ನೈಸರ್ಗಿಕ ನೀರು ಪಡೆಯುವ ಏಕೈಕ ಪಾರಂಪರಿಕ ಜಾಣ್ಮೆ – ಸುರಂಗ. ಹನಿ ನೀರಾವರಿಗೆ, ಬಾವಿ ತೋಡಲು, ಕೊಳವೆ ಬಾವಿ ತೋಡಲು – ನಮ್ಮ ಬ್ಯಾಂಕ್ಗಳಲ್ಲಿ ಸಾಲದ ವ್ಯವಸ್ಥೆಗಳಿವೆ. ಆದರೆ ಸುರಂಗ ತೋಡಲು ಸಾಲವಿಲ್ಲವಂತೆ, ಕಾರಣ ಅದು ನೈಸರ್ಗಿಕ ಸೋರ್ಸ್! ಸುರಂಗಗಳು ನೀರಿನ ನಿಧಿಗಳು. ಸುರಂಗದೊಂದಿಗೆ ಬದುಕನ್ನು ಕಟ್ಟಿಕೊಂಡ ಕುಟುಂಬವೊಂದರ ಗಾಥೆಯನ್ನು ಓದುವುದರ ಮೂಲಕ ಸುರಂಗದ ನೀರಿನ ತಾಕತ್ತನ್ನು ಅರ್ಥಮಾಡಿಕೊಳ್ಳಬಹುದು.
ಈಚೆಗೆ ಬೀದರಿನ ಜಿಲ್ಲಾಧಿಕಾರಿ ಡಾ. ಜಾಫರ್ ಸುರಂಗಗಳನ್ನು ನೋಡಲು ಕನ್ನಾಡಿನ ಗಡಿಪ್ರದೇಶಕ್ಕೆ ಬಂದಿಳಿದರು. ಪೆರ್ಲದ ಸನಿಹದ ಶೇಣಿಯ ಸುರಂಗಗಳನ್ನು ಹೊಕ್ಕರು. ರಚನೆಗಳನ್ನು ಗಮನಿಸಿದರು. ಬಹುಮನಿ ರಾಜರ ಕಾಲದ ತಮ್ಮೂರಿನ ಕರೇಝ್ಗಳಿಗೆ – ಸುರಂಗದಂತಹ ರಚನೆಗಳು – ಕಾಯಕಲ್ಪ ನೀಡುವ ಸಂಕಲ್ಪ ತೊಟ್ಟರು. ಅನುಭವಿ ಸುರಂಗಕರ್ಮಿ ಕುಂಞಂಬು ಅವರನ್ನು ಬೀದರಿಗೆ ಕರೆಸಿಕೊಂಡು ಕರೇಝ್ಗಳನ್ನು ತೋರಿಸಿದರು. ಕುಂಞಂಬು ಅವರಿಂದ ಹಸಿರು ನಿಶಾನೆ. ಪುನರುಜ್ಜೀವನ ಮಾಡಬಹುದೆಂಬ ವಿಶ್ವಾಸ. ಜಿಲ್ಲಾಧಿಕಾರಿ ಖುಷ್. ಎಲ್ಲವೂ ಸರಿಹೋದರೆ ಕರೇಝ್ಗಳು ಮರುಹುಟ್ಟು ಪಡೆದು ಬರದ ನಾಡಿಗೆ ವರವಾಗುವ ಸಾಧ್ಯತೆಗಳು ನಿಚ್ಚಳವಾಗಿದೆ.
ಸುರಂಗಗಳು ನೀರಿನ ನಿಧಿಗಳು. ಸುರಂಗದೊಂದಿಗೆ ಬದುಕನ್ನು ಕಟ್ಟಿಕೊಂಡ ಕುಟುಂಬವೊಂದರ ಗಾಥೆಯನ್ನು ಓದುವುದರ ಮೂಲಕ ಸುರಂಗದ ನೀರಿನ ತಾಕತ್ತನ್ನು ಅರ್ಥಮಾಡಿಕೊಳ್ಳಬಹುದು –
ದಕ್ಷಿಣ ಕನ್ನಡ ಜಿಲ್ಲೆ-ಕೇರಳದ ಸರಹದ್ದಿನ ಮಾಣಿಮೂಲೆ ಅಚ್ಯುತ ಭಟ್ಟರು(೮೬) ಸುರಂಗ ಕೊರೆತದ ವಿಶೇಷಜ್ಞ. ಎಂಭತ್ತರ ಜವ್ವನಿಗ. ತನ್ನ ಬಾಲ್ಯದ ದಿನಗಳ ನೆನಪಿನ್ನೂ ಅವರಿಗೆ ಹಸಿಯಾಗಿದೆ. ಬಾಲ್ಯದಲ್ಲಿ ತಾನು ಪಡ್ರೆಯಲ್ಲಿ ಪಡೆದ ಸಂಸ್ಕೃತ ಶಿಕ್ಷಣದ ಕ್ಷಣಗಳು. ಆಗ ಕೇರಳದ ಅದ್ರಾಮ ಎಂಬವರು ನೀರಿಗಾಗಿ ಸುರಂಗ ಕೊರೆದುದು. ತಂದೆಯವರು ಅವರನ್ನು ತಮ್ಮಲ್ಲಿಗೆ ಕರೆದೊಯ್ದು ಒಂದಿಬ್ಬರಿಗೆ ಸುರಂಗ ತೋಡಲು ಕಲಿಸಿದ್ದು. ಸುರಂಗ ತೋಡಿದ್ದು…. ಹೀಗೆ.
ಅಚ್ಯುತ ಭಟ್ಟರ ಭೂಮಿ ಸಮತಟ್ಟಲ್ಲ. ಇಳಿಜಾರು ಗುಡ್ಡ. ಹಿರಿಯರ ಕಾಲದಿಂದಲೇ ಕೃಷಿ ಕಾಯಕ. ಗುಡ್ಡವಾದ್ದರಿಂದ ಬಾವಿ ತೋಡಲು ಅಸಾಧ್ಯ. ಸಾಹಸದಿಂದ ತೋಡಿದರೂ ನೀರು ಸಿಗಬಹುದೆಂಬ ವಿಶ್ವಾಸವಿಲ್ಲ. ಒಸರುವ ಒರತೆ ನೀರನ್ನು ಹಿಡಿದಿಡಬೇಕಷ್ಟೇ. ಇದರ ಹೊರತು ಬೇರೆ ನೀರಿನ ಮೂಲವಿರಲ್ಲ.
ಭಟ್ಟರಿಗೆ ಕೃಷಿಯ ಜವಾಬ್ದಾರಿ ಹೆಗಲಿಗೆ ಬಂದಾಗ ತಂದೆಯವರು ಕೊರೆಸಿದ್ದ ಸುರಂಗವೊಂದರಿಂದ ಹೊರ ಬರುವ ನೀರು ಬದುಕಿಗೆ ಆಧಾರ. ಕಿರುಬೆರಳು ಗಾತ್ರದಷ್ಟು ಹರಿಯುವ ನೀರನ್ನು ಸಂಗ್ರಹಿಸಿ ಮನೆವಾರ್ತೆಗೆ ಬಳಸುತ್ತಿದ್ದರು.
ಇನ್ನೊಂದು ಸುರಂಗ ಕೊರೆದರೆ ಹೇಗೆ? ಮನದೊಳಗೆ ಹೊಸ ಮಿಂಚು. ಮೊದಲ ಸುರಂಗ ತೋಡಿದ ಅದ್ರಾಮರಿಗೆ ಮತ್ತೊಂದು ಅವಕಾಶ. ಸುಮಾರು ಒಂದೂವರೆ ಇಂಚು ನೀರು ಸಿಕ್ಕಾಗ ಖುಷಿಯೋ ಖುಷಿ.
ತೀರಾ ಬೆಟ್ಟಪ್ರದೇಶವಾದ್ದರಿಂದ ಭೂಮಿಯನ್ನು ಅಲ್ಲಲ್ಲಿ ಸಮತಟ್ಟು ಮಾಡಿ ಮನೆ, ಕೃಷಿ ಮಾಡಬೇಕಾದ ಅನಿವಾರ್ಯತೆ. ಅಚ್ಯುತ ಭಟ್ಟರು ತಟ್ಟು ಮಾಡಿದಲ್ಲೆಲ್ಲಾ ನೀರಿಗಾಗಿ ಸುರಂಗ ಕೊರೆಯುತ್ತಾ ಬಂದರು. ಲೆಕ್ಕಮಾಡಿದರೆ ಈಗವರಲ್ಲಿ ಇಪ್ಪತ್ತಮೂರು ಸುರಂಗಗಳು ಶುದ್ಧನೀರನ್ನು ಕೊಡುತ್ತಿವೆ. ಇದು ಅವರ ಆರೆಕ್ರೆ ಅಡಿಕೆ ತೋಟಕ್ಕೆ ಜೀವಾಧಾರ. ಇಪ್ಪತ್ತನಾಲ್ಕನೇ ಸುರಂಗ ಪ್ರಗತಿಯಲ್ಲಿದೆ.
‘ಸುರಂಗ’ – ಏನಿದು?
ಇದು ಗುಡ್ಡದಡ್ಡಕ್ಕೆ ಕೊರೆದು ಮಾಡಿದ ರಚನೆ. ಆರುವರೆ ಅಡಿ ಎತ್ತರ, ಮೂರಡಿ ಅಗಲದಷ್ಟು – ಮನುಷ್ಯ ಹೋಗುವಷ್ಟು – ಗುಡ್ಡವನ್ನು ಅಡ್ಡಕ್ಕೆ ಕೊರೆಯುವುದು. ಕೃಷಿಯಲ್ಲಿ ಬಳಸುವಂತಹುದೇ, ಆದರೆ ಚಿಕ್ಕದಾದ ಪಿಕ್ಕಾಸಿ ಮುಖ್ಯ ಅಸ್ತ್ರ! ಒಬ್ಬ ಅಗೆಯಲು, ಮತ್ತೊಬ್ಬ ಮಣ್ಣು ತುಂಬಿಸಲು, ಇನ್ನೊಬ್ಬ ಮಣ್ಣನ್ನು ಹೊರ ಸಾಗಿಲು – ಹೀಗೆ ಮೂವರ ತನುಶ್ರಮ.
ಕೊಂಕಣ ರೈಲಿನಲ್ಲಿ ಪ್ರಯಾಣಿಸಿದವರಿಗೆ ‘ಸುರಂಗ’ ನೋಡಿ ಗೊತ್ತು. ಗುಡ್ಡವನ್ನು ಕೊರೆದು ಮಾಡಿದ ಮಾರ್ಗದಲ್ಲಿ ರೈಲು ಓಡುವಾಗ ಸಿಗುವ ಅನುಭವ! ಒಂದು ಕಡೆ ಹೊಕ್ಕು ಮತ್ತೊಂದು ಕಡೆ ಹೊರಬರಬಹುದು. ಸುರಂಗದಲ್ಲಿ ಹೊರ ಬರುವ ವ್ಯವಸ್ಥೆಯಿಲ್ಲ!
ಅಚ್ಯುತ ಭಟ್ಟರ ಗುಡ್ಡದ ಮಣ್ಣು – ಜಂಬಿಟ್ಟಿಗೆ(ಮುರ). ಸುರಂಗ ಕೊರೆಯಲು ಸೂಕ್ತ ಮಣ್ಣು. ಜರಿಯುವುದಿಲ್ಲ, ಕುಸಿಯುವುದಿಲ್ಲ. ಸುರಂಗ ಕೊರೆತ ಎಚ್ಚರ ಬೇಡುವ ಕೆಲಸ. ಕೊರೆಯುತ್ತಾ ಮುಂದೆ ಹೋದಷ್ಟೂ ಬೆಳಕಿನ ಅಭಾವ. ಕ್ಯಾಂಡಲ್, ಲ್ಯಾಟನ್ ಬಳಸುತ್ತಾರೆ. ಕೆಲವೊಂದು ಸಲ ಆಮ್ಲಜನಕ ಅಭಾವವಾಗುತ್ತದೆ. ಆಗ ಒಮ್ಮೆ ಹೊರಗೆ ಬಂದು ಸ್ವಲ್ಪ ಹೊತ್ತು ಇದ್ದು ಪುನಃ ಕೆಲಸ ಆರಂಭ. ಮಣ್ಣಿನಲ್ಲಿ ನೀರಿನ ಪಸೆ ದೊರೆತರೆ ‘ಮುಂದೆ ನೀರು ಸಿಗುತ್ತದೆ’ ಎಂಬ ಸೂಚನೆ.
‘ಕೊರೆದಷ್ಟೂ ನೀರಿನ ಪಸೆಯ ಸೂಚನೆ ಸಿಗದಿದ್ದರೆ ಸುರಂಗ ಕೊರೆವ ದಿಕ್ಕನ್ನು ಅಲ್ಲೇ ಸ್ವಲ್ಪ ಬದಲಿಸಿದರೆ ಆಯಿತು. ಅದೆಲ್ಲಾ ಅಲ್ಲಲ್ಲಿನ ನಿರ್ಧಾರ’ ಎನ್ನುತ್ತಾರೆ ಭಟ್. ನೀರಿನ ಒರತೆ ಸಿಕ್ಕಿದಲ್ಲಿಗೆ ಕೊರೆತ ಬಂದ್. ಒರತೆಯ ಸೆಲೆ ಸಿಕ್ಕಿದಲ್ಲಿ ಮಣ್ಣಿನಿಂದ ಸಣ್ಣ ದಂಡೆ(ಕಟ್ಟ) ಮಾಡಿದರೆ ನೀರು ಅದರಲ್ಲಿ ತುಂಬಲು ಅನುಕೂಲ. ಸುರಂಗದುದ್ದಕ್ಕೂ ಚಿಕ್ಕ ಕಣಿಯನ್ನು ತೆಗದು ನೀರನ್ನು ಹೊರತರಬಹುದು. ಕಣಿಯ ಬದಲಿಗೆ ಅಡಿಕೆಯ ದಂಬೆ ಬಳಕೆ.
ಒಳಭಾಗದಿಂದ ನೀರು ಹೊರಬರುವಾಗ, ತಾಪಕ್ಕೆ ನೀರು ಆರಿಹೋಗುತ್ತದೆ. ಇದಕ್ಕಾಗಿ ಭಟ್ಟರು ಪಿವಿಸಿ ಪೈಪನ್ನು ಬಳಸಿದ್ದಾರೆ. ನೀರಿನ ಮೂಲದಿಂದ ಪೈಪ್ ಜೋಡಣೆ. ‘ಪೈಪ್ ಹಾಕಿದ ಮೇಲೆ ಲಭ್ಯ ನೀರನ್ನೆಲ್ಲಾ ಪಡೆದುಕೊಳ್ಳುತ್ತೇವೆ.’ ಅಚ್ಯುತ ಭಟ್ ಖುಷಿ.
ಇಪ್ಪತ್ತೆರಡು ಸುರಂಗದಿಂದ ಬರುವ ನೀರು ನಾಲ್ಕು ಟ್ಯಾಂಕಿಗಳಲ್ಲಿ ಸಂಗ್ರಹ. ಒಂದೊಂದು ಟ್ಯಾಂಕಿಗೆ ನಾಲ್ಕೈದು ಸುರಂಗದ ಸಂಪರ್ಕ. ಟ್ಯಾಂಕಿಯಿಂದ ಟ್ಯಾಂಕಿಗೆ ಲಿಂಕ್. ಇಲ್ಲಿಂದ ನೇರ ತೋಟಕ್ಕೆ. ದೇವರ ಪೂಜೆಗೂ ಇದೇ ನೀರು. ಅಡುಗೆ ಮನೆಗೆ ನೇರ ಸಂಪರ್ಕ. ನಲ್ಲಿ ತಿರುಗಿಸಿದರೆ ಆಯಿತು.
‘ನಮ್ಮ ಮನೆಯ ಸ್ವಲ್ಪ ಮೇಲೆ ಪಂಚಾಯತ್ ಒಂದು ಕೊಳವೆ ಬಾವಿ ಕೊರೆಸಿತು. ನಮ್ಮ ಸುರಂಗದ ನೀರು ಎಲ್ಲಿ ಆರುತ್ತದೋ ಎಂಬ ಭಯವಿತ್ತು. ಏನೂ ಆಗಲಿಲ್ಲ’ ಎನ್ನುತ್ತಾರೆ ಅಚ್ಯುತ ಭಟ್ಟರ ಪುತ್ರ ಗೋವಿಂದ ಭಟ್.
ಸುರಂಗ ಜ್ಞಾನಿ-ವಿಜ್ಞಾನಿ
ಮಾಣಿಲ – ಬಂಟ್ವಾಳ ತಾಲೂಕಿನ ಗ್ರಾಮ. ಸುಮಾರು ಐನೂರ ಐವತ್ತು ಮನೆಗಳು. ಶೇ. ೬೫ರಷ್ಟು ಮನೆಗಳಲ್ಲಿ ಕುಡಿವನೀರಿಗೆ ‘ಸುರಂಗ’ವೇ ಆಧಾರ. ಮಿಕ್ಕುಳಿದಂತೆ ಸಮತಟ್ಟು ಪ್ರದೇಶ. ಬಾವಿಯೋ, ಕೆರೆಯೋ ಹೊಂದಿದವರು. ಹತ್ತಿರದ ಬಾಯಾರು ಸುತ್ತಮುತ್ತ ಮೊದಲಿನಿಂದಲೂ ಸುರಂಗ ನೀರಿನ ಬಳಕೆ ಇದೆ. ಅದರಲ್ಲೂ ಮಾಣಿಮೂಲೆಯ ಹದಿನೆಂಟು ಮನೆಗಳ ಬದುಕು – ಸುರಂಗದ ನೀರಿನಲ್ಲಿ!
‘ನಮ್ಮೂರಿನಲ್ಲಿ ಸುರಂಗ ಕೊರೆಯಲು ಸ್ಥಳ ಸೂಚಿಸುವುದು ತಂದೆಯವರೇ. ಏನಿಲ್ಲವೆಂದರೂ ನೂರು ಆಗಿರಬಹುದು. ಎಲ್ಲಿಯೂ ವಿಫಲವಾದುದೇ ಇಲ್ಲ’ ಎನ್ನಲು ಗೋವಿಂದ ಭಟ್ಟರಿಗೆ ಹೆಮ್ಮೆ. ‘ಇಂತಹ ಜಾಗದಲ್ಲಿ ಸುರಂಗ ಕೊರೆದರೆ ನೀರಿದೆ’ ಎಂದು ಅಚ್ಯುತ ಭಟ್ಟರು ಕರಾರುವಾಕ್ಕಾಗಿ ಹೇಳಬಲ್ಲರು. ‘ಧೂಪದ ಮರ, ಬಸರಿ ಮರಗಳು ಅವುಗಳ ಬೇರನ್ನು ಬಹಳ ಆಳವಾಗಿ ಇಳಿಬಿಡುತ್ತವೆ. ಅಂತಹ ಸ್ಥಳದಲ್ಲಿ ಸುರಂಗ ತೋಡಬಹುದು. ಹುತ್ತ, ಜರಿಗಿಡಗಳ ಸಾಲು, ದಟ್ಟವಾಗಿ ಬೆಳೆವ ಸಸ್ಯಗಳನ್ನೂ ಗಮನಿಸಬೇಕಾಗುತ್ತದೆ.’
ಶ್ರಮ ಬೇಡುವ ಕೆಲಸ
‘ಗುಡ್ಡ ಪ್ರದೇಶವಾದ ಕಾರಣ ಆಳವಾಗಿ ಬಾವಿ ತೋಡಲು ಸಾಧ್ಯವಿಲ್ಲ. ನೀರು ಸಿಕ್ಕೀತು ಅಂತ ವಿಶ್ವಾಸವಿಲ್ಲ. ಹಾಗಾಗಿ ಸುರಂಗದ ಕಲ್ಪನೆ ಹಿರಿಯರಿಗೆ ಬಂದಿರಬೇಕು’ ಎನ್ನುತ್ತಾರೆ ಗೋವಿಂದ ಭಟ್. ಸಮತಟ್ಟು ನೆಲವಾಗುತ್ತಿದ್ದರೆ ದೈತ್ಯಯಂತ್ರಗಳು ಬರುತ್ತಿದ್ದುವೇನೋ!
ಲಕ್ಷ ಸುರಿದು, ಭೂಮಿ ಕೊರೆದು, ಉಕ್ಕುವ ನೀರನ್ನು ನೋಡಿ, ಪಡುವ ಆನಂದ ಸುರಂಗ ಕೊರೆಯುವಿಕೆಯಲ್ಲಿಲ್ಲ! ಕೆಲವೇ ಗಂಟೆಗಳು ಸಾಕು. ಸುರಂಗಕ್ಕಾದರೆ ಒಂದೆರಡು ತಿಂಗಳು ಬೇಕು. ಸಿಕ್ಕ ನೀರು ಕಿರು ಬೆರಳಿನಷ್ಟಾದರೂ ಅದು ನಿರಂತರ. ‘ಸಿಗುವ ನೀರು ತೀರಾ ಕಿರು ಗಾತ್ರದ್ದಾಗಿರುವುದರಿಂದ ಈ ಕುರಿತು ಹೆಚ್ಚಿನವರು ಗಮನ ನೀಡುತ್ತಿಲ್ಲ’ ಎನ್ನುವ ಭಟ್, ‘ಗುಡ್ಡ ಪ್ರದೇಶದಲ್ಲಿ ನೀರಿಲ್ಲಾ…. ಎನ್ನುತ್ತಾ ಕೂಗುವ ಬದಲು ಸುರಂಗ ಕೊರೆದು ಕನಿಷ್ಟ ಕುಡಿವನೀರನ್ನಾದರೂ ಪಡೆಯಬಹುದು’. ಮನಸ್ಸು ಬೇಕು ಅಷ್ಟೇ.
ಇಂಧನದ ರಗಳೆ ಇಲ್ಲ
ಮಾಣಿಮೂಲೆಯಲ್ಲಿ ಸುರಂಗವೊಂದರ ರಚನೆಗೆ ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ಸಾವಿರ ವೆಚ್ಚ. ಒಮ್ಮೆ ಬಂಡವಾಳ ಹಾಕಿದರೆ ಆಯಿತು. ಇಂಧನ, ವಿದ್ಯುತ್, ಡೀಸೆಲ್, ಪೆಟ್ರೋಲ್, ಪಂಪ್…. ರಗಳೆಯೇ ಇಲ್ಲ. ಪ್ರತಿವರ್ಷ ನಿರ್ವಹಣೆ ಮಾತ್ರ.
ಅಚ್ಯುತ ಭಟ್ ಲೆಕ್ಕ ಮುಂದಿಡುತ್ತಾರೆ – ಒಬ್ಬ ಒಂದು ದಿನದಲ್ಲಿ ಎರಡೂವರೆ ಅಡಿ ಸುರಂಗ ಕೊರೆಯಬಹುದು. ದಿನಕ್ಕೆ ಇನ್ನೂರು ರೂಪಾಯಿ ವೇತನ. ಸಹಾಯಕರಿಗೆ ಪ್ರತ್ಯೇಕ. ೬೦-೮೦ ಅಡಿಯಲ್ಲಿ ನೀರು ಸಿಗುತ್ತದೆ. ಮೂವರು ಇದ್ದರೆ ಸುಲಲಿತ. ಈಂದಿನ(ಬೈನೆಮರ) ಮರದ ದಂಬೆಯಲ್ಲಿ ಮಣ್ಣು ಹೊರಸಾಗಿಸುವ ವ್ಯವಸ್ಥೆ ಮಾಡಿಕೊಂಡರೆ ಶ್ರಮ ಸುಲಭ. ಇದು ಗುಂಪು ಕೆಲಸ ಅಲ್ಲ. ಶ್ರಮವೇ ಮಾನದಂಡ.
ಕೆಲವು ವರುಷಗಳ ಹಿಂದೆ ಬೋಳು ಗುಡ್ಡವಾಗಿತ್ತು. ಗೇರು ಗಿಡಗಳನ್ನು ಬೆಳೆಸಿದ್ದಾರೆ. ಸಹಜವಾಗಿ ಇತರ ಗಿಡಗಳು ಬೆಳೆದಿವೆ. ಇದರಿಂದಾಗಿ ನೀರಿಂಗಲು ಅನುಕೂಲ. ‘ಗುಡ್ಡದಲ್ಲಿ ಇಂಗುಗುಂಡಿಗಳನ್ನು ಮಾಡಿದರೆ ಮತ್ತೂ ಒಳ್ಳೆಯದು’ ಭಟ್ಟರ ಅಭಿಪ್ರಾಯ.
ಮಣ್ಣಿನ ಟ್ಯಾಂಕಿ
ನಮ್ಮಲ್ಲಿ ಟ್ಯಾಂಕಿ ಅಂದರೆ ಅದು ಕಾಂಕ್ರಿಟಿನದು! ಎತ್ತರದಲ್ಲಿರಬೇಕು. ಫಿಲ್ಲರ್ ಮೂಲಕ ಏರಿಸಿರಬೇಕು…. ಹೀಗೆಲ್ಲಾ. ಮಾಣಿಮೂಲೆಯಲ್ಲಿರುವುದು ಮಣ್ಣಿನ ಟ್ಯಾಂಕಿ. ‘ನೋಡಿ, ಇದಕ್ಕೆ ಕಾಲು ಶತಮಾನದ ಹತ್ತಿರವಾಯಿತು. ಗಟ್ಟಿಮುಟ್ಟಾಗಿದೆ’ – ತೋರಿಸುತ್ತಾರೆ ಆಚ್ಯುತ ಭಟ್ಟರು. ಅರುವತ್ತು ಸಾವಿರದಿಂದ ಒಂದೂವರೆ ಲಕ್ಷ ಲೀಟರ್ ನೀರು ಹಿಡಿವ ಟ್ಯಾಂಕಿಗಳಿವೆ. ಮಣ್ಣನ್ನು ಹದಿನೈದು ದಿವಸ ಹುಳಿಬರಿಸಿ, ಅದರಿಂದ ದಂಡೆ ನಿರ್ಮಾಣ. ‘ಪೊಳಿಮಣೆ’, ‘ಮುಟ್ಟಿ'(ಗೋಡೆಯನ್ನು ಗಟ್ಟಿಗೊಳಿಸಲು ಬಳಸುವ ಮರದ ಸಾಧನ)ಯಲ್ಲಿ ಚೆನ್ನಾಗಿ ಹೊಡೆದು ಗಟ್ಟಿಗೊಳಿಸಬೇಕು. ತಳವೂ ಅಷ್ಟೇ. ನಮ್ಮ ಹಳೆ ಮನೆಗಳ ಮಣ್ಣಿನ ಗೋಡೆ ರಚನೆಯನ್ನೊಮ್ಮೆ ಸ್ಮರಿಸಿಕೊಳ್ಳಿ. ಹೊಡೆದು-ಬಡಿದು ಗಟ್ಟಿಯಾದ ಮಣ್ಣು ಸಿಮೆಂಟಿಗಿಂತಲೂ ಭದ್ರ! ಬಿಸಿಲಿಗೆ ಬಿರಿಯುವುದಿಲ್ಲ. ಮಣ್ಣು ಎದ್ದು ಹೋದಲ್ಲಿ ಹೊಸ ಮಣ್ಣನ್ನು ಸಾರಿಸಿ ಹೊಡೆದು ಗಟ್ಟಿಗೊಳಿಸಿದ್ದಲ್ಲಿಗೆ ವಾರ್ಷಿಕ ನಿರ್ವಹಣೆ ಮುಗಿಯುತ್ತದೆ. ತೀರಾ ಹಳ್ಳಿ ಜ್ಞಾನ. ‘ದನದ ಹಟ್ಟಿಯ ಗೋಡೆಯನ್ನು ನಾನೇ ರಚಿಸಿದ್ದು. ಹೇಗಿದೆ?
ಮಿನರಲ್ ವಾಟರ್ಗಿಂತಲೂ ಶುದ್ಧ’
ಸುಧೀರ್ಚಂದ್ರ ತ್ರಿಪಾಠಿ – ಇಂಗ್ಲೇಂಡಿನ ಹರ್ಟ್ಫೋರ್ಡ್ಶೈರ್ ವಿಶ್ವವಿದ್ಯಾಲಯದ ಎಂ.ಎಸ್. ವಿದಾರ್ಥಿ. ಉತ್ತರಖಂಡ ರಾಜ್ಯದ ನೈನಿತಾಲ್ನವರು. ‘ನೀರು ಮತ್ತು ಪರಿಸರ’ ಐಚ್ಛಿಕ ವಿಷಯ. ಜಾಲತಾಣಗಳಲ್ಲಿ ಸುರಂಗದ ಕುರಿತ ಮಾಹಿತಿಯಂತೆ, ಮಾಣಿಮೂಲೆಗೆ ಹಾರಿ ಬಂದರು – ಸುರಂಗಗಳ ಅಧ್ಯಯನಕ್ಕೆ! ಮಾಣಿಮೂಲೆ, ದಂಡೆಪ್ಪಾಡಿ ಸುರಂಗದೊಳಕ್ಕೆ ಹೊಕ್ಕು, ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದರು. ತಾನೇ ತಂದಿದ್ದ ಪರೀಕ್ಷಾ ಕಿಟ್ ಮೂಲಕ ಪರೀಕ್ಷೆ. ‘ಸುರಂಗದ ನೀರು ಮಿನರಲ್ ವಾಟರ್ಗಿಂತಲೂ ಶುದ್ಧ’ ಎಂಬ ಫಲಿತಾಂಶ!
ತಟ್ಟುಗಳ ಪಟ್ಟು
ಗುಡ್ಡಕ್ಕೆ ಅಡ್ಡವಾಗಿ ಅಡ್ಯನಡ್ಕ-ಪಕಳಕುಂಜ ಕಚ್ಚಾ ರಸ್ತೆಯಿದೆ. ಕೆಳಭಾಗ ಮನೆ ಮತ್ತು ತೋಟ. ಮೇಲ್ಬಾಗ ಗೇರು ಕೃಷಿ. ಒಟ್ಟು ಹದಿನೆಂಟು ಎಕರೆ.
ಎಂಟೆಕ್ರೆ ತೋಟ. ಅದರಲ್ಲಿ ೧೩೦೦ ಅಡಿಕೆ, ೩೦೦ ತೆಂಗು…. ಇತ್ಯಾದಿ. ಗುಡ್ಡವನ್ನು ಅಲ್ಲಲ್ಲಿ ಸಮತಟ್ಟು ಮಾಡಿ ‘ಆರು ತಟ್ಟು’ ಮಾಡಿದ್ದಾರೆ. ಅಡಿಕೆಯದ್ದು ದೊಡ್ಡ ತಟ್ಟಾದರೆ, ತೀರಾ ಕೆಳಗಿನದ್ದು ತೆಂಗು ಕೃಷಿಗೆ. ಹನಿನೀರಾವರಿ, ತುಂತುರು ನೀರಾವರಿ ವ್ಯವಸ್ಥೆ. ‘ತಂದೆಯವರ ಕಾಲದಲ್ಲಿ ಕೊಡದಲ್ಲಿ ನೀರು ಹೊತ್ತು ಈ ಗಿಡಗಳನ್ನು ಬೆಳೆಸಿದ್ದು.’ ಅಚ್ಯುತ ಭಟ್ಟರೆಂದಾಗ, ‘ಆಗ ಒಂದೇ ಸುರಂಗವಿತ್ತು. ಈಗ ಇಪ್ಪತ್ತೆರಡು ಇವೆ’ ಗೋವಿಂದ ಭಟ್ಟರು ದನಿಗೂಡಿಸಿದರು. ಸಾಮಾನ್ಯವಾಗಿ ನೀರಿನ ಮೂಲ ಸಿಕ್ಕ ಮೇಲೆಯೇ ತೋಟ ತಯಾರಿ. ಇವರ ವಿಧಾನ ಭಿನ್ನ. ತೋಟಕ್ಕಾಗಿ ಸಮತಟ್ಟು ಮಾಡಿದ ಮೇಲೆ ಸುರಂಗ ಕೊರೆತ. ಸಿಕ್ಕ ನೀರಿಗನುಸಾರ ‘ಯಾವ ಕೃಷಿ’ ಎಂಬ ನಿರ್ಧಾರ. ‘ಬಹುತೇಕ ಕೃಷಿಕರು ನೀರಿನ ಸಂಪನ್ಮೂಲಗಳನ್ನು ಗಣನೆಗೆ ತಂದುಕೊಳ್ಳದೆ ಹೊಸ ತೋಟಗಳನ್ನು ಮಾಡುತ್ತಾರೆ. ನಂತರ ನೀರಿಲ್ಲದೆ ಕೊರಗುತ್ತಾರೆ’ ಮಾತಿನ ಮಧ್ಯೆ ಭಟ್.
ಹೆಚ್ಚುವರಿ ನೀರಿನ ಸಂಗ್ರಹಕ್ಕೆ ಕೆಳಭಾಗದಲ್ಲಿ ದೊಡ್ಡ ಕೆರೆಯಿದೆ. ‘ಅರುವತ್ತರ ದಶಕದಲ್ಲಿ ‘ನೀರಿನಾಸೆ’ಯಿಂದ ತೋಡಿದ ಕೆರೆಯಿದು. ಹೇಳುವಂತಹ ನೀರು ಸಿಗಲಿಲ್ಲ! ಮೂರು ಸುರಂಗಗಳ ನೀರು ಸದಾ ಇದಕ್ಕೆ ಹರಿಯುವುದರೊಂದಿಗೆ ಇದರೊಳಗೂ ಮೂರು ಸುರಂಗಗಳು! ಉಳಿದ ಸುರಂಗಗಳ ಹೆಚ್ಚುವರಿ ನೀರಿನ ಖಜಾನೆ. ಕೆಳ ತಟ್ಟಿನಲ್ಲಿರುವ ತೆಂಗಿನ ತೋಟಕ್ಕೆ ಇದು ಬಳಕೆ. ಮೇಲಿನ ಟ್ಯಾಂಕ್ಗಳಲ್ಲಿ ನೀರಿನ ದಾಸ್ತಾನು ಕಡಮೆಯಾದರೆ, ಇಲ್ಲಿಂದ ಲಿಫ್ಟ್. ಮೇ ಕೊನೆಯವರೆಗೂ ಕೃಷಿಗೆ ನೀರುಣಿಕೆ ಕಡಮೆಯಾದರೂ, ‘ನೀರಿಲ್ಲ’ ಎಂದಾದುದೇ ಇಲ್ಲ!
ಪೈಪಿನೊಳಗೆ ಬೇರುಗಳು ಮನೆ ಮಾಡುತ್ತವೆ. ಆಗ ನೀರಿನ ಹರಿವಿಗೆ ತೊಂದರೆ. ವರುಷಕ್ಕೊಮ್ಮೆ ಬೇರು ತೆಗೆದು ಪೈಪನ್ನು ಶುಚಿಗೊಳಿಸುವುದು ಅನಿವಾರ್ಯ.
ಸುರಂಗದೊಳಗೆ ಬಾವಲಿಗಳು ವಾಸ ಮಾಡುತ್ತವೆ. ಅವುಗಳ ಹಿಕ್ಕೆಗಳು ನೀರಿನೊಂದಿಗೆ ಟ್ಯಾಂಕಿ ಸೇರುತ್ತವೆ. ತೋಟಕ್ಕೇನೋ ಬಳಸಬಹುದು. ಆದರೆ ಕುಡಿಯುವ ನೀರಿಗೆ? ಅಚ್ಯುತ ಭಟ್ ಉಪಾಯ ಮಾಡಿದ್ದಾರೆ – ಒಂದು ಸುರಂಗಕ್ಕೆ ಬಾವಲಿಗಳು ಒಳ ಹೋಗದಂತೆ ಹೊರಮೈಗೆ ಬಲೆ ಹಾಕಿದ್ದಾರೆ. ಇದರ ನೀರು ಮನೆ ಸಮೀಪದಲ್ಲಿರುವ ಕುಡಿಯುವ ನೀರಿನ ಪ್ರತ್ಯೇಕ ಟ್ಯಾಂಕಿಯಲ್ಲಿ ಸಂಗ್ರಹವಾಗುತ್ತದೆ.
‘ಕಾರ್ಮಿಕರ ಅಲಭ್ಯತೆ, ಸಾರಿಗೆ ಸಂಪರ್ಕ…. ಮೊದಲಾದ ಸಮಸ್ಯೆಗಳಿಂದಾಗಿ ಈ ಜಾಗವೇ ಬೇಡ ಎಂಬ ನಿರ್ಧಾರಕ್ಕೆ ಒಮ್ಮೆ ಬಂದಿದ್ದೆವು. ಆದರೆ ಇಷ್ಟೊಂದು ನೀರಿನ ಸಮೃದ್ಧತೆ ಇರುವಾಗ ನಿರ್ಧಾರ ಹಿಂದೆ ಪಡೆದೆವು’ ಎನ್ನುತ್ತಾರೆ ಗೋವಿಂದ ಭಟ್. ತಂದೆಯವರ ದಾರಿಯಲ್ಲಿ ಲೆಕ್ಕಚಾರದ ಕೃಷಿ. ಸ್ವ-ದುಡಿಮೆ.
ನೈಸರ್ಗಿಕ ನೀರು ಪಡೆಯುವ ಏಕೈಕ ಪಾರಂಪರಿಕ ಜಾಣ್ಮೆ – ಸುರಂಗ. ಹನಿ ನೀರಾವರಿಗೆ, ಬಾವಿ ತೋಡಲು, ಕೊಳವೆ ಬಾವಿ ತೋಡಲು – ನಮ್ಮ ಬ್ಯಾಂಕ್ಗಳಲ್ಲಿ ಸಾಲದ ವ್ಯವಸ್ಥೆಗಳಿವೆ. ಆದರೆ ಸುರಂಗ ತೋಡಲು ಸಾಲವಿಲ್ಲವಂತೆ, ಕಾರಣ ಅದು ನೈಸರ್ಗಿಕ ಸೋರ್ಸ್!