ಆಸೆಗಳೇ ಮುಖ್ಯವಾಗಿ ಮನುಷ್ಯನನ್ನು ಅಧಃಪತನಕ್ಕೆ ತಳ್ಳುತ್ತವೆ. ಆದ್ದರಿಂದ ಆಸೆಗಳನ್ನು ನಿಯಂತ್ರಿಸಿಕೊಳ್ಳಬೇಕೆಂಬುದಾಗಿ ಎಲ್ಲ ಮಹಾತ್ಮರೂ ಹೇಳುತ್ತಾ ಬಂದಿದ್ದಾರೆ. ಆಸೆಗಳನ್ನು ನಿಯಂತ್ರಿಸಿಕೊಳ್ಳುವ ಉಪಾಯಗಳನ್ನು ಧರ್ಮ ಹೇಳುತ್ತದೆ. ಮಾನಸಿಕ ಉಪಾಯಗಳನ್ನು, ಶಾರೀರಿಕ ಉಪಾಯಗಳನ್ನು ಮತ್ತು ಬಾಹ್ಯ ಉಪಾಯಗಳನ್ನು ಕೂಡ ಧರ್ಮ ಹೇಳುತ್ತದೆ.
ಆಸೆಗಳು ಕೆಲವೊಮ್ಮೆ ಒಳ್ಳೆಯ ಪರಿಣಾಮವನ್ನು ಕೊಡುವುದುಂಟಾದರೂ ಯಾವಾಗಲೂ ಒಳ್ಳೆಯ ಪರಿಣಾಮವನ್ನೇ ಕೊಡುತ್ತವೆಯೆಂಬ ನಿಯಮವೇನೂ ಇಲ್ಲ. ಅವು ಬಹುತೇಕ ಕೆಟ್ಟ ಪರಿಣಾಮವನ್ನೇ ಕೊಡುತ್ತವೆ.
ಒಟ್ಟಾರೆ ಆಸೆಗಳು ಅತಿಯಾದರೆ ಪರಿಣಾಮಗಳು ಅತಿಯಾಗುತ್ತವೆಯಾದ್ದರಿಂದ ಆಸೆಗಳನ್ನು ಧರ್ಮದ ಚೌಕಟ್ಟಿನಲ್ಲಿರುವಂತೆ ಮಾಡಿಕೊಳ್ಳಬೇಕು. “ಧರ್ಮಾವಿರುದ್ಧೋ ಭೂತೇಷು ಕಾಮೋsಸ್ಮಿ ಭರತರ್ಷಭ” ಎಂದು ಗೀತಾಚಾರ್ಯ ಹೇಳಿಲ್ಲವೆ? ತಾನಿರುವ ಸ್ಥಾನ ಯಾವುದು, ತನ್ನ ಕರ್ತವ್ಯವೇನು, ತಾನು ಇಷ್ಟೆಲ್ಲ ಆಸೆ ಪಡುವುದು ಸರಿಯೇ ಎಂಬ ವಿವೇಕ ಅಗತ್ಯ.
ಒಂದು ವಿಚಿತ್ರವಾದ ಸತ್ಯವಿದೆ. ಧರ್ಮದ ಚೌಕಟ್ಟಿನೊಳಗೇ ಆಸೆಗಳನ್ನು ಈಡೇರಿಸಿಕೊಳ್ಳಲು ಒಂದು ವಿಶಿಷ್ಟವಾದ ಸ್ವಾತಂತ್ರ್ಯವಿದೆ. ಆ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡರೆ ಅದಕ್ಕೆ ಧರ್ಮದ ಕಡೆಯಿಂದ ಆಕ್ಷೇಪವಿಲ್ಲ. ಉದಾಹರಣೆಗೆ ಯಯಾತಿ ಮಹಾರಾಜ. ಆತ ಪರಮ ಧಾರ್ಮಿಕ. ಆದರೂ ಭೋಗದಾಸೆ ಇತ್ತು. ತನ್ನ ಆಯುಷ್ಯವಿಡೀ ಭೋಗಿಸಿದರೂ ಆತನಿಗೆ ತೃಪ್ತಿಯಾಗಲಿಲ್ಲ. ಕೊನೆಗೆ ತನ್ನ ಮಗನ ಆಯುಷ್ಯವನ್ನೂ ಪಡೆದು ಭೋಗಿಸಿದ. ಆಸೆಗಳು ಭೋಗದಿಂದ ಕೊನೆಗೊಳ್ಳುವುದಿಲ್ಲ ಎಂಬುದನ್ನು ಮನಗಂಡು (ನ ಜಾತು ಕಾಮಃ ಕಾಮಾನಾಂ ಉಪಭೋಗೇನ ಶಾಮ್ಯತಿ| ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ||) ಕಟ್ಟಕಡೆಯಲ್ಲಿ ಮಗನ ಉಳಿದ ಆಯುಷ್ಯವನ್ನು ಹಿಂದಿರುಗಿಸಿದ. ಇಷ್ಟಾದರೂ ಧರ್ಮದ ಚೌಕಟ್ಟನ್ನು ಬಿಡಲಿಲ್ಲ. ಆದ್ದರಿಂದ ಅವನ ಬಗ್ಗೆ ಆಕ್ಷೇಪದ ಮಾತುಗಳು ಯಾರಿಂದಲೂ ಬಂದಿಲ್ಲ. ಆದರೆ ರಾವಣ ಹಾಗಲ್ಲ. ಧರ್ಮದ ಚೌಕಟ್ಟನ್ನು ಮೀರಿ ಸೀತೆಯನ್ನು ಮುಟ್ಟಿದ್ದೇ ಅವನಿಗೆ ವಿನಾಶವನ್ನು ತಂದೊಡ್ಡಿತು. ಎಲ್ಲರಿಂದಲೂ ಆಕ್ಷೇಪವನ್ನು ತಂದೊಡ್ಡಿತು. ಯಯಾತಿಯು ಜೀವನವಿಡೀ ಭೋಗಿಸಿದರೂ ಆಕ್ಷೇಪವಿಲ್ಲ. ಆದರೆ ರಾವಣ ಒಮ್ಮೆ ಮುಟ್ಟಿದ್ದೇ ಆಕ್ಷೇಪವನ್ನುಂಟುಮಾಡಿತು. ಇಲ್ಲಿರುವ ಅಂತರವೇನು? ಯಯಾತಿಯು ಧರ್ಮದ ಚೌಕಟ್ಟಿನೊಳಗಿದ್ದ, ರಾವಣನು ಧರ್ಮದ ಚೌಕಟ್ಟನ್ನು ಮೀರಿ ವರ್ತಿಸಿದ್ದ. ಪರಸ್ತ್ರೀಯನ್ನು ಅವನು ಮುಟ್ಟಿದ್ದ. ಯಯಾತಿಯು ಪರಸ್ತ್ರೀಯನ್ನು ಮುಟ್ಟಿರಲಿಲ್ಲ.
ಧರ್ಮದ ಪರಿಧಿಯೊಳಗೆ ಆಸೆಗಳಿಗೂ ಅವಕಾಶವಿದೆ. ಆ ಪರಿಧಿಯೊಳಗೆ ಅರ್ಥಕಾಮಗಳನ್ನು ಸೇವಿಸಬೇಕು. ವ್ಯಾಸರು ತುಂಬಾ ಕಳಕಳಿಯಿಂದ ಹೇಳಿದ ಮಾತನ್ನಿಲ್ಲಿ ನೆನಪಿಸಿಕೊಳ್ಳೋಣ – “ಧರ್ಮಾತ್ ಅರ್ಥಶ್ಚ ಕಾಮಶ್ಚ ಸ ಕಿಮರ್ಥಂ ನ ಸೇವ್ಯತೇ” (ಧರ್ಮದಿಂದಲೇ ಅರ್ಥಕಾಮಗಳನ್ನು ಪಡೆಯಲು ಸಾಧ್ಯವಿದೆಯಪ್ಪ! ಹಾಗಿರುವಾಗ ನೀನು ಯಾಕೆ ಧರ್ಮವನ್ನನುಸರಿಸುವುದಿಲ್ಲ?)
“ಲೋಕಾಃ ಸಮಸ್ತಾ ಸುಖಿನೋ ಭವಂತು.”
(ಕೃಪೆ: `ಸ್ವರ್ಣವಲ್ಲೀಪ್ರಭಾ’ ಮಾಸಪತ್ರಿಕೆ)