ಇಂಟರ್ನೆಟ್ ನಾವು ನಿರ್ವಹಿಸುವ, ಸಂಪರ್ಕಿಸುವ, ಕಲಿಯುವ ವಿಧಾನಗಳಲ್ಲಿ ಕ್ರಾಂತಿಯನ್ನೇ ತಂದಿದೆ. ದುಬಾರಿಯಾಗಿದ್ದ, ಕಂಪ್ಯೂಟರ್ಗಷ್ಟೇ ಸೀಮಿತವಾಗಿದ್ದ, ನಿಧಾನವಾಗಿದ್ದ ಆನ್ಲೈನ್ ಸಂಪರ್ಕ ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಮೂಲಕ ಜನಸಂಖ್ಯೆಯ ಬಹುಪಾಲನ್ನೂ ತಲಪಿದೆ.
ಮೊಬೈಲು, ಕಂಪ್ಯೂಟರ್, ಟ್ಯಾಬ್ಗಳು ಆನ್ಲೈನ್ ಬಂದಾಯ್ತು. ಮುಂದಿನ ಸರದಿ ವಾಹನಗಳದ್ದು.
ವಾಹನಗಳಲ್ಲಿ ಸಂಪರ್ಕ ಸಾಧನಗಳು ಐಷಾರಾಮಿ ಕಾರುಗಳಲ್ಲಿ ಈಗಾಗಲೇ ಬಂದಿವೆ. ದಿನೇ ದಿನೇ ಅಗ್ಗವಾಗುತ್ತಿರುವ ತಂತ್ರಜ್ಞಾನದ ವೆಚ್ಚದಿಂದಾಗಿ ಮುಂದೆ ಬರಲಿರುವ ಕೆಲವು ತಂತ್ರಜ್ಞಾನಗಳ ಬಳಕೆಯ ಬಗ್ಗೆ ಒಂದು ನೋಟ ಇಲ್ಲಿದೆ.
ನೀವು ಹೋಗಬೇಕಾಗಿರುವ ಜಾಗದ ಮಾಹಿತಿಯನ್ನು ಮೊಬೈಲ್ನಲ್ಲಿ ದಾಖಲಿಸಿ ಮೊಬೈಲಿನಲ್ಲಿರುವ ಹಾಡು ಕೇಳುತ್ತಾ ನೀವು ಕಾರಿನತ್ತ ತೆರಳುತ್ತೀರಿ.
ನೀವು ನಿಮ್ಮ ಕಾರಿನ ಬಾಗಿಲಿನ ಲಾಕ್ ಮುಟ್ಟಿದ ಕೂಡಲೇ ನಿಮ್ಮ ಬೆರಳಚ್ಚನ್ನು ಗುರುತಿಸುವ ತಂತ್ರಜ್ಞಾನದಿಂದ ಕೀ/ರಿಮೋಟ್ ಬಳಸದೇ ಬಾಗಿಲು ತೆರೆಯುತ್ತದೆ. ನಿಮ್ಮ ಮೊಬೈಲ್ ಕಾರಿನ ನಿಸ್ತಂತು ಸಂಪರ್ಕಕ್ಕೆ ಬಂದು ನೀವು ಹೋಗಬೇಕೆಂದಿರುವ ದಾರಿಯ ವಿವರವನ್ನು ನಿಮ್ಮ ಕ್ಯಾಲೆಂಡರ್/ಷೆಡ್ಯೂಲ್ನಿಂದ ಪಡೆದು ನಕ್ಷೆಯನ್ನು ಕಾರಿನ ಪರದೆಯಲ್ಲಿ ತೋರಿಸುತ್ತದೆ. ನೀವು ಕೇಳುತ್ತಿದ್ದ ಹಾಡು ಕಾರಿನ ಮ್ಯೂಸಿಕ್ ಸಿಸ್ಟಂನಲ್ಲಿ ಮುಂದುವರಿಯುತ್ತದೆ. ನೀವು ರಸ್ತೆಯಲ್ಲಿ ಸಾಗುತ್ತಿದ್ದಂತೆ ತಿರುವುಗಳ ವಿವರಗಳು ಕಾರಿನ ಮುಂದಿನ ಗ್ಲಾಸ್ ಮೇಲೆ ಮೂಡಿಬರುತ್ತದೆ. ನಿಮ್ಮ ಅರೋಗ್ಯದಲ್ಲಿ ತೊಂದರೆಯುಂಟಾದಾಗ, ನೀವು ಮಂಪರಿಗೆ ಜಾರಿದಾಗ ಕಾರನ್ನು ನಿಧಾನಗೊಳಿಸಿ ಅದುವೇ ನಿಮ್ಮನ್ನು ಎಚ್ಚರಿಸುತ್ತದೆ. ಪೆಟ್ರೋಲ್ಬಂಕ್/ಟೋಲ್ಗೇಟಿನಲ್ಲಿ ವೈ-ಫ಼ೈ ಮೂಲಕ ನಿಮ್ಮ ಖಾತೆಯಿಂದ ಹಣ ಆನ್ಲೈನ್ನಲ್ಲಿ ವರ್ಗಾವಣೆಯಾಗುತ್ತದೆ. ನೀವು ತುಂಬಿಸಿದ ಪೆಟ್ರೋಲ್ ಪ್ರಮಾಣ, ದಿನಾಂಕ, ವೆಚ್ಚ, ಓಡಿದ ದೂರ ಮತ್ತಿತರ ವಿವರಗಳು ತನ್ನಿಂದತಾನೇ ಶೇಖರಣೆಯಾಗಿ ಅದರ ಅವಲೋಕನ, ಗ್ರಾಫ್ಗಳನ್ನು ನಿಮಗೆ ಕಾರಿನ ಪರದೆ/ಮೊಬೈಲ್ಗಳಲ್ಲಿ ನೀಡುತ್ತದೆ.
ಕೆಲವೇ ವರ್ಷಗಳಲ್ಲಿ ಅಟೋಮೊಬೈಲ್ನಲ್ಲಾಗುವ ಕ್ರಾಂತಿಯ ಸ್ಥೂಲ ಚಿತ್ರಣವಿದು.
ವಾಹನದಲ್ಲಿ ತಂತ್ರಜ್ಞಾನದ ಬಳಕೆಯಾಗಲಿರುವ ಸಾಧ್ಯತೆಗಳು ಊಹೆಗೂ ನಿಲುಕದ್ದು. ಮಾಹಿತಿ, ಮನರಂಜನೆ, ಸುರಕ್ಷತೆ, ಭದ್ರತೆ, ಬಳಕೆಯ ಸರಳೀಕರಣ ಹೀಗೆ ಹಲವು ರೀತಿಯಲ್ಲಿ ತಂತ್ರಜ್ಞಾನ ಬಳಕೆಯಾಗುತ್ತಿದೆ.
ಸಮೀಕ್ಷೆಯೊಂದರ ಪ್ರಕಾರ ಇಪ್ಪತ್ತು ವರ್ಷಗಳ ಹಿಂದೆ ಪ್ರತಿ ಲಕ್ಷ ವಾಹನಗಳಲ್ಲಿ ವರ್ಷಕ್ಕೆ ೮೦೦ರಷ್ಟು ಕಳವುಗಳಾಗುತ್ತಿದ್ದರೆ ಈಗ ಆ ಪ್ರಮಾಣ ೧೫೦ಕ್ಕೆ ಇಳಿದಿದೆ. ಹೆಚ್ಚಿದ ತಂತ್ರಜ್ಞಾನವು ವಾಹನ ಕಳವನ್ನು ಬಹುತೇಕ ತಡೆಗಟ್ಟುವಲ್ಲಿ ಸಹಕಾರಿಯಾಗಲಿದೆ.
ವಾಹನಗಳಲ್ಲಿ ೪ ಪದರಗಳ ಸಂಪರ್ಕ ವ್ಯವಸ್ಥೆಗಳಿರಬಹುದು.
ಬ್ಲೂಟೂತ್/ಓಈS ಮೂಲಕ ಕಾರಿನೊಳಗಣ ಉಪಕರಣಗಳು, ಮೊಬೈಲ್, ಲ್ಯಾಪ್ಟಾಪ್, ಸ್ಪೀಕರ್ಗಳ ಮಧ್ಯೆ ಮಾಹಿತಿ/ದತ್ತಾಂಶಗಳ ವಿನಿಮಯ, ನಿಯಂತ್ರಣ ಸಾಧ್ಯವಾಗುತ್ತದೆ. ವಾಹನದ ಜೊತೆ ಪಾರ್ಕಿಂಗ್ ವ್ಯವಸ್ಥೆ, ಮನೆ, ಟೋಲ್ಗೇಟ್, ಇಂಧನ ಭಂಡಾರ ಮುಂತಾದವುಗಳ ಸಂಪರ್ಕಕ್ಕೆ ವೈ-ಫ಼ೈ ತಂತ್ರಜ್ಞಾನ ಬಳಕೆಯಾಗಲಿದೆ. ೩ಉ/೪ಉ ಮುಂತಾದ ಮೊಬೈಲ್ ನೆಟ್ವರ್ಕ್ಗಳು ಕಾರನ್ನು ಅಂತರ್ಜಾಲಕ್ಕೆ ಸಂಪರ್ಕಿಸಲು ನೆರವಾಗುತ್ತವೆ. ಕಾರಿನಲ್ಲಿ ಮ್ಯಾಪ್ ಬಳಕೆ, ಕಳುವಾದ ಕಾರಿನ ಹುಡುಕಾಟ್, ಟಿವಿ ವೀಕ್ಷಣೆಗಳಿಗೆ ಉಪಗ್ರಹ ಸಂಪರ್ಕವು ಸಹಾಯ ಮಾಡುತ್ತವೆ.
ಇನ್ನು ಹತ್ತಿರದ ಕಾರುಗಳನ್ನು ತನ್ನಿಂದತಾನೇ ಗುರುತಿಸಿ ಮಾಹಿತಿ ವಿನಿಮಯಗಳನ್ನು ಮಾಡಿಕೊಳ್ಳುವುದರಿಂದ ದಾರಿಯಲ್ಲಿ ಅಪಾಯದ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಬಹುದು, ಕಾರುಗಳ ಮಧ್ಯೆ ದೂರ, ತಿರುವಿನ ಆಚೆಗಿರುವ ಕಾರುಗಳ ವಿವರ ಪಡೆಯುವುದಲ್ಲದೆ ನೋಡಬಹುದಾದ ಸ್ಥಳಗಳ ಬಗ್ಗೆ, ದಾರಿಯ ಬಗ್ಗೆ ಎರಡು ಅಜ್ಞಾತ ಕಾರುಗಳೊಡನೆ ಚರ್ಚಿಸಬಹುದು. ಪಾರ್ಕಿಂಗಿಗಾಗಿ ಜಾಗವನ್ನು ಹುಡುಕುವ, ಸಮಯವನ್ನು ಲೆಕ್ಕ ಹಾಕುವ ಕೆಲಸಗಳು ಯಾಂತ್ರಿಕವಾಗಬಹುದು.
ಕಂಪ್ಯೂಟರ್, ಮೊಬೈಲ್ಗಳಂತೆ ಭವಿಷ್ಯದ ಕಾರಿನಲ್ಲಿಯೂ ಆಪರೇಟಿಂಗ್ ಸಿಸ್ಟಂ ಇರಲಿದೆ. ಇದಕ್ಕಾಗಿ ಗೂಗಲ್ ಸಿದ್ಧಪಡಿಸಿದ ಆಂಡ್ರಾಯ್ಡ್ ಅಟೋ ಮತ್ತು ಆಪಲ್ ಕಂಪೆನಿಯ ಕಾರ್-ಪ್ಲೇ ಈಗಾಗಲೇ ಬಿಡುಗಡೆಯಾಗಿದೆ. ಇದು ಕಾರಿನ ಭಾಗಗಳು, ಸೆನ್ಸರ್ಗಳು, ಮೊಬೈಲ್, ಅಂತರ್ಜಾಲಗಳ ಮಧ್ಯೆ ಸಂಪರ್ಕ ಸೇತುವಾಗಲಿದ್ದು ಟಚ್ ಪರದೆ, ಸ್ಟೀರಿಂಗ್ಗೆ ಅಳವಡಿಸಿದ ಸ್ವಿಚ್ ಹಾಗೂ ಮಾತಿನ ಆಜ್ಞೆಗಳನ್ನು ಪಡೆದುಕೊಂಡು ಕಾರ್ಯ ನಿರ್ವಹಿಸಲಿದೆ. ಕಾರಿನ ವೇಗ, ನಕ್ಷೆ, ದಾರಿ, ಇಂಧನ ಮಟ್ಟಗಳಿಂದ ಹಿಡಿದು SಒS, ಟ್ವೀಟ್, ಈಮೈಲ್, ಸುದ್ದಿ, ಹವಾಮಾನ, ಮನರಂಜನೆಗಳಂತಹ ವಿವರಗಳನ್ನು ಚಾಲಕನಿಗೆ ಪರದೆಯಲ್ಲಿ ತೋರಿಸುವ/ಕೇಳಿಸುವ ಕೆಲಸವೂ ಇದರಿಂದಲೇ ಆಗಲಿದೆ.
ವಾಹನ ವಿಮೆಯ ನವೀಕರಣ, ಸರ್ವೀಸ್ ದಿನಾಂಕಗಳನ್ನು ಇದು ನೆನಪಿಟ್ಟು ನಿಮಗೆ ತಿಳಿಸಲಿದೆ.
ಖಾಸಗಿ ವಾಹನಗಳಷ್ಟೇ ಅಲ್ಲ. ಸಾರ್ವಜನಿಕ ಸಾರಿಗೆ, ಕ್ಯಾಬ್, ಅಟೋಗಳಲ್ಲೂ ತಂತ್ರಜ್ಞಾನ ಸಾಕಷ್ಟು ಬದಲಾವಣೆಯನ್ನು ತರಲಿದೆ. ಬಸ್ಸಿಗೆ ಕಾಯುವವರ ಮೊಬೈಲಿನಲ್ಲಿ ಬಸ್ಸು ಎಲ್ಲಿದೆ ಎಂಬ ಲೈವ್ ಮಾಹಿತಿ, ದೂರ, ಇಳಿಯಬೇಕಾದ ಸ್ಥಳದ ಸೂಚನೆಗಳು ಬಸ್ ಪ್ರಯಾಣಿಕರಿಗೆ ಸಿಗಲಿದೆ. ನೀವು ಸಂಚರಿಸಿದ ದೂರವನ್ನು ಅಳೆದು, ನಿಮ್ಮ ಮೊಬೈಲ್/ಕ್ರೆಡಿಟ್ ಕಾರ್ಡ್ ನಿರ್ವಾಹಕರಿಲ್ಲದೇ ಹಣ ಪಾವತಿಸುವ ವ್ಯವಸ್ಥೆ ಸಾಧ್ಯವಿದೆ.
ಟೆಕ್ ಸುದ್ದಿ
- ಮೊದಲ ಮೇಡ್-ಇನ್ ಇಂಡಿಯ ಎನ್ನಬಹುದಾದ ಮೊಬೈಲನ್ನು ಭಾರತದ ಕಂಪೆನಿ ಮೈಕ್ರೋಮಾಕ್ಸಿನ ಅಂಗಸಂಸ್ಥೆ `ಯು’ ಇತ್ತೀಚಿಗೆ ಬಿಡುಗಡೆಗೊಳಿಸಿದೆ. ಅದೇ `ಯು-ಯುಫೋರಿಯಾ’. ಡಿಸೈನ್ ಹಾಗೂ ಜೋಡಣೆ ಭಾರತದಲ್ಲೇ ಆಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.
- ಅನಿಯಮಿತ ಫೊಟೋ, ವಿಡಿಯೋಗಳನ್ನು ಸಂಗ್ರಹಿಸಿಡಲು, ಹಂಚಿಕೊಳ್ಳಲು ಗೂಗಲ್ ಫೊಟೋಸ್ ಎಂಬ ಆಪ್ ಮತ್ತು ವೆಬ್ತಾಣಗಳು ಆರಂಭವಾಗಿವೆ. ಫೊಟೋಗಳ ಜಾಣ ವಿಂಗಡನೆ ಇದರಲ್ಲಿರುವ ಇನ್ನೊಂದು ವಿಶೇಷ.
- ಆಂಡ್ರೋಯ್ಡ್ ಫೋನಿನಲ್ಲಿ ಕನ್ನಡ ಬರೆಯಲು ಬಯಸುವವರು SwiftKey ಆಪ್ ಅನ್ನು ಬಳಸಬಹುದು. ಇದೀಗ ಕನ್ನಡದಲ್ಲಿ ಕೈಯಾಡಿಸುವ ಮೂಲಕ ಬರೆಯುವ ಹೊಸ ಸಾಧ್ಯತೆಯೊಂದಿಗೆ update ಆಗಿದೆ. ಗೂಗಲ್ ಕೀಬೋರ್ಡ್ ಸೇರಿದಂತೆ ಇನ್ನೂ ಹಲವು ಆಯ್ಕೆಗಳು ಕನ್ನಡ ಬರೆಯುವವರಿಗಿದೆ.