ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೧೪ರಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ.
ಫೋನಿಟ್ಟು ಶೂನ್ಯಕ್ಕೆ ಕಣ್ಣು ಹಚ್ಚಿ ಕುಳಿತುಬಿಟ್ಟ. ಈಗೇನು ಮಾಡುವುದು? ಎಲ್ಲ ಹರಿದೊಗೆದುಬಿಡಲೇ? ಎಲ್ಲಿಗೆ ಓಡುವುದು? ಮನೆಗೆ ಹೋದರೆ ಅಪ್ಪ ಅಮ್ಮ ಏನೆಂದಾರು? ತಂಗಿ ತನ್ನ ಕುರಿತು ಏನೆಂದುಕೊಳ್ಳಬಹುದು…!?
ಬಹುಶಃ ಹೊಸತಾಗಿ ನೋಡುವವರಿಗೆ ಮಾತ್ರವೇ ಅಲ್ಲ, ದಿನಬೆಳಗಾದರೆ ಅಡಿಕೆ ಮರದ ಜೊತೆ ಒಡನಾಟವಿರುವವರಿಗೂ ಸಹ ಅದು ಅಡಿಕೆ ದಬ್ಬೆಯ ಗೊಂಬೆ ಎಂದು ಅನಿಸುವುದಿಲ್ಲವೇನೋ, ಫಿನಿಷಿಂಗ್ ಅಷ್ಟು ಚೆನ್ನಾಗಿ ಬಂದಿತ್ತು.
ಅಡಿಕೆ ದಬ್ಬೆಯ ವಿಷಯಕ್ಕೆ ಬಂದರೆ, ಅದನ್ನು ಆ ಮಟ್ಟಕ್ಕೆ ನುಣುಪುಗೊಳಿಸುವುದು ಸುಲಭದ ಮಾತಲ್ಲ. ಅದುವರೆಗೂ ಉದ್ದಕ್ಕೆ…. ಮೋಡಗಳ ಜೊತೆ ಮಾತನಾಡುತ್ತ ನಿಂತಿರುವ ಮರ ನೆಲಕ್ಕುರುಳಲು ಕಾರಣಗಳು ನಾಲ್ಕಾರು. ಕೊಳೆರೋಗ ಪೀಡಿತವಾಗಿ ಸತ್ತ ಮರ, ಗಾಳಿಯ ಹೊಡೆತಕ್ಕೆ ಸಿಲುಕಿ ಸಿಗಿದು ಬೀಳುವ ಮರ, ಬಗ್ಗಿ ನಿಂತು ಇನ್ನೆರಡು ಎಳೆಯ ಮುಂಡಗಳಿಗೆ ತೊಂದರೆ ಕೊಡುವ ಮರ, ಇನ್ನೇನು ಒಂದು ಸಣ್ಣ ಚಿಪ್ಪು ಕೊನೆ ಬರತೊಡಗಿ ಮೂರು ವರ್ಷವಾಯಿತು ಎಂದು ಮಾಲಿಕನ ಕೆಂಗಣ್ಣಿಗೆ ಗುರಿಯಾಗುವ ಮರಗಳೆಲ್ಲ ದಬ್ಬೆಗಳಾಗುತ್ತವೆ. ಗಟ್ಟಿಮುಟ್ಟಾದ ಬುಡಕಿನ ತುಂಡು ಅಂಗಳದ ಅಟ್ಟಕ್ಕೆ ಗುಡಿ, ದಬ್ಬೆಗಳಾಗಿ ಬಳಕೆಯಾದರೆ ಇನ್ನುಳಿದವು ವರ್ಷೊಪ್ಪತ್ತು ಬೇಲಿ ಶೀಬಳಾಗಿ, ಮಳೆಗಾಲದ ಕಾಲುಸಂಕವಾಗಿ ಕೊನೆಗೆ ಬೆಂಕಿಯ ಬಾಯಿಗೆ ಬೀಳುತ್ತವೆ.
ಅಂತಹ ಒಂದು ದಬ್ಬೆ ವಿನಾಯಕನ ಕಣ್ಣಿಗೆ ಬಿತ್ತು. ಅವನ ಕಣ್ಣಿಗೆ ಅಡಿಕೆ ದಬ್ಬೆ ಬೀಳುವುದು ಹೊಸ ವಿಷಯವೇನೂ ಅಲ್ಲ. ಯಾಕೆಂದರೆ ಅಂವ ಈ ಭೂಮಿಗೆ ಬೀಳುವ ಮೂರು ತಲೆಮಾರು ಮೊದಲೇ ಅವರು ತೋಟಿಗರು. ಆದರೆ ಏನಾದರೂ ಹೊಸತು ಮಾಡುವ ತುಡಿತದ ವಿನಾಯಕನಿಗೆ ಹಿಂದಿನ ರಾತ್ರಿಯಷ್ಟೇ ಆವರೆಗೆ ಬೀಳದಂಥ ಕನಸೊಂದು ಬಿದ್ದಿತ್ತು.
ಆ ಕನಸನ್ನು ಕೆತ್ತಿ ಕೆರೆಸಿ ಒಂದು ಯೋಜನೆಯನ್ನು ಮಲಗಿದ ಹಾಸಿಗೆಯಲ್ಲೇ ಹೆಣೆದಿದ್ದ ಆತ. ಆ ಯೋಜನೆಯಿಂದ ಪ್ರೇರೇಪಿತಗೊಂಡ ಕಣ್ಣಿಗೆ ಬಿದ್ದ ಅಡಿಕೆ ದಬ್ಬೆ ಶ್ರೀಗಂಧದ ತುಂಡಿಗಿಂತ ಅಮೂಲ್ಯವಾಗಿ ಕಂಡಿತು.
ಸತತ ನಾಲ್ಕು ದಿನಗಳ ಪರಿಶ್ರಮದ ನಂತರ ಚಂದದ ಗೊಂಬೆ ಮೈತಳೆದಿತ್ತು. ನಾಲ್ಕು ಕಾಲು ಒಂದು ಮುಸುಡಿ ಹೊಂದಿರುವ ಆಕೃತಿ ಒಂದು ಕಡೆಯಿಂದ ಹುಲಿಯನ್ನೂ, ಇನ್ನೊಂದು ಕಡೆಯಿಂದ ಚಿರತೆಯನ್ನೂ ಹೋಲುತ್ತಿತ್ತು. ಅದರ ಒಳಗಿಂದೊಳಗೇ ಹೆಣೆದುಕೊಂಡು ಹೊರಗಿಣುಕುತ್ತಿದ್ದವು ಎರಡು ಟ್ವಯ್ನ್ ದಾರದ ಕೊನೆಗಳು. ಅವುಗಳ ಪೈಕಿ ಒಂದನ್ನು ಎಳೆದರೆ ನಾಲ್ಕೂ ಕಾಲುಗಳು ಹಂದಾಡಿ ಗೊಂಬೆ ಚಲಿಸುವ ಭ್ರಮೆ ಹುಟ್ಟಿಸುತ್ತಿದ್ದರೆ, ಇನ್ನೊಂದು ದಾರದ ಎಳೆತ ಪ್ರಾಣಿಯ ತಲೆಯನ್ನು ಮೇಲೆ ಕೆಳಗೆ ಆಡಿಸುತ್ತಿತ್ತು.
ಏನನ್ನೋ ಮಾಡಲು ಹೋಗಿ ಇನ್ನೇನೋ ಆಗುವುದು ಅಥವಾ ಯಾವ್ಯಾವುದೋ ದಾರಿ ಸವೆಸಿ ತನ್ನದಲ್ಲದ ಗಮ್ಯ ತಲಪುವುದು ಎಂದರೆ ಇದೇ ಇರಬಹುದು. ಕೆಲವೊಮ್ಮೆ ತಲಪಿದ ಗುರಿ ತನ್ನದಲ್ಲವಾದರೂ ಅದರ ಮಟ್ಟ ತನ್ನದಕ್ಕಿಂತ ಎತ್ತರಕ್ಕಾದರೂ ಇದ್ದೀತು, ಪ್ರಪಾತಕ್ಕೂ ಕೆಡವೀತು. ಆರಂಭದಲ್ಲಿಯೇ ತನ್ನ ಯೋಚನೆಗೆ ಇಷ್ಟೊಂದು ಸ್ಪಷ್ಟ ರೂಪ ದೊರಕೀತು ಎಂದು ಆತ ಅಂದುಕೊಂಡಿರಲಿಲ್ಲ. ಆತನ ನಿರೀಕ್ಷೆಗೂ ಮೀರಿ ಅಡಿಕೆ ದಬ್ಬೆಯ ಗೊಂಬೆ ಸಿದ್ಧವಾಗಿತ್ತು. ಆದರೂ ಅವನ ಮನಸ್ಸಿನೊಳಗೊಂದು ಢುಕಢುಕಿ ಇದ್ದೇ ಇತ್ತು. ಎಷ್ಟೆಂದರೂ ಅಡಿಕೆ ದಬ್ಬೆಯಿಂದ ಮಾಡಿದ್ದು, ಅದೇನೂ ಬೀಟೆಯಂತೆ ಬಹುಬಾಳಿಕೆಯ ವಸ್ತುವಲ್ಲ. ಮುಂದೆ ಏನಾದೀತೋ…..
ತೀರಾ ದೂರದ ಭವಿಷ್ಯ ಏನಾದರೂ ಆಗಲಿ ಸಧ್ಯದ ವರ್ತಮಾನವೇ ಅವಶ್ಯ ಎಂದು ನಿರ್ಧರಿಸಿದ ಆತ ಹಠಕ್ಕೆ ಬಿದ್ದು ಒಂದು ವಾರದಲ್ಲಿ ಇಪ್ಪತ್ತು ಅಂತಹ ಗೊಂಬೆಗಳನ್ನು ತಯಾರಿಸಿದ.
ಮಾರುಕಟ್ಟೆಯನ್ನೇನೂ ಆತ ಹೊಸದಾಗಿ ಹುಡುಕಬೇಕಾಗಿರಲಿಲ್ಲ. ದಿನ ಬೆಳಗಾದರೆ ಸಾಕು ನಾನಾ ಕಡೆಯಿಂದ ನೂರಾರು ಜನ ಬಂದು ಹೋಗುವ ಬಸವನ ಅಣೆ ಅವನ ಮನೆಯಿಂದ ಕೂಗಳತೆಯ ದೂರದಲ್ಲಿತ್ತು.
ಒಮ್ಮೊಮ್ಮೆ ಆತನಿಗೇ ಅನಿಸಿದ್ದಿದೆ….. ಭ್ರಮೆಗಳೂ ಬದುಕನ್ನು ಕಟ್ಟಿಕೊಡುತ್ತವಲ್ಲ ಅಂತ. ಅದಲ್ಲದೆ ಹೋದರೆ, ಬಸವನ ಅಣೆ ಅಂತಹ ಪುರಾತನ ಪ್ರವಾಸಿ ಸ್ಥಳವೇನೂ ಅಲ್ಲ. ದೂರದಿಂದ ನೋಡಿದರೆ ಆ ಕಲ್ಲಿನ ಗುಡ್ಡ ಮಲಗಿಕೊಂಡ ಎತ್ತಿನಂತೆ ಗೋಚರಿಸುತ್ತಿತ್ತು. ಸುತ್ತಮುತ್ತಲೂ ಬಿದ್ದುಕೊಂಡಿರುವ ಗುಡ್ಡಗಳೆಲ್ಲ ಹಸಿರು ಹೊದ್ದುಕೊಂಡಿದ್ದರೆ ಆ ಗುಡ್ಡ ಮಾತ್ರ ಕರಿಗಲ್ಲೆಂಬ ಕರಿಗಲ್ಲನ್ನು ಮಾತ್ರವೇ ಪೇರಿಸಿಕೊಂಡು ನಗ್ನವಾಗಿ ನಿಂತುಕೊಂಡಿತ್ತು. ಗುಡ್ಡದ ಬುಡದಲ್ಲಿ ಒಂದು ಚಿಕ್ಕ ಗುಡಿ, ಅದರೊಳಗೊಂದು ಲಿಂಗ. ಆ ಗುಡಿ ಲಿಂಗಗಳಾದಿಯಾಗಿ ಎಲ್ಲವೂ ಭಾವುಕರ ಭ್ರಮೆಯ ಉತ್ಪತ್ತಿಗಳೇ. ಯಾರೋ ಒಬ್ಬನಿಗೆ ಅಲ್ಲಿರುವ ಕಲ್ಲೊಂದು ಲಿಂಗರೂಪಿಯಾಗಿ ಕಣ್ಣಿಗೆ ಬಿತ್ತು, ಮತ್ತೊಬ್ಬ ಅದರ ಮೇಲೆ ಚಾಚಿಕೊಂಡಿರುವ ಹಾಸುಗಲ್ಲಿಗೆ ಗುಡಿಯನ್ನು ಆರೋಪಿಸಿದ.
ಚಲನಚಿತ್ರ ನಿರ್ದೇಶಕರೊಬ್ಬರಿಗೆ ಹೊಸತನ್ನು ತೋರಿಸುವ ಹಂಬಲ….. ರಾತ್ರಿ ಬೆಳಗಾಗುವುದರೊಳಗೆ ಬಸವನ ಅಣೆ ಜಗತ್ಪ್ರಸಿದ್ಧಿ ಪಡೆದುಬಿಟ್ಟಿತು. ಸುತ್ತಮಮುತ್ತಲಿನ ಹತ್ತಾರು ಮನೆಗಳವರಿಗೆ ಪ್ರವಾಸೋದ್ಯಮ ಅಂದರೇನು, ಅದರ ಆಳ ಅಗಲಗಳೇನು ಎಂಬುದು ನಯಾಪೈಸೆ ಗೊತ್ತಿಲ್ಲದೆಯೂ ಅವರು ಉದ್ದಿಮೆಗೆ ತಮ್ಮನ್ನು ತೆರೆದುಕೊಂಡರು. ಬಂದು ಹೋಗುವ ಪ್ರವಾಸಿಗರಿಗೆ ಊಟ ತಿಂಡಿ ವ್ಯವಸ್ಥೆ ಶುರುವಾಯಿತು. ಅಂಗಡಿಯೊಂದು ಬೋರ್ಡು ತಗಲಿಸಿಕೊಂಡು ಎದ್ದುನಿಂತಿತು. ಅಲ್ಲಿನ ಇತಿಹಾಸ ವಿವರಿಸಲು ಒಂದಿಬ್ಬರು ಯುವಕರು ಸಿದ್ಧರಾದರು.
ಅಚ್ಛರಿಯೆಂದರೆ ಆ ಯುವಕರ ಅಜ್ಜಂದಿರಿಗೆ ಗೊತ್ತಿಲ್ಲದ ಕಥೆ ಅಲ್ಲಿನ ಸ್ಥಳ ಪುರಾಣವಾಗಿಹೋಯಿತು.
ಅಂತೂ ಪ್ರವಾಸಿಗರು ಬಂದರು, ಸಂಭ್ರಮಿಸಿದರು. ಶಾಂತ, ಸ್ವಚ್ಛವಾಗಿದ್ದ ಗುಡ್ಡ ಪ್ರದೇಶವನ್ನು ನಾಚಾರೆಬ್ಬಿಸಿದರು. ಸಂಸರ್ಗದ ಪ್ರಭಾವದಿಂದ ಸುತ್ತಲಿನ ಹಳ್ಳಿಯೂ ಆಧುನಿಕತೆಯ ಸ್ಪಷ ಪಡೆಯಿತು. ಆವರೆಗೆ ವಿದ್ಯುತ್ತಿನ ಮುಖ ನೋಡದ ಊರಿಗೆ ಮೊಬೈಲ್ ಟವರ್ ಬಂತು. ಬಸವನ ಅಣೆ ಕಾಲಿನವರೆಗೆ ಸರ್ವಋತು ರಸ್ತೆಯಾಯಿತು….
ಅಂತಹ ಹಳ್ಳಿಯ ನಿವಾಸಿಯಾದ ವಿನಾಯಕ ಸುಖಾಸುಮ್ಮನೆ ಬಿದ್ದು ಮಣ್ಣಾಗುತ್ತಿದ್ದ ಅಡಿಕೆ ದಬ್ಬೆಗೊಂದು ರೂಪ ಕೊಟ್ಟು ಅದನ್ನು ಮಾರಿ ಜೇಬು ತುಂಬಿಸಿಕೊಳ್ಳುವ ಕಾಯಕಕ್ಕೆ ಇಳಿದುಬಿಟ್ಟ.
ಆತನ ಕನಸು ಅವನಿಗೆ ಪಡಪೋಶಿ ಮಾಡಲಿಲ್ಲ. ಎರಡೇ ದಿನಕ್ಕೆ ಇಪ್ಪತ್ತೂ ಗೊಂಬೆಗಳು ಖಾಲಿಯಾಗಿಬಿಟ್ಟವು. ಉಳಿದ ಹೋಪಾರಿ ಸಾಪಾರಿ ಕೆಲಸ ಮಾಡಿ ಒಂದು ತಿಂಗಳಲ್ಲಿ ದುಡಿಯುವಷ್ಟು ಹಣವನ್ನು ಆ ಎರಡೇ ದಿನಗಳಲ್ಲಿ ದುಡಿದುಬಿಟ್ಟೆನಲ್ಲಾ ಎಂದು ಅವನಿಗೇ ಅಚ್ಚರಿ.
ಹಾಗೆ ಆತ ಅದನ್ನೊಂದು ಚಿಕ್ಕ ಉದ್ದಿಮೆಯಂತೆ ಶುರು ಮಾಡುವ ಹಂಬಲದಲ್ಲಿದ್ದಾಗಲೇ ಹೀಗೆಲ್ಲ ಆಗಿದ್ದು –
ಆ ದಿನ ಎಂದಿನಂತೆ ನಾಲ್ಕಾರು ಗೊಂಬೆಗಳನ್ನು ಬೆನ್ನಿನ ಚೀಲದಲ್ಲಿ ಹಾಕಿಕೊಂಡು, ಕೈಲೊಂದು ಹಿಡಕೊಂಡು ಪ್ರವಾಸಿಗರಿಗೆ ಅದರ ಡೆಮೋ ತೋರಿಸುತ್ತ ಮಾರಾಟ ಮಾಡುತ್ತಿದ್ದ.
ಗೊಂಬೆಗಳು ಹುಟ್ಟುವುದಕ್ಕೂ ಮೊದಲೇ ಆತ ಪ್ರವಾಸಿಗರ ಜೊತೆ ಒಳ್ಳೆ ಸಂಬಂಧ ಇಟ್ಟುಕೊಂಡವನೇ…..
‘ದೂರದಿಂದ ನೋಡಿದರೆ ಬಸವನ ಆಕಾರದಂತೆ ಕಾಣುತ್ತದೆ ಎಂಬುದರಿಂದ ಮಾತ್ರ ನಮ್ಮೂರಿಗೆ ಮಹತ್ತ್ವ ಬಂದದ್ದಲ್ಲ. ಪುರಾಣದಲ್ಲಿಯೇ ಇದಕ್ಕೆ ಪುರಾವೆ ಸಿಗುತ್ತದೆ. ಒಮ್ಮೆ ಯಾವುದೋ ಕಾರಣಕ್ಕೆ ನಂದಿ ಈಶ್ವರನ ಜೊತೆ ಮುನಿಸಿಕೊಂಡು ಕೈಲಾಸದಿಂದ ಇಳಿದು ಬಂದುಬಿಟ್ಟನಂತೆ. ಇಲ್ಲಿ ಬಂದು ಸಿಟ್ಟಿನಿಂದ ಹೀಗೆ ಮಲಗಿಕೊಂಡನಂತೆ. ಬಹುಸಮಯದವರೆಗೆ ಈಗ ಬಂದಾನು, ಆಗ ಬಂದಾನು ಎಂದು ಬಸವನ ದಾರಿ ಕಾದ ಈಶ್ವರನೇ ಕೊನೆಗೆ ಹುಡುಕುತ್ತ ಸ್ವತಃ ಇಲ್ಲಿಗೆ ಬಂದ. ನಂದಿಯ ಸಿಟ್ಟು ತಣಿಸುವುದಕ್ಕಾಗಿ ತಾನೂ ಲಿಂಗರೂಪಿನಿಂದ ಇಲ್ಲಿ ನೆಲೆಸಿದ!’
ಹೀಗೆ ರೋಮಾಂಚಕಾರಿ ಕತೆ ಹೇಳುತ್ತ ಗುಡ್ಡದ ಸುತ್ತಮುತ್ತ ತಿರುಗಾಡಿ ತೋರಿಸುತ್ತಿದ್ದ ಬಂದವರಿಗೆ. ಅದುವರೆಗೆ ಯಾರೂ ಅದು ಯಾವ ಪುರಾಣದ ಕತೆ ಅಂತ ಕೇಳಿರಲಿಲ್ಲ. ಅದಕ್ಕೆ ಕಾರಣವೂ ಇತ್ತು, ಅಲ್ಲಿಗೆ ಬರುವವರಿಗೆ ಪುರಾಣ ಕಟ್ಟಿಕೊಂಡು ಆಗಬೇಕಾದುದು ಏನೂ ಇರಲಿಲ್ಲ. ಸುತ್ತಮುತ್ತಲಿನ ರಮಣೀಯ ಪರಿಸರವೇ ಸಾಕಿತ್ತು ಅವರ ಪ್ರವಾಸವನ್ನು ಅರ್ಥಪೂರ್ಣವಾಗಿಸಲು.
‘ಇದು ಅಡಿಕೆ ದಬ್ಬೆಯಿಂದ ಮಾಡಿದ್ದು. ಅಡಿಕೆ ಮರವನ್ನು ಸೀಳಿ ಅದನ್ನು ದಬ್ಬೆ ಮಾಡಿ ಬೇಕಾದ ಆಕಾರ ಕೊಡುವುದು ತುಂಬ ಕಷ್ಟದ ಕೆಲಸ. ಅದಲ್ಲದೆ ಅಡಿಕೆಗೆ ಒಳ್ಳೆ ಬೆಲೆ ಬಂದಿರುವುದರಿಂದ ಯಾರೂ ಮರ ಕಡಿಯೋಕೆ ಬಿಡಲ್ಲ. ಆದರೂ ಹೆಚ್ಚಿನ ಹಣ ಕೊಟ್ಟು ತೆಗೆದುಕೊಳ್ಳಬೇಕು. ನಂತರವಾದರೂ ಅಷ್ಟೇ, ಗೊಂಬೆ ಮಾಡಲು ಸೂಕ್ಷ್ಮ ಕೆಲಸಗಾರರು ಬೇಕು’ ಅಂತ ಹೇಳಿ ವ್ಯಾಪಾರ ಮಾಡತೊಡಗಿದ್ದ.
ಆಗಲೇ ಸದಾಶಿವನ ಕಣ್ಣಿಗೆ ಬಿದ್ದದ್ದು.
ಸದಾಶಿವ ಸಧ್ಯದ ಎಂ.ಎಲ್.ಎ. ಇರಬಹುದು, ಆದರೆ ಚುನಾವಣೆಗೆ ನಿಲ್ಲುವ ಹಿಂದಿನ ದಿನದವರೆಗೂ ಆತ ಒಬ್ಬ ಉದ್ಯಮಿ, ಪಕ್ಕಾ ಬಿಸಿನೆಸ್ಮನ್. ಅವನ ಕಣ್ಕುಕ್ಕಿದ್ದು ಅಡಿಕೆ ದಬ್ಬೆಯ ಗೊಂಬೆಯಲ್ಲ, ಅದನ್ನು ಮಾರುತ್ತಿದ್ದ ವಿನಾಯಕ. ತನ್ನ ಜನರನ್ನು ಕಳುಹಿಸಿ ವಿನಾಯಕನನ್ನು ಕರೆಸಿಕೊಂಡ. ಅಲ್ಲಿಯೇ ಇರುವ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮಾತುಕತೆ ನಡೆದದ್ದು.
ನಿಮ್ಮ ಆಟ್ಯಿಟ್ಯೂಡ್ ತುಂಬಾ ಇಷ್ಟವಾಯಿತು, ನೀವು ವ್ಯಾಪಾರ ಮಾಡಿದ್ದನ್ನು ಕಣ್ಣಾರೆ ನೋಡಿದೆ. ಎಂಬಿಎ ಮಾಡಿದವರ ಮೂರು ಪಟ್ಟು ಚಾಕಚಕ್ಯತೆ ಇದೆ ನಿಮ್ಮ ಬಳಿ ಸದಾಶಿವ ಹೇಳಿದ, ಆದರೆ ನಿಮ್ಮ ಟ್ಯಾಲೆಂಟ್ ಇಷ್ಟಕ್ಕೇ ಸೀಮಿತವಾಗಬಾರದು.
ನನಗೂ ಅದೇ ಆಲೋಚನೆ ಇದೆ. ಗೊಂಬೆ ತಯಾರಿಸುವ ಗುಡಿಕೈಗಾರಿಕೆ ಮಾಡಿ ಬಸವನ ಅಣೆ ಬ್ರ್ಯಾಂಡ್ ನೇಮಿನಲ್ಲಿ ಮಾರಾಟ ಮಾಡಬಹುದು. ಅದರಿಂದ ಸತ್ತ ಅಡಿಕೆ ಮರಕ್ಕೂ ಒಳ್ಳೇ ಬೇಡಿಕೆ ಬರುತ್ತದೆ, ಮತ್ತು ಇಲ್ಲೇ ಹತ್ತಾರು ಜನರಿಗೆ ಉದ್ಯೋಗ ಕೊಡಬಹುದು. ನಡುವೆ ಬಾಯಿ ಹಾಕಿದ ವಿನಾಯಕ.
ಅದು ಹಾಗಲ್ಲ ಸದಾಶಿವ ಮುಂದುವರಿಸಿದ, ಈಗ ಪ್ರವಾಸೋದ್ಯಮ ಬೆಳೆಯುತ್ತಿರುವ ಕ್ಷೇತ್ರ. ನಮ್ಮ ಈ ಬಸವನ ಅಣೆ ಮುಂದೆ ಮತ್ತೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ಕೇಂದ್ರವಾಗುತ್ತದೆ. ಈಗಿನ ಪ್ಲಾಸ್ಟಿಕ್ ಭರಾಟೇಲಿ ನಿಮ್ಮ ಗೊಂಬೆ ಹೆಚ್ಚು ಕಾಲ ನಿಲ್ಲೋದು ಕಷ್ಟ. ನೀವು ಅದರಿಂದಾಚೆಗೆ ಯೋಚಿಸಬೇಕು ಎಂದ.
ವಿನಾಯಕನಿಗೆ ಎಲ್ಲ ಅಯೋಮಯವಾಯಿತು. ಈತ ತನಗೆ ದಾರಿ ತೋರಿಸುತ್ತಿದ್ದಾನೆಯೋ ಅಥವಾ ದಿಕ್ಕು ತಪ್ಪಿಸುತ್ತಿದ್ದಾನೆಯೋ…! ಮೊನ್ನೆ ಮೊನ್ನೆಯವರೆಗೆ ಬಸವನ ಅಣೆಯ ಕಥೆ ಹೇಳಿ ಜನರನ್ನು ಮರಳು ಮಾಡಿದ್ದಾಯಿತು. ತುಸುಕಾಲ ಈ ಗೊಂಬೆ ಮಾರಿ ಅದರ ಎರಡು ಪಟ್ಟು ದುಡಿದದ್ದಾಯಿತು. ಈಗ ಅದರಾಚೆ ಮತ್ತೇನು…?
ದೊಡ್ಡ ದೊಡ್ಡ ಕಾರ್ಯಕ್ರಮಗಳಾದಾಗ ಮುಖ್ಯ ರಸ್ತೆಗೆ ಅಗಾಧ ಗಾತ್ರದ ಸ್ವಾಗತ ಕಮಾನು ಹಾಕುತ್ತಾರೆ. ಮೇಲೆ ಬಂಗಾರದ ಬಣ್ಣದ ಹಾಳೆ ಹೊದೆದುಕೊಂಡ ಭೀಮ ಗಾತ್ರದ ಕಂಭಗಳು, ಕುಸುರಿ ಕಲೆಯ ಕಮಾನು ನೋಡುಗರಿಗೆ ಏನೋ ಭವ್ಯತೆಯ ಭ್ರಮೆ ಹುಟ್ಟಿಸುತ್ತವೆ. ಆದರೆ ಅದನ್ನು ಮಾಡಿದವರಿಗಷ್ಟೇ ಗೊತ್ತು, ಅದರಲ್ಲಿರೋದು ನಾಲ್ಕಾರು ಬಿದಿರು ಗಳ, ಅಡಿಕೆ ದಬ್ಬೆ, ಬಿಳಿ ಬಟ್ಟೆ ಇಂತಹವೇ ಅಂತ.
ವಿನಾಯಕ ಯೋಚಿಸುತ್ತಿದ್ದ. ಏನೂ ಅಲ್ಲದ ಬಸವನ ಅಣೆಗೆ ಸೋನಾರಿ ಪೇಪರ್ ಸುತ್ತಿ ಫಳಫಳಗುಟ್ಟಿಸಿದ್ದಾಯಿತು. ಅಡಿಕೆ ದಬ್ಬೆಯಿಂದ ಗೊಂಬೆ ಮಾಡಿ ಅದೇನೋ ಅಮೂಲ್ಯವಾದ ವಸ್ತು ಎಂಬಂತೆ ಬಿಂಬಿಸಿದ್ದಾಯಿತು. ಈ ಎಂ.ಎಲ್.ಎ. ಮತ್ತೇನು ಮಾಡಿಸಹೊರಟಿದ್ದಾನೆ?
ಏನು ಮಾಡಬೇಕು ಹೇಳಿ….. ಕೇಳಿದ ವಿನಾಯಕ. ಆಗ ಸದಾಶಿವನ ಕಣ್ಣುಗಳು ಮಿಂಚಿದವು. ಇಂತಹವರೇ ಅವನಿಗೆ ಬೇಕಾಗಿದ್ದದ್ದು.
ಅದೋ ಅಲ್ಲಿ ಕಾಣುವ ಗದ್ದೆ ಯಾರದ್ದು? ಕೇಳಿದ ಆತ.
ನಮ್ಮದೇ ವಿನಾಯಕ ಹೇಳಿದ, ಕಣ್ಣಳತೆಯಲ್ಲಿದ್ದ ಎರಡೆಕರೆ ಗದ್ದೆಬಯಲನ್ನು ನೋಡುತ್ತ.
ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ತಿರುಗಾಡೋದು ಜಾಣತನವಲ್ಲ ಎಂದ ಸದಾಶಿವ.
ಅರ್ಥವಾಗಲಿಲ್ಲ.
ನಮ್ಮ ಬಸವನ ಅಣೆ ಇನ್ನೂ ಅಭಿವೃದ್ಧಿಯಾಗಬೇಕು. ಇನ್ನೂ ಹೆಚ್ಚೆಚ್ಚು ಪ್ರವಾಸಿಗರು ಬರಬೇಕು. ಜನ ಏನು ಸುಮ್ಮನೆ ಬರುತ್ತಾರೆಯೆ? ಅವರಿಗೆ ಇಲ್ಲಿ ಕಂಫರ್ಟ್ ಅನಿಸುವ ವ್ಯವಸ್ಥೆ ಇರಬೇಕು. ಅದಕ್ಕೆ ಇಲ್ಲಿ ಒಂದು ರೆಸಾರ್ಟ್ ಆರಂಭವಾಗೋದು ತುಂಬಾ ಅವಶ್ಯ… ನಿಲ್ಲಿಸಿದ ಸದಾಶಿವ.
ಮುಂದಿನದನ್ನು ಕಲ್ಪಿಸಿಕೊಳ್ಳುವುದು ವಿನಾಯಕನಿಗೆ ಕಷ್ಟವಾಗಲಿಲ್ಲ. ಒಂದು ಕಡೆ ಸಂತಸವೂ ಇನ್ನೊಂದು ಕಡೆ ಹೆದರಿಕೆಯೂ ಆಯಿತು. ಅಜ್ಜ-ಮುತ್ತಜ್ಜರ ಕಾಲದಿಂದ ಅನ್ನ ಬೆಳೆದುಕೊಂಡು ಬಂದ ಗದ್ದೆಬಯಲಿನಲ್ಲಿ ರೆಸಾರ್ಟ ಎಬ್ಬಿಸಿ ದುಡ್ಡು ಬೆಳೆಯತೊಡಗಿದರೆ ಮುಂದೆ ಹೊಟ್ಟೆಗೇನು ದುಡ್ಡನ್ನೇ ತಿನ್ನುವುದೇ?
ಒಮ್ಮೆ ಆ ಕುರಿತು ಅಳುಕುಂಟಾದದ್ದು ನಿಜವಾದರೂ ಪೂರ್ವಗ್ರಹವಿಲ್ಲದೆ ಯೋಚಿಸಿದ. ಎಂ.ಎಲ್.ಎ. ತನ್ನ ಬುದ್ಧಿಮತ್ತೆಯನ್ನು ಗುರುತಿಸಿ, ಬದುಕುವ ದಾರಿ ತೋರಿಸುತ್ತಿದ್ದಾನೆ. ಆತನಿಗೇನು ತನ್ನದಲ್ಲವಾದರೆ ಅಲ್ಲೇ ಫರ್ಲಾಂಗು ದೂರದಲ್ಲಿರುವ ಕೃಷ್ಣಾನಂದನ ಗದ್ದೆ ಬಯಲಾದರೂ ಆದೀತು. ತಾನು ಈಗ ತಲೆತಲಾಂತರದ ಆಸ್ತಿ, ಪೂಜೆ ಮಾಡುವ ಭೂಮಿ ಅಂತ ಯೋಚಿಸುತ್ತ ಕುಳಿತರೆ ಎಣ್ಣೆ ಬಂದಾಗ ಕಣ್ಣುಮುಚ್ಚಿಕೊಂಡವನ ಸ್ಥಿತಿಯಾಗಬಹುದು ಅನಿಸತೊಡಗಿತು ವಿನಾಯಕನಿಗೆ.
ಯಾವುದಕ್ಕೂ ಯೋಚನೆ ಮಾಡಿ ತಿಳಿಸಿ ಎಂದು ಹೇಳಿ ವಿಸಿಟಿಂಗ್ ಕಾರ್ಡು ಕೈಲಿರಿಸಿ ಮಾತುಕತೆಗೆ ಮುಕ್ತಾಯ ಹೇಳಿದ ಸದಾಶಿವ.
ಇದುವರೆಗೆ ತನ್ನ ಬದುಕಿಗೊಂದು ಹೊಸದಿಕ್ಕು ತೋರಬಲ್ಲ ಏಕೈಕ ವಸ್ತುವಾಗಿ ಕಾಣಿಸುತ್ತಿದ್ದ ಗೊಂಬೆ ಆ ಕ್ಷಣಕ್ಕೆ ಉಪಯೋಗವಿಲ್ಲದ ಖಾಲಿ ಪುಕ್ಕಟೆ ದಬ್ಬೆ ಚೂರಿನಂತೆ ಕಾಣತೊಡಗಿತು. ಸ್ವಲ್ಪ ಥಂಡಿ ತಾಗಿದರೆ ಸಾಕು ಬೂಸಲು ಹಿಡಿದು ಲಡ್ಡಾಗುವ ಈ ಅಡಿಕೆ ದಬ್ಬೆಯ ಕುದುರೆಯನ್ನೇರಿ ಭೂ ಪ್ರದಕ್ಷಿಣೆ ಹೊರಟ ತನ್ನ ದಡ್ಡತನ ನೆನೆದು ಒಳಗೊಳಗೇ ನಾಚಿಕೊಂಡ.
ಮಳೆಗಾಲದ ಆರಂಭದಲ್ಲಿ ಬಸವನ ಅಣೆಯ ಸುತ್ತಮುತ್ತಲ ಹಸಿರು ಗುಡ್ಡಗಳಿಗೆಲ್ಲ ಮಂಜಿನ ತೆರೆ ಆವರಿಸಿ ಎಲ್ಲವನ್ನೂ ಮರೆಮಾಚಿ ಕಣ್ಣ ಮುಂದಿರುವ ಬಿಳಿ ಪರದೆಯೊಂದೇ ಸತ್ಯ ಅನಿಸಿಬಿಡುತ್ತಿತ್ತಲ್ಲ. ಅಂತಹ ಒಂದು ಸಂದಿಗ್ಧತೆ ತನ್ನನ್ನೂ ಆವರಿಸಿಕೊಂಡು ಮೋಡಿ ಮಾಡಿತ್ತಲ್ಲ. ಪುಣ್ಯಕ್ಕೆ ಸದಾಶಿವ ಹತ್ತು ಗಂಟೆಯ ಮೇಲಾದರೂ ಬಂದು ಮಂಜಿನ ತೆರೆ ಸರಿಸುವ ಸೂರ್ಯನಂತೆ ತನ್ನ ಬಾಳಲ್ಲಿ ಬಾರದೆ ಹೋಗಿದ್ದರೆ…!?
ಮನೆಯಲ್ಲಿ ಅವನ ಈ ಪ್ರಸ್ತಾಪಕ್ಕೆ ಯಾರೆಂದರೆ ಯಾರೂ ಒಪ್ಪಲಿಲ್ಲ.
ಮಣ್ಣಿನ ಗೋಡೆಯ ಮನೆಗೆ ಸಿಮೆಂಟಿನ ಗಿಲಾಯ ಮಾಡಿ, ಪಕಾಸು ಹಾಕುವ ಶಕ್ತಿಯಿಲ್ಲದೆ ಅಪ್ಪಯ್ಯ ಮರದ ಗಳ ಹೊಡೆದು, ರೀಪಿನ ಬದಲು ಅಡಿಕೆ ದಬ್ಬೆಯನ್ನು ಮೊಳೆ ಜಪ್ಪಿ ಕೂಡ್ರಿಸಿ, ಅದರ ಮೇಲೆ ಹಂಚು ಹಚ್ಚಿದ್ದ. ಆದರೂ ತಮ್ಮ ಭತ್ತದ ಗದ್ದೆಯ ವಾರೆ ಕಂಟದ ಮೇಲಿದ್ದ ಮಾಲ್ಕಿ ನಾಟ ಕಡಿದು ಮಾರಿಯಾದರೂ ದುಡ್ಡು ಹೊಂದಾಣಿಕೆ ಮಾಡೋಣ ಎಂದು ಯೋಚಿಸಿರಲಿಲ್ಲ. ಈಗ ಹೀಗೆ ಧಿಡೀರ್ ಎಂದು ಗದ್ದೆಯಿಂದ ಮತ್ತೇನೋ ಆದಾಯ ಬರುತ್ತದೆ ಎಂದರೆ ಅದನ್ನು ಕೈಚಾಚಿ ಪಡೆದುಕೊಳ್ಳುವ ಯೋಚನೆ ಅವನಿಗಿರಿಲ್ಲ.
ಒಳಮನೆಯ ನೆಲ ಮಾತ್ರ ಸಿಮೆಂಟಿನದು, ಸುತ್ತಲಿನ ಮೂರು ಪಡಿಮಾಡಿಗೆಲ್ಲ ಮಣ್ಣಿನ ನೆಲವೇ. ಕನಿಷ್ಠ ವಾರಕ್ಕೊಮ್ಮೆಯಾದರೂ ಸೊಂಟ ಬಗ್ಗಿಸಿ ಸಾರಿಸುತ್ತಿದ್ದ ಆಯಿಗೆ; ನಿಂತುಕೊಂಡು ಬಟ್ಟೆ ಚೆಂಡಿನ ಉದ್ದ ಕೋಲಿನಿಂದ ನೆಲ ಒರೆಸುವ ಟೈಲ್ಸ್ ನೆಲದ ರೆಸಾರ್ಟು ತಮ್ಮ ಮನೆಯ ಗದ್ದೆ ಬಯಲಿನಲ್ಲಿ ತಲೆಯೆತ್ತಲಿದೆ ಎಂದರೆ ನಂಬುಗೆಯೇ ಸಾಲುತ್ತಿಲ್ಲ. ಮಾತ್ರವಲ್ಲ, ಹಾಗಾಗದಿರಲಿ ಎಂಬುದೇ ಆಕೆಯ ಆಶಯ.
ಇನ್ನೆರಡು ವರ್ಷಕ್ಕೆ ಮದುವೆಯ ವಯಸ್ಸಿಗೆ ಬರುವ ತಂಗಿ, ತನ್ನ ಅಪ್ಪ ಮದುವೆಗಾಗಿ ದಮ್ಮಡಿ ಕಾಸನ್ನೂ ಕೂಡಿಟ್ಟಿಲ್ಲ ಎಂಬುದರ ಅರಿವಿದ್ದೂ, ತಾನು ಇನ್ನೊಂದು ಮನೆಗೆ ಹೋಗುವವಳು ಇವರು ಜಮೀನನ್ನು ಏನಾದರೂ ಮಾಡಿಕೊಳ್ಳಲಿ ತನ್ನ ಮದುವೆ ಸಾಂಗವಾಗಿ ಮಾಡಿಕೊಟ್ಟರೆ ಸಾಕು ಎಂಬ ನೆಲೆಯಲ್ಲಿ ಅಣ್ಣನ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿಯಾಳು ಎಂದುಕೊಂಡರೆ ಆಕೆಯೂ ಅದನ್ನು ವಿರೋಧಿಸಿದಳು.
ಆದರೆ ವಿನಾಯಕ ನಿರ್ಧಾರ ಮಾಡಿಯಾಗಿತ್ತು. ಕೊನೆಗೆ ಹಗ್ಗದ ಕುಣಿಕೆ ತೋರಿಸಿ ಮೂರೂ ಜನರ ಕಣ್ಣಲ್ಲಿ ನೀರು ಹಾಕಿಸಿ ‘ಅಸ್ತು’ ಎನಿಸಿಕೊಂಡ. ಇದ್ದೊಬ್ಬ ಮಗ, ತಮ್ಮ ಅನಂತರ ಈ ಆಸ್ತಿ ಪಾಸ್ತಿ ಎಲ್ಲವೂ ಅವನದ್ದೇ, ಅವನಿಚ್ಛೆಯಂತೆ ಆಗಲಿ ಎಂದು ಮೌನವಾದರು ತಂದೆ-ತಾಯಿ. ತಂಗಿಯೂ, ಅಪ್ಪ ಅಮ್ಮಂದಿರೇ ಒಪ್ಪಿದ ಮೇಲೆ ತನಗ್ಯಾಕೆ ಇಲ್ಲದ ಉಸಾಬರಿ ಎಂದು ಸುಮ್ಮನುಳಿದಳು.
ಮುಂದೆಲ್ಲ ಸರಾಗವಾಗಿ ಆಯಿತು. ಶಾಸಕರೇ ಕೈಹಾಕಿದ ಮೇಲೆ ಕೇಳಬೇಕೆ… ತಿಂಗಳೊಪ್ಪತ್ತಿನಲ್ಲಿ ಜಮೀನು ಎನ್.ಏ. ಆಯಿತು. ಯಾರ್ಯಾರಿಂದಲೋ ಎನ್ನೋಸಿ ಬಂತು. ಪ್ರವಾಸೋದ್ಯಮ ಇಲಾಖೆಯ ಯಾವುದೋ ಸಬ್ಸಿಡಿ ಸ್ಕೀಂ ಬೆಂಬಲಕ್ಕೆ ಬಂತು.
ಆ ಮಳೆಗಾಲ ಕಳೆದು ಬಸವನ ಅಣೆಯ ಸುತ್ತಮುತ್ತಲ ಊರುಗಳಲ್ಲಿ ಗದ್ದೆಕೊಯ್ಲು ಆರಂಭವಾಗುವ ವೇಳೆಗೆ ವಿನಾಯಕನ ಎರಡೆಕರೆ ಗದ್ದೆಬಯಲಿನಲ್ಲಿ ರೆಸಾರ್ಟು ತಲೆಯೆತ್ತಿತು. ಅಪ್ಪಯ್ಯ, ಆಯಿಯರ ನಿರಾಕರಣೆ, ಮನಸ್ಸಿಲ್ಲದ ಒಪ್ಪಿಗೆಯ ಬುನಾದಿಯ ಮೇಲೆ, ತಂಗಿಯ ಕಳಾಹೀನ ಮನಃಸ್ಥಿತಿಯ ಗೋಡೆಯೆಬ್ಬಿಸಿ, ವಿನಾಯಕನ ಮಹತ್ತ್ವಾಕಾಂಕ್ಷೆಯ ಗೋಪುರವನ್ನು ಹೊತ್ತುಕೊಂಡ ‘ಬೆಟಲ್ ನಟ್ ಮೌಂಟೇನ್ ರೆಸಾರ್ಟ, ಬಸವನ ಅಣೆ’ ಛಳಿಗಾಲದ ಬೆಚ್ಚನೆಯ ಬಿಸಿಲಿಗೆ ತನ್ನ ಮೈದೆರೆಯಿತು.
ಆಸುಪಾಸಿನ ಹತ್ತೆಕರೆಯನ್ನು, ಅದು ಜಂಗಲ್ ಎಂದು ತಿಳಿದಿದ್ದೂ, ತನ್ನ ಬೇಲಿಯೊಳಗೆ ಸೇರಿಸಿಕೊಂಡ ರೆಸಾರ್ಟಿನ ಮಾಲಿಕತ್ವ ವಿನಾಯಕ ಮತ್ತು ಸದಾಶಿವನ ಹೆಂಡತಿಯ ತಮ್ಮನ ಹೆಸರಿನಲ್ಲಿ ಇತ್ತಾದರೂ ದೇಖರೇಕೆಯೆಲ್ಲ ವಿನಾಯಕನದೇ ಆಗಿತ್ತು. ಖೋಡಿಯಾಗಿ ಹರಿದು ಬಂದು, ಇಟ್ಟಿಗೆಯ ನಡುವಿನ ಪ್ಲಾಸ್ಟರಿನಂತೆ ಗಟ್ಟಿಯಾಗಿ ಕುಳಿತುಕೊಂಡ ಬಂಡವಾಳ ಮಾತ್ರ ಪೂರ್ತಿಯಾಗಿ ಸದಾಶಿವನದ್ದೇ. ಅದರಲ್ಲಿ ಎಷ್ಟು ಬಿಳುಪೋ, ಎಷ್ಟು ಕಪ್ಪೋ ತಲೆಕೆಡಿಸಿಕೊಳ್ಳಲಿಲ್ಲ ವಿನಾಯಕ.
ಕ್ರಮೇಣ ರೆಸಾರ್ಟು ಹೆಸರು ಪಡೆದುಕೊಂಡಿತು. ಆ ಮೊದಲು ಯಾರೇ ಬಸವನ ಅಣೆಗೆ ಬರಲಿ, ಸೂರ್ಯಾಸ್ತದೊಳಗೆ ಅಲ್ಲಿಂದ ಜಾಗ ಖಾಲಿ ಮಾಡಲೇ ಬೇಕಿತ್ತು. ಅನೇಕರಿಗೆ ಅದೊಂದು ದೊಡ್ಡ ಸಮಸ್ಯೆಯಾಗಿತ್ತು ಕೂಡ. ಎಷ್ಟೋ ಜನರಿಗೆ ರಾತ್ರಿಯ ಕ್ಯಾಂಪ್ಫೈರ್ ಬಿಸಿಯಲ್ಲಿ ಮೈ ಬೆಚ್ಚಗೆ ಮಾಡಿಕೊಂಡ ಹೊರತು ಪ್ರವಾಸ ಪರಿಪೂರ್ಣ ಎನಿಸುವುದೇ ಇಲ್ಲ. ಆದರೆ ಅಲ್ಲಿ ಸಂಜೆಯಾದರೆ ಸಾಕು ಕಾಡು ಪ್ರಾಣಿಗಳ ಭಯ ಶುರುವಾಗಿಬಿಡುತ್ತಿತ್ತು. ಉಳಿದುಕೊಳ್ಳಲು ಒಂದು ಭದ್ರ ನೆಲೆಯಿರುತ್ತಿರಲಿಲ್ಲ.
ರೆಸಾರ್ಟು ಆದಮೇಲೆ ಪ್ರವಾಸಿಗರ ಸಂಖ್ಯೆ ವೃದ್ಧಿಸಿತು. ರಾತ್ರಿ ತಂಗಲಿಕ್ಕೆಂದೇ ಸಂಜೆ ಜನ ಬರತೊಡಗಿದರು. ವಾರಗಟ್ಲೆ ಮೊದಲೇ ಆನ್ಲೈನಿನಲ್ಲಿ ರೆಸಾರ್ಟ್ ರೂಂ ಕಾದಿರಿಸಿ ಬರುವ ಪರಿಪಾಠ ಬೆಳೆಯಿತು.
ಈಗ ವಿನಾಯಕನ ಕನಸುಗಳೆಲ್ಲ ನನಸಾಗಿದ್ದವು. ಆತನೀಗ ನಿಜವಾದ ಶ್ರೀಮಂತನೇ ಆಗಿದ್ದ. ಬಂದ ಲಾಭದಲ್ಲಿ ದೊಡ್ಡ ಅಂಶ ಶಾಸಕರಿಗೆ ಹೋಗುತ್ತಿತ್ತಾದರೂ, ಉಳಿದ ಪಾಲು ವಿನಾಯಕನ ಮಟ್ಟಿಗೆ ದೊಡ್ಡದೇ ಆಗಿತ್ತು. ಹತ್ತು ವರ್ಷ ಆ ಜಾಗದಲ್ಲಿ ಬೆಳೆ ತೆಗೆದರೂ ಒಟ್ಟಾಗದಷ್ಟು ಹಣ ವರ್ಷವಾಗುವಷ್ಟರಲ್ಲಿ ಜಮೆಯಾಯಿತು. ಅವನಿಗೀಗ ಓಡಾಡಲು ಕಾರು, ಕೈಗೊಂದು, ಕಿಸೆಗೊಂದು ಮೊಬೈಲು…
ಮ್ಯಾನೇಜರ್ ಛೇಂಬರಿನ ಕುರ್ಚಿಯ ಹಿಂದಿರುವ ಗಾಜಿನ ಕಪಾಟಿನೊಳಗೆ ಒಂದು ಅಂದದ ದಬ್ಬೆ ಗೊಂಬೆಯನ್ನು ಇರಿಸಿದ್ದ ವಿನಾಯಕ. ತನ್ನ ಬೆಳವಣಿಗೆಗೆ ಚಿಮ್ಮು ಹಲಿಗೆಯಾದ ಆ ಗೊಂಬೆಯ ಬಗ್ಗೆ ಆತನಿಗೆ ಒಂದು ರೀತಿಯ ಪ್ರೀತಿ ಇದ್ದೇ ಇತ್ತು. ಆ ಕುರಿತು ಅನೇಕರ ಬಳಿ ಹೇಳಿಕೊಂಡಿದ್ದ ಕೂಡ. ಅನೇಕ ಪ್ರವಾಸಿಗರು ಗೊಂಬೆಯ ಅಂದಕ್ಕೆ ಮನ ಸೋತು ಅದನ್ನು ಖರೀದಿಸುವ ಆಸಕ್ತಿ ತೋರಿಸಿದ್ದರೂ ವಿನಾಯಕ ಅದನ್ನು ಮಾರಿರಲಿಲ್ಲ. ಅಂತಹುದೇ ಮತ್ತೊಂದು ಗೊಂಬೆ ಮಾಡಿಕೊಡಲು ಅವನಿಗೆ ಪುರಸೊತ್ತಾದರೂ ಎಲ್ಲಿತ್ತು…!?
ತಿಂಗಳಿಗೊಮ್ಮೆ ತಪ್ಪದೆ ಭೇಟಿಕೊಡುತ್ತಿದ್ದ ಸದಾಶಿವ. ವಿನಾಯಕನ ಪಾಲಿಸಿಗಳು, ಗ್ರಾಹಕರೊಡನೆ ಆತನ ವರ್ತನೆ ಇವೆಲ್ಲ ಆತನಿಗೆ ಬಹಳವೇ ಇಷ್ಟವಾಗಿತ್ತು. ಆಗಾಗ ಆತನ ಪಾರ್ಟಿ ಮೀಟಿಂಗುಗಳು, ಪಕ್ಷದ ಮುಖಂಡರ ರಹಸ್ಯ ವಾಸ್ತವ್ಯಗಳಿಗೆಲ್ಲ ರೆಸಾರ್ಟ್ ಸಾಕ್ಷಿಯಾಯಿತು.
ಇನ್ನೂ ಏನೋ ಕಡಮೆ ಅನಿಸುತ್ತದೆ ಅಲ್ಲವೇ ವಿನಾಯಕ್? ಒಮ್ಮೆ ಎಲ್ಲ ಓಡಿಯಾಡಿ ಬಂದು ಕೂತವ ಕೇಳಿದ ಸದಾಶಿವ. ಎಲ್ಲ ತುಂಬಿಕೊಂಡಿರುವ ಕಲ್ಪನೆಯಲ್ಲಿದ್ದ ವಿನಾಯಕನಿಗೆ ಕೊರತೆ ಯಾತರದ್ದು ಎಂಬುದು ಅರ್ಥವಾಗಲಿಲ್ಲ.
ಈಗ ಎಲ್ಲ ಕಡೆ ಸೆಕ್ಸ್ಟೂರಿಸಂ ಸಾಮಾನ್ಯವಾಗ್ತಾ ಇದೆ. ಅನೇಕರು ನಮ್ಮ ರೆಸಾರ್ಟು ಒಂಥರಾ ‘ಒಣ’ ಅನುಭವ ನೀಡುತ್ತದೆ ಅಂತ ಹೇಳುತ್ತಿದ್ದಾರೆ ಎಂದ ಸದಾಶಿವ.
ವಿನಾಯಕನಿಗೆ ಮೈ ನಡುಗಿತು. ಈಗಾಗಲೇ ಒಂದಿಷ್ಟು ಮಾಡಬಾರದ್ದು ಮಾಡಿಯಾಗಿದೆ. ಅದಕ್ಕೆಲ್ಲ ಏನೇನೋ ಸಮಜಾಯಿಷಿ ಕೊಟ್ಟುಕೊಂಡು ಮನಸ್ಸನ್ನು ಸಮಾಧಾನ ಮಾಡಿಕೊಂಡದ್ದೂ ಆಗಿದೆ. ಮನೆಯವರ ಜೊತೆಗಿನ ತನ್ನ ಸಂಬಂಧವಂತೂ ತಾವರೆ ಎಲೆಯ ಮೇಲಿನ ನೀರಿನಂತೆ ಆಗಿದೆ. ಈಗ ಇನ್ನೊಂದು ಅಪಾಯಕಾರಿ ಹೆಜ್ಜೆ ಇಡಬೇಕೆಂದರೆ…
ಇಡಲೇಬೇಕು… ಇಡುವುದಿಲ್ಲ ಅಂದರೆ ಕೇಳುವವರಾದರೂ ಯಾರು? ಆಗಲೇ ತಾನು ಸದಾಶಿವನ ಕೈಗೊಂಬೆ. ಸೂತ್ರದ ದಾರ ಹಿಡಿದು ಎಳೆದಂತೆ ಕೈಕಾಲು ಆಡಿಸಲೇಬೇಕು, ತಲೆಯನ್ನೂ ಆಡಿಸಲೇಬೇಕು.
ಅದೂ ಆರಂಭವಾಯಿತು. ಪುಣ್ಯಕ್ಕೆ ಅದಕ್ಕೆ ಸಂಬಂಧಿಸಿದ ವ್ಯವಸ್ಥೆ ಮಾಡುವ ಹೊಣೆ ವಿನಾಯಕನ ಮೇಲೆ ಬೀಳಲಿಲ್ಲ. ಸದಾಶಿವನೇ ಎಲ್ಲವನ್ನೂ ನೋಡಿಕೊಂಡ. ಅವರನ್ನು ನೋಡಿದರೆ ‘ಅಂಥವರು’ ಅಂತ ಅನಿಸುವುದೂ ಇಲ್ಲ. ಯಾರೋ ನಾಕು ಜನ ಕಾಲೇಜು ಹುಡುಗಿಯರಂತೆ ಬಂದಿಳಿದಿದ್ದಾರೆ. ತಾವು ಮಾಡುತ್ತಿರುವ ಕೆಲಸದ ಬಗ್ಗೆ ಇನಿತಾದರೂ ಪಶ್ಚಾತ್ತಾಪವೋ, ಹೇಸಿಗೆಯೋ ಅವರಲ್ಲಿ ಗುರುತಿಸುವದಕ್ಕೂ ವಿನಾಯಕನಿಂದ ಆಗದೆ ಹೋಯಿತು.
ಬಸವನ ಅಣೆಗೆ ಬರುವ ಪ್ರವಾಸಿಗರಿಗೆ ‘ಬೆಟ್ಲನಟ್ ಮೌಂಟೇನ್’ ಒಂದು ಆಕರ್ಷಣೆಯ ಕೇಂದ್ರವಾಯಿತು. ಅಲ್ಲಿ ಉಳಿಯುವುದಕ್ಕೆ ಅಲ್ಲವಾದರೂ ಸುಮ್ಮನೆ ಒಂದು ಸುತ್ತು ಓಡಾಡಿಕೊಂಡು ಹೋಗುವುದಕ್ಕಾದರೂ ಜನ ಅನುಮತಿ ಪಡೆದುಕೊಂಡು ಬರತೊಡಗಿದರು. ಒಂದೆರಡು ಬಾರಿ ಅನೈತಿಕ ಚಟುವಟಿಕೆಗಳ ಗುಸುಗುಸು ಕೇಳಿ ಪೋಲೀಸರು ರೈಡು ಮಾಡಿ ಬರಿಕೈಯಲ್ಲಿ ಹೋದರು. ಸದಾಶಿವನೇ ಪುಕ್ಕಟೆ ಪ್ರಚಾರಕ್ಕೆ ವ್ಯವಸ್ಥಿತವಾಗಿ ರೈಡು ಮಾಡಿಸಿರಬೇಕು ಎಂಬುದು ವಿನಾಯಕನ ನಂಬುಗೆ.
ವಿನಾಯಕ ದಿನ ಕಳೆದಂತೆ ಒಳಗೊಳಗೇ ಕುಸಿಯತೊಡಗಿದ. ಪ್ರತಿಕ್ಷಣವೂ ಪಶ್ಚಾತ್ತಾಪದಿಂದ ಬೇಯತೊಡಗಿದ. ಅಪ್ಪಯ್ಯ ಆಯಿಯರನ್ನು ಧಿಕ್ಕರಿಸಿ, ಅನ್ನದ ಬಟ್ಟಲಿನಲ್ಲಿ ಚರ್ಮವಿಟ್ಟು ವ್ಯಾಪಾರಕ್ಕೆ ಕುಳಿತ ತನ್ನ ಹಣೆಬರಹಕ್ಕೆ ತಾನೇ ತಲೆ ಚಚ್ಚಿಕೊಂಡ.
ನೋಡನೋಡುತ್ತಿದ್ದಂತೆ ಚುನಾವಣೆ ಬಂತು. ಸಭೆಗಳು, ರಾಜಕಾರಣಿಗಳ ಭೇಟಿ ಹೀಗೆ ಕುಂಡೆ ತುರಿಸಲಿಕ್ಕೂ ಪುರಸೊತ್ತು ಸಿಗದಂತಾಯಿತು ವಿನಾಯಕನಿಗೆ. ಸದಾಶಿವನಿಗೆ ಈ ಬಾರಿಯ ಟಿಕೀಟು ಸಿಗುವುದು ಸ್ವಲ್ಪ ಕಷ್ಟ ಅಂತ ಮಾತುಗಳು ಕೇಳಿ ಬರುತ್ತಿದ್ದವು.
ಅಂತಹ ಒಂದು ದಿನ-
ಹಲೋ… ಇವತ್ತು ರಾತ್ರಿ ಮತ್ತು ನಾಳೆ ಇಡೀ ದಿನಕ್ಕೆ ವಿ.ಐ.ಪಿ. ರೂಮು ರೆಡಿಯಿರಲಿ ಸದಾಶಿವನ ಫೋನು.
ಸರಿ
ಬರುತ್ತಿರೋದು ಪಕ್ಷದ ಅಧ್ಯಕ್ಷರು. ಇದು ನನ್ನ ಜೀವನದ ಪ್ರಶ್ನೆ. ಅವರಿಗೆ ಎಲ್ಲ ವ್ಯವಸ್ಥೆ ಸರಿಯಾಗಿ ಆಗಬೇಕು.
ಆದರೆ… ನಾಲ್ಕೂ ಜನ ಊರಿಗೆ ಹೋಗಿದ್ದಾರೆ. ಇನ್ನೆರಡು ದಿನ ಲೇಟಂತೆ ಅಳಲು ತೋಡಿಕೊಂಡ ವಿನಾಯಕ.
ಛೇ! ಅದೆಲ್ಲ ನಂಗೊತ್ತಿಲ್ಲ. ಏನೋ ಒಂದು ಮಾಡಬೇಕಪ್ಪ ನೀನು. ನಮ್ಮ ಅಧ್ಯಕ್ಷರಿಗೆ ಫ್ರೆಷ್ ಊಟ ಅಂದರೆ ತುಂಬಾ ಇಷ್ಟ. ಅವರಿಗೆ ಸಂತುಷ್ಟಿಯಾದರೆ ಅಷ್ಟೇ ಸಾಕು. ಸದಾಶಿವ ಸಿಕ್ಕಾಪಟ್ಟೆ ಆತಂಕಿತನಾಗಿದ್ದ ಎಂಬುದಕ್ಕೆ ಆತ ವಿನಾಯಕನನ್ನು ಏಕವಚನದಲ್ಲಿ ಮಾತನಾಡಿಸುತ್ತಿದ್ದುದೇ ಸಾಕ್ಷಿ.
ಅಡಿಕೆ ದಬ್ಬೆಗೆ ದಾರ ಕಟ್ಟಿ ಜಗ್ಗಿ-ಬಿಟ್ಟು ಮಾಡುತ್ತಿದ್ದ ನಿನ್ನನ್ನು ಅಟ್ಟ ಹತ್ತಿಸಿ ಕೂಡ್ರಿಸಿದ್ದೇನೆ. ಈಗ ನನ್ನನ್ನು ಏನು ಮಾಡುತ್ತೀಯೋ ನಿನಗೆ ಬಿಟ್ಟದ್ದು. ಸೂತ್ರ ನಿನ್ನ ಕೈಲಿದೆ. ನನ್ನ ಪಾಲಿಸಿ ನಿನಗೆ ಗೊತ್ತಲ್ಲ ‘ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೆ ಊರೆಲ್ಲ ಹುಡುಕಬಾರದು’, ಪಟಾಪಟ್ ರೆಡಿ ಮಾಡು. ಅವನೇನು ಬೇಡಿಕೊಂಡನೋ ಇಲ್ಲ ಆದೇಶಿಸಿದನೋ ಅರ್ಥವಾಗಲಿಲ್ಲ.
ಫೋನಿಟ್ಟು ಶೂನ್ಯಕ್ಕೆ ಕಣ್ಣು ಹಚ್ಚಿ ಕುಳಿತುಬಿಟ್ಟ. ಈಗೇನು ಮಾಡುವುದು? ಎಲ್ಲ ಹರಿದೊಗೆದು ಬಿಡಲೇ? ಎಲ್ಲಿಗೆ ಓಡುವುದು? ಮನೆಗೆ ಹೋದರೆ ಅಪ್ಪ ಅಮ್ಮ ಏನೆಂದಾರು? ತಂಗಿ ತನ್ನ ಕುರಿತು ಏನೆಂದುಕೊಳ್ಳಬಹುದು…!?
ತಂಗಿಯ ನೆನಪು ಬರುತ್ತಲೇ ಸದಾಶಿವನ ಮಾತಿಗೆ ಅರ್ಥ ಗೊತ್ತಾಯಿತು. ದರಿದ್ರದವ ಎಷ್ಟೆಲ್ಲ ಮುಂದಾಲೋಚನೆ ಇಟ್ಟುಕೊಂಡಿದ್ದಾನೆ, ಅಷ್ಟಿಲ್ಲದೆ ಆ ಎತ್ತರಕ್ಕೆ ಏರಿದ್ದಾನೆಯೇ?
ಅಂತಹ ಕೊಚ್ಚೆಗೆ ಬೀಳುವ ಮೊದಲೇ ತಾನು ಯೋಚಿಸಬೇಕಿತ್ತು. ಯಾವತ್ತಿದ್ದರೂ ಎಣ್ಣೆ ಇರುವವರೆಗೆ ಮಾತ್ರ ದೀಪ ಬೆಳಕು ಕೊಡುತ್ತಿರುತ್ತದೆ, ಯಾವಾಗ ಎಣ್ಣೆ ಖಾಲಿಯಾಯಿತೋ ಆ ಕ್ಷಣಕ್ಕೆ ಅದುವರಿಗೆ ಆಸರೆಯಾಗಿದ್ದ ಬತ್ತಿಯನ್ನೂ ಸುಟ್ಟು ನಂದಿಹೋಗುತ್ತದೆ. ತನಗೆ ಈಗ ಅಂತಹ ಕಾಲ ಬಂದಿದೆಯೇ?
ತಲೆ ಚಿಟ್ಟುಹಿಡಿದು ಹೋಯಿತು. ಬಂದ ಪ್ರವಾಸಿಗರ ಪೈಕಿ ಯಾರೋ ಒಬ್ಬ ಗಾಜಿನ ಕಪಾಟಿನಲ್ಲಿದ್ದ ದಬ್ಬೆ ಗೊಂಬೆಯನ್ನೇ ನೋಡುತ್ತಿದ್ದ. ಆ ಗೊಂಬೆಯ ಸ್ಥಿತಿಯೇ ತನಗೂ ಆಯಿತಲ್ಲ, ಸೂತ್ರಕ್ಕೆ ತಕ್ಕಂತೆ ಕೈಕಾಲು ಆಡಿಸುವ ಯಃಕಶ್ಚಿತ್ ಗೊಂಬೆಯಾಗಿಬಿಟ್ಟೆ ತಾನು ಎಂದು ಖೇದವೆನಿಸಿತು.
ಕಣ್ಮುಚ್ಚಿ ಹತ್ತು ನಿಮಿಷ ಯೋಚಿಸಿದ. ಮನಸ್ಸಿನ ಹತ್ತು ಮುಖಗಳಲ್ಲಿಯೂ ಚಿಂತಿಸಿ ಕೊನೆಗೂ ನಿರ್ಧಾರಕ್ಕೆ ಬಂದ.
ಫೋನೆತ್ತಿ ಡಯಲ್ ಮಾಡಿದ.
ಹಲೋ…. ಇದು…. ನ್ಯೂಸ್ ಚಾನೆಲ್ ತಾನೇ…?
Very nicr