೨೦೧೪ರ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ
ಸೊಂಟಕ್ಕೆ ಸಾಟಿಪಂಚೆ ಬಿಗಿದಿದ್ದ ಅಣ್ಣ ಹೇಗೆ ಎನ್ನುವಂತೆ ವ್ಯಂಗ್ಯದ ನಗುವನ್ನು ಪರಮಭಾವನತ್ತ ಬೀರಿದ. ಪರಮಭಾವ ಅಸಹಾಯನಾಗಿ ಹಿಂದೆ ಸರಿದ. ಭಟ್ಟರು ಅಧಿಕಾರವಾಣಿ ಮುಂದುವರಿಸಿದರು…
ಮರಣಾನಂತರದಲ್ಲು ತನ್ನ ಬದುಕು ಇಷ್ಟು ಗೊಂದಲಮಯವಾಗಿರುತ್ತದೆ ಎಂದು ಆತ ಊಹಿಸಿರಲೂ ಇಲ್ಲ. ಬದುಕು….. ಮನಸ್ಸು ನಕ್ಕಿತು. ಸತ್ತ ಮೇಲೆ ಬದುಕು ಎಂಥಾದ್ದು? ಆದರೆ ಅದು ಇರಲೇಬೇಕಲ್ಲ. ಸತ್ತ ಮೇಲೆ ಕೂಡ ಈ ‘ನಾನು’ ಒಂದಿಷ್ಟು ಕಾಲ ಅದೇ ಜಾಗದಲ್ಲಿ ಸುತ್ತಾಡುತ್ತ ಎಲ್ಲವನ್ನು ನೋಡುತ್ತ ಏನೂ ಮಾಡಲಾಗದೆ ಇರುತ್ತದೆ ಎಂದು ಎಲ್ಲೋ ಓದಿದ ನೆನಪು. ಹಾಗಿದ್ದರೆ ಆಮೇಲು ಬದುಕು ಇರುತ್ತದೆ ಎಂದಾಯಿತು. ಅಂದರೆ ಸಾವು ಬರೀ ಶರೀರಕ್ಕೆ ಮಾತ್ರವೆ? ಮನಸ್ಸಿದೆ: ಹೊರಗೆ ನಡೆಯುತ್ತಿರುವುದೆಲ್ಲ ಕಾಣುತ್ತದೆ; ಅರ್ಥವಾಗುತ್ತದೆ. ಏಕೆ ಹೀಗೆ ಎನ್ನುವ ತರ್ಕ ಮನಸ್ಸಿನಲ್ಲಿ ಹುಟ್ಟುತ್ತದೆ ಎಂದಾದರೆ ಬುದ್ಧಿಯೂ ಇದೆ ಎಂದಾಯಿತು. ಇಷ್ಟೆಲ್ಲ ಆದಮೇಲೆ ಒಳಗಿನದೆಲ್ಲ ಜೀವಂತ ಇದ್ದು ಎಲ್ಲದರ ಪ್ರತಿಕ್ರಿಯೆ ಪ್ರಕಟಗೊಳ್ಳುವ ಮಾಧ್ಯಮವಾಗಿರುವ ದೇಹ ಮಾತ್ರ ನಿಷ್ಕ್ರಿಯವೆ? ಆದರೆ ಒಂದಂತೂ ಸತ್ಯ….. ಈಗ, ಪ್ರಥಮ ಬಾರಿಗೆ ತಾನು ಬೇರೆ ಈ ದೇಹ ಬೇರೆ ಅನ್ನಿಸುತ್ತಿದೆ. ತನ್ನ ದೇಹ ಅದೋ ಅಲ್ಲಿದೆ ಎಂದೂ ಅನ್ನಿಸುತ್ತಿದೆ. ಅನ್ನಿಸುವುದೇನು….. ಗೋಚರಿಸುತ್ತಿದೆ… ಜನ ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಅವರವರಲ್ಲೆ ಮೊದಲ ಪ್ರಶ್ನೆ- ಕ್ರಿಯೆ ಹಿಡಿಯುವವರು ಯಾರು; ಇವನಿಗೆ ಗಂಡು ಮಕ್ಕಳಿಲ್ಲವಲ್ಲ? ಯಾರು….. ಯಾರು? ಅರೆ! ಇದು ಇಷ್ಟು ಗೊಂದಲದ ಪ್ರಶ್ನೆಯೆ? ಎಂಥ ಜನರಪ್ಪ….. ಯಾವ ಕಾಲದಲ್ಲಿದ್ದಾರೆ ಇವರೆಲ್ಲ? ಹೆಣ ಸುಡಲು ಎಂಥ ಗೊಂದಲ….. ಇದನ್ನ ನಾನು ಮೊದಲು ಯೋಚಿಸಿದ್ದಿಲ್ಲವೆ….. ಯೋಚಿಸಿದ್ದೇನೆ….
‘ಬಂದರು.’ ಯಾರೋ ಅಂದರು. ಬಾಗಿಲತ್ತ ದೃಷ್ಟಿ ಹೋಯಿತು. ಓಹ್, ನನ್ನ ಪ್ರೀತಿಯ ಚಿಕ್ಕ ಮಗಳು ಕುಮುದ, ಅವಳ ಗಂಡ ರಾಮು. ಜೊತೆಗೆ ಹಿರಿಯ ಮಗಳು ಕುಸುಮ, ಅವಳ ಗಂಡ ವಿಶ್ವೇಶ್ವರ. ಮೊನ್ನೆಯವರೆಗೆ ಇಲ್ಲೇ ಇದ್ದವರು, ನನಗೆ ತುಸು ಆರಾಮ ಕಂಡಿದ್ದೆ ಮರಳಿದ್ದರು. ಅವರಿಗೂ ಮನೆ-ಮಠ ಇದೆಯಲ್ಲ; ಹೆದರಬೇಡಿ ಹೋಗಿ ಎಂದು ನಾನೇ ಕಳಿಸಿದ್ದೆ. ಅಳುತ್ತಲೇ ಹೋಗಿದ್ದರು. ಅದರಲ್ಲು ನನ್ನನ್ನು ತೀರಾ ಹಚ್ಚಿಕೊಂಡ ಕಿರಿಯ ಮಗಳು ಕುಮುದಾ. ಅವಳ ಹೆದರಿಕೆ ಎಂದರೆ ನಾನು ಕಾಲಕಾಲಕ್ಕೆ ಮಾತ್ರೆ ತೆಗೆದುಕೊಳ್ಳುವೆನೋ ಇಲ್ಲವೋ, ನನ್ನ ಸೇವೆಯನ್ನು ಸರಿಯಾಗಿ ಮಾಡಲು ಅಮ್ಮನಿಗೆ ಆಗುತ್ತೋ ಇಲ್ಲವೋ…. ಆಕೆ ಬರುತ್ತಲೇ ಜೋರಾಗಿ ಅಳುತ್ತ ನನ್ನ ಮೊಳಕಾಲಿಗೆ ಹಣೆಯೊತ್ತಿ ಬಿಕ್ಕಳಿಸತೊಡಗಿದಳು. ಅದುವರೆಗು ನನ್ನ ತಲೆಯ ಪಕ್ಕದಲ್ಲಿ ಕುಳಿತು ಅತ್ತೂ ಅತ್ತೂ ಕಣ್ಣು ಕೆಂಪಗಾಗಿಸಿಕೊಂಡಿದ್ದ ರುಕ್ಮಿಣಿ, ನನ್ನ ಪ್ರೀತಿಯ ಹೆಂಡತಿ, ಅವಳ ಬಳಿ ಬಂದು ಅವಳನ್ನ ಅನಾಥಳಂತೆ ಅಪ್ಪಿಕೊಂಡಳು. ಮತ್ತೆ ಮೂವರೂ ಒಟ್ಟಾಗಿಯೇ ಅಳುತ್ತಿದ್ದಂತೆ ನಾನು ಕುಗ್ಗಿದೆ. ನನ್ನ ಮನಸ್ಸು ಶೂನ್ಯವಾಗುತ್ತಿದೆ ಎಂಬ ಭಾವ ಆವರಿಸಿತು. ಆತ್ಮ ಶಕ್ತಿಗುಂದುತ್ತ ಹೋಗಿ ಭಾವನೆಗಳು ಶುಷ್ಕವಾಗುತ್ತಿರಬೇಕು. ಆದರೆ ನೆನಪಿನಶಕ್ತಿ ಸಂಚಯಗೊಳ್ಳುತ್ತ ಬುದ್ಧಿ ಬಲಿಷ್ಠವಾಗುತ್ತಿರುವ ಶಂಕೆ ಕಾಡಿತು.
ನಿನ್ನೆ ನನ್ನೊಡನೆ ಎಷ್ಟು ಚಲೋದಾಗಿ ಮಾತಾಡಿದ್ದ ಮಾರಾಯ. ಒಂದೇ ದಿನದಲ್ಲಿ….. ಛೆ…..” ದನಿ ಬಂದತ್ತ ತಿರುಗಿದೆ. ಕೆಳಗಿನ ಮನೆ ಲಚ್ಚಣ್ಣ. ಅವನ ಹಿಂದೆಯೇ ಊರವರು ಒಬ್ಬೊಬ್ಬರಾಗಿ ಬರತೊಡಗಿದ್ದರು.
`’ನಂದುವ ದೀಪ ಬಗ್ಗನೆ ಉರಿದು ನಂದೊ ಹಂಗೆ ಹೋದ ಅಂತಾತು! ಈ ಕಾಯಿಲೆಯೇ ಅಂಥಾದ್ದು.”
‘`ಕಾಯಿಲೆ ಒಂದು ನೆಪ ಅಷ್ಟೆ. ಮನುಷ್ಯ ಜನ್ಮವೇ ಅಂಥಾದ್ದು. ಈ ಕ್ಷಣ ಆನಿದ್ದಿ. ಇನ್ನೊಂದು ಕ್ಷಣಕ್ಕೆ ಇರ್ತ್ನೋ ಇಲ್ಯೋ, ಯಾಂಬಲ್ಲ? ಅದೂ ಅರವತ್ತು ದಾಟಿದ ಮೇಲೆ….”
‘`ಹಂಗೇನಿಲ್ಲೆ. ಆ ತಾಯ್ಮನೆ ಸುಬ್ಬಣ್ಣ….. ಅವನಿಗೆಷ್ಟು ವಯಸ್ಸಾಗಿತ್ತು? ಬರೀ ನಲವತ್ತೈದು. ಊಟಕ್ಕೆ ಬಾಳೆಲೆ ತಪ್ಲೆ ತೋಟಕ್ಕೆ ಹೋದವ ಬಂದಿದ್ದು ಹೆಣವಾಗಿ.”
ಮಾಮೂಲಿ ಮಾತುಗಳು. ಬೇಸರವೆನ್ನಿಸಿ ಹೊರಬಂದೆ. ಹೆಣದ ಮನೆ ಸುದ್ದಿಯ ಚಾವಡಿಯಾಗುವುದೇನೂ ಹೊಸದಲ್ಲ. ಕಂಡದ್ದಿಲ್ಲವೆ? ಆದಷ್ಟು ಬೇಗ ನನ್ನ ಹೆಣ ಸುಟ್ಟುಹಾಕಿ ನನ್ನ ಮನಸ್ಸು, ಭಾವನೆಗಳಿಗೆ ಮಂಗಳ ಹಾಡಿದರೆ ಸಾಕು ಅನ್ನಿಸತೊಡಗಿತು. ಹೆಂಡತಿ ಮಕ್ಕಳನ್ನು ಸಂತೈಸಲಾಗದ ಅಸಹಾಯಕತೆಯಲ್ಲಿ ಕೊರಗಲಾರೆ. ನಾನೇ ಇದ್ದಿದ್ದರೆ ಹುಂ, ಬೇಗ ಬೇಗ ಸಿದ್ಧಮಾಡಿ ಎಂದು ಹೇಳಬಹುದಿತ್ತು….
ಹೊರಡುವ ಮೊದಲು ನಾನೇ ಕಟ್ಟಿ ಬೆಳೆಸಿದ ಮನೆ ತೋಟವನ್ನೆಲ್ಲ ಒಮ್ಮೆ ಕಣ್ಣು ತುಂಬಿಸಿಕೊಂಡು ಬರೋಣ ಎನ್ನಿಸಿದ್ದೆ ಹೊರಬಂದೆ.
ವಿಶಾಲವಾದ ಬಾವಂತಿ ಅಂಗಳವಿರುವ ಹಂಚಿನ ಮಹಡಿ ಮನೆ. ಕಟ್ಟಿಸಿ ಹತ್ತು ವರ್ಷವಾಯಿತೋ ಏನೋ. ಅಣ್ಣನೊಂದಿಗೆ ಜಗಳವಾಡಿ ಹಿಸ್ಸೆಯಾಗಿ ಪಾಲಿಗೆ ಬಂದ ಈ ಗದ್ದೆಯ ಅಂಚಲ್ಲಿ ಇಪ್ಪತ್ತೈದು ವರ್ಷದ ಹಿಂದೆ ಬಿಡಾರ ಹಾಕಿಕೊಂಡು ಕುಳಿತಾಗಿತ್ತು. ಹಿಸ್ಸೆ ಎನ್ನುವುದು ಸ್ಥೂಲವಾಗಿಯೇ ಇರಬೇಕೆಂದಿಲ್ಲ; ಮಾನಸಿಕವಾಗಿದ್ದು ಅದಕ್ಕಿಂತಲೂ ಭಯಾನಕವಾಗಿರಬಹುದಲ್ಲವೆ? ಅದರಲ್ಲಿಯು ಸ್ವಾಭಿಮಾನಕ್ಕೆ ತಗಲುವ ಧಕ್ಕೆ ಹೆಚ್ಚು ಅಸಹ್ಯಕರ. ಪ್ರತಿಯೊಂದಕ್ಕು ಲೆಕ್ಕ, ಲೆಕ್ಕ. ರುಕ್ಕುವನ್ನು ತವರು ಮನೆಗೆ ಕರೆದುಕೊಂಡು ಹೋಗಿ ಬರಲು ಬಸ್ಚಾರ್ಜ್ ಕೊಡುತ್ತಿದ್ದನಷ್ಟೆ. ಅವಳು ಇಷ್ಟಪಟ್ಟಳು ಅಂತ ಹೋಟೆಲಲ್ಲಿ ಮಸಾಲೆ ದೋಸೆ ಕೊಡಿಸಿದ್ದಕ್ಕೆ ಮನೆಯಲ್ಲಿ ತಿಂಡಿ ತಿಂದು ಹೋಗಿರಲಿಲ್ಲವಾ ಎಂಬ ಕಿರಿಕ್ಕು. ಒಂದು ಚಡ್ಡಿ ಕೊಳ್ಳಲೂ ಅವನಲ್ಲಿ ಕೈಚಾಚಬೇಕು. ದುಡಿಯುವವನು ಪೂರಾ ತಾನು; ಅವನಿಗೆ, ರಾಜಕೀಯ, ಕ್ಲಬ್ಬು, ತನ್ನ ಹೆಂಡತಿಗೆ ಬೇಕಾದ ಒಡವೆ! ರೋಸಿಹೋಗಿ ಬೇರೆಯಾದ ಬಳಿಕ ಪಾಲಿಗೆ ಬಂದ ಜಮೀನಿನಲ್ಲಿ ಹಗಲೂ ರಾತ್ರಿ ದುಡಿತ. ಗದ್ದೆಯನ್ನು ತೋಟವಾಗಿಸಿದೆ. ಬ್ಯಾಂಕಿನ ಸಹಾಯದಲ್ಲಿ ಬೋರು, ಸ್ಪ್ರಿಂಕ್ಲರ್ರು ಎಲ್ಲಾ ಆಯಿತು. ರುಕ್ಕು ಜತೆ ಜತೆಯಾಗಿ ಕೈ ಜೋಡಿಸಿದಳು. ಭೂತಾಯಿ ದುಡಿಯುವ ಕೈಗೆ ಯಾವತ್ತೂ ಮೋಸ ಮಾಡಲಿಲ್ಲ. ಅಡಿಕೆಗು ಬಂಗಾರದ ಬೆಲೆ ಬಂತು. ಹತ್ತೇ ವರ್ಷದಲ್ಲಿ ಇಂಥ ಮನೆ ಕಟ್ಟಿಸಲು ಸಾಧ್ಯವಾಯಿತು. ಅದನ್ನೆಲ್ಲ ನೆನೆದರೆ…..
ಇಡೀ ಮನೆ, ತೋಟವನ್ನೆಲ್ಲ ಮನಸ್ಸಿನಲ್ಲಿಯೆ ತುಂಬಿಕೊಂಡೆ. ಇನ್ನೂ ಅನುಭವಿಸಬೇಕಾಗಿತ್ತು. ಆಗಲಿ, ಪಾಲಿಗೆ ಬಂದದ್ದು. ಅಪ್ಪ ನಮಗೇನು ಮಾಡಿಟ್ಟಿದ್ದಾರೆ ಎಂದು ಮಕ್ಕಳಾಗಲಿ, ನನ್ನನ್ನು ನಿರ್ಗತಿಕಳನ್ನಾಗಿಸಿದಿರಲ್ಲ ಎಂದು ರುಕ್ಕುವಾಗಲಿ ಯಾವತ್ತೂ ಅಂದುಕೊಳ್ಳುವಂತಿಲ್ಲ. ಯಾರೆದುರೂ ಕೈಚಾಚದೆ ಆಕೆ ಜೀವನ ಸಾಗಿಸಬಹುದು. ಬಹುಶಃ ಹಿಸ್ಸೆಯಾಗದೆ ಅಣ್ಣನೊಟ್ಟಿಗೇ ಉಳಿದಿದ್ದರೆ ಈಗ ಅಣ್ಣ ರುಕ್ಕುವನ್ನು ಹೊರಗೆ ಹಾಕುತ್ತಿದ್ದ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮಹಾ ನಯವಂಚಕ. ತನ್ನ ನಯವಾದ ಮಾತಿನಿಂದಲೇ ಒಳ್ಳೆಯವನೆಂದು ಕಾಣಿಸಿಕೊಳ್ಳುತ್ತ ಒಳಗೇ ಕೊರೆಯುವ ಕ್ಯಾನ್ಸರ್ ಕ್ರಿಮಿಯ ಹಾಗೆ. ಊರೆದುರು ತನ್ನಂಥ ಸಾಚ ಇನ್ನಿಲ್ಲ ಎಂದೇ ತೋರಿಸುತ್ತ ಬಂದವ, ಈಗಲೂ, ನನ್ನ ಸಾವಿನ ಸುದ್ದಿ ಕೇಳುತ್ತಲೆ ಓಡಿ ಬಂದು ಮೊದಲಿಗೆ ಎಲ್ಲರನ್ನು ಸಮಾಧಾನಪಡಿಸುವ ನಾಟಕ ಆಡುತ್ತಿದ್ದಾನೆ. ಇಲ್ಲಿ ತನಗೆ ಏನೇನು ಬಾಚಲು ಸಾಧ್ಯವಾಗುತ್ತದೆ ಎನ್ನುವ ಹುನ್ನಾರು ಅವನ ಕಣ್ಣುಗಳಲ್ಲಿ ಕಾಣುತ್ತಲೇ ಇದೆ. ಇಲ್ಲ, ಅದಕ್ಕೆ ಅವಕಾಶ ಕೊಡಬಾರದು ಅನ್ನಿಸಿದ್ದೆ ಒಳಹೊಕ್ಕೆ.
ಹೆಣ್ಣುಮಕ್ಕಳಿಬ್ಬರು ಇನ್ನೂ ನನ್ನ ಪಕ್ಕದಲ್ಲಿಯೆ ಕುಳಿತು ಬಿಕ್ಕುತ್ತಿದ್ದರು. `’ಎಷ್ಟು ಅತ್ರೂ ಸತ್ತವರು ಎದ್ದು ಬತ್ವ; ಏಳಿ, ಮುಂದಿನ ಕೆಲಸ ನೋಡಿ. ರುಕ್ಮಿಣಿ, ನೀನೂ ಅಳ್ತಾ ಕೂತ್ರೆ ಹೇಗೆ, ಕಾಯಿಲೆಯಿಂದ ನರಳ್ತಾ ತನಗೂ ನೋವು, ನೋಡಿಕೊಳ್ಳೊರಿಗು ತ್ರಾಸು ಆಗಿ ಇರೋದಕ್ಕಿಂತ ಸುಖಮರಣ ಬಂತು ಅಂದ್ಕೊಳ್ಳಿ” ಅಣ್ಣ ಗೊಗ್ಗರು ದನಿಯಲ್ಲಿ ಉಲಿದ. `’ಅತ್ತು ಮನಸ್ಸು ಹಗುರ ಮಾಡ್ಕ್ಯಳ್ಳದೆ ಒಳ್ಳೇದು ಸುಮ್ನಿರಿ” ಅತ್ತಿಗೆ ಹೇಳಿದಳು. ಊರವರತ್ತ ತಿರುಗಿದ ಅಣ್ಣ, `’ಎಲ್ಲ ಕವಳದ ಶಿಬ್ಲು ಎದ್ರಿಗೆ ಕುಂತ್ರೆ ಹೆಂಗೆ. ಏಳಿ, ಕಟ್ಟಿಗೆ ವ್ಯವಸ್ಥೆ, ಚಟ್ಟದ ವ್ಯವಸ್ಥೆ, ಪಂಚೆ, ಎಳ್ಳು, ಊದ್ಬತ್ತಿ, ಕರ್ಪೂರ, ತುಳಸಿ ಕಾಷ್ಠ, ಗಡಿಗೆ, ಗಂಧದ ಚಕ್ಕೆ ಎಲ್ಲಾಬೇಕು…. ಎಲ್ಲ ಕೆಲಸ ಹಂಚ್ಕ್ಯಂಡು ಮಾಡಿ. ಆನು ಪುರೋಹಿತ್ರಿಗೆಲ್ಲ ಫೋನ್ ಮಾಡಿಯಾಯ್ದು. ಅವರು ಬರೋದ್ರೊಳಗೆ ಎಲ್ಲ ಸಿದ್ಧ ಆಗ್ಲಿ, ಹೆಣ ಕಾಯಿಸ್ಲಾಗ….” ಎಂದ. ಇಡೀ ವ್ಯವಸ್ಥೆಯ ಅಘೋಷಿತ ನಾಯಕ ಆತನೇ ಆಗಿಬಿಟ್ಟಿದ್ದ.
ಕೆಲಸದ ನಡುವೆ ಊರವರ ಮಾತು ನಡೆದಿತ್ತು. `’ಪುಣ್ಯಕ್ಕೆ ಈಗಲೇ ಹೋದ ಮಾರಾಯ. ಕಳೆದ ವರ್ಷ ಮೇಲಿನ ಮನೆ ಶಿವಜ್ಜ ಹೋದಾಗ ಶ್ರಾವಣ ಮಾಸ, ಧೋ ಅಂತ ಮಳೆ. ಕಟ್ಟಿಗೆಗೆ ಬೆಂಕಿನೆ ಹತ್ತದೆ ಬರೀ ಸೀಮೆ ಎಣ್ಣೇಲೆ ಹೆಣ ಸುಟ್ಟಂಗೆ ಆಗಿತ್ತು!”
`’ಹೌದಪ್ಪ, ಎರಡು ತಿಂಗಳು ಮೊದ್ಲೆ ಇವನು ಹೋದ್ದು ಚಲೋನೆ ಆತು!’
`’ಅದೆಲ್ಲ ಸರಿ, ಈಗ ಕ್ರಿಯೆ ಹಿಡಿಯೋದು ಯಾರುಹೇಳಿ ಆತ? ಕಿಟ್ಟಣ್ಣನಿಗೆ ಗಂಡು ಮಕ್ಳೆ ಇಲ್ಯಲೊ ಮಾರಾಯ. ಬೀಜ ಗಟ್ಟಿ ಇರ್ಲ್ಯೊ ಹ್ಯಾಂಗೆ!”
`’ಅದ್ರ ಬಗ್ಗೆ ನಿನಗೇತಕೆ ಚಿಂತೆ. ದೊಡ್ಡೋರು ನೋಡ್ಕ್ಯತ್ತ….. ನಿನ್ನ ಕೆಲಸ ನೋಡು. ಬಚ್ಚಲ ಮನೇಲೆ ಹಾಳೇ ಬಾಗ ಇದ್ದಿಕ್ಕು, ಸಿಗಿದು ಹೊರೆ ಕಟ್ಟು ಹೋಗು.”
`’ಕೃಷ್ಣ ಭಟ್ಟರು ಬಂದರು, ಓ ಪುರೋಹಿತರೂ ಅವರ ಜೊತೆಗೇ ಬಂದ್ರನ” ಯಾರೋ ಹೇಳಿದ್ದೇ ಎಲ್ಲರ ಹರಟೆಯು ಬಂದಾಯಿತು. ಇನ್ನು ತಮ್ಮ ಭಾರ ಇಳಿದ ಹಾಗಾಯಿತು, ಕೃಷ್ಣ ಭಟ್ಟರ ನಿರ್ದೇಶನದಲ್ಲಿ ಹೇಳಿದ ಕೆಲಸ ಮಾಡುವುದಷ್ಟೆ ಎನ್ನುವ ನಿರಾಳಭಾವ ಎಲ್ಲರ ಮುಖದಲ್ಲಿ ಕಾಣಿಸಿಕೊಂಡಿತು. ಭಟ್ಟರ ಹಿಂದೆಯೇ ಒಳಹೊಕ್ಕೆ. ಇನ್ನೂ ಅಳುತ್ತಲೇ ಇದ್ದ ರುಕ್ಕುವಿನ ಬಳಿ ಹೋದ ಅವರು ಅವಳ ತಲೆಯನ್ನೊಮ್ಮೆ ಹಗುರಾಗಿ ತಟ್ಟಿ, `’ಅತ್ತರೆ ಹೋದವರು ಮತ್ತೆ ಬತ್ವನೆ ಹುಚ್ಚಿ; ಮತ್ತೆ ನಿನ್ನ ಮೇಲಿನ ಹೊಣೆಗಾರಿಕೆ ದೊಡ್ಡದು….. ಮಕ್ಕಳಿಗೆ ಸಮಾಧಾನ ಹೇಳಬೇಕಾದವಳು ನೀನೇ ಅಲ್ದ?’ ಎಂದು ಮಿದುವಾಗಿ ಕೇಳಿದರು. ಅವರ ಮಾತು ಕೇಳುತ್ತಲೆ ರುಕ್ಕವಿನ ದುಃಖ ಹೆಚ್ಚಾಯಿತು. `’ಕೃಷ್ಣಣ್ಣ, ಇಷ್ಟು ದೊಡ್ಡ ಮನೆ, ಆಸ್ತಿ ಎಲ್ಲವನ್ನು ನನ್ನ ತಲೆ ಮೇಲೆ ಹೊರಿಸಿ ಹೋಗ್ಬಿಟ್ರಲ್ಲೋ, ಹೇಗೆ ಸಮಾಧಾನ ಮಾಡ್ಕ್ಯಳ್ಲಿ ಹೇಳು….. ಆನೆ ಮುಂಚೆ ಹೋಗಕಾಗಿತ್ತು…..” ಎಂದು ಬಿಕ್ಕಿದಳು. `’ಹೌದು. ನಮ್ಗೆ ಎಷ್ಟು ಕಾಲ ಇದ್ರು ಬೇಕೆ. ಆದ್ರೆ ದೈವೇಚ್ಛೆ ಹ್ಯಾಂಗಿದ್ದೊ ಹಾಂಗೆ ಆಪ್ದಲ್ದ ಹೇಳು. ನೋಡು, ಪುರೋಹಿತ್ರು ಬೈಂದ. ಅವರು ಹೇಳಿದ ಹಾಂಗೆ ಮಾಡು. ಇನ್ನು ಅವಂಗೊಂದು ಸದ್ಗತಿ ಕಾಣ್ಸೊದೆ ನಾವು ಅವಂಗೆ ಮಾಡೊ ಸೇವೆ ಅಲ್ದ?” ಎಂದವರೆ ನನ್ನ ಶವದ ಕಾಲಿಗೆ ನಮಸ್ಕರಿಸಿ ವರಾಂಡಕ್ಕೆ ಬಂದು ಕುರ್ಚಿಯೊಂದರಲ್ಲಿ ಕುಳಿತು ಮೆತ್ತಗೆ, ‘`ಎಂಗೂ ಅವಂದೆ ವಯಸ್ಸು” ಎಂದು ಗಡಿಯಾರ ನೋಡುತ್ತ ಹೇಳಿದರು. ಅಣ್ಣ ಬಂದು ಅವರ ಪಕ್ಕದ ಕುರ್ಚಿಯಲ್ಲಿ ಕುಳಿತ…. ಈಗವರು ತನ್ನನ್ನೆ ಕರೆಯುತ್ತಾರೆ, ಕರೆಯುವ ಮೊದಲೆ ತಾನಲ್ಲಿರಬೇಕು ಎಂದು ನಿರ್ಧರಿಸಿದವನಂತೆ. ಇದನ್ನು ಗಮನಿಸಿದ ಪರಮಭಾವ…. ರುಕ್ಕುವಿನ ಅಣ್ಣ….. ಬಂದು ಭಟ್ಟರ ಮತ್ತೊಂದು ಪಾರ್ಶ್ವದಲ್ಲಿ ಕುಳಿತ.
`’ಕೃಷ್ಣ ಭಟ್ರೆ, ನೀವು ಬಂದಿದ್ದು ಎನಗೆ ಆನೆಬಲ ಬಂದಾಂಗ್ಹಾತು. ಮುಂದಿನ ಕಾರ್ಯಕ್ರಮದ ಬಗ್ಗೆ ಹೇಳಿದ್ರೆ,…” ಅಣ್ಣ ನಿಧಾನವಾಗಿ ಮಾತು ಆರಂಭಿಸಿದ, `’ಬೆಳಗ್ಗೆ ಹತ್ತಕ್ಕೆ ಶ್ವಾಸ ಹೋಗಿದ್ದು. ಈಗಲೆ ಹನ್ನೆರಡಾತು. ಬಹಳ ಕಾಲ ಕಾಯಿಲೆಯಿಂದ ಸತ್ತಿರೋನ ಶವ ಮನೇಲಿ ಇಡೋದು ಒಳ್ಳೇದಲ್ಲ….. ನಿಮ್ಗು ಗೊತ್ತಿದ್ದನ.”
`’ಪುರೋಹಿತ್ರು ಬಂದಾತಲ. ಅಂತ್ಯೇಷ್ಟಿಗೆ ಎಲ್ಲ ತಯಾರಾದ ಹಾಗೆ ಇದ್ದು. ಪುರೋಹಿತ್ರು ಹೇಳಿದ್ಹಂಗೆ ಅಗ್ನಿ ಸಂಸ್ಕಾರ ಮುಗಿಸ್ಬಿಡಿ. ೧೧-೧೨ನೇ ದಿನದ ಕಾರ್ಯಕ್ರಮ ಮಾಡ್ತೊ ಬಿಡ್ತೊ ಆಮೇಲೆ ತೀರ್ಮಾನ ಮಾಡಿ….”
ತನ್ನ ಮನಸ್ಸಿನ ಸಮಸ್ಯೆಯನ್ನು ಅವರು ಎತ್ತುಗಡಿ ಮಾಡದಿದ್ದಾಗ ಅಣ್ಣ ಕ್ಷಣಕಾಲ ಪೆಚ್ಚಾದ. ಆದರೆ ಪಳಗಿದ ಹುಲಿಯಲ್ಲವೆ? ಕಡತ ಬಿಚ್ಚಿದ: ‘`ನೀವು ಹಿರಿಯರು. ಒಂದು ಸಮಸ್ಯೆ ಇರೋದ್ರಿಂದ ನಿಮ್ಮ ಬರವಿಗಾಗಿ ಕಾಯ್ತಾ ಇದ್ಯ. ತಿಳಿದ ನೀವು ಪರಿಹಾರ ಹೇಳವು. ನೀವು ಹೇಳಿದ ಹಂಗೆ ಮಾಡಲೆ ಊರವರೆಲ್ಲ ರೆಡಿ ಇದ್ಯ. ಪ್ರಶ್ನೆ ಅಂದ್ರೆ ಶವಕ್ಕೆ ಅಗ್ನಿಸಂಸ್ಕಾರ ಮಾಡೋರು ಯಾರು ಅಂತ. ನಮ್ದು ಹೆಸರಾಂತ ವೈದಿಕ ವಂಶ. ಕಿಟ್ಟ ಹೆಂಗೇ ಬದುಕಿರ್ಲಿ, ಹುಟ್ಟಿದ್ದು ಈ ವಂಶದಲ್ಲಿಯೆ. ಹಂಗಾಗಿ ಸುಮ್ನೆ ಸೊಡ್ಲೆಗುಡ್ಡೆಗೆ ತಗಂಡು ಹೋಗಿ ಸುಟ್ಹಾಕಲೆ ಬತ್ತಿಲ್ಲೆ. ಮಂತ್ರಾಗ್ನಿಯಿಂದಲೆ ಸುಡವು. ಕ್ರಿಯೆ ಹಿಡಿಯವು. ಹೌದೊ ಅಲ್ದೊ ಶಾಸ್ತ್ರ ತಿಳ್ಕಂಡಿರೊ ನೀವೇ ಹೇಳಿ.”
`’ಇದ್ರಲ್ಲಿ ಎಂಥ ಸಮಸ್ಯೆ ಇದ್ದ?”
`’ಇಲ್ಲೆ ಹೇಳಿ ಆನೂ ಅಂದ್ಕಂಡಿದ್ದಿ. ಇರುವಷ್ಟು ಕಾಲ ಎನ್ಮೇಲೆ ಇಂವ ಹಾವಿನ ಹಗೆ ಸಾಧಿಸ್ದ. ಚಪ್ಲೀಲಿ ಹೊಡೆಯಲು ಬಂದಿದ್ದ. ಯಾರ್ನೊ ಇಟ್ಗೈಂದಿ ಹೇಳಿ ಅಪವಾದನು ಹೊರಿಸ್ದ. ಪಂಚಾಯ್ತಿದಾರ್ರನ್ನ ಹೆದರಿಸಿ ಹಿಸ್ಸೇಲಿ ಚಲೋ ಪಾಲು ತಗಂಡ. ಆದ್ರೆ ಎಷ್ಟಾದ್ರು ಒಡಹುಟ್ಟಿದವ, ಎಲ್ಲಾ ಮರೆತಿದ್ದಿ ಬಿಡಿ. ಈಗಂತು ಸತ್ತಮೇಲೆ ದ್ವೇಷ ಎಂಥಾದ್ದು ಅಂತ ಸುದ್ದಿ ಕೇಳಿದ ಕೂಡ್ಲೆ ಓಡಿ ಬೈಂದಿ. ಎನ್ನಿಂದ ಬೆಂಕಿ ಕೊಡಸ್ತ್ನಿಲ್ಲೆ ಹೇಳಿ ರುಕ್ಮಿಣಿ, ಅವಳ ಅಣ್ಣ ಹೇಳ್ತಾ ಇದ್ವಡ…..”
ಅಣ್ಣ ಪ್ರತಿಕ್ರಿಯೆಗೆ ಕಾದವನಂತೆ ಮಾತು ನಿಲ್ಲಿಸಿದ. ನಾನು ದೇಹದೊಳಗೆ ಇದ್ದಿದ್ದರೆ ಈ ಮಾತಿಗೇ ನನ್ನ ಶವ ಉರಿದು ಹೋಗುತ್ತಿತ್ತೇನೊ. ರುಕ್ಕುವಿನ ಸೆರಗಿಗೆ ನನ್ನೆದುರೇ ಕೈ ಹಾಕಿದ ಇವನಿಗೆ ಚಪ್ಪಲಿಯಿಂದಲ್ಲ್ಲ, ಅಮೇಧ್ಯದಿಂದ ಹೊಡೆಯಬೇಕಾಗಿತ್ತು….
`’ಅರ್ಥವಾಯಿತಪ್ಪ, ಮನುಷ್ಯನಾದಮೇಲೆ ದ್ವೇಷ, ಅಸೂಯೆ ಎಲ್ಲ ಇಪ್ದೆ. ಆದರೆ ಸತ್ತವರ ಮೇಲೆ ದ್ವೇಷ ಎಂಥಾದ್ದು. ನೀನು ಬಂದದ್ದು ಸರಿಯಾತು.”
`’ಅದೇ ಅದೇ ಆನು ಹೇಳಿದ್ದು. ಈಗ ಕ್ರಿಯೆ ಹಿಡಿಯೋರು ಯಾರು ಹೇಳದು ಪ್ರಶ್ನೆ. ಮಂತ್ರಾಗ್ನಿ ಸ್ಪರ್ಶ ಮಾಡವ್ರೆ ಕ್ರಿಯೆ ಹಿಡಿಯದು…. ಎನ್ಗೆ ಗೊತ್ತಿದ್ಹಂಗೆ. ೧೧-೧೨ನ್ನ ಮನೇಲಿ ಮಾಡ್ತ್ವೊ, ಗೋಕರ್ಣದಲ್ಲೊ ವರದಾಮೂಲ್ದಲ್ಲೊ….. ಅಳಿಯಂದಿರಿಗೆ, ರುಕ್ಮಿಣಿಗೆ ಬಿಟ್ಟಿದ್ದು. ಒಟ್ಟು ಸಾರಾಂಶ ನಿಮಗೇ ಅರ್ಥ ಆಗಿಕ್ಕು. ಎನಗೆ ಒಂದು ಹೆಣ್ಣು ಎರಡು ಗಂಡುಮಕ್ಳು…. ಅವಂಗೆ ಇಬ್ರು ಹೆಣ್ಣೆ. ಅವರವರ ಪುಣ್ಯ ಪಾಪದ ಫಲ ಅಂತ ಇಟ್ಗಳಿ. ಎನಗೆ ಗೊತ್ತಿದ್ಹಂಗೆ ಹೆಣ್ಣುಮಕ್ಳಿಗೆ ಕ್ರಿಯಾಧಿಕಾರ ಇಲ್ಲೆ. ಅದು ತೀರ್ಮಾನ ಆದ್ರೆ ಮುಂದಿನ ಕೆಲಸ. ಅಥವಾ, ಸುಮ್ನೆ ಸುಟ್ಹಾಕಿ ಬನ್ನಿ ಅಂತ ನಿಮ್ಮಂಥವ್ರು ಹೇಳಿದ್ರೆ ಅದಕ್ಕು ಸೈ.”
`’ಇಲ್ಲೆ ಇಲ್ಲೆ ಕ್ರಿಯೆ ಆಗವು” ರುಕ್ಕು ಅಳುತ್ತ ಕೂಗಿದಳು. ನನ್ನ ವಿಚಾರಗಳು ಯಾವತ್ತೂ ಅವಳ ತಲೆಗೆ ಹೋಗಿರಲೇ ಇಲ್ಲ. ಈಗಂತು ಸುತ್ತ ಇರುವವರೆಲ್ಲ ಅವರೆ….. ನೀಳವಾಗಿ ಉಸಿರೆಳೆದುಕೊಂಡ ಕೃಷ್ಣಭಟ್ಟರು ರುಕ್ಕುವನ್ನ ನಿರುಕಿಸಿ ಮತ್ತೆ ಅಣ್ಣನತ್ತ ತಿರುಗಿ ಗಂಭೀರವಾದ ದನಿಯಲ್ಲಿ, ‘`ಜಾತ ಸಂಸ್ಕಾರಗಳಲ್ಲಿ ಲೋಪವಾದರೆ ಅವನೊಬ್ಬನೆ ಭ್ರಷ್ಟ. ಮೃತ ಸಂಸ್ಕಾರ ತಪ್ಪಿದರೆ ನಂತರದ ಪೀಳಿಗೆಗಳಿಗು ಪೀಡೆಯಾಗ್ತು. ಪ್ರೇತ ಸಂಸ್ಕಾರದ ಅಗತ್ಯವೆ ಅದು. ಇದ್ದವರಿಗೆ, ಇಲ್ಲದವರಿಗೆ ಇಬ್ಬರಿಗು ನೆಮ್ಮದಿಯಿಲ್ಲೆ. ಪ್ರೇತವನ್ನು ದೈವತ್ವಕ್ಕೆ ಏರಿಸ ಕ್ರಿಯೆಯೆ ಅಂತ್ಯೇಷ್ಟಿ ಸಂಸ್ಕಾರ. ಅದು ಆಗ್ಲೇಬೇಕು. ಇನ್ನು, ನಿಂಗ್ಳಿದ್ದು ಅಂಥಾ ದೊಡ್ಡ ಸಮಸ್ಯೆ ಅನ್ನಿಸ್ತಿಲ್ಲೆ ಎಂಗೆ. ರುಕ್ಕುನು ಸಂಪ್ರದಾಯಸ್ಥ ಕುಟುಂಬದಿಂದಲೆ ಬಂದವ. ಅರ್ಥ ಮಾಡ್ಕ್ಯತ್ತ. ಇಂಥ ಸಂದರ್ಭದಲ್ಲಿ ಏನು ಮಾಡಕು ಹೇಳಿ ಶಾಸ್ತ್ರದಲ್ಲಿ ಸ್ಪಷ್ಟವಾಗೇ ಇದ್ದು. ಗಂಡುಮಕ್ಕಳು ಇಲ್ದೆ ಹೋದ್ರೆ ಸತ್ತವನ ಅಣ್ಣನೋ ತಮ್ಮನೋ ಕ್ರಿಯೆ ಹಿಡಿಯವು. ಇರೋವ್ನು ನೀನೊಬ್ಬ ಅಣ್ಣ. ಹಂಗಾಗಿ ನೀನೆ ಹಿಡಿಯೋದು ಅನಿವಾರ್ಯ. ಇನ್ನು ನಿಂಗು ಇಷ್ಟ ಇಲ್ಲೆ ಅಂತಾದ್ರೆ….”
`’ಎನ್ನ ಅಭ್ಯಂತರವಿಲ್ಲೆ. ಎಷ್ಟಂದರೂ ಒಡಹುಟ್ಟಿದಂವ. ಆದ್ರೆ ಆಗ್ಲಿಂದ ವಿರೋಧ….” ಎನ್ನುತ್ತ ರುಕ್ಕುವಿನತ್ತ ದುರುಗುಟ್ಟಿ ನೋಡಿದ್ದೆ ಆಕೆ ಕೂಗಿದಳು: `’ಹೌದು ಆನೇ ಬ್ಯಾಡ ಹೇಳಿದ್ದಿ. ನೀನು ಸತ್ರೆ ಆನು ಹಾಲು ಕುಡೀತಿ ಹೇಳ್ದಂವ ಕೊಳ್ಳಿ ಇಟ್ರೆ ಇವರು ಸದ್ಗತಿಗೆ ಹೋಕ್ತ್ವಿಲ್ಲೆ. ಹೆಣ್ಮಕ್ಳನ್ನ ಎಂಗ ಗಂಡುಮಕ್ಳ ಹಾಂಗೆ ಸಾಕಿದ್ಯ. ಅವ್ವೇ ಕೊಳ್ಳಿಯಿಡ್ಲಿ….. ಹೆಣ್ಣುಮಕ್ಳಿಗೆ ಅಧಿಕಾರ ಇಲ್ದೆ ಹೋದ್ರೆ ಅಳಿಯಂದಿರು ಕೊಳ್ಳಿ ಇಡ್ಲಿ….” ಹೇಳುತ್ತ ಹೇಳುತ್ತ ಅವಳ ದನಿ ತಗ್ಗಿದ್ದನ್ನ ಗಮನಿಸಿದಾಗ ಪಿಚ್ಚೆನ್ನಿಸಿತು. ಶಾಸ್ತ್ರ ಸುಪ್ರೀಮ್ಕೋರ್ಟ್ ಆರ್ಡರ್ ಎಂದು ತಿಳಿದಿರುವ ಸಮಾಜದಲ್ಲಿ ಮುಂದೆ ಬಾಳಬೇಕಾದವಳು ತಾನು ಎನ್ನುವುದು ಅರಿವಿಗೆ ಬಂದು ಸೋಲುತ್ತಿದ್ದಾಳೆಯೆ….. ಪಾಪ ಹೆಂಗಸು…..
`’ನಿನ್ನ ನೋವು, ಕಳವಳ ಎಲ್ಲ ಎಂಗೆ ಅರ್ಥ ಆಗ್ತು ರುಕ್ಕು. ಆದ್ರೆ ಪರಂಪರೇನ, ಸನಾತನ ಧರ್ಮಾನ ಬಿಡಲೆ ಆಗ್ತ ಹೇಳು. ಹೆಣ್ಮಕ್ಳಿಗೆ ಕ್ರಿಯೆ ಹಿಡಿಯೋ ಅಧಿಕಾರ ಇಲ್ಲೆ ಹೇಳಿ ಸ್ಮೃತಿ ಶ್ರುತಿ ಎಲ್ಲ ಹೇಳ್ತು. ಇನ್ನು ಅಣ್ಣ ತಮ್ಮನ ದ್ವೇಷ, ಇದೇ ಸಂದರ್ಭದಲ್ಲಿ ಅದಕ್ಕೊಂದು ಮುಕ್ತಿ ಕಾಣಿಸ್ಲಾಗ ಎಂತಕೆ? ಹಳೇದನ್ನ ಮರೆತುಬಿಡಿ.” ಕೃಷ್ಣಭಟ್ಟರು ಗಟ್ಟಿಯಾಗಿ ಹೇಳಿದರು.
ರುಕ್ಕು ಬಿಕ್ಕುತ್ತ ಮುಲುಗಿದಳು. `ಮಗ…. ಮಗ…. ಮಗನೇ ಬೇಕೆಂತಕೆ, ಕರುಳಕುಡಿ ಯಾವುದಾದ್ರೇನು ಹೇಳಿದ್ರಲ್ರಿ……’ ಎನ್ನುತ್ತ ನನ್ನ ಶವದ ಎದೆಯ ಮೇಲೇ ಒರಗಿದಳು.
ನೆನಪಾಯಿತು.
****
ನನ್ನ ತಾಯಿಯ ದೊಡ್ಡಮ್ಮನ ಮಗಳ ಗಂಡ ರಾಘವ ನನಗಿಂತ ಐದು ವರ್ಷ ದೊಡ್ಡವನು. ನಾಲ್ಕು ಹೆಣ್ಣು ಮಕ್ಕಳ ನಂತರ ಒಬ್ಬ ಮಗ ಹುಟ್ಟಿದ. ಒಬ್ಬನೇ ಮಗನೆಂಬ ಅತಿ ಮುದ್ದಿನಿಂದ ಬೆಳೆದ ಆ ಹುಡುಗ ತನ್ನ ಬೆಳವಣಿಗೆಗಿಂತ ವೇಗವಾಗಿ ಅಹಂಕಾರ, ಹಠವನ್ನು ಬೆಳೆಯಗೊಟ್ಟ. ಅಕ್ಕಂದಿರು, ಅಪ್ಪ, ಅಮ್ಮ ಎಲ್ಲ ತನ್ನ ಆಳುಗಳು ಎನ್ನುವಂತೆ ವರ್ತಿಸತೊಡಗಿದ. ಅಕ್ಕಂದಿರ ಮದುವೆಯೇನೊ ಆಯಿತು. ಆತ ಅಪ್ಪ-ಅಮ್ಮನಿಗೆ ಇಷ್ಟವಿಲ್ಲದಿದ್ದರು ಗಯ್ಯಾಳಿ ಒಬ್ಬಳನ್ನು ಕಟ್ಟಿಕೊಂಡು ಬಂದ. ಸೂಕ್ಷ್ಮ ಪ್ರಕೃತಿಯವನಾದ ರಾಘವ ಸೊಸೆಯಿಂದ ತನ್ನ ಹೆಂಡತಿಗಾಗುತ್ತಿರುವ ಹಿಂಸೆಗೆ ತೀರಾ ನೊಂದುಕೊಂಡು ತಿರುಗಿಬಿದ್ದದ್ದೆ ರಾದ್ಧಾಂತವಾಗಿ ಮಗರಾಯ ಅಪ್ಪ, ಅಮ್ಮನನ್ನು ಒದ್ದು ಹೊರಗೆ ಹಾಕಿದ.
ಮೂರು ವರ್ಷದ ಕೆಳಗೆ ರಾಘವ ನಮ್ಮ ಮನೆಗೆ ಬಂದಿದ್ದ. ವಯಸ್ಸಿಗೆ ಮೀರಿದ ವೃದ್ಧತ್ವ ಮುಖದಲ್ಲಿ ರಾಚುತ್ತಿತ್ತು. ಆರೋಗ್ಯ ಸರಿಯಿಲ್ಲವೇನೊ ಎಂದು ಕೇಳಿದರೆ, `ತಮಾಷೆ ಮಾಡ್ತೀಯ ಮಾರಾಯ…. ನಿನಗೆ ಆರಾಮಿಲ್ಲ ಅನ್ನೋ ಸುದ್ದಿ ಗೊತ್ತಾಗಿ ನೋಡಿ ಹೋಗಲು ಬಂದವನು ನಾನು, ನೀನು ನನ್ನನ್ನೆ ಕೇಳ್ತೀಯ! ಎಂದ. ಪಚಾಣಿಸಿ ಕೇಳಿದ್ದಕ್ಕೆ ನಿಧಾನವಾಗಿ ತನ್ನೆಲ್ಲ ವ್ಯಥೆಯ ಕಥೆಯನ್ನ ಹೇಳಿದ್ದ. ಮಗ ಹೊರಹಾಕಿದ ಬಳಿಕ ಗದ್ದೆಯ ಮೂಲೆಯಲ್ಲಿ ಬಿಡಾರ ಕಟ್ಟಿಕೊಂಡಿದ್ದು, ಈ ವಯಸ್ಸಿನಲ್ಲಿ ಕೋರ್ಟು ಕಛೇರಿ ಎಂದು ಅಲೆದಾಡೊ ಮನಸ್ಸಿಲ್ಲದೆ, ಹೆಣ್ಮಕ್ಕಳು ಕರೆದರು ಕಾಯಂ ಉಳಿಯಲು ಹೋಗದೆ, ಯಾವುದೋ ದೇವಸ್ಥಾನದ ಪೂಜೆ ಮಾಡಿಕೊಂಡಿರುವುದು. ಎಲ್ಲರೂ ಇದೆಂಥ ಸಂನ್ಯಾಸಿ ಜೀವನವೋ, ನಾವೆಲ್ಲ ಸತ್ತುಹೋಗಿದ್ದೇವಾ? ಒಂದು ಮಾತು ಹೇಳಬಾರದಿತ್ತೆ ಎಂದರೆ, ಇದೇ ನೆಮ್ಮದಿಯ ಬದುಕು, ನನಗೆ ಸಾಕು, ಮತ್ತೇನು ಕೇಳಬೇಡ ಎಂದುಬಿಟ್ಟ. ಹೋಗಲಿ ಬಿಡು, ಏನೋ ಹರಯದ ವಯಸ್ಸಿನಲ್ಲಿ ಮಗ ದುಡುಕಿದ್ದಾನು, ಹೆಂಡತಿಯ ತಾಳಕ್ಕೆ ಕುಣಿದಿದ್ದಾನು; ಆದರೆ ಎಷ್ಟೆಂದರು ಮಗನೇ ಅಲ್ಲವೆ? ಕಾಲಕ್ರಮೇಣ ತನ್ನ ತಪ್ಪು ಅರಿವಾಗಿ ಮರಳಿ ಕರೆದುಕೊಂಡಾನು ಎಂದೆ. ಮುರಿದ ಏನನ್ನಾದರು ಜೋಡಿಸಬಹುದು ಕಿಟ್ಟು, ಆದರೆ ಮನಸ್ಸನ್ನ….. ಉಹುಂ ಎಂದ. ನಾನೇ ಬಂದು ಅವನಿಗೆ ಒಂದು ಮಾತು ಹೇಳಲೆ ಎಂದರೆ, ಅವನೇ ಕರೆದರು ನಾನು ಹೋಗುವವನಲ್ಲ. ನನ್ನ ಮನಸ್ಸೇ ಮುರಿದುಹೋಗಿದೆ, ನನಗೆ ಮಗ ಇಲ್ಲ, ಮರೆತುಬಿಡು ಎಂದ. ವಾಸ್ತು ಬಾಗಿಲಿಗೊರಗಿ ನಿಂತಿದ್ದ ರುಕ್ಕು, ಹಾಂಗಂದ್ರೆ ಹ್ಯಾಂಗೆ ಭಾವ, ಕಡೆಕಾಲಕ್ಕೆ ಎಳ್ಳು ನೀರು ಬಿಡಂವ ಅವನೆ ಅಲ್ಲವೆ ಎಂದದ್ದಕ್ಕೆ, ಈ ಭೇಟಿಯಲ್ಲಿ ಆ ಉದ್ದೇಶವು ಇದೆ ಅಂದ. ಅರ್ಥವಾಗದೆ ಹಾಗೆಂದರೆ ಎಂದೆ. ವಿವರಿಸಿದ.
ತಮ್ಮಿಬ್ಬರ ಮರಣಾನಂತರದಲ್ಲಿ ದೇಹವನ್ನು ದಾನ ಮಾಡುವ ತೀರ್ಮಾನ ಮಾಡಿದ್ದು, ಅದರಿಂದ ಮಗ ತಮ್ಮ ದೇಹವನ್ನ ಮುಟ್ಟುವುದಾಗಲಿ ಸುಡುವುದಾಗಲಿ ಮಾಡಲಾಗದ್ದು…. ಅದಕ್ಕೆ ದೇಹದಾನದ ಒಕ್ಕಣಿಕೆಗೆ ಸಂಬಂಧಿಕರ ಸಹಿ ಬೇಕಾಗಿ ನನ್ನ ಬಳಿ ಬಂದಿರುವುದಾಗಿ ಹೇಳಿದ. ನಿನ್ನ ಮಗ ದೇಹವನ್ನು ಮುಟ್ಟದಿದ್ದರು, ಕ್ರಿಯೆ ಮಾಡಬಹುದು. ನೀರಿನಲ್ಲಿ ಕೊಚ್ಚಿಹೋಗಿ ದೇಹ ಸಿಗದೆ ಇದ್ದವರ ಅಂತ್ಯೇಷ್ಟಿ ಮಾಡುವುದಿಲ್ಲವೆ ಎಂದೆ. ಆಮೇಲೆ ಏನಾದರು ಮಾಡಿಕೊಳ್ಳಲಿ, ನನಗೆ ಸಂಬಂಧಿಸಿದ್ದಲ್ಲ. ಈಗ ನೀನು ಸಹಿ ಮಾಡುತ್ತೀಯೊ ಇಲ್ಲವೋ ಹೇಳು ಎಂದ. ನನ್ನ ಅಭ್ಯಂತರವಿಲ್ಲ ಎಂದಿದ್ದೆ. ರಾಘವ ಮತ್ತೂ ಎರಡು ದಿನ ಉಳಿದು, ತನ್ನ ಮನಸ್ಸು ಮುರಿದಿದ್ದಕ್ಕೆ ಕಾರಣಗಳನ್ನು ಸುದೀರ್ಘವಾಗಿ ಕೊಟ್ಟಾಗ ಅವನ ತೀರ್ಮಾನ ಸರಿಯೆನ್ನಿಸಿದ್ದು ಮಾತ್ರವಲ್ಲ, ನನ್ನ ತೀರ್ಮಾನವು ಗಟ್ಟಿಯಾಯಿತು. ಗಂಡು ಬೇಕು ಎನ್ನುತ್ತಿದ್ದ ರುಕ್ಕವಿಗೆ ಇದೇ ಘಟನೆ ಹೇಳಿ ಸಮಾಧಾನಪಡಿಸಿದೆ. ಇದ್ದು ಕೊರಗುವುದಕ್ಕಿಂತ ಇಲ್ಲದೆ ಕೊರಗುವುದು ಲೇಸಲ್ಲವೆ ಎಂದು.
****
`’ಕೃಷ್ಣಭಟ್ರೆ, ನೀವು ತಿಳಿದವರು. ಈಗಿನ ಕಾಲದಲ್ಲಿ ಸಂಪ್ರದಾಯ ಪರಂಪರೇನ ಮಾನವೀಯ ದೃಷ್ಟಿಯಿಂದ ನೋಡುದು ಒಳ್ಳೆದು ಅನ್ನಿಸ್ತಿಲ್ಯ? ಕ್ರಿಯೆ ಮಾಡುವ ಅಧಿಕಾರ ಹೆಣ್ಣುಮಕ್ಕಳಿಗಿಲ್ಲೆ ಹೇಳ್ತು ಶಾಸ್ತ್ರ. ಹಿಂದಿನ ಕಾಲದಲ್ಲಿ ಹೆಣ್ಣು ಗಂಡು ಸಾಕಷ್ಟಿದ್ದಾಗ ಹೀಗೊಂದು ಸಂಪ್ರದಾಯ ಹುಟ್ಟಿಕೊಂಡಿಕ್ಕು. ಈಗ ಸಮಾನತೆಯ ಯುಗ. ಹೆಣ್ಣನ್ನೇ ಗಂಡಾಗಿ ಸಾಕೋರೆ ಹೆಚ್ಚು. ಅಲ್ಲದೆ ಸತ್ತವಂಗೆ ಪ್ರಿಯರಾದವರಿಂದಲೆ ಕ್ರಿಯೆ ಮಾಡಿಸಿದ್ರೆ ಅವನ ಆತ್ಮಕ್ಕು ತೃಪ್ತಿ, ಸದ್ಗತಿ ಸಿಕ್ತು ಅಲ್ದ? ಇಷ್ಟೆಲ್ಲ ಮಾಡದು ಮೃತನ ಆತ್ಮದ ತೃಪ್ತಿಗಾಗಿ ತಾನೆ?” ಪರಮಭಾವ ಕೃಷ್ಣಭಟ್ಟರನ್ನ ನೇರವಾಗಿ ನಿಟ್ಟಿಸುತ್ತ ಪ್ರಶ್ನಿಸಿದ. ಭೇಷ್ ಭಾವ ಭೇಷ್, ಕೇಳು ಹೀಗೆ ಕೇಳು. ಮನುಷ್ಯತ್ವವಿಲ್ಲದ ಸಂಪ್ರದಾಯಕ್ಕೆ ಏನು ಅರ್ಥ ಕೇಳು…. ನಾನು ಕೂಗಿದೆ.
ಸಮಸ್ಯೆ ಸುಲಭದಲ್ಲಿ ಬಗೆಹರಿಯುವಂಥದ್ದಲ್ಲ ಎನ್ನುವುದು ಭಟ್ಟರಿಗೀಗ ಅರ್ಥವಾಗಿರಬೇಕು. ಆದರೆ ಪಳಗಿದ ವೈದಿಕರು. ತಮ್ಮ ಸಂಪ್ರದಾಯದ ಗುರಾಣಿಯನ್ನ ಎತ್ತಿಹಿಡಿಯುತ್ತ ಗಂಭೀರವಾಗಿ ನುಡಿದರು: `’ಪರಮಯ್ಯ, ಎಷ್ಟೋ ಋಷಿಮುನಿಗಳು ತಮ್ಮ ತಪಶ್ಚರ್ಯದಿಂದ ಕಂಡುಕೊಂಡು ಸಮಾಜದ ಒಳಿತಿಗಾಗಿ ಇರಿಸಿದ್ದನ್ನು ನಮ್ಮ ಇಷ್ಟಕ್ಕಾಗಿ ಬದಲಿಸೋ ಅಧಿಕಾರ ನಮಗೆ ಇಲ್ಲೆ. ಇಲ್ಲಿ ವ್ಯಕ್ತಿಗಳು ಮುಖ್ಯವಾಗ್ತ್ವಿಲ್ಲೆ. ಅವರವರ ಇಷ್ಟಾನಿಷ್ಟಗಳು ಮುಖ್ಯವಾಗ್ತ್ವಿಲ್ಲೆ. ಅವನಿಷ್ಟ ಹಾಗಿತ್ತು ಅಂತ ನಾವು ಒಂದು ಅಪವಾದಕ್ಕೆ, ಬದಲಾವಣೆಗೆ ಅವಕಾಶ ಕೊಟ್ರೆ ಮುಂದೆ ಅದೇ ದೃಷ್ಟಾಂತವಾಗಿ ಸಮಾಜದ ಸ್ವಾಸ್ಥ್ಯ ಹಾಳಾಗ್ತು. ಮತ್ತೆ ಋಷಿಗಳು ಬರೆದಿಟ್ಟ ಶಾಸ್ತ್ರದಲ್ಲು ಅರ್ಥ ಇದ್ದು. ಹೆಣ್ಮಕ್ಳಿಗೆ ಇಂತಾದ್ದನ್ನೆಲ್ಲ ನಿಭಾಯಿಸುವ ಶಕ್ತಿ ಇಲ್ಲೆ. ಈ ಸಂದರ್ಭದಲ್ಲೆ ಅವ್ರು ಮುಟ್ಟು ಮೈಲಿಗೆ ಅಂತ ಕೂತ್ರೆ, ಆ ಸ್ಥಿತಿಯಲ್ಲೆ ಕ್ರಿಯೆಮಾಡಿದ್ರೆ ಇಡೀ ಸನಾತನ ಧರ್ಮವೆ ಹಾಳಾಗ್ತಿಲ್ಯ?’
`’ಮುಟ್ಟು ಮೈಲಿಗೆ ಎಲ್ಲ ಈಗ ಮೂಲೆ ಸೇರಿದ್ದು ಬಿಡಿ. ಅದಿಲ್ಲೆ ಅಂತಾದ್ರೆ ಅಳಿಯಂದಿರು ಮಾಡ್ಲಕ್ಕನ….. ತಮ್ಮ ಗಂಡನೆ ಮಾಡ್ತ ಅನ್ನೋ ಸಮಾಧಾನ ಹೆಣ್ಮಕ್ಳಿಗೆ ಇರ್ತು” ಪರಮಭಾವ ಪಟ್ಟು ಬಿಡಲಿಲ್ಲ. `’ಇಲ್ಲ ಪರಮಯ್ಯ. ಬೇರೆ ಗೋತ್ರದವ್ರಿಗೆ ಅಧಿಕಾರ ಬಿಲ್ಕುಲ್ ಇಲ್ಲೆ” ಭಟ್ಟರು ತಮ್ಮ ಗುರಾಣಿಯನ್ನು ರವಷ್ಟು ಅಲುಗಾಡಿಸಲಿಲ್ಲ.
ಪರಮಭಾವ ಮತ್ತೂ ಹೇಳಿದ: `’ಎನಗೆ ಸಮಾಧಾನ ಇಲ್ಲೆ ಭಟ್ರೆ. ಒಂದು ಅಪವಾದ ಆದ್ರೆ ಅದೇ ಪರಂಪರೆ ಆಗ್ತು ಹೇಳಲೆ ಬತ್ತಿಲ್ಲೆ. ಅಗತ್ಯ ಇದ್ದಲ್ಲಿ ಬಳಕೆ ಆಗ್ತಿಕ್ಕು ಅಷ್ಟೆ. ಎಲ್ಲ ಸರಿ ಇದ್ದಿದ್ರೆ ಸಮಸ್ಯೆ ಇರ್ಲೆ. ಆದ್ರೆ ಜನ್ಮ ಜನ್ಮಕ್ಕು ಹೊಂದಿಕೊಳ್ಳದೆ ಇರೋ ಅಷ್ಟು ಕೆಟ್ಟ ಸಂಬಂಧ ಅಣ್ಣ ತಮ್ಮಂದಿರಲ್ಲಿ ಇದ್ದಾಗ ಅವನಿಂದ ಇವನ ಕ್ರಿಯೆ ಹಿಡಿಸೋದು ನ್ಯಾಯ ಅಲ್ಲ ಅಂತ್ಲೆ ಕಾಣಿಸ್ತು.”
ಈ ಲೌಕಿಕವಾದದ ಎದುರು ಸಂಪ್ರದಾಯದ ಗುರಾಣಿ ರಕ್ಷಣೆಗೆ ಹೊರತು ಆಕ್ರಮಣಕ್ಕೆ ಬರದು ಅನ್ನಿಸಿ ಊರ ಜನರ ಅಭಿಪ್ರಾಯ ತಿಳಿಯಲೆಂದೊ, ಏನೋ ನೆನಪುಮಾಡಿಕೊಳ್ಳಲೆಂದೊ ಸುತ್ತ ನೋಡಿದರು ಭಟ್ಟರು. ಊರವರು ಬರಿದೆ ಕುತೂಹಲಿಗಳಾಗಿದ್ದರು. ಭಟ್ಟರು ಪುರೋಹಿತರತ್ತ ನೋಡಿದರು. ಸತ್ತವರಿಗಾಗಿ ಇದ್ದವರನ್ನ ವಿರೋಧಿಸುವ ಶಕ್ತಿ ತಮಗಿಲ್ಲ ಎನ್ನುವ ಅರಿವಿದ್ದ ಪುರೋಹಿತರು ಮೌನದ ಶಲ್ಯ ಹೊದ್ದರು. `’ಹೆಂಗಸ್ರು ಮಕ್ಳೆಲ್ಲ ಹಸಿದಿದ್ದ. ಅಗ್ನಿಸಂಸ್ಕಾರ ಆಗ್ದೆ ಹೊಟ್ಟೆಗೆ ಹಾಕಹಂಗಿಲ್ಲೆ. ಬೇಗ ನಿರ್ಧಾರ ಮಾಡಿ” ಕಡೇಮನೆ ಶಿವಜ್ಜ ಗೊಣಗಿದ್ದು ನಿಶ್ಶಬ್ದ ವಾತಾವರಣದಲ್ಲಿ ಎಲ್ಲರಿಗು ಕೇಳಿಸಿತು. ಏನೋ ಹೇಳಬೇಕೆಂದುಕೊಂಡ ಭಟ್ಟರು ತಟ್ಟನೆ ಬಾಯಿ ಮುಚ್ಚಿದರು. ತಾನು ತುಸು ಹೆಚ್ಚು ಕಡಮೆ ಮಾತಾಡಿದರು ಮೃತನ ಅಣ್ಣನ ಕಡೆ ಒಂದಷ್ಟು ಜನ, ಪರಮನ ಕಡೆ ಒಂದಷ್ಟು ಜನ ಸೇರಿಬಿಟ್ಟರೆ ಹೊಡೆದಾಟ ಶುರುವಾದರು ಆಶ್ಚರ್ಯವಿಲ್ಲ. ನಯವಾಗಿ ನಿಭಾಯಿಸಬೇಕು ಅನ್ನಿಸಿದ್ದೆ ತಟ್ಟನೆ ಪರಿಹಾರ ನೆನಪಾದವರಂತೆ ಹೇಳಿದರು: `’ಎನಗೆ ಅನ್ನಿಸೊ ಹಂಗೆ ಇಲ್ಲಿ ಕಿಂಚಿತ್ತು ಧರ್ಮಸೂಕ್ಷ್ಮ ಇಲ್ಲೆ. ಆದ್ರೆ ಸಂಬಂಧಸೂಕ್ಷ್ಮ ಇದ್ದು. ಈಗ ಒಂದು ಕೆಲಸ ಮಾಡನ. ಇಂಥ ಸಮಯದಲ್ಲಿ ನಮಗೆ ಮಾರ್ಗದರ್ಶನ ಮಾಡಲೆ ಹೇಳಿ ಸಮಾಜದ ಮಠದಲ್ಲಿ ಒಬ್ಬರು ಗುರುಗಳನ್ನ ಇರಿಸಿದ್ದಾಯ್ದು. ಲೌಕಿಕ ಪಾರಮಾರ್ಥ ಎರಡನ್ನೂ ಅಮೂಲಾಗ್ರವಾಗಿ ತಿಳಿದವ್ರು ಅವ್ರು. ಇಲ್ಲಿಯ ಎಲ್ಲ ವಿಷಯ ಹೇಳಿ ಅವ್ರನ್ನೆ ಕೇಳಿದ್ರಾತು. ಅವ್ರು ಹ್ಯಾಂಗೆ ಹೇಳ್ತೊ ಹಾಗೆ, ಎಲ್ಲರ ಒಪ್ಪಗೆ ಇದ್ದ?”
`’ಸರಿ, ಅದೇ ಸರಿ” ಎಲ್ಲರ ಒಕ್ಕೊರಲ ದನಿ ಕೂಗಿತು.
ಈ ವಿಚಾರದಲ್ಲಿ ಬ್ರಾಹ್ಮಣರ ಒಗ್ಗಟ್ಟು ಅದ್ವಿತೀಯವಾದದ್ದೇ ಸರಿ. ಹೌದಪ್ಪ. ಜಾಣತನ ಎಂದರೆ ಇದು. ಶಿಷ್ಯ ಹೇಳಿದ್ದನ್ನೆ ಗುರುಗಳೂ ಹೇಳಿಯಾರು ಎಂದಲ್ಲವೆ?….
ಬೇಸರವಾಯಿತು. ನಾನು ಬದುಕಿದ್ದಾಗಲು ಮಠಮಾನ್ಯಗಳ ಬಗ್ಗೆ ವಿಶೇಷ ಒಲವು ಇರಿಸಿಕೊಂಡವನಲ್ಲ. ಎಷ್ಟು ಬೇಕೊ ಅಷ್ಟು. ಮಠದ ಸಂಕುಚಿತ ರೀತಿನೀತಿ ಯಾವತ್ತೂ ನನಗೆ ಇಷ್ಟವಾಗುತ್ತಿರಲಿಲ್ಲ. ಶ್ರೀಮಂತರಿಗೊಂದು ಬಗೆ; ಬಡವರಿಗೊಂದು ಬಗೆ. ಅದೇ ಸಮಾಜದಲ್ಲಿ ಬಾಳಲೇ ಬೇಕಾದ ಅನಿವಾರ್ಯತೆಗೆ ಗುರುಕಾಣಿಕೆ, ದೀಪಗಾಣಿಕೆಯನ್ನು ವರ್ಷಕ್ಕೊಮ್ಮೆ ಸಲ್ಲಿಸಿಬಿಡುತ್ತಿದ್ದೆ. ಮಧ್ಯೆ ಮಧ್ಯೆ ಕಟ್ಟಡ ನಿಧಿಯೊ, ಶಂಕರ ಪಂಚಮಿಯೋ ಎಂದು ಒಂದೊಂದು ನೆವ ಹೇಳಿ ವಂತಿಗೆ ವಸೂಲಿಗೆ ಬರುತ್ತಿದ್ದ ಗುರಿಕಾರರಿಗೆ ಆಸರಿಗೆ ಕೊಟ್ಟು ಏನೋ ಸಬೂಬು ಹೇಳಿ ಸಾಗಹಾಕುತ್ತಿದ್ದೆ. ಈಗ ಅವರೇ ನನ್ನ ಅಪರ ಬದುಕಲ್ಲು ಆಟವಾಡಲು ಬಿಡಬೇಕು…. ಛೆ…..
ಮಠಕ್ಕೆ ಊರ ಗುರಿಕಾರ ಶ್ರೀನಿವಾಸಭಟ್ಟ ಮತ್ತು ಕಾನೂರಿನ ಶಿವರಾಮ ಶಾಸ್ತ್ರಿ ಹೋಗುವುದು ಎಂದು ತೀರ್ಮಾನವಾಯಿತು. ಒಳಹಾದಿಯಲ್ಲಿಯೆ ಹೋದರೆ ಬರೀ ೧೫ ಕಿಲೋಮೀಟರು. ಮಣ್ಣು ರಸ್ತೆಯಾದರು ಬೈಕು ಹೋಗುತ್ತೆ ಎಂದರು ಯಾರೋ. ಅಲ್ಲಿ ಹೋಗಿ ಗುರುಗಳನ್ನು ಕಂಡು, ಮಾತಾಡಿ ಬರುವುದೆಂದರೆ ಎರಡು ಮೂರು ಗಂಟೆಯಂತು ಬೇಕೇಬೇಕು.
ಅವರನ್ನ ಕಳಿಸಿದ್ದೆ ಎಲ್ಲ ಕವಳದ ಬಟ್ಟಲಿನ ಸುತ್ತ ಕುಳಿತು ಪಟ್ಟಾಂಗದಲ್ಲಿ ನಿರತರಾದರು. ಒಬ್ಬೊಬ್ಬರದು ಹೆಣ ಸುಟ್ಟ ಒಂದೊಂದು ಬಗೆಯ ಕಥೆ. ತಾವು ಯಾವತ್ತೂ ಹೆಣವೇ ಆಗುವುದಿಲ್ಲವೇನೊ ಎನ್ನುವ ಭಾವ ಹರಯದವರಲ್ಲಿದ್ದರೆ ದಿನ ಎಣಿಸುತ್ತಿದ್ದವರಿಗೆ ನಾಳೆ ನನ್ನ ಕಥೆ ಏನೋ ಎಂಬ ಭಾವ. ಖಿನ್ನನಾಗಿ ರುಕ್ಕು ಪರಮಭಾವ ಇರುವಲ್ಲಿ ಹೋಗಿ ಕುಳಿತೆ.
`’ರುಕ್ಕು, ನಾವೇ ತಪ್ಪ್ ಮಾಡಿದ್ವಿ. ವಾರದ ಹಿಂದೆಯೇ ಬೆಂಗಳೂರಿಗೊ ಮಣಿಪಾಲಕ್ಕೊ ಕರ್ಕಂಡು ಹೋಗಿದ್ರೆ ಅವನು ಅಲ್ಲೇ ಪ್ರಾಣ ಬಿಟ್ಟಿದ್ರೆ, ಈ ಯಾವ ಸಮಸ್ಯೆನು ಇಲ್ದೆ ಅಲ್ಲೆ ದಹಿಸಿ ಬರ್ಲಾಗಿತ್ತು.”
`’ಎನ್ನ ಮನೆಗೆ ಕರ್ಕಂಡು ಹೋಗ್ಬಿಡಿ ಅಂತ ಅವರೇ ಹೇಳಿದ್ರಲ್ಲ ಅಣ್ಣ. ಡಾಕ್ಟ್ರು ಹಂಗೇ ಮಾಡಿ ಅಂದ….”
`’ಹೌದು…. ಅಲ್ಲಿದ್ರು ಉಳಿತಿದ್ನಿಲ್ಲೆ, ಆದ್ರೆ ಅಲ್ಲೆ ಅಂತ್ಯಕ್ರಿಯೇನ ಹೆತ್ತಮಕ್ಳೆ ಮಾಡಲಾಗ್ತಿತ್ತು. ಈ ಕಿರಾತಕನಿಂದ ಬೆಂಕಿಹಚ್ಚಿಸೋ ಪ್ರಸಂಗ ಬತ್ತಿರ್ಲೆ ಅಂತ…..”
ಅಳುತ್ತಲೇ ಈ ಎಲ್ಲ ಘಟನೆಗಳಿಗೆ ಮೂಕ ಸಾಕ್ಷಿಯಾಗಿದ್ದ ಕುಮುದಾಳಿಗೆ ದುಃಖ ದುಮ್ಮಾನ ಸಂಕಟಗಳು ಒತ್ತೊತ್ತಾಗಿ ಇಡುಕಿರಿದು ಎಲ್ಲ ಅಯೋಮಯವಾಗಿ ತಲೆಸುತ್ತು ಬಂದಿರಬೇಕು. ಹಾಗೇ ದೊಪ್ಪನೆ ಮಗ್ಗುಲಾಗಿ ಎಚ್ಚರತಪ್ಪಿ ಬಿದ್ದುಬಿಟ್ಟಳು. ಸುಂಯನೆ ಹಾರಿ ಅವಳ ತಲೆಯ ಸುತ್ತ ಗಿರಕಿ ಹೊಡೆದೆ. ಅವಳ ಅರೆತೆರೆದ ಕಣ್ಣುಗಳಲ್ಲಿ ಜೀವ ಕಾಣದೆ ಕಂಗಾಲಾದೆ. ಅಷ್ಟರಲ್ಲಿ ಓಡಿ ಬಂದ ರುಕ್ಕು ಅವಳನ್ನ ತೊಡೆಯಮೇಲೆ ಮಲಗಿಸಿಕೊಂಡಳು. ಪರಮಭಾವ ನೀರು ತಂದವನು ರಾಮುವಿಗೆ ಕೊಟ್ಟು ಅವಳ ಮುಖಕ್ಕೆ ನೀರು ಹಾಕಲು ಸೂಚಿಸಿ ಆಗಲೆ ಸುತ್ತ ತರುಬಿದ್ದ ಊರವರನ್ನ, `’ಸರೀರಿ, ಗಾಳಿ ಬರ್ಲಿ ಸರೀರಿ” ಎಂದು ದೂರ ಸರಿಸತೊಡಗಿದ. ಮುಖಕ್ಕೆ ನೀರು ಸಿಂಪಡಿಸಿದ ರಾಮು ಬಾಯಿಗು ನೀರು ಹನಿಸಿದ. ಮೊದಲೆರಡು ಗುಟುಕು ಕಟವಾಯಲ್ಲಿ ಸೋರಿ ಹೋದಾಗ, ಈಗ ನಾನೂ ಸಾಯುತ್ತಿದ್ದೇನೆ ಎಂದು ಪ್ರಪ್ರಥಮ ಬಾರಿಗೆ ಅನ್ನಿಸಿತು. ಅವಳನ್ನ ತನ್ನ ಕಾಲಮೇಲೆ ತೆಗೆದುಕೊಂಡ ರಾಮು, `’ಇದೆ ಕುಮು, ಆನಿದ್ದಿ ಆನು ಇಲ್ಲೇ ಇದ್ದಿ” ಎಂದು ಅವಳ ಕೆನ್ನೆ ತಟ್ಟಿ ಎಬ್ಬಿಸಲು ಪ್ರಯತ್ನಿಸಿದ. ಸ್ವಲ್ಪ ಹೊತ್ತಿನಲ್ಲಿ ಕುಮುದ ಕಣ್ತೆರೆದದ್ದೆ ನಾನು ಅವಳ ಸುತ್ತ ಗಿರಕಿ ಹೊಡೆದು ಹರ್ಷಪಟ್ಟೆ. `’ಅವಳನ್ನ ಒಳಗೆ ಕರ್ಕಂಡು ಹೋಗಿ” ಎಂದು ಯಾರೋ ಅಂದದ್ದೆ, ಒಂದು ಕೈಯಿಂದ ನನ್ನ ಕಾಲನ್ನು ಒಂದು ಕೈಯಿಂದ ಗಂಡನ ಕೈಯನ್ನ ಗಟ್ಟಿಯಾಗಿ ಹಿಡಿದ ಆಕೆ ಏಳಲು ನಿರಾಕರಿಸಿದಳು. ದೊಡ್ಡದಾಗಿ ಕೂಗಿದೆ: `’ಇದು ಕಣ್ರೋ ಇದು….. ಇದೇ ಹೆಣ್ಣು ಮಕ್ಕಳ ಗುಣ ಕಣ್ರೋ” ನನ್ನ ದನಿ ಯಾರಿಗೂ ಕೇಳಲಿಲ್ಲ.
`’ಈ ವಿಷಯ ಕೇಳಿ” ಆಚೆಕೇರಿಯ ಗಣಪತಿಹೆಗಡೆ ವಿಷಯವೊಂದಕ್ಕೆ ಪೀಠಿಕೆ ಹಾಕಿ ಊರವರನ್ನು ಸೆಳೆದ.
`’ನಾಲ್ಕಾರು ವರ್ಷದ ಹಿಂದಿನ ಘಟನೆ. ನನ್ನ ದೂರದ ಸಂಬಂಧಿ, ದೇವಪ್ಪ ಅಂತ. ಎನ್ನ ಮನೆಗೆ ನಾಲ್ಕಾರು ಬಾರಿ ಬಂದಿದ್ದ, ನಿಮ್ಮಲ್ಲಿ ಕೆಲವು ಜನ ನೋಡಿಕ್ಕು. ಆಯುರ್ವೇದ ಡಾಕ್ಟ್ರು. ಉಡುಪಿ ಹತ್ರ ಸಾಸ್ತಾನದಲ್ಲಿ ಶಾಪ್ ಹಾಕ್ಯಂಡಿದ್ದ. ಅವಂಗೆ ಔಷಧಿ ಮಂತ್ರ-ತಂತ್ರ ಏನೇ ಮಾಡಿದ್ರು ಮಕ್ಕಳಾಗಲ್ಲೆ. ಅದಕ್ಕೆ ಗಂಡ ಹೆಂಡತಿ ತೀರ್ಮಾನ ಮಾಡಿ ಒಂದು ಅನಾಥ ಹುಡುಗನ್ನ ದತ್ತಕ ತಗಂಡ. ರಿಜಿಸ್ಟರ್ರು ಮಾಡಿಸ್ದ. ಅನಾಥಾಶ್ರಮದಿಂದ ತಂದ ಹುಡುಗ. ಕುಲ, ಗೋತ್ರ ಎಂಥಾದ್ದಿತ್ತೊ. ಆದ್ರೆ ಅವನ ಹೆಂಡ್ತಿ ಹುಡುಗನ್ನ ಬ್ರಾಹ್ಮಣರ ಹಂಗೆ ಬೆಳೆಸ್ದ. ಉಪನಯನಾನು ಮಾಡ್ದ. ಮೂಲ ಮನೆಗು ಬಂದು ಹೋಗಿ ಮಾಡ್ತಿದ್ದ. ದೇವಪ್ಪಂಗೆ ನಾಲ್ಕು ವರ್ಷದ ಹಿಂದೆ ಉಬ್ಬಸ ಉಲ್ಬಣಿಸಿ ತೀರ್ಕ್ಯಂಡ. ಆಗ ಸಮಸ್ಯೆ ಶುರು ನೋಡಿ. ದತ್ತಕ ರಿಜಿಸ್ಟರ್ ಆಗಿಕ್ಕು, ಆದರೆ ಹುಡುಗಂಗೆ ಕ್ರಿಯಾಧಿಕಾರ ಇಲ್ಲೆ. ಹಿಂದೂ ಧರ್ಮದ ರೀತ್ಯ ದತ್ತಕ ಆಗಲ್ಲೆ ಹೇಳ ತಕರಾರು ಶುರು ಆತು. ದೇವಪ್ಪನ ತಮ್ಮಂದಿರು ಆ ಮಾಣಿಗೆ ಕ್ರಿಯೆ ಹಿಡಿಯ ಅಧಿಕಾರ ಇಲ್ಲೆ ಅಂದ. ಗುರುಗಳನ್ನ ಕೇಳಿದ್ರೆ ಅವನ ತಮ್ಮನೊ ಅಣ್ಣನೊ ಕ್ರಿಯೆ ಹಿಡಿಯವು ಅಂದ ಹೇಳಿ ಸುದ್ದಿ. ಎಷ್ಟು ಬದ್ದವೊ ಎಷ್ಟು ಸುಳ್ಳೊ ಎಂಗೊತ್ತಿಲ್ಲೆ. ಅದೇನೆ ಇದ್ರು ಅವನ ಹೆಂಡ್ತಿ, ಅದೆಲ್ಲ ಬಿಲ್ ಕುಲ್ ಆಗ್ತಿಲ್ಲೆ ಹೇಳಿ ಕೂತ. ಕೆಲವು ಜನ ಅವಳ ಕಡೆ, ಕೆಲವು ಜನ ತಮ್ಮನ ಕಡೆ. ಪರಿಣಾಮ ಏನಾತು ಗೊತ್ತಿದ್ದ?”
ಕುತೂಹಲ ಘಟ್ಟದಲ್ಲಿ ತನ್ನ ಕಥೆ ನಿಲ್ಲಿಸಿದ ಗಣಪತಿ ಸುತ್ತ ನೋಡಿದ. ಇನ್ನೊಂದು ಕ್ಷಣದಲ್ಲಿ ಅವನೇ ಹೇಳುತ್ತಾನಲ್ಲ ಎನ್ನುವ ಉದಾಸಭಾವದಿಂದ ಯಾರೂ ಅಂತ್ಯ ಊಹಿಸಲು ಹೋಗಲಿಲ್ಲ.
`’ಆದದ್ದು ಮತ್ತೆಂತದು ಇಲ್ಲೆ. ಮನೆ ಮನಸ್ಸು ಒಂದಿದ್ದದ್ದು ಎರಡಾತು. ಹಂಗೆ ಕ್ರಿಯೆ ಶ್ರಾದ್ಧಾನು. ಈಗ್ಲು ವರ್ಷವರ್ಷ ಎರಡೆರಡು ಶ್ರಾದ್ಧ ನಡೀತು!”
`’ಒಟ್ಟಿನ ತಲೆಮೇಲೆ ಶ್ರಾದ್ಧ ಮಾಡ್ಸ ಭಟ್ಟರಿಗೆ ಛಾನ್ಸು!” ಹಾನಬ್ಬಿ ಮಂಜುನಾಥ ಕಥೆಗೊಂದು ಗೆರೆ ಎಳೆದು ನಗೆ ಉಕ್ಕಿಸಿದ.
ತನ್ನಲ್ಲು ಒಂದು ಕಥೆಯಿದೆ ಎನ್ನುತ್ತ ಶಂಭು ನಡುವೆ ಬರುತ್ತಿದ್ದಂತೆ, ಕೃಷ್ಣಭಟ್ಟರು ಪರಮಭಾವನನ್ನು ಕರೆದು, `’ನೋಡು ಮಠಕ್ಕೆ ಹೋದವರು ಬಪ್ಲೆ ಇನ್ನೂ ಸುಮಾರು ಹೊತ್ತು ಆಗ್ತು; ಹೆಂಗಸ್ರು ಹುಡುಗ್ರು ರೋಗಿಷ್ಟರು ನವೆಯೊದು ಬ್ಯಾಡ. ಆಚೀಚೆ ಮನೆ ಹೆಂಗಸ್ರಿಗೆ ಹೇಳಿ ಅವಲಕ್ಕಿ ಆಸ್ರಿಗೆ ಮಾಡ್ಸು” ಎಂದು ತಮ್ಮ ಮಾನವೀಯತೆ ತೋರಿಸಿದ್ದು ಸಮಂಜಸವೆನ್ನಿಸಿತಾದರು ಇದೇ ಮಾನವೀಯ ಭಾವನೆ ಸಂಪ್ರದಾಯದ ಆಚರಣೆಯಲ್ಲಿಯು ಇದ್ದಿದ್ದರೆ ಎನ್ನಿಸಿತು.
ಮತ್ತೆ ಶಂಭುವಿನ ಕೀರಲು ಕಂಠ ಎಚ್ಚರಿಸಿತು. ಓಹ್, ಆತ ನನಗೆ ತಿಳಿದ ಕಥೆಯನ್ನೆ ಹೇಳುತ್ತಿದ್ದಾನೆ….. ಶಂಭುವಿನ ಕಥೆಯ ಹುಡುಗಿ ಗೊತ್ತಿದ್ದವಳೆ…..
****
ಆಕೆ ನನ್ನ ಹಿರಿಯ ಮಗಳು ಕುಸುಮಳಿಗೆ ಕಾಲೇಜಿನಲ್ಲಿ ಕ್ಲಾಸ್ಮೆಟೇ ಆಗಿದ್ದವಳು. ೧೦-೧೨ ವರ್ಷಗಳ ಹಿಂದೆ ಅವಳ ನೆಂಟ ಶಂಭುವಿನ ಮನೆಗೆ ಬಂದವಳನ್ನು ಕುಸುಮ ನಮ್ಮ ಮನೆಗು ಕರೆದುಕೊಂಡು ಬಂದಿದ್ದಳು. ನನ್ನನ್ನು ಮಾವಾ ಎಂದು ಪ್ರೀತಿಯಿಂದ ಕರೆಯುತ್ತ ಓಡಾಡಿಕೊಂಡಿದ್ದ ಲವಲವಿಕೆಯ ಹುಡುಗಿ. ಆಮೇಲೆ ಒಂದು ವರ್ಷಕ್ಕೇ ಅವಳ ಮದುವೆಯಾಯಿತು ಅಂತ ಕೇಳಿದೆ. ಶಂಭುವಿನ ಜೊತೆಗೆ ಕುಸುಮಳೂ ಮದುವೆಗೆ ಹೋಗಿ ಬಂದಿದ್ದಳು. ಆದರೆ ಅವಳ ಮದುವೆಯ ಅನಂತರದ ದಿನಗಳು ಸುಖದಾಯಕವಾಗಿರಲಿಲ್ಲವಂತೆ. ಶಂಭುವೇ ಯಾವಾಗಲೋ ಹೇಳಿದ್ದ. ಆಕೆಯನ್ನು ಮದುವೆಯಾದವ ಅರೆಪಿರ್ಕಿಯಾಗಿದ್ದನಂತೆ. ಅವಳಿಗೆ ಹಿಂಸೆ ಕೊಡುತ್ತಲೇ ಮಗುವೊಂದನ್ನು ಕೈಗೆ ಕೊಟ್ಟು; ಆಗಾಗ ಹುಚ್ಚು ಹೆಚ್ಚಾಗಿ ಹೆಂಡತಿಗೆ ಹೊಡೆಯೋದು ಮಗನಿಗೆ ಒದೆಯೋದು, ಎತ್ತಿ ಬಿಸಾಡೋದು ಎಲ್ಲ ಶುರು ಮಾಡಿದಾಗ ಆಕೆ ಹೆದರಿ ತವರು ಮನೆಗೆ ಓಡಿಬಂದಿದ್ದಳಂತೆ. ಅವನಿಗೀಗ ಔಷಧಿ ಕೊಡಿಸಿದ್ದೇವೆ, ಸರಿಯಾಗಿದ್ದಾನೆ ಎಂದು ಕರೆಯಲು ಬಂದ ಮಾವನ ಮಾತಿನಲ್ಲಿ ನಂಬಿಕೆ ಹುಟ್ಟದೆ ಇವಳು ತವರು ಮನೆಯಲ್ಲಿಯೆ ಉಳಿದಳಂತೆ. ಅದಾದ ಕೆಲವು ದಿನಗಳ ಬಳಿಕ ಪೇಟೆಯಲ್ಲಿ ಸಿಕ್ಕಿದ ಅವಳನ್ನು ಕುಸುಮ ನಮ್ಮಮನೆಗೆ ಕರೆತಂದಿದ್ದಳು. ಅವಳ ಎಲ್ಲ ಕಥೆ ಕೇಳಿದವನು, ನಿನಗಿನ್ನು ಚಿಕ್ಕ ವಯಸ್ಸು, ಸುಮ್ಮನೆ ಡೈವರ್ಸ್ ತಗೊ. ಡಿಗ್ರಿ ಮುಗಿಸಿದೀಯ, ಕೆಲಸ ಸಿಗುತ್ತೆ, ಒಳ್ಳೇ ಗಂಡು ಸಿಕ್ಕಿದರೆ ಮದುವೇನು ಆಗಬಹುದು ಎಂದು ಅವಳ ಮನವೊಲಿಸಿ, ಶಂಭುವಿನ ಜೊತೆಗೆ ಅವರ ಮನೆಗೆ ಹೋಗಿ ಅವಳ ಅಪ್ಪನನ್ನ ಒಪ್ಪಿಸಿ ಡೈವರ್ಸ್ ಕೊಡಿಸಿಯಾಗಿತ್ತು. ಮತ್ತೆರಡು ವರ್ಷದಲ್ಲಿ ಅವಳ ಗಂಡ ಎನ್ನಿಸಿಕೊಂಡವನು ತೆಂಗಿನ ಮರ ಹತ್ತಿ ಬಿದ್ದು ತಲೆಯೊಡೆದು ಸತ್ತನಂತೆ. ಹಿಂದೂ ಧರ್ಮದಲ್ಲಿ ವಿಚ್ಛೇದನ ಅನ್ನೋದು ಇಲ್ಲ, ಅವನ ಕ್ರಿಯೇನ, ಮೊಮ್ಮಗನೇ ಮಾಡಬೇಕು ಅಂತ ಮಾವ ಮೊಮ್ಮಗನನ್ನ ಕರೆದೊಯ್ಯಲು ಬಂದಿದ್ದನಂತೆ. ಈಗ ಏನು ಮಾಡಬೇಕು? ಕಳಿಸಿಕೊಡಬಾರದು ಎಂದಿದ್ದೆ ನಾನು.
****
ಮಠದಿಂದ ನಿರ್ದೇಶನ ಬಂತು. ಕೃಷ್ಣಭಟ್ಟರ ಮಾತು ಸರಿ, ಒಮ್ಮೆ ಸತ್ತವನ ಅಣ್ಣ ಕ್ರಿಯೆ ಹಿಡಿಯಲು ಒಪ್ಪದಿದ್ದಲ್ಲಿ ಅದೇ ಗೋತ್ರದ ಬೇರೆಯವರು ಹಿಡಿಯಲಿ ಎನ್ನುವುದು ಗುರುವಾಣಿ. ಭಟ್ಟರು ಗೆಲವಿನ ಆಢ್ಯತೆಯಿಂದ ಸುತ್ತ ನೋಡಿದರು. `’ಅದೇ ಗೋತ್ರದವರು ಊರಲ್ಲಿ ಯಾರೂ ಇಲ್ದಿದ್ರೆ. ನಮ್ಮೂರಲ್ಲಿ ಯಾರೂ ಇಲ್ಲೆ” ಎಂದು ಯಾರೋ ಅಂದ ಮಾತು ಭಟ್ಟರಿಗೆ ಕೇಳಲಿಲ್ಲವೊ, ಅವರು ಕೇಳಿಸಿಕೊಳ್ಳಲಿಲ್ಲವೋ, ಮಾತು ಹುಗಿದುಹೋಯಿತು.
ಒಂದು ವರ್ಷ ಉಂಚಳ್ಳಿ ಪಾಠ ಶಾಲೆಯಲ್ಲಿ ಕಲಿತು ಬಂದ ಶಂಭುವಿನ ಮಗ ಎದುರು ಬಂದು ಹೇಳಿದ: “ಆನೂ ಮನುಸ್ಮೃತೀನ, ಸೂತ್ರಗಳನ್ನ ಅಷ್ಟಿಷ್ಟು ಓದಿದ್ದಿ. ಮಗ ಇಲ್ದಿದ್ರೆ ದೌತ್ರನಿಗೆ ಅಂದ್ರೆ ಮಗಳ ಮಗನಿಗೆ ಕ್ರಿಯಾಧಿಕಾರ ಇದ್ದು ಹೇಳಿ ಮನು ಹೇಳ್ತ. ಕುಸುಮಕ್ಕನ ಮಗಂಗೆ ಉಪನಯನಾನು ಆಯ್ದು. ಅವನೇ ಹಿಡೀಲಿ.”
“ಮುಚ್ಚು ಬಾಯಿ” ಭಟ್ಟರು ಗದರಿದರು. “ಅರೆಬರೆ ಓದ್ಕ್ಯಂಡ ನಿಂಗ್ಳಂತರಿಂದ್ಲೆ ಧರ್ಮ ನಾಶ ಆಗ್ತಿದ್ದು. ಮನು ಜೊತೆಗೆ ನಮಗೆ ಆಧಾರವಾದ ಧರ್ಮಸಿಂಧು, ನಿರ್ಣಯಸಿಂಧು, ಬೌಧಾಯನ ಸೂತ್ರ ಎಲ್ಲವನ್ನು ಸಮನ್ವಯ ಮಾಡಿದ್ರೇನೆ ಪರಂಪರೆ ಉಳಿಯದು. ಅಷ್ಟಕ್ಕು ಅಪ್ಪ, ಅಮ್ಮ ಇದ್ದೋರು ಬೇರೆ ಕ್ರಿಯೆ ಹಿಡಿದ್ರೆ ಏನಾಗ್ತು ಗೊತ್ತಿದ್ದ? ಹೋಗಾಚೆ, ಬಂದ್ಬಿಟ್ಟ” ಭಟ್ಟರ ಬಾಯಿಗೆ ಬೆದರಿದ ಆತ ಹಿಂದೆ ಹಿಂದೆ ಸರಿದು ಮಾಯವಾದ. ಊರವರತ್ತ ತಿರುಗಿದ ಭಟ್ಟರು `’ಹುಂ, ಗುರುವಾಣಿ ಆತನ, ಶುರು ಮಾಡಿ” ಎಂದದ್ದೆ ಮತ್ತೆ ಅಣ್ಣ ನಾಯಕನಾದ. ಕೊನೆಯ ಪ್ರಯತ್ನ ಮಾಡಲು ಬಂದ ಪರಮಭಾವ ತುಸು ಕಟುವಾಗಿಯೆ ಹೇಳಿದ: `’ಭಟ್ರೆ, ಆನೂ ಬ್ರಾಹ್ಮಣನೆ. ಎನಗು ಪರಂಪರೆ ಬಗ್ಗೆ ಗೌರವ ಇದ್ದು. ತನ್ನ ಸಂಸ್ಕಾರಾನ ಹೆಣ್ಮಕ್ಳೆ ಮಾಡ್ಲಿ ಹೇಳದು
ಭಾವಂಗು ಇತ್ತು, ಎನ್ಹತ್ರ ಹೇಳಿದ್ದ. ಅವನಿಚ್ಛೇನ ಸಲ್ಲಿಸೋದು ನ್ಯಾಯ ಅಲ್ದ? ಇದನ್ನೂ ಆಪದ್ಧರ್ಮ ಅಂತ ತಿಳ್ಕಳಿ.
ನೀವೇ ಯೋಚನೆ ಮಾಡಿ. ಮುಂಚೆ ಸತಿ ಪದ್ಧತಿ ಇತ್ತು. ಅನಂತರದಲ್ಲಿ ಗಂಡ ಸತ್ತಕೂಡ್ಲೆ ಹೆಂಡ್ತಿಯ ಮಂಡೆ ಬೋಳಿಸಿ, ಬಳೆ ಒಡೆದು ಕೆಂಪುಸೀರೆ ಉಡಿಸ್ತಿದ್ದ. ಯಾರೋ ತಿರುಗಿಬಿದ್ದದ್ದೆ ಬದಲಾವಣೆ ಆತು. ಧರ್ಮ ಅನ್ನೋದು ಒಳ್ಳೆಯ ಬದಲಾವಣೆಗೆ ಒಪ್ಪಿಕೊಂಡ್ರಷ್ಟೆ ಉಳೀತು. ಇಲ್ದಿದ್ರೆ ನಿಂತ ನೀರಾಗಿ ಗಬ್ಬೆದ್ದು ನಾಶ ಆಗ್ತು. ಈಗ ಅಗತ್ಯ ಇದ್ದಲ್ಲಿ, ಅನಿವಾರ್ಯ ಆದಲ್ಲಿ ಹೆಣ್ಮಕ್ಳಿಗು ಅಧಿಕಾರ ಇದ್ದು ಹೇಳಿ ನಾವು ಒಂದು ಪರಂಪರೆ ಶುರು ಮಾಡಿದ್ರೆ ಮುಂದೆ ಅದೇ ಇತಿಹಾಸ ಆಗ್ತನ. ವೈದಿಕ ಕರ್ಮದ ಗಮ್ಯ ಸಾತ್ವಿಕಾನಂದ. ಭಾವನೆ, ಅದಕ್ಕೆ ತಕ್ಕಂತಹ ಕ್ರಿಯೆ ಎರಡೂ ಸೇರವು. ಆಪ್ತ ಭಾವನೆಗಳಿಲ್ಲದವನಿಂದ ಜ್ಞಾತಿಯೇ ಇದ್ದಿಕ್ಕು. ಕ್ರಿಯೆ ಮಾಡಿಸಿದರೆ ಅದಕ್ಕೇನು ಅರ್ಥ? ಮತ್ತೆ ಅಂತ್ಯೇಷ್ಟಿಗೆ ಪಿತೃಮೇಧ ಹೇಳ್ತ. ಇದು ಯಜ್ಞದಷ್ಟೇ ಪವಿತ್ರ. ಬೇರೆ ಯಜ್ಞಗಳಲ್ಲಿ ದೇವತೆಗಳಿಗೆ ಕೃತಜ್ಞತಾ ಸಮರ್ಪಣೆ ಆದ್ಹಂಗೆ ಇಲ್ಲಿ ಅಪ್ಪ ಅಮ್ಮಂಗೆ ಕೃತಜ್ಞತಾ ಸಮರ್ಪಣೆ. ಅಲ್ಲಿಗೆ ಮಕ್ಳೆ ಮಾಡಕಲ್ದ?”
ಇಷ್ಟಕ್ಕೆ ಭಟ್ಟರ ಕಠೋರ ಕರ್ಮಠ ಮನಸ್ಸು ಅವಮಾನಗೊಂಡಿರಬೇಕು. ಅದು ನಿಷ್ಠುರ ಏಕವಚನದಲ್ಲಿ ಸ್ಫೋಟಗೊಂಡಿತು. `’ಏ ಮಹಾನುಭಾವ, ಪರಂಪರೆ ಬದಲಿಸೋವಷ್ಟು ದೊಡ್ಡ ಮನುಷ್ಯ ನೀನೂ ಅಲ್ಲ, ಆನೂ ಅಲ್ಲ. ಗುರುವಾಣಿ ಧಿಕ್ಕರಿಸೋ ಉದ್ಧಟತನ ಬ್ಯಾಡ, ಊರನ್ನ ಒಡೆಯೊ ಪ್ರಯತ್ನ ಬಿಟ್ಬಿಡು. ಬೇರೆ ಊರ್ನವು ಇದ್ರಲ್ಲಿ ತಲೆಹಾಕಿದ್ರೆ ಊರವರು ಸುಮ್ನಿರ್ತ್ವಿಲ್ಲೆ. ಬಾಯ್ಮುಚ್ಕ್ಯಂಡಿರೋದು ಒಳ್ಳೇದು” ಎಂದದ್ದೆ `’ಹುಂ, ಎತ್ರೋ” ಎಂದು ಆಜ್ಞೆ ಮಾಡಿದರು.
ಸೊಂಟಕ್ಕೆ ಸಾಟಿಪಂಚೆ ಬಿಗಿದಿದ್ದ ಅಣ್ಣ ಹೇಗೆ ಎನ್ನುವಂತೆ ವ್ಯಂಗ್ಯದ ನಗುವನ್ನು ಪರಮಭಾವನತ್ತ ಬೀರಿದ. ಪರಮಭಾವ ಅಸಹಾಯನಾಗಿ ಹಿಂದೆ ಸರಿದ. ಭಟ್ಟರು ಅಧಿಕಾರವಾಣಿ ಮುಂದುವರಿಸಿದರು: `’ಸೊಡ್ಲೆಗುಡ್ಡೆಗೆ ಬಪ್ಪರೆಲ್ಲ ಬರ್ಲಿ. ಹೆಂಡ್ತಿ ಮಕ್ಳು ಮಂತ್ರಾಗ್ನಿ ಆದ್ಮೇಲೆ ಕಾಷ್ಠ ಹಾಕ್ಲಕ್ಕು. ಆದ್ರೆ ಎಚ್ಚರ ತಪ್ಪಿ ಬಿದ್ದಿದ್ದ ಆ ಕೂಸು ಬ್ಯಾಡ. ಮತ್ತೆ ದಾರೀಲಿ ತಲೆ ತಿರುಗಿ ಬಿದ್ರೆ ಕಷ್ಟ” ಶವ ಎತ್ತಿದ ಬಳಿಕ ಹಾಸಿದ್ದ ಚಾಪೆಯನ್ನೆ ಒತ್ತಿಹಿಡಿದ ಕುಮುದ ಮೊಳಕಾಲಿಗೆ ತಲೆಯೊತ್ತಿ ಬಿಕ್ಕಳಿಸುವುದನ್ನು ನಿಯಂತ್ರಿಸಲು ಒದ್ದಾಡತೊಡಗಿದಳು. ಅವಳೊಬ್ಬಳನ್ನೆ ಬಿಡುವುದು ಬೇಡ ಎಂದ ಪರಮಭಾವನ ಮಾತಿನಂತೆ ರಾಮುವೂ ಅವಳ ಹಿಂದೆಯೇ ಕುಳಿತು ಅವಳ ಬೆನ್ನು ನೇವರಿಸಿ ಸಮಾಧಾನಿಸತೊಡಗಿದ. ರೋಷ ಉಕ್ಕಿ ಹೊರಬಂದು ಭಟ್ಟರ ತಲೆಯಮೇಲೆ ರಪ್ಪೆಂದು ಬಾರಿಸಹೋದೆ. ಅವರು ಏನೂ ಆಗದವರಂತೆ ತಮ್ಮ ಜುಟ್ಟನ್ನ ಸವರಿಕೊಳ್ಳುತ್ತ ಚಟ್ಟದ ಹಿಂದೆ ಸರಿದರು.
ನೊಣಗಳಂತೆ ಚಟ್ಟದ ಸುತ್ತ ಸಾಗುತ್ತಿದ್ದ ಜನರನ್ನು ಕಂಡು ಚೀತ್ಕರಿಸಿದೆ: `’ಥೂ, ನಾಮರ್ದಗಳ, ನೀವು ಬೆಂಕಿ ಕೊಡಬೇಕಾಗಿದ್ದು ನನ್ನ ಹೆಣಕ್ಕಲ್ರೋ, ನಿಮ್ಮ ಗೊಡ್ಡು ಸಂಪ್ರದಾಯಕ್ಕೆ, ಕರುಳಿಲ್ಲದ ಕಟ್ಟಳೆಗಳಿಗೆ….” ನನ್ನ ದನಿ ಯಾರಿಗೂ ಕೇಳಲಿಲ್ಲ. ಹೆಣದೊಡನೆ ಸಾಗುವ ಮನಸ್ಸಾಗದೆ ಹಾರಿಬಂದು ಕುಮುದಳ ಪಕ್ಕ ಕುಳಿತು, “ಧೈರ್ಯ ತಗೋ ಮಗಳೆ, ಅವರು ಹೆಣದ ಸಂಸ್ಕಾರ ಮಾಡಲಿ, ನನ್ನ ಸಂಸ್ಕಾರ ನೀನೇ ಮಾಡುವುದು….. ಇದೆ, ನಾನು ಸುಡುಗಾಡಿಗೆ ಹೋಗಿಲ್ಲ, ಇಲ್ಲೇ ಇದ್ದೇನೆ….. ನಿನ್ನ ಪಕ್ಕದಲ್ಲಿಯೆ…..” ಎಂದು ಪುನಃ ಪುನಃ ಹೇಳಿದೆ. ಫಕ್ಕನೆ ನನ್ನ ದನಿ ಕೇಳಿಸಿತೇನೊ ಎನ್ನುವ ಹಾಗೆ ಅಥವಾ ಯಾವುದೋ ಭ್ರಮೆಯಿಂದಲೊ ಕುಮುದ ತಲೆ ಹೊರಳಿಸಿ ನಾನಿದ್ದ ಪಾರ್ಶ್ವ ನೋಡುತ್ತಲೆ ಹಾರಿ ಅವಳ ಕಣ್ಣ ರೆಪ್ಪೆಯೊಳಗೆ ಕುಳಿತೆ.
Comments are closed.