ಪ್ರಾಚೀನ ಕಾಲದಲ್ಲಿ ಕೊಡು-ಕೊಳ್ಳುವ ವಸ್ತುಗಳಿಗೆ ವಸ್ತುಗಳನ್ನೇ ಬದಲಾಯಿಸುವ, ಕೆಲಸಕ್ಕೆ ಅನ್ನ/ವಸ್ತ್ರ ನೀಡುವ ಮೂಲಕ ಪ್ರಚಲಿತದಲ್ಲಿದ್ದ ದುಡ್ಡು ಅನೇಕ ಸ್ಥಿತ್ಯಂತರಗಳನ್ನು ಕಂಡು ನಾಣ್ಯ, ನೋಟು ಹಾಗೂ ಚೆಕ್ಗಳಿಗೆ ಬದಲಾಗಿರುವುದು ಈಗ ಇತಿಹಾಸ. ದಾಪುಗಾಲಿಡುತ್ತಿರುವ ತಂತ್ರಜ್ಞಾನದ ಜೊತೆಯಲ್ಲಿ, ದುಡ್ಡೂ ಸುಮ್ಮನೆ ಕುಳಿತಿಲ್ಲ. ಕಂಪ್ಯೂಟರ್, ಅಂತರ್ಜಾಲ, ಮೊಬೈಲುಗಳನ್ನೆಲ್ಲ ಆವರಿಸಿ ತರಂಗಗಳ ಮೂಲಕ ರವಾನೆಯಾಗುತ್ತದೆ, ಕ್ಷಣಾರ್ಧದಲ್ಲಿ ವಿಶ್ವದ ಇನ್ನೊಂದು ಮೂಲೆ ತಲಪುತ್ತದೆ.
ವಿವಿಧ ದುಡ್ಡುಗಳು
ನಾಣ್ಯ-ನೋಟು
ಈಗಲೂ ದುಡ್ಡು ಎಂದಾಕ್ಷಣ ಕಲ್ಪನೆಗೆ ಬರುವ ಸ್ವರೂಪ ಹೆಚ್ಚು ಪ್ರಚಲಿತದಲ್ಲಿರುವ ನಾಣ್ಯ ಮತ್ತು ನೋಟುಗಳು. ಇದರ ಉತ್ಪಾದನೆ ವೆಚ್ಚದಾಯಕ, ನಕಲಿಗಳ ಹಾವಳಿ, ಹಳೆಯದಾಗುವ – ಹರಿದು ಹೋಗುವ – ಕಳೆದು ಹೋಗುವ ತೊಂದರೆಗಳಿದ್ದರೂ ಸಣ್ಣ ವ್ಯವಹಾರಗಳಿಗೆ ಇದು ಅನಿವಾರ್ಯವಾಗಿದೆ. ತಂತ್ರಜ್ಞಾನ ಇನ್ನೂ ತಲಪಿರದ ವ್ಯಕ್ತಿಗಳಿಗೆ ಇವು ಅನಿವಾರ್ಯವೂ ಆಗಿವೆ. ಇವುಗಳ ಮೇಲಿನ ಅವಲಂಬನೆ ಕಡಮೆಯಾಗಲು ಇನ್ನೂ ಸಾಕಷ್ಟು ವರ್ಷಗಳು ಬೇಕಾಗಬಹುದು. ತಂತ್ರಜ್ಞಾನದ ಪ್ರಭಾವದಿಂದ ನೋಟುಗಳೇನೂ ದೂರವಿಲ್ಲ. ನಗದನ್ನು ನೀಡುವ ಎಟಿಎಂಗಳು ಬ್ಯಾಂಕ್ ವ್ಯವಹಾರವನ್ನು ಸರಳೀಕರಿಸಿರುವುದನ್ನು ನಾವು ನೋಡಿದ್ದೇವೆ. ಹಣವನ್ನು ಎಣಿಕೆಮಾಡಿ ಪಡೆದುಕೊಂಡು ನಿಮ್ಮ ಖಾತೆಗೆ ಜಮಾಯಿಸುವ ಯಂತ್ರಗಳೂ ಈಗ ಸಾಕಷ್ಟು ಬ್ಯಾಂಕುಗಳಲ್ಲಿವೆ.
ಚೆಕ್, ಡಿಡಿ
ಇದು ಬ್ಯಾಂಕ್ ವ್ಯವಹಾರಗಳಲ್ಲಿ ಸುರಕ್ಷಿತವಾಗಿ ಕೊಡು-ಕೊಳ್ಳುವ ವಿಧಾನ. ಈ ವಿಧಾನದಲ್ಲಿ ನಿಮ್ಮ ವ್ಯವಹಾರಗಳಿಗೆ ದಾಖಲೆ ಇರುವುದು ಮತ್ತು ನೀವು ನೀಡಿದ ಹಣ ಇನ್ಯಾರದೋ ಕೈಸೇರದಂತೆ ಮಾಡುವುದು ಮೊದಲಾದ ಪ್ರಯೋಜನಗಳಿವೆ. ಈ ಮೊದಲಿಗೆ ದೂರದ ಬ್ಯಾಂಕ್ಗಳ ಚೆಕ್ಕನ್ನು ನಗದಾಗಿಸಲು ವಾರಗಳೇ ಬೇಕಾಗಿತ್ತು. ಬ್ಯಾಂಕ್ಗಳು ಇಂಟರ್ನೆಟ್ ಮೂಲಕ ಸಂಪರ್ಕ ಜಾಲಕ್ಕೆ ಬಂದ ನಂತರ ಚೆಕ್ ಪರಿವರ್ತನೆಗೆ ಬೇಕಾದ ಸಮಯವೂ ಕಡಮೆಯಾಗಿದೆ. ಚೆಕ್ ಸ್ವೀಕೃತಿಗೂ ಯಂತ್ರಗಳನ್ನು ನಗರಗಳಲ್ಲಿನ ಕೆಲವು ಬ್ಯಾಂಕುಗಳು ಅಳವಡಿಸಿಕೊಂಡಿವೆ.
ಡೆಬಿಟ್, ಕ್ರೆಡಿಟ್ ಕಾರ್ಡ್
ದೊಡ್ಡ ಪ್ರಮಾಣದ ಹಣವನ್ನು ಹೊತ್ತೊಯ್ಯುವ ಕಷ್ಟವನ್ನು ನಿವಾರಿಸಲು ಮೊದಲಿಗೆ ಬಂದ ಇ-ದುಡ್ಡು ಈ ಪ್ಲಾಸ್ಟಿಕ್ ಹಣ ಎನ್ನಬಹುದು. ಎಟಿಎಂಗಳಲ್ಲಿ ನಿಮ್ಮ ಗುರುತು ಪತ್ತೆಗೆ ಮತ್ತು ಶಾಪಿಂಗ್ಗಳಲ್ಲಿ ನಿಮ್ಮ ಖಾತೆಯಿಂದ ಮಾರಾಟಗಾರರ ಖಾತೆಗೆ ನೇರವಾಗಿ ದುಡ್ಡು ವರ್ಗಾಯಿಸಲೂ ಇದನ್ನೇ ಬಳಸುತ್ತಾರೆ.
ನೆಟ್ ಬ್ಯಾಂಕಿಂಗ್
ಮನೆಯಲ್ಲಿಯೇ ಕುಳಿತು ನಿಮ್ಮ ಬಿಲ್ ಪಾವತಿಸುವುದು, ಆನ್ಲೈನ್ ಶಾಪಿಂಗ್ ಮಾಡುವುದು, ಇನ್ನೊಬ್ಬರ ಖಾತೆಗೆ ಹಣ ವರ್ಗಾಯಿಸುವುದು, ತೆರಿಗೆ ಪಾವತಿ ಮುಂತಾದವುಗಳಿಗೆ ನಿಮ್ಮ ಬಳಿ ಇಂಟರ್ನೆಟ್ ಇದ್ದರೆ ಸಾಕು. ಬಹುತೇಕ ಬ್ಯಾಂಕುಗಳು ಈ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತವೆ. ನೀವು ಈಗಾಗಲೇ ಬಳಸದಿದ್ದರೆ ನಿಮ್ಮ ಬ್ಯಾಂಕಿನಲ್ಲಿ ಸಿಗುವ ಒಂದು ಅರ್ಜಿಯನ್ನು ಭರ್ತಿ ಮಾಡಿ ಕೊಟ್ಟರೆ ಸಾಕು. ನಿಮಗೊಂದು ಲಾಗಿನ್, ಗುಪ್ತಪದಗಳನ್ನು ನೀಡುತ್ತಾರೆ. ನಿಮ್ಮ ಬ್ಯಾಂಕಿನ ಎಲ್ಲ ವ್ಯವಹಾರಗಳ ಮೇಲೆ ನಿಗಾ ಇರಿಸುವುದು ಇದರಿಂದ ಸುಲಭವಾಗಲಿದೆ.
ನೆಟ್ ಬ್ಯಾಂಕಿಂಗ್ ಬಳಸುವಾಗ ಕೆಲವು ಜಾಗರೂಕತೆಯೂ ಅಗತ್ಯ. ಇವುಗಳನ್ನು ಯಾವತ್ತೂ ಮಾಡಬೇಡಿ:
ನಿಮ್ಮ ಗುಪ್ತಪದವನ್ನು ಇನ್ನೊಬ್ಬರ ಬಳಿ ಹಂಚಿಕೊಳ್ಳುವುದು ಹಾಗೂ ಅಜ್ಞಾತ ವೆಬ್ಸೈಟುಗಳಲ್ಲಿ ಬ್ಯಾಂಕ್ ವಿವರಗಳನ್ನು ನೀಡುವುದು, ನಿಮ್ಮ ಮೊಬೈಲಿಗೆ ಕಳಿಸಿದ ತಾತ್ಕಾಲಿಕ ಸಂಕೇತವನ್ನು ಇತರರ ಬಳಿ ಹಂಚಿಕೊಳ್ಳುವುದು. ಇವುಗಳು ನಿಮ್ಮ ದುಡ್ಡಿಗೆ ಅಪಾಯ ತರಬಹುದು.
ಮೊಬೈಲ್ ದುಡ್ಡು
ಮೊಬೈಲ್ ಬಳಸಿ ನೆಟ್ಬ್ಯಾಂಕಿಂಗ್ ಮೂಲಕ ವ್ಯವಹಾರಗಳನ್ನು ಮಾಡುವುದು ಈಗಾಗಲೇ ವ್ಯಾಪಿಸಿತ್ತಿದೆ. ಮೊಬೈಲಿನಲ್ಲೇ ಇಂಟರ್ನೆಟ್ ಕೂಡ ಇರುವುದರಿಂದ ಈ ಮೊದಲು ತಿಳಿಸಿದ ಬಹುತೇಕವೂ ಮೊಬೈಲಿನಲ್ಲೂ ಸಾಧ್ಯ. ಇದಲ್ಲದೆ ಹಲವು ಸಾಧ್ಯತೆಗಳು ಮೊಬೈಲಿನಲ್ಲಿವೆ. ಸ್ಮಾರ್ಟ್ಫೋನುಗಳು ಸರ್ವೇ ಸಾಮಾನ್ಯವಾಗುತ್ತಿರುವ ಈ ಕಾಲದಲ್ಲಿ ಮೊಬೈಲು ಇನ್ನಷ್ಟು ಮುಖ್ಯ ಹಣಕಾಸು ಮಾಧ್ಯಮವಾಗುವುದರಲ್ಲಿ ಸಂದೇಹವಿಲ್ಲ. ಈಗಿನ ಕಾರ್ಡುಪಾವತಿಗಳು ಕೆಲಕಾಲದಲ್ಲಿ ಮೊಬೈಲು ಪಾವತಿಗಳಾಗಿ ಪರಿವರ್ತನೆಯಾಗಲಿದೆ. ಕೆಮರಾ, ರೇಡಿಯೋ, ಕ್ಯಾಸೆಟ್ ಪ್ಲೇಯರ್, ಕ್ಯಾಲ್ಕುಲೇಟರ್, ಪಾಕೆಟ್ ಕ್ಯಾಲೆಂಡರ್ ಮುಂತಾದವುಗಳನ್ನು ಈಗಾಗಲೇ ತನ್ನ ಒಡಲಲ್ಲಿಟ್ಟುಕೊಂಡಿರುವ ಮೊಬೈಲು, ಶೀಘ್ರದಲ್ಲೇ ನಿಮ್ಮ ದುಡ್ಡು, ಕಾರ್ಡುಗಳಿಗೆ ಬದಲಾಗಿ ಬಳಕೆಯಾಗಲಿದೆ.
ಹೋಟೆಲ್ನಲ್ಲಿ ಕಾಫಿ ಕುಡಿದಾಕ್ಷಣ ಬಿಲ್ ವಿವರಗಳು ಮೊಬೈಲಿಗೇ ಬಂದು, ನೀವು ಪಾಸ್ವರ್ಡ್ ಕೊಟ್ಟ ಕೂಡಲೇ ನಿಮ್ಮ ಖಾತೆಯಿಂದ ಪಾವತಿಯಾಗುವ ದಿನ ದೂರವಿಲ್ಲ. ಈ ರೀತಿಯಲ್ಲಿ ನಿಮ್ಮ ವೆಚ್ಚ, ಆದಾಯಗಳ ನಿರ್ವಹಣೆಯೂ, ಪ್ರತಿ ಬಿಲ್ ವಿವರಗಳೂ ಮೊಬೈಲ್ನಲ್ಲೇ ಸುಲಭವಾಗಿ ಸಿಗಲಿದೆ. ಅಂಗಡಿಗಳಲ್ಲಿ ದುಡ್ಡು ಪಡೆಯಲು, ಬಸ್ಸುಗಳಲ್ಲಿ ಟಿಕೆಟ್ ಕೊಡಲು ಬಳಸುವ ಸಾಧನಗಳ ಬದಲಾಗಿ ಮೊಬೈಲಿಗೆ ಸಂಪರ್ಕಿಸಿರುವ ಕಿರು ಸಾಧನದ ವ್ಯವಸ್ಥೆ ಸಾಧ್ಯವಿದೆ.
ವ್ಯವಹಾರ ಸುಲಭ
ಬ್ಯಾಂಕಿನಲ್ಲಿನ ಉದ್ದ ಸಾಲುಗಳು, ಕಾಗದದ ವ್ಯವಹಾರಗಳು, ತಪ್ಪು ಲೆಕ್ಕಾಚಾರಗಳನ್ನು ತಂತ್ರಜ್ಞಾನ ದೂರ ಇಡುತ್ತಿದೆ. ಬ್ಯಾಂಕುಗಳಿಗೂ ಲೆಕ್ಕಾಚಾರದ ಕಠಿಣ ಕೆಲಸವನ್ನು ತಂತ್ರಜ್ಞಾನ ಸುಲಭಗೊಳಿಸುತ್ತಿದೆ.
ನಿರ್ವಹಣೆ ಸರಳ
ದುಡ್ಡು ಕಳೆದು ಹೋಗದಂತೆ ಜಾಗ್ರತೆಯಲ್ಲಿರಿಸಬೇಕು, ಹರಿದು ಹೋಗದಂತೆ ನೋಡಿಕೊಳ್ಳಬೇಕು. ದೊಡ್ಡ ಮೊತ್ತದ ಹಣದ ಸಾಗಣೆ, ಇನ್ನೊಬ್ಬರಿಗೆ ರವಾನಿಸುವುದು ಇವೆಲ್ಲವನ್ನು ಸರಳಗೊಳಿಸುವುದೂ ಹೊಸ ತಂತ್ರಜ್ಞಾನಗಳೇ.
ಸುರಕ್ಷಿತ
ತಂತ್ರಜ್ಞಾನವನ್ನು ಸ್ವಲ್ಪ ಅರ್ಥ ಮಾಡಿಕೊಂಡರೆ ಸಾಕು. ನಿಮ್ಮ ಹಣ ಸುರಕ್ಷಿತ. ನಿಮ್ಮ ಪರ್ಸ್ ಕಳೆದರೆ, ಅದರಲ್ಲಿದ್ದ ನೋಟೂ ಕಳೆದುಕೊಳ್ಳುತ್ತೀರಿ. ಆದರೆ ನಿಮ್ಮ ಡೆಬಿಟ್ ಕಾರ್ಡು/ಮೊಬೈಲ್ ಕಳೆದರೆ ನಿಮ್ಮ ಪಿನ್/ಪಾಸ್ವರ್ಡ್ ಇಲ್ಲದೆ ಅದನ್ನು ಬಳಸಲು ಸಾಧ್ಯವಿಲ್ಲ ಹಾಗೂ ನೀವದನ್ನು ತತ್ಕ್ಷಣ ಬ್ಲಾಕ್ ಮಾಡಿಸಬಹುದು. ಕಾರ್ಡ್ ಮೇಲೆ ಪಿನ್ ಬರೆಯುವಂತಹ ತಪ್ಪುಗಳನ್ನು ಮಾಡಬಾರದು ಅಷ್ಟೆ.
ಕಪ್ಪು ಹಣ
ತಂತ್ರಜ್ಞಾನದ ಇನ್ನೊಂದು ಉಪಯೋಗ, ಕಪ್ಪು ಹಣದ ಚಲಾವಣೆಯನ್ನು ತಡೆಯುವುದು. ಜನರ ವ್ಯವಹಾರಗಳು ಹೆಚ್ಚು ಹೆಚ್ಚು ಬ್ಯಾಂಕ್ ಮುಖಾಂತರ ನಡೆದಾಗ, ಅದರಲ್ಲೂ ಆಧಾರ್, ಪ್ಯಾನ್ ಸಂಖ್ಯೆಗಳು ಬ್ಯಾಂಕ್ ಖಾತೆಯ ಜೊತೆ ಜೋಡಿಸಿರುವಾಗ, ವ್ಯವಹಾರಗಳ ಮೇಲೆ ನಿಗಾ ಇಡುವುದು ಸುಲಭವಾಗಲಿದೆ.
ಟ್ಯಾಬ್ ಬ್ಯಾಂಕಿಂಗ್, ಸೆಲ್ಫೀ ಬ್ಯಾಂಕಿಂಗ್
ಹೊಸ ತಂತ್ರಜ್ಞಾನಗಳನ್ನು ಬಳಸುವಲ್ಲೂ ಬ್ಯಾಂಕುಗಳು ಪೈಪೋಟಿಗಿಳಿದಿವೆ. ಐಸಿಐಸಿಐ, ಆಕ್ಸಿಸ್ ಬ್ಯಾಂಕುಗಳು ಪೇಪರ್ ಅರ್ಜಿಗಳ ಅಗತ್ಯವಿಲ್ಲದೆಯೆ ಟ್ಯಾಬ್ಲೆಟ್ನಲ್ಲಿಯೇ ನಿಮ್ಮ ಅರ್ಜಿಯನ್ನು ಭರ್ತಿ ಮಾಡಿಕೊಂಡು ಹೊಸ ಖಾತೆ ತೆರೆಯುವ ಸೌಲಭ್ಯ ನೀಡುತ್ತಿದೆ. ಫೆಡರಲ್ ಬ್ಯಾಂಕ್ ತನ್ನ ಮೊಬೈಲ್ ಆಪ್ ಮೂಲಕ ನಿಮ್ಮ ಸೆಲ್ಫೀ ತೆಗೆದು ಬ್ಯಾಂಕ್ ಖಾತೆ ತೆರೆಯುವ ಅವಕಾಶ ನೀಡಿದೆ. ನಿಮ್ಮ ಆಧಾರ್ ಕಾರ್ಡಿನಲ್ಲಿರುವ ಕಿಖ ಛಿoಜe ಅನ್ನು ಕ್ಯಾಮರಾ ಮುಂದೆ ಹಿಡಿದರೆ, ನಿಮ್ಮ ಸಂಪೂರ್ಣ ವಿವರಗಳನ್ನು ಆಧಾರ್ ದತ್ತಾಂಶದಿಂದ ಅದುವೇ ಪಡೆದುಕೊಳ್ಳುತ್ತದೆ.
ಟೆಕ್ ಸುದ್ದಿ
ರೈಲು ಸಂಚಾರದಲ್ಲಿ ಸುರಕ್ಷತೆ, ಕಾರ್ಯಕ್ಷಮತೆಯನ್ನು ಹೆಚ್ಚಿಸಲು ರೈಲ್ವೆ ಇಲಾಖೆಯು ಇಸ್ರೋದ `ಗಗನ್’ ತಂತ್ರಜ್ಞಾನದ ನೆರವು ಪಡೆಯಲಿದ್ದು, ರೈಲುಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. ರೈಲು ಮಾರ್ಗ ಮತ್ತು ರೈಲ್ವೆಗೆ ಸೇರಿದ ಕಟ್ಟಡಗಳ ಮಾಹಿತಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಮೂಲಕ ಸಂಗ್ರಹಿಸಲಾಗುವುದು. ಈ ಮೂಲಕ ರೈಲಿನ ಚಲನೆಯನ್ನು ನಿಖರವಾಗಿ ಗುರುತಿಸಬಹುದು. ಮಾನವ ರಹಿತ ಲೆವೆಲ್ ಕ್ರಾಸಿಂಗ್ಗಳಲ್ಲಿ ಅಪಘಾತ ತಡೆಯಲು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುವುದು.
ಆಂಡ್ರಾಯ್ಡ್ ಆಪ್ಗಳನ್ನು ಡೆಸ್ಕ್ಟಾಪ್ ಕಂಪ್ಯೂಟರ್ಗಳಲ್ಲಿ ಬಳಸಲು ನೆರವಾಗುವಂತಹ ತಂತ್ರಜ್ಞಾನವನ್ನು ಗೂಗಲ್ ಅಭಿವೃದ್ಧಿಪಡಿಸಿದ್ದು, ಕ್ರೋಮ್ಬ್ರೌಸರ್ ಮೂಲಕ ಇದು ಕಾರ್ಯ ನಿರ್ವಹಿಸಲಿದೆ. ಸಧ್ಯಕ್ಕೆ ಆಯ್ದಕೆಲವು ಆಪ್ಗಳು ಲಭ್ಯವಿವೆ. App Runtime for Chrome ಅಂತ ಗೂಗಲ್ನಲ್ಲಿ ಹುಡುಕಿದರೆ ವಿವರ ಸಿಗುತ್ತದೆ.
ಮೈಕ್ರೋಮ್ಯಾಕ್ಸ್, ಕ್ಸಯೋಮಿ ಬಳಿಕ ಇದೀಗ ಲಿನೊವೋ ಕಂಪೆನಿಯು ಭಾರತದಲ್ಲೇ ಮೊಬೈಲ್ ತಯಾರಿಸಲು ಮುಂದೆ ಬಂದಿದೆ. ಮುಂದೆ ಇನ್ನಷ್ಟು ಮೇಡ್ ಇನ್ ಇಂಡಿಯಾ ಮೊಬೈಲುಗಳು ಬರಬಹುದು.