ಈಚೆಗೆ ನೊಬೆಲ್ ನೀರಿನ ಪ್ರಶಸ್ತಿ ಎಂದು ಪರಿಚಿತವಾದ ಸ್ಟಾಕ್ಹೋಮ್ ಜಲಪ್ರಶಸ್ತಿಗೆ ಭಾಜನರಾದ ರಾಜೇಂದ್ರಸಿಂಗ್. ಸದಾ ನೀರಿನ ಸಮಸ್ಯೆಯಿಂದ ಬಳಲುವ ರಾಜಸ್ಥಾನದ ಆಳ್ವಾರ್ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಸಿಂಗ್ ೧,೦೦೦ಕ್ಕೂ ಅಧಿಕ ಹಳ್ಳಿಗಳನ್ನು ನೀರಿನ ಸಮಸ್ಯೆಯಿಂದ ಮುಕ್ತಗೊಳಿಸಿದ್ದಾರೆ. ಬತ್ತಿಹೋಗಿದ್ದ ಐದಾರು ನದಿಗಳನ್ನು ವರ್ಷವಿಡೀ ಹರಿಯುವಂತೆ ಮಾಡಿದ್ದಾರೆ. ‘ಭಾರತದ ನೀರಿನ ಮನುಷ್ಯ’ (Water-man of India) ಎಂದು ಜಗತ್ತಿನಲ್ಲೇ ಪ್ರಸಿದ್ಧರಾದ ರಾಜೇಂದ್ರಸಿಂಗ್ ಅಂತಾರಾಷ್ಟ್ರೀಯ ಮ್ಯಾಗ್ಸೇಸೇ೦ ಪ್ರಶಸ್ತಿ ಪುರಸ್ಕೃತರೂ (೨೦೦೧) ಹೌದು. ತಮ್ಮ ಎನ್ಜಿಓ ‘ತರುಣ ಭಾರತ ಸಂಘ’ದ ಸಹಕಾರದೊಂದಿಗೆ ಸಿಂಗ್ ೮,೦೦೦ಕ್ಕೂ ಹೆಚ್ಚು ಜೊಹಾಡ್(ಮದಕ)ಗಳನ್ನು, ಕಿಂಡಿ ಅಣೆಕಟ್ಟುಗಳನ್ನು ರಚಿಸಿ, ಮಳೆನೀರು ಇಂಗಿಸಿ ಈ ಸಾಧನೆಯನ್ನು ಮಾಡಿದ್ದಾರೆ.
ಭಾರತದಲ್ಲಿ ನೀರಿನ ಪೂರೈಕೆ ಹಾಗೂ ಬೇಡಿಕೆಯ ನಡುವಣ ಅಂತರ ಮಿತಿಮೀರಿದ ಪ್ರಮಾಣದಲ್ಲಿ ಹೆಚ್ಚಾಗಲಿದ್ದು, ಇನ್ನು ಹತ್ತೇ ವರ್ಷಗಳಲ್ಲಿ, ಅಂದರೆ ೨೦೨೫ರ ವೇಳೆಗೆ ದೇಶದಲ್ಲಿ ನೀರಿನ ತೀವ್ರ ಅಭಾವ ಉಂಟಾಗಲಿದೆ ಎಂದು ಇಎ ವಾಟರ್ ಎನ್ನುವ ನೀರಿನ ಕ್ಷೇತ್ರದ ಒಂದು ಸಲಹಾ ಸಂಸ್ಥೆ ನಡೆಸಿರುವ ಅಧ್ಯಯನವು ಎಚ್ಚರಿಸಿದೆ ಎಂದು ಇದೇ ಮೇ ೨೫ರ ದಿನಪತ್ರಿಕೆಗಳು ವರದಿ ಮಾಡಿವೆ.
ನೀರಾವರಿಗಾಗಿ ಶೇ. ೭೦ ಮತ್ತು ಗೃಹೋಪಯೋಗಿ ಬಳಕೆಗಾಗಿ ಶೇ. ೮೦ರಷ್ಟು ಮಂದಿ ಅಂತರ್ಜಲವನ್ನು ಅವಲಂಬಿಸಿದ್ದಾರೆ. ಆದರೆ ಈಚಿನ ವರ್ಷಗಳಲ್ಲಿ ಅಂತರ್ಜಲ ಭಾರೀ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಜನರ ಆದಾಯ ಹೆಚ್ಚಳ, ಸೇವೆ ಹಾಗೂ ಕೈಗಾರಿಕಾ ವಲಯಗಳ ವಹಿವಾಟು ಹೆಚ್ಚಿರುವ ಹಿನ್ನೆಲೆಯಲ್ಲಿ ಮನೆಬಳಕೆ ಮತ್ತು ಕೈಗಾರಿಕೆಗಳಿಗೆ ಬೇಕಾದ ನೀರಿನ ಪ್ರಮಾಣದಲ್ಲಿ ತೀವ್ರ ಏರಿಕೆಯಾಗಿದೆ ಎಂದು ಅಧ್ಯಯನ ತಿಳಿಸಿದೆ.
ಸಮಸ್ಯೆ ಕಣ್ಮುಂದೆ ಗೋಚರಿಸುತ್ತಿದೆ; ಸರಿ. ಆದರೆ ಅದಕ್ಕೆ ನಮಗೆ ತತ್ಕ್ಷಣ ತೋರುವ ಪರಿಹಾರ ಮಾತ್ರ ದೇಶವಿಂದು ಹೊರಟಿರುವ ಬೇಸರ ತರಿಸುವ ಮಾರ್ಗವನ್ನು ಸೂಚಿಸುತ್ತದೆ. “ಇದು ಅಂತರರಾಷ್ಟ್ರೀಯ ಕಂಪೆನಿಗಳಿಗೆ ಬಂಡವಾಳ ಹೂಡಿಕೆಗೆ ದೊಡ್ಡ ಅವಕಾಶವನ್ನು ಒದಗಿಸಿದೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ಜಲಕ್ಷೇತ್ರದಲ್ಲಿ ಕೆನಡಾ, ಇಸ್ರೇಲ್, ಜರ್ಮನಿ, ಇಟೆಲಿ, ಅಮೆರಿಕ, ಚೀನಾ ಹಾಗೂ ಬೆಲ್ಜಿಯಂನಂತಹ ದೇಶಗಳಿಂದ ಸುಮಾರು ೮೨ ಸಾವಿರ ಕೋಟಿ ರೂ. ಹೂಡಿಕೆಯಾಗುವ ನಿರೀಕ್ಷೆಯಿದೆ” ಎಂದು ಕೂಡ ವರದಿ ತಿಳಿಸಿದೆ.
ಸಮಸ್ಯೆಗೆ ಪರಿಹಾರ ಎಷ್ಟೊಂದು ಸುಲಭ, ಅಲ್ಲವೆ? ಪ್ರಾಯಶಃ ಜಾಗತೀಕರಣವನ್ನು ಇಷ್ಟೊಂದು ಅಕ್ಷರಶಃ ಪಾಲಿಸಬಹುದಾದ ದೇಶ ಬೇರೆ ಯಾವುದೂ ಇಲ್ಲವೇನೋ! ಇನ್ನೂ ಒಂದು ತಮಾಷೆ ಎಂದರೆ, ದೇಶಕ್ಕೆ ಹೊರಗಿನಿಂದ ಹೂಡಿಕೆಯ ರೂಪದಲ್ಲಿ ೮೨ ಸಾವಿರ ಕೋಟಿ ರೂ. ಬರುತ್ತದೆ ಎಂದು ನಾವು ಸಂಭ್ರಮ ಪಡುತ್ತೇವೆ ಅನಿಸುತ್ತದೆ. ಬರುವ ಆ ೮೨ ಸಾವಿರ ಕೋಟಿ ರೂ.ಗಳ ಇನ್ನೊಂದು ಮುಖ ನಮಗೆ ಗೊತ್ತಿದೆಯೆ? ನಾವು ಆ ಕುರಿತು ಚಿಂತಿಸಿದ್ದೇವೆಯೆ? ಅಷ್ಟು ಹಣ ಹೂಡಿದವರು ಲಾಭದ ರೂಪದಲ್ಲಿ ಈ ದೇಶದಿಂದ ಮತ್ತೆಷ್ಟನ್ನು ಒಯ್ಯಬಹುದು? ಅವರು ಲಾಭ ಮಾಡಿಕೊಳ್ಳುವುದು ಹೇಗೆ? ನಮ್ಮ ದೇಶದ ಜನತೆಗೆ ನೀರನ್ನು ಮಾರಾಟ ಮಾಡಿಯೆ ಅಲ್ಲವೆ? ನಮ್ಮ ಜಲಸಂಪನ್ಮೂಲಗಳನ್ನೆಲ್ಲ ಅನ್ಯರಿಗೆ ವಹಿಸಿಕೊಟ್ಟು ನಾವು ಕೈಕಟ್ಟಿ ಕುಳಿತುಕೊಳ್ಳುವುದು ಎಷ್ಟು ಸರಿ ಮತ್ತು ಸುರಕ್ಷಿತ? ಮುಖ್ಯವಾಗಿ ದೇಶದ ಸಮಸ್ಯೆಗಳಿಗೆಲ್ಲ ಹೊರಗೇ ಪರಿಹಾರ ಹುಡುಕುತ್ತಾ ಹೋಗುವ ಈ ಮನಃಸ್ಥಿತಿಗೆ ಏನೆನ್ನಬೇಕು? ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗಟ್ಟಿಯಾಗಿ ಕೇಳಿಬಂದ ಸ್ವದೇಶೀ ಚಿಂತನೆಯಿಂದ ನಾವೀಗ ಯು-ಟರ್ನ್ ತೆಗೆದುಕೊಂಡಿದ್ದೇವೆಯೆ?
ವಿದೇಶೀ ಬೇಕಿಲ್ಲ
ನೀರಿನ ವಿಷಯದಲ್ಲಂತೂ ಇಂತಹ ಚಿಂತನೆ ತೀರಾ ಅನುಚಿತ ಮತ್ತು ಅಪ್ರಸ್ತುತ ಎಂದು ಹೇಳಲೇಬೇಕು. ಏಕೆಂದರೆ ವಿಶಾಲವಾದ ಮತ್ತು ಬಹುಬಗೆಯ ನೈಸರ್ಗಿಕ ಪ್ರದೇಶಗಳಿರುವ ಈ ದೇಶದಲ್ಲಿ ಜಲಸಂರಕ್ಷಣೆಗೆ ನೂರಲ್ಲ; ಸಾವಿರಾರು ಪಾರಂಪರಿಕ ಚಿಂತನೆಗಳು, ಕಾರ್ಯವಿಧಾನಗಳು ಇರಬಹುದು. ಅದರಲ್ಲಿ ಕೇವಲ ಒಂದನ್ನು ಹಿಡಿದುಕೊಂಡು ರಾಜಸ್ಥಾನದ ಪೂರ್ವಭಾಗದಲ್ಲಿ ಒಂದಷ್ಟು ಕೆಲಸ ಮಾಡಿದ ರಾಜೇಂದ್ರಸಿಂಗ್ ಅವರನ್ನು ಜಗತ್ತು `Waterman of India’ (ಭಾರತದ ನೀರಿನ ಮನುಷ್ಯ) ಎಂದು ಗುರುತಿಸಿದೆ. ೨೦೦೧ರಷ್ಟು ಹಿಂದೆಯೇ ಪ್ರತಿಷ್ಠಿತ ಅಂತರರಾಷ್ಟ್ರೀಯ ಮ್ಯಾಗ್ಸೇಸೇ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿತ್ತು. ಇದೀಗ ಕಳೆದ ಮಾರ್ಚ್ನಲ್ಲಿ ಅವರಿಗೆ ನೀರಿಗೆ ಸಂಬಂಧಿಸಿ ಪರ್ಯಾಯ ನೊಬೆಲ್ ಪ್ರಶಸ್ತಿ ಎನಿಸಿದ ಸ್ಟಾಕ್ಹೋಮ್ ಅಂತರರಾಷ್ಟ್ರೀಯ ಜಲಸಂಸ್ಥೆಯ ಪ್ರಶಸ್ತಿ ಲಭಿಸಿದೆ. ಆದರೆ ಆಧುನಿಕ ಭಗೀರಥನಂತೆ ತೋರುವ ಅವರ ಸಾಧನೆ ನಮ್ಮ ದೇಶದ ನೀತಿನಿರೂಪಕರಿಗೆ ಪಥಪ್ರದರ್ಶಕ ಎನಿಸುವುದಿಲ್ಲ. ರಾಜೇಂದ್ರಸಿಂಗ್ ಕೇವಲ ಪ್ರಶಸ್ತಿಗೆ ಸೀಮಿತರಾಗುತ್ತಾರೆ. ಸಿಂಗ್ ಅವರೇ ಸರ್ಕಾರವನ್ನು ಈ ಸಂಬಂಧ ಎಚ್ಚರಿಸಿದ್ದಿದೆ. “ಜಲಸಂರಕ್ಷಣೆಗೆ ಸಂಬಂಧಿಸಿ ನಾನು ಹಲವು ರೀತಿಯ ಪ್ರಯೋಗಗಳನ್ನು ಮಾಡಿದ್ದೇನೆ; ಮತ್ತು ಅಂತರ್ಜಲದ ಮಟ್ಟವನ್ನು ಎತ್ತರಿಸುವುದೇ ನಮ್ಮ ಪ್ರಮುಖ ಗುರಿ ಆಗಬೇಕು ಎಂಬುದನ್ನು ಕಂಡುಕೊಂಡಿದ್ದೇನೆ” ಎಂದ ಅವರು, ನೀರಿನ ಸಮಸ್ಯೆಗೆ ದೇಶದ ಜನ ಕೂಡಲೆ ಗಮನಕೊಡಬೇಕು; ಇಲ್ಲವಾದರೆ ತುಂಬ ತಡವಾದೀತು ಎಂದು ಎಚ್ಚರಿಸಿದ್ದಾರೆ. “ಇಂದು ನಾವು ಹೋರಾಡಬೇಕಾದದ್ದು ಸಂಪನ್ಮೂಲಗಳನ್ನು ಮಾರುವುದರ ವಿರುದ್ಧ ಮತ್ತು ಮಾರುಕಟ್ಟೆ ನಮ್ಮ ಮನಸ್ಸನ್ನು ಆಳುವುದರ ವಿರುದ್ಧ” ಎಂದಿದ್ದಾರೆ.
`ನೀರಿನ ಮನುಷ್ಯ’ ರಾಜೇಂದ್ರಸಿಂಗ್ ಅವರ ಜೀವನ ಮತ್ತು ಸಾಧನೆಗಳಲ್ಲಿ ನಮಗೆ ಯಾವ ಸಂದೇಶವಿದೆ ಎಂಬುದನ್ನು ಪ್ರತಿಷ್ಠಿತ ಸ್ಟಾಕ್ಹೋಮ್ ಪ್ರಶಸ್ತಿಯ ಹಿನ್ನೆಲೆಯಲ್ಲಿ ಗಮನಿಸಬಹುದು. ದೇಶದ ನೀರಿನ ಸಮಸ್ಯೆಯ ವಿರುದ್ಧ ಹೋರಾಡಬೇಕು ಎಂದು ಅವರೇನೂ ಆರಂಭದಲ್ಲೇ ಸಂಕಲ್ಪಿಸಿದವರಲ್ಲ. ಕ್ರಮೇಣ ಅದರಲ್ಲಿ ಹೇಗೆ ಮುಂದುವರಿದರು, ಯಾವ ಎತ್ತರಕ್ಕೆ ಏರಿದರು ಎಂಬುದು ನಿಜವಾಗಿಯೂ ಒಂದು ದಂತಕಥೆ ಎನಿಸಲು ಅರ್ಹವಾದ ಸಂದರ್ಭ ಎನ್ನಬಹುದು.
ಉತ್ತರಪ್ರದೇಶದ ಮೀರತ್ ಸಮೀಪದ ಬಾಗಪತ್ ಜಿಲ್ಲೆಯ ದೌಲಾದಲ್ಲಿ ೧೯೫೯ರಲ್ಲಿ ರಾಜೇಂದ್ರಸಿಂಗ್ ಜನಿಸಿದರು. ತಂದೆ ಮತ್ತು ತಾಯಿ ಎರಡೂ ಕಡೆಯಿಂದ ಜಮೀನ್ದಾರರ ಮನೆತನ. ತಂದೆ ಕೃಷಿಕರಾಗಿದ್ದು, ೬೦ ಎಕರೆಗೂ ಅಧಿಕ ಜಮೀನನ್ನು ನೋಡಿಕೊಳ್ಳುತ್ತಿದ್ದರು. ಏಳು ಜನ ಮಕ್ಕಳಲ್ಲಿ ರಾಜೇಂದ್ರ ಪ್ರಥಮ. ಬಾಲ್ಯದಲ್ಲಿ ಅವರಿಗೆ ಸಿಕ್ಕಿದ ಕೆಲವು ಪ್ರೇರಣೆಗಳಿಂದ, ಮುಖ್ಯವಾಗಿ ಎರಡು ಪ್ರೇರಣೆಗಳಿಂದ ಅವರು ಆ ರೀತಿ ರೂಪುಗೊಂಡರೆನ್ನಬಹುದು. ೧೯೭೪ರಲ್ಲಿ ರಾಜೇಂದ್ರಸಿಂಗ್ ಹೈಸ್ಕೂಲ್ ವಿದ್ಯಾರ್ಥಿ. ರಮೇಶ್ ಶರ್ಮ ಎನ್ನುವ ಗಾಂಧಿ ಶಾಂತಿ ಪ್ರತಿಷ್ಠಾನದ ಒಬ್ಬ ಸದಸ್ಯರು ಅವರ ಊರಿಗೆ ಬಂದು ಊರಿನ ಸುಧಾರಣೆಗೆ ಯತ್ನಿಸಿದರು; ಪೇಟೆಯನ್ನು ಸ್ವಚ್ಛ ಮಾಡಿದರು. ಊರಿನಲ್ಲೊಂದು ವಾಚನಾಲಯವನ್ನು ತೆರೆದರು; ಊರಿನ ಜನರ ಜಗಳಗಳನ್ನು ಪರಿಹರಿಸಲು ಶ್ರಮಿಸಿದರು. ಮದ್ಯಪಾನಕ್ಕೆ ಸಂಬಂಧಿಸಿ ಪುನರ್ವಸತಿ ಕೇಂದ್ರವೊಂದನ್ನು ತೆರೆದ ಆತ ಅದಕ್ಕೆ ರಾಜೇಂದ್ರನ ಸಹಕಾರ ತೆಗೆದುಕೊಂಡರು; ಸಾಮಾನ್ಯ ಜನರಿಗೆ ಸಹಾಯ ಮಾಡುವ ಒಂದು ಪ್ರೇರಣೆ, ಕಾರ್ಯವಿಧಾನ ರಾಜೇಂದ್ರನಿಗೆ ಅಲ್ಲಿ ದೊರೆಯಿತು.
ಎರಡನೇ ಪ್ರಭಾವ ಪ್ರತಾಪ್ಸಿಂಗ್ ಎನ್ನುವ ಶಾಲಾ ಅಧ್ಯಾಪಕರಿಂದ ಸಿಕ್ಕಿತು. ಅವರು ತರಗತಿಯ ಅನಂತರ ಮಕ್ಕಳ ಜೊತೆ ರಾಜಕೀಯ ಮತ್ತು ಸಾಮಾಜಿಕ ವಿಷಯಗಳನ್ನು ಚರ್ಚಿಸುತ್ತಿದ್ದರು. ಅದರಿಂದ ಯುವಕ ರಾಜೇಂದ್ರನಲ್ಲಿ ಸ್ವತಂತ್ರವಾಗಿ ಚಿಂತನೆ ನಡೆಸುವ ಪ್ರವೃತ್ತಿ ಬೆಳೆಯಿತು. ಸರ್ಕಾರದ ಬಗ್ಗೆ, ಅದು ಕೆಲಸ ಮಾಡುವ ರೀತಿಯ ಬಗ್ಗೆ ಆತ ಚಿಂತಿಸಿದ. ಸುಮಾರು ಅದೇ ಹೊತ್ತಿಗೆ ೧೯೭೫ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದರು. ಆಗ ರಾಜೇಂದ್ರಸಿಂಗ್ ಪ್ರಜಾಪ್ರಭುತ್ವ ಎಂದರೇನು, ಅದು ನಮಗೆ ಏಕೆ ಬೇಕು ಮುಂತಾಗಿ ಚಿಂತಿಸಿದ.
ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿದ ರಾಜೇಂದ್ರ ಬಾಗಪತ್ ಜಿಲ್ಲೆಯ ಬರೌತ್ನ ಭಾರತೀಯ ಋಷಿಕುಲ ಆಯುರ್ವೇದ ಮಹಾವಿದ್ಯಾಲಯಕ್ಕೆ ಸೇರಿ ಆಯುರ್ವೇದ ಔಷಧಿ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಪದವಿ ಗಳಿಸಿದ. ಬಳಿಕ ಅದೇ ಊರಿನ ಇನ್ನೊಂದು ಕಾಲೇಜಿಗೆ ಸೇರಿ ಕಲಿತು ಅಲಹಾಬಾದ್ ವಿಶ್ವವಿದ್ಯಾಲಯದಿಂದ ಹಿಂದಿ ಸಾಹಿತ್ಯದ ಎಂ.ಎ. ಪದವಿ ಗಳಿಸಿದ. ದೇಶದಲ್ಲಿ ಜಯಪ್ರಕಾಶ್ ನಾರಾಯಣ್ ಅವರ `ಸಂಪೂರ್ಣ ಕ್ರಾಂತಿ’ಯ ಚಳವಳಿ ನಡೆಯುತ್ತಿತ್ತು. ಅದರ ಭಾಗವಾಗಿ ರಚಿಸಿದ ಛಾತ್ರ ಯುವ ಸಂಘರ್ಷ ವಾಹಿನಿ ಸ್ಥಳೀಯ ಘಟಕದಲ್ಲಿ ಒಬ್ಬ ನಾಯಕನಾದ.
ಸರ್ಕಾರಿ ಸೇವೆಯಲ್ಲಿ
ವಿದ್ಯಾಭ್ಯಾಸ ಮುಗಿದ ಬಳಿಕ ರಾಜೇಂದ್ರಸಿಂಗ್ ೧೯೮೦ರಲ್ಲಿ ಸರ್ಕಾರಿ ಸೇವೆಗೆ ಸೇರಿದ. ಶಿಕ್ಷಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಸೇವಾ ಸ್ವಯಂಸೇವಕನಾದ; ಜೈಪುರದಲ್ಲಿ ಆತ ಕೆಲಸಕ್ಕೆ ಸೇರಿದ್ದು, ರಾಜಸ್ಥಾನದ ದೌಸಾ ಜಿಲ್ಲೆಯ ವಯಸ್ಕರ ಶಿಕ್ಷಣ ಶಾಲೆಗಳ ಉಸ್ತುವಾರಿಯನ್ನು ನೋಡಿಕೊಳ್ಳಬೇಕಿತ್ತು; ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದು ಬೇಸರ ತರಿಸುವ ಕೆಲಸವಾಗಿತ್ತು.
ಈ ನಡುವೆ ಯುವಕ ರಾಜೇಂದ್ರಸಿಂಗ್ ತರುಣ ಭಾರತ ಸಂಘ (ತಭಾಸಂ-ಟಿಬಿಎಸ್)ಕ್ಕೆ ಸೇರಿದ್ದ. ಅದು ಜೈಪುರ ವಿವಿಯಲ್ಲಿ ನಡೆದ ಒಂದು ಘಟನೆಯ ಸಂತ್ರಸ್ತರ ನೆರವಿಗಾಗಿ ವಿವಿಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸ್ಥಾಪಿಸಿದ ಒಂದು ಸಂಘಟನೆ. ಮೂರು ವರ್ಷ ಕಳೆಯುವಾಗ ಆತ ಅದರ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಸಂಘಟನೆ ಹಲವು ವಿಷಯಗಳನ್ನು ಎತ್ತಿಕೊಂಡು ಯಾವುದರಲ್ಲೂ ಪ್ರಭಾವ ಬೀರಲು ಅಶಕ್ತವಾಗಿತ್ತು. ಆ ಬಗ್ಗೆ ಸಿಂಗ್ ಪ್ರಶ್ನಿಸಿದಾಗ ಆಡಳಿತ ಮಂಡಳಿಯ ಎಲ್ಲರೂ ರಾಜೀನಾಮೆಯನ್ನು ನೀಡಿ ಸಂಘಟನೆಯನ್ನು ಸಿಂಗ್ಗೆ ಬಿಟ್ಟುಕೊಟ್ಟರು (೧೯೮೪). ಆಗ ರಾಜೇಂದ್ರಸಿಂಗ್ ಮೊದಲಾಗಿ ಎತ್ತಿಕೊಂಡ ಕೆಲಸ ಒಂದು ಅಲೆಮಾರಿ ಕಮ್ಮಾರರ ಗುಂಪಿಗೆ ಸಂಬಂಧಿಸಿದ್ದು. ಅದರಲ್ಲಿ ಆತ ಜನರಿಗೆ ನಿಕಟವಾಗಿದ್ದು ಕೆಲಸ ಮಾಡಬೇಕಾಯಿತು. ಆದರೆ ಕಚೇರಿ ಕೆಲಸ ಬೋರೆನಿಸುತ್ತಿತ್ತು. ಅಭಿವೃದ್ಧಿ ವಿಷಯದಲ್ಲಿ ಮೇಲಿನವರಿಗೆ ಆಸಕ್ತಿ ಇರಲಿಲ್ಲ. ಹೀಗಿರುವುದು ನಿಷ್ಫಲ ಎನ್ನಿಸಿ ರಾಜೇಂದ್ರಸಿಂಗ್ ಹುದ್ದೆಗೆ ರಾಜೀನಾಮೆ ನೀಡಿದರು.
ತರುಣ ಭಾರತ್ ಸಂಘ ರಾಜಸ್ಥಾನದ ಆಳ್ವಾರ್ನಲ್ಲಿ ನಿರ್ಮಿಸಿದ ಚಿಕ್ಕ ಅಣೆಕಟ್ಟು
ರಾಜೇಂದ್ರಸಿಂಗರ ಕಾರ್ಯದ ಫಲವಾಗಿ ಮರುಜೀವ ಪಡೆದ ಒಂದು ಸಣ್ಣ ನದಿ
ಆ ಬಗ್ಗೆ ಒಮ್ಮೆ ಕೇಳಿದಾಗ ಸಿಂಗ್, “ನನ್ನಲ್ಲಿದ್ದ ಯಾವುದೋ ಸಾಮಾಜಿಕ ಕ್ರೋಮೋಸೋಮ್ನಿಂದಾಗಿ ಇರಬೇಕು; ಜನರಿಗೆ ಉಪಯುಕ್ತವಾದ ಏನನ್ನಾದರೂ ಮಾಡಬೇಕು ಎನ್ನಿಸುತ್ತಿತ್ತು. ನಗರಗಳಲ್ಲಿ ನಾವು ಕಾಣುವ ಸಮಸ್ಯೆಗಳಿಗೆ ಹಳ್ಳಿಗಳು ಕುಸಿಯುತ್ತಿರುವುದೇ ಕಾರಣ ಅನ್ನಿಸುತ್ತಿತ್ತು. ಉಪಯುಕ್ತ ಮತ್ತು ಆಸಕ್ತಿದಾಯಕವಾದ ಏನನ್ನಾದರೂ ಮಾಡಬೇಕೆಂದು ಇತರ ನಾಲ್ವರ ಜೊತೆ ಊರು ಬಿಟ್ಟು ಹೊರಡಲು ನಿರ್ಧರಿಸಿದೆ. ಆಗ ಪತ್ನಿ ಮೀನಾ ಊರಿನಲ್ಲಿ ಇರಲಿಲ್ಲ. ಮನೆಯಲ್ಲಿ ಅವಳು ಸಂಗ್ರಹಿಸಿಟ್ಟ ಬಹಳಷ್ಟು ಸಾಮಾನುಗಳಿದ್ದವು. ಅದನ್ನೆಲ್ಲ ಒಟ್ಟು ೨೩ ಸಾವಿರ ರೂ.ಗಳಿಗೆ ಮಾರಿದ್ದಾಯಿತು.
ಎಲ್ಲಿಗೆ ಗೊತ್ತಿಲ್ಲ
“ಎಲ್ಲಿಗೆ ಹೋಗುವುದೆಂದು ಖಚಿತವಾಗಿ ನಮಗೇ ಗೊತ್ತಿರಲಿಲ್ಲ. ರಾಜಸ್ಥಾನದ ಒಳಭಾಗದ ಹಿಂದುಳಿದ ಯಾವುದಾದರೂ ಪ್ರದೇಶಕ್ಕೆ ಹೋಗಿ ಕೆಲಸ ಮಾಡಬೇಕು ಎಂದಷ್ಟೇ ಅನಿಸಿತ್ತು. ಜೊತೆಗೆ ತಭಾಸಂನ ನಾಲ್ವರು ಸ್ನೇಹಿತರಿದ್ದರು. ಒಂದು ಬಸ್ಸನ್ನೇರಿ ಕೊನೆಯ ಸ್ಟಾಪಿಗೆ ಐದು ಟಿಕೆಟ್ ಕೊಡಿ ಎಂದೆವು. ಕಂಡಕ್ಟರ್ ಏಕೆಂದು ಕೇಳಿದಾಗ ಏಕೆಂದು ನಮಗೂ ಗೊತ್ತಿರಲಿಲ್ಲ. ಬಸ್ಸು ಹಿಂದುಳಿದ ಪ್ರದೇಶಕ್ಕೆ ಹೋಗುತ್ತದೆ ಎಂದಷ್ಟೇ ಗೊತ್ತಿತ್ತು. ಬಸ್ಸಿಗೆ ಅಷ್ಟು ದೂರ ಹೋಗಲು ಐದು ತಾಸು ಬೇಕಾಯಿತು. ಏಕೆಂದರೆ ಮಧ್ಯೆ ಕೆಲವೆಡೆ ರಸ್ತೆಯೇ ಇರಲಿಲ್ಲ. ಅಂಥ ಕಡೆ ಇಳಿದುಬಿಡೋಣವಾ ಅನಿಸಿದ್ದೂ ಇತ್ತು. ಆದರೆ ನಮ್ಮಲ್ಲಿ ಒಮ್ಮತ ಮೂಡದ ಕಾರಣ ಬಸ್ಸಿನಿಂದ ಇಳಿಯಲಿಲ್ಲ; ಕೊನೆಯ ಸ್ಟಾಪ್ ತನಕವೂ ಹೋದೆವು.
“ಅದು ಆಲ್ವಾರ್ ಜಿಲ್ಲೆಯ ತಾನಾಗಳಿ ತಾಲೂಕಿನ ಕಿಶೋರಿ ಗ್ರಾಮ; ಅಂದು ಅಕ್ಟೋಬರ್ ೨, ೧೯೮೫. ಆಗ ಪಂಜಾಬಿನಲ್ಲಿ ಸಿಖ್ ಉಗ್ರರ ಹಿಂಸಾಕೃತ್ಯಗಳು ಜೋರಾಗಿದ್ದವು. ಊರಿನ ಜನ ನಾವು ಕೂಡ ಅಲ್ಲಿನ ಉಗ್ರರು ಅಥವಾ ಭಯೋತ್ಪಾದಕರು ಇರಬೇಕೆಂದು ನಮ್ಮನ್ನು ಸುತ್ತುವರಿದರು. ಒಬ್ಬ ಮುದುಕ, ಇಷ್ಟೊಂದು ಹಿಂದುಳಿದ ಬಡಹಳ್ಳಿಗೆ ಭಯೋತ್ಪಾದಕರೇಕೆ ಬರುತ್ತಾರೆ ಎಂದು ಕೇಳಿದ. ಪೇಟೆಗೆ ವಲಸೆ ಹೋದ ಕಾರಣ ಅಲ್ಲಿ ಯುವಕರು ಇರಲೇ ಇಲ್ಲ. `ಇಲ್ಲಿಗೇಕೆ ಬಂದಿರಿ?’ ಎಂದು ಜನ ಕೇಳಿದರು. `ಶಿಕ್ಷಣ ಮತ್ತು ಆರೋಗ್ಯ ಸೇವೆಯ ಕೆಲಸ ಮಾಡಲು ಬಂದೆವು’ ಎಂದೆವು. ಅವರಿಗೆ ಸಂಶಯ ಇದ್ದೇ ಇತ್ತು.
“ಆದರೂ ನಮಗೆ ಊರಿನ ಹನುಮಾನ್ ದೇವಾಲಯದಲ್ಲೊಂದು ಕೊಠಡಿ ಕೊಟ್ಟರು. ಅದು ಎಲ್ಲರಿಗೂ ಸಾಕಾಗುವಂತಿರಲಿಲ್ಲ. ಮೂವರು ರೂಮಿನ ಹೊರಗೆ ಮಲಗುತ್ತಿದ್ದೆವು. ವಾರ ದಾಟಿದಾಗ ಪೂಜಾರಿ ನಮ್ಮನ್ನು ಹೊರಗೆ ಹಾಕಿದ. ಆದರೆ ನಾವು ಊರವರೊಂದಿಗೆ ಸಾಕಷ್ಟು ಸಂಪರ್ಕ ಬೆಳೆಸಿದ್ದೆವು. ಇಲ್ಲಿಗೇಕೆ ಬಂದಿರಿ ಎಂದು ಜನ ನಮ್ಮನ್ನು ಪ್ರಶ್ನಿಸುವುದು ಮುಂದುವರಿದೇ ಇತ್ತು. ಸಾಮಾಜಿಕ ಕೆಲಸ ಮಾಡುವುದಕ್ಕೆ ಎಂದರೆ ಅವರು ಅಪಹಾಸ್ಯ ಮಾಡುತ್ತಿದ್ದರು” ಎನ್ನುವ ರಾಜೇಂದ್ರಸಿಂಗ್ ತಮ್ಮ ಅಹಂಕಾರ ದೂರವಾಗಲು ಅದರಿಂದ ಪ್ರಯೋಜನವಾಯಿತು ಎಂದಿದ್ದಾರೆ.
ಅಷ್ಟಾದರೂ ನಿಜವಾಗಿ ಏನು ಮಾಡಬೇಕೆಂದು ಅವರಿಗೆ ಗೊತ್ತಿರಲಿಲ್ಲ. ರಾಜೇಂದ್ರಸಿಂಗ್ಗೆ ಆಯುರ್ವೇದ ವೈದ್ಯಕೀಯ ಗೊತ್ತಿದ್ದ ಕಾರಣ ಸಮೀಪದ ಗೋಪಾಲಪುರದಲ್ಲಿ ಸ್ವಲ್ಪ ಆರೋಗ್ಯದ ಕೆಲಸ ಮಾಡಿದರು. ಆರು ತಿಂಗಳಾಗುವಾಗ ಒಂದುದಿನ ಸುಮಾರು ೬೦ ವರ್ಷ ವಯಸ್ಸಿನ ಮಂಗೂಲಾಲ್ ಪಟೇಲ್ ಎಂಬ ಹಿರಿಯ ವ್ಯಕ್ತಿ “ಶಿಕ್ಷಿತರಾದ ನೀವು ಮಾತನಾಡುವುದು ಮಾತ್ರ; ಕೈಯಿಂದ ಏನೂ ಮಾಡುವುದಿಲ್ಲ. ನಮ್ಮ ಹಳ್ಳಿಯ ಜನಕ್ಕೆ ಶಾಲೆಯೂ ಬೇಡ; ಔಷಧಿಯೂ ಬೇಡ. ಜನರಿಗೆ ಉಪಯೋಗವಾಗುವಂತಹ ಏನನ್ನಾದರೂ ಮಾಡುವುದಿದ್ದರೆ ಮೊದಲು ಹಾರೆ, ಪಿಕಾಸಿ, ಗುದ್ದಲಿ ತನ್ನಿ” ಎಂದು ನೇರಾನೇರ ಹೇಳಿದರು.
ಮಂಗೂಲಾಲ್ ಹೇಳಿದಂತೆ
ಇದನ್ನು ರಾಜೇಂದ್ರ ಗೆಳೆಯರಲ್ಲಿ ಹೇಳಿದಾಗ, ಅವರ ಕೂಟ ಒಡೆಯಿತು. ಇಬ್ಬರು “ನಾವು ಶಿಕ್ಷಿತರು; ನಿರ್ಧಾರ ಕೈಗೊಳ್ಳಬಲ್ಲೆವು. ಮಂಗೂಲಾಲ್ ಪಟೇಲರನ್ನು ಕೇಳಬೇಕಿಲ್ಲ” ಎಂದರು. ರಾಜೇಂದ್ರ `ಆತನಲ್ಲಿ ತಿಳಿವಳಿಕೆ ಇದೆ. ಅವರ ಮಾತು ಕೇಳುವುದರಲ್ಲಿ ತಪ್ಪಿಲ್ಲ’ ಎಂದರು. ಆ ಇಬ್ಬರು ಮರುದಿನ ಬೆಳಗ್ಗೆಯೇ ಜೈಪುರಕ್ಕೆ ಮರಳಿದರು. ಉಳಿದ ಇಬ್ಬರು “ಶಾಲೆಯಲ್ಲಿ ಪಾಠ ಮಾಡುತ್ತೇವೆ; ಆದರೆ ಗುದ್ದಲಿ, ಹಾರೆ ಹಿಡಿದು ಕೆಲಸ ಮಾಡಲಾರೆವು” ಎಂದರು. ಮಂಗೂಲಾಲ್ ಹೇಳಿದಂತೆ ಹಾರೆ, ಗುದ್ದಲಿ ತಂದ ರಾಜೇಂದ್ರಸಿಂಗ್ ಗುಡ್ಡದಲ್ಲಿ ಅಗೆಯುವ ಕೆಲಸ ಶುರು ಮಾಡುತ್ತಾ ಹೋದರು. ಊರಿನ ಯಾರೂ ಅವರೊಂದಿಗೆ ಸೇರಿಕೊಳ್ಳಲಿಲ್ಲ. ಯುವಕರು ಊರಲ್ಲಿರಲಿಲ್ಲ. ವೃದ್ಧ ಮಂಗೂಲಾಲ್ಗೆ ಆ ಕೆಲಸ ಸಾಧ್ಯವಿರಲಿಲ್ಲ.
“ತಾನು ಹೇಳಿದಂತೆ ಮಾಡಿದರೆ ಊರಿಗೆ ನೀರು ಸಿಗುತ್ತದೆಂದು ಆತ ಹೇಳಿದರು. ವೈಜ್ಞಾನಿಕವಾಗಿ ನನಗೆ ಸಮಾಧಾನವಾಗುವಂತೆ ಹೇಳಲು ಆತನಿಗೆ ಸಾಧ್ಯವಾಗದಿದ್ದರೂ ಆತನ ತಿಳಿವಳಿಕೆಯಲ್ಲಿ ನನಗೆ ನಂಬಿಕೆ ಇತ್ತು; ಆದ್ದರಿಂದ ನೆಲ ಅಗೆದೆ. ನಾನೊಬ್ಬ ಜಮೀನ್ದಾರರ ಮಗ. ನೀರಿನಿಂದ ಜಮೀನು ಹೇಗೆ ಫಲಭರಿತ ಆಗುತ್ತದೆಂದು ನನಗೆ ತಿಳಿದಿತ್ತು. ಆಲ್ವಾರ್ನ ನೆಲ ಫಲವತ್ತಾಗಿತ್ತು. ಆದರೆ ನೀರಿಲ್ಲದೆ ಬರಡಾಗಿತ್ತು. ಸುಮಾರು ೧೦೦ ವರ್ಷಗಳ ಹಿಂದೆ ಆಲ್ವಾರ್ನಲ್ಲಿ ಧಾನ್ಯದ ಮಾರುಕಟ್ಟೆ ಇತ್ತು. ಅಂದರೆ ಅಲ್ಲಿ ನೀರಿನ ಆಶ್ರಯ, ಬೆಳೆ ಇದ್ದಿರಲೇಬೇಕು” ಎಂದು ಅಭಿಪ್ರಾಯಪಟ್ಟ ರಾಜೇಂದ್ರಸಿಂಗ್, ಸ್ವಾತಂತ್ರ್ಯ ಬರುವಾಗ ಕಾಡು ಸರ್ಕಾರಕ್ಕೆ ಸೇರುತ್ತದೆಂದು ರಾಜರು ಮತ್ತು ಜಮೀನ್ದಾರರು ಮರಗಳನ್ನೆಲ್ಲ ಕಡಿದ ಕಾರಣ ನೀರು ಇಂಗದೆ ಅಲ್ಲಿನ ನೆಲ ಬರಡಾಗಿದೆ; ಅದು `ಕಪ್ಪು ಪ್ರದೇಶ’ ಎಂದು ಘೋಷಿತವಾಗಿದೆ. ನೀರಿನ ಆಶ್ರಯ ನಿರ್ಮಿಸಿದಲ್ಲಿ ಅದು ಮತ್ತೆ `ಬಿಳಿ ಪ್ರದೇಶ’ ಆಗುತ್ತದೆ ಎಂದು ಕಂಡುಕೊಂಡರು.
ತಿಂಗಳುಗಟ್ಟಲೆ ಒಬ್ಬರೇ ಕೆಲಸ ಮಾಡಿದರೂ ರಾಜೇಂದ್ರಸಿಂಗ್ಗೆ ಬೇಸರ ಅನಿಸಲಿಲ್ಲವಂತೆ. ಮುಂದಿನ ಮಳೆಗಾಲ ಬಂದಾಗ ಪೇಟೆಗೆ ಹೋದ ಹುಡುಗರು ಊರಿಗೆ ಬಂದರು. ರಾಜೇಂದ್ರರ ಜೊತೆ ಕೆಲಸ ಮಾಡುವಂತೆ ಅವರಿಗೆ ಮಂಗೂಲಾಲ್ ಸೂಚಿಸಿದರು. ಆದರೆ ಅವರು ಹಣ ಕೊಟ್ಟರೆ ಕೆಲಸ ಮಾಡುತ್ತೇವೆ ಎಂದರು; ಯಾರೂ ಬರಲಿಲ್ಲ. ಸಿಂಗ್ಗೆ ಸಮಾಜ ಕೈಬಿಟ್ಟಂತೆ ಅನಿಸುತ್ತಿತ್ತು. ಮಂಗೂಲಾಲ್ ಮತ್ತು ಕೆಲವು ವೃದ್ಧರು ಮಾತ್ರ ಸಿಂಗ್ರಲ್ಲಿ ತುಂಬ ವಿಶ್ವಾಸ ಹೊಂದಿದ್ದರು; ಅಂತಿಮವಾಗಿ ಸಹಾಯಮಾಡಲು ಕೆಲವು ಯುವಕರನ್ನು ಒಪ್ಪಿಸುವಲ್ಲಿ ಮಂಗೂಲಾಲ್ ಯಶಸ್ವಿಯಾದರು. ಮೂರು ವರ್ಷ ಆಗುವಾಗ ಸುಮಾರು ೧೫ ಅಡಿ ಆಳದ ದೊಡ್ಡ ಕೆರೆಯ ಅಂಗಳ ನಿರ್ಮಾಣವಾಗಿತ್ತು. ಮಳೆ ಬಂದಾಗ ಅದು ತುಂಬಿಕೊಂಡಿತು. ಊರಿನ ಬಾವಿ-ಕೆರೆಗಳು ಕೂಡ ತುಂಬಿಕೊಂಡವು. ಮಳೆನೀರನ್ನು ಸಂಗ್ರಹಿಸುವ ಈ ಬೃಹತ್ ನಿರ್ಮಾಣವೇ ಜೊಹಾಡ್ ಅಥವಾ ಮದಕ (ಮದಗ). ಮಂಗೂಲಾಲ್ ಪಟೇಲ್ ಸಂಬಂಧಿಕರನ್ನು ಕರೆದು ಅದನ್ನು ತೋರಿಸಿ, `ನೀವೂ ಹಾಗೆಯೇ ಮಾಡಿ’ ಎಂದರು. ಸುಮಾರು ೨೦ ಹಳ್ಳಿಗಳ ಅವರ ಸಂಬಂಧಿಕರು ಬಂದು ನೋಡಿದ್ದರು. ಅವರಲ್ಲಿ ಒಂಭತ್ತು ಮಂದಿ ಜೊಹಾಡ್ ನಿರ್ಮಿಸಿದರು.
ಜೊಹಾಡ್ ಅಥವಾ ಮದಕ
ಜಲಮೂಲವನ್ನು ಸಂರಕ್ಷಿಸುವ ಮತ್ತು ವೃದ್ಧಿಸುವ ಸಾಂಪ್ರದಾಯಿಕ ವಿಧಾನಗಳಲ್ಲಿ ಪ್ರಮುಖವಾದದ್ದು ಜೊಹಾಡ್. ಗುಡ್ಡಗಳ ತಪ್ಪಲಲ್ಲಿ ಕೆಲವೆಡೆ ಎಕ್ರೆಗಟ್ಟಲೆ ಜಾಗದಿಂದ ಮಳೆನೀರು ಹರಿದುಬರುತ್ತದೆ. ಅಂತಹ ಸಹಜ ಇಳಿಜಾರಿನ ಜಾಗದಲ್ಲಿ ಮೂರು ಬದಿ ಸ್ವಲ್ಪ ಎತ್ತರವಿದ್ದಾಗ ನಾಲ್ಕನೇ ಬದಿಯನ್ನು ಕಲ್ಲು, ಮಣ್ಣಿನ ಒಡ್ಡಿನ ಮೂಲಕ ಕಟ್ಟಲಾಗುತ್ತದೆ; ಅದೇ ಜೊಹಾಡ್. ಮಳೆನೀರನ್ನು ಈ ರೀತಿಯಲ್ಲಿ ತಡೆದಾಗ ವ್ಯರ್ಥವಾಗಿ ಹರಿದುಹೋಗುವ ನೀರು ನಿಂತು ಉಪಯೋಗಕ್ಕೆ ಬರುವುದಲ್ಲದೆ, ಮಳೆನೀರು ಇಂಗುವುದರಿಂದ ಅಂತರ್ಜಲದ ಮಟ್ಟ ಏರುತ್ತದೆ; ಕೆರೆ-ಬಾವಿಗಳು ತುಂಬಿ ಎಲ್ಲೆಲ್ಲೂ ನೀರು ಹರಿದಾಡುತ್ತದೆ.
ಸಾಂಪ್ರದಾಯಕ ಜೊಹಾಡ್ (ಮದಕ); ಚಿತ್ರ ಕೃಪೆ: ಶ್ರೀ ಪಡ್ರೆ
ಗೋಪಾಲಪುರದಲ್ಲಿ ಜೊಹಾಡ್ ಯಶಸ್ವಿ ಆದಾಗ ವಿಷಯ ನೆರೆಯೂರಿಗೆ ಹಬ್ಬಿತು. ಹಳ್ಳಿಯ ಜನ ಬಂದು ತಮ್ಮ ಊರಲ್ಲೂ ಜೊಹಾಡ್ ನಿರ್ಮಿಸುವಂತೆ ರಾಜೇಂದ್ರಸಿಂಗ್ರನ್ನು ಕೇಳತೊಡಗಿದರು.
ರಾಜೇಂದ್ರಸಿಂಗ್ ಮತ್ತವರ ತಂಡ ತಭಾಸಂ ಗೆಳೆಯರು ಪಾದಯಾತ್ರೆ ಮಾಡಿ `ಕೆರೆ ತೋಡಿ’ `ಜೊಹಾಡ್ ನಿರ್ಮಿಸಿ’ ಎಂದು ಜನರಿಗೆ ಹೇಳತೊಡಗಿದರು. ಜೊಹಾಡ್ಗಳು ಯಶಸ್ವಿಯಾಗುತ್ತಾ ಹೋದವು. ಮೊದಲ ಮೂರು ವರ್ಷಗಳಲ್ಲಿ ನಿರ್ಮಾಣವಾದದ್ದು ಒಂದೇ ಜೊಹಾಡ್. ನಾಲ್ಕನೇ ವರ್ಷ ಒಂಭತ್ತು ನಿರ್ಮಾಣವಾದವು. ಐದನೇ ವರ್ಷ ೩೬, ಆರನೇ ವರ್ಷ ೯೦, ಏಳನೇ ವರ್ಷ ೨೧೦ ರಚನೆಯಾದವು. ಕ್ರಮೇಣ ವರ್ಷಕ್ಕೆ ಸುಮಾರು ೭೦೦ ಜೊಹಾಡ್ಗಳು ರಚನೆಯಾಗುತ್ತಿದ್ದವು. ಇದರೊಂದಿಗೆ ರಾಜೇಂದ್ರಸಿಂಗ್ ಸ್ಥಳದ ಅಗತ್ಯವನ್ನು ಗಮನಿಸಿ ತೋಡು, ಹೊಳೆ-ಹಳ್ಳಗಳಲ್ಲಿ ಕಿಂಡಿ ಅಣೆಕಟ್ಟು ಅಥವಾ ತಡೆಕಟ್ಟೆಗಳನ್ನು ಕೂಡ ನಿರ್ಮಿಸತೊಡಗಿದರು. ಅದರಿಂದ ಹೊಳೆ-ನದಿಗಳ ಪಾತ್ರದಲ್ಲಿ ಜಲಾಶಯ ನಿರ್ಮಾಣವಾಗಿ ಜೊಹಾಡ್ನಂಥದೇ ಪರಿಣಾಮ ತೋರಿತು.
ನೀರಿನ ಒಂದು ಕ್ರಾಂತಿಯೇ ಸಂಭವಿಸಿತು. ೧೯೯೫ರ ಹೊತ್ತಿಗೆ ನೀರು ಧಾರಾಳವಾಗಿ ಲಭ್ಯವಾದ ಕಾರಣ ಸರ್ಕಾರಿ ದಾಖಲೆಗಳನ್ನು ಬದಲಾಯಿಸಬೇಕಾಯಿತು. ಕಪ್ಪುಪ್ರದೇಶಗಳು ಬಿಳಿಪ್ರದೇಶಗಳಾಗಿ ಮಾರ್ಪಾಟಾದವು. ಈ ಕುರಿತು ರಾಜೇಂದ್ರಸಿಂಗ್, “ಜನ ಇತಿಹಾಸವನ್ನು ಬದಲಿಸುವುದನ್ನು ನಾವು ಕೇಳಿದ್ದೇವೆ; ಆದರೆ ನಾವು ಭೂಗೋಳವನ್ನೇ ಬದಲಿಸಿದೆವು” ಎಂದು ಉದ್ಗರಿಸಿದ್ದಾರೆ.
ಮತ್ತೆ ಹರಿದ ನದಿಗಳು
ಈ ನಡುವೆ ರಾಜೇಂದ್ರಸಿಂಗ್ ನಿರೀಕ್ಷಿಸದಿದ್ದ ಒಂದು ಪವಾಡ ನಡೆದುಹೋಯಿತು. ಬತ್ತಿ ಹೋದ ನದಿಗಳ ಪುನಶ್ಚೇತನ ಅವರ ಕಾರ್ಯಸೂಚಿಯಲ್ಲಿರಲಿಲ್ಲ; ಅಂತಹ ಸಾಧ್ಯತೆಯೇ ಅವರ ಮುಂದೆ ಇರಲಿಲ್ಲವಂತೆ. ೧೯೯೩ರಲ್ಲಿ ಸಿಂಗ್ ಭೇಟಿಯಾದ ಧನ್ನಾ ಗುಜ್ಜರ್ ಎಂಬ ಹಿರಿಯರು ಹೇಳಿದರಂತೆ: “ಅಣ್ಣಾ, ನೀವು ನೀರಿನ ಕೆಲಸ ಮಾಡುತ್ತಾ ಇದ್ದೀರಿ. ಅದರಿಂದ ಭೂಮಾತೆಯ ಹೊಟ್ಟೆ ತುಂಬುತ್ತದೆ. ಆಕೆಯ ಹೊಟ್ಟೆ ತುಂಬಿದಾಗ ನದಿಗಳಿಗೆ ನೀರು ಹರಿಯುತ್ತದೆ. ಅವಳು ತುಂಬ ದಯಾಳು; ಎಂದೂ ಅವಳು ನೀರನ್ನು ತನಗಾಗಿ ಇಟ್ಟುಕೊಳ್ಳುವುದಿಲ್ಲ. ಅವಳಿಗೆ ಏನು ಕೊಟ್ಟರೂ ವಾಪಸು ಕೊಡುತ್ತಾಳೆ. ಅದರಿಂದ ನಮ್ಮ ಹೊಟ್ಟೆಯೂ ತುಂಬುತ್ತದೆ. ಸುಸ್ಥಿರ ಕೃಷಿ ನಡೆಯುತ್ತದೆ” ಎಂಬುದಾಗಿ. “ಮುಂದೆ ನದಿ ಪುನಶ್ಚೇತನದ ಬಗ್ಗೆ ಮೂರು ವರ್ಷ ಅಧ್ಯಯನ ಮಾಡಿದ ವಿಜ್ಞಾನಿಗಳು ಅದನ್ನೇ ಹೇಳಿದರು” ಎಂದು ರಾಜೇಂದ್ರಸಿಂಗ್ ವ್ಯಾಖ್ಯಾನಿಸುತ್ತಾರೆ; ಅಂದರೆ ಪಾರಂಪರಿಕ ಜ್ಞಾನವನ್ನು ಇವರು ಹೇಗೆ ಗೌರವದಿಂದ ಕಾಣುತ್ತಾರೆಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಅರಾವಳಿ ಬೆಟ್ಟಗಳ ಸಾಲಿನಲ್ಲಿ ಬರುವ ಸರಿಸ್ಕಾ (ಹುಲಿ ಅಭಯಾರಣ್ಯಕ್ಕೆ ಪ್ರಸಿದ್ಧ) ಗುಡ್ಡಗಳ ಏರು ಪ್ರದೇಶದ ತೊಲಾವ ಎಂಬ ಹಳ್ಳಿ ರೂಪಾರೆಲ್ ನದಿ ಹುಟ್ಟುವ ಸ್ಥಳ. ಅಲ್ಲಿ ಇದ್ದವರು ಗ್ಯಾರ್ಸಿ ಮತ್ತು ಪೂಲಾ ಎಂಬ ಇಬ್ಬರು ಹೆಮ್ಮಕ್ಕಳು ಮಾತ್ರ. ಓರ್ವ ತಭಾಸಂ ಕಾರ್ಯಕರ್ತ ಅವರನ್ನು ಹುರಿದುಂಬಿಸಿದ. ಮೂವರು ಸೇರಿ ನಾಲ್ಕು ತಿಂಗಳಲ್ಲಿ ಅಲ್ಲೊಂದು ಜೊಹಾಡ್ ನಿರ್ಮಿಸಿದರು. ಆ ವರ್ಷ ರೂಪಾರೆಲ್ ನದಿಯಲ್ಲಿ ಮಳೆಗಾಲದ ಬಳಿಕವೂ ಮೂರುತಿಂಗಳು ನೀರಿತ್ತು. ಕ್ರಮೇಣ ನದಿಯಲ್ಲಿ ವರ್ಷವಿಡೀ ನೀರು ಬತ್ತಲಿಲ್ಲ. ಕೆಳಭಾಗದ ಬಾವಿ, ಕೆರೆಗಳಲ್ಲೂ ನೀರೆದ್ದಿತು. ಸುದ್ದಿ ಬಾಯಿಯಿಂದ ಬಾಯಿಗೆ ಹಬ್ಬಿತು. ಎಲ್ಲೆಡೆ ಜೊಹಾಡ್ ಬಗೆಗಿನ ಕೂಗೆದ್ದಿತು. ದಶಕದೊಳಗೆ ೧೫೦ ಹಳ್ಳಿಗಳಲ್ಲಿ ೧೨೦೦ ಜೊಹಾಡ್ಗಳು ಮತ್ತು ತಡೆಕಟ್ಟೆಗಳು ರಚನೆಯಾದವು. ನೀರಿನ ಸಮೃದ್ಧಿ ಕಂಡುಬಂತು. ನಗರಕ್ಕೆ ವಲಸೆ ಹೋದವರು ಊರಿಗೆ ಮರಳಿದರು. ಹಾಲು ಉತ್ಪಾದನೆ, ಧಾನ್ಯಗಳ ಬೆಳೆ ಹತ್ತುಪಟ್ಟು ಏರಿತು. ಆಲ್ವಾರ್ ಜಿಲ್ಲೆಯ ಬಹುತೇಕ ಎಲ್ಲ ನದಿಗಳು ದಶಕಗಳ ಬಳಿಕ ಆರೆಂಟು ತಿಂಗಳಿಗೆ ಬದಲಾಗಿ ಇಡೀ ವರ್ಷ ಹರಿದವು. ಅವುಗಳೆಂದರೆ ರೂಪಾರೆಲ್, ಆರ್ವರಿ, ಜಹಾಜ್ವಾಲಿ, ಸರ್ಸಾ ಮತ್ತು ಭಗನಿ-ತೆಲ್ತೆದ್. ೯೦ ಕಿ.ಮೀ ಉದ್ದದ ರೂಪಾರೆಲ್ ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟು ೩೫೪ ಜೊಹಾಡ್ ಹಾಗೂ ಕಿಂಡಿ ಅಣೆಕಟ್ಟುಗಳನ್ನು ರಚಿಸಲಾಗಿತ್ತು ಎನ್ನುವ ವಿವರ ನೀಡುವ ಲೇಖಕ, ಜಲತಜ್ಞ ಶ್ರೀಪಡ್ರೆ, “ವರ್ಷಕ್ಕೆ ೫೦೦-೬೦೦ ಮಿ.ಮೀ. ಮಳೆ ಬರುವ ಆ ಪ್ರದೇಶದಲ್ಲೇ ಸಾಂಪ್ರದಾಯಿಕ ಕ್ರಮದಿಂದ ಜಲಸಮೃದ್ಧಿ ಆಗಿರುವಾಗ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಫೆಬ್ರುವರಿ ತಿಂಗಳಿನಲ್ಲೇ ನದಿ-ಹೊಳೆಗಳು ಏಕೆ ಬತ್ತಬೇಕು ಎಂದು ಪ್ರಶ್ನಿಸುತ್ತಾರೆ. ಆ ಕುರಿತು ರಾಜೇಂದ್ರಸಿಂಗ್, “ನಮ್ಮ ಹಳ್ಳಿಗರ ಪಾರಂಪರಿಕ ಜ್ಞಾನಭಂಡಾರದ ಸಹಾಯ ಸಿಕ್ಕಿದ ಕಾರಣ ಇಷ್ಟು ಚಿಕ್ಕ ಅವಧಿಯಲ್ಲಿ ಇಷ್ಟೊಂದು ಪ್ರಗತಿ ಸಾಧಿಸಲು ಸಾಧ್ಯವಾಯಿತು” ಎಂದಿದ್ದಾರೆ. (ನೋಡಿ – ಶ್ರೀಪಡ್ರೆ ಅವರ `ರೂಪಾರೆಲ್ ಮತ್ತೆ ಬತ್ತಲಿಲ್ಲ’, ಪುಟ: ೭೬-೮೬) “ನಮ್ಮ ಎಲ್ಲ ರಚನೆಗಳು ನೂರಕ್ಕೆ ನೂರು ಸುರಕ್ಷಿತ. ಏಕೆಂದರೆ ಇವುಗಳ ಕೊನೆಯ ಬಳಕೆದಾರರೇ ಕೆಲಸದಲ್ಲಿ ಪಾಲ್ಗೊಂಡಿರುತ್ತಾರೆ. ಸರ್ಕಾರಿ ಕೆಲಸಗಳಂತೆ ಗುರಿ(ಟಾರ್ಗೆಟ್)ಗಾಗಿ ಮಾಡಿದ ಒಂದು ಕೆಲಸವೂ ಇದರಲ್ಲಿಲ್ಲ” ಎಂದವರು ಭರವಸೆ ನೀಡುತ್ತಾರೆ.
ಗ್ರಾಮಸಭೆ ನಿರ್ಧಾರ
ಜೊಹಾಡ್ ರಚನೆ ಬಗೆಗೆ ರಾಜೇಂದ್ರಸಿಂಗ್ ಅವರ ತಭಾಸಂ ಒಂದು ನಿರ್ದಿಷ್ಟ ವಿಧಾನವನ್ನು ರೂಪಿಸಿಕೊಂಡಿದೆ. ಅದೊಂದು ವೇಗವರ್ಧಕವಾಗಿ ಉಳಿಯುತ್ತದೆಯೇ ಹೊರತು ಎಂದೂ ಹಳ್ಳಿಗರ ಮೇಲೆ ಅಭಿವೃದ್ಧಿಯನ್ನು ಹೇರುವುದಿಲ್ಲ. ಜೊಹಾಡ್ ರಚಿಸುವ ಬಗ್ಗೆ ಆಯಾ ಊರಿನ ಗ್ರಾಮಸಭೆ ತೀರ್ಮಾನಿಸಿ ಶೇ. ೨೫ರಷ್ಟು ಖರ್ಚನ್ನು ನಗದು ಅಥವಾ ಶ್ರಮದಾನದ ರೂಪದಲ್ಲಿ ತುಂಬಲು ತಯಾರಾಗಬೇಕು. ಜೊಹಾಡ್ನ ಜಾಗದ ಆಯ್ಕೆ ಮಾಡುವುದೂ ಗ್ರಾಮಸಭೆಯೇ. ಅಲ್ಲಿ ಎಷ್ಟು ನೀರು ಬರುತ್ತದೆಂಬ ಅಂದಾಜಿನ ಮೇರೆಗೆ ಜೊಹಾಡ್ನ ಗಾತ್ರವನ್ನು ನಿರ್ಧರಿಸುತ್ತಾರೆ. ಅದರಿಂದ ಯಾರಿಗೆ ನೇರ ಪ್ರಯೋಜನ ಎಂಬುದರ ಪಟ್ಟಿ ತಯಾರಿಸುತ್ತಾರೆ; ಅಂಥವರು ಶ್ರಮದಾನದಲ್ಲಿ ಹೆಚ್ಚು ಭಾಗವಹಿಸಬೇಕು. ಅಗತ್ಯವಿದ್ದರೆ ಭೂಮಿ ಕೊಡಬೇಕು; ಜೊಹಾಡ್ಗೆ ಕೃಷಿಭೂಮಿ ಬಳಕೆಯಾಗುವುದನ್ನು ಸಾಧ್ಯವಾದಷ್ಟು ತಪ್ಪಿಸುತ್ತಾರೆ. ಪೇಟೆಯಿಂದ ಬರಬೇಕಾದ ಒಳಸುರಿಗಳಿಗೆ (ಉದಾ: ಮಣ್ಣು ಸಾಗಿಸುವ ಟ್ರಾಕ್ಟರ್, ಡೀಸೆಲ್, ಸಿಮೆಂಟ್, ಇಟ್ಟಿಗೆ, ಮೇಸ್ತ್ರಿಗಳ ಮಜೂರಿ) ತಭಾಸಂ ಹಣ ನೀಡುತ್ತದೆ. ಉಳಿದುದನ್ನು ಊರವರೇ ಹೊಂದಿಸಬೇಕು. ಹಿಂದೆ ಊರವರಿಂದ ಶ್ರಮದಾನ ಮಾತ್ರ ಸಿಗುತ್ತಿದ್ದರೆ ಈಗ ಹಳ್ಳಿಗಳಲ್ಲಿ ನೀರಿನಿಂದಾಗಿ ಸಮೃದ್ಧಿ ಬಂದ ಕಾರಣ ಹಣವೂ ಬರುತ್ತಿದೆಯಂತೆ. ಉದಾಹರಣೆಗೆ, ಭುಜ್ ಗ್ರಾಮದ ಗೋಪಾಲ ಜೊಹಾಡ್ಗೆ ೧,೯೦,೫೧೦ ರೂ. ಖರ್ಚಾದಾಗ ೧,೭೬,೦೦೦ ರೂ. (ಸುಮಾರು ಶೇ. ೯೦)ಗಳನ್ನು ಊರಿನವರೇ ಹಾಕಿದ್ದರು. ಜೊಹಾಡ್ಗೆ ಮಾಡಿದ ವೆಚ್ಚದ ಕನಿಷ್ಠ ನಾಲ್ಕುಪಟ್ಟು ಆದಾಯ ಪ್ರತಿವರ್ಷ ಬರುತ್ತದೆಂದು ಹಳ್ಳಿಯ ಜನ ಕಂಡುಕೊಂಡಿದ್ದಾರೆ.
೧೯೮೫-೨೦೦೭ರ ನಡುವೆ ೧೧ ಜಿಲ್ಲೆಗಳ ಒಟ್ಟು ಸುಮಾರು ೬,೫೦೦ ಚದರ ಕಿ.ಮೀ ಪ್ರದೇಶದ ೧೦೬೮ ಹಳ್ಳಿಗಳಲ್ಲಿ ೮,೬೦೦ ಜೊಹಾಡ್ ಮತ್ತು ತಡೆಕಟ್ಟೆಗಳು ನಿರ್ಮಾಣವಾಗಿವೆ. ಜೊಹಾಡ್ಗಳಿಂದಾಗಿ ೧೦೦ ಮೀ.ನಷ್ಟು ಕೆಳಗಿದ್ದ ಅಂತರ್ಜಲ ಮೂರರಿಂದ ೧೩ ಮೀ.ನಷ್ಟು ಆಳದಲ್ಲಿ ಸಿಗುತ್ತದೆ. ಒಂದು ಬೆಳೆಯಾಗುವ ಪ್ರದೇಶ ಶೇ. ೧೧ರಿಂದ ೭೦ಕ್ಕೇರಿದೆ. ಎರಡು ಬೆಳೆಯಾಗುವ ಪ್ರದೇಶ ಶೇ. ೩ರಿಂದ ೫೦ಕ್ಕೆ ಹಾಗೂ ಕಾಡು ಶೇ. ೭ರಿಂದ ೪೦ಕ್ಕೇರಿದೆ.
ಜಲ್-ಜಂಗಲ್-ಜಮೀನ್
೧೯೮೫ರ ಹೊತ್ತಿಗೆ ಈ ಪ್ರದೇಶದಿಂದ ಆಗುತ್ತಿದ್ದ ಗ್ರಾಮೀಣ ಜನರ ವಲಸೆಯಲ್ಲಿ ಈಗ ಶೇ. ೮೫ರಷ್ಟು ನಿಂತಿದೆ. ಜನ ಕೃಷಿ ಮಾಡುತ್ತಾರೆ, ತರಕಾರಿ ಬೆಳೆಯುತ್ತಾರೆ; ನಿರ್ಮಾಣ ಮತ್ತಿತರ ಉದ್ಯೋಗಗಳು ಕೂಡ ಸೃಷ್ಟಿಯಾಗಿವೆ. ಇದರಿಂದ ಗರಿಷ್ಠ ಲಾಭವಾದವರು ಮಹಿಳೆಯರು. ಹಿಂದೆ ಒಂದು ಕೊಡ ನೀರು ತರಲು ಅವರು ಪ್ರತಿದಿನ ಐದಾರು ಗಂಟೆ ವ್ಯಯಿಸಬೇಕಾಗಿತ್ತು; ಕೆಲವೆಡೆ ಸುಮಾರು ೨೦೦ ಅಡಿ ಆಳದ ಬಾವಿಗಳಿಂದ ನೀರು ಎತ್ತಬೇಕಿತ್ತು. ಈಗ ಅದಕ್ಕೆಲ್ಲ ತಡೆ ಬಿದ್ದಿದೆ. ಅದನ್ನು ಅರ್ಥೈಸಿಕೊಂಡು ಅವರು ಈ ಚಳವಳಿಯನ್ನು ಬೆಂಬಲಿಸಿದ್ದಾರೆ. ನೀರಿಗಾಗಿ ಪ್ರತಿದಿನ ೮-೧೦ ಕಿ.ಮೀ ನಡೆಯುವುದು ತಪ್ಪಿದ ಕಾರಣ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದು ಆರಂಭವಾಗಿದೆ. ಹಿಂದೆ ಒಂದೇ ಒಂದು ಬಾಲಕಿ ಇಲ್ಲದ ಹಳ್ಳಿಯ ಒಂದು ಶಾಲೆಯಲ್ಲಿ ಈಗ ೯೦ ಹುಡುಗಿಯರು ಕಲಿಯುತ್ತಿದ್ದಾರಂತೆ.
ಚಂಬಲ್ ಕಣಿವೆ ಪ್ರದೇಶ ಇದೇ ಭಾಗದಲ್ಲಿ ಬರುತ್ತದೆ. ಆಲ್ವಾರ್ ಎಂಬ ಊರಿನಲ್ಲಿ ಹಿಂದೆ ೩೨ ಸಾಂಪ್ರದಾಯಿಕ ಡಕಾಯಿತ ಕುಟುಂಬಗಳಿದ್ದವಂತೆ. ಊರಿನಲ್ಲಿ ನೀರಾವರಿ ದೊರೆತ ಕಾರಣ ಈಗ ಅವರು ದರೋಡೆ ಬಿಟ್ಟು ಕೃಷಿಕರಾಗಿದ್ದಾರೆ; ಬೇರೆ ಕೆಲಸ ಮಾಡುತ್ತಾರೆ ಅಥವಾ ಜಲಸಂರಕ್ಷಣೆಯಲ್ಲಿ ತಭಾಸಂ ಜೊತೆ ಕೈಜೋಡಿಸುತ್ತಾರೆ.
ಈ ನಡುವೆ ಜಲಸಂರಕ್ಷಣೆಯ ಮಧ್ಯೆ ಒಂದು ಹೊಸ ಸಮಸ್ಯೆ ಕಂಡುಬಂತು. ಜೊಹಾಡ್ಗಳಿಗೆ ಮಳೆನೀರಿನೊಂದಿಗೆ ಬೆಟ್ಟಗಳ ಮೇಲಿನಿಂದ ಮಣ್ಣು ಬಂದು ತುಂಬತೊಡಗಿತು. ಆಗ ಊರಿನ ಹಿರಿಯರು `ನೋಡಿ, ಇದು ಕಾಡು ಇಲ್ಲದ ಕಾರಣ ಉಂಟಾದ ತೊಂದರೆ’ ಎಂದರು. ಆಲ್ವಾರ್ ಜಿಲ್ಲೆಯ ಜನರಿಗೆ ಆಗ ನೆಲ-ಜಲ-ಅರಣ್ಯಗಳ ನಡುವಣ ದಟ್ಟ ಸಂಬಂಧ ಅರ್ಥವಾಯಿತು. ಅದರಂತೆ ಬೆಟ್ಟ-ಗುಡ್ಡಗಳಲ್ಲಿ ಗಿಡ-ಮರಗಳ ಹಸಿರುಕೊಡೆ ಎಬ್ಬಿಸಲು ನಿರ್ಧರಿಸಿದರು. ಆ ಪ್ರಕಾರ `ಜಲ್-ಜಂಗಲ್-ಜಮೀನ್ ಬಚಾವೋ’ ಎಂಬ ಹೊಸ ಚಳವಳಿಯನ್ನೇ ಆರಂಭಿಸಿದರು. ತಭಾಸಂ ಆ ಕುರಿತು ಪಾದಯಾತ್ರೆ, ಬೀದಿನಾಟಕಗಳನ್ನು ಹಮ್ಮಿಕೊಂಡಿತು.
ಹೊಸದಾಗಿ ಗಿಡನೆಟ್ಟು ಅರಣ್ಯ ಎಬ್ಬಿಸುವುದು ಸುಲಭವಲ್ಲ. ಅದಕ್ಕಾಗಿ ರಾಜೇಂದ್ರಸಿಂಗ್ ಇರುವ ಅರಣ್ಯಗಳ ಸಂರಕ್ಷಣೆಗೆ ಒತ್ತು ನೀಡಿದರು. ಜನ-ಜಾನುವಾರುಗಳನ್ನು ತಡೆದರೆ ಕಾಡು ತಾನಾಗಿಯೇ ಬೆಳೆಯುತ್ತದೆ. ಗಾಳಿ, ಹಕ್ಕಿ, ಪ್ರಾಣಿಗಳು ತರುವ ಬೀಜಗಳಿಂದ ಕಾಡು ಏಳುತ್ತದೆ ಎಂದು ತೀರ್ಮಾನಿಸಿ, ಕಾಡು ಬೆಳೆಸುವ, ರಕ್ಷಿಸುವ ಹೊಣೆಯನ್ನು ಗ್ರಾಮಸಭೆಗಳಿಗೆ ವಹಿಸಿದರು. ಅದು ಬಹಳಷ್ಟು ಯಶಸ್ವಿಯಾಯಿತು.
ಸರ್ಕಾರದ್ದೇ ವಿರೋಧ
ಇದೇ ವೇಳೆ ರಾಜೇಂದ್ರಸಿಂಗ್ ಅವರ ಜಲಸಂರಕ್ಷಣೆಯ ಯಾತ್ರೆ ಹೂವಿನಹಾಸಿಗೆಯಾಗಿರಲಿಲ್ಲ ಎಂಬುದನ್ನು ನೆನಪಿಡಬೇಕು. ಕೆಲಸ ಒಳ್ಳೆಯದೇ ಇರಲಿ; ಹಾಗೆಲ್ಲ ಸುಮ್ಮನೆ ಬಿಡುವುದಾದರೆ ಸರ್ಕಾರ ಇರುವುದಾದರೂ ಏತಕ್ಕೆ? ಸಕಲ ಚರಾಚರ ವಸ್ತುಗಳ ಪ್ರಭುಗಳು ಸರ್ಕಾರ ಮತ್ತು ಅದರ ಅತ್ಯುಚ್ಚ ಸ್ಥಾನಗಳಲ್ಲಿ ಇರುವವರೇ ಆಗಿರುವಾಗ ಯಾರ್ಯಾರೋ ಏನೇನೋ ಮಾಡುವುದೆಂದರೇನು? ಗೋಪಾಲಪುರದಲ್ಲಿ ಮೊದಲ ಜೊಹಾಡ್ ನಿರ್ಮಿಸಿದಾಗ ಸರ್ಕಾರ “ಇದು ಅರಣ್ಯ ಇಲಾಖೆಗೆ ಸೇರಿದ ಜಾಗದೊಳಗೆ ಮಾಡಲಾದ ಅನಗತ್ಯ ರಚನೆಯಾಗಿದ್ದು, ಅದನ್ನು ಒಡೆಯುವುದು ಅನಿವಾರ್ಯ” ಎಂದು ಆದೇಶ ಹೊರಡಿಸಿತು. ಸ್ಥಳೀಯ ಪೊಲೀಸ್ಠಾಣೆಯ ಠಾಣಾಧಿಕಾರಿ ಬಂಧನದ ವಾರಂಟ್ನ್ನೇ ಹಿಡಿದುಕೊಂಡು ಬಂದು, `ಹೊರಗಿನವರು ಬಂದು ಇಲ್ಲಿ ಏನೇನೋ ಮಾಡುತ್ತಿದ್ದಾರಂತಲ್ಲಾ; ಯಾರದು?’ ಎಂದು ಕೇಳಿದರು. ಆಗ ಸಿಂಗ್ ಬುಟ್ಟಿಯಲ್ಲಿ ಮಣ್ಣು ಹೊರುತ್ತಿದ್ದರಂತೆ. ಜನರ ವಿರೋಧ ಬರುವ ಅರಿವಾಗಿ ಠಾಣಾಧಿಕಾರಿ ಹಾಗೆಯೇ ಮರಳಿದರು.
ಸರ್ಕಾರ ಆ ಜಾಗವನ್ನು ಅರಣ್ಯ ಎಂದು ಹೇಳುತ್ತಿತ್ತು. ಆದರೆ ಅಲ್ಲಿ ಮರ-ಗಿಡಗಳೇ ಇರಲಿಲ್ಲ. ಮುಂದೆ ನೀರಾವರಿ ಇಲಾಖೆ ಇವರು ಉಂಟುಮಾಡಿದ ನೀರನ್ನು ತನ್ನ ನೀರು ಎಂದು ಹಕ್ಕನ್ನು ಸ್ಥಾಪಿಸಲು ಹೊರಟಿತು. ಆದರೆ ಜನಶಕ್ತಿ ಅದನ್ನು ಮೀರಿ ಮುಂದುವರಿಯಿತು. ಪರ್ವತಶ್ರೇಣಿಯಲ್ಲಿ ಶೇ. ೬೬ರಷ್ಟು ಕಾಡು ಇರಬೇಕೆನ್ನುವುದು ವೈಜ್ಞಾನಿಕ ಲೆಕ್ಕಾಚಾರ. ಅರಾವಳಿ ಬೆಟ್ಟಗಳಲ್ಲಿ ಅದು ಶೇ. ಆರಕ್ಕೆ ಇಳಿದಿತ್ತು. ತಭಾಸಂನ ಸುಮಾರು ೧೫ ವರ್ಷಗಳ ಕೆಲಸದ ಪರಿಣಾಮವಾಗಿ ಅದು ಶೇ. ೪೦ಕ್ಕೇರಿತು. ಆಲ್ವಾರ್ ಜಿಲ್ಲೆಯ ಗ್ರಾಮಸಭೆಗಳಲ್ಲಿ ಕೇಳಿಬರುವ ಘೋಷಣೆ ಹೀಗಿದೆ: “ಲೂಟ್ಫೂಟ್ ಕೀ ಬರ್ಬಾದೀ ಸೇ ಅಪ್ನಾ ಗಾಂವ್ ಬಚಾಯೇಂಗೇ” (ಕೊಳ್ಳೆಹೊಡೆದು ನಾಶ ಮಾಡುವವರಿಂದ ನಾವು ನಮ್ಮ ಹಳ್ಳಿಯನ್ನು ರಕ್ಷಿಸುತ್ತೇವೆ). ಕೊಳ್ಳೆಹೊಡೆಯುವವರು ಯಾರೆಂದು ತಿಳಿಯಿತಲ್ಲವೆ?
ನದಿಗಳಲ್ಲಿ ಸದಾ ನೀರು ಹರಿದು ಜೀವದ ಉಗಮವಾಗಿ ಉದ್ದುದ್ದ ಮೀನುಗಳು ಬಂದವು. ಸರ್ಕಾರ ಎಚ್ಚರಗೊಂಡು ಯಾರಿಗೋ ಮೀನು ಹಿಡಿಯುವ ಗುತ್ತಿಗೆಯನ್ನು ನೀಡಿತು. ಗುತ್ತಿಗೆದಾರ ಬಂದಾಗ ಜನ ತಡೆದು, “ಇದು ನಾವು ಕಷ್ಟಪಟ್ಟು ಜೀವಂತವಾಗಿಸಿದ ನದಿ. ಇದರಿಂದ ಮೀನು ಹಿಡಿಯಬಾರದು” ಎಂದರು. ಸರ್ಕಾರ ಬಲಪ್ರಯೋಗ ಮಾಡಲು ಮುಂದಾದಾಗ ಜನ ಸಿಟ್ಟಾಗಿ ಗುತ್ತಿಗೆದಾರನ ದೋಣಿಗೆ ಬೆಂಕಿಹಾಕಿದರು. ಸರ್ಕಾರ ನ್ಯಾಯಾಲಯದಲ್ಲಿ ದಾವೆಹೂಡಿ, ಹಿಂದಿನಿಂದಲೂ ಮೀನು ಹಿಡಿಯುವ ಗುತ್ತಿಗೆ ನೀಡಲಾಗುತ್ತಿತ್ತು ಎಂದು ವಾದಿಸಿತು; ಆದರೆ ಅದರ ಬಳಿ ಅಂತಹ ದಾಖಲೆಯೇ ಇರಲಿಲ್ಲ.
ಸುಪ್ರೀಂಕೋರ್ಟಿಗೆ
ಸರಿಸ್ಕಾದ ಹುಲಿಯೋಜನೆ ಪ್ರದೇಶದಲ್ಲಿ ಅಮೃತಶಿಲೆ (ಮಾರ್ಬಲ್) ಕಡಿಯುವವರ ವಿರುದ್ಧ ತಭಾಸಂ ಚಳವಳಿಗೆ ಇಳಿಯಬೇಕಾಯಿತು. ಏಕೆಂದರೆ ಸರಿಸ್ಕಾ ಸುತ್ತ ಜೊಹಾಡ್ ನಿರ್ಮಿಸಿದರೂ ನೀರಿನಮಟ್ಟ ಏರಲಿಲ್ಲ. ಏರುತ್ತಿದ್ದ ನೀರು ಮಾರ್ಬಲ್ ತೆಗೆದ ಕೊಳಗಳಿಗೆ ಇಳಿಯುತ್ತಿದ್ದುದೇ ಅದಕ್ಕೆ ಕಾರಣ ಎಂಬುದು ತಿಳಿಯಿತು. ರಾಜೇಂದ್ರಸಿಂಗ್ ಅವರ ಹೋರಾಟದ ಫಲವಾಗಿ ಸುತ್ತಲಿನ ೪೭೦ ಗಣಿಗಳನ್ನು ಮುಚ್ಚಬೇಕಾಯಿತು. ಸಿಂಗ್ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದಾಗ ನ್ಯಾಯಾಲಯ ಪರಿಸರ ಸೂಕ್ಷ್ಮ ಅರಾವಳಿ ಪರ್ವತ ಪ್ರದೇಶದಲ್ಲಿ ಗಣಿಗಾರಿಕೆ ಬೇಡವೆಂದು ಆದೇಶ ನೀಡಿತು. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ೧೯೯೨ರಲ್ಲಿ ಆ ಪ್ರದೇಶದಲ್ಲಿ ಗಣಿಗಾರಿಕೆಯನ್ನು ನಿಷೇಧಿಸುವ ಶಾಸನ ತಂದಿತು. ಆ ಸಂದರ್ಭದಲ್ಲಿ ಗಣಿಮಾಲೀಕರ ಕಡೆಯ ಪುಂಡರು ಸಿಂಗ್ಗೆ ಬೆದರಿಕೆ ಒಡ್ಡಿದ್ದು, ಹಲ್ಲೆಯತ್ನ ನಡೆಸಿದ್ದೂ ಇದೆ. ಆದರೆ ತನ್ನ ದಾರಿಯಲ್ಲಿ ಸಿಂಗ್ ಅಚಲರಾಗಿದ್ದರು.
ಸಾಮಾನ್ಯವಾಗಿ ಓರ್ವ ವ್ಯಕ್ತಿ ಮಹತ್ ಸಾಧನೆಯನ್ನು ಮಾಡಿದಾಗ `ಅವರೊಂದು ವ್ಯಕ್ತಿಯಲ್ಲ, ಶಕ್ತಿ’ ಎಂದು ಬಣ್ಣಿಸುವುದಿದೆ. ಒಬ್ಬ ವ್ಯಕ್ತಿ ಈ ಪ್ರಮಾಣಕ್ಕೆ ಬೆಳೆದನೆ? ಇಷ್ಟೆಲ್ಲ ಸಾಧನೆ ಒಬ್ಬನಿಂದ ಸಾಧ್ಯವೆ? ಒಬ್ಬಾತ ಆರಂಭಿಸಿದ ಚಳವಳಿ ಈ ಕಾಲದಲ್ಲೂ ಇಷ್ಟು ವಿಶಾಲವಾಗಿ ಬೆಳೆಯಲು ಸಾಧ್ಯವೆ ಎಂದು ಯಾರಾದರೂ ಅಚ್ಚರಿಪಡಲೇಬೇಕು. ೨೦೦೧ರಲ್ಲಿ ರ್ಯಾಮನ್ ಮ್ಯಾಗ್ಸೇಸೇ ಪ್ರಶಸ್ತಿಯನ್ನು ರಾಜೇಂದ್ರಸಿಂಗ್ ಅವರಿಗೆ ಸಮುದಾಯ ನಾಯಕತ್ವಕ್ಕಾಗಿ ನೀಡಲಾಗಿತ್ತು. ಇದಲ್ಲವೇ ನಿಜವಾದ ಸಮುದಾಯ ನಾಯಕತ್ವ? ಅಂತರರಾಷ್ಟ್ರೀಯ ಸ್ಟಾಕ್ಹೋಮ್ ಜಲಪ್ರಶಸ್ತಿ ೧೫ ಲಕ್ಷ ಅಮೆರಿಕನ್ ಡಾಲರ್ಗಳನ್ನು ಒಳಗೊಂಡಿದೆ. ನಮ್ಮವರಿಗೆ ಇಷ್ಟೊಂದು ದೊಡ್ಡ ಪ್ರಶಸ್ತಿ ಬಂದುದರಿಂದಲಾದರೂ ನಮ್ಮ ಸರ್ಕಾರಗಳು ಕಣ್ಣು ತೆರೆದು ನಮ್ಮ ಜಲಸಂಪನ್ಮೂಲಗಳನ್ನು ವಿದೇಶೀಯರಿಗೆ ತೆರೆದಿಡುವುದು ತಪ್ಪಬಹುದೆ? ತುಮಕೂರು, ಕೋಲಾರಗಳಿಗೆ ಪಶ್ಚಿಮಘಟ್ಟ(ಎತ್ತಿನಹೊಳೆ)ದ ನೀರು ಬೇಡ; ಆಯಾ ಪ್ರದೇಶದಲ್ಲೇ ನೀರು ಮೇಲೆದ್ದು ಉಕ್ಕುವಂತೆ ಮಾಡೋಣ ಎಂಬ ಸ್ಫೂರ್ತಿ ಬರಬಹುದೆ?