ಭಾವಪ್ರಪಂಚದಲ್ಲಿ ಏನುಂಟು ಏನಿಲ್ಲ! ಅದರ ಒಳಗೆ ಹಲವು ವಿಸ್ಮಯಗಳಿವೆ.
ಅದ್ಭುತ ಕಲ್ಪನಾವಿಲಾಸವಿದೆ, ಮಾಧುರ್ಯವಿದೆ, ಲಾಲಿತ್ಯವಿದೆ, ಕರುಳುಹಿಂಡುವ ನೋವಿದೆ, ಸಮಸ್ಯೆಗಳಿವೆ, ಪರಿಹಾರವೂ ಇದೆ. ಮಾರ್ಗದರ್ಶನ ಮಾಡಿ ಮುನ್ನಡೆಸುವ ಗುರುವೂ ಇದ್ದಾನೆ.
ನಾವು ಅದನ್ನು ಕಂಡುಕೊಳ್ಳಬೇಕು ಅಷ್ಟೇ.
ನಾನಾ ಬಗೆಯ ಭಾವಗಳು ನಮ್ಮ ಒಳಗೆ ಅದೃಶ್ಯವಾಗಿದ್ದುಕೊಂಡು ನಮ್ಮ ಮೂಲಕವೇ ನಾನಾ ರೂಪದಲ್ಲಿ ಪ್ರಕಟಗೊಳ್ಳುವುವು. ನಮ್ಮನ್ನು ರೋಮಾಂಚನಗೊಳಿಸುವ, ನಿಯಂತ್ರಿಸುವ, ನಮ್ಮ ಮೇಲೆ ಸವಾರಿ ಮಾಡುವ, ಆಧಿಪತ್ಯ ನಡೆಸುವ ಈ ಭಾವಗಳಿಗೆ ನಿರ್ದಿಷ್ಟ ರೂಪವಾಗಲಿ ಆಕಾರವಾಗಲಿ ಇಲ್ಲ. ಮಾನವನನ್ನು ಉತ್ತುಂಗಕ್ಕೆ ಕೊಂಡೊಯ್ಯಬಲ್ಲ ಇಲ್ಲವೆ ಪಾತಾಳದ ಅಂಚಿಗೂ ತಳ್ಳಬಲ್ಲಷ್ಟು ಸಶಕ್ತವಾಗಿವೆ ಈ ಭಾವಗಳು. ನಮ್ಮ ಉನ್ನತಿ ಅಥವಾ ಅವನತಿಗೆ ಕಾರಣ ಆಗಬಲ್ಲ ಈ ಭಾವ ಅಥವಾ ಭಾವನೆಗಳ ಉಗಮ, ಉತ್ಪತ್ತಿ, ಬೆಳವಣಿಗೆ, ಕಾರ್ಯವೈಖರಿ, ಅವುಗಳ ಪ್ರಭಾವ, ಉಂಟುಮಾಡುವ ಪರಿಣಾಮ ಹೀಗೆ ಪ್ರತಿಯೊಂದೂ ರೋಚಕವಾದುದು. ಹಾಗೆ ಇದು ಆಸಕ್ತಿದಾಯಕ, ಅಧ್ಯಯನಯೋಗ್ಯ ವಿಚಾರವೂ ಹೌದು.
ಪ್ರತಿ ವ್ಯಕ್ತಿಯ ಒಳಗೆ ಒಂದು ಭಾವಪ್ರಪಂಚ ಇದೆ. ಅಲ್ಲಿ ಏನು ನಡೆಯುತ್ತಿದೆ ಎಂಬುದು ಆ ವ್ಯಕ್ತಿಗಷ್ಟೇ ಗೊತ್ತಿರಲು ಸಾಧ್ಯ. ಅದು ಒಂದು ವೈವಿಧ್ಯಮಯ ಲೋಕ. ಸಂತಸ-ತಳಮಳ, ಸ್ನೇಹ-ವೈರ, ಶಾಂತಿ-ಕ್ಷೆಭೆ, ಗೆಳೆತನ-ಹಗೆತನ, ವಿಶಾಲತೆ-ಸಂಕುಚಿತತೆ, ಸಂತಸ-ದುಃಖ, ಆಸಕ್ತಿ-ವಿರಕ್ತಿ, ಆಸೆ-ನಿರಾಶೆ…….. ಹೀಗೆ ಅದು ನಾನಾ ಬಗೆಯ ದ್ವಂದ್ವಗಳ, ವೈರುಧ್ಯಗಳ ಗೂಡಾಗಿರಬಹುದು, ಗೊಂದಲದ ಬೀಡಾಗಿರಬಹುದು. ಅಷ್ಟೇ ಏಕೆ, ಭಾವಪ್ರಪಂಚ ಭೋರ್ಗರೆಯುತ್ತಿರುವ ಜಲಪಾತದಂತೆ ಇರಬಹುದು ಯಾ ಉಕ್ಕಿ ಹರಿಯುತ್ತಿರುವ ನದೀಪ್ರವಾಹದೊಂದಿಗೆ ಪೈಪೋಟಿಗೆ ಇಳಿದಿರುವಂತೆ ತೀವ್ರ ರಭಸದಿಂದ ಕೂಡಿರಬಹುದು, ಇಲ್ಲವೆ ಋಷಿಮುನಿಗಳ ತಪೋವನದಂತೆ ಪ್ರಶಾಂತವಾಗಿಯೂ ಇರಬಹುದು. ಅಥವಾ ಪ್ರಕ್ಷುಬ್ಧ ರಣರಂಗವೇ ಆಗಿರಬಹುದು. ಇದು ಭಾವಲೋಕದ ವೈಶಿಷ್ಟ್ಯ.
ಮಾನವನು ಹಲವು ಭಾವಗಳ ಸಮ್ಮಿಶ್ರಣ. ಭಾವಗಳ ವ್ಯಾಪ್ತಿಯೂ ಬಹಳ ವಿಶಾಲವಾದುದು. ಅದು ತೀರಾ ಸಾಮಾನ್ಯ ಅಥವಾ ತುಚ್ಛ ಭಾವದಿಂದ ಆರಂಭಿಸಿ ಉನ್ನತವಾದ ಪರಿಶುದ್ಧ ನಿರ್ಮಲ ಭಾವ ಆಗಿರಬಹುದು. ಭಾವಗಳ ಗುಣಮಟ್ಟ ಅವುಗಳು ಸಾಗುತ್ತಿರುವ ದಾರಿಯನ್ನು ಅವಲಂಬಿಸಿ ನಿರ್ಧರಿಸಲ್ಪಡುತ್ತದೆ. ಭಾವನೆಗಳನ್ನು ತೀರಾ ಸಾಮಾನ್ಯ ಅಥವಾ ತುಚ್ಛ, ಉನ್ನತ ಹಾಗೂ ಸರ್ವತ್ರ ಶ್ರೇಷ್ಠ ಶುದ್ಧ ಭಾವಗಳು ಎಂದು ವಿಂಗಡಿಸಬಹುದು.
ಯಾವುದೇ ಒಂದು ಭಾವವು ಸ್ವಕೇಂದ್ರಿತವಾಗಿದ್ದು, ಕೇವಲ ವೈಯಕ್ತಿಕ ಅನುಕೂಲ, ಸ್ವಹಿತಾಸಕ್ತಿಯ ಸಂಕುಚಿತ ವಲಯಕ್ಕೆ ಅಷ್ಟೇ ಸೀಮಿತವಾಗಿದ್ದರೆ ಅದು ತೀರಾ ಸಾಮಾನ್ಯ ಅಥವಾ ತುಚ್ಛಭಾವ ಆಗುತ್ತದೆ. ವೈಯಕ್ತಿಕ ಸ್ವಾರ್ಥವನ್ನು ಮೆಟ್ಟಿ, ಜಾತಿ ಮತ ಸಮುದಾಯಗಳು ಎಂಬ ಭೇದಗಳನ್ನು ಮೀರಿ ಸಹಜೀವಿಗಳತ್ತ ಭಾವಪರಿಧಿ ವಿಸ್ತರಿಸಿದರೆ ಅದು ಉನ್ನತ ಭಾವವಾಗಿ ಪರಿಗಣಿಸಲ್ಪಡುತ್ತದೆ. ಅದೇ ಭಾವನೆಗಳು ವಿಶ್ವದ ಸಮಸ್ತ ಜೀವ-ರಾಶಿಗಳನ್ನು ಆಲಿಂಗಿಸಿ ವಿಶ್ವಸಂವೇದನೆಯನ್ನು ಹೊಂದಿದಾಗ ಅದು ಸರ್ವತ್ರ ಶ್ರೇಷ್ಠ, ಪವಿತ್ರ ಭಾವಗಳಾಗಿ ರೂಪಾಂತರ ಹೊಂದುತ್ತವೆ.
ಭಾವಸ್ಫುರಣೆ ಎಲ್ಲಿ, ಯಾವಾಗ, ಹೇಗೆ ಆಗುತ್ತದೆ ಎಂದು ಹೇಳಲು ಸಾಧ್ಯ ಆಗದು. ಯಾವುದೋ ಒಂದು ಸನ್ನಿವೇಶವೊ ಘಟನೆಯೊ ಮನಸ್ಸನ್ನು ತೀವ್ರವಾಗಿ ತಟ್ಟಿದಾಗ ಭಾವಸ್ಫುರಣೆ ಆಗುತ್ತದೆ. ಇದರಿಂದ ‘ಮಹಾ’ ಎಂದು ಹೇಳಬಹುದಾದ ಕಾರ್ಯಗಳೂ ಆಗಿವೆ.
ಭಾವನೆಗಳ ಮೂಲ
ತೀವ್ರ ತೆರನಾದ ಆಸೆ ಅಥವಾ ಬಯಕೆ (desire) ಎಲ್ಲಾ ಭಾವಗಳ ಮೂಲಸ್ಥಾನ. ಬಯಕೆಗಳನ್ನು ನಿಯಂತ್ರಿಸದಿದ್ದರೆ ಅವುಗಳು ಶರವೇಗದಲ್ಲಿ ನೂರ್ಮಡಿಗೊಳ್ಳುತ್ತವೆ. ಮನಸ್ಸಿನಲ್ಲಿ ನಾನಾ ರೀತಿಯ ಸಂಚಲನ ಉಂಟುಮಾಡುತ್ತವೆ, ಕೋಲಾಹಲ ಸೃಷ್ಟಿಸುತ್ತವೆ. ಅಂತಿಮವಾಗಿ ಈ ಆಸೆಗಳು ಮಾನಸಿಕ ಕ್ಷೆಭೆ, ಅಶಾಂತಿ, ದುಃಖಕ್ಕೆ ಕಾರಣವಾಗುತ್ತವೆ; ಏಕಾಗ್ರತೆಯನ್ನು ನಾಶಮಾಡುತ್ತವೆ. ಅಷ್ಟೇ ಅಲ್ಲ, ನಿಧಾನವಾಗಿ ಅವುಗಳು ಮಾನಸಿಕ ರೋಗವಾಗಿ ಪರಿವರ್ತನೆಗೊಳ್ಳುತ್ತವೆ. ವಿವಿಧ ರೋಗಗಳ ಮೂಲಸೆಲೆಯಾಗಿ ಆರೋಗ್ಯದ ಶೈಥಿಲ್ಯಕ್ಕೆ ನಾಂದಿಹಾಡುತ್ತವೆ. ಆದ್ದರಿಂದಲೇ ಅತ್ಯಾಸೆಯೇ ಎಲ್ಲಾ ಕೆಡುಕಿಗೆ ಮೂಲ ಎಂದು ಹೇಳಿರುವುದು.
ಭಾವಗಳ ಉತ್ಪತ್ತಿ
ಭಾವಗಳು ಏಕೆ, ಹೇಗೆ, ಯಾವಾಗ ಉತ್ಪತ್ತಿ ಆಗುತ್ತವೆ? ಅವುಗಳ ಸ್ಪಷ್ಟ ಗುಣಲಕ್ಷಣಗಳು ಏನು? ಉತ್ತರ ಹುಡುಕುತ್ತಾ ಹೊರಟಾಗ ನಮ್ಮ ಪವಿತ್ರಗ್ರಂಥಗಳಲ್ಲಿ ಒಂದಾದ ಭಗವದ್ಗೀತೆ ನಮ್ಮ ಸಹಾಯಕ್ಕೆ ಬರುತ್ತದೆ. ಮಾರ್ಗದರ್ಶನ ಮಾಡುತ್ತದೆ. ಭಾವನೆಗಳ ಸ್ಪಷ್ಟ ಲಕ್ಷಣ ನಿರೂಪಣೆ ಮಾಡಿರುವ ವಿಶ್ವದ ಏಕೈಕ ಗ್ರಂಥ ಇದು ಎಂದರೂ ತಪ್ಪಲ್ಲ. ಗೀತೆಯ ಪ್ರಕಾರ, ಪುನಃ ಪುನಃ ಮನದಲ್ಲಿ ಮೂಡುವ ಯೋಚನೆಗಳೇ ಭಾವನೆಗಳಾಗಿವೆ.
ಭಾವನೆಗಳ ಮೂಲ, ಅವುಗಳ ವಿಕಾಸ, ತದನಂತರ ಉದ್ದೀಪನ, ಇದರಿಂದ ಉಂಟಾಗುವ ಪ್ರತಿಕ್ರಿಯೆ ಹಾಗೂ ಅಂತಿಮ ಪರಿಣಾಮ……… ಹೀಗೆ ಈ ಇಡೀ ಪ್ರಕ್ರಿಯೆಯನ್ನು ವಿಸ್ತಾರವಾಗಿ ಮನಮುಟ್ಟುವಂತೆ ತಿಳಿಸಿದೆ ಗೀತೆ. ಅದರ ವಿವರಣೆ ಹೀಗಿದೆ:
ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ |
ಸಂಗಾತ್ ಸಂಜಾಯತೇ ಕಾiಃ ಕಾಮಾತ್ ಕ್ರೋಧೋsಭಿಜಾಯತೇ ||
ಕ್ರೋಧಾದ್ಭವತಿ ಸಮ್ಮೋಹಃ
ಸಮ್ಮೋಹಾತ್ ಸ್ಮೃತಿವಿಭ್ರಮಃ |
ಸ್ಮೃತಿಭ್ರಂಶಾತ್ ಬುದ್ಧಿನಾಶೋ
ಬುದ್ಧಿನಾಶಾತ್ ಪ್ರಣಶ್ಯತಿ||
ಒಂದು ವಸ್ತು ಅಥವಾ ವಿಷಯ ಕುರಿತು ನಿರಂತರವಾಗಿ ಮೂಡುವ ಯೋಚನೆಗಳಿಂದಾಗಿ ಆ ವಸ್ತು ಅಥವಾ ವಿಷಯದ ಕಡೆಗೆ ಸೆಳೆತ ಉಂಟಾಗಿ ಅದು ಆಸಕ್ತಿ ಅಥವಾ ಅನುರಾಗಕ್ಕೆ ಕಾರಣ ಆಗುತ್ತದೆ. ಅನುರಾಗದಿಂದ ಅದನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಪ್ರಬಲವಾದ ಆಸೆ (ಕಾಮ) ಮೂಡುತ್ತದೆ. ಈ ಪ್ರಬಲವಾದ ಆಸೆ (ಅದನ್ನು ಹೊಂದುವ ದಾರಿಯಲ್ಲಿ ಎದುರಾಗುವ ಅಡೆತಡೆಗಳಿಂದಾಗಿ) ನಿಧಾನವಾಗಿ ಕೋಪಕ್ಕೆ ತಿರುಗುತ್ತದೆ. ಕೋಪದಿಂದ ಮೋಹಪರವಶತೆ ಉಂಟಾಗುತ್ತದೆ. ಈ ವ್ಯಾಮೋಹದಿಂದಾಗಿ ಬುದ್ಧಿಗೆ ಮಂಕುಕವಿದು ಯುಕ್ತಾಯುಕ್ತವಿವೇಚನೆ, ಸತ್ಯದ ಅರಿವು ಮಾಯವಾಗುತ್ತದೆ, ಬುದ್ಧಿನಾಶವಾಗುತ್ತದೆ. ಬುದ್ಧಿನಾಶವಾದರೆ ಎಲ್ಲವೂ ಮುಗಿದಂತೆ. ಹೀಗೆ ಆಸಕ್ತಿಯು ಆಸೆಯಾಗಿ, ಆಸೆಯು ಕೋಪವಾಗಿ, ಕೋಪದಿಂದ ಸಮ್ಮೋಹನ ಉಂಟಾಗಿ, ಅನಂತರ ಚಿತ್ತಭ್ರಾಂತಿ, ಬುದ್ಧಿನಾಶದಿಂದಾಗಿ ಮನುಷ್ಯನು ಅಧೋಗತಿಗೆ ಇಳಿಯುತ್ತಾನೆ. ಇದನ್ನು ಮುಂದೆ ವಿಸ್ತಾರವಾಗಿ ನೋಡೋಣ.
ನಿರ್ದಿಷ್ಟ ರೂಪ, ಆಕಾರಗಳಿಗೆ ಅತೀತವಾಗಿರುವ ಈ ಭಾವಗಳು ಅಗೋಚರವಾಗಿ ನಮ್ಮೊಳಗೆ ಬಹಳ ಆಳದಲ್ಲಿ ನೆಲೆಗೊಂಡಿರುತ್ತವೆ. ಭಾವನೆಗಳು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಾಣಿಗಳಿಗೂ, ಅಷ್ಟೇ ಏಕೆ, ಸಸ್ಯಗಳಿಗೂ ಕೂಡಾ ಭಾವನೆಗಳಿವೆ, ಸಂವೇದನೆಗಳಿವೆ. ಮನುಷ್ಯರಂತೆ ಅವುಗಳು ಮೌಖಿಕವಾಗಿ ಭಾವನೆಗಳನ್ನು ವ್ಯಕ್ತಪಡಿಸಲಾರವು ಅಷ್ಟೆ. ದೇಹಭಾಷೆ ಅಥವಾ ಸಂಜ್ಞೆಗಳ ಮೂಲಕ ಅವುಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಈ ವಿಶಿಷ್ಟತೆಯನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಮೂಸುವುದು, ನೆಕ್ಕುವುದು, ಮೈಯುಜ್ಜುವುದು, ಬಾಲವನ್ನು ನೆಟ್ಟಗೆ ಮಾಡುವುದು, ಕಾಲು ಕೆದರುವುದು, ವಿಶಿಷ್ಟ ಬಗೆಯಲ್ಲಿ ಕೂಗುವುದು, ಕುಣಿಯುವುದು….. ಹೀಗೆ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಪ್ರಾಣಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತವೆ.
ಸಸ್ಯಗಳಿಗೂ ಭಾವನೆಗಳಿವೆ ಎಂಬುದನ್ನು ಪ್ರಯೋಗಗಳ ಮೂಲಕ ನಮ್ಮ ದೇಶದ ವಿಜ್ಞಾನಿಯೊಬ್ಬರು ಬಹಳ ಹಿಂದೆಯೇ ತೋರಿಸಿಕೊಟ್ಟಿದ್ದಾರೆ.
ಭಾವಾಭಿವ್ಯಕ್ತಿ, ಭಾವೋನ್ಮಾದ, ಭಾವೋದ್ರೇಕ, ಭಾವಸ್ಫುರಣೆ, ಭಾವಾವೇಶ ಹೀಗೆ ಭಾವನೆಗಳು ವಿವಿಧ ಬಗೆಯಾಗಿ ಹೊರಹೊಮ್ಮುತ್ತವ.
ನಟನೆ, ನೃತ್ಯಕಲೆಗಳಲ್ಲಿ ಭಾವಾಭಿನಯವೇ ಜೀವಾಳ. ಇದರಲ್ಲಿ ತೊಡಗಿಕೊಂಡವರು ನವರಸಗಳ ಸಮರ್ಥ ಅಭಿವ್ಯಕ್ತಿಯಲ್ಲಿ ಪ್ರಾವೀಣ್ಯ ಹೊಂದಿರಬೇಕು. ಇದು ಅನಿವಾರ್ಯ ಕೂಡ. ಇದರಿಂದ ಅವರ ಪ್ರತಿಭೆಗೆ ಹೆಚ್ಚಿನ ಮೆರುಗು ದೊರೆಯುತ್ತದೆ. ನಿರ್ವಿಕಾರ ಮುಖಮುದ್ರೆಯಲ್ಲಿ ಕೇವಲ ದೇಹದ ಚಲನವಲನಗಳ ಮೂಲಕ ಅಭಿನಯಿಸಿದರೆ ಅದರಲ್ಲಿ ಜೀವಂತಿಕೆ, ಲವಲವಿಕೆ ಕಾಣದು ಅಲ್ಲವೆ?
ಭಾವವಲಯದ ಪ್ರಾಮುಖ್ಯ
ಭಾವಸ್ಫುರಣೆ ಎಲ್ಲಿ, ಯಾವಾಗ, ಹೇಗೆ ಆಗುತ್ತದೆ ಎಂದು ಹೇಳಲು ಸಾಧ್ಯ ಆಗದು. ಯಾವುದೋ ಒಂದು ಸನ್ನಿವೇಶವೊ ಘಟನೆಯೊ ಮನಸ್ಸನ್ನು ತೀವ್ರವಾಗಿ ತಟ್ಟಿದಾಗ ಭಾವಸ್ಫುರಣೆ ಆಗುತ್ತದೆ. ಇದರಿಂದ ‘ಮಹಾ’ ಎಂದು ಹೇಳಬಹುದಾದ ಕಾರ್ಯಗಳೂ ಆಗಿವೆ. ವಿಶೇಷತೆ ಎಂದರೆ ನೋವಿನ ಘಟನೆಗೆ ಸಂವೇದನಾಶೀಲ ಮನಸ್ಸು ಸ್ಪಂದಿಸಿ, ಅದರಿಂದ ಭಾವಸ್ಫುರಣೆಯಾಗಿ ಫಲಸ್ವರೂಪವಾಗಿ ಮಹಾಕಾವ್ಯದ ಸೃಷ್ಟಿಗೆ, ಸಂಸ್ಥೆಯೊಂದರ ಹುಟ್ಟಿಗೆ, ಮನಃಪರಿವರ್ತನೆಗೆ ಮತ್ತು ವೈರಾಗ್ಯಕ್ಕೆ ಕಾರಣವಾದ ಉದಾಹರಣೆಗಳು ಅನೇಕ ಇವೆ. ಇವುಗಳನ್ನು ಗಮನಿಸಿ:
ಸಂಗಾತಿಯನ್ನು ಕಳೆದುಕೊಂಡ ಕ್ರೌಂಚಪಕ್ಷಿಯ ಆರ್ತನಾದ ಮಹರ್ಷಿ ವಾಲ್ಮೀಕಿಯನ್ನು ತೀವ್ರವಾಗಿ ತಟ್ಟಿತು. ತಕ್ಷಣ ಅವರ ಬಾಯಿಂದ ಹೊರಬಿದ್ದ “ಮಾ ನಿಷಾದ….” ವಾಣಿಯು ರಾಮಾಯಣ ಮಹಾಕಾವ್ಯಕ್ಕೆ ಮುನ್ನುಡಿಯಾಯಿತು. ಕಳಿಂಗಯುದ್ಧದ ಸಾವು-ನೋವು ಅಶೋಕಚಕ್ರವರ್ತಿಯನ್ನು ಬದಲಾಯಿಸಿತು. ಆತನನ್ನು ಅಹಿಂಸೆಯ ಆರಾಧಕನನ್ನಾಗಿ ಮಾರ್ಪಡಿಸಿತು. ಸಂಸ್ಕೃತ ಸಾಹಿತ್ಯಲೋಕದಲ್ಲಿ ಒಂದು ಅನರ್ಘ್ಯರತ್ನವಾಗಿರುವ ಭರ್ತೃಹರಿಯ ವೈಯಕ್ತಿಕ ಬದುಕಿನಲ್ಲಿ ನಡೆದ ಘಟನೆಯೊಂದು ಅವನನ್ನು ವೈರಾಗ್ಯದತ್ತ ಹೊರಳುವಂತೆ ಮಾಡಿತು. ‘ನೀತಿಶತಕ’, ‘ಶೃಂಗಾರಶತಕ’ ಬರೆದ ಅವನಿಂದ ‘ವೈರಾಗ್ಯಶತಕ’ವೂ ಹೊರಹೊಮ್ಮುವಂತಾಯಿತು. ಇವುಗಳು ಸಂಸ್ಕೃತಸಾಹಿತ್ಯದಲ್ಲಿ `ಶತಕತ್ರಯ’ವೆಂದೇ ಪ್ರಸಿದ್ಧವಾಗಿವ. ರೆಡ್ಕ್ರಾಸ್ ಸಂಸ್ಥೆಯ ಹೆಸರನ್ನು ಕೇಳದವರು ಉಂಟೆ? ಆಪತ್ಕಾಲದಲ್ಲಿ ಆಪದ್ಬಾಂಧವನಂತೆ ನೆರವನ್ನು ನೀಡುವ ಈ ಸಂಸ್ಥೆಯ ಹುಟ್ಟಿನ ಹಿಂದೆಯೂ ತೀವ್ರವಾಗಿ ಮನಸ್ಸನ್ನು ತಟ್ಟಿದ ಒಂದು ವ್ಯಥೆಯ ಕಥೆ ಇದೆ. ಅದು ೧೮೫೯ರ ಸೊಲ್ಫೊರಿನೋ ಯುದ್ಧ. ಈ ಯುದ್ಧದ ಭೀಕರತೆ, ಅದು ಉಂಟುಮಾಡಿದ ದುಷ್ಪರಿಣಾಮ ಜಿನ್ ಹೆನ್ರಿ ಡ್ಯುರಾಂಟ್ ಎಂಬ ಮಹಾಮಾನವತಾವಾದಿಯ ಹೃದಯವನ್ನು ಕಲಕಿ ಅದು ಅವನಿಗೆ ರೆಡ್ಕ್ರಾಸ್ ಸಂಸ್ಥೆಯ ಸ್ಥಾಪನೆಗೆ ಪ್ರೇರಣೆ ನೀಡಿತು. ಇಂದಿಗೂ ಮನುಕುಲದ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಈ ಸಂಸ್ಥೆ. ಇನ್ನು, ಅಣ್ಣ ಭರತ ಚಕ್ರವರ್ತಿಯನ್ನು ಸೋಲಿಸಿದರೂ ಯಾವುದೋ ಒಂದು ಕ್ಷಣ ತೀವ್ರ ದುಃಖಕ್ಕೆ ಒಳಗಾದ ಬಾಹುಬಲಿಯನ್ನು ತಪಸ್ಸು ಸೆಳೆಯಿತು. ವಿರಕ್ತಿ ಆವರಿಸಿತು. ಸರ್ವಸ್ವವನ್ನೂ ತ್ಯಾಗಮಾಡಿದ ಅರಮನೆಯ ರಾಜಕುವರ ದೈವತ್ವಕ್ಕೇರಿ ದೇವಮಾನವನಾದ. ಪೂಜಾರ್ಹನಾಗಿ ಅಜರಾಮರನಾದ.
ಇನ್ನು, ಜಗಳ, ದೊಂಬಿ, ಗಲಾಟೆ, ಘರ್ಷಣೆಗಳ ಸಂದರ್ಭಗಳಲ್ಲಿಯೊ ನೆಚ್ಚಿನ ನಟ ವಿಧಿವಶ ಆದಾಗಲೊ ಅವನ ಅಭಿಮಾನಿಗಳು ಭಾವಾವೇಶಕ್ಕೆ ಒಳಗಾಗುವುದನ್ನು ನಾವು ನೋಡಿರುತ್ತೇವೆ. ಇಂತಹ ಸಂದರ್ಭಗಳಲ್ಲಿ ರಕ್ತದ ಓಕುಳಿ ಹರಿಯುತ್ತದೆ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಆಗುತ್ತದೆ. ಭಯದ ವಾತಾವರಣ ನಿರ್ಮಾಣ ಆಗುತ್ತದೆ. ಕೆಲವರು ಆತ್ಮಹತ್ಯೆಗೂ ಮುಂದಾಗುತ್ತಾರೆ. ವ್ಯಕ್ತಿಯೊಬ್ಬನಿಗೆ ತನ್ನ ಭಾವನೆಗಳನ್ನು ನಿಯಂತ್ರಿಸಲು ಅಸಾಧ್ಯ ಆದಾಗ, ಮಾನಸಿಕ ಸ್ತಿಮಿತ ತಪ್ಪಿ, ಅದು ನಾನಾ ರೀತಿಯ ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ. ಅದು ಹುಚ್ಚು, ತೀವ್ರಖಿನ್ನತೆ ಮುಂತಾದ ಮಾನಸಿಕ ರೋಗಗಳ ರೂಪದಲ್ಲಿಯೂ ಕಾಣಿಸಿಕೊಳ್ಳಬಹುದು. ಸ್ವ-ನಾಶ ಅಥವಾ ಸ್ವ-ಹಾನಿಯಂತಹ ಅಪಾಯವೂ ಇಂತಹ ಸಂದರ್ಭಗಳಲ್ಲಿ ಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ ಮನೋವೈದ್ಯರ, ಆಪ್ತ ಸಮಾಲೋಚಕರ ನೆರವು ಆ ವ್ಯಕ್ತಿಗೆ ಅತ್ಯಗತ್ಯ. ಒಟ್ಟಿನಲ್ಲಿ ಭಾವವಲಯ ಆರೋಗ್ಯವಾಗಿದ್ದಷ್ಟೂ ಚೆನ್ನ, ಹದಗೆಟ್ಟಷ್ಟೂ ಹಾನಿ ಖಚಿತ. ಇದು ಸತ್ಯ.
ಭಾವನೆಗಳು ಮುಖ್ಯವಾಗಿ ಎರಡು ವಿಧ: (೧) ಸೌಮ್ಯ ಅಥವಾ ಮೃದುಭಾವಗಳು (Soft emotions); (೨) ನಕಾರಾತ್ಮಕ ಅಥವಾ ಹಿಂಸಾತ್ಮಕ ಭಾವಗಳು (Violent emotions). ತೀಕ್ಷ್ಣ ಅಥವಾ ಉಗ್ರಭಾವಗಳು ಎಂಬುದು ಇದರ ಇನ್ನೊಂದು ಹೆಸರು.
ಸೌಮ್ಯ ಭಾವಗಳು ಮನಸ್ಸಿಗೆ ತಂಪನ್ನು ಎರೆಯುತ್ತವೆ, ಮನಸ್ಸನ್ನು ಅರಳಿಸುತ್ತವೆ; ಹೃದಯವನ್ನು ಬೆಸೆಯುತ್ತವೆ, ಶಾಂತಿಯನ್ನು ಹರಡುತ್ತವೆ. ಹಿಂಸಾತ್ಮಕ ಭಾವಗಳು ಇದಕ್ಕೆ ವಿರುದ್ಧವಾದ ಲಕ್ಷಣಗಳನ್ನು ಹೊಂದಿರುತ್ತವೆ. ತೀಕ್ಷ್ಣ ಪರಿಣಾಮಗಳಾದ ಹಿಂಸೆ, ದೊಂಬಿ, ರಕ್ತಪಾತ, ಒಡಕು, ಅಪನಂಬಿಕೆ, ಅಶಾಂತಿ, ವಿಘಟನೆ – ಇವು ನಕಾರಾತ್ಮಕ ಭಾವಗಳ ವಿಶೇಷತೆಗಳು. ಎರಡೂ ಬಗೆಯ ಭಾವಗಳು ಅತ್ಯಂತ ಶಕ್ತಿಸಂಪನ್ನವಾಗಿರುತ್ತವೆ. ಮೃದುಭಾವಗಳು ವಿಶ್ವವನ್ನು ಸಮ್ಮೋಹನಗೊಳಿಸಬಲ್ಲವು. ಹಾಗೆಯೇ ನಕಾರಾತ್ಮಕ ಭಾವಗಳಿಂದ ಸ್ವನಾಶ, ಸಮೂಹನಾಶ ಶತಃಸಿದ್ಧ.
ಪ್ರೀತಿ, ಅಹಿಂಸೆ, ದಯೆ, ಅನುಕಂಪ, ವಾತ್ಸಲ್ಯ, ಶಾಂತಿ, ಸಾಮರಸ್ಯ, ತ್ಯಾಗ, ಸಹನೆ, ಸಹಕಾರ……. ಇವು ಮೃದುಭಾವಗಳ ವಿವಿಧ ಮುಖಗಳು. ಪ್ರತಿಯೊಂದೂ ಆಪ್ಯಾಯಮಾನ. ಮನಗಳನ್ನು, ಮನೆಗಳನ್ನು, ರಾಷ್ಟ್ರಗಳನ್ನು ಬೆಸೆಯುವ ಅದ್ಭುತ ಶಕ್ತಿ ಈ ತೆರನಾದ ಭಾವಗಳಿಗೆ ಇದೆ. ಜಾತಿ, ಧರ್ಮ, ವರ್ಣಗಳ ಹಂಗು ಇಲ್ಲದೆ, ಗಡಿರೇಖೆಗಳ ಎಲ್ಲೆ ದಾಟಿ ವಿಶ್ವದ ಬೆಸುಗೆಗೆ ನಿಮಿತ್ತವಾಗಬಲ್ಲಷ್ಟು ಸಶಕ್ತವಾಗಿವೆ ಇವು. ನಮ್ಮ ಪ್ರಾಚೀನ `ವಸುಧವ ಕುಟುಂಬಕಮ್ ಹಾರೈಕೆಯ ಹಿಂದೆ ಈ ಮೃದುಭಾವಗಳು ಆಳವಾಗಿ ಬೇರುಬಿಟ್ಟಿವೆ.
ನಮ್ಮ-ನಿಮ್ಮೆಲ್ಲರಲ್ಲಿ ಅಡಗಿರುವ ಅರಿಷಡ್ವರ್ಗಗಳು ಅರ್ಥಾತ್ ಕಾಮ (ಪ್ರಬಲವಾದ ಇಚ್ಛೆ ಅಥವಾ ಆಸೆ), ಕ್ರೋಧ, ಲೋಭ, ಮೋಹ, ಮದ (ಅಹಂಕಾರ), ಮಾತ್ಸರ್ಯ ಇವುಗಳು ನಕಾರಾತ್ಮಕ ಭಾವಗಳ ಗುಂಪಿಗೆ ಸೇರುತ್ತವೆ. ಒಣಜಂಭ, ದ್ವೇಷ, ಹಗೆತನ, ಅಟ್ಟಹಾಸ, ಮೆರೆದಾಟ ಇವುಗಳು ಕೂಡ ಇದೇ ಜಾತಿಯವು. ಒಡಕು, ಹಾನಿ, ವೈಷಮ್ಯ ನಕಾರಾತ್ಮಕ ಭಾವಗಳ ಅಂತಿಮ ಫಲ. ಎಲ್ಲಾ ಬಗೆಯ ನಕಾರಾತ್ಮಕ ಭಾವಗಳು ‘ಅಹಂ’ ಪ್ರೇರಿತವಾಗಿದ್ದು, ಅದನ್ನೇ ಅಡಿಪಾಯವನ್ನಾಗಿ ಹೊಂದಿವೆ.
ಮೃದುಭಾವಗಳು ಸ್ವಯಂಪ್ರೇರಿತ ಮತ್ತು ತೀರಾ ಸಹಜವಾಗಿ ಮೂಡುತ್ತವೆ. ಇವುಗಳು ಔನ್ನತ್ಯದ ಕಡೆಗೆ ಕೊಂಡೊಯ್ದರೆ ನಕಾರಾತ್ಮಕ ಭಾವಗಳು ನಮ್ಮ ಅಧಃಪತನಕ್ಕೆ ಕಾರಣವಾಗುತ್ತವೆ. ಆದ್ದರಿಂದಲೇ ಮೃದುಭಾವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಗಾಂಧಿ “ಮಹಾತ್ಮರಾದರು; ಬುದ್ಧನು ದೇವನಾದ; ಫ್ಲಾರೆನ್ಸ್ ನೈಟಿಂಗೇಲ್ ಜನಮಾನಸದಲ್ಲಿ ಚಿರಸ್ಥಾಯಿ ಆದರು. ಹಾಗೆಯೇ ರಕ್ತದ ಓಕುಳಿ ಹರಿಸಿದ ಹಿಟ್ಲರ್, ಒಸಾಮಾ ಬಿನ್ ಲಾಡೆನ್ ತಮ್ಮ ಹಿಂಸಾತ್ಮಕ ಧೋರಣೆ, ನಡವಳಿಕೆಯಿಂದಾಗಿ ಚರಿತ್ರೆಯ ಪುಟಗಳಲ್ಲಿ ಖಳನಾಯಕರಾಗಿ ಕುಖ್ಯಾತಿಗೆ ಒಳಗಾದರು. ದಾರುಣ ಅಂತ್ಯವನ್ನೂ ಕಂಡರು.
ಭಾವಾದರ್ಶ
ದಯೆ ಮತ್ತು ಪ್ರೇಮ ಇವು ಎರಡು ಅತ್ಯಂತ ಶಕ್ತಿಯುತ ಸೌಮ್ಯಭಾವಗಳಾಗಿದ್ದು ಅವುಗಳ ಗುಣವಿಶೇಷತೆಗಳನ್ನು ಸ್ವಲ್ಪ ಗಮನಿಸೋಣ. ಪ್ರತಿಯೊಂದರಲ್ಲಿ ಮತ್ತು ಪ್ರತಿಯೊಬ್ಬರಲ್ಲಿ ಸೌಹಾರ್ದಯುತ ಸಂಬಂಧ ಹೊಂದಿರುವುದು ಪ್ರೇಮವಾದರೆ, ತಾನೂ ಈ ವಿಶಾಲ ವಿಶ್ವದ ಒಂದು ಅಂಶ ಎಂದು ಬಗೆದು ಅದರಲ್ಲಿ ಐಕ್ಯಭಾವ ಅಥವಾ ಅಸ್ತಿತ್ವವನ್ನು ಕಂಡುಕೊಳ್ಳುವುದು ಪ್ರೇಮದ ಅರ್ಥ.
ಪ್ರತಿಯೊಂದು ಜೀವಿಯಲ್ಲಿ ಅತ್ಯಂತ ಪ್ರಬಲವಾಗಿ ವ್ಯಕ್ತವಾಗುವ ಭಾವಗಳಲ್ಲಿ ಪ್ರೇಮವೂ ಒಂದು. ಕೆಳಹಂತದಲ್ಲಿ ಅದು ಅಶುದ್ಧ ರೂಪದಲ್ಲಿದ್ದು ಅತ್ಯಾಶೆಯ ರೂಪದಲ್ಲಿ ವ್ಯಕ್ತವಾಗುತ್ತದೆ. ಇದು ಒಂದು ತೀರದ ದಾಹದಂತೆ. ಇದರ ಪರಿಣಾಮವೋ ಪ್ರಚಂಡ ಚಂಡಮಾರುತದಂತೆ. ಊಹಿಸಲೂ ಅಸಾಧ್ಯ. ಸ್ವಾರ್ಥವೇ ಇಲ್ಲಿ ಮೇಲುಗೈ ಸಾಧಿಸಿರುತ್ತದೆ. ಆದರೆ ಪರಿಶುದ್ಧ ಪ್ರೇಮವು ವಸಂತಋತುವಿನಂತೆ ಆಹ್ಲಾದಕರ, ನಿತ್ಯನೂತನ, ತಾಜಾತನದಿಂದ ಕೂಡಿರುತ್ತದೆ. ವಿಶ್ವಸಮುದಾಯವನ್ನು ವ್ಯಾಪಿಸಿರುತ್ತದೆ.
ದೈವಿಕ ಯಾ ಉನ್ನತ ಪ್ರೇಮವು ಮಾನಸಿಕ ಪ್ರಸನ್ನತೆಗೆ, ಶಾಂತಿಗೆ ಕಾರಣ ಆಗುತ್ತದೆ. ಶುದ್ಧ ಪ್ರೇಮದ ಇನ್ನೊಂದು ಹೆಸರೇ ಹೃದಯಸ್ಪಂದನ. ಪ್ರೇಮಕ್ಕೆ ಯಾವ ಭಾಷೆಯ ಹಂಗೂ ಇಲ್ಲ. ಪವಿತ್ರಪ್ರೇಮವು ಆಧಿಪತ್ಯ ನಡೆಸಲು, ಸ್ವಾಮಿತ್ವ ಹೊಂದಲು ಎಂದೂ ಹವಣಿಸದು. ಅದು ಯಾವಾಗಲೂ ಕೊಡುಗೈ ದಾನಿಯಂತೆ, ಎಂದೂ ಇತರರ ತಪ್ಪುಗಳ ದಾಖಲಾತಿಗಳನ್ನೂ ಕೂಡಾ
ಅದು ಇಡದು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಅರ್ಥಾತ್ ವೈಯಕ್ತಿಕ ಸ್ವಾರ್ಥದಿಂದ ಮೇಲೆದ್ದು ವಿಶ್ವಭ್ರಾತೃತ್ವದ ಮಟ್ಟಕ್ಕೆ
ಅದು ಸಂಚರಿಸಬಲ್ಲದು, ಏರಬಲ್ಲದು. ಆಸೆಗೆ ತ್ಯಾಗದ ಲೇಪನ ಆದಾಗ ಅದು ಪ್ರೇಮವಾಗುತ್ತದೆ. ಹಾಗೆಯೇ ಆಸೆ+ಪ್ರೇಮ+ಶರಣಾಗತಿ ಏಕತ್ರಗೊಂಡರೆ ಅದು ಭಕ್ತಿಯಾಗಿ ರೂಪಾಂತರಗೊಳ್ಳುತ್ತದೆ.
ಪ್ರೇಮವು ಒಂದು ಮಾನಸಿಕ ಸ್ಥಿತಿಯಾಗಿದ್ದು, ಅಪಾರ ಸಾಮರ್ಥ್ಯ ಉಳ್ಳ ಒಂದು ಶಕ್ತಿವಿಶೇಷವಾಗಿದೆ. ದೈವೀಪ್ರೇಮವನ್ನು ಕಲುಷಿತಗೊಳಿಸುವಲ್ಲಿ ‘ಅಹಂ’ ಪ್ರಧಾನ ಪಾತ್ರ ವಹಿಸುತ್ತದೆ. ಅಹಂ ತಲೆಯೆತ್ತಿದಾಗ ಪ್ರೇಮವು ಆಸೆಯಾಗಿ, ಅನುಕಂಪವು ಗೊಣಗಾಟವಾಗಿ, ವಿಸ್ಮಯವು ವ್ಯಭಿಚಾರವಾಗಿ ರೂಪಾಂತರಗೊಳ್ಳುತ್ತವ. ತನ್ಮೂಲಕ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ.
ಇಂದಿನ ದಿನಗಳಲ್ಲಿ ಪ್ರೇಮ ಎಂಬುದು ಸಂಕುಚಿತಗೊಂಡು ಅದು ಕೇವಲ ‘ವೈಯಕ್ತಿಕ ಪ್ರೀತಿ’ಗೆ ಮಾತ್ರ ಸೀಮಿತವಾಗಿದೆ. ಈ ತೆರನಾದ ಪ್ರೀತಿಯು ನಮ್ಮನ್ನು ಒಂದು ಸೀಮಿತ ಪರಿಧಿಗೆ ಕಟ್ಟಿಹಾಕುತ್ತದೆ. ತನ್ಮೂಲಕ ನಮ್ಮನ್ನು ನಿರ್ಬಂಧಿಸುತ್ತದೆ.
ಮನದಲ್ಲಿ ಒಮ್ಮೆ ಆಸೆ ತಳವೂರಿದ ನಂತರ ಅದನ್ನು ಈಡೇರಿಸಿಕೊಳ್ಳುವ ಹಂಬಲದಲ್ಲಿ ನಮ್ಮ ಯೋಚನಾ ಸರಣಿಯು ನಾನಾ ದಿಕ್ಕುಗಳಲ್ಲಿ ಹರಿಯತೊಡಗುತ್ತದೆ. ಈ ಪ್ರಕ್ರಿಯೆಯಲ್ಲಿ ನಮ್ಮ ಯೋಚನೆಯು ಒಂದು ನಿರ್ದಿಷ್ಟ ವಸ್ತು, ವಿಷಯದ ಮೇಲೆ ಕೇಂದ್ರೀಕೃತಗೊಂಡಾಗ ತಕ್ಷಣ ನಾವು ಎಚ್ಚೆತ್ತುಕೊಳ್ಳಬೇಕು. ಅದನ್ನು ವಿಮರ್ಶೆಗೆ ಒಳಪಡಿಸಬೇಕು.
ಅಸೀಮ ವ್ಯಾಪ್ತಿ
ಒಂದು ಮಗುವನ್ನು ಗಮನಿಸಿ. ವೈಯಕ್ತಿಕ ಮೋಹ, ಸ್ವಾರ್ಥ, ಅನ್ಯಪ್ರೇರಣೆ, ಅತ್ಯಾಶೆ ಯಾವುದರಿಂದಲೂ ಕಲುಷಿತವಾಗದ ಕೇವಲ ಪರಿಶುದ್ಧ ಪ್ರೇಮದ ಪ್ರತೀಕ ಅದು. ಮಗು ಎಂದೂ ಪ್ರೇಮಿ ಅಲ್ಲ, ಆಗಲಾರದು ಕೂಡ. ಬದಲಾಗಿ ಅದುವೇ ಪವಿತ್ರಪ್ರೇಮದ ದೈವೀ ಸ್ವರೂಪ. ಈ ಕಾರಣಕ್ಕಾಗಿ ಇಡೀ ವಿಶ್ವವೇ ಮಗುವನ್ನು ಆರಾಧಿಸುತ್ತದೆ.
ಸ್ವಾಮಿ ಶಿವಾನಂದರ ಪ್ರಕಾರ ಪ್ರೇಮವು ಸೇವೆ, ಔದಾರ್ಯ, ಉದಾರ ಮನೋಭಾವ, ಪರೋಪಕಾರಗುಣ ಇವೇ ಮುಂತಾದ ರೂಪದಲ್ಲಿ ಪಸರಿಸಲ್ಪಡುತ್ತದೆ. ಪ್ರೀತಿ, ವಾತ್ಸಲ್ಯ, ಪ್ರಾಮಾಣಿಕತೆ ಇಲ್ಲದ ಮತ್ತು ಭಾವರಹಿತವಾಗಿ ಮಾಡುವ ಎಲ್ಲಾ ಸೇವೆಗಳು ಬರಡು. ಪರಿಶುದ್ಧ ಪ್ರೇಮದಲ್ಲಿ ಮೇಲು-ಕೀಳು, ಕಿರಿದು-ಹಿರಿದು, ಅಧಮ-ಉತ್ತಮ ಎಂಬ ಭೇದಭಾವಗಳಿಲ್ಲ. ಎಲ್ಲರಿಗೂ ಅಲ್ಲಿ ಮುಕ್ತ ಸ್ವಾಗತವಿದೆ. ದೀನರಲ್ಲಿ ದೀನ, ಪುಟ್ಟ ಇರುವೆ ಅಥವಾ ಆನೆ, ಶಿಕ್ಷೆಗೆ ಗುರಿಯಾದ ಅಪರಾಧಿ ಯಾ ಚಕ್ರವರ್ತಿ, ಮೂಢ ಇಲ್ಲವೆ ಮಹಾನ್ಯೋಗಿ ಹೀಗೆ ಎಲ್ಲರನ್ನೂ ಅದು ತನ್ನ ತೆಕ್ಕೆಯೊಳಗೆ ಸೇರಿಸಿಕೊಳ್ಳುತ್ತದೆ. ಎಲ್ಲರಿಗೂ ಬೆಚ್ಚನೆಯ ಸ್ಪರ್ಶ ನೀಡಿ ಆಲಿಂಗಿಸಿಕೊಳ್ಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ ದ್ವೇಷ, ವೈರಾದಿ ಭಾವಗಳು ಮನುಷ್ಯ-ಮನುಷ್ಯರ ನಡುವೆ, ರಾಷ್ಟ್ರ-ರಾಷ್ಟ್ರಗಳ ನಡುವೆ ಅಡ್ಡಗೋಡೆಯನ್ನು ನಿರ್ಮಾಣ ಮಾಡುತ್ತವೆ. ಸೌಹಾರ್ದ ಸಂಬಂಧಕ್ಕೆ ಶಾಶ್ವತವಾಗಿ ತಡೆಯೊಡ್ಡುತ್ತವೆ.
ದಯೆ
ಅಗ್ರಪಂಕ್ತಿಯಲ್ಲಿ ಬರುವ ಭಾವಗಳಲ್ಲಿ ದಯೆಯೂ ಒಂದು. ಹೃದಯ ವೈಶಾಲ್ಯ ಅಥವಾ ಪ್ರೇಮದ ಸಹಜ ಅಭಿವ್ಯಕ್ತಿಯ ರೂಪದಲ್ಲಿ ಇದು ವ್ಯಕ್ತವಾಗುತ್ತದೆ. ಮನಸ್ಸಿನ ಒಂದು ಪರೋಪಕಾರ ಪ್ರವೃತ್ತಿಯೇ ದಯೆ. “ದಯೆ ಬೇಕು ಸಕಲ ಪ್ರಾಣಿಗಳಲ್ಲಿ, ದಯೆ ಇಲ್ಲದ ಧರ್ಮ ಅದಾವುದಯ್ಯ? ದಯೆಯೇ ಧರ್ಮದ ಮೂಲವಯ್ಯ ಎಂಬ ವಚನವೂ ದಯೆಯನ್ನು ಕೊಂಡಾಡಿದೆ.
ಒಂದು ಸುಂದರ ಉದಾಹರಣೆಯನ್ನು ಗಮನಿಸಿ. ಆಚಾರ್ಯ ಕಣ್ವರು ಶಿಶು ಶಕುಂತಲೆಯನ್ನು ತಮ್ಮ ಆಶ್ರಮಕ್ಕೆ ಒಯ್ದು, ಅವಳನ್ನು ಸಾಕಿ ಸಲಹಿ, ವಿದ್ಯೆ ಬುದ್ಧಿ ಸಂಸ್ಕಾರಗಳನ್ನು ನೀಡಿ ಬೆಳೆಸಿದರು. ಅವರ ದಯಾಳು ಅಂತಃಕರಣಕ್ಕೆ ಬೆಲೆಕಟ್ಟಲು ಸಾಧ್ಯವೆ? ಇದಕ್ಕೂ ಮುನ್ನ ಅಂದರೆ ಆಚಾರ್ಯ ಕಣ್ವರ ಕಣ್ಣಿಗೆ ಬೀಳುವವರೆಗೆ ಶಕುಂತಲೆಗೆ ತಮ್ಮ ಪುಟ್ಟ ರೆಕ್ಕೆ ಬಿಚ್ಚಿ ರಕ್ಷಣೆ ನೀಡಿದ್ದು ಶಕುಂತ ಪಕ್ಷಿಗಳು! ಇದು ದಯೆ ಅಲ್ಲದೆ ಇನ್ನೇನು? ಇಷ್ಟೇ ಅಲ್ಲದೆ ಪ್ರಾಣಿಗಳ ದಯಾಪೂರಿತ ಸ್ಪಂದನೆಗೆ ಸಾಕ್ಷಿಯಾಗಿರುವ ಘಟನೆಗಳನ್ನು ನಾವು ನಿತ್ಯದ ಬದುಕಿನಲ್ಲಿ ಗಮನಿಸಿರುತ್ತೇವೆ. ಪ್ರಾಣಿಪ್ರಪಂಚದಲ್ಲಿ ಹೆಣ್ಣುಜಾತಿಗೆ ಸೇರಿದ ಪ್ರಾಣಿಗಳು ಅನ್ಯಜಾತಿಯ (ಬದ್ಧ ವೈರಿ ಜಾತಿಯೂ ಸೇರಿದಂತೆ) ಪ್ರಾಣಿಗಳ ಮರಿಗಳಿಗೆ ತಮ್ಮ ಹಾಲು ಉಣಿಸುವ ಅಪೂರ್ವ ಪ್ರಸಂಗಗಳನ್ನು ನಾವು ಚಿತ್ರಸಹಿತ ಪತ್ರಿಕೆಗಳ ಮೂಲಕ ನೋಡಿರುತ್ತೇವೆ, ಓದಿರುತ್ತೇವೆ. ಇದಕ್ಕೆ ಸಾಟಿ ಉಂಟೆ? ಈ ತೆರನಾದ ಮಾತೃಭಾವದಲ್ಲಿ ಔದಾರ್ಯ, ಪ್ರೇಮ, ದಯೆ ಎಲ್ಲವೂ ಸಮ್ಮಿಳಿತವಾಗಿವೆ. ಹೀಗೆ ಪ್ರೇಮದ ಸಹಜ ಅಭಿವ್ಯಕ್ತಿಯಾಗಿ ದಯೆ ಪ್ರಕಟಗೊಳ್ಳುತ್ತದೆ. ಮಾತು ಬಾರದ ಮೂಕಪ್ರಾಣಿಗಳ ಮಾತೃಹೃದಯ ಮಿಡಿಯುವ ಪರಿ ಇದು. ಇದನ್ನು ಬಣ್ಣಿಸಲು ಪದಗಳು ಶಕ್ತವಾಗಿಲ್ಲ ಎನ್ನುವುದೇ ಸರಿಯಾದೀತು. ಅಲ್ಲವೆ?
ಪರಿಣಾಮಗಳತ್ತ ಎಚ್ಚರಿಕೆಯಿರಲಿ
ಈಗಾಗಲೇ ಹೇಳಿದಂತೆ ಎಲ್ಲಾ ಭಾವಗಳ ಮೂಲ ಈ ಆಸೆ. ಆಂತರಿಕ ನ್ಯೂನತೆ, ಈಡೇರದ ಕಾಮನೆಗಳಿಂದಾಗಿ ಈ ಆಸೆ ಜನ್ಮತಾಳುತ್ತದೆ. ಸಂಪೂರ್ಣ ತೃಪ್ತ ಎಂಬ ಹಂತವನ್ನು ತಲಪುವವರೆಗೆ ನಮಗೆ ಒಂದು ಬಗೆಯ ಶೂನ್ಯ ಅಥವಾ ಬರಿದಾದ ಅನುಭವ ಆಗುತ್ತಿರುತ್ತದೆ. ಈ ಶೂನ್ಯತೆಯನ್ನು ನೀಗುವ ತವಕದಲ್ಲಿ ನಮ್ಮ ಮನಸ್ಸು ವಿಷಯಪ್ರಪಂಚದಲ್ಲಿ ಸುತ್ತುತ್ತಾ ಇರುತ್ತದೆ. ಕ್ರಮೇಣ ಒಂದು ನಿರ್ದಿಷ್ಟ ವಸ್ತು, ವಿಷಯ ಯಾ ವ್ಯಕ್ತಿಯ ಮೇಲೆ ನೆಲೆಯೂರುತ್ತದೆ. ಬಳಿಕ ಮನಸ್ಸು ಸತತವಾಗಿ ಆ ಕಡೆಗೆ ಸೆಳೆಯಲ್ಪಡುತ್ತದೆ. ಅನಂತರ ತನ್ನದಾಗಿಸಿಕೊಳ್ಳುವ ಹಂಬಲ ಉಂಟಾಗುತ್ತದೆ. ಆಸೆಯ ಉದಯವಾಗುತ್ತದೆ. ಒಮ್ಮೆ ಆಸೆ ಸ್ಥಾಪನೆಗೊಂಡರೆ ಅದು ನಾನಾ ರೀತಿಯ ವಿಕಾರಗಳಿಗೆ ಎಡೆ ಮಾಡಿಕೊಡುತ್ತದೆ. ಮೂಲ ಹೇತುವಾದ ಆಸೆಯಿಂದ ಭಾವಸ್ಫುರಣೆ ಪುಂಖಾನುಪುಂಖವಾಗಿ ಆಗುತ್ತದೆ. ಇನ್ನೂ ಆಳಕ್ಕೆ ಇಳಿದು ಅದರ ಮುಂದಿನ ಪರಿಣಾಮದ ಬಗ್ಗೆ ಗಮನಿಸೋಣ.
ಮನದಲ್ಲಿ ಒಮ್ಮೆ ಆಸೆ ತಳವೂರಿದ ನಂತರ ಅದನ್ನು ಈಡೇರಿಸಿಕೊಳ್ಳುವ ಹಂಬಲದಲ್ಲಿ ನಮ್ಮ ಯೋಚನಾ ಸರಣಿಯು ನಾನಾ ದಿಕ್ಕುಗಳಲ್ಲಿ ಹರಿಯತೊಡಗುತ್ತದೆ. ಈ ಪ್ರಕ್ರಿಯೆಯಲ್ಲಿ ನಮ್ಮ ಯೋಚನೆಯು ಒಂದು ನಿರ್ದಿಷ್ಟ ವಸ್ತು, ವಿಷಯದ ಮೇಲೆ ಕೇಂದ್ರೀಕೃತಗೊಂಡಾಗ ತಕ್ಷಣ ನಾವು ಎಚ್ಚೆತ್ತುಕೊಳ್ಳಬೇಕು. ಅದನ್ನು ವಿಮರ್ಶೆಗೆ ಒಳಪಡಿಸಬೇಕು. ವಿವೇಚನೆ ಚುರುಕಾಗಬೇಕು. ಮೈಮರೆತರೆ, ಆ ಯೋಚನೆಯ ಸೂಕ್ಷ್ಮ ಎಳೆಯೊಂದು ಆ ವಸ್ತುವಿನ ಕಡೆಗೆ ಸತತವಾಗಿ ಹರಿಯಲು ತೊಡಗುತ್ತದೆ. ಆರಂಭದಲ್ಲಿ ಇದು ವ್ಯಕ್ತಿ ಮತ್ತು ಆ ವಸ್ತುವಿನ ನಡುವಿನ ಅಂತರವನ್ನು ಬೆಸೆಯುವ ಸೇತುವಾಗಿ ಅನುರಾಗವಾಗಿ ಮಾರ್ಪಡುತ್ತದೆ. ಅದು ಇನ್ನೂ ಮುಂದುವರಿದರೆ, ಮತ್ತಷ್ಟು ಬಲವತ್ತರವಾಗಿ ಪ್ರಬಲವಾದ ಅತಿಯಾದ ರೂಪಾಂತರ ಹೊಂದಿ ಅತ್ಯಾಶೆಯ (ಪ್ರಬಲವಾದ ಇಚ್ಛೆ) ರೂಪ ತಾಳುತ್ತದೆ. ಆಸೆ ಎಂದರೆ ಒಂದು ನಿರ್ದಿಷ್ಟ ವಸ್ತು, ವಿಷಯ, ವ್ಯಕ್ತಿಯ ಕಡೆಗೆ ನಿರಂತರವಾಗಿ ಹರಿಯುವ ಅಗಾಧ ಪ್ರಮಾಣದ ಯೋಚನೆಗಳ ಅಲೆಗಳೇ ಹೊರತು ಬೇರೆ ಏನೂ ಅಲ್ಲ.
ಈ ಅಬಾಧಿತ ಯೋಚನಾ ಲಹರಿಗೆ ಮಾರ್ಗಮಧ್ಯೆ ಇನ್ನೊಂದು ವಸ್ತು ಅಥವಾ ಬೇರೆ ಇನ್ನಿತರ ಅಡೆ-ತಡೆಗಳು ಎದುರಾದರೆ ಅದರಿಂದ ಕ್ರೋಧ ಉಂಟಾಗುತ್ತದೆ. ಆಸೆ ಅಥವಾ ಅನುರಾಗದ ಬದಲಾದ ರೂಪವೇ ಈ ಕ್ರೋಧ. ಕ್ರೋಧವನ್ನು ‘ತಾತ್ಕಾಲಿಕ ಭ್ರಾಂತಸ್ಥಿತಿ’ ಎಂದೂ ಕರೆಯುತ್ತಾರೆ. ಕೋಪದ ಭರದಲ್ಲಿ ಬುದ್ಧಿ ಸರಿಯಾಗಿ ಕೆಲಸ ಮಾಡದು. ಆಸೆ ಇಲ್ಲದ ಕಡೆ ಕೋಪ ಇರಲು ಸಾಧ್ಯವಿಲ್ಲ. ಆದ್ದರಿಂದ ಕೋಪವನ್ನು ಜಯಿಸಬೇಕಾದರೆ ಆಸೆಯನ್ನು ಸರಿಯಾಗಿ ಗುರುತಿಸಿ ಅದನ್ನು ನಿಯಂತ್ರಿಸುವ ಕಲೆ ಕಲಿತಿರಬೇಕು.
ಆಸೆ, ಅನುರಾಗ ಹೆಚ್ಚಾದಷ್ಟೂ ಅದರಿಂದ ಕೋಪದ ಪ್ರಮಾಣ ಹೆಚ್ಚುತ್ತದೆ. ಕೋಪ ಮೇಲುಗೈ ಪಡೆದರೆ ಬುದ್ಧಿಗೆ ಮಂಕು ಕವಿಯುತ್ತದೆ. ಯುಕ್ತಾಯುಕ್ತವಿವೇಚನೆ ಮರೆಯಾಗುತ್ತದೆ. ವಿವೇಚನೆ ಶೂನ್ಯವಾದರೆ ಅದು ಸರ್ವನಾಶದತ್ತ ಎಳೆದೊಯ್ಯುತ್ತದೆ.
ನಮ್ಮ ಆಸೆ ಈಡೇರಿತು ಎಂದು ಇಟ್ಟುಕೊಳ್ಳೋಣ. ಹೆಚ್ಚಿನ ಸಂದರ್ಭಗಳಲ್ಲಿ ಮನಸ್ಸು ಅಲ್ಲಿಗೆ ತೃಪ್ತಿಯನ್ನು ಹೊಂದುವುದಿಲ್ಲ. ಮತ್ತಷ್ಟು ಬೇಕು ಎಂಬ ದುರಾಸೆ ಕಾಡತೊಡಗುತ್ತದೆ. ಹೊಟ್ಟೆಬಾಕತನ ಆವರಿಸಿಕೊಳ್ಳುತ್ತದೆ. ಇದು ಲೋಭದ ಹುಟ್ಟಿಗೆ ದಾರಿ ಮಾಡಿಕೊಡುತ್ತದೆ. ಲೋಭದಿಂದ ಮತ್ತಷ್ಟು ಆರ್ಜಿಸಿಕೊಳ್ಳುವ ತವಕ ಕಾಡತೊಡಗುತ್ತದೆ. ಈ ತವಕ ಲೋಭಕ್ಕೆ ಮತ್ತಷ್ಟು ಪೋಷಣೆಯನ್ನು ಒದಗಿಸುತ್ತದೆ. ಗಳಿಕೆ, ಸಂಪತ್ತು ವಿಸ್ತಾರಗೊಂಡಾಗ ಸಹಜವಾಗಿ ಅಹಂಕಾರ ತಲೆಯೆತ್ತುತ್ತದೆ. ನಮ್ಮಿಂದ ಕೆಳಮಟ್ಟದಲ್ಲಿ ಇರುವವರ ಮುಂದೆ ಈ ಅಹಂಕಾರವು ಅಟ್ಟಹಾಸದಿಂದ ಮೆರೆಯುತ್ತದೆ. ಅದೇ ಅಹಂಕಾರವು ನಮ್ಮಿಂದ ಮೇಲ್ಮಟ್ಟದಲ್ಲಿ ಇರುವವರ ವಿಷಯದಲ್ಲಿ ಮಾತ್ಸರ್ಯದ ರೂಪದಲ್ಲಿ ಎದ್ದುಕಾಣುತ್ತದೆ. ಅಗಾಧ ಪ್ರಮಾಣದ ಪ್ರಾಪಂಚಿಕ ಭೋಗಭಾಗ್ಯಗಳನ್ನು ಸಂಪಾದಿಸಿದನಂತರ ಕೊನೆಗೆ ಅದು ನಮ್ಮ ಕೈತಪ್ಪಿಹೋಗುವ ಭೀತಿ ಸುಪ್ತವಾಗಿ ಕಾಡತೊಡಗುತ್ತದೆ. ಅದು ಎಲ್ಲಿ ಕಳೆದುಹೋಗುವುದೋ ಎಂಬ ಭಯ ಆವರಿಸುತ್ತದೆ. ಇದರಿಂದ ಮನಸ್ಸು ಅವುಗಳ ಮೇಲೆ ಆಧಿಪತ್ಯ ನಡೆಸಲು ಉದ್ಯುಕ್ತವಾಗುತ್ತದೆ. ಹೀಗೆ ಭಾವಗಳು ಹಂತಹಂತವಾಗಿ ರೂಪಾಂತರ ಹೊಂದಿ ಅತಿರೇಕದ ಅವಸ್ಥೆಯನ್ನು ತಲಪುತ್ತವೆ. ಇದರಿಂದಾಗಿಯೂ ವಿವೇಚನೆ ಕುಂದುತ್ತದೆ. ಅಂತಿಮವಾಗಿ ವ್ಯಕ್ತಿತ್ವದ ಹನನ ಆಗುತ್ತದೆ. ಹೀಗೆ ಭಾವನೆಗಳು ನಮ್ಮನ್ನು ಆಳುತ್ತವೆ.
ಯಾವುದೇ ಆಸೆ ಆಕಾಂಕ್ಷೆಗಳು ನೈತಿಕ ಚೌಕಟ್ಟಿನೊಳಗೆ ಇದ್ದರೆ ಅದು ಸ್ವಾಗತಾರ್ಹ. ಸರಹದ್ದನ್ನು ಮೀರಿದರೆ ಅದು ಎಂದಿದ್ದರೂ ಹಾನಿಕಾರಕವೇ.
ಇದು ಭಾವನೆಗಳ ಕಾರ್ಯವೈಖರಿ ಮತ್ತು ಅವುಗಳ ಪ್ರಭಾವ, ಪರಿಣಾಮಗಳ ಒಂದು ಪರಿಚಯ ಅಷ್ಟೆ.
ಸ್ವಕೇಂದ್ರಿತ ಭಾವನೆಗಳು ಅಪಾಯಕಾರಿ. ಆದರೆ ಅದೇ ಭಾವನೆಗಳು ವೈಯಕ್ತಿಕ ಸರಹದ್ದನ್ನು ದಾಟಿ ವಿಶ್ವಸಮುದಾಯವನ್ನು ಅಪ್ಪಿಕೊಂಡರೆ ಅವುಗಳು ಅಷ್ಟೇ ಪ್ರಯೋಜನಕಾರಿಯೂ ಆಗಬಲ್ಲವು. ಇದು ಒಂದು ಅಲಿಖಿತ ಪ್ರಾಕೃತಿಕ ನಿಯಮ. ಪ್ರಬಲ ಶಕ್ತಿಸಂಪನ್ನವಾಗಿರುವ ಭಾವ ಅಥವಾ ಭಾವನೆಗಳು ಹುಲು ಮಾನವನನ್ನು ದೇವಮಾನವನನ್ನಾಗಿ ಇಲ್ಲವೆ ನರಾಧಮನನ್ನಾಗಿ ಮಾಡಬಲ್ಲವು. ಇದು ಅವುಗಳ ರಹಸ್ಯ ಕೂಡ. ಇದನ್ನು ಅರಿಯಲು ಮನಸ್ಸು ಒಳಮುಖವಾಗಿ ಚಲಿಸಬೇಕು, ಅಂತರ್ಮುಖಿ ಆಗಬೇಕು, ಆಂತರಿಕ ಯಾನದಲ್ಲಿ ತೊಡಗಬೇಕು. ಆಗ ನಮ್ಮೊಳಗೆ ಅಡಗಿರುವ ಅಗೋಚರ, ವಿಸ್ಮಯಕಾರಿ ಪ್ರಪಂಚವೊಂದು ನಮ್ಮ ಮುಂದೆ ಅನಾವರಣಗೊಳ್ಳುತ್ತದೆ, ‘ನಿನ್ನೊಳಗೆ ನೀ ಹೊಕ್ಕು, ನಿನ್ನನ್ನೇ ನೀ ತಿಳಿದು, ನಿನಗೆ ನೀನಾಗು ಗೆಳೆಯ’ ಎಂಬ ಮಾತಿನ ಅರ್ಥ ವೇದ್ಯವಾಗುತ್ತದೆ, ಸತ್ಯದರ್ಶನ ಆಗುತ್ತದೆ.
ಭಾವಪ್ರಪಂಚದಲ್ಲಿ ಏನುಂಟು ಏನಿಲ್ಲ! ಅದರ ಒಳಗೆ ಹಲವು ವಿಸ್ಮಯಗಳಿವೆ. ಅದ್ಭುತ ಕಲ್ಪನಾವಿಲಾಸವಿದೆ, ಮಾಧುರ್ಯವಿದೆ, ಲಾಲಿತ್ಯವಿದೆ, ಕರುಳುಹಿಂಡುವ ನೋವಿದೆ, ಸಮಸ್ಯೆಗಳಿವೆ, ಪರಿಹಾರವೂ ಇದೆ. ಮಾರ್ಗದರ್ಶನ ಮಾಡಿ ಮುನ್ನಡೆಸುವ ಗುರುವೂ ಇದ್ದಾನೆ. ನಾವು ಅದನ್ನು ಕಂಡುಕೊಳ್ಳಬೇಕು ಅಷ್ಟೇ. ಇದು ಭಾವಪ್ರಪಂಚದ ವಿಸ್ಮಯ.