ಸತ್ಯಸ್ಯ ವಚನಂ ಶ್ರೇಯಃ
ಸತ್ಯಾದಪಿ ಹಿತಂ ವದೇತ್|
ಯದ್ಭೂತಹಿತಮತ್ಯಂತಂ
ಏತತ್ ಸತ್ಯಂ ಮತಂ ಮಮ||
– ಮಹಾಭಾರತ, ಶಾಂತಿಪರ್ವ
ಸತ್ಯವನ್ನು ನುಡಿಯುವುದು ಶ್ರೇಯಸ್ಕರವೆಂಬುದು
ನಿಸ್ಸಂಶಯ. ಆದರೆ ಪೂರ್ವಾಪರ ಯೋಚನೆ ಇಲ್ಲದೆ ಆಡಿದ
ಸತ್ಯಕ್ಕಿಂತ ಪ್ರಾಣಿಗಳಿಗೆ ಹಿತವುಂಟಾಗುವಂತೆ ಮಾತನಾಡುವುದು ಉತ್ತಮ. ಯಾವ ನಡೆಯು
ಪರಿಣಾಮದಲ್ಲಿ ಪ್ರಾಣಿಗಳಿಗೆ ಹಿತಕರವಾಗುತ್ತದೋ ಅದು ನಿಜಾರ್ಥದಲ್ಲಿ ಸತ್ಯವೆಂಬುದು ನನ್ನ ಮತ.”
ಜೀವಹಿತಸಾಧಕವಾದುದೇ ಸತ್ಯವೆನಿಸಲು ಅರ್ಹವಾದದ್ದು
ಈ ಸುಂದರ ಪರಾಮರ್ಶನೆಯನ್ನು ನೀಡಿರುವವರು ಸನತ್ಕುಮಾರರು. ಸಾಮಾನ್ಯವಾಗಿ ಅನೃತವನ್ನಾಡದಿರುವುದು ಮೊದಲಾದ ಪರಿಮಿತಾರ್ಥದಲ್ಲಿ ಸತ್ಯವನ್ನು ಲಕ್ಷಣೀಕರಿಸಲಾಗುತ್ತದೆ. ಆದರೆ ಜೀವಹಿತಸಾಧಕವಾದುದೇ ಸತ್ಯವೆನಿಸಲರ್ಹವಾದದ್ದು ಎಂಬ ಹೊಸ ಆಯಾಮವನ್ನೇ ಮೇಲಣ ವಾಕ್ಯದಲ್ಲಿ ಸ್ಫೋಟಗೊಳಿಸಲಾಗಿದೆ. ಈ ಅರ್ಥವಿಸ್ತಾರ ತುಂಬಾ ಮನೋಹರವಾಗಿದೆ, ಪ್ರೇರಣಾದಾಯಕವಾಗಿದೆ. ಲೆಕ್ಕಾಚಾರದಿಂದಾಡಿದ ಸತ್ಯದಿಂದ ಹಲವೊಮ್ಮೆ ಜೀವಹಾನಿಯಾಗಬಹುದು; ಅನುಕಂಪಪ್ರೇರಿತ ಸುಳ್ಳಿನಿಂದ ಹಲವೊಮ್ಮೆ ಜೀವಹಿತವಾಗಬಹುದು. ಈ ವಾಸ್ತವವೇ ಮೇಲಣ ವಾಕ್ಯದಲ್ಲಿ ಧ್ವನಿತವಾಗಿರುವುದು.
ಒಮ್ಮೆ ಹೀಗಾಯಿತು. ಯುದ್ಧಭೂಮಿಯಲ್ಲಿದ್ದ ಸೈನಿಕನೊಬ್ಬನ ತಂದೆ ಉತ್ಕ್ರಮಣಾವಸ್ಥೆಯಲ್ಲಿದ್ದನೆಂಬ ವಾರ್ತೆ ತಲಪಿತು. ಉನ್ನತಾಧಿಕಾರಿಗಳು (ಹೀಗೆ ಕಡ್ಡಾಯ ನಿಯಮವಿರದಿದ್ದರೂ) ಆ ಸೈನಿಕನಿಗೆ ಬಿಡುವಿತ್ತು, ಯಾವುದೊ ವಿಮಾನದಲ್ಲಿ ಅವನನ್ನು ಸ್ವಸ್ಥಳಕ್ಕೆ ರವಾನೆ ಮಾಡಿದರು. ಈ ಸೈನಿಕನಿಗೆ ಬೇರಾರೂ ಬಂಧುಗಳಿರಲಿಲ್ಲವೆಂಬುದು ಅಧಿಕಾರಿಗಳಿಗೆ ತಿಳಿದಿದ್ದುದೂ ಈ ಕ್ರಮಕ್ಕೆ ಕಾರಣವಾಗಿರಬಹುದು.
ವಿಮಾನದಿಂದಿಳಿದು ಆಸ್ಪತ್ರೆಗೆ ಧಾವಿಸಿ ಸೈನಿಕನು ಇಂಟೆನ್ಸಿವ್ ಕೇರ್ ವಿಭಾಗಕ್ಕೆ ಹೋದ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಆ ವ್ಯಕ್ತಿ ಅವಸಾನಕ್ಕೆ ಹತ್ತಿರದಲ್ಲಿದ್ದುದು ಸ್ಪಷ್ಟವಾಗಿತ್ತು.
ಆದರೆ ಆ ವ್ಯಕ್ತಿ ಸೈನಿಕನ ತಂದೆ ಆಗಿರಲಿಲ್ಲ! (ಸೇನಾಛಾವಣಿಗೆ ತಪ್ಪು ಮಾಹಿತಿ ಬಂದಿರಬೇಕೆಂದುಕೊಂಡ, ಸೈನಿಕ.) ಸೈನಿಕನು ಅರೆಕ್ಷಣ ಯೋಚಿಸಿ ಏನೋ ನಿರ್ಧರಿಸಿಕೊಂಡು ಹಾಸಿಗೆಯ ಬಳಿಗೆ ಹೋಗಿ “ಅಪ್ಪಾ! ನಿಮ್ಮನ್ನು ನೋಡಲು ಬಂದಿದ್ದೇನೆ” ಎಂದು ಕಿವಿಯಲ್ಲಿ ಹೇಳಿದ.
ವೃದ್ಧನಾದರೊ ‘ಮಗ’ನ ಧ್ವನಿ ಕೇಳಿದೊಡನೆಯೆ ಅವನ ಮುಖದಲ್ಲಿ ಮಂದಹಾಸ ಮೂಡಿತು.
ಆ ವೇಳೆಗೆ ಸೈನಿಕನ ನಿಜವಾದ ತಂದೆ ಬೇರೆಲ್ಲಿಯೊ ಕೊನೆಯುಸಿರೆಳೆದಿದ್ದಿರಬಹುದು.
ಆದರೆ ಕೊನೆಘಳಿಗೆಯಲ್ಲಿ ಆ ವೃದ್ಧನ ಮುಖದಲ್ಲಿ ಮೂಡಿದ್ದ ನೆಮ್ಮದಿಯ ಮಂದಹಾಸಕ್ಕೆ ಬೆಲೆಕಟ್ಟಲಾದೀತೆ? ಒಂದು ವೇಳೆ `ಈತ ನನ್ನ ತಂದೆಯಲ್ಲ, ನನಗಿಲ್ಲಿ ಏನು ಕೆಲಸ?’ ಎಂದು ಸೈನಿಕನು ವೃದ್ಧನ ಸಾಮೀಪ್ಯ ತ್ಯಜಿಸಿ `ಸತ್ಯಾಚರಣೆ’ ಮಾಡಿದ್ದಿದ್ದರೆ ಅದಕ್ಕೆ ಏನು ಬೆಲೆ ಇರುತ್ತಿತ್ತು.