ಈಚೆಗೆ ಶಾಸ್ತ್ರಗಳ ಆದೇಶವನ್ನು ಗೌರವಿಸಬೇಕೆನ್ನುವ ನಮ್ಮಂತಹವರು, ಕಾಲಬಾಹ್ಯವಾಗಿರುವ ಕಾರಣ ಶಾಸ್ತ್ರಗಳನ್ನು ಬದಲಾಯಿಸಬೇಕು ಎನ್ನುವ `ಸುಧಾರಕರು’ – ಈ ಎರಡು ವರ್ಗಗಳವರ ಭಿನ್ನತೆ ಸಾಮಾನ್ಯಜನರ ಮನಸ್ಸುಗಳಲ್ಲಿ ಗೊಂದಲ ಸೃಷ್ಟಿಸಿದೆ. ಒಂದಷ್ಟುಮಟ್ಟಿಗೆ ಇದರಲ್ಲಿ ಆಧುನಿಕ ಶಿಕ್ಷಣಪದ್ಧತಿಯ ಪಾತ್ರವೂ ಇದೆ. ಆದರೆ ಆಧುನಿಕ ಜೀವನಕ್ರಮದಲ್ಲಿ ಹಿಂದೆ ಇದ್ದ ಸಂತೃಪ್ತಿ ಇಲ್ಲವೆಂಬುದು ಅನೇಕರ ಅನುಭವವಾಗಿದೆ. ಈಗ ಸಮೃದ್ಧಿಯೇನೊ ಇದೆ; ಆದರೆ ಅದರಿಂದ ಸೌಖ್ಯಭಾವನೆ ಹೊಮ್ಮಿಲ್ಲ. ಹೀಗಾಗಿ ನೆಮ್ಮದಿಯಿದ್ದ ಹಿಂದಿನ ಸಾಂಪ್ರದಾಯಿಕ ಜೀವನವೇ ಚೆನ್ನಾಗಿದ್ದಿತು ಎಂದುಕೊಳ್ಳುತ್ತಿರುವವರಿಗೆ ಕಡಮೆಯಿಲ್ಲ.
ತಥ್ಯವೆಂದರೆ ಅನುಕೂಲದೃಷ್ಟಿಯಿಂದ ಶಾಸ್ತ್ರನಿಷ್ಠೆಯನ್ನು ಸಡಿಲಿಸುತ್ತ ಹೋದರೆ ಬಾಹ್ಯಜೀವನಕ್ಕೆ ಹೊಂದಿಕೆಯಾಗುವಷ್ಟು `ಶಾಸ್ತ್ರಾನುಸರಣೆ’ ಮಾತ್ರ ಉಳಿದೀತು. ನಮ್ಮಂತಹವರು ಧರ್ಮಾಚಾರ್ಯ ಸ್ಥಾನದಲ್ಲಿರುವುದರಿಂದ ನಾವು ಶಾಸ್ತ್ರಗಳನ್ನು ಸರಳಗೊಳಿಸುವ ನಿರ್ದೇಶ ನೀಡಬೇಕು ಎಂಬ ಸದುದ್ದೇಶದ ಸಲಹೆಗಳೂ ಬರುವುದುಂಟು.
ಮೊತ್ತಮೊದಲು ಎಲ್ಲರೂ ಗ್ರಹಿಸಬೇಕಾದ ಸಂಗತಿಯೆಂದರೆ – ಎಲ್ಲರೂ ಶಾಸ್ತ್ರಗಳನ್ನು ಗೌರವಿಸಬೇಕು ಎಂದು ನಾವು ಹೇಳುವುದು ಅವು ಯಾರೊ ಹಲವರು ಋಷಿಗಳ ಮಾತುಗಳೆಂಬ ಕಾರಣದಿಂದಲ್ಲ; ಪ್ರತಿಯಾಗಿ ಅವು ಈಶ್ವರನಿಂದ ಆಜ್ಞಪ್ತವಾದ ವೇದಗಳ ಮೇಲೆ ಆಧಾರಗೊಂಡಿವೆಯೆಂಬ ಕಾರಣದಿಂದ. ಈ ಭೂಮಿಕೆ ಇರುವುದರಿಂದ ಶಾಸ್ತ್ರಗಳನ್ನು ಅವು ಇರುವಂತೆ ರಕ್ಷಿಸಿರಬೇಕಾದ ಅನಿವಾರ್ಯತೆಯಿದೆ.
ಶಾಸ್ತ್ರಗಳ ಅನುಸರಣೆ ಕಷ್ಟವೆಂಬ ಅನಿಸಿಕೆಗೆ ಕಾರಣ ಆಧುನಿಕ ಭೌತಜೀವನದ ಆಕರ್ಷಣೆಯಷ್ಟೆ. ನಾವು ನಮ್ಮ ಆವಶ್ಯಕತೆಗಳನ್ನು ಮಿತಗೊಳಿಸಿಕೊಂಡಲ್ಲಿ ಮತ್ತು ಹಣದ ಬಗೆಗಿನ ವ್ಯಾಮೋಹವನ್ನು ಕಡಮೆ ಮಾಡಿಕೊಂಡಲ್ಲಿ ಭಗವಚ್ಚಿಂತನೆಗೆ ಹೆಚ್ಚು ಸಮಯ ಒದಗಿ ನಾವು ಹೆಚ್ಚು ಸಂತೃಪ್ತಿಯನ್ನೂ ಸುಖವನ್ನೂ ಪಡೆಯಲು ಆಗುತ್ತದೆ.
ಶಾಸ್ತ್ರವು ಹಣವನ್ನಾಗಲಿ ಆಡಂಬರವನ್ನಾಗಲಿ ಬೇಡುವುದಿಲ್ಲ. ತುಳಸಿ-ಬಿಲ್ವಗಳಷ್ಟರಿಂದ ಪೂಜೆಯನ್ನು ಆಚರಿಸುವುದು ಶಕ್ಯವಿದೆ. ನಾವು ನಮಗಾಗಿ ಮಾಡಿಕೊಳ್ಳುವ ಅಡುಗೆಯಲ್ಲಿ ಹಿಡಿಯಷ್ಟನ್ನು ನೈವೇದ್ಯವಾಗಿ ಸಮರ್ಪಿಸಬಹುದು. ಶಾಸ್ತ್ರೀಯ ರೀತಿಯ ವಿವಾಹಕ್ಕೂ ಅಧಿಕವ್ಯಯ ಮಾಡಿರೆಂದು ಶಾಸ್ತ್ರ ಹೇಳುವುದಿಲ್ಲ. ಹೆಚ್ಚು ಹಣದ ಅಗತ್ಯ ಬೀಳುವ ಸ್ಥಿತಿಯಿದ್ದರೆ ಶಾಸ್ತ್ರಗಳಿರುವುದು ಶ್ರೀಮಂತರಿಗೇ ಎಂದಂತೆ ಆದೀತು. ಅದು ಸತ್ಯದೂರವಾದದ್ದು.
ನಾಲ್ಕು ಪುರುಷಾರ್ಥಗಳಲ್ಲಿ ನಾವು ಕಾಮಕ್ಕೆ ಎಂದರೆ ಆಸೆಗಳ ಪೂರೈಕೆಗೆ ಪ್ರಾಶಸ್ತ್ಯ ಕೊಟ್ಟಿರುವುದರಿಂದ ಈ ಹಲವಾರು ವಿಕೃತಿಗಳು ಹುಟ್ಟಿಕೊಂಡಿವೆ. ಧರ್ಮದ ಆಚರಣೆಯ ಮೂಲಕ ಮೋಕ್ಷಕ್ಕೆ ಅರ್ಹರಾಗುವುದು ನಮ್ಮ ಲಕ್ಷ್ಯವಾಗಿರಬೇಕು. ನಾವು ಮಾಡಬೇಕಾದ್ದೆಂದರೆ ಸರಳತೆಯನ್ನು ಸ್ವೀಕರಿಸುವುದು, ಅಷ್ಟೆ. ಭೌತ ಆಕರ್ಷಣೆಗಳಿಂದ ಪಕ್ಕಕ್ಕೆ ಸರಿದಲ್ಲಿ ಧಾರ್ಮಿಕ ಜೀವನ ಸುಲಭವಾಗುತ್ತದೆ.