ಮುಂಬಯಿ ಸ್ಫೋಟದ ಸಂಚಾಲಕ ಯಾಕೂಬ್ ಮೆಮನ್‌ಗೆ ಗಲ್ಲುಶಿಕ್ಷೆ ಆಗಬಾರದೆಂದು ಸೆಕ್ಯುಲರ್ ಬಣದ ಪ್ರಭೃತಿಗಳು ಮನವಿಪತ್ರ ಬರೆದುದು ಅನಿರೀಕ್ಷಿತವಲ್ಲದಿದ್ದರೂ ವಿಷಾದನೀಯ. ಮೊತ್ತಮೊದಲನೆಯದಾಗಿ ಯಾಕೂಬನು ಮುಸಲ್ಮಾನನೆಂಬುದು ಈ ಮನವಿದಾರರಿಗಿದ್ದ ಪ್ರಮುಖ ಪ್ರೇರಣೆ. ಯಾಕೂಬನು ಮುಸಲ್ಮಾನನೆಂಬ ಕಾರಣದಿಂದಲೇ ಅವನಿಗೆ ಗಲ್ಲುಶಿಕ್ಷೆಯಾಯಿತೆಂಬ ಅಮೃತವಚನವನ್ನೂ ಓವೈಸಿ ಅಪ್ಪಣೆಕೊಡಿಸಿದ. (ಸ್ವಾತಂತ್ರ್ಯೋತ್ತರ ಕಾಲದಲ್ಲಿ ಇದುವರೆಗೆ ಫಾಸಿಗೇರಿರುವವರಲ್ಲಿ ಮುಸಲ್ಮಾನರು ಶೇ. ೫ರಷ್ಟು ಮಂದಿ ಮಾತ್ರ ಎಂಬ ಸಾಂಖ್ಯಿಕ ವಿವರವೂ ಇವರಾರಿಗೂ ಸ್ಮರಣೆಗೆ ಬರಲಿಲ್ಲ.)
ಗಲ್ಲುಶಿಕ್ಷೆ ರದ್ದಾಗಬೇಕೆಂದು ಯಾಚಿಕೆ ಸಲ್ಲಿಸಿದ ೪೦ ಮಂದಿಯಲ್ಲಿ ಧೀಮಂತರೆಂದು ಸದಾ ತಮ್ಮನ್ನು ಬಿಂಬಿಸಿಕೊಳ್ಳುವ ಮಣಿಶಂಕರ ಅಯ್ಯರ್, ಸೀತಾರಾಮ ಯೇಚೂರಿ, ಪ್ರಕಾಶ ಕಾರತ್, ವೃಂದಾ ಕಾರತ್, ದೀಪಂಕರ ಭಟ್ಟಾಚಾರ್ಯ, ಮಹೇಶ ಭಟ್, ತುಷಾರ ಗಾಂಧಿ ಮೊದಲಾದವರೆಲ್ಲ ಸೇರಿದ್ದಾರೆ. ಇನ್ನು ಇರಫಾನ್ ಹಬೀಬ್, ಅರುಣಾ ರಾಯ್, ಜಾನ್ ದಯಾಲ್ ಮೊದಲಾದವರು ಹೇಗೆತಾನೆ ದೂರ ಉಳಿದಾರು! ಗಮನಸೆಳೆಯುವ ಅಂಶವೆಂದರೆ ಏಳೆಂಟು ಜನ ನಿವೃತ್ತ ನ್ಯಾಯಾಧೀಶರುಗಳೂ ಈ ಮನವಿಗೆ ಸಹಿ ಮಾಡಿದ್ದರೆಂಬುದು. ಮುಂಬಯಿಯಲ್ಲಿ ಯಾಕೂಬ್ ತಂಡದ ದುಷ್ಕೃತ್ಯದಿಂದ ಹತರಾದ ನಿರಪರಾಧಿ ಮುಗ್ಧರ ಪರವಾದ ಒಂದು ಸಹಾನುಭೂತಿಸೂಚಕ ಹೇಳಿಕೆಯೂ ಇವರಾರಿಂದಲಾದರೂ ಹೊಮ್ಮಿದ್ದಿತೆ? ಯಾಕೂಬನ ಪರವಾಗಿ ಹೇಳಿಕೆ ನೀಡಿದ್ದ ಸಲ್ಮಾನ್‌ಖಾನನು ಅಲ್ಪಕಾಲದಲ್ಲಿ ತನ್ನ ಟ್ಟೀಟನ್ನು ವಾಪಸ್ ತೆಗೆದುಕೊಂಡು ಕ್ಷಮೆಯಾಚಿಸಿದ. ಯಾಕೂಬನಿಗೆ ದಂಡನೆಯನ್ನು ತಪ್ಪಿಸಲು ಪ್ರಭಾವಿಗಳಿಂದಲೂ ಮಾಧ್ಯಮವೀರರಿಂದಲೂ ಸತತ ಪ್ರಯತ್ನ ನಡೆದಿತ್ತು. ಇಲ್ಲಿ ಪರಾಮರ್ಶನೆಗೆ ಒಳಗಾಗುವ ಅಂಶವೆಂದರೆ – ಈ ‘ಉದಾರ’ ಪಡೆಗಳ ತಾತ್ತ್ವಿಕತೆಯಾದರೂ ಏನು? ದೇಶದಲ್ಲಿ ಕಾನೂನುಗಳೇ ಇರಬಾರದು ಎಂದೆ? ಇರುವ ಕಾನೂನಿನ ಪಾಲನೆ ಆಗಬಾರದು ಎಂದೆ? ಈ ಮನವಿದಾರರೂ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿರಲು ಸಾಧ್ಯವಾಗಿರುವುದು ಕಾನೂನು ವ್ಯವಸ್ಥೆ ಇರುವುದರಿಂದಲೇ ಅಲ್ಲವೆ? ಜಗತ್ತಿನಲ್ಲೆಲ್ಲ ಸಭ್ಯತೆಯನ್ನು ಉಳಿಸಿರುವುದು ಪ್ರಮುಖವಾಗಿ ದಂಡಭಯವೇ ಅಲ್ಲವೆ? ಇದು ಸಿನಿಕತನದ್ದೆನಿಸಿದರೂ ಇದಕ್ಕೆ ಪರ್ಯಾಯ ಬೇರೆ ಏನಿದೆ? ಇದು ಎಲ್ಲ ದೇಶಗಳ ಎಲ್ಲ ಪ್ರಕಾರದ ನ್ಯಾಯವ್ಯವಸ್ಥೆಯ ಆಧಾರಸಂಗತಿಯೇ ಆಗಿದೆ. ಇನ್ನು ‘ಉದಾರತೆ’ಯ ವಿಷಯಕ್ಕೆ ಬಂದರೆ: ನೀತಿಪ್ರಜ್ಞೆಯ ವ್ಯಾಪ್ತಿಯು ಸಾಲದಿದ್ದಾಗಲೇ ಅಲ್ಲವೆ ಕಾನೂನು ಜನಿಸುವುದು? ನೈತಿಕತೆ, ಕಾನೂನು – ಎಲ್ಲವನ್ನೂ ನಿರ್ಭಿಡೆಯಾಗಿ ಉಲ್ಲಂಘಿಸುವವರ ಬಗೆಗೆ ಅನುಕಂಪ ಸಲ್ಲುತ್ತದೆಯೆ? ಇದು ‘ಅಸ್ಥಾನ ಕಾರುಣ್ಯ’ ಅಥವಾ ‘ಸದ್ಗುಣವಿಕೃತಿ’ ಎನಿಸದೆ? ಇಂತಹ ಖೊಟ್ಟಿ ‘ಮಾನವಹಕ್ಕು’ ಪ್ರತಿಪಾದಕರ ವಿಕ್ಷಿಪ್ತತೆಯಿಂದ ಸಭ್ಯಸಮಾಜ ಆಯಾಸಗೊಂಡಿದೆ. ಉಗ್ರವಾದಿಗಳಿಗೆ ಸಮರ್ಥನೆ ನೀಡುವುದನ್ನು ನ್ಯಾಯಾಂಗನಿಂದನೆಯೆಂದೂ ದಂಡನಾರ್ಹ ಅಪರಾಧವೆಂದೂ ಪರಿಗಣಿಸುವ ಕಾನೂನು ವ್ಯವಸ್ಥೆ ಅಮಲಿಗೆ ಬರಲೆಂದು ಆಗ್ರಹಿಸಿದರೆ ತಪ್ಪೆ?





