ತೆಲುಗು ಮೂಲ: `ಚಾಸೊ’
ಕನ್ನಡಕ್ಕೆ : ಸೊಂದಲಗೆರೆ ಲಕ್ಷ್ಮೀಪತಿ
ಅವಳ ಕಣ್ಣುಗಳು ಮಗನಿಗಾಗಿ ಹುಡುಕಿ, ಹುಡುಕಿ, ನಿಶ್ಚಲಗೊಂಡಿವೆ. ಆ ನಯನಗಳು ಈಗಲೂ ಅರಸುತ್ತಿವೆ…
ಕಣ್ಣುಗಳು ಏಕೆ ರಾವು ಬಡಿದಂತಿವೆ? ಇವು ಯಾರವು?
ಕಣ್ಣುರೆಪ್ಪೆ ಮೇಲೆ ಕೆಳಗೆ ಚಲಿಸಿದವು. ಕಣ್ಣಿನ ಪಾಪೆ, ಗುರುತು ಮಾಡುವ ಮಸಿಕಾಯಿಯ ಹಾಗೆ ಕರ್ರಗಿದ್ದವು, ಅವು ಜೇನುಹುಳುಗಳ ಮುಳ್ಳಿನಂತೆ ಇರಿಯುವ ಹಾಗೆ ಕಾಣುತ್ತಿದ್ದವು. ಅವಳು ಒಂಚೂರೂ ಅಲುಗಾಡಲೂ ಇಲ್ಲ ಹಾಗೂ ಪ್ರತಿಕ್ರಿಯಿಸಲೂ ಇಲ್ಲ. ಅಂಗಡಿ ಮುಂಭಾಗದ ಮೊಸಾಯಿಕ್ ಮೆಟ್ಟಿಲಿನ ಮೇಲೆ ಕೈಕಾಲುಗಳನ್ನು ಒಡ್ಡೊಡ್ಡಾಗಿ ಚಾಚಿ ಮಲಗಿದ್ದಳು, ಅವಳ ತಲೆ ಡಿಪಾರ್ಟ್ಮೆಂಟಲ್ ಶಾಪ್ನ ಷಟ್ಟರ್ ಲಾಕ್ಗೆ ಆನಿಸಿತ್ತು. ಬಹುಪಾಲು ತನ್ನದೇ ಸಾಮ್ರಾಜ್ಯ ಎಂಬಂತೆ ತಾನು ಇದಕ್ಕೆ ಸೇರಿದವಳು ಎಂಬ ಸ್ವಾತಂತ್ರ್ಯದಲ್ಲಿ. ಈ ಶಾಪಿಗೆ ಅವಳು ಅಪರಿಚಿತಳೇನಲ್ಲ, ಎಲ್ಲರಿಗೆ ಚಿರಪರಿಚಿತಳೇ, ಗುನ್ನಮ್ಮ, ವೇಶ್ಯೆ.
ಅಂಗಡಿಮುಂಗಟ್ಟುಗಳ ಬಾಗಿಲು ತೆರೆವ ಸಮಯ ಅದು. ಪೂರ್ವದಂಚಿನಿಂದ ಸೂರ್ಯಕಿರಣಗಳು ಹರಡಿ ಮಹಡಿ ಮನೆಗಳ ಸೂರು ಫಳಫಳ ಹೊಳೆಯುತ್ತಿದ್ದವು. ಕೆಲಸದವಳು ಬಕೇಟ್, ಬರಲು, ರಂಗೋಲಿ ಡಬ್ಬ ಹಿಡಿದು ಬಂದು ನಿತ್ಯ ಕಸ ಗುಡಿಸಿ, ಒರೆಸಿ, ರಂಗೋಲಿ ಬಿಡುತ್ತಿದ್ದಳು. ಇವತ್ತು ಮೂರು ಸಲ ಬಂದು ಹೋಗಿದ್ದಳು; ಇಷ್ಟೊತ್ತಿಗಾಗಲೇ ಗುನ್ನಮ್ಮ ಇನ್ನೂ ಮೆಟ್ಟಿಲ ಮೇಲೇ ಇದ್ದಳು. `ಎದ್ದೇಳು’ ಕಸಗುಡಿಸುವಳು ಕೂಗಿದಳು. ಅವಳ ಕೂಗಿಗೆ ಪ್ರತಿಕ್ರಿಯಿಸುವ ಯಾವುದೇ ಸ್ಥಿತಿಯಲ್ಲಿ ಗುನ್ನಮ್ಮ ಇರಲಿಲ್ಲ.
“ಆಗಲೇ ಸೂರ್ಯ ಎರಡಾಳುದ್ದ ಮೇಲೆದ್ದವನೆ ಆಕಾಶದಲ್ಲಿ” ಎಂದು ಕಿರುಚಿದಳು ಅವಳು! ಗುನ್ನಮ್ಮ ಕೇಳಿಸಿಕೊಂಡಂತೆ ತೋಚಲಿಲ್ಲ. ಅವಳ ಕೈಕಾಲು ಅವಳ ಕಣ್ಣಿನ ಪಾಪೆಯಂತೆಯೇ ಮಿಸುಕಾಡಲಿಲ್ಲ.
“ಮಲಗಲು ಬೆಚ್ಚಗಿರೋ ಜಾಗ ಹೋಗಿ ಹುಡುಕ್ಕೋ ಹೇ…. ಮುದುಕಿ, ಎದ್ದೇಳು” ಎಂದ ಕೆಲಸದವಳು ಸ್ವಲ್ಪ ನೀರನ್ನು ಎರಚಿದಳು. ಎರಚಿದ ನೀರು ಗುನ್ನಮ್ಮಳ ಮುಖದ ಮೇಲೆ ಬಿದ್ದಿತು. ಆದರೂ ಅವಳು ಅಲುಗಾಡಲಿಲ್ಲ. ಮುಂಚಿನಂತೆಯೇ ಮಲಗಿದ್ದಳು, ಒಂದಿಷ್ಟೂ ಕದಲದೆ.
“ಈಗ ಇದು ಎಬ್ಬರಿಸುತ್ತೆ ನೋಡ್ತಿರು” ಎನ್ನುತ್ತಾ ಕಸಬರಕೆಯಿಂದ ಅವಳು ಎರಡು ಸಾರಿ ತಿವಿದಳು ಗುನ್ನಮ್ಮನಿಗೆ. ಆದ್ರೂ ಏನೂ ಆಗಲಿಲ್ಲ. ಈ ಪ್ರಪಂಚದಲ್ಲಿ ಇದ್ದಂತೆ ತೋಚಲಿಲ್ಲ ಅವಳು. ಪ್ರಜ್ಞೆ ಇಲ್ಲದವಳಂತೆ ಕಂಡು ಬಂದಳು.
“ಇಲ್ಲ, ನನ್ನ ಕೈಲಿ ಆಗಲ್ಲ” ಆಕೆ ನಿಸ್ಸಹಾಯಕಳಾದಳು.
“ನನಗೆ ತಿಳಿದ ಮಟ್ಟಿಗೆ, ಇವಳು ಮೇಲೇಳಲ್ಲ, ಏಳ್ತಾಳಾ?” ಎಂದ ಓರ್ವ ಮುನಿಸಿಪಾಲಿಟಿ ಬೀದಿ ಕಸ ಗುಡಿಸುವವನು. “ನಿನ್ನ ದಮ್ಮಯ್ಯ, ಅವಳನ್ನ ಎಬ್ಬಿಸಪ್ಪ” ಎನ್ನುತ್ತಾ ಒತ್ತಾಯಪಡಿಸಿದಳು ಕಸಗುಡಿಸುವವಳು. “ಕಾಣಲ್ವಾ ನಿನ್ಗೆ? ಕಾಯಿಲೆ ಆವರಿಸಿಕೊಂಡಿದೆ, ಬಿಟ್ಟಾಕು ಅವಳ್ನ. ಅಂಗಡಿಯವರು ಬಂದು ನೋಡಿ, ಏನಾರ ಮಾಡ್ಕೊಳ್ಳಿ” ಎಂದ ಬೀದಿ ಕಸಗುಡಿಸುವವ.
ಹಿಂದಿನ ದಿನದವರೆಗೆ ಗುನ್ನಮ್ಮ ಒಳ್ಳೆ ಸೊಗಸಾಗೇ ಇದ್ದಳು. ಉಕ್ಕಿಹರಿವ ಪ್ರಾಯದಲ್ಲಿ ಎಲ್ಲರೂ ಪಾರಿವಾಳದ ತರಹನೇ ಕಾಣ್ತಾರೆ. ಆದರೆ ಗುನ್ನಮ್ಮ ಅರವತ್ತರ ವಯಸ್ನಲ್ಲೂ ಒಳ್ಳೆ ಪಾರಿವಾಳದ ತರಹನೇ ಅವ್ಳೆ.
ಆರು ತಿಂಗಳ ಹಿಂದೆ ಪೊಲೀಸರು ವೇಶ್ಯಾವಾಟಿಕೆಗಳ ಮೇಲೆ ರೈಡ್ ಮಾಡಿದ್ದರು. ಇತರೆ ಇಪ್ಪತ್ತೈದು ಮಂದಿ ಹರೆಯದ ವೇಶ್ಯೆಯರ ಜೊತೆ ಗುನ್ನಮ್ಮ ತಾನೂ ಸಿಕ್ಕಿಬಿದ್ದಿದ್ದಳು. ಮ್ಯಾಜಿಸ್ಟ್ರೇಟ್ ಅವಳಿಗೆ ಐವತ್ತು ರೂಪಾಯಿ ದಂಡ ವಿಧಿಸಿದ್ದರು. ಆಗ ಅವಳು ಎಡಗೈಲಿ ಆ ಹಣ ಬಿಸಾಡಿದ್ದಳು. ಅವಳ ಚಾರ್ಜು ಗಿರಾಕಿಗೆ ಹೆಚ್ಚೇ ಇತ್ತು ಅಂದಿನ ದಿನಗಳಲ್ಲಿ.
ಅವಳಿಗೆ ಅರವತ್ತು ಆಗಿದ್ದರೂ ಇಪ್ಪತ್ತೈದರ ಹರೆಯದ ಹುಡುಗಿಯರ ಹಾಗೆ ದಿರಿಸು ಅವಳದು. ಇಪ್ಪತ್ತೈದರ ತರುಣರು ಅವಳಿಗೆ ಕಣ್ಣು ಹೊಡೆಯುತ್ತಿದ್ದರು ನಾಚಿಕೆ ಪಡದೆ! ಯಾರನ್ನ, ಯಾವಾಗ, ಎಲ್ಲಿ ಹಾಗೂ ಹೇಗೆ ಸೆಳೆಯಬೇಕೆಂಬ ಮಾಹಿತಿ ಆಕೆಗೆ ಕರತಲಾಮಲಕವಾಗಿತ್ತು. ಗುನ್ನಮ್ಮ ಯಾರನ್ನೇ ಆಗಲಿ ಆಹ್ವಾನಿಸಿದರೆ ಸಾಕಿತ್ತು, ಅವರು ಅವಳ ಗುಡಿಸಲಿಗೆ ಧಾವಿಸುತ್ತಿದ್ದರು! ಅವಳು ಮುದುಕಿಯಾ, ಪ್ರಾಯದವಳಾ ಅಂತ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ಗುನ್ನಮ್ಮನನ್ನು ಪ್ರಸ್ತಾಪಿಸಿದಂತೆಯೇ ಬುಚ್ಚಿಬಾಬು ಬಗೆಗೂ ಪ್ರಸ್ತಾಪಿಸುವುದು ಅತ್ಯವಶ್ಯ. ಎರಡು ವರ್ಷಗಳ ಹಿಂದೆ ಒಂದು ಸಂಜೆ ಬುಚ್ಚಿಬಾಬುವನ್ನು ಗುನ್ನಮ್ಮ ತನ್ನ ಗುಡಿಸಲಿಗೆ ಎಳೆದೊಯ್ದಳು. ಅವನು ಕಾಮೋದ್ರೇಕದಿಂದ ಕುರುಡಾಗಿದ್ದ. ಪುರವಾಸಿಗಳ ಕಣ್ಣಿಗೆ ಅದು ಬಿದ್ದು ಪುಕಾರಾಗಿ ಒಡನೆಯೇ ಹಗರಣದ ರೂಪಕ್ಕೆ ತಿರುಗಿತ್ತು. ಬುಚ್ಚಿ ನಕ್ಕುಬಿಟ್ಟನಷ್ಟೆ. ಕುಡುಕರು ಹಾಗೂ ವಿಟರಿಗೆ ನಾಚಿಕೆ ಅನ್ನೋದು ಉಂಟಾ? ಅವನೇ ಈಗ ನಮ್ಮ ಮುನಿಸಿಪಾಲಿಟಿಯ ಚೇರ್ಮನ್! ಆ ಕುರ್ಚಿಗೆ ಆತ ಹೇಗೆ ಬಂದ ಅಂತ ಮಾತ್ರ ಕೇಳಬೇಡಿ.
ಅಂತಹ ದಷ್ಟಪುಷ್ಟೆ ಗುನ್ನಮ್ಮ ಕೇವಲ ಒಂದೇ ಒಂದು ತಿಂಗಳ ಒಳಗೆ ಬಿಳಿಚಿಕೊಂಡುಬಿಟ್ಲು. ಕೊನೆಗೆ ಅವಳ ವಯಸ್ಸೂ ಎದ್ದು ಕಂಡಿತು. ಅವಳು ಹಾಸಿಗೆ ಹಿಡಿದಳು. ಗುಡಿಸಲಿನಿಂದ ಹೊರಗೆ ಇಣುಕಲಿಲ್ಲ. ಅವಳನ್ನು ಮುತ್ತಿದ ಖಾಯಿಲೆ ಏನು ಎಂಥಾದ್ದು ಅಂತ ಗೊತ್ತಾಗಲೇ ಇಲ್ಲ. ಆದರೆ ಅವಳ ಕೈಕಾಲುಗಳು ನಿಷ್ಕ್ರಿಯಗೊಂಡಿದ್ದವು.
ಕಳೆದ ಸಂಜೆ ಟೀ ಕೇಳಿ ಕುಡಿದಿದ್ದ ಅವಳು ಆಮೇಲೆ ಗುಡಿಸಲಲ್ಲಿ ಮಲಗಿದ್ದಳು. ಆದರೆ ಇಂದು ಮುಂಜಾನೆ ಡಿಪಾರ್ಟ್ಮೆಂಟಲ್ ಸ್ಟೋರ್ಸ್ ಮೆಟ್ಟಿಲುಗಳ ಮೇಲೆ ಇದ್ದದ್ದು ಗೊತ್ತಾಗಿದೆ. ದಾರಿಯಲ್ಲಿ ಹೋಗುವವರು ನಿಂತರು, ಹಾಗೇ ಗುಂಪುಗೂಡಿತು. ಮಂದಿಗೆ ಸಂಬಂಧಿಸದೆ ಇಲ್ಲದ್ದು ಈಗಂತೂ ಯಾವುದು ತಾನೇ ಇದೆ?
ಅಕೌಂಟೆಂಟ್, ಹಿರಿಯ ಗುಮಾಸ್ತೆ, ಅಂಗಡಿ ಬಾಗಿಲು ತೆರೆಯಲು ಬಂದರು. ಗುನ್ನಮ್ಮ ಮೆಟ್ಟಿಲುಗಳ ಮೇಲೆ ಮಲಗಿದ್ದಾಳೆ, ಪಕ್ಕಾ ಶವದಂತೆ. ಅವಳ ಕತ್ತು ಷಟ್ಟರ್ ಲಾಕ್ಗೆ ಒತ್ತರಿಸಿ ಒರಗಿದೆ. ಆಗಲೇ ಕೆಲವು ಅಂಗಡಿಗಳು ತೆರೆದಿದ್ದವು. ಇನ್ನೂ ಕೆಲವನ್ನು ಆಗಷ್ಟೆ ತೆರೆಯುತ್ತಿದ್ದರು. ಸೂರ್ಯಕಿರಣ ಶ್ವೇತವರ್ಣಕ್ಕೆ ತಿರುಗಿ ಕಣ್ಣಿನ ಮೇಲೆ ಬಿದ್ದಿತು. ಸೇಲ್ಸ್ ಹುಡುಗರು ಹಾಗೂ ಸೇಲ್ಸ್ ಹುಡುಗಿಯರು ಆ ವೃದ್ಧ ಹೆಂಗಸನ್ನು ಅಲ್ಲಿಂದ ಮೇಲೆ ಎಬ್ಬಿಸಲು ನೆರೆದ ಇತರ ಮಂದಿಯ ಕೂಗಾಟದೊಂದಿಗೆ ತಾವು ಸೇರಿಕೊಂಡರು.
ಅವಳು ಪ್ರಜ್ಞಾಶೂನ್ಯಳಾದವಳಂತೆ ಕಂಡು ಬಂದಳು. ಅವಳ ಕೈಕಾಲು ಅಲುಗಾಡಲಿಲ್ಲ. ಕಣ್ಣುಗಳು ಮಾತ್ರ ಆಗಾಗ ತೆರೆದು ಮುಚ್ಚಿಕೊಳ್ಳುತ್ತಿದ್ದವು. ಕಣ್ಣಿನ ಕಪ್ಪು ಪಾಪೆ ಸೋಪಿನ ಬೀಜದ ಕಾಯಿಗಳ ತರಹ ಏನನ್ನೊ ಹುಡುಕುತ್ತಿರುವವಂತೆ ಆ ಪಕ್ಕ ಈ ಪಕ್ಕ ಚಲಿಸುತ್ತಿದ್ದವು. ಅವಳಾಗೆ ಮೇಲೇಳಲಿಲ್ಲ. ಅವಳನ್ನು ಅಲ್ಲಿಂದ ಎತ್ತಬೇಕೆಂಬ ಮಂದಿಯ ಮಾತಿನಲ್ಲಿ ಸಂದೇಹವೇನೂ ಇರಲಿಲ್ಲ.
“ಮುನಿಸಿಪಾಲಿಟಿ ನೌಕರರನ್ನು ಕರೆಸಿ, ಅವರಿಗೆ ಟೀಗೆ ಕಾಸು ಕೊಡೋಣ” ಎಂದ ಅಕೌಂಟ್ ಗುಮಾಸ್ತೆ. ಮಂದಿ ಎಂದೂ ತೆಪ್ಪಗಿರೋ ಜಾಯಮಾನದವರಲ್ಲ. ಗುಂಪಿನಲ್ಲಿದ್ದವನೊಬ್ಬ “ಅಕೌಂಟ್ ಕ್ಲರ್ಕ್ ಹೇಳೋದು ಸರಿ, ಅವನು ಹೇಳಿದ ಹಾಗೆ ಮಾಡಿ” ಎಂದ. ಈ ಮಾತು ಕೇಳಿಸಿಕೊಂಡ ಕ್ಲರ್ಕ್ “ಯಾರದು?” ಎಂದ ಸಿಡುಕಿನಿಂದ. ಗುಂಪಿನಲ್ಲಿ ಯಾರೋ ತನ್ನನ್ನು `ಅಕೌಂಟ್ ಕ್ಲರ್ಕ್’ ಎಂದು ಹೇಳಿದ್ದಕ್ಕೆ. ಪಟ್ಟಣದಲ್ಲಿ ಪ್ರತಿಯೋರ್ವನೂ ಅವನನ್ನು ಹಾಗೆಯೇ ಕರೆಯುತ್ತಿದ್ದರೂ ಅವನ ಕೋಪ ನೆತ್ತಿಗೇರಿತು. ತನ್ನನ್ನು ಮ್ಯಾನೇಜರ್ ಮಾಡಲಿಲ್ಲವೆಂಬ ಸಿಟ್ಟು ಕೂಡ ಅದರಲ್ಲಿತ್ತು. ಗುಂಪಿನಲ್ಲಿದ್ದ ಯಾರೋ ಓರ್ವ “ಹಾಗಲ್ಲ, ಸೀನಿಯರ್ ಕ್ಲರ್ಕ್ ಅಂತ ಅವ ಹೇಳಿದ್ದು” ಎಂದು ಹೇಳಿ ಅವನನ್ನು ಸಮಾಧಾನಗೊಳಿಸಿದ.
“ಹಾಗೇ ಹೇಳಿ. ಜನ ಗೌರವ ಕೊಡದಿದ್ದರೆ ಹೇಗೆ ಬಾಳಕ್ಕಾಗುತ್ತೆ?” ಎಂದು ಮರುಪ್ರಶ್ನಿಸಿದ ಕ್ಲರ್ಕ್.
ಮುನಿಸಿಪಾಲಿಟಿ ನೌಕರರು ಬಂದರು.
“ನೋಡಿ ನೀವು ಬಂದದ್ದು ಒಳ್ಳೆದಾಯ್ತು, ಈ ಮುದುಕಿನಾ ಇಲ್ಲಿಂದ ಎತ್ತಿ ಆ ಕಡೆ ರಸ್ತೆಬದಿಗೆ ತಗೊಂಡೋಗಿ” ಎಂದ ಕ್ಲರ್ಕ್.
“ಅವಳಾಗಲೇ ಗೊಟಕೆನ್ನುತ್ತಿದ್ದಾಳೆ” ಎಂದ ಯಾರೋ ಓರ್ವ ಜೋರಾಗಿ. “ಯಾರ ಅಂಗಡಿ ಮುಂದೆ ಅವಳನ್ನು ಇಡುತ್ತೀರಿ?” ಎಂದು ಕೇಳಿದ ಆತ.
“ಹೌದು ಸ್ವಾಮಿ, ಅದು ನನಗೂ ಗೊತ್ತು. ನಮ್ಮ ಅಂಗಡಿ ಪಕ್ಕ ಇಟ್ಕೋತಿನಿ. ಆಗ ಸರೀನಾ?” ಎಂದ ಕ್ಲರ್ಕ್.
ತನ್ನ ಎದುರಿನ ಕಳೇಬರ ತನ್ನ ಹೆತ್ತವ್ವನದೆ? ಮಗನನ್ನು ನೋಡಲೆಂದೇ ನಿತ್ಯ ಬರುತ್ತಿದ್ದಳೆ, ನಾನೇ ಏನು ನನ್ನವ್ವನ ಅಂತಿಮ ಸಂಸ್ಕಾರ ಕರ್ತೃ?
“ನೋಡಿ, ಅವಳನ್ನ ಎಲ್ಲಿ ಇಡುತ್ತೀರಿ? ಟೌನಲ್ಲಿ ಎಲ್ಲೂ ಜಾಗನೇ ಇಲ್ವೇನೋ ಅನ್ನೊ ಹಂಗೆ ಆಡ್ತಿರಿ! ಈ ಜಾಗ ಅವಳಪ್ಪಂದು” ಎಂದು ವಟಗುಟ್ಟಿದ ಕ್ಲರ್ಕ್.
ಡಿಪಾರ್ಟ್ಮೆಂಟಲ್ ಸ್ಟೋರ್ ಬೃಹತ್ ಎನಿಸಿದ ಕಾಂಕ್ರಿಟ್ ಕಟ್ಟಡದಲ್ಲಿತ್ತು. ಅದರ ಕಾಂಪೌಂಡ್ ಗೋಡೆಗೆ ಥಳಕು ಬಳುಕಿನ ಗಾಜಿನ ಬಿಲ್ಲೆಗಳನ್ನು ವಜ್ರದ ಸೊಂಟಪಟ್ಟಿ ತರಹ ಅಂಟಿಸಿದ್ದರು. ಹೀಗಾಗಿ ಅದು ಯಾವ ಯಾವನೋ ಯಾವಯಾವಳನ್ನೋ ಸೇರೋವಂತ ನಿರಾಶ್ರಿತರ ತಾಣ ಅಲ್ಲ. ಆದಾಗ್ಯೂ, ಆ ವೃದ್ಧೆ ಗುನ್ನಮ್ಮ ಆ ಕಟ್ಟಡದ ಮೊಸಾಯಿಕ್ ಪೋರ್ಟಿಕೊ ಮೇಲಿನ ಮೆಟ್ಟಿಲುಗಳ ಮೇಲಕ್ಕೆ ಹೋಗಿದ್ದಳು. ಅಂತೂ ಒಳ್ಳೆ ಜಾಗನೇ ಗಿಟ್ಟಿಸಿದ್ದಳು.
“ಇನ್ನೂ ಏನು ಯೋಚಿಸ್ತಿದ್ದೀರಾ? ಎತ್ಕೊಳಿ ಅವಳನ್ನು, ರಸ್ತೆಯ ಆ ಬದಿಗೆ ಒಯ್ದು ಹಾಕಿ” ಎಂದ ಕ್ಲರ್ಕ್.
ಓರ್ವ ಹೆಂಗಸು, ಆಕೆಗೂ ಗುನ್ನಮ್ಮನ ವಯಸ್ಸೇ, ಆ ಜನಜಂಗುಳಿಯನ್ನು ತಳ್ಳಿಕೊಂಡು ಮುಂದಕ್ಕೆ ಬಂದು “ಯಾಕೆ ರಸ್ತೆ ಅಂಚಿಗೆ ಎತ್ತುಕೊಂಡ್ ಒಯ್ತೀರಾ? ನಾಲೆ ಪಕ್ಕ ಅವಳ ಸ್ವಂತ ಗುಡಿಸಲು ಇದೆ. ಅಲ್ಲಿಗೇ ಕರಕೊಂಡೋಗಿ” ಎಂದಳು.
“ಆಯ್ತು, ಆಯ್ತು! ಯಾಕೆ ಇಷ್ಟೊತ್ತು ಬಾಯಿ ಮುಚ್ಚಿಕೊಂಡು ಇದ್ದೆ, ಹೇಳದೆ?” ಎಂದು ಕೇಳಿದ ಕ್ಲರ್ಕ್. “ಹೇ ಅಜ್ಜಿ! ಅವಳ ಗುಡಿಸಲು ತೋರಿಸು ಅಲ್ಲಿಗೇ ಕರಕೊಂಡೋಗ್ತಾರೆ.”
ಮುನಿಸಿಪಾಲಿಟಿ ನೌಕರರು ನೆಲಕ್ಕೆ ಬೇರು ಬಿಟ್ಟಿದ್ದರು. ಕ್ಲರ್ಕ್ ಅವರಿಗೆ ಇನ್ನೂ ಎಷ್ಟೆಂದು ಹೇಳಿರಲಿಲ್ಲ. ಹಾಗಾಗಿ ಅವರು ಕಾಯುತ್ತ ನಿಂತಿದ್ದರು.
“ಹೇಳಪ್ಪ, ಬೇಗ, ಏನು ಕೊಡ್ತಿಯಾಂತ ಬೇಗ ಹೇಳು. ಅವಳು ಇನ್ನೇನು ಗೊಟಕ್ ಅನ್ನೊ ಅಂಗವಳೆ” ಎಂದ ಆ ಗುಂಪಿನಲ್ಲಿದ್ದ ಯಾರೋ ಓರ್ವ.
“ಎಷ್ಟು ಅಂತ ನೀವೇ ಏಕೆ ಹೇಳಬಾರ್ದು?” ಕ್ಲರ್ಕ್ ಕೇಳಿದ.
“ನಾವು ಮೂವರು, ಹದಿನೈದು ಕೊಡಿ” ಎಂದ ಓರ್ವ ನೌಕರ.
“ಹದಿನೈದಾ!” ಕ್ಲರ್ಕ್ನ ಕಣ್ಣುಗುಡ್ಡೆಗಳು ಥಟ್ಟನೆ ಹೊರಬಂದವು.
“ಇಲ್ಲಿಂದ ಆ ವೇಶ್ಯೆಯರ ಗುಡಿಸಲತನಕ ಒಯ್ಯಬೇಕಲ್ಲ?” ಎಂದ ನೌಕರ.
“ಆರು ರೂಪಾಯಿ, ತಲಾ ಎರಡೆರಡು.”
“ನಮ್ಮಿಂದಾಗಲ್ಲ” ಎಂದ ಒಬ್ಬ ನೌಕರ.
“ಹದಿನೈದಕ್ಕೆ ಒಂದು ರೂಪಾಯಿನೂ ಕಡಮೆ ಆಗಲ್ಲ.” ಮತ್ತೊಬ್ಬ ನೌಕರ ದನಿಗೂಡಿಸಿದ.
“ಹೇ, ಮಿಸ್ಟರ್, ನಿನ್ನೆಯಿಂದ `ಧನಿಷ್ಠಾ ಪಂಚಕಮ್’ ಅರ್ಥ ಆಗಿದೆಯಾ ನಿನಗೆ?” ಎಂದ ಪಕ್ಕದ ಅಂಗಡಿಯ ಯಜಮಾನ, ಆತ ಓರ್ವ ಶೆಟ್ಟಿ. “ಹತ್ತು ರೂಪಾಯಿ ಕೊಡ್ತಾರೆ, ಹೊತ್ತೊಯ್ಯಿರಿ.” “ಯಜಮಾನರು ಏನು ಅಂತಾರೋ? ಅವರೊಂದು ಥರ ಎರಡಲಗಿನ ಚಾಕು ಇದ್ದಂಗೆ. ನೀನೇಕೆ ಅಷ್ಟು ಕೊಟ್ಟೆ ಅಂತಲೂ ಅನ್ನಬಹುದು. ಆಮೇಲೆ ಅಂಗೇನೇ ಆ ಹಾಳು ಕಾಸನ್ನು ಏಕೆ ಬಿಸಾಕಲಿಲ್ಲ ಅಂತನೂ ಹೇಳ್ಬಹುದು ಅವರು. ಉಭಯ ಸಂಕಟದಲ್ಲಿ ಸಿಕ್ಕಿಕೊಂಡು ನಾನು ನರಿ ಸಾವನ್ನು ಅನುಭವಿಸುತ್ತಿದ್ದೇನೆ” ಎಂದ ಕ್ಲರ್ಕ್.
“ಅವನೊಂದೂ ಆಡಲ್ಲ. ಅಂತೂ ಧನಿಷ್ಠಾ ಪಂಚಕಮ್” ಎಂದ ಶೆಟ್ಟಿ. “ಬನ್ನಿ, ಅವಳನ್ನು ದೂರ ಒಯ್ಯಿರಿ. ಹತ್ತು ರೂಪಾಯಿ ಕೊಡ್ತಾನೆ.” “ಆಯ್ತು, ಹತ್ತು ರೂಪಾಯಿ ಕೊಡ್ತೀನಿ” ಎಂದ ಕ್ಲರ್ಕ್. ಅವರು ಹೇಳಿದಂತೆನೇ ಆಯ್ತು, ಕೊಡ್ತೀನಿ, ಎತ್ಕೊಂಡೋಗಿ. ಇಲ್ಲೆಲ್ಲೂ ಬೇಡ, ಸೀದಾ ಅವಳ ಗುಡಿಸಲಿಗೆ ಕರ್ಕೊಂಡು ಹೋಗಿ” ಆ ಗುಮಾಸ್ತನಿಗೆ ಭಯ ಕಿತ್ತುಕೊಂಡಿತ್ತು. ಡಿಪಾರ್ಟ್ಮೆಂಟ್ನ ಯಜಮಾನ ಇಪ್ಪತ್ತೈದರ ಹರೆಯದ ಜಗನ್ನಾಥಸ್ವಾಮಿ, ಗುಮಾಸ್ತೆ ಎಪ್ಪತ್ತರ ಹತ್ತಿರ ಹತ್ತಿರದವ. ಅವರೀರ್ವರ ನಡುವಿನ ಗುಣ, ಸ್ವಭಾವಗಳಲ್ಲಿ ಸಾಕಷ್ಟು ಭಿನ್ನಾಭಿಪ್ರಾಯವಿತ್ತು. ಜಗನ್ನಾಥಸ್ವಾಮಿಯ ತಂದೆ ರಂಗನಾಯಕಲು ಸತ್ತು ಸ್ವರ್ಗ ಸೇರಿದ್ದ. ಅವನು ಇವನ ಒಪ್ಪು-ನೆಪ್ಪುಗಳನ್ನು ಪ್ರಶ್ನಿಸುವಂತಿರಲಿಲ್ಲ. ಈಗ ಏನಿದ್ದರೂ ಎಲ್ಲವೂ ಹರೆಯದ ಈ ಹುಡುಗನದೇ ಕಾರುಬಾರು.
ಮುನಿಸಿಪಲ್ ನೌಕರರು ಬಡಪಟ್ಟಿಗೆ ಈ ರೇಟು ಒಪ್ಪಲಿಲ್ಲ.
“ಏಕಿಷ್ಟು ದರ್ಪ ತೋರಿಸ್ತಿದ್ದೀರಾ ನೀವು? ಹತ್ತು ರೂಪಾಯಿ ಕೊಡಲು ಒಪ್ಪಿದ್ದಾರಲ್ಲ, ಒಬ್ಬರನ್ನ ಒಂದಿಷ್ಟು ದೂರ ಎತ್ಕೊಂಡು ಹೋಗಾಕೆ ಇಷ್ಟೊಂದು ಚೌಕಾಸೀನಾ?” ಎಂದ ಅಲ್ಲಿ ನೆರೆದಿದ್ದ ಓರ್ವ ತಾನು ನ್ಯಾಯಯುತವಾಗಿ ಈ ವಾದ ಎತ್ತಿದ್ದೇನೆಂಬ ನಂಬಿಕೆಯಿಂದ.
“ಆ ಹತ್ತು ರೂಪಾಯಿ ನೀವೇ ತಗೊಂಡು ಮಾಡಿ” ಎಂದ ಓರ್ವ ಮುನಿಸಿಪಲ್ ನೌಕರ.
“ಹದಿನೈದಕ್ಕಿಂತ ಒಂದು ದಮ್ಮಡಿ ಕಡಮೆ ಆಗಲ್ಲ.”
“ನೋಡಿ! ನೋಡಿ, ಅವರ ಸೊಕ್ಕಾ!” ನ್ಯಾಯಯುತವಾಗಿರಬೇಕು ಕೇಳಿದರೂ; “ತಲೆ ಮೇಲಿರಲಿ ಕಣ್ಣು.” “ಏನಿದೆಲ್ಲ?” ಎಂದ ಶೆಟ್ಟಿ ಬಳಿಕ “ರಾಮಾಯಣದ ಪ್ರವಚನ ಸಮಯದಲ್ಲಿ ಬೆರಣಿಗೆ ಹುಡುಕಾಡಿದರಂತೆ! ನೋಡುತ್ತಾ ನಿಂತಿರೋರು ಏಕೆ ತೆಪ್ಪನಿರಬಾರದು? ಆಯ್ತು, ಎತ್ಕೊಂಡೋಗಿ, ಅವಳ್ನ. ಹದಿನೈದೇ ಕೊಡ್ತಾರೆ.” “ಕೇಳಿಸಿಕೊಳ್ಳಿ, ಹದಿನೈದೇ ಕೊಡ್ತೀನಿ, ಏಕೆಂದರೆ ಶೆಟ್ಟರು ಹೇಳವ್ರೆ ಅಂತ. ಎತ್ಕೊಂಡು ಹೋಗಿ” ಎಂದ ಗುಮಾಸ್ತೆ.
ಮುನಿಸಿಪಲ್ ನೌಕರರು ಈಗ ಅಂಗಡಿಯ ಷಟ್ಟರ್ಗೆ ತಲೆ ಆನಿಸಿ ಮಲಗಿದ್ದ ಆ ವೃದ್ಧೆಯ ಮುಖ ದಿಟ್ಟಿಸಿದರು.
“ಓ ಇವಳು! ಅದೇ ಗುನ್ನಮ್ಮ, ವೇಶ್ಯೆ!” ಎಂದ ಓರ್ವ ನೌಕರ. “ಒಳ್ಳೆ ಮೈಕೈ ತುಂಬಿಕೊಂಡು ಕೆನ್ನೆ ಕೆಂಪಡರಿತ್ತಲ್ಲ ಇವಳಿಗೆ, ಈಗ ಏನಾಯ್ತು.”
“ನಿಜ! ಗುನ್ನಮ್ಮನೇ! ತಲೆ ತುಂಬ ಹೂ ಮುಡಿದುಕೊಂಡು ಶೃಂಗಾರ ಮಾಡ್ಕೊಂಡೇ ಸದಾ ಇರುತ್ತಿದ್ದಳಲ್ಲ” ಎಂದ ಮಗದೊಬ್ಬ ನೌಕರ.
“ಹೇಗೆ ಎತ್ಕೊಂಡೋಗೋದು?” ಎಂದ ಮೂರನೇ ನೌಕರ. “ಆಗೊಲ್ಲ, ಚಾಪೆ ಬೇಕು.”
“ಈಗೆಲ್ಲಿ ಸಿಗುತ್ತೆ ಚಾಪೆ?” ಎಂದ ಶೆಟ್ಟಿ.
“ಅವಳನ್ನು ಎತ್ತಿಕೊಂಡು ಹೋಗೋಕೆ ಏನಾದ್ರೂ ದಾರಿ ಹುಡ್ಕಿ ಬೇಗ.”
“ಚಾಪೆಗೆ ಉರುಳಿಸಿ ಎತ್ಕೊಂಡು ಹೋಗಬೇಕು. ಇಲ್ಲ ಅಂದ್ರೆ ಶರೀರ ಕೆಳಕ್ಕೆ ಜಗ್ಗುತ್ತೆ. ಇಲ್ಲಿಂದ ಆ ನಾಲೆವರ್ಗೂ ಹೋಗಬೇಕು ಅಲ್ವಾ?” ಎಂದ ಮೂರನೇ ನೌಕರ.
“ಹೋಗಿ ತಾಳೆಗರಿ ಚಾಪೆ ತಾ” ಎಂದ ಎರಡನೆಯವ. ನೌಕರರು ಮೆಟ್ಟಿಲಿನಿಂದ ಕೆಳಗಿಳಿದರು.
“ನನ್ನ ಕರ್ಮ!” ಎನ್ನುತ್ತ ನಿಟ್ಟುಸಿರುಬಿಟ್ಟ ಗುಮಾಸ್ತೆ.
“ಹೇ! ಬೈಸಿಕಲ್ ತಗೊಂಡೋಗಿ ಚಾಪೆ ತಗೊಂಡು ಬಾ, ಹೋಗು ಬೇಗ” ಅಂಗಡಿಯ ಹುಡುಗನಿಗೆ ಹಣ ಕೊಟ್ಟು ಅಟ್ಟಿದ ಗುಮಾಸ್ತ ಚಾಪೆ ತರಲು.
“ಮೂಳೆ ಚಕ್ಕಳ ಆಗಿಹೋಗವಳೆ!” ರಿಕ್ಷಾವಾಲನೋರ್ವನ ಉವಾಚ.
“ಒಳ್ಳೆ ಭರ್ಜರಿಯಾಗಿ ಬಾಳ್ವೆ ಬಾಳಿದಳು” ಎಂದ ಮತ್ತೊಬ್ಬ ರಿಕ್ಷಾವಾಲ.
“ಅವಳು ಉಡ್ದೇ ಇರೋ ಸೀರೇನೇ ಇರ್ಲಿಲ್ಲ, ನೋಡ್ದೇ ಇರೋ ಸಿನಿಮಾನೇ ಇರ್ಲಿಲ್ಲ.”
“ಸುಮ್ಮಸುಮ್ಮನೆ ಸಿನಿಮಾಕ್ಕೆ ಹೋಯ್ತಿದ್ಲ ಅವಳು? ಅಲ್ಲೋದ್ಲೂ ಅಂದ್ರೆ ಒಬ್ಬನಾದ್ರೂ ಬೀಳಿಸ್ಕತ್ಲೇ ಇದ್ಲೂ ಬಲೆಗೆ” ಎಂದ ಮತ್ತೋರ್ವ ರಿಕ್ಷಾವಾಲಾ.
“ಈ… ಈ… ಈ!” ಎಂದು ಗುನ್ನಮ್ಮ ಮುಲುಕಿದಳು. ಅವಳ ಸೀರೆಯಿಂದ ಮೂತ್ರ ಮೊಸಾಯಿಕ್ ಮೆಟ್ಟಿಲುಗಳ ಮೇಲಿಂದ ಕೆಳಗೆ ಹರಿದು ರಸ್ತೆಯಲ್ಲಿ ಕೆಸರು ಗುಂಡಿ ಮಾಡಿತು.
“ಈ… ಈ… ಈ!” ಎನ್ನುತ್ತ ಮತ್ತೆ, ಗುನ್ನಮ್ಮ ಹಲ್ಲುಗಳನ್ನು ಕರಕರಗುಟ್ಟಿಸಿದಳು, ಬಿಗಿಮುಷ್ಠಿಯೊಂದಿಗೆ ಭಾರಿ ಮುಲುಕಾಟ ನಡೆಸಿದಳು ಈಗ.
“ಸಾವಿನ ಯಾತನೆ ಇದು” ಎಂದ ಯಾರೋ ಒಬ್ಬ.
“ನಾರಾಯಣ, ನಾರಾಯಣ” ಎಂದ ಗುಂಪಿನಲ್ಲಿದ್ದ ಮತ್ತೊಬ್ಬ.
“ಹೋಗಿ ಅದ್ನೇ ಅವಳ ಕಿವೀಲಿ ಹೇಳು” ಎಂದು ಯಾರೋ ಒಬ್ಬ ಒತ್ತಾಯಿಸಿದ ಅವನನ್ನು.
ದುರ್ಗಂಧ ರಸ್ತೆಯನ್ನು ಆವರಿಸಿತು.
“ನೋಡು, ನೋಡು!” ಎಂದ ಒಬ್ಬ ಮುನಿಸಿಪಲ್ ನೌಕರ. ಈಗ ಪ್ರತಿಯೊಬ್ಬರು ಕುತೂಹಲದಿಂದ ಮುಂದಕ್ಕೆ ಬಾಗಿದರು ಅವಳನ್ನು ದಿಟ್ಟಿಸಲು. ಗುನ್ನಮ್ಮನ ಕಣ್ಣುಗಳು ಅಗಲವಾಗಿ ತೆರೆದಿದ್ದವು, ಎವೆಯಿಕ್ಕದೆ, ಅವು ಯಾರನ್ನೋ ಹುಡುಕುತ್ತಿದ್ದವು.
“ಕಣ್ಣು ಅಲ್ಲಾಡುತ್ತಿಲ್ಲ” ಎಂದಳು ಓರ್ವ ಮುದುಕಿ.
“ಅವಳು ಗೂಡಿನಿಂದ ಹಾರಿದಳು” ಎಂದ ಗುಂಪಿನಲ್ಲಿದ್ದ ಯಾರೋ ಓರ್ವ ತತ್ತ್ವಜ್ಞಾನಿ.
“ನನಗೂ ಹಾಗೇ ಅನ್ನಿಸಿ ಭಯ ಆಯ್ತು” ಎಂದ ಶೆಟ್ಟಿ ವಿಷಾದಿಸುತ್ತಾ.
“ಏನು ಮಾಡೋದು ಈಗ?” ಗುಮಾಸ್ತೆ ಕೇಳಿದ.
“ಇನ್ನೇನು? ಅನಾಥರಿಗೆ ತಕ್ಕಂತೆ ಅವರ ಅಂತಿಮ ಕರ್ಮ ನೇರವೇರಿಸೋದು” ಎನ್ನುತ್ತ ಶೆಟ್ಟಿ ಮಾರುಗಾಲು ಹಾಕುತ್ತ ಮುಂದೆ ಹೋದ.
ಗುಂಪಿನಲ್ಲಿದ್ದ ತತ್ತ್ವಜ್ಞಾನಿ:
`ಗಿಣಿ ಹಾರಿತು
ಓ, ನನ್ನ ಪುಟ್ಟ ತಮ್ಮ
ಗೂಡು ಅನಾಥವಾಯಿತು
ಗಿಣಿ ಇಲ್ಲದೆ
ಹೇಳದೆ ಕೇಳದೆ
ಹಾರಿಹೋಯಿತು’
– ಎಂದು ಹಾಡಿದ.
ಚಾಪೆ ತರಲು ಹೋಗಿದ್ದ ಅಂಗಡಿ ಹುಡುಗ ಚಾಪೆಯೊಂದಿಗೆ ಬಂದ.
“ಅವಳ ಸಮಯ ಹತ್ತಿರ ಬಂದಿತ್ತು” ಎಂದಳು ಮುದುಕಿ. ಬಹು ಹಿಂದೆನೇ ಹೆರಿಗೇಲಿ ಅವಳು ಸಾಯಬೇಕಿತ್ತಲ್ವಾ? ಆದ್ರೂ ಬದುಕೊಂಡಳು. ಹೆರಿಗೆ ಸಮಯದಲ್ಲಿ, ಇಲ್ಲಿಗೆ ಇಪ್ಪತ್ತೈದು ವರ್ಷಗಳ ಹಿಂದೆ, ಗುನ್ನಮ್ಮ ಕೋಮಾಸ್ಥಿತಿಗೆ ಹೋಗಿದ್ದಳು. ಆಸ್ಪತ್ರೆಗೆ ಕರೆದೊಯ್ದು ಅವಳ ಹೊಟ್ಟೆ ಕುಯ್ದು ಮಗು-ತಾಯಿ ಬೇರ್ಪಡಿಸಿದ್ದರು.
ಗುನ್ನಮ್ಮ ಆ ಅಗ್ನಿಪರೀಕ್ಷೆಯಲ್ಲಿ ಬದುಕುಳಿದಳು. ಅವಳೀಗ ಮೊಸಾಯಿಕ್ ಮೆಟ್ಟಿಲುಗಳ ಮೇಲೆ ಶವವಾಗಿ ಮಲಗಿದ್ದಾಳೆ. ಅವಳ ದೇಹ ಜೀವರಹಿತವೆಂದೇನೂ ತೋಚುತ್ತಿಲ್ಲ ಅವಳ ಕಣ್ಣುಗಳು, ಜ್ವಲಿಸಿ ಉರಿವ ಎರಡು ದೀಪಗಳಂತಿವೆ, ಇನ್ನೂ ಜೀವಂತವೆನಿಸಿವೆ, ಕಣ್ಣುರೆಪ್ಪೆ ಹಾಗೇ ದಿಟ್ಟಿಸುತ್ತಿವೆ ಮಿಟುಕಿಸದೆ…
ಮುಖ್ಯರಸ್ತೆಯ ಹಿಂಭಾಗದಲ್ಲಿದ್ದ ಕೊಳಚೆ ನಾಲೆಗೆ ಸುದ್ದಿ ಹಬ್ಬಿತು. ಅಲ್ಲಿ ಗುಡಿಸಲುಗಳ ಸಾಲು ಸಾಲೇ ಇದ್ದವು. ಅವುಗಳಲ್ಲೊಂದು ಗುಡಿಸಲು ಗುನ್ನಮ್ಮನದು. ಹಗ್ಗದ ಮಂಚದ ಸಂದಿನೊಳಗೆ ನೆಲೆ ಮಾಡಿಕೊಂಡಿರುವ ತಿಗಣೆಗಳಂತೆ ಆ ಕೊಳಚೆ ನಿವಾಸಿಗಳು ಅಲ್ಲಿಯ ಗುಡಿಸಲುಗಳಲ್ಲಿ ಭರ್ತಿ ಭರ್ತಿ ತುಂಬಿದ್ದು, ಅವರೆಲ್ಲ ಈಗ ಗುಂಪು ಗುಂಪಾಗಿ ಗುನ್ನಮ್ಮನನ್ನು ನೋಡಲು ಬಂದರು.
ಮಧ್ಯವಯಸ್ಸಿನ ಹೆಂಗಸೊಬ್ಬಳು ಗುನ್ನಮ್ಮನ ಮೇಲೆ ಒರಗಿ ರೋಧಿಸಲಾರಂಭಿಸಿದಳು. “ಎಂಥಾದ್ದು ಆಗೋಯ್ತು ಗುನ್ನಮ್ಮ! ಇನ್ನು ಮೇಲೆ ನಿನ್ನ ಮುಖ ನೋಡದಂಗೆ ಆಯ್ತಲ್ಲ! ನಿನ್ನದೇ ಸ್ವಂತ ಗುಡಿಸಲು ಇದ್ದರೂ ಇಲ್ಲಿಗೇಕೆ ಬಂದು ದಿಕ್ಕಿಲ್ಲದವಳ ಹಾಗೆ ಸತ್ತೇ, ಗುನ್ನಮ್ಮಾ?” ಇನ್ನೂ ಮೂವರು ಇವಳ ಜೊತೆಗೂಡಿದರು. ಇದರಿಂದಾಗಿ ಗುನ್ನಮ್ಮಳ ಸಾವು, ಸಾವಿಗೆ ಸರಿ ಹೊಂದುವಂತಹ ಧಾರ್ಮಿಕ ಮನೋಧರ್ಮವನ್ನು ಗಳಿಸಿಕೊಂಡಿತು. ಗುನ್ನಮ್ಮ ಅದೃಷ್ಟವಂತಳು. ಅವಳು ಏಕಾಂಗಿ, ಆದರೆ ಅವಳಿಗೆ ಮರುಕಪಡುವ, ರೋಧಿಸುವ, ಅವಳ ಕಳೇಬರದ ಮೇಲೆ ಬಿದ್ದು ಪ್ರಲಾಪಿಸುವ ಮಂದಿ ಸುತ್ತಮುತ್ತ ಇದ್ದರು. ಆಕೆ ಧಾರಾಳಿಯಷ್ಟೇ ಅಲ್ಲ, ಒಳ್ಳೆಯ ಸಲಹೆಗಾರ್ತಿಯೂ ಹೌದು.
ಡಿಪಾರ್ಟ್ಮೆಂಟಲ್ ಸ್ಟೋರ್ನ ಯಜಮಾನ ಜಗನ್ನಾಥಸ್ವಾಮಿ ಬಂದ. ಆ ಸದ್ದುಗದ್ದಲದೊಳಕ್ಕೆ ಕಾರಿನಿಂದ ಇಳಿದವನೆ ಸೀದಾ ಪ್ರವೇಶಿಸಿದ. ಅಕೌಂಟ್ಸ್ ಕ್ಲರ್ಕ್ ಅವನ ಸಮೀಪ ಹೋಗಿ “ಬಾಬು, ನಾವು ಮುಳುಗೋದೋ, ಅವಳು ಗುನ್ನಮ್ಮ ಅನ್ನಿಸುತ್ತೆ; ವೇಶ್ಯೆ, ನಮ್ಮ ಸ್ಟೋರ್ಸ್ನ ಬಾಗಿಲಲ್ಲೇ ಸತ್ತೋಗಿದ್ದಾಳೆ” ಎಂದು ಹೇಳಿದ. ಜಗನ್ನಾಥಸ್ವಾಮಿ, ಕಳೇಬರದೆಡೆ ಕಣ್ಣಾಡಿಸಿದ ಒಂದು ಸುತ್ತು. ಅವನಿಗೇನಿತ್ತು ಅಲ್ಲಿ ನೋಡಲು?
“ಅವಳ ಹೆಸರು ಗುನ್ನಮ್ಮ ಅಂತ. ಯಾರೋ ಗುನ್ನಮ್ಮ ಅಂತೆ, ನಮಗೊಳ್ಳೆ ಕಿರಿಕಿರಿ ತಂದಿದ್ದಾಳೆ” ಎಂದ ಗುಮಾಸ್ತೆ.
ಜಗನ್ನಾಥ ಸ್ವಾಮಿಗೆ ಚೆನ್ನಾಗೇ ಗೊತ್ತಿದ್ದಳು ಗುನ್ನಮ್ಮ. ಜಗನ್ನಾಥಸ್ವಾಮಿಯ ಅಂಗಡಿಯಿಂದಲೇ ಅವಳು ಬಟ್ಟೆಬರೆ ಖರೀದಿಸುತ್ತಿದ್ದಳು. ಕ್ಯಾಶ್ ಕೌಂಟರ್ ಬಳಿ ನಿಲ್ಲುತ್ತಿದ್ದಳು, ಸಾವಿರಾರು ಬಗೆಯಲ್ಲಿ ಅವನನ್ನು ಗೇಲಿ
ಮಾಡುತ್ತಿದ್ದಳು ಹಾಗೂ ಚೌಕಾಸಿ ಮಾಡುತ್ತಿದ್ದಳು. ಆದರೆ ಸ್ವಾಮಿ ಅವಳೆಷ್ಟೇ ಆಡಿದರೂ ಒಂದು ಚಿಕ್ಕಾಸು ಕಡಮೆ ಮಾಡುತ್ತಿರಲಿಲ್ಲ. ಆಕೆ ಅಂತಿಮವಾಗಿ ಕಾಸು ಕೊಟ್ಟುಬಿಡುತ್ತಿದ್ದಳು. ಆದರೆ ಕ್ಯಾಷ್ ಕೌಂಟರ್ ಬಿಡುವಾಗ ಆಕೆ “ಕಡಮೆ ಮಾಡಿಕೊಳ್ಳಲ್ವಾ ನೀನು? ಆಯ್ತು, ಇಟ್ಕೋ” ಎನ್ನುತ್ತಿದ್ದಳು, ಅಲ್ಲಿಂದ ಅಗಲುವ ಮುನ್ನ ಯಾವತ್ತೂ ಅವಳು ಹೇಳುವ ಪಲ್ಲವಿ ಇದು. ಸ್ವಾಮಿಗೆ ಈಗ ಆ ಪಲ್ಲವಿ ನೆನಪಿಗೆ ಬಂದಿತು.
“ಕಳೇಬರ ಇಲ್ಲಿಂದ ಎತ್ತದ ಹೊರತು ಅಂಗಡಿ ಬಾಗಿಲು ತೆರೆಯುವಂತಿಲ್ಲ” ಎಂದ ಗುಮಾಸ್ತೆ. “ಬಾಗಿಲು ತೆರೆಯೋದುಂಟಾ? ಬಿಟ್ಟಾಕು” ಎಂದ ಜಗನ್ನಾಥಸ್ವಾಮಿ. “ಅಂಗಡಿ ಬಾಗಿಲು ಮುಚ್ಚಿರೋಣ ಅವಳಿಗಾಗಿ. ಅವಳು ಇಲ್ಲಿ ಬಂದು ಸತ್ತಿದ್ದಾಳೆ, ಬೇರೆ ಇನ್ನೆಲ್ಲೂ ಜಾಗ ಇರ್ಲಿಲ್ಲ ಅನ್ನೋ ಹಾಗೆ.”
ಗುನ್ನಮ್ಮಳ ವಯಸ್ಸಿನ ಓರ್ವ ಮುದುಕಿ ಗುಂಪಿನಿಂದ ಜಾಗ ಮಾಡಿಕೊಂಡು ಮುಂದೆ ಬಂದು ನಿಂತು,
“ಅವಳಿಗೆ ಸಾಯಲು ಸ್ವಂತ ಮನೆ ಇರ್ಲಿಲ್ಲ ಅಂತ ಅಲ್ಲ, ಇಲ್ಲಿಗೆ ಬಂದು ಪ್ರಾಣ ಬಿಟ್ಟಿದ್ದು, ಅವಳ ಮಗ ತನ್ನ ಕರ್ಮ ಮಾಡಲಿ ಅಂತ ಮಗನನ್ನು ಉಡ್ಕೊಂಡು ಬಂದು, ಇಲ್ಲಿ ಪ್ರಾಣ ಬಿಟ್ಟವಳೆ. ನೀನು ಗುನ್ನಮ್ಮನ ಮಗ. ನಿಮ್ಮಪ್ಪ ನಿನ್ನ ಸಾಕಿ ಬೆಳೆಸಿದ.”
ಅವಳಿಂದ ಇನ್ನೇನು ಹೆಚ್ಚು ತಡೆಹಿಡಿಯಲಾಗಲಿಲ್ಲ. ಅವಳಿಗೆ ಸತ್ಯ ಗೊತ್ತಿತ್ತು ಹಾಗೂ ಅದನ್ನು ಆಕೆ ಥಟ್ಟನೆ ಒದರಿಬಿಟ್ಟಳು!
ಜಗನ್ನಾಥಸ್ವಾಮಿ ಒಮ್ಮೆಗೆ ಬಾಡಿಹೋದ, ಅವನಲ್ಲಿ ಇದ್ದಬದ್ದ ಶಕ್ತಿ ಎಲ್ಲ ನಿಸ್ಸತ್ತ್ವಗೊಂಡಿತು.
ತನ್ನ ಎದುರಿನ ಕಳೇಬರ ತನ್ನ ಹೆತ್ತವ್ವನದೆ? ಮಗನನ್ನು ನೋಡಲೆಂದೇ ನಿತ್ಯ ಬರುತ್ತಿದ್ದಳೆ, ನಾನೇ ಏನು ನನ್ನವ್ವನ ಅಂತಿಮ ಸಂಸ್ಕಾರ ಕರ್ತೃ?
ಆ ಹಣ್ಣು ಮುದುಕಿ ಸತ್ಯ ಬಿಚ್ಚಿಟ್ಟಿದ್ದಳು. ಜಗನ್ನಾಥಸ್ವಾಮಿಯನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಮಕ್ಕಳಿಲ್ಲದ ರಂಗನಾಯಕಲು ಆಸ್ಪತ್ರೆಯಿಂದ ಆಗ ತಾನೇ ಹುಟ್ಟಿದ ಗುನ್ನಮ್ಮಳ ಮಗುವನ್ನು ತಂದಿದ್ದ, ತೆತ್ತ ಮೌಲ್ಯ ಒಂದನೂರು ರೂಪಾಯಿ ಹಾಗೂ ಮೇಲೊಂದು ಸೀರೆ.
ಸೂಳೆ ಸಂತಾನಕ್ಕೆ ಜಾತಿ ಇಲ್ಲ, ಮತ ಇಲ್ಲ ಹಾಗೂ ವರ್ಗ ಇಲ್ಲ. ಹೀಗಾಗಿ ಶ್ರೀಮಂತ ರಂಗನಾಯಕಲು ಬಾಲಕನಿಗೆ ಜಗನ್ನಾಥಸ್ವಾಮಿ ಎಂದು ಹೆಸರಿಟ್ಟ. ಆ ಮಹಾಪ್ರಭು ಜಗನ್ನಾಥಸ್ವಾಮಿ ಇಂತಹ ಸತ್ಕಾರ್ಯಗಳಿಗೆಲ್ಲ ತನ್ನ ಸಹಮತಿ ಇತ್ತಿದ್ದ!
ಜಗನ್ನಾಥಸ್ವಾಮಿಗೂ ತನ್ನನ್ನು ಆಸ್ಪತ್ರೆಯಿಂದ ತಂದರೆಂದು, ದತ್ತು ಪಡೆದಿರುವರೆಂದು ಗೊತ್ತಿತ್ತು.
ಗುನ್ನಮ್ಮ, ಅವನ ಅವ್ವನೆ? ಪದೇ ಪದೇ ಅವನ ಅಂಗಡಿಗೆ ಗುನ್ನಮ್ಮ ಭೇಟಿ ಕೊಡುತ್ತಿದ್ದಳು. ಅವಳು ಅಂಗಡಿಯಿಂದ ಹೊರ ಹೋಗುವಾಗ ಹೇಳುತ್ತಿದ್ದ ಪಲ್ಲವಿ “ಕಡಮೆ ಮಾಡಲ್ವಾ? ಆಗಲಿ, ಇಟ್ಕೊ” ಈ ಮಾತು ನೆನಪಿಗೆ ಬಂದು ತತ್ತರಿಸಿ ಹೋದ.
“ಆಗಲಿ ಇಟ್ಕೊ, ಆಗಲಿ ಇಟ್ಕೊ…!” ಈ ಮಾತುಗಳು ಅವನ ತಲೆಯನ್ನು ಸುತ್ತುವರಿದವು ಈಗ.
ಗುನ್ನಮ್ಮ ಸಾಯಲೆಂದು ಅಲ್ಲಿಗೆ ಬರಲಿಲ್ಲ! ಮಗ ತನ್ನ ಅಂತಿಮ ಸಂಸ್ಕಾರ ಮಾಡುತ್ತಾನೆಂದೇನೂ ಆಕೆ ಆಸೆಹೊತ್ತು ಅಲ್ಲಿಗೆ ಅವನನ್ನು ಅರಸಿ ಬರಲಿಲ್ಲ. ಅವನನ್ನು ನೋಡಲು ನಿತ್ಯ ಬರುತ್ತಿದ್ದಳು. ಅಂತೆಯೇ ತನ್ನ ಮಗನ ಅಂತಿಮ ದರ್ಶನಕ್ಕೆಂದು ಅಲ್ಲಿಗೆ ಬಂದಳು. ಆದರೆ ಅವನನ್ನು ನೋಡದೆ ಸಾವನ್ನಪ್ಪಿದಳು!
ಅವಳ ಕಣ್ಣುಗಳು ಮಗನಿಗಾಗಿ ಹುಡುಕಿ, ಹುಡುಕಿ, ನಿಶ್ಚಲಗೊಂಡಿವೆ. ಆ ನಯನಗಳು ಈಗಲೂ ಅರಸುತ್ತಿವೆ… ಈಗಲೂ ಮಗನನ್ನು.