“ನಮ್ಮದು ಜಾತ್ಯತೀತ ರಾಷ್ಟ್ರ ಗೊತ್ತಾ?” ಎಂದ ರಾಮು;
“ಅಂದ್ರೆ ಜಾತಿ ಇಲ್ಲದ ರಾಷ್ಟ್ರ…..” ಎಂದು ವಿವರ ನೀಡಿದಳು ರಾಮಿ.
ವಿಶ್ವ ಮತ್ತು ವಿಶಾಲು ವಿದ್ಯಾ ಇಲಾಖೆ ಸೇರಿದ ಮೇಲೆ ಮಕ್ಕಳಿಗೆ ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ಇತರ ಕೆಲಸಗಳ ನಿರತರಾಗಿರುತ್ತಾರೆ. ಚುನಾವಣೆ ಬಂದರೆ ಕೈ ಬೆರಳ ಮೇಲೆ ಚುಕ್ಕೆ ಇಡುವ ಕೆಲಸ. ಜನಗಣತಿ ಬಂದರೆ ತಲೆ ಎಣಿಸುವ ಕಾಯಕ. ಅಷ್ಟೇ ಅಲ್ಲ, ದನಗಳನ್ನು ಎಣಿಸಲು ವಿಶ್ವ ಹೋಗಿದ್ದಾನೆ. ಹಂದಿಗಳನ್ನು ವಿಶಾಲು ಮುಟ್ಟಿ ಮುಟ್ಟಿ ಎಣಿಸಿದ್ದಾಳೆ. ಎಲ್ಲ ಕೆಲಸಗಳನ್ನೂ ಈ ದಂಪತಿಗಳು ಯಶಸ್ವಿಯಾಗಿ ಪೂರೈಸಿದ್ದಾರೆ. ಕಳೆದ ತಿಂಗಳು ಅವರು ಕೈಗೊಂಡಿದ್ದು `ಜಾತಿ ಗಣತಿ!’ ಅವರ ಅನುಭವದ ಒಂದು ಸ್ಯಾಂಪಲ್ ಇಲ್ಲಿದೆ.
ಒಂದು ಮಟ ಮಟ ಮಧ್ಯಾಹ್ನ. ವಿಶ್ವ ಮತ್ತು ವಿಶಾಲು ರಾಮು ಎಂಬವರ ಮನೆ ಬಾಗಿಲು ತಟ್ಟಿದರು.
ಅರೆನಿದ್ದೆಯಲ್ಲಿ ಬಾಗಿಲು ತೆಗೆದ ಮನೆಯಾತ ಸಿಡುಕಿದ.
“ನಿಮಗೆ ಹೊತ್ತು, ಗೊತ್ತು ಇಲ್ಲವೇನ್ರೀ? ನೀವು ಕೇಳೋ ಮೊದಲೇ ಹೇಳಿಬಿಡ್ತೀನಿ, ನಮಗೆ ಕ್ರೆಡಿಟ್ ಕಾರ್ಡು ಬೇಕಾಗಿಲ್ಲ….. ಇನ್ಶುರೆನ್ಸ್ ಅಂತೂ ಮೊದಲೇ ಬೇಡ….. ಮಧ್ಯಾಹ್ನದ ನಿzಗೂ ನೂರು ಕಂಟಕ….. ತೆಪ್ಪಗೆ ಹೊರಡಿ.”
“ಕ್ಷಮಿಸಿ ಸಾರ್, ನಾವು ಈಗ ಆನ್ ಡ್ಯೂಟಿ. ಜಾತಿ ಗಣತಿಗೆ ಬಂದಿದ್ದೀವಿ” ಎಂದು ವಿಶಾಲು ಧೈರ್ಯ ಮಾಡಿ ಹೇಳಿದಳು.
“ಜಾತಿ ಸುದ್ದಿ ಎತ್ತಿದರೆ ಸರ್ಕಾರ ಕ್ರಮ ತಗೊಳ್ಳುತ್ತೆ ಗೊತ್ತಾ…..?” ಎಂದು ಆತ ಹೆದರಿಸಿದ.
“ಸರ್ಕಾರಾನೇ ಜಾತಿಗಣತಿಗೆ ನಮ್ಮನ್ನು ಕಳಿಸಿದೆ ಸಾರ್’ ಎಂದ ವಿಶ್ವ.
“ಅವರಿಗೆ ಬೇರೆ ಕೆಲ್ಸ ಇಲ್ಲವಾ?”
“ವಿಧಾನಸೌಧದ ಮುಂದೆ ನಿಂತು ಮತದಾರ ಈ ಪ್ರಶ್ನೆ ಕೇಳಬೇಕು” ಎಂದ ವಿಶ್ವ.
ಪ್ರಶ್ನೆಗಳ ಸರಮಾಲೆ
ವಿಧಿಯಿಲ್ಲದೆ ದಂಪತಿಗಳನ್ನು ಒಳಗೆ ಬರಮಾಡಿಕೊಂಡ ರಾಮು. ಜನಗಣತಿ ವಿವರ ಪಡೆಯಲು ದೊಡ್ಡ ಪುಸ್ತಕ ಹರವಿಕೊಂಡು ಕೂತರು. ಕೈಲಿ ಪೆನ್ನು ಹಿಡಿದಾಗ ಪ್ರಶ್ನೆಗಳ ಸರಮಾಲೆ ಶುರು ಆಯಿತು.
“ಮೊದಲನೇ ಪ್ರಶ್ನೆ. ನಿಮ್ಮ ಜಾತಿ?” ವಿಶ್ವ ಶುರುಮಾಡಿದ.
ರಾಮನಿಗೆ ಸಿಟ್ಟು ಬಂತು.
“ಮನುಷ್ಯ ಜಾತಿ…..”
ವಿಶ್ವ ಬರೆದುಕೊಳ್ಳಲು ನೋಡಿದ, ಮನುಷ್ಯ ಜಾತಿಗೆ ಕಾಲಂ ಇರಲಿಲ್ಲ. ಕೋಡ್ ಸಂಖ್ಯೆ ಸಹ ಕೊಟ್ಟಿರಲಿಲ್ಲ.
“ಅಲ್ಲ ಸಾರ್, ನಿಮ್ಮ ಜಾತಿ ಯಾವುದು ಅಂತ….. ಇಲ್ಲಿ ನಾವು ಜಾತಿ ಸೂಚಿಸಬೇಕು…..”
“ನಿಮಗೆ ಬುದ್ಧಿ ಇದೆಯೇನ್ರೀ? ಎ ಜಾತಿಗಳ್ನೂ ಹೋಗಲಾಡಿಸಬೇಕು ಅಂತ ಕನಕದಾಸರು, ಬಸವಣ್ಣನವರು ಹೇಳಿಲ್ಲವಾ? ಜಾತಿಗಳ್ನೆಲ್ಲಾ ವಿಂಗಡಣೆ ಮಾಡಿ ಜನಗಳ ಮಧ್ಯೆ ಜಾತಿ ಜಗಳ ತಂದಿಡ್ತಾ ಇದ್ದೀರಲ್ರೀ…..?”
“ಸಾರ್, ನಮಗೆ ಸರ್ಕಾರ ವಹಿಸಿರೋ ಕೆಲಸ… ನಾವು ಮಾಡ್ಲೇ ಬೇಕಾಗಿದೆ… ದಯವಿಟ್ಟು ಹೇಳಿ…” ಎಂದು ವಿಶಾಲು ಅಂಗಲಾಚಿದಳು.
“ಆಯ್ತು ಬರ್ಕೊಳ್ಳಿ, ಜಾತಿ – ಹಿಂದು…”
“ಪ್ಯೂರ್ ಹಿಂದೂನಾ ಸಾರ್…..?”
“ಅದರನ್ರೀ ಪ್ಯೂರು? ನಮ್ಮಲ್ಲಿ ಕಲಬೆರಕೆ ಇಲ್ಲವೇ ಇಲ್ಲ….. ಹಿಂದುಗಳು ಯಾವತ್ತೂ ಪ್ಯೂರಿಟಿಯಲ್ಲಿ ಮುಂದು.”
“ಉಪಜಾತಿ ಹೇಳಿ ಸಾರ್……”
“ಥೂ ನಿಮ್ಮ….. ಜಾತಿ ಕೇಳಿದ ಮೇಲೆ ಉಪಜಾತಿನಂತೆ!”
“ಕಾಲಂ ಇದೆ ಸಾರ್…..”
“ನಾನು ಹಿಂದು….. ಬ್ರಾಹ್ಮಣ…..”
“ಬ್ರಾಹ್ಮಣರಲ್ಲಿ ಯಾವುದು ಸಾರ್?”
“ಏನ್ರೀ ಇದು….. ಬ್ರಾಹ್ಮಣರಲ್ಲಿ ಯಾವುದು ಅಂದ್ರೆ ಏನ್ರೀ ಹೇಳೋದು?”
“ಇಲ್ಲಿ ತುಂಬಿಸಲೇಬೇಕು, ಕೋಡ್ ನಂಬರ್ ಹಾಕಲಿಲ್ಲ ಅಂದರೆ ಕಂಪ್ಯೂಟರ್ ಸಿಟ್ಟು ಮಾಡಿಕೊಂಡು ಹ್ಯಾಂಗಾಗುತ್ತೆ.”
“ಹಗ್ಗ ತಂದಿಲ್ಲವಾ?” ರಾಮು ಸಿಟ್ಟಿನಿಂದ ಕೇಳಿದ.
ವಿಶಾಲು ಸಮಾಧಾನ ಮಾಡಿದಳು.
“ಅಂದರೆ, ನೀವು ನಾಮ ಹಾಕ್ತೀರಾ…..? ವಿಭೂತಿ ಇಡ್ತೀರಾ? ಸಿಂಗಲ್ ನಾಮಾನಾ? ಡಬ್ಬಲ್ ನಾಮಾನಾ? ಅಥವಾ ಮುದ್ರೇನಾ? ಕಾಲಂಗಳು ತುಂಬಿಸಬೇಕು…”
“ನಾವು ಯಾವ ಚಿಹ್ನೆ ಹಾಕಿದ್ರೆ ನಿಮಗೇನ್ರೀ…..? ಕೈಗೆ ಏನು ಸಿಕ್ಕಿದ್ರೆ ಅದನ್ನ ಹಾಕ್ಕೋತೀವಿ… ನಾವೇ ಜಾತಿ ಬಗ್ಗೆ ಯೋಚನೆ ಮಾಡೋಲ್ಲ….. ಸರ್ಕಾರ ಯಾಕೆ ಯೋಚಿಸಬೇಕು? ನನಗೆ ಮೂರು ಜನ ಹೆಣ್ಣು ಮಕ್ಕಳು. ಎಲ್ಲರಿಗೂ ಮದುವೆ ಆಗಿದೆ. ನಮ್ಮ ಮನೇಲಿ ಜಾತಿಗೆ ಒಬ್ಬ ಅಳಿಯ….. ಮುದ್ರೆ ಹಾಕೋ ಅಳಿಯ ಒಬ್ಬ. ಸಿಂಗಲ್ ನಾಮ ಹಾಕೋವನು ಇನ್ನೊಬ್ಬ. ಮೂರು ನಾಮದವ ಮತ್ತೊಬ್ಬ ನನಗೆ ನಾಮದ ಕೆಳಗೆ ಗೂಟ ಇದೆ…..”
ವಿಶಾಲೂಗೆ ಗಾಬರಿಯಾಗಿ –
“ಗೂಟಬೇಡ ಸಾರ್, ನಾಮ ಸಾಕು….”
“ಎಷ್ಟು ನಾಮ ಅಂತ ಬರೆಯಲಿ” ಎಂದಳು.
“ಸರ್ವನಾಮ ಅಂತ ಬರ್ಕೊಳ್ಳಿ’ ಎಂದ ರಾಮು.
“ಅದಕ್ಕೆ ಕಾಲಂ ಇಲ್ಲ….. ಡ್ಯಾಷ್ ಹೊಡೆದು ಬಿಡೋಣ…..” ಎಂದು ದಂಪತಿಗಳು ಒಮ್ಮತಕ್ಕೆ ಬಂದರು.
“ಡ್ಯಾಷ್ ಯಾಕೆ ಹೊಡೀತೀರಾ? ಜಾತಿ ಮುಖ್ಯ, ಎಲ್ಲ ನಾಮ ಹಾಕಿ…..” ಎಂದು ರಾಮು ಒತ್ತಾಯ ಮಾಡಿದ.
ವಿಶ್ವ ವಿಧಿಯಿಲ್ಲದೆ ನಾಮದ ಚಿಹ್ನೆಗಳನ್ನು ಪೆನ್ಸಿಲ್ನಲ್ಲಿ ಬರೆದುಕೊಂಡ.
ಆಗದ ನಿರ್ಧಾರ
“ನಿಮ್ಮ ಮನೇಲಿ ಯಾರು ಯಜಮಾನ್ರು?”
ರಾಮುಗೆ ಮೈ ಉರಿಯಿತು.
“ನೋಡಿ, ಇಂಥ ವೈಯಕ್ತಿಕ ವಿಷಯಗಳನ್ನ ಕೆದಕಿ ನಮ್ಮ ಮನೆಯಲ್ಲಿ ಬಿರುಗಾಳಿ ಎಬ್ಬಿಸಬೇಡಿ…..”
“ಯಾಕೆ ಸಾರ್?”
“ಹೋಗ್ಲಿ ಬಿಡಿ” ಎಂದ ವಿಶಾಲು, “ರಾಮು ಅವರ ಹೆಸರೇ ಬರ್ಕೊಳ್ಳೋಣ…..” ಎಂದಳು.
“ನೀವು ನನ್ನ `ಯಜಮಾನ’ ಅಂತ ಬರ್ಕೊಂಡ್ರೆ ನನ್ನ ಹೆಂಡ್ತಿ ಲಟ್ಟಣಿಗೆ ತರ್ತಾಳೆ. ನಿಮ್ಮ ಬುರುಡೆ ಓಪನ್ ಮಾಡ್ತಾಳೆ” ಎನ್ನುವ ವೇಳೆಗೆ ಆತನ ಹೆಂಡತಿ ರಾಮಿ ಬಿರುಗಾಳಿಯಂತೆ ಬಂದಳು.
“ಏನಂತೆ?” ಎಂದಳು.
“ಈ ಮನೆಗೆ ಯಜಮಾನ್ರು ಯಾರು ಅಂತ ಕೇಳ್ತಾ ಇದ್ದಾರೆ…..” ಎಂದ ರಾಮು ಮಡದಿಯ ಮುಂದೆ ಹಲ್ಲು ಗಿಂಜಿದ.
“ನೀವು ಏನಂತ ಹೇಳಿದ್ರಿ?”
“ಮದುವೆ ಆಗಿ ಐದು ವರ್ಷ ಆಯ್ತು….. ಯಜಮಾನ ಯಾರು ಅಂತ ಇನ್ನೂ ನಿರ್ಧಾರ ಆಗಿಲ್ಲ, ಅಂದೆ…..”
“ನಿಮ್ಮಿಬ್ಬರಲ್ಲಿ ಯಾರು ಯಜಮಾನರು ಅಂತ ದಯವಿಟ್ಟು ಹೇಳಿ……” ಎಂದ ವಿಶ್ವ.
“ಸ್ವಲ್ಪ ಒಳಗಡೆ ಬರ್ತೀರ…..” ಎಂದು ರಾಮಿ ಗಂಡನನ್ನು ಕರೆದುಕೊಂಡು ಹೋದಳು. ಒಳಗೆ ಜೋರು ಜಗಳ ನಡೆಯಿತು. ಅನಂತರ ರಾಮು ಈಚೆಕಡೆ ಬಂದ. ಅವನ ತಲೆಗೆ ಪೆಟ್ಟಾಗಿತ್ತು….. ಕೆನ್ನೆ ಕೆಂಪಾಗಿತ್ತು…..
“ಟಿ.ಪಿ. ಕೈಲಾಸಂ ಕಾಲದಿಂದಾನೂ ಇದು ಬಗೆ ಹರಿದಿಲ್ಲ. ಈ ಮನೆಗೆ ಯಾರು ಯಜಮಾನರು ಅನ್ನೋದು ಚರ್ಚಾಸ್ಪದ ವಿಷಯ…..” ಎಂದ ರಾಮ.
“ನಮ್ಮಿಬ್ಬರನ್ನೂ ಅರ್ಧರ್ಧ ಬರ್ಕೊಳ್ಳಿ…..” ಎನ್ನುತ್ತಾ ರಾಮಿ ಈಚೆಗೆ ಬಂದಳು.
“ಅರ್ಧರ್ಧ ಮಾಡಿ ಬರೆದುಕೊಳ್ಳಲು ಸಾಧ್ಯವಿಲ್ಲ ಮೇಡಂ….. ಯಾರಾದರೂ ಒಬ್ಬರು ಮಾತ್ರಾನೇ ಮನೆಗೆ ಯಜಮಾನ ಇರಲು ಸಾಧ್ಯ’ ಎಂದು ವಿಶಾಲು ಕ್ಯಾತೆ ತೆಗೆದಳು.
“ಡಬ್ಬಲ್ ಸಿಮ್ ಇರೋ ಮೊಬೈಲೇ ಬರುತ್ತೆ, ಡಬ್ಬಲ್ ಯಜಮಾನ ಇರೋ ಮನೆ ಇರೊಲ್ಲವಾ?” ಎಂದು ರಾಮಿ ಕುಟುಕಿದಳು.
“ಆಯ್ತು ನನ್ನ ಹೆಂಡ್ತಿ ಹೆಸರೇ ಬರ್ಕೊಳ್ಳಿ…..” ಎಂದ ರಾಮ.
“ಬೇಡ ಬೇಡ, ನನ್ನ ಗಂಡನ ಹೆಸರೇ ಬರ್ಕೊಳ್ಳಿ…..” ಎಂದಳು ರಾಮಿ.
ಆ ಕಾಲಂ `ಡ್ಯಾಷ್ ಹಾಕಿ ಎಂದಳು ವಿಶಾಲೂ. ವಿಶ್ವ ಪುಸ್ತಕದಲ್ಲಿ ಡ್ಯಾಷ್ ಹಾಕಿದ.
“ನಿಮ್ಮ ಮನೇಲಿ ದನಕರುಗಳು ಇವೆಯಾ? ಹಸುಗಳು ಎಷ್ಟು, ಎಮ್ಮೆಗಳು ಎಷ್ಟು……?”
“ನಾನು ಮತ್ತು ನನ್ನ ಹೆಂಡ್ತಿ ಅಷ್ಟೇ… ಯಾರು ಏನು ಅಂತ ನೀವೇ ನೋಡಿ ಬರ್ಕೊಳ್ಳಿ……” ಎಂದ ರಾಮ.
“ವಾಹನಗಳು?”
“ನಮ್ಮ ಮನೆ ಪಕ್ಕದಲ್ಲಿ ಒಂದು ಸ್ಕೂಟರ್ ಇರುತ್ತೆ. ನಮ್ಮ ಮನೆ ಎದುರುಗಡೆ ಎರಡು ಕಾರು ನಿಲ್ಲುತ್ತೆ…..”
“ನಿಮ್ಮ ಮನೆ ಮುಂದೆ ನಿಲ್ಲಿಸೋದು ಅಲ್ಲ ಸಾರ್….. ನಿಮ್ಮ ಮನೇಲಿ ಎಷ್ಟಿದೆ ಅನ್ನೋದು ನಮಗೆ ಮುಖ್ಯ…..”
ರಾಮನಿಗೆ ಮತ್ತೆ ತಲೆ ಕೆಟ್ಟಿತು. “ಏನೋ ಒಂದು ಬರ್ಕೊಳ್ರೀ……” ಎಂದ.
ನಿರಾಧಾರ
“ನಿಮ್ಮ ಮನೇಲಿ ಆಧಾರ್ ಕಾರ್ಡ್ ಇದೆಯಾ?”
ರಾಮುಗೆ ಸಿಟ್ಟು ಬಂತು…..
“ಆಧಾರ್ ಕಾರ್ಡ್ ಮಾಡಿಸೋಕೆ ಅಂತ ಹತ್ತು ಸಲ ಹೋಗಿದ್ದೆ….. ಅದಕ್ಕೂ ವಿಪರೀತ ಕ್ಯೂ… ಇವತ್ತು ಬನ್ನಿ, ನಾಳೆ ಬನ್ನಿ…. ಕಂಪ್ಯೂಟರ್ ಕೆಟ್ಟು ಹೋಗಿದೆ….. ಕ್ಲರ್ಕ್ ರಜಾ….. ಸೂಪರ್ವೈಸರ್ಗೆ ನಾಯಿ ಕಚ್ತು….. ಇದೇ ಆಗೋಯ್ತು…..”
“ಆಧಾರ್ ಕಾರ್ಡ್ ಬೇಕು ಅಂತ ಸರ್ಕಾರ ಹೇಳುತ್ತೆ….. ಸುಪ್ರೀಮ್ ಕೋರ್ಟ್ ಆಧಾರ್ ಕಾರ್ಡ್ ಬೇಡ ಅನ್ನುತ್ತೆ….. ನಾವು ಇಟ್ಕೊಳ್ಳೋದೋ ಬೇಡವಾ? ಅದನ್ನ ನೀವು ನಿರ್ಧಾರ ಮಾಡಿ…..” ಎಂದಳು ರಾಮಿ.
ವಿಶ್ವನಿಗೆ ತಲೆ ಕೆಟ್ಟಿತು.
“ಸಾರ್ ಇಲ್ಲಿ ಕಾಲಂ ಇದೆ. ಅದಕ್ಕೋಸ್ಕರ ಕೇಳ್ತಾ ಇದ್ದೀನಿ….. ದಯವಿಟ್ಟು ಆಧಾರ್ ಕಾರ್ಡ್ ಇದೆಯಾ ಇಲ್ಲವಾ ಅಷ್ಟು ಹೇಳಿ ಸಾಕು…..”
“ಆಧಾರ್ ಕಾರ್ಡ್ ಇದೆ. ಆದರೆ ನಮಗೆ ಕೊಟ್ಟಿಲ್ಲ’ ಎಂದ ರಾಮು.
“ಕೊಡಿಸೋ ಯೋಗ್ಯತೆ ಇದ್ದರೆ ನೀವು ಈ ಪ್ರಶ್ನೆ ಕೇಳಬೇಕು” ಎಂದು ರಾಮಿ ಚುಚ್ಚಿದಳು.
“ವಾಷಿಂಗ್ ಮಿಷೀನು, ರೆಫ್ಪಿಜಿರೇಟರ್ರು, ಗ್ಯಾಸ್ ಇದೆಯಾ?”
ರಾಮೂಗೆ ಆಶ್ಚರ್ಯವಾಯಿತು. ಸಿ.ಎಂ. ಮನೇಲಿ ಗ್ಯಾಸ್ ಇದೆ, ರೆಫ್ರಿಜಿರೇಟರ್ ಇದೆ ಅಂತ ಪೇಪರ್ಗಳಲ್ಲಿ ಓದಿದ್ದ ಸುದ್ದಿ ನೆನಪಾಯಿತು.
“ಸಿ.ಎಂ. ಮನೇಲಿ ಏನೇನು ಇದೆಯೋ ಅವೆ ನಮ್ಮ ಮನೇಲೂ ಇದೆ, ಬರ್ಕೊಳ್ಳಿ…..” ಎಂದ.
ಕಾಲಂಗಳಿಗೆ ಬೇಕಾದ ಹತ್ತಾರು ವಿವರಗಳನ್ನು ಕೇಳಿ ವಿಶ್ವ ಉತ್ತರ ತುಂಬುತ್ತಾ ಹೋದ.
ಸಾರಕ್ಕಿ ಸೈಟು
“ಇದು ನಿಮ್ಮ ಸ್ವಂತ ಮನೇನಾ ಸಾರ್?”
ರಾಮು ಮತ್ತು ರಾಮಿ ಮಧ್ಯೆ ಜಗಳ ಶುರುವಾಯಿತು.
“ನಾನು ಬಡ್ಕೊಂಡೆ… ಸ್ವಂತ ಮನೆ ಕಟ್ಟೋಣ ಅಂತ. ೨೦ ವರ್ಷದ ಹಿಂದೆ ಸಾರಕ್ಕಿ ಕೆರೆ ಹತ್ರ ಸೈಟು ಚೀಪಾಗಿ ಸಿಕ್ತಿತ್ತು….. ಸ್ಟಾಂಪ್ ಖರ್ಚಿಗೆ ಸೈಟು ಬಂದಿರೋದು.”
“ಸಾರಕ್ಕಿ ಕೆರೆ ಒಳಗೆ ಸೈಟ್ ತಗೊಂಡಿದ್ರೆ ಜೆ.ಸಿ.ಬಿ. ಯಂತ್ರ ಬಂದು ದಬಾರ್ ಅಂತ ಮನೆ ಬೀಳಿಸಿರೋದು…..”
“ಆದರೆ ಇರೋಷ್ಟು ದಿನ ಇರಬಹುದಿತ್ತಲ್ಲ?”
ಅವರಿಬ್ಬರ ಮಧ್ಯೆ ಮತ್ತೆ ಜಗಳ ಶುರುವಾಯಿತು.
“ನೋಡಿ ಈ ಮನೆ ನಿಮ್ಮ ಸ್ವಂತದ್ದು ಹೌದೋ ಅಲ್ಲವೋ ಹೇಳಿ ಬಿಡಿ…..”
ರಾಮು ವಿವರ ಕೊಟ್ಟ.
“ನಾವು ಇಲ್ಲಿಗೆ ಬಾಡಿಗೆಗೆ ಬಂದು ಇಪ್ಪತ್ತು ವರ್ಷ ಆಯ್ತು….. ನಾವು ಮನೆ ಬಿಡ್ತಾ ಇಲ್ಲ… ಬಿಡೋ ಯೋಚನೇನೂ ಇಲ್ಲ… ಮುಂದೆ ಇದನ್ನು ಸ್ವಂತ ಮಾಡ್ಕೋತೀವಿ….. ಮನೆ ಓನರ್ಗೆ ಈ ವಿಚಾರ ತಿಳಿಯಬಾರದಷ್ಟೆ.”
“ರೇಷನ್ ಕಾರ್ಡ್ ಇದೆಯಾ? ಅದು ಬಿ.ಪಿ.ಎಲ್ ಕಾರ್ಡಾ?” ವಿಶ್ವ ಕೇಳಿದ.
ರಾಮಿಗೆ ಸಿಟ್ಟು ಬಂತು.
“ಗಿಣಿಗೆ ಹೇಳಿದಂತೆ ಹೇಳಿದೆ, ರೇಷನ್ ಕಾರ್ಡ್ ಮಾಡಿಸಿ ಅಂತ….. ಎದುರುಗಡೆ ಮನೆ ಸಾಹುಕಾರ ಕಾರು ಇಟ್ಟಿದ್ದಾನೆ….. ಅವನ ಹತ್ರ ಬಿ.ಪಿ.ಎಲ್. ಕಾರ್ಡ್ ಇದೆ. ನಮ್ಮ ಹಿಂದಿನ ಮನೆಯವರು ದೊಡ್ಡ ಜಮೀನ್ದಾರು….. ಅವರ ಹತ್ರ ಬಿ.ಪಿ.ಎಲ್. ಕಾರ್ಡಿದೆ. ಮಿನಿಸ್ಟ್ರು ಬಂಧುಗಳ ಹತ್ರ ಬಿ.ಪಿ.ಎಲ್. ಕಾರ್ಡ್ ಇದೆ. ನಮಗೆ ದರಿದ್ರ, ಎ.ಪಿ.ಎಲ್. ಕಾರ್ಡು…… ಕೊಟ್ಟಿದ್ದಾರೆ. ಈ ಕಾರ್ಡಲ್ಲಿ ಏನೂ ಸಿಗೊಲ್ಲ….. ಶೆಖೆ ಆದಾಗ ಕಾರ್ಡಿಂದ ಗಾಳಿ ಬೀಸ್ಕೋಬಹುದಷ್ಟೆ….. ರೂಪಾಯಿಗೆ ಒಂದು ಕೇಜಿ ಅಕ್ಕಿ ನಮಗೆ ಇಲ್ಲ…..”
ವಿಶ್ವ ವಿಶಾಲೂಗೆ ತಲೆ ಕೆಟ್ಟಿತು.
“ಸರ್ಕಾರ ಕೊಡೋಕೆ ತಯಾರಿದ್ರೂ ಕಾರ್ಡ್ ತಗೊಳ್ಳೋಕೆ ನಮ್ಮ ಯಜಮಾನ್ರು ತಯಾರಿಲ್ಲ…..” ಎಂದು ರಾಮಿ ಮೂತಿ ತಿವಿದಳು. ರಾಮನಿಗೆ ಅವಮಾನವಾಯಿತು.
“ಮೇಡಂ, ಆ ಎಪಿಎಲ್ ಕಾರ್ಡ್ ಕೊಡಿ….. ನಂಬರ್ ಹಾಕ್ಕೋತೀವಿ…..” ಎಂದ ವಿಶ್ವ.
“ನಾನು ಕೊಡೋದಿಲ್ಲ….. ಯಾಕೇಂದ್ರೆ ನಾನು ಇದನ್ನೇ ಬಿ.ಪಿ.ಎಲ್. ಕಾರ್ಡ್ ಮಾಡಿಸಬೇಕು ಅಂತ ಇದ್ದೀನಿ… ಎಪಿಎಲ್ನ ಬಿಪಿಎಲ್. ಮಾಡೋಕೆ ಸ್ವಲ್ಪ ದುಡ್ಡು ಖರ್ಚಾಗುತ್ತೆ ಅಷ್ಟೇ……” ಎಂದಳು ರಾಮಿ.
ಯಕ್ಷಪ್ರಶ್ನೆ
ರಾಮು ಮತ್ತೊಂದು ಪ್ರಶ್ನೆ ಎತ್ತಿದ.
“ಕೆಲವು ಊರುಗಳಲ್ಲಿ ಹರಿದಾಡ್ತಿರೋ ಖೋಟಾ ಕಾರ್ಡುಗಳ ವಿಷಯ ಗೊತ್ತಾ? ಊರಿನ ಜನ ಸಂಖ್ಯೆ ಎರಡು ಲP ಆದರೆ ಕಾರ್ಡುಗಳ ಸಂಖ್ಯೆ ಮೂರು ಲP! ಇದು ಹೇಗೆ ಸಾಧ್ಯ?”
ವಿಶಾಲೂಗೆ ಗಡಿಬಿಡಿಯಾಯಿತು.
“ನೋಡಿ. ಇದಕ್ಕೂ ನಮಗೂ ಸಂಬಂಧ ಇಲ್ಲ….. ನೀವೇನಿದ್ರೂ ಸರ್ಕಾರಾನೇ ಕೇಳಬೇಕು…..”
ವಿವರ ಬರೆದುಕೊಂಡ ನಂತರ ಫೋನ್ ನಂಬರ್ ಕೇಳಿದರು.
“ನನಗೆ ಮೊಬೈಲ್ ಕೊಡಿಸೋ ಹೃದಯವಂತಿಕೆ ಇರೋ ಗಂಡ ಸಿಕ್ಕಿಲ್ಲ….. ನಾನು ನಮ್ಮಪ್ಪನ ಹತ್ರ ಬಡ್ಕೊಂಡೆ….. ಇವರು ಸ್ವಾರ್ಥಿಗಳು, ಬೆಳ್ಳಿ ಉಡಿದಾರ ತಗೊಂಡ್ರೂ ಸ್ವಂತಕ್ಕೇ ತಗೋತಾರೆ” ಎಂದಳು.
“ನಿಮ್ಮದೇ ಫೋನ್ ನಂಬರ್ ಹಾಕ್ಕೊಳ್ಳಿ ಪರವಾಗಿಲ್ಲ….. ಆ ಕಾಲಂ ಸುಮ್ಮನೆ ತುಂಬಿದರೆ ಸಾಕಲ್ಲವಾ? ಯಾರು ಫೋನ್ ಮಾಡಿ ಕ್ರಾಸ್ ಚೆಕ್ ಮಾಡ್ತಾರೆ?” ಎಂದ ರಾಮು.
ವಿಶ್ವ ವಿಶಾಲು ಕೈ ಮುಗಿದು ಎದ್ದರು.
“ಬರೀ ಜಾತಿಗಣತಿ ಮಾಡಿದ್ರೆ ಸಾಲದು…… ದೇವಗಣತಿ ಮಾಡಬೇಕು….. ನಮ್ಮ ದೇಶದಲ್ಲಿ ೩೩ ಕೋಟಿ ದೇವತೆಗಳು ಇದ್ದಾರೆ… ದೇವಗಣತಿ ಮಾಡಿಸಿದ್ರೆ ಬೆಸ್ಟಾಗಿರೋದು…..”
“ಈ ಸಮೀಕ್ಷೆಯಲ್ಲಿ ಎಷ್ಟು ಜನ ಭಾಗವಹಿಸಿದ್ದಾರೆ?” ಎಂದು ರಾಮು ಕೇಳಿದ.
“ಎರಡು ಲಕ್ಷ ಮಂದಿಗೆ ಜಾತಿಗಣತಿ ಕೆಲಸ ವಹಿಸಲಾಗಿದೆ….. ಇದರಲ್ಲಿ ಇಪ್ಪತ್ತೆರಡು ಸಾವಿರ ಸೂಪರ್ ವೈಸರ್ಗಳಿದ್ದಾರೆ….. ಎರಡೂವರೆ ಸಾವಿರ ಮಂದಿ ಟ್ರೈನರ್ಸ್ ಇದ್ದಾರೆ…..”
“ಒಟ್ಟು ಖರ್ಚು ಎಷ್ಟು ಆಗಬಹುದು?”
“೨೦೦ ಕೋಟಿ ಖರ್ಚು ಬರುತ್ತೆ?”
“ನಮ್ಮದು ಜಾತ್ಯತೀತ ರಾಷ್ಟ್ರ ಗೊತ್ತಾ?” ಎಂದ ರಾಮು.
“ಅಂದ್ರೆ ಜಾತಿ ಇಲ್ಲದ ರಾಷ್ಟ್ರ…..” ಎಂದು ವಿವರ ನೀಡಿದಳು ರಾಮಿ.
“ಆದರೆ ವೋಟಿಗೋಸ್ಕರ ಜಾತೀನ ಕಡೇವರೆಗೂ ಇಟ್ಕೋಬೇಕಾಗುತ್ತೆ….. ಬಡತನ ಮತ್ತು ಜಾತಿ ನಿವಾರಣೆ ಆದರೆ ವೋಟುಗಳು ಸಿಗೊಲ್ಲ ಮೇಡಂ…..” ಎಂದ ವಿಶ್ವ.
ರಾಮು, ರಾಮಿಗೆ ಖುಷಿ ಆಯಿತು.
“ಸತ್ಯ ಹೇಳಿದ್ದೀರ, ಒಂದು ಲೋಟ ಹಾಲು ಕೊಡ್ತೀವಿ. ಅರ್ಧರ್ಧ ಕುಡ್ಕೊಂಡು ಹೋಗಿ” ಎಂದರು.