ಆಕಾಶಾತ್ ವಾಯುಃ ವಾಯೋರಗ್ನಿಃ ಅಗ್ನೇರಾಪಃ ಅದ್ಭ್ಯಃ ಪೃಥಿವೀ ಪೃಥಿವ್ಯಾ ಓಷಧಯಃ ಓಷಧೀಭ್ಯೋ ಅನ್ನಮ್ – ಎನ್ನುತ್ತದೆ ವೇದವಾಕ್ಯ. ಸೃಷ್ಟಿಯ ಕ್ರಮ ಅದು. ಆಕಾಶದಿಂದ ವಾಯು, ಅದರಿಂದ ಅಗ್ನಿ, ಆ ಮೂಲಕ ನೀರು, ಭೂಮಿ, ಸಸ್ಯಗಳು, ಅನ್ನ ಮತ್ತು ಕೊನೆಗೆ ಪುರುಷ. ಸೃಷ್ಟಿಯಲ್ಲಿ ನಮ್ಮದು ಕೊನೆಯ ಅವತರಣ. ನಮ್ಮ ಉಳಿವಿಗೆ ಬೇಕಾದ್ದೆಲ್ಲ ಮೊದಲಿಗೆ ನಿರ್ಮಾಣಗೊಂಡವು. ನಮ್ಮ ಹಿರಿಯರೂ ಭಗವಂತ ಕೊಟ್ಟಿದ್ದನ್ನೆಲ್ಲ ದೇವರೆಂಬಂತೆ ಪೂಜಿಸಿದರು. ವೃಕ್ಷಪೂಜೆ, ಭೂಮಿಪೂಜೆ, ಯಾಗ-ಯಜ್ಞ, ನದೀಪೂಜೆ, ಯಾವುದನ್ನು ಮಾಡಿಲ್ಲ ಹೇಳಿ? ದುರದೃಷ್ಟವೆಂದರೆ ಹೀಗೆ ಪೂಜೆಯಷ್ಟೇ ಮಾಡಿದೆವು. ಅದನ್ನು ಉಳಿಸಿಕೊಳ್ಳಬೇಕೆಂಬ ಪ್ರಜ್ಞೆ ಮಾತ್ರ ತೊರೆದುಬಿಟ್ಟೆವು.
ಅನಾಮತ್ತಾಗಿ ವೃಕ್ಷಕ್ಕೆ ಕೊಡಲಿ ಬೀಸಿದೆವು. ನಾಶದ ಮಹಾಪರ್ವ ನಡೆಯಿತು. ಭೂಮಿಗೆ ವಿಷವುಣಿಸಿದೆವು. ನೀರನ್ನು ಅತ್ಯಂತ ಕೆಟ್ಟದಾಗಿ ಬಳಸಿದೆವು. ಭೂಮಿಯ ಮೇಲಣ ನೀರು ಖಾಲಿಯಾಗುತ್ತಿದ್ದಂತೆ ಕೊಳವೆಬಾವಿ ಕೊರೆಸಿದೆವು. ನೂರು, ಇನ್ನೂರು, ಐನೂರು, ಎಂಟುನೂರು, ಕೊನೆಗೆ ಸಾವಿರ ಅಡಿ ಆಳಕ್ಕೆ ಭೂಮಿಯನ್ನು ಕೊರೆದು ಅನಾಯಾಸವಾಗಿ ನಿಮಿಷಗಳಲ್ಲಿ ನೀರನ್ನು ಮೇಲೆತ್ತಬಲ್ಲ ತಂತ್ರಜ್ಞಾನ ರೂಪುಗೊಂಡಿತು. ನೀರು ಆಳದಿಂದ ಮೇಲಕ್ಕೆ ಬಂತು ನಿಜ; ಆದರೆ ಇಷ್ಟು ಆಳಕ್ಕೆ ನೀರು ಇಳಿಯಲು ನಡೆದಿರುವ ದೀರ್ಘ ಪ್ರಕ್ರಿಯೆ ನಮ್ಮವರಿಗೆ ಮರೆತುಹೋಗಿತ್ತು! ಸಲೀಸಾಗಿ ನೀರು ಆಳದಿಂದ ಮೇಲೆ ಬರುವಾಗ ಭೂಮಿಯ ಮೇಲ್ಪದರದ ನೀರನ್ನು ಕಷ್ಟಪಟ್ಟು ಉಳಿಸಿಕೊಳ್ಳುವ ದರ್ದು ಇಲ್ಲವಾಯ್ತು. ನೋಡನೋಡುತ್ತಲೇ ಬಾವಿಗಳು ಮುಚ್ಚಿದವು. ಕಲ್ಯಾಣಿ – ಪುಷ್ಕರಣಿಗಳು ಪಾಳುಬಿದ್ದವು. ಕೆರೆಗಳು ಆಕ್ರಾಂತವಾದವು. ಅಂತರ್ಗಂಗೆಗೆ ಹಾತೊರೆದ ಮನುಷ್ಯ ಕಣ್ಣೆದುರಿನ ಗಂಗೆಯ ಮರೆತ.
ಕಾಲ ಉರುಳಿತು. ಭೂಮಿಯಡಿಯ ನೀರು ಖಾಲಿಯಾಗುತ್ತಾ ಬಂದಂತೆ ಮಾನವ ಹೈರಾಣಾದ. ಸರ್ಕಾರದೆದುರು ಪ್ರತಿಭಟನೆಗೆ ನಿಂತ. ಆಕಾಶಕ್ಕೆ ದೃಷ್ಟಿ ನೆಟ್ಟು ಭಗವಂತನನ್ನು ದೂಷಿಸಿದ. ಇಳುವರಿ ಹೆಚ್ಚಿಸುವ ಭರದಲ್ಲಿ ಕ್ರಿಮಿನಾಶಕವನ್ನು ಭೂಮಿಗೆ ಸುರಿದ. ತಿನ್ನುವ ಊಟ ವಿಷವಾಯ್ತು. ಆರೋಗ್ಯ ಕಳೆದುಕೊಂಡ. ಬೀದಿಗೆ ಬಂದ. ಆತ್ಮಹತ್ಯೆ ಮಾಡಿಕೊಂಡ. ಬದುಕಲು ಮೋಸ ಮಾಡುವ ದಾರಿ ಹುಡುಕಿದ. ತಾಯಿ(?)ಯಂತೆ ಪೂಜಿಸಿದ ಭೂಮಿಯನ್ನು ಮಾರಿದ. ದೇವರೆಂದ ದನವನ್ನು ಕಟುಕನ ಕೈಗಿತ್ತ. ಬದುಕು ಮೂರಾಬಟ್ಟೆಯಾಯಿತು. ಹಾಗಾಗಲು ಕಾರಣವೇನೆಂದು ಹುಡುಕಿದರೆ ಅದು ಜಲದ ಸೆಲೆಯೆಡೆಗೆ ಬಂದು ನಿಂತಿತು. ನೀರಿಗೆ ತೋರಿದ ಅಗೌರವದ ಶಾಪವದೆಂದು ಎಲ್ಲರೂ ಹೇಳಿದರು. ನಮಗೆ ಅರ್ಥವಾಯಿತು. ಆದರೆ ಮರಳಿ ಹೋಗುವ ಮಾರ್ಗವಿರಲಿಲ್ಲ. ಮನೆಯ ಬಳಿ ನೀರಿಂಗಿಸುವ ತೊಟ್ಟಿ ಕಟ್ಟಿದ್ದಾಯ್ತು. ಬೋರ್ವೆಲ್ಗೆ ನೀರು ಉಣಿಸುವ ಪ್ರಕ್ರಿಯೆಯೂ ನಡೆಯಿತು.
ಸಾಹಸೀ ಪ್ರಯತ್ನ
ಈ ವಿಚಾರಗಳ ಕುರಿತಂತೆ ಅನೇಕರಿಗೆ ತಲೆಯಲ್ಲಿ ಹುಳು ಕೊರೆಯುತ್ತಲೇ ಇತ್ತು. ಆಗಲೇ ಕಣ್ಣೆದುರಿಗೆ ಕಂಡದ್ದು ಕಲ್ಯಾಣಿಗಳು. ‘ಯುವಾ ಬ್ರಿಗೇಡ್’ ತರುಣರನ್ನು ಕಲ್ಯಾಣಿಯತ್ತ ಸೆಳೆಯುವ ಗಂಭೀರ ಮತ್ತು ಸಾಹಸೀ ಪ್ರಯತ್ನಕ್ಕೆ ಕೈಹಾಕಿತು. ಅಚ್ಚರಿಯೇನು ಗೊತ್ತೆ? ಅನೇಕರಿಗೆ ಕಲ್ಯಾಣಿಯ ಪರಿಚಯವೇ ಇರಲಿಲ್ಲ. ಕಲ್ಯಾಣಿ ಕಾರ್ಯಕ್ರಮವೆಂದರೆ ಸಾಮೂಹಿಕ ಕಲ್ಯಾಣ ಮಾಡುವುದೆಂದೇ ಕೆಲವರು ಭಾವಿಸಿದ್ದರು ಕೂಡಾ!
ತೊಟ್ಟ ಹಠವನ್ನು ಸಾಕಾರಗೊಳಿಸುವ ಪ್ರಯತ್ನ ಶುರುವಾಯ್ತು. ಮೈಸೂರಿನಲ್ಲಿ ನಡೆದ ನೀರುಳಿಸುವ ತರಬೇತಿ ಶಿಬಿರದಲ್ಲಿ ರಾಜ್ಯದೆಲ್ಲೆಡೆಯಿಂದ ತರುಣರು ಬಂದರು. ಸುದೀರ್ಘ ಚರ್ಚೆ ನಡೆಯಿತು. ನೀರು, ಅದನ್ನುಳಿಸುವ ಮಾರ್ಗ – ಇವುಗಳ ಕುರಿತಂತೆ ಬೆಳಕು ಚೆಲ್ಲುವಲ್ಲಿ ಐಐಎಸ್ಸಿಯ ವಿಜ್ಞಾನಿಗಳಿದ್ದರು, ಪತ್ರಕರ್ತರಿದ್ದರು, ಚಳವಳಿಯ ಕಾರ್ಯಕರ್ತರೂ ಇದ್ದರು. ತರುಣ ಶಕ್ತಿ – ತಣಿಸಲಿ ಪೃಥ್ವಿ ಯೋಜನೆಗೆ ಚಾಲನೆ ದೊರೆಯುತ್ತಿದ್ದಂತೆ ಗತಿಯೂ ತೀವ್ರವಾಯ್ತು. ಕಲ್ಯಾಣಿಯ ಹುಡುಕಾಟ, ಸ್ವಚ್ಛತೆ ಭರದಿಂದ ಸಾಗಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆಯಲ್ಲಿ ಕನಿಷ್ಠ ಐದು ದಶಕಗಳಿಂದ ಮಾಯವಾಗಿದ್ದ ಕಲ್ಯಾಣಿಯನ್ನು ಗುರುತಿಸಲಾಯ್ತು. ಮೇ ೧ರ ಕಾರ್ಮಿಕರ ದಿನದಂದು ಸುತ್ತಲೂ ಬೆಳೆದುಕೊಂಡಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವುದರೊಂದಿಗೆ ಕೆಲಸ ಆರಂಭವಾಯ್ತು. ಅಲ್ಲಿಂದಾಚೆಗೆ ಮೂರ್ನಾಲ್ಕು ವಾರಾಂತ್ಯಗಳ ಕೆಲಸ. ಕನಿಷ್ಠ ೨೫ರಿಂದ ೩೦ ಟ್ರ್ಯಾಕ್ಟರುಗಳಷ್ಟು ಹೂಳು ಕಲ್ಯಾಣಿಯಿಂದ ಹೊರಹಾಕಲ್ಪಟ್ಟಿತು. ನೋಡುವ ಜನರ ಕಣ್ಣಿಗೆ ಹಬ್ಬ. ಕೆಲಸ ಮಾಡುತ್ತಿದ್ದ ಕಾರ್ಯಕರ್ತರ ಮೈ – ಕೈ ಚಿಂದಿ. ಹಂತಹಂತವಾಗಿ ಕಲ್ಯಾಣಿ ತೆರೆದುಕೊಳ್ಳಲಾರಂಭಿಸಿತು. ಒಂದೊಂದೇ ಮೆಟ್ಟಿಲು ಕಾಣಲಾರಂಭಿಸಿತು. ಸಮರೋಪಾದಿಯ ಕೆಲಸದ ನಂತರ ಕಲ್ಯಾಣಿಗೆ ಮರುಸ್ವರೂಪ ದೊರೆಯಿತು. ಅದೇ ದಿನ ಭೋರೆಂದು ಸುರಿದ ಮಳೆಗೆ ಅರ್ಧದಷ್ಟು ಕಲ್ಯಾಣಿಯಲ್ಲಿ ನೀರು ತುಂಬಿ ಕಾರ್ಯಕರ್ತರ ಹರ್ಷಕ್ಕೆ ಪಾರವೇ ಇಲ್ಲದಂತಾಯ್ತು.
ಉತ್ತರ ಕರ್ನಾಟಕಕ್ಕೆ ನಿಜವಾದ ಕಲ್ಯಾಣಿಯ ಕಿಡಿ ಹೊತ್ತಿಬಿಟ್ಟಿತ್ತು. ರಾಯಚೂರಿನ ತರುಣರು ಅತ್ಯಂತ ಕೊಳಕಾಗಿದ್ದ ಕಲ್ಯಾಣಿಯ ಆಳಕ್ಕೆ ಇಳಿದು ಸ್ವಚ್ಛತೆಗೆ ತೊಡಗಿದರು. ಕಾಲೇಜಿನ ವಿದ್ಯಾರ್ಥಿಗಳೂ ಶ್ರಮದಾನ ಮಾಡಿದ್ದು ವಿಶೇಷವಾಗಿತ್ತು. ಬಳ್ಳಾರಿಯ ಮೂರು ತಾಲ್ಲೂಕುಗಳಲ್ಲಿ ಮೂರು ಕಲ್ಯಾಣಿಗಳ ಸ್ವಚ್ಛತೆಯ ಸಾಹಸ. ಆರಂಭದ ಕೆಲವು ದಿನಗಳ ಕಾಲ ಕಲ್ಯಾಣಿಯೇ ದೊರೆಯದೆ ಕಂಗಾಲಾಗಿದ್ದ ಜಿಲ್ಲೆ ಅದು. ಕಲ್ಯಾಣಿ ಹುಡುಕಿಕೊಟ್ಟವರಿಗೆ ಬಹುಮಾನವನ್ನೂ ಘೋಷಿಸಿತ್ತು ಬಳ್ಳಾರಿ ಯುವಾ ಬ್ರಿಗೇಡ್. ಈಗ ಕೆಲಸಕ್ಕಿಳಿದ ಮೇಲೆ ಅರೆಕ್ಷಣವೂ ಸುಮ್ಮನಿರದೆ ದುಡಿಯಲಾರಂಭಿಸಿದರು. ಸಂಡೂರಿನಲ್ಲಿ ಕಲ್ಯಾಣಿಯ ಆಳದಲ್ಲಿ ಧ್ವನಿವರ್ಧಕವನ್ನಿಟ್ಟು ದೇಶಭಕ್ತಿಗೀತೆ ಕೇಳುತ್ತಾ ಕಾರ್ಯಕರ್ತರು ಸ್ವಚ್ಛತೆಯಲ್ಲಿ ತೊಡಗಿದ್ದು ನೋಡುಗರ ಕಣ್ಮನ ಸೆಳೆದಿತ್ತು. ಬಳ್ಳಾರಿಯಲ್ಲಿಯೇ ಆರು ಜನ ಸಾಧುಗಳು ಈ ಕಾರ್ಯಕ್ಕಿಳಿದು ಜನರ ಹುಬ್ಬು ಮೇಲೇರುವಂತೆ ಮಾಡಿಬಿಟ್ಟಿದ್ದರು.
ಸ್ವಚ್ಛತೆಯ ಸಾಹಸ
ಗದಗಿನ ರಾಚೋಟೇಶ್ವರ ದೇವಸ್ಥಾನದ ಕಲ್ಯಾಣಿಯ ಆಳವೇ ೭೦ ಅಡಿ. ಅದರ ಆಯ್ಕೆಯೇ ಸಾಹಸದ ಪರಮಾವಧಿ. ಕಾರ್ಯಕರ್ತರು ಅಲ್ಲಿ ಸ್ವಚ್ಛ ಮಾಡಲು ನಡೆಸಿದ್ದು ಬರಿಯ ಸ್ವಚ್ಛತಾ ಆಂದೋಲನವನ್ನಲ್ಲ, ಸ್ವಚ್ಛತೆಯ ಸಾಹಸ! ಹುಬ್ಬಳ್ಳಿಯ ತರುಣರು ಕಲ್ಯಾಣಿ ಸಿಗದೆ ಕೆರೆಯೊಂದರ ಆವರಣವನ್ನು ಸ್ವಚ್ಛಗೊಳಿಸಿ ತಮ್ಮ ಜಲಪ್ರೇಮವನ್ನು ಮೆರೆದದ್ದು ವಿಶೇಷವಾಗಿತ್ತು. ಹೊನ್ನಾವರದವರು ಸದಾ ಹರಿಯುವ ರಾಮತೀರ್ಥದ ಆವರಣವನ್ನು ಸ್ವಚ್ಛ ಮಾಡಿ ಜನಮನ್ನಣೆ ಗಳಿಸಿದರು. ಮಂಡ್ಯದಲ್ಲಿ ಕಣ್ಣಿಗೆ ಕಾಣದಂತೆ ಅಗೋಚರವಾಗಿ ಮರೆಯಾಗಿದ್ದ ಮುನ್ನೂರು ವರ್ಷಗಳ ಹಳೆಯ ಕಲ್ಯಾಣಿ ಕಾರ್ಯಕರ್ತರ ಶ್ರಮದಿಂದ ಪುನರುಜ್ಜೀವನಗೊಂಡಾಗ, ಊರಿನ ಜನರು ಬಿಡಿ
ಸ್ವತಃ ಕೆಲಸ ಮಾಡಿದವರೂ ಅಚ್ಚರಿಗೊಂಡಿದ್ದರು. ಇಡಿಯ ಕಲ್ಯಾಣಿಯೇ ಜೀವಂತಗೊಂಡು ಉಸಿರಾಡುತ್ತಿತ್ತು. ಮೈಸೂರು, ಶಿವಮೊಗ್ಗ, ಡಾಬ್ಸ್ಪೇಟೆ, ಜಿಗಣಿ, ಗೊಟ್ಟಿಗೆರೆ,
ವಿಜಯಪುರ, ಕಲ್ಬುರ್ಗಿ, ಕೊಪ್ಪಳ ಎಲ್ಲೆಡೆ ನೂರಾರು ಕಾರ್ಯಕರ್ತರ ಸಮಾವೇಶ, ಹಬ್ಬದ ವಾತಾವರಣ ನಡೆದೇ ಇತ್ತು. ಚಿಕ್ಕಬಳ್ಳಾಪುರದಲ್ಲಿ ಕಲ್ಯಾಣಿ ಸ್ವಚ್ಛತೆಯ ನಂತರ ಅದೇ ಜಾಗದಲ್ಲಿ ಕಾರ್ಯಕರ್ತನೊಬ್ಬನ ಹುಟ್ಟಿದ ಹಬ್ಬದ ಆಚರಣೆಯೂ ನಡೆದುಹೋಯಿತು.
ಇದಕ್ಕೆಲ್ಲ ಕಿರೀಟಪ್ರಾಯವಾದದ್ದು, ಗೋವೆಯಲ್ಲಿ ವಿದ್ಯಾರಣ್ಯರು ಕಟ್ಟಿದ ಮಾಧವತೀರ್ಥವೆಂಬ ಕಲ್ಯಾಣಿಯನ್ನು ಅಲ್ಲಿನ ಯುವಾ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಛಗೊಳಿಸಿದ್ದು. ಈ ಕಲ್ಯಾಣಿಯಲ್ಲಿ ಮತಾಂತರಿತ ಹಿಂದೂಗಳನ್ನು ಮಾತೃಧರ್ಮಕ್ಕೆ ಸೆಳೆದು ತರುವ ಪ್ರಯತ್ನ ಮಾಡಲಾಗುತ್ತಿತ್ತಂತೆ!
ರೋಮಾಂಚಕ ದೃಶ್ಯ
ಕಲ್ಯಾಣಿ ಸ್ವಚ್ಛತೆ ಮಾಡುವ ಯೋಜನೆ ಬಲು ದೊಡ್ಡದು ಮತ್ತು ಕಡುಕಷ್ಟದ್ದೆಂದು ಆರಂಭದಲ್ಲಿ ಖಂಡಿತಾ ಅನ್ನಿಸಿತ್ತು. ಆದರೆ ದಿನ ಕಳೆದಂತೆ ಮಾಡುವ ಕೆಲಸ ಆನಂದದಾಕವಾಯ್ತು. ಉಡುಪಿಯ ಕಾರ್ಯಕರ್ತರು ತಡವಾಗಿ ಅಖಾಡಕ್ಕಿಳಿದರೂ ೮೦೦ ವರ್ಷಗಳಷ್ಟು ಹಳೆಯ ಕಲ್ಯಾಣಿಗೆ ಕೈಹಾಕಿದರು. ಅದಕ್ಕೆ ಹೊಂದಿಕೊಂಡಿದ್ದ ದೇವಸ್ಥಾನದ ಅರ್ಚಕರು ಆನಂದಬಾಷ್ಪ ಸುರಿಸುತ್ತಾ ತನ್ನ ಇಳಿವಯಸ್ಸಿನಲ್ಲಿ ಕಂಡ ಈ ದೃಶ್ಯದಿಂದ ರೋಮಾಂಚಿತರಾಗಿದ್ದರು.
ಅನೇಕರು ಬಗೆಬಗೆಯ ಪ್ರಶ್ನೆ ಕೇಳಿದ್ದರು. ಕಲ್ಯಾಣಿ ಸ್ವಚ್ಛ ಮಾಡುವುದರಿಂದ ಲಾಭವೇನು? – ಇತ್ಯಾದಿ. ಪ್ರತಿಯೊಂದರಲ್ಲೂ ಲಾಭ ಹುಡುಕುವುದು ನಮ್ಮೆಲ್ಲರಿಗೂ ಚಟದಂತಾಗಿಬಿಟ್ಟಿದೆ. ಸತ್ಯ ಹೇಳಬೇಕೆಂದರೆ ಕಲ್ಯಾಣಿಯ ಸ್ವಚ್ಛತೆಯಲ್ಲಿ ನಮಗೆ ಲಾಭವಿದೆ. ಆದರಿದು ಅಲ್ಪಕಾಲದ ಕೆಲವರಿಗೆ ಮಾತ್ರ ದಕ್ಕುವಂಥದ್ದಲ್ಲ. ಇದು ಶಾಶ್ವತವಾದ ಮತ್ತು ಇಡಿಯ ಮನುಕುಲಕ್ಕೆ ದೊರಕುವ ಲಾಭ. ಅಲ್ಲದೇ ಮತ್ತೇನು? ನಮ್ಮ ಹಿರಿಯರು ಮಂದಿರಕ್ಕೆ ಹೊಂದಿಕೊಂಡಂತೆ ನೀರಿಂಗಿಸುವ ಕಲ್ಯಾಣಿಗಳನ್ನು ಕಟ್ಟಿಸಿ ಅಂತರ್ಜಲವನ್ನು ಪುಷ್ಟಿಗೊಳಿಸಿದರೆ ನಾವು ಅವುಗಳನ್ನು ಮುಚ್ಚಿ ರಾಕ್ಷಸರಾಗುತ್ತಿದ್ದೇವಲ್ಲ! ಈ ಪೀಳಿಗೆಯ ತರುಣವರ್ಗ ಆ ಪಟ್ಟದಿಂದ ಮುಕ್ತಗೊಂಡು ಹೊಸ ಕಲ್ಯಾಣಿಯನ್ನು ಕಟ್ಟಲಾರೆವು ಸರಿ; ಕೊನೆಯ ಪಕ್ಷ ಹಳೆಯದ್ದನ್ನು ಉಳಿಸಬಲ್ಲೆವು ಎಂದು ಎದೆತಟ್ಟಿ ಹೇಳಿತಲ್ಲ, ಅದು ವಿಶೇಷ. ಈ ಯಾತ್ರೆ ಇಲ್ಲಿಗೆ ನಿಲ್ಲುವುದಿಲ್ಲ. ಬಾಯಾರಿದ ಭೂಮಿಯನ್ನು ತಣಿಸಬೇಕೆಂಬ ನಮ್ಮ ಸಾಹಸಕ್ಕೆ ವರುಣದೇವ ಭರಪೂರ ಮಳೆಯಾಗಿ ಸುರಿದ. ಈಗ ನಮಗೆ ಸವಾಲಿದೆ. ಬರಡಾಗಿರುವ ನೆಲಕ್ಕೆ ಹಸಿರು ಕೊಟ್ಟು, ತಣಿದ ಭೂಮಿ ಉಸಿರಾಡಲು ಅನುವು ಮಾಡಿಕೊಡುವ ಪ್ರಯತ್ನ ಶುರುವಾಗಲಿದೆ, `ಸಸ್ಯಶ್ಯಾಮಲೆ’ಯ ಹೆಸರಿನಲ್ಲಿ!
ಯುವಾ ಬ್ರಿಗೇಡ್ ಇದೀಗ ರಾಜ್ಯಾದ್ಯಂತ ಕೆರೆಗಳ ಬದಿಯಲ್ಲಿ, ಗದ್ದೆಯ ಬದುವಿನಲ್ಲಿ, ಸ್ಮಶಾನದ ಆವರಣಕ್ಕೆ, ಗೋಮಾಳದ ಸುತ್ತಲೂ, ಎಲ್ಲೆಲ್ಲೂ ಪರಿಸರಕ್ಕೆ ಪೂರಕವಾದ ಗಿಡ ನೆಡುವ ಯೋಜನೆ ಕೈಗೆತ್ತಿಕೊಂಡಿದೆ. ಊರಿಗೊಂದು ಅರಳಿ ನೆಟ್ಟು ಉಸಿರು ಮರಳಿ ಕೊಡುವ ಸಂಕಲ್ಪ ಮಾಡಿದೆ.
ಹೌದು. ಹೊಸ ಪೀಳಿಗೆ ಎದ್ದಿದೆ. ಜಾಡ್ಯವನ್ನು ಕಿತ್ತೆಸೆದು ಜಾಗೃತವಾಗಿ ನಿಂತಿದೆ. `ವಿಶ್ವಗುರು ಭಾರತ’ ನಿರ್ಮಾಣಕ್ಕೆಂದು ದೇಹದ ಹನಿ ಹನಿ ಬೆವರನ್ನು ಸುರಿಸಲು, ರಕ್ತದ ಕಣಕಣ ಬಸಿಯಲು ಸಿದ್ಧವಾಗಿದೆ. `ಅಚ್ಛೇ ದಿನ್’ ಸನಿಹದಲ್ಲಿಯೇ ಇದೆ!
ಏನಿದು ಯುವಾ ಬ್ರಿಗೇಡ್?
ಯುವಾ ಬ್ರಿಗೇಡ್ ಭಾರತವನ್ನು ವಿಶ್ವಗುರುವನ್ನಾಗಿಸುವ ಕನಸು ಕಟ್ಟಿಕೊಂಡ ೧೮ರಿಂದ ೩೦ ವರ್ಷ ವಯಸ್ಸಿನ ಯುವಕರ ಪಡೆ. ಯುವಕರಲ್ಲಿರುವ ದೇಶಪ್ರೇಮದ ಭಾವನೆಯನ್ನು ಜಾಗೃತಗೊಳಿಸಿ, ಅದನ್ನು ರಾಷ್ಟ್ರನಿರ್ಮಾಣದ ಕಾಯಕಕ್ಕೆ ತೊಡಗಿಸುವ ಒಂದು ಪ್ರಯತ್ನವೇ ಯುವಾ ಬ್ರಿಗೇಡ್. ಖ್ಯಾತ ವಾಗ್ಮಿ, ಲೇಖಕ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ, ೮ ಜೂನ್ ೨೦೧೪ರಂದು ಆರಂಭವಾದ ಈ ಯುವಪಡೆ ತನ್ನ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಕರ್ನಾಟಕದಲ್ಲಿ ಜನರ ಗಮನವನ್ನು ಸೆಳೆಯುತ್ತಿದೆ. ಪ್ರಾರಂಭದಲ್ಲಿ ಫೇಸ್ಬುಕ್ ಮುಂತಾದ ಸಾಮಾಜಿಕ ತಾಣಗಳ ಮೂಲಕ ಯುವಕರನ್ನು ಸಂಪರ್ಕಿಸಿ, ಮುಂದಿನ ದಿನಗಳಲ್ಲಿ ಒಂದೊಂದೇ ಸೇವಾ ಚಟುವಟಿಕೆಗಳ ಮೂಲಕ ಹಳ್ಳಿಗಾಡಿನ ಯುವಕರನ್ನೂ ಕೂಡ ಆಕರ್ಷಿಸಲು ಯಶಸ್ವಿಯಾಗಿದೆ. ಯುವಾ ಬ್ರಿಗೇಡ್ ತಂಡದ ಚಟುವಟಿಕೆಗಳಲ್ಲಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ತರುಣರು ತಮ್ಮನ್ನು ತಾವೆ ತೊಡಗಿಸಿಕೊಂಡಿದ್ದಾರೆ.
‘ಕಲ್ಯಾಣಿ ಪುನರುಜ್ಜೀವನ ಯೋಜನೆ’ಯನ್ನು ಬ್ರಿಗೇಡ್ ೨೦೧೫ರ ಮೇ ತಿಂಗಳಿನಿಂದ ಆರಂಭಿಸಿದೆ. ಬಹುತೇಕ ಕಣ್ಮರೆಯಾಗಿದ್ದ ಸುಮಾರು ೩೬ ಕಲ್ಯಾಣಿಗಳನ್ನು ಇದುವರೆಗೆ ಬ್ರಿಗೇಡ್ನ ಕಾರ್ಯಕರ್ತರು ಪುನರುಜ್ಜೀವನಗೊಳಿಸಿದ್ದಾರೆ. ಅತ್ಯಂತ ಶ್ರಮದಾಯಕವಾದ ಈ ಕಾರ್ಯದಲ್ಲಿ ಕಾರ್ಯಕರ್ತರು ಆನಂದದ ಅನುಭವವನ್ನೂ, ಜೀವನದ ಸಾರ್ಥಕ್ಯವನ್ನೂ ಕಂಡಿದ್ದಾರೆ.
ಇದೀಗ ಯುವಾ ಬ್ರಿಗೇಡ್ ಮತ್ತೊಂದು ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ. ‘ವಿಶ್ವ ಪರಿಸರ ದಿನ’ ಮತ್ತು ‘ವಿಶ್ವ ಯೋಗದಿನ’ – ಈ ಎರಡೂ ವಿಶೇಷ ದಿನಗಳ ಸಮನ್ವಯವಾಗಿ ‘ಪೃಥ್ವಿಯೋಗ’ ಎಂಬ ಹೆಸರಿನಲ್ಲಿ ಪೃಥ್ವಿಗೆ ಶ್ವಾಸಕೋಶಗಳಂತಿರುವ ಸಸ್ಯಸಂಪತ್ತನ್ನು ಬೆಳೆಸುವ ಕಾರ್ಯವನ್ನು ಕೈಗೊಳ್ಳಲು ಯುವಾ ಬ್ರಿಗೇಡ್ ನಿಶ್ಚಯಿಸಿದೆ.