ಯಾವುದೇ ಹೊಸ ಮಂಡನೆಯನ್ನು ಜನತೆಯು ಹಿಂದಿನ ಅನುಭವದ ಆಧಾರದ ಮೇಲೆ ಪರಾಮರ್ಶಿಸಬೇಕಾದುದು ಸಹಜ. ಕಾರ್ಯವಂತಿಕೆಯು ವರ್ತನೆಯಲ್ಲಿ ಪ್ರತಿಫಲಿತವಾದಾಗಲೇ ಜನರು ಒಪ್ಪಿಯಾರು. ಸ್ವಾತಂತ್ರ್ಯಪ್ರಾಪ್ತಿಯಾದಾಗಿನಿಂದ ಈಚಿನ ಆರೂವರೆ ದಶಕಗಳಲ್ಲಿ ‘ಅಭಿವೃದ್ಧಿ’ ಯೋಜನೆಗಳಿಗೆಂದು ಸರ್ಕಾರವು ೬.೧ ಕೋಟಿ ಎಕರೆಯಷ್ಟು ಜಮೀನನ್ನು ವಶಪಡಿಸಿಕೊಂಡಿದೆ. ಸುಮಾರು ೬ ಕೋಟಿಯಷ್ಟು ಜನ ನಿರ್ವಾಸಿತರಾಗಿದ್ದಾರೆ. ಇದೆಲ್ಲದರ ‘ಆಡಿಟ್’ ಆಗಿದೆಯೆ?
ದೇಶವು ಆಯ್ದುಕೊಳ್ಳುವ ಅಭಿವೃದ್ಧಿಪಥವು ನೆಲಮಟ್ಟದ ವಾಸ್ತವಗಳನ್ನು ಆಧರಿಸಿರಬೇಕಾಗುತ್ತದೆ ಎಂಬ ಅನಿವಾರ್ಯತೆಯನ್ನು ಮೊತ್ತಮೊದಲು ಎಲ್ಲರೂ ಅಂಗೀಕರಿಸಬೇಕಾಗುತ್ತದೆ. ಮೇಲುನೋಟಕ್ಕೋ ತರ್ಕಬುದ್ಧಿಗೋ ಸಮಂಜಸವೆನಿಸಬಹುದಾದ ವಾದಗಳ ಅಥವಾ ನಮೂನೆಗಳ ಬೆನ್ನುಹತ್ತುವುದು ಭಾರತದಂತಹ ವಿಶಾಲ ಮತ್ತು ಸಂಕೀರ್ಣಸ್ವರೂಪದ ದೇಶಕ್ಕೆ ಪ್ರಯೋಜನಕರವಾದೀತೆಂಬ ಪ್ರತಿಜ್ಞೆಗೆ ಅನುಭವದ ಆಧಾರವಿಲ್ಲ. ಒಬ್ಬ ಹಿರಿಯ ಚಿಂತಕರು ಹೇಳಿದ್ದಂತೆ, ದೇವರು ಒಂದೊಂದು ದೇಶಕ್ಕೂ ಒಂದೊಂದು ಬೇರೆಯದೇ ಪ್ರಶ್ನಪತ್ರಿಕೆಯನ್ನು ಕೊಟ್ಟಿರುತ್ತಾನೆ. ಈ ತಥ್ಯದ ಭೂಮಿಕೆಯಲ್ಲಿ ನೋಡುವಾಗ ಕೆಲವರು ಪಂಡಿತಂಮನ್ಯರು ಯಾವಾವುದೋ ದೇಶಗಳನ್ನು ಹೆಸರಿಸಿ ಭಾರತ ಅವುಗಳ ದಾರಿಯಲ್ಲಿ ಸಾಗಬೇಕೆಂದು ಸಲಹೆ ಮಾಡುವುದು ಹಾಸ್ಯಾಸ್ಪದವೇ ಆಗುತ್ತದೆ. ಒಂದೆರಡು ಉದಾಹರಣೆಗಳನ್ನು ನೋಡೋಣ. ಇಂಗ್ಲೆಂಡ್ ಮತ್ತು ಪಶ್ಚಿಮ ಯೂರೋಪಿನ ಸಾಮ್ರಾಜ್ಯಗಳು ವಸಾಹತುಗಳನ್ನು ಯಥೇಷ್ಟ ಕೊಳ್ಳೆಹೊಡೆದು ಅದರಿಂದ ಮೂಲಬಂಡವಾಳವನ್ನು ನಿರ್ಮಿಸಿಕೊಂಡು ತಮ್ಮ ಮುನ್ನಡೆಯ ದಾರಿಯನ್ನು ನಿಶ್ಚಯಿಸಿಕೊಂಡವು. ಆ `ಅನುಕೂಲ’ ಭಾರತಕ್ಕೆ ಹಿಂದೆ ಇದ್ದಿತೆ, ಈಗ ಇದೆಯೆ? ಇದ್ದರೂ ಅದು ವ್ಯವಹಾರ್ಯವೆ, ಅಪೇಕ್ಷಣೀಯವೆ? ಇಂಗ್ಲೆಂಡಿನಂತಹ ಸಣ್ಣದೇಶವು ಜಗತ್ತಿನ ಅಷ್ಟೊಂದು ಅಗಾಧ ಭಾಗವನ್ನು ವಶಪಡಿಸಿಕೊಂಡು ಕೊಳ್ಳೆಹೊಡೆಯಿತು. ಇಂಗ್ಲೆಂಡಿಗಿಂತ ಹದಿಮೂರರಷ್ಟು ದೊಡ್ಡದಾದ ಭಾರತವು ಇಂಗ್ಲೆಂಡಿನ `ಪ್ರಗತಿಪಥ’ವನ್ನು ಅನುಕರಿಸಬೇಕಾದರೆ ಎಷ್ಟು ಗಾತ್ರದ ಭೂಭಾಗದ ಮೇಲೆ ದಂಡೆತ್ತಿ ಹೋಗಬೇಕಾದೀತು? ಇನ್ನು ಸಮಕಾಲೀನ ಜಗತ್ತನ್ನು ನೋಡೋಣ. ಸಾಮಾನ್ಯವಾಗಿ ಭಾರತವನ್ನು ಹೋಲಿಸುವ ಚೀನಾದಲ್ಲಿ ಸರ್ಕಾರವು ನಿರ್ಣಯಿಸಿದ ಯೋಜನೆಯನ್ನು ಅದೆಷ್ಟೇ ಕೋಟಿ ಜನರ ಪ್ರತಿರೋಧವಿದ್ದರೂ ಶತಾಯಗತಾಯ ಕಾರ್ಯಗತಗೊಳಿಸುವ ವ್ಯವಸ್ಥೆ ಇದೆ. ಹಾಗೆ ಭಾರತದಲ್ಲಿ ನಡೆಯಲಾಗದು. ಭಾರತವು ಪ್ರಜಾಪ್ರಭುತ್ವಾನುಗುಣ ವಿಧಾನದಲ್ಲಿಯೇ ಸಾಗಬೇಕಾಗಿದೆ. ಕೆಲವರು ಸಿಂಗಾಪುರವನ್ನು ಆದರ್ಶವೆಂದು ಪ್ರಸ್ತಾವಿಸುತ್ತಾರೆ. ಸಿಂಗಾಪುರ ಇರುವುದು ಗಾತ್ರದಲ್ಲಿ ಭಾರತದ ಒಂದು ಪಟ್ಟಣದಷ್ಟು. ಅಲ್ಲಿ ಸಾಧ್ಯವಾಗುವ ವಿಧಾನಗಳು ಭಾರತದಂತಹ ದೇಶದಲ್ಲಿ ಶಕ್ಯವಾದಾವೆ? ಇನ್ನು ಅಮೆರಿಕವನ್ನು ನೋಡೋಣ. ಅಮೆರಿಕದಲ್ಲಿ ರಿಪಬ್ಲಿಕನ್ ಅಥವಾ ಡೆಮೊಕ್ರ್ಯಾಟಿಕ್ – ಎರಡರಲ್ಲಿ ಒಂದು ಪಕ್ಷದ ಬೆಂಬಲ ಪಡೆದ ಸರ್ಕಾರ ಇರುತ್ತದೆ. ಆದರೆ ಪ್ರಮುಖ ಮೂಲಭೂತ ಆರ್ಥಿಕ ಧೋರಣೆಗಳು ಸರ್ವಾಂಗೀಕೃತವೆನ್ನಬಹುದು; ತೀವ್ರ ಭಿನ್ನತೆಗಳು ಇರವು. ಭಾರತದಲ್ಲಿ ಆ ಸನ್ನಿವೇಶ ಇದೆಯೆ? ಇಲ್ಲಿಯ ರಾಜ್ಯಾಂಗವ್ಯವಸ್ಥೆಯು ಬಹುಪಕ್ಷಾಧಾರಿತವಾಗಿದೆ. ಈ ಪರಿಸ್ಥಿತಿಯು ಬದಲಾಗುವ ಸಂಭವ ಕಡಮೆ.
ಬಹುಶಃ ಈ ಜಟಿಲತೆಯನ್ನು ಗಮನದಲ್ಲಿ ಇರಿಸಿಕೊಂಡೇ ಇತ್ತೀಚೆಗೆ ವಿಶ್ವಬ್ಯಾಂಕ್ ಮತ್ತು ಐಎಂಎಫ್ ಪ್ರಮುಖರು ಭಾರತವನ್ನು ಸಂದರ್ಶಿಸಿದ ಸಂದರ್ಭದಲ್ಲಿ `ಭಾರತದೇಶದ ಅಭಿವೃದ್ಧಿಗೆ ಮುಖ್ಯ ಪ್ರತಿಬಂಧಕವಾಗಿರುವುದೆಂದರೆ ಅಲ್ಲಿಯ ರಾಜಕೀಯವೇ’ ಎಂದು ವ್ಯಾಖ್ಯಾನ ಮಾಡಿದುದು. ಆದರೆ ಎಷ್ಟೇ ದುಷ್ಕರವೆನಿಸಿದರೂ ಔದ್ಯೋಗೀಕರಣ, ಸಂಪನ್ಮೂಲ ವಿನಿಯೋಗ, ಸಾರ್ವಜನಿಕ ಸೇವೆಗಳು ಮೊದಲಾದ ವಿಷಯಗಳ ಬಗೆಗೆ ರಾಷ್ಟ್ರಮಟ್ಟದಲ್ಲಿ ಹೊಂದಾಣಿಕೆ ಇದ್ದರೆ ಮಾತ್ರ ಭಾರತವೆಂಬ ಬೃಹದ್ರಥ ಮುಂದಕ್ಕೆ ಚಲಿಸಬಲ್ಲದು.
ಪ್ರಾಥಮಿಕ ತಥ್ಯಗಳು
ಒಂದೆರಡು ಪ್ರಾಥಮಿಕ ತಥ್ಯಗಳನ್ನು ಅಲಕ್ಷಿಸಿ ಅಭಿವೃದ್ಧಿಧೋರಣೆಗಳನ್ನು ರೂಪಿಸುವುದು ಪ್ರಯೋಜನಕರ ವಾಗದು. ಇಂತಹ ತಥ್ಯಗಳಲ್ಲಿ ಮೊದಲನೆಯದು ಪ್ರಕೃತಿಯು ಎಲ್ಲರ ಬದುಕಿಗೆ ಆಧಾರವಾಗಿ ಸೃಷ್ಟಿಸಿರುವ ಸಂಪನ್ಮೂಲಗಳನ್ನು ಖಾಸಗೀಕರಿಸುವುದು ಸಮಾಜವಿರೋಧಿ ಕ್ರಮವಾಗುತ್ತದೆ ಎಂಬುದು. ಎರಡನೆಯದು ಸಗಟು ರಾಷ್ಟ್ರೋತ್ಪನ್ನದ ಹೆಚ್ಚಳವಾದರೆ ಅದರ ಪರಿಣಾಮವಾಗಿ ಕ್ರಮಕ್ರಮೇಣ ಎಲ್ಲರ ಹಿತಸಾಧನೆಯಾಗುತ್ತದೆಂಬ ನಿಲವು. ಪಾರಿಭಾಷಿಕವಾಗಿ `ಪ್ರಗತಿಯ ಜಿನುಗುವಿಕೆ’ (`ಟ್ರಿಕಲ್-ಡೌನ್ ಥಿಯೋರಿ’) ಎಂದು ಕರೆಯಲಾಗಿರುವ ಈ ವಾದವು ಪ್ರೌಢ ಅರ್ಥಶಾಸ್ತ್ರೀಯ ವಲಯಗಳಲ್ಲಿ ಬಹಳ ವರ್ಷ ಹಿಂದೆಯೆ ತಿರಸ್ಕೃತವಾಗಿದೆ. ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ಅತ್ಯಂತ ನಿಮ್ನ ಸ್ತರಗಳಲ್ಲಿರುವವರಿಗೂ ಪ್ರಾಕೃತಿಕ ಸಂಪನ್ಮೂಲಾಧಾರಿತ ಉತ್ಪಾದನೆಯ ಲಭ್ಯತೆಯನ್ನು ಖಾತರಿಪಡಿಸುವ ವಿಧಾನಗಳೊಡನೆ ಹೊಂದಿಕೆಯಾಗುವಂತಹ ಅಭಿವೃದ್ಧಿಯೋಜನೆಗಳು ಮಾತ್ರ ಭಾರತದಂತಹ ದೇಶದಲ್ಲಿ ಉಪಾದೇಯವೆನಿಸುತ್ತವೆ. ಇದಕ್ಕೆ ವ್ಯತಿರಿಕ್ತವಾದ ಧೋರಣೆಗಳು ಮೇಲ್ನೋಟಕ್ಕೆ ಎಷ್ಟೇ ಆಕರ್ಷಕವಾಗಿ ಕಂಡರೂ ಅವು ಸಮರ್ಥನೀಯವೆನಿಸಲಾರವು.
ಇಂತಹ ಸರ್ವಹಿತಕಾರಿ ಅಂಶಗಳನ್ನೂ ಸಂಪನ್ಮೂಲಗಳ ಬಳಕೆಯ ಬಗೆಗೆ ಪ್ರಮಾಣಬದ್ಧತೆಯನ್ನೂ ಅಳವಡಿಸಿಕೊಂಡ ಯೋಜನಾವಿನ್ಯಾಸವನ್ನೇ `ಸುಸ್ಥಿರ ಅಭ್ಯುದಯ’ (ಸಸ್ಟೈನಬಲ್ ಡೆವಲಪ್ಮೆಂಟ್) ಎಂದು ಕರೆಯುತ್ತಾರೆ.
ತೀವ್ರವೇಗದ ಅಭಿವೃದ್ಧಿಯ ಹೆಸರಿನಲ್ಲಿ ಮೇಲಣ ಆಧಾರತತ್ತ್ವಗಳನ್ನು ಬಲಿಗೊಟ್ಟು ಆಡಂಬರದ ಅಥವಾ ವಿನೂತನವೆನಿಸುವ ಯೋಜನೆಗಳ ಜಾಡನ್ನು ಹಿಡಿಯುವುದು ನಿರರ್ಥಕವೇ ಆಗುತ್ತದೆ, ಹಾನಿಕಾರಕವೂ ಆಗುತ್ತದೆ. ಕ್ಷಿಪ್ರಪ್ರಗತಿಯ ಹೆಸರಿನಲ್ಲಿ ಶಾಶ್ವತ ಸಂಪನ್ಮೂಲಗಳನ್ನು ಬಲಿಗೊಡುವುದು ಸತರ್ಕ ಅಭಿವೃದ್ಧಿನೀತಿ ಎನಿಸಲಾರದು. (`ಬಂಗಾರದ ಮೊಟ್ಟೆ’ ಇಡುವ ಕೋಳಿಯ ಕಥೆಯನ್ನು ನೆನೆಯಬಹುದು.) ಸುಭದ್ರವಾದ ತಾತ್ತ್ವಿಕ ಅಧಿಷ್ಠಾನವೂ ಸರ್ವಹಿತದೃಷ್ಟಿಯೂ ಇದ್ದಲ್ಲಿ ಮಾತ್ರ ಸುಸ್ಥಿರ ಅಭ್ಯುದಯವು ಶಕ್ಯವಾದೀತು. `ಜಿನುಗು’ವಾದದಂತಹ ಭ್ರಮೆಗಳಿಂದ ಮೊದಲು ಹೊರಬರಬೇಕಾಗಿದೆ. ಸುಸ್ಥಿರ ಅಭ್ಯುದಯವು ಸಾಧ್ಯವಾಗಬೇಕಾದರೆ ತಾತ್ತ್ವಿಕ ದಾರ್ಢ್ಯವೂ ಸುವ್ಯವಸ್ಥ ಪ್ರಯತ್ನಸಾತತ್ಯವೂ ಜನಸಾಮಾನ್ಯಾಭಿಮುಖತೆಯೂ ಇರಬೇಕಾಗುತ್ತದೆ. ಮೇಲೆ ಪ್ರಸ್ತಾವಿಸಿದಂತೆ ಅಮೆರಿಕದಂತಹ ದೇಶಗಳಲ್ಲಿ ದ್ವಿಪಕ್ಷೀಯ ವ್ಯವಸ್ಥೆ ಇದ್ದು ಒಂದೊಂದು ಅವಧಿಯಲ್ಲಿ ಒಂದೊಂದು ಪಕ್ಷದ ಪ್ರತಿನಿಧಿಗಳಿಂದ ಸರ್ಕಾರವು ರಚಿತವಾಗಿದ್ದರೂ ಮೂಲಭೂತ ಆರ್ಥಿಕ ಧೋರಣೆಗಳ ವಿಷಯದಲ್ಲಿ ಆ ಪಕ್ಷಗಳ ನಡುವೆ ತೀವ್ರ ಅಭಿಪ್ರಾಯಭೇದಗಳೇನೂ ಇರುವುದಿಲ್ಲ. ಭಾರತದಲ್ಲಿ ಈ ಆನುಕೂಲ್ಯವು ಸದ್ಯಕ್ಕಂತೂ ಇಲ್ಲ.
ಬದುಕಿನ ‘ಸಹಜ ಲಯ’
ಇನ್ನೊಂದು ಸೂಕ್ಷ್ಮ ಸಂಗತಿಯೂ ಉಂಟು. ಸಾವಿರಾರು ವರ್ಷಗಳ ಪ್ರಯೋಗಗಳ ಫಲಿತವಾಗಿ ಒಂದು ಜನಸಮುದಾಯದ ಬದುಕಿನಲ್ಲಿಯೂ ಮಾನಸಿಕತೆಯಲ್ಲಿಯೂ ಒಂದು ಸಹಜ ಲಯ ಏರ್ಪಟ್ಟಿರುತ್ತದೆ. ಈ ಲಯಕ್ಕೆ ವ್ಯತಿರಿಕ್ತವಾಗಿ ಸಾಗುವ ಯೋಜನೆಗಳು ಸಾಫಲ್ಯ ಪಡೆಯಲಾರವು. ಈ ದೂರದೃಷ್ಟಿಯ ಹಿನ್ನೆಲೆಯಲ್ಲಿಯೆ `ಮಹಾಯಂತ್ರ ಪ್ರವರ್ತನ ಮಾಡಬಾರದು’ ಎಂದು ಸ್ಮೃತಿಗಳು ಸೂತ್ರಿಸಿದ್ದುದು. ಯೋಜನೆಗಳ ಗಾತ್ರ ಬೆಳೆದಷ್ಟೂ ದಕ್ಷತೆಯೂ ಮಿತವ್ಯಯವೂ ಕೈಗೂಡುತ್ತವೆ ಎಂಬ ಧೋರಣೆಗೆ ವಾಸ್ತವದಲ್ಲಿ ಆಧಾರವೇನಿಲ್ಲ. ಗಾತ್ರ ಬೆಳೆದಂತೆ ಹೊಸಹೊಸ ನಿರ್ವಹಣಾ ಸಮಸ್ಯೆಗಳು ಸೇರಿಕೊಳ್ಳುವುದಂತೂ ದಿಟ; ಅದಕ್ಷತೆ ಹೆಚ್ಚುವುದೂ ವಾಸ್ತವಾನುಭವ.
ಸರ್ವಾಧಿಕಾರವು ಅಮಲಿನಲ್ಲಿರುವ ಚೀನಾದ ಒಂದು ಉದಾಹರಣೆಯನ್ನೆ ನೋಡಬಹುದು. ಚೀನಾ ದೇಶ `ತ್ರೀ ಗಾರ್ಜಸ್’ ಎಂಬ ಬೃಹದ್ ದೈತ್ಯಾಕಾರದ ಅಣೆಕಟ್ಟನ್ನು ನಿರ್ಮಿಸಿತು. ಆ ಯೋಜನೆಯಿಂದ ದೇಶದ ಶೇ. ೭ರಷ್ಟು ವಿದ್ಯುತ್ತಿನ ಆವಶ್ಯಕತೆ ನೀಗುತ್ತದೆಂದು ಅಂದಾಜು ಮಾಡಲಾಗಿತ್ತು. ಆ ಯೋಜನೆಯ ಅಂತರ್ಗತ ರಿಜರ್ವಾಯರುಗಳು ಲಕ್ಷಾಂತರ ಎಕರೆ ಜಮೀನನ್ನು ಕಬಳಿಸಿದವು. ೧೫ ಲಕ್ಷ ಜನ ನಿರ್ವಾಸಿತರಾದರು. ಅಷ್ಟೆಲ್ಲ ಸಾಹಸ ಮಾಡಿಯೂ ಸಾಧಿಸಲಾದದ್ದು ಶೇ. ೨ರಷ್ಟು ವಿದ್ಯುದುತ್ಪಾದನೆಯಷ್ಟನ್ನೇ. (ಈ ಯೋಜನೆ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿತು ಎಂದು ಚೀನಾ ಸರ್ಕಾರ ಈಗ ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಿದೆ.)
ಜಗತ್ತಿನೆಲ್ಲೆಡೆ – ಭಾರತದಲ್ಲಿಯೂ – ಇಂತಹ ಅನುಭವಗಳು ವಿಪುಲವಾಗಿವೆ.
ಪರಿಸರಕಾಲುಷ್ಯ
ಭಾರತದ ಜನತೆಯೇನೊ ಸರ್ಕಾರದ ಸದಿಚ್ಛೆಯಲ್ಲಿಯೂ ಭರವಸೆಯಲ್ಲಿಯೂ ವಿಶ್ವಾಸವನ್ನಿರಿಸಲು ಸಿದ್ಧರಿರುತ್ತಾರೆ. ಅದರೆ ಪ್ರಕೃತಿನಿಯಮಗಳನ್ನು ಅಲ್ಲಗಳೆಯಲಾದೀತೆ? ಸುಸಂಕಲ್ಪಿತ ಯೋಜನೆಗಳೂ ಕಾರ್ಯಾನ್ವಯದ ಸ್ತರದಲ್ಲಿ ಮುಗ್ಗರಿಸಿವೆ ಎಂಬುದೇ ಈವರೆಗಿನ ಅನುಭವವಾಗಿದೆ. ಪರಿಸರಕಾಲುಷ್ಯ, ಜಲಮೂಲಪ್ರದೂಷಣ, ಶಬ್ದಕಾಲುಷ್ಯ – ಎಲ್ಲದಕ್ಕೂ ಸಂಬಂಧಿಸಿದಂತೆ ನಮ್ಮಲ್ಲಿ ಹಿಂದಿನಿಂದ ಎಷ್ಟೋ ಕಾಯದೆಗಳು ಗ್ರಂಥಸ್ಥವಾಗಿವೆ. ಆದರೆ ವಾಸ್ತವಾನುಭವ ಹೇಗಿದೆ? `ಕಟ್ಟಿದೆವು ನಾವು ಕಸದ ಬೀಡೊಂದನು’ ಎಂಬಂತೆಯೆ ಪಟ್ಟಣಗಳ ಪರಿಸ್ಥಿತಿಯಾಗಿದೆ. ಎಷ್ಟು ಮಾಲಿನ್ಯನಿಯಂತ್ರಣ ಮಂಡಳಿಗಳು ಇದ್ದು ಏನು ಪ್ರಯೋಜನವಾಗಿದೆ? ಹೆಚ್ಚಿನ ಸಂದರ್ಭಗಳಲ್ಲಿ ತಥಾಕಥಿತ ನಿಯಂತ್ರಕ ಸಂರಚನೆಗಳೇ ಕಾಲುಷ್ಯಮಯವಾಗಿವೆ.
ಕಳೆದ ನಾಲ್ಕೂವರೆ ದಶಕಗಳ ಪರಿಸರಸಂಬಂಧಿತ ಕಾನೂನುಗಳ ಅನುಸರಣೆಯ ಅನುಭವವನ್ನು ಪರಾಮರ್ಶಿಸಲು ರಚನೆಗೊಂಡಿದ್ದ ಟಿ.ಎಸ್.ಆರ್. ಸುಬ್ರಹ್ಮಣ್ಯಂ ಸಮಿತಿಯು ಈಗಿನ ಮಾಲಿನ್ಯನಿಯಂತ್ರಣ ಮಂಡಲಿಗಳನ್ನು ರದ್ದುಮಾಡಿ ಸ್ವತಂತ್ರ ರಾಷ್ಟ್ರೀಯ ಪರಿಸರನಿರ್ವಹಣಾ ಪ್ರಾಧಿಕಾರವನ್ನು ಏರ್ಪಡಿಸಿ ಪ್ರಸ್ತಾವಿತ ಯೋಜನೆಗಳ ಬಗೆಗೆ ಗುಣದೋಷ ವಿಮರ್ಶನಪೂರ್ವಕ ನಿರ್ಣಯದ ಅಧಿಕಾರವನ್ನು ಆ ಪ್ರಾಧಿಕಾರಕ್ಕೆ ವಹಿಸಬೇಕು – ಎಂದು ಶಿಫಾರಸು ಮಾಡಿದೆ. ಪರಿಸರಸಂಬಂಧಿತ ನಿಯಮಾವಳಿಗಳ ಅನುಸರಣೆಯ ತೀಕ್ಷ್ಣ ಉಸ್ತುವಾರಿಯ ಹೊಣೆಯನ್ನೂ ಆ ಪ್ರಾಧಿಕಾರಕ್ಕೆ ವಹಿಸಬೇಕೆಂದು ಸಮಿತಿಯು ಶಿಫಾರಸು ಮಾಡಿದೆ. ಪ್ರಾಕೃತಿಕ ಸಂಪನ್ಮೂಲಗಳ ಬಳಕೆದಾರರು ತಮ್ಮ ಉದ್ಯಮದಿಂದ ಪರಿಸರದ ಮೇಲೆ ಆಗುವ ಪರಿಣಾಮಗಳಿಗೆ ಪರಿಹಾರವನ್ನು (`ಎನ್ವಿರನ್ಮೆಂಟಲ್ ರಿಕನ್ಸ್ಟ್ರಕ್ಷನ್ ಕಾಸ್ಟ್’) ಸಲ್ಲಿಸಬೇಕೆಂದೂ ಸಮಿತಿಯ ಶಿಫಾರಸು ಇದೆ.
‘ಬಳಸಿ; ಉಳಿಸಿ’
ವಾಸ್ತವವಾಗಿ ಪರ್ಯಾವರಣ ಸಂರಕ್ಷಣೆಗೆ ವಿಶೇಷ ಕಾಯದೆಗಳ ಅಥವಾ ಸಂರಚನೆಗಳ ಆವಶ್ಯಕತೆಯೇನೂ ಇಲ್ಲ. ಪ್ರಕೃತಿಯ ಬಗೆಗೆ ಗೌರವಬುದ್ಧಿಯೂ ಸರ್ವಜನಹಿತ ದೃಷ್ಟಿಯೂ ಇದ್ದಲ್ಲಿ ಹಳೆಯ ಆಧಾರರೂಪದ ಕಾನೂನುಗಳೇ ಪರ್ಯಾಪ್ತವಿವೆ. ಸಮಸ್ಯೆಯುಂಟಾಗಿರುವುದು ಬಲಿಷ್ಠರು ಸ್ವಾರ್ಥದೃಷ್ಟಿಯಿಂದ ನ್ಯಾಯಾನುಗುಣ ರೀತಿನೀತಿಗಳನ್ನು ಉಲ್ಲಂಘಿಸುತ್ತಿರುವುದರಿಂದಲೇ. ಆ ವರ್ಗದವರನ್ನು ಹೆಚ್ಚು ಉತ್ತರಬಾಧ್ಯರನ್ನಾಗಿ ಮಾಡಬೇಕಾದುದು ಅವಶ್ಯವಿದೆ. ಅದಕ್ಕೆ ಪ್ರತಿಯಾಗಿ ಅವರಿಗೆ ಹೆಚ್ಚಿನ ಪೋಷಣೆಯನ್ನು ಒದಗಿಸುವ ದಿಕ್ಕಿನಲ್ಲಿಯೆ ಧೋರಣೆಗಳು ಜಾರಿಯಾಗುತ್ತಿವೆ. ಅಭಿವೃದ್ಧಿಕ್ಷೇತ್ರದ ಸಮೀಪದೃಷ್ಟಿಯ `ಪರಿಹಾರ’ಗಳೇ ಸಮಸ್ಯೆಯನ್ನು ಉಲ್ಬಣಗೊಳಿಸಿರುವುದು. ಹೊಸ ಕಾಯದೆಗಳನ್ನು ರೂಪಿಸುವುದಾದಲ್ಲಿ ಬಲಿಷ್ಠವರ್ಗಗಳವರ ಸ್ವಾರ್ಥಾನುಸಂಧಾನವನ್ನು ಅನಾಕರ್ಷಕವೆನಿಸುವ ಮಟ್ಟದ ಅಧಿಕಪ್ರಮಾಣದ ದಂಡವನ್ನು ವಿಧಿಸಿ ಅದನ್ನು ಕಠಿಣವಾಗಿ ಅನುವರ್ತಿಸುವುದು ಅತಾರ್ಕಿಕವೆನಿಸದು.
ಬದುಕಿಗೆ ಆಧಾರವಾಗಿರುವಮಟ್ಟಿಗೆ ಪ್ರಾಕೃತಿಕ ಸಂಪನ್ಮೂಲಗಳ ಬಳಕೆ ಅನಿವಾರ್ಯವೇ ಆಗಿದೆ. ಆದರೆ ಪ್ರಕೃತಿಯು ಇರುವುದೇ ಮಾನವಭೋಗಕ್ಕಾಗಿ ಎಂಬ ಸೆಮೆಟಿಕ್ ಮೂಲದ ಧೋರಣೆಯ ಅನುಸರಣೆಯೇ ಈಗಿನ ವಿಷಮಸ್ಥಿತಿಯನ್ನು ನಿರ್ಮಿಸಿರುವುದು. ಈ ತಥ್ಯದ ಅರಿವು `ಆಧುನಿಕ’ರಲ್ಲಿ ಇನ್ನೂ ಮೂಡಬೇಕಾಗಿದೆ. ಪರಿಸರಧ್ವಂಸಜನಿತ ಸಮಸ್ಯೆಗಳನ್ನು ಈಗಲೂ ಕೇವಲ ವ್ಯವಸ್ಥಾತ್ಮಕವಾಗಿಯೂ ತಂತ್ರಜ್ಞಾನಾಧಾರಿತವಾಗಿಯೂ ತಥೋಕ್ತ ತಜ್ಞರು ಪರಾಮರ್ಶಿಸುತ್ತಿರುವ ಆಭಾಸವನ್ನು ನಾವು ಕಾಣುತ್ತಿದ್ದೇವೆ. ಮಾನಸಿಕ ಮೂಲದ ಸಮಸ್ಯೆಗಳಿಗೆ ಯಾಂತ್ರಿಕ ಬಾಹ್ಯ ಸಂರಚನೆಗಳು ಪರಿಹಾರವನ್ನು ನೀಡಲಾರವು.
ಅಭಿವೃದ್ಧಿನೀತಿಯನ್ನೂ ಪರಿಸರಸ್ವಾಸ್ಥ್ಯರಕ್ಷಣೆಯನ್ನೂ ಸಮನ್ವಯಗೊಳಿಸಿದಲ್ಲಿ ಮಾತ್ರ ಸುಸ್ಥಿರ ಅಭ್ಯುದಯವು ಸಾಧ್ಯವಾದೀತು. ಇದಕ್ಕೆ ಬೇಕಾದ ಸೂಕ್ಷ್ಮಗ್ರಹಣವನ್ನು ಬಂಡಿಜಾಡಿನ ಅಧಿಕಾರವರ್ಗದಿಂದ ನಿರೀಕ್ಷಿಸಲಾಗದು.
ಕೃಷಿಕ್ಷೇತ್ರವು ಲಾಭಕಾರಿಯಲ್ಲವೆಂಬ ಮತ್ತು ಅದು ವೇಗದ ಆರ್ಥಿಕ ಪ್ರಗತಿಗೆ ಪ್ರತಿಬಂಧಕವೆಂಬ ಆಶಯದ ಅಭಿಪ್ರಾಯಗಳನ್ನು, ಇತ್ತೀಚೆಗೂ, ಅಧಿಷ್ಠಿತ ವಕ್ತಾರರೇ ವ್ಯಕ್ತಮಾಡಿರುವುದು ದುರದೃಷ್ಟಕರ. (ಇದರೊಡಗೂಡಿ ಗಮನಿಸಬೇಕಾದ ಸಂಗತಿ: ಕೃಷಿಕ್ಷೇತ್ರವು ಶೇ. ೫೦ರಷ್ಟು ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ. ಉದ್ಯಮಕ್ಷೇತ್ರವು ಉದ್ಯೋಗವನ್ನು ನೀಡಿರುವುದು ಶೇ. ೨೦ರಷ್ಟು ಜನರಿಗೆ ಮಾತ್ರ.)
ತೀವ್ರವೇಗದ ಅಭಿವೃದ್ಧಿಯ ಹೆಸರಿನಲ್ಲಿ ಆಧಾರತತ್ತ್ವಗಳನ್ನು ಬಲಿಗೊಟ್ಟು ಆಡಂಬರದ ಅಥವಾ ವಿನೂತನವೆನಿಸುವ ಯೋಜನೆಗಳ ಜಾಡನ್ನು ಹಿಡಿಯುವುದು ನಿರರ್ಥಕವೇ ಆಗುತ್ತದೆ, ಹಾನಿಕಾರಕವೂ ಆಗುತ್ತದೆ.
ಯೋಜನೆಗಳಲ್ಲಿ ಸಾತತ್ಯವಿರಲಿ
ಯಾವಾವುದೊ ಘೋಷಿತ ಯೋಜನೆಗಳು ಸದಾಶಯದವೇ ಆಗಿರುವವೊಲ್ಲವೇಕೆ. ಮುಖ್ಯಸಂಗತಿಯೆಂದರೆ ಸರ್ಕಾರವೆಂಬುದೂ ಆಡಳಿತವೆಂಬುದೂ ಈಗಷ್ಟೆ ಹೊಸದಾಗಿ ಜನ್ಮತಳೆದಿರುವುದೇನಲ್ಲ. ಹೊಸಹೊಸ ನುಡಿಗಟ್ಟಿನ ಘೋಷಣೆಗಳು ಹೊಸವಲ್ಲ. ಹಿಂದೆ ವಿಜೃಂಭಿಸಿದ ಯೋಜನೆಗಳು ಎಷ್ಟು ಫಲಕಾರಿಯಾದವು ಎಂಬುದನ್ನೂ ಜನತೆ ನೋಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಹೊಸ ಮಂಡನೆಯನ್ನು ಜನತೆಯು ಹಿಂದಿನ ಅನುಭವದ ಆಧಾರದ ಮೇಲೆ ಪರಾಮರ್ಶಿಸಬೇಕಾದುದು ಸಹಜ. ಕಾರ್ಯವಂತಿಕೆಯು ವರ್ತನೆಯಲ್ಲಿ ಪ್ರತಿಫಲಿತವಾದಾಗಲೇ ಜನರು ಒಪ್ಪಿಯಾರು. ಸ್ವಾತಂತ್ರ್ಯಪ್ರಾಪ್ತಿಯಾದಾಗಿನಿಂದ ಈಚಿನ ಆರೂವರೆ ದಶಕಗಳಲ್ಲಿ `ಅಭಿವೃದ್ಧಿ’ ಯೋಜನೆಗಳಿಗೆಂದು ಸರ್ಕಾರವು ೬.೧ ಕೋಟಿ ಎಕರೆಯಷ್ಟು ಜಮೀನನ್ನು ವಶಪಡಿಸಿಕೊಂಡಿದೆ. ಸುಮಾರು ೬ ಕೋಟಿಯಷ್ಟು ಜನ ನಿರ್ವಾಸಿತರಾಗಿದ್ದಾರೆ. ಇದೆಲ್ಲದರ `ಆಡಿಟ್’ ಆಗಿದೆಯೆ?
ಜಪಾನಿನಲ್ಲಿ ಒಂದು ವಿಮಾನನಿಲ್ದಾಣಕ್ಕೆ ಅವಶ್ಯವಿದ್ದ ಜಮೀನನ್ನೂ ಸರ್ಕಾರೀಕರಿಸದೆ ಸುದೀರ್ಘ ಸಂಧಾನಗಳಾದ ಮೇಲೆ ಮೂಲಮಾಲಿಕರಿಂದ ಹಣಕೊಟ್ಟು ಖರೀದಿ ಮಾಡಲಾಯಿತು. ೨೦೦೮-೨೦೧೦ರ ಅಲ್ಪ ಅವಧಿಯಲ್ಲಿ ಜಮೀನು ಸರ್ಕಾರೀ ಕರಣದ ೫೨೫ ಪ್ರಕರಣಗಳು ನ್ಯಾಯಾಲಯದ ಕಟ್ಟೆಯನ್ನು ಏರಿದ್ದವೆಂಬುದರಿಂದ ಈ ವ್ಯವಹಾರದ ಜಟಿಲತೆಯನ್ನು ಊಹಿಸಬಹುದು.
ಸರ್ಕಾರಗಳು ನ್ಯಾಯವ್ಯವಸ್ಥಾತೀತಗಳಲ್ಲ ಎಂಬುದನ್ನು ಮೊತ್ತಮೊದಲು ಅಂಗೀಕರಿಸಬೇಕು. ಖಾಸಗಿ ಕಂಪೆನಿಗಳಿಗೆ ಅನುಕೂಲಕರವಾಗಿದ್ದ ಜಮೀನುಗಳನ್ನು ಒಡಿಶಾ ಸರ್ಕಾರವು ಬಲಾತ್ಕಾರದಿಂದ (`Emergency ‘ ನಿಯಮಗಳನ್ನು ಅನ್ವಯಿಸಿ) ವಶಪಡಿಸಿಕೊಂಡಿತ್ತು.
ಕೃಷಿಕ್ಷೇತ್ರಕ್ಕೂ ಉದ್ಯಮಕ್ಷೇತ್ರಕ್ಕೂ ನಡುವೆ ಹೆಚ್ಚಿನ ಸಮತೋಲವನ್ನು ತರಬೇಕಾದುದರ ಅಗತ್ಯವಿದೆ. ಕಳೆದ ಅರ್ಧ ಶತಮಾನದ ವಾಸ್ತವಾನುಭವವನ್ನು ಅಲಕ್ಷಿಸಲಾಗದು.