೧೩೯ ಕೋಟಿ ಜನ ಸಂಖ್ಯೆಯ ಚೀನಾ ಈಚೆಗೆ ದಕ್ಷಿಣ ಕೊರಿಯಾದ ಇಂಚೆನ್ನಲ್ಲಿ ನಡೆದ ೧೭ನೇ ಏಷ್ಯನ್ ಕ್ರೀಡಾಕೂಟದಲ್ಲಿ ಗಳಿಸಿದ ಪದಕಗಳು: ೧೫೧ ಚಿನ್ನ, ೧೦೮ ಬೆಳ್ಳಿ ಹಾಗೂ ೮೩ ಕಂಚು- ಒಟ್ಟು ೩೪೨ ಪದಕಗಳು. ಕೇವಲ ೧೭ ಕೋಟಿ ಜನ ಸಂಖ್ಯೆಯ ಕಝಕಸ್ಥಾನ ಗಳಿಸಿದ ಪದಕಗಳು: ೨೮ ಚಿನ್ನ, ೨೩ ಬೆಳ್ಳಿ ಹಾಗೂ ೩೩ ಕಂಚು- ಒಟ್ಟು ೮೪ ಪದಕಗಳು.
ಆದರೆ ೧೨೭ ಕೋಟಿ ಜನಸಂಖ್ಯೆಯ ಭಾರತ ಗಳಿಸಿದ ಪದಕಗಳು ಕೇವಲ ೧೧ ಚಿನ್ನ, ೧೦ ಬೆಳ್ಳಿ ಹಾಗೂ ೩೬ ಕಂಚು-ಒಟ್ಟು ೫೭ ಪದಕಗಳು. ಪದಕಪಟ್ಟಿಯಲ್ಲಿ ಭಾರತದ ಸ್ಥಾನ ಈ ಬಾರಿ ೮ನೆಯದು. ಭಾರತಕ್ಕಿಂತಲೂ ಕಡಮೆ ಜನಸಂಖ್ಯೆ ಹೊಂದಿರುವ ಕೊರಿಯಾ, ಜಪಾನ್, ಇರಾನ್, ಥಾಯ್ಲ್ಯಾಂಡ್ಗಳು ಈ ಬಾರಿ ಪದಕ ಪಟ್ಟಿಯಲ್ಲಿ ಕ್ರಮವಾಗಿ ೨, ೩, ೫ ಹಾಗೂ ೬ನೇ ಸ್ಥಾನ ಪಡೆದು ಭಾರತವನ್ನು ಹಿಂದಿಕ್ಕಿವೆ. ಆ ದೇಶಗಳಿಗೆ ಸಾಧ್ಯವಾಗುವ ಪದಕಗಳನ್ನು ಕೊಳ್ಳೆಹೊಡೆಯುವ ತಾಕತ್ತು ಭಾರತಕ್ಕೇಕೆ ಸಾಧ್ಯವಿಲ್ಲ?
ಭಾರತ ಚೀನಾದಂತೆ ಕ್ರೀಡಾಕೂಟದಲ್ಲಿ ಹೆಚ್ಚು ಹೆಚ್ಚು ಪದಕಗಳನ್ನು ಗೆಲ್ಲಲು ಏಕೆ ಸಾಧ್ಯವಾಗುತ್ತಿಲ್ಲ? ಏಕೆಂದರೆ ಭಾರತದಲ್ಲಿ ಎಲ್ಲರ ಮನೆಯಲ್ಲೂ ಸಾಕಷ್ಟು ಚಿನ್ನವಿದೆ. ಅದೂ ಅಲ್ಲದೆ ದುಬೈ, ಸೌದಿಗಳಿಗೆ ಹೋದವರು ಸಾಕಷ್ಟು ಚಿನ್ನವನ್ನು ಜೊತೆಗೆ ತರುತ್ತಾರೆ. ಹಾಗಿರುವಾಗ ನಮಗೆ ಇನ್ನೇಕೆ ಚಿನ್ನದ ಪದಕಗಳು ಎಂಬ ಮಾತು ಕೇವಲ ತಮಾಷೆಗೆ ಮಾತ್ರ ಸೀಮಿತ. ಆದರೆ ಭಾರತವೂ ಸೇರಿದಂತೆ ಉಳಿದ ದೇಶಗಳಲ್ಲಿಲ್ಲದ ಅಗಾಧ ಕ್ರೀಡಾ ಸಾಮರ್ಥ್ಯ ಬೆಳೆಸಿಕೊಳ್ಳಲು ಚೀನಾಕ್ಕೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಅತ್ಯಂತ ಪ್ರಸ್ತುತ ಹಾಗೂ ಚರ್ಚಾರ್ಹ. ಚೀನಾ ಹೇಳಿ ಕೇಳಿ ಕಮ್ಯುನಿಸ್ಟ್ ದೇಶ. ಅಲ್ಲಿರುವುದು ಸರ್ವಾಧಿಕಾರದ ಆಡಳಿತ. ಸಮಾನತೆಯ ಹೆಸರಲ್ಲಿ ಎಲ್ಲರ ಮೇಲೂ ದಬ್ಬಾಳಿಕೆಯ ಆಡಳಿತ ನಡೆಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅಂತಹದೊಂದು ದೇಶದಲ್ಲಿ ಎಲ್ಲ ಬಗೆಯ ಕ್ರೀಡೆಗಳಲ್ಲೂ ಜಾಗತಿಕಮಟ್ಟದ ಸಾಧಕರನ್ನು ಸೃಷ್ಟಿಸಲು ಅದಕ್ಕೆ ಹೇಗೆ ಸಾಧ್ಯವಾಗಿದೆ? ೧೯೪೯ರಿಂದ ಚೀನಾ ೮ ಬೇಸಿಗೆ ಕಾಲದ ಒಲಿಂಪಿಕ್ಸ್ ಮತ್ತು ೯ ಚಳಿಗಾಲದ ಒಲಿಂಪಿಕ್ಸ್ ಕೂಟಗಳಲ್ಲಿ ಭಾಗವಹಿಸಿದೆ. ಬೇಸಿಗೆ ಒಲಿಂಪಿಕ್ಸ್ನಲ್ಲಿ ೩೮೫ ಪದಕ ಹಾಗೂ ಚಳಿಗಾಲದ ಒಲಿಂಪಿಕ್ಸ್ ಕೂಟದಲ್ಲಿ ೪೪ ಪದಕಗಳನ್ನು ಗಳಿಸಿದೆ. ಲಾಸ್ಏಂಜಲೀಸ್, ಬಾರ್ಸೆಲೋನಾ ಮತ್ತು ಆಟ್ಲಾಂಟಾ ಒಲಿಂಪಿಕ್ಸ್ಗಳಲ್ಲಿ ಪದಕಪಟ್ಟಿಯಲ್ಲಿ ಚೀನಾ ೪ನೇ ಸ್ಥಾನಕ್ಕೇರಿದ್ದರೆ ಆಥೆನ್ಸ್ ಒಲಿಪಿಂಕ್ಸ್ನಲ್ಲಿ ೨ನೇ ಸ್ಥಾನ ಹಾಗೂ ಬೀಜಿಂಗ್ ಒಲಿಪಿಂಕ್ಸ್ನಲ್ಲಿ ಮೊದಲನೇ ಸ್ಥಾನಕ್ಕೆ ಜಿಗಿಯಿತು. ಇದು ಚೀನಾದ ನಿರಂತರ ಸಾಧನೆಗೆ ಹಿಡಿದ ಕನ್ನಡಿ.
ಬ್ಯಾಡ್ಮಿಂಟನ್, ಬೇಸ್ಬಾಲ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಚೆಸ್, ವಾಲಿಬಾಲ್, ಕರ್ಲಿಂಗ್, ಫುಟ್ಬಾಲ್, ಮೋಟಾರ್ ರೇಸಿಂಗ್, ಸ್ನೂಕರ್, ಪಿಂಗ್ಪಾಂಗ್, ಟೆನ್ನಿಸ್, ಜಿಮ್ನಾಶಿಯಮ್, ಸ್ವಿಮಿಂಗ್, ಶೂಟಿಂಗ್… ಹೀಗೆ ಚೀನಾ ಇಂದು ಹಲವಾರು ಬಗೆಯ ಕ್ರೀಡೆಗಳಲ್ಲಿ ಮುಂಚೂಣಿ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದರೆ ಇಂತಹ ಒಂದೊಂದು ಕ್ರೀಡೆಯಲ್ಲೂ ಅಗ್ರಸ್ಥಾನ ಪಡೆಯಲು ಅದು ತುಳಿದ ಹಾದಿ ಮಾತ್ರ ಹೂವಿನ ಹಾಸಿಗೆಯಾಗಿರಲಿಲ್ಲ. ಕರ್ಲಿಂಗ್ ಎಂಬ ಕ್ರೀಡೆಯ ಹೆಸರನ್ನು ಭಾರತ ಜನತೆ ಹೇಗೆ ಅಷ್ಟಾಗಿ ಕೇಳಿಲ್ಲವೋ ಹಾಗೇ ಚೀನಾದ ಜನರೂ ಕೇಳಿಲ್ಲ. ಆದರೆ ಇಂದು ಚೀನಾದಲ್ಲಿ ಕರ್ಲಿಂಗ್ ಕ್ರೀಡೆಯಲ್ಲಿ ಪುರುಷರ ಹಾಗೂ ಮಹಿಳೆಯರ ಪ್ರಬಲ ತಂಡಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಯಾರಾಗಿವೆ.?