ಮರುದಿನ ಇನ್ನೂ ನಸುಕು ಹರಿದಿರಲಿಲ್ಲ. ಗಡಗಡ ಸದ್ದೆಬ್ಬಿಸುತ್ತ ರಥವೊಂದು ಬಂದು ನಿಂತಿತು. ಆತಂಕದಿಂದ ನಿದ್ರೆಗೆಟ್ಟು ಕಾದಿದ್ದ ನಾವು ಹೊರಬಂದು ನೋಡಿದರೆ…. ಸೊಸೆ ರಥದಿಂದ ಕೆಳಗಿಳಿಯುತ್ತಿದ್ದಾಳೆ!
ಭದ್ರ ವಿಳಂಬಿಸದೆ ತ್ವರಿತವಾಗಿ ಕುದುರೆಯನ್ನು ಓಡಿಸುತ್ತಿದ್ದ. ಅವನ ಅನುಚರರು ಅಷ್ಟೇ ತ್ವರಿತವಾಗಿ ಅವನನ್ನು ಹಿಂಬಾಲಿಸುತ್ತಿದ್ದರು. ನನ್ನ ಮಕ್ಕಳಿಬ್ಬರೂ ಸಮಸ್ಯೆ ಬಗೆಹರಿಯುವುದೆಂಬ ಉತ್ಸಾಹದಲ್ಲಿ ಓಡುನಡಿಗೆಯಿಂದ ಸಾಗುತ್ತಿದ್ದರು. ಇದ್ದವರಲ್ಲಿ ಮುದುಕನಾದ ನನಗೆ ಮಾತ್ರ ಕಷ್ಟವಾಯಿತು. ವಯಸ್ಸಿಗೆ ಸಹಜ ದೌರ್ಬಲ್ಯ; ಕೆಲದಿನಗಳಿಂದ ಈ ಚಿಂತೆಯಿಂದಾಗಿ ನಿದ್ರೆಗೆಟ್ಟಿದ್ದೆ. ಸರಿಯಾಗಿ ಊಟವನ್ನೂ ಮಾಡಿರಲಿಲ್ಲ. ಹೀಗಾಗಿ ಅವರನ್ನು ಅನುಸರಿಸುವುದು ಕಷ್ಟವೇ ಆಯಿತು. ಆದರೂ ಏದುಸಿರು ಬಿಡುತ್ತ ಅವರನ್ನು ಹಿಂಬಾಲಿಸಿದೆ. ಹಾಗೆ ತರಾತುರಿಯಲ್ಲಿ ನಡೆಯುತ್ತಿದ್ದರೂ ನನ್ನ ಮನಸ್ಸು ಅಸ್ವಸ್ಥವಾಗತೊಡಗಿತು. ಭದ್ರನೇನೋ ಭರವಸೆ ಕೊಟ್ಟಿದ್ದ. ಆದರೆ ಅವನ ಮಾತು ನಡೆದೀತು ಎಂಬ ಬಗೆಗೆ ನನಗೆ ಪೂರ್ಣ ವಿಶ್ವಾಸವಿರಲಿಲ್ಲ. ಚಿತ್ರಕ ಇಂತಹ ಸಂದರ್ಭವನ್ನು ನಿರೀಕ್ಷಿಸದಷ್ಟು ಹುಂಬನಲ್ಲ. ಹಾಗಾಗಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿರುತ್ತಾನೆ. ಅಲ್ಲದೆ ಅವನಿಗೆ ಅರಮನೆಯ ರಾಜಪುತ್ರರ ಬೆಂಬಲವುಂಟೆಂದು ಅವನೇ ಪರೋಕ್ಷವಾಗಿ ಹೇಳಿದ್ದನಲ್ಲ. ನಾವು ವಿಚಾರಿಸುವುದಕ್ಕೆಂದು ಅವನ ಮನೆಗೆ ಹೋದಮೇಲಂತೂ ಮೊದಲಿಗಿಂತ ಹೆಚ್ಚು ಜಾಗೃತನಾಗಿರುತ್ತಾನೆ. ಅವನನ್ನು ಕಾಯುವುದಕ್ಕೆ ಅರಮನೆಯ ಯೋಧರು ಆಯುಧಪಾಣಿಗಳಾಗಿ ಬಂದಿದ್ದರೂ ಅಚ್ಚರಿಯಿಲ್ಲ. ಅವರೆದುರು ಭದ್ರ ಹಿಂದೆಸರಿಯಬೇಕಾದ ಸಂದರ್ಭವೊದಗಿದರೆ? ಈ ಕಲ್ಪನೆ ನನ್ನನ್ನು ಬೆಚ್ಚಿಬೀಳುವಂತೆ ಮಾಡಿತು. ನನ್ನ ನಡಿಗೆ ಒಂದು ಕ್ಷಣ ಸ್ತಬ್ಧವಾಯಿತು.
ಭದ್ರ ಸೋತರೆ? ನಾನು ಕಂಪಿಸಿದೆ. ಮುಂದಿನ ಪರಿಣಾಮ ನೇರವಾಗಿ ನನ್ನ ಕುಟುಂಬದ ಮೇಲಾಗಲಿತ್ತು. ತಮ್ಮ ವಿರುದ್ಧ ದೂರುಕೊಟ್ಟವರನ್ನು ಧಾರ್ತರಾಷ್ಟ್ರರು ಸಹಿಸುವವರಲ್ಲ. ಅವರ ಗಮನಕ್ಕೆ ಇದು ಬಾರದಿದ್ದರೂ ಚಿತ್ರಕ ಚಾಡಿ ಹೇಳಿಯಾದರೂ ಅವರನ್ನು ಕೆರಳಿಸುವುದು ಖಚಿತ. ರಾಜಪುತ್ರರು ಕುಪಿತರಾದರೆ? ಅವರ ವಿರೋಧ ಕಟ್ಟಿಕೊಂಡು ನಮ್ಮಂತಹ ಬಡಪಾಯಿಗಳು ಬಾಳುವುದುಂಟೆ ಹಸ್ತಿನಾವತಿಯಲ್ಲಿ? ಅಂತಹ ಸಂದರ್ಭದಲ್ಲಿ ಭದ್ರನ ರಕ್ಷಣೆ ನಮಗೆ ಸಾಕಾದೀತೇ? ಅಥವಾ ಆ ಕಾಲದಲ್ಲಿ ಅವನಾದರೂ ನಮ್ಮ ರಕ್ಷಣೆಗೆ ನಿಂತಾನೇ? ನನಗೆ ಗೊಂದಲವೂ ಭಯವೂ ಏಕಕಾಲಕ್ಕೆ ಉಂಟಾಯಿತು. ನಮ್ಮದು ನ್ಯಾಯವೇ ಆದರೂ ಸೈನಿಕರ ಮೂಲಕ ಕತ್ತರಿಸಿ ಚೆಲ್ಲಿದರೆ? ಬೇಡ, ಬೇಡ. ನಮ್ಮ ಹಣೆಯಲ್ಲಿ ವಿಧಿ ಬರೆದಂತಾಗಲಿ. ಸದ್ಯ ಭದ್ರನನ್ನು ತಡೆಯುವುದೇ ಸರಿಯೆಂದು ನಿರ್ಧರಿಸಿದೆ. “ಭದ್ರ್ರಾ… ಭದ್ರಾ….” ಉಸಿರುಗಟ್ಟಿ ನಾನು ಕೂಗಿದರೂ ಅವನಿಗದು ಕೇಳಿಸಲಿಲ್ಲ. ನನ್ನಿಂದ ಮುಂದೆ ಸಾಗುತ್ತಿದ್ದ ಚನ್ನನಿಗೆ ಕೂಗಿ ಹೇಳಿದೆ, “ಚನ್ನಾ, ಭದ್ರನನ್ನೊಮ್ಮೆ ತಡೆ. ಮಾತಾಡಬೇಕು. ಮೊದಲು ಅವನನ್ನು ನಿಲ್ಲಿಸು.” ಚನ್ನನಿಗೆ ಏನೋ ಗಹನವಾದದ್ದಿದೆಯೆಂದು ಅರ್ಥವಾಗಿರಬೇಕು. “ಭಟನಾಯಕಾ….” ಎಂದವನು ದನಿಯೆತ್ತರಿಸಿ ಕೂಗಿದ. ಕುದುರೆಗಳು ನಿಂತವು. ನಾನು ಏದುಸಿರು ಬಿಡುತ್ತ ಭದ್ರನ ಬಳಿಸರಿದು ನನ್ನ ಆತಂಕವನ್ನು ಅವನಲ್ಲಿ ಹೇಳಿಕೊಂಡೆ. ಒಂದು ಕ್ಷಣ ಅವನ ಹಣೆಯಲ್ಲಿ ನಿರಿಗೆಗಳು ಮೂಡಿದವು. ನಿಧಾನಕ್ಕೆ ಅವನೆಂದ, “ಹಾಗೇನೂ ಆಗುವುದಿಲ್ಲ ಬಿಡು. ಒಂದು ವೇಳೆ ಚಿತ್ರಕನಿಗೆ ರಾಜಪುತ್ರರ ರಕ್ಷಣೆಯಿದೆಯೆಂದೇ ಭಾವಿಸೋಣ. ನಿನ್ನ ಸೊಸೆಯನ್ನು ಹಾಗೆಯೇ ಬಿಟ್ಟು ಬಿಡೋಣವೆನ್ನುವಿಯೇನು ನೀನು? ಅವಳ ವಿಧಿಗೇ ಎಲ್ಲವನ್ನೂ ಬಿಟ್ಟು ನೆಮ್ಮದಿಯಾಗಿರಬಲ್ಲಿರ ನೀವೆಲ್ಲ?” ಕೊಂಚ ಹೊತ್ತು ಗುಹನ ಮುಖವನ್ನು ದಿಟ್ಟಿಸಿದ ಭದ್ರ ಮುಂದುವರಿಸಿದ, “ನೋಡಪ್ಪ ರಥಕಾರ, ನೀವು ತಂದೆ, ಮಕ್ಕಳು ಅಜ್ಞಾತ ಭೀತಿಯಿಂದ ಹಿಂದೆ ಸರಿಯುವಿರಾದರೆ ಹೋಗಿ ಮನೆಯಲ್ಲಿ ಮಲಗಿಕೊಳ್ಳಿ. ನಾನಂತೂ ಈಗ ಪ್ರಕರಣಕ್ಕೆ ಕೈಯಿಕ್ಕಿದ್ದಾಗಿದೆ. ಇನ್ನು ಅಂಜುವ ಪ್ರಶ್ನೆಯಿಲ್ಲ. ನನಗೆ ಆಚಾರ್ಯರೇ ಆದರ್ಶ. ಎಲ್ಲಿ ಧರ್ಮಕ್ಕೆ ಚ್ಯುತಿಯುಂಟಾಗುವುದೋ ಅಲ್ಲೆಲ್ಲ ಕೈಯೆತ್ತುವುದಕ್ಕೆ ಅವರ ಅನುಮತಿ ನನಗಿದೆ. ಇದರಿಂದಾಗುವ ಅನಾಹುತಗಳ ಸಂಪೂರ್ಣ ಹೊಣೆ ನನಗಿರಲಿ. ಆದರೆ ನೆನಪಿಡಿ. ನೀವೆಲ್ಲ ಅನ್ಯಾಯ ನಡೆದಾಗ ಮೂಕಪಶುಗಳಂತೆ ಸಹಿಸಿಕೊಳ್ಳುವುದರಿಂದ ದುಷ್ಟರ ಶಕ್ತಿವರ್ಧನೆಯಾಗುವುದಲ್ಲದೆ ತಗ್ಗುವುದಿಲ್ಲ. ಹೆದರಬೇಡಿ. ಒಂದುವೇಳೆ ರಾಜಪುತ್ರರು ಕೋಪಗೊಂಡರೂ ಏನು ಮಾಡಬಲ್ಲರು? ಪ್ರಾಣ ತೆಗೆಯಬಹುದು. ಅಷ್ಟೇತಾನೇ? ಪ್ರಾಣದಾಸೆಗೆ ಒಬ್ಬಳು ಮುಗ್ಧೆಯನ್ನು, ಅದೂ ಮನೆ ಬೆಳಗಲು ಬಂದ ಸುಮಂಗಲೆಯನ್ನು ಬಲಿಕೊಡುತ್ತೀರಾ ಹೇಡಿಗಳಂತೆ?” ಭದ್ರನ ಮಾತು ಕೇಳುತ್ತಿದ್ದಂತೆ ಹೊಸಬೆಳಕೊಂದು ಕಣ್ಣೆದುರು ಕಾಣಿಸಿದಂತಾಯಿತು ನನಗೆ. ಅಲ್ಲದೆ ಆಚಾರ್ಯರ ಹೆಸರು ಬಂದುದರಿಂದ ಭರವಸೆಯೂ ಮೂಡಿತು. “ಸರಿ ನೋಡಿಯೇಬಿಡೋಣ. ಇಷ್ಟುದಿನ ಬದುಕಿಯೂ ಸತ್ತಂತಿದ್ದೆವು. ಇನ್ನು ಹೊಸದಾಗಿ ಸಾಯುವುದಕ್ಕೇನಿದೆ?” ನನ್ನ ಮಾತಿನಲ್ಲಿ ದೃಢತೆಯಿತ್ತು. ನನ್ನ ಜತೆಗಿದ್ದವರ ಉತ್ಸಾಹ ಇಮ್ಮಡಿಸಿತು. “ಅದಾದರೆ ಮಾತು. ನಡೆಯಿರಿ” ಭದ್ರ ಕಾಲುಗಳಿಂದ ಕುದುರೆಯ ಪಕ್ಕೆಯನ್ನು ತಿವಿದ. ಕುದುರೆ ಮುಂದೋಡಿತು. ನಾವೂ ಧಾವಿಸಿದೆವು.
ನಮ್ಮ ಗುಂಪು ಚಿತ್ರಕನ ಮನೆ ಸೇರುವ ಹೊತ್ತಿಗೆ ಸಂಜೆಯಾಗುತ್ತಲಿತ್ತು. ಮನೆಯ ಹೊರಗೆ ಯಾರ ಸುಳಿವೂ ಇಲ್ಲ. ಚಿತ್ರಕ ಮತ್ತವನ ಮಕ್ಕಳು ಏನು ನಡೆಸಿದ್ದಾರೆಂದು ಊಹಿಸುವುದು ನನ್ನಿಂದಾಗಲಿಲ್ಲ. ರಾಜಭಟರೂ ಕಾಣಿಸಲಿಲ್ಲ. ನಾವು ಅವನ ಗೊಡವೆಗೆ ಹೋಗಲಾರೆವೆಂದು ನಿರ್ಲಕ್ಷ್ಯದಿಂದಿದ್ದಾನೆಯೆ? ಅಥವಾ ಇನ್ನೇನಾದರೂ ಒಳಸಂಚು ನಡೆಸಿದನೇ? ನಾವೆಲ್ಲ ಕೊಂಚ ದೂರದಲ್ಲಿ ನಿಂತೆವು. ಭದ್ರ ಕುದುರೆಯ ಮೇಲೆ ಕುಳಿತು ಯೋಚಿಸುತ್ತಿದ್ದ. “ಚಿತ್ರಕನ ಮನೆ ಇದೇ ಹೌದಷ್ಟೆ?” ಅವನ ಪ್ರಶ್ನೆಗೆ ಹೌದೆಂದು ತಲೆಯಾಡಿಸಿದೆ. ಅವನು ಕುದುರೆಯಿಂದಿಳಿದು ತನ್ನನ್ನು ಹಿಂಬಾಲಿಸುವಂತೆ ಸಂಜ್ಞೆ ಮಾಡಿ ಮುಂದೆ ಹೋದ. ಚಿತ್ರಕನ ಅಂಗಳದಲ್ಲಿ ನಿಂತು ಯಾರಾದರೂ ಕಾಣಿಸುವರೇನೋ ಎಂದು ಕಾದೆವು. ಯಾರ ಸುಳಿವೂ ಇಲ್ಲ. “ಚಿತ್ರಕ…. ಏ ಚಿತ್ರಕಾ…..” ಭದ್ರ ದನಿಯೆತ್ತರಿಸಿ ಕೂಗಿದ. ಹೀಗೆ ಒಂದೆರಡು ಸಲ ಕೂಗಿದ ಬಳಿಕ ಬಾಗಿಲಿನಲ್ಲಿ ಚಿತ್ರಕ ಹಾಗೂ ಅವನ ಮಕ್ಕಳು ಕಾಣಿಸಿಕೊಂಡರು. “ನೀನು ಚಿತ್ರಕನೇ ತಾನೆ?” ಭದ್ರ ಅವನ ಮಾತಿಗೆ ಕಾಯದೆ ಮುಂದುವರಿಸಿದ, “ನಾನು ಆಚಾರ್ಯ ಭೀಷ್ಮರ ಕಡೆಯಿಂದ ಬಂದಿದ್ದೇನೆ. ನೀನು ನಿನ್ನ ಅಣ್ಣ ರಥಕಾರನ ಸೊಸೆಯನ್ನು ಬಲಾತ್ಕಾರದಿಂದ ತಂದು ನಿನ್ನ ಮನೆಯಲ್ಲಿಟ್ಟುಕೊಂಡದ್ದುಂಟೆ?” ಮುಗ್ಧನಂತೆ ನೋಡುತ್ತಿದ್ದ ಅವನ ಮುಖದಲ್ಲೀಗ ಗಾಬರಿ ಕಾಣಿಸಿತು. “ನಾನು…. ರಥಕಾರನ ಸೊಸೆಯನ್ನು ಅಪಹರಿಸಿದ್ದೇನೆಯೇ? ನಿಮಗೆ ದೂರುಕೊಟ್ಟವರು ಯಾರು?” ಚಿತ್ರಕನ ಮಾತು ಪೂರ್ಣವಾಗುವ ಮೊದಲೆ ಭದ್ರ ಕೆರಳಿ ಅಬ್ಬರಿಸಿದ. “ಏಯ್….. ನಿನ್ನ ನಾಟಕವೆಲ್ಲ ಕಟ್ಟಿಡು. ಅವಳನ್ನು ತಂದದ್ದುಂಟೋ ಇಲ್ಲವೋ? ದೂರು ಬಾರದ ಹೊರತು ಇದನ್ನೆಲ್ಲ ವಿಚಾರಿಸುವ ಹಾಗಿಲ್ಲವೇನು?” ಭದ್ರನ ಅಧಿಕಾರವಾಣಿ ಕೇಳಿ ಚಿತ್ರಕ ಕಂಪಿಸಿದ. ಅವನೇನೋ ಹೇಳುವುದಕ್ಕೆ ತೊಡಗುವಷ್ಟರಲ್ಲಿ ಅವನ ಹಿರಿಯ ಮಗ ಉತ್ತರಿಸಿದ – “ಇಲ್ಲ ಮಹಾಸ್ವಾಮಿ, ನಾವು ಅದನ್ನೆಲ್ಲ ಮಾಡುವವರಲ್ಲ. ನಿಮಗ್ಯಾರೋ ಸುಳ್ಳು ವರ್ತಮಾನ ಕೊಟ್ಟಿದ್ದಾರೆ.”
“ಓಹೋ ಹಾಗೇನು? ನೀವು ಅಪರಾಧ ಮಾಡಿಲ್ಲವಾದರೆ ನಾನು ವೃಥಾ ಶ್ರಮಪಟ್ಟ ಹಾಗಾಯಿತು.” ಭದ್ರ ಈಗ ನನ್ನತ್ತ ತಿರುಗಿದ. “ನೋಡಿದೆಯ ರಥಕಾರ, ಇವರು ಮುಗ್ಧ ಪೌರರು. ನಿನ್ನ ಸೊಸೆಯನ್ನು ಅಪಹರಿಸಿರಲಿಕ್ಕಿಲ್ಲ. ಅಲ್ಲವೆ?” ತುಸು ತಡೆದು ಚಿತ್ರಕನತ್ತ ತಿರುಗಿ ಹೇಳಿದ, “ಹೇಗೂ ಬಂದದ್ದಾಗಿದೆ. ಒಮ್ಮೆ ಮನೆಯೊಳಗೆ ನೋಡಿಬಿಡಲೆ?” ಅವನು ಹೀಗೆನ್ನುತ್ತಿದ್ದಂತೆ ನಾಲ್ವರು ರಾಜಭಟರು ಮರೆಯಿಂದ ಈಚೆ ಬಂದರು. “ಓ…. ಚಿತ್ರಕನಿಗೆ ರಾಜಭಟರ ರಕ್ಷಣೆಯೂ ಉಂಟೇನು?” ಭದ್ರ ತೋರಿಕೆಯ ಅಚ್ಚರಿಯನ್ನು ನಟಿಸುತ್ತ ಮುಂದೆ ಹೋದ. “ನಾಯಕ, ದಯವಿಟ್ಟು ಅಲ್ಲೇ ನಿಲ್ಲು. ಚಿತ್ರಕನ ಕೂದಲೂ ಕೊಂಕದಂತೆ ನೋಡಿಕೊಳ್ಳುವ ಹೊಣೆಯನ್ನು ನಮಗೆ ನೀಡಿದ್ದಾರೆ. ನಾವದನ್ನು ಪಾಲಿಸಲೇಬೇಕು. ನಿರ್ವಾಹವಿಲ್ಲ. ಆದುದರಿಂದ ನೀನು ಹಿಂದೆ ಹೋಗುವುದು ಲೇಸು” ಎಲ್ಲರಿಗಿಂತ ಮುಂದೆ ನಿಂತಿದ್ದ ಭಟ ಹೇಳಿದ.
“ಅರೆ, ನೀವು ಚಿತ್ರಕನ ಕೂದಲು ಕೊಂಕದಂತೆ ನೋಡಿಕೊಳ್ಳಿ. ಬೇಡವೆಂದವರಾರು? ನಾನು ಅವನಿಗೆ ಹಾನಿಮಾಡುವುದಕ್ಕೆ ಬಂದವನಲ್ಲ. ಮನೆಯೊಳಗೆ ರಥಕಾರನ ಸೊಸೆ ಇದ್ದಾಳೋ ಇಲ್ಲವೋ ನೋಡಿಕೊಂಡು ಹೋಗಿಬಿಡುತ್ತೇನೆ ಅಷ್ಟೆ.” ಭದ್ರನ ಅನುನಯದ ಮಾತು ಅವರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. “ನಾಯಕ, ಹೋಗಬಾರದೆಂದರೆ ಹೋಗಬಾರದು ಅಷ್ಟೆ.” ಹೀಗೆನ್ನುತ್ತಿದ್ದಂತೆ ಅವನ ಕೈ ಕತ್ತಿಯ ಹಿಡಿಯತ್ತ ಚಲಿಸಿತು. “ಹಾಗೇನು? ನಿನಗೆ ಯಾರು ಆದೇಶ ನೀಡಿದ್ದಾರೋ ನನಗೆ ತಿಳಿಯದು. ರಥಕಾರನ ಸೊಸೆಯನ್ನು ಶೋಧಿಸುವ ಹೊಣೆ ನನ್ನದು. ಯಾರು ತಡೆದರೂ ನನ್ನ ಕರ್ತವ್ಯವನ್ನು ನಾನು ಮಾಡುವವನೇ. ನೀವು ಇದರಿಂದ ದೂರಸರಿಯುವುದು ಒಳಿತು” ಕನಲಿದ ಭದ್ರ ಇಷ್ಟು ನುಡಿದವನು ಹಿಂದೆ ತಿರುಗಿ ತನ್ನವರಿಗೆ ಹಿಂಬಾಲಿಸುವಂತೆ ಸಂಜ್ಞೆ ಮಾಡಿ ಮುಂದಡಿಯಿಟ್ಟ.
ಒಂದು ಕ್ಷಣ ಸ್ತಬ್ಧರಾಗಿದ್ದ ರಾಜಭಟರು ಕತ್ತಿಹಿರಿದು ಭದ್ರನತ್ತ ನುಗ್ಗಿಬಂದರು. ಅನತಿ ದೂರದಲ್ಲಿ ನಿಂತಿದ್ದ ನನ್ನ ಕಣ್ಣೆದುರು ಮಿಂಚು ಸುಳಿದಂತಾಯಿತು. ಕಿವಿಗಳಿಗೆ ಖಡ್ಗಗಳ ತಾಕಲಾಟದ ಝಣತ್ಕಾರ ಕೇಳಿಸಿತು. ಯಾವ ವೇಗದಿಂದ ಭದ್ರ ಖಡ್ಗವನ್ನು ಒರೆಯಿಂದ ಸೆಳೆದು ಬೀಸಿದನೋ ನಮಗೆ ತಿಳಿಯಲಿಲ್ಲ. ಮುಂದಿದ್ದ ರಾಜಭಟನ ಕತ್ತಿ ಹಾರಿಹೋಯಿತು. ಎರಡನೇ ಸಲ ಭದ್ರ ಖಡ್ಗ ಬೀಸಿದ್ದಷ್ಟೆ; ರಾಜಭಟನ ರುಂಡವೂ ಕತ್ತರಿಸಿಹೋಗಿ ಕೆಳಗೆ ಬಿತ್ತು. ಭದ್ರನ ಜತೆಗಾರರ ಹೊಡೆತಕ್ಕೆ ಉಳಿದವರು ಗಾಯಗೊಂಡು ಆಯುಧ ಕೆಳಗಿಟ್ಟು ಶರಣಾದರು. ಅವರನ್ನು ಅನುಚರರ ವಶಕ್ಕಿತ್ತು ಭದ್ರ ಮನೆಯೊಳಗೆ ನುಗ್ಗಿದ. ಇಷ್ಟಾದುದನ್ನು ಕಂಡ ಚಿತ್ರಕ ನಡುಗುತ್ತ ನಿಂತ. ಅವನ ಮಕ್ಕಳ ಸ್ಥಿತಿಯೂ ಅದಕ್ಕಿಂತ ಭಿನ್ನವಾಗಿರಲಿಲ್ಲ. “ರಥಕಾರ, ಇಲ್ಲಿ ಬಾ” ಮನೆಯೊಳಗಿಂದ ಭದ್ರ ಕೂಗಿದ. ನಾವೆಲ್ಲ ಒಳಗೆ ಧಾವಿಸಿದೆವು. “ಮನೆಯೆಲ್ಲ ಹುಡುಕಿ. ನಿನ್ನ ಸೊಸೆ ಇಲ್ಲೆಲ್ಲೂ ಕಾಣಿಸುತ್ತಿಲ್ಲ. ಅವಳನ್ನು ಇವರೆಲ್ಲೋ ಅಡಗಿಸಿಟ್ಟ ಹಾಗಿದೆ.” ಭದ್ರನ ಆಣತಿಯಂತೆ ಮನೆಯನ್ನೆಲ್ಲ ಶೋಧಿಸಿದೆವು. ಮನೆಯಲ್ಲಿ ಮಾತ್ರವಲ್ಲ ಗೋಶಾಲೆಯ ಅಟ್ಟವನ್ನೂ ಬಿಡದೆ ಹುಡುಕಿದೆವು. ಆದರೆ ನನ್ನ ಸೊಸೆಯ ಸುಳಿವಿಲ್ಲ. ಹೆದರಿ ಕಂಗೆಟ್ಟಿದ್ದ ಹೆಂಗಸರು ನಮ್ಮ ಪ್ರಶ್ನೆಗಳಿಗೆ ಪಿಳಿಪಿಳಿ ನೋಡಿದರೇ ಹೊರತು ಉತ್ತರಿಸಲಿಲ್ಲ.
“ಚಿತ್ರಕ, ನಿಜ ಹೇಳು, ರಥಕಾರನ ಸೊಸೆ ಎಲ್ಲಿ?” ಭದ್ರನ ಪ್ರಶ್ನೆಗೆ ಚಿತ್ರಕ ಮೆಲುದನಿಯಿಂದ ಉತ್ತರಿಸಿದ, “ಭಟನಾಯಕ, ನಾವು ಯಾರನ್ನೂ ಇಲ್ಲಿ ತಂದಿಲ್ಲ. ಅವಳೆಲ್ಲಿದ್ದಾಳೋ ನಮಗೆ ತಿಳಿಯದು. ನೀವೇ ಈಗ ಹುಡುಕಿನೋಡಿದಿರಲ್ಲ, ಸಿಕ್ಕಿದಳೆ?” ಚಿತ್ರಕನ ನುಡಿಗಳಲ್ಲಿ ಗೆಲವಿನ ಛಾಯೆಯಿತ್ತು. “ಓಹೋ. ಹಾಗೇನು? ನೀನು ಈ ಮಾತನ್ನು ರಥಕಾರನಿಗೆ ಮೊದಲೇ ಹೇಳಬಹುದಿತ್ತಲ್ಲ. ಯಾಕೆ ಅವರೆಲ್ಲ ಬಂದಿದ್ದಾಗ ಹೇಳದೇ ಉಳಿದೆ?” ಭದ್ರನ ಈ ಪ್ರಶ್ನೆಗೆ ಚಿತ್ರಕನಲ್ಲಿ ಉತ್ತರವಿರಲಿಲ್ಲ. “ನೋಡು ಚಿತ್ರಕ, ನೀನಿದನ್ನೆಲ್ಲ ದಕ್ಕಿಸಿಕೊಳ್ಳಬಲ್ಲೆ ಎಂದು ತಿಳಿಯಬೇಡ. ಅಂಧರಾಜನ ಮಕ್ಕಳು ನಿನ್ನನ್ನು ರಕ್ಷಿಸಿಯಾರೆಂಬ ಭ್ರಮೆ ಬಿಟ್ಟುಬಿಡು. ಈ ಪ್ರಕರಣ ಬಹಿರಂಗಕ್ಕೆ ಬಂದರೆ ಅವರಾರೂ ನಿನ್ನ ಕಡೆಗಿರುವುದಿಲ್ಲ. ಅವರೆಂದೇನು, ಯಾವ ರಾಜಪುರುಷನೂ ಬರುವುದಿಲ್ಲ. ಅವರ ಸ್ವಾರ್ಥವೇ ಅವರಿಗೆ ಮುಖ್ಯ. ಸತ್ಯ ಹೇಳು. ಎಲ್ಲಿ ಮುಚ್ಚಿಟ್ಟಿದ್ದೀರಿ ಅವಳನ್ನು?” ಚಿತ್ರಕ ಮಾತನಾಡಲಿಲ್ಲ. “ನಾವು ನಿರಪರಾಧಿಗಳು ಮಹಾಸ್ವಾಮಿ. ತಂದೆಯವರು ಹೇಳಿದ್ದು ನಿಮಗೆ ತಿಳಿಯಲಿಲ್ಲವೆ? ಅವರನ್ನೇಕೆ ಪೀಡಿಸುತ್ತೀರಿ?” ಚಿತ್ರಕನ ಮಕ್ಕಳಲ್ಲೊಬ್ಬ ನುಡಿದ.
“ಸರಿ. ಒಳ್ಳೆಯ ಮಾತಿಗೆ ನೀವು ಬಗ್ಗುವುದಿಲ್ಲ ಅಲ್ಲವೆ? ನಿಮ್ಮ ಬಾಯಿಯಿಂದ ನಿಜಹೊರಡಿಸುವುದು ಹೇಗೆಂದು ನಾನು ಬಲ್ಲೆ.” ಈಗ ಭದ್ರನ ಧ್ವನಿ ಕಂಚಿನ ಘಂಟೆಯಂತೆ ಮೊಳಗಿತು. ಇಷ್ಟು ನುಡಿದವನು ಚಿತ್ರಕನ ಮಗನನ್ನು ಸಮೀಪಿಸಿ ಅವನ ಮುಖದ ಮೇಲೆ ಬಿರುಸಾಗಿ ಮುಷ್ಟಿಯಿಂದ ಅಪ್ಪಳಿಸಿದ. ಆ ಹೊಡೆತಕ್ಕೆ ಅವನು ತಿರುತಿರುಗಿ ಪ್ರಜ್ಞೆ ಕಳೆದುಕೊಂಡು ನೆಲದ ಮೇಲುರುಳಿದ. “ಏ ಚಿತ್ರಕ, ಇದು ಕೇವಲ ರುಚಿತೋರಿಸಿದ್ದು ಮಾತ್ರ. ನಾನು ಸರಿಯಾಗಿ ಹೊಡೆದರೆ ಅವನು ಇನ್ನೆಂದೂ ಏಳಲಾರ. ನಿನ್ನ ಉಳಿದ ಮಕ್ಕಳನ್ನೂ ಮಲಗಿಸಬೇಕೋ ಅಲ್ಲ ಬಾಯಿಬಿಡುತ್ತೀಯಾ?” ಕಂಪಿಸುತ್ತಿದ್ದ ಚಿತ್ರಕ ಭದ್ರನ ಎರಡೂ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ಅಂಗಲಾಚಿದ. “ಬೇಡ ನಾಯಕ, ದಮ್ಮಯ್ಯ. ಹಾಗೇನೂ ಮಾಡಬೇಡ. ನಾನು ನಿಜವೇನೆಂದು ಹೇಳಿಬಿಡುತ್ತೇನೆ. ನಾವು ರಥಕಾರನ ಸೊಸೆಯನ್ನು ಅಪಹರಿಸಿದ್ದು ನಿಜ. ಆದರೆ ಅದು ಅವನಿಂದ ಒಂದಿಷ್ಟು ಸಂಪತ್ತನ್ನು ಸೆಳೆಯುವ ಯೋಜನೆ ಮಾತ್ರವಾಗಿತ್ತು. ಅಪಹರಣವಾದ ಮೇಲೆ ನಮಗೆ ಚಿಂತೆ ಹತ್ತಿತು. ರಥಕಾರನೇನಾದರೂ ಅರಮನೆಗೆ ದೂರಿತ್ತರೆ ಎಂಬ ಭಯದಿಂದ ನನ್ನ ಮಗನಿಗೆ ಪರಿಚಿತನಾದ ಭಟನಾಯಕನಿಗೆ ಆಮಿಷವೊಡ್ಡಿ ನಮಗೆ ಅನುಕೂಲ ಮಾಡಿಕೊಂಡೆವು” ಚಿತ್ರಕ ಆಯಾಸದಿಂದ ಮಾತುನಿಲ್ಲಿಸಿದ.
“ಹುಂ. ದೊಡ್ಡಯೋಜನೆಯನ್ನೇ ಹಾಕಿದ್ದೀರಿ” ಭದ್ರ ಕಪಟದ ಮೆಚ್ಚುಗೆಯಾಡಿದ. “ಮುಂದೆ?” ರಥಕಾರ ಕೇರಿಯ ಜನರನ್ನು ಕರೆತಂದ ಬಳಿಕ ಇದು ಸುಲಭದಲ್ಲಿ ತೀರುವುದಲ್ಲ ಎಂದು ಅರ್ಥವಾಯಿತು. ರಕ್ಷಣೆಗೆ ಬಂದಿದ್ದ ಭಟನಾಯಕನೇ ಒಂದು ದಾರಿ ತೋರಿಸಿದ. ಇದರಿಂದ ಹೇಗಾದರೂ ಪಾರಾಗುವುದಕ್ಕಾಗಿ ನಾವೂ ಒಪ್ಪಿಕೊಳ್ಳಬೇಕಾಯಿತು. ಅದು ಬೇರೇನಲ್ಲ. ರಾಜಕುಟುಂಬದ ಸಿಂಧು ಭೂಪತಿಗೆ ಸ್ತ್ರೀವ್ಯಾಮೋಹವಿದೆ. ಇವಳನ್ನು ಅವರಿಗೊಪ್ಪಿಸಿದರೆ ನಿಮಗೂ ರಕ್ಷಣೆ ದೊರೆಯುತ್ತದೆ. ಶಿಕ್ಷೆಯಿಂದಲೂ ಪಾರಾಗಬಹುದು ಅಂದ. ಅವನು ಮೊದಲಿನಿಂದಲೂ ಇಂತಹುದನ್ನು ಮಾಡಿಕೊಂಡಿದ್ದವನಂತೆ. ನಮಗೂ ಬೇರೆ ದಾರಿ ಕಾಣದೆ ಒಪ್ಪಿದೆವು. ಅವನೇ ಏಳೆಂಟು ಮಂದಿ ಯೋಧರೊಂದಿಗೆ ಅವಳನ್ನು ಕರೆದೊಯ್ದಿದ್ದಾನೆ.”
ಒಂದು ಕ್ಷಣ ಮೌನವಾದ ಭದ್ರ. ನಾವೂ ದಿಕ್ಕುಗಾಣದವರಂತೆ ನಿಂತೆವು. ಕಾಲಕಳೆದಂತೆ ಪ್ರಕರಣ ಜಟಿಲವಾಗುತ್ತಿರುವುದು ಅಸಹನೀಯ ತಲ್ಲಣವನ್ನು ಹುಟ್ಟಿಸಿತು. ನನ್ನ ಸೊಸೆಯನ್ನುಳಿಸುವುದಕ್ಕೆ ಇನ್ನೇನಿದೆ ದಾರಿ? ಆಯಿತು. ಸೈಂಧವ ವನವಾಸದಲ್ಲಿದ್ದ ಪಾಂಡವರ ಪತ್ನಿ ದ್ರೌಪದಿಯನ್ನೇ ಸೆಳೆದೊಯ್ಯಲೆತ್ನಿಸಿದ ಧೂರ್ತ. ಇನ್ನಿವಳನ್ನು ಬಿಡುವನೇ? ಎಲ್ಲ ಮುಗಿಯಿತು. ಇನ್ನವಳು ನಮ್ಮ ಪಾಲಿಗಿಲ್ಲ. ಭಗವಂತ, ಇದೆಂತಹ ಸಂಕಟ ತಂದಿಟ್ಟೆ ಎಂದು ನನ್ನ ಹೃದಯ ಚೀರುತ್ತಿತ್ತು. “ಸರಿ, ನೀವು ಅವಳನ್ನು ಕಳಿಸಿಬಿಟ್ಟಿರಿ. ಎಲ್ಲಿಗೆಂದಾದರೂ ಗೊತ್ತಿದೆಯೆ?” ಭದ್ರ ಪ್ರಶ್ನಿಸಿದ. “ಅವರು ವೃಕಸ್ಥಳವೆಂದು ಮಾತಾಡಿಕೊಂಡಿದ್ದರು.” ಚಿತ್ರಕ ಮಾರ್ನುಡಿದ. “ವೃಕಸ್ಥಳ…. ಇಲ್ಲಿಂದ ಎರಡು ದಿನಗಳ ಪ್ರಯಾಣ. ಹುಂ….. ಅವರು ಹೋಗಿ ಹೆಚ್ಚು ಹೊತ್ತು ಕಳೆದಿಲ್ಲ ಅಲ್ಲವೇ?” “ಪಿಂಗಳ…. ಏ ಪಿಂಗಳ…..” ಭದ್ರನ ಕರೆಗೆ ಅನುಚರರಲ್ಲೊಬ್ಬ ಓಡಿಬಂದ. “ಪಿಂಗಳ, ತ್ವರೆಮಾಡು. ಶೀಘ್ರವಾಗಿ ಅಶ್ವಶಾಲೆಯಿಂದ ಕ್ಷಿಪ್ರಗತಿಯ ಕುದುರೆಗಳನ್ನಾರಿಸಿಕೋ. ಹತ್ತುಜನ ರಾವುತರನ್ನು ಇಲ್ಲಿಗೆ ಬರಹೇಳು. ಅವರಲ್ಲಿ ಶಸ್ತ್ರಾಸ್ತ್ರಗಳಿರಲಿ. ಉಳಿದವರು ಚಿತ್ರಕ ಹಾಗೂ ಈ ಭಟರಿಗೆ ಕಾವಲಾಗಿರಿ. ನಾನು ಧರ್ಮರಕ್ಷಣೆಗಾಗಿ ಹೋಗುತ್ತಿರುವ ವರ್ತಮಾನವನ್ನು ಆಚಾರ್ಯರಿಗೆ ಮುಟ್ಟಿಸುವ ವ್ಯವಸ್ಥೆ ಮಾಡಿ ಬರುತ್ತೇನೆ. ರಾತ್ರಿ ಎರಡನೇ ಜಾವದ ಮುನ್ನ ಅವರ ಬೆನ್ನುಹಿಡಿಯಬೇಕು ನಾವು. ಅರ್ಥವಾಯಿತೆ?” ಹೀಗೆಂದು ಪಿಂಗಳನಿಗೆ ಆಜ್ಞಾಪಿಸಿ, ನನಗೆ ಹೇಳಿದ, “ರಥಕಾರ, ನೀನು ನಿನ್ನವರೊಂದಿಗೆ ಮನೆಗೆ ಹೋಗು. ನಾಳೆ ಸೂರ್ಯೋದಯಕ್ಕೆ ಮೊದಲು ನಿನ್ನ ಸೊಸೆಯನ್ನು ಕರೆತರುವುದಕ್ಕೆ ಶಕ್ತಿಮೀರಿ ಯತ್ನಿಸುತ್ತೇನೆ. ಚಿಂತಿಸಬೇಡ. ಧರ್ಮ ಗೆಲ್ಲುತ್ತದೆ.”
* * *
ಮರುದಿನ ಇನ್ನೂ ನಸುಕು ಹರಿದಿರಲಿಲ್ಲ. ಗಡಗಡ ಸದ್ದೆಬ್ಬಿಸುತ್ತ ರಥವೊಂದು ಬಂದು ನಿಂತಿತು. ಆತಂಕದಿಂದ ನಿದ್ರೆಗೆಟ್ಟು ಕಾದಿದ್ದ ನಾವು ಹೊರಬಂದು ನೋಡಿದರೆ…. ನನ್ನ ಸೊಸೆ ರಥದಿಂದ ಕೆಳಗಿಳಿಯುತ್ತಿದ್ದಾಳೆ! ರಥದಲ್ಲಿ ಕಡಿವಾಣ ಹಿಡಿದು ಕುಳಿತಿದ್ದಾನೆ ಭದ್ರ. ಹಿಂದಿನಿಂದ ಕುದುರೆಗಳ ಮೇಲೆ ರಾವುತರು. ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ ಒಂದುಕ್ಷಣ. ಭದ್ರ ಮುಗುಳ್ನಗುತ್ತ ನನ್ನನ್ನು ಸಮೀಪಿಸಿದ. ರಥದ ಬಳಿಗೆ ಓಡಿದ್ದ ನನ್ನ ಪತ್ನಿಯನ್ನುದ್ದೇಶಿಸಿ ಹೇಳಿದ, “ತಾಯಿ, ನಿನ್ನ ಸೊಸೆಯ ಕೂದಲೂ ಕೊಂಕದಂತೆ ನಿಮಗೊಪ್ಪಿಸಿದ್ದೇನೆ. ಜೋಪಾನ, ನಿದ್ರಾಹಾರಗಳಿಲ್ಲದೆ ಕಂಗೆಟ್ಟಿದ್ದಾಳೆ. ಒಳಗೆ ಕರೆದೊಯ್ಯು. ಈಗ ಸಮಾಧಾನವೇ, ಗುಹ?” ಅವನ ಮಾತು ಮುಗಿಯುವ ಮುನ್ನವೇ ನಾನು ಪ್ರಶ್ನಿಸಿದೆ. “ನಾಯಕಾ, ಇದೇನು ಪವಾಡ ಮಾಡಿಬಿಟ್ಟೆ ನೀನು? ಇದು ಹೇಗೆ ಸಾಧ್ಯವಾಯಿತು?”
ಜಗಲಿಯ ಕಂಬಕ್ಕೊರಗಿ ಕುಳಿತ ಭದ್ರ ನಿಟ್ಟುಸಿರು ಬಿಡುತ್ತ ಮಾತನಾಡಿದ, “ಅದೊಂದು ದೊಡ್ಡ ಕಥೆ. ರಥಕಾರ, ನಾನು ಶಸ್ತ್ರಧಾರಿ ರಾವುತರನ್ನು ಕೂಡಿಕೊಂಡು ಅವರ ಬೆನ್ನುಬಿದ್ದೆನಲ್ಲ. ಮಧ್ಯರಾತ್ರಿಗೆ ಕೊಂಚ ಮುನ್ನವೇ ಅವರನ್ನು ಸುತ್ತುವರಿದೆವು. ಇದೇ ರಥದ ಮೇಲೆ ಆ ಹುಡುಗಿಯ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತಳ್ಳಿ ಸಾಗಿಸುತ್ತಿದ್ದರು. ಅವರೆಲ್ಲ ಸೈಂಧವನ ಸ್ವಂತ ಪಡೆಯವರು. ಯುದ್ಧತಂತ್ರ ತಿಳಿದವರು. ಆದರೂ ನಾವು ಬಿಟ್ಟುಬರುವ ಹಾಗಿರಲಿಲ್ಲವಷ್ಟೆ? ಘರ್ಷಣೆ ನಡೆಯಿತು. ನಾನು ಎಲ್ಲದಕ್ಕೂ ಸಿದ್ಧನಾಗಿಯೇ ಇದ್ದೆ. ನಮ್ಮ ಕೈ ಮೇಲಾಯಿತು. ಅವರಲ್ಲಿ ಒಬ್ಬನನ್ನೂ ಜೀವಸಹಿತ ಬಿಡಲಿಲ್ಲ ನಾನು. ಎಲ್ಲರನ್ನೂ ಮುಗಿಸಿಯೇ ಬಿಟ್ಟೆ. ನಾಳೆ ಈ ವಾರ್ತೆ ಸೈಂಧವನಿಗೆ ಮುಟ್ಟಿಸುವುದಕ್ಕೆ ಯಾರೂ ಉಳಿಯಲಿಲ್ಲ? ಹುಂ. ಈಗ ನೆಮ್ಮದಿಯಾಯಿತಷ್ಟೆ?” ಭದ್ರ ಮಾತು ಮುಗಿಸಿದ. “ನನ್ನ ಕೃತಜ್ಞತೆಯನ್ನು ಹೇಗೆ ತಿಳಿಸಲಿ ಭದ್ರ? ನನ್ನ ಮನೆಯ ದೀಪವನ್ನು ಉಳಿಸಿಕೊಟ್ಟಿದ್ದೀಯೆ. ನಮ್ಮ ಪಾಲಿಗೆ ದೇವರಾಗಿ ಬಂದೆ. ಧರ್ಮ ಖಿಲವಾಗುತ್ತ, ಆಳುವ ಅರಸರು ದುಷ್ಟರಾಗುತ್ತ ದುರ್ಬಲರ ಬದುಕು ಕಠಿಣವಾಗುತ್ತಿರುವ ಇಂದಿನ ದಿನಗಳಲ್ಲಿ ನಿನ್ನಂತೆ ಧರ್ಮರಕ್ಷಕರು ಇದ್ದಾರಲ್ಲ ಎಂದು ವಿಸ್ಮಯವಾಗುತ್ತಿದೆ. ನಿನ್ನ ಹೊಟ್ಟೆ ತಣಿದಿರಲಿ. ಹೇಳು ಭದ್ರ, ನಿನಗಾಗಿ ನಾನೇನು ಕೊಡಲಿ?”
“ನನ್ನ ಹಿರಿಮೆಯೇನಿದೆ ರಥಕಾರ, ಇದರಲ್ಲಿ? ಎಲ್ಲ ಆಚಾರ್ಯರ ಪ್ರಭಾವ. ಧರ್ಮಕ್ಕಾಗಿ ಬದುಕುವುದನ್ನು ಮಾತ್ರವಲ್ಲ, ಅದಕ್ಕಾಗಿ ಸಾಯುವುದನ್ನೂ ಅವರು ಕಲಿಸಿದ್ದಾರೆ.” ಗಂಭೀರವಾಗಿದ್ದ ಭದ್ರನ ಮಾತು ಈಗ ಹುಡುಗಾಟಿಕೆಯತ್ತ ತಿರುಗಿತು. “ಚಿತ್ರಕ ನಿನ್ನ ತಂಟೆಗೆ ಇನ್ನೆಂದೂ ಬರಲಾರ. ಹಾಗೆ ಎಚ್ಚರಿಸಿದ್ದೇನೆ. ಹೊಸರಥ ಕಟ್ಟುವಷ್ಟು ಆರೋಗ್ಯವುಂಟಷ್ಟೆ ಈಗ?” ನಗುತ್ತಿದ್ದ ಅವನ ಮುಖ ನೋಡುತ್ತ ಸಮ್ಮತಿ ಸೂಚಕವಾಗಿ ತಲೆಯಾಡಿಸಿದೆ.