ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಫ಼ೆಬ್ರವರಿ 2015 > ಅಂತರಿಕ್ಷ ಯಾನ ಮತ್ತು ಅಂತರ್ಯಾನ

ಅಂತರಿಕ್ಷ ಯಾನ ಮತ್ತು ಅಂತರ್ಯಾನ

ಎಸ್.ಎಲ್. ಭೈರಪ್ಪ ಅವರ `ಯಾನ’ ಕಾದಂಬರಿಯನ್ನು ಕುರಿತು ಬೆಂಗಳೂರಿನಲ್ಲಿ ೨೧-೧೨-೨೦೧೪ರಂದು ನಡೆದ (ಆಯೋಜನೆ: ಭೈರಪ್ಪ ಅಭಿಮಾನಿ ಬಳಗ ಮತ್ತು ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ) ವಿಚಾರಸಂಕಿರಣದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣ.

yanaಯಾನ (ಕಾದಂಬರಿ)
ಲೇಖಕರು: ಎಸ್.ಎಲ್. ಭೈರಪ್ಪ
ಪ್ರಕಾಶಕರು: ಸಾಹಿತ್ಯ ಭಂಡಾರ
ಜಂಗಮಮೇಸ್ತ್ರಿ ಗಲ್ಲಿ, ಬಳೇಪೇಟೆ
ಮಲಬಾರ್ ಹೋಟೆಲ್ ಎದುರು,
ಬೆಂಗಳೂರು – ೫೬೦ ೦೫೩
ಬೆಲೆ: ರೂ. ೧೯೦.

ಪರಿಚಿತ ಲೋಕದಲ್ಲಿ ಸ್ವ-ಇಚ್ಛೆಯಿಂದಲೂ ಕೆಲವು ಸ್ವೀಕೃತ ಕಟ್ಟುಪಾಡುಗಳಿಗೊಳಪಟ್ಟೂ ನಡೆಯುವ ಸ್ತ್ರೀಪುರುಷ ಸಂಯೋಗವು ಸೂರ್ಯಮಂಡಲದಾಚೆಯ ಅತಿದೂರದ ಕ್ಷೇತ್ರದಲ್ಲಿ ಎಂದರೆ ಅಂಧಕಾರಮಯವೂ ಗುರುತ್ವಾಕರ್ಷಣಾದಿ ಲಕ್ಷಣಗಳಿಂದ ಮುಕ್ತವೂ ಆದ ನೆಲೆಯಲ್ಲಿ – ಸಂತಾನಪ್ರಾಪ್ತಿಯ ಏಕೈಕ ಉದ್ದೇಶದಿಂದ – ಪೂರ್ವಯೋಜನೆಯಂತೆ ನಡೆಯಬೇಕಾದಾಗ ಮಾನವಸಹಜ ಮಾನಸಿಕ-ಸಾಮಾಜಿಕ ನಿಯಮಾವಳಿಯ ಆವರಣ ಇದ್ದೀತೆ? ಇರುವುದು ಅವಶ್ಯವೆ?
ಈ ಜಾಡಿನ ಜಿಜ್ಞಾಸೆಗೆ ಸಂದರ್ಭವನ್ನು ಕಲ್ಪಿಸುವ ದೃಷ್ಟಿಯಿಂದ ಮೂರು ಅಂತಸ್ತಿನ ಮುನ್ನೂರು ಅಡಿ ಉದ್ದ ಮತ್ತು ನೂರೈವತ್ತು ಅಡಿ ಅಗಲದ ಮತ್ತು ಸರ್ವಾಂಗಗಳಲ್ಲೂ ಸ್ವಯಂಪೂರ್ಣವಾದ ಆಕಾಶನೌಕೆಯಲ್ಲಿ ಒಂದು ಹೆಣ್ಣು-ಗಂಡು ಜೋಡಿಯನ್ನು ೪-೬ ಜ್ಯೋತಿರ್ವರ್ಷ ದೂರದ ಒಂದು ನಕ್ಷತ್ರಮಂಡಲದತ್ತ ಉಡ್ಡೀನಗೊಳಿಸುವುದು, ಅನಿಶ್ಚಿತಾವಧಿ ಆ ಸನ್ನಿವೇಶದಿಂದ ನಿಯಂತ್ರಿತರಾದವರ ನಡುವಣ ಸಂವಾದ-ವಿವಾದಗಳು, ವೈಚಾರಿಕತೆ-ಭಾವನಾತ್ಮಕತೆಗಳ ಮುಖಾಮುಖಿ; – ಇದು ಸ್ಥೂಲವಾಗಿ ಎಸ್.ಎಲ್. ಭೈರಪ್ಪನವರ `ಯಾನ’ ಕಾದಂಬರಿಯ ಹಂದರ. ಆತ್ಯಂತಿಕ ಪ್ರಶ್ನೆಗಳಿಗೆ ಸರಳ ಉತ್ತರಗಳು ಲಭಿಸಲಾರವು. ಆದರೆ ಜಿಜ್ಞಾಸೆಯಿಂದ ಸೃಷ್ಟಿಸ್ವರೂಪವನ್ನು ಕುರಿತು ಒಂದಷ್ಟುಮಟ್ಟಿಗಾದರೂ ಹೆಚ್ಚಿನ ಸ್ಪಷ್ಟೀಕರಣ ಜನಿಸಬಲ್ಲದು. ಈ ಆಂತರಿಕ `ಯಾನ’ವೇ ಮಹತ್ತ್ವದ್ದು.
ಅನ್ವೇಷಣಶೀಲತೆ
ಸದಾ ಹೊಸ ಮಂಥನಕ್ಕೆ ಆಸ್ಪದ ಕೊಡುವ ವಸ್ತುವನ್ನು ಅರಸುತ್ತ, ಹೀಗೆ ತಮ್ಮ ಇದುವರೆಗಿನ ಕಾದಂಬರಿಗಳಲ್ಲಿ ಒಂದೊಂದನ್ನು ವಿಶಿಷ್ಟವಾಗಿಸಿದ್ದಾರೆ ಎಸ್.ಎಲ್. ಭೈರಪ್ಪ. ಅವರ ಒಂದೊಂದು ಕಾದಂಬರಿಯ ಹಿಂದೆಯೂ ಎಷ್ಟು ಅಗಾಧ ಸಿದ್ಧತೆ, ಅಧ್ಯಯನ, ಅಂತರ್ಮಥನ ನಡೆದಿರುತ್ತದೆ – ಓದುಗರಿಗೆ ಎಲ್ಲರಿಗೂ ತಿಳಿದಿದೆ. ಹೀಗೆ ಅವರ ಯಾವುದೇ ಕಾದಂಬರಿಯನ್ನು ಓದಿದರೆ ತಮಗೆ ಒಂದಷ್ಟು ಹೊಸದೇನೋ ದಕ್ಕುತ್ತದೆ ಎಂಬ ಭರವಸೆ ಅವರ ಓದುಗರಲ್ಲಿ ಇರುತ್ತದೆ. ಹೀಗಾಗಿ ಮೇಲ್ನೋಟಕ್ಕೆ ಒಗಟೆನಿಸುವ ವಸ್ತುಗಳನ್ನು ಇಟ್ಟುಕೊಂಡ ಅವರ ಕಾದಂಬರಿಗಳಿಗೂ ಓದುಗರ ಕೊರತೆ ಇರುವುದಿಲ್ಲ – ಎನ್ನುವುದೇ ಅವರ ವಿಮರ್ಶಕರ ಪಾಲಿಗೆ ಒಗಟಾಗಿ ಪರಿಣಮಿಸಿದೆ. ಒಂದು ವ್ಯತ್ಯಾಸ ಇರಬಹುದು. ಭೈರಪ್ಪನವರ ಹಿಂದಿನ ಎಂದರೆ ಮಧ್ಯಾವಧಿಯ ಕಾದಂಬರಿಗಳಲ್ಲಿ ಲೇಖಕರು ಅರ್ಧದಾರಿ ಬಂದು ಓದುಗರನ್ನು ಸಂಧಿಸುತ್ತಾರೆ. ಆದರೆ ಈಚಿನ `ಆವರಣ’, `ಕವಲು’, `ಯಾನ’ – ಇವುಗಳಲ್ಲಿ ಓದುಗನು ಸಿದ್ಧಗೊಂಡು ಅರ್ಧದಾರಿ ಹೋಗಿ ಲೇಖಕರನ್ನು ಸಂಧಿಸಬೇಕಾಗಿದೆ. ಕೆಲವು ಜಾಹೀರಾತುಗಳಲ್ಲಿ ಒಂದು ಅಡಿಟಿಪ್ಪಣಿ ಸಣ್ಣ ಅಕ್ಷರಗಳಲ್ಲಿ ಮುದ್ರಿತವಾಗಿರುತ್ತದೆ – `ಕಂಡಿಷನ್ಸ್ ಅಪ್ಲೈ’ ಎಂದು. ಕೆಲವು ಬಗೆಯ ಬರವಣಿಗೆಗಳಿಗೂ ಇಂತಹ ಷರತ್ತು ಅನ್ವಯವಾಗಬಹುದೇನೊ.
ನೆಲದ ಮೇಲೆ ವಾಸವಾಗಿರುವವರ ಮನಸ್ಸಿನೊಳಗಿನ ವ್ಯಾಪಾರಗಳನ್ನು ವಿಶ್ಲೇಷಿಸುತ್ತ ಬಂದಿರುವ ಭೈರಪ್ಪ ಈಗ ಆಕಾಶಕ್ಕೇ ಲಗ್ಗೆಯಿಟ್ಟಿದ್ದಾರೆ.
ಹಳಬ ಚಲನಚಿತ್ರಪ್ರೇಮಿಗಳಿಗೆ ಅರವತ್ತು ವರ್ಷ ಹಿಂದಿನ `ಮೇಲಾ’ ಹಿಂದೀ ಚಿತ್ರದ ಪ್ರಸಿದ್ಧ ಹಾಡು ನೆನಪಿರಬಹುದು:
ಧರತೀ ಕೋ ಆಕಾಶ್ ಪುಕಾರೇ
ಆಜಾ ಆಜಾ
ಪ್ರೇಮದ್ವಾರೇ ಆನಾಹೀ ಹೋಗಾ
ಝೂಟೇ ಬಂಧನ್ ತೋಡ್‌ಕೇ ಸಾರೇ….
`ಯಾನ’ದ ವಸ್ತುವನ್ನು ಆ ಹಾಡು ಸುಂದರವಾಗಿ ಸಂಗ್ರಹಿಸಿತ್ತು.
`ಮಾಂತ್ರಿಕ’ ಮನೋಭಂಗಿ
ಈಗಿನ `ಕ್ಲೀಷೆ’ ಪರಿಭಾಷೆಯನ್ನು ಬಳಸುವುದಾದರೆ, `ಮ್ಯಾಜಿಕಲ್ ರಿಯಲಿಸ್ಮ್’ ತಾಂತ್ರಿಕತೆ ಭೈರಪ್ಪನವರ ಹಿಂದಿನ ಯಾವುದೇ ಕೃತಿಗಿಂತ ಹೆಚ್ಚಾಗಿ `ಯಾನ’ ಕಾದಂಬರಿಯಲ್ಲಿ ಬಳಕೆಯಾಗಿದೆ.
ಸಾಮಾನ್ಯವಾಗಿ `ಮ್ಯಾಜಿಕಲ್ ರಿಯಲಿಸ್ಮ್’ ಪ್ರವರ್ತಕರಲ್ಲಿ ಪ್ರಮುಖನೆಂದು ಕಳೆದ ವರ್ಷ ನಿಧನನಾದ ಲ್ಯಾಟಿನ್ ಅಮೆರಿಕ ಕೊಲಂಬಿಯದ ನೊಬೆಲ್ ಪುರಸ್ಕೃತ ಕಾದಂಬರಿಕಾರ ಗೇಬ್ರಿಯಲ್ ಗಾರ್ಸಿಯ-ಮಾರ್ಕೆಸ್ ಹೆಸರನ್ನು ಹೇಳುವುದು ವಾಡಿಕೆ. ವಾಸ್ತವವಾಗಿ `ಮ್ಯಾಜಿಕಲ್ ರಿಯಲಿಸ್ಮ್’
(`Magischer Realismus’) ಪದಪುಂಜವನ್ನು ಟಂಕಿಸಿದವನು ಫ್ರಾಂಜ್ ರೋ (Franz Roh) ಎಂಬ ಜರ್ಮನ್ ವಿಮರ್ಶಕ – ೧೯೨೫ರಷ್ಟು ಹಿಂದೆ. ಆಗಿನ ವೀಮಾರ್ ರಿಪಬ್ಲಿಕ್ ಭಾಗದಲ್ಲಿ ಚಿತ್ರಕಲೆಯಲ್ಲಿ ಇಂಪ್ರೆಶನಿಸ್ಮ್ ಮತ್ತು ಎಕ್ಸ್‌ಪ್ರೆಶನಿಸ್ಮ್ ಎರಡರ ಉತ್ತಮಾಂಶಗಳ ಬೆಸುಗೆ ಎಂಬ ಅರ್ಥದಲ್ಲಿ `ಮ್ಯಾಜಿಕಲ್ ರಿಯಲಿಸ್ಮ್’ ಶಬ್ದಪ್ರಯೋಗ ಬಳಕೆಗೆ ಬಂದಿತು. ಪರಿಚಿತ ವಸ್ತುವನ್ನು ಅಪರಿಚಿತ ವಿಧಾನಗಳಲ್ಲಿ ಚಿತ್ರಿಸುವುದರ ಮೂಲಕ ಪ್ರಕೃತಿಯ ನಿಗೂಢತೆಗೆ ಗಮನ ಸೆಳೆಯುವುದು, ಹೀಗೆ ಮನುಷ್ಯನಿಗೂ ಪ್ರಕೃತಿಗೂ ನಡುವಣ ಜೈವಿಕಸಂಬಂಧವನ್ನು ಹೆಚ್ಚು ಸಾಂದ್ರವಾಗಿ ಗ್ರಹಿಸಲು ಯತ್ನಿಸುವುದು – ಎಂದು ಸ್ಥೂಲವಾಗಿ ಅದರ ಅರ್ಥ.
ವಾಸ್ತವ ಮತ್ತು ಊಹಾಗಮ್ಯಗಳನ್ನು ಪರಸ್ಪರ ಅಭಿಮುಖಗೊಳಿಸುವು ದರಿಂದ ಹೊಸ ಒಳನೋಟಗಳೂ ಅನುಭವಸಾಂದ್ರತೆಯೂ ಲಭ್ಯವಾಗಬಲ್ಲವು. ಇಂತಹ `ಜಕ್ಸ್‌ಟಪೋಸಿಂಗ್’ ವಿನ್ಯಾಸವೇ `ಯಾನ’ದ ಭಿತ್ತಿಯಾಗಿರುವುದು.
ವಿಜ್ಞಾನ ಮತ್ತು ಸಾಹಿತ್ಯ
ನಮ್ಮಲ್ಲಿ ಜ್ಞಾನಸಂವಹನ ಹೇಗೆ ನಡೆಯುತ್ತದೆ ಎಂಬುದನ್ನು ಕುರಿತು ಯೋಚಿಸುವಾಗ ಒಂದು ಸಂಗತಿ ಎದ್ದುಕಾಣುತ್ತದೆ. ತತ್ತ್ವಶಾಸ್ತ್ರವಾಗಲಿ ಇತಿಹಾಸವಾಗಲಿ ವಿಜ್ಞಾನವಾಗಲಿ – ಅತ್ಯಧಿಕಪ್ರಮಾಣದ ಜನಸಾಮಾನ್ಯರಿಗೆ ಅದು ತಲಪುತ್ತ ಬಂದಿರುವುದು ಜನಪ್ರಿಯ ಸಾಹಿತ್ಯಮಾಧ್ಯಮದ ಮೂಲಕವೇ ಹೊರತು ಶುದ್ಧ ಶಾಸ್ತ್ರೀಯ ವಾಙ್ಮಯದ ಅಭ್ಯಾಸದ ಮೂಲಕ ಅಲ್ಲ. ನಮ್ಮ ತತ್ತ್ವಶಾಸ್ತ್ರಪರಂಪರೆಯ ಪರಿಚಯ ಜನರಿಗೆ ಆಗಿರುವುದು ಪುರಾಣಪ್ರವಚನಾದಿಗಳ ಮೂಲಕವೇ. ಜನಸಾಮಾನ್ಯರಲ್ಲಿ ಶೇ. ೯೦ ಭಾಗದಷ್ಟು ಮಂದಿಗೆ ಮೂಲ ಶಾಸ್ತ್ರೀಯ ಕೃತಿಗಳ ನೇರ ಪರಿಚಯ ಸುತರಾಂ ಇರುವುದಿಲ್ಲವೆಂದೇ ಹೇಳಬಹುದು. ಇತಿಹಾಸದ ವಿಷಯವೂ ಅಷ್ಟೆ. ಶಾಸನಗಳ ಮತ್ತಿತರ ಆಧಾರವಾಙ್ಮಯದ ಅಭ್ಯಾಸದಿಂದ ಜನಸಾಮಾನ್ಯರು ಗಾವುದಗಳಷ್ಟು ದೂರ. ಅವರಿಗೆ ಇತಿಹಾಸದ ಪ್ರಮುಖ ಘಟ್ಟಗಳ ಪರಿಚಯವಾಗುವುದು ಇತಿಹಾಸಾಧಾರಿತ ಕಥಾಸಾಹಿತ್ಯದ ಮೂಲಕ. ಇತಿಹಾಸವನ್ನು ಆಧಾರವಾಗಿಟ್ಟುಕೊಂಡ ನಾಟಕಗಳೂ ಕಥೆ-ಕಾದಂಬರಿಗಳೂ ಸಾಮಾನ್ಯ ಜನರಿಗೆ ಚರಿತ್ರೆಯ ಪರಿಜ್ಞಾನದ ಮುಖ್ಯ ಆಕರಗಳಾಗಿರುತ್ತವೆ. ಹತ್ತೊಂಬತ್ತನೇ ಶತಮಾನದ ಇಂಗ್ಲೆಂಡಿನ ಸಾಮಾಜಿಕ ಜೀವನದ ಚಿತ್ರಣ ಜನಸಾಮಾನ್ಯರಿಗೆ ಪರಿಣಾಮಕಾರಿ ಯಾಗಿ ಸಿಗುವುದು ಚಾರ್ಲ್ಸ್ ಡಿಕನ್ಸ್ ಕಾದಂಬರಿಗಳ ಮೂಲಕವೇ ಹೊರತು ವಿದ್ವತ್‌ಪೂರ್ಣ ಪ್ರೌಢ ಶೋಧಗ್ರಂಥಗಳಿಂದ ಅಲ್ಲ. ಹೀಗೆ ಶಾಸ್ತ್ರಕೃತಿಗಳಿಗಿಂತ ಹೆಚ್ಚು ಪ್ರಭಾವಿಯಾದ ಮತ್ತು ಹೆಚ್ಚು ವ್ಯಾಪಕತೆ ಪಡೆದಿರುವ ಮಾಧ್ಯಮವೆಂದರೆ ಸಾಹಿತ್ಯ.
ಈ ವಾಸ್ತವವನ್ನು ಪರಿಶೀಲಿಸಿದಲ್ಲಿ ಕಾದಂಬರಿ ಸಾಹಿತ್ಯಪ್ರಕಾರಕ್ಕೆ ಶುದ್ಧವಿಜ್ಞಾನ ಶೋಧಜಗತ್ತಿನ ಸಂಗತಿಗಳನ್ನು ಪ್ರವೇಶ ಗೊಳಿಸುವುದು ಸತರ್ಕವೇ ಆಗುತ್ತದೆ. ಭಾರತದಲ್ಲಿ ವಿಜ್ಞಾನ-ಕಾಲ್ಪನಿಕ ಸಾಹಿತ್ಯ ಬಂದಿರುವುದು ತೀರಾ ಕಡಮೆ. ಈ ಕೊರತೆ ನೀಗಬೇಕಾಗಿದೆ. ಈ ವಿಶೇಷ ಸಂಗತತೆಯೂ `ಯಾನ’ಕ್ಕೆ ಇದೆ.
`ಅವತಾರ್’ ಇಂಗ್ಲಿಷ್ ಚಿತ್ರ ಬಂದ ಮೂರು-ನಾಲ್ಕು ವರ್ಷಗಳಾದ ಮೇಲೆ, `ಗ್ರ್ಯಾವಿಟಿ’ ಚಿತ್ರ ಇನ್ನೂ ಓಡುತ್ತಿರುವ ಸಂದರ್ಭದಲ್ಲಿಯೆ `ಯಾನ’ ಕಾದಂಬರಿ ಹೊರಬಂದಿದೆ. `ಯಾನ’ದಲ್ಲಿ ಬಂದಂತಹ ಹಲವು ಸನ್ನಿವೇಶಗಳು ಆ ಎರಡು ಇತ್ತೀಚಿನ ಚಿತ್ರಗಳಲ್ಲಿ ೩-D ವಿನ್ಯಾಸದಲ್ಲಿ ಮೈತಳೆದಿವೆ. ಭಾರತೀಯ ವಿಜ್ಞಾನಿಗಳು ಮಂಗಳಗ್ರಹಯಾನವನ್ನು ಯಶಸ್ವಿಯಾಗಿ ನಡೆಸಿರುವ ಸಮಯದಲ್ಲೇ ಭೈರಪ್ಪನವರ `ಯಾನ’ ಹೊರಬಂದಿರುವುದು ಇನ್ನೊಂದು ಕಾಕತಾಳೀಯ.
ಆದರೆ ಭೈರಪ್ಪನವರ ಮನಸ್ಸಿನಲ್ಲಿ ಈ ವಸ್ತು ನಲವತ್ತು ವರ್ಷಗಳಿಂದ ಶೋಧನೆಗೆ ಒಳಗಾಗಿತ್ತು – ಎನ್ನುವುದು ಈಗ ತಿಳಿದಿದೆ.
`ಸಯನ್ಸ್ ಫಿಕ್‌ಷನ್’ ಕುರಿತು ಒಂದು ಮಾತು ಹೇಳಬಹುದು.

`ಸಯನ್ಸ್ ಫಿಕ್‌ಷನ್’
`ಸಯನ್ಸ್ ಫಿಕ್‌ಷನ್’ ಎಂಬ ಶಬ್ದಪ್ರಯೋಗದಲ್ಲಿಯೆ ಸ್ವಲ್ಪಮಟ್ಟಿನ ವೈರುಧ್ಯ ನಿವಿಷ್ಟವಾಗಿದೆ. ಸಯನ್ಸ್ ಎಂಬುದು ವಾಸ್ತವ ಭೌತ ಸಂಗತಿಗಳಿಗೆ ಸಂಬಂಧಿಸಿದುದು. ಫಿಕ್‌ಷನ್ ಆದರೋ ಕಲ್ಪನಾಲೋಕದ್ದು. ಮಾನವಜೀವನ ಈ ಎರಡೂ ಧಾರೆಯ ವರ್ತನೆಗಳಿಂದ ಕೂಡಿರುತ್ತದೆ. ಕಾಲ್ಪನಿಕ ಸಾಹಿತ್ಯ ಬದುಕಿನ ಎಲ್ಲ ಕ್ಷೇತ್ರಗಳಿಂದ ಸಾಮಗ್ರಿಯನ್ನು ಸಂಗ್ರಹಿಸಿ ಬಳಸಿಕೊಳ್ಳುತ್ತದೆ. ಹೀಗೆ ಅದು ಸಹಜವಾಗಿ ವಿಜ್ಞಾನದ ಕಡೆಗೂ ಕೈಚಾಚಬೇಕಾಗುತ್ತ ದೆಂಬುದು ಅಸಹಜವೇನಲ್ಲ.26.7_SL-Byrappa
ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನಾಧಾರಿತ ಕಥಾಸಾಹಿತ್ಯವೂ ಜನರಲ್ಲಿ ವಿಜ್ಞಾನಾಸಕ್ತಿಯನ್ನು ಬೆಳೆಸುವ ಒಂದು ಪ್ರಮುಖ ಸಾಧನವೆಂಬುದನ್ನು ಬಹಳ ಹಿಂದಿನಿಂದ ಗುರುತಿಸಲಾಗಿದೆ. ೧೯೨೦ರ ದಶಕದಷ್ಟು ಹಿಂದೆಯೇ `ಸಯನ್ಸ್ ಫಿಕ್‌ಷನ್’ ಪ್ರಕಾರಕ್ಕೇ ಮೀಸಲಾದ `ಅಮೇಜಿಂಗ್ ಸ್ಟೋರೀಸ್’ ಎಂಬ ನಿಯತಕಾಲಿಕ ಪತ್ರಿಕೆ ಪ್ರಕಟಗೊಳ್ಳತೊಡಗಿತ್ತು. ಈಚಿನ ವರ್ಷಗಳಲ್ಲಂತೂ ಫ್ಯಾಂಟಸಿ ಪ್ರಕಾರದ ಕಾಮಿಕ್ಸ್ ಪತ್ರಿಕೆಗಳು ಅಪಾರ ಜನಪ್ರಿಯತೆ ಪಡೆದುಕೊಂಡಿವೆ.
ಇತ್ತೀಚೆಗೆ ಸುದ್ದಿಯಲ್ಲಿರುವ ಚಂದ್ರಯಾನ ಕುರಿತೂ ಹದಿನೇಳನೇ ಶತಮಾನದಲ್ಲಿಯೆ ಖಗೋಳವಿಜ್ಞಾನಿ ಯೊಹಾನ್ ಕೆಪ್ಲರ್ ಬರೆದಿದ್ದ.
ಹದಿನೆಂಟನೇ ಶತಮಾನದಲ್ಲಿ ವಾಲ್ಟೇರ್ ಬರೆದ `ಮೈಕ್ರೋಮೆಗಾಸ್’, ಜಾನಥನ್ ಸ್ವಿಫ್ಟ್ ಬರೆದ `ಗಲಿವರ್‍ಸ್ ಟ್ರಾವೆಲ್ಸ್’ – ಇವನ್ನೂ `ಸಯನ್ಸ್ ಫಿಕ್‌ಷನ್’ ಪ್ರಕಾರದ ಆದ್ಯಕಾಲ ಕೃತಿಗಳೆಂದು ಭಾವಿಸಲು ಅಭ್ಯಂತರವಿಲ್ಲ. `ಸೈ-ಫೈ’ ಕಾದಂಬರಿ ಮತ್ತು ಸಣ್ಣಕಥೆಗಳ ಪ್ರಕಾರಗಳ ಹರಿಕಾರರೆಂದು ೧೯ನೇ ಶತಮಾನದ ಮೇರಿ ವೋಲ್‌ಸ್ಟನ್‌ಕ್ರಾಫ್ಟ್ ಶೆಲ್ಲಿ ಮತ್ತು ಎಡ್ಗರ್ ಆಲನ್ ಪೋ ಇವರನ್ನು ಪರಿಗಣಿಸುವವರು ಉಂಟು.
ಮಾನವಮನಸ್ಸಿಗೆ ವಾಸ್ತವಕ್ಕಿಂತ ಕಲ್ಪನಾಧೀನ ಸಂಗತಿಗಳು ಹೆಚ್ಚು ಆಕರ್ಷಕವೆನಿಸುತ್ತವೆ – ಎಂಬುದನ್ನು ನೆನಪಿಡಬೇಕು. ಹೀಗೆ ಎಷ್ಟೋ ಮಂದಿ ಪ್ರೌಢವಿಜ್ಞಾನಿಗಳ ಮನಸ್ಸೂ ಕಲ್ಪನಾವಿಲಾಸದ ಕಡೆಗೆ ಹರಿಯುವುದುಂಟು. ಆಂಗ್ಲಭಾಷೆಯ ವಿಜ್ಞಾನ ಕಥಾಸಾಹಿತ್ಯದಲ್ಲಿ ಗಣನೀಯ ಭಾಗ ರಚಿತವಾಗಿರುವುದು ಉನ್ನತ ವಿಜ್ಞಾನತಜ್ಞರಿಂದ. ಜರ್ಮನಿಯ ರಾಕೆಟ್‌ಶಾಸ್ತ್ರತಜ್ಞ ವೆರ್ನ್‌ಹರ್ ಫಾನ್ ಬ್ರೌನ್ ತನ್ನ ವೈಜ್ಞಾನಿಕ ಅನುಭವಗಳನ್ನು ಆಧರಿಸಿ ತನ್ನದಲ್ಲದ ಹೆಸರಿನಲ್ಲಿ ಉತ್ತಮ ಬಾಹ್ಯಾಕಾಶಸಂಬಂಧಿತ ಕಾಲ್ಪನಿಕ ಕಥೆಗಳನ್ನು ಬರೆದಿದ್ದ. ಅಲ್ಲದೆ ಹಲವು `ಸಯನ್ಸ್ ಫಿಕ್‌ಷನ್’ ಚಿತ್ರಗಳ ನಿರ್ಮಾಣದಲ್ಲಿ ಸಲಹೆಗಾರನೂ ಆಗಿದ್ದ.

ವಿಜ್ಞಾನ ಪ್ರಸರಣ
ಭಾರತದಲ್ಲಿ ಅನೇಕ ವರ್ಷಗಳಿಂದ ಶುದ್ಧವಿಜ್ಞಾನವನ್ನು ಜನಪ್ರಿಯಗೊಳಿಸುತ್ತ ಬಂದಿರುವವರಲ್ಲಿ ಗಣ್ಯರಾದ ಡಾ|| ಸುಬೋಧ ಮಹಾಂತಿ (Dr. Subodh Mahanti) ಅವರೇ ಹೀಗೆಂದಿದ್ದಾರೆ:
“Any idea which is communicated in the form of a story is easily understood. So there is no wonder that Science Fiction, or more precisely a good Science Fiction, containing a core of scientific ideas encased in an envelope of fiction (literature) can play an effective role in science communication”
(”Dream 2047′, May 2012)
ವಿಜ್ಞಾನ ಕಥಾಪ್ರಕಾರವೇ ಪ್ರಾಯೋಗಿಕ ವಿಜ್ಞಾನ ಶೋಧನೆಗಳಿಗೆ ಪ್ರಚೋದನೆಯನ್ನು ಒದಗಿಸಿದ ನಿದರ್ಶನಗಳು ಹೇರಳವಾಗಿವೆ. ಆಲ್ಬರ್ಟ್ ಐನ್‌ಸ್ಟೈನ್‌ನಂತಹ ಅಗ್ರಮಾನ್ಯರೇ ತಾವು ಒಮ್ಮೊಮ್ಮೆ ಕಾಲ್ಪನಿಕ ಸಾಹಿತ್ಯದಿಂದ ಸ್ಫೂರ್ತಿಯನ್ನು ಪಡೆದಿರುವುದಾಗಿ ಹೇಳಿದ್ದಾರೆ. “ಅಸಾಧ್ಯವಾದುದನ್ನು ಸಂಭವನೀಯಗೊಳಿಸುವುದು ಫ್ಯಾಂಟಸಿ. ಅಸಂಭವನೀಯವೆನಿಸುವುದನ್ನು ಸಾಧ್ಯತೆಯ ಪ್ರಾಕಾರಕ್ಕೆ ತರುವುದು ಸಯನ್ಸ್ ಫಿಕ್‌ಷನ್” ಎಂದಿದ್ದಾನೆ ರಾಡ್ ಸ್ಟರ್ಲಿಂಗ್ (Rod Sterling).
ಶುದ್ಧ ವಿಜ್ಞಾನ ಬೋಧನೆಯಷ್ಟೆ ವಿಜ್ಞಾನವನ್ನು ಜನಪ್ರಿಯ ಗೊಳಿಸುವುದೂ ತುಂಬಾ ಮುಖ್ಯವೆಂಬ ನಿಲವು ತಳೆದ ಫ್ರಾನ್ಸ್ ದೇಶ ಅನೇಕ ದಶಕಗಳಿಂದ ಈ ಪ್ರಕ್ರಿಯೆಗೆ ಅಧಿಕ ಪ್ರೋತ್ಸಾಹ ನೀಡುತ್ತ ಬಂದಿದೆ. (ಫ್ರೆಂಚ್ ಭಾಷೆಯಲ್ಲಿ ಇದನ್ನು vulgarisation ಎಂದು ಕರೆಯುತ್ತಾರೆ.)

ವಿಜ್ಞಾನಾಧಾರಿತ ಕಾಲ್ಪನಿಕತೆಯ ಸಮೃದ್ಧಿ
ವಾಸ್ತವವಿಜ್ಞಾನಕ್ಕೂ ಪ್ರತಿಭಾಪೂರ್ವಕ ಕಲ್ಪನೆಗೂ ನಡುವಣ ಅಂತರವನ್ನು ಹ್ರಸ್ವಗೊಳಿಸಿದವನೆಂದು ಖ್ಯಾತಿಗಳಿಸಿದ ಎಚ್.ಜಿ. ವೆಲ್ಸ್ ೧೮೯೮ರಲ್ಲಿ ಬರೆದ `ವಾರ್ ಆಫ್ ದಿ ವರ್ಲ್ಡ್ಸ್’ ಕಾದಂಬರಿಯನ್ನು ಆಧರಿಸಿ ಹಲವಾರು ಚಿತ್ರಗಳು ಬಂದಿವೆ. ಗ್ರಹಾಂತರ ಪಯಣವನ್ನೂ ವಿವಿಧ ಗ್ರಹಗಳ ನಿವಾಸಿಗಳ ನಡುವಣ ಸಂಪರ್ಕಗಳನ್ನೂ ಗ್ರಹಾಂತರ ಸಂಘರ್ಷಗಳನ್ನೂ ಕಲ್ಪಿಸಿದ ಈ ಕಾದಂಬರಿಯ ಚಿತ್ರೀಕೃತ ರೂಪಗಳೂ ತುಂಬಾ ಜನಪ್ರಿಯತೆ ಪಡೆದಿವೆ.
ಕಾಲಯಂತ್ರದ ಮೂಲಕ ಸಾವಿರಾರು ವರ್ಷ ಹಿಂದಕ್ಕೆ ಪಯಣಿಸಬಹುದೆಂದು ಎಚ್.ಜಿ. ವೆಲ್ಸ್ ಕಲ್ಪಿಸಿದುದು ಈಗ ಕೇವಲ ಊಹಾಲೋಕದ ಸಂಗತಿಯಾಗಿ ಉಳಿದಿಲ್ಲ. ಈಗ್ಗೆ ಏಳು ವರ್ಷ ಹಿಂದೆ (೨೦೦೭) ವಿಜ್ಞಾನಿಗಳು ಕಂಪ್ಯೂಟರ್ ತಂತ್ರಜ್ಞಾನವನ್ನು ಆಧರಿಸಿ ಎರಡೂವರೆ ಸಾವಿರ ವರ್ಷಗಳ ಹಿಂದಿದ್ದಂತೆ ರೋಮ್‌ನಗರವನ್ನು ಪುನರ್ನಿರ್ಮಿಸಿದರು; `ಸಿಮ್ಯುಲೇಷನ್’ ವಿಧಾನದಲ್ಲಿ ಒಂದು ಪ್ರಾಚೀನ ದೇವಾಲಯವನ್ನೂ ಕಂಪ್ಯೂಟರಿನಲ್ಲಿ ಪುನಃಸೃಷ್ಟಿಸಿದರು. ಈ ವಿನ್ಯಾಸವಿವರಗಳು ಎಚ್.ಬಿ.ಓ. ಚ್ಯಾನೆಲಿನಲ್ಲಿ ಧಾರಾವಾಹಿಯಾಗಿ ಪ್ರದರ್ಶಿತಗೊಂಡವು.
ಈಚೆಗೆ ಹಲವು ದೇಶಗಳ ವಿಜ್ಞಾನಿಗಳ ಆಸಕ್ತಿಯನ್ನು ವಿಶೇಷವಾಗಿ ಕೆರಳಿಸಿರುವುದು ಮಂಗಳಗ್ರಹ. ಎಲ್ಲ ಗ್ರಹಗಳ ಪೈಕಿ ಭೂಮಿಯೊಡನೆ ಅಧಿಕ ಸಾದೃಶ್ಯವಿರುವುದು ಮಂಗಳಗ್ರಹ ಎಂಬುದೂ ಇದಕ್ಕೆ ಒಂದು ಕಾರಣ. ಮಂಗಳಯಾನ ಕಲ್ಪನೆಯ ಆದ್ಯನೆಂದು ಎಚ್.ಜಿ. ವೆಲ್ಸ್‌ನನ್ನು ಪರಿಗಣಿಸಬಹುದು. ವೆಲ್ಸ್‌ನ `ವಾರ್ ಆಫ್ ದಿ ವರ್ಲ್ಡ್ಸ್’ ಕಾದಂಬರಿಯಲ್ಲಿ ಮಂಗಳಗ್ರಹದ ಹೊರಮೈ ರಚನೆ ಮೊದಲಾದ ಹಲವಾರು ಸಂಭಾವ್ಯ ವಿವರಗಳೂ ಪ್ರಸ್ತಾವಗೊಂಡಿವೆ.
೧೯೬೦ರ ದಶಕದಲ್ಲಿ ಜೇಮ್ಸ್ ಟ್ರಿಪ್ಟಿ ಎಂಬ ರಚಯಿತನ ಹೆಸರಿನಲ್ಲಿ ಅನೇಕ ವಿಜ್ಞಾನ ಕಥೆಗಳು ಪ್ರಕಟಗೊಂಡಿದ್ದವು. ಆ ವ್ಯಕ್ತಿಯ ಮರಣಾನಂತರವೇ ಅದು ಆಲೆನ್ ಬಿ. ಶೆಲ್ಡನ್ ಎಂಬ ಮಹಿಳಾವಿಜ್ಞಾನಿಯ ಗೂಢನಾಮವೆಂಬುದು ಬಯಲಾಯಿತು.
ಗ್ರಹಾಂತರ ಪಯಣ, ಬಯೋಟೆಕ್ನಾಲಜಿ, ಸಮರಶಾಸ್ತ್ರ ಮೊದಲಾದ ಜ್ಞಾನಾಂಗಗಳ ಹಿನ್ನೆಲೆಯ ಸಂಶೋಧನಪೂರ್ವಕ ಕಾದಂಬರಿಗಳು ಈಚಿನ ವರ್ಷಗಳಲ್ಲಿ ಇಂಗ್ಲಿಷಿನಲ್ಲಂತೂ ಗಣನೀಯ ಪ್ರಮಾಣದಲ್ಲಿ ಬಂದಿವೆ, ಜನಪ್ರಿಯವೂ ಆಗಿವೆ.
ಈಚಿನ ಕಾಲದಲ್ಲಿ `ಸಯನ್ಸ್ ಫಿಕ್‌ಷನ್’ ಪ್ರಕಾರಕ್ಕೆ ಹೆಚ್ಚಿನ ಪ್ರತಿಷ್ಠೆ ತಂದಿತ್ತವರು ಕಾರ್ಲ್ ಸಗಾನ್ ಮತ್ತು ಐಸಾಕ್ ಆಸಿಮೊವ್ ಎಂಬುದು ಸುವಿದಿತವೇ ಆಗಿದೆ.

ಭವಿಷ್ಯದೃಷ್ಟಿ
ಚಂದ್ರಯಾನದ (೧೯೬೮-೬೯) ಸಾಧ್ಯತೆಯನ್ನು ಜೂಲ್ಸ್ ವೆರ್ನ್ ೧೮೬೫ರಷ್ಟು ಹಿಂದೆಯೇ – ಎಂದರೆ ನೂರು ವರ್ಷ ಹಿಂದೆ – ಸೂಚಿಸಿದ್ದ (`ಫ್ರಂ ದಿ ಅರ್ಥ್ ಟು ದಿ ಮೂನ್’ ಕಾದಂಬರಿಯಲ್ಲಿ).
ಅಮೆರಿಕದ ಪ್ರಸಿದ್ಧ ಸಮಕಾಲೀನ ವಿಜ್ಞಾನಿ ರೇ ಕುರ್ಜ್‌ವೈಲ್ ಈಗ್ಗೆ ಐದು ವರ್ಷ ಹಿಂದೆ ಬರೆದ ಲೇಖನವೊಂದರಲ್ಲಿ (ನಾನೋ-ಟೆಕ್ನಾಲಜಿ ಹಿನ್ನೆಲೆಯಲ್ಲಿ) ಇನ್ನು ಇಪ್ಪತ್ತು ವರ್ಷಗಳಲ್ಲಿ ಮನುಷ್ಯಶರೀರದ ಪ್ರತಿನಿರ್ಮಾಣ ಶಕ್ಯವಾಗಬಹುದು ಮೊದಲಾದ ಅಂಶಗಳನ್ನು ಸೂಚಿಸಿದ್ದಾನೆ. ಇದು ಅಸಾಧ್ಯವಲ್ಲವೆಂದು ಬಿಲ್ ಗೇಟ್ಸ್ ಮೊದಲಾದವರೂ ಅಭಿಪ್ರಾಯ ತಳೆದಿದ್ದಾರೆ. ಹಿಂದಿನ ರೀತಿಯ ನೇರ ಶಸ್ತ್ರಚಿಕಿತ್ಸೆಯ ಆವಶ್ಯಕತೆ ಇಲ್ಲದೆಯೇ ಟ್ಯೂಮರ್ (ಗ್ರಂಥಿ, ಕಣತ) ಮೊದಲಾದವನ್ನು ಲಯಗೊಳಿಸುವ ತಾಂತ್ರಿಕತೆಯಂತೂ ಈಗಾಗಲೇ ಪ್ರಯುಕ್ತವಾಗತೊಡಗಿದೆ.
ವೈಜ್ಞಾನಿಕ ಕಾದಂಬರಿಗಳ ಮಾಧ್ಯಮದ ಮೂಲಕ ಅನೇಕ ನೂತನ ಶೋಧಗಳಿಗೆ ಪ್ರೇರಣೆ ನೀಡಿದವನು ಆರ್ಥರ್ ಕ್ಲಾರ್ಕ್.ಉಪಗ್ರಹ-ಅವಲಂಬಿತ ದೂರಪ್ರಸರಣ ಬಳಕೆಗೆ ಬರುವುದಕ್ಕೆ ಇಪ್ಪತ್ತು ವರ್ಷ ಹಿಂದೆಯೇ (೧೯೪೫) ಆರ್ಥರ್ ಕ್ಲಾರ್ಕ್ ಈ ಸಾಧ್ಯತೆಯನ್ನು ಸೂಚಿಸಿದ್ದ.
ಅದನ್ನು ಲಕ್ಷಿಸಿ ಭೂಮಿಯಿಂದ ೪೨,೦೦೦ ಕಿ.ಮೀ. ದೂರದ ಭ್ರಮಣಕಕ್ಷೆಗೆ `ಕ್ಲಾರ್ಕ್ ಆರ್ಬಿಟ್’ ಎಂದೇ ಈಗ ನಾಮಕರಣ ಮಾಡಲಾಗಿದೆ. “ಇನ್ನು ಐವತ್ತು ವರ್ಷಗಳಲ್ಲಿ ಮಾನವರು ಚಂದ್ರಗ್ರಹಾದಿಗಳೆಡೆಗೆ ವಿಹಾರಪ್ರವಾಸಗಳನ್ನು ಕೈಗೊಳ್ಳುವುದು ಸಾಧ್ಯವಾಗುತ್ತದೆ” ಎಂದು ಆರ್ಥರ್ ಕ್ಲಾರ್ಕ್ ಹೇಳಿದ್ದುದನ್ನು ಈಗ ಅಸಂಭಾವ್ಯ ಎನ್ನುವಂತಿಲ್ಲ.
ಉಪಗ್ರಹಗಳು ಸಂವಹನಸಾಧನಗಳಾಗಬಹುದೆಂದು ೧೯೪೫ರಲ್ಲಿ ಆರ್ಥರ್ ಕ್ಲಾರ್ಕ್ ಪ್ರತಿಪಾದಿಸಿದಾಗ ಅದು ಅಕಾಂಡತಾಂಡವವೆಂದು ಜನರು ಮೂದಲಿಸಿದ್ದರು; ಎಷ್ಟುಮಟ್ಟಿಗೆ ಎಂದರೆ `ವೈರ್‌ಲೆಸ್ ವರ್ಲ್ಡ್’ ವೈಜ್ಞಾನಿಕ ಪತ್ರಿಕೆ ಕ್ಲಾರ್ಕ್‌ರವರ ಲೇಖನವನ್ನು ಪ್ರಕಟಿಸದೆ ನಿರಾಕರಿಸಿ ಹಿಂದಿರುಗಿಸಿತ್ತು! ಈಗ ಆರ್ಥರ್ ಕ್ಲಾರ್ಕ್‌ಗೆ ಒಂದು `ಐಕಾನ್’ ಸ್ಥಾನ ಬಂದಿದೆ. ಇಷ್ಟಾಗಿ ಆರ್ಥರ್ ಕ್ಲಾರ್ಕ್ `ಶುದ್ಧ ವಿಜ್ಞಾನಿ’ ಏನಲ್ಲ. ಅವನೊಬ್ಬ ದಾರ್ಶನಿಕ ಫ್ಯೂಚರಾಲಜಿಸ್ಟ್.
ಒಂದು ಸ್ವಾರಸ್ಯವೆಂದರೆ: ಸಾಮಾನ್ಯವಾಗಿ ವಿಜ್ಞಾನವಿವರಗಳನ್ನು ಆಧರಿಸಿ ಕಾಲ್ಪನಿಕ ಸಾಹಿತ್ಯ ರಚನೆಯಾಗುತ್ತದೆ. ಆದರೆ ಜೂಲ್ಸ್ ವೆರ್ನ್ ಮತ್ತು ಎಚ್.ಜಿ. ವೆಲ್ಸ್ ರಚಿತ ಕಾದಂಬರಿಗಳಲ್ಲಿನ ಕಲ್ಪನೆಗಳ ವಿಜ್ಞಾನ ಸಾಧ್ಯತೆಗಳನ್ನು ಕುರಿತೇ ವಿಪುಲ ಸಂಶೋಧನೆಗಳು ಈಗ ನಡೆದಿವೆ.
ನೀರಿನಿಂದ ಮಾತ್ರವಲ್ಲ ಪ್ರಕೃತಿಯಲ್ಲಿ ಸಮೃದ್ಧವಾಗಿರುವ ಗಾಳಿಯಿಂದ ಕೂಡಾ ವಿದ್ಯುತನ್ನು ಉತ್ಪಾದನೆ ಮಾಡಬಹುದೆಂದು ಜೂಲ್ಸ್ ವೆರ್ನ್ ಈಗ್ಗೆ ೧೩೦ ವರ್ಷ ಹಿಂದೆಯೇ ಮಂಡಿಸಿದ್ದ ಕಲ್ಪನೆ ಈಗ ಪ್ರಯೋಗಗಳಲ್ಲಿ ಸಿದ್ಧಗೊಂಡಿದೆ.
ಚರಿತ್ರಪೂರ್ವ ಯುಗದ ಪ್ರಾಣಿಸಂಕುಲದ ಸ್ವರೂಪ ಕುರಿತು ಜೂಲ್ಸ್ ವೆರ್ನ್ ಮಾಡಿದ್ದ ಕಲ್ಪನೆಗಳೂ ಈಚಿನ ಕಂಪ್ಯೂಟರ್-ಆಧಾರಿತ ಶೋಧಗಳಿಂದ ಸಮರ್ಥನೆಗೊಳ್ಳುತ್ತಿವೆ.
ಶತಮಾನಕ್ಕೂ ಹಿಂದೆ ಜೂಲ್ಸ್ ವೆರ್ನ್ ನೀಡಿದ್ದ ಎಷ್ಟು ಅಧಿಕ ಸಂಖ್ಯೆಯ ಕಲ್ಪನೆಗಳು ಈಗ ವಾಸ್ತವ ಶೋಧಗಳಲ್ಲಿ ಪ್ರತಿಬಿಂಬಿತವಾಗಿವೆ ಎಂದರೆ ಯೂರೋಪಿಯನ್ ಸ್ಪೇಸ್ ಏಜೆನ್ಸಿ ಆವಿಷ್ಕರಿಸಿರುವ ಅತ್ಯಾಧುನಿಕ ಆಟೊಮ್ಯಾಟಿಕ್ ಟ್ರಾನ್ಸ್‌ಫರ್ ವೆಹಿಕಲ್‌ಗೆ ಜೂಲ್ಸ್ ವೆರ್ನ್‌ನ ಹೆಸರನ್ನು ಇರಿಸಿದ್ದಾರೆ.
ಒಂದು ದೃಷ್ಟಿಯಿಂದ ನೋಡಿದಲ್ಲಿ ವಾಸ್ತವ ಮತ್ತು ಕಲ್ಪನೆಗಳ ಮಿಶ್ರಣವನ್ನು ಪ್ರಾಚೀನ ಸಾಹಿತ್ಯದಲ್ಲಿಯೂ ಕಾಣಬಹುದು. ಪುಷ್ಪಕವಿಮಾನ, ಮತ್ಸ್ಯಕನ್ಯೆ ಮೊದಲಾದವು ವಾಸ್ತವಾಧಾರಿತವೋ ಶುದ್ಧಾಂಗ ಕಲ್ಪನೆಯೋ ಹೇಳುವುದು ಕಷ್ಟ.
ಈ ಹಿನ್ನೆಲೆಯಲ್ಲಿ ಭೈರಪ್ಪನವರ `ಯಾನ’ ಕಾದಂಬರಿಯನ್ನು ಪರಾಮರ್ಶಿಸಬಹುದು.

* * *

`ಯಾನ’ದ ಅನನ್ಯತೆ
ಭೈರಪ್ಪನವರ ಯಾವ ಎರಡು ಕೃತಿಗಳೂ ಒಂದೇ ರೀತಿಯವು ಎಂದು ಹೇಳಲು ಆಗುವುದಿಲ್ಲ. ಅವರ ಒಂದೊಂದು ಕೃತಿಯಲ್ಲೂ ಅದರದೇ ಆದ ವಿಶಿಷ್ಟತೆ ಇರುತ್ತದೆ. `ಯಾನ’ ಕೂಡಾ ಹೀಗೆ ಒಂದು ಅನನ್ಯ ನಿರ್ಮಿತಿ ಎಂದು ಹೇಳಬೇಕಾಗಿದೆ.
`ಯಾನ’ವನ್ನು ಸ್ಥೂಲವಾಗಿ `ಸಯನ್ಸ್ ಫಿಕ್‌ಷನ್’ ವರ್ಗಕ್ಕೆ ಸೇರಿಸುವುದಕ್ಕೆ ಸೌಕರ್ಯದ ದೃಷ್ಟಿಯಿಂದ ಅಭ್ಯಂತರವಿಲ್ಲವೆನ್ನ ಬಹುದು. ಆದರೆ ಭೈರಪ್ಪನವರ ಅನ್ಯ ಕಾದಂಬರಿಗಳಂತೆ `ಯಾನ’ದಲ್ಲಿಯೂ ವಿಜ್ಞಾನಾಂಶಗಳು `ಸ್ಪ್ರಿಂಗ್‌ಬೋರ್ಡ್’ – ಜಿಗಿಹಲಗೆ ಅಷ್ಟೇ ಆಗಿದ್ದು, ಮಾನವಸಂಬಂಧಗಳ ವಿಶ್ಲೇಷಣೆಯೇ ಪ್ರಧಾನವಾಗಿದೆ. ಈ ದೃಷ್ಟಿಯಿಂದ `ಯಾನ’ವನ್ನು ಸಾಮಾನ್ಯ `ಸಯನ್ಸ್ ಫಿಕ್‌ಷನ್’ ಕೃತಿಗಳಿಗಿಂತ ಕಿಂಚಿದ್ ಭಿನ್ನ ಎಂದು ಪರಿಗಣಿಸಬೇಕಾಗಿದೆ.
ತಂದೆತಾಯಿಗಳ ಪೂರ್ವಾಪರ ವಿವರಗಳನ್ನು ಮಾಸ್ಟರ್ ಕಂಪ್ಯೂಟರಿನ ಮೂಲಕ ತಿಳಿದುಕೊಳ್ಳಬೇಕಾದ ಸನ್ನಿವೇಶಕಲ್ಪನೆ – ಮೊದಲಾದ ಅಂಶಗಳು ಉದ್ದಿಷ್ಟ ಗ್ರಂಥಿಲತೆಯನ್ನು ಪೋಷಿಸಿವೆ. ಸಾಮಾನ್ಯ ಓದುಗರಿಗೆ ಬರಡು ಎಂದೇ ಅನ್ನಿಸಬಹುದಾದ ವಿಜ್ಞಾನವಿವರಗಳ ಪ್ರಾಕಾರವನ್ನು ಇಟ್ಟುಕೊಂಡು ಉದ್ದಕ್ಕೂ ಅದಕ್ಕೆ ಹೊಂದಿಕೆಯಾಗುವಂತೆ `ಸ್ಟೋರಿ ಲೈನ್’ ವಿಕಾಸಗೊಳಿಸುವುದರಲ್ಲಿ ಭೈರಪ್ಪನವರ ರಚನಾಕೌಶಲ ಕಾಣುತ್ತದೆ.
ಖಗೋಲವಿಜ್ಞಾನದ ಆವರಣ ಇದ್ದರೂ, `ಯಾನ’ದಲ್ಲಿಯೂ ಪ್ರಮುಖವಾಗಿ ಜಿಜ್ಞಾಸೆಗೊಳಗಾಗಿರುವುದು ಮನಸ್ಸಿನ ಸಂಚಲನೆ, ನೀತಿಯ ಪರಿಕಲ್ಪನೆ ಮೊದಲಾದ ಅಂಶಗಳೇ.
ಮನುಷ್ಯನ ಭೂಗ್ರಹಸ್ಥಿತ ಜೀವನ ಮತ್ತು ಗ್ರಹಾಂತರ ಯಾನ – ಎರಡರಲ್ಲಿಯೂ ಉಂಟಾಗುವ ಅನಿರೀಕ್ಷಿತಗಳು; – ಮೊದಲಾದ ಅಂಶಗಳು ಕಥೆಯ ಹಂದರದ ಸಾಂಕೇತಿಕತೆಯನ್ನು ಪೋಷಿಸಿವೆ.
“ಬ್ಲ್ಯಾಕ್‌ಹೋಲ್ ಎನ್ನುವುದು ಏಕಾಂತದ, ಅಂತರ್ಮುಖ ತೆಯ ಘನಗಂಭೀರ ಪ್ರತೀಕ….” (ಪುಟ ೧೯); “ಒಂದು ದಿನ – ದಿನ ಅನ್ನುವುದು ತಪ್ಪು – ಹಗಲುರಾತ್ರಿಗಳ ವ್ಯತ್ಯಾಸವಿದ್ದರೆ ತಾನೆ ದಿನ ಎನ್ನುವುದು!……” (ಪುಟ ೨೨); “ಕತ್ತಲಿನ ಕ್ಷೇತ್ರವು ಬೆಳಕಿನ ಕ್ಷೇತ್ರಕ್ಕಿಂತ ಕೋಟ್ಯಂತರಪಟ್ಟು ಹೆಚ್ಚು……” (ಪುಟ ೨೫); “ಈ ಆಕಾಶನೌಕೆಯು ಒಂದು ಕಗ್ಗತ್ತಲ ಗುಹೆಯೊಳಕ್ಕೆ ನುಗ್ಗುತ್ತಿದೆ. ಅಲ್ಲಲ್ಲ; ಗುಹೆಯ ಕತ್ತಲು ನೌಕೆಯನ್ನು ತನ್ನೊಳಕ್ಕೆ ಎಳೆದುಕೊಳ್ಳುತ್ತಿದೆ….” (ಪುಟ ೧೩೧); – ಇಂತಹ ಧ್ವನಿಪ್ರಧಾನ `ಮಾನೊಲಾಗು’ಗಳು ಗ್ರಂಥದುದ್ದಕ್ಕೂ ಕಾಣಿಸಿಕೊಳ್ಳುತ್ತವೆ.
* * *
`ಯಾನ’ ಓದಿದಾಗ ಪ್ರಮುಖವಾಗಿ ಎರಡು ದಾರ್ಶನಿಕ ಅಂಶಗಳು ವಿಶೇಷ ಮನನಕ್ಕೆ ಸಾಮಗ್ರಿಯಾಗುತ್ತವೆ: (೧) ಮೊದಲನೆಯದು `ಕಾಲ’ ಎಂಬುದರ ಸ್ವರೂಪ ಮತ್ತು ವ್ಯಾಪ್ತಿ; (೨) ಎರಡನೆಯದು ಸನ್ನಿವೇಶಭಿನ್ನತೆಯಿಂದ ಮೌಲ್ಯಕಲ್ಪನೆಯ ಮೇಲೆ ಆಗಬಹುದಾದ ಪ್ರಭಾವ. ಇವು ಎರಡೂ ತುಂಬಾ ಅರ್ಥವಂತ ಸಂಗತಿಗಳು.
`ಕಾಲ’ ಎಂದರೆ ಏನು?
ಕಾಲ ಎಂದರೆ ಏನು ಎಂಬುದನ್ನು ಕುರಿತು ಭಾರತೀಯ ತತ್ತ್ವಶಾಸ್ತ್ರ ಚಿಂತಕರು ಬಹಳ ದೀರ್ಘಕಾಲದಿಂದ ವಿವೇಚನೆ ಮಾಡಿದ್ದಾರೆ. ಭಿನ್ನಭಿನ್ನ ರೀತಿಯ ಕಾಲಗಣನೆಗಳು ಇರುವುದಂತೂ ಪ್ರಸಿದ್ಧವೇ ಇದೆ. ಪ್ರಕೃತಕ್ಕೆ ಸಂಗತವಾದದ್ದು `ಕಾಲ’ ಎಂಬ ತತ್ತ್ವದ ಲಕ್ಷಣನಿರ್ದೇಶನ.
ನಮ್ಮ ಬೇರೆಬೇರೆ ದರ್ಶನಗಳು `ಕಾಲ’ವನ್ನು ಬೇರೆಬೇರೆ ರೀತಿಗಳಲ್ಲಿ ಕಂಡಿವೆ. ಸೂರ್ಯಚಲನೆ ಮೊದಲಾದ ಉಪಾಧಿಗಳೊಡನೆ ತಳಕುಹಾಕಿಕೊಂಡಿರುವುದರಿಂದ ಸ್ವತಂತ್ರವಾದ `ಕಾಲ’ ಎಂಬುದೇ ಇಲ್ಲವೆಂದು ಸಾಂಖ್ಯರಲ್ಲಿ ಒಂದು ಪಂಥದವರು ನಿಲವು ತಳೆದಿದ್ದಾರೆ. ಕಾಲವೆಂಬುದು ಇಂದ್ರಿಯಗ್ರಹೀತ ಮಾತ್ರ ಎಂದಿದ್ದಾರೆ ಮೀಮಾಂಸಕರು. ಅದ್ವೈತ ಪ್ರಸ್ಥಾನದಲ್ಲಿ ಸರ್ವಾಧಾರವಾದುದು ಪರಬ್ರಹ್ಮ ಮಾತ್ರವಾದುದರಿಂದ, ಪರಬ್ರಹ್ಮೇತರತತ್ತ್ವಗಳೊಡನೆ ಮಾತ್ರ ಕಾಲವೆಂಬ ಕಲ್ಪನೆ ಜನಿಸಿದೆ – ಎಂದಿದ್ದಾರೆ. ಈ ಭೂಮಿಕೆಯಲ್ಲಿ `ಅವಿದ್ಯೆ’ ಅಥವಾ `ಮಾಯೆ’ಯೇ ಕಾಲ; ಅದು ವ್ಯಾವಹಾರಿಕ ಸ್ತರದಲ್ಲಿ ಉಪಾಧಿಭೇದದಿಂದ ದಿವಸ ಗಂಟೆ ಕ್ಷಣ ಇತ್ಯಾದಿ ಭೇದಗಳನ್ನು ಪಡೆಯುತ್ತದೆ – ಎಂದು ಪ್ರತಿಪಾದನೆ ಇದೆ. ಹೀಗೆಂದರೆ ಕಾಲದ ಮಹತ್ತ್ವವನ್ನು ಅಲ್ಲಗಳೆದಂತೆ ಅಲ್ಲ. ಭೇದಗಳ ಕಲ್ಪನೆಗೆ ಆಧಾರವಾಗಿರುವುದು ಯಾವ ಕಾಲ-ದೇಶ ಪರಿಧಿಯಲ್ಲಿ ನಮ್ಮ ವೀಕ್ಷಣೆಯೂ ಚಿಂತನೆಯೂ ನಡೆಯುತ್ತಿದೆ ಎಂಬುದು – ಎಂದು ತಾತ್ಪರ್ಯ. ವ್ಯಾವಹಾರಿಕ ಸ್ತರದಲ್ಲಿ ಎಲ್ಲ ವಸ್ತು-ಕ್ರಿಯೆಗಳೂ ಅಭಿನ್ನವೆಂದಲ್ಲ; ಇಲ್ಲಿ ಭೇದಗಳು ಇರುವಂಥವೇ. ಈ ಭೇದಗಳು ಆತ್ಯಂತಿಕಸ್ವರೂಪದವಲ್ಲ – ಎಂಬುದು ಗ್ರಹಿಸಬೇಕಾದ ತತ್ತ್ವ.
ತಸ್ಯಾತ್ಮಾ ಬಹುಧಾ ಭಿನ್ನೋ
ಭೇದೈರ್ಧರ್ಮಾಂತರಾಶ್ರಯೈಃ |
ನ ಹಿ ಭಿನ್ನಮಭಿನ್ನಂ ವಾ
ವಸ್ತು ಕಿಂಚನ ವಿದ್ಯತೇ ||
(ಭರ್ತೃಹರಿ : `ವಾಕ್ಯಪದೀಯ’)
“ಎಲ್ಲ ಕಾಲಭೇದ ವಸ್ತುಭೇದಗಳೂ ಧರ್ಮಾಂತರಜನ್ಯಗಳೇ. ಆತ್ಯಂತಿಕ ನೆಲೆಯಲ್ಲಿ ಭಿನ್ನತೆಯಾಗಲಿ ಅಭಿನ್ನತೆಯಾಗಲಿ ಇರದು.”
ವಿಷ್ಣುಪುರಾಣ ಹೀಗೆಂದಿದೆ:
ತದೇವ ಸರ್ವಮೇವೈತದ್
ವ್ಯಕ್ತಾವ್ಯಕ್ತಸ್ವರೂಪವತ್ |
ತಥಾ ಪುರುಷರೂಪೇಣ
ಕಾಲರೂಪೇಣ ಚ ಸ್ಥಿತಮ್ ||
ಎಂದರೆ ಪ್ರಕೃತಿ, ಪುರುಷ, ಕಾಲ – ಎಂಬ ಮೂರು ರೂಪಗಳಲ್ಲಿ ಬ್ರಹ್ಮವು ವಿವರ್ತಗೊಂಡಿದೆ. ಕೇವಲ `ವಿವರ್ತ’ವೇ ಆದರೂ ಕಾಲಕ್ಕೆ ಶಕ್ತಿಮತ್ತ್ವ ಇಲ್ಲದಿಲ್ಲ.
ಕಾಲಃ ಸರ್ವಸಮಾಹರಃ ||
ಎಂದರೆ ಕಾಲವು ಎಲ್ಲವನ್ನೂ ನಷ್ಟಗೊಳಿಸುವಂತಹದು ಎಂದು ವರ್ಣಿಸಲಾಗಿದೆ; ಅಥವಾ ಯಾವುದು ಎಲ್ಲವನ್ನೂ ನಾಶಪಡಿಸಬಲ್ಲದ್ದೋ ಅದೇ ಕಾಲ ಎಂದೂ ಭಾವಿಸಬಹುದು.
ಕಾಲಕ್ಕೆ ಉತ್ಪತ್ತಿ ಮಾಡುವುದು, ನಾಶಗೊಳಿಸುವುದು – ಎರಡು ಶಕ್ತಿಗಳೂ ಇರುತ್ತವೆ. ಈ ವಿದ್ಯಮಾನವು ಕಾಲದ ಅಸ್ತಿತ್ವವನ್ನು ಸಮರ್ಥಿಸುತ್ತದೆ. ಹಲವಾರು ಕ್ರಿಯೆಗಳ ಹುಟ್ಟು-ನಾಶಗಳು ನಡೆದರೂ ಕಾಲ ಮಾತ್ರ ಇದ್ದೇ ಇರುತ್ತದೆ. ವಿಶ್ಲೇಷಿಸಿ ನೋಡುವಾಗ, ಯಾವುದೋ ಕ್ರಿಯಾಸರಣಿಗಳನ್ನೇ ನಾವು `ಕಾಲ’ ಎಂದು ವ್ಯವಹರಿಸುತ್ತೇವೆ, ಅಷ್ಟೆ. ಈ ಆಧಾರತಥ್ಯವು ವೇದಾಂತ-ವಿಜ್ಞಾನಗಳೆರಡಕ್ಕೂ ಬಹುಮಟ್ಟಿಗೆ ಸಮಾನವಾಗಿದೆ.
ಮೌಲ್ಯಪ್ರಜ್ಞೆಯ ಪರಿಧಿಗಳು
`ಯಾನ’ದ ಅವಲೋಕನದಿಂದ ಉದ್ಬುದ್ಧವಾಗುವ ಎರಡನೇ ಪ್ರಮುಖ ಅಂಶ ಸನ್ನಿವೇಶಭಿನ್ನತೆಗೂ ಮೌಲ್ಯಪ್ರಜ್ಞೆಗೂ ಇರುವ ಸಂಬಂಧ. ಗ್ರಹಾಂತರಯಾನದಲ್ಲಿ ಉದ್ಭವಿಸುವ ದೇಶಕಾಲಪರಿಚ್ಛೇದ ವ್ಯತ್ಯಯಗಳಿಗೂ ವ್ಯಕ್ತಿಗಳ ಅಂತರಂಗದಲ್ಲಿ ವಿಕಟ ಸನ್ನಿವೇಶಗಳಲ್ಲಿ ಏರ್ಪಡುವ ಸ್ಥಿತ್ಯಂತರಗಳಿಗೂ ನಡುವಣ ಸಾಮ್ಯ-ವೈಷಮ್ಯಗಳು ಏನು – ಎಂಬ ಕುತೂಹಲಕರ ಜಿಜ್ಞಾಸೆಯನ್ನು `ಯಾನ’ ನಡೆಸಿದೆ.
ವಿಜ್ಞಾನಸಾಧ್ಯತೆಗಳಂತೆ ಸ್ತ್ರೀ-ಪುರುಷ ಸಂಬಂಧ ಇತ್ಯಾದಿ ನೀತಿಮೌಲ್ಯಮೀಮಾಂಸೆಯೂ `ಓಪನ್-ಎಂಡೆಡ್’ ಆಗಿರ ಬಹುದೆ? ಒಂದು ದೃಷ್ಟಿಯಿಂದ ಇದು ಕುತೂಹಲಕಾರಣಕ್ಕಾಗಿಯೇ ಆದರೂ ವಿಚಾರಣೀಯವೇ. ಆದರೆ ಬೇರೆಬೇರೆ ಸನ್ನಿವೇಶಗಳಲ್ಲಿ ಮನಸ್ಸನ್ನು ಸ್ತಿಮಿತಗೊಳಿಸಬಲ್ಲ ಪ್ರಯೋಜಕತೆಯೂ ಈ ಮಂಥನದಲ್ಲಿ ಉಂಟು.
ಇಂತಹ ಅನುಭವಸಂಬಂಧಿತ ಜಿಜ್ಞಾಸೆಗಳು ಶಾಸ್ತ್ರೀಯ ಪ್ರಾಕಾರದಲ್ಲಿ ಹಿಂದಿನಿಂದ ಯಥೇಷ್ಟವಾಗಿ ನಡೆದಿದ್ದರೂ, ಅವು ಬಹುಮಟ್ಟಿಗೆ ಅನಾಕರ್ಷಕವಾಗಿರುತ್ತವೆ ಮತ್ತು ಹೆಚ್ಚಿನ ಬೌದ್ಧಿಕ ಅಧಿಕಾರವನ್ನು ಬಯಸುತ್ತವೆ. ಅವನ್ನು ಕಾದಂಬರಿಯ ಮಾಧ್ಯಮಕ್ಕೆ ತಂದಿರುವುದು ಭೈರಪ್ಪನವರ ಅನನ್ಯತೆ.
ಗ್ರಹಾಂತರಕ್ಕೆ ಹೋಗಿ ನೆಲಸಿದಾಗಲೂ ಭೂಸಹಜ ಮೌಲ್ಯಪ್ರಜ್ಞೆ, ವ್ಯಕ್ತಿ-ವ್ಯಕ್ತಿ ಸಂಬಂಧರೀತಿಗಳು – ಇವುಗಳಲ್ಲಿ ಎಷ್ಟುಮಟ್ಟಿಗೆ ಸಾತತ್ಯ ಇರಬಹುದು? – ಇವೇ ಮೊದಲಾದ ಹೊಸ ಆಯಾಮಗಳ ಪರಾಮರ್ಶನೆ `ಯಾನ’ದಲ್ಲಿ ನಡೆದಿದೆ.
ಒಂದುಕಡೆ ಹಿಂದಿನ ಗ್ರಹೀತಗಳ ನೆಲೆಗಟ್ಟು, ಇನ್ನೊಂದುಕಡೆ ಉತ್ಸರ್ಗದ ಅನಿವಾರ್ಯತೆ – ಈ ಎರಡು ಪ್ರವೃತ್ತಿಗಳ ನಡುವಣ ತಾಕಲಾಟ `ಯಾನ’ದುದ್ದಕ್ಕೂ ವ್ಯಾಖ್ಯಾನಗೊಂಡಿದೆ. ಇದೇ ಕಾದಂಬರಿಯ `ಕಂಬಸ್‌ಶನ್ ಇಂಜಿನ್’ ಎಂದು ಭಾವಿಸಬಹುದು.
ಇಲ್ಲಿಯ ಜೀವನವನ್ನು ನಿಯಂತ್ರಿಸುವ ಕಾಲ-ದೇಶ ಪರಿಧಿಗಳೂ ಗುರುತ್ವಾಕರ್ಷಣಾದಿ ಸನ್ನಿವೇಶಗಳೂ ವ್ಯತ್ಯಾಸಗೊಂಡಾಗ ಅದು ಮನೋಬುದ್ಧಿಸಂವೇದನೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಜಿಜ್ಞಾಸೆ ಗ್ರಹಾಂತರ ಯಾನ ಸಂದರ್ಭದಲ್ಲಿ ಒಂದು ತಾಂತ್ರಿಕ ಕುತೂಹಲದ ಸಂಗತಿಯಾಗಷ್ಟೆ ಕಾಣಬಹುದು. ಆದರೆ ಸಾಮಾನ್ಯ ಚಿಂತನಕಕ್ಷೆಯಿಂದ ಹೊರಬಿದ್ದಾಗ ಇಲ್ಲಿಯ ಮನೋವರ್ತನೆಯ ರೂಪರೇಖೆಗಳಲ್ಲಿಯೂ ವ್ಯತ್ಯಾಸವಾಗುವುದು ಸಂಭವನೀಯ. ಇದೇ ಯೋಗಶಾಸ್ತ್ರದ ಮುಖ್ಯ ಪ್ರಕ್ರಿಯೆಯೂ ಆಗಿದೆ.
ಈ ಆಯಾಮಗಳನ್ನು ಕುರಿತು ಮುಂಬರುವ ದಿನಗಳಲ್ಲಿ ಹೆಚ್ಚಿನ ಪರಾಮರ್ಶನೆ ನಡೆಯಲಿ.?

ಎಸ್.ಆರ್.ಆರ್.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat