ಕಣ್ಣು
ಹುಡುಗಿ,
ಹಗೂರ ಹೆಜ್ಜೆಯಿಡು
ನೆಲಕ್ಕಿದೆ ಕಣ್ಣು.
ಕೆಳನೋಡುವ ಸವುಡಿಲ್ಲದಿದ್ದರು ಒಂದರೆಕ್ಷಣ
ಪಂಚ ಪ್ರಾಣಗಳ ಮಿಡುಕಾಟ
ಕಾಣು.
ಅಸಹ್ಯವಾದರು ಹೊಕ್ಕುಳಬಳ್ಳಿ ಜೀವದ್ರವ
ರಸ್ತೆಯಂಚಿಗೆ ಬಿದ್ದ ಕರವಸ್ತ್ರ ಹೊಸದಾದರು
ಅಸ್ಪೃಶ್ಯ.
ಅಮ್ಮನ ಮೊಲೆಯಲ್ಲು ಕಣ್ಣಿತ್ತು
ಪ್ರೀತಿ ನೇಯ್ಗೆಯ ಹದವಿತ್ತು
ಕರುಳ ಪರಿಮಳವಿತ್ತು.
ಕೊಳಲ ಆರು ಕಣ್ಣುಗಳಲಿ ಮಿಡುಕು
ಕೊರಳೊಂದ ಕಣ್ಣಲಾದರು ಬೇಡವೆ ಬದುಕು?
ಕಂಬನಿಗಾದರು ಬೇಕೊಂದು ಕಣ್ಣು ಸಹನೆ
ಹನಿಯುತ್ತ ಬದುಕಿನುದ್ದ ನೆನಪು ಖಜಾನೆ.
—- ಟಿ.ಎಂ. ರಮೇಶ