ನೇದನೂರಿ ಅವರು ಬಂದ ಹಿನ್ನೆಲೆ, ಅವರಿಗಿದ್ದ ಬಡತನವನ್ನು ಗಮನಿಸಿದರೆ ಅವರ ಸಾಧನೆ ಮತ್ತು ಅವರು ಏರಿದ ಎತ್ತರಗಳು ಯಾರನ್ನಾದರೂ ಆಶ್ಚರ್ಯಗೊಳಿಸದೆ ಇರುವುದಿಲ್ಲ.
ಕರ್ನಾಟಕ ಸಂಗೀತದ ಒಂದು ಹಾಡುಗಾರಿಕೆ ಕಚೇರಿ. ಪಕ್ಕವಾದ್ಯದಲ್ಲಿ ವಯೊಲಿನ್ ವಾದನ ಮಾಡುತ್ತಿದ್ದವರು ಈ ವಾದ್ಯದ ಓರ್ವ ಮೇರುಕಲಾವಿದರಾದ ಲಾಲ್ಗುಡಿ ಜಿ. ಜಯರಾಮನ್. ಮುಖ್ಯ ಕಲಾವಿದರು ಕಾಪಿರಾಗದ ಆಲಾಪನೆಯನ್ನು ಹಾಡಿ ಮುಗಿಸಿದರು. ಆ ವಯೊಲಿನ್ನವರು ಅದನ್ನು ನುಡಿಸಬೇಕು. ಆದರೆ ಲಾಲ್ಗುಡಿ ಅದಕ್ಕೆ ನಿರಾಕರಿಸಿ ಮುಂದುವರಿಸುವಂತೆ ಮುಖ್ಯ ಕಲಾವಿದರನ್ನು ಕೋರಿಕೊಂಡರು. ಕಚೇರಿ ಮುಗಿದ ಬಳಿಕ ಮುಖ್ಯ ಕಲಾವಿದರು ವಯೊಲಿನ್ನವರಲ್ಲಿ ಅದೇಕೆ ಹಾಗೆ ಮಾಡಿದಿರಿ ಎಂದು ಕೇಳಿದರು. ಲಾಲ್ಗುಡಿಯವರು ಅದಕ್ಕೆ ಉತ್ತರಿಸಿ, “ಸ್ವಾಮಿ, ನಿಮ್ಮ ಆಲಾಪನೆಯಲ್ಲಿ ನೀವು ಎಲ್ಲ ಸಂಭಾವ್ಯ ಮನೋಧರ್ಮವನ್ನು ಮುಗಿಸಿದ ಮೇಲೆ ಪ್ರತಿಕ್ರಿಯಿಸಲು ನನಗೆ ಏನು ಉಳಿದಿದೆ? ಇದಕ್ಕೆ ಹೋಲಿಸಬಹುದಾದ ಯಾವುದೇ ಸ್ಪಂದನ ನೀಡಲು ನನಗೆ ಅಸಾಧ್ಯ. ಅದಕ್ಕೇ ನುಡಿಸಲಿಲ್ಲ” ಎಂಬ ವಿವರಣೆ ನೀಡಿದರು.
ಆ ಮುಖ್ಯ ಕಲಾವಿದರು ಬೇರೆ ಯಾರೂ ಅಲ್ಲ; ಕೆಲವು ತಿಂಗಳ ಹಿಂದೆ ನಮ್ಮನ್ನು ಅಗಲಿದ ಮಹಾನ್ ಸಂಗೀತಗಾರ, ಸಂಗೀತ ವಿದ್ವಾಂಸ ನೇದುನೂರಿ ಕೃಷ್ಣಮೂರ್ತಿ ಅವರು.
ಅವರ ಕಲಾಜೀವನದಲ್ಲಿ ಅಂತಹ ಸಂದರ್ಭಗಳು ಎಷ್ಟೋ! ಇನ್ನೊಂದು ಕಚೇರಿ ವೇಳೆ ಸಭಾಸದರ ನಡುವೆ ಕರ್ನಾಟಕ ಸಂಗೀತದ ದಂತಕಥೆ ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿದ್ದರು. ಅಂದು ಹಾಡಿದ ರಚನೆಗಳಲ್ಲಿ ಅನ್ನಮಾಚಾರ್ಯರ ರೇವತಿರಾಗದ `ನನ್ನತು ಬಾಟುಕು ನಾಟಕಮು’ ಕೂಡ ಇತ್ತು. ಕಚೇರಿ ಮುಗಿದೊಡನೆ ತಮ್ಮ ಸಂತೋಷವನ್ನು ಹಂಚಿಕೊಂಡ ಎಂ.ಎಸ್., “ನೇದುನೂರಿಯವರೆ, ಇದೊಂದೇ ರಾಗ (ರೇವತಿ)ದ ಗಾಯನಕ್ಕಾಗಿ ನಿಮಗೆ `ಸಂಗೀತ ಕಳಾನಿಧಿ’ ಪ್ರಶಸ್ತಿಯನ್ನು ಕೊಡಬಹುದು. ಅನ್ನಮಾಚಾರ್ಯರು ಇಂದು ಬದುಕಿದ್ದರೆ ಇದನ್ನು ಕೇಳಿ ಭಾವುಕರಾಗಿ ಕಣ್ಣೀರುಗರೆಯುತ್ತಿದ್ದರು” ಎಂದು ಬಾಯ್ತುಂಬ ಹೊಗಳಿದರು. ಎಂ.ಎಸ್. ಅವರ ಮುಕ್ತ ಮನಸ್ಸಿನ ಈ ಹೊಗಳಿಕೆಯಿಂದ ಖುಷಿಯಾದರೂ ನೇದುನೂರಿ ವಿನೀತರಾಗಿ “ಅಮ್ಮ, ನಿಮ್ಮಿಂದ ಇಂತಹ ಹೊಗಳಿಕೆಗೆ ನಾನು ಅರ್ಹನಲ್ಲ. ಏಕೆಂದರೆ ಅನ್ನಮಾಚಾರ್ಯರ ಕೃತಿಗಳನ್ನು ಜನಪ್ರಿಯಗೊಳಿಸಲು ತಾವು ತುಂಬ ಶ್ರಮಿಸಿದವರು. ನನ್ನ ಸಂಗೀತವನ್ನು ಹೊಗಳುವುದು ನಿಮ್ಮ ದೊಡ್ಡತನವನ್ನು ತೋರಿಸುತ್ತದೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಸುಬ್ಬುಲಕ್ಷ್ಮಿ ಅವರು ಹೇಳಿದ `ಸಂಗೀತ ಕಳಾನಿಧಿ’ ಅಂತಿಂಥ ಪ್ರಶಸ್ತಿಯಲ್ಲ. ಕರ್ನಾಟಕ ಸಂಗೀತದ ರಾಜಧಾನಿ ಎನಿಸಿದ ಚೆನ್ನೈಯಲ್ಲಿರುವ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಅತ್ಯಂತ ಪ್ರತಿಷ್ಠಿತ ಸಂಸ್ಥೆ. ಒಬ್ಬ ಸಂಗೀತಗಾರನ ಜೀವನದ ಸಾಧನೆಗೆಂಬಂತೆ ಅದು ಸಂಗೀತ ಕಳಾನಿಧಿ ಪ್ರಶಸ್ತಿಯನ್ನು ನೀಡುತ್ತದೆ. ಸಿಗುವುದೇ ಕಷ್ಟ; ಸಿಕ್ಕಿದರೂ ಕಲಾವಿದರು ಅದನ್ನು ಪಡೆಯುವಾಗ ಬಹುತೇಕ ವೃದ್ಧರಾಗಿರುತ್ತಾರೆ. ೧೯೯೧ರಲ್ಲಿ ಅದಕ್ಕೆ ಕೊರಳೊಡ್ಡುವಾಗ ನೇದುನೂರಿ ಕೃಷ್ಣಮೂರ್ತಿ ಅವರ ವಯಸ್ಸು ೬೪ ವರ್ಷ.
ಪ್ರತಿಷ್ಠಿತ ಸಂಸ್ಥೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ನೇದುನೂರಿ ಅವರಿಗೆ ನಿಡುಗಾಲ ಗೌರವಪೂರ್ಣವಾದ ಸ್ಥಾನವಿತ್ತು. ಎರಡು ಬಾರಿ ಅವರಿಗೆ ಅಕಾಡೆಮಿಯ ಶ್ರೇಷ್ಠ ಗಾಯಕ ಪ್ರಶಸ್ತಿ ಲಭಿಸಿತ್ತು; ಅವರು ಅಕಾಡೆಮಿಯ ತಜ್ಞರ ಸಮಿತಿಯ ಸದಸ್ಯರಾಗಿದ್ದರು. ಪುನಶ್ಚೇತನ ಶಿಬಿರ(ರಿಫ್ರೆಶರ್ ಕೋರ್ಸ್) ಬೇಕೆನಿಸುವವರ ಅನುಕೂಲಕ್ಕಾಗಿ ಚೆನ್ನೈನ ಸಂಗೀತ ಋತು(ಮಾರ್ಗಾಳ)ವಿನ ಹೊತ್ತಿಗೆ ಮ್ಯೂಸಿಕ್ ಅಕಾಡೆಮಿ ಸಂಗೀತ ವಿದ್ವಾಂಸರಿಂದ ಶಿಬಿರಗಳನ್ನು ನಡೆಸುತ್ತಿತ್ತು. ೮೫ರ ವಯಸ್ಸಿನಲ್ಲಿದ್ದಾಗಲೂ ನೇದುನೂರಿ ಅಲ್ಲಿ ಮೂರು ದಿನಗಳ ಕಾರ್ಯಾಗಾರ ನಡೆಸಿದ್ದರು. ಇದೆಲ್ಲಕ್ಕಿಂತ ಮಿಗಿಲಾಗಿ ೫೦ವರ್ಷಗಳಿಗೂ ಮಿಕ್ಕಿ ಅಕಾಡೆಮಿ ಪ್ರತಿವರ್ಷ ನೇದುನೂರಿ ಅವರ ಕಚೇರಿಯನ್ನು ಏರ್ಪಡಿಸುತ್ತಾ ಬಂದಿತ್ತು. ಅನಾರೋಗ್ಯ ಕಾರಣದಿಂದಾಗಿ ಒಂದೆರಡು ವರ್ಷ ಮಾತ್ರ ಅವರು ಅಕಾಡೆಮಿಯ ಡಿಸೆಂಬರ್ ಕಚೇರಿಯನ್ನು ತಪ್ಪಿಸಿಕೊಂಡಿರಬಹುದು, ಅಷ್ಟೆ. ಅಲ್ಲಿನ ಅವರ ಕಚೇರಿಗೆ ಸಂಗೀತಾಸಕ್ತರು ದೊಡ್ಡಸಂಖ್ಯೆಯಲ್ಲಿ ಸೇರುತ್ತಿದ್ದರು. ಅವರ ಸೃಷ್ಟಿಶೀಲತೆ, ಭಾವನಾತ್ಮಕತೆ, ಲಯಪ್ರಜ್ಞೆ ಮತ್ತು ಶ್ರೋತೃಗಳೊಂದಿಗೆ ಭಾವಸಾಮರಸ್ಯವನ್ನು ಸಾಧಿಸುವ ಸಾಮರ್ಥ್ಯಗಳು ಚೆನ್ನೈ ಸೇರಿದಂತೆ ಎಲ್ಲ ಕಡೆ ಅವರಿಗೆ ದೊಡ್ಡಸಂಖ್ಯೆಯ ಶ್ರೋತೃಗಳನ್ನು ದೊರಕಿಸಿಕೊಡುತ್ತಿದ್ದವು.
ಜನನಿ ತಾನೆ…..
ನೇದನೂರಿ ಅವರು ಬಂದ ಹಿನ್ನೆಲೆ, ಅವರಿಗಿದ್ದ ಬಡತನವನ್ನು ಗಮನಿಸಿದರೆ ಅವರ ಸಾಧನೆ ಮತ್ತು ಅವರು ಏರಿದ ಎತ್ತರಗಳು ಯಾರನ್ನಾದರೂ ಆಶ್ಚರ್ಯಗೊಳಿಸದೆ ಇರುವುದಿಲ್ಲ. ಆಂಧ್ರಪ್ರದೇಶದ ಪೀಠಪುರ ತಾಲೂಕಿನ ಕೊತ್ತಪಲ್ಲಿಯ ಒಂದು ಬಡಬ್ರಾಹ್ಮಣ ಕುಟುಂಬದಲ್ಲಿ ಅಕ್ಟೋಬರ್ ೧೦, ೧೯೨೭ರಂದು ಅವರ ಜನನವಾಯಿತು. ರಾಮಮೂರ್ತಿ ಪಂತುಲು ಮತ್ತು ವಿಜಯಲಕ್ಷ್ಮಿ ದಂಪತಿಗಳ ಎಂಟುಜನ ಮಕ್ಕಳಲ್ಲಿ ಕೃಷ್ಣಮೂರ್ತಿ ಕೊನೆಯವರು. ಬಡತನದ ಕಷ್ಟ ತೀವ್ರವಾಗಿತ್ತು. ಆದರೆ ಬಾಲಕ ಕೃಷ್ಣಮೂರ್ತಿಯಲ್ಲಿ ಗಾಯನಕೌಶಲ ಹುಟ್ಟಿನಿಂದಲೇ ಬಂದಂತಿತ್ತು. ಅದು ತಾಯಿ ಮತ್ತು ಸೋದರಮಾವನಿಂದ ಬಂದುದಿರಬೇಕು. ತಾಯಿ ಜಯದೇವನ ಅಷ್ಟಪದಿ ಮತ್ತು ಅಧ್ಯಾತ್ಮ ರಾಮಾಯಣದ ಪದ್ಯಗಳನ್ನು ಭಕ್ತಿಪೂರ್ವಕವಾಗಿ ಹಾಡಿಕೊಳ್ಳುತ್ತಿದ್ದರು. ಕೇಳುತ್ತಿದ್ದಂತೆ ಪುಟ್ಟ ಬಾಲಕನಿಗೆ ಹಾಡುವುದು ಕೂಡ ಅಭ್ಯಾಸವಾಗಿ ಹೋಗಿತ್ತು. ತಾನು ಕೇಳಿದ ಯಾವುದೇ ಭಜನೆ-ಕೀರ್ತನೆಗಳನ್ನು ಆತ ತಪ್ಪಿಲ್ಲದೆ ಹಾಡಬಲ್ಲವನಾಗಿದ್ದ; ಆಗಲೇ ಅವನ ಸ್ವರ ಮತ್ತು ಗಾಯನ ಕೌಶಲಗಳಿಗೆ ಮೋಡಿಮಾಡುವ ಶಕ್ತಿ ಇತ್ತು.
“ಬಾಲ್ಯದಲ್ಲಿ ನನ್ನ ಕಿವಿಗಳು ಅಮ್ಮನ ಸಂಗೀತದಿಂದ ತುಂಬಿದ್ದವು. ಅವಳ ಸ್ವರ ಜೇನಿನಂತೆ ಇಂಪು ಮತ್ತು ಶ್ರೇಷ್ಠ ಮಟ್ಟದ್ದು. ಅವಳಿಗೆ ಊರಿನಲ್ಲಿ ಸಂಗೀತಗಾರ್ತಿ ಎಂಬ ಹೆಸರೂ ಇತ್ತು. ಅವಳು ಹಾಡಿದ್ದನ್ನು ಗ್ರಹಿಸಿದೆ; ಅದೇ ನನ್ನ ಸಂಗೀತದ ತಳಪಾಯ”
– ನೇದುನೂರಿ
ಬಾಲಕ ಕೃಷ್ಣಮೂರ್ತಿಯಲ್ಲಿ ಜ್ಞಾನದ ದಾಹ ವಿಶೇಷವಾಗಿತ್ತು; ತುಂಬ ಓದಬೇಕೆನ್ನುವ ಆಶೆ ಉಂಟಾಗಿತ್ತು. ಆದರೆ ಬಡತನ. ಉಚಿತವಾಗಿ ಸಿಕ್ಕಿದ್ದು ಏನು ಬೇಕಾದರೂ ಓದು ಎಂದು ತಂದೆ ಹೇಳಿದರು. ಹಾಗೆ ಸಿಕ್ಕಿದ ಸಂಸ್ಕೃತ ಮತ್ತು ಹಿಂದಿಯನ್ನು ಕಲಿತದ್ದಾಯಿತು. ಆತ ಅಷ್ಟಪದಿಗಳನ್ನು ಹಾಡುವ ಸೌಂದರ್ಯಕ್ಕೆ ಮಾರುಹೋದ ಸ್ಥಳೀಯ ಸಂಗೀತಗಾರರಾದ ಅಪ್ಪಾರಾವ್ ಮತ್ತು ಕಲ್ಲೂರಿ ವೇಣುಗೋಪಾಲರಾವ್ ವರ್ಣ, ಅಷ್ಟಪದಿ, ತರಂಗಗಳ ಕ್ರಮಬದ್ಧ ಗಾಯನವನ್ನು ಕಲಿಸಿದರು; ತಮ್ಮ ಮನೆಯಲ್ಲಿ ಹಾಡಿಸಿದರು.
ಹಾಗೆ ಒಮ್ಮೆ ಹಾಡಿದಾಗ ಕೇಳಿದ ಕುಟುಂಬದ ಸ್ನೇಹಿತ, ನಿವೃತ್ತ ತಹಸೀಲ್ದಾರ್ ಅಪ್ಪಾಲ ನರಸಿಂಹನ್ ಅವರು ತುಂಬ ಮೆಚ್ಚಿಕೊಂಡರು. ವಿಜಯನಗರಮ್ನ ಸಂಗೀತ ಕಾಲೇಜಿಗೆ ಸೇರುವ ಮನಸ್ಸಿದೆಯಾ ಎಂದು ಕೇಳಿದರು. ವಿಜಯನಗರಮ್ನ ಮಹಾರಾಜ ಮ್ಯೂಸಿಕ್ ಕಾಲೇಜಿಗೆ ಆಗ ಖ್ಯಾತ ವಯೊಲಿನ್ ವಾದಕ ದ್ವಾರಮ್ ವೆಂಕಟಸ್ವಾಮಿ ನಾಯ್ಡು ಅವರು ಪ್ರಿನ್ಸಿಪಾಲರು. ಅಪ್ಪಾಲ ನರಸಿಂಹನ್ ಅವರ ಸಹಾಯದ ಮೇರೆಗೆ ಅಲ್ಲಿಗೆ ಸೇರಿದ್ದಾಯಿತು. ಆಗ ಕೃಷ್ಣಮೂರ್ತಿಯ ವಯಸ್ಸು ೧೩ ವರ್ಷ. ಅಂತೂ ತಾಯಿಯ ಸಂಗೀತ ಅಲ್ಲಿಯ ತನಕ ಒಯ್ದಿತು. “ಬಾಲ್ಯದಲ್ಲಿ ನನ್ನ ಕಿವಿಗಳು ಅಮ್ಮನ ಸಂಗೀತದಿಂದ ತುಂಬಿದ್ದವು. ಅವಳ ಸ್ವರ ಜೇನಿನಂತೆ ಇಂಪು ಮತ್ತು ಶ್ರೇಷ್ಠ ಮಟ್ಟದ್ದು. ಅವಳಿಗೆ ಊರಿನಲ್ಲಿ ಸಂಗೀತಗಾರ್ತಿ ಎಂಬ ಹೆಸರೂ ಇತ್ತು. ಅವಳು ಹಾಡಿದ್ದನ್ನು ಗ್ರಹಿಸಿದೆ; ಅದೇ ನನ್ನ ಸಂಗೀತದ ತಳಪಾಯ” ಎಂದು ನೇದುನೂರಿ ಒಂದೆಡೆ ಹೇಳಿದ್ದಾರೆ.
ವಯೊಲಿನ್ ಸೆಳೆತ
ಮಹಾರಾಜಾ ಸಂಗೀತ ಕಾಲೇಜಿನಲ್ಲಿ ಗಾಯನ ವಿಭಾಗಕ್ಕೆ ಸೇರಿದ್ದಾಯಿತು. ವೆಂಕಟಸ್ವಾಮಿ ನಾಯ್ಡು ಅವರ ಸಹೋದರನ ಮಗ ದ್ವಾರಂ ನರಸಿಂಗರಾವ್ ನಾಯ್ಡು ಗಾಯನ ವಿಭಾಗದ ಅಧ್ಯಾಪಕರು. ವೆಂಕಟಸ್ವಾಮಿ ನಾಯ್ಡು ಪ್ರಿನ್ಸಿಪಾಲರಾದ ಕಾರಣ ಆಗ ಆ ಕಾಲೇಜಿಗೆ ಸೇರುವವರಲ್ಲಿ ವಯೊಲಿನ್ ಕಲಿಯುವ ಆಸಕ್ತರೇ ಜಾಸ್ತಿ. ಅವರ ಬೋಧನೆ ಮತ್ತು ವಿದ್ಯಾರ್ಥಿಗಳು ಪ್ರಾಕ್ಟಿಸ್ ಮಾಡುವುದನ್ನು ಕೇಳಿ ಯುವಕ ಕೃಷ್ಣಮೂರ್ತಿಗೆ ತಾನೂ ವಯೊಲಿನ್ ವಾದಕ ಆಗಬೇಕೆನ್ನುವ ಆಶೆ ಉಂಟಾಯಿತು. ಸ್ವಲ್ಪ ಕಲಿತಾದರೂ ಅದನ್ನು ಮುಂದುವರಿಸುವುದಕ್ಕೆ ನರಸಿಂಗರಾವ್ ಸಮ್ಮತಿಸಲಿಲ್ಲ. “ನಿನಗೆ ಒಳ್ಳೆಯ ಸ್ವರವಿದೆ. ಗಾಯನವನ್ನು ಬಿಡಬೇಡ” ಎಂದರು. ನೇದನೂರಿ ಹಾಡುವಾಗ ಅವರು ವಯೊಲಿನ್ ನುಡಿಸುತ್ತಿದ್ದರು. ಆ ರೀತಿಯಲ್ಲಿ ಅಲ್ಲಿ ಒಳ್ಳೆಯ ತರಬೇತಿ ಸಿಕ್ಕಿತು. ೧೯೪೫ರಲ್ಲಿ ಅವರ ಅಲ್ಲಿನ ಐದು ವರ್ಷಗಳ ಕೋರ್ಸ್ ಮುಗಿಯಿತು. ಕಾಲೇಜು ಬಿಡುವಾಗಲೂ ನರಸಿಂಗರಾವ್ ನಾಯ್ಡು `ಗಾಯನ ಬಿಡಬೇಡ’ ಎಂಬ ಮಾತನ್ನು ಪುನಃ ಹೇಳಿ ಬೀಳ್ಕೊಂಡರು. “ಅವರ ಒತ್ತಾಯಪೂರ್ವಕ ಸಲಹೆ ನನ್ನನ್ನು ಈ ಮಟ್ಟಕ್ಕೆ ತಂದಿತು” ಎಂದು ನೇದನೂರಿ ಮುಂದೆ ಆಗಾಗ ನೆನಪಿಸಿಕೊಳ್ಳುತ್ತಿದ್ದರು.
ಅಪ್ಪಾಲರು ಕಾಲೇಜಿನ ಶಿಕ್ಷಣ, ಊಟ-ವಸತಿಯ ಖರ್ಚನ್ನು ವಹಿಸಿಕೊಂಡರೆ ತಂದೆ ತಿಂಗಳಿಗೆ ಒಂದು ರೂ. ಕೊಡುತ್ತಿದ್ದರು. ಅದರಿಂದ ತಿಂಗಳಿನ ಎಲ್ಲ ದಿನ ಅರ್ಧ ಕಪ್ ಕಾಫಿ ಸಿಗುತ್ತಿತ್ತು. ನಿರ್ವಹಣೆ ಕಷ್ಟವಾದರೂ ಐದು ವರ್ಷದ ಶಿಕ್ಷಣವನ್ನು ಪೂರೈಸಿ ಹೊರಬಂದರು; ಹಿರಿಯ ವಿದ್ವಾನ್ಗಳ ಕಚೇರಿಯನ್ನು ಕೇಳುತ್ತಿದ್ದರು.
ಕಾಲೇಜಿನಿಂದ ಹೊರಗೆ ಬಂದ ಬಳಿಕ ಸ್ಥಳೀಯ ಸಭಾಗಳವರಲ್ಲಿ ಅವಕಾಶ ಸಿಗಬಹುದೇ ಎಂದು ಮರ್ಜಿಗಾಗಿ ಕಾದರು. ಆದರೆ ೧೮ ವರ್ಷದ ಈ ಹೊಸಬನನ್ನು ಅವರೆಲ್ಲಿ ಗಮನಿಸುತ್ತಾರೆ? ಆದರೂ ಯುವಕ ಕೃಷ್ಣಮೂರ್ತಿ ವೇದಿಕೆ ಏರುವ ಸಂದರ್ಭ ಅದೇ ವರ್ಷ (೧೯೪೫) ಕೂಡಿ ಬಂತು. ಕಾಕಿನಾಡದ ಸರಸ್ವತಿ ಗಾನಸಭಾದಲ್ಲಿ ಪ್ರಸಿದ್ಧ ಕಲಾವಿದ ಟಿ.ಆರ್. ಮಹಾಲಿಂಗಮ್(ಮಾಲಿ) ಅವರ ಕೊಳಲುವಾದನ ಕಚೇರಿ ನಿಗದಿಯಾಗಿತ್ತು. ಆದರೆ ಅವರು ಬಾರದ ಕಾರಣ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗುವ ಪರಿಸ್ಥಿತಿ ಉಂಟಾಯಿತು. ಜನ ಸಿಟ್ಟಿಗೇಳುವುದನ್ನು ತಪ್ಪಿಸಲು ಏನಾದರೂ ಮಾಡಬೇಕಿತ್ತು. ಆಗ ಸಭೆಯಲ್ಲಿದ್ದ ಕೃಷ್ಣಮೂರ್ತಿಯೇ ಹಾಡಲಿ ಎಂದು ಯಾರೋ ಉಚಿತ ಸಲಹೆ ನೀಡಿದರು. ಹಾಗೆ ದೊರೆತ ಅವಕಾಶವನ್ನು ನೇದನೂರಿ ಚೆನ್ನಾಗಿಯೇ ಬಳಸಿಕೊಂಡರು. ಕೇಳಿದ ಜನ ತುಂಬ ಸಂತೋಷಪಟ್ಟರು; ಕಚೇರಿ ಅದ್ಭುತ ಯಶಸ್ಸು ಕಂಡಿತು. ಒಬ್ಬ ಹುಡುಗ ಮಾಲಿಯವರ ಜಾಗ ತುಂಬಿದ್ದಕ್ಕೆ ಎಲ್ಲರೂ ಅಚ್ಚರಿಪಟ್ಟರು. ಕರ್ನಾಟಕ ಸಂಗೀತದ ಓರ್ವ ಮಹಾನ್ ಕಲಾಕಾರ ಹೀಗೆ ಅನಾಮತ್ತಾಗಿ ಉದಿಸಿಬಿಟ್ಟಿದ್ದ; ಅಂದಿನಿಂದ ನೇದನೂರಿ ತಮ್ಮ ಸಂಗೀತಯಾತ್ರೆಯಲ್ಲಿ ಹಿಂದೆ ನೋಡಿದ್ದಿಲ್ಲ.
ನಿಜಗುರು ಸಿಕ್ಕಿದರು
ಮಹಾನ್ ಗುರುಗಳೊಬ್ಬರನ್ನು ಆಶ್ರಯಿಸಬೇಕೆಂಬ ಹಂಬಲ ಯುವಕ ಕೃಷ್ಣಮುರ್ತಿಯಲ್ಲಿ ಉಳಿದೇ ಇತ್ತು. ಡಾ| ಶ್ರೀಪಾದ ಪಿನಾಕಪಾಣಿ ಅವರ ಸಂಪರ್ಕಕ್ಕೆ ಬರುವ ಮೂಲಕ ಅದು ಸಾಧ್ಯವಾಯಿತು. ಕೃಷ್ಣಮೂರ್ತಿ ಪೀಠಪುರದಲ್ಲಿದ್ದರೆ ಡಾ| ಪಿನಾಕಪಾಣಿ ವಿಶಾಖಪಟ್ಟಣದಲ್ಲಿದ್ದರು. ಅವರಿಗೆ ಕರ್ನೂಲಿಗೆ ವರ್ಗವಾದ ಕಾರಣ ಭೇಟಿಗೆ ಅನುಕೂಲವಾಯಿತು. ಅವರ ಸಂಗೀತ ಇಷ್ಟವಾಗಿ ಅವರಿಂದ ಕಲಿಯಬಯಸಿದರು. ೧೯೪೯ರಿಂದ ೧೩ ವರ್ಷಗಳ ಕಾಲ ಸಾಧ್ಯವಾದಾಗೆಲ್ಲ ಅವರ ಮನೆಯಲ್ಲಿದ್ದು, ಗುರುಕುಲವಾಸದ ಕ್ರಮದಲ್ಲಿ ಉನ್ನತಶಿಕ್ಷಣ ಪಡೆದರು. “ಅವು ನನ್ನ ಜೀವನದ ಅತ್ಯಂತ ಉಪಯುಕ್ತ ವರ್ಷಗಳು. ೨-೩ ತಿಂಗಳು ಅವರ ಮನೆಯಲ್ಲಿ ಇರುತ್ತಿದ್ದೆ. ಗುರುಗಳು ಆ ಕಾಲದ ಹಿರಿಯ ಗಾಯಕರ ಶೈಲಿಯಲ್ಲೇ ಹಾಡಿ ತೋರಿಸಬಲ್ಲವರಾಗಿದ್ದರು. ಅರಿಯಾಕುಡಿ ಅವರ ರೀತಿಯಲ್ಲೇ ಹಾಡಿ ಅವರ ಶ್ರೇಷ್ಠತೆ ಎಲ್ಲಿದೆ ಎಂದು ತೋರಿಸುತ್ತಿದ್ದರು. ಮುಖ್ಯವಾಗಿ ಗಮಕದ ವಿಷಯದಲ್ಲಿ ಅವರ ಶೈಲಿಯಿಂದ ಕಲಿಯಬೇಕು ಎನ್ನುತ್ತಿದ್ದರು. ಮುದಿಕೊಂಡಂ ವೆಂಕಟರಾಮ ಅಯ್ಯರ್ ಅವರ ತಂತ್ರ(ಟೆಕ್ನಿಕ್)ವನ್ನು ಗುರುತಿಸಿ ವಿಳಂಬ ಕಾಲ ಗಾಯನದ ಘನತೆಯನ್ನು ವಿವರಿಸುತ್ತಿದ್ದರು. ಶೆಮ್ಮಂಗುಡಿ, ಜಿ.ಎನ್. ಬಾಲಸುಬ್ರಹಣ್ಯಮ್, ಆಲತ್ತೂರು ಸಹೋದರರು, ಮಧುರೆ ಮಣಿ ಅಯ್ಯರ್ ಮುಂತಾದವರ ಧನಾಂಶಗಳೇನು ಎಂದು ತಿಳಿಸಿಕೊಡುತ್ತಿದ್ದರು. ವೀಣಾ ಧನಮ್ಮಾಳ್ ಅವರ ಸಂಗೀತವನ್ನು ತುಂಬ ಹೊಗಳುತ್ತಿದ್ದರು” ಎಂದು ನೇದುನೂರಿ ಗುರು ಪಿನಾಕಪಾಣಿ ಅವರ ಬೋಧನೆಯ ಕ್ರಮವನ್ನು ಉಲ್ಲೇಖಿಸಿದ್ದರು.
ಸಂಗತಿಗಳನ್ನು ಪುನಃ ಹಾಡಿಸುವುದು ಡಾ| ಪಾಣಿ ಅವರ ಕ್ರಮ. ಕೆಲವು ಸಲ ಒಂದು ರಾಗದ ಕೆಲವು ಸಂಚಾರಗಳನ್ನು ಹಾಡಿ ಶಿಷ್ಯ ತನ್ನ ಮನೋಧರ್ಮದಂತೆ ಮುಂದುವರಿಸಬೇಕೆಂದು ಸೂಚನೆ ನೀಡುವರು. ಸಂಚಾರ ಸರಿಯಾಗಿ ಬಂದಾಗ ಪುನಃ ಹೇಳಿಸುವರು. ಅದು ಮನಸ್ಸಿನಲ್ಲಿ ಗಟ್ಟಿ ಮಾಡುವ ಕ್ರಮ. ಆ ರೀತಿಯಲ್ಲಿ ತುಂಬ ಸಂಗತಿ(ಸ್ವರಗುಚ್ಛ)ಗಳನ್ನು ಕಲಿಸಿದರು. ಸಂಗತಿಗಳನ್ನು ಬೆಳೆಸುವುದಕ್ಕೆ ಮತ್ತು ಸಂಗತಿಜ್ಞಾನ ಗಟ್ಟಿ ಆಗುವುದಕ್ಕೆ ಅದರಿಂದ ತುಂಬ ಪ್ರಯೋಜನ ಆಯಿತೆಂದು ನೇದುನೂರಿ ಹೇಳುತ್ತಿದ್ದರು. ಪಿನಾಕಪಾಣಿ ಅವರ ಮಾರ್ಗದರ್ಶನದಲ್ಲಿ ನೇದುನೂರಿ ಸ್ವಂತಶೈಲಿಯನ್ನು ರೂಪಿಸಿಕೊಂಡರು. ಅವರ ಸಂಗೀತಕ್ಕೆ ಪಾಲಿಶ್ ಸಿಕ್ಕಿದಂತಾಯಿತು. ಕಚೇರಿಗಳ ಸಂಖ್ಯೆ ಹೆಚ್ಚಿತು; ಆಂಧ್ರ, ತಮಿಳುನಾಡು, ಕರ್ನಾಟಕಗಳಲ್ಲಿ ಬೇಡಿಕೆ ಬೆಳೆಯಿತು. ಹೆಸರು, ಕೀರ್ತಿಗಳು ಪಸರಿಸಿ ಅವರು ಕರ್ನಾಟಕದ ಸಂಗೀತದ `ಐಕಾನ್'(ಪ್ರತಿಮೆ) ಆದರು.
ಸಂಗೀತ ಕಾಲೇಜುಗಳ ಪ್ರಿನ್ಸಿಪಾಲರಾಗಿ
ಸಂಗೀತ ಕಾಲೇಜುಗಳ ಮತ್ತು ಸಂಗೀತ ಸಂಸ್ಥೆಗಳ ಉನ್ನತ ಹುದ್ದೆಗಳು ನೇದುನೂರಿ ಅವರನ್ನು ಅರಸಿಕೊಂಡು ಬಂದವು. ತಿರುಪತಿಯ ಶ್ರೀ ವೆಂಕಟೇಶ್ವರ ಸಂಗೀತ-ನೃತ್ಯ ಕಾಲೇಜು, ಸಿಕಂದರಾಬಾದ್ನ ಸರ್ಕಾರಿ-ನೃತ್ಯ ಕಾಲೇಜುಗಳ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದ ಅವರು, ೧೯೮೫ರಲ್ಲಿ ವಿಜಯವಾಡ ಜಿ.ವಿ.ಆರ್. ಸರ್ಕಾರಿ ಸಂಗೀತ-ನೃತ್ಯ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಯಲ್ಲಿದ್ದಾಗ ನಿವೃತ್ತಿ ಹೊಂದಿದರು. ಶ್ರೀ ವೆಂಕಟೇಶ್ವರ ವಿದ್ಯಾಲಯ ಹಾಗೂ ನಾಗಾರ್ಜುನ ವಿದ್ಯಾಲಯಗಳ ಲಲಿತಕಲಾ ವಿಭಾಗದ ಡೀನ್ ಆಗಿದ್ದರು. ಸಂಗೀತ ಅಧ್ಯಯನ ಮಂಡಳಿ(ಬೋರ್ಡ್ ಆಫ್ ಸ್ಟಡೀಸ್)ಯ ಅಧ್ಯಕ್ಷರಾಗಿದ್ದರು. ಆಕಾಶವಾಣಿಯ ಅತ್ಯುನ್ನತ ಶ್ರೇಣಿಯ ಕಲಾವಿದರಾಗಿದ್ದ ನೇದುನೂರಿ ಸಂಸ್ಥೆಯ ಕೇಂದ್ರ ಸಂಗೀತ ಧ್ವನಿ ಪರೀಕ್ಷೆ(ಅಡಿಶನ್) ಮಂಡಳಿಯ ಸದಸ್ಯರಾಗಿದ್ದರು.
ನಿವೃತ್ತಿಯ ಬಳಿಕ ಚೆನ್ನೈಯಲ್ಲಿ ನೆಲೆಸಿ ಎಂದು ಅವರ ಸಹೋದ್ಯೋಗಿಗಳು ಮತ್ತು ಹಿರಿಯ ಸಂಗೀತಗಾರರು ಒತ್ತಾಯಿಸಿದರೂ ಕೂಡ ನೇದುನೂರಿ ಹುಟ್ಟೂರಿನ ಸಮೀಪದ ವಿಶಾಖಪಟ್ಟಣದಲ್ಲೇ ನೆಲೆಸಿದರು. ಅವರ ವೃತ್ತಿ-ಪ್ರವೃತ್ತಿಗಳಿಗೆ ಚೆನ್ನೈ ವಾಸ ಅನುಕೂಲಕರ ಆಗಬಹುದಿತ್ತು. ಕೊನೆಯವರೆಗೆ ಅವರು ವಿಶಾಖಪಟ್ಟಣದಲ್ಲೇ ನೆಲೆಸಿದ್ದು ತೆಲುಗರ ಅದೃಷ್ಟ ಎನಿಸಿತು. ಸಂಗೀತ ಬೋಧನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಆ ಪರಿಸರದಲ್ಲಿ ಕರ್ನಾಟಕ ಸಂಗೀತಕ್ಕೆ ಚೈತನ್ಯ ನೀಡಿದರು. `ನಾದ ನೀರಾಜನಮ್’ ಟಿವಿ ಕಾರ್ಯಕ್ರಮದ ಆಯ್ಕೆ ಸಮಿತಿಯಲ್ಲಿದ್ದು ಅವರು ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಡಿಸೆಂಬರ್ ೮ರಂದು ನಿಧನಹೊಂದಿದ ನೇದುನೂರಿ ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದರು.
ಅನ್ನಮಾಚಾರ್ಯರ ಸೇವೆ
೧೫ನೇ ಶತಮಾನದ ತೆಲುಗಿನ ಭಕ್ತಿಕವಿ ಅನ್ನಮಾಚಾರ್ಯ, ಶ್ರೀ ನಾರಾಯಣ ತೀರ್ಥ ಮತ್ತು ಭದ್ರಾಚಲ ರಾಮದಾಸರ ಬಹಳಷ್ಟು ಕೃತಿಗಳಿಗೆ ನೇದುನೂರಿ ರಾಗ ಹಾಕಿದರು. ತ್ಯಾಗರಾಜರ ಅಪರೂಪದ ಕೃತಿಗಳಿಗೆ ಕೂಡ ರಾಗ ಹಾಕಿದರು; ಅವುಗಳ ಕ್ಯಾಸೆಟ್, ಸಿಡಿಗಳನ್ನು ಮಾಡಿದರು. ಮೂರು ಸಂಪುಟಗಳಲ್ಲಿ ಪ್ರಕಟಗೊಂಡ `ಅನ್ನಮಯ್ಯ ಪದಸೌರಭಮ್’, `ಅನ್ನಮಯ್ಯ ಪದಾರ್ಥ ಪ್ರಕಾಶಿಕಾ’ ಮತ್ತು ಆತ್ಮಚರಿತ್ರೆ ಕೃತಿ `ನಾದಯೋಗಿ ಆತ್ಮಕಥಾ’ ನೇದುನೂರಿ ಅವರ ಪ್ರಕಟಿತ ಕೃತಿಗಳು. ನೇದುನೂರಿ ಅವರು ಅನ್ನಮಾಚಾರ್ಯರ ೧೦೮ ರಚನೆಗಳಿಗೆ ಜನಪ್ರಿಯ ಮತ್ತು ಅಪರೂಪದ ರಾಗಗಳಲ್ಲಿ ಸ್ವರ ಹಾಕಿದ್ದು ವಿದ್ವದ್ವಲಯದ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಅದರಿಂದ ಆ ಹಾಡುಗಳಿಗೆ ಸಂಗೀತ ತ್ರಿಮೂರ್ತಿಗಳ ರಚನೆಗಳ ಮಟ್ಟದ ಅಧಿಕೃತತೆ ಮತ್ತು ಶಾಸ್ತ್ರೀಯ ಮೌಲ್ಯ ಸಿಕ್ಕಿದಂತಾಗಿದೆ; ರೆಕಾರ್ಡ್ ಅಲ್ಲದೆ ಅವು ಕಲಿಯುವವರಿಗೆ ಪುಸ್ತಕ ರೂಪದಲ್ಲೂ ದೊರೆತವು. ಕಚೇರಿ ಮತ್ತು ಭರತನಾಟ್ಯಕ್ಕೆ ಬಳಕೆಯಾಗುವಂತಹ ಗುಣಮಟ್ಟ ಆ ಹಾಡುಗಳಿಗೆ ಲಭಿಸಿತು.
ಮಧುರೆಯ ಸೌರಾಷ್ಟ್ರಸಭಾ ಗ್ರಂಥಾಲಯದಿಂದ ಸಿಕ್ಕಿದ ತ್ಯಾಗರಾಜರ ಕೆಲವು ಹೊಸ ಕೃತಿಗಳಿಗೆ ನೇದುನೂರಿ ಅವರು ಸ್ವರ ಹಾಕಿ ಸಿಡಿ ಮಾಡಿದರು; ಹಿಂದೆ ಆ ರಚನೆಗಳ ಸಾಹಿತ್ಯ, ರಾಗ ಮತ್ತು ತಾಳ ಮಾತ್ರ ಸಿಗುತ್ತಿತ್ತು. ತ್ಯಾಗರಾಜರ ಬಾನಿ ಮತ್ತು ಶೈಲಿಯ ರೀತಿಯಲ್ಲೇ ಈ ಅಪರೂಪದ ಕೃತಿಗಳಿಗೆ ರಾಗಹಾಕಿ ಅವರು ಪೂರ್ಣ ನ್ಯಾಯ ಒದಗಿಸಿದರು. ೧೯೭೨-೭೬ರ ಅವಧಿಯಲ್ಲಿ ಅವರನ್ನು ನಿಯೋಜನೆ(ಡೆಪ್ಯುಟೇಶನ್) ಮೇರೆ ಶ್ರೀ ವೆಂಕಟೇಶ್ವರ ಸಂಗೀತ-ನೃತ್ಯ ಕಾಲೇಜಿಗೆ ಕಳುಹಿಸಿದಾಗ ಅವರು ಅನ್ನಮಾಚಾರ್ಯರ ಕೃತಿಗಳ ಬಗೆಗಿನ ಕೆಲಸವನ್ನು ಎತ್ತಿಕೊಂಡು ನಿರ್ವಹಿಸಿದ್ದರು.
ಕೆಲವು ಕಿವಿಮಾತು
ಓರ್ವ ಸಂಗೀತ ಪ್ರಾಧ್ಯಾಪಕರಾಗಿ ನೇದುನೂರಿ ಉತ್ತಮ ಹೆಸರು ಗಳಿಸಿದ್ದಾರೆ; ಅವರ ಕಾರ್ಯಾಗಾರ, ಶಿಬಿರ, ಸೋದಾಹರಣ ಉಪನ್ಯಾಸಗಳು ಕೂಡ ಪ್ರಸಿದ್ಧ. ಆ ಹೊತ್ತಿಗೆ ಅವರು ಹೇಳುತ್ತಿದ್ದ ಕಿವಿಮಾತು, ನೀಡುತ್ತಿದ್ದ ಸಲಹೆಗಳು ಅತ್ಯಂತ ಪ್ರಾಯೋಗಿಕ. “ಒಂದೇ ಕಚೇರಿಯಲ್ಲಿ ನಿಮಗೆ ಗೊತ್ತಿರುವುದನ್ನೆಲ್ಲ ತೋರಿಸಬೇಡಿ. ಮುಂದಿನದಕ್ಕೆ ಸ್ವಲ್ಪ ಉಳಿಸಿಕೊಳ್ಳಿ” – ಇದು ಅಂತಹ ಒಂದು ಮಾತು. `ವಾಣಿಜ್ಯ ಉದ್ದೇಶಕ್ಕಿಂತ ಆತ್ಮಾರ್ಥವಾಗಿ ಹಾಡಬೇಕು’ ಎನ್ನುವ ಉದಾತ್ತತೆಯ ಜೊತೆಗೆ “ಶಾಸ್ತ್ರ, ವಿಜ್ಞಾನ ಮತ್ತು ಕಲೆಗಳನ್ನು ಚೆನ್ನಾಗಿ ಬೆಸೆಯಬೇಕು. ಶಾಸ್ತ್ರವನ್ನು ಕಲಿಯಬೇಕು, ಕಲೆಯನ್ನು ಪ್ರಸ್ತುತಪಡಿಸಬೇಕು. ಸಾಹಿತ್ಯಕ್ಕೆ ನ್ಯಾಯ ಒದಗಿಸುವ ಮೂಲಕ ವಾಗ್ಗೇಯಕಾರರ ಸಂದೇಶವನ್ನು ಶ್ರೋತೃಗಳಿಗೆ ಮುಟ್ಟಿಸಲು ಪ್ರಯತ್ನಿಸಬೇಕು. ಸಂಗೀತದಲ್ಲಿ ಆಳ ಮತ್ತು ತೂಕ ಇರಬೇಕು. ಕರ್ನಾಟಕ ಸಂಗೀತಕ್ಕೆ ಈ ಎರಡೂ ಗುಣಗಳನ್ನು ನೀಡುವುದು ಗಮಕ” ಎಂದು ಸಂಗೀತದ ಹೃದಯವನ್ನು ಪರಿಚಯಿಸುತ್ತಿದ್ದರು.
“ಬಾಲಹಂಸದಂತಹ ಅಪರೂಪದ ರಾಗಗಳನ್ನು ಅವುಗಳ ವಿಚಿತ್ರಗಳನ್ನು ಬಚ್ಚಿಡದೆ ಅವುಗಳ ವಕ್ರ ಸ್ವರಗುಚ್ಛದೊಂದಿಗೇನೇ ಹಾಡಬೇಕು. ಅವುಗಳ ರಾಗಗಳಿಗೆ ಮಿತಿ ಇದ್ದರೂ ಸಂಗತಿಗೆ ಒತ್ತು ನೀಡಬೇಕು. ಸಂಗತಿಗಳ ಉದ್ದೇಶವೇ ಭಾವನೆ, ಸೌಂದರ್ಯಗಳನ್ನು ಪೋಷಿಸುವುದು. ಬಾಲಹಂಸದಂತಹ ರಾಗಗಳಲ್ಲಿ ತಾಂತ್ರಿಕತೆ(ಟೆಕ್ನಿಕ್)ಗೆ ಒತ್ತು ಸಲ್ಲದು. ತೋಡಿರಾಗದಲ್ಲಿ ವಿಪುಲ ಅವಕಾಶವಿರುವ ಕಾರಣ ತ್ಯಾಗರಾಜರು ಅದರಲ್ಲಿ ತುಂಬ ಕೃತಿಗಳನ್ನು ರಚಿಸಿದರು. ಆದರೆ ಬಾಲಹಂಸದಂತಹ ರಾಗಗಳಲ್ಲಿ ಕೃತಿಯೇ ಸಿಗುವುದಿಲ್ಲ” ಎನ್ನುವ ನೇದುನೂರಿ “ಸೃಷ್ಟಿಶೀಲತೆಯ ಚೌಕಟ್ಟಿನೊಳಗೆ ಭಾವ, ರಕ್ತಿ, ಸಾಂಪ್ರದಾಯಿಕ ವಿನಿಕೆ(ನಿರೂಪಣೆ) ಅಗತ್ಯ. ರಚನೆಗಳು ಭಕ್ತಿಯಲ್ಲಿ ಶ್ರೇಷ್ಠವಾದುದನ್ನು ಸಂಗೀತದ ಹೃದಯದೊಳಗೆ ತರುತ್ತವೆ. ವಾಗ್ಗೇಯಕಾರರು ನಮ್ಮ ಸಂಗೀತ ಪರಂಪರೆಯನ್ನು ಮಾಧುರ್ಯಪೂರ್ಣ ಕೊಪ್ಪರಿಗೆಯಾಗಿ ರೂಪಿಸಿದರು. ಅದರೊಂದಿಗೆ ಸಮಾಜಕ್ಕೆ ಬೇಕಾದ ಮಾನವೀಯ ಮೌಲ್ಯಗಳನ್ನೂ ಉತ್ತರಿಸಿದರು” ಎಂಬುದಾಗಿ ಶಿಷ್ಯರಿಗೆ, ಆಸಕ್ತರಿಗೆ ತಮ್ಮ ಅನುಭವದ ರಸಪಾಕವನ್ನು ಉಣಬಡಿಸುತ್ತಿದ್ದರು.
ಹಾಗೆಯೇ ಈವತ್ತಿನ ವಾತಾವರಣವನ್ನು ಕಂಡು ಅವರಿಗೆ ಬೇಸರವೂ ಆಗುತ್ತಿತ್ತು. “ಇಂದಿನ ದಿನಗಳಲ್ಲಿ ಕರ್ನಾಟಕ ಸಂಗೀತವನ್ನು ಕಲಿಯುವುದೆಂದರೆ ಕಮರ್ಶಿಯಲ್ ವ್ಯವಹಾರ ಆಗಿದೆ. ವರ್ಷಗಟ್ಟಲೆ ಕಲಿಯಬೇಕಾಗಿರುವಲ್ಲಿ ವಿದ್ಯಾರ್ಥಿಗಳು ಮತ್ತು ಹೆತ್ತವರು ಅಡ್ಡದಾರಿ ಹುಡುಕುತ್ತಿದ್ದಾರೆ. ಟಿವಿ ಚಾನೆಲ್ಗಳಲ್ಲಿ ಅವರಿಗೆ ಬೇಕಾದ ವೇದಿಕೆ ಸಿದ್ಧವಿರುತ್ತದೆ. ಅರ್ಪಣಾ ಮನೋಭಾವದ ವಿದ್ಯಾರ್ಥಿಗಳ ಸಂಖ್ಯೆ ಕಡಮೆ ಆಗುತ್ತಿದೆ. ಸಂಗೀತವು ಭಾವನಾತ್ಮಕ, ವೈಜ್ಞಾನಿಕ ಮತ್ತು ದಿವ್ಯವಾದ ಕಲೆ; ಇದಕ್ಕೆ ಅಡ್ಡದಾರಿ ಇಲ್ಲ” ಎನ್ನುತ್ತಿದ್ದರು.
ಪ್ರಸಿದ್ಧ ಶಿಷ್ಯರು
ನೇದುನೂರಿ ಅವರ ಪ್ರಸಿದ್ಧ ಶಿಷ್ಯರಲ್ಲಿ ಡಿ. ಚೆಟ್ಟಿ ಅಬ್ಬಾಯಿ, ಶ್ರೀಮತಿ ಕೋಕಾ ಸತ್ಯವತಿ, ಕೆ. ಸರಸ್ವತಿ ವಿದ್ಯಾರ್ಥಿ, ಜಿ. ಬಾಲಕೃಷ್ಣ ಪ್ರಸಾದ್, ಶ್ರೀಮತಿ ಶೋಭಾ ರಾಜು, ಮಲ್ಲಾಡಿ ಸಹೋದರರು (ಶ್ರೀರಾಂ ಪ್ರಸಾದ್ ಮತ್ತು ರವಿಕುಮಾರ್) ಮುಂತಾದವರು ಸೇರುತ್ತಾರೆ.
ನೇದುನೂರಿ ಅವರಿಗೆ ೮೦ ವರ್ಷವಾದಾಗ ಚೆನ್ನೈನಲ್ಲಿ ಅವರನ್ನು ಸಮ್ಮಾನಿಸಲಾಯಿತು. ಡಾ| ಎಂ. ಬಾಲಮುರಳಿಕೃಷ್ಣ, `ದಿ ಹಿಂದು’ ಪತ್ರಿಕಾ ಬಳಗದ ಎನ್. ಮುರಳಿ ಮೊದಲಾದವರು ಭಾಗವಹಿಸಿದ್ದರು. ನಿಡುಗಾಲ ತಮಗೆ ಪಕ್ಕವಾದ್ಯ ನುಡಿಸಿದ ಲಾಲ್ಗುಡಿ ಜಯರಾಮನ್, ಎಂ.ಎಸ್. ಗೋಪಾಲಕೃಷ್ಣನ್, ಎಂ. ಚಂದ್ರಶೇಖರನ್, ಪಾಲ್ಘಾಟ್ ರಘು, ವೆಲ್ಲೂರು ರಾಮಭದ್ರನ್, ಗುರುವಾಯೂರು ದೊರೈ – ಅವರುಗಳನ್ನು ಸಮ್ಮಾನಿಸಿದ ನೇದುನೂರಿ, “ನನ್ನ ಯಶಸ್ಸಿನ ಅರ್ಧಪಾಲು ಇಂತಹ ಪಕ್ಕವಾದ್ಯ ಕಲಾವಿದರಿಗೆ ಸಲ್ಲುತ್ತದೆ” ಎಂದರು. ಡಾ| ಬಾಲಮುರಳಿ, “ನೇದುನೂರಿ ಅವರು ಉನ್ನತ ಗೌರವಕ್ಕೆ ಅರ್ಹರಾದ ಸಂಗೀತಗಾರ, ಸಂಗೀತ ಶಾಸ್ತ್ರಜ್ಞ, ಮಹಾನ್ ಗುರು. ಸರಳತೆ, ಸೌಜನ್ಯಗಳ ಸಾಕಾರಮೂರ್ತಿ” ಎಂದು ಬಣ್ಣಿಸಿದರು. ನೇದುನೂರಿ ಒಮ್ಮೆ ತಮ್ಮ ಮೇಲಿನ ಪ್ರಭಾವಗಳ ಬಗ್ಗೆ ಹೇಳುತ್ತಾ, “ಶೆಮ್ಮಂಗುಡಿಯಂತಹ ಗುರುಗಳು ಕೂಡ ನನ್ನ ಬೆಳವಣಿಗೆಗೆ ಕಾರಣರು; ಅವರು ನನ್ನ ಮಾನಸಿಕ ಗುರು” ಎಂದಿದ್ದರು.
ನೇದುನೂರಿ ಆಂಧ್ರಪ್ರದೇಶದಲ್ಲಿ ತಂಜಾವೂರು ಬಾನಿಯನ್ನು ಜನಪ್ರಿಯಗೊಳಿಸಿದರೆಂದು ಗುರುತಿಸಲಾಗಿದೆ; ಆದರೆ ಅವರಿಗೆ ಮೈಸೂರು ಪರಂಪರೆಯ ಸಂಬಂಧವೂ ಇದೆ. ಅವರ ಗುರುಗಳಾದ ಡಾ| ಪಿನಾಕಪಾಣಿ ಅವರು ಮೈಸೂರು ಸದಾಶಿವರಾಯರ ಶಿಷ್ಯರ ಶಿಷ್ಯ. ನೇದುನೂರಿ ಅವರ ಸಂಗೀತದ ವಿಶೇಷವೆಂದರೆ, ತುಂಬು ಶಾರೀರ ಮತ್ತು ಉತ್ತಮ ಅಭಿವ್ಯಕ್ತಿಯ ಸ್ವಂತಿಕೆಯುಳ್ಳ(ಒರಿಜಿನಲ್) ಆಲಾಪನೆ, ಸೃಷ್ಟಿಶೀಲವಾದ ಸಂಗತಿಗಳು, ನೆರವಲ್ ಮತ್ತು ಸ್ವರಪ್ರಸ್ತಾರದಲ್ಲಿ ಅಪೂರ್ವ ಲಯಗಾರಿಕೆ ಮತ್ತು ಶ್ರೋತೃಗಳ ಹೃದಯಕ್ಕೆ ಭಕ್ತಿರಸವನ್ನು ಎರೆಯುವಂತಹ ಭಾವನಾತ್ಮಕತೆ. ಭಾಷೆ ಯಾವುದೇ ಇರಲಿ, ಶಬ್ದಗಳ ಉಚ್ಚಾರಕ್ಕೆ ತಮಿಳರು ಮಾರುಹೋಗಿದ್ದರು; ಸಂಕೀರ್ಣ ರಾಗಗಳನ್ನು ಕೂಡ ದಕ್ಷವಾಗಿ ನಿರ್ವಹಿಸುವ ಸಾಮರ್ಥ್ಯ ಅವರದು.
ಓರ್ವ ಸಂಗೀತ ಪ್ರಾಧ್ಯಾಪಕರಾಗಿ ನೇದುನೂರಿ ಉತ್ತಮ ಹೆಸರು ಗಳಿಸಿದ್ದಾರೆ; ಅವರ ಕಾರ್ಯಾಗಾರ, ಶಿಬಿರ, ಸೋದಾಹರಣ ಉಪನ್ಯಾಸಗಳು ಕೂಡ ಪ್ರಸಿದ್ಧ. ಆ ಹೊತ್ತಿಗೆ ಅವರು ಹೇಳುತ್ತಿದ್ದ ಕಿವಿಮಾತು, ನೀಡುತ್ತಿದ್ದ ಸಲಹೆಗಳು ಅತ್ಯಂತ ಪ್ರಾಯೋಗಿಕ.
ದಿನಕ್ಕೆ ಹಾಡಿನ ಸ್ವಾಗತ
ಒಂದು ಕಾಲದಲ್ಲಿ ಅವರು ಪ್ರತಿದಿನ ಆರು ತಾಸು ತಾಲೀಮು(ಪ್ರಾಕ್ಟೀಸ್) ನಡೆಸುತ್ತಿದ್ದರಂತೆ; ೧೯೯೦ರ ದಶಕದ ಹೊತ್ತಿಗೆ ಅದನ್ನು ಎರಡು ತಾಸಿಗೆ ಇಳಿಸಿದ್ದರು. ಗಾಯಕನ ಪ್ರತಿದಿನವೂ ಹಾಡುಗಾರಿಕೆಯಿಂದ ಆರಂಭವಾಗಬೇಕು ಎನ್ನುತ್ತಿದ್ದ ಅವರು ಪ್ರತಿಯೊಂದು ದಿನವನ್ನು ಹಾಡಿನಿಂದ ಸ್ವಾಗತಿಸುತ್ತಿದ್ದರು. ಸಾಮಾನ್ಯವಾಗಿ ಮೊದಲಾಗಿ ಹಾಡುವ ರಚನೆ – `ಗಜಾನನಯುತಂ ಗಣೇಶ್ವರಮ್’.
ಪ್ರಶಸ್ತಿಗಳು ನೇದುನೂರಿ ಅಂಥವರನ್ನಲ್ಲದೆ ಇನ್ನಾರನ್ನು ಅರಸಿ ಬರಬೇಕು? ಮ್ಯೂಸಿಕ್ ಅಕಾಡೆಮಿಯು `ಸಂಗೀತ ಕಳಾನಿಧಿ’ ನೀಡಿದರೆ, ತಿರುಮಲ ತಿರುಪತಿ ದೇವಸ್ಥಾನಮ್ ಮತ್ತು ಕಾಂಚಿ ಕಾಮಕೋಟಿ ಪೀಠಗಳು ಆಸ್ಥಾನ ವಿದ್ವಾನ್ ಆಗಿ ನೇಮಿಸಿದ್ದವು. ವಿಶಾಖಾ ಮ್ಯೂಸಿಕ್ ಅಕಾಡೆಮಿ `ನಾದವಿದ್ಯಾಭಾರತಿ’ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿತ್ತು. ಆಂಧ್ರ ಸರ್ಕಾರದ ಕಲಾನೀರಾಜನಂ ಪುರಸ್ಕಾರ, ಆಂಧ್ರ ಸಾಂಸ್ಕೃತಿಕ ಮಂಡಳಿಯ ಹಂಸ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮದ್ರಾಸಿನ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ ಪ್ರಶಸ್ತಿ ಮುಂತಾದವೆಲ್ಲ ಅವರಿಗೆ ಸಂದಿದ್ದವು.
ಬಾಲಕನೊಬ್ಬ ಕಂಡಂತೆ
೮೩ ವರ್ಷ ದಾಟಿದ ನೇದುನೂರಿ ಕೃಷ್ಣಮೂರ್ತಿ ಅವರು ಅಮೆರಿಕದಲ್ಲಿ ಹುಟ್ಟಿ ಬೆಳೆದ ವಿಕಾಸ್ ಮನುಕುಂಟ್ಲ ಎಂಬ ಹೈಸ್ಕೂಲ್ ವಿದ್ಯಾರ್ಥಿಗೆ ಸಂಗೀತ ಕಲಿಸಿದರು. ಅವನ ಬೇಸಿಗೆ ರಜೆಯಲ್ಲಿ ೨-೩ವರ್ಷ ಈ ತರಗತಿಗಳು ನಡೆದವು. ಅಂತರ್ಜಾಲದಲ್ಲಿ ಲಭ್ಯವಿರುವ ಆತನ ಒಂದು ಲೇಖನ ಈ ಮಹಾನ್ ಗಾಯಕ ಮತ್ತು ಮೇರುವ್ಯಕ್ತಿಯ ಅತ್ಯಂತ ಆಪ್ತವಾದ ಒಂದು ಚಿತ್ರಣವನ್ನು ನೀಡುತ್ತದೆ. ಆತ ಹೇಳುತ್ತಾನೆ: “ಸಂಗೀತದಲ್ಲಿ ನಿಧಾನವಾಗಿ ಬೆಳೆಯುತ್ತಿದ್ದ ನಾನು ನೇದುನೂರಿ ಅವರ ಅನ್ನಮಾಚಾರ್ಯರ ಕೃತಿಗಳ ರೆಕಾರ್ಡ್ ಕೇಳಿ ಆಕರ್ಷಿತನಾಗಿ ಭಾರತಕ್ಕೆ ಬಂದಾಗ ತಂದೆ ಜೊತೆ ಅವರ ಭೇಟಿ ಮಾಡಿದೆ; ಅವರ ಅಪೇಕ್ಷೆಯಂತೆ ಒಂದು ವರ್ಣವನ್ನು ಹಾಡಿದೆ. ನಾನು ಮುಂದೇನು ಮಾಡಬೇಕೆಂದು ತಂದೆ ಕೇಳಿದಾಗ, ನನ್ನಲ್ಲಿ ಚರ್ಚಿಸದೆ ಏನೂ ಮಾಡಕೂಡದು ಎಂದರು. ವಯಸ್ಸಿನ ಕಾರಣದಿಂದ ನೇರ ಕಲಿಸಲಾರೆ ಎಂದರು. ನಾವು ಅಮೆರಿಕಕ್ಕೆ ಮರಳಿದೆವು. ಒಮ್ಮೆ ಫೋನ್ ಮಾಡಿದಾಗ ಆನಂದ ಭೈರವಿ ಆಲಾಪನೆ ಹಾಡಲು ಹೇಳಿದರು. ಏನಾದರೂ ಸಲಹೆ ಕೊಡಬಹುದು ಎಂದು ಎಣಿಸಿದ್ದೆ. ಆದರೆ ಅವರು ತಂದೆಯೊಡನೆ “ವಿಕಾಸ್ನಿಗೆ ಒಳ್ಳೆಯ ಸ್ವರ ಮತ್ತು ರೇಂಜ್ ಇದೆ. ಇಂಟರ್ನೆಟ್ ಬೇಡ. ಅವನಿಗೆ ನಾನು ನೇರ ಕಲಿಸುತ್ತೇನೆ. ಬೇಸಿಗೆ ರಜೆಯಲ್ಲಿ ನನ್ನ ಜೊತೆ ಇರಲು ಸಾಧ್ಯನಾ? ಬಂದರೆ ಮುಂದಿನ ಬೇಸಿಗೆವರೆಗೆ ಪ್ರಾಕ್ಟೀಸ್ ಮಾಡಲು ಬೇಕಾದಷ್ಟನ್ನು ಕೊಟ್ಟು ಕಳುಹಿಸುತ್ತೇನೆ” ಎಂದರು. ಅದೇ ನನ್ನ ಜೀವನದ ತಿರುವಾಯಿತು.
“ನನ್ನ ಬೇಸಿಗೆ ಪಾಠ ೨೦೧೨ರಲ್ಲಿ ಆರಂಭವಾಯಿತು; ಗುರುಕುಲವಾಸದ ಕ್ರಮ. ಮೊದಲಿಗೆ ಗಜಾನನಯುತಂ ಪಾಠ; ಅದನ್ನು ತಾನು ಪ್ರತಿದಿನ ಬೆಳಗ್ಗೆ ಮೊದಲಾಗಿ ಹಾಡುವೆ ಎಂದರು. ಕಲಿಸಿ ಹಾಡಿಸಿ ಕೇಳಿದರು, ಮತ್ತೆ ಊಟ. ನನ್ನ ಪ್ರಾಯ, ಸಂಗೀತ ಶಿಕ್ಷಣ ಎಲ್ಲ ಕೇಳಿದರು. ಪ್ರತಿದಿನ ಬೆಳಗ್ಗೆ ಅವರ ಬಳಿಗೆ ಹೋಗುತ್ತಲೇ `ರಾತ್ರಿ ಚೆನ್ನಾಗಿ ನಿದ್ರೆ ಬಂತಾ?’ ಎಂದು ಕೇಳುವರು. ಹಾಲು ಕುಡಿದೆಯಾ? ತಿಂಡಿ ಆಯಿತಾ? ಊಟ ಆಯಿತಾ? ಮುಂತಾಗಿ ಸದಾ ನನ್ನ ಯೋಗಕ್ಷೇಮದ ಬಗ್ಗೆ ಕೇಳುವರು; ಅಂತಹ ಅಪೂರ್ವ ವ್ಯಕ್ತಿ ಅವರು.
“ಅವರ ವಿಶಾಲವಾದ ಸಂಗೀತ ಜ್ಞಾನ, ಕಲೆಯ ಪರಿಣತಿ, ನಿಖರ ಸವಿವರ ಬೋಧನೆಗಳಿಂದಾಗಿ ನನಗೆ ಅವರಲ್ಲಿ ಗೌರವ ಹೆಚ್ಚಿತು. ಅವರ ಪೂಜೆಯ ನಂತರ ಬೆಳಗ್ಗೆ ೧೦ ಗಂಟೆಯಿಂದ ಪಾಠ; ಮನೆಯ ಮುಂಭಾಗದ ಕೊಠಡಿಯಲ್ಲಿ ಹೊಸ ಕೃತಿ, ಹೊಸ ಟೆಕ್ನಿಕ್ ಬಗ್ಗೆ ಮಧ್ಯಾಹ್ನದವರೆಗೆ ಪಾಠ ಸಾಗುತ್ತದೆ. ಮನೆಯಲ್ಲಿ ಯಾರೂ ಇಲ್ಲದಿದ್ದರೆ ನಾನೇ ಅವರಿಗೆ ಬಡಿಸುತ್ತಿದ್ದೆ. ಮಾತು ಮುಂದುವರಿಯುತ್ತದೆ; ಹಳೆಕಾಲದ ಕಥೆಗಳನ್ನು ಹೇಳುತ್ತಾರೆ. ಊಟದ ಬಳಿಕ ಇಬ್ಬರೂ ಸಣ್ಣ ನಿದ್ರೆ ಮಾಡುತ್ತೇವೆ. ಸಂಜೆ ೫ರ ಹೊತ್ತಿಗೆ ಹಾಲು ಅಥವಾ ಕಾಫಿ ಸೇವನೆ. ಮತ್ತೆ ೭ ಗಂಟೆಯವರೆಗೆ ಪಾಠ. ೭ ಗಂಟೆಗೆ ಅವರು ಹೊರಗೆ ಸ್ವಲ್ಪ ವಾಕಿಂಗ್ ಹೋಗುತ್ತಾರೆ; ಕನಿಷ್ಟ ಅರ್ಧ ತಾಸು ನಡಿಗೆ ಪೂರೈಸಿ ಬರುತ್ತಾರೆ. ನೀನು ತುಂಬ ನಡೆಯಬೇಕು ಎನ್ನುವರು. ನನಗೆ ಸಂಗೀತದ ಕಿವಿಮಾತಿನ ಜೊತೆಗೆ ಆರೋಗ್ಯದ ಸಲಹೆಯನ್ನೂ ನೀಡುವರು. ರಾತ್ರಿ ೯ ಗಂಟೆಗೆ ಪೂಜೆ ಮಾಡುತ್ತಾರೆ; ಮತ್ತೆ ಊಟ.
“ನಂತರ ಕೆಲವು ಸಂಗೀತ ಗ್ರಂಥಗಳನ್ನು ಓದುವರು. ನಾನು ಮನೆಯವರೊಂದಿಗೆ ಮಾತನಾಡುವೆ; ಪ್ರಾಕ್ಟೀಸ್ ಮಾಡುವೆ ಅಥವಾ ಅವರ ಪುಸ್ತಕ ಸಂಗ್ರಹದಲ್ಲಿ ಕಣ್ಣಾಡಿಸುವೆ. ರಾತ್ರಿ ೧೧ ಗಂಟೆಗೆ ಇಬ್ಬರೂ ಮಲಗುವೆವು. ಅವರು ಕೆಳಗೆ, ನನ್ನ ಕೋಣೆ ಮಹಡಿಯಲ್ಲಿ. ನನ್ನ ಬೇಸಿಗೆ ರಜೆ ಈ ರೀತಿ ಕಳೆಯಿತು. ಕರ್ನಾಟಕ ಸಂಗೀತದ ಹೊಸತಂತ್ರಗಳನ್ನು ಕಲಿಯುತ್ತಾ ನಾನು ಅವರ ಮನೆಯವನಾದೆ. ಅವರು ನನ್ನ ಸ್ವಂತ ಅಜ್ಜ ಎನಿಸುತ್ತಿತ್ತು. ಅನಂತರದ ವರ್ಷವೂ ಈ ಗುರುಕುಲವಾಸ ಇತ್ತು. ಹಿಂದಿನ ಗುರುಕುಲದಂತೆಯೇ ಇವರು ಕೂಡ ಹಣ ಪಡೆಯರು; ಅವರು ಕಮರ್ಶಿಯಲ್ ಅಲ್ಲವೇ ಅಲ್ಲ.
“ಸಾಂಪ್ರದಾಯಿಕ ಸಂಗೀತ ಕಲಿಕೆ ವೇಳೆ ಯಾವುದೇ ರಾಜಿ ಇಲ್ಲ. ರಚನೆಯ ಲಯ ಮತ್ತು ಸೌಂದರ್ಯದ ಬಗ್ಗೆ ನಿಖರವಾದ ಗಮನ. ಅವರೊಬ್ಬ ಪ್ರಾಮಾಣಿಕ ಗುರು ಮತ್ತು ಪ್ರಾಮಾಣಿಕ ವ್ಯಕ್ತಿ. ತುಂಬ ಆಸಕ್ತಿಯಿಂದ ಹಾಡುವರು, ಕಲಿಸುವರು. ಅನಾರೋಗ್ಯ, ವೃದ್ಧಾಪ್ಯದ ಸಮಸ್ಯೆಗಳಿದ್ದರು ಕೂಡ ದಿನದ ಎರಡು ಸಲದ ಪಾಠ ತಪ್ಪದು. ಒಮ್ಮೆ ಆಸ್ಪತ್ರೆಯಲ್ಲಿ ಮಲಗಿದ್ದಾಗಲೂ ನನಗೆ ಒಂದು ಕೀರ್ತನೆಯನ್ನು ಕಲಿಸಿದರು. ಇಂಥವರು ಬೇರೆ ಇಲ್ಲ; ಅವರೇ ನನ್ನ ಸ್ಪೂರ್ತಿ.” ಈ ಬಾಲಕನಿಗೀಗ ತನ್ನ ಅಜ್ಜನನ್ನು ಕಳೆದುಕೊಂಡಂತಹ ದುಃಖ.
ಭಾರತದ ಶಾಸ್ತ್ರೀಯ ಸಂಗೀತವೊಂದು ಮಹಾಸಾಗರ. ಅದರಲ್ಲಿ ಕರ್ನಾಟಕ ಸಂಗೀತವು ಅಂಥದ್ದೇ ಒಂದು ಸಮುದ್ರ. ನೇದುನೂರಿ ಕೃಷ್ಣಮೂರ್ತಿ ಅಂಥವರು. ಆ ಸಿಂಧುವನ್ನು ಹೀರಿ ಬೆಳೆದು ಒಬ್ಬ ವ್ಯಕ್ತಿ ಯಾವ ಮಟ್ಟಕ್ಕೆ ಏರಬಹುದೆಂಬ ಸಾಧ್ಯತೆಯನ್ನು ತೋರಿಸಿದವರು. `ಎಂದರೋ ಮಹಾನುಭಾವುಲು ಅಂದರಿಕೆ ವಂದನಮು’ ಎನ್ನುವ ಸಂತ ತ್ಯಾಗರಾಜರ ಮಾತಿನಲ್ಲೇ ನಮ್ಮ ಭಾವನೆಗಳಿಗೆ ಅಭಿವ್ಯಕ್ತಿ ಕೊಡಬೇಕಷ್ಟೆ!