆಯಾದಾಗ ಅವಳಿಗಿನ್ನೂ ಹನ್ನೆರಡರ ಹರೆಯ. ಮದುವೆ ಎಂದರೆ ಸಿಹಿ ತಿಂಡಿ ಮಾಡ್ತಾರೆ ಎಂಬ ಆಸೆಯಿಂದ ಒಪ್ಪಿಕೊಂಡಿದ್ದಳಲ್ಲದೆ ಬೇರೇನೂ ಗೊತ್ತಿರಲಿಲ್ಲ. ಇನ್ನೂ ಮೈ ನೆರೆಯದ ಹುಡುಗಿ ಎಂದು ತವರಲ್ಲೇ ಉಳಿದಿದ್ದಳು. ತಿಮ್ಮಣ್ಣನಿಗೂ ಕೊಂಚ ಹಲ್ಲೆತ್ತರದ, ಕೋಲು ಕೋಲಾಗಿರುವ ಪಾರ್ವತಿಯೇನೂ ಆಕರ್ಷಣೆಯ ಕೇಂದ್ರವಾಗಿರಲಿಲ್ಲ.
ಮದುವೆಯಾಗಿ ಭರ್ತಿ ಎರಡು ವರ್ಷವೇ ಕಳೆದಿತ್ತು ಅವಳು ಮೈ ನೆರೆಯಲು. ಆಗಲೇ ಅವಳ ಗಂಡನ ಮನೆಯ ಕಡೆಯವರೆಲ್ಲರೂ ನಮ್ಮ ತಿಮ್ಮಣ್ಣನಿಗೆ ಬೇರೆ ಮದುವೆ ಮಾಡೋದೇ ಒಳ್ಳೇದು ಅಂತ ಕಾಣುತ್ತೆ ಎಂದಾಡಿಕೊಳ್ಳುತ್ತಿದ್ದುದು ಪಾರ್ವತಿಯ ತವರಿನವರ ಕಿವಿಗೂ ಬಿದ್ದಿತ್ತು. ಊರಲ್ಲಿ ಸ್ವಲ್ಪ ದೊಡ್ಡ ಕುಳವಾರು ಎನ್ನಿಸಿಕೊಂಡ ಪಾರ್ವತಿಯ ಅಪ್ಪ ಶಂಕರ ಜೋಯಿಸರಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿತ್ತು. ಅದರ ಪರಿಹಾರಕ್ಕೆಂಬಂತೆ ಆಗಾಗ ಮಗಳನ್ನು ಅತ್ತೆ ಮನೆಗೆ ಕರೆದೊಯ್ದು ನಾಲ್ಕು ದಿನ ಬಿಡುವುದು, ಹೋಗುವಾಗ ಊರಿನ ಅಚ್ಚುಬೆಲ್ಲ, ಸಣ್ಣಕ್ಕಿಯ ಮೂಟೆ, ಎಲೆ ಅಡಿಕೆ ಪ್ರಿಯನಾದ ಅಳಿಯನಿಗೆ ಪರಿಮಳದ ಅಡಿಕೆ, ಊರಿಗೆ ಬರುತ್ತಿದ್ದ ಸಾಯ್ಬ ಇಚ್ಚಾಕ ತಂದುಕೊಡುತ್ತಿದ್ದ ಸಿಹಿಯಾದ ಖರ್ಜೂರ, ಡಬ್ಬಿ ಡಬ್ಬಿ ಅತಿರಸ, ರವೆಉಂಡೆ, ಕೋಡ್ಬಳೆ, ಚಕ್ಕುಲಿ.. ಹೀಗೇ ಎತ್ತಿನ ಗಾಡಿ ಭರ್ತಿಯಾಗಿಯೇ ಹೋಗಿ ಅವರ ಮನ ತಣಿಸುತ್ತಿದ್ದರು.
ಅಂತೂ ಇಂತೂ ಪಾರ್ವತಿ ದೊಡ್ಡವಳಾಗಿ ಅತ್ತೆ ಮನೆಗೆ ಕಾಲಿಡುವ ಮುಹೂರ್ತ ಬಂದಾಗ ಭರ್ಜರಿ ಮಳೆಗಾಲವೇ ಬಂದಿತ್ತು. ಕರೆದುಕೊಂಡು ಹೋಗಲು ಬಂದಿದ್ದ ತಿಮ್ಮಣ್ಣನಿಗೆ ಮೈ ಕೈ ತುಂಬಿದ ಪಾರ್ವತಿ ಈಗ ಚೆಂದವಾಗಿಯೇ ಕಂಡಳು. ಇನ್ನೂ ಒಂದೆರಡು ದಿನ ಇದ್ದು ಹೋಗಿ ಎಂಬ ಮಾವನ ಒತ್ತಾಯಕ್ಕೆ ಮಣಿಯದ ತಿಮ್ಮಣ್ಣ ಹೆಂಡತಿಯೊಂದಿಗೆ ಹೊರಟಿದ್ದ ದಿನ ತವರೂರಿಗೂ, ಗಂಡನ ಮನೆಗೂ ನಡುವೆ ಇದ್ದ ಚಿತ್ರಾವತಿ ಹೊಳೆ ಸಮುದ್ರೋಪಾದಿಯಾಗಿ ಭೋರ್ಗರೆಯುತ್ತಿತ್ತು. ದೋಣಿಯೊಳಗೆ ಹೇಗೆ ಹತ್ತುವುದು ಎಂದೇ ತಿಳಿಯದೇ ದಡದಲ್ಲೇ ನಿಂತಿದ್ದ ಅವಳನ್ನು ಗಂಡ ತಿಮ್ಮಣ್ಣ ಎತ್ತಿಯೇ ದೋಣಿಗೆ ಹತ್ತಿಸಿದ್ದ. ದೋಣಿಯಲ್ಲಿ ಆಗಲೇ ಕುಳಿತಿದ್ದ ಹೆಂಗಳೆಯರು ಸೆರಗಿನಲ್ಲಿ ಮುಖ ಮರೆಸಿ ನಗುತ್ತಿದ್ದರೆ, ಗಂಡಸರು ‘ಹ್ಹೋ ಹ್ಹೋ.. ಇದು ಪಷ್ಟಾಯ್ತು ಮಾರಾಯ..’ ಎಂದು ಗಹಗಹಿಸಿದ್ದರು. ಮೊದಲ ಬಾರಿಗೆ ಎಲ್ಲರೆದುರು ನಡೆದ ಈ ಘಟನೆಗೆ ಹಿಡಿಯಷ್ಟಾಗಿ ನಾಚಿ ಕುಳಿತಿದ್ದ ಪಾರ್ವತಿಗೆ ಅತ್ತೆ ಮನೆಯೆನ್ನುವುದು ತನ್ನ ಮನೆಯೇ ಆಗಲು ಹೆಚ್ಚೇನು ಕಾಲ ಹಿಡಿಯಲಿಲ್ಲ.
ಕೆಲಸ ಕಾರ್ಯದಲ್ಲಿ ಅತಿ ಚುರುಕಾದ ಪಾರ್ವತಿಗೆ ಒಂದು ನಿಮಿಷ ಕಾಲು ನೆಲದ ಮೇಲೆ ನಿಲ್ಲುತ್ತಿರಲಿಲ್ಲ. ಇಡೀ ದಿನ ಕೆಲಸವನ್ನು ಅಂಟಿಸಿಕೊಂಡೇ ತಿರುಗಾಡುತ್ತಿದ್ದಳು. ಹಗಲು ಹೊತ್ತಿನಲ್ಲಿ ತನ್ನ ಕಣ್ಣಿಗೇ ಬೀಳದ ಹೆಂಡತಿ ರಾತ್ರಿ ಹನ್ನೊಂದು ಕಳೆಯದೇ ತನ್ನ ಮಗ್ಗುಲು ಸೇರದಿರುವುದು ತಿಮ್ಮಣ್ಣನನ್ನು ಸಿಟ್ಟೆಬ್ಬಿಸುತ್ತಿತ್ತು. ಆ ಸಿಟ್ಟನ್ನು ಅವನು ಅವಳ ಮೇಲೆ ಇನ್ನೊಂದು ರೀತಿಯಲ್ಲಿ ತೋರಿಸುತ್ತಿದ್ದ. ಅಂತೂ ಪಾರ್ವತಿ ನಿದ್ದೆಯ ಮುಖ ನೋಡಬೇಕಾದರೆ ನಡುರಾತ್ರಿ ಮುಗಿದು ಹೋಗಿರುತ್ತಿತ್ತು.
ಸಂಸಾರ ಇರುವುದೇ ಹೀಗೆ ಎಂದು ಹೊಂದಿಕೊಂಡಿದ್ದಳು ಪಾರ್ವತಿ. ಸ್ವಲ್ಪ ದಿನದಲ್ಲೇ ಶುರುವಾದ ವಾಂತಿ-ವಾಕರಿಕೆಗಳು ಅತ್ತೆ ಮಾವನಿಗೆ ಖುಶಿ ಕೊಟ್ಟಿದ್ದರೆ ಇದೊಂದಕ್ಕೆ ಇಷ್ಟೆಂತ ಅವಸರ ಆಗಿತ್ತು ಈಗ ಎಂದು ತಿಮ್ಮಣ್ಣ ಅವಳೇ ಅದಕ್ಕೆ ಕಾರಣವೆಂಬಂತೆ ಹಂಗಿಸಿದ್ದ. ಅದಕ್ಕೆ ಸರಿಯಾಗಿ ಆಗಾಗ ಕೆಲಸ ಬೊಗಸೆಗಳ ನಡುನಡುವೆ ನಿಶ್ಯಕ್ತಿಯಿಂದ ತಲೆ ತಿರುಗಿ ಬೀಳುತ್ತಿದ್ದ ಪಾರ್ವತಿಯನ್ನು ತವರಿನವರು ಬೇಗನೇ ಕರೆದುಕೊಂಡು ಹೋಗಿದ್ದರು. ಆದರೆ ಏಳು ತಿಂಗಳಲ್ಲೇ ಸತ್ತು ಹುಟ್ಟಿದ ಮಗುವಿನ ಮುಖ ನೋಡುವ ಭಾಗ್ಯವೂ ಪಾರ್ವತಿಗಿರಲಿಲ್ಲ. ಬರಿಗೈಯಲ್ಲಿ ಪಾರ್ವತಿ ಮನೆಗೆ ಬಂದಾಗ ಸಿಕ್ಕಿದ ಸ್ವಾಗತವೂ ಅಷ್ಟೇ ಇತ್ತು. ಅತ್ತೆ ‘ಕೆಲಸಕ್ಕೆ ಜನ ಬಂತಿನ್ನು’ ಎಂದು ಸ್ವಲ್ಪ ಸಮಾಧಾನದಿಂದ ಇದ್ದರೆ ತಿಮ್ಮಣ್ಣ ರಾತ್ರಿಗಳಲ್ಲಿ ಹೆಂಡತಿ ಇಲ್ಲದ ಅಷ್ಟೂ ದಿನಗಳ ಸಿಟ್ಟನ್ನು ಹಗೆಗಾರನಂತೆ ಅವಳ ಮೇಲೆ ತೀರಿಸಿಕೊಳ್ಳುತ್ತಿದ್ದ.
ಮತ್ತಿನ ಬಸುರು ನಾಲ್ಕೇ ತಿಂಗಳಲ್ಲಿ ಕರಗಿಹೋಯಿತು. ಈಗಂತೂ ಜಿದ್ದಿಗೆ ಬಿದ್ದವನಂತೆ ಒಂದಾದರೂ ತನ್ನ ಮಗು ಅವಳು ಹೆರಲೇಬೇಕು ಎಂಬಂತೆ ತಿಮ್ಮಣ್ಣ ಅವಳನ್ನು ನಿತ್ಯವೂ ಗೋಳು ಹೊಯ್ದುಕೊಳ್ಳುತ್ತಿದ್ದ. ಆದರೆ ಪಾರ್ವತಿಯ ಹೊಟ್ಟೆಯಲ್ಲಿ ಒಂದು ಮಗುವೂ ಜೀವಂತವಾಗಿ ಹೊರ ಬರಲೇ ಇಲ್ಲ.
ಊರವರೂ ಈಗ ತಲೆಗೊಂದರಂತೆ ಮಾತನಾಡುತ್ತಿದ್ದರು. ತಿಮ್ಮಣ್ಣನಂತೂ “ಪಾರ್ವತಿಯ ಬದಲು ಬೇರೇ ಯಾರೇ ನನ್ನ ಹೆಂಡತಿಯಾಗಿದ್ದರೂ ಮನೆಯಿಡೀ ಮಕ್ಕಳಿಂದ ತುಂಬಿರುತ್ತಿತ್ತು ಈಗ” ಎಂದು ಎಲ್ಲರೆದುರು ಹೇಳಿ ಅವಳ ಮುಖ ಮಂಕಾಗುವುದನ್ನು ಕಾಯುತ್ತಿದ್ದ. ಆದರೆ ಇಡೀ ದಿನ ಕವಳ ಜಗಿಯುತ್ತಾ ಅನುಪತ್ಯಗಳಲ್ಲಿ ಮುನ್ನಾ ದಿನದ ಇಸ್ಪೀಟು ಕಳದಲ್ಲಿ ಗಲೀಜು ತಮಾಷೆಗಳನ್ನು ಮಾಡುತ್ತಾ, ಹೆಣ್ಣುಮಕ್ಕಳ ಗುಂಪಿರುವಲ್ಲಿಗೆ ಹೋಗಿ ಮೈ ಕೈ ತಾಕಿಸುತ್ತಾ ಇರುವ ತಿಮ್ಮಣ್ಣನ ಮೇಲೆ ಯಾರಿಗೂ ಒಳ್ಳೆಯ ಅಭಿಪ್ರಾಯ ಇರದಿದ್ದುದರಿಂದ ಇನ್ನೊಂದು ಮದುವೆಯಾಗು ಎಂದು ಸಲಹೆ ಕೊಡುತ್ತಿದ್ದರೇ ವಿನಾ ಹೆಣ್ಣುಕೊಡಲು ಯಾರೂ ಮುಂದೆಬರಲಿಲ್ಲ.
ವರ್ಷಗಳುರುಳಿದವು. ಪಾರ್ವತಿಯ ಮಾವ ಮೊದಲಿಗೆ ತೀರಿಕೊಂಡರು. ಅದಾಗಿ ಒಂದು ವರ್ಷದಲ್ಲಿ ಅತ್ತೆಯೂ ಬೇನೆಬಿದ್ದು ನರಳಿ ನರಳಿ ತೀರಿಕೊಂಡಿದ್ದಳು. ತಿಮ್ಮಣ್ಣ ಕೆಲಸವೇನೂ ಮಾಡದೇ ತಿರುಗಿ ಊರಿಡೀ ಮಾಡಿದ ಸಾಲಕ್ಕೆ ಮನೆ, ತೋಟ ಎಲ್ಲಾ ಹೋಗುವ ಪರಿಸ್ಥಿತಿ ಬಂದಿತ್ತು. ಆಗ ಪಾರ್ವತಿಯ ಅಪ್ಪ ಬಂದು ತೋಟ ಸಾಲಗಾರರ ಪಾಲಾದರೂ, ಈ ಮನೆ ಉಳಿಸಿ ಹತ್ತಿರದ ಇನ್ನೊಂದು ನಾಲ್ಕು ಎಕರೆ ತೋಟವನ್ನು ಮಗಳ ಹೆಸರಿನಲ್ಲೇ ತೆಗೆಸಿಕೊಟ್ಟಿದ್ದರು. ಅಪ್ಪನ ಈ ಕೆಲಸ ಪಾರ್ವತಿಯ ಬೆನ್ನಿಗೆ ಹುಟ್ಟಿದ ಅವಳ ತಮ್ಮಂದಿರಿಗೆ ಇಷ್ಟವಾಗದೇ ಅಕ್ಕನ ಜೊತೆ ಸಂಬಂಧ ಅಷ್ಟಕ್ಕಷ್ಟೇ ಎಂದು ಇದ್ದು ಬಿಟ್ಟಿದ್ದರು. ಈಗ ಅಪ್ಪನೂ ಇಲ್ಲ, ಅಮ್ಮನೂ ಇಲ್ಲ. ತವರೂ ಹೆಚ್ಚು ಕಮ್ಮಿ ಇವಳ ಪಾಲಿಗೆ ಮುಚ್ಚಿದಂತೆ ಆಗಿತ್ತು. ಇಲ್ಲೀಗ ಮನೆಗೆ ತಿಮ್ಮಣ್ಣನೇ ಯಜಮಾನನಾದರೂ ಪಾರ್ವತಿಯ ಮಟ್ಟ ಯಜಮಾನಿಯ ಸ್ಥಿತಿಗೆ ಏರಿರಲಿಲ್ಲ.
ಆಗಲೇ ಊರಿಗೆ ಹೊಸದಾಗಿ ಶಾಂತಪ್ಪ ಎಂಬ ಮರ ಕೆಲಸದವನು ಕಾಲಿಟ್ಟದ್ದು. ಬಾಡಿಗೆಗೆ ಮನೆಗಳೇ ಇಲ್ಲದ ಆ ಊರಿನಲ್ಲಿ ನೆಲೆಸಲು ಜಾಗವಿಲ್ಲದಾಗ ತಿಮ್ಮಣ್ಣನನ್ನು ಕಂಡು ಕಾಲಿಗೆ ಬಿದ್ದು ‘ನಿಮ್ಮ ತೋಟದೊಳಗಿರುವ ಕೊಟ್ಟಿಗೆಯಲ್ಲೇ ವಾಸಮಾಡ್ತೇನೆ ಧಣಿ….. ನಿಮಗೆ ಏನು ಬೇಕಾದರೂ ಮರದ ಕೆಲಸ ಇದ್ದರೆ ಒಂದು ಕಾಸು ತೆಗೆದುಕೊಳ್ಳದೇ ಮಾಡಿಕೊಡ್ತೇನೆ. ಈ ಊರಿಗೆ ಹೊಸಬ ನಾನು. ನನ್ನ ಮೇಲೆ ದಯೆಯಿಡಿ’ ಎಂದು ಕೇಳಿಕೊಂಡಿದ್ದ. ತಿಮ್ಮಣ್ಣನಿಗೂ ಇದು ಒಳ್ಳೆಯದೇ ಆಯಿತು. ತೋಟ ಕಾಯಲು ರಾತ್ರೋ ರಾತ್ರಿ ಬೆಳಕು ಹಿಡಿದುಕೊಂಡು ಹೋಗುವ ಕೆಲಸವೂ ಉಳಿಯಿತು ಎಂದು ಆಲೋಚನೆ ಮಾಡಿ ಅವನಿಗೆ ಇರಲು ಒಪ್ಪಿಗೆಯಿತ್ತಿದ್ದ. ಬಂದ ಸ್ವಲ್ಪ ದಿನಗಳಲ್ಲಿಯೇ ಶಾಂತಪ್ಪ ತನ್ನ ನಯವಾದ ಮಾತಿನಿಂದ, ನಾಜೂಕಿನ ಕೆಲಸದಿಂದ ಊರವರನ್ನು ಆಕರ್ಷಿಸಿದ್ದ. ಯಾರು ಯಾವುದೇ ಮರದ ಕೆಲಸವಿದ್ದರೂ ಶಾಂತಪ್ಪನನ್ನು ಹುಡುಕಿಕೊಂಡು ತಿಮ್ಮಣ್ಣನ ಕೊಟ್ಟಿಗೆ ಕಡೆಗೆ ಕಾಲುಹಾಕುತ್ತಿದ್ದರು. ತಿಮ್ಮಣ್ಣನೂ ತನ್ನ ಹೆಚ್ಚಿನೆಲ್ಲಾ ಹೊತ್ತನ್ನು ಕವಳ ಜಗಿಯುತ್ತಾ ಶಾಂತಪ್ಪನ ಜೊತೆ ಬಂಡು ಮಾತನಾಡುತ್ತಾ ಅಲ್ಲೇ ಕುಳಿತು ಬಿಡುತ್ತಿದ್ದ. ಅವನು ಬಂದ ಮೇಲೆ ಮನೆಯ ಹೊರಗೇ ಹೆಚ್ಚಾಗಿ ತಿಮ್ಮಣ್ಣ ಇರುತ್ತಿದ್ದುದರಿಂದ ಪಾರ್ವತಿ ಹಗಲು ಹೊತ್ತಿನಲ್ಲಿ ತಿಮ್ಮಣ್ಣನ ಬಯ್ಯುವಿಕೆಗೆ ಗುರಿಯಾಗುವುದೂ ತಪ್ಪಿತ್ತು.
ತೋಟದ ಕೊಟ್ಟಿಗೆಯ ಪಕ್ಕದಲ್ಲೇ ದೊಡ್ಡ ಹುಣಸೆ ಮರವೊಂದಿತ್ತು. ಅದು ತುಂಬಾ ಎತ್ತರದ ಮರವಾದ್ದರಿಂದ ಅದಕ್ಕೆ ಹತ್ತಿ ಹುಣಸೆಹಣ್ಣು ಕೊಯ್ಯುವುದು ಸಾಧ್ಯವಿರಲಿಲ್ಲ. ಬಿದ್ದ ಹಣ್ಣುಗಳನ್ನೇ ಹೆಕ್ಕಬೇಕಾಗಿತ್ತು. ಪಾರ್ವತಿಯೂ ಹುಣಸೆಹಣ್ಣು ಬೀಳುವ ಸಮಯದಲ್ಲಿ ಅದರ ಪಕ್ಕ ಹೋಗಬೇಕಾಗಿತ್ತು. ಆಗೆಲ್ಲಾ ಪಾರ್ವತಿಗೆ ಉಳಿಯಿಂದ ಮರ ಕೆತ್ತುತ್ತಲೋ, ಕೈಗರಗಸದಿಂದ ಮರ ಕೊಯ್ಯುತ್ತಲೋ ಇರುವ ಶಾಂತಪ್ಪ ಕಾಣಿಸುತ್ತಿದ್ದ. ತನ್ನಿಂದ ಚಿಕ್ಕವನಾಗಿದ್ದ ಅವನನ್ನು ಪಾರ್ವತಿಯೇ ಮುಂದಾಗಿ ‘ತಿಂಡಿ ಆಯ್ತಾ, ಊಟಕ್ಕೇನು ಶಾಂತಪ್ಪಾ ಎಂದು ಮಾತನಾಡಿಸಿದರೆ ಸ್ವಲ್ಪ ನಾಚಿಕೆಯಲ್ಲೆ ಉತ್ತರ ಕೊಟ್ಟು ಮೌನವಾಗಿದ್ದುಬಿಡುತ್ತಿದ್ದ.
ಒಬ್ಬನೇ ಯಾಕೆ ಬಂದ ಇವನು. ಮನೆಯವರೆಲ್ಲಾ ಇಲ್ವಾ. ಮದುವೆಯ ಪ್ರಾಯ ಬಂದರೂ ಮದುವೆ ಯಾಕಾಗಿಲ್ಲ ಇನ್ನೂ – ಎಂಬೆಲ್ಲಾ ಪ್ರಶ್ನೆಗಳು ಪಾರ್ವತಿಯ ಮನದಲ್ಲಿ ಸುಳಿದರೂ ಅವನೊಡನೆ ಅದನ್ನೆಲ್ಲಾ ಕೇಳಲು ಸಾಧ್ಯವಾಗಿರಲಿಲ್ಲ. ಪ್ರಯತ್ನ ಮಾಡಿದ್ದರೆ ಕೇಳಬಹುದಿತ್ತೇನೋ. ಆದರೆ ಅವನೊಡನೆ ಸದರದಿಂದ ಮಾತಾಡಿದರೆ ತಿಮ್ಮಣ್ಣನೆಲ್ಲಿ ಕೋಪಿಸಿಕೊಂಡಾನೋ ಎಂದು ಸುಮ್ಮನೇ ಉಳಿದಿದ್ದಳು. ಕೆಲವೊಮ್ಮೆ ಮಧ್ಯಾಹ್ನವಾದರೂ ಊಟಕ್ಕೆ ಬಾರದೇ ಇಲ್ಲೇ ಕುಳಿತಿರುವ ಗಂಡನನ್ನು ಕರೆಯಲು ಬರುತ್ತಿದ್ದಳು ಪಾರ್ವತಿ. ಆಗ ಬಾಯಿ ಮಾತಿಗೆ ‘ನೀನೂ ಬಾ ಶಾಂತಪ್ಪ ಊಟಕ್ಕೆ’ ಎಂದು ತಿಮ್ಮಣ್ಣ ಕರೆದರೂ ‘ಇಲ್ಲ ಧಣಿ, ಬೆಳಗ್ಗೆಯೇ ಬೇಯಿಸಿ ಇಟ್ಟಿದ್ದೇನೆ. ನೀವು ಹೋಗಿ’ ಎನ್ನುತ್ತಿದ್ದನೇ ವಿನಾ ಮನೆಯಂಗಳಕ್ಕೆ ಅನವಶ್ಯವಾಗಿ ಕಾಲಿಡುತ್ತಿರಲಿಲ್ಲ ಶಾಂತಪ್ಪ. ಅವನ ಈ ಗುಣವೇ ಪಾರ್ವತಿಗೆ ಅವನ ಬಗ್ಗೆ ಗೌರವ ಹುಟ್ಟಲು ಕಾರಣವಾಗಿದ್ದು. ಅವನು ಈ ಊರಿಗೆ ಕಾಲಿಟ್ಟು ವರ್ಷ ಉರುಳಿದ್ದರೂ ಅವನ ಮರ ಕೆಲಸದ ಸದ್ದಿಗೆ ಒಂದು ದಿನವೂ ಬಿಡುವು ದೊರೆತಿರಲಿಲ್ಲ. ಒಬ್ಬನೇ ಕೆಲಸ ಮಾಡುವವನಾದ ಕಾರಣ ತುಂಬಾ ಸಮಯ ಹಿಡಿಯುತ್ತಿದ್ದುದರಿಂದ ಹೇಳಿಕೊಳ್ಳುವಷ್ಟು ಆದಾಯವೇನೂ ಗಿಟ್ಟುತ್ತಿರಲಿಲ್ಲ.
ಈಗೆರಡು ದಿನಗಳಿಂದ ಗಂಡ ಮನೆಯಲ್ಲಿಯೇ ಕುಳಿತು ಮೊದಲಿನಂತೆಯೇ ನಿಂತರೂ ತಪ್ಪು ಕೂತರೂ ತಪ್ಪು ಎಂದು ಬಯ್ಯುತ್ತಿರುವುದನ್ನು ಕಂಡು ಮನೆಕೆಲಸಗಳಿಂದ ಪುರುಸೊತ್ತು ಸಿಕ್ಕಿದಾಗ ತೋಟದ ಕಡೆ ಕಾಲುಹಾಕಿದಳು ಪಾರ್ವತಿ. ಕೊಟ್ಟಿಗೆಯ ಕೋಣೆಯ ಬಾಗಿಲಿಗೆ ಹಾಕಿದ್ದ ಬೀಗ, ಹೊರಗಿನ ಜಗಲಿಯಲ್ಲಿ ಒತ್ತರೆಗೆ ಇಟ್ಟ ಅರ್ಧರ್ಧ ಕೆಲಸವಾದ ಮರದ ಸಾಮಾನು, ಮಾಡಿನ ಜಂತಿಗೆ ನೇತುಹಾಕಿಟ್ಟ ಎಣ್ಣೆ ಉಜ್ಜಿದ ಗರಗಸ, ಸುತ್ತಿಗೆ ಉಳಿಯಂತಹ ಸಾಮಾನುಗಳನ್ನು ತುಂಬಿಟ್ಟ ಗೋಣಿಚೀಲ ಕಾಣಿಸಿ ಅಚ್ಚರಿಯಾಯಿತು. ಅಂದರೆ ಶಾಂತಪ್ಪ ಎಲ್ಲಿಯೋ ಹೋಗಿದ್ದಾನೆ, ಎಲ್ಲಿಗಿರಬಹುದು ಎಂಬ ಯೋಚನೆಯೊಂದಿಗೆ ಮನೆಗೆ ಮರಳಿದ್ದಳು. ಗಂಡನಿಗೆ ಗೊತ್ತಿರಬಹುದಾದರೂ ಕೇಳಿದರೆ ಉರಿದು ಬೀಳುವ ಅವನಲ್ಲಿ ಅವಳ ಮಾತೇ ಇರಲಿಲ್ಲ.
ಅದರ ಮರುದಿನವೇ ಮತ್ತೆ ಮರ ಕೆಲಸದ ಸದ್ದು ಕೇಳುವುದರ ಜೊತೆಗೆ ತಿಮ್ಮಣ್ಣನ ಬಯ್ಗುಳದ ಸದ್ದು ನಿಂತಿತ್ತು.
ಅದೊಂದು ದಿನವಂತೂ ತಿಮ್ಮಣ್ಣ ಮನೆಗೆ ಬರುವಾಗ ಬಹಳ ಕುಶಿಯಲ್ಲೇ ಬರುವುದು ಕಂಡಿತು. ಮೊದಲ ಬಾರಿಗೆ ಪಾರ್ವತಿಯನ್ನು ಹೆಸರು ಹಿಡಿದು ಕರೆದು “ಪಾರ್ವತೀ ನಿನ್ನ ಹಳೇ ಸೀರೆ ಇದ್ದರೆ ಒಂದೆರಡು ಕೊಡೇ” ಎಂದಿದ್ದ. ನಿತ್ಯ ಉಡುವ ಎರಡು ಮೂರು ಸೀರೆಗಳು ಹರಿದು ಚಿಂದಿಯಾದ ಮೇಲೆಯೇ ಮತ್ತೊಂದು ಸೀರೆ ಉಡುವ ಪರಿಪಾಠವಿದ್ದ ಪಾರ್ವತಿಗೆ ಹಳೇ ಸೀರೆ ಎಂದರೆ ಯಾವುದೆಂದು ತಿಳಿಯದಾಯಿತು. ಹಾಗೇ ಹೇಳಿದರೆ ಗಂಡನಿಗೆ ಸಿಟ್ಟು ಬಂದು ಕಬ್ಬಿಣದ ಟ್ರಂಕಿನಲ್ಲಿ ಜಿರಳೆಕಾಯಿ ಹಾಕಿ ಹಳೇ ಬಟ್ಟೆಯಲ್ಲಿ ಸುತ್ತಿಟ್ಟಿರುವ ಒಂದೆರಡು ಒಳ್ಳೆಯ ಸೀರೆಗಳನ್ನು ತೆಗೆದುಕೊಂಡರೆ ಎಂಬ ಹೆದರಿಕೆಯೂ ಆಗಿ “ನನ್ನತ್ರ ಇಂಥವೇ ಇರೋದು ಹಳೇದು ಅಂದ್ರೆ.. ಕೊಡ್ಲಾ?” ಎಂದಳು. ಆಗಷ್ಟೇ ಹಟ್ಟಿಯಿಂದ ಹಾಲು ಕರೆದಿಟ್ಟು ಒಳ ಬಂದಿದ್ದಳಷ್ಟೇ….. ಸಗಣಿಯ ವಾಸನೆ ಹೊತ್ತ, ಒಲೆಯ ಕರಿ ಹಿಡಿದು ಮಸುಕು ಮಸುಕಾದ ಸೀರೆಯನ್ನು ಒಮ್ಮೆ ನೋಡಿದ ತಿಮ್ಮಣ್ಣ “ಬೇಡ ಬಿಡು ಹೊಸಾದೇ ಎರಡು ತಂದ್ರಾತು” ಎಂದಿದ್ದ.
ಈ ಮನೆಯಲ್ಲಿ ಸೀರೆ ಉಡುವ ಏಕೈಕ ಹೆಣ್ಣು ಜೀವವೆಂದರೆ ನಾನೇ….. ಹೆಣ್ಣಾಳುಗಳೂ ಕೂಡಾ ಇಲ್ಲದ ಮನೆಯಿದು. ಮತ್ಯಾಕೆ ಗಂಡನಿಗೆ ಹಳೇ ಸೀರೆ ಎಂದು ಅಚ್ಚರಿಯಾಗಿ ಬಯ್ದರೆ ಬಯ್ಯಲಿ ಬಯ್ಗಳೇನು ಹೊಸದೇ….. ಎಂದುಕೊಂಡು ಧೈರ್ಯವಾಗಿ “ಯಾರಿಗೆ ಸೀರೆ?” ಎಂದು ಕೇಳಿದಳು.
“ಇನ್ಯಾರಿಗೆ, ಶಾಂತಪ್ಪನ ಹೆಂಡತಿಗೆ, ಪಾಪ ಉಟ್ಟ ಸೀರೆಯಲ್ಲೇ ಹಾರಿಸಿಕೊಂಡು ಬಂದಿದ್ದಾನೆ ಅವಳನ್ನು….. ಹುಂ….. ನೀನೂ ಒಮ್ಮೆ ಹೋಗಿ ಮಾತಾಡಿಸು, ನಾನು ಪೇಟೆ ಕಡೆಗೆ ಹೋಗಿ ಬರ್ತೇನೆ” ಎಂದು ಮನೆಯಿಂದ ಹೊರಬಿದ್ದಿದ್ದ ತಿಮ್ಮಣ್ಣ.
ಶಾಂತಪ್ಪನ ಹೆಂಡತಿಯಾ? ಅಚ್ಚರಿಯ ಜೊತೆಗೆ ಸಿಟ್ಟೂ ಬಂತು.
‘ಅಲ್ಲಾ ಅವ್ಳಿಗೆ ನೀವ್ಯಾಕೆ ಸೀರೆ ತರ್ಬೇಕು? ಶಾಂತಪ್ಪ ಇಲ್ವಾ ಅಂತ ಕೇಳಬೇಕೆನಿಸಿದ್ದರೂ ಮೊನ್ನೆ ಸಿಟ್ಟಲ್ಲಿ ಅವನು ಹೊಡೆದ ಪೆಟ್ಟಿನ ನೋವು ಇನ್ನೂ ಇದ್ದುದರಿಂದ ಹಲ್ಲು ಕಚ್ಚಿಕೊಂಡು ನಿಂತಿದ್ದಳು.
ಮೂರು ಹೊತ್ತು ತಲೆ ಬಗ್ಗಿಸಿ ಮರ ಕೆತ್ತುತ್ತಾ ಇರುವ ಶಾಂತಪ್ಪ ಹುಡುಗಿಯೊಬ್ಬಳನ್ನು ಹೇಳದೇ ಕೇಳದೇ ಹಾರಿಸಿಕೊಂಡು ಬಂದಿದ್ದಾನೆ ಎಂದರೆ ಪಾರ್ವತಿಗೆ ನಂಬಲೇ ಕಷ್ಟವಾಯಿತು. ಅದೂ ಅಲ್ಲದೇ ಅವನ ಜೊತೆ ಹಾಗೆ ಬಂದ ಹುಡುಗಿಯನ್ನು ನೋಡದೇ ಇದ್ದರೂ ಅವಳ ಮೇಲೇಕೋ ಒಳ್ಳೆಯ ಭಾವನೆ ಮೊಳೆಯಲಿಲ್ಲ. ಆದರೆ ಅವಳನ್ನು ನೋಡುವ ಕುತೂಹಲ ತಡೆಯದೆ ಕತ್ತಿ ಹಿಡಿದು ತೋಟದ ಕಡೆಗೆ ನಡೆದಿದ್ದಳು. ಸ್ವಲ್ಪ ಹೊತ್ತು ಮರದ ಸೀಬೇ ಹಣ್ಣು ಕೊಯ್ದು, ಬಿದ್ದ ಅಡಿಕೆ ಹೆಕ್ಕುತ್ತಾ ಇದ್ದ ಪಾರ್ವತಿಗೆ, ಶಾಂತಪ್ಪ ಮರದ ಮೇಲೆ ಬಡಿಯುವ ಶಬ್ದ ಸಂಗೀತದಂತೆ ಒಂದೇ ರೀತಿಯಲ್ಲಿ ಕೇಳಿಬರುತ್ತಿತ್ತು. ಅಂದರೆ ಹೊಸ ಹೆಂಡತಿ ಬಂದಿದ್ದಾಳೆಂದು ಶಾಂತಪ್ಪ ಕೆಲಸ ಮಾಡದೇ ಕೂತಿಲ್ಲ ಎಂದೇಕೋ ಮನದಲ್ಲಿ ಸಂತಸವಾಯಿತು.
ಬೇಕೆಂದೇ ಹೆಜ್ಜೆಯ ಸದ್ದನ್ನು ಜೋರಾಗಿ ಮಾಡುತ್ತಾ ಆ ಕಡೆ ನಡೆದಳು. ಶಾಂತಪ್ಪ ಕೆಲಸ ಬಿಟ್ಟು ಎದ್ದು ನಿಂತು ಸೀದಾ ಒಳಕ್ಕೆ ಹೋಗಿದ್ದು ಕಾಣಿಸಿತು. ಅವಳು ಕೊಟ್ಟಿಗೆಯ ಹತ್ತಿರ ಬರುವಾಗ ಅವನ ಪಕ್ಕದಲ್ಲಿ ಹುಡುಗಿಯೊಬ್ಬಳು ನಿಂತಿದ್ದಳು.
ಒಮ್ಮೆಗೆ ಪಾರ್ವತಿಗೂ ಎದೆ ಝಲ್ಲೆಂದಿತು. ಕೇದಗೆಯ ಮೈ ಬಣ್ಣ, ತಿದ್ದಿ ತೀಡಿದಂತಿದ್ದ ಹುಬ್ಬು, ಬಟ್ಟಲುಗಣ್ಣು, ಹವಳದ ಬಣ್ಣದ ತುಟಿ, ಒಟ್ಟಿನಲ್ಲಿ ಪಾರ್ವತಿಗೆ ಅಪ್ಪ ಶಂಕರ ಜೋಯಿಸರು ಚಿಕ್ಕದಿರುವಾಗ ಕಥೆ ಹೇಳುತ್ತಾ ದೇವಿಯನ್ನು ವರ್ಣಿಸುತ್ತಿದ್ದರಲ್ಲಾ ಹಾಗಿತ್ತು ಇವಳ ರೂಪ. ಶಾಂತಪ್ಪನೆಂದೇನು ಯಾವ ಗಂಡಾದರೂ ಹಾರಿಸಿಕೊಂಡು ಬಂದಾನು ಇವಳನ್ನು ಎನ್ನಿಸಿತು.
ಅಷ್ಟರಲ್ಲೇ ಶಾಂತಪ್ಪ ಆ ಹುಡುಗಿಯ ಜೊತೆಗೆ ತನ್ನ ಕಾಲ ಮೇಲೆ ಬಿದ್ದು ಆಶೀರ್ವಾದ ಕೇಳಿದ್ದು ಇದ್ದಕ್ಕಿದ್ದಂತೆ ತನ್ನ ಸ್ಥಾನಮಾನವನ್ನು ಮೇಲಕ್ಕೇರಿಸಿದಂತಾಯಿತು ಪಾರ್ವತಿಗೆ. ಛೇ.. ಬರಿಗೈಯಲ್ಲಿದ್ದೇನಲ್ಲ ಎಂದು ನಾಚಿಕೆಯಾಗಿ ಕೂಡಲೇ ಹಿಂತಿರುಗಿ ಅಡಿಕೆ ಕೊಟ್ಟೆಯಲ್ಲಿ ಸುತ್ತಿಟ್ಟ ಹಣ್ಣಾದ ಸೀಬೆಗಳನ್ನು ಅವಳ ಕೈಗಿತ್ತಳು. “ಶಾಂತಪ್ಪಾ, ಹೆಂಡ್ತೀನ ಕರ್ಕೊಂಡು ಬಾ ಒಂದ್ಸಾರಿ ಊಟಕ್ಕೆ” ಎಂದು ಯಜಮಾನಿಕೆ ತೆಗೆದುಕೊಂಡವಳಂತೆ ನುಡಿದು ಮನೆಗೆ ಬಂದು ತಲಪಿದಾಗ ಹೊರ ಬಾಗಿಲಲ್ಲಿ ಗಂಡನ ಚಪ್ಪಲಿಗಳು ಕಾಣಿಸಿ ಸ್ವಲ್ಪ ಭಯವಾಯಿತು. ಆದರೆ ತಿಮ್ಮಣ್ಣ ಮನೆಯೊಳಗೆ ಚಾಪೆ ಹಾಸಿ ಮೂರ್ನಾಲ್ಕು ಸೀರೆ, ಒಂದು ಶರ್ಟುಪೀಸು ಇಟ್ಟುಕೊಂಡು ಕುಳಿತಿದ್ದ. ಬಹುಶಃ ತನ್ನ ಮದುವೆಯ ಸಮಯದಲ್ಲೊಮ್ಮೆ ಅಷ್ಟು ಸೀರೆಗಳನ್ನು ಒಮ್ಮೆಲೇ ಕಂಡಿದ್ದ ಪಾರ್ವತಿ ಈಗ ವಿಸ್ಮಯದಿಂದ ಬೆರಗಾದಳು.
“ಇದ್ರಲ್ಲಿ ಚಲೋ ಕಲರ್ ಯಾವ್ದು ನೋಡಿ ಎರಡು ಆಯ್ದಿಡು” ಎಂದ ಗಂಡನ ಮಾತು ಕೇಳಿ ಖುಷಿಯಾಯಿತು. ನಾಲ್ಕು ಸೀರೆಗಳಲ್ಲಿ ತನಗಿಷ್ಟವಾದ ಕಡು ನೀಲಿಗೆ ಕೆಂಪು ದೊಡ್ಡ ಹೂಗಳದ್ದೊಂದು, ಹಸಿರು ಚೌಕಳಿ ಸೀರೆಯಿನ್ನೊಂದು ಎರಡನ್ನು ಎತ್ತಿಕೊಂಡಳು. ತಿಮ್ಮಣ್ಣ ಅದನ್ನು ನೋಡಿ.. “ಹುಂ.. ನಾನು ಇದೇ ಅಕ್ಕು ಹೇಳಿ ಅಂದಾಜು ಮಾಡಿದ್ದೆ” ಎಂದು ಅವಳ ಕೈಯಿಂದೆಳೆದುಕೊಂಡು ಶರ್ಟಿನ ಬಟ್ಟೆಯನ್ನೂ ಅದರ ಜೊತೆ ಸೇರಿಸಿ ಬಟ್ಟೆ ತಂದಿದ್ದ ತೊಟ್ಟೆಯೊಳಗೆ ಹಾಕಿ “ಅದೆರಡು ಸೀರೆ ನಿಂಗಾತು” ಎಂದು ಉದಾರಬುದ್ಧಿ ತೋರಿಸಿದವರ ಮುಖಭಾವದೊಂದಿಗೆ ತೋಟಕ್ಕಿಳಿದ. ಆಘಾತಗೊಂಡಂತೆ ನಿಂತಿದ್ದ ಪಾರ್ವತಿಯ ಕಣ್ಣಾಲಿಗಳು ತಮಗರಿವಿಲ್ಲದೆಯೇ ಹಸಿಯಾದವು.
ಆ ದಿನ ಗಂಡ ಬರುವಾಗ ಯಾವತ್ತಿನಿಂದಲೂ ಹೊತ್ತಾಗಿತ್ತು. ಪಾರ್ವತಿಗ್ಯಾಕೋ ಇದು ಅತಿಯಾಯಿತು ಅನ್ನಿಸಿತು. ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ಅಲ್ಲಿರುವಾಗ ತಿಮ್ಮಣ್ಣ ಅಲ್ಲಿ ಇಷ್ಟು ಹೊತ್ತನ್ನು ಕಳೆಯಬೇಕಾಗಿರಲಿಲ್ಲ…… ಆದರೆ ಅದನ್ನು ತಿಮ್ಮಣ್ಣನಿಗೆ ಹೇಳಿ ಬೆನ್ನಿಗೆ ಬಡಿಸಿಕೊಳ್ಳುವ ತಾಕತ್ತೂ ಇಲ್ಲದಿದ್ದುರಿಂದ ಸುಮ್ಮನುಳಿದಳು. ಆ ರಾತ್ರಿ ಅವಳ ಮಗ್ಗುಲಿಗೆ ಬಂದ ತಿಮ್ಮಣ್ಣ ಹಾಸಿಗೆ ಕಂಡರೆ ಸಾಕು ಎಂದು ಬಳಲಿದ್ದವಳನ್ನು ಎಳೆದು ತನ್ನ ಚಪಲ ತೀರಿಸಿಕೊಂಡು ತಿರುಗಿ ಮಲಗುವ ಮೊದಲು “ಹೇಳೋದನ್ನೇ ಮರ್ತಿದ್ದೆ ನಾಳೆ ಶಾಂತಪ್ಪ ಬರ್ತಾನೆ…. ಹೊಸ ಮದುಮಕ್ಕಳಲ್ವಾ…. ಪಾಯಸದ ಅಡುಗೆ ಮಾಡು” ಎಂದಿದ್ದ.
ಮರುದಿನ ಬೆಳಗ್ಗೆ ಯಾವತ್ತೂ ಅಡುಗೆ ಮನೆ ಕಡೆ ತಲೆಹಾಕದೇ ಇದ್ದ ತಿಮ್ಮಣ್ಣ ತಾನೇ ಸ್ವತಃ ಕೇಸರಿಬಾತು ಕಾಯಿಸಿದ್ದೇನು, ಆಗಾಗ ಒಳಗೆ ಬಂದು, “ಅಡುಗೆ ಆಯ್ತಾ, ಹೋಗಿ ಕರೀಲಾ ಅವ್ರನ್ನು?” ಎಂದು ಗಳಿಗೆಗೊಮ್ಮೆ ಕೇಳುವುದೇನು….. ಒಟ್ಟಿನಲ್ಲಿ ಗಂಡನ ನಡವಳಿಕೆ ಇರುಸುಮುರುಸುಂಟು ಮಾಡಿದರೂ ಅಡುಗೆ ಆದ ಕೂಡಲೆ ತೆಪ್ಪಗೆ ತಲೆ ಆಡಿಸಿದಳು.
ಅವರು ಊಟ ಮಾಡಿ ಹೊರಡುವಾಗ ತಾನಿನ್ನೂ ರುಚಿ ಕೂಡಾ ನೋಡದಿದ್ದ ಕೇಸರಿಬಾತನ್ನಷ್ಟೂ ಬಾಳೆಎಲೆಯಲ್ಲಿ ಹಾಕಿ ಅವಳ ಕೈಗೆ ಇತ್ತದ್ದನ್ನು ಕಂಡಳು.
ಮತ್ತೆ ಕೆಲವು ದಿನ ಕಳೆದ ಮೇಲೆ ಪಾರ್ವತಿಗೆ ಅವರಿವರ ಬಾಯಿಯಿಂದ ಶಾಂತಪ್ಪನ ಹೆಂಡತಿಯ ಬಗ್ಗೆ ಇನ್ನೂ ಕೆಲವು ಸುದ್ದಿ ತಿಳಿಯಿತು. ಅವಳೀಗಾಗಲೇ ಬೇರೊಬ್ಬನ ಎರಡನೆ ಹೆಂಡತಿಯಾಗಿದ್ದು, ಅವನು ಮುಪ್ಪಿನ ಮುದಿಯ ಎಂದು ಇವನ ಹಿಂದೆ ಸುತ್ತುತ್ತಿದ್ದಳಂತೆ. ಅಲ್ಲಿನ ಊರಿನವರಿಗೆ ಸುದ್ದಿ ಗೊತ್ತಾಗಿ ಶಾಂತಪ್ಪನನ್ನು ಊರಿಂದ ಹೊರಗೋಡಿಸಿದ್ದರಂತೆ. ಈಗ ಅವಳ ಗಂಡ ಸತ್ತು ಹೋಗಿ ಅವನ ಮಕ್ಕಳು ಇವಳನ್ನು ಮನೆಯಿಂದ ಹೊರಹಾಕಿದ್ದರಂತೆ. ಈ ವಿಷಯ ತಿಳಿದ ಶಾಂತಪ್ಪ ಅವಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾನಂತೆ ಎಂಬ ಸುದ್ದಿಗಳು ಊರವರ ಬಾಯಲ್ಲಿ ಒಂದೊಂದು ದಿನ ಒಂದೊಂದು ರೂಪ ಹೊಂದಿ ಕಥೆಗಳಾಗುತ್ತಿದ್ದವು. ಮೊದಲಿನದ್ದು ಏನೇ ಇರಲಿ, ಹೆಣ್ಣು ಜೀವ ಇಷ್ಟೆಲ್ಲಾ ರೂಪ ಇಟ್ಟುಕೊಂಡು ಹೊರಗೆ ಒಬ್ಬಳೇ ಉಳಿಯಲಾಗುತ್ತದೆಯೇ? ಈಗ ಗಂಡ-ಹೆಂಡತಿಯರಾಗಿದ್ದಾರೆ ತಾನೇ ಎಂದು ಸಮಾಧಾನ ಪಟ್ಟುಕೊಂಡಿದ್ದಳು.
ಆ ಸಲ ಮಾಮೂಲಿನಂತೆ ಬಂದಿದ್ದ ಜ್ವರ ಶೀತಗಳು ಬೇಗನೆ ವಾಸಿಯಾಗದೇ ಅವಳನ್ನು ತಿಂಗಳುಗಟ್ಟಲೆ ಕಾಡಿ ತೋಟದ ಕಡೆಗೆ ಕಾಲಿಡಲೇ ಆಗಿರಲಿಲ್ಲ ಪಾರ್ವತಿಗೆ. ಸ್ವಲ್ಪ ಬಳಲಿಕೆ ಕಡಮೆಯಾಗಿದೆ ಅನ್ನಿಸಿದ ದಿನ ಎದ್ದು ತೋಟಕ್ಕೆ ಹೋದಾಗ ಕೊಟ್ಟಿಗೆಯ ಕಡೆಯಿಂದ ಯಾವ ಸದ್ದು ಕೇಳಿಸುತ್ತಿರಲಿಲ್ಲ. ಹಾಗಿದ್ದರೆ ಅವಳೊಬ್ಬಳೇ ಇರಬೇಕು ಮಾತನಾಡಿಸೋಣ ಎಂದು ಅತ್ತ ಹೆಜ್ಜೆ ಹಾಕಿದ್ದಳು. ಇವಳು ಬರುವ ಸದ್ದಿಗೆ ಹೊರಬಂದಿದ್ದಳು ಶಾಂತಪ್ಪನ ಹೆಂಡತಿ. ಲೋಕಾಭಿರಾಮ ಮಾತನಾಡುತ್ತಾ ಶಾಂತಪ್ಪ ಎಲ್ಲಿ ಎಂದು ಕೇಳಿದಳು. ಅವರೀಗ ಹೊರಗಿನ ಕೆಲಸಕ್ಕೆ ಹೋಗ್ತಾರೆ ಇಲ್ಲಿ ಒಬ್ಬರೇ ಎಷ್ಟು ದುಡಿದರೂ ಇಬ್ಬರ ಹೊಟ್ಟೆ ತುಂಬಬೇಕಲ್ಲ ಎಂದಳು. ಅವಳು ಹೇಳುವುದೂ ಸರಿ ಎನಿಸಿತ್ತು.
ಈಗಂತೂ ಹುಣಸೆಹಣ್ಣು ಬೀಳುವ ಸಮಯ ದಿನಾ ಹೋಗದಿದ್ದರೆ ಬಿದ್ದ ಹಣ್ಣುಗಳು ಕೂಡಾ ಇಲಿಯೋ ಹೆಗ್ಗಣವೋ ತಿಂದು ಹಾಳಾಗುತ್ತದೆಂದು ದಿನಾ ಅಲ್ಲಿಗೆ ಹೋಗಲು ಪ್ರಾರಂಭಿಸಿದಳು ಪಾರ್ವತಿ. ಆದರೆ ಯಾವ ಹೊತ್ತಿನಲ್ಲಿ ಹೋದರೂ ಶಾಂತಪ್ಪನ ಸುಳಿವೇ ಇರಲಿಲ್ಲ. ಅವನ ಹೆಂಡತಿಯೇ ಹೊರಗೇನಾದರೂ ಕಾಣಿಸಿದರೆ ಮಾತನಾಡಿದಂತೆ ಮಾಡಿ ಮಾಯವಾಗುತ್ತಿದ್ದಳು.
ಅಂದು ಹಟ್ಟಿಯಲ್ಲಿನ ಕರುವಿನ ಕೋಣೆಯ ಚಿಲಕ ಅಚಾನಕ್ಕಾಗಿ ಮುರಿದು ಅದನ್ನು ಸರಿಪಡಿಸಲು ಗಂಡನಲ್ಲಿ ಹೇಳಬೇಕೆಂದುಕೊಂಡಳು. ಆದರೆ ಹೊರಗೆ ಅವನ ಚಪ್ಪಲಿ ಕಾಣಿಸದ ಕಾರಣ ಹೊರಗೆಲ್ಲೋ ಹೋಗಿದ್ದಾರೆ, ಒಂದು ನಾಲ್ಕು ಹೆಜ್ಜೆ ಹೋಗಿ ನಾನೇ ಹೇಳಿಬಿಡ್ತೇನೆ ಎಂದು ತೋಟದ ಕಡೆ ಹೆಜ್ಜೆ ಹಾಕಿದಳು. ಕೊಟ್ಟಿಗೆಯ ಹತ್ತಿರ ಬರುತ್ತಿದ್ದಂತೆ ಗಂಡು ಹೆಣ್ಣಿನ ಸಲ್ಲಾಪದಂತಹ ಪಿಸುಮಾತುಗಳು ಕೇಳಿಸಿ ಛೇ….. ಈಗ ಹೇಳೋದು ಹೇಗೆ….. ನಾಳೆ ಬಂದ್ರಾಯ್ತು. ಹುಣಸೆಹಣ್ಣು ಹೆಕ್ಕಿ ಮನೆಗೆ ಹೋಗ್ತೇನೆ ಎಂದು ಹೆಕ್ಕುತ್ತಾ ನಿಂತಳು. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಂದ ಹೊರ ಬಿದ್ದ ಗಂಡಿನಾಕಾರ ಸಾಕ್ಷಾತ್ ತಿಮ್ಮಣ್ಣನದೇ ಆಗಿತ್ತು. ಅಲ್ಲಿ ಹೆಂಡತಿಯನ್ನು ಕಂಡು ಒಮ್ಮೆ ಬೆಚ್ಚಿಬಿದ್ದ ತಿಮ್ಮಣ್ಣ ಅಲ್ಲಿ ನಿಲ್ಲದೇ ಮನೆ ಕಡೆ ಹೆಜ್ಜೆ ಹಾಕಿದ.
ಶರೀರವೆಲ್ಲಾ ಮರಗಟ್ಟಿದಂತೆ ಸ್ತಬ್ಧಳಾಗಿದ್ದಳು ಪಾರ್ವತಿ.
ಮತ್ತೆಯೇ ಗೊತ್ತಾಗಿದ್ದು ಪಾರ್ವತಿಗೆ….. ಇಲ್ಲೀಗ ಶಾಂತಪ್ಪ ಇಲ್ಲ….. ಅವನ ಹೆಂಡತಿ ಎನಿಸಿಕೊಂಡ ಈ ಹೆಣ್ಣನ್ನು ತನ್ನ ಗಂಡನೇ ಇಟ್ಟುಕೊಂಡಿದ್ದಾನೆ ಎಂದು. ಇದೇ ಕೋಣೆಯೊಳಗೆ ಗೋಡೆಗೆ ತಲೆ ಗಟ್ಟಿಸಿಕೊಂಡು ಅಳುವಷ್ಟು ಅತ್ತಳು. ಹೇಳಿಕೊಳ್ಳಲೇನು ತವರಿತ್ತೇ ಅವಳಿಗೆ…..?
ಕತ್ತಲಾಗುತ್ತಿದ್ದಂತೆ ತನ್ನ ಕೋಣೆಯ ಬಾಗಿಲೆಳೆದು ಚಿಲಕ ಹಾಕಿಕೊಂಡ ಪಾರ್ವತಿ ಆ ದಿನ ಸಾಯುವುದೊಂದೇ ಉಳಿದ ಮಾರ್ಗ ತನಗಿನ್ನು ಎಂದುಕೊಂಡಿದ್ದಳು. ಆದರೆ ಶಾಂತಪ್ಪನಂತೆ ನಾನೂ ಸದ್ದಿಲ್ಲದೆ ಮರೆಯಾದರೆ ಅವರಿಗೆ ಇನ್ನಷ್ಟು ಸಲೀಸು ಎಂಬ ಸತ್ಯ ಅವಳಿಗೆ ಅರಿವಾಗಿ ಇಲ್ಲಾ….. ಇವರ ಮುಂದೆಯೇ ನಾನು ಬದುಕಿ ತೋರಿಸುತ್ತೇನೆ ಎಂಬ ಛಲವನ್ನು ಹೊತ್ತಿದ್ದಳು.
ಪಾರ್ವತಿ ಮತ್ತು ತಿಮ್ಮಣ್ಣನ ನಡುವೆ ಮೌನದ ಗೋಡೆಯೊಂದು ಸದ್ದಿಲ್ಲದೆ ಎದ್ದುನಿಂತಿತ್ತು. ಅಲ್ಲಿಂದ ನಂತರ ಗಂಡನಿಗೆ ಹೆದರುವುದನ್ನು ಬಿಟ್ಟಳು. ಹೇಗೂ ತನ್ನ ಹೆಸರಿನಲ್ಲೇ ಇದ್ದ ಅಡಿಕೆ ತೋಟದ ಸಮಸ್ತ ವ್ಯವಹಾರವನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡಳು. ತಿಮ್ಮಣ್ಣನಿಗೆ ಎದುರು ಮಾತನಾಡಲು ಧೈರ್ಯ ಬರಲಿಲ್ಲ.
ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟ ಹಣ ಬೇಕಾದಾಗ ಕೋಣೆಯೊಳಕ್ಕೆ ನುಗ್ಗಿ ಬಾಚಿಕೊಂಡು ಹೊರಡುತ್ತಿದ್ದ ತಿಮ್ಮಣ್ಣನಿಗೆ ಹೆಂಡತಿ ಕೇವಲ ಮನೆ ನೋಡಿಕೊಳ್ಳಲು ಇರುವ ಹೆಣ್ಣಷ್ಟೇ ಆಗಿದ್ದಳು. ಇಲ್ಲಿ ತಾನು ಕಷ್ಟಪಟ್ಟು ದುಡಿದ ಹಣವೆಲ್ಲಾ ಅವಳ ಮನೆಗೆ ಸೇರುವ ವಿಷಯದ ಅರಿವಾದೊಡನೆಯೇ ಪಾರ್ವತಿ ಕಬ್ಬಿಣದ ಪೆಟಾರಿಗೆ ಬೀಗ ಹಾಕಿ ಕೈಗೊಂಚಲನ್ನು ತನ್ನಲ್ಲೇ ಇಟ್ಟುಕೊಂಡು ಓಡಾಡತೊಡಗಿದಳು. ಇದರಿಂದ ತಿಮ್ಮಣ್ಣನಿಗೆ ಬೇಕುಬೇಕಾದಂತೆ ಖರ್ಚುಮಾಡಲು ಹಣ ಸಿಗದೇಹೋಯಿತು.
ಒಂದೆರಡು ಸಲ ಮಾನ ಮರ್ಯಾದೆ ಬಿಟ್ಟು ಕೇಳಿ ನೋಡಿದ. ಪಾರ್ವತಿ ಒಂದು ಕಾಸು ಕೊಡುವುದಿಲ್ಲ ಎಂದು ಗಟ್ಟಿಯಾಗೇ ಹೇಳಿಬಿಟ್ಟಳು. ತಿಮ್ಮಣ್ಣ ಸಿಟ್ಟಿನ ಭರದಲ್ಲಿ ಮಾಮೂಲಿನಂತೆ ಕೋಲೆತ್ತಿ ಹೊಡೆಯಲು ಬಂದಾಗ ಆ ಕೈಯನ್ನು ಅರ್ಧದಲ್ಲೆ ತಡೆದು ಅದೇ ಕೋಲನ್ನೆಳೆದುಕೊಂಡು ತಾನೇ ಬಾರಿಸಿದ್ದಳು. ಅದೂ ಕೈ ಸೋಲುವಷ್ಟು….. ತನ್ನ ನೋವುಗಳಿಗೆಲ್ಲಾ ಮುಲಾಮು ಅವನ ಚೀರುವಿಕೆ ಎಂದುಕೊಳ್ಳುವಷ್ಟು….. “ನಿನ್ನ ದಮ್ಮಯ್ಯಾ ಕೈ ಮುಗೀತೀನಿ ಬಿಟ್ಟು ಬಿಡೇ” ಎಂದು ಕಾಲುಹಿಡಿದು ಅತ್ತಿದ್ದ ತಿಮ್ಮಣ್ಣ. ಮುರಿಯುವಂತಾಗಿದ್ದ ಕೋಲನ್ನು ಅವನ ಮೇಲೆಸೆದು ಹೊರ ಬಂದಿದ್ದಳು.
ಈಗ ತಿಮ್ಮಣ್ಣ ಮನೆಗೆ ಬರುವುದನ್ನೇ ನಿಲ್ಲಿಸಿದ್ದ. ಅಲ್ಲೇ ತೋಟದ ಕೊಟ್ಟಿಗೆಯಲ್ಲೇ ಇರುತ್ತಿದ್ದ. ಅವರಿವರಲ್ಲಿ ಮೊದಲಿನಂತೆ ಸಾಲಕ್ಕಾಗಿ ಬೇಡಿದರೂ ಅವನ ಕಲ್ಯಾಣಗುಣ ತಿಳಿದಿದ್ದ ಯಾರೂ ಅವನಿಗೆ ಚಿಕ್ಕಾಸು ಕೊಡುವುದಕ್ಕೆ ಸಿದ್ಧರಿರಲಿಲ್ಲ. ಹಣ್ಣಡಿಕೆ ಹೆಕ್ಕಿ ಮಾರುವುದು ಮಾತ್ರ ಅವನ ಉತ್ಪತ್ತಿಯ ಮೂಲ. ಆದರೆ ಪಾರ್ವತಿ ತೋಟದಲ್ಲೆಲ್ಲಾ ನಿತ್ಯವೂ ಒಂದು ಅಡಿಕೆಯೂ ಉಳಿಯದಂತೆ ಹೆಕ್ಕಿ ತಂದು ಮನೆಯಂಗಳದಲ್ಲಿ ಹಾಕುತ್ತಿದ್ದಳು. ಒಮ್ಮೆ ಅಡಿಕೆ ಹೆಕ್ಕುತ್ತಿದ್ದವಳಿಗೆ ತುಂಬಿದ ಬಸುರಿಯಾಗಿದ್ದ ಅವಳು ಕಣ್ಣಿಗೆ ಬಿದ್ದಿದ್ದಳು. ಆಗ ಯಾಕೋ ಹೊಟ್ಟೆಯೊಳಗಿನಿಂದ ನೋವೊಂದು ಒದ್ದುಕೊಂಡು ಬಂದಂತೆ ಒಳಗೊಳಗೇ ಕುಸಿದಿದ್ದ ಪಾರ್ವತಿಗೆ ಮತ್ತೆ ಕೆಲವೇ ದಿನಗಳಲ್ಲಿ ಇನ್ನೊಂದು ಅಚ್ಚರಿ ಕಾದಿತ್ತು.
ಹಟ್ಟಿಯಲ್ಲಿ ಹಾಲು ಕರೆಯುತ್ತಿದ್ದ ಪಾರ್ವತಿಗೆ ಎಳೆಮಗುವೊಂದು ಅಳುವ ಸದ್ದು ತನ್ನ ಮನೆಯೊಳಗೇ ಕೇಳಿಸಿದಂತಾಗಿ ಗಡಬಡಿಸಿ ಹೊರಗೆ ಬಂದಿದ್ದಳು. ಬಟ್ಟೆಯಲ್ಲಿ ಸುತ್ತಿದಂತಿದ್ದ ಹಸು ಕಂದ ಆಗಷ್ಟೇ ನಿದ್ದೆಯಿಂದ ಎದ್ದು ಜೋರಾಗಿ ಚೀರುತ್ತಿತ್ತು. ಅಂದರೆ ಇಲ್ಲೇ ಯಾರೋ ಇದ್ದಾರೆ ಎಂದು ಹೊರಗೆ ಬಂದಳು. ನಿರ್ಮಾನುಷವಾಗಿದ್ದ ಅಂಗಳ ಅವಳನ್ನಣಕಿಸಿತು. ಪಕ್ಕನೇ ಕೋಣೆಯೊಳಗೆ ನಡೆದರೆ ಟ್ರಂಕೆಲ್ಲಾ ಎಳೆದಾಡಿಕೊಂಡಿತ್ತು. ಒಡವೆ ಇಟ್ಟಿದ್ದ ಪುಟ್ಟ ಕರಡಿಗೆ ಬರಿದಾಗಿತ್ತು. ಅಲ್ಲೇ ಹತ್ತಿರವಿದ್ದ ಹಣವೂ ಕಾಣೆಯಾಗಿತ್ತು. ‘ರಕ್ಕಸ ಸಂತಾನದವು ಇವು….. ಮನುಷ್ಯರೇ ಅಲ್ಲ…. ವಾರೆವ್ವಾ…. ಸರಿಯಾದ ಜೋಡಿ’ ಎನ್ನಿಸಿ ನಗು ಉಕ್ಕಿತು. ಅತ್ತ ಮಗು ಅಳುತ್ತಿದ್ದರೆ ಪಾರ್ವತಿ ಕೇಕೆಹಾಕಿ ನಗುತ್ತಿದ್ದಳು…..!!
ಸ್ವಲ್ಪ ಹೊತ್ತಷ್ಟೇ…… ಅಲ್ಲೇ ಕುಳಿತಿದ್ದ ಅವಳಿಗೆ ಅಲುಗಿದ ಮಗುವಿನ ಎಳೆ ಕಾಲುಗಳು ತಾಕಿದಾಗ ಎದೆಯೊಳಗೆಲ್ಲಾ ಕಂಪನ.
ಊರಲ್ಲಿ ಕೆಲವರು ಅನುಕಂಪ ತೋರಿಸುತ್ತಾ ಬಂದು ತಿಮ್ಮಣ್ಣನನ್ನು ಅಲ್ಲಿ ಕಂಡೆ, ಇಲ್ಲಿ ಕಂಡೆ…. ಹೀಗಾಗಬಾರದಿತ್ತು.. ಎಂದೆಲ್ಲಾ ಹೇಳುವವರನ್ನು “ನೋಡಿ ನಂಗೂ ನೀವು ಹೇಳೋ ತಿಮ್ಮಣ್ಣಂಗೂ ಸಂಬಂಧ ಮುರ್ದುಬಿದ್ದು ವರ್ಷಾತು….. ಆ ಸುದ್ದಿ ಹೇಳೋವ್ರು ಅಂತಾದ್ರೆ ನನ್ ಮನೆ ಕಡೆ ಬರ್ಲೇ ಬೇಡಿ” ಎಂದು ನಿಷ್ಠುರವಾಗಿಯೇ ನುಡಿದು ಅವರನ್ನು ದೂರವಿಟ್ಟಿದ್ದಳು.
ಊರವರೆಲ್ಲ ಬೆರಳುತೋರಿಸಿ ನಗುತ್ತಿದ್ದರೂ ಎದೆಗುಂದದೆ ಆ ಹಸುಗೂಸನ್ನು ಬೆಳೆಸಿ ದೊಡ್ಡದು ಮಾಡಿದ್ದಳು. ತಲೆಗೊಂದರಂತೆ ಅವಳ ಬಗ್ಗೆ ಮಾತನಾಡುತ್ತಿದ್ದವರು ಈಗ ಅವಳ ದಿಟ್ಟತನ ಮೆಚ್ಚಿ ಹೊಗಳುತ್ತಿದ್ದರು.
ನರಹರಿಗಾಗ ಹನ್ನೆರಡರಷ್ಟು ವರ್ಷ ಇದ್ದಿರಬಹುದು. ಪಾರ್ವತಿ ಎದ್ದು ಹೊರ ಬಾಗಿಲು ತೆಗೆಯುವಾಗ ಅಲ್ಲೇ ಯಾರೋ ಮಲಗಿದಂತೆ ಕಂಡಿತ್ತು. ಮುಖವನ್ನು ನೆಲದ ಕಡೆಗೆ ಒತ್ತಿ ಬಿದ್ದಿದ್ದ, ಪಾರ್ವತಿ ಎಷ್ಟು ಮಾತನಾಡಿಸಿದರೂ ಮಾತನಾಡದ ಆ ಮನುಷ್ಯನ ಉಸಿರೊಂದು ತಿದಿ ಒತ್ತಿದಂತೆ ಕೇಳಿಸುತ್ತಿತ್ತು. ಈಗಲೋ ಆಗಲೋ ಪ್ರಾಣ ಬಿಡುವಂತಿದ್ದ. ಹೆದರಿದ ಪಾರ್ವತಿ ಅಕ್ಕಪಕ್ಕದವರನ್ನು ಕರೆಸಿ ಬಿದ್ದಿದ್ದವನನ್ನು ಏಳಿಸಿದಾಗಲೇ ತಿಮ್ಮಣ್ಣನ ಗುರುತು ಹತ್ತಿದ್ದು. ಎಲ್ಲರೂ ಸೇರಿ ಆಸ್ಪತ್ರೆಗೆ ಸೇರಿಸಿದರು. ಹೆಚ್ಚೇನು ದಿನ ಜೀವ ನಿಲ್ಲುವಂತಿಲ್ಲ. ಇಲ್ಲಿದ್ದರೂ ಮನೆಯಲ್ಲಿದ್ದರೂ ಒಂದೇ…. ಮನೆಗೆ ಕರೆದುಕೊಂಡು ಹೋಗೋದೇ ಒಳ್ಳೆಯದು ಎಂದಿದ್ದರು ವೈದ್ಯರು.
ಏನು ಮಾಡುವುದು ಎಂದು ಕೈ ಹಿಸುಕುತ್ತಾ ನಿಂತವಳಿಗೆ ತಿಮ್ಮಣ್ಣನ ಕಣ್ಣಿನಲ್ಲಿ ಹರಿದು ಹೋಗುತ್ತಿರುವ ನೀರು, ಏನನ್ನೋ ಹೇಳಬಯಸುವ ತುಟಿಗಳ ಕಂಪನ ಕಾಣಿಸಿ ಒಂದು ನಿರ್ಧಾರಕ್ಕೆ ಬಂದವಳಂತೆ ಮನೆಗೆ ಒಯ್ದಳು. ಮತ್ತೆ ಹೆಚ್ಚು ದಿನ ಇರಲಿಲ್ಲ ತಿಮ್ಮಣ್ಣ.
ಕಾಷ್ಠ ಸಿದ್ಧವಾಗಿತ್ತು. ಹೆಣವನ್ನೆತ್ತಿ ಮೇಲಿಟ್ಟಾಗಿತ್ತು. ಹೆದರುತ್ತಲೇ ಬೆಂಕಿಯಿಟ್ಟ ನರಹರಿಯನ್ನು ಅವುಚಿಕೊಂಡು ಮನೆಗೆ ಬಂದಿದ್ದಳು ಪಾರ್ವತಿ.
ಬಚ್ಚಲು ಮನೆಗೆ ನರಹರಿಯನ್ನು ಕರೆದೊಯ್ದು ಅವನ ತಲೆಗೆ ನಾಲ್ಕು ಚೆಂಬು ತಣ್ಣೀರು ಎರೆದು ತಾನೂ ಮಿಂದು ಬಂದು, ಮನೆ ಶುದ್ಧ ಮಾಡಿ ಅನ್ನಕ್ಕೆ ಎಸರಿಟ್ಟಿದ್ದಳು.
“ಅಮ್ಮಾ…… ಅವ್ರು ನನ್ನಪ್ಪಾನಾ…..” ನರಹರಿ ಕೇಳಿದ್ದ.
ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ನರಹರಿಗೆ ಹೇಳಿ “ಬರೀ ಹುಟ್ಟಿಸಿಬಿಟ್ರೆ ಅಪ್ಪ ಆಗ್ತಾರೆ ಅಂತಾದ್ರೆ ಅವ್ರು ನಿನ್ನಪ್ಪ ಎಂದು ಅವನ ಕಣ್ಣುಗಳನ್ನು ನೋಡುತ್ತಲೇ ಹೇಳಿದ್ದಳು ಪಾರ್ವತಿ.
ತನ್ನರಿವಿಗೆ ಬಂದಷ್ಟನ್ನೇ ಅರ್ಥಮಾಡಿಕೊಂಡ ನರಹರಿ ಸುಮ್ಮನೆ ಪಾರ್ವತಿಯ ಮಡಿಲಿಗೊರಗಿದ್ದ. ಮತ್ತೆ ಆ ಮನೆಯಲ್ಲೆಂದೂ ತಿಮ್ಮಣ್ಣನ ಹೆಸರೇ ಕೇಳಲಿಲ್ಲ.
ತೋಟ ಎಂದರೆ ಹುಚ್ಚು ಎನ್ನುವಷ್ಟು ಇಷ್ಟ ಇದ್ದ ನರಹರಿ ಹೆಚ್ಚಿಗೆ ಓದದಿದ್ದರೂ ಕೃಷಿಯಲ್ಲಿ ಪಂಡಿತನಾದ. ಅಡಿಕೆ, ಕರಿಮೆಣಸು, ಭತ್ತ, ತೆಂಗು ಎಲ್ಲವೂ ಅವನ ಕೈಹಿಡಿದವು. ಕಾವೇರಿ ಮನೆ ತುಂಬಿದಳು. ಮುದ್ದಾದ ಎರಡು ಮಕ್ಕಳ ತಾಯಾದಳು. ಪಾರ್ವತಿಯೇ ಅಚ್ಚೆಯಿಂದ ಸೊಸೆಯ ಬಾಣಂತನ ಮಾಡಿದ್ದಳು.
ಈಗೊಂದು ಮೂರು ವರ್ಷದ ಕೆಳಗೆ ಜಾರಿ ಬಿದ್ದಿದ್ದೊಂದು ನೆವವಾಗಿ ಹಾಸಿಗೆ ಹಿಡಿದಿದ್ದ ಪಾರ್ವತಿಗೆ ಜೀವನೋತ್ಸಾಹವೇನು ಕಡಮೆಯಾಗಿರಲಿಲ್ಲ.
“ಅಯ್ಯೋ…. ಎಷ್ಟು ಚೆನ್ನಾಗಿ ಓಡಾಡಿಕೊಂಡಿದ್ರಿ….. ಮಲಗೋ ಹಾಗಾಯ್ತಲ್ಲ ಪಾಪ” ಅಂತ ಯಾರಾದರೂ ಅನ್ನುತ್ತಿದ್ದ ಕನಿಕರದ ಮಾತಿಗೆ ಉತ್ತರವಾಗಿ “ಅಯ್ಯೋ ಅದಕ್ಕೆ ಪಾಪ ಅಂತ ಯಾಕೆ ಹೇಳ್ತೀರಿ…. ಪುಣ್ಯ ಅನ್ನಿ…. ಸಾಕು ಇಷ್ಟು ದಿನ ಎಲ್ಲರ ಸೇವೆ ಮಾಡಿದ್ದು. ಇನ್ನು ಸ್ವಲ್ಪ ದಿನ ಮಗ ಸೊಸೆಯ ಕೈಯಲ್ಲಿ ಸ್ವಲ್ಪ ಚಾಕ್ರಿ ಮಾಡಿಸಿಕೋ ಅಂತ ಭಗವಂತ ಹೀಗೆ ಮಾಡಿದ್ದಾನೆ ಅಷ್ಟೇ” ಅಂತ ನರಹರಿ ಹೇಳುತ್ತಿದ್ದರೆ, ಪಾರ್ವತಿ ಹಲ್ಲಿಲ್ಲದ ಬಾಯಿ ತೆರೆದು ನಗುತ್ತಿದ್ದಳು. ನರಹರಿಯ ಕಡೆ ನೋಡುತ್ತಿದ್ದ ಅವಳ ಕಣ್ಣೋಟದಲ್ಲಿ ಹೆಮ್ಮೆ ಕುಣಿಯುತ್ತಿತ್ತು.
ಇಷ್ಟು ಹೊತ್ತು ಕಥೆ ಹೇಳುತ್ತಿದ್ದ ಗೋಡೆಗಳೀಗ ಯಾವುದೋ ಶಬ್ದಕ್ಕೆ ಅಂಜಿ ಮೌನವಾದವು.
“ಕಾವೇರೀ…..” ಮತ್ತೆ ನರಹರಿಯ ಸ್ವರ ಕೇಳಿತು.
“ಸ್ವಲ್ಪ ಬಿಸಿ ನೀರು ತಾ….. ಅಮ್ಮನ ಮೈ ಸ್ವಲ್ಪ ಒರೆಸಿ ಕುರ್ಚಿಯಲ್ಲಿ ಕೂರಿಸುವ ಬಾ…..”
ಕಾವೇರಿ ಒಲೆ ಮೇಲಿಟ್ಟಿದ್ದ ನೀರು ಬಿಸಿಯಾಗುವ ಮೊದಲೇ ದೊಡ್ಡಸ್ವರದಲ್ಲಿ ನರಹರಿಯ ಅಳು ಕೇಳಿಸಿತು. ಓಡಿ ಬಂದ ಕಾವೇರಿಗೆ ಕಾಣಿಸಿದ್ದು ಉಸಿರಿಲ್ಲದೆ ಮಲಗಿದ್ದ ಪಾರ್ತತ್ತೆ…. ಬದಿಯಲ್ಲಿ ಅಳುತ್ತಿರುವ ನರಹರಿ….. ಅವನ ಸ್ವರಕ್ಕೆ ತನ್ನದನ್ನೂ ಸೇರಿಸಿದಳೀಗ ಕಾವೇರಿ.
ಆಗಸದಲ್ಲಿ ಇನ್ನೊಂದು ಹೊಳೆಯುವ ನಕ್ಷತ್ರ ಸೇರ್ಪಡೆಯಾಯಿತು.