ಆಂಟೀ, ನಾನು ಇನ್ನೂ ದೊಡ್ಡವಳಾದ ಮೇಲೆ ಕಾಲೇಜಿಗೆ ಹೋಗ್ತೀನಿ.. ಆಮೇಲೆ ನನಗೆ ಮದುವೆ ಮಾಡ್ತಾರೆ. ಮತ್ತೆ ನಾನು ಅಡುಗೆ ಎಲ್ಲ ಮಾಡಿ ಬಡಿಸ್ತೀನಿ….. ನನಗೆ ಪಾಪು ಆಗುತ್ತದೆ. ಅದನ್ನು ಆಟ ಆಡಿಸ್ತೀನಿ….. ಮನೆಗೆ ಬಂದ ನಾಲ್ಕು ವರ್ಷದ ಪುಟ್ಟಿಯೊಬ್ಬಳು ಹೇಳುತ್ತಿದ್ದರೆ ನಾನು ದಂಗಾಗಿ ಹೋದೆ. ಅವಳ ಮಾತಿನ ಮೋಡಿಗಲ್ಲ, ಅವಳ ಆಲೋಚನಾ ವೈಖರಿಗಲ್ಲ; ಬದಲಾಗುತ್ತಿದೆ ಎಂದು ಭ್ರಮಿಸಿಕೊಂಡಿರುವ ನಮ್ಮ ಪ್ರಪಂಚ, ಮುಖ್ಯವಾಗಿ ನಮ್ಮ ಸಮಾಜ ಇನ್ನೂ ಪುಟ್ಟ ಹೆಣ್ಣುಮಕ್ಕಳಲ್ಲಿ ಹುಟ್ಟುಹಾಕಬಲ್ಲ ಕನಸುಗಳು ಇಷ್ಟೇನೇ ಎಂಬುದರ ಬಗ್ಗೆ.
ಹೆಣ್ಣುಮಕ್ಕಳು ಮದುವೆ ಮಾಡಿಕೊಳ್ಳದೇ ಸ್ವತಂತ್ರವಾಗಿರಬೇಕು, ತಾಳಿ ಎಂಬುದು ಬಂಧನ, ಅಡುಗೆ ಮಾಡುವುದೆಂದರೆ ಹೆಣ್ಣುಮಕ್ಕಳನ್ನು ಅಡುಗೆಮನೆಯಲ್ಲಿ ಕೊಳೆಸುವುದೆಂಬಿತ್ಯಾದಿ ಅತಿರೇಕದ ಸ್ತ್ರೀವಾದ ನನ್ನದಲ್ಲ. ಬದುಕಬೇಕೆಂದರೆ ಉಣ್ಣಬೇಕು. ಹಾಗಾಗಿ ಅಡುಗೆ ಮಾಡುವುದು ನಮಗೆ ಗೊತ್ತಿರಬೇಕು. ಹಾಗೆಂದು ಕೇವಲ ಹೆಣ್ಣುಮಕ್ಕಳು ಮಾತ್ರವೇ ಅಡುಗೆ ಮಾಡಬೇಕು ಎಂಬ ನಿರ್ಬಂಧಗಳೇನೂ ಇಲ್ಲ. ಹಸಿಯುವ ಯಾವ ಜೀವಕ್ಕಾದರೂ ತನ್ನ ಹಸಿವು ನೀಗಿಸಿಕೊಳ್ಳುವ ಕಲೆ ಗೊತ್ತಿರಬೇಕು ಅಷ್ಟೇ. ಗಂಡುಮಗ ಅಡುಗೆ ಕಲಿಯಬೇಕಿಲ್ಲ ಎಂಬ ಕಾಲ ನಮ್ಮೊಂದಿಗೆ ಉಳಿದಿಲ್ಲ. ವಿದ್ಯಾಭ್ಯಾಸದ ನಿಮಿತ್ತವೋ ಕೆಲಸದ ನಿಮಿತ್ತವೋ ದೂರದೂರಿನಲ್ಲಿರುವ ಮಗನಿಗೆ ಹಾಸ್ಟೆಲ್ ಊಟ ಹಿಡಿಸುವುದಿಲ್ಲ ಎಂಬ ಕಾರಣಕ್ಕೆ ಅಮ್ಮನೂ ಜೊತೆಗೆ ಹೋಗುವುದು ಸಾಧ್ಯವೇ? ಅಂತಹ ಸಂದರ್ಭಗಳಿಗೆ ತಯಾರಿರಬೇಕೆಂಬುದಕ್ಕಾದರೂ ಇಂದಿನ ಅಮ್ಮಂದಿರು ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಅಡುಗೆ ಹೇಳಿಕೊಡುವುದು ಕ್ಷೇಮ. ಆದರೆ ಪುಟ್ಟಕೂಸಿಗೆ ಮಾತ್ರ ನೀನು ಹುಟ್ಟಿರುವುದೇ ಅಡುಗೆ ಮಾಡುವುದಕ್ಕೆ, ಮದುವೆಯಾಗುವುದಕ್ಕೆ, ಮಕ್ಕಳಿಗೆ ಜನ್ಮ ನೀಡುವುದಕ್ಕೆ ಎಂಬುದನ್ನೇ ಪಾಠ ಮಾಡಿ ಬೆಳೆಸುವ ರೀತಿ ಇಂದಿನ ಶತಮಾನಕ್ಕೆ ಒಗ್ಗುವಂಥದಲ್ಲ.
ಹೆಣ್ಣುಮಕ್ಕಳು ಆಟಿಕೆಯ ಅಂಗಡಿಗೆ ಕರೆದೊಯ್ದಾಗ ಅಡುಗೆ ಸೆಟ್ ಬೇಕೆಂದೋ, ಪಾಪು ಗೊಂಬೆ ಬೇಕೆಂದೋ ಹಟ ಹಿಡಿಯುವುದು ಸಾಮಾನ್ಯ. ಹಾಗೇ ಗಂಡುಮಕ್ಕಳು ಕಾರ್, ಗನ್ ಇತ್ಯಾದಿಗಳನ್ನು ಕೇಳುವುದು ಸಹಜ. ಅದರರ್ಥ ಗಂಡುಮಕ್ಕಳು ಗೊಂಬೆಯನ್ನು ಸ್ನಾನ ಮಾಡಿ ಮಲಗಿಸುವ, ಅಡುಗೆ ಮಾಡಿ ಬಡಿಸುವ ಆಟ ಆಡಬಾರದೆಂದಲ್ಲ; ಹೆಣ್ಣುಮಕ್ಕಳು ಕಾರ್ ಓಡಿಸಬಾರದೆಂದಲ್ಲ. ಎಷ್ಟೋ ಸಂದರ್ಭಗಳಲ್ಲಿ ಆಡುವ ಮಕ್ಕಳೇ ಒಬ್ಬರಿಗೊಬ್ಬರು ರೇಗಿಸಿಕೊಳ್ಳುವುದನ್ನು ಕಂಡಿದ್ದೇನೆ. ‘ಥೂ….. ಅವನು ಅಡುಗೆ ಸೆಟ್ ಆಟ ಆಡ್ತಾನೆ. ಅವನೇನು ಹುಡ್ಗೀನಾ?’ ಎಂದು ಒಬ್ಬನೆಂದರೆ ‘ಲೋ, ಅವಳು ರಿಮೋಟ್ ಕಾರ್ ಓಡಿಸ್ತಾಳೆ ಕಣ್ರೋ…..’ ಇನ್ನೊಬ್ಬನೆನ್ನುತ್ತಾನೆ. ಅಷ್ಟಕ್ಕೂ ಈ ವ್ಯತ್ಯಾಸಗಳು ಖಡಾಖಂಡಿತವಾಗಿ ಹೀಗೇ ಇರಬೇಕು ಎಂದು ಬರೆದವರು ಯಾರು? ಹಳೆಯ ತಲೆಮಾರು ಈ ರೀತಿಯ ಮಾತುಗಳನ್ನಾಡಿದರೆ ‘ನಿಮ್ಮ ಕಾಲಕ್ಕೂ ನಮ್ಮ ಕಾಲಕ್ಕೂ ವ್ಯತ್ಯಾಸಗಳಿವೆ ಬಿಡಿ’ ಎಂದು ಸುಮ್ಮನಾಗಬಹುದು. ಆದರೆ ಮುಂದಿನ ತಲೆಮಾರು ಹೀಗೆ ಮಾತನಾಡುವುದನ್ನೇ ರೂಢಿ ಮಾಡಿಕೊಂಡರೆ ವರುಷಗಳಿಂದಲೂ ನಡೆದು ಬಂದ ಸ್ತ್ರೀ ಪರ ಹೋರಾಟಗಳಿಗೆ ಯಾವ ಅರ್ಥವೂ ಉಳಿಯುವುದಿಲ್ಲ.
ಅಡುಗೆ ಮನೆಯ ಹುಡುಗಿ ಅಡುಗೆ ಮನೆಯಿಂದ ಶಾಶ್ವತವಾಗಿ ಹೊರನಡೆಯುವುದು ಸಾಧ್ಯವಿಲ್ಲ. ಆದರೆ ಎಂಥಾ ಅಡುಗೆಮನೆಗೂ ಕಿಟಕಿಯೆಂಬುದು ಇರಲೇ ಬೇಕಲ್ಲ? ಅಲ್ಲಿಂದ ಹಾರುವ ಹಕ್ಕಿಯನ್ನೋ ಮತ್ತೂ ಎತ್ತರಕ್ಕೆ ಹಾರುವ ವಿಮಾನವನ್ನೋ ಕಂಡು ತಾನೂ ಒಂದು ದಿನ ಎತ್ತರೆತ್ತರಕ್ಕೆ ಹಾರುವ ಕನಸು ಕಾಣುವುದು ಸಾಧ್ಯವಿರಲೇಬೇಕಲ್ಲ? ಆದರೆ ವಿಷಾದವೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಸಮಯದ ಒತ್ತಡಕ್ಕೆ ಸಿಲುಕಿ ತಮ್ಮ ಹಂಬಲಗಳನ್ನು ಬದಿಗೊತ್ತಿ ದೊರೆತ ಜೀವನವನ್ನು ಅಪ್ಪಿಕೊಂಡವರು ತಮ್ಮ ಮಗಳನ್ನೂ ಕೇವಲ ಅದೇ ಬದುಕಿಗೆ ತಯಾರುಮಾಡುವ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ತೀರಾ ತದ್ವಿರುದ್ಧವಾಗಿ ‘ನನ್ನೆಲ್ಲಾ ಕನಸು ಮಣ್ಣುಪಾಲಾಯಿತು. ಮಗಳಿಗೆ ಹಾಗಾಗಬಾರದು’ ಎಂಬ ಹುಮ್ಮಸ್ಸಿನಲ್ಲಿ ತನ್ನ ಕಳೆದ ಬದುಕನ್ನು ಮಗಳು ರೂಪಿಸಲಿ ಎಂದು ಬಯಸಬಹುದು. ಆದರೆ ಮಗಳ ಬದುಕು ಮಗಳದ್ದೇ ಆಗಿರಬೇಕು ವಿನಾ ಅಮ್ಮನದ್ದಾಗುವುದು ಸಾಧ್ಯವಿಲ್ಲ. ಉದಾಹರಣೆಗೆ ಮಗಳಿಗೆ ಸಂಗೀತದಲ್ಲಿ ಯಾವುದೇ ಆಸಕ್ತಿ ಇಲ್ಲದಿದ್ದರೂ ತನಗಾಗಿ ಮಗಳು ಕಲಿಯಬೇಕು ಎಂಬ ಒತ್ತಡ ಹಾಕುವುದು ತಪ್ಪೇ ಆಗುತ್ತದೆ. ಆರಂಭದಲ್ಲಿ ಕಷ್ಟವಾಗಿ ಮುಂದೆ ಇಷ್ಟವಾದರೆ ಪರವಾಗಿಲ್ಲ. ಅದು ಬಲವಂತದ ಮಾಘಸ್ನಾನವಾದರೆ ಸಮಯ, ಶ್ರಮ ಎರಡೂ ವ್ಯರ್ಥವಾಗುತ್ತದೆ ಹೊರತು ಕಲಿಕೆಯೆಂಬುದು ಏರ್ಪಡುವುದಿಲ್ಲ. ಮುಖ್ಯವಾಗಿ ಓದಿನ ವಿಷಯಕ್ಕೆ ಬಂದಾಗ ಈ ಬಗೆಯ ನಿರೀಕ್ಷೆಗಳು ಮಕ್ಕಳಲ್ಲಿ ಉಂಟುಮಾಡುವ ಒತ್ತಡ ತೀರಾ ವಿಪರೀತಕ್ಕೆ ಹೋಗುವುದಿದೆ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶಗಳು ಹೊರಬಿದ್ದಾಗ ಅನೇಕ ಮುಗ್ಧ ಜೀವಗಳು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದೇ ಇದಕ್ಕೆ ಉದಾಹರಣೆ.
ಇನ್ನು ಮದುವೆಯ ವಿಷಯಕ್ಕೆ ಬಂದರೂ ಅಷ್ಟೇ. ಅದೇನೂ ಹೆಣ್ಣೊಬ್ಬಳ ಅನಿವಾರ್ಯತೆಯಲ್ಲ. ಗಂಡು ಹೆಣ್ಣುಗಳಿಬ್ಬರಿಗೂ ಅವಶ್ಯವಾದ ಬದುಕಿನ ಘಟ್ಟ. ದುರಂತವೆಂದರೆ ಅದನ್ನೂ ಥಳುಕುಹಾಕುವುದು ಹೆಣ್ಣುಮಕ್ಕಳ ಬದುಕಿನ ಭದ್ರತೆಯ ಜೊತೆಗೆ. ಕುತ್ತಿಗೆಯಲ್ಲೊಂದು ತಾಳಿ ಇದೆ ಎಂದ ಮಾತ್ರಕ್ಕೆ ಸಮಾಜ ಅವಳನ್ನು ಗೌರವಿಸುತ್ತದೆ ಎಂದಾಗಲೀ ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ ಎಂಬುದಾಗಲೀ ನೂರಕ್ಕೆ ನೂರು ನಾವು ಹೇಳಬಲ್ಲೆವೇ? ಪತ್ರಿಕೆಗಳನ್ನು ತೆರೆದು ನೋಡಿದರೆ ಗರ್ಭಿಣಿಯ ಮೇಲೆ ಅತ್ಯಾಚಾರವಾದ ವರದಿಗಳೂ ಇರುತ್ತವೆ. ನವವಿವಾಹಿತೆಯ ಮೇಲೆ ದೌರ್ಜನ್ಯ ನಡೆದ ವಿವರಗಳಿರುತ್ತವೆ. ಯಾವ ಮನೆ ತನ್ನದೆಂದುಕೊಂಡು ಹೊಸ ಬದುಕನ್ನು ನೆಚ್ಚಿಕೊಳ್ಳ ಹೊರಟಳೋ ಅದೇ ಮನೆ ಅವಳನ್ನು ಸೀಮೆ ಎಣ್ಣೆ ಸುರಿದು ಸುಟ್ಟಿರುತ್ತದೆ. ಹಾಗಿದ್ದ ಮೇಲೆ ಮದುವೆಗೆ, ತಾಳಿಗೆ ನಮ್ಮ ಸಮಾಜ ನೀಡಿರುವ ಮನ್ನಣೆಗೆ ಏನು ಬೆಲೆ ಉಳಿದೀತು? ನಂಬಿ ಕೈ ಹಿಡಿದ ಪತ್ನಿಯ ಜೊತೆಗೆ ಬದುಕನ್ನು ಹಂಚಿಕೊಳ್ಳಬೇಕೆಂಬ ಪಾಠ ಗಂಡಿಗೂ ಮಾಡುವವರು ಇರಲೇ ಬೇಕು.
ಆದರೆ ನಮ್ಮ ಮನೆಗಳು ಇದನ್ನು ಮಾಡುವುದಿಲ್ಲ. ಆರಂಭದಿಂದಲೂ ಗಂಡುಮಕ್ಕಳಿಗೆ ಬೋಧಿಸುವುದು ತಾನಿರುವುದೇ ಸೇವೆ ಮಾಡಿಸಿಕೊಳ್ಳುವುದಕ್ಕೆ ಎಂಬುದನ್ನು. ಬಾಲ್ಯದಲ್ಲಿ ತನ್ನೆಲ್ಲ ಕೆಲಸ ಅಮ್ಮ ಮಾಡಿಕೊಡಬೇಕು, ಯೌವನದಲ್ಲಿ ಹೆಂಡತಿ, ವಯಸ್ಸಾದ ಮೇಲೆ ಸೊಸೆಯೋ ಮಗಳೋ….. ಹೀಗೆ. ಮಗ ಟಿವಿ ನೋಡುತ್ತಾ ಕುಳಿತಿದ್ದರೂ ಸರಿಯೇ ಅವನಿಗೆ ನೀರು ಬೇಕಾದರೆ ಊಟ ಬೇಕಾದರೆ ಅಮ್ಮನೇ ತನ್ನೆಲ್ಲಾ ಕೆಲಸಗಳನ್ನು ಬದಿಗೊತ್ತಿ ತಂದುಕೊಡಬೇಕು ಎಂಬುದು ಇಂದಿಗೂ ಹಲವು ಮನೆಗಳಲ್ಲಿ ಅಲಿಖಿತ ನಿಯಮ. ಗಂಡನ ಕೆಲಸಗಳಿಗೆ ಮೊದಲ ಆದ್ಯತೆ, ತನ್ನದೇನಿದ್ದರೂ ಆಮೇಲೆ ಎಂಬುದಕ್ಕೆ ಹೆಣ್ಣುಮಕ್ಕಳಿಗೆ ಅಮ್ಮನೇ ಮಾದರಿ!
ನಮ್ಮ ಮನೆಗಳು ಬದಲಾಗಬೇಡವೇ?
ನಮ್ಮ ಬದುಕು ಬದಲಾಗಬೇಡವೇ?
ವಯಸ್ಸಿಗೆ ಬಂದ ಮಗಳು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ ಎಂಬುದನ್ನಷ್ಟೇ ನಂಬಿಕೊಂಡಿರುವ ಸಮಾಜಕ್ಕೆ ವಯಸ್ಸಿಗೆ ಬಂದ ಮಗನೂ ದಾರಿತಪ್ಪಲು ನೂರೆಂಟು ದಾರಿಗಳಿವೆ ಎಂಬುದು ಮರೆತುಹೋಗಬಾರದು. ಹೆಣ್ಣಿಗೆ ಹೇಗೆ ಕಾಲಿಟ್ಟ ಮನೆಗೆ ಹೊಂದಿಕೊಂಡು ಬದುಕಬೇಕೆಂಬ ಪಾಠ ನಿರಂತರವಾಗಿ ನಡೆಯುತ್ತದೋ ಅದೇ ರೀತಿ ಮದುವೆಯಾಗುವುದು ಹೊಸ ಬಾಂಧವ್ಯ ಬೆಸೆದುಕೊಳ್ಳುವುದಕ್ಕೆ, ಗೌರವಯುತವಾಗಿ ಬದುಕುವುದಕ್ಕೆ ಎಂಬ ಪಾಠ ಗಂಡಿಗೂ ಆಗಬೇಕು. ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ಸಮಾಜ ಕಲಿಯಬೇಕಾದರೆ ಅದು ಮನೆಮನೆಗಳ ಜವಾಬ್ದಾರಿಯಾಗಬೇಕು.
ಪುಟ್ಟ ಮನಸುಗಳಲ್ಲಿ ನಾವು ಬಿತ್ತುವ ಕನಸುಗಳು ದೊಡ್ಡದಿರಲಿ. ಅದಕ್ಕಿಂತಲೂ ಮಿಗಿಲಾಗಿ ಮಕ್ಕಳಿಗೆ ಕನಸು ಕಾಣುವ ಸ್ವಾತಂತ್ರ್ಯವಿರಲಿ. ನಮ್ಮ ಕನಸುಗಳನ್ನು ಅವರು ಪೂರೈಸಬೇಕೆಂಬ ಭರದಲ್ಲಿ ಬದುಕು ಹಿಮ್ಮುಖವಾಗುವುದು ಬೇಡ. ಅದರಿಂದ ಬದುಕು ಸಂಘರ್ಷದ ಬೀಡಾಗುತ್ತದೆ ಹೊರತು ಜೀವನವಾಗುವುದಿಲ್ಲ. ಹೆಣ್ಣುಮಕ್ಕಳ ಯೋಚನೆಗಳಿಗೆ ಹುಟ್ಟಿನಿಂದಲೇ ಮದುವೆ, ಮಗು, ಮನೆ ಎಂಬ ಲಗಾಮಿನ ಆವಶ್ಯಕತೆಯಿಲ್ಲ.
ವಿಶಾಲವಾದ ಮನೆಗಿಂತ ವಿಶಾಲವಾದ ಮನಸುಗಳು ನಮ್ಮದಾಗಲಿ. ಅಲ್ಲಿ ನೂರೆಂಟು ಕನಸುಗಳು ಮೊಳಕೆಯೊಡೆಯಲಿ.
ಲೇಖನ ಚೆನ್ನಾಗಿ ಮೂಡಿ ಬಂದಿದೆ